ಸೂಚನೆ || ಎಕ್ಕಟಿಗಾಳೆಗದೊಳಗಿನಕೀರ್ತಿಯ |
ನೆಕ್ಕತುಳದ ಭಟನಂ ಗೆಲ್ದಂ ರಣ |
ರಕ್ಕಸನೆನಿಸುವ ವಿಕ್ರಮಕೌರವಧರಣೀಪಾಲಕನು ||

ರಣರಾಕ್ಷಸವಿಕ್ರಮಕೌರವನೃಪ | ನಣಿಯರಮಂ ಪುಗುತರ್ಪಾಗ ದಣಂ |
ದಣರನೆ ಪೊಯ್ವ ಮಹಾನಿಸ್ಸಾಣದ ಬಲ್ದನಿಯಂ ಕೇಳ್ದು ||
ಎಣಿಸಿದರೆರ್ದೆಗೆಟ್ಟರ್ ಭಯಯುಕ್ತರ್ | ಪೆಣನಾದರ್ ಪೆಂಪೞಿದರ್ ಜಗುೞ್ದರ್ |
ತಿಣಿದರ್ ತಕ್ಕೞಿದರ್ ಪರಪೃಥಿವೀಪಾಲಕಬಲದವರು || ೧ ||

ಅದೆಅದೆ ಬಂದಂ ಜಯಜಾಯಾಪತಿ | ಯದಟರ ದೇವನೆನುತ ತಂತಮ್ಮೊಳ್ |
ಬೆದರ್ದರ್ ಬೆಕ್ಕಸವಟ್ಟರ್ ಬಿಂಕಂಗಳಿದರ್ ಬೆಚ್ಚಿದರು ||
ಮದವೞಿದರ್ ಮಾತಾಡಲ್ ಮಱೆದರ್ | ಕೆದರ್ದರ್ ಕೆಟ್ಟೋಡಿದರಡಿಯಿಡೆ ಮಱೆ |
ದದಿರ್ದರ್ ಗರವೊಯ್ದದದಿನಿರ್ದರ್ ಪರನೃಪಬಲದವರು || ೨ ||

ಮುಱಿದುದು ಮುಂಗುಡಿಯೊಳಗಡ್ಡಣದಣಿ | ಬಿಱಿತೋಡಿತು ಬಿರುದಿನ ಬಲ್ಲಾಳ್ವಡೆ |
ಪೆಱದೆಗೆದುದು ಪೇರಾನೆಯ ಪೌಜೞಿದುದು ತೇಜಿಯ ತಟ್ಟು ||
ಹಱಿಹಂಚಾಯ್ತು ಮಹಾರಥರೊಡ್ಡಣ | ವುಱಿಗಲಿ ವಿಕ್ರಮಕೌರವಭೂಪತಿ |
ತಱಿಸಂದಿಱಿವಿಱಿತಕ್ಕಿನಕೀರ್ತಿಮಹೀಶನ ಸೇನೆಯೊಳು || ೩ ||

ಸೆಡೆದಂ ಸಿನ್ಧುಜನಗಿದಂ ಮಾಳವ | ನಡಿದೆಗೆದಂ ಕೊಂಕಣ ವಂಗಾಧಿಪ |
ನೆಡೆಗೆಟ್ಟಂ ದ್ರಾವಿಡನುಯ್ದುಂ ಪಾಂಚಾಳಂ ಮೆಯ್ದೆಗೆದಂ ||
ಪೆಡಮೆಟ್ಟಿದನಾಂಧ್ರಂ ಮಗಧಂ ಮಱೆ | ಗಡೆಗೆ ಜಗುೞ್ದಂ ಮರಹತನಱಿಕೆಯ |
ಕಡುಗಲಿ ವಿಕ್ರಮಕೌರವನಾಹವಧರೆಯಂ ಪುಗಲೊಡನೆ || ೪ ||

ಅಲಘುಪರಾಕ್ರಮಿಯಭಿನವರಾಮಂ | ಕಲಿಗಳ ಕುಲತಿಲಕಂ ಜಯಭೂಪತಿ |
ಚಲದಿಂ ದಿವ್ಯಶಿಳೀಮುಖಮಂ ತಿರುವಾಯ್ಗಿಡೆ ಕಾಣುತವೆ ||
ನೆಲ ಹೊಱದಂತೊಡ್ಡಣದೊಳಗೊಡ್ಡಿದ | ಪಲವರಿಧರಣೀಪಾಲಕಸೇನಾ |
ಜಲನಿಧಿಯೆನಸುಂ ಸುಗಿದದಿರುತ ಬಿಱಿತೋಡಿತು ಪೆಱಗಡೆಗೆ || ೫ ||

ಅಷ್ಟಶಶಾಂಕರನತಿಬಲರಂ ತನ | ಗಿಷ್ಟರನೆಕ್ಕತುಳದ ಭಟರಂ ನೆಱೆ |
ನಷ್ಟಂಮಾಡಿ ಪಿಶಾಚಾನೀಕಕ್ಕುಣಬಡಿಸುತ್ತ ವರ ||
ತುಷ್ಟಿಬಡಿಸಿ ಮುಂದಕೆ ನಡೆತರ್ಪ ವಿ | ಶಿಷ್ಟಪರಾಕ್ರಮಿ ಯಜಭೂವರನಂ |
ದುಷ್ಟಂ ಖರಕರಕೀರ್ತಿಕುಮಾರಂ ಕಾಣುತ್ತೇಱಿದನು || ೬ ||

ಎನ್ನವರೆಣ್ಣರ ತಪ್ಪಿಂಗೆಲವೋ | ನಿನ್ನಿರ್ವರ್ ತಮ್ಮಂದಿರ್ ನೀನಾ |
ನಿನ್ನಯ ಭಾವಂದಿರ್ ಮೂವರು ಸಹಿತಾಱರ್ಕಾಱುಗುಡು ||
ಇನ್ನಿರ್ವರ ಸರಿ ನೆಪ್ಪಿನ ನೆಪ್ಪಂ | ನಿನ್ನ ಭವಿಷ್ಯಜ್ಜನ್ಮಕೆ ತೀರ್ವೆನು |
ತುನ್ನತಿಕೆಯ ಮುನಿಸಿಂದೆಚ್ಚಂ ಜಯನೃಪತಿಯನಿನಕೀರ್ತಿ || ೭ ||

ತಂತಮ್ಮಯ ಮೆಯ್ಗಾಪಿನ ಹರಭಟ | ದಮತಿವರೂಥವ್ಯೂಹವನಾಬಲ |
ವಂತನರೇಶ್ವರರಂ ಕಯ್ದೆತ್ತದೆ ನಿರ್ನೆರಮಿರಿಯೆನುತ ||
ಪಿಂತೆ ನಿಲಿಸಿ ಪಿರಿದುಂ ಕೋಪಾಗ್ನಿ | ಸ್ವಾಂತರ್ ಸತ್ವಾಧಿಕರುದ್ಧತಶರ |
ಸಂತತಿಯಿಂದೆಡೆವಿಡದೆಚ್ಚಾಡಿದರದಂಟಿಂದಾನೃಪರು || ೮ ||

ಅರಸಾ ನಿನ್ನ ಸುಹೃದ್ಭೂವರಜಯ | ತರುಣಿಯವಗೆ ನಿಡುನಿದ್ದೆಯನೊದವಿಸಿ |
ಭರದಿಂ ಬರ್ಪೆನೆನುತುಮೆನ್ನಂ ನಿನ್ನೆಡೆಗಟ್ಟಿದಳೆನುತ ||
ಪಿರಿದುಂ ಪಚ್ಚುನುಡಿವ ತೆಱದಿಂ ಜಯ | ನರಪಾಲಕನಾಕರ್ಣಾಂತಂ ತೆಗೆ |
ದುರುಕೋದಂಡದ ನಾರಿ ಕರಂ ಕಣ್ಗೆಡ್ಡವಡೆದುದಾಗ  || ೯ ||

ಕಡುಪಿಂದೋರೊರ್ವರನಿಸುವೆಸುಗೆಯ | ನಿಡಿಯಂಬಿನ ಮೊನೆಯೊಂದನದೊಂದಾ |
ನಡುವಳಿಯೊಳಿ ತಾಂಗಲೊಡಂ ಹುಟ್ಟಿದ ಹೊಂಗಿಡಿ ಮತ್ತವರ ||
ಒಡಲೊಳ್ ಪುಟ್ಟಿದ ಕೋಪಾನಲನಾ | ಯೆಡೆಯೊಳ್ ಮುಂದುವರಿದು ತನ್ಮಧ್ಯದೊ |
ಳಡಿಸಿ ಪಳಂಚುವ ಪಾಂಗಿಂ ಕಣ್ಗೆ ಮನೋಹರಮಾದತ್ತು || ೧೦ ||

ನೀಡದೆ ಮೂಡಿಗೆಯಿಂ ಕೈಗೊದಗುವ | ಹೂಡದ ಮುನ್ನವೆ ತಿರುವಾಯ್ಗೇಱುವ |
ಜೋಡಿಸಿ ತೆಗೆಯದ ಮುನ್ನವೆ ಕೆನ್ನೆಗೆ ಬರ್ಪಿದಿರಾದವರ ||
ನೋಡಿಯಿಸದ ಮುನ್ನಾದೆಸೆಗೋವದೆ | ನೀಡುಂ ಪರಿವ ಮಹಾದಿವ್ಯಶರಂ |
ರೂಡಿಸಿದತಿಬಲಜಯಭೂಮೀಭುಜನೆಸುಗೆಯೊಳೊಪ್ಪಿದುದು || ೧೧ ||

ಮುಂದೆಚ್ಚಂಬಿನ ಹಿಳುಕಂ ಹಿಡಿದ | ತ್ತೊಂದುಶರಂ ಗಱಿಯಂ ಸೋಂಕಿತು ಮ |
ತ್ತೊಂದುಶರಂ ಸರಿಗಣೆಗೆಯ್ದಿತು ಮೇಣೊಂದು ಶರಂ ಸಮಕೆ ||
ಬಂದುದು ಬೞಿಕಮದೊಂದು ಶರಂ ಬಲು | ಹಿಂದಂ ಪಿಂತುೞಿದುದೊಂದು ಶರಂ |
ಮಂದೇತರವಿಕ್ರಮಿಗಳ ಬಿನ್ನಣದೆಸುಗೆಯನೇನೆಂಬೆಂ || ೧೨ ||

ಈಯಂದದಿ ಕೆಲಬೊೞ್ತೆಚ್ಚಾಡಿಯ | ಜೇಯರತುಳವಿಕ್ರಮಿಗಳ್ ವಿಜಯ |
ಶ್ರೀಯುತರೆಕ್ಕಟಗಾಳೆಗದೊಳ್ ಕಡುಮುನಿಸುದಳೆದು ಬೞಿಕ ||
ಆಯೆರಡುಂ ಬಲಮದಿರಲ್ ವಿದ್ಯಾ | ಸಾಯಕಮಂ ತೊಟ್ಟೆಚ್ಚಾಡುವೆನೆನು |
ತಾಯತಮಾದರ್ ಮೇಲಣ ಸುರತತಿಯಕ್ಕದಗೊಂಬಂತೆ || ೧೩ ||

ಒರ್ವಂ ಶರಧಿಶರದಿನಿಸಲೊರ್ವನು | ಮೌರ್ವಾನಲಬಾಣದಿನಿಸಲೊರ್ವಂ |
ದರ್ವೀಕರಬಾಣದಿನಿಸಲೊರ್ವಂ ಗರುಡಾಸ್ತ್ರದಿನಿಸಲು ||
ಒರ್ವಂ ಶಿಖಿವಿಶಿಖದಿನಿಸಲಂತದ | ನೊರ್ವಂ ವರ್ಷೇಷುವಿನಿಂದಿಸುತಮ |
ಗುರ್ವಿಂದುಱದೆ ತಮುತ್ತಿರ್ವರ್ ತುೞಿಲಾಳ್ಗಳ್ ಕಾದಿದರು || ೧೪ ||

ಒರ್ವಂ ಗಜಬಾಣದಿನಿಸಲಂತದ | ನೊರ್ವಂ ಕೇಸರಿಬಾಣದಿನಿಸಲದ |
ನೊರ್ವಂ ಮುನಿದಷ್ಟಾಪದಮಾರ್ಗಣದಿಂದಿಸಲಂತದನು ||
ಒರ್ವಂ ಭೇರುಂಡ್ರಾಸ್ತ್ರದಿನಿಸುತಾ | ಯಿರ್ವರ್ ಸಮಸಾಹಸಿಗರ್ ನೋಡುವ |
ರಿರ್ವಡೆಯೆಲ್ಲಂ ಕಡುಪಿಂ ಕೊಂಡಾಡುವಿನಂ ಕಾದಿದರು || ೧೫ ||

ಆರಾತಿಯನೃಪವರರೊಳಗಿವರಂ | ತಾರೆಸಕದ ಸಾಸಿಗರಾರ್ ತುೞಿಲಾ |
ಳಾರಗ್ಗದ ಭಂಟರ್ ತೋಳ್ವಲದವರಾರ್ ಕಲಿಗಳದಾರು ||
ಆರದಟರ್ ಕೂರಿದರಾರ್ ಬೀರರ | ದಾರೆನುತುಂ ಬಿತ್ತರಿಸಿ ಪೊಗೆೞ್ದುದು |
ಮಾರುತಪಥದೊಳ್ ನೋೞ್ಪ ಮರುದ್ಗಣಮಾನೃಪತುಂಗರನು || ೧೬ ||

ಅನಿತಱೊಳಾರವಿಕೀರ್ತಿನೃಪಂ ಕಡು | ಮುನಿಸಿಂ ಕರ್ಗೞ್ತಲೆಯಂ ಕಾಱುವ |
ಘನಮಾರ್ಗಣಮಂ ಬಿಡುವೆನೆನುತ | ತಿರುವಾಯ್ಗಿಡುವನಿತಱೊಳು ||
ಮಿನುಗುವ ದೆಸೆಯೆಣ್ಪುಂ ಕಾಳೋದಕ | ವನನಿಧಿಯವಗವಿಸಿದ ತೆಱನಾದ |
ತ್ತಿನಬಿಂಬಂ ತತ್ಸುತೆ ಜಗುನೆಯನಮರ್ದಪ್ಪಿದ ತೆಱನಾಯ್ತು || ೧೭ ||

ಇಂತಿದು ದೆಸೆಯಿಂತಿದು ಭೂಮೀತಳ | ಮಿಂತಿದು ಬಾನಿಂತಿದು ಪರವಾಹಿನಿ |
ಯಿಂತಿದು ನಮ್ಮ ಕಡೆಯ ಬಲಮಿಂತಿದು ರಥಮಿಂತಿದು ಹಸ್ತಿ ||
ಇಂತಿದು ಹಯಮಿಂತಿದು ಬಿಲ್ಕೋಲಸಿ | ಯಿಂತಿದೆನುತ ಭೇದಿಸಬಾರದ ಬಹು |
ಚಿಂತೆಯೊಳಿರ್ದತ್ತೆರಡು ಬಲಂ ತಚ್ಛರಮಂ ಬಿಡಲೊಡನೆ || ೧೮ ||

ಈತೆಱದಿಂ ಕೃತ್ರಿಮತಮಮಾಹವ | ಭೂತಲಮಂ ತೀವಲ್ಕದನೀಕ್ಷಿಸಿ |
ಭೂತಪ್ರೇತಪಿಶಾಚಗ್ರಹರಾಕ್ಷಸಭೇತಾಳತತಿ ||
ಓತು ನೆರೆದ ಬಿನದಂಗಾಣುತ ವಿ | ಖ್ಯಾತಂ ಜಯಭೂನಾತಂ ಪ್ರತಿವಿ |
ದ್ಯಾತೋಮರಮಂ ಬಿಡಲೊಲ್ಲದೆ ನೋಡಿದನೊಂದರೆಗಳಿಗೆ || ೧೯ ||

ಮಾರಿಯ ಮನೆಬಿಯ್ಯದ ಕಣಜಂ ಮ | ತ್ತಾರಾಜಕೃತಾಂತನ ಬಳಕೆಯ ಭಂ |
ಡಾರಂ ಮೃತ್ಯುಮಹಾದೇವತೆಯುಗ್ರಾಣಮಗುರ್ವಿಸುವ ||
ಭೂರಿ ಪಿಶಾಚಗ್ರಹಭೇತಾಳಗ | ಳಾರೋಗಣೆಯ ಗೃಹಂ ತಾಮೆನಲಾ |
ದಾರುಣತರಸಂಗ್ರಾಮಧರಾತಳಮತಿಭೀಕರಮಾಯ್ತು || ೨೦ ||

ಅರುಣೋದಕಮವಿರಳಮಾಗಿ ಕರಂ | ಪರಕಲಿಸಿದ ಕಿನ್ನೆಲದೊಳಗೇಱಿ೦ |
ದುರುಳ್ಧ ಸಮಸ್ತ ಮಹಾರಥತುರಗಪದಾತಿಮತಂಗಮದ ||
ಅರಮಕ್ಕಳ ತಿಂತಿಣಿಯಿಂದಾಧುರ | ಧರಣಿತಳಂ ಪೋಲ್ತುದು ಬಹುಚಿತ್ರಂ |
ಬರೆದುವಿರಾಜಿಪ ಪಟಮಂ ಪಾಸಿದ ಪರಿಯಂ ಪೊಸಯಿಸುತ  || ೨೧ ||

ಮತ್ತ ಮತಂಗಮದಂಗದೊಳೊಜ್ಜರಿ | ಸುತ್ತ ನೆಲಕೆ ಜಲ್ಲಿಱಿದುಗುತಹ ಬಿಸು |
ನೆತ್ತರಪೊನಲೆಸೆದುದು ಕಳೆದಿಕ್ಕಿದ ನಿಡುಗಣ್ವಾಳೆಗಳಿಂ ||
ಬಿತ್ತರವಾದ ಕಡೆಯ ಕುಲಶಖಿರಿಯ | ತುತ್ತತುದಿಯೊಳುದಯಿಸಿ ನೆಲಗಾಡಂ |
ಪತ್ತಿ ಪರಿವ ರಕ್ತೋದವೆಸರ ನದಿಯಂದಮನನುಕರಿಸಿ  || ೨೨ ||

ಹರಿಸದಿನಂತಕನೃಪತಿ ನಿಜಾಂತಃ | ಪುರವನಿತಾತತಿಸಹಿತಂ ಕ್ರೀಡಿಪ |
ವರನಂದನಮುಂ ನಳಿನಾಕರಮುಂ ಮಿಗೆ ಸೊಗಯಿಸುವಂತೆ ||
ಉರುತರಪತರಶಿಳೀಮುಖಖಳ್ಗಮು | ಮರುಣಕುವಲಯಕಬಂಧರಥಾಂಗದಿ |
ಪಿರಿದುಂ ಕಣ್ಗೆ ಮನೋಹರಮಂ ಪಡೆದುದು ಸಂಗರಧರಣಿ  || ೨೩ ||

ಗುಡಿಯಂ ಪೊಯ್ದಾನೆಯ ಪೊಂದೊವಲಿಂ | ದುಡಿದ ಪತಾಕಾಪಟಸಂತತಿಯಿಂ |
ದೆಡೆವಱಿಯದ ಸರವತಿಯಂ ಬಿಟ್ಟು ಕೆಡೆದ ಭಲ್ಲೆಯಮಿಟ್ಟಿ ||
ಗಡೆಗಳಿನೋವದ ಗೇರೆಯಮಂ ಕೆ | ತ್ತಡಸಿ ಕರಂ ಬೆಟ್ಟಿತು ಭೂತಂಗಳ |
ಗಡಣದ ಪಾಳೆಯಮಾದಾರುಣಮಪ್ಪಾಹವಧರಣಿಯೊಳು  || ೨೪ ||

ಅಡದಿಂದರುಣಜಲಂಗುಡಿದೆಲುವಂ | ಕಡಿದು ಮಿದುಳನುಂಡೊಣನರಮಂ ಕಾ |
ರ್ದಡಸಿ ನೊಣೆದು ನೆಣನಂ ಪಿತ್ತಮನುಱೆಪೀರ್ದು ಕರುಳನುಗಿದು ||
ಸುಡುಬಾಡಂ ಸುಟ್ಟಾಸುಂಟಗೆಯಂ | ತಡೆಯದೆ ಮೆಲ್ದು ತೊರಳೆಯಂದಪ್ಪಿಱಿ |
ದುಡಿದುದಿಱಿದ ಪಲ್ಲಂ ಮುಕ್ಕುವ ಮರುಳೊಪ್ಪಿದುವಂತಲ್ಲಿ  || ೨೫ ||

ನಲಿವ ಮರುಳ್‌ನಗುವ ಮರುಳ್‌ಕೆಕ್ಕಸ | ಗೆಲೆವ ಮರುಳ್‌ಕೈಪಱೆಗುಟ್ಟುವ ಮರು |
ಳುಲಿವ ಮರುಳ್‌ಕುಣಿವಮರುಳ್‌ಕೊಬ್ಬಿಱಿವಮರುಳ್‌ಮಿದುಳುಂಡು ||
ಮಲೆವ ಮರುಳ್‌ಮಯ್ಮ—ವ ಮರುಳ್‌ತಲೆ | ಯೊಲೆವ ಮರುಳ್‌ಸೊರ್ಕುವೆ ಮರುಳಿರದಂ |
ಡಲೆವ ಮರುಳ್ಕೊಱಚುವ ಮರುಳೊಪ್ಪಿದುವಾಧುರಧರಣಿಯೊಳು  || ೨೬ ||

ಕೆಕ್ಕಗಳಗಣ್‌ಕೆದಱಿದ ಕೆಂಗೂದಲ್‌ | ಮೊಕ್ಕನೊಸಲ್‌ನಿಡುಕುಂಗೋಣ್‌ಬಿಡುಬಾ |
ಯಕ್ಕುಳಿಸಿದ ಪಾೞ್ವಸಿಱುಡೆ ಮುಟ್ಟೊಜ ಬಲ್ಗೊಂಡಿೞಿದ ಮೊಲೆ ||
ಮುಕ್ಕುಱುವಲ್‌ಮುದಮೊಗ ನೀಡುಂದೋ | ಳಿಕ್ಕಲವಂ ಪೊದಮೆಯ್ಯೊಳೆಸೆವ ಪಲ |
ರಕ್ಕಸಿಯರ ತಂಡಂ ನಡೆತಂದುದು ತದ್ಧುರಧರಣಿಯೊಳು  || ೨೭ ||

ಮೊದಲೇ ಮೋಹರದೊಳ್‌ಮಣ್ಮೞಿಗೊಂ | ಡದಟರರಸುಮಕ್ಕಳ ಹೆಟ್ಟುಗೆಯರ್‌ |
ಮುದದಿಂ ತೋಳ್ಗುಡೆ ಬೇವ ಪಲವು ಕುಂಡಂ ಕಣ್ಗೊಪ್ಪಿದುವು ||
ಕದನವಿಜಯಜಯಭೂರಮಣನ ಜಯ | ಸುದತಿಯ ನವಮಾಂಗಲ್ಯವಿಧಿಯೊಳಿರ |
ದೊದವಿದ ಹೋಮಾನಲಕುಂಡದ ಭಂಗಿಯುಮಂ ನೆನೆಯಿಸುತ  || ೨೮ ||

ಬಂದ ಮಹಾಸಾಹಸಿಗಂಗತ್ಯಾ | ನಂದದಿ ನಿಱಿನಿಂಬೆಯ ತನಿವಣ್ಣಂ |
ತಂದು ಕಡುವೆನೆನುತುಂ ತತ್ಕುಂಡೋದರದಿಂ ಪೊಱಮಡುವ ||
ಮಂದಗಮನೆಯೊರ್ವಳ್‌ಮಾಸತಿ ಬಗೆ | ವಂದು ವಿರಾಜಿಸಿದೊಳ್‌ದ್ರುಪದೇಶ್ವರ |
ನಂದನೆಯಗ್ನಿಮುಖದೊಳುದಯಸಿ ಪೊಱಮಡುವಿರವಂ ಪೋಲ್ತು  || ೨೯ ||

ಕಡುಬಿನದದಿನೊಂದು ಮರುಳ್‌ಶಬದಿರ | ವಡೆದು ನೆಲದೊಳುರುಳ್ದಿರಲದನೀಕ್ಷಿಸಿ |
ದಡಿಗಮರುಳ್‌ಮತ್ತೊಂದದು ನಿಜದಿಂ ಪೆನನೆನುತವೆ ಬಂದು ||
ಅಡಸಿ ಪಿಡಿದು ನುಣ್ಣನೆ ನುಂಗಲ್ಕದ | ಱೊರಡಲಂ ಬಗಿದಾರುತ ಮೇಲಕೆ ಪೊಱ |
ಮಡುವಂದಂ ಪೋಲ್ತುದು ತಾನಂದಿನ ವಾತಾಪಿಯ ತೆಱದಿಂ  || ೩೦ ||

ಒಂದು ಪೆಣಮದಿರ್ಬಾಗವಡೆದು ಬಿ | ೞ್ದೊ೦ದೆಡೆಯೊಳಗಿರಲಾಯಿರ್ಪೋೞಂ |
ಸಂದಿಸಿ ಮತ್ತಮದೊಂದು ಪೆಣನುಮಂ ತಂದೆರಡಱ ಕೈಗೆ ||
ಒಂದೊಂದಸಿಯಂ ಕೊಟ್ಟು ವಿನೋದದಿ | ನೊಂದು ಮರುಳ್‌ಕಡುಪಿಂ ಕಾದಿಸುತಿ |
ರ್ಪಂದಂ ಪೋಲ್ತುದು ಭೀಮಜರಾಸಂಧರ ಸಮರದಸೊಬಗಂ  || ೩೧ ||

ಬಾಕುಳಿತನದಿಂ ಬಳಸಿ ನಿರೀಕ್ಷಿಪ | ಶಾಕಿನಿಡಾಕಿನಿಭೂತಪ್ರೇತಾ |
ನೀಕದ ಕಣ್ಣೀಱಿ೦ದಿನಿವಿರಿದುಂ ತಿಂದಿನಿಸಳ್ಕಿಸದೆ ||
ಓಕರಿಸುವ ಬೇತಾಳನ ಬಾಯಿಂ | ದಾಕುರುಳೋವದೆ ಸುರಿದುದು ಶುಷ್ಕಾ |
ನೋಕದ ಕೋಟರದಿಂ ಪೊಱಮಡುವಹಿತತಿಯೆಂಬಂದದೊಳು  || ೩೨ ||

ಇಂತಪ್ಪದ್ಭುತಮಂ ತೋರ್ಪಸುರರ | ಸಂತತಿಯುಂ ಮುಂ ತೀವಿದ ಕೃತಕ |
ಧ್ವಾಂತಮುಮಾಜಯಭೂಪತಿ ದಿನಕರಶರಮಂ ಬಿಡಲೊಡನೆ ||
ತಾಂ ತೆಕ್ಕನೆ ಪರೆದತ್ತು ಸರಾಗದಿ | ನಂತಕಸಿದ್ಧಂ ತತ್ಸೇನೆಗೆ ಚದು |
ರಿಂ ತವೆ ತೋಱುವ ಹರಮೇಖಲೆಯೆಂಬಾವಿದ್ಯೆಯ ತೆಱದಿಂ  || ೩೩ ||

ಆ ರವಿಮಾರ್ಗಣಮಂ ಬಿಟ್ಟಾಜಯ | ಭೂರಮಣನ ತೇರುಂ ಕುದುರೆಯುಮಾ |
ಸಾರಥಿಯಂ ಕೈವಿಡಿದ ಶರಾಸನಮುಂ ಖಂಡಿಸುವಂತೆ ||
ವೀರಂ ರವಿಕೀರ್ತಿಮಹೀಪಾಲಕ | ನಾರುತ್ತಿಸೆ ಭರದಿಂ ಮತ್ತೊಂದು ಮ |
ಹಾರಥಮಂ ಜೋಡಿಸಿಯೇಱಿದನೆವೆಹಳಚುವ ಸಮಯದೊಳು  || ೩೪ ||

ಕಡುಗಲಿ ವಿಕ್ರಮಕೌರವಭೂವರ | ನಡೆಸಿ ಮುನಿದು ಮುಗುೞ್ದೆಚ್ಚ ಶಿಳೀಮುಖ |
ವೊಡನೆ ಪರಿದು ಯುಗಬದ್ಧಾಶ್ವಮನೊಂದಂ ತತ್ಸಾರಥಿಯ ||
ತೊಡೆಯಂ ತದ್ರಥಚಕ್ರಮನೊಂದಂ | ಕಡಿಯಲ್ಕಾರವಿಕೀರ್ತಿನೃಪಂ ಪಡು |
ಗಡೆ ಗತತೇಜಂಬಡೆದ ಪಗಲ ಬಲ್ಲಹನಂದದೊಳಿರ್ದಂ  || ೩೫ ||

ಪುನರಪಿ ಮಾರ್ಗಣಮಂ ತಿರುವಾಯ್ಗಿಡು | ವನಿತಱೊಳೊದು ಮಹಾರಥಮಂ ತೊ |
ಟ್ಟನೆ ಜೋಡಿಸಿಯಡರ್ದಾರವಿಕೀರ್ತಿನೃಪಂ ಕೆಕ್ಕಳಗೆಳರ್ದು ||
ಅನಿಮಿಷರಾಗಗನಾಂಗಣದೊಳ್‌ಪೊಗ | ೞ್ವಿನೆಗಂ ಮಗೞ್ದುರವಣೆಯಿಂದಿಸೆ ಕಡು |
ಮುನಿಸಿಂ ಜಯಧರಣೀಪತಿ ಪನ್ನಗಶರದಿಂ ತೆಗೆದೆಚ್ಚಂ  || ೩೬ ||

ಪೆಡೆ ತತ್ಪಾಣಿತಳಂ ಮಸ್ತಕಮಣಿ | ನಡುವೆರಲೊಳ್‌ಮಿಗೆ ರಾಜಿಸುವೂರ್ಮಿಕೆ |
ನಿಡುಸುಯ್ಯೊಳ್‌ಪುಟ್ಟಿದ ಹಾಲಾಹಲದೊಳ್ಳುರಿಯಂತಲ್ಲಿ ||
ಅಡಸಿದ ಕಿಚ್ಚೆನಲಾಫಣಿಬಾಣಂ | ಪೊಡವಿಯನೆಲ್ಲಮನುರುಪುವೆನೆನುತುಂ |
ಕಡುಮಸಗಿದ ಭಸ್ಮಾಸುರಹಸ್ತದ ತೆಱದಿನಗುರ್ವಿಸಿತು  || ೩೭ ||

ನಿಟ್ಟಿಪರೆವೆ ಸೀವಂದದಿ ತನ್ನಂ | ಸುಟ್ಟುಂದೋಱುವ ಬೆರಲುಡಿವಂದದೆ |
ದಿಟ್ಟಂ ವಿಕ್ರಮಕೌರವನೆಚ್ಚ ಮಹಾಫಣಿನಾರಾಚಂ ||
ಅಟ್ಟಿ ಪಱಿದು ಪಿರಿದುಂ ಘುಡಿಘುಡಿಸುತ | ತೊಟ್ಟನೆ ರವಿಕೀರ್ತಿಯನಂದಡರಿತು ||
ಕಟ್ಟಾಸುರದಿಂ ಬಂದು ವಿಧುಂತುದನಿನನಂ ಪಿಡಿವಂತೆ  || ೩೮ ||

ಪಿರಿದುಂ ಕೋಪಾಟೋಪದಿನಾಫಣಿ | ಶರಮೋವದೆ ಬಂದಡರಲ್‌ಕಾಣುತ |
ಖರಕರಕೀರ್ತಿಕುಮಾರಂ ಬೇಗದಿ ಗರುಡಶಿಳೀಮುಖಕೆ |
ಕರಮಂ ನೀಡಲನಿಲನಂದನನಂ | ಭರದಿಂ ಪಿಡಿದ ನಹುಷನಱಮಗನಂ |
ಕರಮೆ ನಿರೀಕ್ಷಿಸಿ ಬಿಡುವಂದದಿ ಬಿಟ್ಟುದು ತದ್ವೇಳೆಯೊಳು  || ೩೯ ||

ಉರಗಶಿಳೀಮುಖಮಂ ಕೆಟ್ಟೋಡಿಸಿ | ಖರಕರಕೀರ್ತಿಕುಮಾರಕನೆಚ್ಚಾ |
ಗರುಡಾಸ್ತ್ರಂ ಬಲುಸಿಡಿಲ ತನಗೆ ಗಱಿ ಮೂಡಿದ ಮಾೞ್ಕೆಯೊಳು ||
ಪಿರಿದುಂ ಘೂರ್ಣಿಸುತೆಯ್ತರೆ ಕಂಡುರು | ತರಕೋಪದಿ ವಿಕ್ರಮಕೌರವಭೂ |
ವರನಿಸಲೆನುತವೆ ಲಯಕಾಲಾಗ್ನಿಶರಕೆ ಕೈನೀಡಿದನು  || ೪೦ ||

ಮೂಡಿಗೆಯಂಬಿನ ಹಿಳುಕಿಗೆ ಕೈಯಂ | ನೀಡಲ್ಕಾಬವರಮನಾಗಸದೊಳ್ |
ನೋಡುವ ಬಿಟಟ್‌ಎವೆಗಣ್ಗಳವರ್ ಸಗ್ಗದ ಸದನದ ನೆಲೆಗೆ ||
ಓಡಿದರೆಣ್ದೆಸೆಯೆಱೆಯರ್ ದಿಕ್ಕಿನ | ಗೂಡಿಂಗೈದಿದರೆಲರುಣಿಗಳ್ ಕಿ |
ನ್ನಾಡ ಬಿಲಂಬೊಕ್ಕುವ ನಾನದನಿನ್ನೇನಂ ಬಣ್ಣಿಪೆನು || ೪೧ ||

ಮತ್ತಾ ಕಾಲಾಗ್ನಿಶಿಳೀಮುಖದಿಂ | ಪೊತ್ತಿ ಕರಂ ಪರ್ವಿದ ಕರ್ವೊಗೆ ನೆಲ |
ವೊತ್ತಾನೆಯ ಮೆಯ್ಯಂ ಸುತ್ತದೊಡವನಿಯೊಳುಳ್ಳದ್ರಿಗಳ ||
ಹತ್ತಿ ಹಿಡಿಯದಿರ್ದೊಡೆ ಘನತರವ ವಿ | ಯ ತ್ತಲಮಂ ಸೋಂಕದೊಡೆ ಚಿರತ್ವಂ |
ಬೆತ್ತಸಿತಚ್ಛಾಯೆಯವಕ್ಕೆ ವಿಚಾರಿಸೆ ತಾನೆತ್ತಣದು || ೪೨ ||

ಕಡಲೇೞಱ ಪೊಡೆಯಗ್ಗಿ ಘನಾಘನ | ದೊಡಲ ಸಿಡಿಲ ಕಿಚ್ಚಂಗಭವಾರಿಯ |
ನಡುಗಣ್ಣುರಿ ಸಚರಾಚರದಖಿಲಪದಾರ್ಥಂಗಳ ನಡುವೆ ||
ಆಡಸಿದ ಬೆಂಕಿಗಳೊಳಗುಗ್ರತೆಯಂ | ಪಡೆದವು ನನಗಿದಿರಾಗಿಯೆನುತ ಕೆಡೆ |
ನುಡಿವಂದದಿ ಲಯಕಾಲಾಗ್ನಿ ಶರಂ ಘುಡುಘುಡುಘುಡಿಸಿದುದು || ೪೩ ||

ಧೀರೋದಾತ್ತಂ ವಿಕ್ರಮಕೌರವ | ವೀರನುದಯಗಿರಿಯಂತೊಪ್ಪಿದನವ |
ನಾಯಾಯ್ಯದೆ ಕಿವಿಮುಟ್ಟಿ ತೆಗೆದ ಕುಂಡಲಿತಧನುರ್ದಂಡಂ ||
ವಾರಿಜಬಾಂಧವಮಂಡಲಮಾದುದು | ನಾರಿಯನೇಱಿದ ಲಯಕಾಲಾನಲ |
ನಾರಾಚದ ಮೊನೆಯೊಳ್ ಕೆದರ್ದುರಿಯದಱರ್ಚೆಯ ತೆಱನಾಯ್ತು || ೪೪ ||

ಪಿರಿದುಮಗುರ್ವಿವ ಲಯಕಾಲಾನಲ | ಶರಮಂ ಕಾಣುತ ಗಹನಂಗೆಯ್ಯದೆ |
ಭರತೇಶ್ವರನ ಕುಮಾರಂ ಶರನಿಧಿಶರಮಂ ಬಿಡಲೊಡನೆ ||
ಖರಕಿರಣಂಗರ್ಘ್ಯಂಗೊಟ್ಟಂದದಿ | ಶರಧಿಯಗಸ್ತ್ಯಕರಕೆ ಬಂದಂದದಿ |
ಕರಮೆಯಡಂಗಲ್ ಕಂಡಾಜಯಭೂವರನಿಂತೆಂದೆಣಿಸಿದನು || ೪೫ ||

ತಾನೆಚ್ಚಂಬುಧಿಶರಮಾಲಯಕಾ | ಲಾನಲಶರದೊಳಡಂಗಿದುದದಱಿಂ |
ನಾನಿವನಂ ತಲೆಗೊಳ್ವೊಡೆ ಬಾರಿಪರಾರಂ ಕಂಡಱಿಯೆಂ ||
ಏನಾದೊಡಮೇನೀಹರಯಂಬರ | ಮಾನನ್ದದಿನಿರ್ವರುವೊಡನಾಡಿದ |
ನೂನಪ್ರಿಯದಿಂದಿವನನಿಸುವುದನುಚಿತಮೆಂದಣಿಸಿದನು || ೪೬ ||

ಕೊಲಬಾರದು ಬವರದೊಳಾವನುಮಂ | ಕೊಲದಿರಬಾರದೆನುತ ಜಯಭೂವರ |
ತಿಲಕಂ ಚಿಂತಿಪ ಸಮಯಕೆ ಶೇಷಂ ತಾನಿಹ ಕಿೞ್ನೆಲದಾ ||
ನೆಲೆಯಿಂ ಬಂದಿನಿವಿರಿದುಂ ಕೋಪದಿ | ನಲಘುಬಿಲೇಶಯಪಾಶದಿನೋವದೆ |
ಬಲಯುತರವಿಕೀರ್ತಿಯ ತೋಳಂ ಪೆಡಗಟ್ಟಂ ಕಟ್ಟಿದನು || ೪೭ ||

ಪಿರಿದುಂ ಕೋಪದಿನುರಗೇಂದ್ರಂ ಬಿಗಿ | ದುರಗಮಹಾಪಾಶಂ ಭರತಮಹೀ |
ಶ್ವರನ ಕುಮಾರನ ಭೂಭೃತ್ತಿಲಕನ ಘನತರಗಾತ್ರವನು ||
ಭರದಿಂ ಸುತ್ತಿ ಮನೋಹರಮಾದುದು | ಶರಧಿಮಥನಮಂದರಭೂಧರಮಂ |
ತುರಿಹದಿ ಸುತ್ತಿಯಗುರ್ವಿನ ಶೇಷಂ ತಾನೆಂಬಂದದೊಳು || ೪೮ ||

ಆವೇಳೆಯೊಳಾಫಣಿಪಸ್ತ್ರೀಪ | ದ್ಮಾವತಿಯೆಂಬವಳೆಯ್ದಿ ಕರುಣದಿಂ |
ದಾವಿಭುರವಿಕೀರ್ತಿಯ ಪೆಡಗಟ್ಟಂ ಬಿಟ್ಟಂತುಸಿರಿದಳು ||
ಭೂವಳಯದ ಪಾಳಿಯನುಲ್ಲಂಘಿಸಿ | ಯೀವುದ್ಯೋಗಮನೊದವಿಸಿ ಬೞಿಕ ಯ |
ಶೋವನಿತೆಯ ತಲೆಯೊಳ್ ಕಱೆಯಂ ಪೊಱಿಸುವುದುಚಿತವೆ ನಿನಗೆ || ೪೯ ||

ನಿನ್ನೆಗಳೊಳ್ ನಿಮ್ಮಯ್ಯಗೆ ಭರತದ | ಮನ್ನೆಯರೆಲ್ಲರನೆಱಗಿಸಿ ನಿನ್ನಂ |
ತನ್ನೊಳ್ ಭೇದಂಮಾಡದೆ ನಲ್ಮೆಯನೆಸಗಿದ ನೀಱನೊಳು ||
ಕೆನ್ನಮಿದಿರನಱಿಯದೆ ಹೋಱುವುದಿಯ | ನನ್ನಿಯೆ ನಿನಗೆನುತಂ ಪದ್ಮಾವತಿ |
ಭಿನ್ನಂಮಾಡಿಯವರ ಬಲ್ಮುನಿಸಂ ಕೊಟ್ಟಳು ಮಣಿದೊಡವಂ || ೫೦ ||

ಇಂತಿರ್ವರ್ ತುೞಿಲಾಳ ಮನದ ಖತಿ | ಯಂ ತವೆ ಬಿಡಿಸಿ ಬೞಿಕಮಿರ್ವರುಮಂ |
ಸಂತಂಮಾಡಿ ಸುಖದೊಳಿರಿಮೆನುತಾದರವಚನಮನುಸಿರ್ದು ||
ಸಂತಸದಿಂ ಪದ್ಮಾವತಿಯುಂ ನಿಜ | ಕಾಂತನಹೀಶ್ವರನುಂ ಬೆರಸಾಭೂ |
ಕಾಂತರೊಳೊಲವಿಂ ಬೀೞ್ಕೊಂಡುರಗಭುವನಕೆಯ್ದಿದಳಿತ್ತ || ೫೧ ||

ನಾನಾತೆಱದುಪಚಾರಂಗಳಿನಾ | ಭೂನುತಜಯನೃಪತಿಯ ಭರತೇಶ್ವರ |
ಸೂನುವ ಮನದ ಖತಿಯುಮಂ ಬಿಡಿಸಿಯವರುಮಂ ಮತ್ತುೞಿದ ||
ಮಾನವಪರಿವೃಢನಿಕುರುಂಬಮುಮಂ | ಸಾನಂದದಿ ಮನುಚರಿತನಕಂಪಮ |
ಹೀನಾಥಂ ನಿಜಪುರಕೆಯನೂನೋತ್ಸಾಹದಿನೆಯ್ದಿಸಿದಂ || ೫೨ ||

ಮುಖ್ಯೇಂದ್ರಾಖ್ಯಾನದಿ ತೇಜೋಪಾ | ಖ್ಯಾನದಿ ಸರ್ವೋರ್ವೀನುತಧರ್ಮಾ |
ಖ್ಯಾನದಿ ಪುಣ್ಯಜನಾಖ್ಯಾನದಿನಂಬುಧಿಪತಿಯೆನಿಪಾ ||
ಖ್ಯಾನದಿ ರಂಜಿಸುವ ಜಗತ್ಪ್ರಾಣಾ | ಖ್ಯಾನದಿ ಧನದಾಖ್ಯಾನದಿನೀಶಾ |
ಖ್ಯಾನದಿನಾಶಾಧಿಪರಂತೆಸೆದಂ ಪ್ರಭುಕುಲಮಣಿದೀಪಂ  || ೫೩ ||

ಇದು ಸುರನರಫಣಿಪರಿವೃಢವಿನಮಿತ | ವಿದಿತ ವಿನಯಗುಣಗಣಯುತ ಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಳಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತೇೞನೆಯ ಮಿಸುಪ ಸಂಧಿ || ೫೪ ||

ಏೞನೆಯ ಸಂಧಿ ಸಂಪೂರ್ಣಂ