ಸೂಚನೆ || ಬಂದ ಬಸಂತದೊಳೆಯ್ದಿ ಬನಕೆ ನಿಜ |
ಸುಂದರಿಯರು ಸಹಿತನುರಾಗದಿ ನವ |
ಕಂದರ್ಪಂ ಜಯಭೂಪತಿ ವನಜಳಕೇಳಿಯೊಳೊಪ್ಪಿದನು ||

ಮೊತ್ತಮೊದಲ್ ಮೊಗಗೆಡಿಸಿದ ಹಿಮರುಜೆ | ಯೊತ್ತಂಬವನೞ್ಗಿಸುತಂ ಮೆಯ್ಯೊಳ್ |
ಪತ್ತಿದ ದರ್ದುರಮಂ ಪಱಿವಡಿಸುತ್ತುದಿರ್ದೆಲೆದಲೆಗಳೊಳು ||
ಮತ್ತೆ ಚಿಗುರನಿರದೊದವಿಸುತೂದುವ | ಮೆತ್ತನೆಲರಮರ್ದೊತ್ತಿ ವನೌಷಧಿ |
ಗುತ್ತಮವೈದ್ಯಂ ಬರ್ಪಂದದಿ ಬಂದೆಸೆದುದು ನವಚೈತ್ರಂ || ೧ ||

ಅನುರಾಗಮನೊದವಿಸುತಂ ಕುವಲಯ | ಕಿನಿವಿಲ್ಲಂಗತಿಹಿತಮಂ ಮಾಡುತ |
ಘನತರಸಂಮದಮಂ ಸವನಿಸುತ ವನೌಷಧಿಸಂತತಿಗೆ ||
ಮುನಿದು ತೊಲಗಿದ ವಿಟೀವಿಟಸಮಿತಿಗೆ | ಯೆನಸುಂ ದುಃಖಮನಾಗಿಸುತಂ ಸಂ |
ಜನಿಯಿಸಿದುದು ಜೈವಾತೃಕಮಂಡಲದಂದದಿನಾಚೈತ್ರಂ  || ೨ ||

ರಾಗರಹಿತರಿಲ್ಲಿರ್ದೊಡೆ ತೊಲಗಿ ವಿ | ಯೋಗಿಜನಂ ಪುಗವೇಡನುದಿನಸಂ |
ಭೋಗಂಗುಂದದವರ್ಬಿಡಬೇಡೀಮಾತಂ ಮೀಱಿದೊಡೆ ||
ಪೂಗಣೆಯಂ ಮುನಿಸಿಂ ಕೊಂದು ಕರಂ | ಕೂಗದೆ ಬಿಡನೆನುತವೆ ಸಾಱುವವೊಲ್ |
ಕೋಗಿಲೆಗಳ್ ಪೂಗಿಲೆನುತುಲಿದುವು ತದ್ವನಚೂತಮನೇಱಿ         || ೩ ||

ತಳಿರಾದುದು ತರುಣಾಶೋಕಂ ಪೊಸ | ಕಳಿಕೆ ಕವಲ್ತುದು ಮಾಮರದೊಳ್‌ನೀರ್‌ |
ತಿಳಿದುದು ಪೂಗೊಳದೊಳ್ ದಾಂಗುಡಿ ತೋಱಿದುದು ಲತಾಳಿಯೊಳು ||
ತೊಳಗುವ ಮೌನವ್ರತದುದ್ಯಾಪನೆ | ಕಳಕಂಠದೊಳಾದುದು ಬಡಬಡಕನೆ |
ಸುೞಿದುದು ಸುರಭಿಸಮೀರಂ ಬಂದ ಬಸಂತದ ಸಮಯದೊಳು    || ೪ ||

ವಿರಹಾವಸ್ಥೆಯ ದಂದುಗಮೆಯ್ದಿದ | ತರುಣಿಯರಳಕಭ್ರಮರಮನೊಳ್ನುಡಿ |
ಯರಗಿಳಿಯಂ ನೆಲೆಮೊಲೆಯಮಳ್ವಕ್ಕಿಯನಕ್ಷಿ ಚಕೋರಿಯನು ||
ಭರವಶದಿಂ ಮಿಡಿದಿಲ್ಲಿಂದಿಸಲೆನು | ತರಲಸರಗೆ ಮಧು ನೀಡುವ ಪಚ್ಚೆಯ |
ಪರಲೆನೆ ಪಿರಿದೆಸೆದುವು ಮಾಮಿಡಿಗಳ್ ಪಲ್ಲವದೆಡೆಗಳೊಳು        || ೫ ||

ಸೆಳೆಗೊಂಬಂ ಸಾಲ್ವಿಡಿದೈವಣ್ಣದ | ಗಿಳಿ ಗೀರ್ವಾಣಧನುಸ್ಸೆನೆರ್ಗೆಱ |
ಬೆಳದುಂಬಿಯ ಜಂಗುಳಿ ಕಾರ್ಮುಗಿಲೆನೆ ಸೊನೆ ಬಲ್ಸೋನೆಯೆನೆ ||
ತಳಿರ್ಗಳ್ ಮುಗಿಲುರಿಯೆನಲಾಮಾಮರ | ದೊಳಗೆಯುಲಿವ ಕೋಗಿಲೆಯ ರವಂ ಕ |
ಣ್ಗೊಳಿಸಿತು ವಿರಹಿಮರಾಳನನಂಜಿಪ ಬಲ್ಮೊೞಗಿನ ತೆಱದಿ          || ೬ ||

ಒಡವೆಳೆದೆಳೆಯಲತೆಯ ಕೆಂದಳಿರ್ಗಳ್ | ಬಡಗಾಳಿಯ ಸೋಂಕಿಂ ಪೊಸಪಲಸಿನ |
ನಿಡುವಣ್ಣಂ ಪೊಡೆಯುತ್ತಿರೆ ಚೈತ್ರವೆಸರ ಮುಟ್ಟುಂಗಾಱಂ ||
ಪೊಡೆಯಲರಣುಗನ ನಾಟಕಗೃಹದೊಳ್ | ಪಡಿಯಱವಕ್ಕಿ ಯುಲಹಿನುಗ್ಗಡಣೆಗೆ |
ಗಡಣದೆ ಕುಲಿಶಪಿನದ್ಧಮುರಜಮಂ ನುಡಿಸುವ ತೆಱನಾಯ್ತು       || ೭ ||

ರಂಜಿಸುವುಡುವಳ್ಳಿಯ ಪೂವಂಡಂ | ಭುಂಜಿಸಲೆನುತೊಳಗಡೆ ನಿಂದಾಭೃಂ |
ಗಂ ಜಿನುಗಲ್ ಬಲ್ಲವರಂ ಬಗೆಗೊಳಿಸಿತು ನಂದನವನಿತೆ ||
ನಂಜುಗೊರಲನಳಿಕದ ಲೋಚನದ ಧ | ನಂಜಯನುಗ್ರತೆಯಂ ನೆಱೆ ನಂದಿಪ |
ಕಂಜಾಸ್ತ್ರನ ಮುಂದೂದುವಶಂಖಧ್ವನಿಯೆಂಬಂದದೊಳು            || ೮ ||

ಸತತಂ ಗತಿಯೊಳ್ ಸಾಮಮನೊಡರಿಸಿ | ಲತಿಕಾಕುಟ್ಮಲದಳಮಂ ಭೇದಿಸಿ |
ನುತನವಸಾರಭ್ಯಮನಾಱಡಿಗೊಲವಿಂ ದಾನಂಗೆಯ್ದು ||
ಅತಿದಂಡಿಸುತ ವಿಯೋಗಿವಿಟೀವಿಟ | ತತಿಯಿಂ ಚತುರೋಪಾಯೋಪೇತ |
ಕ್ಷಿತಿಪಾಲಕನಂದದಿ ತೀಡಿದುದು ವಸಂತಸಮಯವಾಯು  || ೯ ||

ಹರನ ಹಣೆಯ ದಿಟ್ಟಿಯ ಬಲ್ಗಿಚ್ಚಿಂ | ದುರಿವಂದುರವಣೆಯಿಂ ಮುಂ ಪೀರ್ದಾ |
ಸ್ಮರನ ಮಹಾಪ್ರಾಣಸಮೀರಣನಂ ಮಗುೞ್ದಂತಕಸರ್ಪಂ ||
ವಿರಹಿಜನಮನೀಯಂದದಿ ಕೊಲಲೆನು | ತಿರದೂದದೊಡೆಲ್ಲಿಯದೀದಕ್ಷಿಣ |
ಮರುತಂಗಾವಿರಹಿವಿತಾನಮುಮಂ ನೆಱೆ ಬೆದಱಿಸುವ ಬಗೆ          || ೧೦ ||

ಇಂತು ಜನಮನಾನಂದಿಸಿ ಬಂದ ಬ | ಸಂತದೊಳಾವಿಕ್ರಮಕೌರವಭೂ |
ಕಾಂತಶಿರೋಮಣಿ ಸುಕವಿನಿಕರಪಿಕವಿಲಸನ್ಮಾಕಂದಂ ||
ಸಂತಸದಿಂದ ಸುಲೋಚನೆ ಮೊದಲಾ | ದಂತವುರದ ವನಿತಾಜನದೊಡನೆ ಲ |
ತಾಂತಕರಂ ಬರ್ಪಂದದಿ ವನಕೇಳೀಲೀಲೆಗೆ ನಡೆದಂ          || ೧೧ ||

ಸಿಂಗವಸುಳೆನಡುವಿನ ಸಿರಿಮೊಗದೆಳ | ದಿಂಗಳ್ವಣೆಯ ನವೀನಲತಾಂಗದ |
ಜಂಗುಳಿದುಂಬಿಗುರುಳ ಜಂಬೀರಫಲೋಪಮಕುಚಯುಗದ ||
ಜಂಗಮಕಲ್ಪಲತಾಂಗದ ಮದನಮ | ತಂಗಗತಿಯ ಮಾಂದಳಿರ್ವಣ್ಣಿಗೆಗಾ |
ಲಂಗನೆಯರ ತಂಡಂ ನಡೆದುದು ನರನಾಯಕನಂ ಬಳಸಿ    || ೧೨ ||

ಪಿಡಿಯ ಪಿಣಿಲನೇಱಿದ ಪಿಡಿನಡುವಿನ | ಮಡದಿಯರೆಡಬಲನಂ ಬಿಡದೆಯ್ದಲ್ |
ನಡುವೆ ನರೇಂದ್ರಲಲಾಮಂ ಪಟ್ಟದ ಗಜದ ತಲೆಯನಡರಿ ||
ನಡೆದಂ ನಂದನವನಕಾಸಗ್ಗಿಗ | ರೊಡೆಯಂ ನಾಕಾಂಗನೆಯರ್ವೆರಸುತ |
ನಡೆವ ವಿಲಾಸದಿ ವನಕೇಳೀಲೀಲೆಗೆ ಸಂಭ್ರಮದಿಂದ         || ೧೩ ||

ಹರಿಸದೊಳಿಂತು ನಡೆದು ಬನಮಂ ಪೊ | ಕ್ಕರಸನನುಜ್ಞೆಯೊಳಾ ಅಂತವುರಂ |
ಸುರಯಿಯ ಮೊಗ್ಗೆಯನಿರವಂತಿಯ ಪೂವಂ ಪೊಸಪಡ್ಡಳಿಯ ||
ಬಿರಿಮುಗುಳಂ ಬಕುಳದ ಬಲ್ನನೆಯಂ | ಸುರಹೊನ್ನೆಯ ಸಜ್ಜುಕಮಂ ಸಂಪಗೆ |
ಯರಲಂ ಕೇದಗೆಯೆಸಳಂ ತಿಱೆತಿಱಿದಾಡಿದುದಂತಲ್ಲಿ    || ೧೪ ||

ಬೞಿಕ ವಿಮಲಮಣಿಗಣಭೂಷಣಮಂ | ಕಳೆದು ಕರಂ ಹರಿಸದಿನೊಪ್ಪುವ ಪರಿ |
ಮಳಯುತನವ್ಯಕುಸುಮಸಕಲಾಭರಣಮನಾಮಸ್ತಕದಿಂ ||
ತೊಳಪಲತೆಗೆಗಾಲ್ವರೆಗಂ ತೊಟ್ಟಳಿ | ಕಳಭನಿಭಾಳಕಿಯರ್ ಕಡುಚೆಲ್ವಂ |
ದಳೆದರನನ್ಯಜಮಾರ್ಗಣದಿಂ ಮೂಡಿದ ಮೂರ್ತಿಗಳಂತೆ   || ೧೫ ||

ಏಲಾಪಕ್ವಫಲಂಗಳನೇೞೆಲೆ | ವಾೞೆಯ ಪೊಸಹಗಿನಿಂ ಮುಡಿವಾಳದ |
ಮೂಳಮುಮಂ ಕಾಶ್ಮೀರದ ಪೂವಂ ಮಱುಗದ ಕಿಱುಗೊನರಂ ||
ಬಾಳಾಶೋಕದ ಬಡದಳಿರಂ ನವ | ಕಾಳಾಗರುವಿನ ಸೆಕ್ಕೆಗಳಂ ತಿಱಿ |
ದಾಳೋಲವಿಲೋಚನೆಯರ್ ವಿಹರಿಸಿದರ್ ಕಡುಹರಿಸದೊಳು      || ೧೬ ||

ತರುಣಕುರಂಗವಿಲೋಚನೆಯೊರ್ವಳ್ | ಹರಿಸದಿ ಹೊಸಹಳುಕಿನ ಬಟ್ಟಲೊಳಿ |
ಟ್ಟರವಂತಿಯ ಪೂವಂ ತೆಗೆದುರುವೇಣೀಮೂಲದೊಳಿಡಲು ||
ಪಿರಿದುಂ ವಿಭ್ರಾಜಿಸಿದತ್ತು ಸುಧಾ | ಕರಮಂಡಲದುದರದ ನವಕಲೆಯಂ |
ಸ್ಮರವೆಸರ ವಿಧುಂತುದಗೊಲವಿಂದುಣಬಡಿಸುವ ಭಂಗಿಯೊಳು     || ೧೭ ||

ತಳಿರ್ವಜ್ಜೆಯ ತರುಣಲತಾಮಧ್ಯದ | ಬೆಳುಗಾಯ್ಮೊಲೆಯ ಲಸದ್ಬಿಂಬಾಧರ |
ದೆಳಜವ್ವನೆ ಮುಡಿಗಿಕ್ಕಿದ ಮರುಗದ ಕಿಱುಗೊನರೊಪ್ಪಿದುದು ||
ಜಳಜಾಸ್ತ್ರಂ ತಾನಲ್ಲದುೞಿದರಂ | ತೊಳಗುವ ಮೋಹಫಲಂ ತೀವಿದ ಪೊಸ |
ವೆಳಸಂ ಮೆಟ್ಟಲ್ವೇಡಮೆನುತ ಕಟ್ಟಿದ ಸೊಪ್ಪಿನ ತೆಱದಿ  || ೧೮ ||

ಮದಪಿಕವಾಣಿಯದೊರ್ವಳ್ ಮೊಲೆಗಳ | ತುದಿಯೊಳ್ ಕಲ್ಹಾರದ ಪೂದುಂಬಿದ |
ಕದಳೀನಾಳಂಬಿಡಿದಿರಲಾಕಂಪಂ ಕೊಳಲೆನುತಲ್ಲಿ ||
ಮುದದಿಂ ಹಂತಿವಿಡಿದು ಕುಳಿತಳಿಗಳ್ | ಚದುರರ ಚಿತ್ತಂಗೊಳಿಸಿದುವಂಗಜ |
ಸುದತಿ ಸರಾಗದಿ ನುಡಿಸುವ ವೀಣೆಯ ನಡೆಯೆಂಬಂದದೊಳು        || ೧೯ ||

ಮಿಸುನಿಯ ಬಟ್ಟಲವೊಲ್ ಸಲೆ ಸೊಗಯಿಪ | ಕೊಸಗಿನ ಬಿರಿಮುಗುಳೊಳು ಕೆಂಜಾದಿಯ |
ಪೊಸಮುಗುಳಂ ತಿಱಿದಿಕ್ಕಿ ತರುಣಕದಳೀಪತ್ರಂಬೊದಿಸಿ ||
ಅಸಿಯಳ್ ಪಿಡಿದಿರಲಾಕಂಪಂ ವಾ | ಸಿಸಲಳಿ ಕುಳಿತು ಜಿನುಗುತಿರಲಾಕೈ |
ಯೆಸಕಂಬಡೆದುದು ರತಿ ನುಡಿಸುವ ರಾವಣಹಸ್ತದ ತೆಱದಿ            || ೨೦ ||

ತಿರಿದು ತಿರಿದು ಭಿಕ್ಷಂಬೇಡುತ ಬ | ರ್ಪರಲುಣಿವಸುಳೆಗಳಂ ಕಾಣುತ ಕಡು |
ವಿರಿದುಂ ಕಾರುಣ್ಯದೊಳವರುಣಿಸಂ ಬಡಿಸುವ ಭಂಗಿಯೊಳು ||
ಸರಸಿಜನ್ನಿಭಲಲಿತಾನನೆಯರ | ವರನೀಲಾಂಬಕವೆಱಗಿ ಬಳಸೆ ನವ |
ಪರಿಮಳಯುತಕುಸುಮಸ್ತಕಬಕಂಬಡೆದುವು ತಿಲಕಮಹೀಜಂ         || ೨೧ ||

ಸುರಭಿಕುಸುಮಮಂಜರಿಯಂ ಬಕುಳದೊ | ಳುರುಮುದದಿಂದಾನಿಸುವೆನೆನುತ ನವ |
ಹರಿಣವಿಲೋಚನೆಯೊರ್ವಳ್ ಮದಿರಾರಸಮಂ ಮುಕ್ಕುಳಿಸಿ ||
ತುರಿಹದಿ ತೂಪಿಱಿದುಗುಳ್ವಾಸೀರ್ಪನಿ | ಸಿರಿಮೊಗದಿಂ ಸೂಸಿತು ಮೃಗಲಕ್ಷ್ಮೋ |
ದರದಿಂ ಜನಿಯಿಸಿ ಜಲ್ಲಿಱಿವೆಳಗದಿರ್ದೊಂಗಲಿವೆಂಬಂತೆ  || ೨೨ ||

ಇರುಳಿನಿಯನೊಳೀತೆಱದಿಂದಾನಿನಿ | ವಿರಿದುಂ ಮುದದಿ ಲತಾವೇಷ್ಟನಮೆಂ |
ಬುರುತರಮಪ್ಪಾಲಿಂಗನಮಂ ವಿರಚಿಸಿದೆನೆನುತ್ತದನು ||
ತರುಣಲತಾಂಗಿಯದೊರ್ವಳ್ ನೆಱೆ ಬ | ಲ್ಲರ ಬಗೆಗಱೆಪುವ ತೆಱದಿಂ ನೂತನ |
ಕುರವಕವಿಟಪಿಯನಪ್ಪಿ ಕರಂ ಪೊಸಪೂವಂ ಬಿಡಿಸಿದಳು   || ೨೩ ||

ಖತಿಯಿಂ ಕಣ್ಣಲುಗದೆ ನೋಡುತ ಖಂ | ಡಿತಭರ್ತಾರಿಕೆಯೊರ್ವಳ್ ನಡೆತಂ |
ದತಿಮೃದುಪದದಿಂದೊದೆವ ಸಮಯದೊಳಗಪರಾಧಂಗೆಯ್ದು ||
ಚತುರಂ ತಾ ಮುಂ ನೆಮ್ಮಿದಶೋಕ | ಕ್ಷಿತಿರುಹದಲ್ಲಿ ಹೊಳೆದು ವಿಲಸದ್ವಿಕ |
ಸಿತಸುಮನೋಮಂಜರಿಗಳನಾಗಿಸಿದಂ ಕಡುಜಾಣ್ಮೆಯೊಳು           || ೨೪ ||

ಎನಗೀರೂಪು ಸಹಜಮಿನಿವಿಲ್ಲನ | ವನಿತೆಯ ರೂಪಂ ವಂಚಿಸಿದುದು ಹುಸಿ |
ವನದೇವತೆ ನೀನೇ ನೋಡೆನುತತಿಭರದಿಂ ದಿವ್ಯವನು ||
ಎನಸುಂ ಪಿಡಿದು ನಡೆವ ತೆಱದಿಂದವೆ | ವನಜವದನೆಯೊರ್ವಳ್ ಕರಯುಗದೊಳ್ |
ಮಿನುಗುವ ಚೆಂದೆಂಗಿನ ಕಾಯಂ ಪಿಡಿದೆಯ್ದಿದಳತಿಮುದದಿ           || ೨೫ ||

ಅರಲ ಸರಲನೆಂಬರಸಂ ತನ್ನಯ | ಗರಿಣಿ ರತಿಗೆಯೀಕೆಗಳ ವಿಲಾಸಮ |
ನುರವಣೆಯಿಂ ದಂಡಂಗೊಳಬೇಕೆನುತಾಗ್ರಹದಿಂ ಪಿಡಿದು ||
ತರಿಸಿ ಸೆಱೆಯ ಮನೆಯೊಳಗಿಟ್ಟಂದದಿ | ಸುರಭಿಕುಸುಮಲತಿಕಾಗೃಹದೊಳ್ ಕೆಲ |
ರರವಿಂದಾನನೆಯರ್ ಕುಳಿತು ಕರಂ ಕಣ್ಗೆ ಸೊಗಯಿಸಿದರು            || ೨೬ ||

ಬೇರಿಂ ತುದಿವರೆಗಂ ಬಿಡದುದಯಿಸಿ | ರಾರಾಜಿಪ ಸುಮನೋಮಂಜರಿಗಳ |
ಭಾರಕೆ ಬಾಗಿದ ಲತೆಯಂ ಲೀಲೆಯಿನೆಡಗೈಯೊಳಗಾಂತು ||
ಚಾರುಘುಸೃಣಕರ್ದಮಮಂ ಪೂಸಿದ | ವಾರಿಜಮುಖಿಯೆಸೆದಳ್ ಮುನಿದೋಪರ |
ನಾರಯ್ದೊಲಿಸಲೆನುತ ಬಿಲ್ವಿಡಿದಾವಶ್ಯಮುಖಿಯ ತೆಱದಿ            || ೨೭ ||

ವಾಸನೆಗೆಯ್ವೆನೆನುತ ತಿಱಿದೊರ್ವಳ್ | ನಾಸಾಚಂಪಕಕಿಡುವೆಡೆಯೊಳ್ ನಿ |
ಶ್ವಾಸದ ನಿಜಪರಿಮಳಮಂ ನೀಡುಂ ನೋಡುವ ನಡುಗಣ್ಣ          ||
ಭಾಸಿಪ ತಾರಾರುಚಿಯುಂ ಪಿರಿದುಂ | ಬಾಸಣಿಸಲ್ ಕನ್ನೆಯ್ದಿಲ ಪೂವೆಂ |
ದಾಸಂಪಗೆಯರಲಿಂ ಬಂಡುಣಲೆಱಗಿದುದೊಂದಳಿಕಳಭಂ  || ೨೮ ||

ಅನುರಾಗದಿನೀತೆಱದಿಂ ವಿಹರಿಸಿ | ಬನದೊಳ್ ಬೞಿಕವನಿಪನನುಮತದಿಂ |
ವನರುಹದಳಸಲ್ಲಲಿತವಿಲೋಚನೆಯರು ಸಂದಣಿಗೊಂಡು ||
ವಿನುತಾಂಬುಕ್ರೀಡೆಗೆನುತ್ತುಂ ತ | ದ್ವನಮಂ ನೋಡಲಿಳೆಗಯಿೞಿದಿಂದುವಿ |
ದೆನೆ ರಾಜಿಪ ನಿರ್ಮಲನೀರೇಜಾಕರಕಿರದೆಯ್ದಿದರು         || ೨೯ ||

ಅರಸಂಚೆಯ ಚಾವಡಿಯಮಳ್ವಕ್ಕಿಯ | ಸುರತಗೃಹಂ ಸಾರಸವಕ್ಕಿಯ ಬೀ |
ಡರಲುಣಿಯಾರೋಗಿಪ ಸದನಂ ಕೊಳರ್ವಕ್ಕಿಗಳುಲಿಗಲಿವ ||
ಗರುಡಿ ಸಿರಿಯ ಶಯ್ಯಾಸದನಂ ನವ | ಸುರಭಿಸದಾಗತಿಗಳುಗುವ ನೆಲವನೆ |
ಯರಲಂಬನ ಜಯನಾಲಯಮೆನಲಲರ್ಗೊಳನತಿರಂಜಿಸಿತು          || ೩೦ ||

ಬನವೆಣ್ ಬಂಡುಣಿವಕ್ಕಿಯ ಬಳಗ | ಕ್ಕನುರಾಗದಿನಾರೋಗಣೆಗೆಯಿಸುವೆ |
ನೆನುತ ಮಿಸುಪ ಮಿಸುನಿಯ ಕೆಲವಟ್ಟಲನೊಂದೋರಣದಿಂದ ||
ಅನುಗೆಯ್ದಿರಿಸಿದ ಬೆಳ್ಳಿಯ ಪರಿಯಣ | ಮೆನೆ ಹೊಂದಾವರೆಯಲರ್ಗಳ್ ತೀವಿದ |
ವಿನುತಾಂಭೋಜಾತಾಕರಮತಿಶೋಭಾಕರವಡೆಯಿತ್ತು    || ೩೧ ||

ಕೆಂದಾವರೆಯೆಸಳ್ಗಳ್ ಪೊಸಕೇಸುರಿ | ಮಂದೈಸಿದ ಮಧುಕರತತಿ ಹೊಗೆ ಮಕ |
ರಂದಂ ಬೆರಸಿ ನೆಗೆವ ಸೀರ್ಪನಿ ಹೊಂಗಿಡಿ ನೀರ್ವಕ್ಕಿಗಳ ||
ಸಂದಣಿಯುಲಿ ಮಂತ್ರಮದಾಗಲ್ಕದ | ಱಿಂದ ಕೊಳಂ ಮದನಾಧ್ವರಿ ವಿರಹಿಯ |
ಬಿಂದಕ್ಕೆಸಗಿದ ಮಾರಣಮಖಕುಂಡದವೋಲ್ ತೊಳಗಿದುದು        || ೩೨ ||

ಇದು ವನವನಿತೆ ನಿರೀಕ್ಷಿಪ ಕನ್ನಡಿ | ಯಿದು ಬನವೆಣ್ಣ ಕೊರಲ ದೇವರ ಹೊ |
ನ್ನಿದು ಬನಸಿರಿ ಮಧುಗೆತ್ತಿದ ಪಳಿಕಿನ ನೀರಾಜನಪಾತ್ರೆ ||
ಇದು ಬನದರಸಿಯ ನೊಸಲ ಬಿಳಿಯ ಬೊ | ಟ್ಟಿದು ಬನಗನ್ನೆಯ ನಾಭಿಯೆನಲ್ಕಡು |
ಚದುರರ ಚಿತ್ತಂಗೊಳಿಸಿದುದಾನಿರ್ಮಲತರಕಾಸಾರಂ       || ೩೩ ||

ಮೀನ ಮಿಸುಪ ಜಂಗುಳಿಯಿಂ ತೊಳಗುವ | ಬಾನಂ ಬಗೆಗೊಳಿಸುವ ಕರಿಯಿಂದ ನ |
ವೀನವಿಪಂಚಿಯುಮಂ ಸುಳಿಯಿಂದಮೆಸಗುವೆಳವಿಯ ಬೆಳೆಯಂ ||
ಮಾನಿತಮಪ್ಪ ತೆರೆಯಿನತಿರಂಜಿಸು | ವಾನವನಾಟಕಸದನಮನಾಳದಿ |
ನೂನೇತರರಥಮಂ ಗೆಲೆವಂದತ್ತಾನಿರ್ಮಲಸರಸಿ            || ೩೪ ||

ತರಳತರಂಗಧವಳಚಾಮರಮಂ | ವರಜಲಜಾಯೆಯರೊಲವಿಂ ಬೀಸು |
ತ್ತಿರೆ ಕವಿಗಳ್ ಪೊಗೞುತ್ತಿರೆಯಳಿಯೆಂದೆಂಬೆಕ್ಕಲಗಾಣಂ ||
ಸ್ಮರಮೋಹನಗೀತಮನಾಳಾಪಿಸು | ತಿರೆಪದ್ಮಾಸನವಡರ್ದೋಲಗಗೊ |
ಟ್ಟರಸಂಚೆ ಮಹಾವಿಭವದಿನಿರಲೊಪ್ಪಂಬಡೆದುದು ಸರಸಿ           || ೩೫ ||

ವಿಳಸದ್ಗಂಧವಹಶ್ರೇಷ್ಠ ವನಾ | ವಳಿಯಲರ್ಗಂಪಿನ ಮೂಲದ ನದಿನಿ |
ರ್ಮಳಜಲದತಿಶೀತಲಮಂ ನೀರ್ವೂವುಗಳಾಮೋದಮುಮಂ ||
ಬೆಲೆಗೊಂಡಾಬಲ್ಪೊಱೆಯಂ ತಲೆಗಿ | ಟ್ಟಳಿತತಿಯೆಂಬಱಿಕೆಯ ಸುಂಕಿಗರಂ |
ಸಲೆಯೊಡಬಡಿಸುತ್ತಾತಿಳಿಗೊಳದಿಂ ಮೆಲ್ಲನೆ ತೆರಳಿದನು  || ೩೬ ||

ರಮಣೀಯಮನೀಯಂದದೊಳೆಯ್ದಿದ | ಕಮಲಕುಮದಕುವಲಯಕಲ್ಹಾರೋ |
ದ್ಗಮಮೊದವಿದ ನಳಿನಾಕರದೊಳಗಡೆಗತ್ಯಾನಂದದೊಳು ||
ಕಮನೀಯೇಂದುಮುಖದಲಸಮಾನ | ಭ್ರಮರಾಳಕಿಯರ್ ನಡೆದರ್ ತಾರಾ |
ರಮಣಿಯರಮೃತಾಂಭೋರಾಶಿಯನೊಲವಿಂ ಪುಗುವಂದದೊಳು  || ೩೭ ||

ತಡಿಯೊಳ್ ನಿಂದ ತನೂದರಿಯರ ತಳಿ | ರಡಿವಿಡಿವೊಳ್ದೆರೆಯೆಸೆದುವು ನಿಮ್ಮೀ |
ನಿಡುಗೈಕಣ್ಮೊಲೆಮೊಗಮೇಗಾಲ್ಗಳ ಚೆಲ್ವುಮನಾನೊಸೆದು ||
ಪಡೆದ ಮೃಣಾಳೋತ್ಪಲಕೋಕಲಸ | ಜ್ಜಡರುಹಕೂರ್ಮನಿಕಾಯಕೆ ತಡೆಯದೆ |
ಕುಡಿಮೆಂದಾಕಾಸಾರಜಲಂ ಕಾಲ್ವಿಡಿದೆೞೆವಂದದೊಳು    || ೩೮ ||

ಬಂದ ಬಸಂತಬನಕೆ ಬಲ್ವಿಸಿಲೊಳ್ | ಬಂದು ತೊಳಲಿ ಬಸವೞಿದೆನ್ನೆಡೆಗೆ |
ಯ್ತಂದಿರಲಾಯೆನುತಂ ಕೊಳರ್ವಕ್ಕಿಗಳುಲುಹಿಂದುಪಚರಿಸಿ ||
ಇಂದುಲಲಿತವದನೆಯರ್ಗಮಳ್ದೆರೆಗೈ | ಯಿಂದೆ ಕೊಳಂ ಕುಡುವರ್ಘ್ಯಮಿವೋ ಎಂ |
ಬಂದದಿನತಿರಮ್ಯಂಬಡೆದುವು ಶೀಕರಮಾಸಮಯದೊಳು || ೩೯ ||

ವಿರಹಂ ನಮಗೆ ಮುಸುಂಕಿದ ಸಮಯದೊ | ಳರಲ ಸರಗೆ ಕಡೆಯಂಬುಗಳಾಗು |
ತ್ತುರುವಣೆಯಿಂ ನಮ್ಮಸುಗಳನಪಹರಿಸಿದುವೀಪೂವೆನುತ ||
ಪಿರಿದು ಕೋಪದಿ ಕಿೞ್ತಿಡುವಂದದಿ | ಕರಿಕರನಿಭಕರದೆಳಜವ್ವನೆಯರು |
ಸರಸೇಂದೀವರಸಂಕುಲಮಂ ಕಿೞ್ತೀಡಾಡಿದರಾಗ            || ೪೦ ||

ಮೊಗೆದು ಮೊಗೆದು ಭರದಿಂದೋರೊರ್ವರ | ಮೊಗಮೊಗದೊಳ್ ಚೆಲ್ಲುವ ಮೇಲಕೆ ಪುಟ |
ನೆಗೆವ ಧುಡುಂಮಿಱಿವೊಯ್ವ ತಿರಿವ ತೇಂಕಾಡುವ ಮುಕ್ಕುಳಿಪ ||
ಉಗುಳ್ವ ನಲಿದು ಪರಿಮಱಿಯಾಡುವ ಬಿಡ | ದಗುೞ್ವ ಬೞಿಕ್ಕೇೞ್ವಬಲಾಸಂತತಿ |
ಯೊಗುಮಿಗೆಯಂಬುಕ್ರೀಡೆಯೊಳರಸನ ಬಗೆಯಂ ಬಂಧಿಸಿತು          || ೪೧ ||

ಕಳಶಕುಚಕೆ ಪಡಿನೋಡುವ ತೆಱದಿಂ | ಪೊಳೆಪುಣ್ಮುವ ಪೊಸಮಿಸುನಿಯ ಗುಂಡಿಗೆ |
ಗಳನುರದೊಳಗಿಟ್ಟಮಲಾಂಬುವಿನೊಳ್ ತೇಂಕಾಡುತ್ತಿರ್ಪಾ ||
ಲಳನೆಯರಲಘುನಿತಂಬದ ಸಾಲ್ಗಳ್ | ತೊಳಗಿದುದಲರ್ವಿಲ್ಲನ ಸಂಮೋಹನ |
ಜಳರಾಶಿಗೆ ಕಟ್ಟಿದ ಸೇತುವಿನೊಂದಿರವಂ ನೆನೆಯಿಸುತ     || ೪೨ ||

ಪಿರಿದುಂ ಪ್ರಿಯತಮರೊಲವಂ ಬಯಸುವ | ತರುಣೀಜನಕಂಗಭವಾಗಮದೊಳ್ |
ಕರಣಂಗಳ್ ಪಲವುಂಟು ವಿಚಾರಿಸಲವಱೊಳ್ ಮೋಹಿಸುವಾ ||
ಪುರುಷಾಯಿತಮೇ ಮುಖ್ಯಮೆನುತ್ತದ | ನುರುಮುದದಿಂ ಕೆಲದೆಳೆಯರ್ಗಱಿಪುವ |
ಪರಿಯಿಂ ಪದ್ಮಾನನೆಯೊರ್ವಳ್ ತಿಳಿನೀರೊಳ್ ತೇಂಕಿದಳು            || ೪೩ ||

ಗುರುಕುಚದಲಘುನಿತಂಬದ ತೂಕದ | ಸರಿಮಿಗಿಲಂ ಪಿಡಿದೆತ್ತಿ ನಿರೀಕ್ಷಿಪ |
ಪರಿಯಿಂ ಪ್ರಾಣೇಶ್ವರನಂಗೈಯಂ ತನುಮಧ್ಯದೊಳಿಡಲು ||
ತರುಣೀಮಣಿಯೊರ್ವಳ್ ಪೂಗೊಳದೊಳು | ಹರಿಸಂ ಮಿಗೆ ತೇಲಿದಳತ್ಯುತ್ತಮ |
ವರವಜ್ರದ ಪುತ್ತೞಿ ತಿಳಿನೀರೊಳ್ ಬಿಡೆ ತೇಲುವ ತೆಱದಿ  || ೪೪ ||

ತಿಳಿನೀರ್ ಪುಗದಂದದಿ ನಾಸಿಕಮಂ | ಲಳಿತಾಧರಮಂ ಹಾವಸೆಹತ್ತಿದ |
ತಳದಿಂ ಮುಚ್ಚಿ ಪಿಡಿದು ಕೆಂದಾವರೆಯರಲ ಕೊಳದ ನಡುವೆ ||
ಮುೞುಗಿ ಬೞಿಕ್ಕೇೞ್ವಬಲೆಯ ವದನಂ | ತಳತಳಿಸಿತು ರಾಹುಗ್ರಸ್ತೋದಯ |
ವಿಳಸದ್ವಿಮಲಸುಧಾಕರಮಂಡಲಮತಿಶೋಭಿಸುವಂತೆ    || ೪೫ ||

ಬೆಳಗಿದ ಪೊಸಬೆಳ್ಳಿಯ ಕೊಪ್ಪರಿಗೆಯೊ | ಳೆಳಜವ್ವನೆಯೊರ್ವಳ್ ಕುಳಿತಾತಿಳಿ |
ಗೊಳದೊಳಗಾಡುತ್ತಿರಲಾಬಗೆ ಬಲ್ಲರ ಬಗೆಗೊಳಿಸಿದುದು ||
ತಳತಳಿಸುವ ಸಂಪೂರ್ಣಶಶಾಂಕನೊ | ಳೆಳಸಿ ಕರಂ ಪುರುಷಾಯತಮಂ ಕ |
ಣ್ಗೊಳಿಪಂದದಿನೆಸಗುವ ರೋಹಿಣಿಯಂದಮನಂಗೀಕರಿಸಿ || ೪೬ ||

ಸುರಭಿಕುಸುಮಕರ್ದಮಮಂ ಮೆಯ್ಯೊಳ್ | ಗೊರೆದೆಳದಳಿರ್ವನೆಯೊಳ್ ಕೆಂಜಾದಿಯ |
ಬಿರಿಮುಗುಳ್ವಾಸಿನೊಳೊಱಗಿದಿನಿಯಳಂ ಪಿಡಿದೋಪಂ ತಂದು ||
ಸರಸಿಯೊಳೞ್ದಿ ತೆಗೆದ ಬಗೆಯತಿಬಂ | ಧುರಮಾದುದು ನವಮೋಹಾಯುಧಮಂ |
ಸ್ಮರನುರಿಯೊಳ್ ನೆಱೆ ಕಾಸಿ ತೆಗೆದು ನೀರೂಡುವ ಮಾೞ್ಕೆಯೊಳು || ೪೭ ||

ಜೀವೇಶಂ ಜೀರ್ಕೊೞವಿಯೊಳೋವದೆ | ತೀವಿದ ತಿಳಿನೀರೊತ್ತುವ ಪದದೊಳ |
ಗಾವಧು ಕರಿಯವಸನದ ಸೆಱಂಗಂ ಮುಸುಕಲು ಮುದ್ದುಮೊಗಂ ||
ಪಾವಸೆಯಂ ಮಱೆಗೊಂಡೊಪ್ಪುವ ಪೊಂ | ದಾವರೆಯೆನೆ ನಸು ಮುಗಿಲಾವರಿಸಿದ |
ಜೈವಾತೃಕಮಂಡಲಮೆನೆ ತಳೆದತ್ತತಿಬಂಧುರತೆಯನು     || ೪೮ ||

ವಾರಿಜಮುಖಿ ಚೆಲ್ಲುವೆನೆಂದೆತ್ತಿದ | ನೀರುಂಡೆಯ ನೀಲದ ರುಚಿಯುಂ ಲಲಿ |
ತಾರುಣಕರಪಲ್ಲವದ ಸುರಂಗುಂ ಸೂಸಲಿದಿರ ಸತಿಯಾ ||
ತೋರಮೊಲೆಗಳೊಪ್ಪಂಬಡೆದುವು ಸಂ | ಧ್ಯಾರುಚಿಯಂ ಪೊಳೆವೆಳಗೞ್ತಲೆಯಂ |
ಸೇರಿಸಿ ತಳತಳಿಸುವ ಹೊಸಹೊನ್ನಜವಳಿವೆಟ್ಟಿನ ತೆಱದಿ  || ೪೯ ||

ಎಳಸಿ ಕರಂ ಪ್ರಿಯತಮನೋವದೆ ಜೀ | ರ್ಕೊೞವಿಯನೊತ್ತುವ ಪದದೊಳ್ ಮೆಯ್ಮುರಿ |
ದೆಳೆಯಳ್ ಮುಡಿಯಂ ತಾಗಿ ಬೞಿಕ ಬೆಂಬೞಿಯೊಳ್ ಜಳಧಾರೆ ||
ಇೞಿವ ಸಮಯದೊಳಗಿಂದಿರೆಯಣುಗನ | ತೊಳಗುವ ಪೀಲಿಯ ಪೞಯಿಗೆಗಿಕ್ಕಿದ |
ಪಳಿಕುವಣಿಯ ದಂಡಂಬೋಲ್ ಕಣ್ಗತಿರಂಜನೆದಾಳಿದುದು           || ೫೦ ||

ವಿಳಸದ್ವಿಮಲಾಬ್ಜದ ಕಳಿವೂವಿಂ | ಕಳೆದೆಸೆವೆಸಳ ನಡುವೆ ತಮ್ಮಯ ಕರ |
ತಳದ ಧುಡುಂಮಿಱಿವೊಯ್ಲಿಂದೇೞ್ವಮಲಾಂಬುಕಣಂ ಬಿೞ್ದು ||
ತಳತಳಿಸುತ್ತಿರೆ ತರುಣಿಯದೊರ್ವಳ್ | ಸುರುಚಿರಶುಕ್ತಿಯುದರದೊಳ್ ಜನಿಯಿಸಿ |
ದೆಳಮುತ್ತೆಂದು ತಿೞಿಯಲುದ್ಯೋಗಿಸಿ ಲಜ್ಜೆವಡೆದಳಾಗ            || ೫೧ ||

ರಾಕೇಂದುವಿನಂದದ ನಿಜವದನದ | ನಾಕಲತಾಲಲಿತಾಂಗದ ವಿಬುಧಾ |
ನೇಕಪಮೃದುಗಮನದ ನವಮದಿರಾಂಬಕದಮೃತಾಧರದ ||
ಆ ಕಾಮಿನಿಯರ್ ಪೊಱಮಡುವಂಬುರು | ಹಾಕರಮತಿಶೋಭಾಕರವಡೆದುದು |
ಲೋಕಜನನಿ ಬಹುರೂಪುವಡೆದು ಪೊಱಮಡುವಿಂಗಡಲಂತೆ         || ೫೨ ||

ಅಂಬುಕ್ರೀಡಾನಂತರದಿಂದೆ ನ | ವಾಂಬುರುಹಾಕರಮಂ ಪೊಱಮಟ್ಟು ನಿ |
ತಂಬಿನಿಯರ ಹಸ್ತಸ್ವಸ್ತಿಕದ ನಡುವೆ ಕಿಕ್ಕಿಱಿಗೊಂಡು ||
ತುಂಬಿದ ಮೊಲೆಗಳ್ ಚದುರರ ಚಿತ್ತ | ಕ್ಕಿಂಬಾದುವು ಬಳಸಿದ ಬಿಸಲತಿಕೆಯೊ |
ಳಿಂಬಿಂದಮರ್ದಪ್ಪಿದ ಪೊಣರ್ವಕ್ಕಿಯ ಪರಿಯಂ ಪೊಸಯಿಸುತ     || ೫೩ ||

ಸಸಿಯೊಳ್ ಸುಧೆಯ ಕಣಂ ಕಲಶಂಗಳೊ | ಳೊಸೆದಿಟ್ಟಮಲಾಕ್ಷತೆ ಕರ್ನಾಗರ |
ಬಸಿಱೊಳ್ ಮುತ್ತು ಮೊರಡಿಯೊಳ್ ವಜ್ರಂ ಕಮಲದೊಳರಲರಸಂ ||
ಮಿಸುಗುವವೋಲ್ ಮೊಗ ಮೊಲೆ ರೋಮಾವಳಿ | ಯೆಸಕದ ಕಟಿ ಕರ ಚರಣದೊಳತಿರಂ |
ಜಿಸಿದುವು ಜಲಕೇಳಿಯ ಕಡೆಯೊಳ್ ಜಲಬಿಂದುಗಳಬಲೆಯರ್ಗೆ       || ೫೪ ||

ಮುರಿದು ಮುಖದ ಮೆಯ್ಮುಟ್ಟಿದ ಚುಬುಕದ | ತಿರಿದ ತಳೋದರದಡುಕುಂಗಾಲ್ಗಳ |
ಪಿರಿದುಂ ನನೆದ ತಲೆಯ ನಿಡುಗೊಂದಲ್ ನೆಲದೊಳುರುಳದಂತೆ ||
ಸರಿವಳಿಯಿಂ ಮೊದಲಂ ಪಿಡಿದೆತ್ತಿದ | ಕರಯುಗಳದ ಕನ್ಯಾಜನಮೊಪ್ಪಿದು |
ದರಲಸರಂ ಚಿತ್ರಿಸಿದ ತ್ರಿಭಂಗಿಯ ಚಿತ್ರದ ತೆಱನಾಗಿ         || ೫೫ ||

ಇಂತು ವಿರಾಜಿಸುವಂಬುಕ್ರೀಡಾ | ನಂತರದೊಳ್ ತನ್ನಂ ಬಳಸಿದ ನಿಜ |
ಕಾಂತಾನಿಕುರುಂಬದ ಕಣ್ಣುಂ ಮನಮುಂ ದಣಿವಂದದೊಳು ||
ಸಂತಸದಿಂ ಸರ್ವಾಭರಣಾಂಬರ | ಮಂ ತವೆ ಕೊಟ್ಟು ಬೞಿಕಮೆಸೆದಂ ಭೂ |
ಕಾಂತನನನ್ತ ವಿಭವಯುತನುಜ್ಜ್ವಲವಿಶದಯಶಃಕಾನ್ತಂ  || ೫೬ ||

ಹೂವಿನ ಹೊತ್ತಿಂ ಗೋಧೂಳಿಯ ಹೊ | ತ್ತಾವರಿಪನ್ನೆವರಂ ತದ್ವನದಿಂ |
ಮಾವಿನ ಸಸಿಯನಡರಿ ಪೂದುಂಬಿದ ನವಮಲ್ಲೀಲತೆಯಾ ||
ಕಾವಣದೊಳಗಣ ಕಿಱುದಳಿರ್ವಸೆಯೊಳು | ಭಾವೋದ್ಭವಸಮರೂಪಂ ಬಳಸಿದ |
ತಾವರೆಮೊಗದ ತನೂದರಿಯರೊಳೋಲಗಮಿರ್ದೊಪ್ಪಿದನು        || ೫೭ ||

ಅನಿತಱೊಳೞಿಯೆ ಪಗಲ್ ಪಡುದೆಸೆಯೊಳ್ | ಮಿನುಗುವ ಕೆಂಪು ಮುಗಿವ ನೂಱೆಸಳ್ವೂ |
ಜಿನುಗುವ ದೇಗುಲವಱೆ ಮಸುಳಿಸುವೆಲರ್ವಟ್ಟೆ ಬಿಸುಪನುೞಿದಾ ||
ಇನಕಾಂತೋಪಲವುಲಿವ ಖಗಾವಲಿ | ಯನು ಮುದವಂಕುರಿಸುವ ಜಾರಾತತಿ |
ಘನವೇದನೆಯಿನುರುಳ್ವೆಣೆವಕ್ಕಿ ಕರಂ ಕಣ್ಗೊಳಿಸಿದುದು  || ೫೮ ||

ಉಕ್ಕುವುದಧಿಯುಳ್ಳಲರ್ವುಪ್ಪಳವೆಲೆ | ಯಿಕ್ಕುವ ಸಸಿ ಹರಿಸಂಬಡೆವಿಂಗದಿ |
ರ್ವಕ್ಕಿಯೊಱತೆಯೇೞ್ವಿಂದೂಪಲವೋಡುವ ಜಾರಾವಿತತಿ ||
ಚೊಕ್ಕಳವೆಳಗಾವರಿಸುವವನಿತಳ | ವಕ್ಕಱುಗೊಬ ವಿರಹಿಗಳ್ ನೆಯ್ದಿಲ |
ತಕ್ಕನುದಯಗಿರಿಶಿಖರಮನೇಱಲ್ ಪಿರಿದುಂ ಸೊಗಸಿದುದು          || ೫೯ ||

ಆ ನವಶಶಿಯುದಯದೊಳಾವನಮಂ | ಸಾನಂದದಿ ಪೊಱಮಟ್ಟಂದಳವಡ |
ರ್ದಾನಾರಿಯರೆಲ್ಲಂ ತನ್ನೆಡಬಲನಂ ಬಿಡದೆಯ್ದುತಿರೆ ||
ಮಾನನಿಧಾನಂ ಜಯನೃಪತಿಲಕಂ | ತಾನುಜ್ಜ್ವಲಮಣಿಶಿಬಿಕೆಯನೇಱಿಯ |
ನೂನೋತ್ಸಾಹದಿ ಬಂದು ಪೊೞಲ್ವೊಕ್ಕರಮನೆಗೆಯ್ದಿದನು        || ೬೦ ||

ಈಯಂದದಿ ಮಣಿಮಂದಿರಮಂ ಪೊ | ಕ್ಕಾಯಿರುಳೊಳ್ ತನ್ನೆಡಗಡೆಯೊಱಗಿದ |
ತೋಯಜಗಂಧಿ ಸುಲೋಚನೆಸಹಿತ ತೊಱೆದ ಕಾತರದಿಂದ ||
ಅಯತಿಯಿಂ ರತಿಶಾಸ್ತ್ರದ ಸದಭಿ | ಪ್ರಾಯಮಱಿದು ಬೆಳಗಪ್ಪನ್ನೆವರಂ |
ಕಾಯಜಕೇಳಿಯೊಳಿರ್ದನವನಿಪಾಲಕಚೂಡಾರತ್ನಂ         || ೬೧ ||

ಸರಸಪುರುಷಸಮುದಾಯಕೆ ಮಿತ್ರಂ | ಧರಣಿತಳಕೆ ರಾಜಂ ರಿಪುವಸುಧಾ |
ವರವಿಪಿನಕ್ಕಂಗಾರಂ ಶ್ರುತಕೆ ಬುಧಂ ನೃಪಚರಿತಕ್ಕೆ ||
ಗುರು ವಾಕ್ಪಾಲನಕಾಭಾರ್ಗವವರ | ನೆರೆವರ್ಗಿನನಂದನನೆನಲತಿಬಂ |
ಧುರನಾದಂ ಸಪ್ತಗ್ರಹದಂತಾಪ್ರಭುಕುಲಮಣಿದೀಪಂ      || ೬೨ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಳಚರಿತಂ ಪ್ರಭುರಾಜಂ ಸ | ಮ್ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದಪಿ ಮನೋಹರವಡೆದುದು ಪನ್ನೊಂದನೆಯ ಮಿಸುಪಸಂಧಿ   || ೬೩ ||

ಪನ್ನೊಂದನೆಯಸಂಧಿ ಸಂಪೂರ್ಣಂ