ಸೂಚನೆ || ಮುನಿವರನಿಂ ಸದ್ಧರ್ಮದ ತೆಱನಂ |
ಮನದೆಱಕಂ ಮಿಗೆ ಕೇಳ್ದನುನಯದಿಂ |
ಜನತಾನಾಯಕಜಯಧರಣೀಪತಿ ಮಗುೞ್ದಂ ಪುರವರಕೆ ||

ಎಱಕಂ ಮನದೊಳೊದವೆ ತಾವರೆಗಾ | ಲ್ಗೆಱಗಿ ಕರಂ ಭೀತಿಯೊಳಿರ್ಪಾನಾ |
ಡೆಱೆಯನ ಚಿತ್ತದ ಭಕ್ತಿಲತೆಗೆ ಸದ್ಧರ್ಮಾಮೃತಜಲಮಂ ||
ಎಱೆದು ಸಲಹಬೇಕೆನುತಂ ಸತ್ಯ | ಕೈಱವಟ್ಟೆನಿಸುವ ಜತಿರಾಯಂ ಕ |
ಣ್ದೆಱೆದಾನನಮಂ ನೋಡಿ ಬಱಿಕ ಹರಿಸಂ ಮಿಗೆ ಹರಿಸಿದನು        || ೧ ||

ಪರಸಿದ ಯತಿಕುಲತಿಲಕಗೆ ಕೈಮುಗಿ | ದರಮಗನಿಂತೆಂದಂ ಜತಿರಾಯಾ |
ಧರೆಯೊಳ್ ಧರ್ಮದೊಳುತ್ತಮಧರ್ಮಮದಾವುದು ನಿರವಿಸೆನೆ ||
ಒರೆದಂ ಹಿಂಸಾನೃತವಂಚನಪರ | ತರುಣೀರತ ಬಹುಕಾಂಕ್ಷೆಗಳಂ ನೆಱೆ |
ಪರಿಹರಿಸುವುದುತ್ತಮಮೆನುತವಱ ತೆಱನನಿರದಿಂತೆಂದು  || ೨ ||

ಕೊಲೆಯಿಂ ಸಾವೆಡೆಯೊಳಗಾಜೀವಕೆ | ಸಲೆ ದುಃಖಂ ಜನಿಯಿಪುದಾದುಃಖದ |
ಫಲಮಾಕೊಂದವನಂ ನರಕಾವನಿಯೊಳಗುದಯಿಸಿ ಬೞಿಕ ||
ಪಲವಗಲಪ್ಪನ್ನೆವರಂ ದುಃಖದ | ಜಲನಿಧಿಯೊಳ್ ತೇಂಕಾಡಿಪುದದೞಿಂ |
ಕೊಲೆಯಂ ಮಱೆವುದು ಸದ್ಧರ್ಮ ಕಣಾ ಭವ್ಯಜನೋತ್ತಂಸಾ       || ೩ ||

ದೈವಾಧೀನದೆ ಕಾಲಕ್ಕೊದಗುವ | ಸಾವಂ ಮುನ್ನಮೆ ನೆನೆನೆನೆದನಿಶಂ |
ನೋವುತ್ತಿಹುದಾತ್ಮಂ ಮತ್ತಾನೋವನ್ಯರಿನೊದವಿದೊಡೆ ||
ನೋವನವರ ಮೇಲೆಂತುಟು ಬಿಡುವುದು | ಜೀವನಮಿಹಪರದೊಳಗದಱಿಂದಾ |
ಜೀವವ್ಯಥೆಯಂ ಬಿಡುವುದೆ ಧರ್ಮಂ ಭವ್ಯಜನೋತ್ತಂಸಾ            || ೪ ||

ಕೊಂದ ಪಗೆಯನಾಕೊಲೆಯಿಂ ಸತ್ತವ | ನೊಂದಾಗಿರ್ದಹಿತರ್ಮೊದಲಾಗಿಯು |
ಮೊಂದಿನಿಸುಂ ಕೊಲ್ಲದೆ ಸುಮ್ಮನಿರರ್‌ನಿಶ್ಚಯಮದಱಿಂದೆ ||
ಒಂದಾಗುದಯಿಸಿ ಬೆಳೆದಾತನುವಂ | ಹೊಂದಿಸಿದನನಾಜೀವಂ ಮುಂದಕೆ |
ಕೊಂದಿಕ್ಕದೆ ನಿರ್ನೆರಮೆಂತಿರ್ಪುದು ಭವ್ಯಜನೋತ್ತಂಸಾ    || ೫ ||

ಹಿಂದಣ ಭವದೊಳ್ವಾಯಕ್ಕೆನ್ನಂ | ಕೊಂದೆಯಲಾಯೆನುತುಂ ಕಡುಮುನಿಸಂ |
ತಂದುಪಚಾರಿಸಿ ನಾನಾತೆಱದುಪಸರ್ಗಮನಾಹಗೆಗೆ ||
ತಂದು ಕರಂ ಕೊಲ್ವುದು ಬಲ್ಗರಮದ | ಱಿಂದಾಹಿಂಸೆಯ ದಂದುಗಮಂ ನೆಱೆ |
ಸಂದೆಗಮಿಲ್ಲದೆ ಬಿಡುವುದು ಧರ್ಮಂ ಭವ್ಯಜನೋತ್ತಂಸಾ          || ೬ ||

ಏನೊಂದೀಗಳ್ ಬಿತ್ತಿದ ಬೀಜಮ | ನೂನಫಲಮನಂದಿಂಗೀವಂದದಿ |
ತಾನೊಬ್ಬರ ಮೃತಿಗೆಣಿಸಿದ ದೋಷಂ ನಿಮಿಷಕ್ಕೊರ್ಮೊರ್ಮೆ ||
ಆನದೊಗೆದು ಬೞಿಕೞಿವ ನಿಗೋದ | ಸ್ಥಾನಮನೀವುದು ಮೃತಿಗೆಣಿಸದ ಸೈ |
ಪಾನಿಜಾಸೌಖ್ಯಾಮೃತಪದಮೀಯದೆ ಭವ್ಯಜನೋತ್ತಂಸಾ          || ೭ ||

ಏನೇನವರಿಚ್ಛೈಸಿದ ವಸ್ತುವ | ನಾನದೆಯೊಲಿದು ಕುಡುವುದತ್ಯುತ್ತಮ |
ದಾನಂ ತತ್ಫಲದಿಂ ಸುರಸುಖಮಪ್ಪುದು ನಿಜದೇಹಕ್ಕೆ ||
ತಾನೇ ಅತಿಹಿತವೆನಿಸುವ ಜೀವನ | ದಾನದ ಫಲಮಪವರ್ಗಮನಾಗಿಸಿ |
ಮಾನಿತಸೌಖ್ಯವನೀಯದೆ ನಿಲ್ವುದೆ ಭವ್ಯಜನೋತ್ತಂಸಾ || ೮ ||

ಕೊಲೆಯೆಂಬುದು ಸಂಸಾರಕೆ ಸಂಕಲೆ | ಕೊಲೆಯೆಂಬುದು ನಾರಕದೊಳ್ಪೆರ್ದಲೆ |
ಕೊಲೆಯೆಂಬುದು ಭವಭವದೊಳ್ ಜೀವನಮಂ ಬಿಡದಡರ್ವ ಹೊಲೆ ||
ಕೊಲೆಯೆಂಬುದು ಘನತರದುಃಖದ ಬಲೆ | ಕೊಲೆಯೆಂಬುದು ಭೀಭತ್ಸದಗುಂದಲೆ |
ಕೊಲೆಯನದೞಿನುೞಿವುದೆ ಸದ್ಧರ್ಮಂ ಭವ್ಯಜನೋತ್ತಂಸಾ        || ೯ ||

ಪುಸಿ ಪುಣ್ಯೋಪಾರ್ಜಿತಕನುಚಿತಮಾ | ಪುಸಿ ನಾಲಗೆಯ ಕೊನೆಗೆ ಕತ್ತರಿಯಾ |
ಪುಸಿ ಪೃಥಿವಿಗೆ ಪುೞುವಗೆಯಾ ಪುಸಿ ನರಕದ ಕಾರಾಗಾರ ||
ಪುಸಿ ಪುೞುವಿನ ಕೊಂಡಕೆ ಸಂಗಡಮಾ | ಪುಸಿಯತಿದುಃಖಕೆಯಾಡುಂಬೊಲನಾ |
ಪುಸಿಯಂ ಬಿಡುವುದು ಸದ್ಧರ್ಮ ಕಣಾ ಭವ್ಯಜನೋತ್ತಂಸಾ         || ೧೦ ||

ಉಂಟಾದುದನಿಲ್ಲೆಂದಿಲ್ಲದುದನು | ಮುಂಟೆಂದಾಗುರುದೈವದ ಹೊರೆಯೊಳ್ |
ತುಂಟತನದಿ ಹುಸಿದಾಹುಸಿ ತನಗೇೞೆಂಟು ದಿವಸದೊಳಗೆ ||
ಕಂಟಕಮಂ ಮಾೞ್ಪುದು ಮಱುಭವದೊಳ್ | ಟೆಂಟಣಿಪುದು ದುಃಖಮನದಱಿಂದವೆ |
ಗೆಂಟಂಮಾಡುವುದಾಹುಸಿಯಂ ಕೇಳ್ ಭವ್ಯಜನೋತ್ತಂಸಾ           || ೧೧ ||

ಮಱೆದುಂ ಪುಸಿದು ನುಡಿವ ಹುಸಿ ಸಿರಿಯಂ | ಪಱಿಪಡಿಪುಡಿದು ಸಂತಾನಂ ಕೆಡಿಸುವು |
ದಱನಂ ತೆಗೞಿಸುವುದು ಪೞಿಯಂ ಪುಟ್ಟಿಸುವುದು ಮಱುಭವಕೆ ||
ನೆಱೆದುಃಖಂಬಡಿಪುದು ತಾನೞಿದದ | ನುಱೆಯೊಱಲಿದೊಡದು ಮಾಡುವ ದುಃಖದ |
ತೆಱನಂ ನಾನೇನೇಂದೞಿಯೆಂ ಕೇಳ್ ಭವ್ಯಜನೋತ್ತಂಸಾ  || ೧೨ ||

ಕಳವಂ ಕನ್ನದ ಬಾಯೊಳೞಿದೊಡೆ | ಪೊೞಲೊಳ್ ತಿರಿವ ತಳಾಱರ್ ಕಂಡೊಡೆ |
ಯಿಳೆಯಧಿಪತಿಯಱಿದೊಡೆ ತಡೆಯದೆ ತಲೆಯಂ ಹೊಯಿಸಲ್ ಸತ್ತು ||
ಇೞಿದು ನರಕಭೂಮಿಯ ಹೆರ್ಕುೞಿಯೊಳ್ | ಮುೞುಗಿ ನೆಗೆದು ಜೀವಿಸುತಿಹರದಱಿಂ |
ಕಳವಂ ವಱೆವುದು ಸದ್ಧರ್ಮ ಕಣಾ ಭವ್ಯಜನೋತ್ತಂಸಾ || ೧೩ ||

ಕಳವು ತನುವನಿರದೊಕ್ಕುವ ಕಳಮಾ | ಕಳವು ನರಕದೊಳ್ ಕಾಡುವ ಕಳಮಾ |
ಕಳವು ತನಗೆ ಬೇಕೆಂದು ಬಗೆದು ಭಾವಿಪ ಮಾನಸವಿಕಳಾ ||
ಕಳವುಜ್ಜ್ವಳಚಿತ್ತದ ಕಳಕಳಮಾ | ಕಳವಿಳೆಗನ್ಯಾಯದ ಮೊಕ್ಕಳಮಾ |
ಕಳವಂ ಬಿಡುವುದೆ ಸದ್ಧರ್ಮ ಕಣಾ ಭವ್ಯಜನೋತ್ತಂಸಾ  || ೧೪ ||

ಗಂಡನಿಱಿದು ಹಜ್ಜೆಗೆ ಬಲ್ನೇಣಂ | ಕೊಂಡೆಲ್ಲರ್ ಚಿಃ ಎಂಬಂತೆಳೆವರ್ |
ದಂಡಂಗೊಂಡಾಜ್ಞೆಯನೊದವಿಪನರಸಂ ಮಱುವುಟ್ಟಿನೊಳು ||
ಹಿಂಡಿಹಿೞಿದು ದಂಡಿಸುವುದು ನಾರಕ | ಮಂಡಳಿಯತಿಕೋಪದಿನದಱಿಂ ಪೆಱ |
ವೆಂಡಿರನೆಳಸುವುದನುಚಿತ ಕಾಣಾ ಭವ್ಯಜನೋತ್ತಂಸಾ    || ೧೫ ||

ಅತಿಕಾಂಕ್ಷೆಯನಾವಂ ಮಾೞ್ಪನವಂ | ಸತತಂ ಹಿಂಸೆಗೆ ಬಗ್ಗುವನಲ್ಲನ |
ನೃತಕಂಜುವನಲ್ಲಂ ಕಳವಿಂಗೆ ಸುಗಿವಲ್ಲಂ ಪರರ ||
ಸತಿಯ ರತಕ್ಕೆಳಸುವನಲ್ಲಂ ದು | ರ್ಗತಿಗೆಯಗಿವನಲ್ಲಂ ಮತ್ತದಱಿಂ |
ದತಿಕಾಂಕ್ಷೆಯನುೞಿವುದೆ ಸದ್ಧರ್ಮಂ ಭವ್ಯಜನೋತ್ತಂಸಾ            || ೧೬ ||

ದುರಿತವನಂ ಬೆಳೆವುದಕೆ ಹೊಲಂ ಕೊಲೆ | ಪರಕಲಿಸಿದ ನವದೋಹಲಮನೃತಂ |
ಪರಿಕಾಲುದಕಮದಕೆ ಕಳವನ್ಯಸ್ತ್ರೀರತಮೇ ಗೆಯ್ಮೆ ||
ಪರಿರಕ್ಷಣೆಯತಿಕಾಂಕ್ಷೆಯದಱಿನವು | ನಿರುತಂ ಪೊರ್ದದೊಡೆಲ್ಲಿಯ ಸಂಸೃತಿ |
ಯುರುಕಿಲ್ಬಿಷಮೆಲ್ಲಿಯದು ವಿಚಾರಿಸೆ ಭವ್ಯಜನೋತ್ತಂಸಾ        || ೧೭ ||

ಮುಂದಣ ಜನ್ಮಕ್ಕುಣ್ಬಘದಶನ | ಕ್ಕಿಂದಡುವಡಿಗೆಗೆ ಕೊಲೆಯೊಲೆ ಹುಸಿ ಕಲ |
ವೊಂದಿದ ಕಳವುದಕಂ ಪರನಾರೀರತವಿಂಧನವಾಸೆ ||
ಮಂದ್ಯೆಸಿದ ಕಿಚ್ಚದಱಿಂದಿಂತಿವ | ನೆಂದುಂ ಸಮನಿಸದಿರ್ದೊಡೆ ದುರಿತಮ |
ನೆಂದುಂ ಭುಂಜಿಸನದು ನಿಜ ಕಾಣಾ ಭವ್ಯಜನೋತ್ತಂಸಾ  || ೧೮ ||

ಕ್ರೋಧಂ ದುರ್ಗತಿಕೃದ್ಭವಹಿಂಸಾ | ಸಾಧನಮಮೃತಾಲಾಪಕಲಾಪಾ |
ರಾಧನಮುರುಚೌರ್ಯೋದಿತದುರ್ಧರದುಃಖಜನನವೆಂಬಾ ||
ವ್ಯಾಧಿ ಪರಸ್ತ್ರೀಗಮನೋದಿತಬಹು | ಬಾಧೆ ಮನಃಪೀಡಿತಕಾಂಕ್ಷಾಸಂ |
ಬಾಧಮದಱಿನದು ಪೊಲ್ಲಮೆ ಕಾಣಾ ಭವ್ಯಜನೋತ್ತಂಸಾ         || ೧೯ ||

ನಿರುತಂ ಮಾನಕಷಾಯದೆ ಕೋಪಾಂ | ಕುರಮಪ್ಪುದು ತತ್ಕ್ರೋಧೋದ್ರೇಕದಿ |
ಪರಜೀವವ್ಯಥೆಯಹುದಾವ್ಯಥೆಯಿಂ ನರಕ ತಿರಿಕಜನ್ಮಂ ||
ದೊರೆಕೊಂಬುದು ತಜ್ಜನ್ಮದಿನತಿದು | ರ್ಧರದುಃಖಂ ಬಿಡದದಱಿಂದದನುಱೆ |
ಪರಿಹರಿಸುವುದಿದು ಸದ್ಧರ್ಮ ಕಣಾ ಭವ್ಯಜನೋತ್ತಂಸಾ            || ೨೦ ||

ಮಾಯಮನಾವಗಮಂತಸ್ಥಳದೊಳ್ | ಬೀಯಂಮಾಡದೆ ನಿಱೆಸುವ ದುರಭಿ |
ಪ್ರಾಯದ ಮೊಲಗೞ್ತಲೆಯಿಂದಱನಂ ಭಾವಿಸದಾಜೀವಂ ||
ಆಯುಂ ತವೆ ತೀರ್ದು ನಪುಂಸಕನುಂ | ಸ್ತ್ರೀಯುಂ ತಾನಾಗುದಯಿಸಿ ದುಃಖದೊ |
ಳಾಯಾಸಂಬಡುತಿಹುದದು ಕಾಣಾ ಭವ್ಯಜನೋತ್ತಂಸಾ  || ೨೧ ||

ಏನನೊರೆವೆನತಿಲೋಭಂ ಲೋಕಕೆ | ಹೀನಂ ತನ್ನಂ ಭೋಗಿಸಲೀಯದು |
ದಾನಂ ಮೊದಲಾದಱನಂ ಮಾಡಿಸಲೀಯದು ಭವಭವಕೆ |
ನಾನಾದುಃಖವನುಣಿಸದೆ ನಿಲ್ಲದು || ತಾನದಱಿಂದಿಹಪರವೆರಡರ್ಕಂ |
ಮಾನಿತಸುಖಮಂ ಕುಡದದು ಕಾಣಾ ಭವ್ಯಜನೋತ್ತಂಸಾ            || ೨೨ ||

ದಾರುಣತರಸಂಸಾರತಟಾಕ | ಕ್ಕೇರಿಯತಿಕ್ರೋಧಂ ವೀಚಿಯಹಂ |
ಕಾರಂ ತೋರ್ಪಾವರ್ತಂ ಮಾಯೆಯಗಾಧಂ ಬಹುಲೋಭಂ ||
ಘೋರದುರಿತಪರಿಪಾಕದಿ ಜೀವನ | ಮಾರಯಲನಿಮಿಷದಂತಿಹುದದಱಿಂ |
ಕ್ರೂರಕಷಾಯಮನುೞಿವುದೆ ಧರ್ಮಂ ಭವ್ಯಜನೋತ್ತಂಸಾ           || ೨೩ ||

ಆವುದು ಹಿಂಸಾನೃತಚೌರ್ಯಪರ | ಸ್ತ್ರೀವಶಗತಬಹುಕಾಂಕ್ಷೆಗಳಂ ನೀಂ |
ಭಾವಿಸಬೇಡೆಂಬುದು ವೇದಂ ಮತ್ತಾವೇದಂಮೊದಲೊಳ್ ||
ಆವನ ಮುಖದೊಳ್ ಜನಿಯಿಸಿತವನೇ | ದೈವಮವನರೂಪಂಬೊತ್ತನೆ ಗುರು |
ವಾವನವನ ಶಿಷ್ಯನೆ ಸದ್ಭಕ್ತಂ ಭವ್ಯಜನೋತ್ತಂಸಾ         || ೨೪ ||

ನಿರುತಂ ನಂಬುವ ತೆಱದಿನಹಿಂಸಾ | ಪರಮೋಧರ್ಮಎನುತ್ತೊರೆದವನೇ |
ಗುರುವಾತನ ಸಮ್ಯಗ್ದರ್ಶನ ನವಬೋಧಚರಿತ್ರಗಳೇ ||
ವರರತ್ನತ್ರಯಮಾಮೂಮಣಿಯಂ | ಧರಿಸಿದವನೆ ಸದ್ಭಕ್ತಂ ಮತ್ತವ |
ಗುರುಸುಖಮೀವ ಮುಕುತಿಯಹುದರಿದೇ ಭವ್ಯಜನೋತ್ತಂಸಾ     || ೨೫ ||

ಈ ಪರಿಯಿಂ ಸದ್ಧರ್ಮಾಧರ್ಮನಿ | ರೂಪಣಮಂ ತಿಳಿವಂದದಿ ಸುಮನ |
ಶ್ಚಾಪಮದಾಪಹರಣನಭಿನವತೀರ್ಥಂಕರನೆಂದೆನಿಪಾ ||
ತಾಪಸನೊರೆಯಲ್ಕಾ ವಚನಸುಧಾ | ಕೂಪಾರದೊಳಿರದಾಳಿದರಾಪೃ |
ಥ್ವೀಪಾಲೋತ್ತಂಸನುಮಾಸಭೆಯ ಸುಜನರುಂ ಸಂತಸದೊಳ್      || ೨೬ ||

ಮೊದಲಾಮುನಿಪತಿಯುಪಶಾಂತತ್ವಕೆ | ಪದಪಿಂ ತಂತಮ್ಮಯ ವೈರಂದೊಱೆ |
ದದಿರದೆ ನಿಂದು ನಿರೀಕ್ಷಿಪ ಪಶು ಪುಲಿ ಕರಿ ಹರಿ ಫಣಿ ಪರ್ದು ||
ರದನಿಯರಸುಮಿಗಗಳ್ ಮತ್ತಾತನ | ಮೃದುಮಧುರಸುಧರ್ಮನಿರೂಪಣಮಂ |
ಹೃದಯಂಬುಗೆ ಕೇಳ್ದು ಕರಂ ಹರಿಸಂಬಡೆದುದನೇವೊಗೞ್ವೆಂ       || ೨೭ ||

ಆ ಗಳಿಗೆಯೊಳಾಯೆಡೆಯೊಳ್ ಸ್ತ್ರೀಪು | ನ್ನಾಗಮೆರಡು ತನ್ಮುನಿವಚನಮನನು |
ರಾಗದಿ ಶುಭಭಾವನೆಯಿಂ ಕೇಳ್ದಲ್ಲಿಂ ಮುಂದಕೆ ನಡೆದು ||
ಪೋಗಿ ಪೊದೞ್ದಾತುರದಿಂ ಸಮಸಂ ಭೋಗಕ್ರೀಡೆಯೊಳಾಲಿಂಗಿಸಿದುವು |
ಹೂಗಣೆಯಂ ಹುರಿಗೂಡಿದ ಸಂಮೋಹನಪಾಶದ ತೆಱದಿ || ೨೮ ||

ಇತ್ತಲವನಿಭರ್ತಾರಂ ಮುನಿವಂ | ಶೋತ್ತಂಸನ ನುಣ್ಣುಡಿಯಂ ತನ್ನಯ |
ಚಿತ್ತಂಬುಗೆ ಕೇಳ್ದಡಿದಾಮರೆಗಿರದೆಱಗುತ ಬೀೞ್ಕೊಂಡು ||
ಮೊತ್ತದರಸುಮಕ್ಕಳ್ವೆರಸತಿಮುದ | ಮುತ್ತಮರಾಧೀಶ್ವರವೈಭವದಿಂ |
ಚಿತ್ತಜಕೇಳಿಯೊಳಿರ್ಪಾವುರಗಮಿಥುನದೆಡೆಗೆಯ್ದಿದನು     || ೨೯ ||

ಸುರತಾಂತ್ಯದ ಸೌಖ್ಯದೊಳುದ್ಭವಿಸಿದ | ಪರವಶದಿಂ ನಿಲ್ತಂದು ತಲೆಯನತಿ |
ಭರದಿಂ ಬಾಗಿದ ಪೆಣೆವಾವುಗಳಿನಿವಿರಿದುಂ ಸೊಗಸಿದುವು ||
ಸ್ಮರಕೇಳೀನವಮೋಹನವಲ್ಲರಿ | ಯೆರಡುಂ ಮುರಿದು ಬೆಳೆದು ತೆಂಕಣ ತೆ |
ಳ್ಳೆರಲಲೆಯಲ್ ಧರಣೀತಳಕೋವದೆ ಬಾಗುವ ಭಂಗಿಯೊಳು        || ೩೦ ||

ಸ್ಮರಕೇಳಿಯೊಳೀಯಂದದೊಳಿರ್ಪಾ | ವುರಗಮಿಥುನಮಂ ನೃಪನೊಡನೆಯ್ದುವ |
ಪರಿಜನದೊಳಗೊರ್ವಂ ದುರುಳಂ ಮುಂಗುಡಿಯೊಳ್ ಕಾಣುತವೆ ||
ಕರದ ಬಡಿಯಿನತಿಭರದಿಂದಿಡೆ ಗೋ | ಣ್ಮುರಿದು ನೆಲಕೆ ಬೀಱ್ತರುತೆಮ್ಮೀಕೊಲೆ |
ಯರಸನನುಜ್ಞೆಯಿನಾಯ್ತೆನುತಂ ಮುನಿದಸುವಂ ನೀಗಿದುವು          || ೩೧ ||

ಮೊದಲಾಮುನಿವಂಶೋತ್ತಮನಾಡಿದ | ಸದಮಲಧರ್ಮನಿರೂಪಣಮಂ ಸ |
ಸಮ್ಮದದಿಂ ಕೇಳ್ದಾಶುಭಭಾವನೆಯಿಂದಾ ಸ್ತ್ರೀಫಣಿ ಸತ್ತು ||
ಒದವಿದ ಪುಣ್ಯಫಲದಿ ಧರಣೀಂದ್ರನ | ಹೃದಯಸರೋಜಶ್ರೀಯೆಂದೆನಿಸುವ |
ಸುದತೀಮಣಿ ಪದ್ಮಾವತಿಯಾದುದು ಕೇಳ್ ಕೈರವನೇತ್ರೇ           || ೩೨ ||

ಉದಯಿಸಿದಾಕ್ಷಣದೊಳ್ ಪದ್ಮಾವತಿ | ಮದವತ್ಪ್ರಾಯಿಕೆಯಾಗಲ್ ಫಣಿಪತಿ |
ವದನಮನೀಕ್ಷಿಸುತಿಂತೆಂದಂ ಮುಂ ಹೂನ್ಯದ ಫಲದಿಂದೆ ||
ಸುದತೀಮಣಿಯೆನಗಾದೆಯೆನಲ್ಕುರು | ಮುದದಿಂತೆಂದಳ್ ಮುನಿವಚನದೊಳೊದ |
ವಿದ ಸೈಪಿನೊಳೀತೆಱನಾಯ್ತೆಲೆ ಕೇಳ್ ಜನಪತಿಯಿನ್ನೊಂದ          || ೩೩ ||

ಇನಿಸಪರಾಧಂಮಾಡದಳೆನ್ನಂ | ಮನುಜೇಶಂ ಜಯಭೂಪತಿ ಕೊಲಿಸಿದ |
ನೆನುತಿಂತೆಂದೆಳೆಲೇ ಪತಿ ನೀನೆನ್ನಿಚ್ಚೆಯನೊದವಿಪೊಡೆ ||
ಮುನಿದವನಂ ಕೊಲಬೇಕೆಂಬಾನುಡಿ ಗೆನತುಂ | ಕೋಪದಿನೆಯ್ದಿ ಕುಮಾರನ |
ಮಿನುಗುವ ಸೆಜ್ಜೆವನೆಗೆ ನಟ್ಟಿರುಳೊಳ್ ಬಂದನುರಗರಾಜಂ         || ೩೪ ||

ಪಳಿಕಿನ ಶಯ್ಯಾಗೃಹದೊಳ್ ಕುಲಿಶದ | ಸೆಳೆಮಂಚದ ಮೇಲೊಱಗಿದ ನೃಪಕುಲ |
ತಿಳಕನನೋವದೆ ಕೊಲಲೆನುತೊಂದಸಿತಾಹಿಯ ರೂಪವನು ||
ತಳೆದಾತಲೆದೆಸೆಯೊಳ್ ನಿಂದಹಿಪತಿ | ಪೊಳೆದಂ ಸರಸಿಯ ನಡುವಣ ತಿಟ್ಟಿನ |
ಕಳಹಂಸನ ಕೆಲದೊಳ್ ಬೆಳೆದೊಱಗಿದ ಬೆಳರ್ದಾಮರೆಯಂತೆ          || ೩೫ ||

ಇದು ಗೃಹರಮೆ ತದ್ಭೂಮೀಶ್ವರಗೆ | ತ್ತಿದ ಬೆಳ್ಗೊಡೆಯರುಣೋಪಲಕಳಶವೊ |
ಇದು ಮುತ್ತಿನ ಕಂಭದ ಪೊಸಸೊಡರೊ ಎನೆ ಮಿಗೆ ಸೊಗಯಿಸುತ ||
ಒದೆವಿದ ಮುನಿಸಿಂದಾಮನುಜೇಶನ | ನದಿರದೆ ಹೊಯ್ವೆನೆನುತ ತಲೆದೆಸೆಯೊಳ್ |
ಪದಪಿಂ ನಿಂದ ಫಣೀಂದ್ರನ ಪೆಡೆವಣಿ ಪಿರಿದುಂ ಜ್ವಲಿಯಿಸಿತು       || ೩೬ ||

ಅನಿತಱೊಳರಸುಮಗಂ ಧರಣೀಂದ್ರಂ | ಮುನಿದು ಕರಂ ತನ್ನ ಕೊಲಬಂದುದ |
ನಿನಿಸೞಿಯದೆ ಕಣ್ದೆಱೆದಾತನ್ನಯತೋಳ ಹೊರೆಯೊಳಿರ್ಪಾ ||
ವನಿತೆ ಜಯಾವತಿಯೆಂಬವಳೊಡನಿಂ | ತೆನುತುಸಿರ್ದಂ ನಾನಿಂದಿನ ದಿನದೊಳ್ |
ಮುನಿಪತಿಯಂ ಬಂದಿಸಿ ನಂದನದೊಳ್ ತಿರುಗುವ ಸಮಯದೊಳು || ೩೭ ||

ಆನಱಿಯದ ತೆಱದಿಂ ಮುಂದೆಯ್ದುವ | ಮಾನಸನೊರ್ವಂ ಮಸಿಜಕೇಳಿಯೊ |
ಳಾನಂದಿಪ ಫಣಿಯಂ ನಿಷ್ಕಾರಣದಿಂ ಕೊಲೆ ಕಂಡವನ ||
ಮಾನಂಗಿಡಿಸಿದೆನಂತದಱಿಂದೆನ | ಗೇನಾಯ್ತಾಳೆಸಗಿದುದಾಳ್ದಂಗೆಂ |
ಬಾನಾಣ್ಣುಡಿಯಿಂದಾಪಾಪದ ಫಲಮೆನ್ನಂ ತಟ್ಟುವುದು            || ೩೮ ||

ಎಂದು ನುಡಿದು ಬಿಸುಸುಯ್ವರಮಗನಂ | ಕೊಂದು ಬಸುೞ್ಪೆನೆನುತ ಬಂದಹಿಪತಿ |
ಯೊಂದಿನಿಸಪರಾಧಂ ಮಾಡದನಂ ವಾಯಕೆ ಕೊಲಲೆಂದು ||
ಬಂದೆನೆನುತ ತತ್ಕ್ರೋಧಮನುಡುಗಿಸಿ | ಮಂದೇತರಕಾರುವಣ್ಯಹೃದಯನಾ |
ನಂದದಿ ತನ್ನ ಮನೋಹರಮಪ್ಪಾಕಾರಂದೋಱಿದನು   || ೩೯ ||

ಪಲವು ಪರಲ ಕೀಲಣೆಯಿಂದೊಪ್ಪುವ | ವಿಲಸದ್ವಿಮಲವಿಭೂಷಣಮಂ ಸಿರಿ |
ದಲೆಯೊಳಗಿಟ್ಟು ಕಿರೀಟದ ಬೆರಕೆವಣಿಯ ಕಾಂತಿಗಳಿಂದ ||
ಲಲಿತಧವಳವರ್ಣಾಂಗದ ನವಪರಿ | ಮಲದಿಂದಾಧರಣೀಂದ್ರಂ ನೃಪಕುಲ |
ತಿಲಕನ ಕಣ್ಬಗೆಗತ್ಯಾಶ್ಚರ್ಯಂಬಡೆದು ವಿರಾಜಿಸಿದಂ      || ೪೦ ||

ಈಪರಿ ಪರಿರಂಜಿಪ ಫಣಿಪರಿವೃಢ | ನಾಪೃಥವಿಪಗಿಂತೆಂದಂ ಭೂತದ |
ಯಾಪರಗುಣಿ ನಿನ್ನಂ ನಿಷ್ಕಾರಣದಿಂ ಕೊಲಬಂದೆನ್ನ ||
ವ್ಯಾಪಾರಕೆ ನೀನೇ ಕ್ಷಮಿಸೆಂದು ನಿ | ರೂಪಿಸಿ ದಿವ್ಯಾಭರಣಸುವಸನವಿ |
ಲೇಪನಮಂ ನೆನೆದಂತಾಗುವವೊಲ್ ನಿಯಮಿಸಿಯೊಲಿದಿತ್ತಂ          || ೪೧ ||

ಕಾಲನನಾದೊಡಮಾಹವಧರೆಯೊಳ್ | ತೋಳಂ ಬಿಗಿವ ಬಿಲೇಶಯಪಾಶನು |
ನಾಲಲಿತಾಂಗಗೆ ಕೊಟ್ಟಹಿಪತಿ ತನ್ನಯ ಕೀೞ್ನೆಲಕಿೞಿದಂ ||
ಬಾಲಕಿ ಕೇಳತ್ತಲ್ ತತ್ಪುರುಷ | ವ್ಯಾಲಿ ಮಡಿದು ಬೆಂತರಿಯಾಗುದಯಿಸಿ |
ಕಾಳಿವೆಸರನಾಂತು ಕರಂ ಪಿಂತಣ ಭವವನೆ ನೆನೆಯಿತ್ತು      || ೪೨ ||

ಎನ್ನಂ ನೋಡದೆ ನಿಷ್ಕಾರಣದಿಂ | ತನ್ನನುಚರನಿಂ ಕೊಲಿಸಿದ ಹಗೆಯಂ |
ಬನ್ನಂಬಡಿಸಿ ಕೊಲಲ್ಬೇಕೆನುತಂ ನಕ್ರಾಕಾರವನು ||
ತಾನ್ನೆರೆ ತಳೆದು ತರಂಗಿಣಿಯೊಳ್ ಪಾ | ಯ್ವುನ್ನತಗುಣಿ ಜಯನೃಪನಡರ್ದಿಭಮಂ |
ಕೆನ್ನಂ ಪಿಡಿದು ತೊರೆಯ ಕಮ್ಮಡುವಿನ ಕಡೆಗೆೞೆಯಿತ್ತಾಗ            || ೪೩ ||

ಇದು ಜಯಭೂವರಗಾದುಪಸರ್ಗಂ | ಸುದತೀಮಣಿ ನಿನ್ನಯ ಸೌಶೀಲ್ಯದ |
ಸದಮಲಮಹ ಮಾಹಾತ್ಮ್ಯೆಗೆ ಬಂದಾನೇ ಹೆಱಹಿಂಗಿಸಿದಂ ||
ಮುದದಿಂ ಗಂಗಾಪರಮೇಶ್ವರಿಯೀ | ನದಿಯಧಿದೇವತೆಯನುತ ನುಡಿದು ಸ |
ಮ್ಮದದಿಂದವರಂ ಬೀೞ್ಕೊಡುತಮದೃಶ್ಯಂದಾಳಿದಳಿತ್ತ || ೪೪ ||

ಬೀಡಂ ಬಿನದದಿ ಪೊಕ್ಕು ಸುಲೋಚನೆ | ಗೂಡಿ ಮನೋರಾಗದಿನಂದಿನ ಪಗ |
ಲೋಡಿ ಮಗೞ್ವನ್ನಬರಂ ತದ್ಗಂಗಾತೀರದೊಳಿರ್ದು ||
ಮೂಡುವ ಮುನ್ನೇಸಱ ಬಿಂಬಂಬೆರ | ಸಾಡಂಬರದಿಂದೆೞ್ದು ನಡೆದನಾ |
ನಾಡೆಱೆಯಂ ನಲವಿಂ ತನ್ನಯ ಹಸ್ತಿನಪುರವರಕಾಗಿ       || ೪೫ ||

ನಾಡ ಸಿರಿಯನೀಕ್ಷಿಸುತಂ ಕೞಮೆಯ | ಕಾಡಂ ಕಾವ ಕಮಲಲೋಚನೆಯರ |
ಗಾಡಿಯನೀಕ್ಷಿಸುತಂ ಪ್ರಿಯದಿಂ ಸೌರಭ್ಯಶರಾಸನನಾ ||
ಆಡುಂಬೊಲನೆನಿಪಾರಮೆಯೊಳಗೆಡೆ | ಯಾಡುತ್ತಿರ್ಪ ವಿಟೀವಿಟರಂ ನಡೆ |
ನೋಡುತ ನಡೆತಂದಂ ತದ್ರಾಜಶಶಾಂಕಂ ನಿಜಪುರಕೆ                     || ೪೬ ||

ಬಂದಪನವನೀಶ್ವರಚೂಡಾಮಣಿ | ಯಿಂದುಕುಲದ ರಾಜಂ ಜಯಭೂವರ |
ನೆಂದಾಪೊೞಲ ಪುರಂಧ್ರಿನಿಕಾಯಂ ತಂತಮ್ಮಯ ಮೊಗದ ||
ಮುಂದೆ ಮುಸುಕಿದ ಫಣಿಯಂ ಬಿಸುಟೆ | ಯ್ತಂದತ್ಯಾತುರದಿಂ ಬೀದಿಗಳೊಳ್ |
ಮಂದೈಸಿದ ಜನಮಂ ಕಂಡಿನಿಸುಂ ಸುೞೆಯದೆ ನೋಡಿದರು         || ೪೭ ||

ಬಲ್ವೆಱೆಮೊಗದಬಲೆಯರುರದಿಂದೆ ಸ | ಡಿಲ್ವ ಸೆಱಂಗೆತ್ತದೆ ಕಟಿಯಿಂದೆ ಕ |
ೞಲ್ವ ಕೆನತ್ಕಾಂಚಿಯನೋಸರಿಸದೆ ಜಗುೞ್ವಂದುಗೆಯಿಡದೆ ||
ನೇಲ್ವ ಮುಡಿಯನೋವದೆ ಬೞಿಕಾಬಾ | ಗಿಲ್ವಾಡದ ಕಾಪಿನವರ್‌ಬಗ್ಗಿಸಿ |
ನಿಲ್ಲೆನೆ ನಿಲ್ಲದೆ ನಡೆದೀಕ್ಷಿಸಿದರ್ ನವಮನಸಿಜನಿಭವನ   || ೪೮ ||

ರಂಗುದುಟಿಯ ರಾಜೀವಾಂಬಕದೆಳ | ದಿಂಗಳ್ವಣಿಯ ನವೀನಲತಾಂಗದ |
ತೇಂಗಾಯ್ಮೊಲೆಯ ತೊಳಪ ತೆಳ್ವಸಿಱರಸಂಚೆವಸುಳೆನಡೆಯ ||
ಭೃಂಗಾಳಕದಭಿನವಕಂದರ್ಪಭು | ಜಂಗಭುಜದ ನವಮೋಹನಶರಧಿತ |
ರಂಗವಳಿಯ ತರಳಾಕ್ಷಿಯರೆಯ್ತಂದೀಕ್ಷಿಸಿದರ್ ನೃಪನ      || ೪೯ ||

ಬಾಗಿಲ್ವಾಡದ ಬಹುಮಣಿಗುರುಜಿನ | ದೇಗುಲಗಳ ಪಲವುಂ ಶಿಖರಗಳ |
ಭೂಗಧಿಪರ ಗೃಹಗಳ ಪೊಱಮದಿಲಂಗಣದ ಮರದ ಕೊನೆಯ |
ಮೇಗೆ ಮಿಸುಪ ಮಿಗಗಣ್ಣಬಲೆಯರನು | ರಾಗದಿನಿನಿವಿರಿದುಂ ನೋಡಿದರಾ |
ಪೂಗಣೆಗೆಣೆಯೆನಿಪ ಕುಮಾರನನಾವಸುಧಾವಲ್ಲಭನ     || ೫೦ ||

ಆಕಾಶಸ್ಫಟಿಕದ ಮಾಡವನಡ | ರ್ದಾಕುವರನನೊಲಿದನಮಿಷತೆಯಿನಾ |
ಲೋಕಿಪ ನವನೀಲಾಂಭೋರುಹದುಲ್ಲಸಿತವಿಲೋಚನದ ||
ರಾಕೇಂದುವಿನಂದದ ಮೊಗದವರ್ಗಳ್ | ನಾಕಸತಿಯರೊ ನಭಶ್ಚರಿಯರೊ ತಾ |
ರಾಕಾಂತೆಯರೋ ಗರುಡಗಣಿಕೆಯರೊ ಎನೆ ಮಿಗೆ ಮುಸುಗಿದರು   || ೫೧ ||

ಸ್ಮರಪುಷ್ಪವದುನ್ನತಮೂರ್ತಿತ್ರಯ | ಶರನಿಧಿಪಾಂಡವಚಕ್ರಿಮುನಿಪದಿ |
ಗ್ವರವಿಧಿಗಳ ವನಿತೆಯರನೆ ನಿಂದೇಕದ್ವಿತ್ರಿಚತುಷ್ಕಾ ||
ಶರಷಟ್ಸಪ್ತಾಷ್ಟನವಾಂಚಿತಭಾ | ಸುರಸಂಖ್ಯೆಯಿನಲ್ಲಲ್ಲಿರ್ದಾಭೂ |
ವರಕುಲಚೂಡಾಮಣಿಯಂ ನೋಡಿದರಾಪುರವನಿತೆಯರು            || ೫೨ ||

ಬಚ್ಚಬಯಲ ತೆಱದಿಂ ಬಗೆಗೊಳಿಸಿ ಪ | ೞಚ್ಚನೆಸೆವ ಪಳಿಕಿನ ಮಾಡಗಳೊಳ್ |
ಮೆಚ್ಚಿ ಮಹೀಶನನೀಕ್ಷಿಪ ಸತಿಯರ ನಾಸಾಚಂಪಕದಿಂ ||
ಉಚ್ಚಸ್ತನಪಂಕಜಕುಟ್ಮಲದಿಂ | ದಚ್ಚವೆಳಗುಗಣ್ಗಳ ಮಲ್ಲಿಗೆಯಿಂ |
ದಚ್ಚರಿಯಾಯ್ತೀಕ್ಷಿಸುವರ ಕಣ್ಗೆ ನಭಂ ಪೂವಡೆದಂತೆ     || ೫೩ ||

ನಗೆಗಣ್ಗಳ ನನೆಯ ಸರಲ್ಗಣ್ಗಳ | ಮಿಗಗಣ್ಗಳ ಮೀಂಗಳ ಮಱಿಗಣ್ಗಳ |
ಬಗಸೆವಡೆದ ಕಣ್ಗಳ ಬಂಡುಣಿಗಣ್ಗಳ ಮದನನ ಗೇಣಾ ||
ಪೊಗರ್ಗಣ್ಗಳ ಪೊಳೆವಲರ್ಗಣ್ಗಳ ಬೆಳ | ತಿಗೆಗಣ್ಗಳ ಬೆಲರ್ದಾಮರೆಗಣ್ಗಳ |
ಸೊಗಯಿಪ ಸೊರ್ಕುಂಗಣ್ಗಳ ಸುದತಿಯರೀಕ್ಷಿಸಿದರ್ ನೃಪನ         || ೫೪ ||

ತಾವರೆ ತುಱುಗಿದವೋಲ್ ಕನ್ನೆಯ್ದಿಲ | ಪೂವಲಿಗೆದಱೆದವೋಲ್ ಮಱಿಮೀಂಗಳ |
ದಾವಣೆಗಟ್ಟಿದವೋಲ್ ಬೆಳ್ದಿಂಗಳ ಹಕ್ಕಿಯ ಹಸುಳೆಗಳ ||
ಲಾವಣಿಗೆಯ ಮುಸುಕಿದವೋಲ್ ಬಂಡುಣಿ | ಯಾವಲ್ಬಂದೆಱಗಿದವೋಲ್ ಕುವರನ |
ಲಾವಣ್ಯಾಂಗಮನಡರ್ದುವು ಪುರಸತಿಯರ ಕಣ್ಗಳ ಬೆಳಗು           || ೫೫ ||

ಸಿರಿವಚ್ಚೆಯ ಪಳಿಕಿಂ ಕಂಡರಿಸಿದ | ಕರುವೆನೆ ಕಾರ್ಗಾಲದ ಕುಡುಮಿಂಚಿನ |
ತಿರುಳಿಂ ತೀರಿಸಿ ತಿರ್ದಿದ ರೂಪೆನೆ ಪೊಸಮುತ್ತಿಂ ಕಡೆದಾ ||
ಪರಿಜೆನೆ ಪಜ್ಜಳಿಸುವ ತಿಳುವಳಿಕಿನ | ಪರಲಿಂ ಚೀಲಣಿಸಿದ ಚಿತ್ರಮುಮೆನೆ |
ಕರಮೆಸೆದಂ ಭೂಪತಿ ಪುರಸತಿಯರೆ ಕಣ್ಗಳ ಕದಿರಿಂದ      | ೫೬ ||

ಮತ್ತೊರ್ವಳ್ ಮಧುರಾಂಬಕಿಯುರುಮುದ | ವೆತ್ತು ನಿರೀಕ್ಷಿಪ ನಿಡಿಯಲರ್ಗಣ್ಗಳ |
ತುತ್ತತುದಿಯ ಬೆಳ್ವಳಗೆರಡುಂ ಮಿಸುಗುವ ಕಿೞ್ಬರಿಗಳನು ||
ಪತ್ತಿ ಪರಿಯಲಂಗಜನವನೀಶ್ವರ | ನುತ್ತಮಿಕೆಯ ಚೆಲ್ವಂ ಕುಡು ಕೊಲ್ವೆನೆ |
ನುತ್ತವೆ ಬೆಳ್ಳಿಯ ಹಗರಿಟ್ಟಿಂದದಿ ಕಣ್ಗೆ ವಿರಾಜಿಸಿತು || ೫೭ ||

ತರಣಿ ತೆರಳಲಾಕಡೆಗೆಯಲರ್ಮೊಗ | ದಿರಿವ ಮೊರಡಿದಾಮರೆಯ ಬನಂಬೊಲ್ |
ಕರಮೆ ತೊಱೆದ ಕಾತರಚಿತ್ತದಿನಾವೀಧಿವಿಡಿದು ಬರ್ಪಾ ||
ಅರಮಗನೇಕಡೆಗೆಯ್ದಲ್ಕಾ ಕಡೆ | ಗುರುಮುದದಿಂ ಕರುಮಾಡವಡರಿ ಮೊಗ |
ಮುರಿದು ನಿರೀಕ್ಷಿಪ ನಗರಿಯ ನಾರಿಯರೊಪ್ಪವಡೆದರಾಗ            || ೫೮ ||

ಬಾಲಪ್ರಾಯದಿನಿಂದುವರಂ ತ | ನ್ನಾಲಯಮಲ್ಲದೆ ಮತ್ತೊಂದಿನಿಸುಂ |
ಕಾಲಿಟ್ವಂಗಣಮಂ ಕಂಡಱಿಯದ ಮಾನಿ ಮಱೆದು ಮೆಯ್ಯ ||
ಮೇಲಣ ಕೊಱತೆಯನಱಿಯದೆ ನೆಱೆಜನ | ಜಾಲದ ನಡುವೆ ನೃಪನನೀಕ್ಷಿಸುವುದು |
ಬಾಲಕಿಯಂದಮಿದಲ್ತೆನುತುಂ ಮುದುಪಾಱಿ ಪಲುಂಬಿದಳು        || ೫೯ ||

ಬಾರದುದಂ ಕಡುಬಯಸಿ ಬ್ರತಂಗೆ | ಟ್ಟೀರಚ್ಚೆಯೊಳಿರ್ದೊಡೆ ನಿನ್ನಾತಂ |
ಕೂರಿದನದಱೆಂದಾರಱೆಯದವೋಲ್ ನಡೆಯೆಂಬಳ ಮಾತಾ ||
ಆರಯ್ಯದೆ ನೋಟದ ಸೊರ್ಕಿಂದ ಕು | ಮಾರನ ಬೆನ್ನಂ ಬಿಡದೆಯ್ತಂದಳ್ |
ಕೋರಿಯದೊರ್ವಳೊಲುಮೆವಡೆದೊಡಲಂ ತಾಗಿದ ತೆಱನಾಗಿ        || ೬೦ ||

ಅತನುಸದೃಶನಾದೊಡಮಿವನಲ್ಲದೆ | ಪತಿಗಳ್ ಪಿತೃಸಮವೆಂದೆಣಿಸುವ ನೃಪ |
ಸುತೆಯರ್ ಸಹಚರಿಯರ ಮುಖದಿಂದೊಲಿಸುವೆವೆಂಬ ಸತಿಯರು ||
ಮತಿಯಂ ಮಱೆದು ಮರುಳ್ಗೊಂಬಾಹದಿ | ಬತೆಯರ್‌ಬೆನ್ನಂಬಿಡದ ನವಪ್ರಾ |
ಯಿತೆಯರೆಸೆದರವನೀಶಂ ಬೀದಿವಿಡಿದು ನಡೆತರ್ಪಾಗ      || ೬೧ ||

ಇಂಗಡಲೊಳ್ದೆರೆಯಂ ಬಗಿದೆಯ್ದುವ | ಜಂಗಮಕಲ್ಪಮಹೀರುಹವೋ ಬೆ |
ಳ್ದಿಂಗಳ ಬೆಳ್ಳದೊಳಗೆ ಬಿನದದಿ ತೇಂಕುವ ಕುಸುಮಾಯುಧನೋ ||
ಶೃಂಗಾರಸ್ರೋತಸ್ವಿನಿಯೊಳಗೆ ಬೆ | ಡಂಗಿಂ ಬರ್ಪಂಚೆಯ ಮಱಿಯೋ ಎನ |
ಲಂಗನೆಯರ ಕಣ್ಬೆಳಗಿನ ಕಾೞ್ಪೂರದೊಳಾವಿಭು ನಡೆದಂ || ೬೨ ||

ಅರಮನೆಮುಟ್ಟೀತೆಱದಿಂ ಬಂದಾ | ದರದಿಂ ತನ್ನೋಡನೆಯ್ದಿದ ನೃಪರೊಳ |
ಗರೆಬರನೀಕ್ಷಣದಿಂ ಕೆಲರಂ ಸಿರಿದಲೆಯೊಲೆಪದಿ ಕಿಱಿದುಂ ||
ಬೆರಲ ಕೊನೆಯ ಸನ್ನೆಯೊಳರ್ದವರಂ | ಸರಿಯಂ ನಪಸರಸಾಳಾಪದಿ ಕರ |
ಸರಸಿಜವಂ ಮುಗಿದವರಂ ಬೀಱ್ಕೊಟ್ಟನವನಿಧವಪಾಲಂ            || ೬೩ ||

ಸಲೆ ಕಮಲಾನಂದಕರಂ ಭೂಭೃ | ತ್ಕುಲಮಸ್ತಕವಿನ್ಯಸ್ತಸುಪಾದಂ |
ದಳಿತಮಹಾದೋಷಂ ಸದ್ವೃತ್ತಂ ರುಚಿರಜಗಚ್ಚಕ್ಷು ||
ಲಲಿತೋದ್ಯತ್ತೇಜಂ ಕುಮುದದ್ವಿ | ಟ್ಸುಲಭಸುಹೃನ್ಮಿತ್ರಂ ಕಣ್ಗೊಪ್ಪಂ |
ದಳೆದನುದಯಸೂರ್ಯನ ತೆಱದಿಂದಾಪ್ರಭುಕುಲಮಣಿದೀಪಂ       || ೬೪ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಳಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದುದು ಪತ್ತನೆಯ ಮಿಸುಪ ಸಂಧಿ   || ೬೫ ||

ಹತ್ತನೆಯ ಸಂಧಿ ಸಂಪೂರ್ಣಂ