ಸೂಚನೆ || ಶ್ರೀಮತ್ಸೋಮಾನ್ವಯನವತಿಲಕಂ |
ಸೋಮಪ್ರಭಸುತ ವಿಕ್ರಮಕೌರವ |
ನಾಮನವನಿಯಂ ಪರಿಪಾಲಿಸಿ ಪಡೆದಂ ನಿರ್ವಾಣವನು ||

ಶ್ರೀಮದಖಿಲಸುಮನೋಗಣಭಾಸಿ ಸ | ದಾಮೃತವಿಲಸತ್ಫಲವಿತರಣಗುಣ |
ಧಾಮಂ ನಮದಾನಂದಾಕರನಮಲಚ್ಛಾಯಾಯೋಗಂ ||
ಕಾಮಪ್ರಸರಾಪಹರಂ ವರರ | ಮ್ಯಾಮರಭೂರುಹಮೆನೆ ಚೆಲ್ವಂ ತಳೆ |
ದಾಮಹಿತಾಧೀಶ್ವರನೆಮಗೀಗಭಿಮತಸಂಸಿದ್ಧಿಯನು || ೧ ||

ಸಿದ್ಧರ ಶಿವಪದಸೌಖ್ಯಸಮೃದ್ಧರ | ಬದ್ಧಾನಂತಚತುಷ್ಟಯನಿಲಯರ |
ಶುದ್ಧಚರಮದೇಹಪ್ರಮಿತೋತ್ತಮರೂಪರ ವಿಶ್ರುತರಾ ||
ಉದ್ಧತಕರ್ಮಕಲಾಪವಿನಾಶರ | ಬುದ್ಧರ ಭುವನಾಧಿಕರಷ್ಟಗುಣಪಿ |
ನದ್ಧರ ಪಜ್ಜಳಿಸುವ ಪದಯುಗಕಾಂ ಪಲಸೂೞೆಱಗುವೆನು || ೨ ||

ಪಂಚಮಹಾವ್ರತನಿಲಯರ ದುರ್ಧರ | ಪಂಚಶಿಳೀಮುಖಗಜಮದವಿದಳನ |
ಪಂಚಮುಖರ ದಾರುಣತರ ಕರ್ಮಾರಣ್ಯದವಾನಲರಾ ||
ಪಂಚಾಚಾರವಿಚಾರರ ನಿರ್ಮಲ | ಪಂಚಪದಾಸಾಚಾರ್ಯಪದಕ್ಕಾಂ |
ಪಂಚವಿಧವಿರಾಜಿತಮುಷ್ಟಿಯೊಳಭಿವಂದನೆಯಂ ಮಾೞ್ಪೆಂ || ೩ ||

ಮುಕ್ತಿಪದದ ಹೊಲಬಂ ಮುಗುಳ್ಗಣೆಯನ | ಶಕ್ತಿಗಿಡಿಪ ಪರಿವಿಡಿಯಂ ವಿಮಲವಿ |
ರಕ್ತರಸಾಸ್ವಾದನಮಂ ಹೇಯೋಪಾದೇಯದ ತೆಱನಂ ||
ಯುಕ್ತಿಗೆ ಯುಕ್ತಮೆನಿಸುವಾಗಮಮಂ | ವ್ಯಕ್ತೀಕರಿಸುವುಪಾಧ್ಯಾಯರನಾಂ |
ಭಕ್ತಿಯಿನಭಿವಂದಿಸುವೆಂ ಸುಮತಿವಿಶಾಲತೆಯಂ ಬಯಸಿ || ೪ ||

ಮಱೆದುಂ ಲೌಕಿಕವಚನಮುಮಂ ನುಡಿ | ದಱಿಯದ ಮುಂ ಕೊಂಡ ಮಹಾವ್ರತಮಂ |
ಪಱಿಪಡಿಸದ ತೀವ್ರಪರಿಗ್ರಹಕೊಂದಿನಿಸುಂ ಚಿತ್ತವನು ||
ಎಱಗಿಸದೆನ್ನವರನ್ನಿಗರೆನುತುಂ | ಮಱುಕಂ ಮಚ್ಚರಗೊಳ್ಳದ ಸತ್ಯ |
ಕೈಱವೆಟ್ಟೆನಿಸುವ ಸಾಧುಸಮಿತಿಗತಿಸಮತೆಯೊಳೆಱಗುವೆನು || ೫ ||

ಗುಪ್ತಿತ್ರಿತಯಾಂಚಿತರುರುಗುಣಗಣ | ಲಿಪ್ತರಮಲಜಿನಧರ್ಮವಿಚಾರಕ |
ರಾಪ್ತಾಗಮನಯವಿದರುತ್ತಮಶಿವಪದಸುಖತತ್ಪರರು ||
ಸಪ್ತಮಹಾತತ್ತ್ವಜ್ಞರಧಿಕರು | ದ್ದೃಪ್ತಮದನಮದಹರರನುಕಂಪಾ |
ವ್ಯಾಪ್ತಹೃದಯರೆನಿಸುವ ಯೋಗಿನಿಕಾಯಕ್ಕಿರದೆಱಗುವೆನು || ೬ ||

ಪರಮಬ್ರಹ್ಮಹೃದಯಸರಸಿರುಹೋ | ವರದೊಳಗೊಗೆದಾತನ ಸಿರಿಮೊಗದೊಳು |
ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ ||
ಭರದಿಂ ಭವ್ಯಭುಜಂಗರನವಳೊಳ್ | ನೆರಪುವ ಕೋವಿದೆ ನರಸುರವಂದಿತೆ |
ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು || ೭ ||

ಶ್ರೀಮದ್ಗುಣಸಂಯುತಗುಣಭದ್ರ | ಸ್ವಾಮಿಯ ಕೋವಿದಕವಿಪರಮೇಷ್ಠಿ |
ಸ್ವಾಮಿಯ ಬಾಹುಬಲಿಸ್ವಾಮಿಯ ಸನ್ನುತರೆನಿಪಕಳಂಕ ||
ಸ್ವಾಮಿಯ ಮೈಮೆವಡೆದೆ ಜಿನಸೇನ | ಸ್ವಾಮಿಯ ನಿರ್ಮಲತರಪೂಜ್ಯಪದ |
ಸ್ವಾಮಿಯ ಪದಮಂ ನೆನೆದು ಬೞಿಕ್ಕೀಕಾವ್ಯಮನುಸಿರುವೆನು || ೮ ||

ವಿಲಸದಮಲವಾಗ್ರುಚಿಯಿಂ ಭವ್ಯಾ | ವಳಿಯ ಮನದ ಕಱ್ತಲೆಯೂ ಕದಲಿಸಿ |
ಬೞಿಯೊಳ್ಕುವಲಯಕತ್ಯಾನಂದಮನೊದವಿಸಿ ಲೀಲೆಯೊಳು ||
ತೊಳಪ ದಯಾಂಭೋನಿಧಿಯಂ ಪೆರ್ಚಿಸಿ | ಯಳವಿಗಳಿದ ಸತ್ಪಥದೊಳ್ಚರಿಯಿಸ |
ವಲಘುಗುಣಪ್ರಾಭೇಂದುಪದಂ ನಮ್ಮಂ ಪರಿರಕ್ಷಿಸುಗೆ || ೯ ||

ವಿವರಿಸಲಾಮುನಿಪುಂಗವನ ತನೂ | ಭವನಾಶ್ರುತಮುನಿಯ ವರಪರಂಪರೆ |
ಯವರೊಳು ಮತ್ತಿನ ನಾಲ್ಕುಂ ಸಂಘದೊಳೋವದೆಯಾಚರಿಪ ||
ಭುವನಾಗ್ರದ ಸುಖಸಂಪದಕಿಚ್ಛೈ | ಸುವ ಚಿತ್ತಂಬಡೆದು ವಿರಾಜಿಪ ಮುನಿ |
ನಿವಹದ ಪದಪಂಕಜಕೆಱಗುವೆನಾಂ ಪಱಮೆವಸುಳೆಯಂತೆ || ೧೦ ||

ಜನ್ನನ ಜಾಣ್ ಮಧುರನ ಮಾಧುರ್ಯಂ | ರನ್ನನ ರಸಿಕತ್ವಂ ಗುಣವರ್ಮನ |
ಬಿನ್ನಣಮಾಶ್ರೀವಿಜಯನ ಬಗೆ ಸುಜನೋತ್ತಂಸನ ರೀತಿ ||
ಹೊನ್ನನ ಹೊಸದೇಸೆಯ ನುಡಿ ನೇಮಿಯ | ಕನ್ನಡದೊಳ್ಪಭಿನವಪಂಪನ ಬಗೆ |
ಯೆನ್ನೀಪೇೞ್ದ ಕೃತಿಗೆ ಪರಿದುಂ ಸೇಱುಗೆ ನಿರ್ವಿಘ್ನತೆಯಿಂ || ೧೧ ||

ದ್ವಾರಾವತಿಯ ಪುರಾಧೀಶ್ವರಲ | ಕ್ಷೀರಮಣಾನ್ವಯ ಚೆಂಗಾಳ್ವ ಮಹೀ |
ನಾರೀಧವನಿಜಸಚಿವರುಚಿರಕುಲದುಗ್ಧಾಂಭೋನಿಧಿಗೆ ||
ತಾರಾತರುಣೀವಲ್ಲಭ ಜಿನಪದ | ವಾರಿಜಮಧುಕರ ಯಾಚಕಜನಚೆಂ |
ತಾರತ್ನಂ ಚಿತ್ರಕಲಾಸದನಂ ಸುದತೀಜನಮದನಂ || ೧೨ ||

ವಿಲುಳಿತವಿಶ್ವಂಭರೆಯೆಂಬಬಲೆಯ | ಲಲಿತಶ್ರೀಮುಖಮೆಂಬಂದದಿ ಕ |
ಣ್ಗೊಳಿಸುವ ಹೊಯ್ಸಳದೇಶದ ಮಧ್ಯದ ಹೊಸವೃತ್ತಿ ನಾಡಾ ||
ಅಲಘುಪ್ರಿಯದಿಂ ಪರಿಪಾಲಿಪನು | ಜ್ಜ್ವಲತೇಜಂ ದಾತುಪುರಾಧೀಶಂ |
ಲಲನಾಮಾಧವಸುತಸದೃಶಂ ಮಾಧವಸುತವಿಜಯೇಂದ್ರಂ || ೧೩ ||

ಪ್ರಭುಕುಲದೀಪಂ ಪ್ರಮದಾಜನಚೆ | ತ್ತಭವಂ ಪ್ರಜ್ಜ್ವಲತೇಜೋಪೇತಂ |
ಶುಭರಕೀರ್ತಿಯುತಂ ಸುರಭೂಜೋಪಮವಿತರಣಶೀಲಂ ||
ತ್ರಿಭುವನಪತಿ ಜಿನಭಕ್ತಂ ವಾಸವ | ವಿಭವಂ ವಿನಯಾಂಬುಧಿಚಂದ್ರಂ ರಣ |
ಕಭಿನವವಿಜಯಂ ವಿಜಯಾಂಗನೆಗಧಿರಾಜಂ ವಿಜಯೇಂದ್ರಂ || ೧೪ ||

ಆತನ ಸುತ ಮಂಗರಸನೆನಾಂ ಸ | ತ್ಪ್ರೀತಿಯಿನೀಜಯನೃಪಚಾರಿತ್ರಮ |
ನೋತುಸಿರ್ದೆಂ ಪರಿವರ್ಧಿನಿಯಿಂ ನೂತನರಸವರ್ಧಿನಿಯಿಂ ||
ಖ್ಯಾತಿವಡೆದ ಕೋವಿದನಿಕುರುಂಬಮ | ದೇತೆಱನೆಂದು ತಿರಸ್ಕರಿಸದೆ ಮನ |
ವೋತು ಕರಂ ಮತ್ತಿದಱೊಳ್ತಪ್ಪುಂಟಾದೊಡೆ ತಿರ್ದುವುದು || ೧೫ ||

ಬಿಸವೊಳ್ಳುಣಿಸಿನೊಳಡಗಿರಲದನೀ | ಕ್ಷಿಸುತಲರಿಂ ಪೊಣರ್ವಕ್ಕಿಯವೊಲು ಮನ |
ಮೊಸೆದುಣ್ಡುಂ ಬಲ್ಲವೆ ಮತ್ತಿನ ಖಗತತಿಯದಱಂತೆವೊಲು ||
ರಸಮುತ್ಪ್ರೇಕ್ಷೆಯುಪಮೆ ಕೂಡಿದ ಕೃತಿ | ವೆಸದೊಳಮೆಯ್ಯೊಳು ತೀವಿದ ತಪ್ಪಂ |
ರಸಿಕ ಬಲ್ಲಂದದಿ ಬಲ್ಲರೆ ಕಾಲುರಿಚರ್ಧರಣಿಯೊಳು || ೧೬ ||

ಬಲ್ಲವರಾದೊಡಮೇನೊ ಕೆಲರ್ತಾ | ಮಲ್ಲದೆ ತಮ್ಮೂಳ್ದಾಮಾತಲ್ಲದೆ |
ಸಲ್ಲದು ಸರ್ವರ್ಗೆನುತಂ ಮತ್ತಿನ ಮಾನ್ಯರೊರೆದ ಕೃತಿಯಾ ||
ಸಲ್ಲಲಿತಮನೇನೆನ್ನದೆ ತಮ್ಮಯ್ಯ | ಬಲ್ಲತನವನೇ ಮೆಱೆವಣ್ಣಂಗಳ |
ಬಲ್ಲತನಹ ಬಾಯೊಳು ಬಳಹರಿ ಬಲ್ಮುನಿಸುದಳೆದು ಹೊಗಲಿ || ೧೭ ||

ಒಂದೇ ಬಿಜದೊಳೊಂದೇ ರೂಪಿನೊ | ಳೊಂದೇನೆಲದೊಳಗೊಂದಿ ಬೆಳೆದು ಕೆಲ |
ವೊಂದಱೊಳೊಡನೆ ಬೆರೆದು ಬೇವೊಳ್ಪಸಱಂತೆ ಮೃದುತ್ವವನು ||
ಒಂದದ ಖರಮುದ್ಗದವೊಲ್ ಸಜ್ಜನ | ರೊಂದಾಗೊಗೆದು ಬಳೆದು ಖಳಗುಣಮನ |
ದೆಂದುಂ ಬಿಡದಿಹ ಕಲುಹೃದಯರ್ಗಾನವಿರತವಂಜುವೆನು || ೧೮ ||

ಸುರಭಿವಿಲೇಪನಸುರುಚಿರರತ್ನಾ | ಭರಣಮನತಿಗಳೆಯಿಸಿ ತಲೆಯೋಡೆಲು |
ಗುರಳತೊವಲ್ದೂವೆಗಳೀಶನ ಸಾಮೀಪ್ಯಂ ಬಡೆವಂತೆ ||
ಸರಸಕಲಾಕೋವಿದಸಜ್ಜನರಂ | ಪೊರೆಯೊಳ್ನಿಲಲೀಯದೆ ಪಿರಿದುಂ ತಾ |
ಮರಸುಗಳಂ ಬಿಡದಿಹ ದುರ್ಜನಸಂತತಿಗಾನಂಜುವೆನು || ೧೯ ||

ಬಂದಿರೆ ಪರಿಣಾಮವೆ ಮನೆಯೊಳಗೆ | ಕ್ಕಂದಿರನುವೆ ಮಕ್ಕಳು ಪದುಳವೆ ನೀ |
ವೆಂದು ಬಾರದವರು ನಮ್ಮಲ್ಲಿಗೆ ಬಂದಿರಿ ಕರುಣದೊಳು ||
ಎಂದು ವಿನಯವಚನಮನೆ ನುಡಿದು ಬಗೆ | ಗೊಂದಿದ ಕಾರ್ಯಮನಿನಿಸುಂ ಬಿಡದ |
ಣ್ಣಂದಿರನೀಕ್ಷಿಸುವುದು ಮುನ್ನೆಸಗಿದ ಪಾಪದ ಫಲವೈಸೆ || ೨೦ ||

ವರತೀಕ್ಷ್ಣಾಸ್ಯಚ್ಛಿದ್ರಿತರಾದೊಡ | ಮುರುತರಸಜ್ಜನಸಮುದಾಯಂ ಭಾ |
ಸುರಸದ್ಗುಣನಿಕುರುಂಬಮನಿನಿಸು ಮನೋವಾಕ್ಕಾಯದೊಳು ||
ಪರಿಹರಿಸದೆ ನಿರ್ಮಲತೆಯನೋವದೆ | ಪರಕಲಿಸುವರುಜ್ಜ್ವಲನವರತ್ನದ |
ಹರಿವೊಲವರು ಸುಖಮಿರಲೀಧರೆಶಶಿರವಿಯುಳ್ಳನ್ನೆವರಂ || ೨೧ ||

ಪಾಲಂ ಕೊಂಡು ಪಯಮನಿಱಿಕೆಯ್ವ ಮ | ರಾಳಂಬೊಲು ದುರ್ಗಂಧಕ್ಕೆಳಸದೆ |
ಲೋಲುಪತೆಯಿನೊಳ್ಗಂಪಿಂಗೆಱಗುವ ಭೃಂಗಬೊಲು ಕೃತಿಯಾ ||
ಆಲಿಸಿ ಕೇಳ್ದಲ್ಲದುದಂ ಪಿಂಗಿಸಿ | ಲೀಲೆಯಿನೊಳ್ಳಿತ್ತಂ ಪಿಡಿವಾ ಬುಧ |
ಜಾಲಂ ವಸುಧಾಲಂಕಾರಮದಂ ಮುದದಿಂ ಬಲಗೊಂಬೆಂ || ೨೨ ||

ಈ ತೆಱದಿಂ ದುರ್ಜನರಂ ದೂಷಿಸಿ | ನೀತಿನಪುಣರೆನಿಸುವ ಸಜ್ಜನರಂ |
ಪ್ರೀತಿ ಮಿಗಿಲು ತುತಿಯಿಸಿ ಪಾಲೊಳಗಯಿದಾರೆಯ ಸಕ್ಕರೆಯಂ ||
ಓತೊಡವೆರಸುವ ತೆಱದಿಂ ನವರಸ | ರೀತಿವಡೆದ ಸಕ್ಕದದೊಳು ಕನ್ನಡ |
ವಾತಂ ಸಮಱೆ ಬೆರೆಸಿ ಜಯನೃಪಚಾರಿತ್ರಮನೋತುಸಿರ್ದೆಂ || ೨೩ ||

ತಕ್ಕರ ಗೋಷ್ಠಿ ತನೂದರಿಯರ ಪೊಸ | ತಕ್ಕೆ ತೊಡಂಬೆಯಲರ್ಪೊಸಜೇನೆಯ್ |
ಸಕ್ಕರೆ ತೀವಿದ ತನಿವಾಲೂದುವ ತೆಂಕಣ ತೆಳ್ಳೆಲರು ||
ಮಕ್ಕಳ ಮುದ್ದುವೆರೆದ ನುಡಿ ಮದುರಿತು | ಚೊಕ್ಕಳಿಕೆಯ ನವಚಂದ್ರಿಕೆಯೆನೆ ಹೃದ |
ಯಕ್ಕೆ ವಿಲಾಸಮನೀವುದು ಸತ್ಪ್ರಭುರಾಜನ ಸವಿವಾತು || ೨೪ ||

ಮನವೊಲ್ದೋದುವೆನೆಂಬರ ಬಾಯ್ದೆಱೆ | ಗಿನಿಯಳ್ತುಂಬಿದ ನವರಸದಂಬುಲ |
ಮೆನೆ ಲಾಲಿಸಿ ಕೇಳ್ವರ ಕಿವಿಗೋಪವಳಾಡಿದ ಲಲ್ಲೆಯೆನೆ ||
ಅನುರಾಗದಿ ಲಿಖಿಸುವೆನೆಂಬರ ಕ | ಯ್ಗನಿಮಿಷನೇತ್ರೆಯ ಘನಕುಚಯುಗದೊ |
ತ್ತೆನಲಾದುದು ಸತ್ಪ್ರಭುರಾಜನ ಸತ್ಯವಿತೆಯ ಸವಿವಾತು || ೨೫ ||

ವಾಚಕವಾಚ್ಯವ್ಯಂಗ್ಯವ್ಯಂಜನ | ಸೂಚಿತಲಕ್ಷಣಲಕ್ಷ್ಯ ವಿವೇಕರ |
ಸೋಚಿತಭಾವಾಲಂಕೃತಿರೀತಿತ್ರಯಭೇದಕಭೇದ್ಯ ||
ಆಚರಿತೋಭಯಸಂಧಿಸಮಾಸವಿ | ವೇಚನೆಗಳ ಭೇದಮನಿನಿಸಱಿಯದೆ |
ವಾಚಾಲತೆಯಿಂದುಸಿರಿದ ದುಷ್ಕೃತಿಯಲ್ಲಿದು ಭಾವಿಪೊಡೆ || ೨೬ ||

ಇದು ವಿಪುಲಾಚಲದೊಳು ವೀರೇಶನ | ಪದಸನ್ನಧಿಯೊಳು ಗೌತಮಗಣಧರ |
ರೊದವಿದ ಕಾರುಣ್ಯದೊಳಾ ಶ್ರೇಣಿಕನೃಪತಿಗೊರೆದ ಕಥನಂ ||
ತದನಂತರದೊಳ್ಜಿನಸೇನಾರ್ಯಂ | ಮುದದಿಂ ವಿರಚನೆಗೆಯ್ದ ಲಸತ್ಕೃತಿ |
ಯಿದನಾಂ ಪುಣ್ಯನಿಮಿತ್ತಂ ಹಿರಿದುಂ ಹರಿಸದೊಳುಸಿರಿದೆನು || ೨೭ ||

ಈ ಕಥೆಯಂತೆನಲನಿಲಾಧಾರದಿ | ನಾಕಾಶಂ ಪಲವೆಸೆದಿಹವವಱೊಳು |
ಲೋಕಂ ಸರಿಡಮರುಗಮಂ ಡಮರುಗದೊಳ್ಮಗುಚ್ಚಿಟ್ಟಂತೆ ||
ಆಕಾರಂಬಡೆದುದು ಮತ್ತದಱೊಳ್ | ನಾಕಿನರೋರಗಭುವನಂ ನಿರಘಾ |
ಕಾರರ್ ಸಿದ್ಧರಡರೆ ಶೋಭಿಪ ಪೀಠತ್ರಯದಂತಿಹುದು || ೨೮ ||

ಮುತ್ತಾನಡುವಣ ಲೋಕದೊಳೋವದೆ | ಸುತ್ತಿದ ಜಲಧಿದ್ವೀಪಂಗಳ ಸಂ |
ಪತ್ತಿಂ ನೆಲೆಗೊಂಡಿರ್ಪುವವಱ ಮಧ್ಯದೊಳತಿಶೋಭಿಸುವ ||
ಮೊತ್ತಮೊದಲ ಲವಣಾಂಬುಧಿ ಚೆಲ್ಪಂ | ಪೆತ್ತುದು ಭೂಮಂಡಲಮೆಂಬಿಂದುವ |
ನೊತ್ತಿ ಬಳಸಿ ಪರಿರಂಜಿಪ ಪರಿವೇಷಂ ತಾನೆಂಬಂತೆ || ೨೯ ||

ಹರಿಸದಿನೆಡೆದೆಱಲ್ಲದೆ ತನ್ನೊಳ್ | ನೆರೆವ ಹಲವು ಹೊಱೆವೆಣ್ಗಳನತ್ಯಾ |
ತುರದಿಂದಮರ್ದಪ್ಪುವ ಬಹುಬಾಹುಗಳೆನಲತಿರಂಜಿಸುವ ||
ತೆರೆಯಿಂ ತತ್ಸುಖಜನಿತಸ್ವೇದೋ | ತ್ಕರಬಿಂದುಗಳುಣ್ಮಿದುವೆಂಬಂತಿರೆ |
ಪಿರಿದುಂ ಸೊಗಯಿಪ ಬುದ್ಬುದದಿಂದಂಬುಧಿ ವಿಭ್ರಾಜಿಸಿತು || ೩೦ ||

ಆ ಮಿಸುಪುಪ್ಪುಗಡಲ ಮಧ್ಯದೊಳು | ದ್ದಾಮತೆಯಂ ಪಡೆದೊಪ್ಪುವ ಜಂಬೂ |
ನಾಮದ ದೀವಿ ಕರಂ ನಯನಾನನ್ದಮನಿರದೊದವಿಸಿತು ||
ಶ್ರೀಮತ್ಸ್ರೋತಸ್ವಿನಿಯ ನಡುವೆಯಭಿ | ರಾಮತೆಯಂ ಪಿರಿದುಂ ಪಡೆದಾದ್ರೋ |
ಣಾಮುಖಮೆಂಬ ಪೊೞಲದೊಂದಾಕಾರಮನಂಗೀಕರಿಸಿ || ೩೧ ||

ಆ ಮಧ್ಯದ್ವೀಪದ ನಡುವಳಿಯ ಮ | ಹಾಮೇರುಮಹೀಧರಮೆಸದತ್ತು ಮ |
ಹೀಮಾನಿನಿ ನರಲೋಕವೆಸರ ಪುರುಷನ ಮಿಸುಪಾದಲೆಗೆ ||
ಪ್ರೇಮದಿ ಪಿಡಿದೆತ್ತಲು ರಂಜಿಸುವಾ | ವ್ಯೋಮಚ್ಛತ್ರದ ಪೊಸಪೊಂಗಾವೆನೆ |
ಭೂಮಿಯನಾ ಬಿದಿ ನಿರ್ಮಿಸುವಂದಿಕ್ಕಿದ ಕರುಕಂಭಮೆನೆ  || ೩೨ ||

ಅಱಗುಲಿಯಂ ಮುನ್ನೆಮ್ಮ ಗಱೆಗಳಂ | ತಱಿದಿಂದ್ರನನಾಸಗ್ಗಮನೆನ್ನೀ |
ಸಱಿದಲೆಯಿಂ ಪೊತ್ತಂಬುಜಜನ್ಮಾಂಡದ ಪೊಱಗಡೆಗಾಗಿ ||
ನುಱಿಯಪ್ಪಂದದಿ ಹಾಕದೊಡೆನಗೇ | ತಱದೊಡ್ಡಿತ್ತೆನುತುಂ ಬೆಳೆವಂದದಿ |
ನುಱೆಮುಟ್ಟಿದುದಾನಿರ್ಜರಲೋಕಮನಾಮಿಸುನಿಯ ಬೆಟ್ಟು || ೩೩ ||

ತ್ರಿಜಗದ್ಭೂಷಣವೆನಲೆಸೆವ ಮಹಾ | ರಜತಾದ್ರಿಯ ವಾಮೇತರದಿಶೆಯೊಳು |
ಭುಜಗಾಧಿಪನ ಪೊಗೞ್ತೆಗೆ ಪಿರಿದೆನಿಪಾಭರತಕ್ಷೇತ್ರ ||
ವಿಜಯಾಚಲದಿರ್ಕೆಲದೊಳು ಮೀನ | ಧ್ವಜನಾಡುಂಬೊಲನೆನಲೆಸೆದುದು ಸರ |
ಸಿಜನಣುಗನ ಕೈಮಾಟಕೆ ಕಡುವಿರಿದುಂ ಬಿನ್ನಣವಡೆದು || ೩೪ ||

ಇಂತು ವಿರಾಜಿಪ ಭರತಾವನಿಯೊಳ | ಗಂತಕದಿಶೆಯಾರ್ಯಾಖಂಡಾವನಿ |
ಸಂತತಸೌಭಾಗ್ಯಂದಳೆದಿರ್ಪುದದಱೊಳುತ್ತಮಮಾಗಿ ||
ತಿಂತಿಣಿಗೊಂಡೆಸೆವೈವತ್ತಾಱುಜ | ನಾಂತಂ ನೆಲಸಿಹುವವಱ ನಡುವೆ ರತಿ |
ಕಾಂತನ ಮನೆಯೆನಿಸುವ ಕುರುಜಾಂಗಣವಿಷಯಂ ಸೊಗಯಿಪುದು || ೩೫ ||

ಸಲೆ ಭಂಗಂ ನದಿಯೊಳು ಕುಟಲತ್ವಂ | ಲಲನೆಯರಳಕಸಮಿತಿಯೊಳಗಾಱಡಿ |
ವಿಲಸತ್ಪುಷ್ಪದೊಳಕುಲೀನಾಚರಣಂ ಕಾ | ದಲರೊಳ್ ದಂಡಂ ವೃದ್ಧಜನದ ಕರ |
ತಳದೊಲಗಲ್ಲದೆ ಮತ್ತಾಜನಪದದೊಳಗೊಂದಿನಿಸಿಲ್ಲಂ || ೩೬ ||

ಬೆಳೆಯೆಂಬ ಸುತೋದಯಕಾರಣದಿಂ | ದಿಳೆಯೆಂಬಬಲೆ ರಜಸ್ವಲೆಯಾದಂ |
ತೆಳಸಿ ಕುಡಿಯರುೞಿವುೞ್ಕೆಗಳಿಂ ಕೆಂಪಾದ ಪೊಲಗಳಿಂದ ||
ಬೞಿಕವಳ ಚತುರ್ಥಸ್ನಾಕ್ಕಿರ | ದಲಸದೆಯಂಬರಸತಿಯೆಱೆವಂದದಿ |
ಮೞೆಕೊಳ್ಗುಂ ಮತ್ತಾನಾಡೈಶ್ವರ್ಯವನೇವಣ್ಣಿಪೆನು || ೩೭ ||

ಮಿಸುಪ ನದೀನಾರಿಯ ನಳಿತೋಳೆನ | ಲೆಸೆವಿರ್ತಡಿಗಾಲುವೆಯಿಂದವೆ ನೆಱೆ |
ಮುಸುಕಿ ಬೆಳೆದ ಚೆಂದೆಂಗೊಳ್ವಾೞೆಯಡಕೆ ಪಸುರೆಲೆವಳ್ಳಿ ||
ಪೊಸಮಾವಿನ ತೋಂಟಂ ಕಿಱುಗಳಮೆಯ | ರಸದಾಳಿಯ ಬೆಳೆವೊಲನೊಪ್ಪಿದುದಾ |
ವಸುಧಾಸತಿ ಕೈಗೈಯೆ ವಿರಾಜಿಪ ಪಸುರ್ವಸದನದಂತೆ || ೩೮ ||

ನನೆಯುದಿರದ ಪೊಸಕಮ್ಮಂಗಳವೆಯ | ತೆನೆಯ ತುದಿಯ ತನಿಗಂಪಂ ಭುಂಜಿಸ |
ಲೆನುತನುರಾಗದಿನವಱೊಳ್ಕುಳ್ಳಿರ್ದಾಱಡಿವಸುಳೆಗಳು ||
ಅನುವಂ ಪಡೆದುವು ತತ್ತೃಣರಾಜಿಯ | ಕೊನೆಗರ್ಚಿದ ಹರಿನೀಲದ ಪರಲೆನೆ |
ನನೆವಿಲ್ಲನ ಪಸುರ್ಗಾವಿನ ಮಿಗೆಸೊಕ್ಕಿನ ಪೊಸಮಿಂಟೆಯೆನೆ || ೩೯ ||

ಅರೆವಣ್ಣಾದ ಕಳವೆದೆನೆಗರ್ಚು | ತ್ತರಗಿಳಿ ಪಾಱಲವಂ ನೋಡುವ ಪಾ |
ಮರಿಯರ ಕುಡುವುರ್ವಿನ ಕೊನೆಮುಟ್ಟಿದ ತುಱುಗೆವೆಗಳ ನಡುವೆ ||
ಕಱಿಯಾಲಿಗಳೆಸೆದುವು ಚಿತ್ತಭವಂ | ವಿರಹಿವಿಹಂಗವನಿಸುವ ಪರಲ್ಲಿ |
ಲ್ಲೆರಡುಹೆದೆಯ ಮಧ್ಯದ ಹರಿನೀಲದ ಗೋಳಕವೆಂಬಂತೆ  || ೪೦ ||

ಬಳೆಗೈಯತ್ತಿ ಬಗಸೆಗಣ್ಗಳ ಕೋ | ಮಲೆಯರ್ಪಾಱಿಸುತೀಕ್ಷಿಪ ಕಡೆಗ |
ಣ್ವೆಳಗೆಸೆದವು ತತ್ಕಳಮೆಗೆಱಗಲೆನುತಾಗಸದೊಳ್ನಿಂದ ||
ಗಿಳಿಯಂ ಸೆಳೆಯಲೆನುತ್ತವರೆತ್ತಿದ | ತೆಳುವಳುಕಿನ ಸೆಳೆಯೋ ಪಸುರ್ವಟ್ಟೆಯ |
ತೊಳಗುವ ಗಾಳಿಪಟಕೆ ಕಟ್ಟಿದ ರಜ್ಜುವಿದೋ ಎಂಬಂತೆ || ೪೧ ||

ಚದುರೆಯ ಚಟುಲಚಕೋರಾಕ್ಷಿಗಳೊಳ | ಗೊದವಿದ ಮೂವಣ್ಣದ ರುಚಿಯವಳೆಱೆ |
ವುದಕದೊಳೊಡವೆರೆಯಲು ಮತ್ತದನೀಂಟುವ ಪಥಿಕರ ಕಣ್ಗೆ ||
ಇದು ಕಸ್ತೂರಿವಿಮಿಶ್ರಿತಜಲಮಿಂ | ತಿಂದು ಘನಸಾರಮಿಮಿಶ್ರಿತಜಲಮಿಂ |
ತಿದು ನವಘುಸೃಣವಿಮಿಶ್ರಿತಜಲಮೆಂಬಂತೆ ವಿರಾಜಿಸಿತು || ೪೨ ||

ಪೊಂಬಳ್ಳಿಯ ಪೊಗರಂ ಗೆಲ್ವಂಗದ | ಕಂಬುಲಲಿತಕಂಧರೆ ಮುನ್ನೆಱೆದ ನ |
ವಾಂಬು ಜಲಕ್ಕನೆ ತೀವಲ್ಕಾಪಾಂಥನ ಸೆರೆಗೈಯೆಂಬ ||
ಅಂಬುರುಹದೊಳಾಪ್ರತಿರೂಪವು ಕರಂ | ಬಿಂಬಿಸೆ ಕಣ್ಗೆಡ್ಡಂಬಡೆದುದು ಪೀ |
ತಾಂಬರದೇವನ ಪಟ್ಟದರಸಿಯಾಕಾರಮನನುಕರಿಸಿ || ೪೩ ||

ಶ್ರೀಮದ್ವಿಶ್ರುತವಿಷಯವಾಭಿಸಿ | ಗ್ರಾಮಮಡಂಬನಗರಖೇಡೆದ್ರೋ |
ಣಾಮುಖಪತ್ತನಸಂವಾಹನಗಳೆ ಗಂಡಶೀಖರಿಯಾಗೆ ||
ಆ ಮಧ್ಯದ ನವಮಣಿಹರ್ಮ್ಯಗೃಹ | ಸ್ತೋಮವಿರಾಜಿತವಾರಣಪುರಮು |
ದ್ದಾಮತೆಯಿಂದೊಪ್ಪುವ ರೋಹಣಗಿರಿಯಂತೆ ವಿರಾಜಿಸಿತು || ೪೪ ||

ಇಳೆಯೆಂಬಿಳೆಯ ಪೀನಸ್ತಳದೊಳು | ತೊಳಗುವ ಪೊಸಪೊಂದಾತಿಯ ತೆಱದಿಂ |
ಪೊೞಲೀಕ್ಷಿಸುವರ ಕಣ್ಬಗೆಗೊಪ್ಪಂಬಡೆದುದು ಮತ್ತದಱ ||
ವಲಯದೊಳೋರಣದಿಂ ಕೀಲಿಸಿ ಪ | ಜ್ಜಳಿಸುವ ಪಸುರ್ವಣಿಯೆಂಬ ತೆಱದಿ ನಳ |
ನಳಿಸುತೆ ತುಱುಗಿ ಬೆಳೆದ ಬಹಿರುದ್ಯಾನಂ ಕಣ್ಗೊಳಿಸಿದುದು || ೪೫ ||

ಪರಿವ ಪಸುಳೆಗಿಳಿಗಳ ನುಣ್ಗೊರಲಿಂ | ಪಱೆಗುಟ್ಟುವ ಪರಪುಟ್ಟದ ಮಾಡುವ |
ಪಱಮೆವಱಿಯ ಫಲವೀನ ಗುಣಾದಿನಮರಮಹೀಜಾತವನು ||
ಪಱೆಯೆಂಬ ಕುಜಾತದ ಶಶಿಕಾನ್ತದ | ಪಱಲೆಯಿನೊಸರ್ವ ಕೊಳದ ಸುಭಗತೆಯಿಂ |
ಪಱಲೆಯನುಱೆ ಪಾಱಿಸುವುದು | ನನ್ದನಕಾನನ್ದನದಿರವು || ೪೬ ||

ಹಿರಿದುಂ ಹರಿಸಮೊದವೆ ವಿಬುಧಸ್ತ್ರೀ | ಪುರುಷರ್ತನ್ನೊಳು ವಿಹರಿಸುಪುದಱಿಂ |
ನಿರತಸುರಭಿಸುಮನೋಮಂದಾರಕ್ಕಾಸ್ಪದಮಪ್ಪುದಱಿಂ ||
ಸುರಲೋಕಂ ತ್ರಿದಶಜನಾನ್ವಿತಮದು | ಪಿರಿದಲ್ಲೆಂದಾಬಹುಜನಯುತಕರಿ |
ಪುರಕಿೞಿತಂದಾನಂದನದಂತೆ ವನಂ ವಿಭ್ರಾಜಿಸಿತು || ೪೭ ||

ಅನವರತಂ ತನ್ನೊಳು ವಿಹರಿಪ ವರ | ವನಿತಾತತಿಕೃತಲೀಲಾಕೃತದಿ |
ಮಿನುಗುವ ಕುಸುಮಾವಳಿ ತೀವಿದ ದಶದೋಹಲತರುವಿಂದ ||
ಘನಹಿಮಶಶಿರವಸನ್ತಗ್ರೀಷ್ಮಾ | ವನಿಹಿತವರ್ಷಾಶರದಾಗಮಗುಣ |
ವಿನಿಸುಂ ಕಾಣಿಸದಾಬಹಿರುದ್ಯಾನಂ ವಿಭ್ರಾಜಿಸಿತು || ೪೮ ||

ವನಲಕ್ಷ್ಮಿಗೆ ಯೌವನಮೆನೆ ಮದುರಿತು | ಮಿನುಗುವ ಮೊಡವಿಗಳೆನೆ ಮೞಲೊಟ್ಟಿಲು |
ಘನಕುಚಮೆನೆ ಕೃತ್ರಿಮಗಿರಿ ರೋಮಾವಳಿಯೆನೆ ಕೃತಕನದಿ ||
ದನಿಯೆನೆ ನವಕೋಕಿಲರವವೊಳ್ದುಱು | ಬೆನೆ ನವಿಲಡಿಯೆನೆ ತಳಿರಳಕಾವಳಿ |
ಯೆನೆ ಪಱಮೆಗಳುಗುರೆನೆ ಕೇದಗೆಯೆಸೞೊಪ್ಪಮನೆಯ್ದಿದುವು || ೪೯ ||

ಪಸುರೆಲೆದುಱುಗಿದ ಬನಗೞ್ತಲೆಯೊಳ | ಗೆಸೆವ ವಸಂತಂ ನೂತನಚಂಪಕ |
ದೆಸೞ್ದೊಂಗಲ್ಜೊಡರ್ವಿಡಿದಾಕೆಂಗಣ್ವಕ್ಕಿಯ ಸರಮೆಂಬ ||
ಪೊಸಗಂಟೆಯನಲುಗಿಸೆ ವಿಟಮೃಗತತಿ | ಮುಸುಕಲು ಕಂಡಿಂಗೋಲ ಶರಾಸನ |
ಕಸಮೇಷುಗಳಂ ಸಾರ್ಚುತಿಸುವಂಗಜನತಿಭರದಿಂದ || ೫೦ ||

ಇದು ವನವನಿತೆ ಬಿಡುವ ಬಡಸುಯ್ಯೆಲ | ರಿದು ಚೈತ್ರಂ ಬೀಸುವ ಬಿಜ್ಜಣಿಗೆಯೊ |
ಳೊದವಿದ ಗಾಳಿಯಿದೀಶ್ವರನಿಂ ಮುನ್ನವೆ ಮಣ್ಮೞಿಗೊಂಡ ||
ಮದನಂಗಾಮಱುವುಟ್ಟಂ ಪಡೆಯಿಸ | ಲೊದವಿದ ಜೀವನವಾಯುವಿದೆನೆ ಕಡು |
ಚದುರರ ಚಿತ್ತಂಗೊಳಿಸಿದುದಾಬನದೊಳು ಸುೞಿವೆಳಗಾಳಿ || ೫೧ ||

ಹೊಸಹೊಂಗೋಂಟೆಯ ಬಟ್ಟದೆನೆಯ ರಂ | ಜಿಸುವ ದಳಾವಳಿ ರಾಜಕುಮಾರ |
ಪ್ರಸರವಿರಾಜಿತಸದನಸಮೂಹಮೆ ನವಕೇಸರವಿತತಿ ||
ವಸುಧಾವರಸೌಧಮೆ ಕರ್ಣಿಕೆಯಂ | ತೆಸೆದಿರೆ ಹಸ್ತಿನಪುರಿ ಲಕ್ಷ್ಮೀಯುತ |
ಲಸಮಾನಸುವರ್ಣಾಂಭೋರುಹದಂದಮನನುಕರಿಸಿದುದು || ೫೨ ||

ತಳದಿಂ ತೆನೆವರೆಗಂ ತೆತ್ತಿಸಿ ಪ | ಜ್ಜಳಿಸುವ ಪೊಸಮಾಣಿಕಮಣಿಗಳ ತನಿ |
ವೆಳಗಾಗಸಮಂ ಚುಂಬಿಸಿ ವಿತತಭುಜಗಭುವನಂಬರೆಗಂ ||
ಇೞಿದಗೞಮಲೋದಕದೊಳಿರದೆ ಮಾ | ರ್ಪೊಳೆಯಲ್ಮೂಲೋಕದೊಳಿನಿಸುೞಿಯದೆ
ಬಳೆದುರಿಲಿಂಗಂಬೊಲು ಕೋಂಟೆ ಕರಂ ಕಣ್ಗೆ ವಿರಾಜಿಸಿತು || ೫೩ ||

ವರವಜ್ರದ ಮುಂಡಿಗೆದಾಡೆಗಳಾ | ಕುರುವಿಂದದ ಕಿೞ್ಮೇಲ್ಗಟ್ಟುಗಳೆ |
ಅರುಣಜಲಂಬೊರೆದಧರಮದಱೊಳೆಡೆಯಾಡುವ ಜನತತಿಯಾ ||
ಸ್ವರಸಂತತಿ ಗರ್ಜಿತಮಾಗಲ್ಕಾ | ಪುರದ ಮಿಸುಪ ಹುಲಿಮೊಗಮೊಪ್ಪಿದುದರಿ |
ಧರಣೀಪಾಲಪಶುಗಳಂ ನುಂಗುವ ಪುಲಿಮೊಗವೆಂಬಂತೆ || ೫೪ ||

ರತಿ ಪಾರ್ವತಿ ರಮೆ ರಾಜೀವೋದ್ಭವ | ಸತಿಯರ್ ಕುಳ್ಳಿರ್ಪುರುಪೀಠಗಳೆನ |
ಲತಿರಂಜಿಸೆ ನಾಲ್ವಾಗಿಲ ಗೋಹುರಮವರಾಡುತ್ತಿರ್ಪ ||
ನುತಸಾರಿಗಳೆನೆ ಸಂಚರಿಸುವ ಜನ | ತತಿ ತತ್ಪುರದಿನಶಶಿವೀಧಿಗಳು |
ನ್ನತಿಕೆಯೊಳೊಪ್ಪುವಡೆದ ಪಗಡೆಯ ನಾಲ್ಗರದಂತೊಪ್ಪಿದುವು || ೫೫ ||

ಶ್ರುತಿಸೀಮಂತಿನಿ ಮನಮೊಸೆದಾಡುವ | ಕೃತಕ್ರಾದಿಗಳೋ ಸದ್ಭವ್ಯಲಸ |
ನ್ಮತಿಮುಕ್ತಿಗೆ ಬಿಡದೆಡೆಯಾಡುವ ನವಮಣಿನಿಶ್ರೇಣಿಗಳೋ ||
ವಿತತದಯಾಬ್ಧಿಯ ನವಫೇನಗಳೋ | ಅತಿಪುಣ್ಯದ ಬಲ್ಬಣಬೆಗಳೋ ಎನೆ |
ಸತತಂ ಶೋಭಿಸುವುವು ಜಿತಮದನಜಿನಾಲಯಮಂತಲ್ಲಿ || ೫೬ ||

ಪುರದ ಪೃಥಿವಿಪಾಲನಪೂರ್ವಾನ್ವಯ | ದರಸುಗಳಂದಿನ ಚಕ್ರೇಶ್ವರರಂ |
ಪಿರದಪ್ಪವಗಡದಿಂದ ಪೆಳರ್ಚಿಸಿ ಬಲ್ಗಪ್ಪಂಗೊಂಡು ||
ಇರಿಸಿದ ನವನಿಧಿಯೋ ಎನಲೀಪ್ಸಿತ | ವರವಸ್ತುವನೀವಾಪಣನಿಕರಂ |
ಕರಮೆ ವಿರಾಜಿಸುತಿರ್ಪುವು ತತ್ಪುರವಿಧಿಯೊಳೆಡೆಗಿಱಿದು || ೫೭ ||

ಇನಿಸು ತೊಲಗಿ ಕೂಡಿದೊಡದು ಕಡುಸವಿ | ಯೆನುತಂ ನಿಮ್ಮೊಳು ನಾವು ಮುನಿವೆವೆಂ |
ಬಿನಿಱೊಳಱುಗಲಿ ಕಾವಗೆ ಕೈದುಗಳಾದುವಿವೆನುತೊಸೆದು ||
ನನೆಯಂ ದಾವಣಿಗಟ್ಟಂ ಕಟ್ಟು | ತ್ತಿನಿಯರ್ಗೊಪ್ಪಿಸಿ ಕೊಡುವವೊಲಿತ್ತ |
ರ್ವನಿತೆಯರಾಪೂವಿನ ಪೇಟೆಯೊಳೊಳ್ಬಾಸಿಗಂ ವಿಟರ್ಗೆ || ೫೮ ||

ಬಾೞೆಯ ಸುರುಳ್ದೆಳೆಯೆಲೆಯಿಂ ತೆಗೆದು ವಿ | ಶಾಲನಯನೆಯೊರ್ವಳು ಕಲ್ಹಾರದ |
ಮಾಲೆಯನೊರ್ವ ವಿಟಂಗೀಯಲ್ಕೆಸೆದತ್ತಿದಱಿಂ ಜಯಿಸು ||
ಮೂಲೋಕಮನೆಲ್ಲಮನೆನುತುಂ ಮಾ | ಸಾಳಾದಂಗಜವೀರಗೆ ಪೂವಿನ |
ಬಾಳಂ ಜಳಪಿಸಿ ರತಿಯನುರಾಗದಿ ಗೆಲಿಸಿ ಕೊಡುವ ತೆಱದಿ || ೫೯ ||

ಉಸಿರ್ವೊಯ್ವಾಗಳ್ಕಾಸೌರಭ್ಯವ | ನುಸಿರ್ದೆಗೆವಾಗಳ್ಕಾಬಾವನ್ನದ |
ಪೊಸಕಂಪಂ ಕೊಳಲೆರಡೆಡೆಗೆಡೆಯಾಡುವ ಮಱಿದುಂಬಿಗಳು ||
ಎಸೆದುವು ಘಟ್ಟಿಮಗುೞ್ಚುವಬಲೆಯರ | ಮಿಸುಪ ಮುಖಾಂಬುಜದೊಳ್ನೆಲಸಿದ ಸಿರಿ |
ಯೊಸೆದು ಕರಂ ಪೊಡೆದಾಡುವ ಹರಿನೀಲದ ಕಂತುಕದಂತೆ || ೬೦ ||

ಕೇದಗೆಯೆಸೞೊಳ್ತೊಳೆಯಲೆನುತ್ತೆ ಜ | ವಾದಿಯನಣ್ಪಿಸುತೆಳದುಪ್ಪುೞಮಂ |
ಸೋದಿಸಲೆನುತೊರ್ವಳ್ಕಿಱುವೆರಲುಗುರ್ಗೊನೆಯಿಂ ಕರ್ದುಕುತಿರೆ ||
ಆದಂ ಕಣ್ಗೊಪ್ಪಿದಳತಿಕೋವಿದ | ರಾದರ ಚಿತ್ತಾಕರ್ಷಣಯಂತ್ರಮ |
ದಾದರದಿಂ ಪೊಂದಗಡೊಳಗುಂಗುರಗಂಟದಿ ಬರೆವಂತೆ || ೬೧ ||

ಸಿಂಗರಜೋಯಿಯ ಕುಲದೇವತೆಯ ಗೃ | ಹಾಂಗಣಸಮ್ಮೋಹನರಸಪೂರಿತ |
ದಿಂಗಡಲೊಳಗಣ ಬುದ್ಬುದವೋ ಸಿಂಗರದೆಱವೆಟ್ಟುಗಳೋ ||
ಅಂಗಜಗಿರಿದುರ್ಗಗಳೋ ಎನೆ ಚಿ | ತ್ತಂಗೊಳಿಸುವ ನವವಿಧಮಣಿಗರುಮಾ |
ಡಂಗಳ್ತೀವಿದ ವೇಶ್ಯಾವಾಟಂ ಕಣ್ಗೊಪ್ಪಿದುವಲ್ಲಿ || ೬೨ ||

ಪಾರ್ವತಿಯೆಱೆಯನ ವರದಿಂ ಮತ್ಪತಿ | ಕರ್ವಿಲ್ಲಂ ಸಮ್ಮೋಹನರೂಪದಿ |
ನುರ್ವಿಯ ವಿಟರೆಲ್ಲೆರ್ದೆಯೊಳ್ನೆಲಸಿದನೇತೆಱದಿಂದವನಾ ||
ಒರ್ವಳ್ನೆರೆಯಲ್ಬಾರದೆನುತ ರತಿ | ತಳ್ವದೆ ಬಹುರೂಪಂ ತಾಳಿದಳೆನೆ |
ಸರ್ವರನನುಕರಿಸುವ ವಾರಸ್ತ್ರೀನಿವಹವೆಸೆದುದಲ್ಲಿ || ೬೩ ||

ಹರನ ಜೆಡೆಯ ಬಡಹೆಱೆಯಂ ವಾಣೀ | ವರನ ಬೆರಲ ಕಂಠವನಂಬುರುಹೋ |
ದರನ ಕರದ ಕಂಬುವನಮರೇಂದ್ರನ ಹಸ್ತದ ಕುಲಿಶವನು ||
ತರಿಸಿ ನಿಟಿಲಮೃದುಹಸ್ತಾಂಗುಲಿಕಂ | ಧರರದನಂಗಳ್ಗೆಣೆಯಂ ನೋಡುತ |
ಸರಿಯಲ್ಲೆಂದು ಬಿಸುೞ್ಪುದು ಗಡ ವೇಶ್ಯಾವನಿತೆಯರಲ್ಲಿ || ೬೪ ||

ವಿಲಸದ್ವಿಶ್ರುತಪುರವರಮೆಂಬೊ | ಳ್ವೆಳೆವೊಲದೊಳ್ಸೌಭಾಗ್ಯತೆಯಿಂ ಕ |
ಣ್ಗೊಳಿಸುವ ಪುರಜನಮೆಂಬ ಬೆಳಸಮನುಱೆಬೆಳವಿಗೆಯಂ ಮಾೞ್ಪ ||
ಇಳೆಯಾಣ್ಮನ ಕರುಣರಸಂ ತೀವಿದ | ಲಲಿತತಟಾಕಮದಾಗಲ್ಕರಮನೆ |
ತೊಳಗುವ ಬಾಗಿಲ್ವಾಡಮದಱ ತೂಬೆಂಬವೊಲೊಪ್ಪಿದುದು || ೬೫ ||

ನಿರುತಂ ಶ್ರೀಯುತಪುರಮೆಂಬಿಂದ್ರಾ | ವರಜನ ಮಧ್ಯದ ಪೊರ್ಕುೞ ಹೊಂದಾ |
ವರೆಯೆನೆ ರಂಜಿಪ ರಾಜಾಲಯಮೆಸೆಯುತ್ತಿರಲಂತಲ್ಲಿ ||
ಸುರುಚಿರವರವಾಣಿಸಂಯುತ ಬಂ | ಧುರನತಿಚತುರಕಲಾಪಂ ಪಲನೆಲ |
ದರಸಂ ಕಣ್ಗೊಪ್ಪಂಬಡೆದಂ ನಾಲ್ಮೊಗದವನಂದದೊಳು || ೬೬ ||

ಹಿಂದಿರ್ವರು ನಾವೆಕ್ಕೆಯೊಳಗೆ ಹೋ | ರ್ವಂದದೆ ಸೋಮಪ್ರಭನೃಪನಭಿನವ |
ಕಂದರ್ಪಂ ಜನಿಸಿದನಾದೊಡೆ ತತ್ಕೀರ್ತಿಲತೆಯನಾಂತು ||
ಇಂದುಕಲಾಚೂಡನ ಪೆಱೆದಲೆಯಂ | ಕೆಂದಳಿರ್ವಜ್ಜೆಯನೆಯ್ದದೆ ಬಿಡವೆಂ |
ದಿಂದೀವರನಾಭನುಮಬ್ಜಾಸನನುಂ ಚಿಂತಿಸುತಿಹರು || ೬೭ ||

ಸರಿಸಿಜಶಂಖವಿರಾಜಿತಹಸ್ತಂ | ನಿರುತಮನಂತಲಸದ್ಭೋಗಯುತಂ |
ವರರುಚಿರಶ್ರೀಸಮುಚಿತಗಾತ್ರಂ ಬಹುಲೋಕಾಧಾರಂ ||
ತರುಣೀಜನಕಾಮೋದಯಕಾರಣ | ನುರುವಿಕ್ರಮನಾಪುರುಷೋತ್ತಮನೆನೆ |
ಕರಮೆಸೆದಂ ವಿಷ್ಣುವಿನಂದದೊಳಾಪ್ರಭುಕುಲಮಣಿದೀಪಂ || ೬೮ ||

ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತಜಿನಪತಿ |
ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣಂ ||
ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ |
ಳೊದವಿ ಮನೋಹರಮಂ ಪಡೆದತ್ತೊಂದನೆಯ ಮಿಸುಪ ಸಂಧಿ || ೬೯ ||

ಒಂದನೆಯ ಸಂಧಿ ಸಂಪೂರ್ಣಂ