ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಮತ್ತಾ ಸೂರ್ಯನೃಪತಿಗಾರಾಧೆಗೆ | ಉತ್ತಮರೂಪಸಂಯುತನು |
ಉತ್ತುಂಗತೇಜದಿ ಕರ್ಣನೆಂಬುವನು | ತ್ಪತ್ತಿಯಾದನು ಬಳಿಕಿತ್ತ || ೨ ||

ಆ ಪೆಣ್ಮಣಿ ಕೊಂತಿಯೊಳು ಗಾಂಧರ್ವ ವಿ | ವಾಹದಿನಾಪಾಂಡುಕುವರ |
ನೇಹದಿ ನೆರೆದುದನಾಸಿನು ಜನಿಯಿಸಿ | ದಾಹದ ಹೊರಹೊಮ್ಮಲದನು || ೩ ||

ಅರಸನಂಧಕವೃಷ್ಣಿ ಕೇಳ್ದತಿ ಚಿಂತಾ | ತುರನಾಗಿ ತನುಜೆಯೆಸಗಿದ |
ದುರಘವ್ಯಾಪಾರಕಿನ್ನೇವೆನೆಂದದ | ಪರಿಹರಿಸಲುಬೇಕೆಂದು || ೪ ||

ನವಗಿನ್ನೇನೆಂದೆನಬಾರದೆಂದಾ | ಕುವರಿ ಕೊಂತಿಯನು ಪಾಂಡುವಿಗೆ |
ಸವಿನಯದಿಂದೀವುದು ಮತವೆಂದಾ | ಸುವಿವೇಕಿ ಕಾರ್ಯವನೆಣಿಸಿ || ೫ ||

ಸುರಸಿಂಧುಜನಲ್ಲಿಗೆ ಪಾಂಡುಗೆಮ್ಮೀ | ತರಳೆ ಕೊಂತಿಯನೀವೆನೆಂದು |
ಚರರ ಕಳುಹಲಂತದ ಕೇಳಿ ಪಾಂಡುಭೂ | ವರನಿಂತೆಂದಾಡಿದನು || ೬ ||

ಕಿರಿಯ ತನುಜೆ ಮಾದ್ರೆಯನು ಕೊಟ್ಟಲ್ಲದೆ | ಬರಿದೆ ಕೊಂತಿಯನೊಲ್ಲೆನೆಂಬ |
ಇರುಕು ವಾತಾಡಲದನು ಕೇಳಿಯಾ ನಾ | ಡೆರೆಯನಂತೇಗೆಯ್ವೆನೆನಲು || ೭ ||

ಗಾಂಗೇಯನಾ ಪುರಕೆಯ್ದಲು ತನ್ನ ಮ | ನಂಗೊಳಿಪಾಕನ್ನೆಯರನು |
ಅಂಗಜನಿಭಪಾಂಡುವಿಗೆಯಂಧಕವೃಷ್ಣಿ | ಮಾಂಗಲ್ಯವನು ಮಾಡಿದನು || ೮ ||

ಇಂತು ಮದುವೆಮಾಡಿಯುಡುವಲಿಯನು ಕೊಟ್ಟು | ಕೊಂತಿ ಮಾದ್ರೆಯರನು ಕಳುಹೆ |
ಕಂತುಸದೃಶ ಪಾಂಡು ಸಹಿತಾ ಭೀಷ್ಮ ಭೂ | ಕಾಂತನೆಯ್ದಿದ ನಿಜಪುರಕೆ || ೯ ||

ಅತಿ ವಿಭವದಿ ಹೊಳಲನು ಹೊಕ್ಕಿರದಾ | ಧೃತರಾಷ್ಟ್ರ ಪಾಂಡುಕುವರರು |
ಸತತ ಸುಖಗಳಾಗಿರಲಾ ಭೀಷ್ಮಭೂ | ಪತಿಯೊಂದಾನೊಂದು ಪಗಲು || ೧೦ ||

ಹಿರಯರಂದದಿ ರಾಜ್ಯಪದವಿಯನಿತ್ತೊಡೆ | ಕುರುಡನಿವನು ಕಿರಿಯವಗೆ |
ಹಿರಿಯನಿದ್ದಂತೀಯಬಾರದೆನುತ ಸಚಿ | ವರಲೊಳಾಲೋಚನೆಗೆಯ್ದು || ೧೧ ||

ವಸುಧೆಯನಾ ದೃರತಾಷ್ಟ್ರಗೆ ಪಾಂಡುಗೆ | ವಸುಗೆಯೆರಡ ಮಾಡಿಕೊಟ್ಟು |
ವಸುಳೆಯಾಗಿರ್ದ ವಿದುರಕುಮಾರನ | ನೊಸೆದು ತಾನೋವುತಲಿರ್ದ || ೧೨ ||

ಧರೆಯ ದುರ್ಧರತರ ವಿಕ್ರಮದಿಂದಾಳು | ತುರಮುದದಿಂ ಧೃತರಾಷ್ಟ್ರ |
ಹಿರಿಯಣ್ಣನೊಳು ಕೂಡಿಯಾಡುತ ಪಾಂಡುಭೂ | ವರನು ವಿರಾಜಿಸುತಿರ್ದು || ೧೩ ||

ಕೊಂತಿ ಮಾದ್ರಾದೇವಿಯರೊಳು ಒಲಿದು ನಿ | ಶ್ಚಿಂತನಾಗಿಯೊಂದುಪಗಲು |
ಕಂತುಗುತ್ಸಹವನು ಮಾಡುತ ಬಂದ ಬ | ಸಂತಮಾಸದ ಸಮಯದೊಳು || ೧೪ ||

ರನ್ನಗೆಲಸದ ವಿಮಾನವನಿರದೇರಿ | ಚಿನ್ನೆ ಮಾದ್ರಾದೇವಿಸಹಿತ |
ಸನ್ನುತಮಪ್ಪೊಂದಾನೊಂದು ವನಕಾಗಿ | ಯುನ್ನತಗುಣಿಯೈದಿದನು || ೧೫ ||

ನಂದನದೊಳು ನಲವಿಂ ರತಿಯೊಡನಾ | ಕಂದರ್ಪನೊಸೆದಿರ್ಪತೆರದಿ |
ಇಂದುವದನೆ ಮಾದ್ರೆಯೊಳು ಪಾಂಡುನೃಪತಿಯಾ | ನಂದದಿ ರಮಿಯಿಸಿ ಬಳಿಕ || ೧೬ ||

ಮಿಗೆ ಸೊಗಯಿಸುವಾ ವನದ ಬಾಗಿಲೊಳಿರ್ದು | ದಿಗವಲೋಕನಗೆಯ್ವಾಗ |
ಮಿಗಗಳೆರಡು ಮುಂದೆ ಪರಿತರಲಾನೃಪ | ಗೊಗೆದದು ಕೋಪಾವೇಶ || ೧೭ ||

ಇಟ್ಟಣಿಸಿದ ಕೋಪದಿಂದಾ ಬಿಲ್ಲೊಳು ಶರ | ದೊಟ್ಟಾ ಮಿಗಗಳನೆಸಲು |
ತೊಟ್ಟನೆ ಬೆಳ್ಗರೆವುತ ತಮ್ಮಸುವನು | ಬಿಟ್ಟು ನೆಲಕೆ ಬೀಳ್ದುವಾಗ || ೧೮ ||

ಕರುಣಮಿಲ್ಲದೆಯಾ ಹರಿಣಿಯುಗಳನಾ | ಧರಣೀಶನೆಚ್ಚುದ ಕಂಡು |
ಪಿರಿದು ಮುರುಕದಿಂದಾ ಮಾದ್ರಾದೇವಿ | ಯೊರೆದಳು ತಾನಿಂತೆಂದು || ೧೯ ||

ಅಪರಾಧಹೀನಂಗಳವನುಜ ಪರೀಕ್ಷೆಯಿಂ | ದಪಗತಕಾರುಣ್ಯದಿಂದ |
ವಿಪರೀತವೃತ್ತಿಯಿಂದವೆ ಹತಿಯಿಸುವುದು | ನೃಪರ ಸದ್ವರ್ತನವಹುದೆ || ೨೦ ||

ಎಂದು ನುಡಿದ ಸುದತಿಯ ಮಾತು ಮನಸಿಗೆ | ಬಂದು ಬಿಲ್ಲಂಬನೀಡಾಡಿ |
ಒಂದಿದ ಕರುಣಹೃದಯನಾಗುತಾ ನೃಪ | ಕಂದರ್ಪನಿರ್ಪವೇಳೆಯೊಳು || ೨೧ ||

ಆ ಉದ್ಯಾನಕುತ್ತಮಬೋಧಸಂಯುತ | ಪಾವನುಮುನಿಯೋರ್ವನೆಯ್ದೆ |
ಆ ವರವಧುಗಳಲ್ಲಿಗೆ ಭಕ್ತಿಯಿಂದೆಯ್ದಿ | ಭಾವಶುದ್ಧಿಯೊಳಿರದೆರಗಿ || ೨೨ ||

ಕರಕಮಲವ ಮುಗಿದೆಲೆ ಮುನಿನಾಥಾ ಎರಲೆಯೆರಡ ಕಂಡೆನಗೆ |
ಉರುತರಮಪ್ಪ ಮುನಿಸು ಬಂದೆತೇಕೆನೆ | ವರಮುನಿಯಿಂತು ನುಡಿದನು || ೨೩ ||

ಸುರಚಿರಮಪ್ಪಾವಿನಿತಾಖಂಡದ | ಕರುಣಿಯೆಂಬಗ್ರಹಾರದೊಳು |
ಹರುಷದಿಂದ ವಟುಕವೆಸರ ಹಡೆದವನೀ | ಸುರನಿಪ್ಪನಾ ಬಿದಿಯಂತೆ || ೨೪ ||

ಅವಗೆಯಗ್ಗಿಲೆಯೆಂಬಂಗನೆಯಿಹಳು ಮ | ತ್ತವರಿಗೆ ದಾರಕನೆಂಬ |
ಕುರವನಾಗಿ ನೀನನುದಿನ ವೇದವ | ಸುವಿಧಾನದಿಂದೋದುತಿರಲು || ೨೫ ||

ಜಿನಮಾರ್ಗದೊಳಗೆ ತಾತ್ಪರ್ಯವು ನಿನಗೆ ಸಂ | ಜನಿಸಿ ವೇದವನೋದಬಿಟ್ಟು | |
ಜನನುತಮಪ್ಪ ಪಂಚಾಣುವ್ರತಂಗಳ | ನಸುಕರಿಸುತ ಮನಮೊಸೆದು || ೨೬ ||

ಚಿಂತಾವಿರಹಿತನಾಗಿಯಾ ಪುರದ ವ | ಸಂತಮಾಲೆಯೆಂಬೋರ್ವ |
ಕಾಂತೆಯೊಳೊಡಗೂಡಲಾ ದ್ವಿಜವಂಶಕೆ | ಕುಂತಾಯಿತೆಂದು ಕೋಪದೊಳು || ೨೭ ||

ಆ ವಟಕನು ಬಂದು ಚಪ್ಪರಿಸಲ್ಯದ | ಭಾವಿಸದಾ ಸೂಳೆಯೊಡನೆ |
ತೀವಿದೊಲವಿನಿಂದಿರ್ದೋಂದುದಿನದೊಳ | ಗಾವೂರನಂದನಕೆಯ್ದಿ || ೨೮ ||

ಭಾವಜಕೇಳಿಯೊಳೊಂದು ಪೂವಿನಮನೆ | ಯೋವರಿಯೋಳು ಲಜ್ಜೆದೊರೆದು |
ನೀವೊರಗಿರಲ್ಲಿಗಾ ವಟುಬಂದು ಕೋ | ಪಾವೇಶಮಾನಸನಾಗಿ || ೨೯ ||

ಕೂರಸಿಯಿಂದಿರಿಯಲು ನೀನು ಸತ್ತಾ | ಸಾರಸುವ್ರತಫಲದಿಂದ |
ಈ ರಮ್ಯವಡೆದಾಕಾರದ ಪಾಂಡುಕು | ಮಾರನಾದೆ ನೀನರಸ || ೩೦ ||

ಬಳಿಕ ವಟುಕನನ್ಯಾಯವ ಕೇಳ್ದಾ | ಪೊಳಲಪಾರ್ವರು ನಮ್ಮ ಕುಲದ |
ಒಳಗೆ ನೀನಲ್ಲವೆನುತ ಪರಿಭವಿಸುತ | ಕರೆಯಲಾರ್ತದಿನವನಳಿದು || ೩೧ ||

ಹರಿಣನಾದನು ನಿನಗದರಿಂದದ ಕಾಣು | ತುರುತರಕೋಪವಂಕುರಿಸಿ |
ಮರಣವನದಕೆ ಮಾಡಿದೆಯೆಂದು ಪೇಳ್ದು ಮ | ತ್ತುರುತರ ಧರ್ಮವರ್ತನವ || ೩೨ ||

ನಿರವಿಸೆ ಕೇಳ್ದು ಮತ್ತವರನು ಬೀಳ್ಕೊಂಡು | ತರುಣಿಸಹಿತ ಪುರವರಕೆ |
ಹರುಷದಿಂ ಬಂದು ಧರ್ಮೋದ್ಯೋಗದೊಳು ಗುರು | ತರಚಿತ್ತನಾಗಿರುತಿರಲು || ೩೩ ||

ನುತುರೂಪವತಿ ಕೊಂತಿಯ ಬಸಿರೊಳಗೆಯ | ಚ್ಯುತಕಲ್ಪದಮರನಲ್ಲಿಂದ |
ಚ್ಯತುನಾಗಿ ಬಂದು ಬೆಳೆದು ನವಮಾಸದು | ನ್ನತವಹಶುಭಲಗ್ನದೊಳು || ೩೪ ||

ಸುತನಾಗಲು ಸಿಸುವಿಗೆ ಹತ್ತುದಿನದೊಳ | ಗತಿಶಯಮಪ್ಪ ವೈಭವದಿ |
ಕ್ಷಿತಿಪಾಲಕನು ಯುಧಿಷ್ಠಿರ ನಾಮವ | ನತಿಮುದದಿಂದಿತ್ತನಾಗ || ೩೫ ||

ಧರ್ಮೋದ್ಯೋಗದೊಳೊಗೆದ ಕಾರಣದಿಂದ | ಧರ್ಮಜನೆಂಬ ಪೆಸರನು |
ಪೆರ್ಮಗುವಿಗೆ ಕೊಟ್ಟು ಪಾಂಡುನೃಪತಿಯತಿ | ನಿರ್ಮಲಚಿತ್ತನಾಗಿರಲು || ೩೬ ||

ಬಳಿಕ ತದಚ್ಯುತಕಲ್ಪದಮರನೋರ್ವ | ನಿಳಿದಲ್ಲಿಂದೆಯ್ತಂದು |
ಲಲತಾಂಗನಾಗಿ ಕೊಂತಿಯ ಬಸಿರೊಳು ಬಂದು | ಬೆಳೆದನು ನವಮಾಸತುಂಬಿ || ೩೭ ||

ಮೂಲನಕ್ಷತ್ರದೊಳೊಗೆಯಲು ಕಂಡದ | ನಾಳೋಚಿಸಿ ಬಂಧುಗಳು |
ಹೇಳದೆ ನೃಪಗೆ ಪರೇತವನದೊಳಾ | ಬಾಲಕನನು ಹಾಕಿಸಿದರು || ೩೮ ||

ಆ ಕುವರನು ಪೂರ್ವಕೃತಪುಣ್ಯದೇವತೆ | ಭೀಕರಮಪ್ಪ ಸುಂಟುರೆಯ |
ಆಕಾರದಿಂದ ಬಳಸಿ ರಕ್ಷಿಸುತಿರ್ದು | ದಾಕುಣಪಾಲಯದೊಳಗೆ || ೩೯ ||

ಹುಟ್ಟಿದ ಹಸುಳೆಮಗುವನು ಮಸಣದೊಳು | ಬಿಟ್ಟುದನಾಪಾಂಡುವರಿದು |
ಮುಟ್ಟಿದ ಮೋಹದಿ ತಾನಲ್ಲಿಗೆಯ್ತರೆ | ಸುಂಟರೆ ಪಿಂಗಿದುದಾಗ || ೪೦ ||

ಕುವರನ ಪುಣ್ಯಪ್ರಭಾವದ ಕಂಡಾ | ಅವನೀಶನುರುಮುದವೆತ್ತು |
ತವಕದಿ ತೆಗೆದು ಮನೆಗೆ ಬಂದು ಜಾತಕ | ರ್ಮವನೊಲದಿಂದ ಮಾಡಿದನು || ೪೧ ||

ಭೀಮಪರೇತವನದ ಮಧ್ಯದೊಳಗೆ ಮ | ಹಾಮಾರುತನ ರಕ್ಷಣೆಯೊಳು |
ಆ ಮಗುವುಳಿದುದರಿಂ ವಾಯುನಂದನ | ಭೀಮವೆಸರನಿಟ್ಟನೊಸದು || ೪೨ ||

ಬಳಿಕ ತದಚ್ಯುತದೇವನಲ್ಲಿಯ ಭೋಗ | ಗಳನನುಭವಿಸಿಯಲ್ಲಿಂದ |
ಅಳಿದು ಕೊಂತಿಯ ಕೋಮಲಗರ್ಭದೊಳು ಪುಟ್ಟಿ | ಬೆಳೆದೊಂಬತ್ತು ತಿಂಗಳೊಳು || ೪೩ ||

ಉತ್ತಮಲಗ್ನದೊಳುತ್ಪತ್ತಿಯಾಗಲು | ಮತ್ತಾಸಿಸುಗಾನೃಪತಿ |
ಬಿತ್ತರಮಪ್ಪಕರ್ಮದೊಳರ್ಜುನ ನಾಮ | ವಿತ್ತನು ದಶದಿವಸದೊಳು || ೪೪ ||

ಇಂದ್ರೋತ್ಸವದೊಳೊಗೆದ ಕಾರಣದಿಂ | ದಿಂದ್ರಸುತಾಭಿಧಾನವನು |
ರುಂದ್ರವಿಭವದಿಂ ಕೊಟ್ಟಾಪಾಂಡುನ | ರೇಂದ್ರ ಸಂತಸದೊಳಗಿರ್ದ || ೪೫ ||

ಚರಮಾಂಗರವರು ಮೂವರು ಸುಕುಮಾರರು | ನಿರುಪಮ ಸತ್ತ್ವಸಂಯುತರು |
ಸರಸಕಲಾಕೋವಿದರುತ್ತಮರೂಪ | ರುರುಮುದದಿಂದ ಬೆಳೆದರು || ೪೬ ||

ಮತ್ತಾ ಅಚ್ಯುತದಿಜರೀರ್ವರು ಭೂ | ಪೋತ್ತಂಸಪಾಂಡುವ ಕಿರಿಯ |
ಚಿತ್ತವಲ್ಲಭೆ ಮಾದ್ರೆಯ ಬಸಿರೊಳು ಪುಟ್ಟಿ | ಯುತ್ತಮಮಪ್ಪ ಲಗ್ನದೊಳು || ೪೭ ||

ಅಮಳುಗಳಾಗಿ ಜನಿಸೆ ಪಾಂಡುಭೂಪತಿ | ಮಮತೆಯಿಂ ಜಾತಕರ್ಮವನು |
ಕ್ರಮದಿಂದೆಸಗಿ ನಕುಲ ಸಹದೇವರೆಂ | ಬಮಲರಾಮವನಿಟ್ಟನೊಸೆದು || ೪೮ ||

ಸ್ಮರನೈದು ಬಾಣಗಳೇ ನರರೂಪಾಂತು | ಪಿರಿದು ವಿಭ್ರಾಜಿಸುವಂತೆ |
ತರುಣೀಜನದ ಚಿತ್ತದೊಳು ಮೋಹನಮನಂ | ಕುರಿಸಿ ಬೆಳೆದರಾ ಕುವರರು || ೪೯ ||

ಅತಿ ಬಲಯುತರೀ ತೆರದಿ ಬೆಳೆವುತಿರೆ | ದೃರತಾಷ್ಟ್ರಧರಣೀಪತಿಗೆ |
ರತಿನಿಭೆ ಗಾಂಧಾರಿಯೋರ್ವಸುಕುಮಾರ | ನುತುಪತಿಯಾಗಿಯೊಪ್ಪಿದನು || ೫೦ ||

ತನುಜಗೆ ಜಾತಕರ್ಮವ ಮಾಡಿ ದುರ್ಯೋ | ಧನವೆಸರಿಟ್ಟು ಭೂವರನು |
ಅನುರಾಗವಡೆದಿರಲಾ ಸೂನು ಬೆಳೆದಾ | ದಿನಕರನಿಭವತೇಜನಾದ || ೫೧ ||

ಆ ದುರ್ಯೋಧನಗೂಡಿ ನೂರ್ವರು ಮಕ್ಕ | ಳಾದರು ದುಶ್ಯಾಸನನು |
ಆ ದುರ್ದರ್ಶನನಾ ದುರ್ಮರ್ಷಣ | ನಾದಿಯ ಸುಕುಮಾರಕರು || ೫೨ ||

ಅವರಂತರದೊಳು ದುಶ್ಯಲ್ಯೆಯೊಂಬೋರ್ವ | ಕುವರಿ ಜನಿಸಿಯೊಪ್ಪಿದಳು |
ಅವಳನು ಸಿಂಧುದೇಶಾಧೀಶ್ವರ ಸೈಂ | ಧವಗೆ ಮದುವೆ ಮಾಡಿದನು || ೫೩ ||

ಆ ಪಾಂಢುನೃಪಸುತರೈವರು ಧೃತರಾಷ್ಟ್ರ | ಭೂಪನ ನೂರ್ವರುಸುತರು |
ಆ ಪೊಳ್ತೀಪೊಳ್ತೆನ್ನದೆ ಮದಮತ್ಸ | ರೋಪೇತರಾಗಿರುತಿಹನು || ೫೪ ||

ಓರ್ವರೋರ್ವರೊಳು ಬಾಲಕ್ರೀಡೆಯಿಂ ನೆರೆ | ಪರ್ವಿದಮಾಸಂಕದಿಂದ |
ಸರ್ವರು ಬೆದರುವಂದದಿ ಕಲಹವ ಮನ | ಪರ್ವಿಬಿಡದೆ ಮಾಡುತಿಹರು || ೫೫ ||

ವರಬಂಧುಜನಮೆಲ್ಲ ಬೆದರುವಂತಾ ಈರ್ವ | ರರಸಿನ ಸುಕುಮಾರಕರು |
ಹಿರಿದುಹೋರಟೆಗೊಂಡಾ ತಂತಮ್ಮೋಳ | ಗೊರಸೊರಸಾಗಿರುತಿಹರು || ೫೬ ||

ಮಕ್ಕಳಾಟಿಕೆಯೊಳಗಾ ರಾಜನಂದನ | ರೆಕ್ಕೆಕ್ಕೆಯಂ ಹೋರುತಿಹರು |
ತಕ್ಕದೆ ತಂತಮ್ಮಳೊಬ್ಬರೊಬ್ಬರೊಳಿರ | ದುಕ್ಕುಕ್ಕು ಹಳಚುವಂದದೊಳು || ೫೭ ||

ಬವರದ ಬೀಜಮನಾ ಬಾಲಕೇಳಿಯೊ | ಳವನಿಯೊಳಗೆ ಚೆಲ್ಲುವಂತೆ |
ಅವರಯಿವರಿವರು ನೂರ್ವರು ಗರ್ದುಗವನತಿ | ತವಕದಿನೆಚ್ಚಾಡುತಿಹರು || ೫೮ ||

ಹೋರಟೆಗೊಂಬ ನೂರೈವರು ಮಕ್ಕಳು | ಬಾರಿಸುತಾ ಸಿಂಧುಸುತನು |
ಅರೈದು ರಕ್ಷಿಸುತಿರ್ದನು ಧೃತರಾಷ್ಟ್ರ | ಭೂರಮಣನು ಪಾಂಡುಸಹಿತ || ೫೯ ||

ಮನುಸಮಚರಿತ ಮನೋಭವನಿಭರೂಪ | ನನಪಮ ವಿಕ್ರಮಯುತನು |
ಜನಪತಿಕುಲಮಣಿದೀಪನೊಪ್ಪಿದನು ಸ | ಜ್ಜನವಜಾತಭಾಸ್ಕರನು || ೬೦ ||

ಇದು ಜಿನಪದಸರಸಿಜಮದಾಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದ ಸಂಧಿಗಳಾರು || ೬೧ ||

ಆರನೆಯಸಂಧಿ ಸಂಪೂರ್ಣಂ