ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಸ್ವಾರ್ಥಮುನಿಸುವ ಶೌರೀಪುರದೊಳಗೆ ಕೃ | ಪಾರ್ಥದೇಶಮನಾಳುತಿರಲು |
ಪಾರ್ಥಿವಕುಲಪುಸ್ತಕಮಣಿವಿನಯ ಸ | ಮರ್ಥಸಮುದ್ರವಿಜಯನು || ೨ ||

ವಾರಿಧಿವಿಜಯನೃಪತಿ ಗಾಂಭೀರ್ಯದಿ | ವಾರಿಧಿಯನು ನೆರೆಗೆಲಿದ |
ಕಾರಣದಿಂದಾ ಅನ್ವರ್ಥನಾಮವು | ಸೇರಿದುದಿಳೆಯರಿಕೆಯೊಳು || ೩ ||

ಅದೇಯಮೂರ್ತಿ ಸಮುದ್ರವಿಜಯಧರ | ಣೀಯದಯತೇಶನೊಳೊಸೆದು |
ಸೋದರರೊಂಬತ್ತುಮಂದಿ ಕುಮಾರರು | ಭೇದವಿಲ್ಲದೆ ಕೂಡಿಹರು || ೪ ||

ಅಂತವರಿಂ ನೆರೆಕಿರಿಯನು ರೂಪಜ | ಯಂತನು ವಸುದೇವಕುವರ |
ಕಾಂತಾಚಿತ್ತಚಕೋರಿಚಂದ್ರಮನುರೆ | ಸಂತಸದಿಂದಿರುತಿಹನು || ೫ ||

ಪ್ರಾಯವೇರದಮುನ್ನ ತರುಣಿಯರುಗಳ ನಿ | ಕಾಯವನೊಲಿಯಿಸಿಕೊಂಬ |
ಅಯುತಿಕೆಯ ಚಲ್ವಿಕೆಯಾ ವಸುದೇವ | ರಾಯಕುವರಗೊಪ್ಪಿದುದು || ೬ ||

ವನಕರಿಗುತ್ತಮ ಮದವೇರುವವೊಲು | ಜನತಾಧೀಶನಂದನಗೆ |
ಮಿನಗುವ ಏರುಂಜವ್ವನವೇರಲು | ನನೆವಿಲ್ಲಗೇರಿತು ನಾರಿ || ೭ ||

ಇಂತು ಬಂದಾಮೊತ್ತಮೊದಲ ಜವ್ವನದೊಳು | ಕಂತುಸದೃಶವಸುದೇವ |
ಸಂತಸದಿಂ ತನ್ನೆಣೆಯದ ಮಕ್ಕಳ | ಸಂತತಿಯನು ಕೂಡಿಹನು || ೮ ||

ನಟಿಯಿಸುತರಸನ ಮನಕೆ ಸಂತಸಮಾಳ್ಪ | ವಿಟ ವಿದೂಷಕ ನಾಗರಿಕ |
ನಟಕ ಪಂಡಿತ ಪರಿಹಾಸಕಾದಿಗಳ ನಿ | ಷ್ಕುಟಿಲತೆಯಿಂ ಕೂಡಿಹರು || ೯ ||

ವಾರದೊಡಿಗೆಗಳ ದೇಸೆಯನರಿದು ಶೃಂ | ಗಾರವಮಾಡಿ ಕುವರನು |
ನಾರಿಯರೆರ್ದೆಯೊಳಗಾನಗರಿಯ ಕೇರಿ | ಕೇರಿಯೊಳಗೆ ತಿರುಗುವನು || ೧೦ ||

ಭಾವಿಸಿನೋಡುವ ಬಾಲಕಿಯರ ದಿಟ್ಟಿ | ತಿವಿ ಬಿಂಬಿಸೆ ತನ್ನ ತನುವ |
ಆ ವಸುದೇವನಾನೆಯನೇರಿ ಪೊಳಲೊಳು | ದೇವೇಂದ್ರನೆನೆ ತೊಳಲುವನು || ೧೧ ||

ಗೊಂದೆಗಳನು ಕಾಯದಗೋವಿಂದನೊ | ಅಂದವಡೆದ ಮನಮಥನೊ |
ಕುಂದದ ಚಂದಿರನೋ ಎಂದಾ ಪುರ | ಸುಂದರಿಯರು ನೋಳ್ಪರವನ || ೧೨ ||

ವಾಜಿಯನೇರಿ ವಾಹಳಿಮಾಡಿ ಮುಗುಳ್ದಾ | ರಾಜಧಾನಿಯ ಕೇರಿಗಳೊಳು |
ರಾಜನಂದನರೆಡಬಲದೊಳು ಬರೆ ರಾಜ | ರಾಜನಂದದಿ ತಿರುಗುವನು || ೧೩ ||

ಅದೆಯದೆ ಬಂದಬಂದಪನಾ ಅಭಿನವ | ಮದನನೆಂದಾಪುರವರದ |
ಸುದತಿಯರೊಳಗೊಬ್ಬರುಳಿಯದೆ ಬೀದಿಗೆ | ಅದಿರದೆ ಬಂದು ನೋಡುವರು || ೧೪ ||

ಕೇರಿಕೇರಿಯ ಮನೆಮನಯಂಗಳದೊಳು | ನಾರಿಯರೆಲ್ಲರೆಯ್ತಂದು |
ಸ್ತ್ರೀರಾಜ್ಯಮೊ ಈ ನಗರಿಯೆಂಬಂತಾ | ಮಾರನಿಭವನನೀಕ್ಷಿಸಿದರು || ೧೫ ||

ಸ್ಮರನೆರಡನೆಯವತಾರವ ಕೈಕೊಂಡ | ಪರಿಯೊಳಗಾ ನಗರಿಯೊಳು |
ತಿರುಗುವ ರಾಜಕುಮಾರನನಾ ಪುರ | ತರುಣಿಯರೊಲಿದೀಕ್ಷಿಸಿದರು || ೧೬ ||

ಪೋಗದಿರೆಂಬತ್ತೆಯ ಮಾತ ಕೇಳದೆ | ಬಾಗಿಲವರು ಹೊರನೂಂಕಿ |
ಈಗ ಮುಗುಳ್ವೆನೆಂದೆಯ್ತಂದು ನೋಡುವ | ರಾಗಾಧರೆಯರೊಪ್ಪಿದರು || ೧೭ ||

ಬಾರಿಪ ಗಂಡರುಗಳ ಬಗೆಗೊಳ್ಳರು | ಕೂರಸಿಗಳನೆದೆಗೆಡರು |
ಸೀರೆಕಳೆಯಲೇನೆಂದರಿಯರು ಪುರ | ನಾರಿಯರವನನೋಳ್ಪಾಗ || ೧೮ ||

ಅರಸುಮಕ್ಕಳ ಸತಿಯರು ತೊಟ್ಟುದುಟ್ಟುದ | ನೀರದೆ ಬಿಸುಟು ಮಾಸಲುಟ್ಟು |
ನೆರೆದ ತೊಳ್ತಿರೊಳು ತಾಮಾತೊಳ್ತಿರಾಗಿ ಬಂ | ದುರುಮುದದಿಂದ ನೋಳ್ಪರವನ || ೧೯ ||

ಅನ್ಯಪುರುಷರನೀಕ್ಷಿಸೆ ಮನೆಯಾಣ್ಮರಿ | ಗನ್ಯಾಯಕಾತಿಯರಹೆವು |
ಮಾನ್ಯಗೆಡವುದೆನ್ನದೆ ಮನೆವೆಣ್ಣಾ | ಧನ್ಯನನಂದು ನೋಡಿದರು || ೨೦ ||

ಮದಿಲನಡರಿ ಮಾಡವ ಹತ್ತಿ ಮರಗಳ | ತುದಿಯೇರಿಯಾಪುರವರದ |
ಮದವತಿಯರು ನೋಡುವರಂಬರಚರ | ಸುದತಿಯರಂತಾ ನೃಪನ || ೨೧ ||

ಲಲನೆಯರವನನೊಲಿದು ನೋಡುವ ನೋಟ | ವಲರ್ಗಣೆಗಳ ಕಾಲಾಟ |
ನೆಲಸಿದ ಬಗೆಯ ಬಲ್ಮೆಯನೋಡಿಸುವೋಟ | ಗೆಲವಿಗಿಕ್ಕಿದ ಕಾಳಕೂಟ || ೨೨ ||

ಅಂಗಡಿವೀದಿವಿಡಿದು ನಡೆವಾನೃಪ | ತುಂಗನೆಯ್ದುವಕಡೆಗಾಗಿ |
ಹಿಂಗದೆ ನಡೆತಂದುದಾ ಸತಿಯರ ಜಾಲ | ವಂಗಭವನ ಜಾತ್ರೆಯಂತೆ || ೨೩ ||

ಮುಟ್ಟಿವಿಡಿದುನೋಡುವ ಮುಗ್ಧಸತಿಯರ | ಕಟ್ಟಕಡೆಯ ಕಣ್ಬೆಳಗು |
ಅಟ್ಟಿಹಿಡಿಯೆ ಮುತ್ತಿನಬೊಂಬೆಯಂತಳ | ವಟ್ಟುನಡೆದನಾ ನೃಪತಿ || ೨೪ ||

ಗಂಡುಗಂಡಿಗೆ ಮೋಹಿಸುವ ಚೆಲ್ವಿಕೆಯ ಕೈ | ಕೊಂಡ ಕುಮಾರಚಂದ್ರಮನ |
ಗಂಡಗಾಡಿಯ ನೋಡಿದಬಲೆಯರಿಗೆ ಕಾವ | ನಂಡಲೆಯತಿ ಪಿರದಾಯ್ತು || ೨೫ ||

ಕಟ್ಟರಸಿನಕುವರನ ಚೆಲ್ವಿಕೆಯನು ಕ | ಣ್ಣಿಟ್ಟು ನೋಡಿದಮಾತ್ರದೊಳು |
ಬಟ್ಟಜವ್ವನೆಯರಬಳಗಕಂಗೋದ್ಭವ | ನಟ್ಟುನಳಿಯತಿಘನಮಾಯ್ತು || ೨೬ ||

ಆ ವಸುದೇವಕುಮಾರನ ರೂಪವ | ಭಾವಬಲಿದು ನಡೆನೋಳ್ಪ |
ಭಾವೆಯರಿಗೆ ತತ್ಪುರದೊಳು ಕಾವನ | ಹಾವಳಿವೆಗ್ಗಳಮಾಯ್ತು || ೨೭ ||

ಶೃಂಗಾರಶರಧಿಶಶಾಂಕನ ರೂಪಮ | ನಂಗೊಳಿಪಂತೀಕ್ಷಿಸುವ |
ಅಂಗನೆಯರ್ಗಾಪುರವರದೊಳಗೆಯ | ನಂಗನಬ್ಬರ ಪಿರಿದಾಯ್ತು || ೨೮ ||

ಅರಮಗನಾಕಾರವ ನಿರೀಕ್ಷಿಸಿ ಪರ | ಪುರುಷರನೊಲ್ಲೆನೆಂದೆಂಬ |
ತುರುಣೀಜನದ ಕಲ್ಲೆದೆಗೋಂಟೆ ಕಾವನ | ಹರಿದಾಳಿಗೀಡಾದುದೆಲ್ಲ || ೨೯ ||

ಅಲರಂಬನ ದಾಳಿ ಬಪ್ಪ ವಾರ್ತೆಯ ಕೇ | ಳ್ದಲಸದವನನಡೆನೋಳ್ಪ |
ಲಲನೆಯರೆದೆಯ ಬಲುಮೆ ನಾಣ್ಚಕೆಗೂಡಿ | ಒಲಸುತೆಗೆದು ಪೋದುದಾಗ || ೩೦ ||

ಕಟ್ಟೊಲವಿನ ಕರುವಿನವೊಲು ಕಣ್ಗಳ | ವಟ್ಟರಮಗನನೀಕ್ಷಿಸುವ |
ಪಟ್ಟಣದಬಲಾನೀಕದಳ್ಳೆದೆ ಲಾಳ | ವಟ್ಟೆಯಾಯ್ತಲರಂಬಿನಿಂದ || ೩೧ ||

ಅವಳನೆಸುವೆನವಳನಿಳೆಗುರುಳಿಪೆ | ನವಳನುಮೆಲ್ಲೆರ್ದೆಯಿಂದ |
ಜೀವದೆಗೆವೆನೆಂದು ಸಂದೆಗೆಸುರಗಿಯ | ಕಾವಕೀಳುವ ತೆರೆನಾದ || ೩೨ ||

ಆ ಮನಸಿಜನಾ ಪೊಳಲೊಳಗಾ ಉ | ದ್ದಾಮರೂಪನ ನಡೆನೋಳ್ಪ |
ಕೋಮಲೆಯರ ತನುಮನವನು ನಿರ್ಧೂಮ | ಧಾಮಮಾಗಿರೆ ಸುಟ್ಟನಂದು || ೩೩ ||

ಆ ನರನಾಥಭಾನುವನೊಸೆದೀಕ್ಷಿಸು | ವಾನಗರಿಯನರಿಯರ |
ಮಾನವನಾಶಂಬುರರಿಪು ದಂದಹ್ಯ | ಮಾನಮಪ್ಪಂತುರುಪಿದನು || ೩೪ ||

ಕೆಲರಂಬುಗೂಡಾಗಿ ಬಿಳ್ದಿರೆ ಕೆಲರಲ್ಲಿ | ಯಲರಂಬ ಹೊತ್ತು ಹೊಮ್ಮಿರಿದು |
ನೆಲಕುರುಳ್ದರು ಪುರಸುದತಿಯರಾನೃಪ | ಕುಲತಿಲಕನೀಕ್ಷಿಸುತ || ೩೫ ||

ಮೀಟೆನಿಸುವ ಮುಗುಳ್ಗಣೆಯನ ರೂಪನಿ | ರ್ಧಾಟಿಪ ನೃಪನನೀಕ್ಷಿಸುವ |
ನೋಟಮಾತ್ರದೊಳಬಲೆಯರ್ಗೆ | ವಿರಹದಾಟ | ಕೋಟಲೆ ಕಡುಪಿರಿದಾಯ್ತು || ೩೬ ||

ಅಡ್ಡಾಕಿಲ್ಲದಂದದಿ ನಾವಿವಗೆಮನ | ವೊಡ್ಡಿ ಬಿಡದೆ ಸುಖಿಯಿಸುವ |
ದೊಡ್ಡಿತೆಂದಿಂಗಹುದೊ ಎಂದು ಕೆಲಬರು | ಗುಡ್ಡೆಣಿಕೆಯನೆಣಿಸುವರು || ೩೭ ||

ಚೆನ್ನಿಗನೀ ವಸುದೇವನಲ್ಲದೆ ನಮ | ಗನ್ನೀಗರೀ ಭವಾಂತರಕೆ |
ಬೆನ್ನೊಡುಹುಟ್ಟೆಂದು ಭಾಷೆಗಳನು ರಾಜ | ಕನ್ನೆಯರೊಸೆದು ಮಾಡುವರು || ೩೮ ||

ಚಿತ್ರಮೆನಿಪರೂಪುವಡೆದ ನೀರನ ಭಾವ | ಚಿತ್ರದ ಪಟಗಳ ತರಿಸಿ |
ನೇತ್ರೇಂದ್ರಿಯಸುಖವಡೆರೊಸೆದು ಶತ | ಪತ್ರಾಕ್ಷಿಯರಲ್ಲಿ ಕೆಲರು || ೩೯ ||

ಬಣ್ಣವನುಡರು ಬಂಗಾರಳನು ತೊಡ | ರುಣ್ಣರಂಗವನೋಸರಿಸರು |
ಕಣ್ಣಸವಿಗೆಯಾತನರೂಪನೋಡಿದ | ಹೆಣ್ಣೆಲ್ಲರಾಪುರದೊಳಗೆ || ೪೦ ||

ಪರಕಾಯಪ್ರವೇಶವು ಜೀವಗುಂಟೆಂ | ಬರಮಾತುಗಳನುಂಟುಮಾಡಿ |
ಪುರಸುದತಿಯರು ಚಿತ್ತವನವನಂಗದೊ | ಳಿರಿಸಿ ಹಡೆದು ಮೂರ್ಛೆಯನು || ೪೧ ||

ಮರುವುಡಿಮದ್ದು ಮೈಯುಂಡಂತೆ ಮನಸಿಜ | ನಿರದೇರಿ ಸೊಕ್ಕಿದಂತೆ |
ಅರಿವನುಂಗಿದ ಮೋಹದಿ ಮನೆವೆಣ್ಗಳು | ಮರೆವರು ಮನೆಗೆಲಸವನು || ೪೨ ||

ಕನಸುಮನಸುಕನವರದೊಳಗಾನೃಪ | ತನುಜಾತನನಿಂಬುಗೊಳಿಸಿ |
ಘನಮಾದ ಮೋಹಮರುಳುಗೊಂಡವೊಲು ಪುರ | ವನಿತೆಯರುಗಳಿರುತಿಹರು || ೪೩ ||

ಮನಸಿನೊಳಾಕುವರನ ಭಾವರತಮೇ | ಕನಸಿನೊಳವನ ಸುರತವೆ |
ಅನುಕರಿಸಿರಲಂತದರಿಂದಾಪುರ | ವನಿತೆಯರೆದೆವಿಡದಿಹರು || ೪೪ ||

ಅನಿತರೊಳಾಕಾಮಿನಿಯರೆಲ್ಲರು ಹೆತ್ತ | ತನುಜರೆಲ್ಲರು ನೃಪಸುತನ |
ವಿನುತಮಪ್ಪಾಕಾರದ ಸೌಂದರ್ಯಮ | ನನುಕರಿಸಿಯೆ ಜನಿಸಿದರು || ೪೫ ||

ಇಂತು ಕಂತುವ ಹಾವಳಿಯಾವರಿಸಿದ | ಕಾಂತಾಜನವನು ಕಂಡು |
ಚಿಂತೆಯಿಂದಾ ಪೌರರೊಂದೆಡೆಯೊಳು ನಿಂದು | ಮಂತಣವನು ಮಾಡುತಿರಲು || ೪೬ ||

ಅನಿತರೊಳೋರ್ವಪಾರ್ವನು ತನ್ನ ವಲ್ಲಭೆ | ಜನನುತನಾಕುಮಾರಕನ |
ಮನದೆಗೊಂಡು ನೋಡಿ ಮನಸಿಜಬಾಣಕೆ | ತನುಲತೆಯನು ಗುರಿಮಾಡಿ || ೪೭ ||

ಉಂಬುದ ಬಿಟ್ಟಳು ಉಡುವುದ ತೊರೆದಳು | ಕೊಂಬುದನೆಲ್ಲವುಳಿದಳು |
ಶಂಭರರಿಪುನಿಭವಸುದೇವಕುವರನ | ಪಂಬಲಿಸುತ್ತಾ ಸುದತಿ ||೪೮ ||

ವಿರಹದೊಳೊಂಬತ್ತನೆಯವಸ್ಥೆಯನಂ | ದಿರದೆಯ್ದಿ ಮೂರ್ಛೆಯೊಳಿರಲು |
ಪರಿತಂದು ನೋಡಿಯಿವಳು ಸತ್ತಳೆಂದತಿ | ಭರದಿಂದ ಪೊರಮಟ್ಟು ಮನೆಯ || ೪೯ ||

ಮೊದಲು ಮಂತಣಗೊಂಡು ನೆರೆದಿರ್ದಾ ಸಭೆ | ಗದಿರುತಬಂದು ಮೈಯಿಕ್ಕಿ |
ಪುದಿದ ದುಃಖದೊಳಿಂತೆಂದನು ಪಾರ್ವನು | ಮದನರೂಪನನೀಕ್ಷಿಸುತ || ೫೦ ||

ಅತಿ ರೂಪವತಿ ಹಾವಭಾವವಿಲಾಸಾ | ನ್ವಿತೆಯೆನ್ನ ಚಿತ್ತವಲ್ಲಭೆಯ |
ಅತನುಪಿಶಾಚವಡರಿ ಕೊಂದಿತೆಂದಾ | ಗತಲಜ್ಜಿತನು ಮೊರೆಯಿಡಲು || ೫೧ ||

ಅವನ ಮೊರೆಯ ಕೇಳುತಾ ಸಭ್ಯರೆಲ್ಲರು | ತವೆ ನಗುತಲ್ಲಿಂದೆಳ್ದು |
ಅವಸರಮೆಮಗಿದೆನುತ್ತವನೊಡಗೂಡಿ | ಯವನೀಶನಾಲಯಕೆಯ್ದಿ || ೫೨ ||

ಅರಸನೋಲಗದವಸರಮನರಿದು ಬಂದು | ನೆರೆದರಮನೆಯ ಬಾಗಿಲೊಳು |
ಶರಧಿಘೋಷಿಸುವಂತೆ ತೊವಲ ಪಿಡಿದುಕೊಂಡು | ಭರದಿಂ ಮೊರೆಯಿಟ್ಟರಾಗ || ೫೩ ||

ಎಲ್ಲಿಯದೀ ಮೊರೆಯೆಂದಬ್ಧಿವಿಜಯಭೂ | ವಲ್ಲಭನವರನು ಕರೆಸಿ |
ಸಲ್ಲೀಲೆಯಿಂ ಕೇಳಲವರು ಬಿನ್ನಪವನು | ನಿಲ್ಲದಿಂತೆಂದು ಮಾಡಿದರು || ೫೪ ||

ವಸುಧೀಶ್ವರ ಕೇಳೆಮ್ಮ ಬಿನ್ನಪವನು | ಉಸುರಲಮ್ಮೆವು ನಿಮ್ಮನುಜ |
ವಸುದೇವನಾಟವ ನೋಡೆಂದು ತಂತಮ್ಮ | ಸಿಸುಗಳೆಲ್ಲವನಿಳುಹಿದರು || ೫೫ ||

ವಸುದೇವನ ರೂಪನಗೆವೊಯಿದಂತಿರ್ದ | ಸಿಸುಗಳೆಲ್ಲವ ಕಾಣುತವೆ |
ವಸುಧಾಧೀಶನೊತ್ತವೊತ್ತಿದಂತೆ ಬೆ | ಕ್ಕಸವಟ್ಟು ಸವ್ವೆರಗಾಗಿ || ೫೬ ||

ಅನುಜನಿಂತಪ್ಪ ದುಃಸ್ಥಿತಿಗೆಳಸುವನಲ್ಲ | ವೆನುತ ಮನದೊಳು ಭಾವಿಸುತ |
ಜನಪತಿಯವರನಂಜಲುವೇಡೆಂದತಿ | ವಿನಯದಿ ಬೀಳ್ಕೊಟ್ಟನಾಗ || ೫೭ ||

ಆವೋಲಗದಿಂದೆಳ್ದು ಮಂತ್ರಾಲೋಚ | ನಾವಾಸದೊಳು ಕುಳ್ಳಿರ್ದು |
ಆ ವಿಭುಮಂತ್ರಿಮುಖ್ಯರನು ಕರೆಸಿಕೊಂ | ಡಾವಾರ್ತೆಯನುಸುರಿದನು || ೫೮ ||

ಅರಸು ನುಡಿಯಲವರಿಂತೆಂದು ನುಡಿದರು | ನರನಾಥ ನಿನ್ನನುಜಾತ |
ತರಳತನದಿ ತನ್ನೆಣೆಯರಮಕ್ಕಳು | ವೆರಸಿ ಊರೊಳು ತಿರುಗುವನು || ೫೯ ||

ತಂಡತಂಡದಿ ಪರಿಹಾಸಕರನು ಕೂಡಿ | ಮಂಡಳಿಕರು ಮಂತ್ರಿಗಳ |
ದಂಡನಾಥರ ಕೇರಿಯೆನ್ನದೆ ಕುಸುಮಕೋ | ದಂಡನಂದದಿ ತಿರುಗುವನು || ೬೦ ||

ಇರುಳು ಹಗಲುಮೆನ್ನದೆಯಳ್ತಿಕಾರರು | ವೆರಸಿ ಬವಣಿಬಡುತಿರಲು |
ಪುರವನಿತೆಯರೆಲ್ಲ ಕೈಗೆಲಸವ ಬಿಟ್ಟು | ಪರಿದುಬಂದವನ ನೋಡುವರು || ೬೧ ||

ಮನೆವಾರ್ತೆಯ ದಂದುಗವನು ಮರೆದರು | ತನುಜರಿಗೆರೆಯರು ಹಾಲ |
ಇನೆಯರ ಮೇಲಣ ಭಕುತಿಯ ಬಿಟ್ಟರು | ವನಿತೆಯರೀ ಪುರದೊಳಗೆ || ೬೨ ||

ಗಂಡರ ತೋಳೊಳು ಮೈಮರೆದಿರ್ದಾ | ಪೆಂಡಿರು ಕನವರದೊಳಗೆ |
ಗಂಡುಗಳರಸನು ವಸುದೇವಕುವರನ | ಕೊಂಡುಬನ್ನಿಯೆನುತಿಹರು || ೬೩ ||

ಚಿತ್ತಜನಾವಸುದೇವಕುಮಾರನ | ಉತ್ತಮಮಪ್ಪರೂಪವನು |
ಮತ್ತಾಪುರವನಿತೆಯರಂಗದೊಳಗ | ಚ್ಚೊತ್ತಿದತಿವಿನ್ನಣದೊಳು || ೬೪ ||

ರತಿಯಿಲ್ಲದೊಡಮೇನನ್ಯಪುರುಷರೊಳು | ಮತಿಯನಿಟ್ಟಾ ಮಾನಿನಿಯರ |
ಸುತರವರಂತಾಗುವರೆಂಬ ನಾಣ್ನುಡಿ | ಯತಿಸಿದ್ಧ ಮಾಯ್ತೆಮ್ಮೂರಿನೊಳು || ೬೫ ||

ಮತ್ತಮಂತದರಿಂದಾಪೊಳಲ್ವೆಣ್ಗಳು | ಪೆತ್ತಮಕ್ಕಳ ರೂಪೆಲ್ಲ |
ಉತ್ತಮ ವಸುದೇವನ ರೂಪ ಹರಿತಂದು | ಹತ್ತಿಸಿದಂತೆಯೊಪ್ಪಿದುದು || ೬೬ ||

ಇದರಿಂದಾ ಮಾನನಿಧಿಯಮೇಲಪರಾದ | ವೊದವಿತಲ್ಲದೆ ಬಳಿಕೊಂದು |
ಹದನವಾವರಿಯೆವೆಂದಾಮಂತ್ರಿಗಳು ಭೂ | ಸುದತಿಯಾಣ್ಮನೊಳುಸುರಿದರು || ೬೭ ||

ಆ ನುಡಿಗತಿಹರುಷತಾಳಿಯಿಂತೆಂದ | ನಾ ನೃಪನೀ ದುರ್ಯಶಕೆ |
ಆನದೆ ಒಂದು ಕಾರ್ಯವ ಮಾಡಬೇಕೆಂದು | ತಾನವರನುಮತದಿಂದ || ೬೮ ||

ಆ ಮಂತ್ರಾಳೋಚನಗೃಹದಿಂದೆ | ಳ್ದಾ ಮರುದಿನದೋಲಗಕೆ |
ಪ್ರೇಮದಿನಾ ವಸುದೇವಕುಮಾರನ | ನಾ ಮಹೀಪತಿ ಕರೆಸಿದನು || ೬೯ ||

ಬಂದನುಜನ ಬೇರುವರಿದ ಸೊಬಗಿಗಾ | ನಂದದಿ ಬಿಗಿಬಿಗಿಯಪ್ಪಿ |
ಕೆಂದಳಿರ್ವಾಯ್ಗೆ ತಂಬುಲವಿತ್ತು ಕೆಲದೊಳು | ತಂದು ಕುಳ್ಳಿರಿಸಿ ಮೈದಡವಿ || ೭೦ ||

ಹಸುಳೆಯಿದೇಕೆ ನಿನ್ನೀಸುಕುಮಾರಾಂಗ | ಹೊಸೆದಹೂಮಾಲೆಯಂತಾಯ್ತು |
ನಸುನಗೆ ಮಿನುಗುವ ಮೊಗಮೇಕೆ ಪೊಗಸಿನ | ಶಶಿಯಂತೆ ಕಳೆಗುಂದಿದುದು || ೭೧ ||

ಬಿಸಿಲೊಳು ತಿರ್ರನೆ ತಿರುಗಿದ ಕಾರಣ | ಒಸೆದುನೋಡುವರ ಕಣ್ಣೀರು |
ಮುಸುಕಿದ ಕಾರಣ ನಿನ್ನ ಕೋಮಲತನು | ಹಸಗೆಟ್ಟು ಬಡಬಡವಾಯ್ತು || ೭೨ ||

ಇನ್ನಿನಿತರ ಮೇಲೆ ತಿರುಗಿದೆಯಾದೊಡೆ | ಎನ್ನಾಣೆಯೆಂದಾ ಕುವರಗೆ |
ಕನ್ನೆಯರಾದಿಯಾದಾಸುಖಪರಿಕರ | ಮಂ ನಲ್ಮೆಯಿಂ ತರಿಸಿದನು || ೭೩ ||

ಅನುಜನಮನಕೆ ತಾ ಮಾಡಿದ ಕೃತ್ಯಮೊಂ | ದಿನಿಸರಿಯಲುಬಾರದಂತೆ |
ಸನುಮನದಿಂದರಮನೆಯ ಕೆಲದ ನಂ | ದನವನದೊಳಗಿರಿಸುತವೆ || ೭೪ ||

ದಾರುಕವಲ್ಲಭೀಕರರೆಂಬೀರ್ವರು | ವೀರಭಟರ ಕಾಪನಿರಿಸಿ |
ಆರರಿಯದ ತೆರದಿಂದಿರಿಸಿದನು ಕು | ಮಾರನ ರಕ್ಷಣೆಗೆಂದು || ೭೫ ||

ತಮ್ಮಣ್ಣನೆಸಗಿದಕೃತ್ಯಮಾರಿಂ ಹೊರ | ಹೊಮ್ಮದಿರಲು ವಸುದೇವ |
ಕಮ್ಮಗಣೆಯನಂದದೊಳಾ ವನದೊಳು | ಸುಮ್ಮಾನದಿಂದಿರುತಿರಲು || ೭೬ ||

ಹರಿಸದಿನೊಂದುದಿನದೊಳಬ್ಧವಿಜಯಭೂ | ವರನವಲ್ಲಭೆ ಶಿವದೇವಿ |
ಸ್ಮರನಿಭನಾ ವಸುದೇವನರಸಿಯರ್ಗೆ | ಪರಿಮಳಮಪ್ಪವಸ್ತುವನು || ೭೭ ||

ಭಾಸಿಪ ಬಹುಮಣಿ ಪಾತ್ರೆಯೊಳಿಟ್ಟೋರ್ವ | ದಾಸಿಯ ಕೈಯೊಳು ಕಳುಹೆ |
ಆ ಸುಕುಮಾರನವಳಕಂಡು ಸರಸವ | ನೋಸರಿಸದೆ ಮಾಡಿದನು || ೭೮ ||

ಅತ್ತಿಗೆಯಾ ಶಿವದೇವಿಯ ನೇಹದ | ತೊತ್ತಾದ ಕಾರಣದಿಂದ |
ಒತ್ತಿರೋಡಾಡಿಸುತಿರೆ ಕಡುಗೋಪದಿ | ಮತ್ತವಳಿಂತಾಡಿದಳು || ೭೯ ||

ಕೋತಿಯವೊಲು ಬಂಧನದೊಳಿರ್ದೀ ಚೇಷ್ಟೆಯ | ನೇ ತೋರಿದೆಯೆಂಬವಳ |
ಮಾತಿಗೆ ಕದುಕಿಸಿದಂತಾಗೆ ವಸುದೇವ | ನಾ ತೊಳ್ತಿನ ಕೈವಿಡಿದು || ೮೦ ||

ತನ್ನ ಮುಂಗೈಯ ಕಂಕಣವನವಳಿಗಿತ್ತು | ಚೆನ್ನಾಗಿಯಾ ಪ್ರಪಂಚವನು |
ಎನ್ನೊಳು ಮರೆಸದೆ ಪೇಳೆನಲೆಂದಳು | ಮುನ್ನಾದ ಕಜ್ಜವೆಲ್ಲವನು || ೮೧ ||

ತೆರದರುಶನಮಾಗಿ ನುಡಿದ ದಾಸಿಯ ಮಾತ | ನೆರಕೇಳಿಯಾವಸುದೇವ |
ಬೆರಗಾಗಿ ತಾನಂಬುತಾಗಿದ ಹುಲ್ಲೆಯ | ತೆರನೆನೆ ಮನದೊಳು ನೊಂದು || ೮೨ ||

ನಿರ್ಮಲನಿವನೆನ್ನನುಜಾತನೆನ್ನದೆ | ಕೂರ್ಮೆಯನೊಕ್ಕಿಗಲೆನ್ನ |
ದುರ್ಮತಿಗಳ ಮಾತಿಗೆ ಸೆರೆಯಿಡುವುದು | ಧರ್ಮವೆ ಎನ್ನಗ್ರಜಗೆ || ೮೩ ||

ಪರಿದುವಂಚಿಸಿ ನಿರ್ದೋಷಿಯನೆನ್ನೀ | ಪರಿಯೊಳು ಸೆರೆಯೊಳಗಿಟ್ಟ |
ಅರಸನ ದಿಟ್ಟಿಗೆ ನೀರಬರಿಸಿ ನಾನು | ಪರಮಂಡಲಕೆಯ್ದುವೆನು || ೮೪ ||

ಅಳಿವುದೊಡಲು ಉಳಿವುದು ಕೀರ್ತಿಯಪಕೀರ್ತಿ | ಇಳೆಯೊಳು ಮನುಜರಿಗೆಂದು |
ಅಲಘುವಿಕ್ರಮಿ ಚಿಂತಿಸುವಾಸಮಯಕ್ಕೆ | ನಳಿನಬಾಂಧವನಸ್ತಮಿಸಿದ || ೮೫ ||

ಆ ರವಿಯಸ್ತಮಾನದ ಜಾವವೆರಡರ | ಘೋರಮಪ್ಪರ್ಧರಾತ್ರೆಯೊಳು |
ಧೀರಲಲಿತವಸುದೇವಕುಮಾರನಂ | ದಾರಯ್ಯದೆ ಪೊರಮಟ್ಟ || ೮೬ ||

ಪೊರಮಟ್ಟಾಪುರವನು ಪೊರವಳಲೊಳು | ಕಿರಿದಾನು ದೂರಮೆಯ್ತಂದು |
ನೆರೆಗಲಿಯದಿರದೆ ಹೊಕ್ಕನಂತಕರಾಜ | ನರಿಕೆಯ ರುದ್ರಭೂಮಿಯನು || ೮೭ ||

ಆವಬಳಿಯೊಳೆನ್ನದೆ ಕೊಂಡದಕುಂಟೆ | ಯಾ ಉರಿಯಂಥಕನೆಂಬ |
ದೇವಗೆ ಲಮಿಳ್ತುಕಾರ್ತಿಕದೊಳಗೆತ್ತಿದ | ದೀವಳಿಗೆಯ ತೆರನಾಯ್ತು || ೮೮ ||

ಮರಣಮುಖದಿ ಸಗ್ಗಕೆ ಸಂದವರನು | ನರಕಕಿಝಳಿದುಪೋದವರನು |
ಪಿರಿದಳುರ್ವಂತಾಪಾತಾಳಮಾಬಾಂ | ಬರೆಗಮೆಯ್ದಿದುದು ಚಿತಾಗ್ನಿ || ೮೯ ||

ಭೂತದ ಬೊಮ್ಮರಕ್ಕಸದ ಪಿಶಾಚದ | ಪೇತದಾಗರದ ಶಾಕಿನಿಯ |
ಬೇತಾಳರ ಮರುಳ್ಗಳ ಗೊಂದಣದಿ ರುದ್ರ | ಭೂತಳ ಭೀಕರಮಾಯ್ತು || ೯೦ ||

ಪಿತ್ತವ ಪೀರಿ ಮೂಳೆಯನು ಕಡಿದು ಕೆ | ನ್ನೆತ್ತರ ಕುಡಿದು ಮಾಂಸವನು |
ತುತ್ತುಮಾಡಿ ನರವನು ಕಾರಿ ಮರುಳ್ಗಳ | ಮೊತ್ತ ಕೊಬ್ಬಿರಿದಾಡುತಿಹುದು || ೯೧ ||

ಸಿಸುಗಳು ಬಾಯೊಳಡಿಸಿ ಸಿಡಿಮಿಡಿಗೊಂಡ | ಬಿಸಿಯಮಾಂಸವ ತೋಡಿಹಾಕಿ |
ಒಸೆದು ತಾವುಂಬ ಶೈತ್ಯದ ಬಾಡನೂಡಿ ನಂ | ಬಿಸುವ ಶಾಕಿನಿಯರೊಪ್ಪಿದರು || ೯೨ ||

ಕಳೆದ ಪಲ್ಗಳ ಕವಡೆಯಗುಪ್ಪೆಯ ಮಾಡಿ | ಬಳಿಕ ಸೋಳಹಡೊಂಪೆಯನು |
ಅಲಸದಾಡುವ ಜೂಜುಂಗಾರಮರುಳ್ಗಳ | ಬಳಗವಲ್ಲಲ್ಲಿಯೊಪ್ಪಿದುದು || ೯೩ ||

ಬಾತ ಹೆಣದ ಹೊಟ್ಟೆಯನು ಮದ್ದಳೆಮಾಡಿ | ಬೇತಾಳಗಳು ನುಡಿಯಿಸಲು |
ಓತುಮತ್ತಾಜತಿಗೆಡದೆ ಕುಣಿವುತಿಪ್ಪ | ಭೂತಗಳೊಪ್ಪಿದುವಲ್ಲಿ || ೯೪ ||

ಬಳಸಿನೋಡುವ ಭೂತಪೇತಪಿಶಾಚಂ | ಗಳ ಮಧ್ಯದೊಳು ಪಂಥಗುಡದೆ |
ಅಳುಕದೆಯಲಗುವಿಡಿದು ಕಾದುತಿರ್ದುವು | ಕಳನೇರಿ ಕೆಲ ಮರುಳುಗಳು || ೯೫ ||

ಅರವೇಯದ ಮರುಳ್ಗಳ ಕಾಲಕೊಳ್ಳಿಯಿಂ | ದರುಹಿ ಪಿತ್ತದ ಮದ್ದನೆರೆದು |
ಅರಿದು ಚಿಕಿತ್ಸೆಮಾಡುತಲಿರ್ದರಂತಲ್ಲಿ | ಯರಿಕೆಯ ವೈದ್ಯರಾಕ್ಷಸರು || ೯೬ ||

ಗಂಡರ ವಂಚಿಸಿ ಮೆಲ್ಲನೆ ಕಾವಳ | ಗೊಂಡಾರುಮರಿಯದ ತೆರದಿ |
ಮಿಂಡರ ಬಳಿಗೆ ಪಾದರಕೆ ನಡೆವ ಮರಲು | ಳ್ವೆಂಡಿರ ತಂಡಮೊಪ್ಪಿದುದು || ೯೭ ||

ಮಂಡೆಯೋಡಿನ ಸಿಪ್ಪುಗಳನು ಲಗ್ಗೆಯನೊಡ್ಡಿ | ಕೊಂಡೆರೆಯನು ಹಚ್ಚಿಕೊಂಡು |
ಸೆಂಡನಿಟ್ಟಾಡುವ ಮಕ್ಕಳ ಮರುಳ್ಗಳ | ತಂಡ ರಂಜಿಸಿತಲ್ಲಲ್ಲಿ || ೯೮ ||

ನಲಿವ ಮರುಳು ನಗುವೊತ್ತರಕೆಕ್ಕಸ | ಗೆಲೆವಶಾಕಿನಿ ಡಾಕಿನಿಯರು |
ಉಲಿವ ರಾಕ್ಷಸಕೋಟಿಯಿಂದ ರುದ್ರಭೂ | ತಳವತಿಭೀಕರಮಾಯ್ತು || ೯೯ ||

ಇಂತೆಸೆವಾ ರುದ್ರಭೂತಳದೊಳಗೆ ಕೃ | ತಾಂತದೀಕ್ಷಿತನು ಲೋಕವನು |
ತಾಂ ತವಿಸಲ್ಕಿಟ್ಟ ಮಾರಣಮುಖಕುಂಡ | ದಂತೊಂದು ಕುಂಡಮೊಪ್ಪಿದುದು || ೧೦೦ ||

ಭರದಿಂದಾ ಕೊಂಡದ ತಿಟ್ಟಿಗೆ ಬಂ | ದರಮಗ ತನ್ನ ಕೈಗೆಯ್ದ |
ವರರತ್ನಭೂಷಣಾವಳಿಯನು ತೆಗೆದೊಂದು | ಬರೆದೋಲೆಯನ್ನಲ್ಲಿರಿಸಿ || ೧೦೧ ||

ಅಲ್ಲಿಗನತಿದೂರದೊಳೊಂದು ಹೊಸಸೂಲ | ದಲ್ಲಿ ಕೀಲಿಸಿ ಜೀವವಿಡಿದ |
ಬಲ್ಲಿದನೋರ್ವ ಬೀರನ ಕೂಡೆಯದಿರದೆ | ನಿಲ್ಲದಿಂತೆಂದಾಡಿದನು || ೧೦೨ ||

ಎಲೆ ಶೂಲದ ಬೀರಕೇಳೆನ್ನಗ್ರಜ | ನೆಲ ಹೊರದಪಕೀರ್ತಿಯನು
ಅಲಸದೆಯವಿಚಾರದಿಂದೆನ್ನ ತಲೆಯೊಳು | ನೆಲೆಮಾಡಿದೆಲ್ಲರರಿಯೆ || ೧೦೩ ||

ಅಂತದರಿಂದೀ ಉರಿಗೊಂಡದೊಳು ಬೀ | ಳ್ದಂತಕಗೃಹಕೆಯ್ದುವೆನು |
ಇಂತೀ ವಾರ್ತೆಯನಿಲ್ಲಿಗೆಯ್ದಿದರೊಳು | ನೀಂ ತಳುಮಾಡದೆ ಪೇಳು || ೧೦೪ ||

ಎಂದು ಕೊರಚಿ ತನ್ನ ಹೆಸರನುಸುರಿ ಮ | ತ್ತೊಂದು ಪೆಣನ ಹಿಡಿದೆಳೆದು |
ತಂದಾಕುಂಡದೊಳಗೆ ಹಾಕಿ ವಸುದೇವ | ನಂದು ಮುಂದಕೆ ಚಿಮ್ಮಿದನು || ೧೦೫ ||

ಬೆಳಗಾಗುವ ಸಮಯಕೆ ಮೊತ್ತಮೊದಲೆ ತಾ | ನಲಘುವೇಗದೊಳೈತಂದು |
ಬಳಲದೆ ತಳಿರಡಿಗಳ ನೋವನೋಡದೆ | ಕಳೆದನು ತನ್ನ ಸೀಮೆಯನು || ೧೦೬ ||

ಇತ್ತ ಶಬಾಲಯವನು ಕಾವವರಾ | ಹೊತ್ತಾರೆಯಾ ಬಳಿಗೈದಿ |
ಮತ್ತಾಕುಂಡದ ಬಳಿಯೊಳು ಕಂಡರ | ತ್ಯುತ್ತಮಮಪ್ಪ ಭೂಷಣವ || ೧೦೭ ||

ಆ ಸಮಯದೊಳಾಕುವರನೊರೆದ ಮಾತ | ನಾ ಸಾವಿನ ವಾರ್ತೆಯನು |
ಆ ಸೂಲದ ಮೇಲಣ ಬೀರನೆಲ್ಲವ | ನೋಸರಿಸದೆ ಪೇಳಿದನು || ೧೦೮ ||

ಅರೆಬೆಂದಾ ಕೊಂಡದೊಳರಿಮುರಿಯಾಗಿ | ಉರುಳಿಬೀಳ್ದಾಶಬಗಂಡು |
ಅರಸುಮಗನದೆಂದೇ ಬಗೆದಾ ಭಟ | ರುರುತರದುಃಖವ ತಾಳಿ || ೧೦೯ ||

ಮತ್ತಾಮಣಿದೊಡವಾ ಓಲೆಯನಿರ | ದೆತ್ತಿಕೊಂಡಾ ಪುರಕೆಯ್ದಿ |
ಸುತ್ತಿದರಸುಗಳ ನಡುವಣೋಲಗದ ನೃ | ಪೋತ್ತಂಸನ ಬಳಿಗೆಯ್ದಿ || ೧೧೦ ||

ದೇವ ಚಿತ್ತೈಸು ನಿನ್ನಣುಗಿನನುಜ ವಸು | ದೇವನ ತೊಡವು ಇವೆಂದು |
ಕಾವಲರುದ್ರಭೂಮಿಯೊಳಿರ್ದವೆಂದವ | ನೋವದೆ ತಂದು ಮುಂದಿಟ್ಟು || ೧೧೧ ||

ಸೂಲದ ಮೇಲೆ ಕೀಲಿಸಿ ಜೀವವಿಡಿದ | ರ್ದಾಳಿನೊಳೊರೆದ ನುಡಿಯನು |
ಪೇಳಿಮತ್ತಾ ಓಲೆಯನೀಯಲದನೋರ್ವ | ನಾಳೋಚಿಸುತಿಂತು ನುಡಿದ || ೧೧೨ ||

ತರಳತನದಿನಳ್ತಿಯಿಂ ನಾನೂರೊಳು | ತಿರುಗಿದುದನೆ ತಪ್ಪೆಂದು |
ಪಿರಿದುಭಾವಿಸಿದಿರಲ್ಲದೆ ಪರವೆಣ್ಗೆ ಸೋ | ದರನೆಂಧು ಭಾವಿಸಿತಿಲ್ಲ || ೧೧೩ ||

ದೋಷಿಯಲ್ಲದನೆನ್ನನು ದೋಷಿಯೆಂಬಾ | ದೂಸಕರಾ ದೂರುಗೇಳಿ |
ಮೋಸವ ಮಾಡಿ ಸನ್ಮಾನದಿಂದವೆ ಮ | ತ್ತಾ ಸೆರೆವನೆಯೊಳಿಕ್ಕಿದಿರಿ || ೧೧೪ ||

ಇರುಮಟ್ಟಮೆಂದು ಚಪ್ಪರಿಸಲದಕೆ ಸುಮ್ಮ | ನಿರಬಲ್ಲವನನೀವಿಧಿಗೆ |
ಬರಿಸಿದ ಹೀಹಾಳಿಕೆಗಾಗಿ ಕೊಂಡದ | ಉರಿಯೊಳು ತನುವ ನೀಗಿದೆನು || ೧೧೫ ||

ಹಿಂದೆಯಾರಾರು ಮಾಡದ ದೋಷಮನಾ | ನಿಂದು ಮಾಡಿದೆನಾ ಫಲವೆ |
ತಂದೆನ್ನನೀಗ ತುಪ್ಪದೊಳಗೆ ಬೇಯಿಸಿ | ಕೊಂದುದು ನಿಶ್ಚಯಮಾಗಿ || ೧೧೬ ||

ಅನುಜನಳಿದನೆಂದಗ್ರಜರೆಲ್ಲರೊಂ | ದಿನಿಸುಮ್ಮಳವ ಮಾಡಬೇಡ |
ಘನದುರಿತದ ಪ್ರಾಯಶ್ಚಿತ್ತಕಾಗಿ ನಾ | ತನುವನಗ್ನಿಯೊಳು ನೀಗಿದೆನು || ೧೧೭ ||

ಎಂದಾ ಬರೆದೋಲೆಯ ಸಂಧಿವಿಗ್ರಹಿ | ಯೊಂದನಿಸುಳಿಯದೋದಿದುದ |
ಸಂದೆಗಮಿಲ್ಲದೆ ಕೇಳಲೊಡನೆ ಮೂರ್ಛೆ ಯೊಂದಿದನತಿ ಬೇಗದೊಳು || ೧೧೮ ||

ಸಿರಿಗಂಪು ಸಿರಿಪಚ್ಚೆ ಪನನೀರು ಬಿಜ್ಜಣ | ದೆಲರುಪಚಾರಗಳಿಂದ |
ಧರಣೀಪತಿ ದಿಟ್ಟಿದೆರದೀ ತೆರದೊಳು | ಹಿರಿದಾಗಿ ಹಳವಳಿಸಿದನು || ೧೧೯ ||

ಎಲ್ಲಿಯ ರಾಜ್ಯವೆಲ್ಲಿಯ ಭೋಗದಕಾಂಕ್ಷೆ | ಎಲ್ಲಿಯ ಮಹದೈಶ್ವರ್ಯ |
ಎಲ್ಲಿಯ ಸುದತೀಜನದ ಬಾಳುವೆ ನೀ | ನಿಲ್ಲದಿರಲು ವಸುದೇವ || ೧೨೦ ||

ಹಾ ವಸುದೇವ ಹಾ ಯದುಕುಲಮಣಿದೀಪ | ಹಾ ವನಿತಾಜನಮದನ |
ಹಾ ವಸುಧಾಲಂಕೃತ ಹಾಹಾ ಎಂ | ದಾ ವಿಭು ಹಳವಳಿಸಿದನು || ೧೨೧ ||

ಇನ್ನೇಕರಸುತನದ ಪಂಬಲನುಜಾತ | ನಿನ್ನನುರಿವಕೊಂಡದೊಳಗೆ |
ನನ್ನ ಕೈಯಾರೆ ಕೆಡಹಿಕೊಂದ ಪಾಪಿಗೆಂ | ಬನ್ನೆಗಮಾವೋಲಗಕೆ || ೧೨೨ ||

ಮುಕುಳಿತಮಾದನವಾಂಬುಜವನವನು | ವಿಕಸನಮಾಳ್ಪಿನನಂತೆ |
ವಿಕಲಮಾಗಿರ್ದಾಸಭೆಗರಿಂದಮನೆಂ | ಬಕಲಂಕಮುನಿಯೆಯ್ದಿದನು || ೧೨೩ ||

ಬಂದಾಮುನಿ ತನಗೆರಗಿದನೊಳಗಿಂ | ತೆಂದನೆಲೇನರನಾಥ |
ಕಂದರ್ಪರೂಪನು ಕೆಲವಾನು ದಿವಸಕ್ಕೆ | ಬಂದು ನಿನ್ನೆಡೆಗೆಯ್ದುವನು || ೧೨೪ ||

ಬೇವುದುಪುಸಿವಹ್ನಿಯೊಳಕೊಳ್ಳನಾಸ್ವಾ | ಹಾವಧು ತನ್ನೋಪವಳು |
ಆ ವಸುದೇವನ ರೂಪಿಗೆ ಸೋಲ್ವಳೆಂ | ಬಾವಿಶಂಕಾಭಾವದಿಂದ || ೧೨೫ ||

ಎಂದು ನುಡಿದು ನರನಾಥನ ಚಿತ್ತದ | ಸಂದೇಹವ ಪರಿಹರಿಸಿ |
ಹೊಂದಿಸಿ ಮನಕೆ ಮುದವನಾ ಮುನಿಯ | ಲ್ಲಿಂದ ಪೋದನು ಬಳಿಕಿತ್ತ || ೧೨೬ ||

ವಸುದೇವನೆಲ್ಲಾ ಜನಪದವನು ಹೊಕ್ಕು | ಕುಸುಮಶರನ ಬೀಡೆನೆಸಿ |
ಎಸೆವ ವಿಜಯಖೇಟಮೆಂಬ ನಗರಿಯರಂ | ಜಿಸುವನಂದನವನಕೆಯ್ದಿ || ೧೨೭ ||

ಆ ವನಲಕ್ಷ್ಮಿಯ ಮಧ್ಯದೊಳೆಸೆವ ನಾ | ಭೀವಲಯದ ತೆರನಾದ |
ತಾವರೆಗೊಳದೊಳಗಡಿಗಿಸಿದನು ಮೈ | ತೀವಿದ ಪಥಪರಿಶ್ರಮವ || ೧೨೮ ||

ಆ ವನಜಾಕರದೊತ್ತಿನೊಳೊಂದೆಳೆ | ಮಾವಿರಲಲ್ಲಿಗೆಯ್ತಂದು |
ಸೇವಂತಿಯೆಸಳ ಪಚ್ಚಡಿಸಿಯೊರಗಿದನು | ಭೂವನಿತೆಯನಪ್ಪುವಂತೆ || ೧೨೯ ||

ಒಂದುಜಾವಪರ್ಯಂತರ ನಿದ್ರಾ | ಸುಂದರಿಯೊಳು ಮೈಮರೆದು |
ಒಂದಿದ ಸುಖದಿಂದ ತನ್ನ ತಾನರಿಯದೆ | ಕಂದರ್ಪನಿಭನು ಕೂಡಿರಲು || ೧೩೦ ||

ಹರಿಣಲೋಚನೆಯರೀರ್ವರು ತಮ್ಮ ಕೋಮಲ | ತರಪದಯುಗಪದ್ಮಂಗಳನು |
ಹರಿಸದಿನೊತ್ತುವ ಕನಸುಗಂಡಾ ನಿದ್ರೆ | ಹರೆಯಲು ರಾಜನಂದನಗೆ  || ೧೩೧ ||

ಕನಸಿನಿತಾಯಿತ್ತೆಂಬಂತೀರ್ವರು | ವನಿತೆಯರು ಪಜ್ಜೆಗಳನು |
ಮಿನುಗುವ ತೊಡೆಯ ಮೇಲಿಟ್ಟು ಒತ್ತಿದರಾ | ವನಜೋಪಮಕರದಿಂದ || ೧೩೨ ||

ಆ ವಧುಗಳ ಕಡೆಗಣ್ಗಳಬೆಳ್ವೆಳ | ಗಾವರಿಸಲು ವಸುದೇವ |
ಭೂವರ ಕಣ್ದೆರೆದನು ಜೊನ್ನಗಂಡಿಂ | ದೀವರವೆಂಬ ಮಾಳ್ಕೆಯೊಳು || ೧೩೩ ||

ಗಾಡಿಕಾತಿಯರ ಕತನದಿಂದಲೆ ನಮ್ಮ | ನಾಡು ಬೀಡೆಲ್ಲವ ಬಿಟ್ಟು |
ಓಡಿಬಂದರೆ ಬೆನ್ನಬಿಡದೆಯ್ದಿ ಬಂದೆನ್ನ | ಕಾಡಿಕಾಲ್ವಿಡಿದರೆಂದಾಗ || ೧೩೪ ||

ಮೊಗದೊಳು ನಾಂಟಿದ ದಿಟ್ಟಿದೆಗೆಯದಾ | ಸೊಗಯಿಪ ಕಣ್ಣೊಡವರಿದು |
ಮಿಗೆನಾಂಟಿದ ಮನವನು ತೆಗೆಯದೆ ಕಾಲ | ತೆಗೆದನವರ ತೊಡೆಯಿಂದ || ೧೩೫ ||

ಅದನರಿದವರ ಕೆಳದಿ ಚಿತ್ರಲತೆಯೆಂಬ | ಮದವತಿ ತಲೆದೆಸೆ ನಿಂದು |
ಮೊದಲಲರ್ವಿಜ್ಜಣಿಗೆಯ ಬೀಸುತವನೊಳ | ಗೊದವಿನುಡಿದಳಿಂತೆಂದು || ೧೩೬ ||

ಲಜ್ಜೆಯಿದೇಕೆ ಕಾಲ್ದೆಗೆದಪೆ ಸುಕುಮಾರ | ಕಜ್ಜಳಾಕ್ಷಿಯರರಂಜಿಸುವ |
ಪಜ್ಜೆಗಳನು ಮುಂದಕೆ ನಿನ್ನ ಕೈಯಿಂದ | ಸಜ್ಜುಕಸರನೊತ್ತಿಸುವನು || ೧೩೭ ||

ಎಂದು ನುಡಿದ ಚಿತ್ರಲತೆಯ ನುಡಿಗೆ ಮನ | ದಂದಾ ವಸುದೇವಕುವರ |
ಸುಂದರಿಯರು ಕಾಲನೊತ್ತುವತೆರನೇ | ನೆಂದುಕೇಳಲು ಪೇಳ್ದಳಂತು || ೧೩೮ ||

ಈ ಪುರವರದ ಮಹೀಪತಿ ಜಿತಶತ್ರು | ಗೀ ಪೆಣ್ಮಣಿಗಳು ಪುಟ್ಟಿದರು |
ರೂಪುಕಲಾಪರಿಣತೆಯೊಳು ತಮಗೆ ತಾ | ಮೇ ಪಡಿಯಾಗಿ ರಂಜಿಸುತ || ೧೩೯ ||

ಈಯಂದದಿನೊಪ್ಪುವ ಜಯೆ ವಿಜಯೆಯೆಂ | ಬಾಯಾತಾಕ್ಷಿಯರಿಗುತ್ತಮದ |
ಪ್ರಾಯವೇರಲು ಕಾಣುತ ಕರೆಸಿದನಾ | ರಾಯನೋರ್ವಶಕುನಿಗನ || ೧೪೦ ||

ಕರಸಿದ ನೈಮಿತ್ತಕನೊಳಗಿಂತೆಂ | ದೊರೆದನೆಮ್ಮೀಸುತೆಯರಿಗೆ |
ವರನೆಂತಪ್ಪನಾಗುವನೆನೆ ಕೇಳ್ದಾ | ದರದಿ ನುಡಿದವನವನಿಂತು || ೧೪೧ ||

ಈ ಊರವನದಕೊಳದ ತೀರದ ಸಸಿ | ಮಾವಿನಮರದ ಮೂಲದೊಳು |
ಭೂವರನೋರ್ವನು ಬಂದೊರಗುವನವ | ನೀಔನಿತಾಮಣಿಗಳನು || ೧೪೨ ||

ನವವಿಧ ಸಂಗೀತದ ಸುಪ್ರಪಂಚಸಿ | ವಿವರಿಸಿಗೆಲುವನಂದವಗೆ |
ಇವರುರುತರ ಹರುಷದಿ ಮಾಲೆ ಸೂಡುವ | ರವನೀತಳಲಮರಿವಂತೆ || ೧೪೩ ||

ಇಂದುವದನೆಯರಿಗಿದು ಸಿದ್ಧಾದೇಶ | ವೆಂದೊರೆದನ ನುಡಿಗೇಳಿ |
ಅಂದಿಂದೀನಂದನವನದೊಳು ಕಾಪ | ತಂದಿಟ್ಟನೆಮ್ಮ ಭೂವರನು || ೧೪೪ ||

ಬಲ್ಲಿದರಾಣೆಯಿಡಲು ಮೀರದಂತೆ ನೀ | ನಿಲ್ಲಿಗೆ ಬಂದೊರಗಿರಲು |
ಇಲ್ಲಿರ್ದ ಕಾವಲವರು ನಮ್ಮರಸಿಗೆ | ನಿಲ್ಲದೆ ಪೇಳಲೈದಿದರು || ೧೪೫ ||

ಆ ಶಕುನಿಗನ ಮಾತನು ಕೇಳಿದಂದಿಂ | ದೀಸುದತಿಯರೀ ವನದೊಳು |
ಬೇಸರದಾತುರದಿಂ ವನಸತಿಯರ | ಪಾಸಟಿಯಂತಿರುಹರು || ೧೪೬ ||

ಇಂದು ನೀನಾಪಾಂಥಶ್ರಮದಿಂದಲ್ಲಿ | ಕಂಪರ್ದನಂತೊರಗಿರಲು |
ಸುಂದರಿಯರು ನಿನ್ನ ಕಾಲಾಸರು ಕೆಡ | ಲೆಂದು ನಲ್ಮೆಯೊಳೊತ್ತಿದರು || ೧೪೭ ||

ಇಂತಿದಕೇನು ಕುಮಾರ ನಿನಗೆ ಲಜ್ಜೆ | ಕಾಂತೆಯರುಗಳನ್ಯರಲ್ಲ |
ಸಂತಸದಿಂದ ಕಾಲ್ಗಳನೀಡಿದೊಡೆ ನೋ | ವ ತವಿಸುವರು ಎಂಬಾಗ || ೧೪೮ ||

ಸುರಪತಿವಿಭವದಿಂದಾ ಜಿತಶತ್ರುಭೂ | ವರನಾನಂದನಕೆಯ್ದಿ |
ಹರಿಸದಿನಾ ವಸುದೇವನ ಕಂಡಾ | ದರವನು ಪಿರಿದಾಗಿ ಮಾಡಿ || ೧೪೯ ||

ಅರಮನೆಗೊಡಗೊಂಡು ಪೋಗಿ ಸತ್ಕರಿಸಿ ಬಂ | ಧುರಬಂಧುಕಾಧರೆಯರ |
ಸುರುಚಿರ ಸಂಗೀತ ಪ್ರಪಂಚಮನೀ | ನಿರದೆ ಪರೀಕ್ಷಿಸಿಮೆನಲು || ೧೫೦ ||

ಆ ವಸುದೇವನವರ ಸಂಗೀತದಿ | ನೋವದೆ ಗೆಲಲಾತುರದಿ |
ತೀವಿದೊಲವಿನಿಂದವನ ಕಂಧರದೊಳು | ಪೂವಿನಮಾಲೆ ಸೂಡಿದರು || ೧೫೧ ||

ಅಂದಿನದಿನದ ಮುಹೂರ್ತದೊಳಾವಿಭು | ಕಂದರ್ಪದೇವ ಸನ್ನಿಭಗೆ |
ಇಂದುಮುಖಯರೀರ್ವರು ತನುಜೆಯರನಾ | ನಂದದಿ ಮದುವೆ ಮಾಡಿದನು || ೧೫೨ ||

ಈ ತೆರದಿಂದ ಮದುವೆ ಮಾಡಿಯಾ ತನು | ಜಾತೆಯರ್ಗರ್ಧರಾಜ್ಯವನು |
ಪ್ರೀತಿಯಿಂದೀಯಲಂತರೊಳಗಾ ವಿ | ಖ್ಯಾತನೊಸೆದು ಕೂಡಿದನು | ೧೫೩ ||

ಗಿರಿಸುತೆ ಗಂಗಾಸುದತಿಯರೊಳಗಿಂದು | ಧರನೊಲವಿಂ ಕೂಡಿದಂತೆ |
ಗರುವೆಯರವರೀರ್ವರೊಳು ಕೂಡಿದನಾ | ವರಗುಣನಿಧಿ ವಸುದೇವ || ೧೫೪ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದಾಶ್ವಾಸಗಳೆಂಟು || ೧೫೫ ||

ಎಂಟನೆಯ ಸಂಧಿ ಸಂಪೂರ್ಣಂ