ಅನ್ನಿಗ ನಾನಲ್ಲ ನಿನ್ನ ಸೋದರಮಾವ | ನನ್ನೊಳು ಪದಿನಾರು ಕೋಟಿ |
ಹೊನ್ನೆದೆಯದನು ಕೈಕೊಂಡು ಭೋಗಿಸು ನೀನು | ಮುನ್ನಿನಂದದೊಳು ಚೆನ್ನಾಗಿ || ೧೬೧ ||

ಎನಗೆ ಗಂಡುಮಗುನಾಗಿ ಮಿತ್ರಾವತಿ | ತನುಜೆಯವಳು ನಿನ್ನ ರಮಣಿ |
ಅನಿತರಿಂದಾವೊಡವೆಗೆ ನೀನೇ ಕರ್ತೃ | ವೆನಲಾನುಡಿಗಿಂತು ನುಡಿದ || ೧೬೨ ||

ತಂದೆ ಗಳಿಸಿದ ವಿತ್ತವನು ಕೆಡಿಸಿ ತನ್ನ | ಮಂದಿರವನು ಮಾರುಗೊಟ್ಟು |
ಬಂದು ಮಾವನ ಮನೆಯೊಡವೆಗೊಡೆಯನಾಗಿ ನಿಂದೆನೆಂಬಪಕೀರ್ತಿಯನು || ೧೬೩ ||

ತಳೆದು ಜೀವಿಪನಲ್ಲವದರಿಂದ ಪರಮಂ | ಡಲಕೆಯ್ದಿ ಬಹುವಿತ್ತವನು |
ಗಳಿಸಿ ಬಂದೊಡೆ ನಿನ್ನ ಜಾಮಾತೃವಲ್ಲದೊ | ಡಿಳಿಗೆ ನಾನೇ ಭಾರಕನು || ೧೬೪ ||

ಇದಕೆ ಸಂಶಯವೇತಕೆ ಮಾವ ಎನಲೆಂದ | ನದುಲೇಸಾವ್ಯವಹರಕೆ |
ಮೊದಲಬಂಡವಕೊಂಡು ಪರದುಗೆಯ್ಯೆನಲಂ | ತದಕೆ ಮುಗುಳ್ನಗೆ ನಗುತ || ೧೬೫ ||

ಪರದುಗೆಯ್ವೊಡೆ ಬಂಡ ಮೊದಲು ಬೇಡುವನವ | ಪರದರ ಮಗನೆ ಸಂಗರಿಕೆ |
ನೆರವ ಹಾರುವವ ವಿಕ್ರಮಿಯೇಯೆಂದು | ಪರಮಾರ್ಥವೆಂದೊಡಂಬಡಿಸಿ || ೧೬೬ ||

ಮಾತೆಯ ಮೃದುಪದಯುಗಕೆ ಮಣಿದು ನಿಜ | ಮಾತುಳನಡಿಗಿಟ್ಟು ಹಣೆಯ |
ಪ್ರೀತಿಯಿಂ ಮಿತ್ರಾವತಿಯ ಸಂತೈಸಿ ವಿ | ಖ್ಯಾತನವ್ಯಗ್ರಹೃದಯವನು || ೧೬೭ ||

ಪೊರಮಟ್ಟುಮನೆಯನು ದಕ್ಷಿಣದೆಸೆಗಾಗಿ | ಕಿರಿದುದೂರಕೆ ನಡೆತಪ್ಪ |
ಮರುದಿನದೊಳು ಮಾತುಳಸಿದ್ದಾರ್ಥನು | ಮರುಕದಿ ಬಂದುಕೂಡಿದನು || ೧೬೮ ||

ಸಿದ್ಧಾರ್ಥನತಿಸಿದ್ಧ ಪುರುಷಾರ್ಥನಾಸುಪ್ರ | ಸಿದ್ಧನುಚಾರುದತ್ತನೊಳು |
ಬದ್ಧನಾಗಲು ತಾಮೀರ್ವರು ನಡೆದೊಂ | ದುದ್ದತವನವನೆಯ್ದಿದರು || ೧೬೯ ||

ಆ ವನದೊಳು ದಿವ್ಯಮೂಲಿಕೆಗಳ ಕಿಳ್ತು | ತಾಮೀರ್ವರು ಪೊರೆಗಟ್ಟಿ |
ಓವದೆ ಪೊತ್ತು ಪಲಾಶವೆಸರ್ಪಡೆ | ದಾ ಊರಿಗಿರದೆಯ್ದಿದರು || ೧೭೦ ||

ಅದರೊಳದನು ವಿಕ್ರಮ ಮಾಡಿ ಬಳಿಕಾ | ಮೊದಲಿಂ ಜವಳಿಯ ಕೊಂಡು |
ಅದನೊಂದು ಮನೆಯೊಳಗಿರಿಸಲಂತದು ಬೇಯ | ಲದಕೆ ವಿಸ್ಮಯಚಿತ್ತರಾಗಿ || ೧೭೧ ||

ಮತ್ತೆ ಕೆಲರು ಪರದರ ಕುಡಿಯಾವೈ | ಶ್ಯೋತ್ತಂಸನೊಂದು ಪರ್ವತದ |
ತುತ್ತತುದಿಯನೇರಿಯಾಗುಹೆಯೊಳಗೆ | ತ್ಯುತ್ತಮಮಪ್ಪ ರತ್ನವನು || ೧೭೨ ||

ಅಗೆದು ಪೊರಯನವರೊಳು ಕಟ್ಟಿಸಿಕೊಂಡು | ಮಿಗೆ ಹರಿಸದಿ ಬಪ್ಪಾಗ |
ನಗರದ ಬೇಡರು ದಾರಿದಾಗಲವರನು ಸಾ | ಸಿಗೆನೆಬ್ಬಟ್ಟಿಯೋಡಿಸುತ || ೧೭೩ ||

ಮತ್ತೊಂದು ಪುರಕೆಯ್ದಲದರೊಳು ವಾಸವ | ದತ್ತನೆಬೋರ್ವನು ಕಂಡು |
ಚಿತ್ತಶುದ್ಧಿಯೊಳಿದಿರ್ವಂದತಿ ಸಮ್ಮದ | ವೆತ್ತು ಮನೆಗೆ ಕೊಂಡು ಪೋಗಿ || ೧೭೪ ||

ಸದುವಿನಯದೊಳತ್ಯುಪಚಾರವ ಮಾಡಿ | ತದನಂತರದೊಳವರಿಗೆ |
ಒದವಿದವಸ್ಥೆಯೆಲ್ಲವ ಕೇಳಿ ಮನದೊಳು | ಬೆದೆಬೆದೆ ಬೇವುತಿಂತೆಂದ || ೧೭೫ ||

ಸನ್ನುತಗುಣಭೂಷಣ ಚಾರುದತ್ತ ಕೇ | ಳ್ನಿನ್ನ ಜನಕ ಭಾನುದತ್ತ |
ಎನ್ನೊಳಗೆರಮಿಲ್ಲದಿರ್ಪನಂತದರಿಂ | ದೆನ್ನಮನೆಯವಿತ್ತವನು || ೧೭೬ ||

ತೆಗೆದುಕೊಳ್ಳೆನಲಿಂತೆಂದನು ಜಲಯಾ | ತ್ರೆಗೆ ತಕ್ಕುದ್ಯೋಗವನು |
ನೆಗಳಿಸಿಮೆನೆ ಪಡಗಿನಸಮಕಟ್ಟಿನು | ಜ್ಜುಗವನೆಸಗಿಕೊಟ್ಟನಾಗ || ೧೭೭ ||

ತವಕದಿನಂದಾಜಲಯಾತ್ರಾಪಾ | ತ್ರವನೇರಿಯಾಶರಧಿಯೊಳು |
ಸುವಿವೇಕಿ ನಡೆದುಬಂದೊಮತ್ತಮ ದ್ವೀ | ಪವಸಾರಿ ಚತುರತೆಯಿಂದ || ೧೭೮ ||

ತನ್ನ ವಶದೊಳಿರ್ದರನ್ನದ ಮೊದಲಿಂ | ಚೆನ್ನಾಗಿ ಬೆವಹಾರ ಮಾಡಿ |
ಪನ್ನೆರಡಬ್ದ ಕಳೆವ ಪರಿಯಂತರ | ತ್ಯನ್ನತಮಪ್ಪ ವಸ್ತುವನು || ೧೭೯ ||

ಮುನ್ನ ಕೆಡಿಸಿದ ವಿತ್ತಕೆ ಪಾಸಟಿಯಾದ | ಹೊನ್ನ ಗಳಿಸಿ ಹಡಗೇರಿ |
ಮನ್ನೀರ ಬಟ್ಟೆಯೊಳಗೆ ಬರುತಿರಲಾ | ಮುನ್ನಿನ ಕೃತಪಾಪಫಲದಿ || ೧೮೦ ||

ಪ್ರಳಯಪವನನಂದದಿನೊಂದು ಸುಂಟುರೆ | ಸುಳಿದಾ ಭೈತ್ರವನಿರದೆ |
ತಳಹೊಳಗೊಳಿಸಿ ಮತ್ತಾಕೂವಂಕಂಬಮ | ಸುಳಿಯದೆ ಮುರಿದು ಹಾಕಿದದು || ೧೮೧ ||

ಹಡಗೊಡೆದಾ ವೇಳೆಯಗಂಡು ನಾವಂದು | ಹಡೆದ ದುರಿತವಶಮೆನುತ |
ಕಡುಗಲಿಯಾ ಜಾರುದತ್ತನು ಸಿದ್ಧಾರ್ಥ | ನೊಡಗೂಡಿ ನಿಶ್ಚಲವಾಗಿ || ೧೮೨ ||

ಹಿಡಿದು ಪ್ರಮಾದಪಲಕವನು ಬೇಗದಿ | ಕಡಲೊಳು ಬೀಳ್ದೆಯ್ತರುತ |
ದೃಢಧೀರ ಚಾರುದತ್ತನದೊಂದು ಕುರುವದ | ಕಡೆಗಾಗಿ ಸೇರಿದನಾಗ || ೧೮೩ ||

ಅಯೆಡೆಯೊಳು ಮೂರುದಿನ ತಡೆಗೈದಾ | ವಾಯುವಶದಿನಲ್ಲಿಂದ |
ಒಯ್ಯಾರದಿಂ ಬಂದು ಶಂಬರಿಯೆಂಬೂರ್ಗೆ | ಕಾಯಜನಿಭನು ಸೇರಿದನು || ೧೮೪ ||

ಅದರೊಳು ಧನದತ್ತನೆಂಬ ವಣಿಗ್ವರ | ನಿದಿರ್ವಂದು ಚಾರುದತ್ತನನು |
ಸದುವಿನಯದೊಳೊಡಗೊಂಡು ಮನೆಗೆ ಪೋಗಿ | ಒದವಿದ ಸತ್ಕಾರದಿಂದ || ೧೮೫ ||

ಹಿಂದಿ ನಿಮ್ಮಯ್ಯನೆನ್ನೊಳು ತನ್ನಾಪತ್ತಿ | ಗೆಂದು ಷೋಡಶಕೋಟಿ ಹೊನ್ನ |
ತಂದಿರಿಸಿದನದರೊಳು ಮೊನ್ನೆ ಸಿದ್ಧಾರ್ಥ | ಬಂದೆಂಟುಕೋಟಿ ವಿತ್ತವನು || ೧೮೬ ||

ಕೊಂಡು ಚಂಪಾಪುರಕೆಯ್ದಿದನುಳಿದುದ | ಕೊಂಡ ನೀನೆಯ್ದೆನಲಾಗ |
ಗಂಡುಗಳರಸನಾ ಚಾರುದತ್ತನು ಮನ | ಗೊಂಡಾವಸ್ತುವ ತರಿಸಿ || ೧೮೭ ||

ಆ ನಾಡೊಳಗಿರ್ದ ಬಸದಿಗಳೆಲ್ಲಕೆ | ದಾನಶಾಲೆಯ ವೆಚ್ಚವನು |
ಸಾನುರಾಗದಿ ಮಾಡುತಿರೆ ಪೊಗಳಿದುದು ಮ | ತ್ತಾನಗರಿಯ ಜನಮೆಲ್ಲ || ೧೮೮ ||

ಒಡವೆಯ ಕೆಡಿಸಿ ಮನೆಯ ಮಾರಿ ಪರದೇಶ | ವಡೆದು ಬಳಿಕ ಹಡಗೊಡೆದು |
ಕಡುಗೇಡುವಡೆದು ಬಳಿಕಮೀವಗುಣವನು | ಬಿಡದಾದನಾ ಚಾರುದತ್ತ || ೧೮೯ ||

ಎಂದು ನಗರಿಯೆಲ್ಲಮೆಲ್ಲನುಲಿವುತಿರ | ಲಂದಾತನವಿತರಣದ |
ಅಂದವನೀಕ್ಷಿಪೆನೆಂದು ವೀರಪ್ರಭ | ನೆಂದೆಂಬ ಯಕ್ಷನದೋರ್ವ || ೧೯೦ ||

ಆ ಊರ ಪೊರವೊಳಲೊಳಗೆ ರಂಜಿಸುವ ಜಿ | ನಾವಾಸದ ಮಂಟಪದೊಳು |
ತೀವಿದ ವೈಕುರ್ವಣದಿಂದ ಬಲ್ಗ್ರಹ | ವಾವರಿಸಿದ ಮಾಳ್ಕೆಯೊಳು || ೧೯೧ ||

ಕೆಡದಿರ್ದು ಮತ್ತೋರ್ವನನು ನಿರ್ಮಿಸಿಯೂರ ಕಡೆಗಾಗಿ | ಕಳಹಲಂದವನು |
ಕಡುವೇಗದಿ ಬಂದು ನೆರೆದಿರ್ದ ಪುರಜನ | ದೊಡನಿಂತೆದಾಡಿದನು || ೧೯೨ ||

ಎನ್ನೊಡೆಯನು ವಿಕ್ರಮಾಂಕನೆಂಬಾತನು | ನಿಮ್ಮೂರ ಬನದ ಬಸದಿಗೆ |
ಸಮ್ಮದದಿಂ ಬರಲವನನು ಬಲ್ಗ್ರಹ | ನೆಮ್ಮಹುದತಿವೇಗದೊಳು || ೧೯೩ ||

ಅದು ಮಾನವರಕ್ತವ ಬಲಿಯನು ಬೇಡು | ತ್ತೆದೆಯದ ತಡೆಯದೆ ಕೊಡುವ |
ಅಧಟರುಂಟೆಯೆಂಬ ನುಡಿಗೇಳಿ ಪುರಜನ | ಪೊದವಿದ ಮೌನದೊಳಿರಲು || ೧೯೪ ||

ಆ ನುಡಿಯನು ಕೇಳಿ ಹರುಷಹೃದಯನಾಗಿ | ಭೂನುತನಾ ಚಾರುದತ್ತ |
ತಾನವನೊಡಗೂಡಿಯಾ ವಿಕ್ರಮಾಂಕನಿ | ರ್ದಾನಂದನಕೆಯ್ದಿದನು || ೧೯೫ ||

ಬಸದಿಗೆ ಬಂದು ನಿರ್ಭರಭಕ್ತಿಯಿಂದಾ | ಕುಸುಮಕೋದಂಡಮರ್ದನನ |
ಒಸೆದು ವಂದಿಸಿ ಪಲತೆರದಿಂದ ಪೂಜಿಸಿ | ಯಸವಸದಿಂದ ಪೊರಮಟ್ಟು || ೧೯೬ ||

ಬರುತಾಗ್ರಹವಾವರ್ತಿಸಿದಾತನ | ಪಿರಿದು ಕರುಣದಿಂದ ನೋಡಿ |
ವರಮಂತ್ರತಂತ್ರಯಂತ್ರಗಳನತ್ಯಾ | ದರದಿ ಮಾಡಲು ಬಿಡದಿರಲು || ೧೯೭ ||

ಅದರಿಂದಿವನಸುವನು ಕಾವೆನೆಂದಾ | ಸದಮಲಗುಣಿ ತನ್ನ ಬರಿಯ |
ಪದೆದು ತಿವಿದುಕೊಂಡಾ ತನ್ನ ರಕ್ತಮ | ನದಿರದೆ ಬಲಿಗೊಟ್ಟನಾಗ || ೧೯೮ ||

ಆ ವೇಳೆಯೊಳಾಗಾಯ ಸೊರಗಿ ಮೂರ್ಛೆ | ಯಾವರಿಸಲು ನೆಲಕೊರಗಿ |
ಆ ವೀರ ವಿರತಣಗುಣಿಮಣಿಭೂಷಣ | ನಾ ವಿಧಿಯನು ನಡೆನೋಡಿ || ೧೯೯ ||

ಅನಿತರೊಳಾದೇವನಾವಿಗುರ್ವಣೆಯನೊಂ | ದಿನಿಸುವೇಗದಿ ಪರಿಹರಿಸಿ |
ಅನುರಾಗದಿಂ ಬಂದಾ ಚಾರುದತ್ತನ | ಘನತರಮಪ್ಪ ಮೂರ್ಛೆಯನು || ೨೦೦ ||

ಪರಿಹರ ಮಾಡಿ ಬಳಿಕ ಗುಣನಿಧಿಯ ಕಿ | ಬ್ಬದಿಯಗಾಯವ ಮಾಣಿಸುತ |
ಉರು ಮುದದಿಂ ತನ್ನ ದಿವ್ಯರೂಪವ ತೋರಿ | ಪಿರಿದು ಮೆಚ್ಚುತ್ತಾ ದೇವ || ೨೦೧ ||

ಪುರುಷಾರ್ಥಮಾಗಿ ತನುವನಿತ್ತುತ್ತಮ | ಪುರುಷ ನಿನಗೆ ಭೂತಳದೊಳು |
ಸರಿಯಪ್ಪವರನು ಕಾಣೆನೆನುತ ನುಡಿ | ದರಲಮಳೆಯನುಕರೆದು || ೨೦೨ ||

ಹೊನ್ನ ಮಳೆಯನು ಸುರಿದು ಬಳಿಕಾದೇವ | ನುನ್ನತಗುಣಿ ಬೀಳ್ಕೊಂಡು |
ತನ್ನ ನೆಲೆಗೆ ಪೋಗಲಿತ್ತ ಸೌಭಾಗ್ಯಸಂ | ಪನ್ನನಲ್ಲಿಯ ಕಾಂಚನವನು || ೨೦೩ ||

ನಾಡು ಬೀಡಿನೊಳುಳ್ಳ ವರದಾರಿದ್ರವೆ | ಲ್ಲೋಡುವಂದದಿ ದಾನಗೆಯ್ದು |
ರೂಢಿವಡೆದು ತತ್ಪುರದಿಂ ಬಂದೊಂದು | ಕಾಡೊಳು ತಾಪಸಾಶ್ರಮಕೆ || ೨೦೪ ||

ಬರಲಲ್ಲಿ ಲೋಹಿತಾಂಬಕನೆಂಬವನೋರ್ವ | ಗೊರವನೀಕ್ಷಿಸಿ ತನ್ನ ಮನೆಗೆ |
ಹರುಷದಿನೊಡಗೊಂಡು ಬಂದು ಬಳಿಕಮುಪ | ಚರವ ಮಾಡುತಮಿಂತುನುಡಿದ || ೨೦೫ ||

ಮನಸಿಜನಿಭರೂಪ ಚಾರುದತ್ತನೆ ಕೇ | ಳೆನಗೊಂದು ರಸವಿದ್ಯೆಯುಂಟು |
ಅನುವಾಗಿಯದನೆಸಗುವರೆ ಸಹಾಯಿಗ | ಳನು ಕಾಣೆನಾನಿಂದುವರ || ೨೦೬ ||

ಎನೆ ಚಾರುದತ್ತನಿಂತೆದನೀ ವಿದ್ಯೆಗೆ | ಮನದೆಗೊಂಡೊಡಗೂಡುವೆನು |
ನಿನೆಗೆಂಬಾ ನುಡಿಯನು ಕೇಳಿ ಹರುಷದಿ | ಮೆನಯಿಂ ಪೊರಮಟ್ಟು ಬಂದು || ೨೦೭ ||

ಉರುತರಮಪ್ಪೊಂದು ಕೂಪದಲ್ಲಿಗೆ ಬಂದು | ವರಸಿದ್ಧರಸಮಿದರೊಳಗೆ |
ಪರಿಪೂರ್ಣಮಾಗಿದೆಯಿದನು ತೆಗೆಯಬೇಕು | ತರುಣ ನೀ ಪೊಗುವೊಡಸಾಧ್ಯ || ೨೦೮ ||

ನೀನಿಲ್ಲಿರು ನಾನೀಕೂಪವ ಹೊಕ್ಕು | ಮಾನಿತಮಪ್ಪೀರಸವ |
ಆನದೆತಹೆನೆಂಬುದ ಕೇಳಿ ನಸುನಕ್ಕು | ನಾನೆ ಹೋಗುವೆನೆಂದೆನಲು || ೨೦೯ ||

ಆ ನುಡಿಗತಿ ಹರ್ಷಿತನಾಗಿ ಭೌತಿಕ | ತಾನಿಂತೆಂದಾಡಿದನು |
ಆ ನೇಣವಿಡಿದು ಬಾವಿಯ ಹೊಕ್ಕು ರಸದೊಳು | ನೀ ನಿನ್ನ ಕೈಗಳನಿಡದೆ || ೨೧೦ |

ಸುರುಚಿತಮಪ್ಪಾಸಿದ್ಧರಸಮನೀ | ಸೋರೆಗುಂಡಿಗೆಯೊಳು ತುಂಬಿ |
ಕರತಳವನು ಸೋಂಕಿಸದೀ ಹಗ್ಗಕೆ | ಭರದಿಂದ ಕಟ್ಟಿಯಲುಗಲು || ೨೧೧ ||

ಒಂದು ಸೂಳೀಸಿದ್ಧರಸವ ತೆಗೆದು ಮ | ತ್ತೊಂದು ಸೂಳೀ ಹಗ್ಗವನು |
ಕಂದರ್ಪನಿಭ ನಿನಗಿಳಿಯ ಬಿಡುವೆನಿದ | ರಿಂದ ಮೇಲಕೆ ನೀನೆಯ್ದು || ೨೧೨ ||

ಎನಲಾ ಮಾತನು ಕೇಳಿಯಂತೇಗೆಯ್ವೆ | ನೆನುತಾ ಹಗ್ಗವಹಿಡಿದು |
ಅನುಮಾನಿಸದಾ ಘನಕೂಪವ ಹೊಕ್ಕು | ಇನಿಸು ವೇಗದೊಳತಿ ಮುದದಿ || ೨೧೩ ||

ಗೊರವ ಹೇಳಿದಮಾಳ್ಕೆಯೊಳಾ ರಸವನು | ಸೋರೆಯ ಗುಂಡಿಗೆಯೊಳು ತುಂಬಿ |
ಭರದಿಂದಾ ಹಗ್ಗದ ತುದಿಯೊಳು ಕಟ್ಟಿ | ಪರಿದಾಗಿಯಲುಗಾಡಿಸಿದನು || ೨೧೪ ||

ಆ ನೇಣನು ತೆಗೆದಾರಸವನು ಕೊಂ | ಡಾನೆಲೆಯಿಂದಾ ಪಾಪಿ |
ಆನದೆ ಪೋಗಲೊಂದೆರಡು ಗಳಿಗೆಯೊಳ | ಗಾನೇಣು ಬರದಿರೆ ಕಂಡು || ೨೧೫ ||

ಕ್ಷುದ್ರಹೃದಯ ಭೌತಿಕನೀಗಲೆನ್ನನು | ಛಿದ್ರಿಸಿ ಪೋದನೆಂದೆನುತ |
ಅದ್ರಿಸಮಾನಧೈರ್ಯನಂದಾಶಾಂ | ತೋದ್ರೇಕಮಾನಸನಾಗಿ || ೨೧೬ ||

ಹೊರಡಬಾರದ ಬಾವಿಯೊಳೆನ್ನನು ಬಿಟ್ಟು | ಗೊರವ ಹೋದನದರಿಂದ |
ಮರಣವಲ್ಲದೆ ನನಗುಳುವಿಲ್ಲೆಂದುರು | ತರಶಾಂತರಸಚಿತ್ತನಾಗಿ || ೨೧೭ ||

ಹಿಂದೆ ನಾನೆಸಗಿದ ದುಷ್ಕರ್ಮದ ಫಲ | ದಿಂದೀ ವಿಧಿಯಾಯಿತೆನಗೆ |
ಮುಂದಕೆ ಸದ್ಗತಿಯನು ಸಾಧಿಸುವೆನೀ | ಯಂದದೊಳೆಂದು ಭಾವಿಸುತ || ೨೧೮ ||

ಇನ್ನತಿಹಿತಮಪ್ಪ ಸನ್ಯಸನಮನಾನು | ಚೆನ್ನಾಗಿ ಧರಿಸಿ ದೇಹವನು |
ಭಿನ್ನವ ಮಾಡಿ ಬಳಿಕ ಸಾಧಿಸುವೆನು | ಸನ್ನುತಮಪ್ಪ ಸದ್ಗತಿಯ || ೨೧೯ ||

ಎಂದು ತನ್ನೊಳು ತಾನೆ ನುಡಿವಾಗಳಾ ಕೂಪ | ದೊಂದು ಕಡೆಯ ತಿಟ್ಟಿನೊಳು |
ಮಂದವೀರ್ಯನಾಗಿರ್ದೋರ್ವನರನಿಂ | ತೆಂದು ಕಾರ್ಯವನುಸುರಿದನು || ೨೨೦ ||

ಎಲೆಯಣ್ಣ ನೀನೀದಾರುಣಕೂಪದ | ನೆಲೆಯಿಂದ ಧರಣೀತಳಕೆ |
ಅಲಸದೆ ಪೋಪತೆರನ ಪೇಳುವೆ ನಾನು | ತೊಲಗಿಸು ನಿನ್ನ ಚಿಂತೆಯನು || ೨೨೧ ||

ಎನೆ ಚಾರುದತ್ತನಿಂತೆಂದನವನ ಕೂಡೆ | ನನಗೆ ಹೇಳುವ ಮಾಟವನು |
ನಿನಗೆಮಾಡದೆ ಸುಮ್ಮನೆಯೇಕಿರ್ದಪೆ | ಯೆನಲವನಿಂತು ನುಡಿದನು || ೨೨೨ ||

ಇಂದಿಗೆ ಮೂರು ದಿನಸದೊಳು ನಿನ್ನ ಬಿ | ಟ್ಟಂದದಿನಾಭೌತಿಕನು |
ತಂದನೆನ್ನನೀಬಾವಿಯೊಳು ಬಿಟ್ಟುಪೋದುದ | ರಿಂದಿಲ್ಲಿ ನಾನು ಬೀಳ್ದಿರ್ದು || ೨೨೩ ||

ಪಿರಿದಪ್ಪ ನೀರಡಿಕೆಯಿನೀ ರಸವನು | ಸರಸದೋಕವೆಂದು ನಾನು |
ಭರದಿಂದ ಪಾನವ ಮಾಡುವೆನೆಂದೆನ್ನ | ಕರವ ನೀಡುವ ಸಮಯದೊಳು || ೨೨೪ ||

ಇದರೊಳು ಮುರುಟಿದವೆನ್ನೀ ಹಸ್ತಗ | ಳಿದರಿಂದೆನಗೆಯಸಾದ್ಯ |
ಚದುರ ಕೇಳೀ ಸಿದ್ಧರಸವನೊಂದುಡು ಬಂದು | ಪದೆದು ಪಾನವ ಮಾಡಿಕೊಂಡು || ೨೨೫ ||

ಹೋಗುತಲಿದೆಯಂತದರ ಬಾಲವ ಹಿಡಿ | ದೀಗಳಿಗೆಯೊಳಾನೆಲಕೆ |
ಪೋಗೆಂದು ನುಡುವುತ ಕಂಠಗತಪ್ರಾಣ | ನಾಗಲಂತವನೆಡೆಗೈದಿ || ೨೨೬ ||

ಭರದಿಂದ ಕಿವಿಯೊಳು ಪಂಚಪದಂಗಳ | ಕುಡಿದು ಸಮಾಧಿಯನವಗೆ |
ಹರುಷದಿ ಮಾಡಲವನು ಜನಿಯಿಸಿದನು | ಸುರುಲೋಕದೊಳು ಬಳಿಕಿತ್ತ || ೨೨೭ ||

ಉಡು ಬಂದಾಸಕ್ತಿಯಿಂದಾರಸವನು | ಕುಡಿದು ಮುಗುಳ್ದಾಬಿಲಕೆ |
ನಡೆವ ಸಮಯದೊಳು ತಾನಾಬಾಲವ | ಪಿಡಿಯಲಂತದು ಮೇಲಕೆಯ್ದೆ || ೨೨೮ ||

ಅದರ ಬೆಂಬಳಿಯೊಳು ಬಂದೊಂದು ಪುತ್ತಿನೊ | ಳದರ ಬಾಲವ ಬಿಟ್ಟುನಿಲಲು |
ಅದು ಮೇಲಕೆ ಪೋಗಲಾವಲ್ಮೀಕದ | ವದನವಿಟ್ಟೆಡೆಯಾಗಲಾಗ || ೨೨೯ ||

ಮೇಲಕೆ ಬರಬಾರದಿದಕಿನ್ನೇವೆನೆಂ | ದಾಲಲಿತಾಂಗನಲ್ಲಿರ್ದು |
ಆಲೋಚನೆಯನು ಮಾಡುತಲಿರಲಾ | ವೇಳೆಯೊಳೊಂದಾಡು ಬಂದು || ೨೩೦ ||

ಹುತ್ತಿನ ಬಾಯೊಳು ಕಾಲಿಕ್ಕಲಂತಹ | ನೊತ್ತಿ ಹಿಡಿಯಲಾಕಾಲ |
ಕಿತ್ತುಕೊಳ್ಳಲು ಬಾರದಾಮೇಕನಿರದರು | ಚುತ್ತಿರಲಂತದ ಕೇಳಿ || ೨೩೧ ||

ಆಡ ಮೇಯಿಸುವು ಮಕ್ಕಳುಗಳೆಲ್ಲರು ಬಂದು | ಕೂಡಿ ತೂಯ್ದೊಡೆ ಬಾರದಿರಲು |
ನೋಡುವೆವಿದರೊಳಗೇನಿರ್ದಪುದೆಂದು | ತೋಡಿದರಾವಲ್ಮೀಕವನು || ೨೩೨ ||

ಅದರಿಂದಾ ಹುತ್ತಿನಬಾಯಿ ತೆರಪಾಗ | ಲಧಟನಲ್ಲಿಂ ಪೊರಮಟ್ಟು |
ಒದವಿದ ತನ್ನಾಪತ್ತಿಗೆ ವಿಸ್ಮಯ | ಹೃದಯನಾಗಿ ಬರುತಿರಲು || ೨೩೩ ||

ಕಡುಕೋಪದಿಂ ಕೊಂದಾ ದುರ್ಗಿಯ ಕೈಯ | ಮಡಿದು ಬಳಿಕ ಮರುಹುಟ್ಟ |
ಹಡೆದುಬಪ್ಪಾ ಮಹಿಷಾಸುರನೋಯೆನೆ | ನಡೆತಂದುದೊಂದು ಕಾಡ್ಗೋಣ || ೨೩೪ ||

ಆ ಲಲಿತಾಂಗನ ಕಂಡುತ್ಯುಗ್ರದಿ | ಮೇಲುವಾಯಲೆಂದೆನುತ |
ಕಾಲಾಂತಕನೇರುವ ಕೋಣನಂತಾ | ಭೀಳಾಕಾರವ ಹಡೆದು || ೨೩೫ ||

ನಡೆನೋಡಿ ಕೆಂಗಣ್ಮಸಗಿ ಹರಿದು ಬಂದು | ಹೊಡೆಯೆ ಹೊಳೆದು ಹಿಮ್ಮೆಟ್ಟಿ |
ಕಡುದೊಡ್ಡಿತಪ್ಪೊಂದು ಹೆಬ್ಬಾವಿನ ನಟ್ಟ | ನಡುಬೆನ್ನಮೆಟ್ಟಿ ದಾಂಟಿದನು || ೨೩೬ ||

ಅದಕತಿ ಕೋಪಾಟೋಪದಿನೆಳ್ದು ಹಾ | ವಿದಿರಾದಾ ಕೋಣನನು |
ಅದರಿದೆ ನುಂಗಲಂತಹ ಕಂಡು ದುಷ್ಕರ್ಮ | ದೊದವಿಗೆ ತಲೆತೂಗುತವೆ || ೨೩೭ ||

ಮುಂದೊಂದೆಡೆಯೊಳು ಪರಿವಹೊಳೆಯ ಹೊಕ್ಕು | ಮಿಂದು ಮೇಲಕೆ ಪೊರಮಟ್ಟು |
ಬಂದು ಪಲವು ಫಲತೀವಿದ ನವಮಾ | ಕಂದದಡಿಯೊಳು ಕುಳ್ಳಿರಲು || ೨೩೮ ||

ಭರವಶದಿಂದಾ ಸಮಯಕೆ ಬೇಗದಿ | ಹರಿಸಖನಾದಿಯ ಸಖರು |
ಗರುವರೈವರುಗೂಡಿಯಾ ರುದ್ರದತ್ತನು | ಬರುತಿದ್ಧನತಿ ಮಮತೆಯೊಳು || ೨೩೯ ||

ಅವರ ಕಂಡಿದಿರೇಳ್ದಾ ಚಿಕ್ಕೈಯಗೆ | ಯವನತವಾಗಿ ತನ್ನಡಿಗೆ |
ಸವಿನಯದಿಂದೆರಗಿದ ನಿಜಸಖನಿವ | ಹವನುರೆ ಹರಿಸಿದನಾಗ || ೨೪೦ ||