ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯಜನಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಒಸೆದಾರಾಜಮಿಥುನವೆರಡಂಗಕೆ | ಯಸುವೊಂದಹಡೆದಂದದೊಳು |
ನಸು ತೊಲಗದೆ ಸಮರತಿಕೇಳಿಯೊಳು ಸಂ | ತಸದಿ ಸುಖಿಸುತಿರಲಂದು || ೨ ||

ಅವರುದ್ಧತಮೋಹನದಮನಕೆಯುಬ್ಬು | ಗವಳವನಿಕ್ಕುವಂದದೊಳು |
ನವಚೈತ್ರಮಾಸಮೊದವೆ ವನಕೇಳಿಗೆ | ವಿವಿಧವಿಭವದಿನೆಯ್ದಿದರು || ೩ ||

ಕೃತಕಗಿರಿಯನೇರಿ ಕೃತಿಮನದಿಗೆಯ್ದಿ | ಲತೆವನಗಳೊಳು ಕುಳ್ಳಿರ್ದ |
ಶತಪತ್ರಾಕರದೊಳು ಮೂಡಿಮಳ್ಕಾಡಿ | ಯತಿ ವಿನೋದದೊಳಿರ್ದರಲ್ಲಿ || ೪ ||

ಕರ್ಪೂರತರುವನದೊಳು ಪನಿನೀರ್ಗಳ | ಕಾಳ್ಪೂರದೊಳು ಮಾಂಗೊನರ |
ಸೀರ್ಪನಿಯೊಳಗಾರಾಜಮಿಥುನವತಿ | ಕೂರ್ಪಿಂ ತಿರುಗಿಯಾಡಿದುದು || ೫ ||

ಮತ್ತೊಂದು ಮಲ್ಲಿಗೆಯೆಳೆಲತೆವನೆಯೊಳು | ವೃತ್ತಪಯೋಧರೆಯೊಡನೆ |
ಚಿತ್ತಜನಕೇಳಿಯೊಳೊರಗಿರ್ದಾ ಭೂ | ಪೋತ್ತಮನಲ್ಲಿಂದೆಳ್ದು || ೬ ||

ಸುರತಾಂತಶ್ರಾಂತಿಯನಾರಿಸಲೆಂದು | ಬರುತಿದಿರೊಳು ಸೊಂಪುವಡೆದ |
ತರುಣಚೂತದ ತನ್ನೆಳಲೊಳಗೋರ್ವಳು | ತರಳಾಕ್ಷಿ ನಟಿಸಿದಳಿಂತು || ೭ ||

ತಾಳದಂಡಿಗೆಯಾವುಜವಾಸದುರುಮೆಯ | ಕಾಳೆಮದ್ದಳೆ ಕಿನ್ನರಿಯ |
ಲೋಲಾಕ್ಷಿಯರು ನರ್ತಿಪನೆಂಬ ನಾರಿಯ | ಮೇಳಕೆ ನಿಂದರಾಬಳಿಯ || ೮ ||

ಕಿರಿಯ ಮುಗಿಲಮೊರೆಯೊಕ್ಕಿಂದುಲೇಖೆಯ | ತೆರದಿ ತೆರೆಯ ಹೊಕ್ಕಬಲೆಯ |
ಮಿರಗುವ ರೂಪ ನೋಡುವನೆಂದಾ ರಾಯ | ನೊರಗದನೊಂದೆಳೆಲತೆಯ || ೯ ||

ಉಗುರ ಬೆಳಗುಗೂಡಿ ಸೂಸೆ ಪೂವಲಿಯನು | ತೆಗೆಯಲಾಳಿಯರು ತೆರೆಯನು |
ಮುಗುದೆ ಜಾರಿದ ಸಂಜೆಯ ರೋಹಿಣಿಯನು | ಮಿಗೆಗೆಲ್ದಳೇನೆಂಬೆನದನು || ೧೦ ||

ಕಳೆದ ತೆರೆಯ ಮುಂದೆ ಬಂದು ನಿಂದಾಪಾತ್ರ | ದಳವು ರಂಭೆಯ ಭಾವಚಿತ್ರ |
ಎಳಸಿ ನಿರೀಕ್ಷಿಸುವಾರಸಿಕರ ನೇತ್ರ | ಗಳದೊಂದು ಜನ್ಮಪವಿತ್ರ || ೧೧ ||

ಅಸಿಯಳಾಟದೊಳಭಿನಯಿಪ ಕರಾಂಗುಲಿ | ಯೆಸಕದಿಂದಾಶಶಿಮೌಳಿ |
ನೊಸಲನಯನದಿಂದುರುಪಲು ಮೈಯಳಿ | ದಸಮಾಸ್ತ್ರಗೆ ಮರುಜವಳಿ || ೧೨ ||

ಅಳ್ತಿಕಾರರ ಕಣ್ಮನಕೆ ಸಮ್ಮೋಹನ | ಮೂರ್ತಿ ಮನದಮಂಡಳಿಕನ |
ಕೀರ್ತಿಯೆಂದೆನೆ ರಂಜಿಸುವಾ ವಧಿವಿನ | ನರ್ತನಮಾರ್ಗಸಮಾನ || ೧೩ ||

ಹಲುಬುವ ಮುಗಿಲ ಮೆಲ್ಲುಲಿಗೆ ಸಂತಸದೊಳು | ನಲಿವ ನವಿಲ ಮಾಳ್ಕೆಯೊಳು |
ಉಲಿವ ಮದ್ದಳೆಯ ಜತಿಗೆ ಯುರುಮುದದೊಳು | ಲಲನಾಮಣಿ ನಟಿಸಿದಳು || ೧೪ ||

ಸೊಗುಯಿಪಶುದ್ಧಮಲ್ಲದೆಯವಗುಣಗಳು | ಹೊಗದಿಹತಾಳವಟ್ಟಿದೊಳು |
ಬಗೆಗೊಳಿಪೈದುವಾದ್ಯದ ಸಂದಣಿಯೊಳು | ಬೊಗಸೆಗಣ್ಣಬಲೆಯಾಡಿದಳು || ೧೫ ||

ವನಿತೆಗೊದವಿದುದು ಹಾವ ವದನದೊಳು | ಮಿನುಗುವ ಭಾವ ಚಿತ್ರದೊಳು |
ವಿನುತವಿಲಾಸವಾಯತಲೋಚನಗಳೊ | ಳ್ಕೊನೆವುರ್ವಿನೊಳು ವಿಭ್ರಮಗಳು || ೧೬ ||

ಧಾರಿಣಿಗತಿವಿನ್ನಾಣಿಯಂಗಜಸೂತ್ರ | ಧಾರಿಯ ಕೈಯ ವಿಚಿತ್ರ |
ಚಾರುಲಾವಣ್ಯಸುಧಾಂಬುಪೂರಿತಗಾತ್ರ | ವಾರಿಜವದನೆಯ ಪಾತ್ರ || ೧೭ ||

ಸತಿಯರಕುಲಮಣಿಯಾಡುವ ನರ್ತನ | ಯತಿಗಳ ಧೈರ್ಯಾಪಹರಣ |
ಚತುರಜನಾನೀಕಚಿತ್ತಾಕರ್ಷಣ | ನುತ ಶೃಂಗಾರೋದ್ದರಣ || ೧೮ ||

ಎರಲಿಗಲುಗುವ ತಮಾಲಲತಿಕೆಯೋ | ತೆರೆಗಲುಗುವ ಕುಮುದಿನಿಯೋ |
ಮೊರೆವ ಮುಗಿಲ್ಗೆ ಕುಣಿವ ಬೊಂಬೆಯೊಯೆಂ | ಕರಿಯಳ ನಡೆನೋಡಿದನು || ೧೯ ||

ಕಾವನ ಕೈಯ ಕಿರಿಯ ಕಬ್ಬಿನ ಬಿಲ್ಲೋ | ಕಾವನೇರುವ ಮದಕರಿಯೋ |
ಕಾವನರ್ಚಿಪ ನೀಲದ ಬೊಂಬೆಯೊಯೆಂ | ದಾವನಿತೆಯ ನೋಡಿದನು || ೨೦ ||

ನಗೆಮಿನುಗುವ ಮುದ್ದುಮೊಗವ ತುಂಬಿದ ಮೈಯ | ಹೊಗರನೇಳಿಪ ನೀಲಿಗುರುಳ |
ಮೃಗಮದವರ್ಣದ ಮೈಯ ಕೋಮಲೆ ಮಿಗೆ | ಬಗೆಯ ಬಂಧನವ ಮಾಡಿದಳು || ೨೧ ||

ನೀಲಕರಂಡಕವೋ ಕುಚವೋ ಕ | ರ್ವಾಳೆಯ ಕಂಬವೊ ತೊಡೆಯೋ |
ತೋಳೋ ಮದನಕೃಷ್ಣಪಂಚಫಣಾಹಿಯೋ | ಬಾಲೆಯೊ ಮನಸಿಜಗಜವೋ || ೨೨ ||

ಎಂದು ನೋಡುತ್ತೀ ಕುಸುಮಕೋಮಲೆ ಯಾರ | ನಂದನೆಯೆನಲಾ ಸತಿಯ |
ಒಂದಾಗಿರ್ದವಳಿವಳು ಚಾಂಡಾಳಿಕೆ | ಯೆಂದು ಪೇಳಲು ವಸುದೇವ || ೨೩ ||

ಇದು ಚಿತ್ರಮೀ ಚಾಂಡಾಳಿಕಗೀರೂಪ | ವಿದಿತವಿಲಸವೆಂಬಾಗ |
ಮದನಸದೃಶರೂಪನನೊಲವಿಂ ನೋಡಿ | ಚದುರೆ ಮೂರ್ಛೆಯನೆಯ್ದಿದಳು || ೨೪ ||

ಅನಿತರೊಳಾಸಹಚರಿಯರು ಮರುಕದಿ ಘನಶೈತ್ಯೋಪಚಾರವನು |
ವನಿತೆಗೆ ಮಾಡುತಿರಲು ಬಂದು ಕಂಡಾ | ವನಜಾಕ್ಷಿ ಗಾಂಧರ್ವದತ್ತೆ || ೨೫ ||

ಅತಿಮಮತೆಯೊಳು ನೀನವಳನು ನೋಳ್ಪುದು | ಮತವಲ್ಲ ಕಹಿಸೋರೆಯೊಳಗೆ |
ಹಿತವುಂಟೆಯೊಂದು ಪತಿಯ ಪಿಡಿದೆಳೆದಳು | ರತಿಯತನುವನೆಳೆವಂತೆ || ೨೬ ||

ಅಂತೊಯ್ದು ಪ್ರಣಯಕಲಹಕಲುಷಿತೆಯಾಗಿ | ಕಾಂತನೊಳವಳಿರಲಿತ್ತ |
ಸಂತಸದಿಂ ಕೃತ್ರಿಮಚಾಂಡಾಳಿಕೆ | ಯಂತಂದ ಬಿಜ್ಜಾವರಿಯರು || ೨೭ ||

ಆ ದೇಶಪುರುಷನು ದೊರಕಿದನೇಳೆಂ | ದಾದರಹಸಿತಾನನೆಯ |
ಸಾದರದಿಂ ತಮ್ಮ ಪುರಕೆಯ್ದಿಸಿಯುವ | ಳ್ಗಾದವಸ್ಥೆಳೆಲ್ಲವನು || ೨೮ ||

ತರುಣಿಯ ಪಿತೃ ಸಿಂಹನಾದಖೇಚರನೊಳ | ಗಿರದೆ ನಿವೇದಿಸಲಾಗ |
ಹರುಷದಿ ವೈತಾಳಿಯೆಂಬ ದೇವತೆಯನು | ಕರೆದು ಕಾರಣಪುರುಷನನು || ೨೯ ||

ತರಹೇಳಲದು ಚಂಪಾಪುರವರಕೆಯ್ದಿ | ಭರದಿಂ ವಸುದೇವನನು |
ಗರುವೆ ಗಾಂಧರ್ವದತ್ತೆಯ ಕೂಡಿ ನಿದ್ರೆಯೊ | ಳಿರಲೆತ್ತೆ ತಂದಾಕ್ಷಣದೊಳು || ೩೦ ||

ಆ ವಿಜಯಾರ್ಧದ ಮೇಘಪುರಕೆ ತರ | ಲಾವಸುಧಾವಲ್ಲಭನು |
ಕೋವಿದಗಿದಿರ್ವಂದು ಕೊಂಡೊಯ್ದು ಹರುಷದಿ | ಭಾವೆಯ ಮದುವೆ ಮಾಡಿದನು || ೩೧ ||

ಇಂತು ನೀಲಾಂಜನೆಯೊಳು ಮದುವೆಯ ನಿಂದು | ಕಂತುಸದೃಶವಸುದೇವ |
ಸಂತಸದಿಂ ರತಿಸುಖದೊಳೋಲಾಡಿ ನಿ | ಶ್ಚಿಂತದಿ ಕೆಲದಿನಮಿರ್ದ || ೩೨ ||

ಭೂವಲಯಕ್ಕವತರಿಸುವೆನೆಂದಾ | ಮಾವನೊಳುಸುರಲು ಕೇಳ್ದು |
ಸಾವಧಾನದಿ ಪರ್ಣಲಘುವಿದ್ತೆಯಿಂ ವಸು | ದೇವನನಿಗೆಗಿಳುಹಿದನು || ೩೩ ||

ಈ ತೆರದಿಂ ಬಿಜ್ಜಾದರನಾಡಿಂ | ಭೂತಳಕಿರದೆಯ್ತಂದು |
ಪ್ರೀತಿಯಿಂ ಭೂಚರಖೇಚರನೃಪತನು | ಜಾತೆಯರತಿ ಚತುರೆಯರ || ೩೪ ||

ಕೆಲಬರನಾ ಗಾಂಧರ್ವವಿವಾಹದಿ | ಕೆಲಬರನಾದೇಶಮುಖದಿ |
ಕೆಲಬರನಾಸ್ವಯಂವರದಿಂದಾ ನೃಪ | ತಿಲಕನು ವರಿಸಿದನೊಸದು || ೩೫ ||

ಇಂತೇಳುನೂರತ್ತೊಂಬತ್ತೆಣ್ಬರು ಭೂ | ಕಾಂತಸುತೆಯರು ಸ್ವೀಕರಿಸಿ |
ಸಂತಸದಿಂ ಕೆಲಪಗಲು ಮತ್ತಲ್ಲಲ್ಲಿ | ಕಂತುಸುಖವನನುಭವಿಸಿ || ೩೬ ||

ಅವರನವರ ತಂದೆ ತಾಯ್ಗಳ ಬಳಿಯೊಳು | ಸುವಿನಯದಿಂದಿರುಸುತ್ತವೆ |
ಕುವರನರಿಷ್ಪಪುರದ ಪೊರಗೊಪ್ಪುವ | ನವನಂದನಕೆಯ್ದಿದನು || ೩೭ ||

ಆ ನಗರಿಯೊಳು ಹಿರಣ್ಯಾಕ್ಷನೆಂಬೋರ್ವ | ಭೂನಾಥನಾತನವನಿತೆ |
ಭೂನುತೆಗುಣವತಿಯವರೀರ್ವರಿಗೋರ್ವ | ಮಾನಿನಿ ಜನಿಸಿಯೊಪ್ಪಿದಳು || ೩೮ ||

ರೋಹಿಣಿಯೆಂಬವಳಾಕೆಯ ರೂಪಿಗೆ | ಊಹಿಸಿ ನೋಡಲು ರತಿಯ |
ರೂಪಪರಂಜಿಯ ತಗಡಿಗೆ ಕರ್ಬೊನ್ನ | ನೂಹಿಸಿ ನೊಡುವಂತಿಹುದು || ೩೯ ||

ಆ ತ್ರಿಭುವನ ಸೌಂದರ್ಯಸಂಕೇತ ಧ | ರಿತ್ರಿಯನಾ ಕೋಮಲೆಯ |
ಧಾತ್ರಿಪರಾರು ಬೇಡಲು ಕೊಡದಾಹೇಮ | ನೇತ್ರ ಸ್ವಯಂವರಗೃಹವ || ೪೦ ||

ವಿರಚಿಸಲಲ್ಲಿಗೆ ಸಾಗರವಿಜಯಭೂ | ವರ ಮೊದಲಾದರಸುಗಳ |
ನೆರೆದು ಕುಳ್ಳಿರಲಾಯೆಡೆಗಾ ವಸುದೇವ | ಗುರು ಮುದದಿಂದೆಯ್ದಿದನು || ೪೧ ||

ಪೋಗಿ ಸ್ವಯಂವರಮಂಟಪವನು ನಾನು | ರಾಗದಿ ಹೊಕ್ಕು ಮತ್ತಲ್ಲಿ |
ಆ ಗರುವೆಯನು ಬಯಸಿ ಕುಳ್ಳಿರ್ದಾ | ಭೂಗದಿಪರ ಕಂಡನಾಗ || ೪೨ ||

ಅಯೆಡೆಯೊಳು ವಾದಿಸುವ ವಾದಕಸಂಪ್ರ | ದಾಯದೊಳೋರ್ವವಾದಕನು |
ಒಯ್ಯಾರದಿಂ ಬಾಜಿಪ ವಾದ್ಯವನು ವಿ | ಡಾಯಕಾರನೀನಿಸಿಕೊಂಡು || ೪೩ ||

ಆ ವಾದ್ಯದ ತನ್ನ ಕೊರಲೊಳಗಿಟ್ಟು ನಾ | ನಾ ವಿಧಮಾಗಿ ಬಾಜಿಸುವ |
ಆ ವಾದ್ಯವ ಧ್ವನಿಗಾವಾದ್ಯಕಾರರು | ತಾವತಿ ಚೋದ್ಯವಡೆದರು || ೪೪ ||

ಆ ಪದದೊಳಗಲರ್ವಿಲ್ಲಬಲ್ಲಹ ಬಹು | ರೂಪುವಡೆದ ಮಾಳ್ಕೆಯೊಳು |
ಭೂಪಾಲಸಂತತಿ ಕುಳ್ಳಿರಲವರ ಮ | ತ್ತಾ ಪೆಣ್ಮಣಿ ನೋಡಿದಳು || ೪೫ ||

ಅವರೊಳು ತನ್ನ ಮನದಕೆ ತಕ್ಕ ಲಾವಣ್ಯ | ನವಯೌವನ ಗಂಡಗಾಡಿ |
ಭೂವನಾತಿಶಯರೂಪಯುತರಿಲ್ಲದಿರಲಾ | ಯುವತೀಮಣಿ ಮುಂದಕೆಯ್ದಿ || ೪೬ ||

ನಟನೆ ಮಿಗಲು ನಡೆನೋಳ್ಪ ನೃಪರ ನಟ | ವಿಟರ ಕಂಡಂತೆ ಕೊಕ್ಕರಿಸಿ |
ಚಟುಲಚಕೋರಲೋಚನೆ ಕಂಡಳಾನಿ | ಷ್ಕುಟಿಲಕುಮಾರಚಂದ್ರಮನ || ೪೭ ||

ತುಂಬುಕುಳ್ಳಿರ್ದ ಕುಮಾರಕರುಗಳ ವಿ | ಡಂಬಿಸಿ ಬಿಸರುಹನಯನೆ |
ಮುಂಬರಿದೀಕ್ಷಿಸಿ ಸಲೆಸೋಲ್ತಳಾ ರವಿ | ಬಿಂಬಸದೃತೇಜಯುತಗೆ || ೪೮ ||

ಅತಿರೂಪಯುತರೆಂದೆನೀಪವನೀಶ್ವರ | ಸುತರ ತಿರಸ್ಕಾರ ಮಾಡಿ |
ನುತಸತ್ಯವಾಣಿ ನಡೆದು ಬಂದಳಾ ಕಡು | ಚತುರ ಚತುರ್ಮುಖನೆಡೆಗೆ || ೪೯ ||

ರನ್ನಗನ್ನಡಿಯನೇಳಿಪವದನದ ಹೊಸ | ಹೊನ್ನ ಕಳಸ ಕುಚಯುಗದ |
ಚಿನ್ನವ ಚಿತ್ರದಂದಿನಾ ಪೆಣ್ಮಣಿ | ಸನ್ನತನೆಡೆಗೆಯ್ದಿದಳು || ೫೦ ||

ನಿಡುಗುಣ್ಗಳ ನಿಬಿಡಸ್ತನಗಳ ಪಿಡಿ ನಡುವಿನ ಪೀಲಿದುರುಬಿನ |
ಕಡುಚೆಲ್ವವಡೆದ ಸೊಬಗುಗಾತಿ ಮೆಲ್ಲನೆ | ನಡೆತಂದಳಾ ನೃಪನೆಡೆಗೆ || ೫೧ ||

ಮೊ ಮಾನ್ಯರುಗಳ  ಧೈರ್ಯಂಗಳ | ನೆತ್ತರತತ್ತರ ಮಾಡಿ |
ಚಿತ್ತವನಿತ್ತು ನೂತನಲಕ್ಷ್ಮಿಯಾಪುರು | ಷೋತ್ತಮಗತಿ ಸೋಲ್ತಳಾಗ || ೫೨ ||

ರೂಢಿಸಿದವನೀಶ್ವರರ ರೂಪವನು ರೋ | ಡಾಡಿ  |
ಗಾಡಿಯಿಂದಾ ಭೂಪಾಲವಸಂತಗೆ | ಸೂಡಿದಳಲರಮಾಲೆಯನು || ೫೩ ||

ರಾಜಾಧಿರಾಜಕದಂಬವ ಬಿಸುಟಾ | ರಾಜಶೇಖರಗೆ ಸೂಡಿದಳು |
ಓಜೆಯಿಂದಾ ಅಭಿನವಪಾರ್ವತಿ ವಿ | ಭ್ರಾಜಿಸುವಲರಮಾಲೆಯನು || ೫೪ ||

ಭೂಲೋಕಾಧಿಪರಿರ್ದಂತೆ ವಾದಕ | ಗಾ ಲೋಲಾಕ್ಷಿಯೊಲಿದಳು |
ಬಾಲೆಯರೊಲಿದೊಡೆ ಮೊರೆಜಾತಿಯೆಂಬುದ | ನಾಳೋಚನೆ ಮಾಳ್ಪುದಿಲ್ಲ || ೫೫ ||

ಇದರಿಂದಿಳೆಯೊಳಗಪಕೀರ್ತಿಯೊದವುವು | ದಿದರಿಂದ ಕೇಡುದುಯಿಪುದು |
ಇದರಿಂ ಕುಲಹಾನಿಯೆಂಬುದರಿಯರೊಲ್ಮೆ | ಗೆದೆಯನಿತ್ತೇಣಾಕ್ಷಿಯರು || ೫೬ ||

ಮೇಲು ತಾಗೆಂಬುದನೇನೆಂದರಿಯರು | ಕಾಲೋಚಿತ ಭಾವಿಸರು |
ಸೋಲವ ಸೊಗಸೆದೆಯೊಳಗಾವರಿಸಿದ | ಲೋಲಾಕ್ಷಿಯರಿಳೆಯೊಳಗೆ || ೫೭ ||

ಮೋಹೋನ್ಮತ್ತದ ಫಲವು ಮೈದಾಗಿದ | ಮೋಹಿಗಳಿದಿರನೀಕ್ಷಿಸರು |
ಈ ಹದದಿಂ ಕೇಡು ನಮಗಪ್ಪುದೆಂಬುದ | ನೂಹೆಗಿನಿಸು ತಂದರಿಯರು || ೫೮ ||

ಮೋಹಿ ಮುಂಗಾಣ್ವುದಿಲ್ಲೆಂಬಾ ನಾಣ್ನುಡಿ | ಓ ಹೆಣ್ಣಿಂತೆರೆರ್ಶನವೂ |
ಆಹಾ ಕಡುಚೆನ್ನಾಯಿತ್ತೆಂದನು | ತಾ ಹಿರಣ್ಯಾಕ್ಷನು ಬಗೆದು || ೫೯ ||

ಒಂದಿದ ಚಿಂತೆಯಿಂದೆಯ್ತಂದಾ ನವ | ಕಂಪರ್ದವಸುದೇವನೆಸೆವ |
ಸುಂದರತೆಯ ನೋಡಿ ಈತನುತ್ತಮಜಾತಿ | ಯೆಂದಾಮೋದವನೆಯ್ದಿ || ೬೦ ||

ಅವನ ಚಲ್ವಿಕೆಯನವನ ಲಾವಣ್ಯವ | ನವನುತ್ತಮ ಯೌವನವ |
ಅವನ ಗರುವತನವನು ಕಂಡಾಭೂ | ಧವನತಿಸಂತವಸವಡೆದು || ೬೧ ||

ಬಳಿಕಾ ದಂಪತಿಗಳ ರತ್ನಮಯರಥ | ದೊಳಗೆ ಕುಳ್ಳಿರಿಸಿ ಸಮ್ಮುದದಿ |
ಪೊಳಲೊಳಪೊಗಿಸಿ ಮತ್ತಿನಭೂಪಾಲಸಂ | ಕುಲಮೆಲ್ಲಮಂತದನರಿದು || ೬೨ ||

ಅಂತರಮಪ್ಪಜಾತೆಗೆಮಾಲೆಯನಾ | ಕಾಂತೆಸೂಡುವುದನುಚಿತವು |
ಇಂತಿದ ನಾವು ವಿಚಾರಿಸದೊಡೆ ದೋ | ಷಂ ತಪ್ಪದು ನಮಗೆಂದು || ೬೩ ||

ಚರನನೋರ್ವನನು ಕರೆದು ಹೇಮಾಕ್ಷಭೂ | ವರನಲ್ಲಿಗಟ್ಟಲಮತವನು |
ಭರದಿಂ ಪೋಗಿಯಿತೆಂದಾಡಿದನು ನಿ | ಷ್ಠುರತರ ವಚನಗಳಿಂದ || ೬೪ ||

ರಾಜಸುತೆಯನು ತಜ್ಜಾತಿಗೆ ಕುಡುವುದೊಂ | ದೋಜೆಯ ಮೀರಿ ದುಷ್ಕಲದ |
ಬಾಜನೆಕಾರಗೆ ಕುಡುವುದುಚಿತವೆಯೆಂ | ದಾಜನಪತಿಗಳಟ್ಟಿದರು || ೬೫ ||

ನೆರದ ನೃಪರೊಳಣುಗೆಯನಾರ್ಗೀವೆನೆಂ | ದರಸ ಸಂದೆಗ ಮಾಡಬೇಡ |
ದುರಗಲಿಯರ್ಧಚಕ್ರೇಶ ಜರಾಸಂಧ | ಗುರುಮುದದಿಂದೀವುದೆನಲು || ೬೬ ||

ಇಂತೆಂಬ ಚರನ ಮಾತನು ಕೇಳಿಯಾ ಕ್ರೋ | ಧಾಂತಕನಾ ವಸುದೇವ |
ಮಂತಣಮೇಕಿನ್ನು ನಿಮಿಷಮಾತ್ರದೊಳಾ | ತಿಂತಿಣಿಗೊಂಡ ಭೂವರರ || ೬೭ ||

ನೆಲಹೊರದಂತಪ್ಪಜಲವನು ನೆಲದೊಳ | ಗಲಸದೆ ನೆರಪಿಯಂತಕಗೆ |
ನೆಲೆಯಾಗಿಯೌತಣವನು ಮಾಡದಿರ್ದೊಡೆ | ಪುಲುವಾನಿಸಮಾತೈಸೆ || ೬೮ ||

ಬಾಜನೆಕಾರ ನಾನಹುದೆನಗಿದಿರಾಗಿ | ಯಾಜಿರಂಗದೊಳಿನ್ನಿ ಗೆಲಿದು |
ಈ ಜಲಜಾಕ್ಷಿಯ ಕೊಂಡೊಯ್ದಡೆ ತಾವು | ರಾಜರ ಬಸಿರ ಬಂದವರು || ೬೯ ||

ಎಂದು ನುಡಿದು ದೂತನ ಬೀಳ್ಕೊಟ್ಟಾ | ಕಂದರ್ಪರೂಪನ ನೋಡಿ |
ಸಂದೇಹವ ಬಿಟ್ಟು ಹೇಮಾಕ್ಷನೃಪವರ | ನಂದು ಕಲಹಕುಜ್ಜುಗಿಸಿದ || ೭೦ ||

ಚರನ ನುಡಿಯನಿತ್ತ ನೃಪಾಲಕ | ರುರುಕೋಪಾರೂಢನಾಗಿ |
ಭರದಿಂದೆಯ್ತಂದೆಡೆಯಿಲ್ಲದಂತಾ | ಪುರವ ಮುತ್ತಿದರು ಮೂವಳಿಸಿ || ೭೨ ||

ಆ ನಗರಿಯ ಧೂಳಿಗೋಂಟೆಯ ಕೊಳಲೆಂ | ದಾ ನಾಡನಾಡಮನ್ನೆಯರು |
ಆನದೆ ಬಂದು ಮುತ್ತಿದರಾರ್ಭಟೆಯಿಂ | ಜೇನೆಯ್ದಿ ಮುಸುಕುವಂದದೊಳು || ೭೩ ||

ಆ ವೇಳೆಯೊಳು ಹಿರಣ್ಯಾಕ್ಷನಾ ವಸು | ದೇವ ಸಹಿತ ಬಲವೆರಸಿ |
ತೀವಿದ ಕೋಪಾಟೋಪದಿಂದವೆ ತನ್ನ | ಊರನೆ ಪೊರಮಟ್ಟನಾಗ || ೭೪ ||

ಇಂತು ಪೊಳಲ ಪೊರಮಟ್ಟಾ ಬಲವ ಕಂ | ಡಂತಕನಾಬಹುರೂಪ |
ತಾಂ ತಳೆದಂದದಿ ಕಡುಮುಳಿದಾನೃಪ | ಸಂತತಿಯಾರತೇರಿದುದು || ೭೫ ||

ಗಂಡರಗಂಡನುದ್ದಂಡನೊಂದೇ ಬಿಲ್ಲು | ಗೊಂಡಾಗ ನಾಡಮನ್ನೆಯರ |
ಮುಂಡಳಿಸಿದ ಮೋಹರವ ಹೊಕ್ಕನು ಹಸು | ವಿಂಡ ಹೆಬ್ಬುಲಿ ಹೊಕ್ಕಂತೆ || ೭೬ ||

ಎಕ್ಕತೂಳದ ಬಂಟನಾ ವಸುದೇವನು | ಕಕ್ಕಸದಿಂದಿದಿರಾದ |
ಲೆಕ್ಕವಿಲ್ಲದ ಮನ್ನೆಯರ ಮೋಹರವನು | ಹೊಕ್ಕು ಸಂಹಾರಮಾಡಿದನು || ೭೭ ||

ಕಲಿಗಳರಸನೆಚ್ಚ ಕಣೆಗಳೊಂದೊಂದು ಮಾ | ರ್ಮಲೆವ ಮನ್ನೆಯರ ಮೋಹರದ |
ಪಲವಾನೆ ಕುದುರೆ ಕೂರಾಳು ತೇರುಗಳನು | ನೆಲಕಿಕ್ಕಿದನು ನಿಮುಷದೊಳು || ೭೮ ||

ಅಳುಕದೆ ನಿಂದತಿರಥರೆಸುವಾ ಕಣೆ | ಗಳನಾ ಬಿಲ್ಲನಾ ರಥವ |
ತಳುವದೆ ಕಡಿದು ಭಂಗಿಸಿದನವನ ಕೈಯ | ಚಳಕವನೇನೆ ಬಣ್ಣಿಪೆನು || ೭೯ ||

ಅರೆಬರ ನೆಲಕಿಕ್ಕಿಯರೆಬರ ಬೆದರಿಸಿ | ಯರೆಬರನೋಡಿಸಿ ಬಳಿಕ |
ಅರೆಯರೆನಿಪರಾಯರ ಪೌಜಿನೊಳು ಚಾರಿ | ವರಿದಾಡಿದನಾ ಸುಭಟ || ೮೦ ||

ಬಿರಿತೋಡಿತು ಬೀರಾಳ್ವತಿ ಹಯದೊಡ್ಡು | ಮುರಿದುದಾನೆಯ ಬಲು ಪೌಜು |
ಹರೆಸಾರಿತು ತೇರ ತಟ್ಟು ತಟ್ಟಾದುದು | ನೆರೆಗಲಿಯೆಸುವುರವಣೆಗೆ || ೮೧ ||

ಎಲ್ಲಿಯ ಮಾರಿಯ ಬರಿಯ ಚಿವುಟಿ ಮ | ತ್ತೆಲ್ಲಿಯ ಬಲುಮಿಳ್ತುವಿನ |
ಹಲ್ಲಟೆಗಾಡಿದೆವೆನುತೊಲ್ಲೈಸಿತು | ಬಲ್ಲಿದ ನೃಪತನಿಕುರುಂಬ || ೮೨ ||

ಮಾಳವ ಮಗಧ ಕಳಿಂಗಗಜ್ಜರ ನೇ | ಪಾಳ ಕೊಂಕಣ ಪಾಂಚಾಳ |
ಚೋಳ ತೆಲುಂಗ ಭೂಭುಜರವನೆಸುಗೆಯ | ತಾಳಲಾರದೆ ತೊಲಗಿದರು || ೮೩ ||

ಹರೆಗಾರನಲ್ಲಿವ ನಿರಿಗಾರನೆನುತವೆ | ಬೆರಗಾಗಿ ನಾಡಮನ್ನೆಯರು |
ಗರಿ ಮೂಡಿದಂತೆ ಬೆಳ್ಳೆರೆಲೆಗೆ ನಿಮುಷದಿ | ಬಿರಿತೋಡಿದರು ದಶದಿಶೆಗೆ || ೮೪ ||

ಅದನರಿದರ್ಧಚಕ್ರೇಶ ಜರಾಸಂಧ | ನಿಂದು ಹರಿವಂಶಾಗ್ರಗಣ್ಯ |
ಅಧಟನಂಬುಧಿವಿಜಂಗಲ್ಲದಾಗದೆಂ | ಬುದಕೇಳಿ ಕೆಕ್ಕಳಗೆರಳಿ || ೮೫ ||

ವಿಜಿಗೀಷುವಸುದೇವನೆಸುಗೆಗೆ ಸಕಲಭೂ | ಭುಜರೆಲ್ಲ ಹೆರಸಾರಲಾಗ |
ನಿಜಲಿತನದಿಂದಿರಾಗೆ ಸಾಗರ | ವಿಜಯನೆಕ್ಕಟಿಗಲಿನಿಂದ || ೮೬ ||

ಕದುಬಿ ತನ್ನೊಳು ಕಾದಲೆಂದು ರಥವ ಸಾರ್ಚು | ತಿದಿರಾದ ಭಟನಿವನಾರು |
ಅದಿರದೆನುತವೆಚ್ಚುತಾ ವಸುದೇವನುಂ | ದೊದವಿ ಶರವ ತೆಗೆದೆಚ್ಚ || ೮೭ ||

ಶರಧಿವಿಜಯನೆಚ್ಚ ಕಣೆ ವಸುದೇವನ | ಶಿರದ ಮೇಲಾ ವಸುದೇವ |
ನಿರದೆಚ್ಚ ಶರವು ಸಾಗರವಿಜಯನ ಚಾರು | ಚರಣದೊಳೆರಗುತಮಿರಲು || ೮೮ ||

ಅರುಭಟೆಯೊಳಾನೆಚ್ಚ ದಿವ್ಯಾಸ್ತ್ರಗ | ಳಾರೈಯದೆನಗಿದಿರಾದ |
ವೀರನ ಮೃದುಪಾದತಳಕೆರಗುವುದೇನು | ಕಾರಣಮಿವನಾರೆಂದು || ೮೯ ||

ಸಾರಥಿಯನು ಕೇಳಲವನಿಂತೆಂದನೀ | ಧೀರನು ಹರಿಕುಲತಿಲಕ |
ಮೇರುಸದೃಶಧೀರನಂತಕನಿಭಕೋಪ | ವಾರಿಧಿ ವಿಜಯಭೂವರನು || ೯೦ ||

ಎಂದ ನುಡಿಯ ಕೇಳುತಾ ವಸುದೇವನು | ಮಂದೇತರಭೀರುವಾಗಿ |
ಇಂದು ಸೋದರನೊಳು ಕಾದುವ ಪಾತಕ | ವೊಂದಿತೆನಗೆ ಪಾಪವಶದಿ || ೯೧ ||

ಎಂದು ಬಿಲ್ಲುಂಬುಗಳನು ಬಿಟ್ಟು ಸುಮ್ಮನೆ | ನಿಂದಿರ್ದಾ ಸಾಹಸಿಯೊಳು |
ಕುಂದಲ್ಲವೆ ರಣದೊಳು ಕೈದು ಬಿಸುಡುವು | ದೆಂದ ಸಾರಥಿಗಿಂತು ನುಡಿದ || ೯೨ ||

ಹಿರಯಣ್ಣನೊಳು ಮುಂದರಿಯದೆ ರಣದೊಳು | ಹಿರಿದು ಹೋರಿದೆನೆಂದೆನುತ |
ಇರವನೆಲ್ಲವನು ತಿಳಿಯಪೇಳುತಿಂತೆಂದ | ಕರುಣಹೃದಯ ವಸುದೇವ || ೯೩ ||

ಸಾದರದಿಂದಾನೆಯ್ದುವ ಬರವ ನಿ | ವೇದಿಸು ಮುಂದೆ ನೀ ಪೋಗಿ |
ಸೋದರನೊಳಗೆಂದು ಕಳುಹಲಾ ಸಾರಥ | ಪೋದನು ತಾನಾತನೆಡೆಗೆ || ೯೪ ||

ಪೋಗಿ ಸಾಗರವಿಜಯನ ಪಾದಕೆ ತಲೆ | ವಾಗಿ ತ್ವದೀಯಾನುಜಾತ |
ಆ ಗಂಡುಗಲಿ ವಸುದೇವನು ನಿಮಗಿದಿ | ರಾಗಲಣ್ಮದೆ ಬಿಲ್ಲ ಬಿಸುಟು || ೯೫ ||

ನಿಮ್ಮಡಿಗೆರಗಲು ಬರುತಿರ್ದಪನೆನೆ | ಗಮ್ಮನೆ ಬಿಲ್ಲನೀಡಾಡಿ |
ತಮ್ಮನಿರವ ಪೇಳಲು ತೊಟ್ಟತೊಡವನು | ಸಮ್ಮದದಿಂ ಕೊಟ್ಟನವಗೆ || ೯೬ ||

ಅನಿತರೊಳಾ ವಸುದೇವನು ರಥದಿಂ | ದನುರಾಗದಿಂದಿಳಿತಂದು |
ಮಿನುಗುವ ಮುಕುಟಮಣಿಯನಣ್ಣನ ಪಾದ | ವನಜಮೂಲದೊಳಿಕ್ಕಿದನು || ೯೭ ||

ಇಂತು ವಿನಯವಿನಮಿತನಾದ ತಮ್ಮನ | ಸಂತಸದಿಂ ಬಿಗಿಯಪ್ಪಿ |
ಕಂತುಸದೃಶ ಹರಿವಂಶಭಾನುವೆ ನೀ | ನಿಂತೆನ್ನ ಬಿಟ್ಟೆಯ್ದುವರೆ || ೯೮ ||

ದೇಸಿಗನಾಗಿ ಈ ತೆರದಿನೋರ್ವನೆ ಪರ | ದೇಶಕೆ ಪೋಪುದುಚಿತವೆ |
ದೇಶಾಧಿಪತ್ಯವ ಬಿಟ್ಟೆಂದಾ ಭೂ | ಮೀಶ ಕಣ್ಣೀರಿಡುವಾಗ || ೯೯ ||

ಹರುಷದಿನಕ್ಷೋಭ ಮೊದಲಾದಣ್ಣಂ | ದಿರು ಬರಲಾಗವರಡಿಗೆ |
ಸಿರಿದಲೆಯಿಕ್ಕಲಂತವರಿರದಮುರ್ದಪ್ಪಿ | ಹರಸಿದರತಿಹಿತದಿಂದ || ೧೦೦ ||

ಬಳಿಕ ಹಿರಣ್ಯಾಕ್ಷನಂತದನರಿದಾ | ಜಲಧಿವಿಜಯನೆಡೆಗೈದಿ |
ತಳಿದನು ಕಡುಹರುಷವನತಿದಾರಿದ್ರ | ನೆಳಸಿ ನಿಧಿಯ ಪಡೆವಂತೆ || ೧೦೧ ||

ಶರಧಿವಿಜಯಭೂವರನನುಜಾತನು | ವರರೂಪಯುತ ವಸುದೇವ |
ನುರುಗಲಿಯೆಂಬುದನರಿದು ನೆರೆದ ಭೂ | ವರರೆಲ್ಲ ಹರುಷವೆಯ್ದಿದರು || ೧೦೨ ||

ಮತ್ತೆ ಹಿರಣ್ಯಾಕ್ಷನಬ್ಧಿವಿಜಯಭೂ | ಪೋತ್ತಂಸನು ಸಹಮಾಗಿ |
ಪತ್ತನವನು ಪೊಕ್ಕತಿ ವೈಭವದಿಂ | ದುತ್ತಮಮಪ್ಪ ಲಗ್ನದೊಳು || ೧೦೩ ||

ನೆರೆದ ನರೇಂದ್ರರೆಲ್ಲರು ದಿಬ್ಬಣಿಗರಾಗೆ | ಧರೆಯೆಲ್ಲ ಕೊಂಡಾಡುವಂತೆ |
ವರಸುತ ರೋಹಿಣಿಯನು ವಸುದೇವಭೂ | ವರೆಗೆ ಮದುವೆ ಮಾಡಿದನು || ೧೦೪ ||

ಮದುವೆ ಮಾಡಿ ವಧೂವರರನು ಸಂ | ಮದದಿನಿರಿಸಿಕೊಂಡು ಬಳಿಕ |
ಉದಧಿವಿಜಯಭೂಪಾಲನನತಿವಿನ | ಯದೊಳೂರಿಗೆ ಕಳುಹಿದನು || ೧೦೫ ||

ಅಣ್ಣನನುಜ್ಞೆಯೊಳುಳಿದಾ ವಸುದೇವ | ಹೆಣ್ಣಕುಲಕೆ ಮಾಣಿಕದ |
ಕಣ್ಣಬೆಳಂತಿಗೆಬೆಳಗೆಂಬಬಲೆಯೊಳು | ಬಣ್ಣಿಸಲೇನು ಸಿಕ್ಕಿದನು || ೧೦೬ ||

ಕುಸುಮಗಂಧಿಯ ಕುಮುದಾಕ್ಷಿಯ ಬಂದುಗೆ | ಯೆಸಳ್ವಾಯಿದೆರೆಯ ಕೋಮಲೆಯ |
ಮಿಸುನಿದಾವರೆಮೊಗ್ಗೆಮೊಲೆಯೊಳವನ ದಿಟ್ಟಿ | ಹಸುಳೆದುಂಬಿಯೊಲೆರಗಿದುವು || ೧೦೭ ||

ಇಂತಿರುತೊಂದು ರಾತ್ರಿಯೊಳಾ ವಿಭು ನಿ | ಶ್ವಿಂತದೊಳಾ ಸತಿಯೊಡನೆ |
ಸಂತಸದಿಂ ನಿದ್ರೆಯೊಳಿರೆ ಖೇಚರ | ಕಾಂತೆಯೋರ್ವಳೆಯ್ತಂದು || ೧೦೮ ||

ಉರುಮುದದಿಂದೆತ್ತಿಕೊಂಡು ವಿಮಾನದೊ | ಳಿರಿಸಿ ತಮ್ಮಾನಂದಪುರದ |
ವರನಂದನದೊಳಗಿರಿಸಲವಳ ಪಿತೃ | ಮರುತವೇಗಗೆ ಸೂಚಿಸಲು || ೧೦೯ ||

ಕರಮೊಳ್ಳಿತೆಂದವನಿದಿರ್ವಂದು ಕಾರಣ | ಪುರುಷನ ಪುರಕೆಯ್ತಂದು |
ತರಳಲೋಚನೆ ಚಂದ್ರಲೇಖೆಯನತ್ಯಾ | ದರದಿಂದ ಮದುವೆಮಾಡಿದನು || ೧೧೦ ||

ಆ ಚಂದ್ರಲೇಖೆಯೊಳೊಲವಿಂ ಕುಸುಮನಾ | ರಾಚಸದೃಶನಿರ್ದು ಬಳಿಕ |
ಭೂಚಕ್ರಕ ಪೋಪೆನೆಂದಾ ನೃಪನೊಳು | ಸೂಚಿಸಲವನದ ಕೇಳಿ || ೧೧೧ ||

ಅದು ಲೇಸೆಂದು ನಂದನೆಗಡುವಲಿಗೊಟ್ಟು | ಒದವಿದ ವೈಭವದಿಂದ |
ಸದಮಲರೂಪಯುತನನು ಕಳುಹಿದನು | ಮುದದಿಂದಾ ಖೇಚರನು || ೧೧೨ ||

ಪದಪಿಂದೆಯ್ದಿಯರಿಷ್ಟನಗರಿಗಾ | ಸುದತಿ ರೋಹಿಣಿಯೊಡಗೂಡಿ |
ಮೊದಲು ಮದುವೆಯಾದ ಖೇಚರ ಭೂಚರ | ಮದವತಿಯರೆಲ್ಲರನು || ೧೧೩ ||

ಇಂದುವದನೆ ಚಂದ್ರಲೇಖೆಯ ವಿದ್ಯೆಗ | ಳಿಂದ ಕರೆಯಲ್ಪಟ್ಟಲವರು |
ಒಂದಿದ ಹರುಷದಿನಾನಗರಿಯ ಪೊರ | ನಂದನಕಿರದೆಯ್ದಿದರು || ೧೧೪ ||

ಕಾಮಧೇನುವು ಕರೆವಂದದಿ ತನುಜೆಗೆ | ಪ್ರೇಮದಿನುಡುವಲಿಗೊಟ್ಟು |
ಹೇಮಾಕ್ಷ ಕಳುಹೆ | ಮತ್ತಾರೋಹಿಣಿಗೂಡಿ | ಯಾ ಮಹಿಮನು ಪೊರಮಟ್ಟು || ೧೧೫ ||

ಇಷ್ಟವಲ್ಲಭೆಯರೆಲ್ಲರುಗೂಡಿ ನಡೆದನ | ರಿಷ್ಟಪುರವ ಪೊರಮಟ್ಟು |
ನಷ್ಟಾರಾತಿಕುಮಾರಚಂದ್ರಮನು ವಿ | ಶಿಷ್ಟ ವಿಭವದಿನೆಯ್ದಿದನು || ೧೧೬ ||

ಸುರಪತಿ ಕಪ್ಪವ ಕಳುಹಿದ ಸಗ್ಗಿದ | ತುರುಣಿಯರೆಂಬ ಮಾಳ್ಕೆಯೊಳು |
ಮರುತಮಾರ್ಗದೊಳು ವಿಮಾನವನೇರಿ ಖೇ | ಚರಕಾಂತೆಯರೆಯ್ದಿದರು || ೧೧೭ ||

ದೆಸೆವೆಣ್ಗಳಾಕುವರನ ರೂಪಿಗೆ ಮನ | ಮೊಸೆದೆಯ್ದುವತೆರನಾಗಿ |
ಅಸವಸದಿಂದ ಬಂದರು ದಿಕ್ಕುದಿಕ್ಕಿನ | ಪಸುಧಾಧಿಪನಂದನೆಯರು || ೧೧೮ ||

ರತಿ ಬಹುರೂಪವಡೆದು ಮನಸಿಜನೊಳ | ಗತಿಮುದದಿಂ ಬರ್ಪಂತೆ |
ಕ್ಷಿತಿಪನೊಡನೆ ಶೌರೀಪುರಕಾನೃಪ | ಸುತೆಯರೆಲ್ಲರು ಬಂದರಾಗ || ೧೧೯ ||

ಪುರದೊಳಗಷ್ಟಶೋಭೆಯನಬ್ಧಿವಿಜಯಭೂ | ವರನು ಮಾಡಿಸಿಯಿದಿರ್ವಂದು |
ಚರಣಕೆರಗಿದನುಜಾತನ ಬಿಗಿಯಪ್ಪಿ | ಹರುಷಮೊದವಿ ಬಂದರಾಗ || ೧೨೦ ||

ಬಳಿಕಕ್ಷೋಭನು ಮೊದಲಾದಗ್ರಜ | ರೊಳು ವಿನಮಿಸಿ ಹರಕೆಯನು |
ತಳೆದವರೊಡಗೂಡಿ ಶೌರೀಪುರವರ | ದೊಳಹೊಕ್ಕನಾ ವಸದೇವ || ೧೨೧ ||

ಈ ತೆರದಿಂದೂರ ಹೊಕ್ಕರಮನೆಗೆಯ್ದಿ | ಯಾ ತರಳಾಕ್ಷಿ ರೋಹಿಣಿಗೆ |
ಪ್ರೀತಿಯಿಂದವೆ ಪುಟ್ಟವ ಕಟ್ಟಿ ಸುಖದಿಂ | ದಾ ತುಳಿದಾಳೊಪ್ಪಿದನು || ೧೨೨ ||

ಪಲವು ನಕ್ಷತ್ರಕಾಂತೆಯರೊಳು ಚಂದ್ರಮ | ನೊಲವಿನಿಂ ಕೂಡುವಂದದೊಳು |
ಲಲನೆಯರೊಡಗೂಡಿಯಾ ವಸುದೇವನು | ಸಲೆಸುಖದೊಳಗಿರುತಿರ್ದ || ೧೨೩ ||

ಅಭಿನವವಾಂಗನಜನತಿಚತುರ ಕಲಾನ್ವಿತ | ಶುಭಗುಣಗಣಭೂಷಿತನು |
ತ್ರಿಭುವನೈಕಸಾಹಸಿ ರಂಜಿಸಿದನಾ | ಪ್ರಭಕುಲಮಣಿ ದೀಪಕನು || ೧೨೪ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಚರಿತೆಯೊಳ | ಗೊದವಿದಾಶ್ವಾಸ ಹನ್ನೆರಡು || ೧೨೫ ||

ಹನ್ನೆರಡನೆಯ ಸಂಧಿ ಸಂಪೂರ್ಣಂ