ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯಜನಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಒಂದು ಪಗಲು ಋತುಮತಿಯಾಗಿ ರೋಹಿಣಿ | ಮಿಂದು ನಾಲಕುನೀರಬಳಿಕ |
ಅಂದವಡೆದ ಬೆಳುವಸದನಮಿಟ್ಟಾ | ನಂದದಿ ಪತಿಯ ಸೂಳ್ಗೆಯ್ದಿ || ೨ ||

ಸುರತಸುಖದೊಳೋಲಾಡಿ ಸುಷುಪ್ತಿಯೊ | ಳಿರೆ ಬೆಳಗಪ್ಪಜಾವದೊಳು |
ತರುಣಿಶಶಾಂಕನನಾಸ್ವಪ್ನದೊಳು ಕಂಡು | ಹರುಷದಿ ದಿಟ್ಟಿದೆರೆದಳು || ೩ ||

ಬಳಿಕಿನನುದಯದೊಳೆಳ್ದು ಕೈಮುಗಿದು ಸ | ಲ್ಲಿಲಿತಾಂಗನಲ್ಲಿಗೈತಂದು |
ಲಲನಾಮಣಿ ತಾನು ಕಂಡಾಕನಸನು | ತಳುವದೆ ಪೇಳಲು ಕೇಳಿ || ೪ ||

ಲಲತಾಂಗಿ ನಿನಗೆಯಗಣ್ಯಪುಣ್ಯನು ನೃಪ | ಕುಲಲಲಾಮನೋರ್ವಕುವರ |
ಅಲಘುವಿಕ್ರಮಿ ಜನಿಸುವನೆನೆ ಸಂತಸ | ದಳೆದಿರೆ ಪರಿವಿಡಿಯಿಂದ || ೫ ||

ಗರ್ಭದ ದಾರಿದ್ರ್ಯವಳಿದು ತುಹಿನರೋ | ಚಿರ್ಭಾಸುರಕಾಂತಿಯುತನ |
ಅರ್ಭಕನನು ಪಡೆಯಲು ವಸುದೇವನು | ನಿರ್ಭರವೈಭವದಿಂದ || ೬ ||

ಕ್ಷುದ್ರಾರಾತಿಭೂಪಾಲಕನಿಕುರುಂಬ | ವಿದ್ರಾವಣನಿವನೆಂದು |
ಭದ್ರಮುಹೂರ್ತದೊಳಾ ಸಿಸುವಿಗೆ ಬಲ | ಭದ್ರವೆಸರನಿಟ್ಟನೊಸೆದು || ೭ ||

ವರಮೌಕ್ತಿಕವರ್ಣ ವಜ್ರಶರೀರನು | ಉರುತರ ಧೀರೋದಾತ್ತ |
ನಿರವಧಿಸಾಹಸನತಿರೂಪಯುತ ಬಂ | ಧುರಗುಣಮಣಿಭೂಷಣನು || ೮ ||

ಏಕಕುಂಡಲನೇಕಾಂಗವಿಕ್ರಾಂತನ | ನೇಕಕಲಾಕೋವಿದನು |
ಆ ಕುವರನು ಕೂಡಿ ಹರುಷದಿ ವಸುದೇವ | ಭೂಕಾಂತನನತಿಸುಖಮಿರಲು || ೯ ||

ಸಲ್ಲಿಲಿತಾಂಗಿ ರೋಹಿಣಿಯ ಸ್ವಯಂವರ | ದಲ್ಲಿ ಸಕಲಭೂಭುಜರ |
ಎಲ್ಲವರೊಳು ಕಾದಿಗೆಲಿದ ತನ್ನಧಟಿನ | ಬಿಲ್ಲಬಿನ್ನಾಣಮನರಿದು || ೧೦ ||

ಕಲಿವೆವೆನುತ ತನ್ನೆಡೆಗಿರದೆಯ್ದಿದ | ನೆಲದಾಣ್ಮರ ನಂದನರ್ಗೆ |
ಒಲವಿಂದ ಬಿಲ್ಲೋಜನಾಗಿ ತಾನಿರಲಾ | ನೆಲೆಗೊಂದಾನೊಂದು ಪಗಲು || ೧೧ ||

ಕಂಸನೆಂಬನು ಬಂದು ನಮಿಸಿ ನರೇಂದ್ರೋ | ತ್ತಂಸಗೆ ನಾನು ಧೀವರರ |
ವಂಶದವನು ದೇವರೊಳು ನಿಂದು ಬಿಲುವಿದ್ಯೆ | ಯಂ ಸಾಧಿಸಲೆಯ್ದಿದೆನು || ೧೨ ||

ಎನಲಿವನಕುಲಜನಾದೊಡಿಂತೀ ರೂಪು | ಜನಿಯಿಸಿದೆನುತಾ ನೃಪತಿ |
ವಿನಯಮೊದವಿ ಬಿಲುವಿದ್ಯೆಯನವನಿಗೆ | ಯನುಮಾನಿಸದೆ ಕಲಿಸಿದನು || ೧೩ ||

ಮರೆದುದೆನಚ್ಚರಿಸಿದೊಡದ ಕೈಕೊಂಬ | ತೆರನಾಗಿ ಬಿಲುವಿದ್ಯೆಯನು |
ಅರಿಕೆ ಮಾಡಿದೊಡದನನುವಾಗಿ ಸಾಧಿಸಿ | ಮೆರೆದನು ಮಹಿ ಪೊಗಳ್ವಂತೆ || ೧೪ ||

ಬಿಲ್ವಿಡಿದವನನು ಸಂಗರಸುಮುಖದೊಳು | ಗೆಲ್ವವರಾರಿಲ್ಲದಂತೆ |
ಬಲ್ವಲದಿಂದ ಕಂಸನು ವಸುದೇವಗೆ | ಸಲ್ವವನಾಗಿರಲತ್ತ || ೧೫ ||

ಪೆಸರುಳ್ಳ ಪೌದನಪುರದಧಿಪತಿ ಸಾ | ಹಸದಿಂದೆರಡು ಸಿಂಹವನು |
ವಶಮಾಡಿ ತಾನೇರುವ ರಥದೊಳು ಕಟ್ಟಿ | ವಸುಧೆಯೊಳತಿ ಕೀರ್ತಿವಡೆದ || ೧೬ ||

ಅದರಿಂ ಸಿಂಹರಥಾಭಿಧಾನವನಾಂತು | ಕದನೋದ್ರೇಕಮಾನಸನು |
ಮದವೆತ್ತರ್ಧಚಕ್ರೇಶ ಜರಾಸಂಧ | ಗಿದಿರಾಗಿ ಮಾರ್ಮಲೆತಿರಲು || ೧೭ ||

ಕೆಲವು ಸೇನೆಯ ಕಳುಹಲು ಕಂಡು ತನ್ನ ದೋ | ರ್ವಲಂದಿಂದೋಡಿಸಲದಕೆ |
ಕೆಳಲಿ ಬಳಿಕ ಚಕ್ರೇಶ್ವರನಾದುರ | ಗಲಿ ಸಿಂಹರಥನೊಳು ಕಾದಿ || ೧೮ ||

ಗೆಲಿದವನಿಗೆ ತನ್ನ ಮಗಳನು ಮತ್ತವ | ನೊಲಿದು ಬೇಡಿದ ರಾಜ್ಯವನು |
ನೆಲೆಯಾಗಿ ಕೊಡವೆನೆನುತ ಸಾರಿಸಲಾ | ಉಲಿಹಿಗೆಲ್ಲರು ಸುಮ್ಮನಿರಲು || ೧೯ ||

ಇವನ ಗೆಲುವ ಶಕ್ತಿ ವಸುದೇವಗಲ್ಲದೆ | ಸವನಿಸದೆಂದಾ ಚಕ್ರಿ |
ಸವಿನಯದಿಂದ ಸಮುದ್ರವಿಜಯಭೂ | ಧವಗೆ ಲೇಖನವನಟ್ಟಿದನು || ೨೦ ||

ಆ ಲೇಖನವನೋದಿಸಿ ನೋಡಿಯಾ ಭೂ | ಪಾಲಕನಾಸಿಂಹರಥನ |
ಮೇಲೆತ್ತಿ ನಡೆಯೆಂದು ಕಳುಹಲು ವಿಕ್ರಮ | ಶಾಲಿ ಸನ್ನುತ ವಸುದೇವ || ೨೧ ||

ಎಕ್ಕತೊಳದ ಭಟಸಂತತಿಯನು ಕೂಡಿ | ರಕ್ಕಸನಂತೆಯ್ತಂದು |
ಮಿಕ್ಕಸಾಹಸಿ ಸಿಂಹರಥನೂರಿಗೆಯ್ತಂ | ದಕ್ಕರಿಗರ ಕಳುಹಿದನು || ೨೨ ||

ಬಳಿಕವರೆಯ್ತಂದಲೆ ವಿಭು ಯಾದವ | ಕುಲತಿಲಕನನೀಗ ಬಂದು |
ತಳುವದೆ ಕಂಡವನತನಾಗಿ ಸಲೆ ಸುಖ | ದೊಳು ಜೀವಿಪುದು ಲೇಸೆನಲು || ೨೩ ||

ಉದ್ರೇಕಿಸಿ ಸಿಂಹರಥನೆಂದನೆಲವೊ | ಕ್ಷುದ್ರ ನಿನ್ನೋಳಗೇನು ಮಾತು |
ರೌದ್ರತೆಯಿಂದ ನಾನಿರಿಯಲಾನುವರೆ ಸ | ಮುದ್ರಪರೀತಾವನಿಪರು || ೨೪ ||

ಎಂದುರೆ ಸಿಂಹನಾದದಿ ಗರ್ಜಿಸಿಯಲ್ಲಿ | ಬಂದಕ್ಕರಿಗಳನು ಕಳುಹಿ |
ಪಿಂದೆ ಸಮರಸನ್ನದ್ಧನಾಗುತ ಪೊಳ | ಲಿಂದ ಬೇಗದಿ ಪೊರಮಟ್ಟ || ೨೫ ||

ಅರಭಟೆಯಿನಾ ಕಲ್ಪಾಂತರಲ್ಲೋಲ | ವಾರಿಧಿ ವಜ್ರವೇದಿಕೆಯ |
ದ್ವಾರದಿ ಪೊರಮಡುವಂತಾ ನಗರಿಯ ದ್ವಾರವ ಪೊರಮಟ್ಟು ಬಂದು || ೨೬ ||

ಚಾತುರ್ದಂತಬಲವ ಕೂಡಿಯಾಹವ | ಭೂತಳದೊಳಗೊಡ್ಡಿನಿಲಲು |
ಆ ತುಳಿಲಾಳ್ವಸುದೇವನದಕೆ ಕಲ | ಹಾತುರನಾಗಿ ನಡೆಯಲು || ೨೭ ||

ಅದನು ಕಂಡಾ ಸಿಂಹರಥ ತನ್ನ ಬಿಲ್ಪಡೆ | ಗದಿರದೆ ಕೈವೀಸಲಾಗ |
ಒದವಿ ಕಡೆಯ ಕಾಲದ ಮಳೆ ಕರೆವಂತೆ | ಕದುಬಿ ಸುರಿದುದಸ್ತ್ರಸಮಿತಿ || ೨೮ ||

ಬಲವೆಲ್ಲವಂಬುಗೂಡಾಗಿ ಬೀಳ್ವುದು ಕಂಡು | ಮುಳಿದು ಮಹಾರಥರುಗಳ |
ತಳುವದೆ ವಸುದೇವ ಕಳುಹಲವರು ಪರ | ಒಲವ ಸಂಹರಿಸಿದರಾಗ || ೨೯ ||

ಅದಕಂಡು ಸಿಂಹರಥನು ರಥವನು ನೂಕಿ | ಪದೆದು ಪಿಡಿದು ಬಿಲ್ಲು ಕೋಲ |
ಒದವಿ ಯಾದವಬಲವನು ಹೊಕ್ಕು ಕಣ್ಗೆಡಿ | ಸಿದನು ಮಹಾರಥಿಕರನು || ೩೦ ||

ಇಂತು ಬರ್ಪವನುರವಣೆಯ ಕಂಡಾ ಕ್ರೋ | ಧಾಂತಕನಾ ವಸುದೇವ |
ಅಂತರಿಸಿದೆ ತೇರ ನೂಂಕುವ ಸಮಯಕೆ | ಮುಂತೆ ಬಂದಾ ಕಂಸ ನಿಂದು || ೩೧ ||

ದೇವ ಬಿನ್ನಪಮೀಬೆಸನನು ನನಗಿರ | ದೀವುದೆನುತ ಬೇಡಲಾಗ |
ಆ ವಸುದೇವನಂತೇ ಮಾಡೆನಲವ | ನಾ ವಹಿಲದಿ ತೇರನೂಂಕಿ || ೩೨ ||

ಗಂಡುತನದೊಳಿದಿರಾದಾ ಕಂಸನ | ಕಂಡು ಪಸಿದ ಹುಲಿಯಂತೆ |
ದಿಂಡುಗೆಡಹುವೆನಿವನನೆಂದಾ ಉ | ದ್ದಂಡನು ಕೊಬ್ಬಿರದೇರಿ || ೩೩ ||

ಎಲವೋ ಧೀರವ ನೀನೆನಗೆಣೆಯೇಯೆಂದು | ಬಲಿದೆಸೆವಾಸಿಂಹರಥನ |
ಅಲಘುವರೂಥಕಿಕ್ಕಿದ ಸಿಂಹವೆರಡರ | ತಲೆಗಳ ಪರಿದೆಚ್ಚನಾಗ || ೩೪ ||

ತಡೆಯದೆ ಮತ್ತೊಂದು ಶರದೊಳಗಾ ವಿಭು | ವಡರ್ದವರೂಥವನವನು |
ಪಿಡಿದ ಬಿಲ್ಲಂಬಲವನು ತೊಟ್ಟ ಕವಚರ | ಕಡಿದು ವಿರಥನ ಮಾಡಿದನು || ೩೫ ||

ಸಂಶಯಮಿಲ್ಲದೆ ಪಿಡಿದಾಸುಭಟೋ | ತ್ತಂಸಕಂಠೀರವರಥನ |
ಕಂಸನಿರದೆ ಪಿಡಿದಾಯಾದವರಾಜ | ಹಂಸನ ಮುಂದಿರಿಸಿದನು || ೩೬ ||

ಬಳಿಕಮಭಯಘೋಷಣೆಯ ಹೊಯಿಸಿಯಾ | ಹೊಳಲ ಹೊಕ್ಕಲ್ಲಿ ಶೋಭಿಸುವ |
ಕಲಿಲವಿಜಯ ಬಾಹುಬಲಿಕೇವಲಿಗಳ | ನಿಲಯವ ಹೊಕ್ಕಭಿನಮಿಸಿ || ೩೭ ||

ಅಲ್ಲಿಂದ ಬೀಡನೆತ್ತಿಸಿ ಶೌರೀಪುರ | ಕುಲ್ಲಾಸದಿಂದೆಯ್ತಂದು |
ಬಲ್ಲಿದ ಸಿಂಹರಥನನು ತಂದಣ್ಣನ | ಮೆಲ್ಲಡಿಗಳ ಮುಂದಿರಿಸಲು || ೩೮ ||

ಈ ಸಿಂಹರಥನ ನೀನೇ ಕೊಂಡು ಪೋಗಿ ಜ | ರಾಸಂಧಚಕ್ರೇಶ್ವರಗೆ |
ಈ ಸಮಯದೊಳೊಪ್ಪಿಸಿ ಬರಹೇಳೆನ | ಲಾ ಸಾಸಿಗನಲ್ಲಿಗೆಯ್ದಿ || ೩೯ ||

ಅವನನೊಪ್ಪಿಸೆ ಕಂಡತಿ ಹರುಷವ ತುಳಿ | ಯವನೀಶ್ವರನಿಂತು ನುಡಿದ |
ಇವನಾವನು ಗೆಲ್ದಾತಗೆ ನಮ್ಮೀ ಕುವರಿಯ ಜೀವಂಜಸೆಯನು || ೪೦ ||

ಅವನೊರೆದಿಳೆಯ ಕೊಡುವೆನೆಂದೆವದರಿಂದ | ಕುವರಿ ನಿನಗೆ ಮೊರೆಯಲ್ಲ |
ಇವಳ ನಿನ್ನಯ ಮನಸಿಗೆ ಬಂದವನಾವ | ನವಗೆ ಮದುವೆ ಮಾಡೆನಲು || ೪೧ ||

ಆ ಸೊಲ್ಲಿಗಾವಸುದೇವನಿಂತೆಂದನಿಂ | ದೀ ಸಿಂಹರಥನನು ಹಿಡಿದ |
ಸಾಸಿಗನಿವನೆಂದಾ ಕಂಸನನೂ ಜ | ರಾಸಂಧಗೆ ತೋರಿಸಿದನು || ೪೨ ||

ಆವ ವಂಶೋದ್ಭವನೆಂದವನನು ಕೇಳೆ | ದೇವ ಕೌಶಂಬಿಯೊಳೋರ್ವ |
ಧೀವರನಣುಗನೆಂದಾ ಕಂಸನುಸುರಿದೊ | ಡಾವಸುಧಾವಲ್ಲಭನು || ೪೩ ||

ಅವನ ಜಾನುಜಂಘಿಗಳಪ್ಪಭುಜಯುಗ | ಮವನ ಲಕ್ಷಣಲಲಿತಾಂಗ |
ಅವನ ವಿಶ್ರುತ ವಕ್ಷಮವನ ಸೌಂದರ್ಯ ಮ | ತ್ತವನ ಲಾವಣ್ಯವ ನೋಡಿ || ೪೪ ||

ಇವನು ಸತ್ಕಲಜನಲ್ಲದೆ ದುಷ್ಕಲಜನಲ್ಲ | ವಿವರಿಪೆನಾನಿದನೆಂದು |
ಅವನ ತಂದೆಯ ಕರೆತರ ಹೇಳಿ ಕೌಶಂಬಿ | ಗವನಿಪನಾಳನಟ್ಟಿದನು || ೪೫ ||

ಬಂದಾಚರರಾಧೀವರನೊಳಗಿಂ | ತೆಂದರಾಕಂಸನು ನಿನ್ನ |
ನಂದನನೊ ಅಲ್ಲವೊ ಎಂಬುದನು ಕೇಳ | ಲಿಂದೆಮ್ಮರಸನಟ್ಟಿದನು || ೪೬ ||

ಎನೆ ಬೆಚ್ಚುತಾಧೀವರನೆಂದನು ಕಂಸ | ನೆನಗೆ ಹುಟ್ಟಿದ ಮಗನಲ್ಲ |
ಎನುತೊಂದು ಮಂದಾಸು ಸಹಿತ ಚಕ್ರೇಶನ | ಬಳಿಗಿದೆಯ್ದಿದನವನು || ೪೭ ||

ಬಂದು ದೂರದೊಳು ಸಾಷ್ಟಾಂಗನಮಿತನಾಗಿ | ಮಂದಾಸನಿರಸಿ ಭೀತಿಯೊಳು |
ನಿಂದು ಬಿನ್ನಪದೇವ | ಕಾಳಿಂದಿಯೊಳೀ | ಮಂದಾಸು ಬರುತಿರೆ ತೆಗೆದು || ೪೮ ||

ಕಾಂಸ್ಯಮಂಜೂಷೆಯೊಳಿರ್ದ ಕಾರಣದಿಂ | ಕಂಸನೆಂಬಾ ಹೆಸರಿಟ್ಟು |
ಸಂಶಯಮಿಲ್ಲದೆ ನಿಜತನುಜನ ತೆರ | ದಿಂ ಸಾಕುತಿರೆ ದುಷ್ಟನಾಗಿ || ೪೯ ||

ಪೊಳಲೊಳು ಕಂಡಕಂಡರೊಳು ಹೋರಟೆ | ಗೊಳುತಿರಲದಕಾನಲಿಸಿ |
ಬಳಿಕ ನನ್ನೊಳು ನೀನಿರಬೇಡವವೆಂದೀ | ಖಳನ ಪೊರಮಡಿಸಿದೆನು || ೫೦ ||

ಎನಲಾ ಮಂದಾಸ ತರಿಸಿಯಾಕೆಲದೊಳು | ಜನನುತ ಸೋಮವಂಶಜನು |
ಮನುಜೇಶನುಗ್ರಸೇನಗೆಯಾತನ ಸತಿ | ವನಜಾಕ್ಷಿ ಪದ್ಮಾವತಿಗೆ || ೫೧ ||

ಜನಿಸಿದ ಸಿಸುವೆಂಬ ವರ್ಣವನೋದಿಸಿ | ಜನಪತಿ ತನ್ನನುಜಾತೆ |
ವನಜಾತಿಯ ತನುಜನೆಂಬುದನರಿ | ದನುರಾಗಮಾಸನವಾಗಿ || ೫೨ ||

ಅರಸುವ ಬಳ್ಳಿ ಕಾಲನು ತೊಡರಿತ್ತೆಂಬ | ತೆರನಾಗಿ ನನ್ನ ನಂದನೆಗೆ |
ಎರೆಯ ನೀನಾದೆಯೆನುತ ಕಂಸಗೆ ಧಾರೆ | ಯೆರೆದನು ಜೀವಂಜಸೆಯ || ೫೩ ||

ಮದುವೆಯ ಮಾಡಿ ಬಳಿಕ ಬೇಡಿದ ಜನ | ಪದವನೀವೆನು ಬೇಡೆನಲು |
ಅದಕಾಕಂಸನು ನಿಜಪಿತೃರಾಜನು | ನದನೆ ಪಾಲಿಸಬೇಕೆನಲು || ೫೪ ||

ಇವನ ವೈರವನು ತಿಳಿವೆನೆಂದಾ ಭೂ | ಧವನಿರದೆಳ್ದು ಬಂದೋರ್ವ |
ಅವಧಿಜ್ಞಾನಿಮುನೀಶನ ಪದಪದ್ಮ | ಕವನತನಾಗಿ ಕೈಮುಗಿದು || ೫೫ ||

ಮುನಿಕುಲತಿಲಕ ಬಿನ್ನಪಮೀ ಕಂಸಗೆ | ಜನನೀ ಜನಕರೊಳು ವೈರ |
ಜನಿಸಿದುದೇನುಕಾರಣ ಬೆಸೆಸೆನಲತಿ | ವಿನಯದೊಳಿಂತು ನುಡಿದರು || ೫೬ ||

ಈ ಪೃಥ್ವಿಯೊಳು ಪಂಚಾಗ್ನಿನಿಮಧ್ಯದೊಳೋರ್ವ | ತಾಪಸಿ ತಪಗೆಯ್ವತಿರಲು |
ಆ ಪದದೊಳು ವೀರಭದ್ರವೆಸರಜಾತ | ರೂಪನೋರ್ವನು ಬರುತಿರ್ದ | ೫೭ ||

ಇದು ಹಿಂಸಾರೂಪದತಿಕಷ್ಟತಪವೆನ | ಲದ ಕೇಳಿ ಕೋಪದಿಂದೆದ್ದು |
ಅದಿರದೆ ಕೊಡಲಿಯ ತಿರುಪುತ ಹಿಂಸೆಯ | ನಿದರೊಳು ತೋರು ನೀನೆನಲು || ೫೮ ||

ಅವರವನುರಿಪುರ ಕಿಚ್ಚಿನೊಳಗೆ ಜೀವ | ನಿವಹವುರಿವುದನು ತೋರೆ |
ಅವನದಕತಿ ಬೆರಗಾಗಿ ಮುಂದರಿಯದೆ | ಇವಗೆ ಮುನಿದೆನೆಂದಾಗ || ೫೯ ||

ಪರಸುವ ಬಿಸುಟು ಬಳಿಕ ನಿಮ್ಮ ಚರಿತವ | ಧರಿಸುವೆನುನುತವರ್ಗೆರಗಿ |
ನಿರುತಮಪ್ಪ ಜಿನದೀಕ್ಷೆಯನಾಂತು ನಿ | ಷ್ಠರುಮಪ್ಪ ತಪಗೆಯ್ಯಲೊಡನೆ || ೬೦ ||

ವನದೇವತೆಗಳಾ ತಪದ ಸಾಮರ್ಥ್ಯಕೆ | ಮನದೆಗೊಂಡೆಯ್ದಿ ಕೈಮುಗಿದು |
ಮುನಿಪತಿ ಬೆಸೆಸೆನಲಾ ನಾವಾಗ | ನೆನೆಯಲೊಡನೆ ಬನ್ನಿಮೆಂದು || ೬೧ ||

ಮುದದಿಂ ಮಧುರೆಗೆ ಬಂದು ಮಾಸೋಪವಾ | ಸದೊಳಿರಲು ಉಗ್ರಸೇನ |
ಪದಪಿಂ ಬಂದವರ್ಗೆರಗಿ ತನ್ನೊಡನೆ | ಯ್ದಿದ ಭವ್ಯನಿಕರಕಿಂತೆಂದ || ೬೨ ||

ಪಾರಣೆಗಿವರು ಬಿಜಯ ಮಾಡಲು ತಾನೆ | ಯಾರಯ್ಯದೆ ನಿಲಿಸುವೆನು |
ಉರೊಳಗಾರು ನಿಲ್ಲಿಸಬೇಡವೆಂದಾ | ಭೂರಮಣೀಶನು ಬೆಸಸಿ || ೬೩ ||

ಮುನಿಗೆ ವಂದಿಸಿ ಪುರವಕೆಯ್ದಿಲಾ ಮರು | ದಿನದೊಳಗಾಯತಿವರರು |
ಅನುನಯದಿಂ ಪಾರಣಗೆಂದು ಬರಲಾ | ಜನಪನೇರುವ ಪಟ್ಟದಾನೆ || ೬೪ ||

ಮದವೆದ್ದು ಪುರದೊಳು ಕೋಳಾಹಳ ಮಾಡ | ಲದರಿಂದಾ ನೃಪವರನು |
ಪದುಳದಿನವರನು ನಿಲಿಸಲು ಮರೆದಿರ | ಲದಕವರಲ್ಲಿಂದ ತಿರುಗಿ || ೬೫ ||

ಬಂದು ಬಳಿಕ್ಕೊಂದು ಮಾಸೋಪವಾಸದೊ | ಳ್ನಿಂದು ಮತ್ತದರಂತರದೊಳು |
ಒಂದಿದ ಹಸುವಿಂದಾ ನಗರಿಗೆ ಭಿಕ್ಷೆ | ಗೆಂದು ನಡೆದು ಬರುತಿರಲು || ೬೬ ||

ಅರಮನೆ ಕಿಚ್ಚೇಳ್ದಾಸಂಭ್ರಮದಿಂ | ಧರಣೀಪತಿ ನಿಲಿಸುವುದ |
ಪಿರಿದಾಗಿ ಮರೆದಿರಲರಸನಾಜ್ಞೆಯೊಳಾ | ಪುರಜೆನ ನಿಲಿಸಲಣ್ಮದಿರೆ || ೬೭ ||

ಮುನಿಪತಿ ಮುಗುಳ್ದು ಮುನ್ನಿನ ತೆರದಿಂದನ | ಶನವ ಕೈಕೊಂಡು ಕಡೆಯ |
ದಿನದೊಳು ಪಾರಣೆಗೆಂದು ಬರಲ್ಕೋರ್ವ | ಜನಪತಿಯಾಪುರಕೆಯ್ದಿ || ೬೮ ||

ಬರಲಾತನನಿದಿರ್ಗೋಂಬ ವೈಭವದಿ | ದರಸು ಮುನಿಯನಿಲಿಸುವುದ |
ಪಿರಿದಾಗಿ ಮರೆದಿರಲೊಡಲೊಳು ದೀಪನ | ದುರಿಹತ್ತಿ ಬಲಹೀನನಾಗಿ || ೬೯ ||

ತಿರುಗಿ ಪಡೆಯಲಾರದಾ ನಗರದ ಚ | ತ್ವರದ ಕೆಲದ ಗೋಡೆಯೊಳು |
ಪಿರಿದಾಗಿ ನೆಮ್ಮಿರೆ ಕಂಡಿಂತೆಂದರು | ಪುರದೊಳಗೆಡೆಯಾಡುವರು || ೭೦ ||

ಆರೊಬ್ಬರಿಂದ ನಿಲಿಸಲೀಯ ತಾನವಿ | ಚಾರದಿನಿವರನಿಲಸನು |
ಈ ರಾಯಗೀ ಮುನಿಯೊಳು ಚಲವೋಯೆನೆ | ಭೋರನೆ ಮುನಿಸಂಕುರಿಸಿತು || ೭೧ ||

ಈ ವಿಧದಿಂ ಕೋಪಾನಲನೊಡಲೊಳ | ಗಾವರಿಸಲು ಪಿಂತೆ ತನಗೆ |
ಓವದೆ ಸಾಧ್ಯಮಾದೇವತೆಗಳು | ತಾವೈದಿ ಬೆಸೆನೇನೆನಲು || ೭೨ ||

ಇಂತೆಂದನಾ ಮುನಿಯೆನಗೀಗ ಜೀವನ | ವಂತೊರೆವಾವೇಳೆಯಾಯ್ತು |
ಮುಂತಣಭವಕೆಯೊದಿಗಿಯೆನಲವು ಪೋ | ದಂತರದೊಳಗಾ ತಪಸಿ || ೭೩ ||

ತನವನು ಬಿಸುಟಾ ಉಗ್ರಸೇನನ ನಿಜ | ವನಿತೆಯ ಗರ್ಭವಾಸದೊಳು |
ಜನಿಯಿಸಿಲೊಡನಾಕೆಗೆ ಪೊಲ್ಲದ ಬಯಕೆ | ಮನದೊಳಗೊಗೆಯಲಂತದನು || ೭೪ ||

ಇನೆಯನೊಳುಸುರಲಮ್ಮದೆ ಮೌನಗೊಂಡಿರೆ | ಜನಪನವಳ ಮನವರಿದು |
ವನಿತೆಯಿದೇನು ಕಾರಣವೆಂದಾಗ್ರಹ | ವನೆ ಮಾಡಿ ಬೆಸಗೊಳಲವಳು || ೭೫ ||

ಏಕಾಂತದೊಳೆಲೆ ವಿಭು ನಿನ್ನ ವಕ್ಷವ | ನೇ ಕೊರೆದಾರಕ್ತವನು |
ಸಾಕೆಂಬಂತೀಂಟುವ ಬಯಕೆಯಾಯ್ತಿ | ನ್ನೇಕೆನ್ನ ಜೀವನದಾಸೆ || ೭೬ ||

ಎನಲೆಂದನೆಲೆ ಮಾನಿನಿ ನಿನ್ನ ಬಸಿರೊಳ | ಜನಿಸಿದ ಶಿಶುವಿನ ಮನದ |
ಮುನಿಸಿನ ತೆರನಲ್ಲದೆ ಮತ್ತೊಂದಲ್ಲ | ವೆನುತ ಮನೆಯ ಪೊರಮಟ್ಟು || ೭೭ ||

ಮಂತ್ರಶಾಲೆಗೆ ಬಂದಾಕಾರ್ಯವನಂದು | ಮಂತ್ರಾಲೋಚನೆ ಮಾಡಿ |
ತಂತ್ರದಿಂದಾನಿದನೆಸಗುವೆನೆಂದಾ | ಮಂತ್ರಿಭೂಪನ ಬೀಳ್ಕೊಂಡು || ೭೮ ||

ಅರಸನ ಪೋಲ್ವಿಕೆಯಿಂದೊಂದು ಲೆಪ್ಪದ | ಕರುವ ಮಾಡಿಸಿಯದರೊಳಗೆ |
ಪರಿಪೂರಿಸಿಯಲತಗೆಯರಸವನಾ | ವರಮಂತ್ರಿ ಗೂಢದೊಳಿರಿಸಿ || ೭೯ ||

ಅರಸಿಯಲ್ಲಿಗೆ ಬಂದು ದೇವಿ ಬಿನ್ನಪ ನಿ | ಮ್ಮರಸನಿರ್ದಪನ ತೀರ್ಚುವುದು |
ಭರದಿಂದ ನಿಮ್ಮ ಬಯಕೆಯನೆದಾ ಲೆಪ್ಪ | ದರಸನ ಮರೆಯೊಳಗಿರಿಸಿ || ೮೦ ||

ಮತ್ತಮಿಂತೆಂದನು ಎಲೆದೇವಿ ನಿನ್ನಾ | ಚಿತ್ತೇಶನನೀಕ್ಷಿಸುತವೆ |
ಶಕ್ತಿ ಗೊಂಡಿರುವುದುಚಿತವಲ್ಲವೆಂದಾ | ವೃತ್ತಕುಚೆಯ ನಿಜಮುಖಕೆ || ೮೧ ||

ವರವಸ್ತ್ರವನು ಮರೆಯಮಾಡಿ ಕೈಯೊಳು | ಸುರಗಿಯ ಕೊಡಲು ಕೃತ್ರಿಮವ |
ಅರಸನೆದೆಯ ತಿವಿದೊಗುವರುಣಾಂಬುವ | ನರಸಿ ಕೋಪದೊಳೀಂಟಿ ಬಳಿಕ || ೮೨ ||

ತನ್ನಿಚ್ಛೆ ತೀರೆ ಲೆಪ್ಪದ ಭೂಪತಿಯನು | ತನ್ನ ವಲ್ಲಭನೆಂದು ಬಗೆದು |
ಉನ್ನತಮಪ್ಪ ದುಃಖದಿ ಕೆಟ್ಟೆನಂದಾ | ಚೆನ್ನೆ ಮೂರ್ಛೆಗೆ ಸಲಲಾಗ || ೮೩ ||

ಅತಿ ಶೀತಳಕ್ರಿಯೆಯಿಂದಮೆಚ್ಚರಿಸಿ ಭೂ | ಪತಿ ಬರ್ದುಕಿದನೆಂದವನು |
ಸತಿಯ ಸಂತೈಸಿ ಕೆಲವುದಿನಕಾತನು | ಕ್ಷತಪಿಂಗಿತೆಂದಾಕೆಗರುಪೆ || ೮೪ ||

ಆ ರಮಣೀಮಣಿಗೊಗೆದ ಮನಕ್ಷತ | ತೀರಲು ನವಮಾಸ ತುಂಬಿ |
ಕ್ರೂರಮಪ್ಪ ಲಗ್ನದೊಳು ಸಿಸುವುದಯಿಸ | ಲಾರಯ್ಯದಾ ಭೂವರನು || ೮೫ ||

ಬಂದಾ ಹಸುಳೆಯ ಮೊಗನೋಡಲದು ತನ್ನ | ತಂದೆಯ ಮೊಗವ ನೊಡುತವೆ |
ಒಂದಿದ ಕೋಪದಿ ಕಡೆಗಣ್ಗಳೊಳು ಕೆಂಪು | ತಂದು ನೀರಿಕ್ಷಿಸುತಿರಲು || ೮೬ ||

ಈ ಮಗ ತನಗೆ ಪಗೆವನೆಂದು ಬಗೆದು ಮ | ತ್ತಾ ಮನುಜೇಶ್ವರನುಸುರೆ |
ಆ ಮಂತ್ರಿಯೊಂದು ಕಂಚಿನ ಮಂಜೂಷೆಯೊ | ಳಾ ಮಗುವನು ತಂದಿರಿಸಿ || ೮೭ ||

ಕೆಲದೊಳು ಸುರಿದು ರತ್ನಮ ತಂದೆತಾಯ್ಗಳ | ಕುಲಮನವರ ನಾಮವನು |
ನೆಲೆಯಾಗಿ ಬರೆಯಿಸಿ ಜಗುನೆಯೊಳಗೆ ಬಿಡೆ | ನಲವಿಂದದು ಪರಿತರಲು || ೮೮ ||

ಅದನು ಕೌಶಂಬಿಯೊಳೋರ್ವಧೀವರ ಕಂಡು | ಮುದದಿಂ ತೆಗೆದುಕೊಂಡೊಯ್ದು |
ಒದವಿದ ಮರುಕದಿನಾ ಕಂಸನ | ಸಾಕಿದನೆಲೆಯರ್ಧಚಕ್ರೇಶ | ೮೯ ||

ಎಂದು ನಿರೂಪಿಸಿದಾಜತಿರಾಯಗೆ | ಬಂದಿಸಿ ಬಳಿಕ ಬೀಳ್ಕೊಂಡು |
ಮಂದಿರಕೆಯ್ದಿ ಮತ್ತಾಮರುದಿನದೊಳು | ನಂದನೆಗುಡುವಲಿಗೊಟ್ಟು || ೯೦ ||

ಅವನ ಕೋಪವನರಿದಾ ಮಧುರೆಯ ನಾ | ನಿನಗೆ ಕೊಡಲು ಮಾತೃಪಿತೃಗೆ |
ತವೆಯದ ದುಃಖವಹುದು ಕೊಡದಿರ್ದೊಡೆ | ನವಗೆ ಭಾಷಾಭಂಗವಹುದು || ೯೧ ||

ಎಂದು ಕಂಸನ ಕರೆದಾ ತಂದೆತಾಯ್ಗಳ | ಕೊಂದು ರಾಜ್ಯವನಾಳಬೇಡ |
ಎಂದು ನುಡಿದು ಬಳಿಕವನಾ ಮಧುರೆಯ | ನಂದು ಪಾಲಿಸಿ ಬೀಳ್ಕೊಡಲು || ೯೨ ||

ಪಿರಿದು ಭಕ್ತಿಯೊಳು ವಂದಿಸಿ ವಸುದೇವ ಭೂ | ವರೆಗೆ ಕಂಸನು ದೇವ ನಿಮ್ಮ |
ಕರುಣದಿನಿಂತಿಪ್ಪ ಮಹದೈಶ್ವರ್ಯವು | ದೊರೆಕೊಂಡಿತೆನಗದರಿಂದ || ೯೩ ||

ಆ ಮಧುರೆಗೆ ಬಿಜಯಂಗೆಯ್ದನ್ನ ಸು | ಪ್ರೇಮದೊಳಿರಿಸುವುದೆನಲು |
ಆ ಮಾತನವಧಾರಿಸಿ ಕಂಸನ ಕೊಡೆ | ಯಾ ಮಹಿಪನು ನಡೆತರಲು || ೯೪ ||

ಭರದಿ ಮಧುರೆಗೆ ಬಂದು ಜನನೀಜನಕರ | ನುರುತರಕೋಪದಿಂ ಪಿಡಿದು |
ಪುರದ ಬಾಗಿಲ್ವಾಡದ ಮೇಲಸಿಪಂ | ಜರದೊಳು ಸೆರೆಯನಿಕ್ಕಿದನು || ೯೫ ||

ಮತ್ತಾಪುರಕೆಯರಸನಾಗಿಯಾ ಭೂ | ಪೋತ್ತಂಸ ವಸುದೇವನೊಳು |
ಚಿತ್ತಶುದ್ಧಿಯೊಳು ಭೃತ್ಯತ್ವವಡೆದು ಸಂ | ಪತ್ತಿಯೊಳಾ ಕಂಸನಿರ್ದ || ೯೬ ||

ಆ ಉಗ್ರಸೇನಮನಿಹಪನನುಜಾತನು | ದೇವಸೇನನೆಂದೆಂಬ |
ಭೂವಲ್ಲಭನಗ್ರಮಹಿಷಿ ಪೆಣ್ಮಣಿ ಧನ | ದೇವಿಯೆಂಬವಳಿಹಳವರ || ೯೭ ||

ಅತಿ ಮುಕ್ತನೆಂಬ ಕುಮಾರಕನಾಕಂಸ | ನತಿ ದುಷ್ಟತನವನು ಕಂಡು |
ಮತವಲ್ಲ ಸಂಸ್ಕೃತಿಯೆಂದು ದೀಕ್ಷೆಯನ | ಪ್ರತಿಮನಾಗುತ ಧರಿಯಿಸಿದ || ೯೮ ||

ಮತ್ತಾತನ ಕಿರಿಯಳು ದೇವಕಿಯೆಂ | ಬುತ್ತಮರೂಪವತಿಯನು |
ಮತ್ತಮರಾಳಗಮನೆಯನುರ‍್ವೀಪಾ | ಲೋತ್ತಂಸವಸುದೇವನಿಗೆ || ೯೯ ||

ದೇವ ಕೇಳಿಂತಿದು ಗುರುಪೂಜೆಯೆಂದು ಮ | ಹಾವಿಭವದೊಳು ರತಿಯನು |
ಭಾವಭವಗೆ ಕೊಡುವಂದದಿ ಮದುವೆಯ | ತೀವಿದ ಮುದದಿ ಮಾಡಿದನು || ೧೦೦ ||

ಆ ವನಿತಾರತ್ನದೊಡನೆ ಸಂತತ ವಸು | ದೇವರಾಜೇಂದ್ರಶೇಖರನು |
ತೀವಿದ ಮಮತೆಯಿಂದತ್ಯಂತ ಸುಖಸಂಕ | ಥಾವಿನೋದದೊಳೊಪ್ಪಿದನು || ೧೦೧ ||

ಅನುಪಮರೂಪನತ್ಯಂತ ಕಲಾವಿದ | ನನಿಮಿಷಕುಜನಿಭದಾನಿ |
ಜನತಾಧಿಪ ವಸುದೇವನೊಪ್ಪಿದನಾ | ವಿನಯವನಧಿಚಂದ್ರಮನು || ೧೦೨ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮೀಜಿನೇಶಸಂಗತಿಯೊಳ | ಗಿದು ಪದಿಮೂರಾಶ್ವಾಸ || ೧೦೩ ||

ಹದಿಮೂರನೆಯ ಸಂಧಿ ಸಂಪೂರ್ಣಂ