ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಬಾವನ್ನವೀರಕಂಸನ ಕಡುಗೈಗೇಳಿ | ದಾವಸುಧಾಮಂಡಲದ |
ಚಾವಡಿ ಚಾವಡಿಯೊಳಗುಳ್ಳ ವೀರಭ | ಟಾವಳಿ ಬಂದು ಸೇರಿದುದು || ೨ ||

ತಾನಿರಯಲು ಬಲ್ಲನಿರಿದವರಿಗೆ ಕೈ | ವಾರದೆ ಮೆಚ್ಚೀಯಬಲ್ಲ |
ಭೂನುತಗುಣಿಕಂಸನೃಪನೆಂದು ಸೇರಿದ | ರಾನಾಡನಾಡಸುಭಟರು || ೩ ||

ಪೃಥುವಿಯೊಳುಳ್ಳರ್ಧರಥಸಮರಥರತಿ | ರಥರು ಮಹಾರಥರುಗಳು |
ಪೃಥುವೀರವಿತರಣಗುಣಿ ಕಂಸನ ಗುಣ | ಕಥನವ ಕೇಳಿ ಸೇರಿದರು || ೪ ||

ದಿಕ್ಕರಿನಿಕರವನಾನೆವಿನ್ನಾಣದಿ | ಧಿಕ್ಕರಿಸುವ ಜೋಧರರು |
ಲೆಕ್ಕವಿಲ್ಲದೆ ಬಂದು ಸೇರಿದರಾರಣ | ರಕ್ಕಸಕಂಸಭೂವರನ || ೫ ||

ಭರತತ್ರಿಖಂಡಮಂಡಲದೊಳಗುಳ್ಳರಿ | ಬಿರುದಿನ ರಾಯರಾವುತರು |
ಅರಿನೃಪಗಜಕೇಸರಿಕಂಸನೃಪನನಾ | ದರದಿಂಬುದು ಸೇರಿದರು || ೬ ||

ಚಕ್ರಿಗವನೆ ತೋಲ್ವಲಂವೆಂದಾ ಭೂ | ಚಕ್ರದ ಮಕುಟವರ್ಧನರು |
ವಿಕ್ರಾಂತಯುತಕಂಸಭೂಪಾಲನ ನಾ | ನಾಕ್ರಮದಿಂದೋಲಯಿಪರು || ೭ ||

ದುರಗಲಿ ಕಂಸನುದ್ಧತ ಸಾಹಸವ ಕೇಳಿ | ಹರಿವ ಹಾವುರಿವ ಕಿಚ್ಚುಗಳು |
ಭರದಿಂದಡಗುವುವದರಿಂದವನ ನಿ | ಷ್ಠುರ ಬಲಯುತವನೇನೆಂಬೆ || ೮ ||

ನಷ್ಟಾರಾತಿನರೇಂದ್ರನಿಕಾಯನ | ರಿಷ್ಟನಧಿಕಕೋಪಯುತನು |
ಅಷ್ಟಮದೊಪೇತನವನೀತಳಕತಿ | ದುಷ್ಟನರಸನಾಗಿಹನು | ೯ ||

ಸತ್ಯಸದಾಚಾರಗಳಿಗತಿ ದೂರನ | ಕೃತ್ಯಮಾನಸರ್ಗೆ ಹಿತವನು |
ಅತ್ಯಂತ ಕಪಟಹೃದಯನಾರಾಜಾಧಿ | ಪತ್ಯದೊಳಗೆ ನಿಂದಿರಲು || ೧೦ ||

ದೇವಕಿದೇವಿಯ ಹಿರಿಯಣ್ಣನಖಿಳೋ | ರ್ವೀವಿಶ್ರುತತಪದೊಳಗೆ |
ಓವದೆನೆಗಳಿಯವಧಿಬೋಧಯುತನಾಗಿ | ಯಾ ಊರಿಗೊಂದು ದಿನದೊಳು || ೧೧ ||

ಅನಶನಮಿರ್ದು ಪಾರಣೆಗೆಂದತಿ ಮುಕ್ತ | ಮುನಿ ಬೀದಿಯೊಳು ಬರುತಿರಲು |
ವನಜವದನೆ ದೇವಕಿದೇವಿಯಿದಿರ್ವಂ | ದನುರಾಗದಿಂ ನಿಲಿಸಿದಳು || ೧೨ ||

ಬಳಿಕುನ್ನತಾಸನದೊಳು ಕುಳ್ಳಿರಿಸಿ ಕೋ | ಮಲತರ ಪಾದಪದ್ಮವನು
ತೊಳೆದು ವಿಶಿಷ್ಟಮಪ್ಪಷ್ಪವಿಧಾರ್ಚನೆ | ಗಳಿನರ್ಚಿಪ ಸಮಯದೊಳು || ೧೩ ||

ಭೂವಲ್ಲಭ ಕಂಸನ ಪಟ್ಟವಲ್ಲಭೆ | ಜೀವಂಜಸೆ ನಡೆತಂದು |
ದೇವಕಿ ಪುಷ್ಪಿತೆಯಾದ ವಸ್ತ್ರವನು ತಂ | ದಾ ವರ್ಣಿಯ ಮುಂದೆ ಪಿಡಿದು || ೧೪ ||

ಎಲೆಯತಿ ಮುಕ್ತಭಾವ ನೀನೇಕೆ ಬೆ | ತ್ತಲೆ ಬಂದೆಯೀ ವಸ್ತ್ರವನು |
ಒಲಿದುಟ್ಟುಕೊಂಡು ನಿನ್ನೀತಂಗಿ ದೇವಕಿ | ಹೊಲೆ ತಡೆದೆಂತಪ್ಪ ಮಗನ || ೧೫ ||

ಹಡೆವಳೆನಲು ಕೇಳಿಯಲ್ಲಿಂ ಮುಂದಕೆ | ನಡೆವುತಿರಲು ಪರಿತಂದು |
ಕಡುರಾಗದಿಂದಡ್ಡನಿಂದು ಕಾಡಿದೊಡಾ | ಕೆಡಕಿಯೊಳಿಂತಾಡಿದರು || ೧೬ ||

ಸನ್ನುತ ದೇವಕಿದೇವಿಯಣುಗ ವಿಕ್ರ | ಮೋನ್ನತ ನಿನ್ನ ಗಂಡನನು |
ನಿನ್ನ ತಂದೆಯನು ನೆಲಕೆ ನೆರಪುವನಿದು | ನನ್ನಿಂಯೆಂಬಾ ನುಡಿಗೇಳಿ || ೧೭ ||

ಸಿಂಗದ ಗರ್ಜನೆಯನು ಕೇಳಿದ ಮಾ | ತಂಗಿಯಂದದೊಳಾದುಷ್ಟೆ |
ಅಂಗಜಮಲ್ಲನನುಡಿಗೆಳಿ ಮನೆಗೆಯ್ದಿ | ಹಿಂಗದಿರ್ಪಾ ದುಃಖದಿಂದ || ೧೮ ||

ಮಾಗಿಯ ಕೋಗಿಲೆಯಂದದಿನಾ ಸತಿ | ಮೂಗುವಟ್ಟಿರೆ ಕಂಸನೆಯ್ದಿ |
ರಾಗಾಧರೆ ನಿನ್ನ ಮನಸಿನುಬ್ಬೆಗವನು | ನೀಗಿಸುವೆನು ಪೇಳೆನಲು || ೧೯ ||

ಅತಿಮುಕ್ತಮುನಿಪತಿ ನುಡಿದ ನುಡಿಯ ತನ್ನ | ಪತಿಯೊಳೊರೆಯೆ ಕೇಳಿಯವನು |
ಅತಿಭೀತಮಾನಸನನ್ಯಥಾಮುನಿಭಾ | ಷಿತಮೆಂದು ಮನದೊಳೇವೈಸಿ || ೨೦ ||

ಮತ್ತಮುದ್ಧತ ಸತ್ತ್ವನಪ್ಪುದರಿಂದಾ | ಚಿತ್ತವಲ್ಲಭೆಗಿಂತು ನುಡಿದ |
ಮತ್ತತ್ವದಿಂ ನೀನು ಕಾಡಿದೊಡಾ ಮುನಿ | ಪಿತ್ತೋದ್ರೆಕದೊಳಿರದೆ || ೨೧ ||

ಒರಲಿದೊಡೇತಕೆ ಬಹುಚಿಂತೆ ಬಣ್ಣವಾ | ಯ್ದೆರೆಯಕೋಮಲೆಯಂತದಕೆ |
ಹರುವನು ಕಾಣದೆಯೆರ್ದೊಡೆ ನಾನು ನಿ | ನ್ನೆರೆಯನೆಯೆಂದು ಸಂತೈಸಿ || ೨೨ ||

ಇರಲಾದೇವಕಿದೇವಿಗೆ ಗರ್ಭವಂ | ಕುರಮಾಗಿ ಕಾಣಿಸಿ ಬೆಳೆದು |
ಬರಲೇಳುತಿಂಗಳು ದಿನದೊಳಗಾ ಕಂಸ | ನುರುತರ ಕಪಟಮಾನಸನು || ೨೩ ||

ವಸುದೇವನಲ್ಲಿಗೆ ಬಂದು ಕೈಮುಗಿದಿಂ | ತುಸುರ್ದನು ದೇವಕಿದೇವಿ |
ಪ್ರಸವಸಮಯದೊಳು ತವರುಮನೆಗೆ ಬಂದು | ಸಿಸುವನು ಹಡೆಯಲುಬೇಕು || ೨೪ ||

ಎಂದಮಾತಿಗೆ ಮೆಲ್ಲಗೆ ಮಾಡಲೊತ್ತಂಬ | ದಿಂದ ಪಾದವ ಕಟ್ಟಿಕೊಂಡು |
ಸಂದೇಹವೇಕೆಂದು ತಿಳುಪಿ ಭಾಷೆಯ ಕೊಂ | ಡಂದು ಮನೆಗೆ ಪೋದನಿತ್ತ || ೨೫ |

ದೇವಕಿಯರಿದು ಚಕಿತಚಿತ್ತೆಯಾಗಿ ಮ | ತ್ತಾವಲ್ಲಭನೆಡೆಗೆಯ್ದಿ |
ಆ ವರ್ಣಿ ಕೋಪದಿಂ ಮುಂದಪ್ಪಕಾರ್ಯಮ | ಜೀವಂಜಸೆಯೊಳಗಿರದೆ || ೨೬ ||

ಉಸುರಿದನದರಿಂದೆನ್ನೀ ಗರ್ಭದ | ಸಿಸುಗೆ ಕಂಟಕವನುತರದೆ |
ಸಸಿನೆ ನಿಲ್ವವನಲ್ಲನಾದುಷ್ಟನೆನೆ ಕೇಳಿ | ವಸುದೇವನಾ ಸತಿಗೂಡಿ || ೨೭ ||

ಗರ್ಭೀಕೃತಬೋಧರತಿ ಮುಕ್ತರೆಡೆಗೆಯ್ದಿ | ನಿರ್ಭರಭಕ್ತಿಯಿಂದೆರಗಿ |
ದುರ್ಭಾವಿಕಂಸನಿಂದೀ ದೇವಕಿಯ ನಿಜ | ಗರ್ಭಕುಂಟಹುದೇ ಕೇಡು || ೨೮ ||

ಎಂದು ನುಡಿದ ವಸುದೇವನೊಳಾ ಮುನಿ | ವೃಂದಾರಕನಿಂತು ನುಡಿದ |
ಸಂದೇಹಿಸದೆ ಕೇಳೀ ಮಧುರೆಯ ನೃಪ | ನಂದವಡೆದ ಸೂರಸೇನ || ೨೯ ||

ಅವನ ರಾಜಶ್ರೇಷ್ಠಿ ರವಿದತ್ತನೆಂಬವ | ನವನಿಗೆ ಯಮುನಾದತ್ತೆ |
ಯುವತಿಯವರ್ಗೇಳು ಮಂದಿ ಮಕ್ಕಳು ಸಂ | ಭವಿಸಿದ ರತಿರೂಪಯುತರು || ೩೦ ||

ಆ ನಗರಿಯೊಳತಿ ದುಷ್ಟಾಚಾರದಿ | ಭಾನುಸುರನು ಸೂರಕೀರ್ತಿ |
ಭಾವಸೇನಾ ಸುರದೇವ ಸೂರನು ಸೂರ | ಸೇನನೆಂಬವರಿರುತಿರಲು || ೩೧ |

ಆ ನಗರಿಯೊಳೋರ್ವ ಮುನಿ ಬರಲಲ್ಲಿಯ |ಭೂನಾಥನವರೆಡೆಗೆಯ್ದಿ |
ಭಾನುದತ್ತನುಗೂಡಿ | ಧರ್ಮದಿರವ ಕೇಳಿ | ಜೈನದೀಕ್ಷೆಯ ತಾಳಲಿತ್ತ || ೩೨ ||

ತಂದೆ ಗಳಿಸಿದ ಬಾರಹಕೋಟಿ ವಿತ್ತವ | ನೊಂದುಳಿಯದೆ ವೈಶ್ಯಸುತರು |
ತಂದು ದುರ್ವ್ಯಸನಕ್ಕೆ ಕೊಟ್ಟು ಕೆಡಿಸಿ ಕಳ | ವಿಂದ ಜೀವಿಸಿಕೊಂಡಿರಲು || ೩೩ ||

ಭೂವರನರಿದಾಯೇಳ್ವರು ಕಳ್ಳರ | ನಾ ಊರಿಂ ಪೋರಮಡಿಸೆ |
ಆ ವಿಷಯವ ಪೊರಮಟ್ಟುಜ್ಜೈನಿಯೆಂ | ಬಾ ಊರಿಗೊಂದು ರಾತ್ರಿಯೊಳು || ೩೪ ||

ಕಳಲೆಂದು ಬಂದಾ ಪೊಳಲ ಬಹಿರ್ಭಾಗ | ಸೊಳಗೊಂದು ಪಿತೃವನದೊಳಗೆ |
ಕುಲಸಂತತಿಗಿರಿಸುತ್ತಾ ಕಿರಿಯನಾ | ಬಲಯುತ ಸೂರಸೇನನು || ೩೫ ||

ಬಳಿಕ ತಾಮರುವರು ಕಳಲೆಯ್ದಲ್ಕಾ | ಪೊಳಲ ವೃಷಭಕೇತುವೆಂಬ |
ಇಳೆಯಾಣ್ಮನಕಿಂಕರ ವಜ್ರಮುಷ್ಟಿಯೆಂ | ಬಲಘುವಿಕ್ರಮಿಯಿಹನವಗೆ || ೩೬ ||

ಕನಕವಲ್ಲರಿ ಮಂಗಿಯೆಂಬ ಹೆಸರನಾಂತ | ವನಿತೆಯರಿಹರವರೊಳಗೆ |
ವಿನುತವಿಲಾಸಾನ್ವಿತೆ ಮಂಗಿಗೆ ಕ | ಣ್ಮನವಿತ್ತುಸಲೆವಾಳುತಿಹನು || ೩೭ ||

ಒಂದಾನೊಂದು ದಿನಸದೊಳಗರವೆಸ | ದಿಂದ ಬೇರೂರ್ಗೆಯ್ದಲವನು |
ಅಂದಾ ಕನಕವಲ್ಲರಿಯತಿ ಕಾಪಟ್ಯ | ದಿಂದವಳೊಳು ನೇಹಮಾಡಿ || ೩೮ ||

ಆ ಮಂಗಿ ಮುಡಿಹೂವಿನ ಮಾಲೆಯಮೇಲೆ |ಪ್ರೇಮವೆಂಬುದ ಬಲ್ಲಳಾಗಿ |
ಸಾಮವಿಲ್ಲದೆ ಹೂವಿನ ಹೇಳಿಗೆಯೊಳು | ದ್ದಾಮ ವಿಷಾಹಿಯನಿರಿಸೆ || ೩೯ ||

ಆ ಕೃತಕಮನರಿಯದೆ ಹೂವಮುಡಿವೆನಂ |ದಾ ಕೈಯನಿಡಲ್ಲಿರ್ದ |
ಆ ಕಾಳಾಹಿ ಹಿಡಿಯೆ ವಿಷಪೂರಿಸಿ | ಯಾ ಕಾಮಿನಿ ಬೀಳ್ದಳಾಗ || ೪೦ ||

ಆ ಊರ ಪಿತೃವನದೊಳಗಾಮಂಗಿಯ | ನಾ ವಧು ಹಾಕಿಸಲಾಗ |
ಆ ವಜ್ರಮುಷ್ಟಿ ಬಂದಾ ಪ್ರಿಯವಲ್ಲಭೆ |ಯಾವೆಡೆಯುರ್ದಪಳೆನಲು || ೪೧ ||

ಹಿತ್ತಲೊಳಗೆ ಹೂವ ಕೊಯ್ವ ವೇಳೆಯೊಳು ಕ |ರುತ್ತೊಂದು ಹಾವು ಹಿಡಿಯಲು |
ಸತ್ತಳು ಮಂಗಿಯಂತದ ಕಂಡು ನಾನಳ | ಲುತ್ತಿರೆ ತಳವಾರರೆಯ್ದಿ || ೪೨ ||

ಅರಸಿಗೆ ಪುತ್ರೋತ್ಪತ್ತಿಯಾದುದಕಿಂದು | ಪುರದೊಳಗಾರಳಬೇಡ |
ಹರಿಸದಿನಿರಿಮೆಂದು ಬಂದು ಹೇಳಲ್ಕಾ |ಸರಗೇಳಿನಾನದರಿಂದ || ೪೩ ||

ಆ ಮಂಗಿಯ ಶಬವನು ಸುಡುಗಾಡಿಗೆ | ನಾ ಮುಂಚೆ ಕಳುಹಿದೆನೆಂಬ |
ಆ ಮಾತುಗೇಳಿ ನೊಂದಾ ವಜ್ರಮುಷ್ಟಿಯು | ದ್ದಾಮ ದುಃಖೋಪೇತನಾಗಿ || ೪೪ ||

ಆ ರಾತ್ರಿಯೊಳಗಾನಗರಿಯ ಪೊರಮ | ಟ್ಟಾ ರುದ್ರಭೂಮಿಗೆಯ್ತಂದು |
ನಾರಿಯ ಶಬವನರಿಸಿಕೊಂಡು ಮತ್ತಾ | ಧೀರ ನಡೆದು ಬರ್ಪಾಗ || ೪೫ ||

ಕಟ್ಟಿದಿರೊಳಗೋರ್ವ ಜಿನಮುನಿ ಕೈಯಿಕ್ಕಿ | ದಿಟ್ಟನೆಯಾಗಿ ನಿಂದಿರಲು |
ನೆಟ್ಟಿನವರ ಪಾದಮೂಲಕೆ ಮಂಡೆಯ | ನಿಟ್ಟಿಂತೆಂದಾಡಿದನು || ೪೬ ||

ಎನ್ನ ನಲ್ಲಳ ಶಬವನು ನಾನು ಕಂಡೊಡೆ |ನಿನ್ನ ಕೆಂದಳಿರ್ವಜ್ಜೆಗಳಿಗೆ |
ಹೊನ್ನತಾಮರೆಯ ಸಾಸಿಮನರ್ಜಿಪೆನಂ |ಬುನ್ನತಿಕೆಯ ಭಾಷೆ ಮಾಡಿ || ೪೭ ||

ಅಲ್ಲಿಂ ಮುಂದಕೆ ಬಂದೊಂದು ಬಳಿ ತನ್ನ | ನಲ್ಲಳು ಬಿದ್ದಿರೆ ಕಂಡು |
ಬಲ್ಲಿತೆನಿಪದುಃಖದಿಂದಾ ಮುನಿಯ | ರ್ದಲ್ಲಿಗವಳ ತಂದಿರಿಸಲು || ೪೮ ||

ವಿದಿತ ಸರ್ಪೌಷಧಿಋದ್ದಿಸಂಪನ್ನರ | ಪ್ಪುದರಿಂದವರ ದೇಹವನು |
ಹುದಿಗಿದೆಲರು ತೀಡಲಾಕ್ಷಣದೊಳಗಾ | ಸುದತಿಗೆಯಸುಪೂರಿಸಿತು || ೪೯ ||

ದಿಟ್ಟಿದೆರೆದ ನಲ್ಲಳ ಕಂಡು ಸಂತಸ | ವಟ್ಟಾಕೆಯನಲ್ಲಿರಿಸಿ |
ದಿಟ್ಟತನದಿ ಹೊಂದಾವರೆಗೊಳನಿರ್ಪ |ಬಟ್ಟೆವಿಡಿದು ಪೋದನಿತ್ತ || ೫೦ ||

ಮೊದಲಲ್ಲಿಯಡಗಿರ್ದಾ ಸೂರಸೇನನಾ | ಸುದತಿಯೊಳಗನೋಳ್ಪೆನೆಂದು |
ಚದುರತನದಿ ಕೊಡದೊಳಗಿರ್ದ ದೀಪಮ |ನೊದವಿಸಿ ಪಿಡಿದೆಯ್ತರಲು || ೫೧ ||

ಆತನ ತೂಪಿಗೆ ಮಿಗೆಸೋಲ್ತಾಮಂಗಿ | ಮಾತೇನು ನಾ ನಿನಗೊಲಿದೆ |
ಆತುರದಿಂ ಕೊಂಡು ಪೋಗೆನಲೆಂದ ನಿ | ನ್ನಾತನತ್ಯಂತ ವಿಕ್ರಮನು || ೫೨ ||

ಆದರಿಂದಾನಂಜುವೆನೆಂದೊಡವಳೆಂದ | ಳದಕೆ ತಕ್ಕುದ ಬಲ್ಲೆ ನಾನು |
ಮದನಸದೃಶ ನೀನೀ ಮರದಡಿಯೊಳು | ಮೊದಲಿರ್ದಂತಿರೆಂದಿರಿಸೆ || ೫೩ ||

ಅನಿತರೊಳಾ ಅಂಜನಚೋರನಾ ತನ್ನ | ಮನದೊಳಗಿಂತೆಣಿಸಿದನು |
ವನಿತೆಯರುಗಳ ಕಾಪಟ್ಯವ ನಂಬುವ | ಮನುಜನಿಳೆಗೆಯೆಗ್ಗನೈಸೆ || ೫೪ ||

ರೀತಿ ಯೌವನ ರಸಿಕತೆಯನ್ಯರ್ಗೆ ತ | ನ್ನಾತನಿಂದಧಿಕಮಾಗಿರಲು |
ಆ ತರಳಾಂಬಕಿಯರ ಕಣ್ಮನಗಳು | ಕಾತರಿಸದೆ ಸುಮ್ಮನಿರುವು || ೫೫ ||

ಮಡದಿಯರಾ ಕಾಲೋಚಿತದೊಲವೆದೆ | ವಿಡಿಯಲನ್ಯರನೀಕ್ಷಿಸುತ |
ಒಡಲೆರಡಕೆಯೊಂದೇಯಸುವಾಗಿ ಕೈ | ವಿಡಿದ ಕಾಂತರ ಕೈ ಬಿಡುವರು || ೫೬ ||

ಮಾವನೇರಿದ ಮಲ್ಲಿಗೆ ಮಧುಮಾಸವ | ನೋವದಿಚ್ಚೈಸುವಂದದೊಳು |
ಜೀವಿತೇಶ್ವರನೆರ್ದೆಯೊಳಗಿರ್ದನ್ನಿಗ | ರ್ಗಾ ವನಿತೆಯರ ಮೋಹಿಪರು || ೫೭ ||

ಅಕಟಕಟಾ ಬಡವನೊ ಬಲ್ಲಿದನೋ | ಕುಲಜನೋ ಸತ್ಕುಲಜನೊ |
ವಿಕರಿಯೊಯೆಂಬುದನರಿಯದೆ ನಗೆಯು | ತ್ಸುಕದಿನವಳು ಮೋಹಿಸಿದಳು || ೫೮ ||

ಸುಡುಸುಣ್ಣವಾಗಿ ಮತ್ತೀ ಸುಡುಗಾಡೊಳು | ಮಡಿದು ಹೋಹವಳ ಜೀವವನು |
ಹಡೆದ ಹರಣದೆರೆಯನ ಲೇಸ ಮರೆದೀ | ಕಡುಪಾಪಿಯ ನಂಬಬಹುದೆ || ೫೯ ||

ಭೂತಪ್ರೇತಗಳು ಭುಂಜಿಪುದಕೀಡಾಗಿ ಪ | ರೇತಭೂಮಿಯೊಳು ಬಿಳ್ದಿರ್ದ |
ಈ ತನವನು ರಕ್ಷಿಸಿದನನು ಮರೆದೀ | ಪಾತಕಿತ್ತಿಯ ನಚ್ಚಬಹುದೆ || ೬೦ ||

ಎನುತವನೆಣಿಸುತ್ತಿರಲತ್ತಲಾಹೇಮ | ವನಜವನಾ ವಜ್ರಮುಷ್ಟಿ |
ಅನುರಾಗದಿಂ ತಲೆಯೊರೆಹೊತ್ತು ಬಂದಾ | ಮುನಿಯ ಸನ್ನಿಧಿಯೊಳು ನಿಂದು || ೬೧ ||

ಕೈಯಕತ್ತಿಯ ಮಂಗಿಯ ಕರದೊಳು ಕೊಟ್ಟು | ಸಂಯಮಿಗಳ ಮೆಲ್ಲಡಿಗೆ |
ಒಯ್ಯನೊಂದೊಂದು ಹೊಂದಾವರೆಯಲರಿಟ್ಟು | ಮೈಯಿಕ್ಕಿ ಬೀಳ್ದವೇಳೆಯೊಳು || ೬೨ ||

ತ್ವರತದಿ ಕೈಯ ಖಳ್ಗದಿನಾಬಂಧಕಿ | ಪುರಷನ ತಲೆವೊಯ್ವಾಗ |
ಕರುಣದಿನಾ ಸೂರಸೇನತಸ್ಕರ ತನ್ನ | ಕರದ ಲೋಹದ ಬಡಿಕೋಲ || ೬೩ ||

ಭರದಿಂದಡ್ಡಹಿಡಿಯೆ ಖಣಿಲೆಂದಾ | ಕರವಾಳು ಬೀಳಲು ಕಂಡು |
ತುರುಣಿಯಿದೇನೆಂದು ಕೇಳಿದೊಡಾ ದುಷ್ಟೆ | ಮರುಳಗೊಡ್ಡಾಟವೆಂದೆನಲು || ೬೪ ||

ಅವಳೆಸಗುವ ಕಾಪಟ್ಯವನರಿಯದೆ | ಯವನಾ ಖಡ್ಗವ ತೆಗೆದು |
ತವಕದಿ ತನ್ನೆಡಗೈಯೊಳಗಿರದಾಂತು | ಸವಿನಯದಿಂದಾ ಹೂವ || ೬೫ ||

ಸಾಸಿರವನು ಬಲಗೈಯಿಂದರ್ಚಿಸಿ | ಅಸಂಯಮಿಯಡಿದಳಕೆ |
ಸಾಸಿರ ಸೂಳು ನಮಿಸಿ ಮತ್ತವಳ್ಗೂಡಿ | ಸಾಸಿಗನೂರ್ಗೈದನಿತ್ತ || ೬೬ ||

ಮಾನಿನಿಯರು ಮಾಡುವ ಕಾಪಟ್ಯಮ | ನೇನೆಂದಿನಿಸು ಭಾವಿಸದೆ |
ಮಾನಿತಮಪ್ಪಾಚಾರವನುಳಿದತಿ | ಹೀನಕೃತ್ಯದಿ ಕೆಟ್ಟೆವೆಂಬ || ೬೭ ||

ಸೂರಸೇನಾಗ್ರಜರರುವರು ಕಳ್ಳರಾ | ಊರರಸಿನ ಮನೆವೊಕ್ಕು |
ಭೂರಿವಸ್ತುವ ಕಳ್ದು ಪೊರೆಗಟ್ಟಿಕೊಂಡು ಮ | ತ್ತಾರುದ್ರಭೂಮಿಗೆಯ್ದಿದರು || ೬೮ ||

ಬಂದಾ ವಸ್ತುವನಾ ಸೂರಸೇನನ | ಮುಂದೇಳು ಭಾಗೆಯ ಮಾಡಿ |
ಕುಂದು ಹೆಚ್ಚನು ನೋಡಿ ನಿನ್ನ ಮನಸ್ಸಿಗೆ | ಬಂದುವ ತೆಗೆದುಕೊಳ್ಳೆನಲು || ೬೯ ||

ನಾರಿಯರನು ನಂಬಿ ಹರಣದಾಶೆಯ ಬಿ | ಟ್ಟಾರಿಕೆಯೊಡಮೆಯ ಕದ್ದು |
ನಾರಕಗತಿಗೆಯ್ದಬೇಡೆಂದು ಮಂಗಿಯ | ವಾರತೆಯನು ಪೇಳಿದನು || ೭೦ ||

ಆ ಮಾತುಗೇಳಿಯಗ್ರಜರುಗಳರುವರು | ತಾವತಿ ವಿಸ್ಮಯವಟ್ಟು |
ಪ್ರೇಮದಿ ಸೂರಸೇನನುಗೂಡಿ ದೀಕ್ಷೆಯ | ನಮುನಿಯಿಂ ಧರಿಸಿದರು || ೭೧ ||

ಗಂಡರಾ ಮಂಗಿಯ ಕಥನದಿ ದೀಕ್ಷೆಯ | ಕೊಂಡುದ ಕೇಳೆ ಮತ್ತವರ |
ಪೆಂಡಿರೇಳ್ವರು ನಿರ್ವೇಗದಿ ದೀಕ್ಷೆಯ | ಕೊಂಡು ಪೋದರು ಬಳಿಕಿತ್ತ || ೭೨ ||

ದೀಕ್ಷೆಗೊಂಡಾ ಭಾನುಮುನಿ ಮೊದಲಾದ ಮು | ಮುಕ್ಷಗಳೇಳ್ವರೆಯ್ತಂದು |
ಪಕ್ಷೋಪವಾಸಾಂತರದೊಳುಜ್ಜೈನಿಗೆ | ಭಿಕ್ಷೆಗೆಂದು ಬರುತಿರಲು || ೭೩ ||

ಅವರಕಂಡಾ ವಜ್ರಮುಷ್ಟಿ ನಿಲ್ಲಿಸಿ ತನ್ನ | ಭವನಕೆಯ್ದಿಸಿ ಭಿಕ್ಷೆಯನು |
ಸುವಿಧಾನದಿಂದ ನಮಿಸಿ ಕೈಮುಗಿದು ಮ | ತ್ತವರೊಳಿಂತೆಂದಾಡಿದನು || ೭೪ ||

ಕುಸುಮಕೋದಂಡನ ಗೆಲ್ವೀ ಚೆಲ್ವಿಕೆ | ಹಸನಾದೀ ಚಿಕ್ಕಹರೆಯ |
ಮಿಸುಗುವಿಂತಪ್ಪ ಲಾವಣ್ಯಮುಮಿರ್ದೀ | ಯಸಿಧಾರಾಸುವ್ರತವು || ೭೫ ||

ನಿವಗೇನುಕಾರಣದಿಂದಾಯಿತೆನಲಾ | ಗವರು ಮಂಗಿಯ ಕಥನವನು |
ವಿವರಿಸೆ ಕೇಳಿ ವಿಸ್ಮಯಮಾನಸನಾಗಿ | ತವೆಯದ ವೈರಾಗ್ಯದಿಂದ || ೭೬ ||

ಆ ವಜ್ರಮುಷ್ಟಿಪೆಂಡಿರದೊಂದು ಕಪಟಕೆ | ನೋವುತ ದೀಕ್ಷೆವಡೆದನು |
ಆ ವಿಧವರಿದು ತಪವನಿರದಾಂತಳು | ಲಾವಣ್ಯಯುತೆಯಾ ಮಂಗಿ || ೭೭ ||

ಮತ್ತಾಸಪ್ತರ್ಷಿಯರು ಪಲವುಪಗ | ಲುತ್ತಮತಪದೊಳು ನೆಗಳಿ |
ಸತ್ತು ಮೊದಲಸೌಧರ್ಮಕಲ್ಪದೊಳು | ತ್ತತ್ತಿಯಾದರು ಧರೆ ಪೊಗಳೆ || ೭೮ ||

ಅಲ್ಲಿಯೇಕಸಾಗರೋಮಾಯುಷ್ಯಂಬ | ರುಲ್ಲಾಸದಿಂ ಸುಖವುಂಡು |
ನಿಲ್ಲದಲ್ಲಿಂದಿಳಿದೀ ಧಾತಕೀಖಂಡ | ದಲ್ಲಿಯ ವಾಸವದೆಸೆಯ || ೭೯ ||

ಮಂದರಗಿರಿಯ ತೆಂಕಣ ಭರತಕ್ಷೇತ್ರ | ದೊಂದು ಮಧ್ಯದ ವಿಜಯಾರ್ಧ |
ಎಂದೆಂಬ ಗಿರಿಯ ತೆಂಕಣತಪ್ಪಲೊಳಗತಿ | ಸುಂದರಮಾದ ದೇಶದೊಳು || ೮೦ ||

ಎಸೆವ ನಿತ್ಯಾಲೋಕಮೆಂಬ ಪುರದೊಳು ರಂ | ಜಿಸುತರ್ಪನಾ ಚಿತ್ರಚೂಳ |
ವಸುಧೀಶನವಗೆ ಮನೋಹರಿಯೆಂಬೋರ್ವ | ಳಸಿಯಳು ಸತಿಯಾದವರ್ಗೆ || ೮೧ ||

ಆ ಸಗ್ಗಿಗರೇಳ್ವರು ಬಂದು ಪುಟ್ಟಿ ವಿ | ಲಾಸವಡೆದ ದೇಹವಾಂತು |
ಸಾಸಿಗರಾಗಿ ಬೆಳೆದು ಜವ್ವನ ವಾಂತು | ಭಾಸುರತರ ಕೀರ್ತಿವಡೆದು || ೮೨ ||

ಇದು ತಾ ಚಿತ್ರಾಂಗದ ಗರುಡಧ್ವಜ | ಗರುಡವಾಹನ ಮಣಿಚೂಡ |
ಸುರಭಿಚೂಲ ಗಗನಾನಂದ ಗಗನೇ | ಚರೆರೆಂಬಾ ನೃಪಸುತರು || ೮೩ ||

ಹರಿವಾಹನನೆಂಬಗೋರ್ವಳಾ ಸ್ವಯಂ | ವರದೊಳು ಮಾಲೆಯನಿಕ್ಕಿ |
ಪರಿಸಲೋರ್ವನು ಚಕ್ರಿಯವನ ಹತಿಸಿಯಾ | ತರುಣಿಯನೆಳದೊಯ್ಯಲಾಗ || ೮೪ ||

ವನಿತೆಯ ಕಥನದಿ ಹರಿವಾಹನ ಸತ್ತ | ನೆನುತ ಸಂಸೃತಿಗೆ ಕೊಕ್ಕಿರಿಸಿ |
ಜನನುತಮೆನಿಸಿದುತ್ತಮಜಿನದೀಕ್ಷೆಯ | ನನುಕರಿಸಿದರಿಳೆ ಪೊಗಳೆ || ೮೫ ||

ಇಂತು ದೀಕ್ಷೆಯನಾಂತು ತಪಗೆಯ್ದಾಜೀವ | ತಾಂತದೊಳಗೆ ನಾಲ್ಕನೆಯ |
ಸಂತತ ಸುಖಮೀವ ಸಗ್ಗದೊಳಗೆ ನಿ | ಶ್ಚಿಂತದಿ ಜನಿಸಿಯೊಪ್ಪಿದರು || ೮೬ ||

ಅಲ್ಲಿ ಸಪ್ತಸಾಗರೋಪಮಾಯುಷ್ಯವ | ನೆಲ್ಲವ ತೀರಿಸಿ ಬಳಿಕ |
ಸಲ್ಲಿಲಿತಾಂಗ ಚಿತ್ರಾಂಗದಚರದೇವ | ನಿಲ್ಲಿಯ ಕುರುಜಾಂಗಣದ || ೮೭ ||

ಜನನುತ ಹಸ್ತಿನಪುರದೊಲು ಸಿತವಾ | ಹನನೆಂಬ ವೈಶ್ಯೋತ್ತಮಗೆ |
ವನಜಾಕ್ಷಿ ಬಂಧುಮತಿಗೆ ಶಂಖನೆಂಬೋರ್ವ | ತನುಜಾತನಾಗಿಯೊಪ್ಪಿದನು || ೮೮ ||

ಆ ಊರರಸು ಗಂಗದೇವಗೆ ನಂದಯ | ಶಾವನಿತೆಗೆ ಪುಟ್ಟಿದರು |
ಆ ಉಳಿದರುವರು ಗರುಡಧ್ವಜಾದಿಯ | ದೇವರ್ಕಳಾಸಗ್ಗದಿಂದ || ೮೯ ||

ಬಂದು ಗಂಗ ಗಂಗದೇವ ಗಂಗಾಮಿತ್ರ | ನಂದಿ ನಂದಿಬಾಂಧವನು |
ನಂದಿಷೇಣರೆಂಬ ನಾಮವ ಹಡೆದತಿ | ಸುಂದರತೆಯನೆಯ್ದಿದರು || ೯೦ ||

ರೇವತಿಯೊಂಬೋರ್ವ ದಾದಿ ಮಮತೆಯಿಂ | ದೋವಲಂತವರುರೆ ಬೆಳೆದು |
ಆ ವೈಶ್ಯಸುತ ಶಂಖನೊಳು ಪೂರ್ವಜನ್ಮದೊ | ಳಾವರಿಸಿದ ನೇಹದಿಂದ || ೯೧ ||

ಭಾವಶುದ್ಧಿಯೊಳೊಡನುಂಡೊಡವೆರದಾಡಿ | ಓವದೆ ಕೆಳೆಗೊಂಡಿರಲು |
ಆ ವಸುಧೀಶನ ಸತಿ ನಂದಯಶಾ | ದೇವಿ ಮತ್ತೊಂದು ಮಗುವನು || ೯೨ ||

ಹಡೆದವ ನೋಡಿಯವಳು ಪೂರ್ವಜನ್ಮದೊ | ಳಡಸಿದ ನಿಜ ವೈರದಿಂದ |
ಕಡು ಮುನಿದಾ ದಾದಿ ರೇವತಿಯೆಂಬಾ | ಮಡಿದಿಯ ಕೈಯೊಳು ಕೊಟ್ಟು || ೯೩ ||

ಆರೊಬ್ಬರಿದನು ಸಾಕವೆನೆಂಬರಿಗೆ | ಸೇರಿಸೆಂದವಳನು ಕಳುಹೆ |
ಆ ರಾಜಶಿಶುವ ಕೈಯೊಳಗೆತ್ತಿಕೊಂಡು ಮ | ತ್ತಾ ರೇವತಿ ಬರುತಿರ್ಪ || ೯೪ ||

ಕೇರಿಯೊಳಗೆ ವೈಶ್ಯಸುತ ಶಂಖ ಬರುತಿ | ರ್ದಾರತನುಜನಿವನೆಂದು |
ಕಾರುಣ್ಯದಿಂ ಕೇಳಲಾಪ್ರಪಂಚಮನಾ | ನಾರಿಯುಸುರೆ ಕೇಳುತವೆ || ೯೫ ||

ಒಂದದಿ ಮರುಕದಿನಾಸಿಸುವನು ತಂದು | ನಂದಯಶೆಯ ಸಹಜಾತೆ |
ಸುಂದರಿ ತನ್ನ ಜನನಿ ಬಂಧುಮತಿಗಾ | ನಂದದಿ ಕೊಡಲು ಕೈಕೊಂಡು || ೯೬ ||

ಅವಗೆ ನಿರ್ನಾಮಿಕನೆಂಬ ಹೆಸರವಿ | ಟ್ಟವಳು ಸಾಕುತ್ತಿರಲಿತ್ತ |
ಅವನಿಪ ಗಂಗನೊಂದಾನೊಂದು ದಿನದೊಳ | ಗವಧಿಬೋಧರ ಬಳಿಗೆಯ್ದಿ || ೯೭ ||

ವಿನಮಿತನಾಗಿ ನಿರ್ನಾಮಿಕಗಾ ನಿಜ | ಜನನಿ ಮುನಿದ ಕಾರಣವ |
ಎನಗೆ ಬೆಸಸಿಮೆನಲವರಿಂತೆದರೀ | ವಿನುತ ಸೌರಾಷ್ಟ್ರವಿಷಯದ || ೯೮ ||

ಗಿರಿನಗರಮನಾಳ್ವ ಘನರಥಭೂಪತಿ | ತರುಣಿ ಕನಕಮಾಲೆಗೂಡಿ |
ಇರಲವಗಮೃತರಸಾಯನ ನಾಮವ | ಧರಿಸಿ ಬಾಣಸಿಯೋರ್ವನಿಹನು || ೯೯ ||

ಒಂದು ದಿವಸಮವ ಪಿಸಿತ ಶಾಕಂಗಳ | ನೊಂದಿಸಿಯಾಭೂವರೆಗೆ |
ತಂದಿಕ್ಕಲವು ಸವಿಯಾಗಲವಗೆ ಮೆಚ್ಚಿ | ಒಂದು ಗ್ರಾಮವನಿತ್ತಾನಾಗ || ೧೦೦ ||

ಹಿಂಸಾನುರೂಪದ ಬಾಣಸಿ ಬಿನ್ನಣ | ದಿಂ ಸಲೆಸವಿಯಾಗಿ ಸಮೆದ |
ಮಾಂಸಾಹಾರಮನಾ ಭೂಪಾಲೋ | ತ್ತಂಸನುಗುಣ ಸುಖಮಿರ್ದು || ೧೦೧ ||

ಮತ್ತೊಂದು ದಿವಸ ಸುಧರ್ಮರೆಂಬೋರ್ವರ | ತ್ಯತ್ತಮ ಮುನಿಯಲ್ಲಿಗೈದಿ |
ಬಿತ್ತರಮಪ್ಪ ಸದ್ಧರ್ಮವನಾ ಭೂ | ಪೋತ್ತಂಸಗೆ ಪೇಳಲಾಗ || ೧೦೨ ||

ದೊರೆಕೊಂಡ ಲಬ್ದಿವಶದಿ ನಿಜನಿರ್ವೇಗ | ಮಿರದಾಂತತಿವೇಗದೊಳು |
ವರಸುತ ಚಿತ್ರರಥಗೆ ಪಟ್ಟವಕಟ್ಟಿ | ಧರಿಸಿದನಮಲದೀಕ್ಷೆಯನು || ೧೦೩ ||

ಬಳಿಕ ಚಿತ್ರರಥಾವನಿಪಾಲಕ | ವಿಲಸಿತಮಪ್ಪ ಸುವ್ರತವ |
ತಳೆದಾ ಬಾಣಸಿಗಗೆ ಕೊಟ್ಟ ಗ್ರಾಮವ | ತಳು ಮಾಡದೆ ತೆಗೆಯಿಸಿದ || ೧೦೪ ||

ಈ ಸವಣನ ದೆಸೆಯಿಂದೆನ್ನುಂಬಳಿ | ಯೋಸಮಾಯ್ತೀಗಮೆಂದು |
ಆ ಸೂಪಕಾರನು ಕಡುನೊಂದು ಕಪಟದಿ | ನಾ ಸುಧರ್ಮರ ಬಳಿಗೆಯ್ದಿ || ೧೦೫ ||

ಚರಣಯುಗಕೆ ವಿನಮಿಸಿಯೆಲೆ ಮುನಿಪತಿ | ಸುರುಚಿತಮಪ್ಪ ಸುವ್ರತವ |
ಪರಿಪಾಲಿಸೆನುತ ಕಪಟಮಾನಸನಂದು | ಧರಿಸಿದನಾಚರಿತವನು || ೧೦೬ ||

ಪ್ರಾಣಿದಯಾಪರಧರ್ಮವ ಪೊರ್ದಿದ | ಬಾಣಸಿಗನು ಗುಣಯೋಗ |
ಬಾಣದಗುಣಯೋಗದಂದದಿ ಮನದೊಳು | ಹೂಣಿಸಿದುದನೇನೆಂಬೆ || ೧೦೭ ||

ಈ ತೆರದಿಂ ಕಾಪಟ್ಯಚರಿತ್ರೋ | ಪೇತ ಪಾತಕನೊಂದು ಪಗಲು |
ಆ ತಾಪಸಿ ಚರಿಗೆಗೆ ಬರೆ ಕುಟಿಲ | ಪ್ರೀತಿಯಿಂದ ತಾ ನಿಲಿಸಿ || ೧೦೮ ||

ಭಕ್ಷ್ಯಗಳೊಳು ಗರಳವ ಕೂಡಿ ಕೈಯೆತ್ತಿ | ಭಿಕ್ಷೆಯನೊಸೆದು ಕೈಕೊಂಡು |
ಆ ಕ್ಷಣದೊಳು ನಿಜದೇಹವ ಬಿಸುಟು ಮು | ಮುಕ್ಷುಸ್ವರ್ಗಕೆಪೋದನಿತ್ತ || ೧೦೯ ||

ಯತಿವಧೆಗೆಯ್ದಾದ ಪಾತಕಿಯನು ಭೂ | ಪತಿ ತಲೆಹೊಯ್ಸಲು ಸತ್ತು |
ಅತಿದುಃಖಮೀವೆಲ್ಲಾ ನರಕದೊಳು ತ | ಪತಿಯಾಗಿ ನೆರಜೀವಿಸುತ || ೧೧೦ ||

ಪಲ ಪಗಲೀತೆರದಿಂದ ಸಂಸೃತಿಯಂಬ | ಜಲರಾಶಿಯ ಮಡುವಿನೊಳು |
ಸಲೆಸಿಕ್ಕಿ ಊಹಿಸಬಾರದದುಃಖಮ | ನಲಸದೆ ತಾನುಣುತಿರ್ದು || ೧೧೧ ||

ಎತ್ತಾನುದುರಿತೋಪಶಮದಿನಾರ್ಯಖಂಡ | ದುತ್ತಮಮಲಯದೇಶದೊಳು |
ಬಿತ್ತರಮಾದ ಪಲಾಶಕೂಟಾಖ್ಯಂ | ಬೆತ್ತು ರಂಜಿಪ ಪಳ್ಳಿಯೊಳು || ೧೧೨ ||

ಯಕ್ಷದೇವನೆಂಬ ಶೂದ್ರನಾತನ ಸತಿ | ಯಕ್ಷದತ್ತಯೆಂಬಳವರ್ಗೆ |
ಯಕ್ಷಿಳನೆಂಬವನಿಂ ನೆರೆಕಿರಯನು | ಯಕ್ಷದತ್ತ ಪೆಸರ್ವಡೆದು || ೧೧೩ ||

ಜನಿಸಿ ಬೆಳೆದು ಮತ್ತಾಸೋದರರೊಂದು | ದಿನದೊಳು ಬೆಳೆದಕಳಮೆಯ |
ವನದ ನೋಡುವೆವೆಂದೊಂದು ಬಂಡಿಯನೇರಿ | ಯನುರಾಗದಿಂ ಬರುತಿರ್ದು || ೧೧೪ ||

ಮತ್ತಲ್ಲಿಯೊಂದುರಗಿಯಮೇಲಾಯಕ್ಷ | ದತ್ತ ತಾನೇರಿದ ರಥವ |
ಒತ್ತಿ ಹಾಯಿಸಲಾ ವೇಳೆಯೊಳಂತದು | ಸತ್ತು ಮತ್ತೀಕ್ಷೇತ್ರದೊಳು | ೧೧೫ ||

ಭಾಸುರಮಪ್ಪಾಶ್ವೇತಪುರಮನಾಳ್ವ | ವಾಸವನೆಂಬ ಭೂಪತಿಗೆ |
ಆ ಸತಿ ವಸುದೇವಿಗೆ ನಂದನಯಶೆಯಂ | ಬಾ ಸುದತೀಮಣಿಯಾಗಿ || ೧೧೬ ||

ಜನಿಯಿಸಿ ಗಂಗನೃಪತಿ ನಿನಗೊಲವಿನ | ವನಿತೆಯಾದಳು ಬಳಿಕಿತ್ತ |
ಜನನುತ ಪಿರಿಯಯಕ್ಷಿಳನಾತಮ್ಮನು | ಮುನಿಸಿಂದಾ ಉರಗಿಯನು || ೧೧೭ ||

ಕೊಂದುದ ಕಂಡೆಲೆಯನುಜಾತಾ ನೀ | ನಿಂದು ನಿರಪರಾಧಿಯನು |
ಹೊಂದಿಸುವುದು ಮತವೇಯೆಂದಾಮನ | ಸಂದು ಬೋಧಿಸಲದಕೇಳಿ || ೧೧೮ ||

ಕರುಣಹೃದಯನಾಗಿ ಕೆಲದಿನಮಿರ್ದಾ | ಮರಣದಿನಾಯಕ್ಷದತ್ತ |
ಅರಸಕೇಳ್ನಿನಾಮಿಕನಾಗಿ ನಿನ್ನೀ | ಯರಸಿಯ ಬಸಿರೊಳೊಗೆದನು || ೧೧೯ ||

ಹಿಂದಣ ಜನ್ಮಾಂತರವೈರದಿಂದಾ | ನಂದಯಶಾದೇವಿಯವಗೆ |
ಒಂದಿಸಿದಳು ಕೋಪವನೆನೆ ಕೇಳ್ದಾ | ನಂದದಿನಾಗಂಗನೃಪತಿ || ೧೨೦ ||

ವೈರಾಗ್ಯದಿಂದ ತನ್ನಾ ಅರುವರು ಸುಕು | ಮಾರಕರಾ ವೈಶ್ಯತನುಜ |
ಕಾರುಣ್ಯನಿಧಿ ಶಂಖನಿರ್ನಾಮಿಕುರುಗ | ಳಾರೆಯ್ಯದೊಡನೆಯ್ದಿ ಬರಲು || ೧೨೧ ||

ಭಾವಶುದ್ಧಿಯೊಳು ತಪವ ತಾಳಲಾ ಗಂಗ | ದೇವನ ಸತಿ ನಂದಯಶೆಯು |
ರೇವತಿಯೆಂಬಾ ದಾದಿವೆರಸಿ ತಾ | ನೋವದೆ ದೀಕ್ಷೆಯ ಹಡೆದು || ೧೨೨ ||

ಮುಂದಣ ಭವಕೀಯರುವರು ಕುವರರು | ನಂದನರಾಗಬೇಕೆಂದು |
ನಂದಯಶಾಕಂತಿಕೆಯರು ನಿದಾನಮ | ನಂದು ಚೆನ್ನಾಗಿ ಮಾಡಿದರು || ೧೨೩ ||

ಆ ರೇವತಿಕಂತಿಕೆ ತಾನಾರೈ | ದಾರಾಜಸುತರರುವರನು |
ಆರೈವೆ ಮುಂದಣ ಜನ್ಮಕೆನುತ ಮನ | ವಾರೆ ನಿದಾನ ಮಾಡಿದಳು || ೧೨೪ ||

ಇಂತವರೀರ್ವರುಮಾಡಿ ನಿದಾನಮ | ಸಂತತಮಾಜಿನತಪವ |
ಅಂತರಿಸದೆಮಾಡಿ ಸನ್ಯಸನದಿ ಜೀವಿ | ತಾಂತದೊಳುತ್ತಮಮಪ್ಪ || ೧೨೫ ||

ಪದಿನಾರನೆಯ ಸಗ್ಗದೊಳು ಸಂಜನಿಯಿಸಿ | ಸದಮಲತರ ಸುಖವುಂಡು |
ಒದವಿದ ಮರಣಮುಖದಿ ದೇವಸೇನಗೆ | ಉದಯಿಸಿ ಕಡುಚೆಲ್ವುವಡೆದ || ೧೨೬ ||

ದೇವಕಿಯೆಂಬ ನಾಮವನು ಹಡೆದು ವಸು | ದೇವ ನಿನಗೆ ಸತಿಯಾದ |
ರೇವತಿಚರದೇವನು ಬಂದು ಮಲಯವೆಂ | ಬಾ ವಿಷಯದ ಮಧ್ಯದೊಳು || ೧೨೭ ||

ಪರಿರಂಜಿಸುವ ಭದ್ರಿಳಮೆಂಬ ನಗರಿಯ | ವರದ ಸುದೃಷ್ಟಿಯೆಂಬವಗೆ |
ಗರುವೆಯಳಕೆಯೆಂಬ ವಲ್ಲಭೆಯಾಗಿ ಬಂ | ಧುರಶೀಲವತಿಯಾದಳತ್ತ || ೧೨೮ ||

ಆ ವೈಶ್ಯಸುತಶಂಖಮುನಿ ಸತ್ತು ಸಲೆ ಸುಖ | ಮೀವ ಮಹಾಶುಕ್ರದೊಳು |
ಓವದೆ ಜನಿಸಿಯಲ್ಲಿಂ ಬಂದೀಬಲ | ದೇವನಾಗಿಯೆ ಪುಟ್ಟಿದನು || ೧೨೯ ||

ಮತ್ತಾಗಂಗನೃಪಾಲಕನಾತ್ಮಜ | ರುತ್ತಮರರುವರು ತಪದಿ |
ಸುತ್ತು ಮತ್ತಾ ಸಗ್ಗದೊಳು ಸಂಜನಿಯಿಸಿ | ಬಿತ್ತರವಹ ಸುಖವುಂಡು || ೧೩೦ ||

ಅಲ್ಲಿಂ ವಿಗತಜೀವಿಗಳಾಗಿಯೆಲೆ ಭೂ | ವಲ್ಲಭ ನಿನಗೆ ಕುವರರು |
ಸಲ್ಲಲಿತಾಕಾತರದ ಮಗುಗಳಾಗಿ ತಾ | ವುಲ್ಲಾಸದಿಂ ಜನಿಸುವರು || ೧೩೧ ||

ಆ ಗಂಡುಮಕ್ಕಳನಿಂದ್ರನ ಬೆಸದಿಂ | ನೈಗಮದೇವನೆಂಬುವನು |
ಬೇಗದೊಳೆತ್ತಿಕೊಂಡಳಕೆಯ ಬಳಿಗನು | ರಾಗದಿ ತಂದಿರಿಸುವನು || ೧೩೨ ||

ಅವಳು ಪೆತ್ತರೆಯಾಯುಷ್ಯದ ಮಕ್ಕಳ | ಯುವತಿ ದೇವಕಿಯ ಮುಂದಿಡಲು |
ತವಕದಿ ಬಂದಾ ಆರುವರು ಮಕ್ಕಳ | ತವೆ ಕೊಲಿಸುವನಾ ಕಂಸ || ೧೩೩ ||

ಬಳಿಕತ್ತಲಳಕೆ ಸಾಕಿದ ನಿನ್ನ ಮಕ್ಕಳು | ಸುಲಲಿತ ಚರಮಾಂಗಿಗಳು |
ತಳುವದೆ ದೀಕ್ಷೆಯ ಧರಿಯಿಸಿ ನಿರ್ವಾಣ | ಲಲನೆಗೆ ನಲ್ಲರಾಗುವರು || ೧೩೪ ||

ಭೂವರಕೇಳಾ ನಿರ್ನಾಮಿಕಚರ | ದೇವನು ನಿನ್ನೀರಮಣಿ |
ದೇವಕಿಯೊಡಲೊಳಗೊಗೆದೇಳುತಿಂಗಳು | ತೀವಲೊಡನೆ ಸಂಜನಿಸಿ || ೧೩೫ ||

ಪೆರತೊಂದೆಡೆಯೊಳು ಬೆಳೆದು ಮಾರಾಂತರ | ನುರದಿಕ್ಕಿ ಮರೆಹೊಕ್ಕರನು |
ನೆರೆರಕ್ಷಿಸಿಯರ್ಧಚಕ್ರೇಶ್ವರನಾಗಿ | ಮರೆವನು ಭೂತಳದೊಳಗೆ || ೧೩೬ ||

ಈ ನುಡಿ ಪುರತೀರ್ಥಕರು ಭರತಧರ | ಣೀನಾಥಗೆ ನಿರವಿಸಿದ |
ಮಾನಿತಮಪ್ಪ ವಚನಮಿಂತಿದ ನಂಬು | ನೀನೆಂದಾ ಮುನಿಯುಸುರೆ || ೧೩೭ ||

ಸವಣೋ ಅಮೋಘವಯಣೊಯೆಂದು ಭೂಮೀ | ಧವತಿಲಕನು ವಸುದೇವ |
ಯುವತಿ ಸಹಿತಯತಿಗೆರಗಿ ಬೀಳ್ಕೊಂಡಾ | ಭವನಕೆ ನಡೆತಂದನಗ || ೧೩೮ ||

ಜನನುತ ಜಯಜಾಯಾಪತಿ ನೂತನ | ಮನಸಿಜ ಮನುಜಮಂದಾರ |
ಘನಗುಣಭೂಷಣನೆಸೆದನು ಸಜ್ಜನ | ವನರುಹವನಭಾಸ್ಕರನು || ೧೩೯ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೀಮಿಜಿನೇಶಸಂಗತಿಯೊಳ | ಗೊದವಿದಾಶ್ವಾಸವೀರೇಳು || ೧೪೦ ||

ಹದಿನಾಲ್ಕನೆಯಸಂಧಿ ಸಂಪೂರ್ಣಂ