ಶ್ರೀಮದರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಅಂಗಜವಿಯಮುಕ್ತ್ಯಂಗನೆಯಧಿಪ ಭು | ಜಂಗೇಶವಂದಿತಚರಣ |
ಮಂಗಲಮೂರ್ತಿನೇಮೀಶನ ಪದಯುಗ | ಲಂಗಳಿಗೊಲಿದೆರಗುವೆನು || ೨ ||

ನಂದನ ನಂದನನತಿಬಲನೆಂಬುದ | ನಂದು ದೇವಕಿದೇವಿ ಕೇಳಿ |
ನಂದನದೊಳು ಸೋಗೆ ಮುಗಿಲದನಿಗೆಯಾ | ನಂದಿಪಂದದಿ ನಲವೇರಿ || ೩ ||

ಸುವದನಾಳೋಕನೋತ್ಸುಕತೆಯಿನಾ | ಪರಿಯೊಳು ಬಲರಾಮನೊಳು |
ಅತಿ ಗುಪ್ತದಿಂದರುಪಿನೊಡಾ ಕಾರ್ಯಕೆ | ಹಿತಮಾಗಿ ನಿಜಸೇನೆ ಸಹಿತ || ೪ ||

ಗೋಮುಖಿಯೆಂಬ ನೋಂಪಿಯನಾ ದೇವಕಿ | ಪ್ರೇಮದಿ ಮಾಡಬೇಕೆಂದು |
ಆ ಮಹೀಪಾಲಕರಾ ತುರುಪಟ್ಟೆಗೆ | ಸಾಮವಿಲ್ಲದೆ ಪೋದರಾಗ || ೫ ||

ನಂದಗೋಪನನು ಕರೆಸಿ ನಿನ್ನ ಸುದತಿಯ | ರೊಂದಾಗಿ ನಾಳೆಯುದಯಕೆ |
ಬಂದು ಪೂಜೆಯ ಮಾಡಿಸಬೇಕೆನೆ ಮನ | ದಂದು ಮನೆಗೆ ಬರಲತ್ತ || ೬ ||

ಉತ್ತಮವಿಯಾರ್ಧಗಿರಿಯೊಳು ಶಾಲ್ಮಲಿ | ದತ್ತೆಯ ಪಿತನ ದಾಯಾದ |
ಮತ್ತಾ ವಸುದೇವಸುತನ ದೆಸೆಯಿನಾ | ಪತ್ತುಂಟು ತನಗೆಂಬುದನು || ೭ ||

ಮೊದಲು ಬಲ್ಲವನಾಗಿ ಶಕುನಿಗರಿಂದಾ | ಅಧಟನಿರ್ದತಾಣವನು |
ಪದೆದು ತಿಳಿದು ತನ್ನರಿಷ್ಟನೆಂಬೋರ್ವನ | ಗ್ಗದ ಕಲಿಖಚರನ ಕರೆದು || ೮ ||

ಅರಿಕೆವಡೆದ ಮಧುರೆಯೊಳು ರಂಜಿಸುವಾ | ತುರುಪಟ್ಟೆಯ ನಂದಸುತನ |
ತರಿದಿಕ್ಕಿ ಬರಹೇಳಿಕಳುಹಿದನೆನಲಾ | ಎರೆವೆಸದಿಂದೆಯ್ಯಂದು || ೯ ||

ಕಟ್ಟುಗ್ರಮಪ್ಪ ವೃಷಭನಾಕಾರವ | ತೊಟ್ಟು ಗೋಪಾಲರೆಲ್ಲರನು |
ಅಟ್ಟಿ ಕೊಲುತ ಬರ್ಪ ಕೋಪಾಹಲವನು | ದಿಟ್ಟ ನಾರಾಯಣನರಿದು || ೧೦ ||

ಇದಿರ್ವಂದು ಕಡೆಗಾಲ ರುದ್ರನೇರುವ | ಗ್ಗದ ಗೂಳಿಯೆಂಬಂದದೊಳು |
ಒದಗಿ ಬಪ್ಪಾ ವೃಷೌನ ಕಂಡು ನಡೆದು ಬಂ | ದದರ ಕೊಂಬೆರಡನು ಪಿಡಿದು || ೧೧ ||

ನೆಲಕೆ ನೆಗ್ಗೊತ್ತಲು ಗೋಳಿಟ್ಟಾಗೂಳಿ | ಕಲಿಯ ಕೈಯಿಂ ಹತಮಾಗೆ |
ನಲಿಯೆ ಗೋವಳೆರೆಲ್ಲರಾ ಸಮಯದೊಳಾ | ನೆಲೆಯಿಂದದು ಮಾಯಮಾಯ್ತು || ೧೨ |

ಈ ಪರಿಯಿಂದ ವೃಷಭರಾಕ್ಷಸನನಂ | ದಾ ಪದ್ಮನಾಭನು ಕೊಲಲು |
ಗೋಪವಲ್ಲಭನತಿ ಮುದದಿಂದಿರೆ ಮ | ತ್ತಾ ಪಗಲಿನ ಮರುದಿವಸ || ೧೩ ||

ದೇವತೆಯಾವಾಸದೊಳಿರ್ದ ದೇವಕಿ | ಯಾ ವಸುದೇವನಿರ್ದೆಡೆಗೆ |
ಆ ವಿಷ್ಣುವಾಗೋಪಿಯಾಗೋಪರೊಡಗೂಡಿ | ತೀವಿದ ವಿಭದಿಂದೆಯ್ದೆ || ೧೪ ||

ಬಳಿಕಾ ಕೃಷ್ಣಯಕ್ಷಿಯ ನೋಂಪಿಯನು ಕ | ಣ್ಗೊಳಿಪಂತೆ ದೇವಕಿದೇವಿ |
ತಳುವದೆ ಮಾಡಿಯತ್ಯಂತ ಸಂತೋಷಮಂ | ತಳೆದಾನಂದಗೋಪನನು || ೧೫ ||

ಕರೆದುಡಗೊಟ್ಟು ಮತ್ತಾಗೋಪಿಗೆ ಪಲ | ಪರಲವಿಭೂಷಣಮಿತ್ತು |
ಮುರವೈರಿಯವರ ಕೆಲದೊಳಿರಲಿವನಾರ | ವರಸುತನೆಂದು ಕೇಳಿದನು || ೧೬ ||

ಕೇಳಲವರು ತಮ್ಮ ತನುಜಾತನಿನೆಂದು | ಪೇಳಲು ಕರೆದು ಸನ್ನಿಧಿಗೆ |
ಲೀಲೆಯಿಂದಾ ಮಾತಾಪಿತೃವಗ್ರಜ | ರಾಲೋಕನವಮಾಡಿದರು || ೧೭ ||

ಬೆನ್ನ ತಡವಿ ನಿಮ್ಮ ಮಗನು ಬಲ್ಲಿದನೆಂ | ದುನ್ನತಮಪ್ಪ ನೇಹದೊಳು |
ರನ್ನದೊಡವು ಬಹುಚಿತ್ರಾಂಬರದಿಂ | ಚೆನ್ನಾಗಿ ಮಾಡಿ ಸಿಂಗರವ || ೧೮ ||

ಬಳಿಕನುರಾಗದಿ ತೊಡೆಯಮೇಲಿಟ್ಟುಕೊಂ | ಡೆಳೆವರೆಯದ ಕೇಶವನ |
ಲಲನಾಮಣಿಯಮರ್ದಪ್ಪಿಯಾನಂದಾಶ್ರು | ಗಳೊಳಾಸ್ಯವನು ತೊಳೆದನು || ೧೯ ||

ಅನಿತರೊಳಾನಂದನಾನಂದ ಗೋಪಿಯ | ಧನುರಾಗದಿಂ ವಸುದೇವ |
ವನಜಲೋಚನೆ ದೇವಕಿದೇವಿಯಾ ಜನ | ವಿನುತ ಬಲದೇವರಿಗೆ || ೨೦ ||

ಮತ್ತಾಹರಿ ಹೀರಲು ಪೂತಿನ ಮೊಲೆ | ಯಿತ್ತಗಲಾ ನಂಜುಗೂಡಿ |
ನೆತ್ತರೊಗಲು ಕೆಂಪುಕರಿದು ಕೂಡಿದ ವಿಷ | ಮೃತ್ತಿಕೆಯೆಂಬ ಭೂಮಿಯನು || ೨೧ ||
ಮುರರಿಪು ಮುರಿದ ಕಾಕನ ಕೆನ್ನೆತ್ತರು | ಸುರಿದಲ್ಲಿ ಯಾವಾಗ ನೋಡೆ |
ಇರದೆ ಕಾಗೆಗಳು ಪಾರಲು ಕಾಕಗರ್ಭಿಯೆಂ | ಬುರು ಭೀಕರಧರಣಿಯನು || ೨೨ ||

ಶಕಟನನಾ ವಿಷ್ಣುವೊದೆಯಲು ಪಾತಾ | ಳಕೆ ತೂತುಗೊರೆಯಲಂತಲ್ಲಿ |
ಶಕಟಚ್ಛಾಯೆದೋರುತ ಭೀತಿಮಾಡುವ | ಶಕಟಬಿಲದ್ವಾರವನು || ೨೩ ||

ವನಮಾಲಿ ಕಿತ್ತ ಮತ್ತಯಮರಗಳ ಮೂಲ | ದನಿತು ಕೊರೆದ ಕುಳಿಯೊಳಗೆ |
ಎನಿತು ಮಣ್ಣನು ತಂದು ಹೊಯ್ದೆಡೆ ಹೂಳದ | ರ್ಜುನಗರ್ತವೆಂಬ ಕುಂಡವನು || ೨೪ ||

ಸಿರಿಯೆರಯನು ಸೀಳಿದಾ ಕಿಶೋರನ ಬಾಯೊ | ಳಿರದರುಣೋದಕಸುರಿದ |
ಧರೆಯೊಳು ಕುದುರೆಯ ಮುಖಮಾಗಿ ತೋರುವ | ತುರಗವನದಮೆಂಬ ನೆಲನ || ೨೫ ||

ಬಾಲಕೃಷ್ಣನು ಕೆಡಹಿದ ತಾಳವೃಕ್ಷದ | ಮೂಲದನಿತು ಧರೆಯೊಳಗೆ |
ಅಲೋಕಿಸೆ ತಾಳಫಲಪಣೆದಾಗುವ | ತಾಳಗರ್ತಮುಮೆಂಬ ಬಿಲವ || ೨೬ ||

ದೋರ್ದಂಡದಿಂ ಬಾಲಗೋಪನಪ್ಪಳಿಸಲು | ಗರ್ದಭನುರುಳಲಂತಲ್ಲಿ |
ಗಾರ್ದಭನಂತಾವಾಗಲರಚುತಿರ್ಪ | ಗರ್ದಭರವಮೆಂಬ ಶಿಲೆಯ || ೨೭ ||

ಓವದೆಯಾ ದೇವತೆಗಳೇಳ್ವಾಸರ | ತೀವಿ ಸುರಿವ ಕಲ್ಲುಮಳಿಗೆ |
ಆ ವಿಷ್ಣುವೆತ್ತಿಯೆಡದ ಕೈಯೊಳಗಾಂತ | ಗೋವರ್ಧನೆಮೆಂಬ ಗಿರಿಯ || ೨೮ ||

ಅಂದವಡೆದು ತೋರುತಬರಲತ್ಯಾ | ನಂದದಿನಾನೃಪವರರು |
ನಂದಗೋಪನ ಬೀಳ್ಕೊಟ್ಟು ಮನೆಗೆ ಪೋಪೆ | ವೆಂದೆಯ್ದವ ದಾರಿಯೊಳು || ೨೯ ||

ಬಸುಧೆಯಿನಾಗಗನಕೆ ಕೀಲು ಕೊಟ್ಟಂತಿ | ರೆಸಕವಡೆದುದೊಂದು ಶಿಲೆಯ |
ಅಸಮಪರಾಕ್ರಮಿಯಾಯೇಕಕುಂಡಲ | ನಸದೃಷ್ಯ ಬೂಜಬಲದಿಂದ || ೩೦ ||

ಒತ್ತಿಯಣೆದು ಭೂತರಖಿರದುರುಳಿಸಿ | ಕಿತ್ತು ಚೆಂಡನು ಹಾಕುವಂತೆ |
ಮತ್ತೊಂದುಕಡೆಗೆ ಹಾಕಲು ಪೂಮಳೆ ಕರೆ | ನಸದೃಶ ಬುಜಬಲದಿಂದ || ೩೧ ||

ಅದನು ಕಂಡಾ ಭೂತಳಕಿರದುರುಳಿಸು | ಕಿತ್ತು ಚೆಂಡನು ಹಾಕುವಂತೆ |
ಮತ್ತೊಂದು ಕಡೆಗೆ ಹಾಕಲು ಪೂಮಳೆ ಕರೆ | ಯಿತ್ತು ನಭೋಮಾರ್ಗದಿಂದ || ೩೨ ||

ತೃನೂಪುರ ಚಕ್ರವಾಳಪುರದೊಳರಿ | ಮಥನ ಸುಕೇತುವೆಂಬೋರ್ವ |
ಪೃಥುವಿಪಾಲಕಗಾ ಸ್ವಯಂಪ್ರಭೆಯೆಂಬೋರ್ವ | ಪರಥುನಿತಂಬೆಗೆ ಜನಿಸಿದಳು || ೩೩ ||

ಕಂಜವದನೆ ಸತ್ಯಭಾಮೆಯೆಂಬೋರ್ವಳು | ರಂಜಿಪ ಕಲೆಯೊಡಗೂಡಿ |
ಹೊಂಜೆಳೆ ಹೊಗರ ಹಡೆವ ತೆರೆದಿಂದೇ | ರುಂಜವ್ವನಮೆಯ್ದಿದಳು || ೩೪ ||

ಅವರಯ್ಯನಾ ಖೇಚರನೊಂದಾನೊಂದು | ದಿನದೊಳು ತನ್ನ ತನುಜೆಯ |
ಭುವನಾತಿಶಯಮಪ್ಪ ರೂಪನಿರೀಕ್ಷಿಸಿ ಸಂ | ಭವಿಸಿದ ಸಡಗರದಿಂದ || ೩೫ ||

ತುರಣಿಗೆವರನೆಂತಪ್ಪನಾಗುವೆನೆಂ | ದಿರದೆ ಸಂಭಿನ್ನನೆಂಬೋರ್ವ |
ಸುರುಚುರಬೋಧಸಂಯುತಶಕುನಿಗನೊಳ | ಗೊರೆಯಲಿಂತವನುಸುರಿದನು || ೩೬ ||

ಮಾನನಿದಿಯೆ ನಿನ್ನ ಶಸ್ತ್ರಶಾಲೆಯೊಳೈದಿ | ನಾಗಸಯೈಯನೊಲಿದೇರಿ |
ಭೂನುತಮಪ್ಪೀ ಶಾರ್ಙವನೇರಿಸಿ | ಈ ನವಶಂಖವೂದಿದನೆ || ೩೭ ||

ಭರತಾವನಿಗಧಿಪತಿಯಕ್ಕುಮವನೇ | ಯರಸ ಕೇಳ್ನಿನ್ನ ನಂದನೆಗೆ |
ನಿರುತಮಾಗಿ ಮಲ್ಲಭನಕ್ಕುಮೆಮೆ ಕಡು | ಹರುಷದಿನಾಖೇಚರನು || ೩೮ ||

ಭರತದರಸುಗಳೊಳಗೆಕಂಸನೇಯುರು | ತರವಿಕ್ರಮಯುತನೆಂದು |
ಪಿರಿದು ವಿಚಾರಿಸಿಯವನಿಪ್ಪ ಮಧುರಾ | ಪುರಕಾ ದಿವ್ಯವಸ್ತುವನು || ೩೯ ||

ಚರರ ಕೈಯಿಂದ ಕಳಹಲಂತರವತಿ | ಭರದಿಂದಾಪುರವರದ |
ಹೊರೆಯ ನಂದನದ ಮಹಾಪೂಜೆನಮಂ | ದಿರದ ಮಂಟಪಕಿರದೆಯ್ದಿ || ೪೦ ||

ಭೂವರಸಕಂಸಗರುಪೆಯವನಂದಾ | ದೈವಜ್ಞನ ಕೇಳಿದೊಡೆ |
ಆ ವಸ್ತುವಾವುದವನಿಗೆ ವಶಮವನೇ | ಶ್ರೀವಧುವಿಗೆ ವರನಹನು || ೪೧ ||

ನಿನಗಹಿತವುಮವನಿಂದೆನೆ ಶಂಕಿಸಿ | ಮನದೊಳು ಬಳಿಕಾಕಂಸ |
ವಿನುತಮಪ್ಪೀ ವಸ್ತುಗಳ ಸಾಧಿಸಿದರ್ಗೆ | ಯೆನಿತು ಬೇಡಿದುದ ಕೊಡುವೆನು || ೪೨ ||

ಎಂದು ಡಂಗುರವನೆಲ್ಲಡೆಯೊಳು ಹೊಯಿಸಿದೊ | ಡಂದಾ ತುರುವಟ್ಟೆಯೊಳು |
ನಂದನನಂದನನಿದನು ಸಾಧಿಪೆನು | ನೆಂದು ನಿಲೆಸೆ ಘೋಷಣೆಯ || ೪೩ ||

ಆ ವಾರತೆಯನೋಲಗದೊಳಿಗಿರ್ದ ಕಂ | ಸಾವನಿಪಾಲಕಗೊರೆಯ |

ಆ ಓಲಗದೊಳಗಿರ್ದರಿಂತೆಂದರು | ಭೂವಿಶ್ರುತ ವಿಷ್ಣುವಿರವ || ೪೪ ||

ಮೊಲೆಯುಂಬ ಕಾಲ ಮೊದಲು ತನ್ನ ಕೊಲಬಂದ | ಬಲಯುತ ದೇವತೆಗಳನು |
ನೆಲಕಿಕ್ಕಿ ಬಳಿಕ ಗೋವರ್ಧನಗರಿಯನು | ಚಲಿಸದೆ ಚಾಳಿಸಿದನು || ೪೫ ||

ಮುಳಿದೊಡೆ ನೆಲನನಾಗಸಕಾ ನಭವನು | ಇಳಿಗೆತರ್ಪಾ ಬಲಯುತಗೆ |
ತಿಳಿಯುಲಿದೇನು ಗಹನಮೆಂದು ನುಡಿದವ | ರೊಳಗಾ ಕಂಸನಿಂತೆಂದ || ೪೬ ||

ನಾಳೆಯದನು ಕಾಣಲಕ್ಕುಮೆಂದಾ ವಸ್ತು | ಪಾಲಕರುಗಳನು ಕರೆಸಿ |
ಮೇಳೈಸಿ ನಿಮ್ಮ ವಸ್ತುವನುದುಕ್ಕೆಂದು | ಪೇಳಿದೊಡಾ ಖೇಚರರು || ೪೭ ||

ಆ ಮರುದಿನದುದಯದೊಳಂತವನು ಸು | ಪ್ರೇಮದಿನರ್ಚನೆಗೈದು |
ಸಾಮಂತರರಸುಮಕ್ಕಳು ಸಹಿತಾ ಕಂಸ | ಭೂಮೀಶನಲ್ಲಿಗೈದಿದನು || ೪೮ ||
ಆ ಸುರತರಮಪ್ಪಾಶಯನದ ಚಂಡ | ವಾಸುಕಿ ವಿಷದುಸುರ್ವೊಯ್ಕೆ |
ಕೇಸರಿಛಟಿಛಟಿಲೆನೆ ಕಂಡದಕೆ ಸ | ಭಾಸದರೆಲ್ಲರುಳಿಕಿದರು || ೪೯ ||

ಆ ಸಮಯದೊಳಂಬುಜೋದರನಾ ಬಳಿ | ಗೋಸುರಸದೆ ನಡೆತಂದು |
ಕೇಸಡಿಯಿಂದ ಭರದಿ ಮೆಟ್ಟಿಯೇರಿದ | ನಾ ಸರ್ಪಶಯ್ಯೆನಂದು || ೫೦ ||

ರಾಜೀವೋದರನಂಗದೀಧಿತಿಫಣಿ | ರಾಜತಲ್ಪದೊಳೊಪ್ಪಿದುದು |
ರಾಜಮಂಡಲದ ನಡುವೆ ನೆರೆಕಾಣಿಸಿ | ರಾಜಿಪ ಚಿಹ್ನದಂದದೊಳು || ೫೧ ||

ಮತ್ತಮಗುರ್ವಿಸುವಾಶಾರ್ಙವನಾ | ಉತ್ತಮಸತ್ತ್ವನುಂಗಟದಿ |
ಒತ್ತಿತಿರುವನೇರಿಸಿ ಸುರಧನುವನು | ಹೊತ್ತ ಕಾರ್ಮುಗಿಲಂತೆಸೆದನು || ೫೨ ||

ಕಂಬುವನೂದುವೆನೆಂದು ಕರ್ಚಿದ ಕಮ | ಲಾಂಬಕನಾಸ್ಯಮೊಪ್ಪಿದುದು |
ತುಂಬುವೆರೆಯನೋವದೇ ಕಚ್ಚಿದ ರಾಹು | ಬಿಂಬಿವಿದೆಂಬಂದದೊಳು || ೫೩ ||

ಆ ಪಾಂಚಜನ್ಯಮನತಿ ಧರದಿಂ ಪಿಡಿ | ದಾ ಪೀತಾಂಬರನೂದೆ |
ಆಪತ್ತು ದಿಗ್ವಿಸರಂಗಳೊಳಗೆ ತಾ | ನೇವೂರಿಸಿತಾ ರವವು || ೫೪ ||

ಏರಿಭುಜಂಗಶಯ್ಯೆಯನಶಾರ್ಙೆಯ | ನೇರಿಸಿಯಾಶಂಕವನು |
ಹಾರಲೂದಿದ ಹರಿಯನು ಕಂಡು ಕಂಸಗೆ | ಏರಿಟ್ಟಿಗೊಂಡಂತಾಯ್ಯು || ೫೫ ||

ಆ ವಸ್ತುಗಳನು ರಕ್ಷಿಸುತ್ತಿರ್ಪಾಯಕ್ಷ | ದೇವತೆಗಳು ಸಂತಸದಿ |
ಆ ವಾಸುದೇವನ ಪೂಜಿಸಿ ಬಳಿಕ ನಾ | ನಾವಿಧಿಯಿಂ ಪೊಗಳಿದರು || ೫೬ ||

ಮತ್ತಾತುರುಪಟ್ಟೆಗಾಹರಿ ಪೋಗೆ ಕ | ರುತ್ತಾ ಕಂಸನಂದವನ |
ಎತ್ತರವನು ಕಂಡು ಕೊಲಿಸಬೇಕವನದೆ | ನುತ್ತ ಮನದೊಳಿಣಿಸಿದನು || ೫೭ ||

ಅವನ ಮುನಿಸನರಿದಾ ಬಲಭದ್ರನು | ತವಕದಿ ತುರುಪಟ್ಟೆಗೈದಿ |
ಸವಿನಯದಿಂ ತನ್ನ ತಮ್ಮನಚ್ಯತನೊಳ | ಗವಿರತ ಕೂಡಿರಲಿತ್ತ || ೫೮ ||

ಕಾಳಿಂದಿಯ ಮಡುವಿನ ಕಮಲವ ತರ | ಹೇಳಿ ನಂದಗೋವಳಗೆ |
ಅಳನಿರದೆ ಕಂಸನಟ್ಟಲಂತದನವ | ಕೇಳಿ ಚಿಂತೆಯೊಳಿರುತರಲು || ೫೯ ||

ಚಿಂತೆಯಿದೇಕೆಂದಾ ಹರಿ ಕೇಳಿದೊ | ಡಿಂತೆಂದನೆಲೆ ತನುಜಾತ |
ಅಂತಿಂತೆನಲೇಕಂತಕನಾಲಯ | ದಂತೆಯಗುರ್ವಿಸುತಿರ್ಪ || ೬೦ ||

ಜಗುನೆಯ ಮಡುವಿನೊಳೊಂದು ಹೇಮಾಂಬುಜ | ವೊಗೆದಿದೆಯದನು ಕಾದಿರ್ಪ |
ವಿಗಡ ವಿಷೋರಗಕಳುಕಿಯದಕೆ ತುಂಬಿ | ಮೊಗವಿಕ್ಕಲ ತರಹೇಳಿ || ೬೧ ||

ಅರಸೆನೆನ ಬಳಿಗಾಳನಟ್ಟಿದನದರಿಂ | ಪಿರದಪ್ಪ ಚಿಂತೆಯಾಯ್ಯೆನಲು |
ಹರಿಯೆಂದನೆಲೆತಂದೆಯೊಳ್ಳೆಯ ಕಪಿನ | ಸರಸಿಜವನು ತಹುದಕ್ಕೆ || ೬೨ ||

ಚಿಂತೆಯಿದೇಕೆನುತಾತನ್ನೆಣೆಯ ಗೋಪ | ಸಂತತಿಯನು ಕೂಡಿಕೊಂಡು |
ಅಂತರಿಸದೆ ಕಾಳಿಂದಿಯ ಮಡುವಿಗೆ | ಸಂತಸದಿಂದದೆಯ್ದಿದನು || ೬೩ ||

ಸಾಸಿರೆಸಳಕಂಜಮನಾಮಡು ಹೊಕ್ಕು | ಸಾಸಿಗನಲ್ಲಿಂದ ಕೀಳೆ |
ಓಸರಿಸದೆಯದನೊಸೆದು ರಕ್ಷಿಸುವಾ | ವಾಸುಗಿ ಕೆಕ್ಕಳಗೆರಲಿ || ೬೪ ||

ಅರೆವೆಡೆಗೊಂಡು ಭುಗಿಲ್ಭಗಿಲೆನುತ ಕೇ | ಸುರಿವೆರಸಿದ ಗರಳವನು |
ಭರದಿಂದುಗುಳುತ ಮೇಲ್ವಾಯ್ದಾಕರಿ | ಯುರಗನ ಕಂಡು ಕೇಶವನು || ೬೫ ||

ಎಡದ ಕೈಯಿಂದ ಮತ್ತದರ ಹೆಡೆಯ ಹಿಡಿ | ದೊಡದನು ಕೈಯಿಸುತ್ತೆ |
ಕಡುನೇಹದಿಂದಾನಂದಿಪ ನಾಗರ | ಪಡಿಯಾಗಿ ಪಿರಿದು ರಂಜಿಸಿತು || ೬೬ ||

ಮತ್ತಾ ಕೈಯಿಂದಾ ತಲೆಯನು ಪಿಡಿ | ದೊತ್ತಿ ಬಿಡಿಸಿ ಕಾಳಿಂಗನನು |
ಮೊತ್ತದ ಗೋಪರು ಕೊಂಡಾಡಲಾ ಪುರು | ಷೊತ್ತಮನಲ್ಲಿಗೈತದು || ೬೭ ||

ಒಂದು ಕೈಯೊಳು ಕಾಂಚನಕಂಜವನು ಮ | ತ್ತೊಂದು ಕೈಯೊಳು ಕಾಲಿಂಗನು |
ತಂದಾ ನಂದಗೋಪನ ಕೈಯಕೊಡಲಾ | ನಂದದಿನಂತವು ಸಹಿತ || ೬೮ ||

ಬಂದಾ ಕಂಸಗೊಪಪ್‌ಇಸೆಕಂಡು ಕಡುಮೆಚ್ಚಿ | ದಂದಿದಿನುಡುತೊಡವಿತ್ತು |
ನಂದನನಾ ತುರುಪಟ್ಟೆಗೆ ಕಳುಹಿಯಿಂ | ತೆಂದು ಮನದೊಳಿಣಿಸಿದನು || ೬೯ ||

ಪಲವು ಕೃತಕದಿಂದಿ ಸತ್ತುದಿಲ್ಲೀ ಪಗೆ | ಯಲಗಿನ ಮುಖದಿ ಕೊಲ್ವುದಕೆ |
ಬಲುಗೈಯ ವಸುದೇವ ಬಲಭದ್ರರು ಬಂದು | ಬಲವಾಗುವರು ಬೇಗದೊಳು || ೭೦ ||

ಅದರಿಂದೀ ಹಗೆಯನು ಜಟ್ಟಿಗಳಿಂದ | ಸದೆಯಿಸಿ ನಿಶ್ಚಿಂತಮಿಹೆನು |
ಇದು ಕಾರ್ಯಮೆಂದು ಬಗೆದು ಕಂಸನೃಪತಿಯ | ಗ್ಗದ ಭುಜಬಲಶಾಲಿಗಳು || ೭೧ ||

ಜಗಜಟ್ಟಿಗಳು ಚಾಣೂರಕೇಸರಿ ಮು | ಷ್ಟಿಗ ವಜ್ರಜಂಘರ ಕರೆದು |
ವಿಗಡಮಪ್ಪಾ ತುರುಪಟ್ಟೆಯ ನಂದನ | ಮಗನ ನಿಮ್ಮೀ ವಿದ್ಯೆಯಿಂದ || ೭೨ ||

ನೆಲಕಿಕ್ಕುವ ಸತ್ವಮುಂಟೆಯೆನೆ ಕೇಳಿ | ಇಳೆಯಾಧಿಪತಿ ಕೇಳೆಮಗೆ |
ಕಲಹಕೆ ದಿಗುದಂತಿಗಳೇಣೆಯಲ್ಲದೆ | ಹುಲುಗೋವನ ಸಂತನೆಣೆಯೇ || ೭೩ ||

ಒತ್ತಿ ತಿವಿದು ಛಿದ್ರವ ಮಾಡಿ ಭೂಮಿಯ | ಹೊತ್ತ ಹಾವಿನ ಹೆಡೆವಣಿಯ |
ಕಿತ್ತುತನ್ನಿಯೆನ್ನದೆದನಗಾಯಿಯ | ಮತ್ತೆಮಗಿದಿರನಿಕ್ಕುವರೆ || ೭೪ ||

ಎಂದ ಮಾತನು ಕೇಳಿ ನಿಮ್ಮೀ ಸಾಧನೆ | ಯಿಂದಮವನನಿಕ್ಕಿದೊಡೆ |
ಸಂದೇಹವೇಕೆ ನಿಮಗೆ ಬೇಡಿದುದನೀವೆ | ನೆಂದವರೊಳು ಮಾತನಾಡಿ || ೭೫ ||

ಆ ಮರುದಿನ ಮಲ್ಲರಂಗಮನಾ ಕಂಸ | ಭೂಮೀಶನು ಮಾಡಿಸುತಿರೆ |
ಆ ಮಹೀಪಾಲಕ ವಸುದೇವನಾ ಬಲ | ರಾಮನವನ ಕಾರ್ಯವರಿದು || ೭೬ ||

ನಂದಗೋಪನನಾರುಮರಿಯದವೊಲು ಗೋ | ವಿಂದ ಸಹಿತ ಕರೆತರಿಸಿ |
ಬಂದವರೊಳಗೇಕಾಂತದೊಳಾ ಅರ | ವಿಂದನಾಭವ ಹುಟ್ಟುಮೆಟ್ಟಿ || ೭೭ ||

ವರಮುನಿಯುತಿಮುಕ್ತರು ತಮ್ಮೊಳಗಂ | ದೊರೆದ ವಚನಮಾದಿಯಾಗಿ |
ಹರಿಯಿಂದ ಕಂಸ ಜರಾಸಂಧಚಕ್ರಿಗೆ | ಮರಣಮುಂಟೆಂಬುದೆಲ್ಲವನು || ೭೮ ||

ತಿಳಿಯಪೇಳಿಯೆಚ್ಚರಿಕೆಯೆಂದವರನು | ಬಲರಾಮನ ಕೂಡೆ ಕಳುಹೆ |
ಬಳಿಕಿತ್ತ ಮಲ್ಲರಂಗಮನಾನರಪನನು | ಗೊಳಿಸಿ ತಾನು ಬಳಿಗೆಯ್ದಿ || ೭೯ ||

ಉತ್ತುಂಗಮಪ್ಪ ಚೌಪಳಿಕೆಯ ಮಾಡಿಸಿ ಮೊತ್ತದರಸುಗಳುವೆರಸು |
ಮತ್ತಹೃದಯ ಕಂಸ ಕುಳ್ಳಿರ್ದ ಬಲವನು | ಸುತ್ತಿವಲಯದೊಳಗಿರಿಸಿ || ೮೦ ||

ಇರಲಲ್ಲಿಗೆ ವಸುದೇವನೃಪತಿ ತ | ನ್ನುರುತರ ಸೈನ್ಯವ ಕೂಡಿ |
ಭರದಿಂದ ಮತ್ತೊಂದು ಚೌಪಳಿಕೆಯೊಳು ಸಂ | ಗರಕೆ ಸನ್ನದ್ಧನಾಗಿರಲು || ೮೧ ||

ಮಲ್ಲರೊಳಗೆ ಹೋರಿಸಬೇಕು ನಿನ್ನಾ | ಬಲ್ಲದನಪ್ಪ ನಂದನನ |
ನಿಲ್ಲದೆ ಕಳುಹೆಂದಾನಂದಗೆ ಕಂಸ | ವಲ್ಲಭನಾಳನಟ್ಟಿದನು || ೮೨ ||

ಅವರು ಬಂದುಸುರೆ ಯಶೋಧೆಯಿಂತೆಂದಳು | ಏವರಿಸಲೆನ್ನ ನಂದನನು |
ಜವನಿಂದ ಸಾಯಂ ಕಿಚ್ಚಿಂ ಬೇಯನದರಿಂ | ದಿವನನೋಯಿಸುವವರುಂಟೇ || ೮೩ ||

ಎಂದಾ ಬಂದ ದೂರರೊಳು ನುಡಿದು ನಿಜ | ನಂದನವನು ಸಿಂಗರಿಸಿ |
ಇಂದು ನಿನ್ನಾರಿಪುಗಳನೆಲ್ಲರ ಹೊಂದಿ | ಸೆಂದು ಹರಿಸಿ ಬೀಳ್ಕೊಡಲು || ೮೪ ||

ಬಲನಾರಾಯಣರಾ ಕಂಸನನಿಂದು | ಕೊಲುವೆವೆನುತ ನಂದಸಹಿತ |
ಪಲವು ಗೋಪಾಲನಂದನರೊಡಗೂಡಿ ನಿ | ಶ್ಚಲರಾಗಿ ಪೊರಮಟ್ಟರಾಗ || ೮೫ ||

ಕೊಂಬು ತಿತ್ತಿರಿ ಕಾಳಿ ಕೊಳಲು ತಮ್ಮಟೆ ತಾಳ | ಚಿಂಬಕವರೆ ವೀರವಂದ |
ಬೊಂಬುಳಿಗಳ ಬಾಜಿಸುವ ಗೋಪರ ನಿಕು | ರುಂಬ ಸಹಿತ ಬಂದರಾಗ || ೮೬ ||

ಅತ್ತಲತ್ಯಂತಕುಹಕಿಯಾಕಂಸನು | ನ್ಮತ್ತ ತನಗೆಯರಿಹಿತನು |
ಮತ್ತೋರ್ವ ಕೈಟಭನೆಂಬಸುರನನು ತ | ನ್ನೊತ್ತಿಗೆ ಕರೆಯಿಸಿಕೊಂಡು || ೮೭ ||

ನೀನೆನಗುಳ್ಳವನಾದೊಡೆ ಗೋಪನ | ಸೂನು ಜಟ್ಟಿಗಲ ಕಾಳಗಕೆ |
ಆನೆದೆ ನಡೆತರುತಹನೆಯವನನು ಮ | ತ್ತೀ ನೆಲಕಿಕ್ಕಿಸುವುದೆನಲು || ೮೮ ||

ಎಲೆ ನೃಪ ಕಡೆಗಾಲದ ರುದ್ರನ ಭುಜ | ಬಲವ ನೆಗ್ಗುವ ಸತ್ತ್ವಯುತಗೆ |
ಹುಲುಗೋವಳ ಹುಡುಗನ ಕೊಲ್ಲೆಂದನ | ಗಲಸದೀ ಬೆಸನ ಹೇಳುವರೇ || ೮೯ ||

ಒಂದು ಗಲ್ಲವ ಹಿಡಿಯಲು ಮೊಳೆವಾಲು ಮ | ತ್ತೊಂದು ಗಲ್ಲವನು ಹಿಡಿಯಲು |
ಒಂದಾಗೆ ನೆತ್ತರು ಸುರಿವ ಬಾಲನ ಕೊ | ಲ್ಲೆಂದು ಬೆಸನ ಹೇಳುವರೇ || ೯೦ ||

ಕರು ಕೂಚಿಗನನುಕಥಟಭ ಕೊಂದನೆಂದೆಂಬ | ಕೊರತೆಯನೆನಗೆ ನೃಪಾಲ |
ಹೊರಿಸದೆ ಮುದರಿಯದೆಯೆಂದು ನುಡಿದಾ | ನೆರಗಲಿಯವನು ಬೀಳ್ಕೊಂಡು || ೯೧ ||

ಬಂದಾ ಬಲಯುತನಾನಂದಗೋಪನ | ನಂದನಕೇಶವನು |
ಗೊಂದಣಗೊಂಡ ಗೋವಳರ ನಡುವೆಯಾ | ನಂದದಿ ಬಪ್ಪ ಬಟ್ಟೆಯೊಳು || ೯೨ ||

ಪಲವು ಬಣ್ಣದ ಚಿತ್ರಾಂಬರಂಗಳನಾ | ನೆಲೆಹಿಡಿಯದವೊಲು ಹರಹಿ |
ಉಲಿದು ಪರಿವ ಜಗುನೆ ತಡಿಯೊಳಗೋರ್ವ | ಬಲಯುತ ರಜಕರೂಪವನು || ೯೩ ||

ಧರಿಸಿ ಸೀರೆಯ ತೊಳೆಯುತ್ತಿರಲಾ ಮುರ | ಹರನು ತನ್ನೆಡೆಬಲವಿಡಿದು |
ಹರಿಸದಿ ಬರ್ಪ ಗೋವಳರ ನಡುವೆ ನಡೆ | ತರುತಲೆ ರಜಕ ದಾರಿಯೊಳು || ೯೪ ||

ಹರಹಿದ ಸೀರೆಯ ತೆಗೆಯೆಂದೊಡವನೆಂದ | ನಿರದೆತ್ತುಕತ್ತೆಕಾಗೆಯನು |
ದುರುಳತನದಿ ಕೊಂದ ಗಬ್ಬಿತನದ ಮಾತ | ನೊರೆದು ಕೆಡಲುಬೇಡ ತೊಲಗು || ೯೫ ||

ಜನಪತಿ ಕಂಸಗೆ ತೊಳೆವ ದುಕೂಲವ | ನಿನಿಸು ನಿನ್ನವರು ಮೆಟ್ಟಿದೊಡೆ |
ನಿನಗೆ ತಕ್ಕುದನು ಮಾಳ್ವೆನು ನೋಡಿನಡೆಯೆಂದು | ಕನಲಿ ನುಡಿದ ನುಡಿಗೇಳಿ || ೯೬ ||

ಮುಂದೆ ಬಂದುದ ನೋಡಿಕೊಂಬಮಿತಿದರಿಂ | ಬಂದುದು ಬರಲಿಯೆಂದೆನುತ |
ಸಂದಣಿಗೊಂಡ ಗೋಪಾಲರು ಸಹಿತ ಮು | ಕುಂದ ಮೆಟ್ಟಲು ಸೀರೆಗಳನು || ೯೭ ||

ಎಲವೋ ಕರುಗಾಯಿಯೆದೆಹುಯ್ಲತನದಿಂ | ದಿಳಿಯಾಣ್ಮನ ವಸ್ತ್ರಗಳನು |
ಹುಲಿಗೋವಳರು ಸಹಿತ ಮೆಟ್ಟಬಹುದೆಯೆಂ | ದಲಘುಕೋಪಾಟೋಪದಿಂದ || ೯೮ ||

ಮಾರಿ ಮೈಮರೆದು ಮಸಗಿ ಬರ್ಪಂದದಿ | ನಾರಾಯಣನೆಡೆಗೈದಿ |
ಭೂರಿಗೋಪಾಲರು ನಡುಗುವಂದದಿ ಬಿಡ | ದಾರುತ ಮುಟ್ಟಿಮೂದಲಿಸಿ || ೯೯ ||

ಕೆನ್ನೆಯ ಹೊಡೆದು ಕೆಡಹಿ ಕೊಲ್ವೆನೆಂದಾ | ಉನ್ನತಮಪ್ಪ ಹಸ್ತವನು |
ತನ್ನ ಹತ್ತಿರ ಕೈದಿಸಿ ನಸುನಗುತ | ತ್ಪನ್ನಪರಾಕ್ರಮಯುತನು || ೧೦೦ ||

ಕಳಿಲೆಬಿದಿರ ಕುಡಿಯನು ಮುರಿವಂದದಿ | ಮುರಿದು ಮಾಯದ ಮಡಿವಳನ |
ಮೊಳಕೈಗಳನೆರಡನು ಮುರಿದಂಬರ | ತಳಕಿರದೀಡಾಡಿದನು || ೧೦೧ ||

ಅದನು ಕಂಡಾ ಗೋವಳರಾಲಿಬೊಬ್ಬಿರಿ | ದಧಟ ನಿನಗೆ ಸಮಯದೊಳು |
ಇದರಪ್ಪರುಂಟೆಯೆಂದೆನುತಾಯೆಡೆ ಹರ | ಹಿದ ಸೀರೆಗಳನೆಲ್ಲವನು || ೧೦೨ ||

ಓವದೆ ಸೂರೆಯಾನಾಡಿ ತಮ್ಮಾಕೈಯ | ಗೋವಳಗೋಲತುದಿಯೊಳು |
ತೀವಿ ಗುಡಿಯಗಟ್ಟಿ ಕುಣಿಕುಣಿದಿರಲಾ | ಗೋವಿಂದನೊಡನೈದಿದರು || ೧೦೩ ||

ತಪ್ಪಳೆಗುಟ್ಟುತ ತಾರೆಲೆವಾಡುತ | ಬಪ್ಪ ಗೋವಳರ ಮಧ್ಯದೊಳು |
ಒಪ್ಪದಿನಾ ಬಲಕೇಶವರೀರ್ವರು | ಬರ್ಪ ಪಟ್ಟಣದ ದಾರಿಯೊಳ || ೧೦೪ ||

ಅಜಿತಂಜಯನೆಂಬ ಕಂಸನ ಪಟ್ಟದ | ಗಜಮನವನು ಪೊಪರಮಡಿಸೆ |
ಗಜಬಜಿಸಲು ತತ್ಪುರಮನೆಲ್ಲಾ ಸರ | ಸಿಜನಾಭಗಿದಿರಾಗಲಾಗ || ೧೦೫ ||

ಎಲೆಎಲೆ ಕೃಷ್ಣ ತೊಲಗು ತೊಲಗೆಂದುರೆ | ಪಲಬುತಿರಲು ಪುರಜನವು |
ಅಲಘವಿಕ್ರಮಿ ಸಿಂಹನಾದಮನಾ ಭೂ | ತಳಮದಿರ್ವಂತೆ ಮಾಡಿದನು || ೧೦೬ ||

ಬಳಿಕದು ಬರಿಗೈಯಿಂದೆತ್ತಿ ಹುಯ್ಯಲು | ಬಲಭದ್ರಾನುಜನಾಗ |
ಕೆಳಲಿಯಕ್ಕಲನನೊದೆವರೆರದಿಂ ಪದ | ತಳದಿನೊದೆಯ ಕುಕ್ಕುರಿಸಲು || ೧೦೭ ||

ಹದದ ನೆಲದ ಮೂಲಂಗಿಯ ಕೀಳ್ವಂತೆ | ಯದರ ಕೊಂಬನು ಕಿಳ್ತುಕೊಂಡು |
ಗದೆ ಮಾಡಿ ಪಿಡಿದು ಪೆಗಲೊಳಿಕ್ಕಿಕೊಂಡಾ | ವಿದಿರ ವಿಕ್ರಮಿ ನಡೆತರುಲು || ೧೦೮ ||

ನೊಡಿರೆ ನಮ್ಮ ಕಂಸನ ಹೆಡ್ಡಾಟವ | ನಾಡ ಕೊಲುವ ಮಾಳ್ಕೆಯೊಳು |
ರೂಢಿಸಿದೀದ್ವಿರದವ ಕೊಂದಗೆ ಮಲ್ಲ | ರೀಡೆಯೆಂದೆಲ್ಲರುಲಿಯಲು || ೧೦೯ ||

ಆ ಹಸ್ತಿಯಳಿದ ವಾರ್ತೆಯ ಕೇಳಿ ಕಂಸನಾ | ಜ್ಯಾಹುತಿಗೊಂಡಗ್ನಿಯಂತೆ
ಊಹಿಸಬಾರದ ಕೋಪದಿನಿರಲತ್ತ | ಲಾ ಹರಿಯತಿಲೀಲೆಯಿಂದ || ೧೧೦ ||

ವಸುದೇವನಿರ್ದ ಪಕ್ಕದೊಳಗೆ ಮಲ್ಲರು | ಪಸದನಗೊಂಡು ನಿಂದಿರಲು |
ಅಸಮಸಾಹಸಿ ಚಾಣೂರನಕ್ಕಡಕಿರ | ದಸವಸದಿಂ ಹೊಕ್ಕನಾಗ || ೧೧೧ ||

ದಂಡಾಧೀಶರ ದುರ್ಗಾಧಿನಾಥರ | ಮಂಡಲಿಕರ ಮನ್ನೆಯರ |
ಗಂಡುಗಲಿಗಳ ಗಡಿಯನಾಯಕರ ತಂಡ | ತಂಡದ ನಡುವೆ ಕುಳ್ಳಿರಲು || ೧೧೨ ||

ವರ ಬುಧ ಗುರು ಕವಿಜನವೆಡಬಲದೊಳ | ಗಿರೆ ದೋಷಾಕರನಾಗಿ |
ಇರೆ ಕಂಸನಾರಂಗದೊಳು ರಾಹುಬಿಂಬದ | ದೊರೆಯಾದನಾ ಕೇಶವನು || ೧೧೩ ||

ಮತ್ತೇ ಚಾನೂರಮಲ್ಲನು ಭುಜವನು ಹೊ | ಯ್ದಿತ್ತಿತ್ತ ಕೃಷ್ಣ ನೋಡೆಂದು |
ಹತ್ತಸಾರಿಬಂದು ಗಜಿಘಸಿ ಕಂಡು ಕ | ರುತ್ತಾಯೆಡೆಯೊಳುನಿಂದು || ೧೧೪ ||

ಆರಭಟೆಯಿನಾಸ್ತಳಿಸಲಾ ದ್ವನಿ | ನಾರಾಯಣನ ಮುಡುಹಿನೊಳು |
ಕಾರಮಕಾರ್ಮುಗಿಲೊಡ್ಡಿನೊಳು ಜನಿಸಿದ ಸಿಡಿ | ಲೋರೆಗಯಂತಗುರ್ವಿಸಿತು || ೧೧೫ ||

ಕಗ್ಗಲಿ ನೀಡಿದೆಡದಹಸ್ತವನವ | ನಗ್ಗಳಮಪ್ಪ ಕೈಯಿಂದ |
ಬಗ್ಗಿಸಿ ನೋಡಲಿನಿಸು ಬಗ್ಗಿತಿಲ್ಲದು | ಕಗ್ಗಲಿಯೊನಕೆಯಂದದೊಳು || ೧೧೬ ||

ಅಣೆದು ತನ್ನರುಭುಜಬಲದಿ ನೋಡಿದರಾ | ತೃಣಬೊಂಬೆಯಕ್ಕಿನ ಕರುವ |
ಅಣೆದು ನೋಡುವ ತೆರೆಯಾಯ್ತು ಕಮಲೇ | ಕ್ಷಣನೇನು ಸತ್ತ್ವಾಧಿಕನೊ || ೧೧೭ ||

ಡೊಕ್ಕರದಿಂ ಬಂದವನ ಕಾಲ್ಗಳನೊಳ | ಹೊಕ್ಕು ಹಿಡಿದು ನೋಡಿದೊಡೆ |
ಸೊಕ್ಕಾನೆಯ ಮುಂಗಾಲನಂಜದೆ ಬಂ | ದೆಕ್ಕಲನೆಳವಂತಾಯ್ತು || ೧೧೮ ||

ಬಲ್ಲಿತಪ್ಪಾ ಬಲೈಯಿಂದಿರದೆ | ಪೊಲ್ಲಮುನಿಸಿನಿಂ ತಿವಿಯೆ |
ಮಲ್ಲರಮಲ್ಲನ ಮೈಯೊಳವನ ಮುಷ್ಟಿ | ಕಲ್ಲ ತಾಗಿದ ಮಿಂಟೆಯಾಯ್ತು || ೧೧೯ ||

ಒತ್ತಿ ಹಿಡಿದು ಕೊಲ್ವೆನೆಂದೆನುತಾ ಮೈಯ | ಹತ್ತಿ ಹಿಡಿದು ನೋಡಿದೊಡೆ |
ಮತ್ತವನಿರದೆ ಸಾಧಿಪ ಮಲ್ಲಗಂಭದಂ | ತುತ್ತಮಸತ್ತ್ವನೊಪ್ಪಿದನು || ೧೨೦ ||

ಇಂತು ಪಲವುಪರಿಯಿಂ ನೋಡಲಿವನೆನ | ಗೆಂತಾನುಶಕ್ಯಮಲ್ಲೆಂದು |
ಚಿಂತಿಸುತಾಚಾಣೂರನೊತ್ತಿದೊಡಸು | ರಾಂತಕ ನಸುನಗೆ ನಗುತ || ೧೨೧ ||

ಅಳ್ತಿಯಿಂದಾ ಸರಿಗಾಳೆಗವನು ಕೆಲ | ಹೊತ್ತು ಕೊಡುವೆನಿವೆಗೆಂದು |
ಮಿಳ್ತು ಸಮಾಧಾನವಡೆದಂತಡಗಿಸಿ | ಎತ್ತರಮಪ್ಪ ಕೋಪವನು || ೧೨೨ ||

ಒತ್ತಡೊಡೊಡನೆ ಹಿಮ್ಮೆಟ್ಟುವನೊಳಹೊ | ಕೈತ್ತಿಸೊಡೇಳ್ವ ಕೈವಿಡಿದು |
ಎತ್ತಳೆಯಲತ್ತಲೈದುವನಾ ಹರಿ | ಮತ್ತವನಿಗೆ ಗೆಲುವಿತ್ತು || ೧೨೩ ||

ವಿರಿದಾಣಕೆ ಮೈಗೊಡುವನು ಡೊಕ್ಕರ | ದಿಂದ ಹಾಕಿದೊರುಳುವನು |
ಒಂದಾಗಿ ಹುದುಗೆ ಹುದುಗಿ ನೋಡುವನು ಮು | ಕುಂದನದೇಂ ವೈಸಿಕನೊ || ೧೨೪ ||

ಒಮ್ಮೆ ಸೋಲವನಿತ್ತೊಮ್ಮೆ ಗೆಲುವನಿ | ತ್ತೊಮ್ಮೆ ಸರಿಯ ಕಾಳಗವನು |
ಸಮ್ಮಾನದಿಂದಿತ್ತಾ ಸಭೆಗಚ್ಚರಿ | ಯಮ್ಮಿಗೆ ಮಾಳ್ಪವೇಳೆಯೊಳು || ೧೨೫ ||

ಹರಿಯ ವಂಚನೆಯ ಕಾಳೆಗದ ಸತ್ತ್ವವ ತನ್ನ | ಸರಿಸತ್ತ್ವಮೆಂದೇ ಬಗೆದು |
ಮರುಳಿಮರಳಿ ಮೈಯನುಂಟು ಹತ್ತುವವೊಲು | ಗೋಣ ಮುರಿದುಹಾಕಿದನು || ೧೨೭ ||

ಎಲೆ ಕಂಸ ನೀನೆನಗಪರಾಧಿಯಲ್ಲೆಂ | ದೊಲಸದಿಂತಿದನೆತ್ತೆನುತ |
ಜಲಜೋದರನು ಹಾಕಿದ ಮುಂಡಿಗೆಯೆನೆ | ನೆಲಕುರುಳೊಪ್ಪಿದನವನು || ೧೨೮ ||

ಅದಕಂಡು ಕೇಸರಿಯೆಂದೆಂಬವನು ಕಂಸ | ಗೆದೆಗಲ್ಲಾಗಿ ನಿಂದಿರ್ದ |
ಅಧಟರದೇವನಚ್ಯುತನತ್ತಿತ್ತೆಂ ದದಿರದೆ ಬಂದು ಮೇಲ್ವಾಯೆ || ೧೨೯ ||

ಕುಟ್ಟಿ ಕೆಡಹಿ ಕಾಲ್ವಿಡಿದು ನಭೋಮಾರ್ಗ | ಕಿಟ್ಟುಹಾಕುವೆನೆಂಬಾಗ |
ಮುಟ್ಟಿಗನೆಂಬ ಹೆಸರ ಜಟ್ಟಿಯದ ಕಂಡು | ಮುಟ್ಟಿ ಮೂದಲಿಸಿ ಮೇಲ್ವಾಯೆ || ೧೩೦ ||

ಒಂದು ಹಸ್ತದೊಳು ಮುಷ್ಟಿಗನ ಹಿಡದು ಮ | ತ್ತೊಂದು ಕೈಯೊಳು ಮೊತ್ತಮೊದಲು |
ಅಂದದಿ ಹಿಡಿದ ಕೇಸರಿಯ ಹಿಳ್ಳೆಯ ಹೊಡೆ | ವಂದದಿ ಹೊಡೆದಿಡಲಾಗ || ೧೩೧ ||

ಮಿಗೆ ಮುನಿಸಿಂ ವಜ್ರಜಂಘನೆಂದೆಂಬೋರ್ವ | ಜಗಜಟ್ಟಿ ಬರೆ ಕಂಡುಹಿಡಿದು |
ಗಗನ ಮಂಡಲಕಿಟ್ಟು ಬೀಳದ ಮುನ್ನ ಮು | ಷ್ಟಿಗನಿಂದಿಡಲು ಮತ್ತವನು || ೧೩೨ ||

ಮತ್ತಾ ಚಾಣೂರಮಲ್ಲನ ಸೂಡಿಂ | ದೊತ್ತಿ ಕಾದಿ ಸಾವಡರ್ದ |
ಮತ್ತಹೃದಯ ಮೂವರಿಂ ಕಂಸನತಿಧೈರ್ಯ | ದೆತ್ತರಮದವಡಿಗಿದುದು || ೧೩೩ ||

ಬಳಿಕ ಬಳಸಿನಿಂದ ಸಾಸಿರ್ವರು ಮಲ್ಲ | ರೊಳಗೊಬ್ಬರುಳಿಯದೆ ಬಂದು |
ಮಿಲಯಭೈರವನಂತೆ ನಿಂದ ಹರಿಯ ಜೇನ | ಹುಳು ಮುತ್ತುವ ಮಾಳ್ಕೆಯೊಳು || ೧೩೪ ||

ಮುತ್ತಿ ಹಿಡಿಯಲು ನೊರಜನಿದರೊರಸುವಂ | ತೊತ್ತಿ ಹೊಸೆದು ಕೆಲಬರನು |
ಹತ್ತಿಯ ಹಿಸಿವಂತೆ ಹಿಸಿದು ಕೆಲಂಬರ | ತೊತ್ತಳದುಳಿದು ಕೆಲರನು || ೧೩೫ ||

ಒದೆದು ಕೆಲರನೊಕ್ಕಲಿಕ್ಕಿ ಕೆಲಂಬರ | ಮಿದಿದು ಕೆಲರ ಗುದ್ದಿ ಕೆಲರ |
ಕುದಿದು ಕೆಲರ ಕೊಂದನಾ ನೋಡುವ ಕಂಸ | ನೆದೆ ಹವ್ವನೆ ಹಾರುವಂತೆ || ೧೩೬ ||

ಕೆಪ್ಪೆಯ ಕುಟ್ಟಿ ಕೆಲಂಬರನುರೆಬಿಗಿ | ಯಪ್ಪಿ ಕೆಲರ ಕಾಲ್ವಿಡಿದು |
ಅಪ್ಪಳಿಸುತ ಕೆಲಬರ ಕಂಸ ನೃಪನೆದೆ | ಹೆಪ್ಪಳಿವಂತೆ ಮರ್ದಿಸಿದ || ೧೩೭ ||

ಗುದ್ದಿ ಕೆಲರ ಗೂಡಕೆಡೆವಂತೆ ಕೆಲಬರ | ನುದ್ದಿಯೊರಸಿ ಕೆಬರನು |
ಉದ್ದಕೆ ಹಾಕಿ ಕೆಲಂಬರನಾ ಹರಿ | ಬಿದ್ದಿಕ್ಕಿದನು ಮಿಳ್ತುವಿಗೆ || ೧೩೮ ||

ಕುಟ್ಟಿ ಕೆಲರ ಕುಸುಕಿರಿದು ಕೆಲರ ದೆಸೆ | ಗಿಟ್ಟು ಕೆಲರನವನಿಯೊಳು |
ಮೆಟ್ಟಿ ಕೆಲರ ಕೊದಾರಂಗದೊಳು ಮೆದೆ | ಯೊಟ್ಟಿ ಹೆಮ್ಮಾರಿಯಂದದೊಳು || ೧೩೯ ||

ಇರೆ ಕಾಣುತುರಿದು ಕೆಡುವ ದೀವಿಗೆಯಂ | ತುರುತರಮಪ್ಪ ಕೋಪದೊಳು |
ತರಹರಿಸದೆ ಕಂಸಭೂಪತಿ ತನ್ನ ದು | ರ್ಧತರರಮಪ್ಪ ಸೇನೆಯನು || ೧೪೦ ||

ತಲೆಗೊಳ್ಳಿ ತಡೆಯದೆನುತ ಕೈವೀಸಲು | ನೆಲನೆ ಬೆಸಲೆಯಾದಂತೆ |
ಬರಮೆಲ್ಲ ಮೇಲ್ವಾಯಲು ಕಂಡು ವಸುದೇವ | ಬಲದೇವರಂದಿದಿರಾಗೆ || ೧೪೧ ||

ಅದನು ಕಂಡಾ ಕಂಸನತಿಕೋಪದಿಂದೇಳ್ವ | ಪದದೊಳಗಾ ಕೇಶವನು |
ಅಧಟನಪ್ಪೋರ್ವ ಜಟ್ಟಿಯ ಕಾಲ್ವಿಡಿದು ಬೀಸಿ | ಯೊದಗಿಯವನ ಕಾಲನಿಡಲು || ೧೪೨ ||

ಧರೆಗೆ ಬೀಳ್ದಾ ಕಂಸನ ಕಂಡು ಕೋಪದಿ | ಪರಿದು ಬಂದು ಕಾಲಹಿಡಿದು |
ಅರಸ ನೀನೇಕಿಂತರ್ದಪೆಯೆನ್ನ ಸೋ | ದರರನೆಲ್ಲಕೊಂದೆಯಲ್ಲ || ೧೪೩ ||

ಮತ್ತೆನ್ನ ಹಸುಳೆವರೆಯ ಮೊದಲಾಗಿ ಕ | ರುತ್ತು ನಿನ್ನಾರಕ್ಕಸಿಯರು |
ಮೊತ್ತದಿಂದ ಕೊಲಲೆಣಿಸಿದ ದೋಷಿಯೆ | ನುತ್ತೊಂದು ಪಾಸರೆಯೊಳಗೆ || ೧೪೪ ||

ಪರರಿಸಲವನಿಯೊಳಗೆ ಖಂಡವರುಣಾಂಬು | ದೆಸೆದೆಸೆಯನು ಬಣ್ಣವಿಡಲು |
ಮಸಕದಿಹರಿಯಾಕಂಸನನೆತ್ತಿ | ಯಸಗ ಹೊಯ್ಲಿಂ ಕೊಂದನಾಗ || ೧೪೫ ||

ಅಕಲಂಕವಿಕ್ರಮಾನ್ವಿತನತಿಕೋಪಾಂ | ತಕನುದ್ಧತಸತ್ತ್ವಯುತನು |
ಪ್ರಕಟಿತನಾ ಹರಿಯೆಸೆದನು ಸತ್ಕವಿ | ನಿಕರಮಾಕಂದಕೋಕಿಲನು || ೧೪೬ ||

ಇದು ಜಿನಪದರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಂಗತಿಯೊಳ | ಗೊದವಿದಾಶ್ವಾಸಷೋಡಶವು || ೧೪೭ ||

ಹದಿನಾರನೆಯಸಂಧಿ ಸಂರ್ಪೂಣಂ