ಶ್ರೀಮದಮರಪತಿಮೌಲಿಕೀಲಿತಪಾದ | ತಾಮತಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗವೆನು || ೧ ||

ಅತ್ತಲು ವಸುದೇವ ಬಲಭದ್ರರುಗಳು ಕ | ರುತ್ತ ತಮಗೆ ಮಾರ್ಮಲೆವ |
ಮೊತ್ತದಬಲವನೆಲ್ಲವ ಕೊಂದಾಪುರು | ಷೊತ್ತಮನೊಡಗೂಡಿದರು || ೨ ||

ಅಭಯಘೋಷಣೆಯ ಮಾಡಿಸಿ ಮತ್ತಲಿರ್ದ | ಸಭೆಯನೆಲ್ಲವನು ಸಂತೈಸಿ |
ತ್ರಿಭುವನವೀರನನಸಿಪಂಜರದೊಳಿರ್ದ | ವಿಭುವುಗ್ರಸೇನಬರಿಸಿ || ೩ ||

ಆ ಕಂಸನ ಶಬವನು ಸಂಸ್ಕಾರಿಸಿ | ಯಾಕಾಂತೆ ಜಿವಂಜಸೆಯ |
ಏಕಡೆಗೈದದಂದದಿ ಕಾಪಿಟ್ಟಾ | ಲೋಕಾಗ್ರಣಿಗಳಲ್ಲಿರಲು || ೪ ||

ದುರುಳಕಂಸನ ನಿಜಸಖರು ಪಲ್ಲವದೇಶ | ದರಸುಗಳಸುರವಲ್ಲಭರು |
ಉರುಬಲಯುತಮುರಮಧುಕೈಟಬಾರಿಷ್ಟ | ನರಕಾಸುರರೆಂಬವರು || ೫ ||

ಒದವಿದ ಬಲಸಹಿತಲ್ಲಿಗೆ ನಡೆತರ | ಲದನಾ ಕೇಶವನರಿದು |
ಇದಿರ್ವಂದಾ ಬಲವನು ಸಂಹರಿಸಿ ಮ | ತ್ತಧಟಿಂದವರು ಕೊಂದು || ೬ ||

ಮುರನ ಗದೆಯ ಮಧುವಿನ ತೇರ ನರಕಾ | ಸುರನ ಖಡ್ಗವ ಕೈಟಭನ |
ಉರುಕೇತುವನರಿಷ್ಟನಪರಿಗೆಯ ಕೊಂಡು | ಹರುಷದಿ ಮಧುರೆಗೈದಿದರು || ೭ ||

ಅನಿತರೊಳಾ ಮಧುವಿನ ನಿಜಸುರ ಭೂ | ಜನನುತನಾ ಹಿರಣ್ಯಾಕ್ಷ |
ತನಗಿಂದ ನೆರೆ ಕಿರಿಯಳು ರೇವತಿಯೆಂಬ | ವನರುಹದಳಲೋಚನೆಯನು || ೮ ||

ಬಲರಾಮಗೆ ಕೊಟ್ಟು ಮತ್ತರವನು ಕಂಡು | ಬಳಿಕ ನಿಸ್ಚಿಂತದಿನಿರಲು |
ಬಲಯುತರಾ ತಮ್ಮ ಶೌರೀಪುರವರ | ಕಲಸದೆ ಪೋಪೆವೆಂದೆಣಿಸಿ || ೯ ||

ಉಗ್ರಸೇನನನು ಕರೆಸಿ ತನ್ನ ತನುಜಾತ | ತಗ್ರಗಣ್ಯರು ಸಹಮಾಗಿ |
ವ್ಯಗ್ರದಿಂದಲಿ ಮಧುರೆಯ ಪೊರಮಟ್ಟು ನೃ | ಪಾಗ್ರೇಶವಸುದೇವನೈದಿ || ೧೦ ||

ಶೌರೀಪುರಕಾನಂದದಿ ಪೊಕ್ಕಾ | ವಾರಿಧಿವಿಜಯಭೂವರನ |
ಚಾರುಚರಣಕಾರನುಜಾತರುಗೂಡಿ | ಭೀರುತೆಯಿಂದೆರಗಿದನು || ೧೧ ||

ಎರಗಿದನುಜತನುಜರ ಬಿಗಿಬಿಗಿಯಪ್ಪಿ | ಯೆರಕದಿಂದ ಮಿಗೆ ಹರಿಸಿ |
ನೆರೆದಿಂಗಳ ಕಂಡಮೃತಸಮುದ್ರದ | ತೆರನಾಗಿ ಮಿಗೆ ಹೆಚ್ಚಿತಿರ್ದು || ೧೨ ||

ಆ ಪಗಲಿನ ಮರುದಿನ ಉಗ್ರಸೇನಮ | ಹೀಪಾಲಗರಿವಿನಯದೊಳು |
ಆಪೃಧುವಿಪನುಡುಗೊಟ್ಟು ಬಳಿಕ ಮಧುರಾಪುರಕೈದಿಸಲಲ್ಲಿ || ೧೩ ||

ನಲ್ಲನ ಕೊಂದ ಹಗೆಯನು ಮುಗುಚಿಕೊಂ | ದಲ್ಲದೆ ಮುಡಿಗಟ್ಟೆನೆಂದು |
ಹೊಲ್ಲದ ಭಾಷೆಯ ಮಾಡಿ ಜೀವಂಜಸೆ | ಯಲ್ಲಿ ಮುಕ್ತಕೇಶಿಯಾಗಿ || ೧೪ ||

ಆ ಉಗ್ರಸೇನಮಹೀಶನರಿಯದಂ | ತಾ ಊರನು ಪೊರಮಟ್ಟು |
ತೀವಿ ದುಃಖದಿ ರಾಜಗೃಹಕೆ ಬಂದು | ಭೂವಲ್ಲಭನು ತನ್ನತಂದೆ || ೧೫ ||

ರಾಜಾಧಿರಾಜಮಸ್ತಕಮಣಿಮಕುಟ ವಿ | ಭ್ರಾಜಿತಪಾದರಸರೋಜ |
ಭೂರಾಜಾಯಾಪತಿಯಷ್ಟಮದಾಂಧನ | ಪ್ಪಾಜರಾಸಂಧನ ಮುಂದೆ || ೧೬ ||

ಬಿಟ್ಟ ತುರುಬು ಬಿಡುಸುಯ್ಲು ಗದ್ಗದಕಂಠ | ದಿಟದಟಿಯಿನೊಗೆವಶ್ರೂಗಳು |
ಕಟ್ಟುವೆದೆಯ ಕೈಯಿಂದ ಜೀವಂಜಸೆ | ನೆಟ್ಟನೆ ನೆಲಕೆ ಬೀಳ್ದುರುಳೆ || ೧೭ ||

ಅಂತು ಬೀಳ್ದಾಮಗಳನು ಕಂಡು ವಿಸ್ಮಯ | ವಂ ತಾಳಿಯೇನೇನೆಂದು |
ಅಂತಕನಿಭಕೋಪನಣುಗೆಯ ದುಃಖಮ | ನೆಂತಾನು ಮಾಣಿಸಿ ಬಳಿಕ || ೧೮ ||

ಕೇಳಲೊಡನೆ ತನ್ನ ಗಂಡನನಾ ಗೋ | ಪಾಲನು ಕೊಂದ ವಾರ್ತೆಯನು |
ಪೇಳಲಂತದ ಕೇಳಿ ಪಿರಿದಪ್ಪದುಃಖದ | ತಾಳಿ ಮಗಳ ಸಂತೈಸಿ || ೧೯ ||

ಎಲೆ ತನುಜಾತೆ ನಿನ್ನೆರೆಯನ ಕೊಂದಾ | ಖಳನ ತಲೆಯ ಮೆಟ್ಟಿ ನಿನ್ನ |
ಪಲಸೂಳು ಮಜ್ಜವನು ಮಾಡಿಸದೊಡೀ | ನೆಲನನಾಳುವುದೇಕೆ ನನಗೆ || ೨೦ ||

ಎಂದು ಮಸಿಗಿ ಕಾಲವಯನೆಂಬ ತನ್ನಾತ್ಮ | ನಂದನನೊಳಗಿಂತು ನುಡಿದ |
ಇಂದೇ ಪೋಗಿ ಮುಕುಂದನ ತಲೆಯನು | ತಂದು ನಿನ್ನೀಯನುಜಾತೆ || ೨೧ ||

ಜೀವಂಜಸೆಯ ಪ್ರತಿಜ್ಞೆಯ ಸಲಿಸೆನ | ಲೇವೈಸಿ ಬಲ್ಪಡೆವೆರಸಿ |
ತೀವಿದಕೋಪದಿನಾ ಶೌರೀಪುರ | ಕೋವದೆ ನಡೆತಂದನಾಗ || ೨೨ ||

ಅದನರಿದಾಬಲಕೇಶವರೀರ್ವರು | ಕದನಕೇಳೀಸಮುತ್ಸುಕರು |
ಒದವಿದ ಕೋಪದಿ ಪುರವನು ಪೊರಮ | ಟ್ಟದಿರದೆ ಪೌಜನಿಕ್ಕಿದರು || ೨೩ ||

ಒತ್ತಂಬದಿಂದಾ ಕಾಲವಯನಪೌಜ | ತತ್ತರದಿರಿಯಲು ಕಂಡು |
ಮತ್ತವನವರ್ಗಿದಿರಾಗಲಣ್ಮದೆ ಬೆ | ನ್ನಿತ್ತು ತಮ್ಮೂರಿಗೈದಿದನು || ೨೪ ||

ಇಂತೋಡಿಬಂದ ಮಗನ ತೆರನರಿದು ಕೋ | ಪಾಂತಕನೃಪತಿ ತನ್ನಿಂದ |
ಅಂರದರಸಪರಾಜಿತಭೂಪನ | ನಂತವಿಲ್ಲದ ಬಲವೆರಸಿ || ೨೫ |

ಬಳಿಕ ಕಳುಹಲವನಾ ಶೌರೀಪುರ | ಕಲಸದೆ ಬಂದೊಡ್ಡಿನಿಲ್ಲಲು |
ಬಲನಾರಾಯಣರದನರಿದಿದಿರಾಗಿ | ತಳುವದೆ ಬಂದೊಡ್ಡಿ ನಿಲಲು || ೨೬ ||

ಅಪರಿಮಿತ ಹಡೆದಾ ಸೇನೆಯನಾ | ಕುಪಿತವರು ಬರಿಕೆಯ್ಯೆ |
ಅಪಗತಬಲನಾಗಿ ಹೆಮ್ಮೆಟ್ಟಿದನಾ | ಅಪರಾಜಿತನೃಪನಿತ್ತ || ೨೭ ||

ವೊಳಲಪೊಕ್ಕಾ ಬಲಕೇಶವರಿರಲಾ | ಇಳೆಯಾಧಿಪತಿಯಬ್ಧಿವಿಜಯ |
ಬಳಿಕ ಮಂತ್ರಿಗಳ ಕರೆಸಿ ಕಾರ್ಯಮನವ | ರೊಳು ಕೇಳಲಿಂತೆಂದರಾಗ || ೨೮ ||

ಎಲನೃಪ ನಿಮ್ಮ ತನುಜರೀಕಾಲದ | ಬಲವಾಸುದೇವರ್ಕಳಿವರು |
ಬಲಯುತಮಗಧನ್ಯಪನ ವಾಸುದೇವನ | ಕೊಲುವಾರಾಹವಮುಖದೊಳಗೆ || ೨೯ ||

ನಿರುತಮಿದಾದೊಡಮೇನೀ ಕುವರರು | ತರುಣರು ನಮಗತಿಬಲರು |
ದೊರಕುವುದಿಲ್ಲದರಿಂದೀ ನೆಲಯಿಂ | ತೆರಳಿಬಳಿಕ್ಕೊಂದು ಕಡೆಗೆ || ೩೦ ||

ಕಾಲವಂಚನೆಯನು ಮಾಡಬೇಕೆನೆಭೂ | ಪಾಲನೊಡಂಬಟ್ಟನದಕೆ |
ಲೀಲೆಯಿಂದಾ ಪುರವೆಲ್ಲವ ಪೊರಮಡ | ಹೇಳಿ ಬಳಿಕ ಸಂವರಿಸಿ || ೩೧ ||

ಶುಭದಿನದೊಳಗಾ ಶೌರೀಪುರವನು | ವಿಭುಗಳವರು ಹಾಳುಮಾಡಿ |
ತ್ರಿಭುವನೈಕವೀರರುಗೂಡಿ ದಕ್ಷಿಣ | ಕಭಿಮುಖರಾಗೆ ಮತ್ತಿತ್ತ || ೩೨ ||

ದರಗಲಿಗಳಿಗಳ್ಕಿಯಪರಾಜಿತ ನಿಜ | ಪುರಕೈದಲಾ ಚಕ್ರಿ ಕೇಳಿ |
ಉರುಕೋಪದಿಂ ಮತ್ತಾಕಾಲವಯನನು | ಪಿರಿದು ಸೇನೆಯ ಕೂಡಿ ಕಳುಹೆ || ೩೩ ||

ನಡೆದುಬಂದಾ ಯದುಕುಲತಿಲಕರು ಪೋದ | ಕಡೆಗಾಗಿಬಂದು ಬೆಂಬತ್ತೆ |
ಕಡುಗಲಿಗಳು ಬಲಕೇಶವರದ ಕಂ | ಡಡಸಿದ ಘನಕೋಪದಿಂದ || ೩೪ ||

ಹಿಂದೆ ಹತ್ತಿದ ಬಲದೊಳು ಕಾದಿ ಮರಳುತ | ಬಂದು ತಮ್ಮಾ ಪಾಳೆಯವ |
ತಂದು ನಾಲ್ವತ್ತೆಂಟುಗಾವುದ ಪರ್ಯಂತ | ರಂದು ನಡೆಸಿ ಮತ್ತೆ ಮುಗುಳ್ದು || ೩೫ ||

ಕಡೆಗಾಲದ ಕಲ್ಕಿಯಾರುದ್ರರೊಡಗೂಡಿ | ಕಡು ಮುನಿಸಿಂದ ಲೋಕವನು |
ಕೆಡಿಸುವಂದದಿನೊಂದುದಿನ ಕಾಲವಯನ ಪೇ | ರ್ವಡೆಯನೆಲ್ಲವ ಸಂಹರಿಸೆ || ೩೬ ||

ಅನಿತರೊಳಾ ಪಗಲಳಿದಾರವಿಬಿಂಬ | ವನಿಮಿಷಪರಿಯ ದಿಕ್ಕಿನೊಳು |
ಜನಿಯಿಸುವನ್ನಬರಾ ಹರಿವಂಶಸಂ | ಜನಿತವಿನುತನೃಪವರರ || ೩೭ ||

ಆಪುಣ್ಯದೇವತೆ ನೆನೆದಲ್ಲಿಗೆಯ್ಯಂ | ದಾ ಪಾರ್ಥಿವರಿಗಪಾಯ |
ಈ ಪರಿಯಿಂದಲ್ಲದೆ ಹೋಗದೆಂದಾ | ಭೂಪರವರು ಬಿಟ್ಟುಪೋದ || ೩೮ ||

ಬೀಡಿನ ಬಳಿಯೊಳು ಪಲವು ಕುಂಡಂಗಳ | ಮಾಡಿ ಕುವುರುಹೊಗೆಯುರಿಯ |
ಕೂಡಿಯೇಳಿಸಿಯೆಕ್ಕಾಯಿಂದಾಯೆಡೆಯೆಡೆ | ಯಾಡುವ ದಾದಿಯರಾಗಿ || ೩೯ ||

ಇರಲಲ್ಲಿಗಾ ಕಾಲವಯನೆತ್ತಿ ಬರುತಾ | ಪರಿಯ ಕಂಡಾಜರತಯರ |
ಕರೆದಿಂತೇಕೆ ಶೋಕಂಗೆಯ್ದಿರೆನಲವ | ರೊರೆದರವರೊಳಿಂತೆಂದು || ೪೦ ||

ಭರತತ್ರಿಖಂಡಮಂಡಲಪತಿಯೊಳೆಮ | ಗಿರದೆ ನಿಷ್ಠುರವೈರಮಾಯ್ತು |
ಇರವಿನ್ನು ನಮಗಿಲ್ಲವೆಂದು ಬೆದರಿಯಾ | ಹರಿವಂಶದ ಭೂವರರು || ೪೧ ||

ಕೊಂಡಗಳನು ತೋಡಿಸಿ ಮತ್ತಾ ಉರಿ | ಗೊಂಡದೊಳಗೆ ಭರದಿಂದ |
ತಂಡತಂಡದಿ ಬಿದ್ದು ಸತ್ತರವರನೆತ್ತಿ | ಕೊಂಡಾಡಿಸಿದ ದಾದಿಯರು || ೪೨ ||

ಆ ಕುವರರು ಮೇಲಣ ಮಮತೆಯಿನಾ | ವೀಕುಂಡದ ತಡಿಯೊಳಗೆ |
ಶೋಕಂಗೆಯ್ವುತಮಿರ್ದಪೆನೆವೆ ಮ | ತ್ತಾಕಾಲವಯ ನೃಪಕೇಳಿ || ೪೩ ||

ಅವರಬಲ್ಪಡೆಯೆತ್ತ ಪೋಯಿತ್ತೆನಲೀ | ಯವನೀಧರದಡವಿಯೊಳು |
ತವತವಗೊಂದೊಂದು ಕಡೆಯಾಗಿ ಪರಿಯಿತೆಂ | ಬವರ ನುಡಿಯ ಕೇಳುತವೆ || ೪೪ ||

ಅತಿ ವಿಸ್ಮಯಾಕ್ರಾಂತಹೃದಯನಾ ಚಕ್ರಿಯೆ | ಸುತ ತಲೆದೂಗಿಯಲ್ಲಿಂದ |
ಕ್ಷಿತಿಹೊರದಾಬಲಸಹಿತ ರಾಜಗೃಹ | ಕತಿ ಮುದದಿಂದೈದಿನದು || ೪೫ ||

ಪುರವರವನು ಪೊಕ್ಕಾಚಕ್ರಿಯ ಚಾರು | ಚರಣಕೆರೆಯಂದಾದ |
ಪರಿಯನೆಲ್ಲವನುಸುರುಲು ಕೇಳಿ ಹರುಷೋ | ತ್ಕರನಾಗಿಯವನಿರಲಿತ್ತ || ೪೬ ||

ಬೀಡೆನೆತ್ತಿಸಿಯೂರ್ಜಯಂತಗಿರಿಯ ಚೆಲ್ವ | ನೋಡುತ ಪಶ್ಚಿಮಕಾಗಿ |
ಗಾಡಿಕಾರರು ನಡೆತಂದು ಸಮುದ್ರದ | ಮೂಡಣ ತಡಿಯೊಳು ನಿಂದು || ೪೭ ||

ಅಲ್ಲಿ ಬಿಡಿಸಿ ಬೀಡನಬ್ಧಿವಿಜಯಭೂ | ವಲ್ಲಭನನುಮತದಿಂದ |
ಪುಲ್ಲನಾಭನಷ್ಟದಿನದರ್ಭಶಯ್ಯೆಯೊ | ಳುಲ್ಲಸದಿಂದರಲಾಗ || ೪೮ ||

ಹರಿಯ ಸುಕೃತದೇಳ್ಗೆಯಿನಾ ನೇಮೀ | ಶ್ವರನಲ್ಲಿಯುದಯಂಗೆಯ್ವ |
ನಿರತಿಶಯೋಪೇತ ಪುಣ್ಯಪ್ರಭಾವಮ | ಸುರಪತಿಬೋಧದಿನರಿದು || ೪೯ ||

ತ್ವರಿತದಿ ಕಳುಹಲು ನೈಗಮದೇವನು | ಧರಣೀತಕಿಳಕಿತಂದು |
ತುರಗ ರೂಪಮನಾಂತು ನಿಂದಿರೆ ಕಂಡಾ | ಹರಿ ಹರುಷದೊಳಿರಲಾಗ || ೫೦ ||

ಶರಧಿಗೆ ಲಂಘಿಸಿಯೀರಾರುಯೋಜನ | ಪರಿಯಂತರೆಯ್ದಿಯಾ ತೆರದಿ |
ಭರದಿಂ ನಾಲ್ದೆಸೆವರಿಯಲು ಮತ್ತಾ | ಧರಣಿಯಚ್ಚರಿವಡುವಂತೆ || ೫೧ ||

ಶರನಿಧಿ ತೆರಪಾಗಲಾಗಸದಿಂ ಪೂ | ಸುರಿಸುರಿಯಿಸಿ ತನ್ನ ತೂಪ |
ಹರಿಸದಿನಾನೈಗಮದೇವ ತೋರಿಯ | ದರದಿಂದಾ ವಿಷ್ಣುವನು || ೫೨ ||

ಬರದಿ ಪೂಜಿಸಯುವನಾಸಗ್ಗಕೆ ಪೋಗೆ | ಸುರಪನ ಬೆಸದಿ ಕುಬೇರ |
ಇರದಲ್ಲಿಗೈದಿಯುತ್ತಮಮಪ್ಪ ನಗರಿಯ | ವಿರಿಚಿಸಿದನು ಶೋಭೆಯಿಂದ || ೫೩ ||

ಆ ನಗರಿಯ ಸುತುವಳೆಯದೊಳಗೆಯ | ದ್ಯಾನವ ವಿರಚಿಸಿ ಬಳಿಕ |
ಮಾನಿತ ಮಣಿರಂಜಿತ ಪ್ರಾಕಾರವ | ಸಾನುರಾಗದಿನನುಗೈದು || ೫೪ ||

ಶತಮುಖನೆಸೆವ ನಗರಿಯಾಜಲನಿಧಿ | ಯತಿ ನಿರ್ಮಲಾಂಬುವನೊಳಗೆ |
ಪ್ರತಿಫಲಿಸಿದುದೆಂಬಂದದಿಯತ್ಯು | ನ್ನತವೆತ್ತ ಪುರವನು ರಚಿಸಿ || ೫೫ ||

ಜಲಧಿವಿಜಯ ನೃಪತಿಗೆ ಮಧ್ಯದೊಳಗೆಡ | ಬಲದೊಳುಉ ಬಲಕೇಶವರಿಗೆ |
ಬಲಯುತ ವಸುದೇವನಾದಿಯ ನೃಪರಿಗೆ | ಕೆಲದೊಳು ಗೃಹಗಳ ರಚಿಸಿ || ೫೬ ||

ಅಲ್ಲಲ್ಲಿಯವರನಿರಿಸಿಯಬ್ಧಿವಿಜಯಭೂ | ವಲ್ಲಭನನುಮತದಿಂದ |
ಸಲ್ಲೀಲೆಯಿಂದ ಪುಟ್ಟವ ಕಟ್ಟಿದನಾ | ಪುಲ್ಲನಾಭಂಗಾಧನದ || ೫೭ ||

ಹೊನ್ನಮಳೆಯನವರಂಗಣದೊಳಗ | ತ್ಯುನ್ನತಮಪ್ಪಂತೆ ಕರೆದು |
ತನ್ನ ನೆಲೆಗೆ ವೈಶ್ರವಣನು ಪೋಗೆ ಸಂ | ಪನ್ನರು ಸುಖದಿನೊಪ್ಪಿದರು || ೫೮ ||

ಈ ಪರಿಯನು ವಿಜಯಾರ್ಧಗಿರಿಯ ರಥ | ನೂಪುರಚಕ್ರವಾಳದೊಳು |
ಭೂಪ ಸುಕೇತುಖಚರನರಿದತಿ ಹ | ರ್ಷೊಪೇತಮಾನಸವಾಗಿ || ೫೯ ||

ಅತ್ಯಂತ ವಿಭವದೊಳೆಯ್ತಂದು ಭುವನ | ಸ್ತುತ್ಯೆ ವಿಲಾಸಾನ್ವಿತೆಯ |
ಸತ್ಯಭಾಮೆಯ ಮದುವೆಯ ಮಾಡಿದನು ಕೃತ | ಕೃತ್ಯ ಕಮಲಲೋಚನೆಗೆ || ೬೦ ||

ಆ ವನಿತಾಮಣಿ ಸತ್ಯಭಾಮೆಯೊಳಂ | ದಾ ವಾಸುದೇವನು ಕೂಡಿ |
ಭಾವಜಕೇಳಿಯೊಳೋಲಾಡಿ ಸುಖಸಂಕ | ಥಾವಿನೋದದೊಳಿರುತಿರಲು || ೬೧ ||

ಒಂದು ದಿವಸ ನೀರದಪಥದಿಂದೆ | ಯ್ತುಮದು ನಾರದನಾಬಳಿಗೆ |
ಬಂದುದನರಿದು ಮುಕುಂದನೇಳ್ದತಿ ಮುದ | ದಿಂದ ನಮಿಸಿ ಕೈ ಮುಗಿದು || ೬೨ ||

ಏನುಕಾರಣ ಬಿಜಯಂಗೈದಿರೆನಲಾ | ಭೂನಾಥಗಿಂತುಸುರಿದನು |
ಮಾನತಮಪ್ಪ ಬಿದರ್ಭವೆಂಬೋಂದಭಿ | ಧಾನದನಾಡಮಧ್ಯದೊಳು || ೬೩ ||

ಕೌಂಡಿನಪುರಮಿಹುದದಕೆ ವಿಶ್ವಾವಸು | ಮಂಡಳೇಶ್ವರನಿಹನವನ |
ಪೆಂಡತಿ ಲಕ್ಷ್ಮೀಮತಿಯೆಂಬಳಿಹಳಿಯೆಂದು | ಮಂಡಲವದನೆಯಂತವರ್ಗೆ || ೬೪ ||

ಪಿರಿಯತನುಜ ರುಗ್ಮಿಣನಿಂ ಕಿರಯಳು | ಸರಸೀರುಹಾಯತನೇತ್ರೆ |
ತರುಣೀಮಣಿ ರುಕ್ಮಿಣಿಯೆಂಬ ಪೆಸರಿನ | ಗರುವೆ ಸಂಭವಿಸಿಯೊಪ್ಪಿದಳು || ೬೫ ||

ಮದನಮೋಹನ ಶರಮದನ ಮದನಬಾಣ | ಮದನಮನ್ಮಥರಾಚ |
ಮದನವಶೀಕರಣೋನ್ನತಮಾರ್ಗಣ | ಮದನಸಂತಾಪಾಸ್ತ್ರಮವಳು || ೬೬ ||

ಇಂತೆಸೆವಾ ರುಕ್ಮಿಣಿಯನು ಜವಭೂ | ಕಾಂತನು ತನ್ನ ಕುಮಾರ |
ಅಂತಕನಿಭಕೋಪ ಶಿಶುಪಾಲನೃಪತಿಗೆ | ಸಂತಸದಿಂ ಬೇಡಿಬಂದು || ೬೭ ||

ಇಂದಾ ಪೊಳಲಪೊರೆಗೆ ಬಿಟ್ಟಹರೆಯಂ | ಬೊಂದು ನುಡಿಯೇ ಕೇಳುತವೆ |
ಇಂದೀವರನಾಭ ನಾರದನನು ಭಕ್ರಿ | ಯಿದ ವಂದಿಸಿ ಬೀಳ್ಕೊಟ್ಟು || ೬೮ ||

ಬಲದೇವಗರುಪಿ ಸಾತ್ವಕಿಯರ್ಜುನರನು | ಬಳಿಕಕರೆಸಿ ನಿಜಪುರವ |
ತಳುಮಾಡದೆ ಪೊರಮಟ್ಟೆದಿದನಾ | ಜಲಜಾತೋದರನೆದು || ೬೯ ||

ಕೌಂಡಿನಪುರದ ನದಿಯ ತೀರಕೈದಿಯು | ದ್ದಂಡರು ನಾಲ್ವರು ನಿಂದು |
ಕಂಡರಾಚಿಯ ಕಡೆ ಬಿಟ್ಟರ್ದ ಶಿಶುಪಾಲ | ಗಂಡುಗಲಿಯ ಪಾಳೆಯವ || ೭೦ ||

ಬಳಿಕ ಧನಂಜಯನಾ ಸಾತ್ವಕಿಯರು | ಜಲರುನಾಭಗೆಯರುಪಿ |
ತಳುವದೆಯಾ ವಿಶ್ವಾವಸುಭೂಪನ | ಹೊಳನಿರದೆ ಪೊಕ್ಕರಾಗ || ೭೧ ||

ಪುರವನು ಪೊಕ್ಕರುಹಂಗಭಿವಂದಿಸಿ | ಮರಳಿ ಮನೆಗೆ ಹೋಗುತಿರ್ಪ |
ತರುಣೀಮಣಿರುಕ್ಮಿಣಿದೇವಿಯನಾ | ನರನು ಸಾತ್ವಕಿಯರು ಕಂಡು || ೭೨ ||

ಕಾಪಿನವರ ಬೆದರಿಸಿ ಕನ್ನೆಯನು ಮ | ತ್ತಾ ಪೆಗಲೊಳಗಿಕ್ಕಿಕೊಂಡು |
ಆ ಪುರಜನಮಂಜುವೊಲು ಸಿಂಹನಾದಮ | ನಾ ಪಾರ್ಥನು ಮಾಡುತಾಗ || ೭೩ ||

ಇದಿರಾದವರನಂತಕಮುಖಕಿಕ್ಕುತ | ವಿದಿತ ವಿಕ್ರಮಯುತರವರು |
ಪದುಳದಿ ನಡೆತಂದಾಪದ್ಮನಾಭಗೆ | ಸುದತಿಯ ತಂದೊಪ್ಪಿಸಿದರು || ೭೪ ||

ಅದನು ಕೇಳ್ದಾ ವಿಶ್ವಾವಸುಭೂಪಾಲ | ನೊದವಿಸಿ ತನ್ನ ಸೈನ್ಯವನು |
ಅದರದೆ ಪೊರಮಡಲಾ ಸಮಯದೊಳು | ನ್ಮದಯುತನಾಶಿಶುಪಾಲ || ೭೫ ||

ತನ್ನ ಸೇನೆಯ ಕೂಡಿಕೊಂಡು ತಜ್ಜನಕನ | ತ್ಯುನ್ನರ ವಿಕ್ರಮಯುತನು |
ತನ್ನೊಂದಾಗಿ ಬರಲು ನಡೆತರುತಿ | ರ್ಪನ್ನೆಗಮಾಕೇಶವನ || ೭೬ ||

ಬಲ್ಲಮೆಲ್ಲ ಪಿಂತನೆ ಬಂದು ಕೂಡಲು ಕಂಡು | ಬಲಕೇಶವರು ಪೌಜನಿಕ್ಕಿ |
ನಿಲಲು ಕಂಡಾಯಮನಾಶಿಶುಪಾಲಕ | ಕಲಿ ವಿಶ್ವಾವಸುನೃಪತು || ೭೭ ||

ಕಡು ಮಸಕದಿ ತಮ್ಮಸೇನೆಗೆ ಕಥವೀಸ | ಲೊಡನಾ ಹರಿಯ ಬಲವನು |
ತಡಮಿಲ್ಲದೆ ತಾಗಿಯೋರೋರ್ವರೊಳು ಕಡು | ವಿಡಿದು ಪಳಂಚಿದರಾಗ || ೭೮ ||

ಆ ನಾರಾಯಣವಲ ಶಿಶುಪಾಲನ | ಸೇನೆಯ ನೋಯಿಸೆ ಕಂಡು |
ತಾನತಿಕೋಪದಿ ತನ್ನ ಪಟ್ಟದ ಮದ | ದಾನೆಯನೇರಿ ಮುಂಬರಿದು || ೭೯ ||

ಮುರುಮಥನನ ಮುಟ್ಟೆ ಬಂದೆಲವೋ ಸಂ | ಗರದ ಗೊಡವೆ ನಿನಗೇಕೆ |
ಹರಿದಾಡಿ ಹಳ್ಳಯೊಳಗೆ ದನಗಳ ಕಾಯ್ವ | ಪರುಯಲ್ಲವೋ ಗೋಪಾಲ || ೮೦ ||

ಎಂದು ಮೂದಲಿಸಿದ ಶಿಶುಪಾಲನಕಂಡು | ಇಂದೀವರನಾಭ ನಗುತ |
ನಿಂದಿರೆ ಕೆಲದೊಳಿರ್ದರ್ಜುನ ನೀವು ನಿಂ | ದಂದಮಿದೇನುಕಾರಣವು || ೮೧ ||

ಎನಲಾ ಹರಿಯಿತೆಂದನೀ ಶಿಶುಪಾಲ | ಜನನಮಪ್ಪಂದು ಹಣೆಯೊಳು |
ಮಿನುಗುವ ದಿಟ್ಟಿಸಹಿತ ಹುಟ್ಟುಲೊಡನಾ | ಜನಕನೋರ್ವ ಶಕುನಿಗನ || ೮೨ ||

ಕೇಳಿದೊಡವನಿಂತೆಂದನು ಮತ್ತೀ | ಬಾಲನಾವನ ಮೊಗ ನೋಡೆ |
ಭಾಳಲೋಚನವಡಗುವುದವನಿಂದಿವ | ಕಾಲನಾಯಕೆಯ್ದವನು || ೮೩ ||

ಎಂದ ಮಾತನು ಕೇಳಿಯಾ ಶಿಶುವಿನ ತಾಯಿ | ತಂದೆಗಳಾ ಬಾಲಕನ |
ಅಂದೆತ್ತಿಕೊಂಡೆಲ್ಲಾಪುರಪುರಕೈದಿ | ಬಂದಲ್ಲಲ್ಲಿಯ ನೃಪರ್ಗೆ || ೮೪ ||

ತೋರುತ ನನ್ನಲ್ಲಿಗೆಯ್ಯರಲಾ ದಿಟ್ಟಿ | ಹಾರಲು ತಂದೆತಾಯಿಗಳು |
ನೀರ ನಮಗೆ ಪುತ್ರಭಿಕ್ಷವೀಯೆಂದು ಬಾ | ಯಾರಿ ಪಲುಂಬುತಮಿರಲು || ೮೫ ||

ಅರ ದೈನ್ಯವನೋಡಿ ನೂರಪರಾಧಮ | ನಿವನೊಳು ಸೈರಿಪೆನೆಂದು |
ಸವಿನಯದಿಂದ ನುಡಿದೆನದುಕಾರಣ | ಮಿವನ ನುಡಿಗೆ ಸೈರಿಸಿದೆನು || ೮೬ ||

ಎಂದಾನರನೊಳು ನುಡಿವುತಿರ್ಪಾ ಗೋ | ವಿಂದನನಾಶಿಶುಪಾಲ |
ಒಂದಿದ ಬಹುಕೋಪದಿ ನೂರು ಬಯ್ಗುಳ | ನಂದು ಬಯ್ವುತ್ತೆಚ್ಚನಾಗ || ೮೭ ||

ಆ ಶಿಶುಪಾಲಕುಮಾರಕನಾರ್ದೆ | ಚ್ಚಾಶರಸಂಘಾರವನು |
ಕೇಶವನಂಬೋಂದರಿಂದ ಕಡಿದುಮ | ತ್ತಾ ಶಿರವನು ಪರಿದೆಚ್ಚ || ೮೮ ||

ಅರ್ಜುನನತ್ತಯವನ ಜೀವವನು ವಿ | ಸರ್ಜಿಸಿದನು ಕಡುಮುನಿದು |
ಊರ್ಜಿತನಾ ಬಲ ವಿಶ್ವಾವಸುವನು | ನಿರ್ಜೀವನ ಮಾಡಿದನು || ೮೯ ||

ಇಂತಾದ ಸಮರಸಮಾಪ್ತಿಯೊಳಾ ವಿ | ಕ್ರಾಂತರಭಯಘೋಷಣೆಯ |
ಸಂತಸದಿಂ ಹೊಯ್ಸಿಯಾರುಗ್ಮಣನು | ಸಂತೈಸಿ ಪುರದೊಳಗಿರಿಸಿ || ೯೦ ||

ದ್ವಾರಾವತಿಗೆಮಗುಳಿಬಂದು ಮುದದಿಂ | ದಾ ರುಕ್ಷಿಣಿದೇವಿಯನು |
ಊರ ಮುಂದೊಂದು ಮಂಟಪದೊಳು ದೇವತಾ | ಕಾರದ ಸಿಂಗರದೊಡಿಸಿ || ೯೧ ||

ಇರಸಲ್ಲಲ್ಲಿಗೆ ಸತ್ಯಭಾಮೆಯಚ್ಚುತನು ತಂ | ದರಮಗಳನು ನೋಳ್ಪೆನೆಂದು |
ಬರುತಾಕೃತಕದೇವತೆಯನರ್ಚಿಸುವಾ | ಪರಿಚಾರಿಕೆಯರ ಕಂಡು || ೯೨ ||

ಅವದೇವತೆಯಿವಳೆನೆ ಬೇಡಿದುದನೀವ | ಳೀವನದೇವತೆಯನಲು |
ಆ ವಧುವಿನ ನೋಡುವೆನೆಂದಾ ದೇವ | ತಾವಾಸಕೆ ನಡೆತಂದು || ೯೩ ||

ನೆಲೆಯದೇವತೆಯೆಂದೊಸೆದರ್ಚಿಸಿ ಕರ | ತಳವ ಮುಗಿದು ಹಣೆಗಿಟ್ಟು |
ಎಲೆ ದೇವಿಯೀಗ ತಂದವಳಿಗೆಯಚ್ಯುತ | ನೊಲವಿಲ್ಲದಂತು ಮಾಡಿದೊಡೆ || ೯೪ ||

ನಿನಗೆ ಪಲವುತೆರನಪ್ಪ ಪೂಜೆಯ ಮಾಳ್ಪೆ | ನೆನುತಿರಲಾ ಸಮಯದೊಳು |
ವನಮಾಲಿ ಬಂದು ನಗುತ ಸತ್ಯಭಾಮೆ ನೀ | ನನುಮಾನಿಸದೆ ರುಕ್ಷಿಣಿಗೆ || ೯೫ ||

ವಿನಮಿತೆಯಾಗುವುದುಚಿತೆವೆಯೆನೆ ಕೇಳಿ | ಕನಲಿ ಕೆಳದಿಯರುಗೂಡಿ |
ವನಿತೆ ರುಕ್ಷಿಣಿಯ ಮೇಲ್ವಾಯ್ದು ಶೃಂಗಾರವ | ನಿನಿಸಿಲ್ಲದೆ ಸುಲಿಯುತಿರೆ || ೯೬ ||

ಪಿಂದಣ ಜನ್ಮದೊಳಗೆ ಮಾಡಿದ ಪುಣ್ಯ | ದಿಂದ ರುಕ್ಮಿಣಿಯುಡತೊಡವು |
ಒಂದಿನಿಸಿಲ್ಲದೆ ಸೆಳೆವುತಲಿರೆ ಮುನ್ನಿ | ನಂದದಿ ಮೆಯ್ಯೊಳಗಿರಲು || ೯೭ ||

ಅದನು ಕಂಡು ಶಂಕಿಸಿ ಸತ್ಯಭಾಮೆ ಮ | ತ್ತೊದವಿದ ಕೋಪದಿ ತನ್ನ |
ಸದನಕೆ ಪೋಗಲಚ್ಯುತನತಿ ವಿಸ್ಮಯ | ಹೃದಯನಾಗಿ ರುಕ್ಮಿಣಿಯ || ೯೮ ||

ಮೃದುಪದತಳಕೆ ವಂದಿಸುತ ಮನಕ್ಷತ | ದೊದವನು ಪರಿಹರಮಾಡಿ |
ವಿದಿತಮಪ್ಪಾದ್ವಾರಾವತಿಯನು ಪೊಕ್ಕು | ಸದಮಲಮಪ್ಪ ಲಗ್ನದೊಳು || ೯೯ ||

ಕಟ್ಟೊಲವಿಂ ಮದುವೆಯನಿಂದಾಕೆಗೆ | ಪಟ್ಟವನಾಕೇಶವನು |
ಕಟ್ಟಿ ಸುಖದೊಳಿರಲೊಂದು ದಿನಸವೆಲ | ರ್ವಟ್ಟೆಯಿಂದಿಳಿದು ನಾರದನು || ೧೦೦ ||

ಹರಿಯ ಕಂಡೆಲೆ ವಿಭು ವಿದ್ಯಾಧರಗಿರಿ | ವರದುತ್ತರಶ್ರೇಣಿಯೊಳು |
ಪಿರಿದು ರಂಜಿಪ ಜಂಬೂಪುರಮಿಹುದಲ್ಲಿ | ಗರಸು ಜಾಂಬವನೆಂಬವನು || ೧೦೧ ||

ಅವಗೆ ಜಂಬೂಷಣೆಯೆಂಬ ಮಾನಿನಿಯಿರ್ಪ | ಳವರ್ಗೆ ಸುತನು ಜಂಬುಕುವರ |
ಅವನಿಂ ಕಿರಿಯಳು ಜಂಬಾವತಿಯೆಂಬ | ಯುವತೀಮಣಿಯೊಪ್ಪಿದಳು || ೧೦೨ ||

ಆ ಜಲಜಾಕ್ಷಿಯ ವಿದ್ಯಾಧರದೇಶ | ದಾಜನತಾಧಿಪರೆಲ್ಲ |
ಓಜೆಯಿಂದಲಿ ಬೇಡಲುಕೊಡದಿರ್ದಪ | ನಾ ಜಾಂಬವಖೇಚರನು || ೧೦೩ ||

ಅವಳಿಗೆ ತಕ್ಕವ ನೀನುತಕ್ಕ | ಳವಳೆಂದಾ ನಾರದನು |
ಪವನಪಥಕೆ ಪೊಗಲಂತನಾದನಾ ಕೇ | ಶವನೇಕಕುಂಡಲಗರುಪಿ || ೧೦೪ ||

ಬಲವನೆಲ್ಲವ ಕೂಡಿ ಬಡಗದೆಸೆಗೆ ನಡೆ | ದಲಘುವಿಕ್ರಮಿಗಳಾತುರದಿ |
ಆಲಸದೆ ನಡೆತಂದಾ ವಿಜಯಾರ್ಧಾ | ಚಲದ ಕೆಳಗೆ ಬೀಡಬಡಿಸಿ || ೧೦೫ ||

ಭೂಮಿಚರರು ತಾವಪ್ಪುದರಿಂದ ಮ | ತ್ತಾಮಹೀಧರದುಪರಿಮಕೆ |
ತಾವೆಯ್ದೆ ಬಾರದೆಂದಾ ಪೀತಾಂಬರ | ನಾ ಮರುದಿನ ಶುಚಿಯಾಗಿ || ೧೦೬ ||

ಉನ್ನತ ವಿಧಿಯೊಳು ದರ್ಭಶಯನಮಿತ | ಲನ್ನೆಗಮಾಕೇಶವನ |
ಮುನ್ನಿನಜನ್ಮದಗ್ರಜ ಯಕ್ಷಿಳನೆಂಬ | ಸನ್ನುತನತಿಪುಣ್ಯಫಲದಿ || ೧೦೭ ||

ಒಳ್ಪವಡೆದ ಸುಖಮೀವ ಸಹಸ್ರಾರ | ಕಲ್ಪದೊಳೊಗೆದಲ್ಲಿಂದ |
ಅಲ್ಪೇತರಮೋಹದಿಂದಾ ದರ್ಭೆಯ | ತಲ್ಪದನುಜನೆಡಗೆಯ್ದಿ || ೧೦೮ ||

ಸನುಮಾನದಿ ಸಿಂಹವಾಹಿನಿ ಗರುಡವಾ | ಹಿನಿಯೆಂಬೆರಡು ರಥವನು |
ಜನನುತ ರಾಮಕೇಶವರ್ಗಿತ್ತು ಬಳಿಕಾ | ಅನಿಮಿಷನತಿ ಮುದದಿಂದ || ೧೦೯ ||

ಆರಾತಿಗೆ ಶಕ್ಕಮಲ್ಲದ ತೆರದಿಂ | ಕ್ಷೀರಾವಾರಾಶಿಯ ರಚಿಸಿ |
ದಾರುಣಮಪ್ಪ ಮಹೋರಗಶಯ್ಯೆಯೊ | ಳಾರಾಮಹರಿಗಳನಿರಿಸಿ || ೧೧೦ ||

ಈ ವಿಧದಿಂ ನಿಮ್ಮಕಾರ್ಯವಾಗುವುದೆಂ | ದಾ ವಾಸವನವರ್ಗುಸುಂ |
ದೇವಲೋಕಕೆ ಪೋಗಲಿತ್ತಲು ಬಲವಾಸು | ದೇವರಲ್ಲಿಯೆ ನಾಲ್ಕು ಮಾಸ || ೧೧೧ ||

ಇರೆ ಇತ್ತ ಬೆಸಸಿಬೆಸಸಿಯೆನುತತ್ಯಾ | ದರದಿ ವಿದ್ಯಾದೇವತೆಗಳು |
ಬರಲಾಗಲವನು ಕೈಕೊಂಡಾ ಬಲಭದ್ರ | ಮನರಿಪುಗಳು ಮುದದಿಂದ || ೧೧೨ ||

ಪ್ರೀತಿಯಿಂದವು ತಂದ ಪುಷ್ಪಕಗಳನೇರಿ | ಯಾತುರದಿಂದಾ ಗಿರಿಯ |
ಆ ತೆಂಕಣತಪ್ಪಕೊಳಗಿರ್ಪ ಕಿನ್ನರ | ಗೀತವೆಸರ ಪುರಕೈದಿ || ೧೧೩ ||

ಅಲ್ಲಿ ತಮ್ಮಯ್ಯನು ವಸುದೇವನ ಚಿತ್ತ | ವಲ್ಲಭೆ ಶಾಲ್ಮಲಿದತ್ತೆ |
ಚಲ್ಗೆಗಣ್ಗಳಚದುತೆಯ ಮಗ ಧ್ರುವನೆಂಬ | ಬಲ್ಲಿದನಾಸುಕುಮಾರ || ೧೧೪ ||

ಬಂದು ಕೂಡಲು ಭಕ್ರಿಯಿಂದಾಬಲಗೋ | ವಿಂದರಣ್ಣನ ಪದಕೆರಗಿ |
ಇಂದು ನಿಮ್ಮನು ಕಾಣ್ಬೆವೆಂಬಾತುರದಿಂ | ಬಂದೆವೆಂದಾ ನೃಪವರರು || ೧೧೫ ||

ನೀತಿಸಂಯುತರಪ್ಪ ಖೇಚರರನು ಮ | ತ್ತಾರರುಣಿಯ ಬೇಡಿಕಳುಹೆ |
ಆತುರದಿಂದೈದಿ ಜಂಬೂಪುರದ ವಿ | ಖ್ಯಾತ ಜಾಂಬವನ ಕಂಡವರು || ೧೧೬ ||

ದ್ವಾರಾವತಿಯಧಿಪತಿ ನಾರಾಯಣ | ಗಾರೈಯದೆ ನಿಮ್ಮ ತನುಜೆ |
ನಾರೀಮಣಿಯಧಿಪತಿ ಕೊಡಿಯೆಂದು ಬೇಡಿದೊ | ಡಾರಾಜನವರೊಳಿಂತೆಂದ || ೧೧೭ ||

ಒಳ್ಳಿತೊಳ್ಳಿತು ಮದವಾರಣದೊಳಗಾಡು | ಕೊಳ್ಳುಕೊಡೆಯ ಮಾಳ್ಪುದೆಂದು |
ಪೊಳ್ಳುನುಡಿಯದೇಕೆ ಪೋಗೆಂದವರನು | ತಳ್ಳಿಸಲವರೈತಂದು || ೧೧೮ ||

ಉತ್ತಮಸತ್ವರು ಧ್ರುವಬಲನಾಪುರ | ಷೋತ್ತಮರೊಳದನುಸುರೆ |
ಮತ್ತವರಾ ಶ್ರೇಣಿಯ ಜಂಬೂಪುರ | ಕೆತ್ತಿಬಂದು ಪೌಜನಿಡಲು || ೧೧೯ ||

ಅದನರಿದುಜಾಂಬವಖೇಚರೇಶ್ವರ | ನಧಟಿಂ ತನ್ನ ಸೇನೆಯನು |
ಪದಪಿಂ ಕೂಡಿ ತತ್ಪುರವನು ಪೊರಮ | ಟ್ಟದಿರದೆ ಪೌಜನಿಕ್ಕದನು || ೧೨೦ ||

ಅನಿತರೊಳಾಬಲಹರಿಗಳ ಪಿಂತಿಕ್ಕಿ | ವಿನುತವಿಕ್ರಮಿ ಧ್ರುವಕುವರ |
ಕನಲಿಕರತಾಂತನಂದದಿನಾಖಚರನ | ಘನಬಲಕಿದಿರಾಗಿ ನಡೆದು || ೧೨೧ ||

ಅಜಿರಂಗದೊಳಾ ಧ್ರುವಸುಕುಮರಕ | ನಾಜಾಂಬವನ ನೆಲಕಿಕ್ಕಿ |
ಆ ಜಂಭಾವತಿಯನು ತಂದುಕೊಟ್ಟನಂ | ದಾ ಜಲಜಾತೋದರೆಗೆ || ೧೨೨ ||

ಇಂತು ಜಂಭಾವತಿಯನು ಕೊಂಡಾ ಕೈಟ | ಭಾಂತಕನಾನಿಜಪುರಕೆ |
ಸಂತಸದಿಂ ಬಂದುಮದುವೆಯ ನಿಂದನ | ತ್ಯಂತ ವೈಭವದೊಳಗಂದು || ೧೨೩ ||

ಮತ್ತೊಂದುದಿನ ಬಂದು ನಾರದ ನೆಲೆ ಪುರು | ಷೋತ್ತಮ ಗಿರಿನಗರವನು |
ಒತ್ತಯಾಳ್ವನು ಜೇಷ್ಠವರ್ಧಮನೆಂಬವ | ಗುತ್ತಮೆ ಜ್ಯೇಷ್ಠಾವತಿಗೆ || ೧೨೪ ||

ಸಂಜಿನಿಸಿದಳು ಸುಸೀಮೆಯೆಂಬೋರ್ವಳು | ಕಂಜಾಕ್ಷಿ ನಿನಗನುರೂಪೆ |
ರಂಜಿಪಳೆಂದು ನಾರದ ಪೋಗಲಾ ಮಧು | ಭಂಜನನಾ ಪುರಕೈದಿ || ೧೨೫ ||

ಅಹವಮುಖದಿನಾಕುವರಿಯ ತಂದು ವಿ | ವಾಹವಿಧಿಯೊಳಿರ್ದು ಬಳಿಕ |
ಈ ಹದದಿಂ ಪಲಬರು ರಾಜಸುತೆಯರ | ನಾ ಹರಿತಂದು ಕೂಡಿದನು || ೧೨೬ ||

ಆ ವಿಭುವಿಗೆ ಸತ್ಯಭಾಮೆ ರುಕ್ಮಿಣಿ ಜಂ | ಭಾವತಿದೇವಿ ಸುಸೀಮೆ |
ಕೋವಿದೆ ಲಕ್ಷ್ಮಣೆಗಾಂಧಾರಿ ಗೌರಿ ಪ | ದ್ಮಾವತಿ ಸತಿಯರೊಪ್ಪಿದರು || ೧೨೭ ||

ಜಸವೆಣ್ಣೆಂಬ ದೂತಿಯ ವಚನವ ಕೇಳಿ | ಮುಸುಕಿದ ಕಿವಿವೇಟದಿಂದ |
ದೆಸೆವೆಣ್ಗಳೈತಂದವೊಲೇಣ್ಬರಬಲೆಯ | ರೆಸೆದಿರ್ದರಾ ನರಹರಿಗೆ || ೧೨೮ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜೀನೇಶಸಂಗತಿಯೊಳ | ಗಿದು ಪದಿನೇಳಾಶ್ವಾಸ || ೧೨೯ ||

ಹದಿನೇಳನೆಯಸಂಧಿಸಂಪೂರ್ಣಂ