ಶ್ರೀಮದಮರಪರಿಮೌಲಿಕೀಲಿತಪಾದ | ತಾಮರಸದವಯಜನಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಜನನುತಾಗಿಯರಸುಗೆಯ್ಯುತಿರಲೊಂದು | ದಿನದೊಳಗಿಂದ್ರವೈಭವದಿ |
ಮನುಜಾಧೀಶರ ನಡುವೆ ಓಲಗದೊಳ | ಗನುರಾಗದಿಂದಿರುತಿರಲು || ೨ ||

ಮತ್ತಗಜದ ಮರಿಯನು ಸಿಂಗಸಿಸುವನು | ಕತ್ತುರಿಮಿಗದ ಕರುವನು |
ಇತ್ತು ಕಂಡನು ಧೀವರಿಪತಿಯಾ ಭೂ | ಪೋತ್ತಮನಿಭ್ಯಕೇತವನು || ೩ ||

ಇಂತು ಕಂಡಾಧೀವರಪತಿಗರಸ ಜ | ನ್ಮಾಂತರಮೋಹಕಾರಣದಿ |
ಸಂತಸದಿಂ ಸೇನಾಪತಿಪದವಿಯ | ನಂತರಿಸದೆ ಕೊಟ್ಟನಾಗ || ೪ ||

ತನಗೆ ಪರಮವಿಶ್ವಾಸಿಯಾತನೆಯಾಗಿ | ಜನಪದವನು ಪರಿವೃಢನು |
ಅನುರಾಗದಿಂದಾಳುತಿರ್ದೊಂದಾನೊಂದು | ದಿನದೊಳು ಬನಕೆಯ್ದಿದನು || ೫ ||

ಆ ನಂದನದೊಳಗತಿನಿರ್ಮಲರೆಂಬ | ಜೈನಮುನಿಗಳಿರೆ ಕಂಡು |
ಸಾನಂದದಿಂದ ವಂದಿಸಿ ಧರ್ಮವ ಕೇಳಿ | ತಾನಿಂತೆಂದಾಡಿದನು || ೬ ||

ಭೂವಿಶ್ರೂತಬೋಧಸಿಂಧುವೆ ನನಗೀ | ಧೀವರನೊಳಗತಿ ಮಮತೆ |
ಆವರಿಸಿದುದೇನುಕಾರಣಮೆನಲಾ | ಭಾವಜ್ಞನಿಧಿಯಿಂತೆಂದ || ೭ ||

ಪೋದಭವದೊಳು ನೀ ವಿಂಧ್ಯಕನಾದಾಗ | ಲೀಧೀವರನು ನಿನ್ನೊಲವಿನ |
ಕಾದಲೆಯಾಗಿರ್ದಳೆಂದಾ ಜನ್ಮದೊ | ಳಾದ ಪ್ರಪಂಚಮೆಲ್ಲವನು || ೮ ||

ನಿರಿವಿಸಿಯದರಿಂದೀ ಧೀವರನೊಳು | ಹಿರಿದು ಮಮತೆಯೊದವಿದುದು |
ಧರಣಿಪ ಕೇಳೆಂದಾಯುತಿಪುಂಗವ | ನೊರೆಯಲಂತದನು ಲಾಲಿಸುತ || ೯ ||

ಆವಾವ ಭವದೊಳಗಾವಾವ ಜೀವವ | ದಾವ ಪರಿಯೊಳಪ್ಪುದೆಂದು |
ಭೂವರನಾಸಂಸಾರನಾಟಕಕತಿ | ಹೇವವ ತಾಳಿದನಾಗ || ೧೦ ||

ಇಂತು ನಿರ್ವೇಗಪರಾಯಣನಾಗಿ ಭೂ | ಕಾಂತಕೇತುವೆಂದೆಂಬ |
ಕಂತುಸದೃಶನಪ್ಪ ಸುತಗೆ ಪಟ್ಟವ ಕಟ್ಟಿ | ತಾಂ ತಳೆದನು ದೀಕ್ಷೆಯನು || ೧೧ ||

ಕಾಂತನುತ್ತಮದೀಕ್ಷೆಗೊಳಲು ಸೌಂದರಿದೇವಿ | ತಾ ತಳೆದಳು ದೀಕ್ಷೆಯನು |
ಮುಂತೆ ವಸಂತ ಬಂದೊಡೆ ಮಲ್ಲಕಲತೆ | ಪಿಂತೆ ಬಾರದೆ ಸುಮ್ಮನಿಹುದೆ || ೧೨ ||

ಆ ವೃತಪತಿಯ ಕೋಮಲಪದಕಮಲನು | ಧುವ್ರತನಾಗಿ ಧೀವರನು |
ತೀವ್ರಪಾಪಲೊಪಿತವೆಂದೆನಿಸುವ | ಣುವ್ರತವನು ಧರಿಸಿದನು || ೧೩ ||

ಬೋಧಶರಧಿ ಇಭ್ಯಕೇತುಮುನಿಪನು ಸ | ಮಾಧಿವಡೆದು ನಿಮಿಷದೊಳು |
ಸಾಧಾರಣವಲ್ಲದ ಸೌಖ್ಯಪದವೀನ | ಸೌಧರ್ಮದೊಳು ಜನಿಸಿದನು || ೧೪ ||

ಶ್ರೀನಿಲಯಾಖ್ಯದ ನಮಮಣಿಖಚಿತವಿ | ಮಾನದಮಳವಾಸಿನೊಳು |
ತಾನಿರುದುದಯಿಸಿ ಶ್ರೀದೇವನೆಂಬಾ | ಮಾನಿತವೆಸರವಡೆವನು || ೧೫ ||

ನಿಃಪ್ರಪಂಚವ್ರತದಿಂದಾಸೌಂದರಿ | ಯಪ್ರತಿವಡೆದ ಕಲ್ಪದೊಳು |
ಸಪ್ರಭವೆಂಬ ವಿಮಾನದೊಳಗೆ ವಿಮ | ಲಪ್ರಭನಾಗಿ ಪುಟ್ಟಿದಳು || ೧೬ ||

ಧೀವರನಾಕಲ್ಪದೊಳು ತೊಳತೊಳಗುತಿ | ಪ್ಪಾವಿದ್ಯುತ್ಪ್ರಭಮೆಂಬ |
ಆ ವಿಮಾನದೊಳು ಶ್ರುತಪ್ರಭವೆಸರಾಂತು | ದೇವನಾಗಿ ಜನಿಸಿದನು || ೧೭ ||

ಆ ವಿದ್ಯುತ್ಪ್ರಭನಾ ವಿಮಲಪ್ರಭ | ದೇವರೀರ್ವರೊಳನವರತ |
ತಿವಿದೊಲವಿನಿಂದ ಸುರಲೋಕಸೌಖ್ಯಮ | ನೋವದೆ ಭೋಗಿಸುತಿರ್ದು || ೧೮ ||

ಅಂದವಡೆದ ಪುಷ್ಕರಾರ್ಧದ ಪಡುವಣ | ಮಂದರವರವಿದೇಹ |
ಎಂದೆಂಬ ವಸುಧೆಯ ಸೀತೋದಾನದಿ | ಯಿಂದ ಬಡವಣ ಭಾಗೆಯೊಳು || ೧೯ ||

ಭಾಸಿಪ ಗಂಧಿಲವಿಷಯಮಿಹುದು ಮ | ತ್ತಾಸೀಮೆಯೊಳು ವಿಜಯಾದ್ರಿ |
ಭೂಸುದತಿಯ ಮುದ್ದುಮೊಗದೊಳು ರಂಜಿಪ | ನಾಸಿಕದಂತೊಪ್ಪುತಿಹುದು || ೨೦ ||

ಅದರ ಕುಬೇರದಿಒಶಾಶ್ರೇಣಿಯೊಳು ಸಂ | ಪದಕೆ ತಾನೇ ತಾಣವೆನಿಸಿ |
ವಿದಿತಮಾಗಿ ಸೂರ್ಯಪ್ರಭವೆಂಬ ನಾ | ಮದ ಪುರವೊಂದು ರಂಜಿಪುದು || ೨೧ ||

ಆ ಪ್ರಾಚರ್ಯವಡೆದ ಪುರದೊಳು ಸೂ | ರ್ಯಪ್ರಭನೆಂಬ ಖೇಚರನು |
ಅಪ್ರತಿಮಪ್ರತಾಪದಿ ಪಾಲಿಪನು ಮು | ರಾಪ್ರಮದೆಯನನವರತ || ೨೨ ||

ಆ ರಾಜೇಂದ್ರಚುಡಾರತ್ನಕೆ ಗಾಂ | ಧಾರಿವೆಸರ ಸತಿಯಿಹಳು |
ನೀರಭಂಡಾಗಾರದ ಸುಕುಮಾರಿ ಮು | ರಾರಿಗೆ ಮಡಿದಿಯಾದಂತೆ || ೨೩ ||

ಆ ಮಿಥುನದ ಗರ್ಭದೊಳಗಿಭ್ಯಕೇತು ಚ | ರಾಮರನಾ ಶ್ರೀದೇವ |
ಆ ಮೊದಲಮರಾವತಿಯಿಂದಿಳಿದು ಸು | ಪ್ರೇಮದ ಸುಕುಮಾರನಾದ || ೨೪ ||

ಅವನಿಗೆ ಚಿಂತಾಗಿರಯೆಂಬ ನಾಮವ | ಸವಿನಯದಿಂದಾ ಖಚರ |
ಸುವಿಧಾನದೊಳು ಕೊಡೆಲೆಲ್ಲಾ ಕಲೆಗೂಡಿ | ಕುವಲಯಪತಿಯೆನೆ ಬೆಳೆದ || ೨೫ ||

ಬಳಿಕವರೊಡಲೊಳಗಾ ಸುಪ್ರಭದೇವ | ನಿಳಿದು ಸ್ವರ್ಗದಿನೆಯ್ದಿ ಜನಿಸಿ |
ತುಳಿರಾಳಾಗಿ ಮನೋಗರಿ ನಾಮವ | ತಳೆದು ಜವ್ವನೆವೇರಿದನು || ೨೬ ||

ಮತ್ತಾದೀವರಚರನು ವಿದ್ಯುತ್ಪ್ರಭ | ನುತ್ತಮದೇವನಲ್ಲಿಂದ |
ಸತ್ತು ಚಪಲಗತಿಯೆಂಬೊಂದು ಪೆಸರನು | ಪೊತ್ತು ಸಂಭಿಸಿಯೊಪ್ಪಿದನು || ೨೭ ||

ವರದರುಶನಬೋಧಚರಿತದಂತಾ ಮೂ | ವರು ಸೋದದರೊಡಗೂಡಿ |
ಇರಲಾಪರ್ವತದಾಶ್ರೀಡಿಯೊಳೊಂದು | ಪುರವರಿಂಧವೆಂಬುದಹುದು || ೨೮ ||

ಅದರೊಳರಿಂಜಯನೆಂಬ ಖೇಚರಪತಿ | ಮದನಸದೃಶನಿರಲವಗೆ |
ಮದವತ್ಪ್ರಾಯಿತೆ ಜಿನಸೇನೆಯೆಂಬೋರ್ವ | ಸುದತಿವಲ್ಲಭೆಯಾಗಿಹಳು || ೨೯ ||

ಕ್ಷಿತಿಪನರಿಂಜಯಖೇಚರೇಶ್ವರಗಾ | ಜಿತಸೇನಗೆ ಜನಿಸಿದಳು |
ರತಿನಿಭೆ ಮಿಸುನಿದಾವರೆಮೊಗದ ವಿಲಾಸ | ವತಿಯೆಬೋರ್ವಕುಮಾರಿ || ೩೦ ||

ಸಿರಿಯೆನೈಸಿರಿಯೊಳು ರತಿಯ ರೂಪಿನೊಳಾ | ಸರಸತಿಯನು ಜಾಣ್ಮೆಯೊಳು |
ಸರಿ ತನಗಲ್ಲವೆಂದಾಖೇಚರಭೂ | ವರಸುತೆ ನಗುರಿಲವರ || ೩೧ ||

ಚತುರತೆ ಚಲ್ವೈಸಿರಿಜವ್ವನದೊಳ | ಪ್ರತಿಮರೆನಿಪ ಖಚರದೊಳು |
ಗತಿಯುದ್ದದೊಳು ತನ್ನ ಗೆಲಿದವನೇ ನಿಜ | ಪತಿಯೆಂದು ಡಂಗುರವೊಯಿಸೆ || ೩೨ ||

ಆ ಡಂಗುರದನಿಗೇಳಿ ಬಿಜ್ಜಾದರ | ನಾಡ ನರೇಂದ್ರನಂದನರು |
ಗಾಡಿಕಾತಿಯೊಳೋವದೆ ಗತಿಯುದ್ಧವ | ಮಾಡುವೆವೆಂದೆಯ್ದಿದರು || ೩೩ ||

ಆಗ ಚಪಳಗತಿಯಾಗ ಮನೋಗತಿ | ರಾಗದಿಂ ತನ್ನೊಡಬರಲು |
ಬೇಗದಿಂದಾಯೆಡೆಗೆಯ್ತಂದನು ಚಂ | ತಾಗತಿಖಚರಕುಮಾರ || ೩೪ ||

ಆಸಮಯದೊಳಾಗರಿಂಜಯಖಚರ ವಿ | ಲಾಸವತಿಯ ಕೂಡಿಕೊಂಡು |
ಭಾಸುವಡೆಗಾಗಿರಿಯ ಜಿನೆಂದ್ರನಿ | ವಾಸಮನಿರದೆಯ್ದಿದನು || ೩೫ ||

ಜಿನಗೃಹವನು ಮೂರು ಸೂಳ್ವರ ಬಲವಂದು | ಜಿನರನರ್ಚಿಸಿ ಭಕುತಿಯೊಳು |
ವಿನಮಿತೆಯಾಗಿ ವಿಮಲಮಣಿಮಂಟಪ | ಕನುನಯದಿಂದೈದಿದಳು || ೩೬ ||

ಬಳಿಕಾಬಳಿರ್ಚಿಸಿದ ಗತಿಯುದ್ಧ ಸ | ಲ್ಲಿಲಿತಪೀಠದೊಳಾಸತಿಯ |
ಕೆಳದಿ ಲಲತೆಯೆಂಬಳೊಂದು ಪೂವಿನಮಾಲೆ | ದಳೆದನುರಾಗದಿ ನಿಂದು || ೩೭ ||

ಈ ರಜತಾದ್ರಿಯೊಳೀ ಬಿಟ್ಟ ಪೂಮಾಲೆ | ಧಾರಿಣಿಗಿಳಿಯದಮುನ್ನ |
ಮೇರುಗೆ ಪರಿದು ಬಸದಿಯೊಕ್ಕು ಮುಗುಳ್ದಿದ | ಭೋರನಬೆ ಪಿಡಿವವರೆಯ್ದಿ || ೩೮ ||

ಎಂದಾ ನುಡಿಗೇಳಿ ನಮಗಿದಶಕ್ಕಮೆ | ಇಂದಿನ ದುರ್ಧರವಾದ |
ಎಂದು ಬಂದಾನೃಪತತಿ ಹೆರಸಾರಲಿಂ | ತೆಂದು ಚಿಂತಾಗತಿ ನುಡಿದ || ೩೯ ||

ಈ ಗತಿಯುದ್ಧಮನಾನೊಮ್ಮೆ ಮಾಡುವೆ | ಬೇಗದಿ ನೋಡಿ ನೀವೆಂದು |
ರಾಗದಿಂದಾಗತಿಯುದ್ಧಶಿಲಾಪಟ್ಟಿ | ಕಾಗಂಡುಗಲಿನಡೆತಂದು || ೪೦ ||

ಕಡುವೇಗದಿಂದಲ್ಲಿ ನಿಂದ ಬಿಜ್ಜಾದರ | ನಡೆಗಡೆಗೆಯ್ತಂದು ನಿಂದ |
ಬಡನಡುವಿನ ಭಾವೆಗೆ ಸಾತ್ವಿಕಭಾವ | ವಡಸಿದುದತಿವೇಗದೊಳು || ೪೧ ||

ಅನಿತರೊಳವಧಾನಮೆಂದು ಪೂವಿನಮಾಲೆ | ಯನು ಮಧ್ಯದೊಳು ನಿಂದಿರ್ದ |
ವನಜವದನೆ ಬಿಡುವಾಗ ಪಾರಿದರಾ | ಘನಪಥಕಾ ಈರ್ವರಿಂದು || ೪೨ ||

ಅರಲಮಾಲೆಯು ಬೀಳದಮುನ್ನ ವಿಜಯಾರ್ಧ | ಗಿರಿಯಿಂದ ಮೇರುಗೆ ಪರಿದು |
ಅರುಹನಗೃಹಕೆಯ್ದಿ ತಿರುಗಿ ಹಿಡದವನ | ನರಮಗನವಳಪಿಂದುಳುಪಿ || ೪೩ ||

ದಿಟ್ಟಿಗಲೆವೆವೊಯ್ಯದ ಮುನ್ನ ಕುರಿತಡೆ | ಮುಟ್ಟು ಮಗುಳಿ ಹಾರಿಬಂದು |
ಬಿಟ್ಟೆಡೆಯಿಂದಾ ಪೂಮಾಲೆ ಪೃಥಿವಿಯ | ಮುಟ್ಟದ ಮುನ್ನ ಹಿಡದನು || ೪೪ ||

ಗುರುಧಮ್ಮಿಲ್ಲೆ ವಿಶಾಲಲೋಚನೆ ಪೀ | ವರಕುಚೆ ಪೀನಿನಿತಂಬೆ |
ಕರಿನಿಭಗಮನೆಯುನ್ಮತ್ತಯೌವನೆ ಖೇ | ಚರಗೆ ಹಿಂದುಳಿದೆಯ್ದಿದಳು || ೪೫ ||

ಮಾಲೆಯ ಹಿಡಿದ ಮಹಾನುಭಾವನ ಕಂಡು | ಲೋಲಲೋಚನೆ ಚಿತ್ತದೊಳು |
ಸೋಲವತಾಳಿಯಾತನ ಕೊರಲೊಳು ಪೂ | ಮಾಲೆಯನಿಕ್ಕಲೆಯ್ದಿದಳು || ೪೬ ||

ಅರಲಪಾಶವ ಬೀಸಿಯಾ ಉರುಳಿಂ ನೃಪ | ವರನ ಕೊರಲ ಬೀರಲೆಂದು |
ಸ್ಮರಸತಿ ನಡೆದು ಬಪ್ಪವೊಲು ಮಾಲೆಯನಾಂತು | ಬರಲವಳನು ಕಂಡನಾಗ || ೪೭ ||

ಈ ಸತಿಗೀಬಂದ ಬಾಂಬಟ್ಟೆಗರೆಲ್ಲ | ರಾಸೆ ಮಾಡಿದರಲ್ಲದೆಯೂ |
ಸಾಸಿಗರೆನ್ನೀಯನುಜಾತರಿಚ್ಚೈಸಿ | ಯೋಸರಿಸದೆ ತಳಿರಿದರು || ೪೮ ||

ಓರ್ವಳೀಬಾಲಕಿ ಬಹುರೂಪುವಡೆದಂತೆ | ಸರ್ವರೆದೆಗೆ ಬಂದಳದು ತಾ |
ಕರ್ವುವಿಲ್ಲನ ಗೊಡ್ಡಾಟವಲಾಯೆಂದು | ಊರ್ವಿಶನಚ್ಚರಿವಟ್ಟು || ೪೯ ||

ಘನತರಮಪ್ಪ ಭಾವನೆಯ ಭಾವಿಸುತಿರೆ | ನನೆಯದಂಡೆಯ ಕೊಂಡುಬರ್ಪ |
ವನಿತೆ ವಿಲಾಸವತಿಯನರಮಗನೊಂ | ದಿನಿಸು ನಿಲ್ಲೆಂದಿಂತು ನುಡಿದ || ೫೦ ||

ಎನ್ನ ಗೆಲುವು ಎನ್ನಣುಗಿನನುಜರದು | ಕನ್ನೆ ಕೇಳ್ನೀನವರೊಳಗೆ |
ನಿನ್ನ ಮನಕೆ ಬಂದವರಿಗೆ ಮಾಲೆಯನಿಕ್ಕಿ | ಚೆನ್ನಾಗಿ ಪರಿಯಿಸೆಂದನಲು || ೫೧ ||

ಆ ನುಡಿಗೇಳಿ ಹೆಗ್ಗರ ಹೊಡೆದಂತಾ | ಮಾನನಿ ಸವ್ವೆರಗಾಗಿ |
ನಾನೊಂದಣಿಕೆಮಾಡಿದೊಡೆನ್ನ ದುಷ್ಕೃತ | ತಾನೊಂದೆಣಿಸಿದುದೀಗ || ೫೨ ||

ಹಸೆಯೊಳು ಹಾವು ಹರಿಯೆತೆಂಬ ನಾಣ್ನುಡಿ | ಹಸನಾಯಿತೀಗೆನ್ನೊಳೆಂದು
ಮಿಸುನಿದಾವರೆಮೊಗಲದಬಲೆ ಚಿಂತಿಸುತಾ ರಸಿಕನೊಳಿಂತಾಡಿದಳು || ೫೩ ||

ಗತಿಯುದ್ದದೊಳಗೆನ್ನ ಸೋಲಿಸಿದವನೇ | ಪತಿ ಈ ಜನ್ಮಕೆಂದೊಸೆದು |
ಕ್ಷಿತಿಯೆಲ್ಲದುರಿವಂದದೊಳು ಪ್ರತಿಜ್ಞೆಯ | ಮತಿಹೀನೆ ನಾನು ಮಾಡಿದೆನು || ೫೪ ||

ಅದರಿಂದ ನೀನೇತಪಿಯನಗಭಿನವ | ಮದನ ಕೇಳುಳಿದವರೆಲ್ಲ |
ಮುದದಿಂದೊಡಹುಟ್ಟಿದವರಸಮಾನವಿಂ | ತಿದಕಿನ್ನುಸಂದೆಹಮೇಕೆ || ೫೫ ||

ಇಂತು ಪ್ರತಿಜ್ಞೆಯ ಮಾಡಿಯಾಯೆಡೆಯಿಂ | ಶಾಂತಾಮಣಿ ನಡೆತಂದು |
ಕಂತಹರಣಜಿನರೇ ಗರಿಯೆನುತಾಗ | ತಾಂ ತಪಗೊಳಲೆಣಿಸದಳು || ೫೬ ||

ಆ ಸಿದ್ಧಕೂಟದ ಚೈತ್ಯಬಿಂಬದ ಮುಂದೆ | ಯಾಸತಿ ತನ್ನೊಡವಂದ |
ಸಾಸಿರ್ವರಬಲೆಯರೊಡಗೂಡಿ ದೀಕ್ಷೆಯ | ನೋಸರಿಸದೆ ಕೊಂಡಳಾಗ || ೫೭ ||

ಮೊದಲು ತನ್ನಾ ನಸುನಗೆವೆತ್ತ ಶಶಿನಿಭ | ವದನಕೆರೆಗೆನೆಂಬನನು |
ಸುದತೀಮಣಿ ದೀಕ್ಷಾಮುಖದಿಂ ನಿಜ | ಪದಕೆರಗಿಸಿಕೊಂಡಳಾಗ || ೫೮ ||

ಚದುರೆ ಚಮತ್ಕಾರದೊಳು ದೀಕ್ಷೆಯನಾಂತು | ದದುವೆ ನಿರ್ವೇಗಮುಮಾಗಿ |
ಸದಮಲಗುಣಿಚಿಂತಾಗತಿದೀಕ್ಷೆಯ | ಪಡೆದು ಕೈಕೊಳಲೆಣಿಸಿದನು || ೫೯ ||

ಅಪಗತಿಮೋಹಿಮನೋಗತಿಮತ್ತಾ | ಚಲಪತಿಯುಮೋಡವಂದ |
ನೃಪರಿಚ್ಛಾಸಿರಗೂಡಿ ಚಿಂತಾಗತಿ | ತಪವ ಧರಿಸಲೆಣಿಸಿದಳು || ೬೦ ||

ವಿಧುಮುಖಿಯೊಳು ಮದುವೆಯನುಳಿದುಪಶಮ | ವಧುವಿನೊಡನೆಮದುವೆಯನು |
ವಿಧಿಪೂರ್ವಕ ದಮವರರೆಂಬ ಮುನಿಯ ಸ | ನ್ನಿಧಿಯೊಳು ಹಡೆದೊಪ್ಪಿದನು || ೬೧ ||

ಆ ಉತ್ತಮಮಪ್ಪತಪದೊಳು ನೆಗಳಿ ನೀ | ಜಾಯುಷ್ಯವಸಾನದೊಳು |
ತಾವು ಮಹೇಂದ್ರಕಲ್ಪದೊಳು ಸಮಾನಿಕ | ದೇವರಾಗಿ ಜನಿಸಿದರು || ೬೨ ||

ಅವರು ಮೂವರೊಳು ಚಿಂತಾಗರಿಚರದೇವ | ದಿವಿಜಸುಖಮನನುಭವಿಸಿ |
ಜವನಾಜ್ಞೆಯಿಂದ ಬಂದಪರಾಜಿತೆನೆಂ | ಬವನಾದವ ನೀನು ಕೇಳಾ || ೬೩ ||

ಜಂಬೂದ್ವೀಪದ ಮೂಡಗಡೆಯ ಸೀತೆ | ಯೆಂಬ ನದಿಯ ತೆಂಕಣಗಡೆಯ |
ಇಂಬಿನ ಪುಷ್ಕಳಾವತಿಯೆಂಬ ವಿಷಯದ | ಬಾಂಬಟ್ಟೆಗರಬೆಟ್ಟದೊಳು || ೬೪ ||

ಸೊಗಯಿಪ ಬಡಗಣದೆಸೆಯ ಶ್ರೇಣಿಯೊಳಿಪ್ಪ | ಗಗನವಲ್ಲಭಪುರದರಸು |
ಗಗನಚಂದ್ರಮನೆಂಬ ಗಗನಚರನ ಸತಿ | ಗಗನಸೌಂದರಿಯೆಂಬಳಿಹಳು || ೬೫ ||

ಅವರೀರ್ವರಿಗೆ ಚಿಂತಾಗರಿಯೊಡಹುಟ್ಟಿ | ದವರಾಸಗ್ಗದಾಯುಷ್ಯ |
ಸವೆಯಲು ಮುಂದೆಸೆವೆಣ್ಣೊಡಲೊಳು ಶಶಿ | ರವಿಗಳುದ್ಭವಿಸುವಂದದೊಳು || ೬೬ ||

ಮಿಸುಗುವಮಿತಗತಿಯುಮಿರಾಜನುಮೆಂಬ | ಪೆಸರಾಂತುದಯಂಗೆಯ್ದು |
ಪೊಸಜವ್ವನದೊಳು ವೈರಾಗ್ಯಮಿಗೆಜನಿ | ಯಿಸಿ ಸುಪ್ರಭಜಿನರಲ್ಲಿ || ೬೭ ||

ದೀಕ್ಷೆವಡೆದು ಚಾರಣತ್ವಮನಂತ ಮು | ಮುಕ್ಷುಗಳ್ ನಾವು ಕೇಳ್ನಿನ್ನ |
ಈಕ್ಷಿಸಲೆಂದೆಲೆಯುಪರಾಜಿತ ನಾ ವೀಕ್ಷಿತಿತಳಕೆಯ್ದಿದೆವು || ೬೮ ||

ತಿಂಗಳಂತೆಯಪರಾಜಿತ ನಿನಗೊಂದು | ತಿಂಗಳಾಯುವುದರಿಂದ |
ಪಿಂಗಿಸಿಸಕಲಪರಿಗ್ರಹವನು ಬೇಗ | ಸಂಗೊಳಿಸಧಿಕಪುಣ್ಯವನು || ೬೯ ||

ಎಂದು ನುಡಿದ ಧರ್ಮಲಾಭ ನಿನಗೆಯಾಗ | ಲೆಂದಾಗಸಕವರೆಯ್ದೆ |
ಕಂದರ್ಪನಿಭನಿತ್ತಲವರ ನೆನೆವುತೆ | ಯ್ತಂದನು ನಿಜಪುರವರಕೆ || ೭೦ ||

ಆ ತಪಸ್ವಿಗಳು ಪೇಳಿದಮಾಳ್ಕೆಯೊಳು ಧ | ರಾತಳಭಾರವೆಲ್ಲವನು |
ಪ್ರೀತಿಂಕರನೆಂಬ ಪ್ರಿಯತನುಜಗೆ ಸ | ತ್ಪ್ರೀತಿಯಿಂದವೆ ಕೊಟ್ಟನಾಗ || ೭೧ ||

ನಂದೀಶ್ವರದನೋಂಪಿಯನೆಂಟುದಿನಸಮಾ | ನಂದದಿ ಮಿಗೆ ಮಾಡಿ ಬಳಿಕ |
ಒದಿದ ಸಕಲಪರಿಗ್ರಹವನು ಪುಲ್ಲಿ | ನಿಂದಲಿ ಕಡೆಮಾಡಿ ತೊರೆದು || ೭೨ ||

ತಳುವದೆ ಮೊದಲು ಬಾಂಧವ ಬಂಧನವ ಕಿಳ್ತು | ಬಳಿಕ ಕುಂತಳಸಮಿತಿಯನು |
ಘಳಿಲನೆ ಪರಿದು ಸಮಾಧಿವಿಧಿಯನಂದು | ತಳೆದನಿಂತುಪರಾಜಿತನು || ೭೩ ||

ಆ ಪಗಲಿಪ್ಪತ್ತೆರಡುರೊಳಾ ಪ್ರಾ | ಯೋಪಗಮನನ್ಯಸನದಿ |
ಆಪರಮಾಯುಷ್ಯಮಿಪ್ಪತ್ತಿಚ್ಚಾಗ | ರೋಪಮಮಾಗಿ ರಂಜಿಸುವ || ೭೪ ||

ಉರುಸುಖಮೀವಚ್ಯುತಕಲ್ಪದಾಶಾಂತ | ಕರಮೆಂಬಮಣಿವಿಮಾನದೊಳು |
ಇರದೆ ಕನಿಸಿಯಚ್ಯುತೇಂದ್ರವೆಸರನಾಂತು | ಸುರಸತಿಯರನೊಲಿಸಿದನು || ೭೫ ||

ಭೋಗವನೀಂಟುವ ಸುರಪನ ತೃಷ್ಣಾ | ಯೋಗವೆಯಿಪ್ಪತ್ತೆರಡು |
ಸಾಗರೋಪಮಾಯುಷ್ಯವನೀಂಟಿ | ತ್ತೆಗೆಯ್ದಿ ಕರ್ಮದ ತೆರನ || ೭೬ ||

ನಿರುಪಮ ಜಂಬೂದ್ವೀಪದೊಳೊಪ್ಪುವ | ಭರತಕಾರ್ಯಖಂಡದೊಳು |
ಕರುಜಾಂಗಣದೇಶಮಿಹುದಲ್ಲಿ ಹಸ್ತಿನ | ಪುರವೆಂಬುದಿಹುದು ಶೋಭೆಯೊಳು || ೭೭ ||

ಆ ಪುರವನು ಪಾಲಿಸುವನು ಸಕಲಕ | ಲಾಪನಂತಕನಿಭಕೋಪ |
ರೂಪ ಮಾನವಮನಸಿಜ ನೃಪಕುಲಮಣಿ | ದೀಪ ಶ್ರೀಚಂದ್ರನೆಂಬವನು || ೭೮ ||

ಆ ಮಹೀಪಾಲಕನಾರ್ಶರೀಚಂದ್ರಂಗೆ | ಶ್ರೀಮತಿಯೆಂದೆಂಬವಳು |
ಭಾಮೆಯಾದಳು ದಾನದೊಳು ಶ್ರೀಮತಿಯಿಂ | ಕಾಮದೇನು ಕಲ್ಪವೃಕ್ಷಮೆನಿಸಿ || ೭೯ ||

ಆ ಮಹೀಪಾಲನ ಶ್ರೀಚಂದ್ರರಾಜೇಂದ್ರನ | ಶ್ರೀಮತಿಯಮಲಗರ್ಭದೊಳು |
ರಾಮಣಿಯಕಮಪ್ಪ ಸೌಖ್ಯವನುಂಡುಚ್ಯು | ತಾಮರ ಬಂದು ಪುಟ್ಟಿದನು || ೮೦ ||

ಅನುರಾಗವೆದೆಯೊಳಂಕುರವ ಹಡೆಯಲಾ | ಮನಜೇಶ ಶುಲಗ್ನದೊಳು |
ತನುಜಾತಗೆ ಸುಪ್ರತಿಷ್ಠವೆಸರನತಿ | ವಿಷಯದಿಂದಲಿ ಮಾಡಿದನು || ೮೧ ||

ನಂದನಗೇರುಂಜವ್ವನಮೊದವೆಯಾ | ನಂದದಿತಾ ಶ್ರೀಚಂದ್ರ |
ತಂದು ಮದುವೆ ಮಾಡಿದನರಮಗಳ ಸರಿ | ನಂದಾದೇವಿಯೆಂಬವಳ || ೮೨ ||

ಅರಿಕೆವಡೆದ ಸುಪ್ರತಿಷ್ಠಕುಮಾರಕೆ | ನಿರವ ಮೆರೆವ ಹರೆಯವನು |
ನರೆತಳೆಯಲು ಶ್ರೀಚಂದ್ರಮಹೀಶಗೆ | ಪೆರಿಯನು ರಾಜ್ಯವಿಮೋಹ || ೮೩ ||

ನೆಟ್ಟನೆ ನಿರ್ವೇಗ ಮನವನಾವರಿಸಲು | ದಿಟ್ಟತನದಿ ಭೂವರನು |
ಕಟ್ಟೊಲವಿಂ ಸುಪ್ರತಿಷ್ಠಗೆ ಪಟ್ಟವ | ಕಟ್ಟಿ ದೀಕ್ಷೆಯನಾಂತನಿತ್ತ || ೮೪ ||

ಆ ಸುಪ್ರತಿಷ್ಠರಾಜೇಂದ್ರಶಶಾಂಕಗೆ | ಯಾ ಸುನಂದಾವಲ್ಲಭೆಗೆ |
ಭಾಸುರಮೂರ್ತಿಸುದೃಷ್ಟವೆಸರನಾಂ | ತಾ ಸುಕುಮಾರ ಪುಟ್ಟಿದನು || ೮೫ ||

ಅಪ್ರತಮಪ್ರತಾಪದಿನಾ ಸಕಲಧ | ರಾಪ್ರಮದೆಯನೊಲವಿಂದ |
ಸುಪ್ರತಿಷ್ಠನು ತನ್ನಘನಬಾಹುವಿನೊಳು | ಸುಪ್ರತಿಷ್ಠೆಯ ಮಾಡಿದನು || ೮೬ ||

ಇಂತಿರುತಾನೃಪನೊಂದಾನೊಂದು ದಿ | ನಾಂತದೊಳುಪ್ಪರಿಗೆಯನು |
ಸಂತಸದಿಂದೇರಿದನು ಸುರಪತಿ ವೃಜ | ಯಂತಮನೇರುವಂದದೊಳು || ೮೭ ||

ಮತ್ತಾಸಗ್ಗದಹಾಸಿನ ಪೊರೆಯೊಳು | ತ್ಪತ್ತಿಯಪ್ಪುದ ತೋರುವಂತೆ |
ಮೆತ್ತನೆಸೆವ ಹಂಸತೂಳತಲ್ಪವನೇರಿ | ಚಿತ್ತಜನಿಭನೊಪ್ಪಿದನು || ೮೮ ||

ಉದಯಪರ್ವತದೊಳುಲ್ಪಲಪತಿ ತಾರಾ | ಸುದತೀಜನದಮದ್ಯದೊಳು |
ಮುದದಿನನೋಲಗದೊಳಿಪ್ಪಂತಾ ನೃಪನಿಂದು | ವದನೆಯರಿಂದಲೊಪ್ಪಿದನು || ೮೯ ||

ಇಕ್ಕೆಲದೊಳು ಚಾಮರವನು ಬೀಸುವ | ಸುಕ್ಕುಗುರುಳನೀರೆಯರ |
ಸೊಕ್ಕುಗಂಗಳ ರುಚಿ ಸೂಸಲು ನೃಪ ಮುತ್ತ | ನಿಕ್ಕಿದಂದಿನೊಪ್ಪಿದನು || ೯೦ ||

ಚಾರುನಕ್ಷತ್ರಸಹಸ್ರಲೋಚನನಾ | ಕಾರಕಳ್ತಲೆಯೆಂಬ ಗಿರಿಯ |
ಅರಯ್ಯದಿಟ್ಟಕುಲಿಶವೆಂಬಂದದಿ | ಭೋರನೆ ಬೀಳ್ದುದೊಂದುಳ್ಕು || ೯೧ ||

ಧರಣೀತಳವ ಸುಡುವೆನೆಣದಾ | ಸುರನೋವದೆ ತೆಗೆದೆಚ್ಚ |
ಉರಿಯಬಾಣದ ಬಗೆಯಂತೆ ಬೀಳ್ದಾ ಉಳ್ಕ | ನಿರದೆ ನೃಪತಿ ಕಂಡನಾಗ || ೯೨ ||

ಕಾರಿರುಳೆಂಬ ಕಾಂತೆಯ ಕವರಿಯ ಕಲು | ಹಾರದ ಮಾಲೆ ಭೂತಳಕೆ |
ಆರೈಯದುರುಳ್ವಂದದಿ ಬೀಳ್ದುದಾ ಉ | ಳ್ಕಾ ರಾಯನೀಕ್ಷಿಸುತಿರಲು || ೯೩ ||

ನೀಳ್ಕರಿಸಿದ ಕಾಂತಿಯ ಕೂಡಿಕೊಂಡು ಕ | ಣ್ಣುಳ್ಕದಮುನ್ನ ಬೀಳ್ತಪ್ಪ |
ಉಳ್ಕಾಪಾತವ ಕಂಡೆಮ್ಮ ದೇಹದ ಬಾಳ್ಕೆಯಿಂತೆಂದೆಣಿಸದನು || ೯೪ ||

ಉರಿಯ ಬಾಣದ ಪರಿನೊಳು ಬೀಳ್ವ ಉಳ್ಕನು | ಅರಸನೀಕ್ಷಿಸುತಿಂತು ನುಡಿದ |
ಉರಿಯಬಾಣದ ಮೊನೆಗಿದಿರಾದ ಪುಲ್ಕನೆ | ಯಿರವೆಮ್ಮೀದೇಹವೆನುತ || ೯೫ ||

ಪಟ್ಟದ ಸುದತಿ ಸುನಂದಾದೇವಿಯ | ಮುಟ್ಟಿದ ಮೋಹದ ಮಗನು |
ದಿಟ್ಟ ಸದೃಷ್ಟಗೆ ಮಹದೈಶ್ವರ್ಯವ | ಕೊಟ್ಟನವನಿಪಾಲಕನು || ೯೬ ||

ಆ ವೇಳೆಯೊಳಾನಗರಿಯುದ್ಯಾನಕೆ | ದೇವಸುಮಂದರರೆಂಬ |
ಕೇವಲಿಗಳಸಮವಸೃತಿ ಬರಲಾ | ದೇವದುಂದುಭಿ ಮೊಳಗಿದುದು || ೯೭ ||

ಮಮತೆಯಿಂದದಕೇಳಿ ತಾನಲ್ಲಿಗಿರದೆಯ್ದಿ | ವಿಮಲಬೋಧರ ಪದಕೆರಗಿ |
ರಮಣೀಯಮಪ್ಪ ತಪವನಾ ಧರಣೀ | ರಮಣೀರಮಣ ತಾಳಿದನು || ೯೮ ||

ಆ ಸುನಂದಾದೇವಿ ಮೊದಲಾದ ಸತಿಯಿರಿ | ಚ್ಛಾಸಿರನೇಹದಸುತರು |
ಸಾಸಿರನೃಪವರರೈನೂರ್ವರೊಡಗೂಡಿ | ಸಾಸಿಗದೀಕ್ಷೆವಡೆದನು || ೯೯ ||

ದೂರೀಕೃತದುರಿತನು ತನ್ನೊಳೊಡವಂ | ದಾರುಷಿಯರಕೂಡಿಕೊಂಡು |
ಸಾಸಿರಮಪ್ಪಾತಪದೊಳು ನೆಗಳ್ದೇಕವಿ | ಹಾರಿಯಾದನು ಧರೆ ಪೊಗಳೆ || ೧೦೦ ||

ಉರಿಯ ಮಡಿಕಟ್ಟಿಕೊಂಡೊಡರಿಯಬಾರ | ದಿರವಾಂತಾಮಾಗಿಯೊಳು |
ವರಮುನಿ ನದಿಯತಡಿಯೊಳು ನಾಲ್ದಿಂಗಳು | ನಿರುತಮಾಗಿ ನಿಂದಿಹನು || ೧೦೧ ||

ಸಿಡಿಲಾಲಿವರಲು ಮೊಳಗುಮಿಂಚು ಬಿರುಗಾಳಿ | ಯೊಡಗೂಡಿ ಕರೆವಮಳೆಯೊಳು |
ಎಡವರಿಯದೆ ನಾಲ್ಕು ತಿಂಗಳಾಲದಮರ | ದಿಡಿಯ ಬಿಡನು ಜತಿರಾಯ || ೧೦೨ ||

ಕಡೆಗಾಲದ ಸೂಲಿ ತೆರೆದ ನೊಸಲಕಣ್ಣ | ಕಡುಗಿಚ್ಚಿನಂತೆ ಭೂತಳವ |
ಸುಡಿವಬೇಸಿಗೆಯೊಳು ಕಾದಕಲ್ಲಿನಮೇಲೆ | ಯಡಿದೆಗೆಯನು ಮುನಿವರನು || ೧೦೩ ||

ಆ ಸಂಯಮಿ ಸುವಿಧಾನದಿ ಪಕ್ಷೋಪ | ವಾಸ ಮಾಸೋಪವಾಸವನು |
ಓಸರಿಸದೆ ಮಾಡಿ ಗಿಡಿಗಿಡಿಜಂತ್ರದ | ಪಾಸಟಿಯಾಯ್ತು ನಿಜಾಂಗ || ೧೦೪ ||

ಅಂಗದೊಳಸುವ ಭಿನ್ನವ ಮಾಡಿ ಏಕದೇ | ಶಾಂಗವನಾಗಿ ನಿಶ್ಚಯದಿ |
ಅಂಗಜನಧಟ ಮುರಿದು ಮತ್ತಾಮುನಿ | ಪುಂಗವ ತಪಸು ಮಾಡಿದನು || ೧೦೫ ||

ತೀವಿದ ಸುಜ್ಞಾನದಿಂದ ಮೂಲೋಕಮ | ನಾವರಿಸಿದ ಮಾಳ್ಕೆಯೊಳು |
ಓವದೆ ಸಮ್ಯಕ್ವ ಮೊದಲಾದ ಷೋಡಶಭಾವನೆಯನು ಭಾವಿಸಿದನು || ೧೦೬ ||

ಎನಗಹಮಿಂದ್ರತ್ವವ ಕೊಡು ನೀನೆಂದ | ಜಿನಗೆ ಪಾಳುಂಬಡುವಂತೆ |
ಮುನಿ ಮೂರುತಿಂಗಳ ಸನ್ಯಸದೊಳಿರ್ದು | ತನು ಮಾಡಿ ತನುವ ಬಿಸುಟುವನು || ೧೦೭ ||

ನಿರ್ವಾಣಭೂಮಿಗೆ ನೆರೆಮೆನಯೆನಿಸಿ ಸು | ಪರ್ವಲೋಕಕೆ ಕಡೆಯೆನಿಸಿ |
ಸರ್ವಸುಖಕೆ ನಲೆವನೆಯೆದೆನಿಸುವ | ಸರ್ವಾರ್ಥಸಿದ್ಧಿಗೆಯ್ದಿದನು || ೧೦೮ ||

ಮೂವತ್ತಮೂರುಸಮುದ್ರೋಪಮಾಯುಷ್ಯ | ಮೂವತ್ತಮೂರುಸಹಸ್ರ |
ಆ ವತ್ಸತ ತೀವೆಯಾಹಾರಮಹಮಿಂದ್ರ | ದೇವಗೆ ಸಂಭವಿಸಿಹುದು || ೧೦೯ ||

ನಿಃಪ್ರವಿಚಾರಸೌಖ್ಯನು ತಾನೇಕರ | ತ್ನಪ್ರಮಾಣಸಂಯುತನು |
ಸುಪ್ರವಿಚಾರಸದ್ಗುಣ ಶುದ್ಧಸ್ಪಟಿ | ಕರತ್ಯಂಗತಂಜಿತನು || ೧೧೦ ||

ಭುವನನಾಳಿಕಾಭ್ಯಂತರ ಗತಮಾ | ದವಧಿಸುಭೋಧವಿಭಾಸಿ |
ವಿವರಿಸೆಸಾರ್ಧಷೋಡಶಮಾಸನಿಃಶ್ವಾಸ | ನವಿರಳಸುಖನಹಮಿಂದ್ರ || ೧೧೧ ||

ನಿರುಪಮಶುಕ್ಲಲೇಶ್ಯಾಪರಿಣಾಮಬಂ | ಧರುನಾಗಿಯಾ ಅಹಮಿಂದ್ರ |
ಸುರಿಚರಸುರಲೋಕಸುಖವನು ಭೋಗಿಸು | ತಿರಲಿತ್ತ ಭೂತಳದೊಳಗೆ || ೧೧೨ ||

ಇದು ಜಿನಪದಸರಸಿಜಮದುಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದ ಸಂಧಿಗಳ್ಮೂರು || ೧೧೩ ||

ಮೂರನೆಯ ಸಂಧಿ ಸಂಪೂರ್ಣಂ