ಶ್ರೀಮತಪರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ದ್ವಾರಾವತಿಪುರದೊಳಗಿಂದ್ರವಿಭವದಿ | ನಾರಾಯಣ ಸುಖದಿಂದ |
ಭೂತಿಭೂಭುಜರಮಧ್ಯದೊಳೊಪ್ಪುವಕಂ | ಠೀರವಪೀಠದೊಳಿರ್ದ || ೨ ||

ತನ್ನವೆರಡು ತೋಳಬಾಳಿಗೆ ಹುದುಗಾದ | ಕನ್ನಡಮೊಗದ ಕಾಂತೆಯರ |
ಚಿನ್ನೆಯರನು ತನ್ನೋಲಗಶಾಲೆಗೆ | ಯನ್ನತಮಪ್ಪ ನೇಹದೊಳು || ೩ ||

ಕರಸಲೊಡನೆ ಮುಂದೆ ರುಕ್ಷಿಣಿ ಬಂದಾ | ಹರಿಯ ಬಲದ ಭಾಗೆಯೊಳು |
ಇರೆಮತ್ತೆ ಸತ್ಯಭಾಮಾದೇವಿ ಬಂದುರು | ತರಕೋಪದಿ ನಿಂದಿರಲು || ೪ ||

ಅದನು ಕಂಡಾ ವಿಷ್ಣುವೆಲೆ ಬಾಲೆ ನೀನೇ | ಕಿದಿರೊಳಿರ್ದಪೆಯ್ಕೆದೆನಲು |
ಮದವತಿ ಬಾರದಿರಲು ರುಕ್ಮಿಣಿದೇವಿ | ಯದನರಿದೆಂತೆಂದಳಾ || ೫ ||

ಭಾಮಿನಿಯರಿಗೆ ಬಗೆಯಲಾಪುರುಷನ | ವಾಮಭಾಗವೆ ಮುಖ್ಯವೆಂದು |
ಕೋಮಲೆ ರುಕ್ಷಿಣಿಯಾಪತಿಯೆಡಗಡೆ | ಪ್ರೇಮದಿ ಬಂದು ನಿಂದಿರಲು || ೬ ||

ಅವರಿರವದು ಗೋವಿಂದ ನುಡಿದನೆಲ | ಯುವತಿಯರಿರ ನಿಮ್ಮೊಳಗೆ |
ಕುವರನನಾಳೋರ್ವಳು ಮುಂ ಪೆತ್ತವ | ಳವಳೆಯಗ್ಗಳಮೆನಲಾಗ || ೭ ||

ಆ ಮಾತಿಗವರೊಡಬಡೆ ಬಳಿಕಿಂತೆಂದ | ನೀಮು ಮೊದಲು ಪೆತ್ತಮಗನ |
ಆ ಮದುವೆಯೊಳು ಪಿಂದುಳಿದವಳಳಕವ | ನೇ ಮೆಟ್ಟಿ ಮೀಯಬೇಕವಳು || ೮ ||

ಎನಲವರದನೇ ಕೈಕೊಂಡು ತಂತಮ್ಮಯ | ಮನೆಗೆ ಪೋಗಲು ಮಾಧವನು |
ವನಿತಾಮಣಿಗಳೊಳಗೆ ರತಿಕೇಳಿಯೊ | ಳನುದಿನ ಸುಖಿಯಿಸುತಿರಲು || ೯ ||

ಒಂದು ದಿವಸ ರುಕ್ಮಿಣಿ ಋತುಮತಿಯಾಗಿ | ಮಿಂದು ಬಿಳಿಯ ತೊಡವಿಟ್ಟು |
ಕಂದರ್ಪನ ಕೀರ್ತಿಕಾಂತೆಯಂದದೊಳು ಮು | ಕುಂದನ ಸೂಳ್ಗೈತಂದು || ೧೦ ||

ಹಂಸತೂಳದ ತಲ್ಪದೊಳಗೊರಗಿದ ರಾಜ | ಹಂಸನ ಪೊರೆಗೈದಿದಲು |
ಹಂಸಗಮನೆ ಹಂಸಿಪುಳಿನತಳದರಾಜ | ಹಂಸನ ಬಳಿಗೈದುವಂತೆ || ೧೧ ||

ಭಾಮೆ ರುಕ್ಮಿಣಿಯ ರಾಜೀವೋದರನು | ದ್ದಾಮರಾಗದೊಳೊಡವೆರೆದ |
ಪ್ರೇಮವನೇನೆಂಬೆನು ಕಾಮಗೆ ಜನ್ಮ | ಭೂಮಿ ತಾನಾದುದರಿಂದ || ೧೨ ||

ಸುರಸುಖಾವಸಾನದೊಳಾದ ನಿದ್ರೆಯೊ | ಳಿರುತ ಬೆಳಗುಜಾವದೊಳು |
ಸಿರಿಸಿಂಗಮೀನುಮನ್ನೀರುವಿಮಾನದ | ತರುಣಿ ಕನಸಿನೊಳು ಕಂಡು || ೧೩ ||

ಹರಿಸಿದಿನೆಳ್ದಾ ಕನಸಿನ ಫಲವ ಭೂ | ವರ ಪೇಳಲನುರಾಗದೊಳು |
ಇರೆ ತರುಣಿಯ ನಡುವಿನ ಬಡತನ ಪೋಗಿ | ವರಭುವನನೊಳ್ಪನೆಂಬ || ೧೪ ||

ಉರುತರಮಪ್ಪಿಚ್ಛೆಯಾಗಲುಪೇಂದ್ರನಾ | ದರದಿಂ ದರ್ಭಶಯ್ಯೆಯೊಳು |
ಇರಲವಳೊಡಲಬಾಲಕನ ಸುಕೃತದುರು | ತರಫಲದೇಳ್ಗಿಯಿಂದಾದ || ೧೫ ||

ಸುರಪತಿಯಟ್ಟಿದ ಕಾಮವಿಮಾನವ | ನಿದೇರಿಯಾದಂಪತಿಗಳು |
ನರಲೋಕಮನೆಲ್ಲವನೋಡಿ ಮುಗುಳ್ದಾ | ಪುರಕೆ ಬಂದು ಸುಖಮಿರಲು || ೧೬ ||

ಬಳಿಕಾ ಸತ್ಯಭಾಮಾದೇವಿಗೆ ಗರ್ಭ | ಮೊಳೆತು ಬಳೆವುತಿರೆ ಕಂಡು |
ಜಲಜಾತೋದರನತ್ಯಂತ ಹರುಷವ | ತಳೆದು ಸುಖದೊಳಿರುತಿರಲು || ೧೭ ||

ಅಲಂಗನೆ ರುಕ್ಮಿಣಿಯಂಗದ ಕಾಮನ | ನಂಗತೆಯನು ಪರಿಹರಿಸಿ |
ಅಂಗವಡೆದು ಬಳೆವಂದದಿನಾಶಿಸು | ತಿಂಗಳೊಂಬತ್ತನು ಕಳೆದು || ೧೮ ||

ಅತ್ಯಂತ ಶುಭತರವಹಲಗ್ನದೊಳು ಕರತ | ಕೃತ್ಯೆ ಸುಶೀಲಸಂಪನ್ನೆ |
ಅತ್ಯವಂತೆಯ ಬಸಿರಿಂ ಭೂಭುವನ | ಸ್ತುತ್ಯನು ಸಂಜಯಿಸಿದನು || ೧೯ ||

ಅಂತದನಚ್ಯುತನರಿದೊಸಗೆಯ ಮಾಡಿ | ಪಂತರದೊಳು ಸತ್ಯಭಾಮೆ |
ಸಂತಸದಿದೋರ್ವಸುತನನು ಹಡೆದು ನಿ | ಶ್ಚಿಂತದಿ ಸುಖಮಿರಲತ್ತ || ೨೦ ||

ಆ ರುಕ್ಮಿಣಿಯ ನಂದನನ ಪೂರ್ವಜನ್ಮದ | ವೈರಿಯೋರ್ವ ಜ್ಯೋತಿಷ್ಯ |
ಕ್ರೂರಮಾನಸ ಧೂಮಕೇತುವೆಂಬುವನಾ | ಮಾರುತಮಾರ್ಗದಿಂದಿಳಿದು || ೨೧ |

ಪಸುಳೇನೇಸರನು ಪಿಡಿವ ರಾಹುವಂತೆ ಕ | ಕ್ಕಸದಿಂದತಿರಂಜಿಸುವ |
ಸಿಸುವನೆತ್ತಿಕೊಂಡತಿ ಭರದಿಂದಾ | ಗಸಕೆ ನೆಗೆಯೆ ಬಳಿಕಿತ್ತ || ೨೨ ||

ಸೋವಿಲೊಳಿರ್ದ ಮಗುವ ಕಾಣದಾ ಸತಿ | ಯವ್ವೆನು ಕೆಟ್ಟೆ ನಾನೆನುತ |
ಆ ವಸುದೇವಗೆ ಹಮ್ಮಳಿಸಿಯುರುಳಿ ಶೋ | ಕಾವೇಶದೊಳಗಿರುತಿರಲು || ೨೩ ||

ಅಂತದನಚ್ಯುತನರಿದುಬಂದಾನಿಜ | ಕಾಂತೆಯನಿರದೆ ಸಂತೈಸಿ |
ಇಂತಿದಕೇನು ಬೇವಸವೆನ್ನ ಸುತನು ದಿ | ಗಂತದೊಳಾವೆಡಡೆಯಿರಲಿ || ೨೪ ||

ಕಿನ್ನರ ಭೂಚರರಾವಿದ್ಯಾಧರ | ಪನ್ನಗರೊಳಗೆಲ್ಲಿರಲಿ |
ಚಿನ್ನೆ ಕೇಳೀ ಕ್ಷಣದೊಳು ತಾರದೊಡೆ ಮ | ತ್ತೆನ್ನಿರವೇಕೆಂಬಾಗ || ೨೫ ||

ಹರಿ ಕೇಳಾ ನಿನ್ನ ಕುವರನು ವಿದ್ಯಾ | ಧರದೇಶದೊಳು ನೆರೆ ಬಳೆದು |
ಬರುಭಜಬಲನಾಗಿ ನಿನ್ನಲ್ಲಿಗೀರೆಂಟು | ವರುಷಕೆ ಮಗುಳುವನೆಂದು || ೨೬ ||

ದೇವವಚನಮಾಗಸದೊಳಾಗಲು ವಾಸು | ದೇನೊಸೆದು ರುಕ್ಮಿಣಿಯ |
ಓವಿ ಸಂತಯಸಿ ನಿಶ್ಚಿಂತಮಿರಲು ಋಕ್ಷ | ದೇವನತ್ತಲ ಶಿಶುವ || ೨೭ ||

ಎತ್ತಿಕೊಂಡಾಗಸದೊಳು ಮುನಿಸಿಂದ ಬ | ರುತ್ತೆಲವೋಯೆನ್ನ ಹಗೆಯ |
ಸತ್ತೆಯಲಾಯೆನ್ನ ಕೈಯಿಂದ ಪರಿದುಕೊಂ | ಬುತ್ತೆಮಸತ್ವನದಾರು || ೨೮ ||

ಮುನ್ನಿನಬವದೊಳಗೆನ್ನ ಸತಿಯನೋ | ಯ್ದನ್ನಯಕಾರನೆ ಕೇಳು |
ನಿನ್ನನೀಗ ಛಿನ್ನಭಿನ್ನವ ಮಾಡಿವೊ | ಡೆನ್ನನು ಬಾರಿಪರುಂಟೆ || ೨೯ ||

ಎನುತಾಪಸುಳೆಯನುರೆ ಮೂದಲಿಸುತ | ಘನಪಥದೊಳು ಧೂಮಕೇತು |
ಮುನಿಸಬಲಿದು ಬರುತಿಳೆಯನೀಕ್ಷಿಸುತೊಂದು | ಘನತರಮಪ್ಪಡವಿಯೊಳು || ೩೦ ||

ವ್ಯಂತರಿಗಳ ಕೃತಕದಿ ಮತ್ತದರ | ಭ್ಯಂತರದೊಳು ಶಿಲೆಯೆರಡು |

ತಂತಮ್ಮೊಳು ತಾಕಿ ಪಳಚುವುದನು ಕಂ | ಡಿಂತೆಂದನ ಧೂಮಕೇತು || ೩೧ ||

ಮಿಗೆ ಹೋರುವೀ ಕಲ್ಗಳ ಮಧ್ಯದೊಳಗೀ | ಹಗೆಯ ಹಾಕಲು ಸಾವುದೆಂದು |
ಬಗೆದು ಮತ್ತದರೊಳಗಾ ಹಗೆಯನು ಹಾಕಿ | ಗಗನಕೊಗೆದನವನಿತ್ತ || ೩೨ ||

ಆ ಗಂಡುಮಗುವಿನ ಪುಣ್ಯಪ್ರಭಾವದಿ | ನಾ ಗುಂಡುಗಳು ತಮ್ಮೊಳಗೆ |
ತಾಗದೆ ಬೆರಗುವಟ್ಟಿರಲಾವೇಳೆಯೊ | ಳಾಗಸವಟ್ಟೆಯೊಳೊಸೆದು || ೩೩ ||

ವಿನುತ ವಿಜಯಶಿಖರಿಯ ಬಲತಟದೊಳು | ಘಟನಕೂಟಮೆಂಬ ಪಟ್ಟಣದ |
ಜನಪತಿ ಕಾಳಶಂಬರನೆಂಬನು ತನ್ನ | ವನಿತೆ ಕಾಂಚನಮಾಲೆಗೂಡಿ || ೩೪ ||

ಬರುತಿರಲಾ ಚರಮಾಂಗನ ಮೇಲಾ | ಸುರುಚಿರಮಪ್ಪ ವಿಮಾನ |
ಪರಿಯದೆ ನಿಲಲಿಂತಿದೇನೆಂದಾಖೇ | ಚರಗಾನಸದಿಂದಿಳಿದು || ೩೫ ||

ಆ ಕಲ್ಗಳೆರಡರ ಮಧ್ಯದೊಳಗೆ ಪೊಳೆ | ವಾಕುವರನ ಕಾಣುತವೆ |
ಏ ಕಾರಣಮಿಂತಿದೆಂದು ವಿಸ್ಮಯಮಾಗು | ತಾಕಾಳಶಂಬರನೃಪತಿ || ೩೬ ||

ಅವನಮಗಸಂಗತಮಾಗಿದ್ ಶುಭಲಕ್ಷ | ಣವ ಕಂಡಿಂತು ತಿಳಿದನು |
ಅವನಿಪಾಲಕನ ನಂದನನಿವನು ಪೂರ್ವ | ಭವದ ವೈರಿ ಹಾಕಿಹೋದ || ೩೭ ||

ಪರಯೆಂದಾಮಗುವನು ತೆಗೆದಾಖೇ | ಚರನು ತನ್ನದೆಯೊಳಗಿಟ್ಟು |
ಮರುತಮಾರ್ಗಕೆ ಪೋಗಿಯಾವಿಮಾನದೊಳಿರ್ದ | ತರುಣಿ ಕಾಂಚನಮಾಲೆಯೊಡನೆ || ೩೮ ||

ಬಾಲಕನನು ಕಂಡಾ ಸುಪ್ರಪಂಚವ | ಪೇಳಿಯಿವನ ಸಾಕೆನಲು |
ಬಾಲೆ ಪಿಂತಣ ಭವಬದ್ಧದಿ ಶಿಶುವಿನ | ಮೇಲತಿಕರುಣವಂಕುರಿಸಿ || ೩೯ ||

ಕಡುಬಡವನು ಕಡವರವ ಕಂಡಂದದಿ | ಸಡಗರವೆತ್ತಾಸುದತಿ |
ನುಡಿದಳಿಂತೆಂದು ವಲ್ಲಭ ನಿನ್ನ ಮತ್ತಿನ | ಮಡಿದಯಣುಗರಿರ್ದಂತೆ || ೪೦ ||

ಈ ನಂದನನ ಸಾಕಿದೊಡೇನುಫಲವೆನ | ಲಾ ನುಡಿಗಾಖೇಚರನು |
ಮಾನತಮಪ್ಪ ಕೊರಲಕಂಠಿಕೆಯನು | ತಾನಂದು ಕಟ್ಟಿದನವಗೆ || ೪೧ ||

ಇವನೇ ಯುವರಾಜನೆಂದು ನುಡಿಯಲಾ | ಯುವತಿಗೆ ಮೊಲೆವಾಲು ಸುರಿಯೆ |
ಸವಿನಯದಿಂದೂಡಿಸಿ ತಮ್ಮ ನಗರಿಗೆ | ಯುವರು ಮುದದಿನೈದಿದರು || ೪೨ ||

ನಂದನದೊಳಗಿರ್ದು ಗೂಢಗರ್ಭದಿನಾ | ಸುಂದರಿ ಕಾಂಚನಮಾಲೆ |
ಕಂದನ ಪಡೆದಳೆನುತ ಪುರಕೊಸಗೆಯ | ನಂದಟ್ಟಿದನು ಖೇಚರನು || ೪೩ ||

ಪುರಜನಮತಿ ಮುದದಿಂದಿದಿರ್ಗೊಳಲಾ | ಸುಪತಿ ವೈಭವದಿದ |
ಅರಮನೆಗೈತಂದು ಶುಭಲಗ್ನದೊಳಗಾ | ತರುಣಗೆ ಜಾತಕರ್ಮವನು || ೪೪ ||

ದಶಮದಿವಸದೊಳು ಮಾಡಿ ಬಳಿಕ ಬಾಲ | ಶಶಿಯಂದದಿ ಥಳಥಳಿಪ |
ಶಿಶುವಿಗೆ ಪ್ರದ್ಯುಮ್ನನೆಂಬ ನಾಮವನಾ | ಕುಶಲನಿಟ್ಟನು ಮಮತೆಯೊಳು || ೪೫ ||

ಬಳಿಕ ಬಾನೊಳು ಬಾಲಭಾನು ಬೆಳವವೊಲು | ಬೆಳೆದಕ್ಷರಾದಿವಿದ್ಯೆಯನು |
ಉಳಿಯದೆ ಕಲಿತೇರುಂಜವ್ವನವನು | ತಳೆದತಿತೇಜವಡೆದನು || ೪೬ ||

ಮರುಕತಮಣಿವರ್ಣಸಮಚತುರಸ್ರಬಂ | ಧುರತರ ವೃಷಭನಾರಾಚ |
ಉರುಶಕ್ತಿಯುತನಾದೇಯಸೌಂದರ್ಯನು | ಚರಮಶರೀರಯೊಪ್ಪಿದನು || ೪೭ ||

ಸ್ಮರನನೂಹಿನ ಬುಧರುತ್ತಮಪುರುಷರ | ನಿರದೆ ವರ್ಣಿಪರು ಪ್ರತ್ಯಕ್ಷ |
ಸ್ಮರನ ನಿನ್ನಾರೊಳೂಹಿಸುವೆನವನ ಸುಂ | ದರತೆಗವನೆ ಸಕ್ಕಸಮನು || ೪೮ ||

ಇಂತೆಸೆವುತ್ತಮರೂಪನು ತಳೆದಾ | ಕಂತುಕುಮಾರ ಚಂದ್ರಮನು |
ಸಂತಸದಿಂ ಸಿದ್ಧಿಮಾಡಿ ತತ್ಪುರಕೆ ಪ್ರ | ಸಿದ್ಧನಾಗಿ ಮುಗುಳಿದನು || ೫೦ ||

ಆ ಜನಪತಿ ಕಾಳಶಂಬರಗೋರ್ವಗ್ನಿ | ರಾಜನೆಂಬವನು ಮಾರ್ಮಲೆತು |
ತೇಜೋಧಿಕನಾಗಿರಲದನರಿದಾ | ರಾಜನಲ್ಲಿಗೆ ಪೋಗಲೆಣಿಸಿ || ೫೧ ||

ಅದನರಿದಾಸ್ಮರನಾತಂದೆಯೆಡೆಗೈದಿ | ಪದಕೆ ನಮಿಸಿಯ ಬೆಸನ |
ಅದರದೆ ಬೇಡಿ ಪಡೆದು ಬಹುಬಲಗೂಡಿ | ಯಧಟಿಂದಾಬಳಿಗೈದಿ || ೫೨ ||

ಅಹವಲಂಪಟನಾ ನಗರಿಯ ಮುಂದೆ | ಮೋಹರಮಾಗಿ ನಿಂದಿರಲು |
ಆ ಹದನರಿಗ್ನಿರಾಜನು ಸೇನಾವ್ಯೂಹ ಸಹಿತ ನಡೆತಂದು || ೫೩ ||

ಇದಿರೊಡ್ಡಿ ಕಾಣುತ್ತವನ ಬಲವನಾ | ಮದನಕುಮಾರ ಸೇನೆ |
ಹುದುಗಿ ತಳ್ತಿರಿವುತ್ತಿರಲದ ಕಂಡಾ | ವಿದಿತ ವಿಕ್ರಮಿಯಗ್ನಿರಾಜ || ೫೪ ||

ಬಲವನೆಲ್ಲವ ಪಿಂದಿಕ್ಕಿ ಮುಂದಕೆ ನಡೆ | ದಲರ್ವಿಲ್ಲನ ಸೇನೆಯನು |
ತಲೆಬಾಲಗೆಡಿಸುತ್ತಿರೆ ಕಂಡಾ ಕ | ಗ್ಗಲಿಯವನಿದಿರಗಲಾಗ || ೫೫ ||

ವಿದ್ಯಾಬಾಣಗಳಿಂದೆಸಲಾ ಪ್ರತಿ | ವಿದ್ಯೆಯಿಂದವನು ಖಂಡಿಸುತ |
ಪ್ರದ್ಯುಮ್ನನೆಚ್ಚನಾತನ ತೇರುಬಿಲ್ಲುಮ | ಭೇದ್ಯಮಪ್ಪಾಕವಚವನು || ೫೬ ||

ವಿರಥನ ಮಾಡಿ ಬಳಿಕ್ಕಗ್ನಿರಾಜನ | ಭರದಿ ಪಿಡಿದು ಕಟ್ಟಿ ಬಳಿಕ |
ವರವಿಜಯಾನಕಮೆಸೆಯಲಾತನ ನಿಜ | ಪುರಕೆಯ್ದಿಯಮಿತವಸ್ತವನು || ೫೭ ||

ಕರಿತುರಗಾದಿಯುತ್ತೆಮಪ್ಪ ರತ್ನವ | ತರಿಸಿಯಲ್ಲಿಂ ಪೊರಮಟ್ಟು |
ತ್ವರಿತದಿನಾ ಮೇಘಕೂಟನಗರಿಗಾ | ಸ್ಮರಕುಮಾರಕೆನೆಯ್ತರಲು || ೫೮ ||

ಅದನರಿದಾ ಕಾಳಶಂಬರನಿದರ್ವಂದು | ಪದಕೆರಗಿದ ಪಂಚಶರನ |
ಪಡೆದಮರ್ದಪ್ಪಿ ಹರಿಸಿ ನಿಜಪುರಕತಿ | ಮುದದಿಂದೊಳಹೊಗಿಸಿದನು || ೫೯ ||

ಪೊಳಲ ಪೊಗುವ ಸಮುದೊಳು ಸಂತಸದಿಂದ | ಬಳಸಿದ ಬಾನವಟ್ಟೆಗರ |
ಬಳಗದ ನಡುವೆಸೆದನು ಕಂತುಕಲ್ಪಜ | ಕುಲದನಡುವಣಿಂದ್ರನಂತೆ || ೬೦ ||

ಪಟ್ಟದ ನಿಜಮದಗಜಮಸ್ತಕವನೇರಿ | ಯಿಟ್ಟಣಿಸಿದ ನೃಪವರರ |
ನಟ್ಟನಡುವೆ ಬರ್ಪಾ ನನೆವಿಲ್ಲನ | ಪಟ್ಟಣವೆಯ್ದಿ ನೋಡಿದುದು || ೬೧ ||

ಎತ್ತ ನೋಡಿದೊಡತ್ತಲೆಡವರಿಯದೆ ಸುತ್ತು | ಮುತ್ತು ನೋಡುವ ಮಡಿದಯರ |
ಚಿತ್ತದೊಳಗೆ ನಿಲಲಾ ಕಂತುವಂದಿಂದ | ಚಿತ್ತಜವೆಸರ ಪಡೆದನು || ೬೨ ||

ಈ ಪರಿ ವಿದಿತವಿಲಾಸವಡೆದ ಪುಷ್ಪ | ಚಾಪನನರಮನೆ ಹೊಗಿಸಿ |
ಆ ಪರಿವೃಢಕಾಳಶಂಬರನುತ್ಸಾ | ಹೋಪೇತಮಾನಸನಾಗಿ || ೬೩ ||

ಉತ್ತಮಮಪ್ಪ ಮುಹೂರ್ತದೊಳತಿ ಮುದ | ವೆತ್ತು ಮಹಾವಿಭವದೊಳು |
ಚಿತ್ತಭವಗೆ ಯುರಾಜಪದವನೊಸೆ | ದಿತ್ತಪನೆಂದಿರದಣಿಸೊ || ೬೪ ||

ಪದಿನಾಲ್ಕು ನದಿಯ ಪಜ್ಜಳಿಪುದಕವ ತೀವಿ | ಮುದದಿಂದ ಮಜ್ಜನಗೊಳಿಸಿ |
ಸದಮಲಮಪ್ಪ ಸಕಲಶೃಂಗಾರವ | ನುದಿತಯಸಗೆ ಮಾಡಿಸಿದನು || ೬೫ ||

ಹಾರ ಮುಕುಟ ಕುಂಡಲ ಕಂಕಣ ಕೇಯೂರಾದಿ | ಚಾರು ವಿಭೂಷಣಮಿಟ್ಟು |
ಮಾರಕುಮಾರನೆಸೆದನೀಕ್ಷಿಪರಕ್ಷಿ | ತೋರೈಸುವ ಮಾಳ್ಕೆಯೊಳು || ೬೬ ||

ಮರಕತವರ್ಣಮದನನೇರಿದ ಮುತ್ತಿ | ನುರುಸಿಂಹಪೀಠಮೊಪ್ಪಿದುದು |
ಹರಿಸದಿ ಬುಧಬಿಂಬವನೆತ್ತಿ ತೆತ್ತಿದ | ವರವಿಂದುಮಂಡಲದಂತೆ || ೬೭ ||

ಇಂತು ಸಿಂಹಾಸನದುಪರಿಯೊಳೆಸೆವಾ | ಕಂತುಕುಮಾರಕುಂಜರನ |
ಸಂತಸದಿಂ ಕಾಂಚನಮಾಲೆ ಕಂಠಿಕೆ | ಯಂ ತಂದು ಕೊರಲೊಳಿಕ್ಕಿದಳು || ೬೮ ||

ಮುತ್ತಿನಹಾರವಿಕ್ಕುವ ಸಮಯದೊಳಾ | ಚಿತ್ತಜನಾಸ್ಯಮೊಪ್ಪಿದುದು |
ಸುತ್ತಿದ ಪರಿವೇಷದ ಮಧ್ಯದೊಳು ಕಾಂತಿ | ವೆತ್ತ ಕಲಾಧರನಂತೆ || ೬೯ ||

ಈ ತೆರದಿಂದ ವಿಲಾಸಮಯನಿರದಾಂ | ತಾ ತುಳಿಲಾಳಂಗಜನ |
ರೀತಿಯ ನೋಡಿ ಬಿಟ್ಟಳು ತಾನವಗೆ ನಿಜ | ಮಾತೆಯೆಂದೆಂಬ ಭಾವನನು || ೭೦ ||

ಅವನ ಮುಖಾಂಬುಜಮವನಕ್ಷಿಕುವಲಯ | ವವನ ಬಾಯ್ದೆರೆಬಂದುಗೆಯೊಳು |
ಅವಳ ಲೋಚನಮೆಂಬ ಜವಳಿದುಂಬಿಗಳತಿ | ಲವಲವಿಕೆಯೊಳೆರಗಿದುವು || ೭೧ ||

ಅವನ ಲಲಿತಲಾವಣ್ಯಾಂಬುವಿನೊಳ |ಗವನಾಸ್ಯಚಂದ್ರಬಿಂಬದೊಳು |
ಅವಳಲೋಚನವಂಬರದ ಚಕೋರಿಯ | ಹವಣಿನೊಳೆರಗಿದುವಾಗ || ೭೨ ||

ಬಿಂಬಾಧರೆ ಬಿಸರುಹಮುಖಿಯಾಮೊಗ | ದುಂಬಿದ ತುರುಗೆವೆಗಣ್ಣ |
ಬೊಂಬೆಗಳಂಗಜನಂಗದೊಳಗೆ ಹಣೆ | ಗೊಂಬಂದದಿ ನೋಡಿದಳು || ೭೩ ||

ಹೊಲ್ಲದ ದೃಷ್ಟಿಯೊಳಗೆ ತನುಜನ ನೋಡ | ಸಲ್ಲದೆಂಬಾ ಭಾವವನು |
ಅಲ್ಲವಮಾಡಿಯಾತುರದಿ ನೊಡದಳಾ ಪುಲ್ಲಾಕ್ಷಿಯಾ ಪುಲ್ಲಶರನ || ೭೪ ||

ನಡುಗುವ ಮೈನವರೇಳುವ ವೈವರ್ಣ | ವಡರಿದ ಮೊಗವೇಳ್ವಬೆಮರು |
ಕಡುಬೆರಗಾದ ಭಾವದಿನಾಬಂಧಕಿ | ನಡೆನೋಡಿದಳಂಗಜನ || ೭೫ ||

ಇಂತು ನೋಡಿ ಮೊರೆಧರ್ಮವೆಂದೆಂಬುದ | ನೆಂತಾನು ಭಾವಿಸಿದವಳು |
ಸಂತಸಪಡಿಸಲಾರದೆ ಚಿತ್ತವನಾ | ಕಾಂತೆ ಶಯ್ಯಾಗೃಹಕೆಯ್ದಿ || ೭೬ ||

ಮಗನೆಂಬ ಭಾವವ ಬಿಟ್ಟು ತಾನವನೊಳು | ಮಿಗಿಲಾಗಿ ಕೂಡುವಿಚ್ಛೆಯನು |
ಬಗೆದಾ ಬಂಧಕಿ ತನ್ನ ಮೆಲ್ಲೆದೆಯನು | ಮುಗುಳಂಬಿಗೆ ಮಾರುಗೊಟ್ಟು || ೭೭ ||

ಇದರಿಂ ನಾರಕಗತಿಯೆಂಬುದರಿಯದೆ | ಇದರಿಂ ಪಿರಿದಪಕೀತಿ |
ಒದಗುವುದೆಂಬುದನರಿಯದೆ ಮೊರೆಗೆಡಯ | ವುದನೆ ಬಗೆದು ಭಾವದೊಳು || ೭೮ ||

ಎಲ್ಲಿಯ ಸುರಲೋಕವೆಲ್ಲಿಯ ಮುಕ್ತಿ ಮ | ತ್ತೆಲ್ಲಿಯ ಸಚ್ಚಾರಿತ್ರ |
ಎಲ್ಲಿಯ ಮೊರೆಧರ್ಮ ತಾನೆಣಿಸಿದ ಸೌಖ್ಯ | ವಲ್ಲದೆಂದೆಣಿಸಿ ಮತ್ತವಳು || ೭೯ ||

ಸವತಿಯರರಿದರೆ ಸಸಿನವಾಗದು ಮೇ | ಲವನಿಪನಿನಿಸು ಕೇಳಿದೊಡೆ |
ಹವಣಿಗೆ ಸಲ್ಲದೆಂದೆಣಿಕೆಯನೆಣಿಸದೆ | ಯುವತಿಕಾತುರಚಿತ್ತೆಯಾಗಿ || ೮೦ ||

ಮನ್ನಣೆಗೆಟ್ಟು ಮಾನಾಪಹರಣದ ಮಾಗಿ | ಯುನ್ನತಮಪ್ಪೆನ್ನ ಬದುಕು |
ತನ್ನ ತಾನೇ ಹೋಹುದಿಂತಿದನರಿದೊಡೆಂ | ದೆನ್ನದೆ ಕೆಟ್ಟೆಣಿಸಿದಳು || ೮೧ ||

ಲಜ್ಜೆದೊರೆದು ಲೆಕ್ಕವ ಮಾಡದತಿದೂರು | ದುರ್ಜನವಹುದೆಂಬುದಕೆ |
ಬೆಜ್ಜರವನು ಮಾಡದೆ ತನ್ನ ತನುವನು | ಸಜ್ಜುಕಸರಗೊಪ್ಪಿಸಿದಳು || ೮೩ ||

ಮಾಸಂಕದ ಮಡಿದಿಯರು ಮನೆಯೊಳುಂ | ಟೋಸರಿಸದೆ ಗುಜ್ಜುಗುರುಕು |
ಆ ಸುದತಿಯರಿಂದಹುದೆಂಬುದನು ಉ | ದಾಸೀನವ ಮಾಡುತವಳು || ೮೩ ||

ತನುಜನೊಡನೆ ಕೂಡುವೆನೆಂಬಾ ದುಷ್ಟೆ | ಮನದೆಗೊಂಡತಿ ವಿರಹದೊಳಗೆ |
ಘನಮಾಗಿ ಬೆಂದು ಬೇವಸದ ಬೇಗೆ | ಯಾವುಗೆಗಿಚ್ಚಾದುದೊಳಗೆ || ೮೫ ||

ಕಡುನೀರೆಯ ಕರಚರಣಪಲ್ಲವವನು | ನಡುವೆಂಬ ನವವಲ್ಲರಿಯನು |
ಬಡಬಾಸೆಯೆಂಬ ತಮಾಲಲತಿಕೆಯನು | ಆಡಸಿತು ವಿರಹಾನಲನು || ೮೬ ||

ಹಿಡಿದು ಸುಟ್ಟಿತು ವಿರಹಾಗ್ನಿ ಕಂಜಾಕ್ಷಿಯ | ತೊಡೆಯ ಕಂಬದ ತೋಳತೊಲೆಯ |
ನಡುವೆನ್ನೆಂಬಮುಚ್ಚುಳ ಹೊಸ ಹಲಗೆಯ | ಒಲಲೆಂಬೊಲುಮೆಯ ಮನೆಯ || ೮೭ ||

ಸ್ಮರರಾಹುವಡಸಿದುದಾ ಮೃಗನೇತ್ರೆಯ | ವರವಟಫಲನಿಭಾಧರೆಯ |
ಸುರುಚಿರಪೀಯೀಷೋಪಮವಾಣಿಯ | ಪರಿಪೂರ್ಣಚಂದ್ರಾನನೆಯ || ೮೮ ||

ಹೆಳೆವ ಮಾವಿನಹಣ್ಣ ಬಯಸಿ ಬರಿದೆ ಹೋದ | ಕುಳಿಗೊಂಬಂತಾ ಕುಲಟೆ |
ಸುಲಲಿತಸತ್ಯಗುಣಾಭರಣಗೆಮನ | ದೆಳಸಿ ಹೊರಳುತ್ತಿರಲತ್ತ || ೮೯ ||

ದಿವಿಜೇಂದ್ರವಿಭವದಿನಾಖೇಚರರುಭೂ | ಧವನತಿಮಮತೆಯೊಳಿತ್ತ |
ಯುವರಾಜಪದವಿಯೊಳಗೆ ನೆರೆನಿಂದಾ | ಭುವನಭುಂಭುಕಲನಂಗಜನು || ೯೦ ||

ಬಳಿಕಗ್ನಿರಾಜನ ಬಂಧನವನು ಬಿಟ್ಟು | ಕಳುಹಿತನ್ನಾ ತಂದೆಗಿರದೆ |
ಆಳುಕದರಸುಗಳ ತಂದಾತನ ಪದ | ತಳಕೆ ಮುಗ್ಗಿಸಿ ಸುಖಮಿರಲು || ೯೧ ||

ಆತನ ಕೀರ್ತಿಯಾತನ ತೇಕವಾತನ | ನೀತಿಯಾತನ ಲಾವಣ್ಯ |
ಆತನ ಚೆಲ್ವಾತನ ಚಾತುರ್ಯದ | ರೀತಿಯ ನೋಡಿ ಸೈರಿಸದೆ || ೯೨ ||

ಮುಳಿಸಿಂದಾಕಾಳಶಂಬರನುಳಿದ ಮ | ಕ್ಕಳು ವಜ್ರದಾಡಾದಿಗಳು |
ಮಲಮಾನಸರೈವರು ಬಂದಾಸ್ಮರ | ನೊಳು ಕಪಟಸ್ನೇಹದೊಳು || ೯೩ ||

ಇಂತಪ್ಪ ಮರುಕದಗ್ರಜತುಂಟೇಯೆಂ | ಬಂತೊಡಗೂಡಿ ಮತ್ತವನ |
ಎಂತಾನುಪರಿಯೊಳು ಕೊಲ್ವವೇಳೆಯ ತಾ | ವಂತರಿಸದೆ ನೋಡುತಿರಲು || ೯೪ ||

ಇತ್ತ ಮನ್ಮಥನ ಕೂಟವ ಹಾರಿಯಾಪಾತ | ಕಿತ್ತಿ ತನ್ನಂಗವನಿರದೆ |
ಹತ್ತಿದವಸ್ಥಾಂತರದೊಳು ಮಿಗೆ ಹೊರ | ಳುತ್ತಿರ್ದಳತಿಗೂಢಮಾಗಿ || ೯೫ ||

ಇದು ಜಿನಪದಸರಸಿಜಮದಮಧುಕರ | ಚುರಮಂಗರಸ ರಚಿಸಿದ |
ಮದನಾರಿನೇಮೀಜಿನೇಶಸಂಗತಿಯೊಳ | ಗಿದು ಪೆದಿನೆಂಟಾಶ್ವಾಸ || ೯೬ ||

ಹದಿನೆಂಟನೆಯ ಸಂಧಿ ಸಂಪೂರ್ಣಂ