ಶ್ರೀಮತಪರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ವಿರಹವೇದನೆಯಿಂದಾದಾಜ್ವರವನು | ಪಿರಿದಪ್ಪರೋಗದಿನಾದ |
ಜ್ವರವೆಂಬ ಮಾತನು ಜನಜನಿತವಮಾಡು | ತ್ತಿರಲಾ ಕಾಂಚನಮಾಲೆ || ೨ ||

ನನೆಯಸರಳನೀರನಾವಾರ್ತೆಯನೋರ್ವ | ವನಿತೆಯ ಮುಖದಿಂದ ಕೇಳಿ |
ಮನದೊಳು ಮರುಕವೆ ತಾಳಿ ವಿಚಾರಿಪೆ | ನೆನುತವಳೆಡೆಗೆಯ್ದುತವೆ || ೩ ||

ಎಲೆ ತಾಯೆ ನಿನಗೇತಕೀ ದಾಹಜ್ವರ | ತಲೆದೋರಿತಿದನುಸುರೆಂದು |
ಮಲುಮಲ ಮರುಗಿ ಮನೋಭವ ಬೆಸಗೊಳೆ | ಕುಟೆಯಿಂತೆಂದಾಡಿದಳು || ೪ ||

ಪಥ್ಯವಲ್ಲದ ಭೋಜನದಿಂದೆನಗೆ ಪ್ರಾ | ಣತ್ಯಾಗಮಪ್ಪಂದದೊಳು |
ಅತ್ಯಂತ ದಹಜ್ವರಮಾಯಿತೆನುತಮ | ಸತ್ಯವಚನನಾಡುತವೆ || ೫ ||

ಇತ್ತ ಬಂದೆನ್ನ ಮೈಯನು ಮುಟ್ಟಿನೋಡೆನ | ಲೊತ್ತಿಗೆ ಬಂದು ನಿಂದಿರಲು |
ಉತ್ತಮಚಿತ್ತ ಚಿತ್ತಜನ ಹಸ್ತವ ತಾ | ನೊತ್ತಿ ಪಿಡಿದು ಕೈಯಿಂದ || ೬ ||

ತರಳನಯನೆ ತನ್ನ ಘನಕುಚಮಧ್ಯದೊ | ಳಿರಿಸಿಯವನ ಹಸ್ತವನು |
ಒರೆದಳಿಂತೆಂದು ಮದನ ಕೇಳು ನಿನ್ನಿಂದ | ದೊರಕಿತು ಪರತಾಪವೆನಗೆ || ೭ ||

ನಿನ್ನ ಸುರತದಿಂದಲ್ಲದೆ ಬದುಕೆನು | ಇನ್ನುಸಂಶಯ ಮಾಡಬೇಡ |
ಚೆನ್ನಿಗ ಕೇಳೆಂಬಾ ನುಡಿಯನು ಕೇಳಿ | ಯುನ್ನತಗುಣಭೂಷಣನು || ೮ ||

ಗರಳಮನುಗುಳ್ವುರಗನ ಘಟದೊಳು ಕೈಯ | ನಿರಿಸಿ ಬೆದರಿ ತೆಗೆವಂತೆ |
ದುರುಳೆಯ ಕುಚುಕುಂಭಯುಗಮದ್ಯದಿಂದಾ | ಸುರುಚಿರಗುಣಿ ಕೈಯ ತೆಗೆದು || ೯ ||

ಮುಂಗಾರು ಮೊಳಗುಗೇಳಿದ ರಾಜಹಂಸನ | ಭಂಗಿಯವೊಲು ಬೆದರಿದನು |
ಸಿಂಗವಸುಳೆ ನಡುವಿನ ಜಾರೆಯ ನುಡಿ | ಗಂಗರಾಜಕುಂಜರನು || ೧೦ ||

ಈಯಂದದಿ ಬೆಜ್ಜರಗೊಂಡು ನುಡಿದನಿಂ | ತಾಯಿನಿವಿಲ್ಲಬಲ್ಲಹನು |
ತಾಯೆ ಕೇಳು ತನುಜನ ಕೂಡಿಂತ | ನ್ಯಾಯದ ನುಡಿಯ ನುಡಿವರೆ || ೧೧ ||

ತಾಯಿಗೆ ತಪ್ಪಿ ಮೋಹಿಸಿದೊಡೆ ಲೋಕಕ | ನ್ಯಾಯವಲ್ಲವೆ ಕಂಡವರು |
ಛೀಯೆನ್ನರೆಯದಕೊಡಬಟ್ಟವರ ಭೂಮಿ | ಬಾಯೆದೆರದು ನುಂಗದಿಹುದೆ || ೧೨ ||

ಕೊರತೆಗಂಜದೆ ಕೊಕ್ಕರಿಸದೆ ಪಾಪಕ್ಕೆ | ಮೊರೆಗೆಟ್ಟು ನಡೆವನೆಂಬರನು |
ಮರೆದು ತೆರೆದು ಮಾತನಾಡುವವರ ಬಾಯಿ | ದೆರೆಯೊಳು ಹುಳುಹುಟ್ಟದಿಹುದೆ || ೧೩ ||

ಕೊಂಡೆತ್ತಿಯಾಡಿದ ತನುವ ತಳೈಸಿ ತಾ | ನುಂಡ ಮೊಲೆಯನೊತ್ತಿಪಿಡಿದು |
ಪೆಂಡಿರಂದದಿ ತಾಯ ಭಾವಿಸಿದೊಡೆ ಬಾಯಿ | ಮಂಡಲ ಹೊರಹಾಕದಿಹುದೆ || ೧೪ ||

ಒಂದು ದೋಷವನು ಕಂಡೊಡೆ ನಿಜಸತಿಯಾದೊ | ಡಿಂದು ಮೊದಲು ನೀನೆನಗೆ |
ನೊಂದು ಹಡೆದ ತಾಯ ಸಮನೆಂದು ನುಡಿದುದ | ರಿಂದ ನಾಡುಗರೊಲ್ಲರವಳ || ೧೫ ||

ಆರೊಬ್ಬರು ಪೆಣ್ಣ ತಹೆನೆಂದು ನೋಡಿ ವಿ | ಚಾರಿಸುವೆಡೆಯೊಳು ತಮಗೆ |
ದೂರದ ನಡೆಂದು ಮೊರಧರ್ಮವಲ್ಲೆನೆ | ತಾರರವಳನದರಿಂದ || ೧೬ ||

ಪ್ರತ್ಯಕ್ಷ ಪೆತ್ತತಾಯಿಗೆ ಮೋಹಿಸಿದೊಡೆ | ಸತ್ಯ ಹೊರತು ಸಾವಡಿಸಿ |
ಅತ್ಯಂತ ದುಃಖಮನನುದಿನಮಿರದುಂಬ | ನಿತ್ಯನಿಗೋದಕೆಯ್ದುವರು || ೧೭ ||

ಅನಿತರಿಂದೆಲೆ ತಾಯೆ ನಿನ್ನ ಸೋಂಕುವುದೆನ | ಗನುಚಿತೆವೆನೆ ಕೇಳು ಮದನ |
ಜನನಿ ನಾ ನಿನಗಲ್ಲ ನಿನ್ನನಗುರ್ವಿಪ | ವನದ ತಸ್ಕರಶಿಲೆಯಲ್ಲಿ || ೧೮ ||

ಕಂಡಾ ಕಾಳಶಂಬರನತಿ ಕರುಣದಿ | ಕೊಂಡು ಬಂದೆನಗೀಯಲಾನು |
ಗಂಡುಗಳರಸ ನಿನ್ನನು ಮರುಕದಿ ಮನ | ಗೊಂಡು ಸಾಕಿದೆನದರಿಂದ || ೧೯ ||

ನೀನೆನ್ನ ಮಗನಲ್ಲವೆಂಬ ಪ್ರತ್ಯಕ್ಷವ | ನಾನು ತೋರುವೆನೆಂತನಲು |
ಈ ನೃಪ ಕಾಳಶಂಬರ ಖಚರನ ಸಂ | ತಾನದೊಳಗೆ ಪುಟ್ಟದವರ್ಗೆ || ೨೦ ||

ಸಲಲಿತವಹ ಪ್ರಜ್ಞಪ್ರಿವೆಸರ ವಿದ್ಯೆ | ಫಲಿಯಿಸದದರಿಂದ ತಮ್ಮ |
ಒಲವಿನ ಸತಿಯರ ವಶಮಾಡಿಯಿರಿಸುವ | ನಿನ್ನ ಸೇರದು ನಿಶ್ಚಯದಿ || ೨೨ ||

ನೀನೆನ್ನ ಮಗನಹುದಲ್ಲವೆಂಬುದಕಿದು | ತಾನೆ ಪ್ರತ್ಯಕ್ಷವೆಂದೆನಲು |
ತಾನಾ ವಿದ್ಯಾರ್ಥಿಯಾದುದರಿಂದಾ | ಮೀನಕೇತನನಿಂತು ನುಡಿದ || ೨೩ ||

ಭೂನುತಮಪ್ಪಾವಿದ್ಯೆಯನೆಲೆ ತಾಯೆ | ನೀನೆನಗೀವುದೆಂದೆನಲು |
ಆ ನುಡಿಗಾತನೊಡಂಬಟ್ಟನೆಂದಾ | ಮಾನಿನಿಯತಿ ವೇಗದೊಳು || ೨೪ ||

ಆನಂದವಡೆದಾ ವಿದ್ಯಾಮಂತ್ರವ | ತಾನುಪದೇಶವ ಮಾಡಿ |
ಈ ನಗದುಪರಿಮದಿಂದ್ರಕ್ಕಿನೊಳತಿ | ಮಾನಿತಮನುವನು ಪಡೆದ || ೨೫ ||

ಸಿದ್ಧಕೂಟಕೆ ಪೋಗಿ ಮತ್ತೀವಿದ್ಯೆಯ | ಸಾಧ್ಯವ ಮಾಡುವುದೆನಲು |
ಉದ್ಧತಸತ್ವನಲ್ಲಿಗೆ ಪೋಗಿ ಮಂತ್ರವ | ಸಿದ್ಧಿಮಾಡುತ್ತಿರಲತ್ತ || ೨೬ ||

ಉಣಲುಡುವುದನು ಮರೆದು ಮೈಗುಂದು ಪೂ | ಗಣೆಯನೆಂದಿಗೆ ಬರ್ಪನೆಂದು |
ಎಣಿಕೆ ಮನದೊಳು ಜೀವನವಾದ ಜಲಜೇ | ಕ್ಷಣೆಯೆಡೆಗೋರ್ವಭಿಜಾತೆ || ೨೭ ||

ಅವಳಂಗವನಾವರಿಸಿದ ತಾಪದ | ವಿವರವನರ೯ಇವೆನೆಂದೆನುತ |
ಸವಿನಯದಿಂದೆಯ್ದಲಿತ್ತಬಾರದೆಂದಾ | ಯುವತಿ ಕರೆದು ಕುಳ್ಳಿರಿಸಲು || ೨೮ ||

ಬೇರುವೆರಸಿ ಬಿಸಿಲೊಳು ಕೀಳ್ತಲತೆಯಂತೆ | ನಾತಿ ನಿನ್ನಂಗವಿದೇನು |
ಕಾರಣದಿಂ ಕುಂದಿಕುಂದಿತೆಂದೆಂಬ ವಿ | ಚಾರವರಿಯಬಾರದೆನಗೆ || ೨೯ ||

ಮುಗುದೆ ನಿನ್ನಯ ಮಿನುಗುವ ಮುದ್ದಮೊಗಮಾ | ಸೊಗಸಿನೊಳಿರದೆ ಸಂಜನಿಸಿ |
ಪೊಗರಡಗಿದ ಚಂದ್ರಬಿಂಬದಂತೊಪ್ಪುವ | ಚಾವರಿಯಬಾರದೆನಗೆ || ೩೦ ||

ಎನಲಿಂತೆಂದಳವಲು ದಾಹಜ್ವರ | ಜನಿಸಿದ ಕಾರಣದಿಂದ |
ಮನದನ್ನಳೆ ಕೇಳೆನ್ನೀ ನಿಜತನು | ವನುಗೆಟ್ಟಿತೆನೆ ನಸನಗುತ || ೩೧ ||

ಈ ದಾಹಜ್ವರವನು ನಿಮಿಷದೊಳಿ | ಡಾಡುವೆ ನೋಡುನೋಡೆಂದು |
ತೀಡಿದಳವಳು ಮೈಯೊಳು ಪೊಪನಿನೀರು | ಗೂಡಿದ ನವಚಂದನವ || ೩೨ ||

ಅದು ಸಣ್ಣಕಲ್ಲ ಪುತ್ತಳಿಯೊಳು ಸೂಸಿದ | ಸದಮಲ ಜಲಧಾರೆಯಾದ |
ಹದಗಂಡವಳೆಂದಳಿದು ದಾಹಜ್ವರ | ಮುದಯಮಲ್ಲೆಲೆ ಲಲಿತಾಂಗಿ || ೩೩ ||

ದಾಹಜ್ವರಮಲ್ಲೆಲೆ ತಂಗಿ ನನ್ನೀ | ದೇಸೂಚನೆಯೊಂದಿರವು |
ಮೋಹರಿಸಿದ ವಿಹಜ್ವರಮಾಗಿದೆ | ಊಹಿಸಿನೋಡೆದೊಡನಗೆ || ೩೪ ||

ಮುಚ್ಚುಮರೆಯಿದೇಕೆನಗೀ ವಿರಹದ | ಕಿಚ್ಚನಿರೀಕ್ಷಿಸಿನೋಡೆ |
ಅಚ್ಚೊತ್ತಿದಂತಿದೆ ನಿನ್ನ ಮೈಯೊಳು ಪಡಿ | ಪುಚ್ಚವೇಕಿದನುಸುರಬಲೆ || ೩೫ ||

ತಂದೆಯಿಂದ ತಾಯಿಂದ ಮೋಹದ ಗಂಡ | ನಿಂದ ಬೆನ್ನೊಡಹುಟ್ಟಿನಿಂದ |
ಸಂದ ನೇಹದ ಸಖಿಯರೆವೆಗ್ಗಳವದ | ರಿಂದ ಕಮಲದಳನಯನೆ || ೩೬ ||

ಕಾಣಿಸೆನಗೆ ಕರೆಮರೆ ಬೇಡಬೇಡವೆ | ನ್ನಾಣೆ ನಿನ್ನಿರವನೆಂದೆಂಬ |
ಪ್ರಾಣಸಖಿಯ ಕೈಯಿಂದ ಚೆನ್ನಾಗಿ ಪ್ರ | ಮಾಣ ಮಾಡಿಸಿಕೊಂಡು ಬಳಿಕ || ೩೭ ||

ಮದನಕುಮಾರನ ಮಧುರಾಕಾರವ | ನೊದವಿ ನೋಡಿದ ಕಾರಣದಿ |
ಚದುರೆ ಕೇಳು ನನ್ನೀ ಮೈಯೊಳಗಿರ | ದೊದವಿತು ಕಡುವಿರಹಾಗ್ನಿ || ೩೮ ||

ಎನೆ ಕೈಯ ಚಿಟುಕನೊತ್ತುತ ಕೆಟ್ಟನೆವ್ವೆನೆಂ | ದೆನುತ ನುಡಿದಳಾ ಕೆಳದಿ |
ಮನುಜೇಶನ ಮಡಿದಿಯರೊಳು ನೀನೆ ಸ | ಜ್ಜನಸಲುಗೆಯ ರಾಣಿವಾಸ || ೩೯ ||

ಕುಲಜಾತಿರೂಪಯವ್ವನಸರ್ವವಿದ್ಯಾ | ಕಲೆಯೊಳು ನಿನಗೆ ವೆಗ್ಗಳದ |
ಲಲನಯರೀ ಮನೆಯೊಳು ನಿನ್ನ ಗಂಡನ | ಪಲಬರುಂಟವರರ್ದಂತೆ | ೪೦ ||

ನಿನಗೆಲ್ಲರರಿಕೆಯೊಳೆರವಿಲ್ಲದೆ ತನ್ನ | ತನುಮನವನು ಮಾರುಗೊಟ್ಟು |
ಘನತರವಹವೆಜಮಾನಪಟ್ಟವನಾ | ಜನಪತಿ ಕೊಡಲದರಿಂದ || ೪೧ ||

ಗಂಡನ ಲೇಸವಾಳಮೈಯೊಳುನೆಲೆ | ಗೊಂಡಿಹುದವಳನಾ ಮನೆಯ |
ಹೆಂಡಿರೆಲ್ಲರು ಕಂಡೊಡೆ ಕಣ್ಣೊಳು ಹೊತ್ತು | ಕೊಂಡಿರಹತಿ ಕಕ್ಕಸದೊಳು || ೪೨ ||

ತವಗೆ ಮುನ್ನಿನ ಪಾಪದಿಂ ಗಂಡನಿಂದಾಯಿ ತವ | ಮನ್ನಣೆಯೆಂಬುದನು |
ವಿವರಸದೆಮ್ಮನೆಲ್ಲರ ಬಾಳುಹೆಡಿಸುವ | ಳಿವಖೆಂಬರಾ ಸವತಿಯರು || ೪೩ ||

ಅವಳು ಮಾಡಿದ ಪುಣ್ಯದ ಫಲದಿಂದೋಪ | ನವಳ ಕೈವಶವಾಗಲದಕೆ |
ಅವಳಾತಗೊಳುಮೆಮದ್ದನು ತಿನಿಸಿದಳೆಂದು | ತಮತಮಗೆಲ್ಲರಾಡುವರು || ೪೪ ||

ಎಂದಿಗಿವಳು ದೋಷಿಯಹಳೊ ಇವಳಿಗಾಜ್ಞೆ | ಯೆಂದೊದಗುವುದೊ ಮತ್ತೆಮಗೆ |
ಚಂದದ ಬದುಕೆಂದಿಗುಹುದೊಯೆನುತ ಚಿಂತೆ | ಯಿಂದರ್ಪರಾ ಮನೆಯವರು || ೪೫ ||

ಅನಿತರಿಂದಾಸಲ್ಗೆವಂತೆಗೊಂದಾನೊಂ | ದಿನಿಸೊದವಿದ ದೋಷವನು |
ಜನಜನಿತ ಮಾಡಿ ಕೆತ್ತಿ ಕೆರಡೆಗೊಂಡು | ಕೊನೆಯದಿಹರೆಸವತಿಯರು || ೪೬ ||

ಎನಲೆಂದಳೆಲೆಸಖಿ ನಾನು ಮಾಡುವ ಜಾತ | ತನವನೀಯರಮನೆಯವರು |
ಇನಿಸರಿದೊಡೆ ನನಗೇತರದೀ ಜಾಣ್ಮೆ | ಯೆನಲವಳಿಂತೆಂದಳಾಗ || ೪೭ ||

ಅರಿಯಬಾರದು ನಮ್ಮಕಳವನೆಂದೇ ಮೈ | ಮರೆದು ಮಾಡುವ ಜಾರತನದ |
ತೆರೆವನನವಳ ಮೈಯೊಳೊಗೆದ ಚೇಷ್ಟೆಯ ಕಣ್ಣು | ದೆರಪು ಮಾಡಿದೆ ಸುಮ್ಮನಿಹುದೆ || ೪೮ ||

ಮನೆಯವರಾರರಿಯರು ನಮ್ಮೀ ಜಾರ | ತನವನೆಂದಸಗಿದ ಕಳವು |
ಅನುಮಾನಿಗಳು ನಮ್ಮೀ ಜಾತಿಯಿಂ ಜನ | ಜನಿತವಾಗದೆ ಸುಮ್ಮನಿಹುದೆ || ೪೯ ||

ಶಶಿಯ ರವಿಯ ಮಾಡಿ ರವಿಯ ಶಶಿಯ ಮಾಡಿ | ಮಿನಿನಿಯಕರ್ಬೊನ್ನ ಮಾಡಿ |
ಪಿಸುಣರು ತೋರಿಸುವರು ನಿನ್ನ ವಿರಹವ | ನಸಿಯಳೆ ಕಾಣಿಸಬೇಡ || ೫೦ ||

ಅಂತದರಿಂ ನಿನ್ನೀ ಕಾರ್ಯಮ ನಿ | ನ್ನಂತರಂಗದೊಳಿರಿಸುವುದು |
ಎಂತಾನುಮತವಲ್ಲೆಂಬ ಕೆಳದಿಯೊಳ | ಗಿಂತೆಂದಾಡಿದವಳವಳು || ೫೧ ||

ನೀನೆನಗೆಂದುದತ್ತಯತ್ತಮವೆಲೆಸಖಿ | ಯೇನಾದೊಡೆನೋ ಮನ್ಮಥನ |
ಮಾನಿತಮಪ್ಪಂಗದೆ ಸೆವನೆಯಾಯಿ | ತ್ರಿನೇತ್ರಪುತ್ರಿಕೆಗಳಿಗೆ || ೫೨ ||

ಪೊಡವಿಗತಾತ್ಯಾಶ್ಚರ್ಯವೆಂದನಿಪಾತನ | ಕಡುಸೊಗಯಿಪ ರೂಪವನು |
ನಡೆನೋಡಿಬಿಡುವುದರಿಂದೀಯಸುವನು | ಬಿಡುವುದು ಲೇಸಬಲೆಯರ್ಗೆ || ೫೩ ||

ಸ್ಮರನಿವಗೆಣೆಯೆಂಬಾ ಕಿವಿವೇಟಕೆ | ಪರಿತಾಪಗೊಂಬಬಲೆಯರು |
ಸ್ಮರನ ರೂಪನು ಪ್ರತ್ಯಕ್ಷ ನಿರೀಕ್ಷಿಸಿ | ಪರಿಹರಿಸಲು ಜೀವಪರೆ || ೫೪ ||

ಎನಲೆಂದಳವಳು ಕಾಂಚನುಮಾಲೆಗೆ ನೀ | ನಿನಿತು ಬಯಸಿ ಬಾಯಾರೆ |
ಮನಸಿಜನವ ಮೊರೆಗೆಟ್ಟ ಚರಿತ್ರವ | ಕನಸಿನೊಳೆಣಿಸುವುದಿಲ್ಲ || ೫೫ ||

ಮಾತುಹೊದ್ದಿದ ಪರಿಸತಿಯನಿವಳು ಹೆತ್ತ | ಮಾತೆಯೆಂದು ಶಪಥವನು |
ನೀತಿವಿದರು ಮಾಡಿಯೊಡಬಡಿಸುವರು ಮ | ಹೀತಳವನು ಮದಿರಾಕ್ಷಿ || ೫೬ ||

ಅನಿತರಿಂದ ಪ್ರತ್ಯಕ್ಷತನಗೆ ಹೆತ್ತ | ಜನನಿ ನೀನಾದ ಕಾರಣದಿ |
ಮನವ ನಿನ್ನೊಳಗಿಕ್ಕುವನಲ್ಲ ಮನಸಿಜ | ನೆನೆ ಬಳಿಕಿಂತೆಂದಳವಳು || ೫೭ ||

ಹರಿಹರಿವಿಧಿ ಮೊದಲಾದರನೆಲ್ಲರ | ನಿರದೆಚ್ಚು ಮೋಹಿಸದಿಹನೆ |
ಇದಕೆ ಸಂಶಯ ಬೇಡಬೇಡವೆಂದೆಂಬಾ | ಮದವತಿಗಿಂತೆಂದಳವಳು || ೫೮ ||

ಅದರಿಂದವನೆನ್ನರೂಪ ನಿರೀಕ್ಷಿಸಿ | ಯೆದೆಗೆಟ್ಟು ಮೋಹಿಸದಿಹನೆ |
ಇದಕೆ ಸಂಶಯ ಬೇಡಬೇಡಬೆಂದೆಂಬಾ | ಮದವತಿಗೆಂತೆದಳವಳು || ೫೯ ||

ಪ್ರಣುತನುತ್ತಮ ಪರತತ್ವವಿಚಾರಿ ಸ | ದ್ಗುಣಿ ಚರಮಾಂಗನಂಗಜನು |
ಬಣಗೆ ನಿನಗೆ ಕೈವಳನಪ್ಪನೆಂಬ ಗು | ಡ್ಡೆಣಿಕೆಯನೆಣಿಸಿ ಹುಚ್ಚ ಹರೆ || ೬೦ ||

ನಾನವಲೋಕಿನೆಯೆಂಬದೇವತೆಯೆನ್ನ | ನಾನನೆವಿಲ್ಲಬಲ್ಲಹನು |
ನಾನಾತೆರೆದಂಕೆಜಂಕೆಯ ಬುದ್ದಿಯ | ನಾನದೆ ತಿಳಿಯಪೇಳೆಂದು || ೬೧ ||

ಅನ್ಯಾಯಕಾತಿ ನಿನ್ನೆಡಗೀ ಸಮಯದೊ | ಳೆನ್ನನಟ್ಟಿದನದರಿಂದ |
ನಿನ್ನ ಸಖಿಯರೂಪ ಕೈಕೊಂಡು ಬಂದೆನ | ನುನ್ನತಮಪ್ಪ ಬುದ್ಧಿಯನು || ೬೨ ||

ಅವಾವತೆರದಿ ಕಾಣಿಸಿ ಪೇಳ್ದೊಡೆ ನೀನು | ಭಾವಿಸಿತಿಲ್ಲದರಿಂದ |
ಓವದೆ ನಿನಗೆ ಕೇಡೊದಗುವುದೆಂದಾ | ದೇವಿ ಪಡೆದಳದೃಶ್ಯತೆಯ || ೬೩ ||

ಅನಿತರೊಳತ್ತಲನನ್ಯಜನಾಜನ | ವಿನುತಮಪ್ಪಾ ವಿದ್ಯೆಯನು |
ಮನದೆಗೊಂಡು ಸಾಧಿಸಿಯಾಶಿಕರಿಯ | ಜಿನಭವನಕೆ ನಡೆತಂದು || ೬೪ ||

ಕರಕಮಲಂಗಳ ಮುಗುದಾಭವನಮ | ನುರುಮುದದಿಂ ಮೂರುಸೂಳು |
ತಿರುಗಿ ವಿನುವಿಮಿತನಾಗಿಯನಘನ | ಚರಣಾರುಣಪಂಕಜಕೆ || ೬೫ ||

ಜ್ಞಾನಾಂಬುಧಿಚಂದ್ರರೆಂಬ ಮುನಿಯ ಕಂಡು | ಸಾನುರಾಗದೊಳಡಿಗೆರಗಿ |
ತಾನಾತಮಗನೆಂಬ ವಿವರವ ಕೇಳಿ ಮ | ತ್ತಾನಗರಿಗೆ ನಡೆತರಲು || ೬೬ ||

ಅಂತದನರಿದು ಕಾಂಚನಮಾಲೆ ಮತಿಗೆಟ್ಟು | ಕಂತುವನೊಲಿಸುವೆನೆಂಬ |
ಭ್ರಾಂತಿಯಿಂ ಸರ್ವಾಭರಣಭೂಷಿತೆಯಾಗಿ | ಸಂತೋಷದ ಚಿತ್ತದಿಂದ || ೬೭ ||

ಸಲಲಿತಗುಣಿ ಸಮನೋಮಾರ್ಗಣನಿರ್ದ | ನಿಲಯಕಿರದೆ ನಡೆತಂದು |
ತಳುವದೆ ನೀ ಬೇಡಿದಿಚ್ಛೆಯನಿತ್ತೆನು | ಉಳುಹು ನೀನಿನ್ನ ಜೀವವನು || ೬೮ ||

ಮನಸಿಜ ನಿನ್ನಮಾರ್ಗಣೆಗಳು ಬಂದೆನ್ನ | ತನುವ ತುಟ್ಟುರ್ಚಿ ವೇದನೆಯ |
ಘನಮಾಡುತಲಿವೆಯುಳಿಯದಂತದರಿಂ | ಮನದೆಗೊಂಡೆನ್ನೊಳು ಕೂಡು || ೬೯ ||

ಎಂದು ನುಡಿದ ಕಲಟೆಯ ನುಡಿಯನು ಕೇಳಿ | ತಂದು ಕಿವಿಗೆ ಕರಯುಗವ |
ಮುಂದೇತರಸತ್ಯಗುಣಭೂಷಣನಿಂ | ತೆಂದನುತ್ತಮಮಪ್ಪ ನುಡಿಯ || ೭೦ ||

ಪರಿಸತಿಯರ್ಗಾಟಿಸಿದ ಮನುಷ್ಯರ್ಗೆ | ಸಿರಿಹಾರಿಯಾಯುಷ್ಯವರತು |
ಉರುತರಮಪ್ಪ ವಿಕ್ರಮ ಬೀತು ಕುಂಛೀ | ನರಕವಹುದು ನಿಶ್ಚಯದಿ || ೭೧ ||

ಪಾದರಕೆಂದು ಪಣ್ಗಳನೊಲವಿಂ ನೋಡಿ | ಯಾದರದಿಂ ನುಡಿಸಿದೊಡೆ |
ಭೂದೇವತೆ ಪೇಸವಳು ಸುತ್ತೊಡವರು ನಿ | ಗೋದಮನಿರದೈದುವರು || ೭೨ ||

ಗಂಡರು ಕಂಡೊಡಿರಿದು ಕಾಲಕಟ್ಟಿ ಭೂ | ಮಂಡಲಕೆಳೆದು ಹಾಕುವರು |
ದಂಡವಕೊಂಬ ನೃಪತಿಯದರಿಂ ಪರ | ವೆಂಡಿರಿಗೆಳಸಲುಬಹುದೆ || ೭೩ ||

ಬೇಡ ಜನನಿಯರಿದೊಡೆ ಘನಘಟಿತವ | ಮಾಡುವ ಮನದ ಮಚ್ಚರದ |
ಗಾಡಿಕಾತಿಯರುಂಟದರಿಂದೀ ಮಾತ | ನಾಡುವೆನೆಂದೆಂಬೆಣಿಕೆ || ೭೪ ||

ತನುಜರಾಗಲಿ ತನ್ನೊಡಹುಟ್ಟಾಗಲಿ | ಇನಿತುದೋಷಮನವರೊಳಗೆ |
ಕನಸುಮನಸಿನೊಳು ಕಂಡು ಸೈರಿಸುವರೆ | ಜನನಿ ಕೇಳಭಿಮಾನಿಗಳು || ೭೫ ||

ಅರಸರಿಸೊಡೆಯಾಜ್ಞೆಯನುರೆಮಾಡದೆ | ತರಹರಿಸುವನಲ್ಲವದರಿಂ |
ಹರಣದ ಮೇಲಣ ಸರಸವೆಂದೆಂಬಾ | ಅರಲಂಬಗಿಂತೆಂದಳವಳು || ೭೬ ||

ಒಂದು ಸಮಯದೊಲ್ಮೆಗರೊಳು ಸಮಸುಖ | ದಿಂದ ಕೂಡಿದ ಕೂಡದಿನಿತು |
ಮುಂದಣ ಭವದ ಸಗ್ಗದ ಸಾಸಿರಸುಖ | ದಂದವಲ್ಲದೆ ಮೋಹಿಗಳಿಗೆ || ೭೭ ||

ಕಡುಮೋಹಿವೆಣ್ಗೆದೆಯೆ ಮೇಲಳಿದಾ | ಉಡುಪತಿಮಂಡಲದೊಡಲ |
ಒಡೆದು ಮೋಹನಮುಕ್ತಿವಡೆವರೊಲ್ಮೆಗರೆಂಬ | ನುಡಿವಾಗಮನ ಕೇಳ್ದರಿಯ || ೭೮ ||

ಅತಿರೂಪಧಿಕಲಾವಣ್ಯಯವ್ವನರಿಸಿ | ಕತೆವೆತ್ತೊಲುಮೆಗಾತಿಯರು |
ಪುತಿಯಿತ್ತು ಮೇಲಿಕ್ಕುವದದು ತಾನೆಯು | ನ್ನತ ಮೋಹಮುಕ್ತಿ ಜೀವರಿಗೆ || ೮೦ ||

ದೇಹವಿಡಿದು ದೇಹವಳಿದಿಹ ಪರಮುಕ್ತಿ | ಯೂಹಿಸೆ ಮೋಹಿಗಪ್ಪಂತೆ |
ದೇಹವಳಿದು ಪರಮುಕ್ತಿವಡೆವಮುಕ್ತಿ | ಮೋಹಿಗಿಹದಸುಖವುಂಟೆ || ೮೧ ||

ಅಂತದರಿಂ ಮೋಹಿಗಳಿಮ್ಮೈಸಿರಿ | ವಂತರ ವರಮಾರ್ಗವನು |
ಭ್ರಾಂತಿಂ ಬಿಟ್ಟೊಡವರಿಗಿಹಪರಗತಿ | ಯೆಂತೆನು ಬಿಟ್ಟುಪಾರುವುದು || ೮೨ ||

ಎಡಹಿಹಡೆದ ಚಿಂತಾರತ್ನವನು ಕೈ | ಬಿಡುವೆಗ್ಗರಂದುವಡೆವರು |
ಕಡುನೀರೆಯವರು ತಮ್ಮ ತಾಮೆಯೊಲಿದು ಬಂ | ದೊಡಗುಡದೆ ಬಿಡುವರು || ೮೩ ||

ಎಂದವಳೆಸುಪತಿಯೊಳೊಡಬಡಿಸಲು | ಸಂದೇಹವ ಬಿಡು ಜನನಿ |
ಮುಂದಣಗತಿಯ ಕೆಡಿಸಿಕೊಂಬೆನೆ ನಾ | ನೆಂದವನೇಳ್ವವೇಳೆಯೊಳು || ೮೪ ||

ಎನ್ನ ಕೈಯಿಂದ ಬಲ್ವಿದ್ಯೆಯನೀಸಿಕೊಂ | ಡಿನ್ನು ಸುಮ್ಮನೆ ನೀನಿಹುದು |
ನನ್ನಿಯ ಪೇಳೆಂಬ ಜಾರೆಗೆ ಸದ್ಗು | ಣೋನ್ನತನಿಂತೆದಾಗ || ೮೫ ||

ಎಲೆ ತಾಯೆ ನಿನ್ನ ವಿದ್ಯೆಯನು ಬೇಡಿದನಯಸೆ | ಯೊಲಿವೆನೆಂದನೆ ನಾನು ನಿನಗೆ |
ನೆಲೆಹೊರದೀಮಾತಿಗಾನೊಡಂಬಟ್ಟೊಡೆ | ಫಲಿಸುವುನೇಳ್ವವೇಳೆಯೊಳು || ೮೭ ||

ಕಾಣರು ಕಣ್ಣಮೋಹಿಗಳೆಂಬರಮಾತ | ನೇಣನಯನೆಯುಂಟುಮಾಡಿ |
ಪ್ರಾಣವನುಳುಹೆಂದು ಬಮದು ಹಿಡಿದಳಾ | ಬಾಣಪಂಚಕನ ಸೆರಗನು || ೮೮ ||

ಬಿಡಬಿಡು ಬೇಡ ಬೀಡಡಿತನದಿ ಬಂದು | ಹಿಡದ ಸೆರಗನೆಂದೆನುತ |
ನುಡಿದುಯ ನಿಜ್ಜಾಡಿಸಿ ನಿಲ್ಲದಲ್ಲಿಂ ಪೊರ | ಮಡಲಡಿಯಿಡುವೆನೆಂಬಗ || ೮೯ ||

ನಡೆಯಬಾರದ ತೆದಿಂದ ಕಾಲ್ಗಳ ಹಿಡಿ | ದಡಿಗೆರಗಿದ ಪಾಣ್ಬೆಯನು |
ಕೆಡಿಕನಾಗರು ಸುತ್ತಿದ ಕಾಲನೊದರ್ವಂತೆ | ಜಡಿದೊದರಿದನಾಕುವರ || ೯೦ ||

ಒದರಿದ ಭರವಸಕಾ ಬಂಧಿಸಿದ ಮುಡಿ | ಕೆದರಿದುದಾಬಂಧಕಿಯ |
ಒದವಿ ಮಡಿಲುಗಟ್ಟಿದಪಕೀರ್ತಿವಲ್ಲರಿ | ಹೋದರುಗೆದರುವಂದದೊಳು || ೯೧ ||

ಬಳೆಗಳೊಡೆದು ಬಲುಮಣಿಯ ಮುತ್ತಿನಹಾರ | ದೆಳೆಕಿತ್ತು ಸಡಿಲಿ ಕೀಲುಗಳು |
ಕಳೆದು ಕಂಕಣವುರುಳ್ವುದ ಕಂಡು ಕೆಕ್ಕಳ | ಗೆಳಲಿಯೆದೆಯ ತಟ್ಟಿಕೊಂಡು || ೯೨ ||

ಸೈರಿಸು ನಿನಗೆ ತಕ್ಕುದ ಮಾಳ್ಪೆನೆಂದು ಕು | ಮಾರ ಚಂದ್ರನನೇರಲಿಳಿಯ |
ಆ ರಾಹುಗಣ್ಣಿಂದೀಕ್ಷಿಸಿ ಬಳಿಕಾ | ಜಾರೆ ಪಂಥವ ಮಾಡಿಕೊಂಡು || ೯೩ ||

ಎನ್ನ ವಂಚಿಸಿಯೆನ್ನ ವಿದ್ಯೆಯನೀಸಿಕೊಂ | ಡೆನ್ನನಶ್ಲಾಘ್ಯವ ಮಾಡಿ |
ಮನ್ನಣೆಗೆಡಿಸಿದೆಯಲ್ಲ ನಿನಗೆ ನಾ | ನಿನ್ನು ತಕ್ಕುದನೆಣಿಸುವೆನು || ೯೪ ||

ಎಲವೊ ನಿನ್ನಸುಗೊಳ್ಳಸೊಡಾನು ಹೊತ್ತವು | ಮೊಲೆಯೆಯೆಕ್ಕೆಯಕಾಯ್ಗಳೆಂದು |
ಎಲೆಟೆನುಡಿಯಂತೇಗೆಯ್ಯಿಮೆಂದಾ | ಛಲದಂಕನು ಪೋದನಿತ್ತ || ೯೫ ||

ವಿರಹವೇದನೆಯಿಂದಾದಾ ಕಿಚ್ಚನೊ | ಳುರುತರಕೋಪಾನಲನು |
ಬೆಸಲಿಮ್ಮಡಿಗಿಚ್ಚಿನಿಂದವಳಪುಷ್ಪ | ಶರಗೆಯಪಾಯವನೆಣಿಸಿ || ೯೬ ||

ಹಾರವ ಹರಿದು ಕೇಶವ ಕೆದರಿಸಿ ಸೀಳಿ | ಸೀರೆಯನಾ ಬಳೆಯೊಡೆದು |
ಜಾರಾಕಾರವ ಕನ್ನಡಿಪಂದದಿ | ಜಾರೆ ಬರೆದುಕೊಮಡು ಮೆಯ್ಯ || ೯೭ ||

ಈ ತೆರದಿಂ ತನ್ನ ತನುವ ಕೆಡಿಸಿಕೊಂಡು | ಪಾತಕಿ ಮನೆಯೊಳಿರ್ದು |
ಮಾತೇನವನ ಕೊಲಿಸದೊಡೆ ನನಗಿ | ನ್ನೇತರ ಬಾಳುವೆಯೆಂದು || ೯೮ ||

ಇರಲಲ್ಲಿಗೆ ಕಾಳಶಂವರ ಖಗಪತಿ | ಬರುತೇನುಕಾರಣದಿಂದ |
ಗರುವೆ ನಿನ್ನಯ ಕೋಮಲ ತನು ಕೊರಗಿದ | ಪರಿಯನೆನ್ನೊಳು ತಿಳಿವಂತು || ೯೯ ||

ಒರೆಯನಲಾ ನುಡಿಗೇಳಿ ಗದ್ಗದಕಂ | ಧರೆಯಾಗಿ ನುಡಿದಳಿಂತೆಂದು |
ಪಿರಿದುವಿಚಾರದಿನಾ ವಿಪಿವನ ತ | ಸ್ಕರಶಿಲೆಯೆಡೆಯೊಳು ಬೀಳ್ದು || ೧೦೦ ||