ಬಂದು ಯಶೋಧೆಯಿದೆಲ್ಲಿಯ ಬಲುಮಿಳ್ತು | ವೆಂದು ಸಿಸುವನೆತ್ತಿಕೊಂಡು |
ಇಂದಿಗೆರಡು ಕಂಟಕ ಹಸುಳಿಗೆ ತಪ್ಪಿ | ತೆಂದತಿ ಸಂತಸದಿಂದ || ೭೬ ||

ಎನ್ನ ದೇವತೆ ಕೃಷ್ಣಯಕ್ಷಿಯ ಕರುಣವೆಂ | ಬುನ್ನತವಹ ವಜ್ರಕವಚ |
ಎನ್ನ ಶಿಶುವಿನಂಗಕುಂಟೆಂದು ನಿಶ್ಚಯ | ವಂ ನೆರೆಮಾಡಿಕೊಂಡರಲು || ೭೭ ||

ಉರುಳಿಟ್ಟಂಬೆಗಲಿಸಿ ದಟ್ಟಡಿಯಿಟ್ಟು | ಪರಿದಾಡುವ ಸಮಯದೊಳು |
ಉರುತರಕೋಪದಿ ಕೌಶಂಬಿಯೆಂಬ ನ | ಷ್ಠುರಮಪ್ಪ ರಕ್ಕಸಿಯೈದಿ || ೭೮ ||

ರಾಸಭರೂಪಧರಿಸಿ ಪರಿಪರಿದು ಕ | ಟ್ಟಾಸುಮಾಗಿ ಘೋಷಿಸುತ |
ಓಸರಿಸದೆ ಕಚ್ಚಿಕೊಲುವೆನುತ ಬರ | ಲಾ ಸಿಸುವಂತದ ಕಂಡು || ೭೯ ||

ಭರದಿಂ ಕಚ್ಚುವೆನೆಂದು ತೆರೆದತುಟಿ | ಎರಡನೆರಡು ಕರದಿಂದ |
ಎರಡು ಹಸುಗೆಯಪ್ಪಂದದಿ ಸರ್ರನೆ | ಉರುಕೋಪದಿಂದ ಸೀಳಿದುದು || ೮೦ ||

ಸೀಳಿಹಕಲೊಡನಾ ಬಲುರಾಸಭ | ಗೋಳಿಡುತಂದದೃಶ್ಯತೆಯ |
ತಾಳಿಪೋಗಲು ಕಂಡಚ್ಚರಿಯನು ಗೋ | ಪಾಲೆರೆಲ್ಲರು ಮಾಡಿದರು || ೮೧ ||

ಇಂತು ರಾಸಭರಾಕ್ಷಸಿಯನು ಮರ್ದಿಸಿ | ಸಂತತಮಾ ಕೇಶವನು |
ತಿಂತಿಣಿಗೊಂಡ ಗೋಪುರ ಮಕ್ಕಳೊಡನೆ ನಿ | ಶ್ಚಿಂತದಿಂದಾಡುತಮಿರಲು || ೮೨ ||

ಪೊಮಗವಡಿಕೆ ಸಿಂಗದುಗುರಡೆ ವಣಿಗೆಜ್ಜೆ | ಮಾಂಗಾಯಿ ಬಂದಿ ಬೆಂಡೋಲೆ |
ಸಿಂಗಾರಮಾಗಿ ಮತ್ತಾಬಾಲಕೇಶವ | ನಂಗಣದೊಳಗಾಡುತಿರಲು || ೮೩ ||

ಬೇರು ಮೇಲಾಗಿ ಬಲ್ಮರಗಳನೆಗ್ಗೊತ್ತಿ | ಕೇರಿಕೇರಿಯ ಮನೆಗಳನು |
ಮಾರಿ ಹೊಕ್ಕಂದದಿ ಮರಿದೆಲ್ಲೆಡೆಯೊಳು | ಚಾರಿವರಿವುತೈತೆಂದು || ೮೪ ||

ಪೃಥುಕಿಯೆಂಬಾರಕ್ಕಸಿಯಾಸುರಮಪ್ಪ | ರಥರೂಪವನ ಕೈಕೊಂಡು |
ಮಥಿಸುವೆ ವೈರಿಯನೆಂದು ಮುನಿದು ಮುರ | ಮಥನನಲ್ಲಿಗೆ ನಡೆತರಲು || ೮೫ ||

ಇಟ್ಟೆಡೆಯೊಳು ಸಿಲುಕಿದ ಬಾಲಕೃಷ್ಣನು | ಕೆಟ್ಟೆವು ಕೆಟ್ಟೆವೆಂದೆನುತ |
ಕಟ್ಟುಮ್ಮಳದಿ ಗೋಳಿಡುತಾಗಲಾತುರು | ಪುಟ್ಟೆಯ ಗೋಪಿಯರಿರಲು || ೮೬ ||

ಕಟ್ಟುಗ್ಗರದೊಳಿಂತು ಮೇಳ್ವಾಯ್ವಶಕಟವ | ಹಿಟ್ಟಿನ ಬಂಡಿಯನೊದೆದು |
ನೆಟ್ಟನೆ ಮುರಿವಂತೆ ಪದತಳದಿಂದಾ | ದಿಟ್ಟನೊದೆದು ನೂಕಲಾಗ || ೮೭ ||

ಅಚ್ಚು ಮುರಿದು ಮೂಕುಗಡುಗಿರಿದಾಗುಂಬ | ನುಚ್ಚುನೂರಾಗಲಾ ಶಕಟ |
ಬೆಚ್ಚಿದಂದದಿ ಮಾಯವಾಗಿ ಪೋಗಲಾ ಕಂ | ಡಚ್ಚರಿಯನು ತಾಳ್ದರೆಲ್ಲ || ೮೮ ||

ಕಕ್ಕಸದಿಂ ಬಂದಾ ಶಕಟನ ನೆಲ | ಕಿಕ್ಕಿ ಬಳಿಕ ನುಡಿಗಲಿತು |
ಮಕ್ಕಳ ಮಾಣಿಕಮಾತನ್ನ ಪಾಟಿಯ | ಮಕ್ಕಳೆಲ್ಲರ ಕೂಗಿಕೊಂಡು || ೮೯ ||

ಕರೆವ ಗೋಪಿಯರಲ್ಲಿಗೆ ಪೋಗಿಯಂಟೆಯ | ಹರಿದುಕೊಂಡಾ ಹಾಲಸುರಿದು |
ಎರಕದಿ ತನ್ನೊಡನಾಡುವ ಮಕ್ಕಳಿ | ಗೆರೆದು ಮುಂದಕೆ ಪೋಗುತಿಹನು || ೯೦ ||

ಒಡನಾಡುವ ಮಕ್ಕಳ ಹೆಗಲನು ಮೆಟ್ಟಿ | ಹಿಡಿದು ನೆಲಹಿನೊಳಗಿರ್ಪ |
ಮಡಕೆಯ ಬೆಣ್ಣೆಯ ಮೆದ್ದಾಸತಿಯರು | ಹಿಡಿಹಿಡಿಯೆನಲೋಡುತಿಹನು || ೯೧ ||

ಕಡೆಗೋಲಿಂದ ಬಡಿಯಲದಕಳುಕದೆ | ಹಿಡಿದು ಗೋಪಿಯರನು ನೂಂಕಿ |
ಕೊಡದೊಳಗಣ ಮೊಸರನು ಮಕ್ಕಳಿಗೆ ಸೂರೆ | ಗೊಡುತಿರಲವರಿರದೆಯ್ದಿ || ೯೨ ||

ಎಲೆ ಗೋಪಿ ನಿನ್ನ ಮಗನ ದೆಸೆಯಿಂದಮ್ಮ | ಕಲತಿಯ ಮೊಸರು ಬದುಕುದು |
ನೆಲಹಿನ ಬೆಣ್ಣೆಯುಳಿಯದಾ ಕಾವಕಂ | ದಲ ಹಾಲು ಹಾಳಾಗಿಹೋಯ್ತು || ೯೩ ||

ತನ್ನೊಡಲನು ತುಂಬಿಸಿಕೊಂಬುದಲ್ಲದೆ | ತನ್ನೊಡವಂದ ಮಕ್ಕಳಿಗೆ |
ಚೆನ್ನಾಗಿ ಮೆಲ್ಲಿಮೆನುತ ಸೂರೆಗುಡುವುದ | ನಿನ್ನು ಸೈರಿಸುವವರಲ್ಲ || ೯೪ ||

ಬೇಡ ಯಶೋಧೆ ಮೊಲೆಯ ಕೊಡಯ ನಿನ್ನೀ | ಕೇಡಾಳಿ ಕೇಶವಗೆನಲು |
ಕೂಡೆ ಪರಿದುಬಂದು ಹಸುಳೆಯನೆತ್ತಿ ಮು | ದ್ದಾಡಿಸಿ ಮೊಲೆಗೊಟ್ಟಳಾಗ || ೯೫ ||

ಮತ್ತೆ ಮನೆಗೆ ಕೊಂಡುಪೋಗಿ ಬೆಣ್ಣೆಯ ಮುದ್ದಿ | ಯಿತ್ತು ಕೆನೆಯ ಮೆಲ್ಲಗೊಟ್ಟು |

ಅತ್ತಿತ್ತ ಹೋದಡೆ ಹೊರದೈವಗಳು ಕ | ರುತ್ತು ಮುಸುಕುವುವು ನಿನ್ನ || ೯೬ ||

ಅನಿತರಿಂದೀ ಮನೆಯೊಳಗಿರು ಎಂಬಾ | ಜನನಿಯ ಮಾತನು ಮೀರಿ |
ವನಕರಿಕಳಭನಂದದಿ ಪೊರೆಮಡೆ ಬೆ | ನ್ನನೆಬಂದು ಪಿಡಿದೆಳದೊಯ್ದು || ೯೭ ||

ಕಲ್ಲೊರಳೊಳು ಹಗ್ಗವಿಟ್ಟು ಕಾಲನು ಕಟ್ಟ | ಲುಲ್ಲಾಸದಿಂದ ಕಿಳ್ತು |
ಎಲ್ಲರಚ್ಚರಿವಡುವಂತೆಳೆದಸುರರ | ಮಲ್ಲನಂಗಣಕೆ ಬರ್ಪಾಗ || ೯೮ ||

ಅರ್ಜುನಿಯೆಂಬ ದೇವತೆಯಾಸುಕುಮಾ | ರಾರ್ಜುನನನು ಕೋಪದಿಂದ |
ನಿರ್ಜೀವಮಾಡುವೆನೆಂದೊಂದೆಡೆಯೊಳ | ಗರ್ಜುನರತುಯುಗಮಾಗಿ || ೯೯ ||

ಕವಡಿಯ ನೆಟ್ಟಂದದಿ ಬೆಳೆದಾ ಕೆ | ಶವನಲ್ಲಿ ನಡೆದ ವೇಳೆಯೊಳು |
ಜವನದಾಡೆಗಳಂ ತಿರುಂಕಿ ಬೇಗದಿ ಕೊ | ಲ್ಲುವೆನೆಂಬಾ ಸಮಯದೊಳು || ೧೦೦ ||

ಎರಡು ತೋಳಿಂದ ಹಿಗ್ಗಿಸಿ ಯತಿಭರದೊಳು | ಕರದಿಂ ಕಿಳ್ತೀಡಾಡೆ |
ಧರೆಯದಿರ್ವಂತೆ ಗೋಳಿಡುತ್ತಾ ಮತ್ತಿಯ | ಮರಮಾಯಮಾಯ್ತು ಬೇಗದೊಳು || ೧೦೧ ||

ಈ ಪರಿಯಾ ರಕ್ಕಸಿಯ ಬಿಟ್ಟೋಡಿಸಿ | ಗೋಪಾಲಸುತರೊಡಗೂಡಿ |
ಆ ಪೋಳ್ತು ಬಾಲಕ್ರೀಡೆಯೊಳೊಲವಿಂ | ದಾ ಪದ್ಮನಾಭನೊಪ್ಪಿದನು || ೧೦೨ ||

ಹಾಲುಂಡ ಸೊಕ್ಕಿನೊಳಗೆ ಹರಿದಾಡುವ | ಬಾಲಕರೇಣುವಂದದೊಳು |
ಲೀಲೆಯಿಂದಾ ತುರುಪಟ್ಟೆಯಂಗಣದೊಳು | ಬಾಲಕೇಶವ ಬಂದು ನಿಲಲು || ೧೦೩ ||

ತಾಳಜಂಘೆಯೆಂಬ ದೇವತೆ ಬಂದೊಂದು | ತಾಳ ತರುವಿನಂದವನು |
ತಾಳಿಯಾಕಸ್ಮಿಕದಿಂ ಬೆಳೆದವನನು | ಕಾಲನಾಲಯಕೆಯ್ದಿಸುವೆನು || ೧೦೪ ||

ಎಂದು ಸುಂಟುರುಗಾಳಿಗೆ ಬೀಳುವ ಪಣ್ಗ | ಳಂದದಿ ಹಿಡಿಗುಂಡುಗಳ |
ಅಂದವಡೆದು ಕರೆಯಲು ಕಂಡಾ ಗೋ | ವಿಂದನು ಕಡುಮಿನಿಸಿಂದ || ೧೦೫ ||

ಎಡಗಾಲೊಳಗೊಡೆಯಲು ತಾಳು ಮೇಲಾಗಿ | ಕೆಡೆದು ಮುಂದರಿಯದೆ ಬಂದು |
ಕೆಡಿಕನ ಕೆಣಕಿನೆನೆಂದು ಪಿರಿದು ಗೋ | ಳಿಡುತದೃಶ್ಯತೆವೆತ್ತುದಿತ್ತ || ೧೦೬ ||

ಕೇರಿಕೇರಿಗೆ ಹೋಗಿ ಕೆಣಕಿ ಮಕ್ಕಳ ಮಂಡೆ | ಬೋರೆ ಹೋಹಂದದಿ ಹೆಟ್ಟಿ |
ಹೋರಿ ಬಳಿಕ ಗುದ್ದಿಯಾಡುವುದಾ ಬಾಲ | ನಾರಾಯಣಗು ಲೀಲೆ || ೧೦೭ ||

ಮರೆಯೊಳು ಬಂದು ಮಕ್ಕಳ ಗರ್ದುಗವ ಹಾಲು | ಪರೆಯೆಂದು ಬಾಚಿ ಹಿಡಿಯಲು |
ಹೆರನೂಂಕಿ ಬಳಿಕ ಕೈಯಿಂದ ಸುಲಿವನಾವ | ದುರುದುಂಬಿಯ ಬಾಲವಿಷ್ಣು || ೧೦೮ ||

ಕಕ್ಕಸದಿಂದ ಕಡಿವ ಚಿವುಟುವ ನುಗು | ರಿಕ್ಕುವ ಹಿಸಿವಹೆಟ್ಟುವನು |
ಚಿಕ್ಕವರುಗಳನೆಲ್ಲರನೇನುವಿಕರಿಯೊ | ಮಕ್ಕಳಾಟದೊಳು ಮಾಧವನು || ೧೦೯ ||

ಬಾಸುಳೇಳ್ವಂತೆ ಬಡಿವ ತಡೆಗಾಳ್ವಯ್ದು | ಓಸರಿಸದೆ ಕೆಡಹುವನು |
ಗಾಸಿಮಾಡುವನು ಮಕ್ಕಳನೇನು ಕೆಡಿಕನೊ | ಕೂಸಾಟದೊಳು ಕೇಶವನು || ೧೧೦ ||

ಈ ಪರಿಯಿಂ ಪರಿಮರೆಯಾಡುತಾ ಬಾಲ | ಗೋಪಾಲನಿರಲೊಂದು ದಿವಸ |
ಕೋಪದಿ ಕೇಸರಿಯೆಂಬ ದೇವತೆಮ | ತ್ತಾ ಪಳ್ಳಗಿರಿದೆಯ್ತಂದು || ೧೧೧ ||

ತುರಗರೂಪವನಾಂತು ತುರುಪಟ್ಟೆಯೊಳಗರೆ | ಬರನೊದೆದರೆಬರಕಚ್ಚಿ |
ಅರೆಬರ ಖುರಪುಟದಿಂ ಕೊಲುತಾ ಚಾರಿ | ವರಿದಾಡಿ ಪೋಗುತಿರಲಾಗ || ೧೧೨ ||

ಬೆಚ್ಚಿ ಗೋವಳೆರೆಲ್ಲ ಮನೆಯ ಕದಂಗಳ | ಹೊಚ್ಚಿಕೊಳಲು ನಡೆತಂದು |
ನಿಚ್ಚಟಗಲಿ ನೀಲವರ್ಣನಡೆಗೆ ಬಂದು | ಕಚ್ಚುವೆನೆಂದು ಕೋಪದೊಳು || ೧೧೩ ||

ಒತ್ತಿ ಬಿಟ್ಟಾಬಾಯನು ಕಂಡು ಭರದಿ ಕ | ರುತ್ತು ತಿವಿದ ಕರಶಾಖೆ |
ನೆತ್ತಿಯೊಳಗೆ ಮೂಡಲಾ ಕುದುರೆಗೆ ಕಿವಿ | ಮತ್ತೊಂದು ಮೂಡಿದಂತಾಯ್ತು || ೧೧೪ ||

ಅಂತಾದ ಮೊಗವ ಹಿಡಿದು ಕಡುಪಿಂ ಕೋ | ಪಾಂತಕನದಿರದೆ ಸೀಳೆ |
ಪಿಂತುಮುಂತಾಗುವಂದದಿ ಹಾಕಲಾಜೀವಿ | ತಾಂತದೊಳಾತುರಂಗಮದ || ೧೧೫ ||

ಕಡು ನಿಡಿದಪ್ಪಾಬಾಲವ ಕಿತ್ತು ತ | ನ್ನೊಡನಾಡುವ ಗೋವಳರು |
ಬಿಡದೂದುವ ಕೊಳಲಿಗೆ ಕಟ್ಟಿಕೊಡೆ ಕಡು | ಸಡಗರವೆಯ್ದಿದರೆಲ್ಲ || ೧೧೬ ||

ಒಡನಾಡುವ ಗೋಪನಂದನರನು ಕೂಡು | ಹಿಡಿಗವಡಿಕೆ ಹಿಳ್ಳುಲಗ್ಗೆ |
ಸುಡುಗುಡು ಮೊದಲಾದ ಮಕ್ಕಳಾಟವ ಕಡು | ಸಡಗರದಿಂದಾಡುತಿಹನು || ೧೧೭ ||

ಮಕ್ಕಳನೆಲ್ಲರನೊಡಗೊಂಡು ಮನೆಮನೆ | ಹೊಕ್ಕು ಹಾಲು ಬೆಣ್ಣೆ ಮೊಸರ |
ಒಕ್ಕಲಿಕ್ಕಿ ಸೂರೆಯಾಡುವುದುನು ಕಂ | ಡಕ್ಕರಿಂದಾ ಗೋಪಿಯರು || ೧೧೮ ||

ಮೊರೆಯಿಡೆ ಕೇಳಿ ಯಶೋಧೆ ಕೃಷ್ಣನ ಕರೆ | ದೆರಕದಿ ಬಿಗಿಬಿಗಿಯಪ್ಪಿ |
ತುರುವ ಕಾವುದನು ಕಲಿಯಬೇಕು ಮಗನೆ ನೀ | ಪೊರಮಡು ಸಡಗರದಿಂದ || ೧೧೯ ||

ಎಂದು ಕಲಸುಗೂಳಕಟ್ಟಿ ಕೊಟ್ಟಾಗೋಪಿ | ಯೊಂದೋರಗೆಯ ಮಕ್ಕಳನು |
ಒಂದಾಗಿ ಕೂಡಿಕಟ್ಟಾ ತುರುಗಳ ಕಾಯ | ಲೆಂದು ಕೃಷ್ಣನಕಳುಹಿದಳು || ೧೨೦ ||

ಕಳುಹಲು ಬಂದು ತುರುವನೊಂದು ಬೆಟ್ಟದ | ಕೆಳಗನ ಕಾಡೊಳ ಹೊಕ್ಕು |
ಬಲಯುತನಾ ಬಾಲಗೋಪಾಲನಾ ಗೋ | ವಳರು ಸಹಿತ ಮೇಯಿಸವವನು || ೧೨೧ ||

ಹರಿಸದಿಂದಾ ಬಾಲಹರಿ ಕೊಳಲೂದುವ | ಸರಗೇಳಿ ವೈರವ ತೊರೆದು |
ಕರಿಹರಿಹಸುಹುಲಿಫಣಿಪರ್ದುಗಳು ಕುಡು | ಯುರುಮುದದಿಂ ಕೇಳುತಿಹವು || ೧೨೨ ||

ಕಾಡೆಮ್ಮೆಗಳನು ಹಿಡಿದು ಗೋಣ್ಮುರಿಗೊಂ | ಡಾಡುವ ಮಕ್ಕಳ ಬಾಯ್ಗೆ |
ಆಡ ಕರೆವರೆರದಿಂದ ಕರೆವುತಳ್ತಿ | ಮಾಡುವನಾ ಕೇಶವನು || ೧೨೩ ||

ಬೇಕೆಂದು ಗುಹೆಗಳ ಹೊಕ್ಕು ಹೆಬ್ಬುಲಿಗಳ | ನೆಕ್ಕಲುಗಳು ತಪ್ಪನೆಂದು |
ಸೊಕ್ಕಾನೆಗಳನು ಹಿಡವನೇನುಸತ್ತ್ಜನೊ | ಚಿಕ್ಕಂದಿನೊಳು ಕೇಶವನು || ೧೨೪ ||

ಈ ಪರಿಯಿಂ ತುರುಗಳ ಮೇಯಿಸುತಿರ | ಲಾ ಪದದೊಳಗಾಯೆಡೆಗೆ |
ಆ ಪೂತಿನಿ ಮೊದಲಾದ ತಕ್ಕಸಿಯರು | ಕೋಪಮೊದವಿ ನಡೆತಂದು || ೧೨೫ ||

ಹರೆಯದ ಮುಗಿಲಡಗದ ಮಿಂಚಳಿಯದ | ಸುರಧನ ಛಟಿಛಟಿಲೆಂಬ |
ಸರವಡಗದ ಸಿಡಿಲೇಳೆ ತಗ್ಗದ ಸುಂ | ಟುರೆಗಳನೊಡ್ಡಿದಾಗ || ೧೨೬ ||

ಸುರನದಿ ಪರಿವೊಡಾಧಾರದ ಕಾಣದೆ | ಮರುತಮಾರ್ಗದಿನೀ ಧರೆಗೆ |
ಸುರಿದಪುದೊಯೆನಲೆಡವಿಡದಿಲ್ಲದೆ | ಸುರಿದುದಂದಿನ ಬಲುವೃಷ್ಟಿ || ೧೨೭ ||

ಪೊಡೆವ ಸಿಡಿಲನದಿರದೆ ಪೊಡೆಸೆಂಡನು | ಪೊಡೆವಂತಾ ವನಮಾಲಿ |
ಪಿಡಿದ ಗೋವಳಗೋಲಿಂ ನುಗ್ಗುನುರಿ ಮಾಡಿ | ಪಡೆದನದೇನು ಬಲ್ಲಿದನೊ || ೧೨೮ ||

ಸುರಿವಾಲಿವರಲೆಲ್ಲವು ಬಲುವಜ್ರದ | ಹರಲಂತಿರಾಗೆ ಗೋವಳರು |
ಪಿರಿದಾಗಿ ಬೆದರಿ ಮತ್ತಾಗೋವರ್ಧನ | ಗಿರಿವರಕಾಗಿಯೋಡಿದರು || ೧೨೯ ||

ಅದು ತಾನೊಂದೇ ಶಿಲೆಯಪ್ಪುದರಿಂ | ದದರೊಳು ಗವಿ ಕೋಡೆಗಲ್ಲು |
ಹುದುಗಿ ಬೆಳೆದ ಮರನಿಲ್ಲವಾದುದರಿಂ | ದದುರಿ ಸಂಕಟಗೊಳುತಿರಲು || ೧೩೦ ||

ಆಸಮಯದೊಳಚ್ಯುತನಾಬಳಿಗೆಯ್ದಿ | ಯೋಸರಿಸದೆಯಾಗಿರಿಯ |
ಕೇಸಡಿಯಿಂ ಬಿಡದೊತ್ತಿಯೊದೆದು ವಸು | ಧಾಸಂಧಿಯ ಪತ್ತಿವಿಡಿಸಿ || ೧೩೧ ||

ಕರಮನದರ ಕೆಲದೊಳಗಿಕ್ಕಿ ಹಿಗ್ಗಿಸಿ | ಭರದಿಂ ತಾನೊಳಪೊಕ್ಕು |
ಉರುಬಾಹುದಂಡದಿಂದಾ ಗೋವರ್ಧನ | ಗಿರಯನು ಮೇಲೆಕೆತ್ತಿದನು || ೧೩೨ ||

ಹರಿಸದಿಂದಾಸಂಗ್ರಾಣಿಯನೆತ್ತುವ | ಪರಿಯೆನೆ ಪದ್ಮೋದರನು |
ಉರುತರಮಪ್ಪರ್ವೀಧರವನು ವಾಮ | ಕರದಿಂ ಬಿಡದೆತ್ತಿದನು || ೧೩೩ ||

ಲೀಲಾಮಾತ್ರದಿ ಗಿತಿಯನೆತ್ತಿದ ಗೋ | ಪಾಲನ ಹಸ್ತಮೊಪ್ಪಿದುದು |
ಭೂಲಲನೆಗೆ ಪಿಡಿದಾಸತ್ತಿಗೆಯ ಹರಿ | ನೀಲದಕಾವಿದೆಂಬಂತೆ || ೧೩೪ ||

ಹರಿಯೆಡಗೈಯೆಂಬ ಪಂಚಫಣೋರಗ | ನಿರದಾ ಭೂಧರವೆಂಬ |
ಧರೆಯ ಹೊರಲು ಕಂಡು ಬೇಸರಿಸುವೆವೆಂದು | ಭರದಿಂದಾ ದೇವತೆಯರು || ೧೩೫ ||

ಇರದೇಳುದಿನ ಕಲ್ಲಮಳೆಯ ಬಲ್ಗುಂಡಿನ | ಸಿಯ ಪಾಸರೆಯತಂದಲನು |
ಪಿರಿಯ ಸರಿಯಸೋನೆಯನು ಸುರಿದರು ಪಗ | ಲಿರುಳೆನ್ನದತಿ ಕೋಪದಿಂದ || ೧೩೬ ||

ಮತ್ತದಕಿನಿಸು ಬೇಸರದಿಳುಹದೆ ಪುರು | ಷೋತ್ತಮನಾಪರ್ವತವನು |
ಎತ್ತಿರೆ ಕಂಡಸುರೆಯರು ತಾವೇ ಬೇ | ಸತ್ತಿವ ನಮಗೆ ಬಲ್ಲಿದನು || ೧೩೭ ||

ನಾವಿದವನು ಕೊಲ್ವೆವೆಂಬುದಜ್ಞತೆಯೆಂದು | ದೇವತೆಗಳು ಬಿಟ್ಟು ಪೋಗೆ |
ದೇವದುಂದುಭಿ ಮೊಳಗಿದುದಾಗಸದಿಂದ | ಪೂವಿನ ಮಳೆ ಸೂಸಿದುದು || ೧೩೮ ||

ಆ ವಸುಧಾಧರದಡಿಯೊಳು ನಿಂದಿರ್ದ | ಗೋವಿನ ಗೊಂದಣಗಳನು |
ಗೋವಳರುಗಳನು ಪೊರಮಡಿಸಿದನಾ | ಭೂವಲಯಕೆ ಲೀಲೆಯಿಂದ || ೧೩೯ ||

ವಸ್ರಸ್ತರಿಪುನಿಕುರುಂಬ ಸಜ್ಜನಸುಖ | ದಾಶ್ರಯನಾ ಕೇಶವನು |
ವಿಶ್ರತಮಪ್ಪ ಭೂದರಮನಿಳಾತನ | ಕಶ್ರಮದಿಂದಿಳುಹಿದನು || ೧೪೦ ||

ಆ ನಾಡು ಬೀಡೆಲ್ಲವು ಬಂದು ಲೋಕಕ್ಕೆ | ನೀನೇ ನೆರೆದೈವವೆಂದು |
ನಾನಾ ಪರಿ ಪೂಜಿಸಿಕೊಂಡಾಡಿದು | ದಾನಂದದಿಂದಾ ಹರಿಯ || ೧೪೧ ||

ಅತಿ ಬಲಯುತನಿವನಾರಾದದೆಸೆಯಿಂದ | ಚ್ಯುತಮಪ್ಪುದಿಲ್ಲೆಂದೊಸೆದು |
ಕ್ಷಿತಿತಳಮೆಲ್ಲ ಕೊಂಡಾಡಿಯವಗೆಯ | ಚ್ಯುತನಾಮವನಿಟ್ಟರೊಸೆದು || ೧೪೨ ||

ಅಹವಲಂಪಟನತಿಶಕ್ತಿಸಂಯುತ | ಬಾಹುಭುವನಭುಂಭುಕನು |
ಶ್ರೀಹತಿ ಕಣ್ಗೆಸೆದನು ಸತ್ಕವಿಚಿತ್ತ | ಗೇಹಮಾಣಿಕ್ಯದೀಪಕನು || ೧೪೩ ||

ಇದು ಜಿನಪದಸರಸಿಜಮದಮಧುಕರ | ಚದುರಂಗಮಂಗರಸ ರಚಿಸಿದ |
ಮದನಾರಿ ನೇಮೀಜಿನೇಶಸಂಗತಿಯೊಳ | ಗಿದು ಪದಿನೈದಾಶ್ವಾಸ || ೧೪೪ ||

ಹದಿನೈದಿನೆಯ ಸಂಧಿ ಸಂಪೂರ್ಣಂ