ನರಿನಾಯಿ ತಿಂದು ಸಾವವನನೀನೆನಗಿತ್ತೊ | ಡೆರವಿಲ್ಲದಾತ್ನನಂದನನ |
ಸರಿಯೆಂದು ನಾನು ರಕ್ಷಿಸೆ ಹೆಚ್ಚಿ ಬೆಳೆದೆನ್ನ | ಗುರುವಿಕೆಯನು ನಡೆನೋಡಿ || ೧೦೧ ||

ಹಸುವಿನ ಬಸಿರ ಬಂದಾಕರು ಬಲಿದಾ | ಹಸುವಿನ ಮೇಳ್ದಾಯ್ದಂತೆ |
ಒಸೆದೆನ್ನ ಮೇಳ್ದಾಯಲು ಬಂದೊಡೊಲ್ಲದೆ | ಯುಸುರ್ದೆನಾನವಗಿಂತುಟೆಂದು || ೧೦೨ ||

ಬೆಡ ಮಗನೆ ಹೆತ್ತತಾಯನು ಕಣ್ಣಿಟ್ಟು | ನೋಡಿ ಮೋಹಿಸಿಯಿಹಪರಕೆ |
ಕೇಡನೆಣಿಸಿ ನಿನ್ನ ನೀ ನಾಣ್ನುಡಿಗೀಡು | ಮಾಡುವೆನೆಂಬ ಪ್ರಬುದ್ಧಿ | ೧೦೩ ||

ಪಟ್ಟಕೆಸಲುವ ಮಕ್ಕಳನೆಲ್ಲರ ಕೈ | ಬಿಟ್ಟುದೊಡ್ಡಿತು ಮಾಡಿ ನಿನಗೆ |
ಮುಟ್ಟಿದ ಮೋಹದಿಯುವರಾಜಪದವಿಯ | ಕಟ್ಟಿದೆನದುಕಾರಣದಿ || ೧೦೪ ||

ತಂದೆಯ ಮಹಿಮಾನಿಕೆಯನು ರಕ್ಷಿಪ | ನಂದನರಿದನೆಣಿಸಿಸೊಡೆ |
ನೊಂದು ಹಡೆದ ತಾಯೇ ರಕ್ಕಸಿಯಾ | ದಂದವಲ್ಲವೆಯದರಿಂದ || ೧೦೫ ||

ಹೆತ್ತಮಗನೆ ನೀನೆನ್ನ ಮೋಹಿಸುವ | ದುತ್ತಮಿಕೆಯ ಬೇಡವನಲು |
ಒತ್ತಿಹಿಡಿದು ಸೀರೆಯ ಸೀಳಿ ಕುರುಳ್ಗಳ | ಕಿತ್ತು ಕೆಡಹಿಯೆನ್ನ ಮೈಯ || ೧೦೬ ||

ಹರಿದು ಹಾರವ ನೀಮೊಲೆಗಳ ಮೇಗಣ | ಸೆರಗನುಗಿದು ನಾನುಟ್ಟ |
ನಿರಿವ ತೆಗೆವ ಸಮುದೊಳಯ್ಯಯ್ಯೊ | ಮೊರೆಯೊಮೊರೆಯೊಯೆನುತಾನು || ೧೦೭ ||

ಕೊರಚಿದೊಡೆನ್ನನು ಬಿಟ್ಟೋಡಿದನಾ | ದುರುದುಂಬಿಯತಿಪಾತಕನು |
ಬರಿದೆನ್ನ ಭಂಗವ ಕೆಡಿಸಿದನಿಂತಪ್ಪ | ಕೊರತೆಯನಾ ಹೊತ್ತುಕೊಂಡು || ೧೦೮ ||

ಇನ್ನಾವಮೋರೆಯೊಳೀಮನೆಯೊಳು ಮ | ತ್ತೆನ್ನ ಸರಿಯಸವತಿಯರ |
ಮುನ್ನಿನಂದದಿಯೊತ್ತರಿಸಿಯಣಕವಾಡಿ | ಮನ್ನಣೆಯಿಂದ ನಿನ್ನೊಡನೆ || ೧೦೯ ||

ಬಾಳುವುದಿನ್ನೆನಗೇಕೆಂದಾ ಚಾಂ | ಡಾಳಿ ನುಡಿದ ನುಡಿಗಳನು |
ಕೇಳಿ ಮೊಳಗುಗೇಳಿದ ಸಿಂಹದಂದದಿ | ತಾಳಿ ಪಿರಿದು ಕೋಪವನು || ೧೧೦ ||

ನಾರಿಯ ಕೌಟಿಲ್ಯವ ನಿಜವೆಂದು ವಿ | ಚಾರಹೀನನಾ ನೃಪತಿ |
ಆರೈಯದವನನೀಗಲೆ ಕೊಲಿಸುವೆನೆಂ | ದಾ ರಾಜಗೃಹದಿಂದ ಬಂದು || ೧೧೧ ||

ಉಕ್ಕುವ ಕೋಪದಿ ವಜ್ರದಾಡಾದಿಯ | ಮಕ್ಕಳನೈವರ ಕರಸಿ |
ಮಿಕೃಪಾತಕಿಯಾ ಪ್ರದ್ಯುಮ್ನನ ನೆಲ | ಕಿಕ್ಕಿ ಬೇಗದಿ ನೀವೆನಲು || ೧೧೨ ||

ಸುಮ್ಮನೆ ಕುಣಿವವರಿಗೆ ಹರೆಯನು ಹುಯ್ಕೆ | ಸುಮ್ಮಾನವೇಳುವಂದದೊಳು |
ತಮ್ಮ ತಾವೇ ಕೊಲಲೆಂದಿರ್ದವರಿಗೆ | ತಮ್ಮಯ್ಯನು ಬೆಸಸಿದೊಡೆ || ೧೧೩ ||

ಕರಮೊಳ್ಳಿತೆಂದು ತಂದೆಯ ಬೀಳ್ಕೊಂಡಾ | ಅರಲಸರಲನೀರನೊಳು |
ಪಿರದಪ್ಪವಂಚನೆಯಿಂ ಸ್ನೇಹವನಾ | ದರವೆಂಬಂದದಿ ಮಾಡಿ || ೧೧೪ ||

ಮುಂದಕುತ್ತಮವಿದ್ಯೆಯ ನಾವು ಪಡೆಯಬೇಕೆಂದು ಬಳಿಕ್ಕೊಡಂಬಡಿಸಿ |
ಅಂದಾ ಕೃತಕಮಾನಸರಾ ಪುರವರ | ದಿಂದ ವಿಮಾನವನೇರಿ || ೧೧೫ ||

ಆವಿಜಯಾದ್ರಿಯ ಸಿದ್ಧಕೂಡಮನೈದಿ | ದೇವರದೇವನ ಕಂಡು |
ಭಾವಶುದ್ಧಿಯೊಳು ಭಜಿಸಿ ಬಳಿಕೆಂದರು | ಪೂವಿನಬಿಲ್ಲಬಲ್ಲಹಗೆ || ೧೧೬ ||

ಇದನು ಪೊಗುವೆ ನಾನೆಂದು ಹೋಗಲ್ಕಾ | ಅಧಟನ ಕಂಡಲ್ಲಿರ್ಪ |
ವಿದಿತವಿಷೋರಗನುರಿಭುಗಿಭುಗಿಲೆನ | ಲೊದವಿದ ಕರ್ವೊಗೆಗೂಡಿ || ೧೧೯ ||

ಕಡೆಗಾಲದ ರುದ್ರನಿಟ್ಟಾಭರಣದ | ಕೆಡಿಕನಪ್ಪಾ ವಿಷೋರಗನು |
ಕಡುಮಿನಿಸಿಂ ಬರ್ಪವೊಲು ಬಂದಾಬಲು | ಗಡಿಯನ ಮೇಳ್ವಾಯ್ದುದಾಗ || ೧೨೦ ||

ಬಾಲಭಾನುವ ನುಂಗವೆನೆಂದದೈದುವ | ಕಾಳರಾಹುವಿನಂದದೊಳು |
ಆ ಲಲಿತಾಂಗನಾದುಷ್ಟ ಫಣಿಪತಿ | ಮೇಲುವಾಯುಲೊಡನವನು || ೧೨೧ ||

ಸನ್ನುತ ವಜ್ರೋಪಮಬಾಹುದಂಡದಿ | ಪನ್ನಗನನು ಪೊಯ್ಯಲಾಗ |
ಉನ್ನತಿಕೆಯ ಪಾಂಗಳಿದು ಬಳಿಕ್ಕಾ | ತನ್ನ ದಿವ್ಯರೂಪದೋರಿ || ೧೨೨ ||

ಕಾಮಚಂಡಾಳಿನಿ ಸಮವಿದ್ಯೆಯತಿವಿದ್ಯೆ | ಸಾಮಜವೈರಿವಿಷ್ಟರವ |
ಚಾಮರದಿವ್ಯಾತಪತ್ರಮನಧಿಕ ಸು | ಪ್ರೇಮದಿಕೊಟ್ಟಿಂತು ನುಡಿದ || ೧೨೩ ||

ಮುನ್ನೋರ್ವಗಗನೇಚರನೀ ವಸ್ತುವ | ನೆನ್ನ ಕೈಲೆಡೆಯನು ಕೊಟ್ಟು |
ಉನ್ನತಮಪ್ಪ ತಪಕ್ಕಿರದೊಯ್ದು | ತೆನ್ನೊಳಗಿಂತು ನುಡಿದನು || ೧೨೪ ||

ಉರಗರೂಪವನಾಂತು ನೀನೀಬಳಿಯೊಳ | ಗಿರಲು ನಿನ್ನಲ್ಲಿಗೆ ಬಂದು |
ಭರದಿಂ ನಿನ್ನ ಪೊಯ್ದುವಗೀ ವಸ್ತುವ | ನುರುಮುದದಿಂದೀವುದೆನುತ || ೧೨೫ ||

ನುಡಿದನಂತದು ಕಾರಣದಿಂದೀರೂಪು | ವಡೆದಿರ್ದೆನಂತದರಿಂದ |
ಕಡುಗಲಿ ನೀನವಧರಿಸೆನಲಾದೇವ | ನೊಡವನನಿಂತಾಡಿದನು || ೧೨೬ ||

ನಾನಾವಾಗ ನೆನೆಯಲೊಡನೆಯ್ತಂದು | ನೀನೀ ವಸ್ತುಸಂತತಿಯ |
ಸಾನಂದದಿ ತಂದೀವುದೆಂದಲ್ಲಿಂ | ದಾ ನನೆಗಣೆಯನೆಯ್ತರಲು || ೧೨೭ ||

ಅದನು ಕಂಡಾವಜ್ರದಾಡಾದಿಗಳು ಚೋದ್ಯ | ಹೃದಯರಲ್ಲಿಂ ಮುಂದಕೆಯ್ದು |
ಕೆದರುವ ಕಿಡಯೊಳುವುರಿ ಧಗಧಗಿಪ ಕೆಂ | ಡದ ಕುಂಡವನೊಂದ ತೋರೆ || ೧೨೮ ||

ಪುಲ್ಲಮಾರ್ಗಣ ನಡೆವುತ್ತಿರಲಾವುರಿ | ಯೆಲ್ಲವಡಗಿ ತಣ್ಣನಾಗೆ |
ಅಲ್ಲಿಂದಗ್ನಿಕುಮಾರನು ಪೊರಮಟ್ಟು | ಸಲ್ಲೀಲೆಯಿಂ ಮತ್ತವಗೆ || ೧೨೯ ||

ನೆನೆದಂತಾಗುವ ದಿವ್ಯಾಂಬರವನು | ಮಿನುಗುವ ರತ್ನಭೂಷಣವ |
ಅನುರಾಗದಿಂ ಕೊಡಲವ ಕೈಕೊಂಡಾ | ನನಗಣೆಯನು ನಡೆತರಲು || ೧೩೦ ||

ರೋಷಾವೇಸದಿನೊಂದೆಡೆಯೊಳು ಮೇಷ | ಪಾಷಾಣಗಳು ಮಿಗೆ ಹೋರಿ |
ಭೀಷಣವನುತೋರುತಿರಲಲ್ಲಿಗಾ ನಿ | ರ್ದೋಷಿಯ ಹೊಗಿಸಿದರವರು || ೧೩೧ ||

ಸಿಡಲುಸಿಡಲು ತಾಗುವಂತೆ ವಜ್ರದ ಗುಂ | ಡಡಸಿ ವಜ್ರವ ಹಾಯ್ವಂತೆ |
ಪೊಡವಿಯದಿರಲಾ ಕಲ್ಲತಗರುಗ | ಳ್ಕಡುಪಿಂದ ಹಾಯ್ದಾಡುತಿರಲು || ೧೩೨ ||

ಮತ್ತೆ ಹೊಕ್ಕಾ ಮೆಪಾಷಾಣಯುಗಲವ | ನೊತ್ತಿಹಿಡಿದು ನಿಲಿಸಿದೊಡೆ |
ಚಿತ್ತಶುದ್ಧಿಯೊಳಿತ್ತನಾ ಮೇಷಾಸುರ | ನುತ್ತಮ ಮಕರಕುಂಡಲವ || ೧೩೩ ||

ಆ ಕೌಟಿಲ್ಯಮಾನಸರು ಮುಂದಕೆಬಂದು | ಭೀಕರಮಪ್ಪ ತಾಣವನು |
ಆ ಕಾಮಗೆ ಬೇರೆಬೇರೆ ತೋರಿದೊಡವ | ನೇಕಾಂಗದಿನೊಳಹೊಕ್ಕು || ೧೩೪ ||

ಸೂಕರಗಿರಿಯ ಭೀಕರಮಪ್ಪ ಹುಹೆ ಹೊಕ್ಕು | ಸೂಕರಾಸುರನೊಸೆದಿತ್ತ |
ಲೋಕಪೂರಣಮೆಂಬ ಜಯಘೋಷಶಂಖಮ | ಸ್ವೀಕಾರವ ಮಾಡಿ ಮುಗುಳ್ದು || ೧೩೫ ||

ಕಾಳಗುಹೆಯ ಪೊಕ್ಕು ಭೀಳಕಾಳಾಸುರ | ಕಾಳದಂಡಮೆಂಬ ಗದೆಯ |
ಲೀಲೆಯಿಂದೀಯಲಂತದ ಕೈಕೊಂಡೈ | ಗೋಲನು ಮುಂದಕೆ ಬಂದು || ೧೩೬ ||

ಬಲಿಮುಖಗಿರಿಯ ಕೋಡುಂಗಲ್ಲನಿರದೇರಿ | ಬಲಿಮುಖಾಮರನೊಸೆದಿತ್ತ |
ಸುಲಲಿತ ಮಣಿಮಯಮಪ್ಪ ಕಿರೀಟಮ | ನಲರ್ಗಣೆಯನು ಕೈಕೊಂಡು || ೧೩೭ ||

ಮಲ್ಲಗಿರಿಯ ಹುಹೆಯೊಳಗಗುರ್ವಿಸುತಿರ್ಪ | ಮಲ್ಲಾಸುರನು ಖೇಟಕವ |

ಸಲ್ಲೀಲೆಯಿಂ ಕೊಡಲದನು ಕೈ ಕೊಂಡ | ರ್ವಿಲದಲನು ಮುಂದಕೆ ಬಂದು || ೧೩೮ ||

ಉರಗಹುಹೆಯ ಹೊಕ್ಕುರಗರಾಕ್ಷಸನನು | ಪಿರಿದು ಬೆಚ್ಚಿಸಿಯವನಿತ್ತ |
ಸುರಿಚಿರಕಾಮವಿಮಾನವ ಪಡೆದಾ | ಸುರಭಿಶರನು ಮುಗುಳಿದನು || ೧೩೯ ||

ಪಿರಿದುಮಗುರ್ವಿಸುವಾ ಕಚ್ಛಮೆಂಬಗ | ಹ್ವರದೊಳಗದಿರದೆ ಹೊಕ್ಕು |
ತುರಗಾಸುರನನಂಜಿಸಿಯವನಿತ್ತಾ | ತುರಗರತ್ನವ ಕೈಕೊಂಡು || ೧೪೦ ||

ಗಜಮುಖವೆಂಬ ಹೆಸರಗುಹೆಯೊಳಹೊಕ್ಕು | ಗಜರಾಕ್ಷಸನ ಮೇಲ್ದಾಯ್ದು |
ತ್ರಿಜದ್ಭೂಷಣಮೆಂಬ ನಾಮದ ಮದ | ಗಜರತ್ನವ ಕೈಕೊಂಡು || ೧೪೧ ||

ಬಳಿಕೊಂಡು ಬೀಕರತರಮಪ್ಪ ಕಾಸಾರ | ದೊಳಹೊಕ್ಕು ಮತ್ತಲ್ಲಿರ್ಪ |
ಜಲದನುಜನ ಬೆದರಿಸಿ ಕಾಮಚಕ್ರಮ | ತಳದಂಗಜನೆಯ್ತುಂದು || ೧೪೨ ||

ಭೀಮವೆನಿಪನಕ್ಷುವೆಂಬದರಿಯ ಹೊಕ್ಕು | ಬೀಮಾಸುರನ ಮೇಲ್ದಾಯ್ದು |
ಕಾಮಧೇನು ಕೈಕೊಂಡಲ್ಲಿಂದು | ದ್ದಾಮವಿಕ್ರಮ ಪೊರಮಟ್ಟು || ೧೪೩ ||

ರಥಪರಿವೃಢಮೆಂಬ ಗಿರಿಮೇರಿ ಪೆಣರಿಸಿ | ರಥರಾಕ್ಷಸನೊಸೆದೀಯೆ |
ಪೃಥುವೀರ್ಯನು ಮಕರಧ್ವಜಯುತಪುಷ್ಪ | ರಥಮನಿರದೆಕೈಕೊಂಡು || ೧೪೪ ||

ದೋರ್ವಲದಿಂದ ಬಲಾಹಕಗುಹೆಯೊಳ | ಗುರ್ವಿಸಿ ತನ್ನ ಮೇಲ್ವಾಯ್ದ |
ಪೇರ್ವುಲಿಯನು ತಿವಿದದು ಕೊಟ್ಟ ಪೂಗಣೆ | ಗರ್ವುವಿಲ್ಲನು ಕೊಂಡು ಮುಗುಳ್ದು || ೧೪೫ ||

ವಿದಿತಕದಂಬವದೆನಮೆಂಬ ಕೂಪಮ | ನದಿರದೆ ಹೊಕ್ಕು ಮತ್ತಲ್ಲಿ |
ಕದನವಜಯಮೆಂಬ ನಾಗಪಾಶಮನಾ | ಸದಮಲಗುಣಿ ಕೈಕೊಂಡು || ೧೪೬ ||

ಊರ್ವಿಯಿಂದಾಕಾಶಕೆ ಕೀಲುಗೊಟ್ಟಂತಿ | ರುರ್ವಿ ಬೆಳೆದ ವೈಜಯಂತ |
ಪರ್ವತವನು ಹತ್ತಿಯಾಕೋಡುಗಲ್ಲೊಳ | ಗೋರ್ವ ರಾಕ್ಷಸನನು ಕಂಡು || ೧೪೭ ||

ಇದಿರಾಗಿ ಬಂದು ಘರ್ಜಿಸಿ ತಾನು ಹಿಡಿದಿರ್ದ | ಗದೆಯ ನೆಗಹಿ ಪೊಯ್ಯಲಾಗ |
ಅದನೆಡಗೈಯೊಳಗಾಂತು ಸುಲಿದುಕೊಂ | ಡದರಿಂದವನ ಸದೆಬಡಿಯೆ || ೧೪೮ ||

ಅನಿತರೊಳವನಾರೂಪನುಡುಗಿ ತನ್ನ | ಮನುಜರೂಪವನ ತಾ ಧರಿಸಿ |
ಅನುರಾಗದಿನಿಂತೆಂದು ನುಡಿದನಾ | ನನೆಯಸರಲನೀರನೊಡನೆ || ೧೪೯ ||

ವಿಜಯಾರ್ಧಾಚಲವೆಂಬೀ ಶಿಖರಿಯ | ವಿಜಯನಗರಗಧಿರಾಜ |
ಅಜಿತಂಜಯನೆಂಬ ಖೇಚರನಾತಗೆ | ನಿಜಸತಿ ಶಚಿಯೆಂಬಳಿಹಳು || ೧೫೦ ||

ಆ ಮಿಥುನದ ಗರ್ಭದೊಳು ಜನಿಯಿಸಿದೆನು | ಹೇಮಾಂಗದನೆಂದೆಂಬ |
ನಾಮದ ಮಗನಾನೆನ್ನಂತರದೊಳು | ದ್ದಾಮರೂಪಮನಿರದಾಂತು || ೧೫೧ ||

ರತಿಯೆಂಬ ರಮಣಿ ಪುಟ್ಟಿದಳವಳವಯವ | ದತಿಶೋಭೆಯನೀಕ್ಷಿಸುವೊಡೆ |
ಆತನುಕುಮಾರಚಂದ್ರಮ ಕೇಳು ಕಣ್ಗಳು | ಶತಸಾಸಿರವಾಗಬೇಕು || ೧೫೨ ||

ಅವಳಡಿಗಂಬುಜ ಕುಸುಮಮಾಂಗಲ್ಯ | ಮವಳಮುಖಕೆ ಶಶಿಶಲ್ಯ |
ಅವಳಕ್ಷಿಗಿಂದೀವರವತಿ ನಿರ್ಮಾಲ್ಯ | ವವಳ ರೂಪಜಗೆ ಕೌಶಲ್ಯ || ೧೫೩ ||

ಅವಳೆಡಗಡೆಯವಳ ಬಲಗಡೆ ಪಡಿ | ಯುವಳ ಮಿಸುಪ ಬಲಗಡೆಯ |
ಅವಳೆಡಗಡೆ ಸರಿಯಿಲ್ಲದಿನ್ನೊಬ್ಬರ | ಹಲಣಿಸಲಹಿಪತಿಗಳವೆ || ೧೫೪ ||

ಈ ತೆರದಿಂದೊಪ್ಪುವ ಹಡೆದೆನ್ನನು | ಜಾತೆ ಜವ್ವನವೇರೆ ಕಂಡು |
ಭೂತಳದೊಳಗೀ ಸತಿಗನುರೂಪಾದ | ಜಾತಿಪುರುಸರತ್ನಮುಂಟೆ || ೧೫೫ ||

ಎಂದೆಮ್ಮ ಪಿತೃವೋರ್ವಶಕುನಿಗನನು ಕೇಳ | ಲಂದವನಿಂತು ನುಡಿದನು |
ಇಂದುಮಂಡಲನಿಭಮುಖಿಗೂಡಿ ನಿನ್ನಗ್ರ | ನಂದನ ಹೇಮಾಂಗದನು || ೧೫೬ ||

ವೈಜಯಂತಪರ್ವತದ ತುದಿಯೊಳು ವಿ | ರಾಜಿಪ ಕೋಡುಗಲ್ಲೊಳಗೆ |
ಭೂಜನಕತಿ ಪೊಸೆತೆನಿಪ ರಕ್ಕಸರೂಪ | ನಾ ಜವನಂದದಿ ಧರಿಸಿ || ೧೫೭ ||

ಇರಲಲ್ಲಿಗೆ ಬಂದವನನಂಜಿಸಿದಾ | ಪುರುಷರತ್ನವೆ ನಿನ್ನ ಸುತೆಗೆ |
ವರನಾಗುವನೆನಲವನ ನುಡಿಯ ಕೇಳಿ | ಹರುಷದನೆಮ್ಮ ಜನಕನು || ೧೫೮ ||

ಈ ತಂಗಿಸಹಿತೆನ್ನನೀಪರ್ವತಾಗ್ರಕೆ | ಪ್ರೀತಿಯಿಂದವೆ ಕಳುಹಿದೊಡೆ |
ಈ ತೆರನಪ್ಪ ರೂಪವನು ಧರಿಸಿ ವಿ | ಖ್ಯಾರ ಕೇಳಿರ್ದೆನಾನಿಲ್ಲಿ || ೧೫೯ ||

ಆ ಶಕುನಿಗನೊರೆದಂದದಿನಧಟಿನೀ | ನೀಸಮಯದೊಳೆಯ್ತಂದು |
ಓಸರಿಸದೆಯೆನ್ನನು ಗೆಲ್ದಯಲಾ | ಸಾಸಿಗತನದಿನಂತದರಿಂ || ೧೬೦ ||

ಎನ್ನನುಜಾತೆ ರತಿಯ ಕೈಕೊಳ್ಳೆಂದು | ತನ್ನ ಪಿಂಗಡೆನಿಂದಿರ್ದ |
ರನ್ನದರಮಣಿಯಂತೆಸೆವ ರತಿಯನಾ | ಉನ್ನತಿಗುಣಿಗೆ ತೋರಿದನು || ೧೬೧ ||

ಪೊಸಮಿಸುನಿಯ ತಾಮರೆಮೊಗದವಳನು | ಎಸೆವ ಬಂದುಗೆದುಟಿಯಳನು |
ಮಿಸುಪಲತಿಗೆವಣ್ಣದವಜ್ಜೆಯವಳನು | ಒಸೆದು ನೋಡಿದನಂಗಜನು || ೧೬೨ ||

ನಿರಿಗುರುಳ್ಳಳ ನವನೀಲಾಂಬಕಿಯನು | ಮರಿಯಂಚೆನಡೆಯ ಮುಗ್ಧೆಯನು |
ನೆರೆವೆರೆಮೊಗದೇರುಂಜ್ವ್ನೆಯನು | ಎರಕದಿ ನೊಡಿದನವನು || ೧೬೩ ||

ಹರುಷದಿರಾಜಪಾದವಸಂತನೀಕ್ಷಿಸದನು | ತರುಣಕೋಕಿಲವಾಣಿಯನು |
ಸುರಚಿರಸುಭಿಲತಾಕೋಮಲೆಯನು | ಸರಸಪಲ್ಲವಪಾಣಿಯನು || ೧೬೪ ||

ಚಾರುಚಕೋರವಿಲೋಕಲೋಚನೆಯನು | ಕೈರವಕುಸುಮಂಗಧಿಯನು |
ಮಾರಕುಮಾರಚಂದ್ರನು ನೋಡಿದನು ಮನ | ವಾರೆ ಕಣ್ಬಿಟ್ಟು ಕಾತರದಿ || ೧೬೫ ||

ತೊರೆದ ಕಾತರದೇಳಿಗೆಯನು ಮನಸಿನಿಂದ | ಉರವಣಿಸಿದ ಸೋಲದಿಂದ |
ಅರಲಂಬನ ರೂಪವನುರುಮುದದಿಂದ | ಗರುವೆನೋಡಿದಳೊಲವಿಂದ || ೧೬೬ ||

ಸಮದೃಷ್ಟಿ ಸಮಕಾತರ ಸಮಸಾತ್ತ್ಜಿಕ | ಸಮನಿಸಿತಾಯೀರ್ವರಿಗೆ |
ಸಮರೂಪ ಸಮಯವ್ವನ ಸಮಲಾವಣ್ಯ | ಸಮಸಂದಕಾರಣದಿಂದ || ೧೬೭ ||

ಇಂತು ತನ್ನನು ಸಲೆಸೋಲಿಸಿ ನೋಡುವ | ಕಾಂತೆಯನವಳಗ್ರಜನೊಳು |
ಸಂತಸದಿಂ ನಾನು ಕರೆಯಲಟ್ಟುವ ಪರಿ | ಯಂತರಮಿರಲಿ ನಿಮ್ಮಲ್ಲಿ || ೧೬೮ ||

ಎಂದು ನುಡಿದು ಮುಂದಕೆಯ್ದಿ ಸಾಸಿರಮುಖ | ದಿಂದಿಗುರ್ವಿಪ ಪುತ್ತಹೊಕ್ಕು |
ಅಂದವಡೆದ ಕಾಮಮುದ್ರಿಕೆಯನು ಕೊಂಡು | ಬಂದನಂಗಜನಳ್ತಿಯಿಂದ || ೧೬೯ ||

ಈ ವಿಧದಿಂ ಬಂದವನ ಕಂಡಿತೆಂದ | ರಾ ವಜ್ರದಾಡಾದಿಗಳು |
ನಾವೊಂದಮಾಡೆ ತಾನೊಂದಾದುದು ಪುಣ್ಯ | ದೈವದ ಬಲಮುಂಟಿವಗೆ || ೧೭೦ ||

ಎಂದು ಮನದೊಳಿಣಿಸುತ ಕಾಮನೊಳಿಂ | ತೆಂದರು ಎಲೆ ವಿಕ್ರಮಾಂಕ |
ಹಿಂದಣಭವದೊಳು ನೀನೆಸಗಿದ ಪುಣ್ಯ | ದಿಂದಿವು ನಿನಗೆ ಸೇರಿದವು || ೧೭೧ ||

ಎಂದು ಕಪಟವಿನಯವನುಸುರ್ದಾತ | ಮ್ಮೊಂದಾಗಿ ನಿಜಪುರವರದ |
ಮುಂದಣಬನದ ಪುರಾಣಕೂಪಕ್ಕಾ | ಕಂದರ್ಪನಕೊಂಡುಬಂದು || ೧೭೨ ||

ಇದರೊಳಗುತ್ತಮವಸ್ತುಸಂತತಿಯಿವೆ | ಯೆದನು ಹೊಕ್ಕೊಡೆ ಸಾಧ್ಯವಹುದು |
ಇದು ನಿಶ್ಚಯಮೆನಲವರ ಡಂಬಕವನು | ಮದನಕುಮಾರಕನರಿದು || ೧೭೩ ||

ರೂಪಪರಾವರ್ತನವಿದ್ಯೆಯಿಂ ತನ್ನ | ರೂಪಮ ನಿರ್ಮಿಸಿ ಬಳಿಕ |
ಕೂಪವ ಹೊಗಿಸಿಯದೃಶ್ಯದಿನಾ ಪುಷ್ಪ | ಚಾಪ ನಿರೀಕ್ಷಿಸುತಿರಲು || ೧೭೪ ||

ಇವನು ಬಾವಿಯಹೊಕ್ಕನಿದು ಲೇಸಾಯಿತೆಂ | ದವರತಿ ಭರವಸದಿಂದ |
ಪವಣಿಲ್ಲದ ಪಾಷಾಣಮನದರೊಳ | ಗವಿರಳಮಾಗಿ ಸೂಸಿದರು || ೧೭೫ ||

ಸತ್ತನು ಹಗೆ ನಮಗಿನ್ನು ಲೇಸಾಯಿತೆ | ನುತ್ತವರುಸುರ್ವವೇಳೆಯೊಳು |
ಉತ್ತಮ ಸತ್ವನದೃಶ್ಯತೆಯನು ಬಿಟ್ಟು | ಮತ್ತವರನು ಕೋಪದಿಂದ || ೧೭೬ ||

ಪಿಡಿದು ಪನ್ನಗಪಾಶದಿಂ ಪೆಡಗೈಗಟ್ಟಿ | ಕಡುವಿಲ್ಲನಿಡಲದನರಿದು |
ಕಡುಕೋಪದಿಂ ಕಾಳಶಂಬರನಾತನ್ನ | ಪಡೆಯನೆಲ್ಲವ ಕೂಡಿಕೊಂಡು || ೧೭೭ ||

ಪೊಳನಿರದೆ ಪೊರಮಟ್ಟುಬರಲು ಕಂಡು | ತುಳಿಲಾಳಾ ಮನಸಿಜನು |
ಫಳಿಲನವನ ಬಲಕಿಮ್ಮಡಿವಿದ್ಯಾ | ಬಲವ ನಿರ್ಮಿಸಿ ಪೌಜನಿಕ್ಕಿ || ೧೭೮ ||

ನಿಲಲನಿತರೊಳಂಬರದಿಂ ನಾರದ | ನಲಘುವೇಗದಿನಿಳಿತಂದು |
ಇಳೆಯಾಧಿಪರೀರ್ವರ ಮಧ್ಯದೊಳು ನಿಂದು | ನೆಯನುಡಿಯನಿಂತು ನುಡಿದ || ೧೭೯ ||

ಪರಿಕಿಸದಾ ಪೆಂಡಿತ ಮಾತನೆಲೆ ಖೇ | ಚರಪತಿ ನಿಮ್ಮನಿಮ್ಮೊಳಗೆ |
ಪಿರಿದು ಹೋರಟೆಮಾಡಲಪಕೀರ್ತಿವಲ್ಲರಿ | ಧರೆಯೊಳು ಪಸರಿಸದಿಹುದೆ || ೧೮೦ ||

ಎಂಬ ನಾರದನುಡಿಯನು ಕೇಳಿಯಾ ಕಾಳ | ಶಂಬರಖಚರೇಶ್ವರನು |
ಶಂಬರಾರಿಯಕೂಡಣ ಕಲಹವನು ವಿ | ಡಂಬಿಸಿನಿಂದಿರಲಾಗ || ೧೮೧ ||

ಬಳಿಕಿಂತೆಂದು ನುಡಿದನಾ ನಾರದ ನಿಳೆಯಾಧೀಶ್ವರ ಕೇಳು |
ಜಲಧಿಮಧ್ಯದೊಳಾ ದ್ವಾರಾಮತಿಯೆಂಬ | ಪೊಳಕೊಪ್ಪವಿಡಿದಿಹುದಲ್ಲಿ || ೧೮೨ ||

ಭರತತ್ರಿಖಂಡಮನಾಳಲೆಂದಿರ್ದಾ | ಮುರವೈರಿಯ ನಿಜವನಿತೆ |
ತರುಣೀಮಣಿ ರುಗ್ಮಿಣಿದೇವಿಯವರೀ | ರ್ವರ ಸುತನಿಪುಷ್ಪಚಾಪ || ೧೮೩ ||

ಇವನುದಯಿಸಿದ ವೇಳೆಯೊಳೀತನ ಪೂರ್ವ | ಭವದ ವೈರಿಯೋರ್ವದನುಜ |
ಇವನನೆತ್ತಿಕೊಂಡಾಕಾಶಕೆ ಪೋಗ | ಲವರತಿ ದುಃಖದೊಳಿರಲು || ೧೮೪ ||

ಇಂದಿಗೆ ಹದಿನಾರುಸಂವತ್ಸರಕೆ ನಿಮ್ಮ | ನಂದನಬರ್ಪನಿಂತಿದಕೆ |
ಸಂದೇಹಬೇಡೆಂದು ದೇವವಚನಮಾಗ | ಲಂದರವರತಿ ಸುಖಮಿರ್ದ || ೧೮೫ ||

ಇಂದು ನಾನಲ್ಲಿಗೆ ಪೋಗಲು ನನಗವ | ರೆಂದರೆಲೇ ಮುನಿ ನಮ್ಮ |
ನಂದನನೆಲ್ಲಿರ್ದಪತನಿದನಾರೈಯಿ | ಮೆಂದು ನನ್ನನು ಕಳುಹಿಸಿದರು || ೧೮೬ ||

ದೇವಗಿರಿಯ ಪೂರ್ವವಿದೇಹದ ಪುಷ್ಕ | ಳಾವರಿಯೆಂಬ ದೇಶದೊಳು |
ಭೂವಿಶ್ರುತಪುಂಡರೀಕಿಣಿಯೊಳು ಜನ | ದೇವ ಶ್ರೀಮಂದರರೆಂಬ || ೧೮೭ ||

ಆರುಹನ ಸಮವಸರಣಕೆಯ್ದಿಯಾಗಣ | ಧರರಿಂದಾ ಧೂಮಕೇತು |
ಭರದಿಂದೊಯ್ದುದು ಮುಂತಾಗಿಯೆಲೆ ಖೇ | ಚರಪತಿ ನೀನೆತ್ತೆತಂದು || ೧೮೮ ||

ಸಲಹಲು ಚೆನ್ನಾಗಿ ಬೆಳೆದುದದನತ್ಯಂತ | ಬಲನಾದುದನೀಗ ನಿನ್ನ |
ಲಲನೆಯಮಾಯಮ ನಿಜಮೆಂದು ಯುದ್ಧಮ | ನಲಸದೆ ನೀನು ಮಾಳ್ಪದನು || ೧೮೯ ||

ತಿಳಿಯಲು ಕೇಳಿಯಾಗಣಧರರುಗಳಡಿ | ದಳಕೆ ನಮಿಸಿ ಬಂದೆನೀಗ |
ಕಳುಹು ಬೇಗದಿನೀತನ ತಂದೆತಾಯ್ಗಳ | ಬಳಿಗೆಂದು ನರದನುಸುರೆ || ೧೯೦ ||

ಆ ನುಡಿಯನು ಕೇಳೀಯಾಕಾಂಚನಮಾಲೆ | ನಾನಿದನೆಸಗಿದೆನೆಂದು |
ತಾನುರೆ ಲಜ್ಜಿತೆಯಾಗಿ ವೈರಾಗ್ಯದಿ | ಜೈನದೀಕ್ಷೆಯ ಧರಿಸಿದಳು || ೧೯೧ ||

ಆ ವಜ್ರದಾಡಾದಿಗಳ ಕಟ್ಟನು ಕಾಮ | ದೇವ ಬಿಡಲು ನಾರದನು |
ಆ ವಿಭುಕಾಳಶಂಬರಕಚರನ ನಾ | ನಾ ವಿಧದಿಂದೊಡಬಡಿಸಿ || ೧೯೨ ||

ಕಾಮವಿಮಾನವನೇರಿಯಾನಂದದಿ | ಮನಸಿಜ ನಾರದರು |
ತಾಮೀರ್ವರು ದಕ್ಷಿಣಾಶಾಮುಖಕೆ ನ | ಭೋಮಾರ್ಗದಿನೆಯ್ದಿದರು || ೧೯೩ ||

ನಾರದನಿಂತಾನೆಯ್ತಪ್ಪ ಕೆಳಗಣ | ಧಾರಿಣಿಯೊಳು ಶೋಭಿಸುವ |
ಆ ರಾಜ್ಯವನಾರಾಜಧಾನಿಯ ತಾ | ನಾರೈವುತ ಬರುತಿರ್ದ || ೧೯೪ ||

ಪಸುಳೆದಳಿರತೋರಣದಿಂ ಗುಡಿಯಿಂ | ದೊಸಗೆವರೆಯ ದನಿಯಿಂದ |
ಎಸೆವುತಿರ್ದೊಂದು ಪುರವಕಂಡೀವೂರ | ಪೆಸರೇನೆಂದು ಮನ್ಮಥನು || ೧೯೫ ||

ನಾರದನನು ಕೇಳಲಿಂತೆಂದನೆಲೆ ಸುಕು | ಮಾರ ನಿಮ್ಮಾಮಾತುಗಳನು |
ಕೌರವಭೂಪಾಲನ ಹಸ್ತಿನಮೆಂಬ | ರಾರಾಜಿಪ ರಾಜಧಾನಿ || ೧೯೬ ||

ಮತ್ತೀ ಕುರುಭೂಪಾಲನ ನಿಜಸತಿ | ಉತ್ತಮೆಜಲಧಿಯೆಂಬೋರ್ವ |
ವೃತ್ತಪಯೋಧರೆಗುದಧಿಯೆಂಬವಳು | ತ್ಪತ್ತಿಯಾಗಿ ನೆರೆಬೆಳೆಯ || ೧೯೭ ||

ಈರೆಂಟು ವರುಷಕ್ಕೆ ನೀನು ಬಂದಾಗ ಮ | ತ್ತಾರಮಣಿ ತಪ್ಪೆನೆಂದು |
ನಾರಾಯಣನಿರೆ ನೀನೆಯ್ದವುದತಿ | ದೂರಮಾಗಲದರಿಂದ || ೧೯೮ ||

ಮತ್ತೀಕುವರಿಯ ನಿಮ್ಮಯ್ಯನಾಪುರ | ಷೋತ್ತಮ ತನ್ನಗ್ರವನಿತೆ |
ಮತ್ತಮಾನಸೆ ಸತ್ಯಭಾಮಾವಲ್ಲಭೆ | ಪೆತ್ತಾಭಾನುವೆಂಬವಗೆ || ೧೯೯ ||

ತರಲೆನಲಾವೊಸಗೆಯ ವಾದ್ಯದ ದ್ವನಿ | ಯರಲ ಸರಲ ಕೇಳ್ನನ್ನ |
ವರಮಾತೆಯಾರುಕ್ಮಿಣಿದೇವಿಯ ನಿರಿ | ಗುರುಳ್ಗಳನಾಸತ್ಯಭಾಮೆ || ೨೦೦ ||

ಮಗನ ಮದುವೆಯೊಳು ಮೊಲೆನೀರಿನೊಳು ಮೆಟ್ಟಿ | ಮಿಗೆಹರುಷದಿ ಮೀಯಬೇಕು |
ಮುಗುಳ್ಗಣೆಯನೆ ಕೇಳೆಂಬಾ ಮಾತಿಗೆ | ಯೊಗುಮಿಗೆ ಕೋಪವತಾಳಿ || ೨೦೧ ||

ಬಳಿಕಿಂತು ನುಡಿದನೆಲೇಮುನಿ ನೀನಿಲ್ಲಿ | ತಳುಮಾಡು ನಾನೀಪುರಕೆ |
ಇಳಿದಾ ಲಲನೆಯನೀಕ್ಷಿಪೆನೆಂದಾ | ತುಳಿಲಾಳಾಪುರಕಿಳಿದು || ೨೦೨ ||

ಮುತ್ತನಾವಿದನಾಗಿ ಪೋಗಿ ಕೌರವಭೂ | ಪೋತ್ತಂಸನ ರಾಜಗೃಹದ |
ಬಿತ್ತರಮಪ್ಪ ಬಾಗಿಲ್ವಾಡದೊಳು ನಿಂದು | ಮತ್ತವರೊಳಗಿಂತು ನುಡಿದ || ೨೦೩ ||

ಪುರುಷೋತ್ತಮನ ಮನೆಯ ನಾವಿದನು ನಾನು | ಕುರುಭೂಪನ ಕುವರಿಯನು |
ಹರುಷದಿ ಸಿಂಗರಿಸೆಂದೆನ್ನ ಕಳುಹಿದ | ನರಸಗರುಪಿಯಿಂತಿದನು || ೨೦೪ ||

ಎಂದು ದೌವಾರಿಕರೊಳು ಪೇಳಲವರಾ | ಅಂದಮನರಸಗರುಪಲು |
ಅಂದಾತನನೊಳಹೊಗಿಸಲಲ್ಲಿಗೆ ಮುದ | ದಿಂದ ಕಂಡಾಕುವರಿಯಿನು || ೨೦೫ ||

ನರಲೋಕದ ನಾರಿಯರು ತನ್ನುಂಗುಟ | ಕೊರೆಯಲ್ಲವೆಂದು ಲೆಕ್ಕಿಸದ |
ಗುರುವೆಯುಂಗುಟದಗುರ್ಗಳಿಗೆ ಮಿಂಚಿಕ್ಕಿದ | ನರಲಂಬನತಿವಿನ್ನಾಣದೊಳು || ೨೦೬ ||

ಕರ್ವುವಿಲ್ಲನ ಕಡುಚೆಲ್ವನೇಳಿಪ ಕುಡು | ವುರ್ವಗಳನು ತಿದ್ದಿನು |
ಕರ್ವುವಿಲ್ಲನು ನೋಡುತನವಯವ್ವವನ | ಗರ್ವದರ್ಗಾರೂಢೆಯನು || ೨೦೭ ||

ಪಂಚಶರವ ಮೊನೆಗೆಯ್ದೊಪ್ಪವಿಡುವಂತೆ | ಪಂಚಶರನು ನಡೆನೋಡಿ |
ಸಂಚಲಾಕ್ಷಿಯ ಕೈಯುಗುರಮೊನೆಯ ತಿದ್ದಿ | ಮಿಂಚಿಕ್ಕಿದನು ಬಿನ್ನಣದಿ || ೨೦೮ ||

ಮಡದಿಮಣಿಯ ಮಿಸುಪಂಗೋಪಾಂಗದೊ | ಳಿಡೆವರಿಯದೆ ಸಿಲುಕಿದುವು |
ಕಡುನೀರನ ಕಣ್ಗಳ ಬೊಂಬೆಗಳ ಪೊರೆ | ಮಡಿಲಡಿಯಿಡುವುದ ಮರೆದು || ೨೦೯ |

ಲೀಲೆಮಿಗಲುನಿಟ್ಟಪ ತನ್ನಕಣ್ಗಳ | ಕಾಲುವಣಿಯೊಳಾ ಮನವು |
ಮೇಲಿಕ್ಕಿ ಸೋಲ್ತಾಕೆಯನೆತ್ತಿಕೊಂಡಲ | ರ್ಗೋಲನಾಗಸಕೆ ಪಾರಿದನು || ೨೧೦ ||

ನಾರದನಿರ್ದವಿಮಾನಕೆ ತರಲವ | ಲಾರೈದವನಡಿಗೆರಗೆ |
ಆ ರಮಣೀಯಮಣಿಯನು ರುಕ್ಮಿಣಿಯ ಕು | ಮಾರಗೆ ಮದುವೆಯಾಗೆಂದು || ೨೧೧ ||

ಹರಸಲಿಂತೆದಳು ಮೊದಲೆನ್ನನಾತಗೆ | ತುರುಮುದದಿಂದೀವೆವೆಂದು |
ವರಮಾತಾಪಿತೃಗಳು ನುಡಿವುತ್ತಿಂದು | ವರಮಿರ್ದೀಗಮತ್ತೆನ್ನ || ೨೧೨ ||

ಅವನ ಬರವ ಕಾಣದೆ ಸತ್ಯಭಾಮೆಯ | ಕುವರನು ಭಾನುವೆಂಬವಗೆ |
ತರಕದಿ ಕೊಡಲೆನುತಿರ್ದರೆನ್ನು ಪೂರ್ವ | ಭವದ ಪಾಪದ ಫಲದಿಂದ || ೨೧೩ ||

ಚೆನ್ನಿಗ ಚಿತ್ತೋದ್ಭವನಲ್ಲದೆ ನನ | ಗನ್ನಿಗರೆಂತೆಳಸುವರು |
ಇನ್ನೀ ವಿಧಿಗೆನನೆಣಿಸುವೆನಂದತಿ | ಭಿನ್ನಮಾನಸೆಯಾಗಿ ಬಳಿಕ || ೨೧೪ ||

ಈ ವೃದ್ಧನಾವಿದನೆನ್ನನು ಕೊಂಡುಬಂ | ದೀ ವಿಧಿಯತಿ ಲೇಸಾಯ್ತು |
ಕಾವನಲ್ಲದೆನನಗನ್ಯಮಿಲ್ಲೆಂದಾ | ಭಾವೆ ಭೂತಳಕುರುಳಿದಳು || ೨೧೫ ||

ಈ ಪರಿಯಿಂ ಬೀಳಲೆತ್ತಿಕೊಂಡಾ ಪುಷ್ಪ | ಚಾಪನಿರದೆ ತಂದು ತನ್ನ |
ರೂಪದೋರಲು ಕಂಡಾನಾರದಮುನಿ | ಯಾ ಪೆಣ್ಣೊಳಿಂತು ನುಡಿದನು || ೨೧೬ ||

ಉದಧಿಕುಮಾರಿ ನಿರೀಕ್ಷಿಸು ನೀ ಮುನ್ನ | ಮದುವೆಯಾಗುವೆನೆಂದಿರ್ದ |
ಮನದಕುಮಾರಕನಾನೆಲಾಮುಗ್ಧೆ | ಮುದದಿಂದ ನಡೆನೋಡಿದಳು || ೨೧೭ ||

ಆವನಿತಾರತ್ನದಕಣ್ಗಳ ಕಾಂತಿ | ತೀವಿ ತನ್ನಂಗವನಡರೆ |
ಪೂವಿನ ಬಿಲ್ಲಬಲ್ಲಹನೊಪ್ಪಿದನಾ | ಬಾವನ್ನದ ಬೊಂಬೆಯಂತೆ || ೨೧೮ ||

ವಟಪಕ್ವಫಲರುರಾಧರೆಯಾ ನಿ | ಷ್ಕುಟಿಲ ಕುಮಾರಚಂದ್ರಮನ |
ಚಟುಲಚಕೋರಲೋಚನಪುತ್ರಿಕೆಗಳು | ಚಟಗೊಂಬಂತೆ ನೋಡಿದಳು || ೨೧೯ ||

ವರಚಕ್ರಮಾಕಮಿಥುನಸನ್ನಿಭಸ್ತನೆ | ಸರಸಿಜದಳಲೋಚವನು |
ಉರುಮುದದಿಂದ ತೆರೆದುನೋಡಿದಳಾ | ಹರಿಕುಲ ಗಗನಭಾಸ್ಕರನ || ೨೨೦ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜೀನೇಶಸಂಗತಿಯೊಳ | ಗೊದವಿ ರಂಜಿಸೆನೆವದಶಕ || ೨೨೧ ||

ಹತ್ತೊಂಬತ್ತನೆಯ ಸಂಧಿ ಸಂಪೂರ್ಣಂ