ಶ್ರೀಮತಪರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಅನಿತರೊಳಾನಾರದನ ಕೈಯಿಂದಾ | ವನಿತೆಯನಕಂತು ಕಳುಹೆ |
ಮನದೆಗೊಂಡಾಪುರಕಿಳಿದು ಸುಯೋಧನ | ಮನುಜೇಶಗಿಂತೆಂದು ನುಡಿದ || ೨ ||

ಈ ನಾರಿಯೋರ್ವಖೇಚರನೆತ್ತಿಕೊಂ | ಡಾ ನಭದೊಳು ಪೋಗುತಿರಲು |
ನಾನಾಪರಿಯೊಡಂಬಡಿಸಿತಂದೆ | ನಾನಾತನ ಕೈಯಿಂದ || ೩ ||

ಎಂದು ನುಡಿದು ಸುಕುಮಾತಿಯನಿರಿಸಿಯ | ಲ್ಲಿಂದ ಮರುತಮಾರ್ಗಕೈದಿ |
ಕಂದರ್ಪನೊಡನಾ ಪುಷ್ಪಕದೊಳಗಾ | ನಂದದಿಂದಲಿ ಬರುತಿರಲು || ೪ ||

ಇತ್ತಲು ಕೌರವನೃಪನಾಸುತೆಗೂಡಿ | ಮೊತ್ತದರಸುಗಳು ತನ್ನ |
ಸುತ್ತಿಬರುತ್ತಿರಲಾ ದ್ವಾರಾವತಿ | ಯತ್ತಲಾಗಿ ನಡೆತಂದ || ೫ ||

ಅದನು ಕಂಡಾಪಡೆ ಯಾವ ರಾಯನದೆಂದು | ಮದನನು ಕೇಳೆ ನಾರದನು |
ಇದು ಕೌರವವಲಮಿದರೊಳು ಪಾಂಡವ | ರಧಟರು ತಾವೆಲ್ಲಗೂಡಿ || ೬ ||

ದ್ವಾರಾವತಿಪುರವರಕಾವುದಧಟರ | ನಾರೈವೆನೆಂದು ಮತ್ತವನ |
ಮಾರುತಮಾರ್ಗದೊಳಿರಿಸಿಯಲ್ಲಿಂದಾ | ಧಾರಿಣಿತಳಕಿಳಿತಂದು || ೮ ||

ಬಲ್ಲಿದರವರು ನಡೆವದಾರಿಯ ಮುಂದೆ | ಬಿಲ್ಲಂಬುವಿಡಿದೋರ್ವವೃದ್ಧ |
ಬಿಲ್ಲನಂದವನು ಧರಿಸಿ ಬಲೆಯನು ಹೆಗ | ಲಲ್ಲಿ ಹಾಕಿಕೊಂಡು ಬಂದು || ೯ ||

ಎನಗೆ ಸುಂಕವ ತೆತ್ತಲ್ಲದೆ ನೀವು ಸು | ಮ್ಮನೆ ಮುಂದಕೆ ಹೋಗಲಿಲ್ಲ |
ಜನಪಜನಾರ್ದನನೆನ್ನನಿಲ್ಲಿರಿಸಿದ | ನೆನುತ ಮುಂಗಡೆ ನಡೆವವರ || ೧೦ ||

ನಿಲ್ಲಿನೀಮೆಲ್ಲರೆನುತ ತಡೆಯಲು ಬಳಿ | ಕಲ್ಲಿ ಪೋಪವರೆಲ್ಲ ನಗುತ |
ನಿಲ್ಲದೆ ಪೋಗುತಿರಲು ಕಂಡಾ ತನ್ನ | ಬಿಲ್ಲಿಂದವರನಡ್ಡನಿಲಿಸಿ || ೧೧ ||

ಅರಾರು ಬಲ್ಲಿದರೈತಂದು ನೂಕಲು | ದಾರಿಯೊಳಗೆಯಡ್ಡನಿಂದು |
ಹೋರುತಲಿರಲಲ್ಲಿಗೆ ಭೀಮಾರ್ಜುನ | ವೀರರು ತಾಮೈತಂದು || ೧೨ ||

ನೂಕಲೊಡನೆ ಕೈಕಾಲೆತ್ತದಂದದಿ | ನಾಕೃತ್ರಿಮವನಚರನು |
ಲೋಕಥಕವೀರರವರನು ತುಂಬಿಸೆ ಕಂ | ಡಾ ಕುರುಬಲದ ನಾಯಕರು || ೧೩ ||

ಇರಿಯಿರಿ ಕೊಲ್ಲುಕೊಲ್ಲೆಂದು ಬಂದದಿರಾಗೆ | ಹೆರಸಾರಿನಿಂದಾಬಲಕೆ |
ನೆರೆಮಿಗಿಲಾದ ಮಾಯಾಸೇನೆಯನಾ | ದುರುದುಂಬಿ ನಿರ್ಮಿಸಿನಿಲಲು || ೧೪ ||

ಅದನೋಡಿಯಿದು ಚೋದ್ಯಮೆಂದಾ ಭೀಷ್ಮರಿಂ | ತಿದ ನಾವು ಗೆಲಬಾರದೆಂದು |
ಪದುಳದಿ ಬಂದಾ ಮಾಯದ ಬೇಡನೊ | ಳೊದವಿನುಡಿದನಿಂತೆಂದು || ೧೫ ||

ನೀನೇಕೆ ನಮ್ಮ ತಡೆದೆಯೆಲೆ ಬೇಡ ನೀ | ನೇನ ಬೇಡುವೆ ಹೇಳೆನಲು |
ಈ ನಿಮ್ಮರಸಿನ ಮಗಳನು ಸುಂಕವ | ನಾನದೆ ಕೊಡೆ ನೀವೆನಲು || ೧೬ ||

ಆ ಮಾತುಗೇಳಿ ನಿನ್ನಾ ಸುಂಕವನು ನಿ | ನ್ನಾ ಮುರುವೈರಿಯ ಮುಂದೆ |
ಪ್ರೇಮದಿ ಕೊಡುವೆನೆಂದೊಡಬಡಿಸಲ್ಕು | ದ್ದಾಮನಂತದು ಲೇಸೆಂದು || ೧೭ ||

ಆ ಕೃತಕದ ವಾಹಿನಿಯ ಹಿಂಗಿಸಿ ಬಳಿ | ಕಾ ಕೀಲಣೆಯೊಳಗಿರ್ದ |
ಆ ಕಲಿಭೀಮಾರ್ಜುನರ ಬಿಟ್ಟಲ್ಲಿಂ | ದಾಕಶಕೆ ಪಾರಿದನು || ೧೮ ||

ಬಳಿಕಾ ಬಾಂಬಟ್ಟಯೊಳೈತಂದು ಕಂ | ಗೊಳಿಪಾ ದ್ವಾರಾವತಿಯ |
ತೊಳಗುವ ವನದ ಸಸಿನದೊಳಗಾ ಮುನಿ | ತಿಲಕನಿರಿಸಿ ತಾನಳಿದು || ೧೯ ||

ಉನ್ನತ ಬಲವ ನಿರ್ಮಿಸಿಯಾ ಕುರಪತಿ | ತನ್ನ ಮಗಳ ಕೂಡಿಕೊಂಡು |
ಮುನ್ನಟ್ಟಿದಾ ಭೀಷ್ಮರ ರೂಪವ ತಾನು | ಚೆನ್ನಾಗಿ ಧರಿಯಿಸಿಕೊಂಡು || ೨೦ ||

ಕಡುನೀರೆ ಸತ್ಯಭಾಮೆಯ ವನದೊಳು ಬಿಟ್ಟು | ಕೆಡಿಸಿಯಾವನವನಾ ರೂಪ |
ಉಡುಗಿ ವಿಕಟದೇಹದ ಮುನಿರೂಪವ | ಪಡೆದಾಕೆಯ ಮನೆಗೈದಿ || ೨೧ ||

ಅ ಗೃಹದೊತ್ತಿನ ಕೊಳದುದಕವನು ತ | ನ್ನಾ ಗುಂಡಿಗೆಯೊಳೆಲ್ಲವನು |
ಬೇಗದಿ ತುಂಬಲಲ್ಲಿರ್ದವರಿವಭೂತ | ವಾಗಲೆವೇಳ್ಕುಮೆಂದೆನಲು || ೨೨ ||

ನಡುಗೇರಿಯ ಬಂದು ನಿಮ್ಮ ನೀರನು ನೀವು | ತಡೆಯಿಮೆಂದಾ ಗುಂಡಿಗೆಯ |
ಆಡಿಮೇಲು ಮಾಡಿದೊಡಾ ನೀರು ಹೊಳೆಯಂತೆ | ಘುಡಿಘುಡಿಸುತ ಪರಿತರಲು || ೨೩ ||

ಪೊಳಲ ಜನಗಳೆಲ್ಲವೋಡಿ ಮನೆಗೆ ಪೋಗೆ | ಬಳಿಕಾರೂಪವ ಬಿಸುಟು |
ತಳೆದು ವಿಕಟಬ್ಜರೂಪವನಾಬೀದಿ | ಯೊಳಗೆ ಬರುತ್ತಿರೆ ಕಂಡು || ೨೪ ||

ನನರಿಯ ನಾರಿಯರಾರೂಪವ ಕಂಡು | ನಗಲು ಮತ್ತವರೊಳು ಕೆಲರ |
ಮೊಗದೊಳು ಗಡ್ಡಮೀಸೆಯ ಕೆಲಬರ ಮೂ | ಗುಗಳನಾನೆಯ ಸೊಂಡಿಲಂತೆ || ೨೫ ||

ಕೆಲರ ಮೊಲೆಯ ಮಾರುದ್ಧವ ಮಾಡಿ | ನಲಿವುತ ಬಂದಾರೂಪ |
ತೊಲಗಿಸಿ ಮತ್ತೋರ್ವಪಾರ್ವನ ರೂಪವ | ನಲರ್ವಿಲ್ಲನು ಕೈಕೊಂಡು || ೨೬ ||

ಆ ಶಶಿಮುಖಿ ಸತ್ಯಭಾಮೆಯ ಬಳಿಗೆ ಬಂ | ದಾಶೀರ್ವಾದವ ಮಾಡಿ |
ದೇಶಾಂತರಿ ನಾನು ಹಸಿದುಬಂದೆನು ಮೃ | ಷ್ಪಾಶನವಾಗಬೇಕೆನಲು || ೨೭ ||

ಕರಮೊಳ್ಳಿತಂತೇ ಮಾಡೆಂದಾ ಸತಿ | ಹರುಷದಿ ಮುಂದೆ ಕುಳ್ಳಿರಿಸಿ |
ತರಿಸಿಯುತ್ತಮಪಂಚಭಕ್ಷ್ಯಮನಿಕ್ಕಿಸ | ಲಿರದುಂಡು ಮತ್ತೆ ಬೇಡಿದೊಡೆ || ೨೮ ||

ಎಲೆತೆನಿತಶನವನಿಕ್ಕಿಸಲಂತದ | ನನಿತನಿತುಣುತಿರೆ ಕಂಡು |
ವನಿತೆಯಿಂತೆಂದಳಿವನು ನರವೇಷದ | ನನುಕರಿಸಿದ ರಾಕ್ಷಸನು || ೨೯ ||

ಎನೆ ನೀನು ಕೊಟ್ಟಶನವನೀನೆ ಕೊಳ್ಳೆಂ | ದೆನುತ ವೋಯೆಂದು ವೋಕರಿಸೆ |
ಮನೆಯಂಗಣವನಾಕಾರಿದ ಬಲುಗೊಳು | ಘನಮಾಗಿ ತೀವಲುಕಂಡು || ೩೦ ||

ಅಲ್ಲಿಂದಾ ಸತ್ಯಭಾಮೆ ಗೃಹಕ್ಕೋಡ | ಲುಲ್ಲಸದಿಂದಾರೂಪ |
ನಿಲ್ಲದೆ ಬಿಸುಟೋರ್ವ ಪನ್ನೊಂದನೆಯ ನೆಲೆ | ಯಲ್ಲಿ ಬಿಡಿದೆಯಾಚರಿಪ || ೩೧ ||

ಶ್ರಾವಕರೂಪವ ಧರಿಸಿ ರುಕ್ಮಿಣಿದೇವಿ | ಯಾವಾಸಕೆ ನಡೆತರಲು |
ಭಾವಶುದ್ಧಿಯೊಳುಪ್ಪರಿಗೆಯಿಂದಿಳಿತಂ | ದಾವನರುಹದಲನೇತ್ರೆ || ೩೨ ||

ಸಾತಿಶಯದ ಭಕ್ರಿಯಿಂ ಮನೆಗೈದಿಸಿ | ವೀತರಾಗಾಸನವಿತ್ತು |
ಪ್ರೀತಿಯಿಂದುತ್ತಮಮಪ್ಪಾಹಾರವ | ನಾತಗೆ ಕೊಡೆ ದಣಿಯುಂಡ || ೩೩ ||

ದಕ್ಕಿಸಲಾರದೆಯಾ ಮುನಿಯಾ ಕೂಳ | ಕಕ್ಕಲು ಕಂಡಾಸುದತಿ |
ಧಿಕ್ಕನೆ ತನ್ನ ಕೈಯಿಂದಾತುಕೊಂಡು ಬ | ಳಿಕ್ಕುರೆ ಮನದೊಳು ಮರುಗಿ || ೩೪ ||

ಇವರ ದೇಹಕೆ ತಕ್ಕಲಘುವಪ್ಪನ್ನವ | ಹವಣನರಿತು ನಾನು ಕುಡದೆ |
ಸವಿಯುಳ್ಳ ಭಕ್ಷ್ಯವನಿಕ್ಕಿದೆ ನಾನೆಂದು | ಯುವತೀಮಣಿಯಳಲುತಿರೆ || ೩೫ ||

ಆ ನಿಜಜನನಿ ರುಕ್ಮಿಣಿದೇವಿಯದೊಂದ | ನೂನಗುಣಕೆಮಿಗೆ ಮೆಚ್ಚಿ |
ಆ ನಾರದನ ತನ್ನ ವಿದ್ಯೆಯಿಂ ಕರೆಯಿಸ | ಲಾನಭದಿಂದಿಳಿತರಲು || ೩೬ ||

ಅವನ ಕಂಡಾ ರುಕ್ಮಿಣಿದೇವಿಯಿದಿರೇ | ಳ್ದವನತೆಯಾಗಿಯಾಸನವ |
ಸವಿನಯದಿಂದಿತ್ತು ಬಳಿಕೆಂದಳೆನ್ನಾತ್ಮ | ಭವನನರಸಿತಹೆನೆಂದು || ೩೭ ||

ಸುಮ್ಮನೆ ಬಂದಿರೆದಾ ಗದ್ಗದಕಂಠೆ | ಯುಮ್ಮಳಿಸಿದೊಡಾರೂಪ |
ಸುಮ್ಮಾನದಿಂದ ಬಿಸುಟು ನಿಜರೂಪನು | ಕಮ್ಮಗಣೆಯ ತೋರಿದನು || ೩೮ ||

ಎಲೆ ದೇವಿ ನೀನರಸುವ ನಿನ್ನ ಸುಕುಮಾರ | ನಲರ್ವಿಲ್ಲನಿವನು ನೋಡೆಂದು |
ಉಲಿಯಲು ನಾರದನದ ಕೇಳಿ ಶಶಿಗಂಡ | ಜಲನಿಧಿಯಂತೆ ಪೆರ್ಚಿದಳು || ೩೯ ||

ಅತ್ಯಂತ ಭಕ್ರಿಯಿನುತ್ತಮರತ್ನದ | ಚೈತ್ಯಬಿಂಬವ ಕಾಣೈಯಿತ್ತು |
ಸತ್ಯಭೂಷಣೆ ರುಕ್ಮಣಿಯಪಾದಕೆ ಕೃತ | ಕೃತ್ಯನಿರದೆಯೆರಗಿದನು || ೪೦ ||

ತನ್ನ ಕಾಲುಗುರ್ವೆಳಗಿನೊಳು ರತೀಶನ | ರನ್ನದ ಮಕುಟಮರೀಚ |
ಭಿನ್ನಮಿಲ್ಲದೆ ಕೆಲಸಲು ಸದ್ಗುಣಸಂ | ಪನ್ನೆ ತಲೆಯ ಪಿಡಿದೆತ್ತಿ || ೪೧ ||

ಹರಸಿ ಬಳಿಕೃತಿ ಹರುಷಾಂಬುವಿನಿಂ | ಸ್ವರಕುಮಾರಕನ ದೇಹವನು |
ಪಿರಿದಾಗಿ ಮಜ್ಜನಬೊಗಿಸಿ ಮತ್ತಮರ್ದಪ್ಪಿ | ತರುಣಿ ತೊಡೆಯಮೇಲಿರಿಸಿ || ೪೨ ||

ಗಲ್ಲವ ಹಿಡಿದು ಮುದ್ದಿಸಿ ನೋಡುತಿರಲು ಮ | ತ್ತಲ್ಲಿಂದ ಲಘುವಿಷ್ಟರಕೆ |
ಸಲ್ಲೀಲೆಯಿಂದಿಳಿದತಿ ಭಕ್ರಿಯೊಳಾ | ಪುಲ್ಲಶರನು ಕುಳ್ಳಿರಲು || ೪೩ ||

ಆಸಮುಯದೊಳಾಕೆಯೊಳಾ ನಾರದ | ನಾ ಸಮನೋಮಾರ್ಗಣನ |
ಓಸರಿಸದೆ ತಂದ ವಿವರವನೆಲ್ಲವ | ಪುಲ್ಲಶರನು ಕುಳ್ಳಿರಲು || ೪೩ ||

ಆಸಮಯದೊಳಾಕೆಯೊಳಾ ನಾರದ | ನಾ ಸಮನೋಮಾರ್ಗಣನ |
ಓಸರಿಸದೆ ತಂದ ವಿವರವನೆಲ್ಲವ | ನಾ ಸತಿಯೊಳು ಪೇಳಿದನು || ೪೪ ||

ವಳಿಕಿಂತೆಂದಳೆಲೇ ಮಗನೆ ನಿ | ನ್ನೆಳವಿಯ ಮುದ್ದಾಟವನು |
ಎಳಸಿನೋಡುವ ಭಾಗ್ಯವೆನಗಿಲ್ಲವಾಯ್ತೆಂ | ದಳಲುತಿರಲು ಕುಸುಮಾಸ್ತ್ರ || ೪೫ ||

ಬಾಲಕನಾಗಿ ನೆರೆವ ಪರಿಯಂತರ | ಬಾಲಕೇಳಿಯನೆಲ್ಲವನು |
ಲೀಲಾನಿಧಿ ತೋರಲು ಕಡುಹರುಷವ | ತಾಳಿ ರುಕ್ಮಣಿ ಸುಖಮಿರಲು || ೪೬ ||

ಅನಿತರೊಳಾ ಸತ್ಯಭಾಮಾವಲ್ಲಭೆ | ಯನುಚರಿಯರು ಬರ್ಪುದನು |
ಮನಸಿಜ ಕಂಡಿವರಾರೆನೆ ಕೇಳ್ದಾ | ಜನನಿಯಿಂತೆಂದಾಡಿದಳು || ೪೭ ||

ಇವರೆನ್ನ ಸೋಲದ ಮಂಡೆಯ ಕರುಳನು | ತವಕದಿ ಬೇಳ್ಪವರೆನಲು |
ಅವರು ಬಾರದಮುನ್ನಲಾ ಕಾಮನಾ ಮಾ | ಧವನರೂಪವನಿರದಾಂತು || ೪೮ ||

ಇರಲವರೈತಂದು ಕೃತಕಗೋವಿಂದಗೆ | ಭರದಿಂದ ಕರಗಳ ಮುಗಿದು |
ತರುಣಿ ರುಕ್ಮಿಣಿಗಿಂತೆದರೆಲೇ ದೇವಿ | ತುರಹದಿ ನೀವಂದು ನುಡಿದ || ೪೯ ||

ನುಡಿವಳಿಯೊಳಗಾದ ಸೋಲವನೀಗೆ | ಮ್ಮೊಡತಿ ಬೇಡಿದಳೆಂದೆಂಬ |
ನುಡಿಗೇಳಿಯಾಕೃತಕಾಂಬುಜನಾಭನು | ಕಡು ಮುನಿಸಿಂದೇಳ್ದು ಬಂದು || ೫೦ ||

ಅವರಳಕದ ಕೊಯ್ದವರ ಕೈಯೊಳು ಕೊ | ಟ್ಟವರನು ಪೋಗಿನೀಮೆನಲು |
ಅವರು ಬಂದಾ ಸತ್ಯಭಾಮೆಯೊಡನೆಯಾ | ವಿವರವನೆಲ್ಲವನುಸುರೆ || ೫೧ ||

ಉನ್ನತಮಪ್ಪ ಕೋಪದಿ ಹರಿಯೆಡೆಗೈದಿ | ಚೆನ್ನು ಮಾಡಿದೆ ಕಾರ್ಯವನು |
ಮುನ್ನ ನಿನ್ನಯ ಮುಂದೆ ನುಡಿದಾ ಭಾಷೆಗೆ | ತನ್ನ ಕರುಳ ಬೇಡಿದೊಡೆ || ೫೨ ||

ಎನ್ನವರಳಕವಕೊಯ್ದು ಬಳಿಕ ನೀ | ವೆನ್ನ ಬಳಿಗೆ ಕಳುಹುವುದು |
ನನ್ನಿಯೆನಿವಗೆನಲಾ ನುಡಿಯನು ಕೇಳಿ | ಚಿನ್ನೆ ನಾನಲ್ಲಿರ್ದುದಿಲ್ಲ || ೫೩ ||

ಎನುತ ವಿಸ್ಮಯ ಮಾನಸವಾಗಿ ಹರಿ ತ | ನ್ನನುಚರರನು ಕಳುಹಿದೊಡೆ |
ಇನಿಸುವೇಗದೊಳೈದಿ ರುಕ್ಮಿಣೀದೇವಿಗೆ | ವಿನಯದಿ ಕರಗಳ ಮುಗಿದು || ೫೪ ||

ದೇವಿ ನಿಮ್ಮ ಕುರುಳನು ಸತ್ಯಭಾಮೆಗೆ | ಈವುದೆಂಬಾ ನುಡಿಗೇಳಿ |
ಭಾವಜಬಂದವರನು ತಲೆಕೆಳಗಾಗಿ | ಯೋವದೆ ಕಟ್ಟಿನೇರಿದನು || ೫೫ ||

ಅದನು ಕೇಳಿಯಚ್ಯುತನತಿ ಕೋಪದಿ | ಕದನಕಠೋರಮಾನಸನು |
ಅಧಟಗ್ರಜ ಬಲರಾಮನ ಕಳುಹಲು | ಪದುಳದಿನಲ್ಲಿಗೈತರಲು || ೫೬ ||

ಕಂಡಿವನಾರು ಜನನಿಯೆನೆ ಕುಸುಮಕೊ | ದಂಡಕೇಳಿರಗಜಘಂಟೆಗೆ |
ಗಂಡುಸಿಂಗನುಮೆನಿಸುವ ಬಲದೇವನು | ದ್ದಂಡ ನಿನ್ನಾ ಪಿರಿಯಯ್ಯ || ೫೭ ||

ಎನೆ ಕೇಲಿಯೆಲೆ ತಾಯೆ ನಿನ್ನ ಮಗನದೊಂದು | ಘನತರವಹ ವಿಕ್ರಮವನು |
ಮನದೆಗೊಂಡು ನೋಡೆಂದು ಸಿಂಗದರೂಪ | ನನುವಾಗಿ ತಳೆದೆದ್ದು ಬಂದು || ೫೮ ||

ಬಲ್ಲಿದ ಬಲರಾಮನ ನುಂಗಿ ಕರುಮಾಡ | ದಲ್ಲಿಗೆ ನೆಗೆದು ಕುಳ್ಳಿರಲು |
ನಿಲ್ಲದಚ್ಚರಿವಟ್ಟು ನೋಡೆಂದು ಸಿಂಗದರೂಪ | ನನುವಾಗಿ ತಳೆದೆದ್ದು ಬಂದು || ೫೯ ||

ಆ ಮಣಿಹರ್ಯ್ಮದ ತುದಿಯಿಂದಾ ಬಲ | ರಾಮನನುಗುಳಿಯಲ್ಲಿಂದ |
ಆ ಮನಸಿನಾ ರೂಪವನುಡುಗಿ ಮ | ತ್ತಾ ಮಾತೃವೆಡೆಗೈದಲಿತ್ತ || ೬೦ ||

ಹರಿ ಕೇಳಿ ಹಿರಿದು ಕೋಪವ ತಾಳಿ ನಡೆತರು | ತಿರಲಾ ಸಮಯದೊಳವನ |
ವರಮಂತ್ರಿಗಳು ಬಂದು ಮುಂದೆ ಕೈಮುಗಿದು ಭೂ | ವರ ಕೇಳೀ ಮಾಯದವನು || ೬೧ ||

ಸಾಮಾನ್ಯನಲ್ಲನಾಹವಲಂಪಟಬಲ | ರಾಮನ ನುಂಗಿಯುಗುಳ್ದ |
ಭೀಮಾಕಾರದ ಸಿಂಗದಂತಾದು | ದ್ದಾಮ ಸತ್ತ್ಜನದರಿಂದ || ೬೨ ||

ಬಲವನೆಲ್ಲವ ಕೂಡಿಯಿಡಿರೊಡ್ಡಿಯವನನಾ | ನಿಲಯದಿಂದ ಪೊರಮಡಿಸಿ |
ಬಲುಹಾಗಿ ಬೆದರಿಸಿ ತಗುಳಬೇಕನಲಾ | ನಳಿನನಾಭನುಮೊಡಂಬಟ್ಟು || ೬೩ ||

ಬಲವ ಬರಿಸಿ ಕೌರವ ಭೀಮ ಪಾರ್ಥನು | ಕಲಿ ಭೀಷ್ಮರು ಮೊದಲಾಗಿ |
ನಿಲೆ ತನ್ನೊಳು ಕದನೋತ್ಸುಕನಾ ಕೃಷ್ಣ | ನೆಲೆನೆಲೆಯೊಳು ಪೌಜನಿಕ್ಕಿ || ೬೪ ||

ದೂತರ ಕರೆದು ರುಕ್ಮಿಣಿಯ ಮನೆಯೊಳಿ | ರ್ದಾತನ ಕರೆಯಿಮೆಂದೆನಲು |
ಆತುರದಿಂ ಬಂದು ಕರೆಯಲು ಕೇಳ್ದು ಮ | ತ್ತಾ ತಾಯಬಳಿಯಿಂ ಬಂದು || ೬೫ ||

ಮೀನಪತಾಕನಚ್ಯುತಸೇನೆಗೆ ಪ್ರತಿ | ಸೇನೆಯನಾವಿದ್ಯೆಯಿಂದ |
ತಾನಿಮ್ಮಡಿಯಾಗಿ ನಿರ್ಮಿಸಿ ಹೊಯಿಸಿದ | ನಾನಾ ತೆರದ ಪರೆಯನು || ೬೬ ||

ಮಾಯಾಬಲವ ಕಂಡಾ ಹರಿ ಕೈವೀಸ | ಲಾ ಯಾದವ ಬಲಮೆಲ್ಲ |
ಛಾಯಾಯುದ್ಧಮಗೆಯ್ವಂದದಿ ಮ | ತ್ತಾಯಾಸಬಡುತಿರಲಾಗ || ೬೭ ||

ಅತಿಕೋಪದಿಂ ವಿಷ್ಣು ತನ್ನ ಬೆಂಗಡೆ ನಿಂ | ದತಿರಥಗಳನು ಕಳುಹೆ |
ಆತನುಕುಮಾರನುರಗಪಾಶದಿಂದ | ಪ್ರತಿಮರ ಕಟ್ಟಲಂತದನು || ೬೮ ||

ಮರವಿಟ್ಟಂದದಿ ತುಂಬಿಸಿ ನಿಲಿಸಲು | ಮುರರಿಪುವಂತಹ ಕಂಡು |
ಪಿರಿದು ಕೋಪದೊಳಿದಿರಾಗುವನಿತರೊಳು | ಭರದಿಂದಾ ನಾರದನು || ೭೦ ||

ಅಂಬರಮಂಡಲದಿದಿಳಿದುತಂದು ಪೀ | ತಾಂಬರ ನಿನ್ನ ಕುಮಾರ |
ಶಂಬದಮರ್ದನನಿವನ ತಂದೆನು ನಾ | ನೆಂಬ ಲೇಸಿನ ಮಾತುಗೇಳಿ || ೭೧ ||

ಎಂತು ತಂದಿರೆನಲಾ ನಾರದನಾ | ದ್ಯಂತಮಾಗಿ ಪೇಳೆ ಕೇಳಿ |
ಸಂತಸದಿಂ ತಾನೇರಿದರಥವ ಮು | ರಾಂತಕನಿಳಿತರುತಿರಲು || ೭೨ ||

ಅದನು ಕಂಡಲರಂದನಿದಿರಾಗಿನಡೆತಂ | ದೊದೊವಿದಭಯಭಕ್ತಿಯಿಂದ |
ಅಧಟರದೇವನುಂಬುಜನಾಭವ ನಿಜ | ಪದಕೆ ಮಂಡೆಯ ಮಡಿಗಿದನು || ೭೩ ||

ಇಂತೆರಗಿದ ಸುಕುಮಾರಮಾರನನು ಮು | ರಾಂತಕ ತಲೆವಿಡಿದೆತ್ತಿ |
ಸಂತಸದಿಂದಹರಿಸಿ ತನ್ನ ಮೈಯೊಡೆ | ವಂತೆ ಬಿಗಿದು ತಳ್ಕೈಸಿ || ೭೪ ||

ಕಾಳಾಗರು ಭೂಜಮನಮರ್ದಪ್ಪಿದ | ಮಾಲತಿಯೆಳಲತೆಯಂತೆ |
ನೀಲಾಂಗನತಳ್ಕೆಯೊಳು ಪಸುರ್ವಣ್ಣದೈ | ಗೋಲನ ತನುವೊಪ್ಪಿದುದು || ೭೫ ||

ಇಂತಮರ್ದಪ್ಪಿ ಮುದಾಶ್ರುಗಳಿಂ ಶ್ರೀ | ಕಾಂತನೊಸೆದು ಮೈದೊಳೆಯೆ |
ಕುಂತುಕುಮಾರನು ವಿದ್ಯಾಸೇನೆಯ | ಸಂತತಿಯನು ಪರಿಹರಿಸಿ || ೭೬ ||

ಮೊದಲು ಕೀಲಿಸಿದ ವೀರರ ಕೀಲಣೆಯ ಬಿಟ್ಟು | ಮುದದಿ ನಾರದನನುಮತದಿ |
ಉದಧಿವಿಜಯ ಮೊದಲಾದ ಹೆತ್ತಯ್ಯರ್ಗೆ | ಸದುವಿನಯದೊಳೆರಗಿದನು || ೭೭ ||

ಉತ್ತಮರವರು ಹರಸಿದ ಬಳಿಕ ವಿಷ್ಣು | ಚಿತ್ತಜನನು ಮಂದಿರಕೆ |
ಎತ್ತರಮಪ್ಪ ವೈಭವದಿಂದತಿ ಮುದ | ವೆತ್ತು ಕರೆದುತಂದನಾಗ || ೭೮ ||

ಕಂಠೀರವಾಸನದೊಳಗೆ ಕುಳ್ಳಿರಿಸಿ ವೈ | ಕುಂಠನಲರಮಾರ್ಗಣಗೆ |
ಕುಂಠಿಕೆಯನು ಯುವರಾಜಪದವಿಗೆಂದು | ಕಂಠದೊಳಗೆ ಕಟ್ಟಿದನು || ೭೯ ||

ಆ ಲಗ್ನದೊಳಗಾ ಸ್ಮರಗೆ ಕೌರವಭೂ | ಪಾಲನಣುಗೆಯುದಧಿಯನು |
ಲೀಲೆಯಿಂದ ಮದುವೆಯ ಮಾಡಲೆಂದಾ | ವ್ಯಾಲಶಯನನುಜ್ಜುಗಿಸಲು || ೮೦ ||

ಸದುವಿನಯದೊಳು ಕೈಮುಗಿದಾ ಜನಕಗೆ | ಪದುಳದಿ ನುಡಿದನಿಂತೆಂದು |
ಮೊದಲು ನಾನಾ ವಿಜಯಾರ್ಧಗಿರಿಯ ತುತ್ತ | ತುದಿಯೊಳು ಬಹುವಸ್ತುಗಳನು || ೮೧ ||

ಸಾಧಿಪ ಸಮಯದೊಳಗೆ ವಶಮಾದ ಬಿ | ಜ್ಜಾದರ ರಾಜಕುಮಾರಿಯ |
ಆದಿ ವಿವಾಹವವಳದೆಂದೊಡಾ ವಿಷ್ಣು | ಪಾದೊಡವರ ಕರೆಸೆನಲು || ೮೨ ||

ಸ್ಮರಿಸಿ ವಿದ್ಯಾಯನು ಬರಿಸಿಯಾಕಾಳಶಂ | ಬರವಜ್ರದಾಡಾದಿಗಳನು |
ತುರಣೀಮಣಿರತಿಯನು ಮುಂ ಪಡೆದಾ | ವುರುತಮಪ್ಪವಸ್ತುಗವನು || ೮೩ ||

ತ್ವರತದಿ ಕರೆಸಿ ತತ್ಪುತದಿ ನಂದನದೊಳ | ಗಿರಿಸಿಯರುಪಲಾಕ್ಷಣದೊಳು |
ಮುರರಿಪುವಿದಿರ್ಗೊಳುತಾ ದ್ವಾರಾವತಿ | ಗುರುವಿಭವದೊಳೆಯ್ದಿಸಿದನು || ೮೪ ||

ಅಸಮಾನರೂಪವತಿಯನಾ ರತಿಯನು | ಕಸುಮಾಸ್ತ್ರಗೆ ಮದುವೆಯನು |
ಒಸಗೆ ಮರುಳುಗೊಂಡಂದದಿ ಮಾಡಿದ | ನೆಸಕದ ವೈಭವದಿಂದ || ೮೫ ||

ನುತಿಸುವೆನೆಂದು ಬಾಯ್ದೆರೆಯಲು ವಾಚ | ಸ್ಪತಿಗೆ ಬಾರದೆಂದನಿಪ |
ಅತಿರೂಪವತಿ ರತಿದೇವಿಯನಾ ವಿಷ್ಣು | ವ ತನುಜಗೆ ಮದುವೆ ಮಾಡಿದನು || ೮೬ ||

ತದನಂತರದೊಳು ಕೌರವನೃಪಸುತೆ | ಯುದಧಿಯನತಿರೂಪವತಿಯ |
ಸದಮಲ ಶಶಿಮಂಡಲನಿಭವದನೆಯ | ಮದನಗೆ ಮದುವೆ ಮಾಡಿದನು || ೮೭ ||

ಮತ್ತೀತೆರದಿ ಧರಾಧೀಶ್ವರರು ತಂ | ದಿತ್ತವರಣುಗೆಯರುಗಳ |
ಉತ್ತಮರೂಪವತಿಯರನೂರೆಣ್ಬರ | ಜಿತ್ತಜ ಕೈಗೂಡಿದನು || ೮೮ ||

ಆ ದರಹಸಿತನಾನೆಯರೊಳಧಿಕವಿ | ನೋದದಿನಿಲಲಂಗಜನು |
ವಾದದಿ ರುಕ್ಮಿಣಿದೇವಿ ತನಗೆ ಗೆಲು | ಮಾದುದಕಾ ಕುಂತಳವನು || ೮೯ ||

ಆತ್ಯಾತುರದಿಂದ ತರಹೇಳಿ ತನ್ನ ಸು | ಭೃತ್ಯರ ಕಳುಹಲಂತವರು |
ಸತ್ಯಭಾಮಾದೇವಿಯ ಬೇಡಿದೊಡವ | ಳತ್ಯಂತ ನಿಷ್ಠರೆಯಾಗಿ || ೯೦ ||

ಅನ್ನಿಗನಂಬರರಾಜತನುಜನನು | ತನ್ನ ನಂದದನೆಂದು ಬರಿಸಿ |
ಉನ್ನತಿಕೆಯ ಮೆರೆದೊಡೆ ನಾನು ಕೊಡುವೆನೆ | ನನ್ನ ಮಂಡೆಯ ಕುಂತಳವನು || ೯೧ ||

ಎನಲಾ ಮಾತನವರು ಪೋಗಿ ಪೇಳಲು | ವನಮಾಲಿಯಾ ನಾರದನ |
ನನೆಗಣೆಯನಸುಪ್ರಪಂಚಮನೆಲ್ಲವ | ನಿನಿಸುಳಿಯದೆ ಪೇಳೆಂದು || ೯೨ ||

ಕಳುಹಲವನು ಸತ್ಯಭಾಮಾದೇವಿಯ | ನಿಲಯಕೆ ಪೋಗಿ ಕುಳ್ಳಿರ್ದು |
ತುಳಿಲಾಳಾಮನಸಿಜನ ಪ್ರಪಂಚಮ | ತಿಳಿಯಪೇಳಿದನಿಂತೆಂದು || ೯೩ ||

ಈ ಮೇರುವಿನ ಪೂರ್ವವಿದೇಹಕೆ ಪೋಗಿ | ಶ್ರೀಮಂದರತೀರ್ಥಕರಿಗೆ |
ಪ್ರೇಮದಿಂದೆರಗಿ ಮತ್ತಾ ಗಣಧರರಿಂ | ದಾ ಮಾರನಿರ್ಪತಾಣವನು || ೯೪ ||

ಮತ್ತಮವನ ಜನ್ಮಾಂತರದಿವನು | ಬಿತ್ತರಮಾಗಿ ಕೇಳಿದನು |
ವೃತ್ತಪಯೋಧರೆಯದನುಸುರವನೇಕ | ಚಿತ್ತದಿ ಕೇಳು ಪೇಳುವೆನು || ೯೫ ||

ವಿನುತೀ ಭರತಾರ್ಯಾಖಂಡದ ಜನ | ವಿನುತ ಮುಗಧದೇಶದೊಳು |
ಘನಶೋಭೆವಡೆದ ಶಾಲಿಗ್ರಾಮವುಂಟಲ್ಲಿ | ವನಿತೆಯಗ್ಗಿಲೆಯೆಂಬಳೊಡನೆ || ೯೬ ||
ಸೋಮಶರ್ಮನೆಂಬ ಪಾರ್ವನು ಕೂಡಿಹ | ನಾ ಮಿಥುನದ ಗರ್ಭಕೊಗೆದ |
ಪ್ರೇಮದ ಸುತರಗ್ನಿಭೂತಿ ಮಾರುತಭೂತಿ | ನಾಮದವರು ನೆರೆ ಬೆಳೆದು || ೯೭ ||

ಇರಲೊಂದು ಪಗಲಾಪುರದ ನಂದನಕೋರ್ವ | ವರಮುನಿಬರಲವರೊಡನೆ |
ಉರುತರಮಪ್ಪ ಮಿಥ್ಯಾಗಮಗರ್ವದ | ಭರದಿನವರು ವಾದಮಾಡಿ || ೯೮ ||

ಅವರ ವಚೋವಜ್ರಪಾತದಿಂ ತಮ್ಮಾ | ವಿವಿಧ ವಿದ್ಯಾಗರ್ವವೆಂಬ |
ಅವನೀಧರ ನುಚ್ಚುನುರಿಯಾಗಲಾಗ ಸಂ | ಭವಿಸಿದ ಕಡುಲಜ್ಜೆಯಿಂದ || ೯೯ ||

ಮುನಿಸಿಂದ ಕೂರಸಿಗೊಂಡಾಯಿರುಳೊಳು | ಮುನಿಯ ಕೊಲೆವನೆಂದು ಪೋಗೆ |
ವನವ ರಕ್ಷಿಸುವ ಕನಕಯಕ್ಷನೆಂಬೋರ್ವ | ನಿನಿಸು ಕೋಪದಿನೆಯ್ಯಂದು || ೧೦೦ ||

ವಿವಿದೋಪಸರ್ಗಮನೆಸಗುತಮಿರಲು ಮ | ತ್ತವರದಕಾನದೆ ಬೆದರಿ |
ನವಗೀವುದಸುದಾನವನೆಂದಾ ಮುನಿ | ಗವನತರಾಗಿ ಬಿದ್ದಿರಲು || ೧೦೧ ||

ನಿಮ್ಮಕುಮಾರ್ಗವ ಬಿಟ್ಟು ಸದ್ಧರ್ಮವ | ನೆಮ್ಮಿದೊಡವಿಲ್ಲದೆ ನಾನು |
ಸುಮ್ಮನೆ ಬಿಡೆನೆಂದಾ ಯಕ್ಷನುಸುರಲು | ಹಮ್ಮನುಳಿದು ಬೇಗದೊಳು || ೧೦೨ ||

ಆ ಯಕ್ಷನುಸುರ್ದಂತಾಪಾವಕಭೂತಿ | ವಾಯುಭೂತಿಗಳು ಸುವ್ರತವ |
ಆ ಯತಿಯಿಂದ ಧರಿಸಿ ತಮ್ಮಾಲಯ | ಕೊಯ್ಯಾರದಿಂ ಬರಲಾಗ || ೧೦೩ ||

ಜನನೀನಕರಾ ವಾರತೆಯನು ಕೇಳಿ | ತನುಜರಿರಾ ವೈದಿಕದ |
ವಿನುತ ಮಾರ್ಗವ ಬಿಟ್ಟು ಸವಣಧರ್ಮವ | ನನುಕರಿಪುದು ಮತವಲ್ಲ || ೧೦೪ ||

ಎನುತ ನಿಗ್ರಹಿಸಿ ನುಡಿದ ನುಡಿಯನು ಮೀರಿ | ಜಿನಮಾರ್ಗದೊಳೋಸರಿಸದೆ |
ಅನಲಭೂತಿಯು ವಾಯುಬೂತಿಗಳನುದಿನ | ಮನದೆಗೊಂಡು ನೆರೆನೆಗಳಿ || ೧೦೫ ||

ಆ ಧರ್ಮದ ಫಲದಿಂದಿದವರಳಿದಾ | ಸೌಧರ್ಮಕಲ್ಪದೊಳೊಗೆದು |
ಸಾಧಾರಣವಲ್ಲದ ಸುಖವುಂಡು ಸ | ಮಾಧಿಮುಖದಿನೆಯ್ತಂದು || ೧೦೬ ||

ಇಲ್ಲಿಯ ಕೌಶಲವಿಷಯದ ಸಾಕೇತ | ದಲ್ಲಿಯರಿಂಜಯನೆಂಬ |
ಬಲ್ಲಿದನರಪನಿಹನವನ ರಾಜಶ್ರೇಷ್ಠಿ | ಸಲ್ಲಿಲಿತನು ಜಿನದಾಸ || ೧೦೭ ||

ಶ್ರೀವಪ್ರೆಯೆಂಬ ಸುದತಿಗೂಡಿ ಸುಖಸಂಕ | ಧಾವಿನೋದದೊಳಿರುತಿರಲು |
ಆವಹ್ನಿಭೂತಿಯನಿಲಭೂತಿಚರದೇವ | ರಾವೈಶ್ಯಮಿಥುನಕೆ ಜನಿಸೆ || ೧೦೮ ||

ಒಸೆದು ಪೂರ್ಣಭದ್ರವಾಣಿ ಭದ್ರನುಮೆಂಬ | ಹೆರಸನವರು ಕೊಡಲವರು |
ಮಿಸುಗುವ ಸತ್ಕಲೆಗೂಡಿ ಬೆಳೆದು ಹೊಚ್ಚ | ಹೊಸ ಜವ್ವನವೇರಿದರು || ೧೦೯ ||

ಈ ಪರಿಯಿಂದಿರ್ದೋಂದು ಪಗಲು ಮ | ತ್ತಾ ವುರವರದ ನಂದನಕೆ |
ಪಾಪರಹಿತನೋರ್ವ ಮುನಿಬರಲಲ್ಲಿಯ | ಭೂಪನು ತಮ್ಮ ಜನಕನು || ೧೧೦ ||

ಬಂದು ಬಳಿಕ ಧರ್ಮಾಧರ್ಮವನು ಮನ | ದಂದು ಕೇಳಿ ದೀಕ್ಷೆಗೊಳಲಲು |
ಅಂದಾ ಪೂರ್ಣಭದ್ರನು ವಾಣಿಭದ್ರರು | ದಂದುಗವನು ಪರಿಹರಿಸಿ || ೧೧೧ ||

ಉತ್ತಮದೀಕ್ಷೆಯ ಹಡೆದದರೊಳಗೇಕ | ಚಿತ್ತದಿ ನಡೆದು ಮತ್ತಳಿದು |
ಮೊತ್ತಮೊದಲ ಸಗ್ಗದೊಳು ಜನಿಯಿಸಿ ಸಂ | ಪತ್ತ ಹಡೆದು ಸುಖವುಂಡು || ೧೧೨ ||

ಮತ್ತಲ್ಲಿಯೇಕಸಮುದ್ರೋಪಮದಾಯು | ಬತ್ತುವನ್ನಬರಲಿರ್ದು |
ಸತ್ತುಬಂದೀ ಕರುಧರಣೀಮಂಡಲ | ದತ್ತುಮಹಸ್ತಿನಪುರದ || ೧೧೩ ||

ಅಧಿಪತಿ ವಿಶ್ವರೂಪಗೆಯಾಪಟ್ಟದ | ವಧು ರೂಪವತಿಯೆಂಬವಳ್ಗೆ |
ಮಧುಕೈಟಭರೆಂಬ ಸುತರಾಗಿ ಜನಿಯಿಸಿ | ತಳೆದೊಪ್ಪಿದನು ಮತ್ತಿತ್ತ || ೧೧೪ ||

ಬೆಳೆದು ಜವ್ವನವೇರಲಾ ವಿಶ್ವಭೂಪತಿ | ಬಳಿಕ ಮಕ್ಕಳಿಗೆ ರಾಜ್ಯವನು |
ತಳುವದೆ ಕೊಟ್ಟತ್ತಮ ಜಿನದೇಕ್ಷೆಯ | ತಳೆದೊಪ್ಪಿದನು ಮತ್ತಿತ್ತ || ೧೧೫ ||

ಅಧಿರಾಜ ಯುರಾಜಪದದೊಳುನಿಂದಾ | ಮಧುಕೈಟಭರಿರಲತ್ತ |
ಮಧುರಾನಗರಿಯೊಳಗೆ ವೀರಸೇನನೆಂ | ಬಧಿಪನರಸುಗೆಯ್ಯುತಿಹನು || ೧೦೬ ||

ಆವೀರಸೇನನೃಪಾಲಕನಾ ಮಧು | ಭೂವನಿತಾವಲ್ಲಭನೊಳು |
ತೀವಿದನೇಹದೊಳಿರ್ದ ಚಂದ್ರಾಭಯೆಂ | ಬಾವನಿತೆಯ ಕೈಯಿಂದ || ೧೧೬ ||

ಘನತರಮಪ್ಪ ವಸ್ತುವನು ಪಸಾಯನ | ಯವಿವೇಕಿ ಕಳುಹೆ ಮತ್ತವಳ |
ಮಿನುಗುವಲಾವಣ್ಯವ ನೋಡಿಯಾ ಮಧು | ಜನನಾಥನವಳಿಗೆ ಸೋಲ್ತು || ೧೧೮ ||

ಅವಳನು ಮನೆಯಿಂ ಪೊರಮಡಿಲೀಯದೆ | ಯುವಿವೇಕಿ ನೆರೆ ಕೂಡಿರ್ಪ |
ವಿವರವರಿದು ವೀರಸೇನನಾ ಮಧುಭೂ | ಧವನಿಂದ ತನ್ನ ವಲ್ಲಭೆಯ || ೧೧೯ ||

ತರಿಸಿಕೊಂಬುದಕೆಯಶಕ್ತನಾದುದರಿಂ | ಮರುಳಾಗಿಯಾಯಿಭುಪುರಕೆ |
ಬರಲಲ್ಲಿಯ ಜನಮರಸಿನ ಕೃತ್ಯಕೆ | ಪಿರಿದಾಗಿ ನಗುವುದ ಕೇಳಿ || ೧೨೦ ||

ಪರದಾರಹರಣದ ದುರ್ಯಶಕಂತಃ | ಕರಣದೊಳಾ ಮಧುನೃಪತಿ |
ಪಿರಿದು ಕೊಕ್ಕರಿಸುತಿರ್ದೊಂದುದಿನದೊಳಾ | ಪುರವರದುದ್ಯಾನವನಕೆ || ೧೨೧ ||

ವಿಮಲಾವಹನರೆಂಬ ಕೇವಲಿಗಳು ಬರೆ | ಸಮತೆಯಿಂದಾ ಮಧುನೃಪತಿ |
ಮಮತೆಯಿನಾತ್ಮೀಯ ಸುತಗೆ ರಾಜ್ಯವನಿತ್ತು | ರಮಣೀಯಮಪ್ಪ ದೀಕ್ಷೆಯನು || ೧೨೨ ||

ಅನುಜಾತನಾ ಕೈಟಭಗೂಡಿ ಧರಿಯಿಸಿ | ಮನದೆಗೊಂಡದರೊಳು ನಡೆದು |

ತನುವನು ಬಿಸುಟು ಮಹಾಶುಕ್ರಕಲ್ಪದೊ | ಳನಿಮಿಷಪತಿಯಾದನಿತ್ತ || ೧೨೩ ||

ರುಂದ್ರಮಪ್ಪಾಯೋಗದೊಳು ಕೈಟಭಯೋ | ಗೀಂದ್ರನೆಗಳಿಯಾದಿವದ |
ಇಂದ್ರಗೆ ಭವವದ್ಧಸ್ನೇಹದಿಂದ ಪ್ರ | ತೀಂದ್ರನಾಗಿ ಜನಿಯಿಸಿದ || ೧೨೪ ||

ಉರುಮುದದಿಂದ ಪ್ರತೀಂದ್ರವೆರಸಿ ಮಧು | ಚರದಿವಿಜಾಧೀಶ್ವರನು |
ಎರಡೆಂಟುಸಾಗರೋಪಾಮದಾಯು ತವೆವನ್ನ | ಮಿರದೆ ಸುಖವನನುಭವಿಸಿ || ೧೨೫ ||

ಗೋವಿಂದಗೆ ರುಕ್ಮಿಣಿಗಾಮಧುಚರ | ದೇವೇಂದ್ರನಲ್ಲಿಂ ಬಂದು |
ತಿವಿದ ನವಲಾವಣ್ಯಸಂಯುತನಪ್ಪ | ರ್ದೆತ್ತಾನುಮುಪಶಮದಿಂದ || ೧೨೭ ||

ಹಡೆದು ಮನುಷ್ಯಜನ್ಮವ ಪಂಚಾಗ್ನಿಯ | ನಡುವೆ ತಪಂಗೈದು ಬಳಿಕ |
ಮಡಿದು ಧೂಮಕೇತುವೆಂಬ ಹೆಸರನಾಂತು | ವುಡುಲೋಕದೊಳು ಸಂಜನಿಸಿ || ೧೨೮ ||

ಮಾರುತಮಾರ್ಗದೊಳಗೆ ಬರುತಿರಲು ಮ | ತ್ತಾ ರುಕ್ಮಿಣಿಯ ಮಗ್ಗಿಲೊಳು |
ಮಾರಕುಮಾರನಿರಲು ಕಂಡಾಯೆಡೆ | ಭೋರನೆ ನಡೆತರುತಿರ್ಪ || ೧೨೯ ||

ತನ್ನ ವಿಮಾನ ನಿಲಲು ನೆಲಕಿಳಿದಾ | ಚೆನ್ನಿಗನನು ಕಂಡು ಬಳಿಕ |
ಮುನ್ನಿನ ಹಗೆಯೆಂದರಿದೆತ್ತಿಕೊಂಡೊ | ಯ್ದುನ್ನತಮಾದಡವಿಯೊಳು || ೧೩೦ ||

ಹಾಕಿಪೋಗಲು ಕಾಳಶಂಬರ ಕೊಂಡೊಯ್ದು | ಸಾಕಲು ಜವ್ವನವಡೆದ |
ಆ ಕಾವನ ಕಂಡಂದಿನ ಚಂದ್ರಾಭೆ | ಬೇಕಾದ ಭವದೊಳು ತೊಳಲಿ || ೧೩೧ ||

ಕಾಳಶಂಬರಖಚರೇಶಗೆ ಕಾಂಚನ | ಮಾಲೆಯೆಂಬಾ ನಲ್ಲಳಾಗಿ |
ಆ ಲಲಿತಾಂಗಗಂದಿನ ಬಿದ್ಧಮೋಹದಿ | ಮೇಲಿಕ್ಕಿ ಮರುಳಾದಳತ್ತ || ೧೩೨ ||

ಮತ್ತಾ ಕೈಟಭಚರದೇವನೀ ಪುರು | ಷೋತ್ತಮಗಾಸಗ್ಗದಿಂದ |
ಸತ್ತು ಬಂದಿಂದಿಗಾರನೆಯ ತಿಂಗಳಿಗು | ತ್ಪತ್ತಿಯಾಗುವನೆಲೆಯಬಲೆ || ೧೩೩ ||

ಎನುತ ನಾರದನು ತಿಳಿಯಪೇಳಲಾ ಮಾತ | ಮನದೆಗೊಂಡಾ ಸತ್ಯಭಾಮೆ |
ಅನಿತರೊಳಗೆಯಳಕವನು ರುಕ್ಮಿಣಿದೇವಿ | ಯನುಚರರಿಗೆ ಕೊಳ್ಳಿಮೆನಲು || ೧೩೪ ||

ಇಂತೆಂದು ನುಡಿದರವರು ರುಕ್ಮಿಣಿದೇವಿ | ಕುಂತಳವನು ಬೇಡಿದೊಡೆ |
ಅಂತರಿಸದೆ ಕೊಡಬಂದರೆ ಪಿಡಿಯದೆ | ಪಿಂತಕೆ ತಿರುಗಿ ನೀವೆಂದು || ೧೩೫ ||

ನವಗಾಜ್ಞಾಪಿಸಿ ಕಳುಹಿದಳದರಿಂ | ಯುವತಿ ನಾವಿಬನೊಲ್ಲೆಂವೆಂದು |
ಅವರು ತಿರುಗಿಬಂದಾ ರುಕ್ಮಿಣಿಗಾ | ವಿವರವೆಲ್ಲವನುಸುರಿದರು || ೧೩೬ ||

ಅದನು ಕೇಳಿ ರುಕ್ಮಿಣಿದೇವಿಯತಿ ಸ | ಮ್ಮದವ ಹಡೆದು ತನ್ನ ತನುಜ |
ಮದನಕುಮಾರನ ಸುಕೃತದೊದವನೋಡಿ | ಪದುಳಮಿರ್ದಳು ಸುಖದೊಳಗೆ || ೧೩೭ ||

ತುಂಗವಿಕ್ರಮನ ಸುಹೃದ್ಭೂಭುಜಮಾ | ತಂಗಮೃಗಾಧೀಶ್ವರನು |
ಮಂಗಲಗುಣಭೂಷಣನೊಪ್ಪಿದನಾ | ಶೃಂಗಾರರಸಪೂರಿತನು || ೧೩೮ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೀಮಿಜಿನೇಶಸಂಗತಿಯೊಳ | ಗೊದವಿದಾಶ್ವಾಸವಿಪ್ಪತ್ತು || ೧೩೯ ||

ಇಪ್ಪತ್ತನೆಯ ಸಂಧಿ ಸಂಪೂರ್ಣಂ