ಶ್ರೀಮತಪರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಇಂದಿಗಾರನೆಯ ತಿಂಗಳ ರಾತ್ರಿಗೆ ಸಗ್ಗ | ದಿಂದಗಜಕುಮಾರಕನ |
ಹಿಂದಣ ಭವದನುಜಾತನು ಬಂದು ಮು | ಕುಂದಗೆ ಮಗನಾಗುವನು || ೨ ||

ಎನುತ ನುಡಿದ ನಾರದನ ನುಡಿಯ ಕೇಳಿ | ಮನದೆಗೊಂಡು ಸತ್ಯಭಾಮೆ |
ವನಜೋದರನ ಬಳಿಗೆ ಬಂದು ತಾನಂ | ದಿನ ಸೂಳನು ಬೇಡಿ ಹಡೆದು || ೩ ||

ಮಗುಳಿ ಮನೆಗೆ ಬರಲಂತದನರಿದಾ | ಮುಗ್ಗುಳ್ಗಣೆಯನು ತನ್ನ ಕೈಯ |
ಸೊಗಯಿಪ ಕಾಮಮುದ್ರಿಕೆಯನು ತಂದಾ | ಸುಗುಣೆ ಜಂಭಾವತಿಗೀಯೆ || ೪ ||

ಅದನವಳಂಗುಲಿಯೊಳಗಿಟ್ಟಾದಿನ | ವೊದಗುವ ಪರಿಯಂತಿರಿರ್ದು |
ಮದವತಿಸತ್ಯಭಮೆಯದೊಂದು ರೂಪವ | ಪದವಿನಿಂದವೆ ಕೈಕೊಂಡು || ೫ ||

ಅಂದಿನ ರಾತ್ರಿಯೊಳಗೆ ಮೊದಲೇ ಗೋ | ವಿಂದನ ಸೂಳ್ಗೆಯ್ತಂದು |
ಮಂದಗಮನೆ ನಿಲೆಸತ್ಯಭಾಮೆಯೆ ತಪ್ಪ | ದೆಂದು ರತಿಯೊಳಿರಲಾಗ || ೬ ||

ಪಿರಿದು ಸಿಂಗರದೊಟ್ಟು ಸತ್ಯಭಾಮಾದೇವಿ | ಭರಿದಿನೋಪನ ಸೂಳ್ಗೆವಂದು |
ಇರಲಾ ಮುರರಿಪು ಮತ್ತೋರ್ವಸತಿಯೊಳು | ನೆರೆದಪನೆಂಬುದ ಕೇಳಿ || ೭ ||

ಮನೆಗೆ ಬಂದತಿ ಕೋಪದಿಂದಿರ್ದಾಮರು | ದಿನದುದಯಕೆ ನಡೆತಂದು |
ವನಜನಾಭವಕಂಡು ನೀ ಪುರುಷೋತ್ತಮ | ನೆನಿಸಿಕೊಂಬುದು ಪುಸಿಮಾಡಿ || ೮ ||

ದನಗಾಹಿಯೆಂಬ ಮಾತನು ನೆಲೆಮಾಡಿದೆ | ಯೆನೆ ನಸನಗುತಾ ವಿಷ್ಣು |
ವನಜವದನೆ ಕೇಳಾ ಜಂಭಾವತಿ | ನನೆಗಣೆಯನಕೃತ್ಯದಿಂದ || ೯ ||

ಕಾಮಮುದ್ರಿಕೆಯನು ಕೈಗಿಟ್ಟು ನಿನ್ನಭಿ | ರಾಮರಪ್ಪಾರೂಪಧರಿಸಿ |
ಈ ಮಾಟದೊಳು ಬರೆನೀನೆಂದವಳೊಳು | ಪ್ರೇಮದಿ ಕೂಡಿದೆನೈಸೆ || ೧೦ ||

ಎನ್ನೊಳು ತಪ್ಪಿಲ್ಲವೆಂದಾ ತರುಣಿಗೆ | ಯನ್ನತಮಪ್ಪೊಳುನುಡಿಯ |
ಚೆನ್ನಾಗಿ ನುಡಿದು ಸಂತೈಸಿ ಕಳುಹಲಾ | ಸನ್ನುತೆ ಜಂಭಾವತಿಗೆ || ೧೧ ||

ಬಸಿರು ಬಲಿದು ನವಮಾಸ ನೆರೆಯ ಕಡು | ಹಸನಪ್ಪುದೊಂದು ಲಗ್ನದೊಳು |
ಸಿಸುವುದಯಿಸಿ ಪದ್ಮನಾಭನರಿದು | ಮೊಸೆದೊಸಗೆಯ ಮಾಡಿಸಿದನು || ೧೨ ||

ಅವನಿಗೆ ಶಂಭುಕುವರನೆಂಬ ಪೆಸರನು | ಸುವಿಧಾನದಿಂದಿತ್ತು ಸಲಹೆ |
ನವಶಶಿಗೂಡಿ ನೆರೆಬೆಳೆವಂದದಿ | ನವನಿಪಕುವರ ಬೆಳೆದನು || ೧೩ ||

ರೂಪಿನೊಳತಿಬಲದೊಳು ಸುಗುಣದೊಳು ವಿ | ದ್ಯಾ ಪರಿಣತೆಯೊಳಗವನು |
ಆ ಪಂಚಬಾಣಗೆ ಸರಿಮಿಗಿಲೆಂದು ಮ | ತ್ತಾ ಪೃಥ್ವಿಪೊಗಳುತಮಿಹುದು || ೧೪ ||

ಚಿತ್ತಭವನು ಪೂರ್ವಭವನದೊಲವಿಂ ಮನ | ವಿತ್ತಾಚರಮಶರೀರ |
ಉತ್ತಮ ಶಂಭುಕುಮಾರಚಂದ್ರನೊಳೊಲ | ವಿತ್ತು ಕೂಡಿ ಸುಖಮಿಹನು || ೧೫ ||

ತನಗೆ ಮುನ್ನತಿ ಸಾಹಸದಿಂ ಸೇರಿದ | ಘನತರಮಪ್ಪ ವಿದ್ಯೆಯನು |
ಅನುರಾಗದಿಂದಮನೇಕವನಿತ್ತನು | ದಿನಮಗಲದೆ ಕೂಡಿದನು || ೧೬ ||

ಈ ರೀತಿಯಿಂದವರೊಡಗೂಡಿ ಸುಖಮಿರ | ಲಾ ರುಕ್ಮಿಣಿಯೊಂದು ದಿವಸ |
ಸಾರವಸ್ತುವನು ಪಾಗುಡಗೊಟ್ಟು ತಮ್ಮಣ್ಣ | ನಾರುಗ್ಮಿಣಭೂಪನೆಡೆಗೆ || ೧೭ ||

ವರಸಚಿವರಟ್ಟಲವರಾ ಕೌಂಡಿನ | ಪುರಕೈದಿಯಾ ರುಗ್ಮಿಣಿಗೆ |
ಹರುಷದಿ ಪಾಗುಡಮಿತ್ತು ಬಳಿಕ್ಕಿಂ | ತೊರೆದರು ಎಲೆ ಭೂಪಾಲ || ೧೮ ||

ನಿಮ್ಮತನುಜೆ ವೈದರ್ಭೆಯ ರುಕ್ಮಿಣಿ | ತಮ್ಮಪಿರಯ ಸುಕುಮಾರ |
ಕಮ್ಮಗಣೆಯಗೀವುದೆಂದು ನಿಮಗೆ ಹೇಳ | ಲೆಮ್ಮನಿಮ್ಮಲ್ಲಿಗಟ್ಟಿದಳು || ೧೯ ||

ಎನಲೆಂದ ನಿಮ್ಮೊಡಯನು ಬಂದು ಮೊದಲೆಮ್ಮ | ಜನಕನ ಕೊಂದು ಮತ್ತೆನ್ನ |
ಅನುಜೆಯನೊಯ್ದನಾತನ ತನಯಂಗೆನ್ನ | ತನಿಜೆಯನೆಂತು ಕೊಡುವೆನು || ೨೦ ||

ಅವರಿಗೆ ನಿಮ್ಮೊಡೆಯನು ಬಂದು ಮೊದಲೆಮ್ಮ | ಜನಕನ ಕೊಂದು ಮತ್ತೆನ್ನ |
ಅನುಜೆಯನೊಯ್ದನಾತನ ತನಯಂಗೆನ್ನ | ತನುಜೆಯನೆಂತು ಕೊಡುವೆನು || ೨೧ ||

ಅವರಿಗೆ ಕೊಡುವುದಕಿಂತ ಮಾತಂಗಗೆ | ಸವಿನಯದಿಂದೀವೆನೆಂದು |
ಅವರೊಳು ಬೆಟ್ಟೆನುಡಿಯ ನುಡಿದಾ ಭೂ | ಧವನು ಕಳುಹಲವರೆಯ್ದಿ || ೨೧ ||

ಆ ರುಗ್ಮಿಣಭೂಪಾಲನೊರೆದ ಮಾತ | ನಾ ರುಕ್ಮಿಣಿಯೊಳಗವರು |
ಆರೈದುಸುರಲಂತದನು ಕೇಳ್ದಾ ಸುಕು | ಮಾರಚಂದ್ರಮನು ಪೇಳಿದನು || ೨೨ ||

ಜನನಿ ಚಿತ್ತೈಸು ರುಗ್ಮಿಣಮಾತುಳ ತನ್ನ | ತಜುಜೆಯ ಮಾತಂಗರಿಗೆ |
ಅನುನಯದಿಂ ಕೊಟ್ಟಪೆನಂದ ಗಡ ನಾ | ನನುಕರಿಸುವೆನದನೆಂದು || ೨೩ ||

ಮೆಲ್ಲಡಿಗಳಿಗೆ ಮಣಿದು ತಾಯ ಬೀಳ್ಕೊಂಡು | ನಿಲ್ಲದೆ ಶಂಭಕುವರನ |
ಸಲ್ಲೀಲೆಯಿಂ ಕೂಡಿಕೊಂಡು ವಿಮನವ | ಪುಲ್ಲಾಸ್ತ್ರನೆರಿಯಾತುರದಿ || ೨೪ ||

ಅನಿಲಪಥದೊಳೈತಂದಾ ಕೌಂಡಿನಪುರ | ವನದ ಮೇಗಡೆಯೊಳು ನಿಂದು |
ಮನಸಿಜನೋರ್ವಳು ವೃದ್ಧಮಾತಂಗಿಯ | ನನರೂಪದ ವಿದ್ಯೆಯಿಂದ || ೨೫ ||

ವಿರಚಿಸಲಾಮಾಯದ ವೃದ್ಧಮಾತಂಗಿ | ಭರದಿಂದಾ ಪುರಕಿಳುದು |
ಅವಮನೆಗಾಗಿ ನಡೆದುಬಂದು ರಂಜಿಪ | ಬೆರಕೆವಲ ಚಬ್ಬಿಲೊಳಗೆ || ೨೬ ||

ಹೊಸಹೊನ್ನ ಸರಿಗೆಯ ಬೀವುಗಳನು ತುಂಬಿ | ವಸುಧಾಧೀಶ ರುಗ್ಮಿಣನ |
ಎಸೆವವೋಲಗಕೆಯ್ದಿ ನಿನ್ನ ಮಗಳನೆನ್ನ | ಬಸಿರೊಳು ಬಂದ ನಂದನಗೆ || ೨೭ ||

ಪ್ರೀತಿಯೊಳೀವುದೆನಲು ಚೋದ್ಯವಡುತಾ | ಭೂತಳಪತಿಯಿಂತು ನುಡಿದ |
ಮಾತಂಗಿ ಕೇಳೆಮ್ಮ ಮಗಳನುತಪ್ಪ ನಿ | ನ್ನಾ ತನುಜನ ತಂದು ತೋರು || ೨೮ ||

ಎಂದು ನುಡಿದ ನುಡಿಗೇಳಿಯಂತೇಗೆಯ್ವೆ | ನೆಂದು ಮಾಯದ ಮಾತಂಗಿ |
ಪಿಂದಕ್ಕೆ ತಿರುಗಿ ರುಗ್ಮಿಣಿನಾಡಿದ ಮಾತಿ | ನಂದವನಾಕಾಮಗುಸುರೆ || ೨೯ ||

ಹೊನ್ನಜೊತ್ತಗೆ ಹೊರಜೆಯ ತೆಕ್ಕೆ ಪೆಗಲೊಳು | ರನ್ನವಾವುಗೆ ಕಂಕುಳೆಡೆಯ |
ಕೆನ್ನೆಯ ಕೀಲುಳಿ ಕಣ್ಗೆಸೆಯಲು ಕಡು | ಚಿನ್ನಿಗನಾಚಿತ್ತಭವನು || ೩೦ ||

ಫಟ್ಟಿಪಟ್ಟೆಯ ಸೀಳಸುರಳ ತಲೆಯಮೇ | ಲಿಟ್ಟಾ ಶಂಭುಕುಮಾರ |
ಮುಟ್ಟಿ ಮಯ್ಗಳ ಚೀರಿವಿಡಿದು ಕಣ್ಬಗೆಗಳ | ವಟ್ಟುಬರಲು ಬಂದನಾಗ || ೩೧ ||

ಈ ಪರಿಯಿಂ ಮಾತಂಗವೇಷವ ತಾಳಿ | ಆ ಪಟ್ಟಣಬೀದಿಯೊಳು |
ಆ ಪುರಜನಮೆಲ್ಲ ನೋಡುತಿರಲು ತ | ದ್ಭೂಪನಾಲಯಕಾಗಿ ನಡೆದು || ೩೨ ||

ಓಲಗಶಾಲೆಯನೆಯ್ದಿ ರುಗ್ಮಿಣಭೂ | ಪಾಲಗೆರಗಿ ದೂರದೊಳು |
ಆಲಿಸಿನೋಳ್ಪರಚ್ಚರಿವಡುವಂತಾ | ಲೀಲಾನಿಧಿ ನಿಂದಿರಲು || ೩೩ ||

ಆ ವಿಭುವಿಂತೆಂದು ನಿರವಿಸಿದನು ನೀ | ವಾವ ಪೊಳಲು ನಿಮ್ಮ ಕಾರ್ಯ |
ಆವುದು ಪೇಳೆನಲವರೆಂದಾರಾದ್ವಾ | ರಾವತಿ ನಾವಿಪ್ಪನಗರಿ || ೩೪ ||

ಭೂವರ ನಿಮ್ಮ ಸುತೆಯ ಮಾತಂಗರ್ಗೆ | ನೀವೀವೆವೆಂದಿರಿ ಕಂಡ |
ಆ ವಾರ್ತೆಯ ಕೇಳಿಯಾಸುಕುಮಾರಿಯ | ನಾವು ಬೇಡಲು ಬಂದೆವೀಗ || ೩೫ ||

ಎಂದುದಕರಸು ವಿರಸನಾಗದೆ ನಗು | ತೆಂದನು ತನಗಲ್ಲವರ್ಗೆ |
ನಂದನೆಯನು ಕಡುವುದರಿಂದ ನಿಮಗೀವು | ದಂದನೊ ಮಾತಂಗಿರಿರ || ೩೬ ||

ಸದಮಲತರಮಪ್ಪೀ ರೂಪಲಾವಣ್ಯ | ದೊದವು ಮಾತಂಗರಿಗುಂಟೆ |
ಇದು ನಮಗಚ್ಚರಿಯಾಗಿದೆಯೆನಲವ | ರದಿರದೆ ನುಡಿದರಿಂತೆಂದು || ೩೭ ||

ಹರಿಯ ಕರುಣದಿಂದೆಮಗೀ ರೂಪೀ | ಸಿರಿ ದೊರಕಿತು ಮೇರುಗಿರಿಯ |
ಪೊರೆದ ಕಾಗೆಯ ಮೈ ಪೊಂಬಣ್ಣವಾಗುವ | ಪರಿಯೊಳಗೆಲೆ ಭೂಪಾಲ || ೩೮ ||

ಅರಸುಗಳಾಡಿದುದಕೆ ತಪ್ಪರದರಿಂ | ತರುಣಿಯ ನಮಗೀವುದೆನಲು |
ಒರೆದನಿಂತೆಂದು ನೀವಾ ದ್ವಾರಾವತಿ | ಪುರದವರಿಂದಲ್ಲಿವರ್ಗೆ || ೩೯ ||

ಕೊಡುವುದಿಲ್ಲಾವು ಪೆರರ್ಗೆ ಕೊಡೆವೆವೆಂದು | ನುಡಿದ ನುಡಿಯ ಕೇಳುವುತವರು |
ಕೊಡದೊಡೆ ಮಾಣಿಯೆಂದಲ್ಲಿಂ ಪೊರಮಟ್ಟು | ನಡುಬೀದಿಗೆ ಬಂದು ನಿಲಲು || ೪೦ ||

ಅನಿತಾರೊಳಾ ರುಗ್ಮಿಣಿಭೂಪಾಲನ | ತನುಜೆ ವಿದರ್ಭೆಶೃಂಗರಿಸಿ |
ಕನಕರಾಜಿತ ಕನ್ಯಾಮಾಡವ | ನನುರಾಗದಿಂದೇರಿದಳು || ೪೧ ||

ಉದಧಿಯೊಳಗೆಯದಯಿಸಿ ಚಂದ್ರಲೇಖೆ ಬಂ | ದುದಯಾದ್ರಿಗೇರುವಂತೆ |
ಸುದತಿಶಿರೋಮಣಿ ಮಣಿಮಯಮಾಡವ | ಮುದದಿಂದೇರಿದಳಾಗ || ೪೨ ||

ಪ್ರೀತಿ ಮಿಗಲು ಪಿರಯುಪ್ಪರಿಗೆಯನಭಿ | ಜಾತಯರೊಗ್ಗಿನೊಳೆಯ್ದೆ |
ಆ ತರಳಾಕ್ಷಿಯೇರಿದಳಾ ಮಾಯದ | ಮಾತಂಗರ ನೋಳ್ಪೆನೆಂದು || ೪೩ ||

ನೀಲಕುಂತಳದ ನಿಬಿಡಕುಚಯುಗದವಿ | ಶಾಲನೇತ್ರದವಿಧುಮುಖದ |
ಬಾಲೆಯರೊಗ್ಗಿನೊಳೆಯ್ದೇರಿದಳು ಭೂ | ಪಾಲ ತಜನೆಯುಪ್ಪರಿಗೆಯ || ೪೪ ||

ವ್ಯೋಮಕೇಶನ ತಲೆಯೇರುವ ಗಂಗಾ | ಬಾಮಿನಿಯೆಂಬಂದೊಳು |
ಆ ಮಾರುತಪಥಚುಂಬಿತಸೌಧಮ | ನಾ ಮೀನಾಕ್ಷಿಯೇರಿದಳು || ೪೫ ||

ಈ ತೆರೆದಿಂ ಹೊನ್ನುಪ್ಪರಿಗೆಯನೇರಿ | ಯಾತಾಮರಸದಳನಯನೆ |
ಭೂತಳಕತಿ ಹೊಸತೆಂದೆನಿಸುವ ವಿ | ಖ್ಯಾತರ ವರೂಪಗಳನು || ೪೬ ||

ಅದರೊಗಜ್ರ ಪಂಚಬಾಣನ ರೂಪವ | ವಿದಳಿತ ವಿಮಲಾಂಬುಜಾಕ್ಷಿ |
ಎದೆಗೆಟ್ಟು ತನ್ನಂಗದೊಳು ಸಾತ್ವಿಕಭಾವ | ವುದಿಯಿಪಂದದಿ ನೋಡಿದಳು || ೪೭ ||

ಮಂಡಲಕತಿ ಹೊಸತೆನಿಸುವ ಕುಸುಮಕೋ | ದಂಡನಂಗೋಪಾಂಗದೊಳು |
ಕಂಡಮಾತ್ರದೊಳು ಕಣ್ಗಳಪತ್ರಿಕೆಗಳು | ಚೆಂಡೊಗೊಬಂತೆ ನೋಡಿದಳು || ೪೮ ||

ನಾರಿಯ ನಗೆಗಣ್ವೆಳಗು ಹರಿಯಲು ಕು | ಮಾರನ ಮನವ ತಾನಡರ್ದ |
ಚಾರುಸುವರ್ಣಹರ್ಮ್ಯಕೆ ಹತ್ತಿಸಲಿ | ಟ್ಟಾರಜ್ಜುವಿನಂತಾಯ್ತು || ೪೯ ||

ಕೃತಕಮಾತಂಗಮನ್ಮಥನು ತನ್ನದೆ ಕಂ | ಡತಿ ಕಾತುರಚಿತ್ತೆಯಾಗಿ |
ಮತಿಯನಿಟ್ಟು ನೋಡುತಿರ್ಪ ವಿದರ್ಭೆಯು | ನ್ನತಮಪ್ಪ ಲಾವಣ್ಯವನು || ೫೦ ||

ನಡೆ ನೋಡಿ ತನ್ನಂಬಿಗೆ ತಾನೆ ಗುರಿಯಾಗಿ | ಪೊಡವಿಯೊಳೀ ಚೆಲುವಿಕೆಯ |
ಹಡೆದ ಹೆಣ್ಗಳ ಕಾಣನೆಂದು ತಲೆಯ ತೂಗು | ತೊಡನಾರೂಪದ ಬಿಸುಟು || ೫೧ ||

ಮರಳಿ ನೋಡುತ್ತಿರಲಾಪುರವರವೆಲ್ಲ | ಕೊರವಿಯರಂದವಧರಿಸಿ |
ಕರುವಿಡಿನಡುವಿನ ಕುವರಿ ಕಾಣ್ಬಂದದಿ | ದುರುದುಂಬಿಗಳು ಬಂದರಾಗ || ೫೨ ||

ಕಂಕುಳಗೂಡೆ ಕೈಯೊಳೆಬೆತ್ತದ ಸೆಳೆ | ಶಂಕಿನಮಣಿ ಕಣೆಗಾಲ |
ಸೋಂಕಿದುಡುಗೆ ಸೀರುದಲೆಯ ಕೊರವಿಯರ | ದೇಂ ಕಡು ದೇಸಿವಡೆದರೋ || ೫೩ ||

ಈ ಚೆಲ್ವೀಜವ್ವನಮೀಲಾವಣ್ಯ | ಮೀ ಚತುತರೆಯೀ ವೇಷ |
ಭೂಚಕ್ರದೊಳಾರ್ಗಮಿಲ್ಲೆಂದ ಜನಮಾ | ಳೋಚಿಸಿ ನಡೆನೋಡುತಿರಲು || ೫೪ ||

ಮುನ್ನ ಹೋದುದನೀಗ ಮನದೊಳಗಿರ್ದುದ | ನಿನ್ನು ಮುಂದಕೆ ಬಪ್ಪುವುದನು |
ಚೆನ್ನಾಗಿ ಪೇಳುವೆವೆಂದೆಯ್ದುತಿರಲಾ | ಕನ್ನೆ ವಿದರ್ಭೆಯಾಳಿಯರು || ೫೫ ||

ಕಂಡು ಭರದಿ ಕನ್ಯಾಮಾಡಕ್ಕೊಡ | ಗೊಂಡು ಪೋಗಲು ಕುವರಿಯನು |
ದುಂಡಿ ನಿನ್ನಯ ಕೈಯ ತೋರು ನೀನುಂಡೂಟ | ಕಂಡ ಕನಸ ಹೇಳುವೆನು || ೫೬ ||

ಏಕೆ ತಡವು ಮೊಕಕ್ಕಿಯ ತರಿಸೆಂ | ಬಾ ಕೊರವಿಗೆ ಕೈಯನೀಡಿ |
ನಾ ಕಂಡ ಕನಸಾವುದುಂಡೂಟವಾವುದೆಂ | ದಾ ಕಂಜಮುಖಿ ಬೆಸಗೊಳಲು || ೫೭ ||

ವಿಲಸತ್ತ್ಪಜ್ಞಪಿತಯೆಂಬ ವಿದ್ಯೆಯಿನಾ | ಲಲನೆ ಕೇಳಿದ ಮಾತುಗಳನು |
ತಿಳಿದವಳುಂಡೂಕಂಡಕನಸನಿನಿ | ಸುಳಿಯದೆ ಪೇಳ್ದಳಿಂತೆಂದು || ೫೮ ||

ವನಿತೆ ನೀನಿಂದಿನಿರುಳು ಕಾವನ ಕೈಯ | ನೆನೆವಿಲ್ಲನರಲಂಬಗಳನು |
ಕನಸಿನೊಳಗೆ ಕಂಡುದು ಹುಸಿಯಲ್ಲೆಂ | ದೆನುತವಳಂಡೂಟವನು || ೫೯ ||

ಒಂದಿನಿಸುಳಿಯದೆ ಪೇಳೆ ಕೇಳುತ ಬಿಸ | ಮಂದವಡೆದು ವೈದರ್ಭೆ |
ಒಂದಿದ ಹರುಷದಿನೇಕಾಂತಕೊಡಗೊಂಡು | ಬಂದೆಂತೆಂದಾಡಿದಳು || ೬೦ ||

ಕೊರವಿಯರಿರ ನನ್ನ ಮನಸಿನೊಳಿರ್ದುದ | ತೆರದರಸನುಮಾಳ್ಪದೆನಲು |
ತೆರಪುಗಂಗಳ ತೆಳುವಸಿತ ತರುಣಿ ನಿ | ನ್ನೆರಕವನಿರದುಸುರುವೆನು || ೬೧ ||

ಎನುತೇಣಾಕ್ಷಿಯ ಕೈಯ ಹಿಡಿದು ನೋಡಿ | ವನಿತೆ ನೀನೋರ್ವ ಮಾದಿಗಗೆ |
ಮನವಿತ್ತೆಯೇನ ಹೇಳುವೆನೆನಲದು ಪುಸಿ | ಯೆನುತ ಮುಗುಳ್ನಗೆಯಿಡಲು || ೬೨ ||

ಮುಚ್ಚು ಮರೆಯಿದೇಕೆ ಮುಗುದೆ ಮೊದಲು ನೀ | ನಿಚ್ಚೈಸಿದವ ನಿನ್ನೆಡೆಗೆ |
ಮೆಚ್ಚಿ ಬಂದಪೆನೆನ್ನ ಮಾಕಾಳಿಯಾಣೆ ನೀ | ನಚ್ಚುಕವನು ಮಾಡಬೇಡ || ೬೩ ||

ಎಂದವಳೊಳು ಮೆಚ್ಚುಗೊಂಡಾಯೆಡೆಯಿಂ | ಬಂದಾ ರೂಪವ ಬಿಸುಟು |
ಹಿಂದಣ ಮಾತಂಗರೂಪ ಕೈಕೊಂಡೈ | ತಂದಾಪಂಚಮಾರ್ಗಣನು || ೬೪ ||

ತರುಣೀಮಣಿ ವೈದರ್ಭೆಯಮುಂದೆ ಬಂ | ದಿರಲಾತನ ಚಿಲ್ವಿಕೆಯ |
ಪಿರಿದು ನೋಡಿ ಮತ್ತೆಸಾತ್ವಿಕಮುದಿಯಿಸಿ | ಮರವಿಟ್ಟು ಮೈಯ ಮರೆದಳು || ೬೫ ||

ಅವನ ವೃಕ್ಷಸ್ಥಲವೆಂಬ ಮಂಟಪದೊಳ | ಗೆವೆದೆರೆದೆಗೆಯದೊಪ್ಪದೊಳು |
ಅವಳ ವಿಲೋಲಲೋಚನ ಪುತ್ರಿಕೆಗಳು | ಸವಿನಯದಿಂ ನಟಿಸಿದುವು || ೬೬ ||

ಚಾರುಕಟಾಕ್ಷಮರೀಚಿ ನಟಿಸುತಿರೆ | ತಾರೆವೆಗಳನಿಸಿಡದೆ |
ನಾರೀಮಣಿ ನೋಡುತಿರಲಾಮರಕು | ಮಾತನಿಂತೆಂದಾಡಿದನು || ೬೭ ||

ತಡವೇಕೆ ತರಳವಿಲೋಚನೆ ಬೀವನೆ | ನ್ನೊಡವಂದು ಮಾತಬೇಕೇಳು |
ಬಿಡು ಸಂದೇಹವನೆಂದೆತ್ತಿಕೊಂಡು ಬಾಂ | ಗಡೆಯ ವಿಮಾನಕೈತಂದು || ೬೮ ||

ರಂಭೋಪಮಾರೂಪೆಯೆಡಗಡೆ ಬಲದೊಳು | ಶಂಭುಕುಮಾರ |
ಅಂಭೋರಾಶಿಯ ನಡುವಣೂರಿಗೆ ಲೋಕ | ಭುಂಭುಕನಿರದೈತಂದು || ೬೯ ||

ಬಳಿಕಾಪೊಳಲುದ್ಯಾನದೊಳಗೆ ಬಂ | ದಿಳಿದು ವಿದ್ಯಾದೇವತೆಯರ |
ಕಳುಹಿ ಸುಗಂಧಮಾಲ್ಯಾಂಬರಭೂಷಣ | ಗಳನತಿ ವೇಗದಿಂ ತರಿಸಿ || ೭೦ ||

ತನ್ನ ಕೈಮುಟ್ಟಿ ಕುಸುಮಮಾರ್ಗಣನಾ | ಕನ್ನೆ ವೈದರ್ಭೆಯನೊಲಿದು |
ಚೆನ್ನಾಗಿ ಸಿಂಗರವನುಮಾಡಲೆಸದಳು | ರನ್ನಕೆ ಚಿನ್ನಮಿಟ್ಟಂತೆ || ೭೧ ||

ಶೃಂಗಾರಕೆ ತಾನೆ ಶೃಂಗಾರಮಾದಾ | ಅಂಗನೆಯನು ನಡೆನೋಡಿ |
ಅಂಗರಾಜಕುಮಾರನು ತನ್ನ ಮ | ನುಂಗೊಳಿಸುವ ಹಾರವನು || ೭೨ ||

ಬೀವ ಮಾಡಿಕೊಟ್ಟೆಲೆ ಪೆಣ್ಣೆ ನೀನಿದ | ನೀವೂರೊಳು ನನೆಗಣಗೆ |
ಓವದೆಮಾರೆಂದು ನೇಮಿಸಿ ವಿದ್ಯಾ | ದೇವತೆಯರನತಿ ಮುದದಿ || ೭೩ ||

ಪರಿವಾರನಾರಿಯನು ಮಾಡಿ ಛತ್ರ ಚಾ | ಮರವ್ಯಜನಾದಿಯ ಪಲವು |
ಪರಿಯ ನಿಯೋಗದ ನಿರ್ವರ್ತಿಸಿಯಾ | ತರುಣಿಯೊಡನೆ ಕಳುಹಿದನು || ೭೪ ||

ಪಿರಿದಪ್ಪರೂಪವಡೆದು ಬರ್ಪ ಕೃತ್ರಿಮ | ತರುಣಿಯಡೆಯಾತತರುಣಿ |
ಸುರಸತಿಯರ ಮಧ್ಯದೊಳು ಬರ್ಪಾಶಚಿ | ಯಿರವೆನೆ ಕಣ್ಗೊಪ್ಪಿದಳು || ೭೫ ||

ಅನುರಾಗದಿಂಬೀವಕೊಳ್ಳಿಯರಲಶರ | ಕೆನುತಾ ಕೃತಕಮಾತಂಗಿ |
ಜನಜಾತ್ರಿಯಾಗಿ ಕೌವರೆಗೊಂಡಾಪುರ | ಜನಮೀಕ್ಷಿಪಂತೈದಿದಳು || ೭೬ ||

ಕಣ್ಣ ಮುಂದಣ ಕೈಗೆಲಸವೆಲ್ಲವ ಬಿಟ್ಟು | ಉಣ್ಣದುಡೆದೆ ಪರಿತಂದು |
ಬಣ್ಣದುಟಿಯ ಬಾಲೆಯನಲ್ಲಿಯ ಗಂಡು | ಪೆಣ್ಣೆಲ್ಲ ನೆರೆದು ನೋಡಿದುದು || ೭೭ ||

ಚಿನ್ನವರದರು ಪರುದುಗೈಯಲೆಂದಿರ್ದ | ಹೊನ್ನ ಹಣವನೆಲ್ಲವನು |
ಮನ್ನಿಸದಲ್ಲಿ ಬಿಸುಟು ನಡೆತಂದಾ | ಚಿನ್ನೆಯ ನಡೆ ನೋಡಿದರು || ೭೮ ||

ನಸ್ಯಾಸಿಗಳು ತಮ್ಮ ವೇದಶಾಸ್ತ್ರಗಳನು | ಪನ್ಯಾಸಂಗಳ ಮರೆದು |
ದೈನ್ಯದೃಷ್ಟಿಗಳಿಂದ ನೋಡಿದರಾ ರಾಜ | ಕನ್ನೆಯ ಸೌಂದರಿಯವನು || ೭೯ ||

ದೊರೆದೊರೆಗಳು ತಮ್ಮ ವೈಭವವನು ಪರಿ | ಹರಿಸಿ ಬಡವರಂದದೊಳು |
ನೆರೆದ ನೆರವಿಯೊಳಗೇಕಾಂಗಿಗಳಾಗಿ | ಗುರುವೆಯ ನಿಂತು ನೋಡಿದರು || ೮೦ ||

ಅಂಗಡಿಗಳು ಸೂರೆ ಹೋಹುದ ಮರೆದೇ | ಳ್ದಂಗಡಿಕಾರರಾತುರದಿ |
ಪಿಂಗದೆ ಪೀಲಿದುರದುಂವಿನಬಲೆಯ ಮ | ನಂಗೊಳೆ ನಡೆನೋಡಿದರು || ೮೧ ||

ಅಸುವನು ಹಡೆದಪರಂಜಿಯ ಪುತ್ರಿಕೆ | ಉಸುರ ಹಡೆದ ರನ್ನಬೊಂಬೆ |
ಪೊಸನಡೆಗಲಿತ ಚಿನ್ನದ ಚಿತ್ರವೆಂದಾ | ಅಸಿಯಳ ನಡೆ ನೋಡಿದರು || ೮೨ ||

ಮಾತುಗಲಿತ ಕನ್ನಡಿ ಕಣ್ಣ ಹಡೆದಕಂ | ಜಾತಕಲಂಕುಗಾಣಿಸದ |
ಆ ತಿಂಗಳ ಬಿಂಬವೆನೆ ನೋಡಿದರು ಸಂ | ಪ್ರಿತಿಯಿಂದವಳಾಸ್ಯವನು || ೮೩ ||

ಅಳಿಕಳಭಗಳು ಕುಳ್ಳಿರ್ದ ಸಿತಾಂಬುಜ | ದಳವೊ ಬೆಳ್ಗರಿಯುದಯಿಸಿದ |
ಅಳಿಕಳಭಗಳೋಯೆಂದಾ ನೀರೆಯ | ಲಲಿತನೇತ್ರವನೀಕ್ಷಿದರು || ೮೪ ||

ಮಧುರತೆವಡೆದ ಮಾಣಿಕ ಬಲಿಯದಬಾಲ | ವಿದು ಕಡುಗೆಂಪುದ್ಭವಿಸಿದ
ಸುಧೆಯಲ್ಲದೆ ಮತ್ತೊಂದಲ್ಲವೆಂದವ | ಳಧರವ ನೆರೆನೋಡಿದರು || ೮೫ ||

ಕ್ರೂರತೆಯನು ಕುಂದುಮಾಡಿ ಮೆರೆವ ಕಂ | ಠೀರವನೋ ಮೃದುವಡೆದ |
ಚಾರುಕನಕಲತೆಯೋ ತಪ್ಪದೆಂದಾ | ನಾರಿಯ ನಡುವ ನೋಡಿದರು || ೮೬ ||

ಪಸುಳೆದಳಿರೊ ಪವಳದ ಪಾವುಗೆಗಳೊ | ಮಿಸುವ ಕೆಂದಾವರೆಯಲರೊ |
ಅಸಿಯಳರುಣಪದತಳವೋಯೆನುತೀ | ಕ್ಷಿಸುತಿರಲಾಪುರಜನವು || ೮೭ ||

ಅಲರಂಬುಗಳಾವನ ಕೈಯೊಳುಂಟುವ | ನೊಲಿದಿತ್ತೆನ್ನೀ ಕೈಯ |
ಸುಲಲಿತಮಪ್ಪೀ ಮಣಿಮಾಲೆಯ ಬೀವ | ಬೆಲೆಗೊಳಿಮೆನುತ ಬೀದಿಯೊಳು || ೮೮ ||

ಬಳಸಿನೋಳ್ಪರ ಕಣ್ಮನವನು ಹರಿ ಸೂರೆ | ಗೊಳುತ ಜಂಗಮಲತೆಯಂತೆ |
ತಳರಡಿದಳೆದ ಕುಸುಗಂಧಿಯು ರಾಜ | ನಿಲಯಕಿರದೆ ನಡೆತರಲು || ೮೯ ||

ಅಲ್ಲಿಯೋರ್ವಳು ಬಂದಾ ಅಂಗಜನಪಟ್ಟ | ವಲ್ಲಭೆ ರತಿದೇವಿಯೊಡನೆ |
ಸಲ್ಲಿಲಿಂತಾಂಗಿಯವಳ ಬರುವನು ತಾ | ನಿಲ್ಲದೆ ಪೇಳ್ದಳಿಂತೆಂದು || ೯೦ ||

ದೇವಿ ಬಿನ್ನಪ ನಮ್ಮ ಮನೆಗೆ ಉತ್ತಮ ಹಾವ | ಭಾವವಿಲಾಸಸಂಪನ್ನೆ |
ಆ ವಾಣಿಯಾಲಕ್ಷ್ಮಿ ಯಂತೋರ್ವಳತಿ ಮುಗ್ಧೆ | ಬೀವನು ಬೆಲೆಗೊಳ್ಳಿಮೆನುತ || ೯೧ ||

ಬರುತಿರ್ದಪಳೆನೆ ಕೇಳ್ದಂತೀಯ | ಚ್ಚರಿಯ ನಿರೀಕ್ಷಿಪೆನೆನುತ |
ಹರುಷದಿಂದಾರತಿದೇವಿಯುದಧಿಯನು | ಕರೆಸಿಕೊಂಡೊಡನೆಯ್ದಿದಳು || ೯೨ ||

ಕ್ಷಿತಿತಳಕತಿಶಯಮೆನಿಪ ರೂಪಾನ್ವಿತೆ | ಕೃತಕಮಾತಂಗಿ ಲೋಲಕ್ಷಿ |
ರತಿಯ ಮುಂದೆ ಬಂದಿಂತುಸುರಿದಳು ಸ | ನ್ನುತ ಕೋಕಿಲಾಲಾಪದಿಂದ || ೯೩ ||

ಅಲರಶವನು ಎನಗೆ ಕೊಟ್ಟೀಬೀವ | ಬೆಲೆಗೊಳ್ಳಿಯೆನುತನುನಯದಿ |
ಲಲಿತಾಂಗಿ ನುಡಿಯಲಂತದಕಾರತಿನಕ್ಕು | ಎಲೆ ಮಾಯದ ಮಾತಂಗಿ || ೯೪ ||

ಅರಲಂಬನೀವೀವಕೊಟ್ಟು ಪಡೆವೆನೆಂಬ | ಮರುಳುತನದ ಮಾತೇಕೆ |
ಸ್ಮರನ ರೂಪವ ನೋಡೆ ನಿನ್ನ ಮನಸಿನೊಳ | ಗರಲಂಬುಗಳು ನಟಿಸುವುವು || ೯೫ ||

ಅನಲವಳೆಂದಳೆಲೇ ದೇವಿ ನೀನೆನ್ನ | ಮನಕೆ ಬಾರದುದ ನುಡಿವರೆ |
ಎನಗೆನ್ನನು ತಂದ ಮಾತಂಗನಿಂದಾ | ಮನಸಿಜನೇನಗ್ಗಳನೊ || ೯೬ ||

ಅವನಾಲೋಕಪಾತವೆಯರಂಬಿನ | ನಿವಹವಲ್ಲವೆಯದಿರಿಂದ |
ಅವನ ನೋಡಿದ ಲೋಚನಗಳು ಕೂವಕಂ | ಭವನೆಮ್ಮಿಒದ ಕಾಕನಿರವು || ೯೭ ||

ಎನೆ ಕುರುಪತಿಯ ಕುಮಾರಿಯುದಧಿಯೆಂದ | ಳನಿಮಿಷಲೋಚನೆಯಿವಳು |
ಜನನುತ ವಂಶವಲ್ಲದೆ ದುಷ್ಕುಲಸಂ | ಜನಿತೆಯಲ್ಲಿವಳು ಭಾವಿಸಲು || ೯೮ ||

ಅಲ್ಲದ ಕುಲದವರ್ಗೀ ಚೆಲ್ವೀ ಭಾಗ್ಯ | ಮುಲ್ಲಸವೆತ್ತೀ ಚದುರ |
ಎಲ್ಲಿಯದೆಲೆ ರತಿ ನಿಮ್ಮಾತರನಗೊಡ್ಡ | ವಲ್ಲದೆ ಪೆರತೊಂದಲ್ಲ || ೯೯ ||

ನಿರುತಮಿದೆಂದು ನುಡಿಯುತಿರಲದನೋರ್ವ | ಪರಿಚಾರಕಿ ಕಂಡು ಬಂದು |
ಅರಸಿ ರುಕ್ಮೀಣಿಗರುಪಲು ಕೇಳ್ದತ್ಯಾ | ತುರದಿಂದ ಕರೆಯಲಟ್ಟಿದಳು || ೧೦೦ ||

ಅರಸಿ ಕರೆಸಲತಿ ವಿಭವದಿಂದೈತಪ್ಪ | ಗರುವೆ ಮಾತಂಗಸತಿಯನು |
ನೇರೆದಂತಃಪುರದ ಬಲಾನೀಕವ | ಚ್ಚರಿವಟ್ಟು ನಡೆನೋಡುತಿರಲು || ೧೦೧ ||

ಆ ರಾಜಮುಖಿಯ ಬಳಸಿದ ವಿದ್ಯಾಪರಿ | ಚಾರಕಿಯರ ಮಧ್ಯದೊಳು |
ತಾರಾಸತಿಯರ ನಡುವಣ ರೋಹಿಣಿ | ರಾರಾಜಿಪಂತೊಪ್ಪಿದಳು || ೧೦೨ ||

ಈ ತೆರದಿಂ ಬಂದ ಕೃತಕಮಾತಂಗಿಯ | ರೀತಿಗೆ ಬಿಸವಂದವಡೆದು |
ನೀತಿಪುಣೆ ರುಕ್ಮೀಣಿದೇವಯವಳೊಳು | ಮಾತನಿಂತೆಂದಳವಳು || ೧೦೩ ||

ಬಾಲೆ ನೀನೇನ ಮಾರುವೆ ಏನ ಕೊಂಡಪೆ | ಪೇಳೆನಲಿಂತೆಂದಳವಳು |
ಲೀಲೆಯಿಂದರಲಂಬುಗೊಮಡೀನವಮಣಿ | ಮಾಲೆಯ ಬೀವಮಾರುವೆನು || ೧೦೪ ||

ಎಂದ ಮಾತಿಗೆ ಶಂಕೆಯೊಳಾರುಕ್ಮಿಣಿ | ಕಂದರ್ಪನು ತನ್ನೊಡನೆ |
ಬಂದು ಬೆಸನ ಬೇಡಿಕೊಂಡಲ್ಲಿಗೆ ಪೋ | ದಂದುಮನರಿದು ಚಿತ್ತದೊಳು || ೧೦೫ ||

ಮರೆಬೇಡ ಮಗಳೆ ನಿನ್ನೀವೃತ್ತಾಂತವ | ತರೆದರಸನು ಮಾಳ್ಪುದೆನಲು |
ನೆರೆವೇರೆಮೊಗದಮಾನಿನಿ ಲಜ್ಜಿಸಿ ಮಂಡೆ | ಯೆರಗಿ ಮವನದೊಳಿರುತಿರಲು || ೧೦೬ ||

ಇನ್ನೇಕೆ ಮೌನ ತಿಳಿಯ ಪೇಳೆಂದಾ | ಸನ್ನುತೆ ಕೀರಿ ಕೇಳಿದೊಡೆ |
ತನ್ನ ತಾಮರೆಗೈಯ ಮುಗಿದಾಹೆಂಗಳ | ರನ್ನೆಯಿಂತೆಂದು ಪೇಳಿದಳು || ೧೦೭ ||

ವಿನುತ ವಿದರ್ಭವಿಷಯದೊಳಗೆಸೆವ ಕೌಂ | ಡಿನಪುರದರಸ ರುಗ್ಮಿಣಿನ |
ವನಿತೆ ಲಕ್ಷ್ಮೀಮತಿಯವರೀರ್ವರ ನಿಜ | ತನುಜೆ ವಿದರ್ಭೆಯೆಂಬವಳು || ೧೦೮ ||

ನಾನಿದ್ದಾನೆಲೆಗೀರ್ವರು ಮಾತಂಗ | ರಾನದೆಯ್ದಿದರವರೊಳಗೆ |
ಭೂನುತರೂಪಯುತನು ಪಿರಿಯವನೆನ್ನ | ನೀನೆಲೆಗಿರದೆಯ್ದಿಸಿದನು || ೧೦೯ ||

ಎನುತ ತನ್ನನು ತಂದ ಸುಪ್ರಪಂಚವನೊಂ | ದಿನಿಸುಳಿಯದೆ ಪೇಳೆ ಕೇಳಿ |
ಅನಿತರೊಳಾ ರುಕ್ಮಿಣಿದೇವಿಯೆದ್ದು ಬಂ | ದನುರಾಗದಿಂದಪ್ಪಿದಳು || ೧೧೦ ||

ಬಳಿಕ ಕಣ್ಬನಿಗಳ ಸುರಿವುತೆಲೇ ಕೋ | ಮಲೆ ಮುನ್ನ ಕೈಟಭಾರತಕನು |
ಮುಳಿದುಬಂದೆನ್ನ ಜನಕನನಾಹವಮುಖ | ದೊಳಗೆ ಮಡಿಹಿ ತಂದೆನೆನ್ನ || ೧೧೧ ||

ಇಂದಾತನ ಸುತನಂಗಜ ನಿನ್ನನೀ | ಯಂದದಿ ಬರಿಸಿದನೆನುತ |
ಇಂದುವದನೆಯವಳನು ತನ್ನ ಕೆಲದೊಳು | ತಂದು ಕುಳ್ಳಿರಿಸಿಕೊಂಬಾಗ || ೧೧೨ ||

ಸ್ಮರನಾಶಂಭುಕುಮಾರ ಸಹಿತಬಂದು | ವರಜನನಿಯ ಪದಯುಗಕೆ |
ಹರುಷದಿಯೆರಗಳು ಹರಿಸಿ ಕುಳ್ಳಿರಿಸಿಯಿಂ | ತೊರೆದಳು ನೀರುಗಣ್ಣಿನಿಂದ || ೧೧೩ ||

ಮಗನೆ ನೀನೆನ್ನಗ್ರಜಾತನನೇನೆಂದು | ಬಗೆಯದೆ ಪೆಣ್ಣ ತಂದೆಯಲಾ |
ಮಿಗೆ ದುಃಖವೆಮ್ಮಿಂದೆಮ್ಮ ತವರುಮನೆ | ಗೊಗೆದುದು ಕಡುಪಿರಿದಾಗಿ || ೧೧೪ ||

ಎಂದು ಮತ್ತಿಂತೆಂದಳೆಲೆ ತನುಜಾತನೀ | ನಿಂದೆನ್ನ ಪಿರಿಯಣ್ಣನನು |
ಇಂದುವದನೆಲಕ್ಷ್ಮೀಮತಿಯನು ಕರೆ | ಸೆಂದೊಡಂತೇಗೈವೆನೆಂದು || ೧೧೫ ||

ಭರದಿಂದ ವಿದ್ಯೆಯ ಬರಿಸಿ ನಾರದನನು | ಕರೆಸಿ ಕಳುಹಿಲಾಕ್ಷಣದೊಳು |
ಹರುಷದಿ ಕೌಂಡಿನಪುರಕೆ ಬಂದಾನೃಪ | ವರರುಗ್ಮಿಣನನು ಕಂಡು || ೧೧೬ ||

ಚತುರತೆಯಿಂದೊಡಂಬಡಿಸಿ ಬಳಿಕ ಭೂ | ಪತಿಯನು ಲಕ್ಷ್ಮೀಮತಿಯನು |
ಅತಿ ವಿಭವದೊಳು ದ್ವಾರಾವತಿಪುರಕಾ | ಯತಿ ತರಲರಿದು ಮುರಾರಿ || ೧೧೭ ||

ಇದಿರ್ವಂದು ಪುರಕೊಡಗೊಂಡು ಬಂದತಿ ಸಂ | ಮದದಿಂದರಮನೆಗೈದಿ |
ವಿದಿತವಿಭವದಿಂದಾವದರ್ಭೆಯನಾ | ಮದನಗೆ ಮದುವೆ ಮಾಡಿದನು || ೧೧೮ ||

ಬಳಿಕ ರುಗ್ಮಿಣಭೂಪತಿಗೆ ಸಂತಸದಿಂ | ವಿಲಸಿತಮಪ್ಪ ವಸ್ತುವನು |
ನಳಿನನಾಭನು ಮಯ್ಯನಿತ್ತು ಬೀಳ್ಕೊಡು ತಮ್ಮ | ಪೊಳನೈದಿದನು ಮತ್ತಿತ್ತಿ || ೧೧೯ ||

ಮನಸಿಜನಾಮಾನಿನಿ ರತ್ನಗಳೊಲ | ಗನುದಿನ ಸುಖಮಿರ್ದನೊಸೆದು |
ಅನಿಮಿಷಸತಿಯರೊಳಮರಾಧೀಶ್ವರ | ನನುಭವಿಸುವ ಮಾಳ್ಕೆಯೊಳು || ೧೨೦ ||

ಮಂಗಲಗುಣಮಣಿಗಣಭೂಷಿತನು | ತ್ತುಂಗಪರಾಕ್ರಮಯುತನು |
ಅಂಗಜಕುವರನೊಪ್ಪಿದನು ಸತ್ಕವಿಜನ | ಜಂಗಮಕಲ್ಪಭೂರುಹನು || ೧೨೧ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗೊದವಿದಾಶ್ವಾಸೈಕವಿಂಸ || ೧೨೨ ||

ಇಪ್ಪತ್ತೊಂದನೆಯಸಂಧಿಸಂಪೂರ್ಣಂ