ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾವೋದವೆತ್ತೆರಗುವೆನು || ೧ ||

ಹರಿವಂಶನತಿಕನಾನತನೃಪಮಸ್ತಕ | ವರಮಣಿಕುಟಾಂಘ್ರೀಯುಗಲ |
ನಿರುಪಮಗುಣಭೂಷಣನಬ್ಧಿವಿಜಯ ಭೂ | ವರಚಂದ್ರಮನೊಪ್ಪಿದನು || ೨ ||

ಕಾರಣಪುರಷರು ವಸುದೇವ ಬಲಭದ್ರ | ನಾರಾಯಣ ಮನ್ಮಥರು |
ಚಾರುಚರಣಮೂಲದೊಳು ಮುಗ್ಗುತಿರಲಾ | ಧೀರಲಲಿತನೊಪ್ಪಿದನು || ೩ ||

ಆ ಪೃಥಿವಿಪನ ನಿಜಾಂಗನೆ ಸಕಲ ಕ | ಲಾಪರಿಣತೆ ಪುಣ್ಯವಂತೆ |
ರೂಪವಿಲಾಸಾನ್ವಿತೆ ಗುಣಭೂಷಣೆ | ಯಾ ಪೆಣ್ಮಣಿ ಶಿವದೇವಿ || ೪ ||

ಅವಳ ಸೌಂದರ್ಯಮವಳ ನವಲಾವಣ್ಯ | ಮವಳ ಸಲ್ಲಿಲಿತವಿಲಾಸ |
ಅವಳ ವಿವೇಕದೊದವು ಭಾವಿಸಿದೊಡೆ | ಭುವನದೊಳತ್ಯಾಶ್ಚರ್ಯ || ೫ ||

ಅರಲೆಯಪಾದುಕ ಕರಗಿನರಸವನು | ಪರಿಪೂರಿಸಿದಂದಮಾಗಿ |
ತರುಣಿಯ ಮೃದುಪಾದರಳದೊಳರುಣರುಚಿ | ಯಿರವು ಮನೋಹರಮಾಯ್ತು || ೬ ||

ಉಗುರೆಂಬುವೈದೈದು ನಗೆಗಳ್ಗಳಿಂದ ಗ | ಧಗಿಪ ಶುಕ್ತಿಯ ಚರಮಾಂಗ |
ಸೊಗಯಿಸುವಂತಾಸೊಬಗುಗಾತಿಗೆ ಮೊಗು | ಮಿಗೆ ರಂಜಿಸಿದುವು ಮೇಗಾಲು || ೭ ||

ಲಲಿತಾಂಘ್ರಿ ಕೂರ್ಮಪೀಠದ ಮೇಲೆ ಜಂಘೆಯೆಂ | ಬಲಶರದವತ್ತಳಿಗೆಯ |
ನೆಲಸಿ ವಜ್ರದ ಮೊಳೆಗೊಟ್ಟಂತಿರೆಸೆದುವು | ಲಲನೆಯ ಗೂಢಗುಲ್ಫಗಳು || ೮ ||

ಬಾಲಕರೇಣುಕರಕೆಸಮವಾದ | ಬಾಲೆಯ ಬಟ್ಟಸೊಡೆಗಳು |
ಬಾಳೆಯಂಕಂಬ ತಾವೆಣೆಯೆಂಬ ಗರ್ವದಿ | ಬಾಳೊಂದೇ ತಮಗಾಯ್ತು || ೯ ||

ಅಂಗಜಭೌತಿಕನತಿ ಸಂಯಮಿಗಳ ಬೆ | ಡಂಗ ಬೇಯಿಸಿದ ಭಸ್ಮವನು |
ಪಿಂಗದೆ ತೀವಿದಾಧಾರದ ಗುಂಡಿಗೆ | ಯಂ ಗೆಲ್ದುದವಳ ನಿತಂಬ || ೧೦ ||

ಬಡಬಾಸೆ ಸುಳಿನಾಭಿಯಿರ್ದ ಕಾರಣದಿಂದ | ಮಡದೀಮಣಿಗೆ ಸಂಶಯದಿ |
ನಡುವುಂಟೆಂಬುದನರಿವರಲ್ಲದೆಯದ | ನಡೆನೋಡಿ ಕಂಡವರಿಲ್ಲ || ೧೧ ||

ತನುಮಧ್ಯದೊಳು ನಿಂದ ಲಾವಣ್ಯಜಲದೊಳು | ತನು ಸೊಬಗಿನ ಸಣ್ಣ ಸೋನೆ |
ಹನಿವಾಗಲೊಗೆದ ಕಿರಯ ಬಟ್ಟದೆರಯೆನೆ | ವನಿತೆಯ ನಾಭಿಯೊಪ್ಪಿದುದು || ೧೨ ||

ಅಂಗಜನೊಲಿದರೊಳಗಲದ ಮೋಹಿಜ | ನುಂಗಳನಂಜಬೇಡೆಂದು |
ಪಿಂಗದೆ ಪಿಡಿದೆತ್ತಿಭಯಹಸ್ತದ ರೇಖೆ | ಯಂ ಗೆಲ್ದುವವಳವಳಿಗಳು || ೧೩ ||

ಸುಳಿನಾಭಿಯೆಂಬ ಕೂಪದೊಳೊಗೆದಸಿತೋ | ತ್ಪಲನಾಳಮತಿರಂಜಿಪಂತೆ |
ಲಲಿತಲತಾಂಗಿಯ ತನುಮಧ್ಯದೊಳಗೆ ಕ | ಣ್ಣೊಳಿಸಿದುದಾರೋಮರಾಜಿ || ೧೪ ||

ವಿಟವಿತತಿಗೆ ವಿಷವನು ಪೂರಿಸಿ ಸಂ | ಕಟ ಮಾಳ್ಪ ಮೋಹಸರ್ಪಗಳ |
ಘಟಯುಗಮೆನೆ ಗುರುಕುಚಗಳೊಪ್ಪಿದುವಾ | ಚಟುಲಚಕೋರಲೋಚನೆಗೆ || ೧೫ ||

ವರವೈರಿವದನವಿಧುವ ನೋಡೊಲೊಲ್ಲದೆ | ಧರಣಿಗೆ ಮೊಗಮಾಗಿ ಬೆಳೆದ |
ಅರುಣಾಂಭೋರುಹನಾಳಗಳೆನಲಾ | ತರುಣಿಯ ತೋಳ್ಗಳೊಪ್ಪಿದುವು || ೧೬ ||

ಶೃಂಗಾರಶರಧಿಯೊಳೊದೇಳ್ವ ಮೊಗಮೆಂಬ | ತಿಂಗಳ ಬೆಂಗಡೆಯುದಿಸಿ |
ಪಿಂಗದೆ ನೆಗೆವ ಕಂಬುವಿದೆಂಬಂತೆ ವೆ | ಡಂಗಾದುದವಳ ನುಣ್ಗೊರಲು || ೧೭ ||

ಉರಗನುಂಡುಗಳ್ದುನ್ನವ್ಯಾಧಿವಡೆದಾ | ಕರಿವದನನ ಶಾಪವಡೆದ |
ವರವಕ್ರಿಯಾದ ದೋಷಾಕರನಾಕೆಯ | ಸಿರಿಮೊಗಕೆಣೆಯೆನಬಹುದೇ || ೧೮ ||

ಮಾಣಿಕ್ಯಮಣಿಗರಡಿಗೆ ಮಧುರತೆಯಿಕ್ಕೆ | ದಾಣ ಸುಗಂಧದ ಭರಣಿ |
ವಾಣಿಯನೆಲೆವನೆಯಾಯ್ತು ಬಾಯ್ದೆರೆಯಾ | ಏಣಾಂಕನಿಭಜಮುಖಿಗೆ || ೧೯ ||

ಮುತ್ತಿನಸರವೊ ಮುಗುಳ್ಗಣೆಯನ ಸೊಂಪು | ವೆತ್ತ ಸತ್ಕೀರ್ತಿವಲ್ಲರಿಯ |
ಬಿತ್ತಿನ ಸಾಲೊ ವಜ್ರದ ಪಂಕ್ತಿಗಳೋ | ಮತ್ತಕಾಶಿನಿಯ ದಂತಗಳೊ || ೨೦ ||

ಮುಗುದೆಯ ಮುಖದ ನಾಸಾಚಂಪಕದರೆ | ಮುಗುಳ ವಾಸನೆ ತುಂಬಿದವರಿಗೆ |
ಪಗೆಯಾದುದಿಲ್ಲವಗುಣದಿರವುಂಟೇ | ಸುಗುಣಿಗಳನು ಪೊರ್ದಿದವರ್ಗೆ || ೨೧ ||

ಗುರುವೆಯ ಗಂಡಮಂಡಲದ ಗುಣವನವ | ಧರಿಸಿದ ತುಂಬುಲದೆಲೆಗೆ |
ಸುರತೋದ್ದೀಪನಕಾರಿ ನೀನಾಗೆಂದು | ವರವಿತ್ತ ಮದನವಿರಿಂಚಿ || ೨೨ ||

ಮುತ್ತೈದೆತನದ ಶೃಂಗಾರಕೆ ತಾನಿಂಬು | ವೆತ್ತು ರಂಜಿಸುವ ಕಾರಣದಿ |
ವೃತ್ತಪಯೋಧರಯುಗಳೆಯ ಕರ್ಣದೊಂ | ದುತ್ತಮಿಕೆಯನೇನೆಂಬೆ || ೨೩ ||

ಬಟ್ಟಜವ್ವನದ ಬಾಲೆಯ ಮೊಗದೊಳಗಳ | ವಟ್ಟು ನಿಶಿತಗುಣವಾಂತ |
ದಿಟ್ಟಿಗಳೋ ಧೀರೋದಾತ್ತರೆದೆಯೇ | ದಿಟ್ಟಿಗಳೋ ಭಾವಿಸಲು || ೨೪ ||

ಅಂಕದ ಮುಖಕಿದಿರಾದ ವಿರಕ್ತರ | ಬಿಂಕವನಂಗಜನವಳ |
ಕೊಂಕಿದ ಪುರ್ಬೆಂಬ ಬಿಲ್ಗೆ ಹೂಗಣೆಯಿಟ್ಟು | ಕೊಂಕುವಂತಾರುತೆಸುವನು || ೨೫ ||

ಕುವಲಯಕಾನಂದವನು ವಿಬುಧಜನ | ನಿವಹಕೆ ಸಂಪ್ರೀತಿಯನು |
ನವಮೋಹನಾಬ್ಭಿಗುಚ್ಛಹವನೆಯ್ದಿವುದಾ |ಯುವತಿಯ ನಿಟಿಲೇಂದುಲೇಖೆ || ೨೬ ||

ಕರುಳೋ ಕುಡುವಿಲ್ಲನೆಂಬ ಶಬರನಾ | ವಿರಹಿವಿಹಂಗವ ಸೆಳೆವ |
ಉರುಖೀಯೆನೆ ಕಣ್ಗೆಡ್ಡವಡೆದುವಾ | ಪರಿಪೂರ್ಣಚಂದ್ರಾನನೆಯ || ೨೭ ||

ಬಂಧೂಕಸದೃಶಾಧರೆಯ ವಿಸೃತ ಕೇಶ | ಬಂಧನಮಾತನಗುಳ್ಳ |
ಬಂಧುರತರದಿ ಬಲ್ಲರ ಬಗೆಗಳನನು | ಬಂಧವನನು ಮಾಡುತಿಹುದು || ೨೮ ||

ಆ ಸುತುಚಿತಮಿಥುನದ ಗರ್ಭದೊಳು ಮ | ತ್ತಾ ಸುಪ್ರತಿಷ್ಠಚರೇಂದ್ರ |
ಆ ಸರ್ವಾರ್ಥಸಿದ್ಧಿಯಿಳಿತಂದಾರು | ಮಾಸಕೆ ನೇಮೀಶನಾಗಿ || ೨೯ ||

ಜನಿಯಿಪನೆಂಬುದನವಧಿಬೋಧದಿನರಿ | ದನಿಮಿಷಪತಿ ನಾಲ್ದರದ |
ಅನಿಮಿಷರನು ಕೂಡಕೊಂಡು ದ್ವಾರಾವತಿ | ಗನಿಲಮಾರ್ಗದನಿಳೆತಂದು || ೩೦ ||

ಪಿಂಗದ ಭಕುತಿಯಿಮದವೆಯಾನೃಪಮಿಥು | ನುಂಗಳತಿಮಮತೆಯೊಳು |
ರಂಗುವಡೆದು ರತ್ನದ ಹಸೆಯೊಳಗೆ ಮ | ನಂಗೊಳಿಪಂತೆ ಕುಳ್ಳಿರಿಸಿ || ೩೧ ||

ಗಂಗಾನದಿ ಮೊದಲದ ಪಾವನ ತೀ | ರ್ಥಂಗಳ ನಿರ್ಮಲಜಲವ |
ಪೊಂಗೊಡದೊಳು ತಿವಿಯದಂಪತಿಗಳುತ್ತ | ಮಾಂಗಕೆ ಮಜ್ಜನವೆರೆದ || ೩೨ ||

ಅಮರೀಮಾಂಗಲ್ಯಸಂಗೀತಸ್ವನ | ವಮರದುಂಬಿಯಿಂಚರಗಳು |
ಅಮರಲೆಣ್ದಸೆಯನುನ್ನತಹರುಷದೊಳಾ | ಅಮರೇಶನಾದಂಪತಿಗಳು || ೩೩ ||

ದಿವ್ಯವಿಭೂಷಣ ದಿವ್ಯಾನುಲೇಪನ | ದಿವ್ಯಾಮೋದಪ್ರಸೂನ |
ದಿವ್ಯಾಂಬರದಿಂದ ಪೂಜೆಮಾಡಿದನಾ | ದಿವ್ಯದೇಹಿಗಳನೀತೆರದಿ || ೩೪ ||

ಮಣಿಮಯಮೌಳಿಕುಂಡಲಮುದ್ರಿಕೆ ಕಂ | ಕಣತಾರಹಾರಕೇಯೂರ |
ಫಣಿಸರಪದಕವುತ್ತರಿಕೆಯಾದಿಯ ಭೂ | ಷಣವಿಟ್ಟರೆಬ್ಧಿವಿಜಯಗೆ || ೩೫ ||

ರಂಭಾವಿಲಾಸವನು ಸೋಲಿಪ ಕನ | ಕಾಂಭೋಜಾಸ್ಯೆಯ ತೊಡೆಗೆ |
ರಂಭೆ ನಿರಯನಿಟ್ಟಳಾಪಸದನದ ಪ್ರಾ | ರಂಭದೊಳತಿ ಚದುರಿಂದ || ೩೬ ||

ಕೇಶಬಂಧವನತ್ಯಂತ ಬಿನ್ನಣದಿ ಸು | ಕೇಶಿ ರಚಿಸಲಾಸ್ಯವೆಂಬ |
ಆ ಶಶಿ ತನ್ನ ಕರೆಯ ಪೆರನೂಂಕಿದಂ | ತಾ ಶಿವದೇವಿಗೊಪ್ಪಿದುದು || ೩೭ ||

ತಿಲಕಮನೊಸೆದಿಕ್ಕಿದಳು ತಿಲೋತ್ತಮೆ | ಯೆಳೆವೆರೆಗಂಕವಿಟ್ಟಂತೆ |
ವಿಲಸಿತಮಪ್ಪ ಕತ್ತುರಿಯಿಂ ನೃಪಕುಲ | ತಿಲಕನಂಗನೆಯಲಕದೊಳು || ೩೮ ||

ಮಂಜಿನಹನಿಯರೆಮುಗುಳ್ದ ಸಂಪಿಗೆಯೊಳು | ಮಂಜುಳಮಾಗಿ ನಿಂದಂತೆ |
ಮಂಜುಘೋಷಯಿಕ್ಕಿದ ನಾಸಾಮಣಿ | ಕಂಜವದನೆಗೊಪ್ಪಿದುದು || ೩೯ ||

ಶ್ರೀಕಾರಮನೇಳಿಪ ಕರ್ಣಯುಗದೊಳು | ಶ್ರೀಕಾಂತೆ ಮುತ್ತುನೋಲೆಯನು |
ಸ್ವೀಕಾರಂಗೆಯ್ದಳಾಕೈವಲ್ಯ | ಶ್ರೀಕಾಂತ ಮಾತೃವಿಗೆ || ೪೦ ||

ರೋಹಿಣಿಯವಳ ಕುಂಚಕಂಠೆಯನಾ | ರೋಹಣವನು ಮಾಡಿದಳು |
ಊಹೆವಡೆದುದಂಗಜಗಜ ಶಿರಕೆ ತಾ | ರಾಹಾರಮಿಕ್ಕಿದಂದೊಳು || ೪೧ ||

ಇಂದ್ರಾಣಿಯ ಸರವನು ತಂದಿಕ್ಕಿದ | ಳಿಂದ್ರಾಣಿಯತಿಮುದದಿಂದ |
ಇಂದ್ರನರೇಂದ್ರವಂದಿತಚರಣನ ನೇಮಿ | ಚಂದ್ರನ ಜನನಿಯ ಕೊರಲ್ಗೆ || ೪೨ ||

ಗಿರ್ವಾಣಧನುರ್ಲೇಖೆಯನಿರಿಮುಗಿಲೊಳು | ನೇರ್ವಡಿಸಿದ ಮಾಳ್ಕೆಯೊಳು |
ಊರ್ವೀದೂರವ ಬಳಸಿದ ನಿರಿಗಿಕ್ಕಿದ | ಳೂರ್ವಸಿ ಮಣಿಮೇಖಲೆಯ || ೪೩ ||

ಪದ್ಮರಾಗರತ್ನೋಪಮ ನಿಜಪದ | ಪದ್ಮಯುಗಲಕಲತಗೆಯ |
ಪದ್ಮಾವತಿ ಮನವೊಸೆದೂಡಿಸಿದಳಾ | ಪದ್ಮಿನಿ ಶಿವದೇವಿಗಾಗ || ೪೪ ||

ಲಲನೆಗೊಪ್ಪಿದುವಲಕ್ತಕಕಾಂಚಿಕಂಚುಕ | ತಿಲಕ ಸೂಸಕತಾಂಟಂಕ |
ಲುಳಿಸರಪದಕ ನಾಸಿಕ ಭೂಷಣಕಲ್ಕ | ಬಳೆಬಾಹುಪರಿ ಮಣಿಕಟಕ || ೪೫ ||

ಸುಭಿಲತೆಗೆ ಸುಮನೋಮಂಜರಿಯೇಣ | ಧರಗೆ ನವಾಮೃತಕಿರಣ |
ಸರಸೇಕ್ಷುಕೋದಂಡಕೆ ಪಂಚಮಾರ್ಗಣ | ದಿರವಾದುದವವಳಾಭರಣ || ೪೬ ||

ಇಂತು ಸುರಾಂಗನೆಯರ ಕೈಯಿಮದತಿ | ಸಂತಸದಿಂ ಭೂಷಣವನು |
ಕಂತುಹರನ ನಿಜಮಾತೆಗಿಂದ್ರಾಣೀ | ಕಾಂತನು ರಚನೆ ಮಾಡಿಸುತ || ೪೭ ||

ಮಿಗೆ ರಂಜಿಪಾರುಕುಲಾದ್ರಿಯ ಕಾಸಾ | ರಗಳ ಸುರತ್ನ ಕೂಟದೊಳ |
ಸೊಗಯಿಪ ಶ್ರೀ ಹ್ರೀ ಧೃತಿ ಕೀರ್ತಿ ಬುದ್ದಿ ಲ | ಕ್ಷ್ಮಿಗಳೆಂಬ ಸತಿಯರರುವರ || ೪೮ ||

ಬಳಿಕರುಚಕಶೈಲದ ಚೈತ್ಯಗೃಹದ ಕ | ಣ್ಗೊಳಿಪ ಸುರಪದಿಕ್ಕಿನೊಳು |
ತೊಳಗುವ ಕೂಟಾಷ್ಟಕದೊಳಿಗಿರ್ಪ ದಿ | ಗ್ಲಲನೆಯರುಗಳೆಣ್ಬರನು || ೪೯ ||

ಮತ್ತಾ ಗಿರಿಶಿಖರದ ತೆಂಗಡೆಯೊಳು | ಬಿತ್ತರಮಾಗಿ ರಂಜಿಸುವ |
ಉತ್ತಮಮಪ್ಪ ಕೂಟಾಷ್ಟಕದೊಳಗಿರ್ಪ | ತತ್ತರುಣಿಯರೆಣ್ಬರನು || ೫೦ ||

ಆ ಭೂಧರದ ಮೇಗಡೆ ರಂಜಿಪಪರದಿ | ಶಾಭಾಗದ ಕೂಟದೊಳು |
ಶೋಭೆವಡೆದು ವಿಹರಿಸಿ ನೆರೆಬಾಳ್ವಮ | ರೀಭಾಮೆಯರೆಣ್ಬರನು || ೫೧ ||

ಆರು ಚಕ್ರಾದಿಯ ಶಿಖರದೊಳೆಸೆವ ಕು | ಬೇರದಿಕ್ಕಿನ ಮಾಡಗದೊಳು |
ಆರಯ್ಯದತಿಸುಖದಿಂ ಜೀವಿಪದೇವ | ನಾರಿಯರೆಂಟು ಮಂದಿಯನು || ೫೨ ||

ಮತ್ತುಳಿದಮರಲೋಕದ ಮಾನಿನಿಯರ | ಮೊತ್ತವನೆಲ್ಲವ ಕರೆದು |
ಉತ್ತಮೆಗಾಳ್ಗೆಸವಹೆಯಿಮೆಂದು ದೇ | ವೋತ್ತಂಸನತಿ ಮುದದಿಂದ || ೫೩ ||

ಜಿನರಾಜಚಂದ್ರನ ಜನನಿಯ ಗರ್ಭಶೋ | ಧನವನು ಮಾಡಿ ನೀವೆಂದು |
ಅನಿಮಿಷಪತಿಯಮರಿಯರಿಗೆ ಬೆಸನಿತ್ತು | ಮನದೆಗೊಂಡು ಪೋದನಿತ್ತ || ೫೪ ||

ದಿವ್ಯೋದಕಮಜ್ಜನ ದಿವ್ಯಭೋಜನ | ದಿವ್ಯಕರ್ಪೂರ ತಾಂಬೂಲ |
ದಿವ್ಯಕುಸುಮ ದಿವ್ಯಮಪ್ಪನುಲೇಪನ | ದಿವ್ಯಾಂಬರದಿಂದೊಸೆದು || ೫೫ ||

ದಿನಚರಿಯಾದಿವಿಜಾಂಗನೆಯರು ಜಿನ | ಜನನಿಯ ಗರ್ಭಶೋಧನೆಯ |
ಘನದುಃಕೃತಪರಿಹರ ತಮಗಾಗಬೇ | ಕೆನುತನುನಯದಿ ಮಾಡಿದರು || ೫೬ ||

ಅನಿಮಿಷರಾಜನ ಬೆಸದಿ ಕುಬೇರನು | ದಿನಚರಿಯಾ ಮೂರು ಹೊತ್ತು |
ಮಿನಗುವ ರತ್ನವೃಷ್ಟಿಯನು ಮಾಡಿದನಾ | ವನಧಿವಿಜಯನಂಗಣದೊಳು || ೫೭ ||

ಅಡಿಗಲತಗೆಯನೂಡುವ ತೊಡಮಿಕ್ಕುವ | ಮುಡಿಗೆ ಮಗಳನಳವಡಿಪ |
ಉಡಿಸುವ ರತ್ನವೃಷ್ಟಿಯನು ಮಾಡಿದನಾ | ವನಧಿವಜಯನಂಗಣದೊಳು || ೫೮ ||

ಗೀತ ವಾದ್ತ ನೃತ್ಯವನಭವನ ನಿಜ | ಮಾತೆಯ ಮನದಿಚ್ಚಯನರಿದು |
ಪ್ರೀತಿಯಿಂದಾಯಿಂದ್ರನಂಗೆಯನೆಯರು ನಾ | ನಾತರದಿಂ ತೋರಿಸುವರು || ೫೯ ||

ಇಂತರುದಿಂಗಳು ಪರಿಯಂತರಾದೇವ | ಕಾಂತೆಯರತಿಮುದದಿಂದ |
ಕಾಂತಕಲಾಭರದ್ಬಿಂಬಮುಖಿಗೆ ನಿ | ಶ್ವಿಂತದಿ ಮಾಡುತಲಿರಲು || ೬೦ ||

ಮನದನುರಾಗವೆ ಮೈಯೊಳೊಣ್ಮಿದುದೆನೆ | ವನಿತೆ ಪಡೆಯ ಮಾಣಿಕವನು |
ಅನಿಮಿಷಸುದತಿಯರುನುಗೊಳಿಸಿದರಾ | ಮಿನಗುವರುಣಭೂಷಣವನು || ೬೧ ||

ಅರುಣಚಂದನದ ಬೊಂಬೆಯೊ ಪದ್ಮರಾಗದ | ಪರಿಜೋ ವಿದ್ರುಮದ ಪುತ್ಥಳಿಯೋ |
ಸರಸಕುಂಕುಮದ ಮೂರುತಿಯೋಯೆನೆ ನರಪ | ನರಸಿ ಚೆಂದೊಡವಿಟ್ಟೊಪ್ಪಿದಳು || ೬೨ ||

ಬಳಿಕಾಕಾಶಗಂಗೆಯ ದಿವ್ಯ ಜಲವನು | ಲಲನೆಗೆ ನಾಲ್ನೀರನೆರೆದು |
ಬೆರ್ವಸದನದಿಂದ ಶೃಂಗರಿಸಿದರಿಂ | ತೆಳ:ಸಿನಿಳಿಂಪನಾರಿಯರಉ || ೬೩ ||

ದುಗುಲದಂಡೆಯ ಮೇನಕಿ ಮಲ್ಲಿಗೆಯ ಬಿರಿ | ಮುಗುಳಮುಡಿಯ ಮಂಜುಘೋಷೆ |
ಸುಗಸುಮುತ್ತಿಹಾರವ ರಂಭೆ ವಜ್ರಸೂ | ಡಗವನು ಶಚಿಯನುಗೊಳಿಸೆ || ೬೪ ||

ಸಿರಿಗಂಪಿನಣ್ಣ ಸುಕೇಶಿಯಂಗದೊಳು ಕಾ | ಲ್ವೆರಲುಗುರ್ಗಳ ತನಿಮಿಂಚ |
ವಿತತವಿದ್ಯ್ವಲ್ಲತಿಕೆಯ ಬೊಂಬೆಯೊಯೆನೆ | ಸತಿಬೆಳ್ದೊಡವಿಟ್ಟೆಸೆದಳು || ೬೫ ||

ಆತನುಭೂಪನ ವಿತರಣ ಲಕ್ಷ್ಮಿಯೊ ಉಡು | ಪತಿ ಪೂಜಿಪ ದೇವತೆಯೋ |
ಹರಿಸದಿಯೂರ್ವಸಿಮಿಂ ಜೋಲೆಯನ | ದರದಿ ತಿಲೊತ್ತಮೆಯಿಡಲು || ೬೬ ||

ಅನಿತರೊಳಾ ಪಗಳಲಿಯಲಹೀಂದ್ರನ | ವನಿತೆ ಮುತ್ತಿನಹಾವುಗೆಯ |
ಅನುರಾಗದಿ ನೀಡೆಯರಸನ ಸೂಳ್ಗಾ | ಜನನುತೆ ನಡೆತಂದಳಾಗ || ೬೭ ||

ಮುತ್ತಿನ ಮುಗ್ದೆಯವೋಲು ನವಕುಲಿಶದ | ಪುತ್ತಳಿಯೊಲು ಕರ್ಪುರದ |
ವೃತ್ತಕುಚಿವೊಲು ನಡೆತಂದಳಾ | ತ್ಯತ್ತಮೆಯರಸನ ಸೂಳ್ಗೆ || ೬೮ ||

ಶರದದ ಮುಗಿಲನೇರುವ ಶಶಿಲೇಖೆಯ | ಸೊರೆಯೆನೆ ಪರಿಯೊರಗಿರ್ದ |
ಅರಸಂಚೆದುಪ್ಪಳುವಾಸಿನ ಮಂಚುವ | ನರಸಿಯೇರಿದಳತಿ ಮುದದಿ || ೬೯ ||

ಇನಿಯನೊಡನೆ ಮನಸಿಜಕೇಳಿಯೊಳಿರ್ದು | ವನಿತೆ ಬೆಳಗುಜಾವದೊಳು |
ವಿನುತಮಪ್ಪೀರೆಂಟು ಕನಸುಗಂಡಾಮರು | ದಿನದುದಯದೊಳುಪ್ಪವಡಿಸಿ || ೭೦ ||

ಸಿರಿಮೊಗದೊಳೆದು ಸಿಂಗರಿಸಿ ಪತಿಯಬಳಿ | ಗಿರದೈದಿ ತಾ ಕಂಡ ಕನಸ |
ಕರಿಗೆವಾಯ್ದೆರೆದೊರೆಯಲು ಕೇಳ್ದಾ | ದರದಿ ನುಡಿದನಿಂತೆಂದು || ೭೧ ||

ಗಜವನಿರುಳು ಕಂಡ ಕನಸಿನ ಫಲದಿನಂ | ಗಜಮಂಡಳಿಕನ ಸೈನಿಕಕೆ |
ಗಜಬಜೆಯನು ಪುಟ್ಟಿಸುವನುದಯಿಪನಾ | ಗಜರಾಜಸನ್ನಿಭಗಮನೆ || ೭೨ ||

ಗೋಪತಿಯನು ಕನಸಿಂ ಕಾಣೆ ಲಲಿತಾಂ | ಗೋಪಾಂಗೆ ಕೇಳ್ನಿನಗೋರ್ಪ |
ಗೋಪತಿಸುತಮದಹರನ ಮೃತಶ್ರೀ | ಗೋಪವನುದ್ಭವಿಸುವನು || ೭೩ ||

ಸಿಂಹವನಿಂದಿನಿರುಳು ಕಂಡ ಕನಸಿಂದ | ಸಂಹತ ದುಷ್ಟಕಿಲ್ಬಿಷನು |
ಸಿಂಹಾಸನಾಲಂಕೃತ ನಿನಗೊಗೆವನು | ಸಿಂಹಸದೃಸತನುಮಧ್ಯೆ || ೭೪ ||

ಲಕ್ಷ್ಮಿಯ ನೀ ಕಂಡ ಕನಸಿನಿಂದಭಿನವ | ಲಕ್ಷ್ಮಿ ಕೇಳ್ನಿನ್ನ ಗರ್ಭದೊಳು |
ಲಕ್ಷ್ಮಿಯ ಸುಮದಭಂಜವನನಾಮುಕ್ತಿ | ಲಕ್ಷ್ಮಿಯರಸನುದ್ಭವಿಪನು || ೭೫ ||

ಸುರಭಿಕುಸುಮಮಾಲೆಯ ಕಂಡ ಕನಸಿಂ | ಸುಭಿಸಮಪ್ರದಾಯಕನು |
ಸುರಪತಿಮೌಲಿಕೀಲಿತಪಾದಯುಗಲು ಭಾ | ಸುರಮೂರ್ತಿ ನಿನಗುಯಿಪನು || ೭೬ ||

ಚಂದ್ರನ ನೀ ಕಂಡ ಕನಸಿಂದಾಪೂರ್ಣ | ಚಂದ್ರಮಂಡಲನಿಭವದನೆ |
ಚಂದ್ರಾರ್ಕಕೋಟಿಸಂಕಾಶನೆನಪ ಜಿನ | ಚಂದ್ರನು ನಿನಗುದಯಿಪನು || ೭೭ ||

ಪಗಲೆರೆಯನ ಕಂಡ ಕನಸಿನ ಸುಕೃತದಿಂ | ಪಗಲದಸುತನುದ್ಭವಿಪನು |
ಪಗಲವಕ್ಕಿಯನೇಳಿಸುವ ಪಯೋಧರೆ | ಪಗಲಪಂಕೋದ್ಭವವದನೆ || ೭೮ ||

ಕುಂಭವ ಕಂಡಾಸ್ವಪ್ನಫಲ ದಿಶಾರ | ಕುಂಭಸರೋರುಹವದನೆ |
ಕುಂಭೋರೋಜೆ ನಿನಗೆ ಮನಸಿಜಗಜ | ಕುಂಭಕೇಸರಿಯುದಯಿಪನು || ೭೯ ||

ಬಾಳೆದೊಡೆಯ ಬಾಲಕಿ ರತಿದೇವಿಯ | ಬಾಳಕೆಡಿಪ ರೂಪಿನವಳೆ |
ಬಾಳೆವರಿಯ ಕಂಡ ಕನಸಿಂ ಶ್ರೀಜಿನ | ಬಾಲಕನುದ್ಭವಿಸುವನು || ೮೦ ||