ಕಂಜಾಕರವನು ಕಂಡ ಕನಸಿನಿಂದ | ಕಂಜಾತಸನ್ನಿಭವದನೆ |
ಕಂಜೇಕ್ಷಣೆ ನಿನಗೊಗೆವನು ಕಾಂಚನ | ಕುಂಕಪೀಠಾಲಂಕೃತನು || ೮೧ ||

ಶರನಿಧಿಯನು ಕಂಡು ಕನಸಿಂದುದ್ಗನು | ಶರನ ಸೊಗಸುವಿಲ್ಲ ಮುರಿವ |
ಶರಧಿಗಂಭೀರ ನಿನಗೆ ಸಂಜಿನಿಪ ನವ | ಶರದಿಂದುಸನ್ನಿಭವದನೆ || ೮೨ ||

ಮೃಗಪತಿಪೀಠವ ಕಂಡ ಕನಸಿನಿಂದ | ಮೃಗಮದಮಧುರಸುಗಂಧಿ |
ಮೃಗಲೋಚನೆ ನಿನಗುಯಿಪನಾಕೋಟಿ | ಮೃಗಧರಮಿತ್ರವಿಕಾಸ || ೮೩ ||

ಮಾನನಿದಾನಮೂರ್ತಿಯೇ ಕೇಳ್ವಿಬುಧವಿ | ಮಾನವ ಕಂಡ ಕನಸಿನ |
ಮಾನಿತಫಲಮುದಯಿಸುವುದು ಮನ್ಮಥ | ಮಾನಾಪಹಾರಕಾರಿಯನು || ೮೪ ||

ನಾಗಲಾಯಮನಿರುಳು ಮಲಗಿರ್ದು ನೀ | ನಾಗ ಕಂಡಾ ಸ್ವಪ್ನಫಲದೀ |
ನಾಗನಮರಾವಂದ್ಯನೊಗೆವನು ಪು | ನ್ನಾಗಕುಸುಮಸೌಗಂಧಿ || ೮೫ ||

ನವರತ್ನರಾಶಿಯ ಕಂಡುದರಿಂದ ಮಾ | ನವಸುರಫಣಿಪತಿವಿನುತ |
ನವಕೋಟಿಮುನಿವಂದ್ಯನುದ್ಭವಿಸುವನಭಿ | ನವಚಂದ್ರಮಂಡಲವದನೆ || ೮೬ ||

ತಿಂಗಳಂದದ ಮೊಗೆದಳೆ ಪಜ್ಜಳಿಸುತೆಳೆ | ತಿಂಗಳಿರಲು ಕಂಡ ಕನಸಿಂ |
ತಿಂಗಳೊಂಭತ್ತಕೆ ಜಿನಮುಖಶಶಿ ಬೆ | ಳ್ದಿಂಗಳಿಳೆಯನಾವರಿವುದು || ೮೭ ||

ಈ ತರದಿಂ ಕಂಡ ಕನಸಿನ ಫಲವನಿ | ಳಾತಳಪತಿನಿರವಿಸಲು |
ಆ ತರಳಾಂಬಕಿ ಕೇಳಿ ಮನಕೆ ಸಂ | ಪ್ರೀತಿಯೊದವಿ ಸುಖಮಿರಲು || ೬೮ ||

ಮುನ್ನ ಪೇಳ್ದಾ ಸರ್ವಾರ್ಥಸಿದ್ಧಿಯೊಳ | ತ್ತ್ಯುನ್ನತಸೌಖ್ಯವನುಂಡು |
ಸನ್ನುತನಹಮಿಂದ್ರನಲ್ಲಿಂಬಂದಾ | ಚನ್ನೆಯ ಬಸಿರೊಳು ಬೆಳೆಯ || ೬೯ ||

ಬಸಿರ ಬಡವು ಹೋದುದಿಲ್ಲ ಬಲ್ಮೊಲೆ ತೊ | ಟ್ಟಸಿತವರ್ಣವನಾಂತುದಿಲ್ಲ |
ಎಸಕಮಾಯ್ತಿಲ್ಲ ರೋಮಾಳಿಯಡಗಿತಿಲ್ಲ | ಮಿಸುಪವಳಿಗಲಳಾಸತಿಗೆ || ೯೦ ||

ಬಸಿರೊಳಗಿರ್ದಬಲಾರಿವಂದ್ಯನ ಮೂರು | ಮಿಸುಪ ಪೀಠದ ರೇಖೆಗಳೆ |
ಪುಸಿನಡುವಿನೊಳು ತೋರ್ಪಂತಡಗದೆ ರಂ | ಜಿಸುದುವವಳ ತ್ರಿವಳಿಗಳು || ೯೧ ||

ತೆಳುವಸಿರಿನೊಳು ಬೆಳೆವ ಜಿನಶಿಶುವಿನ | ಗ್ಗಳವೆನಿಸುವ ಶಾಂತರಸದ |
ಜಲಧಿಯವಳಿಗಳಂದದಿನಾದೇವಿಯ | ಬಳಿಗಳಡಂಗದೊಪ್ಪಿದುವು || ೯೨ ||

ಒಡಲೊಳು ಬೆಳೆವರುಹಚ್ಛಿಶುವಿನ ಮೇಲೆ | ಪಿಡಿದೈರೆದಾಲಿಯೆಂದೆಂಬ |
ಕೊಡೆಯ ನೀಲದ ಸಣ್ಣಗಾವೆಂದೆನೆ ಬಾಸೆ | ಕಡುಸೊಗಸಿದುದಾ ಸತಿಗೆ || ೯೩ ||

ದೂರೀಕೃತ ದೋಷನುದಯಿಸಲೊಡನಂಧ | ಕಾರ ಪರೆಯಲಾಲಸ್ಯ |
ಭೋರೆನೆಹರೆವಂದದಿನಲಸದೆ ಪಿಂಗಿ | ತಾ ರಾಜಸೀಮಂತನಿಗೆ || ೯೪ ||

ಲೋಲಾಕ್ಷಿಯಮಲಗರ್ಭದೊಳೊಪ್ಪಿದನಾ | ತ್ರೈಲೋಕಾಧೀಶ್ವರನು |
ಲೀಲಾದರ್ಪಣದೊಳುಮಾರ್ಪೊಳೆವ ಕು | ತ್ಕೀಲೇಂದ್ರವೆಂಬಂದದೊಳು || ೯೫ ||

ಭಾವಿಸಿ ನೋಡಿ ನುಡಿದು ರತಿಸೌಖ್ಯಮ | ನಾ ವಧುವಿಂದ ಹಡೆದನು |
ಆವಿಭುವೀಶಾನಲ್ಪದಿನತ್ತಣ | ದೇವೇಂದ್ರನೆಂಬಂದದೊಳು || ೯೬ ||

ಆ ಸತಿಯಿಂತು ಸುಖದೊಳಿರಲು ನವ | ಮಾಸಮೊದವೆ ವೈಶಾಖ |
ಮಾಸದ ಮೊದಲ ತ್ರಯೋದಶಿಯೊಳು ಭಾ | ಭಾಸಿಪಚಂದ್ರತಾರೆಯೊಳು || ೯೭ ||

ಇಂದ್ರದಿಗ್ವಿನಿತೆಯ ಬಸುರಿಂದಾಪೂರ್ಣ | ಚಂದ್ರನುದ್ಭವಿಸುವಂದದೊಳು |
ಇಂದ್ರ ನರೇಂದ್ರ ಫಣೀಂದ್ರವಂದಿತ ನೇಮಿ | ಚಂದ್ರನುದಯಗೆಯ್ಯಲೊಡನೆ || ೯೮ ||

ತಡವುಮಾಡದೆಯಭವನ ಮಜ್ಜವನ ಮನ | ವಿಡಿದು ಮಾಡಿವೊಡೇಳೆಂದು |
ತೊಡೆ ತಿವಿದು ಸನ್ನೆಮಾಡುವಂದದಿ ನಡ | ನಡುಗಿತಿಂದ್ರನ ಸಿಂಹಪೀಠ || ೯೯ ||

ಅಲಗುವಾಸನವ ಕಂಡವಧಿಬೋಧಿದಿನಾ | ಕಲಿಲವಿಜಯನಯತುಪತಿಯ |
ನೆಲೆಯನರಿದು ನಾಕಪತಿ ಜಯಜಯವೆನು | ತಲಸದಿಳಿದು ಬಂದನಾಗ || ೧೦೦ ||

ಅನಿಮಿಷಪತಿಹಯರ್ಹತ್ಪತಿಯಭಿಷೇಕ | ಕನುರಾಗದಿಂದೆಯ್ದಿದನು |
ಎನುತ ನಾಲ್ದೆರೆದನಿಳಿಂಪನಿಕರಮೆಲ್ಲ | ಮಿನಿಸುವೇಗದೊಳೆಯ್ದಿದುದು || ೧೦೧ ||

ತುಂಬಿದುರಗಲೋಕಮೆಲ್ಲ ತಂತಮ್ಮ ಕು | ಟುಂಬ ಸಹಿತ ಬಂದುದಾಗ |
ಶಂಬರರಿಪುಸಂಹರಣನನಾಮಜ್ಜ | ನಂಬೊಗಿಸುವ ಲೀಲೆಯೊಳು || ೧೦೨ ||

ಗಾಡಿವಡೆದಗರಿಮನಮಜ್ಜನವ ಕೊಂ | ಡಾಡಿ ಮೂಡುವೆವೆಂದೆನುತ |
ಮಾಡದೆ ತಡವನಂದಾಯಕ್ಷರುಗಳ | ನಾಡುಬೀಡೆಲ್ಲವೆಯ್ದಿದು || ೧೦೩ ||

ತೆಕ್ಕಿತೆಕ್ಕೆಯೊಳು ಜೋಯಿಸರ ಭುವನಮಜ್ಜ | ನಕ್ಕೆಮಹಾವಿಭವದೊಳು |
ಲೆಕ್ಕಮಿಲಲ್ದೆ ನಡೆತಂದರು ತಂತ | ಮ್ಮೊಕ್ಕಲುಗಳು ಸಹಮಾಗಿ || ೧೦೪ ||

ಮಾರಮದಾಪಹರಣಗೆ ಮಕ್ಕನ ಮನ | ವಾರೆ ಮಾಡುವೆವೆಂದೆನುತ |
ಈರೆಂಟುಸಗ್ಗದರಸುಗಳು ತಮ್ಮೂರು | ಕೇರಿಸಹಿತ ಬಂದರಾಗ || ೧೦೫ ||

ಮನೆಗಾಪಿಗಹಮಿಂದ್ರತನನುಮತದಿಂ | ಮನೆಗೆ ಮೇಗಾವಲನಿರಿಸಿ |
ಮನಭಕ್ತಿಯಿಂ ಬಂದರಖಿಲ್ಪಜರಿಂತು | ಮನೆಯೊಳಗೊಬ್ಬರುಳಿಯದೆ || ೧೦೬ ||

ಹರಿಮೃಗಹಯವೃಷಮೇಷಕರಪಕ್ಷಿ | ಕರಿಹುಲಿಸಿಂಹಲುಲಾಯ |
ನರರಾದಿಯಾದ ನಾನಾ ವಾಹನವನೇರಿ | ಭರದಿನೆಯ್ದಿತು ಸುರನಿಕರ || ೧೦೭ ||

ರುಂದ್ರಭಕ್ರಿಯೊಳಿಂದ್ರನಂತಃಪುರದ ಪು | ರಂದ್ರಿಯರೆಲ್ಲರು ಸಹಿತ |
ಇಂದ್ರಾಣಿ ನಡೆತಂದಳತಿವಿಭದಿ ನೇಮಿ | ಚಂದ್ರನ ಜನನೋತ್ಸವಕೆ || ೧೦೮ ||

ಪದ್ಮನೇತ್ರದ ಪದ್ಮಸನ್ನಿಭ ಹಸ್ತದ | ಪದ್ಮಾನನದ ಕೋರಕಿತ |
ಪದ್ಮಕುಚದ ಪದ್ಮಿನಿಯರೆಯ್ದಿದರಾ | ಪದ್ಮಾವತಿಯರೊಂದಾಗಿ || ೧೦೯ ||

ಬೆರಕೆವರಲಭೂಷಣರುಚಿ ದೆಸೆದೆಸೆ | ವರಿದು ಚಿತ್ರಸಲಂಬರವನು |
ಗರಗರಿಕೆಯ ಗಾಡಿವಡೆದ ಗಂಧರ್ವರ | ತರುಣಿಯರೈದಿದರಂದು || ೧೧೦ ||

ಪವಳದುಟಿಯ ಪವಳದ ಕುಡಿವೆರಲಿನ | ಪವಳವಾವುಗವಜ್ಜೆಗಳ |
ನವನಾಗಸತಿಯರೈತಂದರು ಪವಳದ | ನವಲತಿಕಾವನದಂತೆ || ೧೧೧ ||

ತಳಿರ್ವಜ್ಜೆಯ ತಾರಾವಳಿನಖಗಳ | ಪೊಳೆವ ಪೊಂಬಾಳೆದೊಡೆಗಳ |
ಎಳೆಲತೆ ನಡುವಿನಿಳಿಯದ ಹರೆಯಂದಿಂದ್ರ | ಲಲನೆಯರೈದಿದರಾಗ || ೧೧೨ ||

ಚಂದ್ರಮುಖದ ಚಂದ್ರಿಕಾಪಾಂಗದ ಬಾಲ | ಚಂದ್ರಸಮನಾಧರದ |
ಚಂದ್ರಲೋಕದ ಸುದತಿಯರೈದಿದರು ನೇಮಿ | ಚಂದ್ರನ ಜನನೋತ್ಸವಕೆ || ೧೧೩ ||

ಕುಂದಳಟ್ಮಳರದನದ ಕುಂಕುಮ ಗಂಧ | ದಿಂದೀವರಲೋಚನದ |
ಬಂದುಗೆದುಟಿಯಬ್ಬಮುಖದ ಕಿನ್ನರಿಯರೆ | ಯ್ತಂದರಂಬರಪುಷ್ಪದಂತೆ || ೧೧೪ ||

ಸುಳಿನಾಭಿಯ ಸುಲಲಿತಲಾವಣ್ಯಾಂಬು | ವೆಳೆವಾಳೆಗಣ್ಮಲರುಗಳ |
ವಳಿವೀಚಿಯಮರಿಯರೈತಂದರಾಗಸ | ಹೊಳೆಯಿಳಿತಪ್ಪಂದದೊಳು || ೧೧೫ ||

ಚೆಂದಳಿರ್ದುಟಿಯ ಚೆಲ್ವಡೆದ ತರುಣಶಾಖೆ | ಯಂದದನಳಿತೋಳುಗಳ |
ಸುಂದರಿಯರು ಜಂಗಮಸುರಲತಿಕಾ | ನಂದನದಂತೆಯ್ದಿದರು || ೧೧೬ ||

ಈ ರೆದಿಂದನಿಮಿಷಜನವೆಯ್ದೆ ಸಂ | ಪ್ರೀತಿ ಮಿಗಿಲು ಸಗ್ಗದಿಂದ |
ಸಾತಿಶಯದ ವೈಭವದಿ ಸುರೇಂದ್ರನಿ | ಳಾತಕಳಕಿಳಿತಂದನಾಗ || ೧೧೭ ||

ಸಂತಸದಿಂ ಸುರಪನ್ನಗತಾರಾ | ವ್ಯಂತರರೆಲ್ಲರು ಸಹಿತ |
ಅಂತರಿಸದೆಯಚ್ಯುತನ ಪುರವರಕ | ತ್ಯಂತ ವಿಭವದಿಂ ಬರಲು || ೧೧೮ ||

ಸಂದಣಿಸಿದ ಪಲಮಣಿ ಪುಷ್ಪಕಗಳು | ಪಂದರಿಸಿತು ಗಗನದೊಳು |
ಅಂದು ಕುಂಭಜನೀಂಟಿದ ರತ್ನಾಕರ | ದಂದವೆ ಮಾರ್ಪಿಳೆವಂತೆ || ೧೧೯ ||

ನಾನಾತರದಳಿಂಪರ ರತ್ನವಿ | ಮಾನವಿಯನ್ಮಾರ್ಗವನು |
ನೂನಮಿಲ್ಲದೆ ತುಂಬಿ ಲೋಕ ಮೂರಲ್ಲ | ವಾನಾಲ್ಕುಲೋಕವೆಂಬಂತೆ || ೧೨೦ ||

ಅನಿಮಿಷಪತಿಯೀತರದಿ ನಾಲ್ಕುಂತೆರ | ದನಿಮಿಷರೆಲ್ಲರು ಸಹಿತ |
ವನಧಿವಜಯವಸುಧಾಧೀಶ್ವರನರ | ಮನೆಯ ಮೇಗಡೆ ಬಂದು ನಿಂದು || ೧೨೧ ||

ಸಛಿಗೆ ಬೆಸಸೆ ನಿಜರತ್ನವಿಭೂಷಣ | ರುಚಿ ದೆಸೆದೆಸೆಯೊಳಾವರಿಸೆ |
ಸುಚರಾಚತಸತ್ಜಿನಶಿಶುವಿನ ಗೃಹ | ಕುಚಿತದಿಂದವೆ ನಡೆತಂದು || ೧೨೨ ||

ಜನನಿಯ ಮುಂದೊರಗಿದ ಶಿಶುವನು ಕಂಡು | ಮನದನುರಾಗದಿ ನೋಡಿ |
ಘನತರವಹ ಭಕ್ರಿಯಿಂ ಮೂಮೆ ಬಲವಂದು | ಮಿನಮಿತೆಯಾಗುತಿಂದ್ರಾಣಿ || ೧೨೩ ||

ಮಾಯಾನಿದ್ರೆಯನಾ ಜಿನಜನನಿಗೆ | ಮೋಯಾರದಿಂ ಮಾಡಿ ಬಳಿಕ |
ಮಾಯದ ಸಿಸುವನಿರಿಸಿಯೆತ್ತಿಕೊಂಡಳಂ | ದಾಯತಿಯಿಂದಾಸಿಸುವ || ೧೨೪ ||

ಬಡವರೊಡವೆಗಂಡಂತೆ ಮೈಗಣ್ಣನ | ಮಡದಿ ಮೈಮನನೆತ್ತಿಕೊಂಡು |
ಸಡಗರದಿಂ ಬರೆ ಕಂಡು ಸಗ್ಗಿಗರೆಲ್ಲ | ಬಿಡಿದುಲಿದರು ಜಯವೆಂದು || ೧೨೫ ||

ಇಂತು ಬಂದಾಶಚಿಯಾಸಿಸುವನು ನಿಜ | ಕಾಂತನ ಕೈಯೊಳು ಕೊಡಲು |
ಸಂತಸದಿಂದ ತಳೆದು ನಿಜಭಕ್ರಿಯೊ | ಳಂತಮಿಲ್ಲದೆ ನುತಿಗೆಯ್ದು || ೧೨೬ ||

ಐರಾವರಮನಡರಿ ತೊಡೆಯೊಳು ಜಿನ | ದಾರಕವನು ಮೆಲ್ಲನಿರಿಸಿ |
ಆ ರಂಭಾರಮಣನು ಸುರಸೇನೆಯ | ಮೇರುಗೆ ನಡೆಯ ಹೇಳಿದನು || ೧೨೭ ||

ಕೊಡೆಯ ಹಿಡಿದನೀಶಾನೇಂದ್ರ ಚಮರವ | ಬಿಡಿದಿಕ್ಕಲುಳಿಂದ್ರರುಗಳು |
ಪಡಿಯರನಾಗಲು ಫಣಿಪತಿಯಾಲೋಕ | ದೊಡೆಯಗೆ ಕಡುಭಕುತಿಯೊಳು || ೧೨೮ ||

ಮದನಾರಿಯೇರಿದ ಮದಮಾತಂಗಕೆ | ವದನಬತ್ತೀಸಮಾಮುಖಕೆ |
ರದನವೆಂಟೆಂಟಾರದನವೊಂದೊಂದಕೆ | ಸದಮಲ ಸರಸಿಯೊಂದೊಂದು || ೧೨೯ ||

ಅವೊಂದೊಂದು ಸರಸಿಗಾಲೆಕ್ಕದ | ತೀವಿದ ನಾಳಂಗಳಿಗೆ |
ಹೂವು ಮೂವತ್ತೆರಡಡವರೊಂದೊಂದಕೆ | ಮೂವತ್ತೆರಡೆಸಳುಗಳು || ೧೩೦ ||

ಆ ವನರುಹಪತ್ರಮೊಂದಕೆ ಬತ್ತೀಸ | ದೇವಿಯರತಿ ಮುದದಿಂದ |
ಹಾವಭಾವಸದ್ವಿಲಾಸವಿಭ್ರಮವಡೆ | ದೋವದೆ ನಟಿಸುತೆಯ್ದಿದರು || ೧೩೧ ||

ಚಂಡಾಳಿಯಾಡಿದ ಬಂಡಿನ ಭವವನು | ಕಂಡು ಮೆಟ್ಟಲು ದೋಷಮೆಂದು |
ಪುಂಡರೀಕವನು ನಾಲ್ವರಲು ಸೋಂಕದೆ ಸಗ್ಗ | ವೆಂಡಿರೊಸೆದು ನರ್ತಿಸಿದರು || ೧೩೨ ||

ಪರಮಜಿನೇಶಪಾದಪೀಠಕೆ ಸಲು | ವರವಿಂದವ ಮೆಟ್ಟಲಘವು |
ನಿರುತಮೆಂದೆನುತನಿಳಿಂಪನಾರಿಯಲ್ಲಿ | ಚರಣಮಿಡದೆ ನಟಿಸಿದರು || ೧೩೩ ||

ತಾಲದೊಳಗು ಮೀರದ ಗೀತಗಳೊಳು | ಸೂಳೈಸುವ ಮದ್ದಳೆಯೊಳು |
ಮೇಳವಮೀರದಾಡಿದರಾವೆಣ್ಗಳು | ಬೋಳೈಸಲಾಸುರರುಗಳು || ೧೩೪ ||

ಸರಸಿಯಾತೆರವೊಯ್ಲಿಂದ ಸಂಚಲಿಸುವ | ಸರಸಕಂಜದಕಟುಚೆಲುವ |
ಧರಿಯಿಸಿ ದಿವಿಜರು ಕೊಂಡಾಡುತಿರಲಂ | ದಿರದಾಡಿದರು ನರ್ತನವನು || ೧೩೫ ||

ಇಂತತಿ ವಿಭವದಿಂ ಮೇರುಗಿರಿಗೆ ದೇವ | ಸಂತತಿ ಸಹಿತೆಯ್ತಂದು |
ಸಂತಸದಿಂದಾಗಿರಿಯ ಪಾಂಡುಕಶಿಲೆ | ಗಂತಮಿಲ್ಲದ ಭಕುತಿಯೊಳು || ೧೩೬ ||

ತಂದದರೊಳು ಸಿಂಹಪೀಠವ ವಿರಚಿಸಿ | ಕಂದರ್ಪರಿಪುವ ಕುಳ್ಳಿರಿಸಿ |
ಅಂದದಿ ಸೌಧರ್ಮೈಶಾನೇಂದ್ರರು | ಮುಂದೇತರಭಕ್ತಿಯೊಳು || ೧೩೭ ||

ಕಲಶಾರ್ಚನೆ ಗೆಉದಾಶಕ್ರರೀರ್ವರಂ | ದಲಫುಭುಜವ ಸಾಸಿರದ |
ತಳೆದೊಂದುಕ್ರೋಶದ ಹವಣಿನ ಕಾಂಚನ | ಕಲಶಂಗಳನೆತ್ತಿಕೊಂಡು || ೧೩೮ ||

ಅಮೃತಾಂವುನಿಧಿಯಂಬುವನಂಚೆಯೊಳುಳಿ | ದಮರರೆಲ್ಲರು ಮೊಗಮೊಗೆದು |
ತಮತಮಗತಿ ಭರದಿಂ | ಕೊಡಲಾಯಿಂದ್ರ | ರಮಿತಬಾಹುಗಳಿಂದೆತ್ತಿ || ೧೩೯ ||

ಗಗನದೊಳಗೆ ಪಲಪರೆಗಳುಣ್ಮತ್ತಿರೆ | ಸೊಗಸುಗಡಲತನಿವಾಲ |
ಮಿಗೆ ಹರುಷದಿನಭಿಷೇಕ ಮಾಡಿದರಾ | ನಿಗಮನಿಲುಕದ ನಿರ್ಮಲಗೆ || ೧೪೦ ||

ಮೊಗಳಗುದುಂದುಭಿಯವರಿಕ್ಕಿದ ನೊಣ್ದೊಡ | ವೆಳಗಿಂಧ್ರಧನುದೇವಿಯರ |
ಬೆಳತಿಗೆಗಣ್ಮಿಂಚೆನಲಾ ಅಭಿಷೇಕ | ಮಳೆಗಾಲವಾಯ್ತುಭವಂಗೆ || ೧೪೧ ||

ಅಂದು ಮಥಿಸಿ ತನ್ನ ಗುಟ್ಟುಗೆಡಿಸಿತೀ | ಮಂದರಮೆಂದು ಕೋಪದೊಳು |
ಬಂದು ಪಾಲ್ಗಡಲು ಬೇಗದಿ ನುಂಗುವೊಲು ಸುರಿ | ತಂದುದಭವನಭಿಷೇಕ || ೧೪೨ ||

ಹಿಂದಣ ಜನ್ಮದ ತಪದೊಳಗಾನೀ | ಯಂದದಿ ಮಳೆಗಾಲದೊಳು |
ನಿಂದೆನೆಂದದ ತೋರುವಂತಿಭಿಷೇಕದೊ | ಳಂದುದಭವನಭಿಷೇಕ || ೧೪೩ ||

ಅಲ್ಲಲ್ಲಿಗಾ ಹೊನ್ನಬೆಟ್ಟದ ಜರಿಯೊಳು | ನಿಲ್ಲದಿಳಿವ ಹಾಲಧಾರೆ |
ಬಲ್ಲರ ಬಗೆಗೊಳಿಸಿತು ವೈಡೂರ್ಯದ | ಕಲ್ಲಬೆಟ್ಟದ ಸೂತ್ರದಂತೆ || ೧೪೪ ||

ಪಳುಕಿನ ಪರ್ವತಮೋ ನವ್ಯಾಮೃತ | ಶಿಲೆಯ ಶೈಲವೊ ವಜ್ರಗಿರಿಯೊ |
ಕಲಿಲವಿಜಯನಭಿಷೇಕದ ಹಾಲೊಳು | ಮುಳುಗಿದ ಮಂದರಗಿರಿಯೊ || ೧೪೫ ||

ಮಲರಹಿತ ಮೈಯಭಿಷೆಕದ ಸುಧೆ | ಬಳಸಿದೊಡಾ ಮೇರುಶಿಖರಿ |
ಇಳೆಯೆಂದೆಂಬ ಪೀಠದ ಮೇಲೆ ಥಳಥಳ | ಥಳಿಪ ಬೆಳ್ಳಿಯ ಲಿಂಗಮಾಯ್ತು || ೧೪೬ ||

ಮತ್ತಾ ಅಭಿಷೇಕದ ಹಾಲಹನಿ ಮೈಯ | ಹತ್ತಿದೊಡಾಮೇರುಶಿಖರಿ |
ಬಿತ್ತರಮಪ್ಪಾಗಸಮೆಂಬ ಗುಡಿಗಿಟ್ಟ | ಮುತ್ತಿನ ಕಂಬದಂತಾಯ್ತು || ೧೪೭ ||

ಅರತುದಿಂಗಡಲೆಲ್ಲವೆಂಬಂದದಿ ಮನ | ದೆರಕದೊಳಾಸುರಸಮಿತಿ |
ಮಿರಗುವ ಹಲವು ಹಸ್ತದಿನಮೃತಾಂಬುವ | ತರಿಸಂದು ಮಜ್ಜನೆಗೆಯ್ಸಿ || ೧೪೮ ||

ಇಂತಭಿಷೇಕವ ಮಾಡಿಯಿಂದ್ರಾಣಿಯ | ಕಾಂತನೊಸೆದು ಜಿನಶಿಶುಗೆ |
ಸಂತಸದಿಂ ಗಂಧೋದಕಮಜ್ಜನ | ವಂ ತಳುವದೆ ಮಾಡಿದನು || ೧೪೯ ||

ಬಳಿಕೆಂಟುತೆರದರ್ಚನೆ ಮಾಡಿ ಸಗ್ಗಿಗ | ಬಳಗಸಹಿತ ಜಿನಪತಿಯ |
ವಿಳಸಿತಮಪ್ಪೈರಾವತದೊಳಗಿಟ್ಟು | ತಳರಿದನಾಸುರರಾಜ || ೧೫೦ ||

ಸಕಲದೇವರ್ಕಳು ಸಹಿತಾಪುರವರ | ಕಕಲಂಕಮಹಿಮನ ತಂದು |
ಚಕಿತಕುಂರಂಗಲೋಚನೆ ಶಿವದೇವಿಗೆ | ಮುಕುಳಿತಕರಕಂಜನಾಗಿ || ೧೫೧ ||

ಜಲಧಿವಿಜಯನ ಪೂಜಿಸೆ ಮಣಿಮಂಟಪ | ದೊಳಗಾಶಿಶುವ ಕುಳ್ಳಿರಿಸಿ |
ಬಳಿಕ ಸುರರು ಪೊಗಳಲು ಜಾತಕರ್ಮವ | ನೆಳಸಿ ರಚಿಸಿಯಂತರದೊಳು || ೧೫೨ ||

ಸುರರು ಬಾಜಿಸೆ ವಾದ್ಯವನಮರೀಜನ | ವುರುಮುದದಿಂ ಪಾಡುತಿರಲು |
ಪುರುಹೂತನೊಸೆದು ನಾಟ್ಯಮನಾಡಿದನಾ | ವರಜಿನಶಿಶುವಿನ ಮುಂದೆ || ೧೫೩ ||

ನಿಟ್ಟಿಸಲೆರಡುದಿಟ್ಟಿಗಳೆಯ್ದವೆಂದಾ | ನಿಟ್ಟೆಸಳ್ಗಣ್ಣ ಸಾಸಿರವ |
ನೆಟ್ಟಗೆ ಧರಿಸಿ ನಿರೀಕ್ಷಿಸಿದನು ಮನ | ಮುಟ್ಟಿ ವಾಸವನಾಜಿನನ || ೧೫೪ ||

ಮತ್ತಾತಗೆ ನೀಮಿನಾಥನೆಂಬೊಳ್ವೆಸ | ರಿತ್ತೊಸಗೆಯಮೇಲೊಸಗೆಯ |
ಮೊತ್ತದ ಸುರರುವೆರಸಿಮಾಡಿ ಬಳಿಕಾ | ಚಿತ್ತಜರಿಪುವಿಗೆ ನಮಿಸಿ || ೧೫೫ ||

ಜಿನಭಿಷೇಕೋತ್ಸವವವನೀತೆರದಿಂ | ದನಿಮಿಷವಲ್ಲಭನೆಸಗಿ |
ಮಿನುಗುವ ರತ್ನಾಭರಣಸುವಸ್ತದಿ | ಜಿನಶಿಶುವನು ಸಿಂಗರಿಸಿ || ೧೫೬ ||

ಮೇನಕಿರಂಭೆಯೂರ್ವಶಿಯರು ಮೊದಲಾ | ದಾ ನಾರಿಯರಿನಾಜಿನಗೆ |
ಸಾನಂದದಿ ದಾದಿಯರಾಗಿ ನೀಮೆಂ | ದಾನಾಕವಲ್ಲಭಮುಸುರಿ || ೧೫೭ ||

ಸುರರೋರಗೆಯಮಕ್ಕಳ ಮಾಡಿ ಬಳಿಕಾ | ಅರುಹನ ಜನನೀಜನಕರ |
ಹರುಷದಿ ಬೀಳ್ಕೊಂಡಾಸಗ್ಗಕಾಸುರ | ಪರಿವೃಢನೆಯ್ದೆ ಮತ್ತಿತ್ತ || ೧೫೮ ||

ಸುರರೆಣೆಯೆಳೆಮಕ್ಕಳಾಗಿ ಕ್ರೀಡಿಸುತಿರೆ | ಸುರಸತಿಯರು ಸಾಕುತಿರಲು |
ಸುರಲೋಕದಾಹಾರಮನುಂಡು ಬೆಳೆದನು | ಸುರಪರಿವೃಢಪೂಜಿತನು || ೧೫೯ ||

ಬಾಲದೊಡವ ತೊಟ್ಟು ತೊದಲು ನುಡಿಯನತಿ | ಲೀಲೆಯಿನುಸುರಿ ದಟ್ಟಡಿಯ |
ಲೋಲನಾಗಿ ಸಗ್ಗಿಗರೊಡನಾಡುತ | ಕಾಲವಿಜಯನೊಪ್ಪಿದನು || ೧೬೦ ||

ಬಾಲಾಕಾಲಮನಿರದೀಡಾಗಿ ಬಳಿಕಾ | ಲೀಲಾನಿಧಿಯೊಪ್ಪಿದನು |
ನೀಲಶ್ಯಾಮಲಕೋಮಲಗಾತ್ರನು | ಮೂಲೋಕವೆಲ್ಲ ವಂದಿಸಲು || ೧೬೧ ||

ಉತ್ತಮನಂದ್ಯಾವರ್ತಸ್ವಸ್ತಿಕನು | ಷ್ಟೋತ್ತರಶತಸಾಸಿರದ |
ಉತ್ತಮಚಿಹ್ನೆಯುತನು ಶಸ್ತ್ರವಿಷವಹ್ನಿ | ಮುದಿತವ್ಯಂಜನಸಂಯುತನು || ೧೬೨ ||

ಮೃದುಮಧುರೋಪೇತಗಂಭೀರವಚನನು | ವಿದಿತತ್ರಿಜ್ಞಾನಸಂಯುತನು |
ಸದಮಲತಿಲಶೂಲಕಾಮುಖ್ಯನವಶತ | ಮುದಿತವ್ಯಂಜನಸಂಯುತನು || ೧೬೩ ||

ಚರಮಾಂಗನು ದಶಧನುವುತ್ಸೇಧನು | ವರವಜ್ರವೃಷಭನಾರಾಚ |
ಸುರುಚಿರಸಮಚತುರಸ್ರಮಸಾಸಿರ | ವರುಷದಾಯುಷ್ಯರಂಜಿತನು || ೧೬೪ ||

ಈ ತೆರದಿಂ ನೇಮೀಶ್ವರನಾವು | ರ್ವಿತಳವನು ತನ್ನಪದಕೆ |
ಪ್ರೀತಿಯಿಂದೆರಗಿಸಿಕೊಳುತ ಲೋಕದೊಳು ವಿ | ಖ್ಯಾತನಾಗಿಯೊಪ್ಪಿದನು || ೧೬೫ ||

ಸುರಪರಿವೃಢಫಣಿಪತಿಜನರಾಧೀಶ | ವರಮಣಿಮಕುಟಾಂಘ್ರೀಯುಗಲ |
ನಿರುಪಮಬೋಧನೊಪ್ಪಿದನು ಸದ್ಭವ್ಯಬಂ | ಧುರಶರನಿಧಿಚಂದ್ರಮನು || ೧೬೬ ||

ಇದು ಜಿನಪದಸರಸಿಜದ ಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗೊದಮಿದಾಶ್ವಾಸದ್ವಾವಿಂಶ || ೧೬೭ ||

ಇಪ್ಪತ್ತೆರಡನೆಯ ಸಂಧಿ ಸಂಪೂರ್ಣಂ