ಅರಗಿನಹರ್ಮ್ಯದೊಳಗೆ ಪಾಂಡುತನುಜರು | ಮರಣವಡೆದರೆಂಬ ಮಾತು |
ಹರೆಯಲು ಕೇಳಿ ದುಃಖಿತನಾಗಿ ಧಾನ್ಯಭೂ | ವರನೋರ್ವ ಮುನಿಯೆಡೆಗೆಯ್ದಿ || ೭೬ ||

ನತನಾಗಿ ಕೈಮುಗಿದೆಲೆ ಮುನಿತಿಲಕಾ | ಜತುಗೃಹದೊಳು ಪಾಂಡುಸುತರು |
ಹತಮಾದರೆನ್ನ ತನೂಜೆಯನಾಧರ್ಮ | ಸುತಗೀವೆನೆಂದು ನಂಬಿರ್ದೆ || ೭೭ ||

ಅವರಳಿದುದು ನಿಜವೋ ಹುಸಿಯೋ ಎಂಬ | ವಿವಿರವನಿರವೆಸೆಂದನಲು |
ಅವಧಿಜ್ಞಾನಿಗಳಾಚರಮಾಂಗರ್ಗೆ | ಭೂವನದೊಳುಂಟೆ ಕುಂಟಕವು || ೭೮ ||
ಅದರಿಂದವರು ಕಿಚ್ಚಿನೊಳಗಳಿದುದು ಪುಸಿ | ಯಧಟ ಕೇಳಿಂದಿನದಿನದ |
ಉದಯದೊಳಗೆ ನಿನ್ನೂರ ವನಕೆ ಬಂದ | ರಿದನು ನೀನರಿ ಪೋಗೆಂದು || ೭೯ ||

ಮುನಿಪತಿಯಾಜನಪತಿಯನು ಬೀಳ್ಕೊಡ | ಲನುನುದಿಂದೆಯ್ತಂದು |
ವನದಮಧ್ಯದೊಳು ಕುಳ್ಳಿರ್ದಾ ಕೊಂತೀ | ತನುಜಾತರ ಕಂಡನಾಗ || ೮೦ ||

ಹರುಷದಿ ನಿಜಗೃಹಕೆಯ್ದಿಸಿಯಾದಿನ | ದಿರುಳೊಳು ಕುಸುಮಮಾಲನೆಯನು |
ಉರುಶೋಭೆಯಿಂದ ಮದುವೆಯಾ ಮಾಡಿದನಾ | ವರಗುಣಿಧರ್ಮನಂದನಗೆ || ೮೧ ||

ಬಂದುಗೆದುಟಿಯ ಬಲ್ಮುಗುಳುಪೊಂದಾವರೆ ಯಂದದ ಘನಕುಚಯುಗದ |
ಕುಂದರದನದ ಕುಂಕುಮಗಂಧಿಯನಾ | ನಂದದಿ ಮದುವೆಮಾಡಿದನು || ೮೨ ||

ಅಂದದಿನಂಬರಮಧ್ಯೆಯನಾದಲಿ | ತೇಂದೀವರನೇತ್ರೆಯನು |
ಸಂದಸದ್ವೃ ಸುಭಗ ರಾಜಹಂಸಗಾ | ನಂದದಿ ಮದುವೆ ಮಾಡಿದನು || ೮೩ ||

ಸಂತಸದಿಂದಾ ಸ್ತ್ರೀರತ್ನದೊಡನ | ತ್ಯಂತಾಸಕ್ತಿಯೊಳಿರ್ದು |
ಅಂತಕಾತ್ಮಜನಲ್ಲಿಂ ಪೋಪಕಜ್ಜವ | ತಾಂ ತವಕದಿನೆಣಿಸಿದನು || ೮೪ ||

ತಮ್ಮ ಪಯಣವನು ಧ್ಯಾನರಾಜಗೆ ಪೇಳಿ | ಸಮ್ಮಾನದಿನೊಂದಿರುಳು |
ತಮ್ಮಂದಿರೊಡವರೆ ತತ್ಪುರವರವನು | ಘಮ್ಮನೆ ಪೊರಮಟ್ಟನಾಗ || ೮೫ ||

ಕೊಂತಿಸಹಿತ ಕಡುದೊಡ್ಡಿತಪ್ಪೊಂದು ವ | ನಾಂತರಾಳವ ಹೊಕ್ಕು ಬಳಿಕ |
ಸಂತತ ಸುಖಿಸುವ ತಾಪಸರಾಶ್ರಮ | ವಂ ತವಕದಿನೆಯ್ದಲಾಗ || ೮೬ ||

ಅಲ್ಲಿಯೋರ್ವಳು ಹರಿನುರುಗಣ್ಣಿಳಿದಲ | ರ್ವಿಲ್ಲಬಲ್ಲಹನಗಲ್ಕೆಯೊಳು |
ನಿಲ್ಲದೆ ರತಿ ತಪಮಿರ್ದಪಳೋಯೆನೆ | ಪುಲ್ಲಾಕ್ಷಿ ತಪಗೈಯುತಿರಲು || ೮೭ ||

ಬಿಟ್ಟು ಜಡೆ ಬಿಳುಪೇರಿಸಿ ಪಲ್ಗಳ | ನುಟ್ಟುವಲ್ಕಡದುಡುಗೆಯನು |
ತೊಟ್ಟು ಭಸ್ಮವನಂಗೋಪಾಂಗದೊಳು ಬಗೆ | ಯಿಟ್ಟು ತಪಸುಗೈಯುತಿರಲು || ೮೮ ||

ರನ್ನದ ರಮಣಿಯೆಂಬಂತಪರಂಜಿಯ | ಹೊನ್ನಕುಮಾರಿಯೆಂಬಂತೆ |
ತನ್ನ ತನುವ ತಾ ಮರೆದು ತಪಂಗೆಯ್ದು | ಕನ್ನೆ ಕಣ್ಬಗೆಗೊಪ್ಪುತಿರಲು || ೮೯ ||

ಈಯೇಳುವರೆಯದೊಳೀಚೆಲ್ವಿಕೆಯನಾಂ | ತಾಯತಾಕ್ಷಿಗೆ ತಪಮೇಕೆ |
ಈ ಯಂದಮನುರೆಯರಿವೆನೆನುತ ಕೊಂತಿ | ಕನ್ನೆ ಕಣ್ಬಗೆಗೊಪ್ಪುತಿರಲು || ೯೦ ||

ತರುಣಿ ನಿನಗೆ ಕಿರುವರೆಯದೊಳೀಕೀ | ಪಿರಿದಪ್ಪ ತಪಮಿದನೆನಗೆ |
ಒರೆವುದೆನುತ ಕೀರಿಕೇಳೆ ಕಣ್ದೆರೆದಾ | ತುರದಿ ಕಂಡಳು ಧರ್ಮಸುತನ || ೯೧ ||

ಕಟ್ಟೊಲವಿಂ ತಪವನು ಮಾಡುತಾ ಮಂಜು | ವೆಟ್ಟಮಗಳು ಶಂಕರನ |
ದಿಟ್ಟಿದೆರೆದುನೋಡಿದಂತಾ ಸತಿ ಕ | ಣ್ಣಿಟ್ಟು ನೋಡಿದಳಾ ನೃಪನ || ೯೨ ||

ಜರಿದುದು ಕೈಯ ಜಪದಮಾಲೆ ಕಣ್ಗಳೋ | ಳ್ವರಿಸಿದುದನಾನಂದವಾರಿ |
ಪರಿದುದು ಕೈರವಾಕ್ಷಿಯ ಕಣ್ಮನವಾ | ನರನಾಥಚಂದ್ರನ ಮೇಲೆ || ೯೩ ||

ಇಂತು ನೀರಿಕ್ಷಿಸಯತಾಯಿಂದಮುಖಿ ತ | ನ್ನಂತರಂಗದ ಕಾರ್ಯವನು |
ಕೊಂತಿದೇವಿಯೊಳು ಕಣ್ಗಳನೀರಿಮಿಡಿವುತ | ತಾಂತಳುವದೆ ಪೇಳ್ದಳಿಂತು || ೯೪ ||

ಎನ್ನ ಕನಕ ವಿಂಧ್ಯಕನಾತನ ಸತಿ | ಚೆನ್ನೆಸುಕ್ಷಣೆಯಮಾರ್ಗ |
ಕನ್ನೆ ವಸಂತಸುಂದರಿಯೆಂಬ ಸುತೆ ನಾನು | ಮುನ್ನ ಯುಧಿಷ್ಠಿರನೃಪಗೆ || ೯೫ ||

ಎನ್ನನು ಕೊಡುವೆನೆಂದಿರೆ ಜತುಗೇಹದೊ | ಳುನ್ನತರಳಿದುದ ಕೇಳಿ |
ಅನ್ನಿಗನೋರ್ವನ ಮಗಗೆಮ್ಮಯ್ಯನು | ಮನ್ನಿಸಿ ಕೊಡುವೆನೆಂದಿಣಿಸೆ || ೯೬ ||

ಆವಾರತೆಯನಾನರಿದುಬ್ಬೆಗದಿನೆ | ಮ್ಮಾವೂರನು ಪೊರಮಟ್ಟು |
ಅವಾವನರಿಯದಂದದಿಬಂದು ಭರದಿಂ | ಧೀವನಮಧ್ಯವ ಹೊಕ್ಕು || ೯೭ ||

ಮುಂದನಭವಕಾದೊಡಾ ಧರ್ಮತನುಜನೊ | ಳೊಂದಿ ಸೌಖ್ಯವನು ಹಡೆವೆನು |
ಎಂದೀತರದ ತಾಪಸರೂಪಧರಿಸದೆ | ನೆಂದು ತಾನೆಯ್ದಿದ ತೆರನ || ೯೮ ||

ಆ ನಾರಿ ನುಡಿಯೆ ನಿವೇದಿಸಿದಳು ಕೊಂತಿ | ಮಾನನಿ ಬಿಡು ದುಃಖವನು |
ನೀನಿಚಚ್ಚೈಸುವ ಪತಿಯಿವನೆಂದು ಮ | ಹಾನುಭಾವನ ತೋರುತವೆ || ೯೯ ||

ತಾಮೆಯ್ದಿದ ವೃತ್ತಕವನಳಕೊಡೆ | ಪ್ರೇಮದಿ ಮಾತಾಡಿ ಬಳಿಕ |
ಕೋವಲೆಯಿನ್ನು ನಿಶ್ಚಲಮಿರುಯೆಂದಾ | ಭಾಮೆಯನವರೂರ್ಗೆ ಕಳುಹೆ || ೧೦೦ ||

ಸುಗುಣರಲ್ಲಿಂ ಪೋಗಿ ತ್ರಿಸ್ಥಂಗಮೆಂಬೊಂದು | ನಗರಿಯ ಪೊರವನದೊಳಗೆ |
ಸೊಗಯಿಪ ಚಂದ್ರನಾಥಬಸದಿಯ ಹೊಕ್ಕು | ವೊಗುಮಿಗೆಯೊಲವಿನೊಳಿರಗಿ || ೧೦೧ ||

ಅಲ್ಲಿರ್ದ ವೀರಾಚಾರ್ಯಮನೀಶಗೆ | ಯಲ್ಲಾಸದಿಂ ಪೊಡಮಟ್ಟು |
ಸೊಲ್ಲಿಸಲವರು ಧರ್ಮವ ಕೇಳುತಿರ್ಪನ್ನೆ | ಗಲ್ಲಿಗಾಪಟ್ಟಣದರಸು || ೧೦೨ ||

ಭರತಷಟ್ಖಂಡವಾಳಿದ ಮುನ್ನಿನಚಕ್ರ | ಧರರಾಪನ್ನೀರ್ವರುಗಳ |
ಉರುತರಮಪ್ಪೈಸಿರಿವೆಣ್ಗಳೆಂದೆನೆ | ವರತನುಜೆಯೆರೊಡವರಲು || ೧೦೩ ||

ಅನುದಿನಮೆಂಬರದೊಳು ಭ್ರಮಿಸಿದುದೊಂದು | ತನುವಿನಾಸರು ಹಿಂಗಲೆಂದು |
ಮನಮೊಸೆದಿಳಿದುಬಂದಿಹ ಭಾಸಕರರನಿಜ | ವನಿತೆಯರಿವರೆಂಬಂತೆ || ೧೦೪ ||

ಪನ್ನಿರ್ವರು ಕುವರಿಯರೊಡವರೆ ಬಂದು | ಸನ್ನುತಮಪ್ಪ ಭಕ್ತಿಯೊಳು |
ಚೆನ್ನಾಗಿಯಾದೇವರು ಗುರುವಿನ ಕಾಲ್ಗೆ | ತನ್ನಮಂಡೆಯನಿಟ್ಟು ಬಳಿಕ || ೧೦೫ ||

ಎಲೆಯವಧಿಜ್ಞಾನಿಮುನಿಪತಿಯನ್ನೀ | ಒಲವಿನ ತನುಜೆಯರಿವರ |
ಬಲವಂತನಂತಕಪುತ್ರಗೆ ಕೊಡಲೆಂದು | ನೆಲೆಮಾಡಿಕೊಂಡಿರ್ದೆನೀಗ || ೧೦೬ ||

ಆ ಲಲಿತಾಂಗನುನುಜರುವೆರಸಿ ಲಾ | ಕ್ಷಾಲಯದೊಳು ಸತ್ತರೆಂದು |
ಬಾಲೆಯರಿವರುಯಬ್ಬೆಗದಿಂ ತಪವನು | ತಾಳುವೆವೆಂದೆನುತಿಹರೆ || ೧೦೭ ||

ಎನೆ ಮುನಿಯೆಂದನೆಲೇ ಮನುಜೇಶಾ | ಘನಮಹಿಮರು ಪಾಂಡವರು |
ವಿನುತಚಮದೇಹಿಗಳವರಿಗೆ ಕೇ | ಡನುಕರಿಸುವುದಿನಿಸಿಲ್ಲ || ೧೦೮ ||

ಎಂಬುದು ಚಂಡವಾಹನಮುನಿಪನ | ಕೆಂಬಜ್ಜೆಗೆ ಪಣೆಯಿಟ್ಟು |
ಅಂಬುಜಮುಖಿಯರಣುಗೆಯರು ಸಹಿತಾ | ಡಂಬರದಿಂ ಪೋದನಿತ್ತ || ೧೦೯ ||

ಆಮಾತುಗೇಳಿ ಧರ್ಮಜನಾಬಳಿಯಿಂ | ಭೀಮಾಜುನರಮಳುಗಳು |
ಆ ಮಾತೃ ಕೊಂತಿಸಹಿತ ಮುನಿನಾಥನ | ಕೋಮಲಪದಪದ್ಮಕೆರಗಿ || ೧೧೦ ||

ಪೊರಮಟ್ಟಾಭೀಮಾಟಿವಿಯನು ದಾಂಟಿ | ಪೆರತೊಂದು ನಗರಮನೆಯ್ದಿ |
ಉರುವ ಜಿನಾಲಯವನು ಹೊಕ್ಕು ಜಿನಪತಿ | ಗೆರಿಯೊರಗಿ ರಾತ್ರಿಯೊಳು || ೧೧೧ ||

ಅಲ್ಲಿಂದವೆ ಪೊರಮಟ್ಟು ವಸುಧಾ | ವಲ್ಲಭರಿರದೆಯ್ತಂದು |
ಸಲ್ಲಿಲಿತಾಂಬಡೆದೊಂದಗ್ರಹಾರಕೆ | ಉಲ್ಲಸ್ಯದಿಂದೆಯ್ತಂದು || ೧೧೨ ||

ಆ ಊರಮುಂದೆ ರಂಜಿಸುವಾರವೆಯೊಳು | ಭೂವರರವರು ನಿಂದಿರಲು |
ತೀವಿ ಭಕ್ಷ್ಯವನೊಂದುಬಂಡಿಯೊಳೀರ್ವ ಭೂ | ದೇವನ ಮಗನ ಕುಳ್ಳಿರಿಸಿ || ೧೧೩ ||

ಅವನೇರಿದ ಬಂಡಿಯ ಹಿಂದೋರ್ವಳು | ತವೆ ಶೋಕಿತಸುತೆಯ್ತರಲು |
ಅವನೀಶರಿಂತಿದೇನೆಂದು ಕೇಳಿದೊಡಾಗ | ಲವಳಿಂತೆಂದಾಡಿದಳು || ೧೧೪ ||

ಹರಿಪುರಮೆಂಬ ಪಟ್ಟಣದೊಳು ಬಾಣೆನೆಂ | ಬರಸಷ್ಟಮದಯುತನಾಗಿ |
ಧರೆಯನಾಳುವ ಮಾಂಸಾಹಾರಲೋಲುಪ | ನಿರಲೊಂದಾನೊಂದು ಪಗಲು || ೧೧೫ ||

ಎಡೆಬಿಡುವಿಲ್ಲದೆ ತನ್ನಕೈಯಾರೆ ತಂ | ದಡುಗೆ ಮಾಡುವ ಬಾಣಸಿಗನು |
ಅಡಗುದೊರಕದಿಲರಸಿಬರುತ್ತೊಂ | ದೆಡೆಯೊಳಗೋರ್ವ ಮಾನವನು || ೧೧೬ ||

ಮರಣವಡೆದು ಬಿದ್ದರೆ ಕಂಡಾ ಮೈಯ | ನರಿದು ಮತ್ತಾಮಾಂಸವನು |
ತ್ವರಿತದಿ ತಂದಡುಗೆಯ ಮಾಡಿಯುಣಲಿಕ್ಕ | ಲಿರದಾ ನೃಪನದಸವಿದು || ೧೧೭ ||

ಸವಿಯಾಯ್ತೀ ಮಾಂಸವೇತರದೆಂಬುದ | ವಿವರಿಸೆಂದುನುತಾಗ್ರಹದಿ |
ಅವನೀಪತಿ ಕೇಳಿದೊಡತಿಭೀತಿಯಿಂ | ದವನಿಂತೆಂದಾಡಿದನು || ೧೧೮ ||

ಅಡಗದೊರಕದಿರೆ ನರಮಾಂಸವ ತಂ | ದಡುಗೆಯ ಮಾಡಿದೆನೆಂದು |
ಕಡುಬೆದರುತ ಪೇಳಂಜಲುಬಬೇಡ ನೀ | ನಡುವುದಿಂದು ಮೊದಲಾಗಿ || ೧೧೯ ||

ಈ ನರಮಾಂಸಮನೆಂದು ನುಡಿದು ಮ | ತ್ತಾನೃಪನತ್ಯಾಸೆಯಿಂದ |
ಮಾನವರನು ಕೊಂದು ತರಿಸಿಯಾಮಾಂಸವ | ತಾನುಂಡು ತಣಿವುತಲಿಹನು || ೧೨೦ ||

ಅರಿರದೆಸಗುವನಾಚಾರವ ಕಂಡು | ಪುರಪರಿಜನಮೆಲ್ಲ ನೆರೆದು |
ತ್ವರಿತದಿಂದವನ ಮಗಗೆ ಪಟ್ಟವ ಕಟ್ಟಿ | ಪುರದಿಂ ತಗುಳಿದವನು || ೧೨೧ ||

ಭ್ರಷ್ಟನಾಗಿ ಬಂದಾಬಾಣನತ್ಯಂತ | ದುಷ್ಟನು ತನ್ನ ತನುವಿಗೆ |
ತುಷ್ಟಿಯಪ್ಪಂತೆ ರಾಕ್ಷಸವಿದ್ಯೆಯನು ಮನ | ದಿಷ್ಟದಿನಭ್ಯಾಸಮಾಡಿ || ೧೨೨ ||

ಆ ವಿದ್ಯೆಯಿಂದ ರಾಕ್ಷಸರೂಪವಡೆದು ಮ | ತ್ತಾವಾವ ಪಳ್ಳಿಪಳ್ಳಿಯೊಳು |
ಹೇವವಿಲ್ಲದೆ ಮನುಜರು ಕೊಂದು ತಿಂಬನು | ಭೂವಲಯವು ಬೆಚ್ಚುವಂತೆ || ೧೨೩ ||

ಈ ರೀತಿಯಿಂ ಕೊಂದುತಿನುತೈದುತೀಯಗ್ರ | ಹಾರವ ಹೊಕ್ಕಿಲಿರ್ಪ |
ಹಾರುವರೆಲ್ಲರ ಲೆಕ್ಕಮಿಲ್ಲದೆ ಕೊಂದು | ಪೂರಿಸುವನು ತನ್ನೊಡಲು || ೧೨೪ ||

ಘನಮಾಗಿ ಕೊಲುವ ರಕ್ಕಸನಟ್ಟುಳಿಗೆ ಪುರ | ಜನಮೆಲ್ಲನೆರೆದಯ್ತಂದು |
ವಿನತರಾಗಿಯೆ ದಿನಕೊಬ್ಬರೊಬ್ಬರ ತಂದು | ನಿನಗೆ ಬಲಿಯನು ಕೊಡುವೆನು || ೧೨೫ ||

ಎಂದಾಬಾಣಾಸುರನದಕೊಡಂಬಡು | ವಂದದಿ ನುಡಿದಾದ್ವಿಜರು |
ಒಂದೊಂದು ದಿನಕ್ಕೋರ್ವಪಾರ್ವನನಿರದೆ | ಯ್ತಂದು ಬಲಿಯ ಕೊಡತಿರು || ೧೨೬ ||

ಈ ಬಂಡಿಯ ಹೋರಿಯಿದರೊಳು ತೀವಿ | ರ್ದೀ ಭಕ್ಷ್ಯಸಹಿತೆಮ್ಮೂರ |
ಈ ಭೂಸುರರನೆಲ್ಲರ ತಿಂದುಬಿಡನೀ | ಕ್ಷೋಭೆಕಾರರಕ್ಕಸನು || ೧೨೭ ||

ಇಂದೆನ್ನ ಮಗನ ಮದುವೆ ಬಂದುದು ಮ | ತ್ತಿಂದೇ ಈ ಬಾಣನ ಬಾರಿ |
ಎಂದಾತನ ವೃತ್ತಾಂತವನುಸುರಲಿಂ | ತೆಂದಾಡಿದಳು ಕೊಂತಿದೇವಿ || ೧೨೮ ||

ಕೇಳೆನ್ನ ನುಡಿಯ ಪಾರ್ವತಿಯೆನಗೈವರು | ಬಾಲರುಂಟವರೊಳಗೋರ್ವ |
ಹಾಳೊಡಲಿನ ಭಿಮನೆಂಬೀ ಪಾಪಿಗೆ | ಕೂಳನಾ ದೊರಕಿಸಲಾರೆ || ೧೨೯ ||

ಅದರಿಂದಾ ರಾಕ್ಷಾಸಗೀ ತನುಜನ | ನದಿರದೆ ಬಲಿಯ ಕೊಡುವೆನು |
ಇದಕೆ ಸಂಶಯ ಬೇಡೆಂದು ಮಾತಾಡಿ ಮ | ತ್ತಧಟಿನಾವಾಯುಸುತನ || ೧೩೦ ||

ಕರೆದು ಮನ್ನಿಸಿ ತೋರಿಯೀ ಬಂಡಿಯನ್ನವ | ನಿರುತದಿಂ ಭೋಜನಗೆಯ್ದು |
ಕರುಳ ತೆಗೆದು ಬಾಣನ ಕೊಂದುಬಾರೆಂದು | ವರಸುತನನು ಹರಸುತವೆ || ೧೩೧ ||

ಆ ತುಂಬಿದ ಬಂಡಯನೇರಿಸಿ ಬಳಿ | ಕಾ ತರುಣ ಬ್ರಾಹ್ಮಣನ |
ಭೂತಳಕಿಳುಹಿ ನಿಲಿಸಿ ಮುಂದಕೆ ವಾಯು | ಜಾತನ ಪೋಗೆನಲಾಗ || ೧೩೨ ||

ಬಂಡಿಯೊಳಗೆ ತೀವಿದ ಕಜ್ಜಾಯದ | ಪಿಂಡವ ಬಲಗೈವಿಡಿದು |
ಕೊಂಡೆಡಗೈಯಿಂದವನನೇಡಿಸುತಾ | ಗಂಡರದೇವನೆಯ್ದಿದನು || ೧೩೩ ||

ಮುಸುಡ ಮುರುಂಕಿಸಿ ಮುದ್ದೆಗೂಳ್ಳೆಂದಾ | ಹಸಿದು ಕೋಪದೊಳು ನಿಂದಿರ್ದ |
ಅಸುರನಿದಿರು ನಡೆದಣಕವಾಡುವನಾ | ಅಸಮವಿಕ್ರಮಿಯನಿಲಜನು || ೧೩೪ ||

ಅದನು ಕಂಡಾರಾಕ್ಷಸನಿವಗೀಯಾಟ | ವದುಭುತವೆಂದಾಯೆಡೆಗೆ |
ಇದಿರಾಗಿ ಬಂದು ಕೋಪಾಟೋಪದಿಂದಾ | ಅಧಟನ ಮೇಳ್ದಾಯ್ದನಾಗ || ೧೩೫ ||

ಸೊಕ್ಕಾನೆ ಗಂಡಸಿಂಗದ ಮೇಳ್ವಾಯ್ವಂತೆ | ರಕ್ಕಸನಣ್ಮೆನುತ |
ಎಕ್ಕಟಗಲಿಯಲರಣುಗನಮೇಲೆ ತ | ನ್ನುಕ್ಕುವ ವಿಕ್ರಮದಿಂದ || ೧೩೬ ||

ಸಿಡಿಲಂತೆ ಸಿಡಿಸಿದೆರಗುವವನ ಕಂಡು | ಕಡುಮುಳಿದಿಂತು ನುಡಿದನು |
ಬಡಹಾರುವರನೆಲ್ಲರ ಕೊಂದಾತಿಂದಾ | ವೊಡಲ ಸೀಳದೆ ಬಿಡೆನೆಂದು || ೧೩೭ ||

ಬಿಡುನುಡಿದಾಬಾಣನನಾಭೀಮನಿ | ಮ್ಮಡಿ ಜವನಂದದಿ ಮುನಿದು |
ಎಡಗಾಲಿಂದಾ ಹಂಜಿಯ ಹೊಸೆವಂದದಿ | ಕೆಡಹಿ ಹೊಸೆದು ಕೊಂದನಾಗ || ೧೩೮ ||

ಅದನು ಕಂಡಾಪಳ್ಳಿಯ ಪಾರ್ವರೆಲ್ಲರು | ಮುದದಿಂದ ಮಿಗೆ ಕೊಂಡಾಡಿ |
ಅಧಟರದೇವ ಕೇಳಿಂದಿನದಿನ ನಿ | ನ್ನುದರದೊಳ್ನಾವು ಪುಟ್ಟಿದೆವು || ೧೩೯ ||

ಎಂದಾಭೀಮಸೇನಗೆ ಹರುಷದಿಯಭಿ | ವಂದಿಸಿಯುಳಿದ ಪಾಂಡವರ್ಗೆ |
ಸಂದ ಭಕ್ತಿಯೊಳಿದರಗಿ ಕೊಂತಿಗೆ ಬಲ | ವಂದು ನಮಸ್ಕಾರ ಮಾಡಿ || ೧೪೦ ||

ಇಂದೆಮ್ಮೂರಿಗೆ ಬಿಜಯಂಗೈಯಬೇ | ಕೆಂದತಿ ವಿನಯದಿಂ ಕರೆದು |
ಮುಂದೇತರವಿಕ್ರಮಿಗಳನೊಡಗೊಂಡು | ಬಂದುಪಚರಿಸಿದರವರು || ೧೪೧ ||

ಒಂದೊಂದು ದಿನಕ್ಕೋರ್ವರೋರ್ವರ ಮನೆಗೈ | ತಂದು ಮಜ್ಜನ ಭೋಜವನು |
ಅಂದವಡೆದು ಮಾಡಿ ಕೆಲದಿನಮಿರ್ದ | ಲ್ಲಿಂದ ಮುಂದಕೆ ತೆರಳಿದರು || ೧೪೨ ||

ಕಾಳಮೃಗಾಳ ವಾಚಾಳಾಭೀಳ ಶುಂ | ಡಾಲ ಸೃಗಾಳ ಶಾರ್ದೂಲ |
ವ್ಯಾಳಾದಿಮೃಗದಿಕ್ಕೆಯಾದಾರಣ್ಯವ | ನಾನಲಿತಾಂಗರೆಯ್ದಿದರು || ೧೪೩ ||

ಅನಿತರೊಳಾಪಗಲಳಿಯಲಾ ಬಿಂಜದೊ | ಳನಿಲಮಾರ್ಗವ ಚುಂಬಿಸುವ |
ಘನತರಮಪ್ಪೊಂದು ವಟವಟಿಪಿಯ ಕಂಡು | ವಿನುತರದನು ಸಾರಿದರು || ೧೪೪ ||

ಅಲ್ಲಿ ಯುಧಿಷ್ಠಿರ ಮೊದಲಾದ ಸೋದರ | ರೆಲ್ಲ ನಿದ್ರಯೊಳೊರಗಿರಲು |
ಬಲ್ಲಿದನಾಭೀಮನವರಿಗೆ ಕಾಪಾಗಿ | ಸಲ್ಲೀಲೆಯಿಂದಿರುತಿರಲು || ೧೪೫ ||

ಮಾರುತನಾತನ್ನ ಮಗಗಾರುಧಿರೋ | ದ್ಗಾರಿವೆಸರಗದೆಯವಗೆ |
ಸೇರುವುದೆಂದಲ್ಲಿಗವನನುಕರೆವಂತೆ | ಸೌರಭ್ಯವೆರಸಿ ತೀಡಿದುದು || ೧೪೬ ||

ಎಲ್ಲಿಯದೀಯಾಮೋದಾನಿಲನೆಂದು | ಬಲ್ಲಿದನದರ ಬೆಂಬಳಿಯ |
ಮೆಲ್ಲಗೆ ಬರಲೊಂದು ಬಲುಹೊದರಿನ ತಳ | ದಲ್ಲಿ ದಿವ್ಯಾರ್ಚನೆ ಸಹಿತ || ೧೪೭ ||

ಭೀಕರತರಮಪ್ಪ ಗದೆಯಿರಲಾಮುಂದೆ | ಏಕಚಿತ್ತದೊಳು ಕುಳ್ಳಿರ್ದು |
ಏಕಾಂಗವೀರವಿದ್ಯಾದಾಧಕನಿರ | ಲಾ ಕಲಿಮರುತನಂದವನು || ೧೪೮ ||

ಕರಮನದಕೆ ನೀಡಲಾಗದೆ ಭೋಂಕನೆ | ಬರಲುದ್ದಾಮಸುಕೃತನು |
ಧರಿಸಿಯದನು ಸೋದರರೊರಗಿದ ವಟ | ತರುವಿನಲ್ಲಿಗೆ ಸಾರಿದನು || ೧೪೯ ||

ಅನಿತರೊಳಾಯೆಡಗಾ ವನದೇವತೆ | ಯನುರಾಗದಿಂ ಬಪ್ಪತೆರನ |
ಅನಕರಿಸುತ್ತೋರ್ವಳಧಿಕಲಾವಣ್ಯದ | ವನಿತಾಮಣಿ ನಡೆತಂದು || ೧೫೦ ||