ಶ್ರೀಮದಮರಪರಿಮೌಲಿಕೀಲಿತಪಾದ | ತಾಮರಸದವಯಜನಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಜಂಬೂದ್ವೀಪದ ಭರತಕಾರ್ಯಖಂಡ | ವಿಂಬಾಗಿಹುದು ಮತ್ತಲ್ಲಿ |
ತುಂಬಿದ ವತ್ಸೆಯೆಂಬೊಂದು ನಾಡೊಳು ಕೌ | ಶಂಬಿವೆಸರ ಪುರಮಿಹುದು || ೨ ||

ಅದರೊಳು ಮಗಧಮಹೀಪಾಲಕನೆಂ | ಬಧಟನಿಹನು ಮತ್ತವಗೆ |
ಸುದತಿಯಿಹಳು ವನಮಾಲೆಯೆಂಬೋರ್ವಳು | ಸದಮಲನಿಭಶಶಿವದನೆ || ೩ ||

ಅವರೀರ್ವರಗರ್ಭದೊಳು ರಘುವೆಂಬೋರ್ವ | ಕುವರನೊಗೆದು ಭೂತಳವ |
ದಿವಿಜಲೋಕಮನಮರೇಂದ್ರನಾಳುವವೊಲು | ಸವಿನಯದಿಂದಾಳುತಿಹನು || ೪ ||

ಆಶ್ರೀತಜಸುರತರು ರಘುನೃಪನನ | ಸುಸ್ರುತಕೆಳೆಗೊಂಡಿಹನು |
ವೈಶ್ರವಣೋಪಮವಿತ್ತಸಂಯುತನು ರಾ | ಜಶೇಷ್ಠಿಸುಮುಖನೆಂಬವನು || ೫ ||

ಆ ರಾಜಶ್ರೇಷ್ಠಿಗೆ ಬಾಂಧವನಾಗಿ ಸು | ಚಾರುಗುಣಾಲಂಕೃತನು |
ವೀರದತ್ತನೆಂಬೋರ್ವ ಪರದನು ಮ | ತ್ತಾರಾಜಧಾನಿಯೊಳಿಹನು || ೬ ||

ಆವೀರದತ್ತವೈಶ್ಯನವಲ್ಲಭೆ ಕೆಂ | ದಾವರೆಯಲರ್ವಜ್ಜೆಗಳ |
ಭಾವಕಿ ವನಮಾಲೆಯೊಂಬೊಳ್ವೆಸರಿನ | ಲಾವಣ್ಯಾಂಗಿಯೊಪ್ಪಿದಳು || ೭ ||

ಆಕೆಯನಂಗಜವಿಬು ನಿಜವಿಜಯಪ | ತಾಕೆ ಪರಿರಂಜಿಸುವ |
ಆಕಾರವನಾಲೋಕಿಸಿ ವಿರಹೋ | ದ್ರೇಕಮಾಯ್ತಾ ಸುಮುಖಂಗೆ || ೮ ||

ನೀತಿಪರಾಙ್ಮುಖನಾಸುಮುಖನು ಸ | ತ್ಪ್ರೀತಿಮಾಡಿ ಪರವಧುಗೆ |
ಆತುರದಿಂದೊಡಬಡಿಸಿ ಕೂಟಕೆ ನಿ | ರ್ಭೀತಿಯಪ್ಪುದೆನೆಣಿಸದನು || ೯ ||

ಪಿರಿದುವಂಚಿಸಿ ವೀರದತ್ತನ ಕರೆದಾ | ದರದಿಂದಿಂತುನುಡಿದನು |
ಪರದುಗೆಯ್ಯದೆ ಸುಮ್ಮನಾಡಿಕೊಂಡಿರ್ಪುದು | ಪರದರಿಗನುಚಿತವೆನಲು || ೧೦ ||

ಪರಿಮಿತವಸ್ತುವಿಲ್ಲದೆಯೆನಗತಿವಿತ್ತ | ದೊರಕಲು ಜಲಜಾತ್ರೆಯಿಂದ |
ಪರದುಗೆಯ್ವೊಡೆ ನಾಮ ನಿಪುಣನಲ್ಲವೆಯೆಂದು | ಪಿರಿದಾಗಿ ಮಾತನಾಡಿದನು || ೧೧ ||

ಆ ನುಡಿಗೇಳಿ ಸುಮುಖನಾಗಿ ಸುಮುಖನು | ತಾನತಿವಸ್ತುವನವಗೆ |
ಆನದೆ ಜಲಯಾತ್ರೆಗೆ ತಕ್ಕುದನು ಕೊಟ್ಟ | ನೇನೆಂಬೆನವನ ವಂಚನೆಯ || ೧೨ ||

ಪಿರಿದುಸಂತಿಷ್ಟಮಾನಸ ವೀರದತ್ತನು | ವಿರಿಚಿಸಿ ಯಾನಪಾತ್ರವನು |
ವರುಷಹನ್ನೆರಡಕೆ ಸಮನಿಸಿ ಸಮಕಟ್ಟಿ | ನುರುತರ ಬಂಡವ ತುಂಬಿ || ೧೩ ||

ಹಡಿಗೇರಿ ಹರದುಗೆಯ್ಯಲು ವೀರದತ್ತನು | ನಡೆಯ ಮತ್ತಿತ್ತಾ ಸುಮುಖ |
ಕಡುನೇಹದಿಂ ಪರಸತಿ ವನಮಾಲೆಯೊ | ಳೊಡಗೂಡಿ ನಿಶ್ಚಿಂತಮಿರಲು || ೧೪ ||

ವನಯಾತ್ರಾಪರನಾಗಿ ನಡೆದು ಬಹು | ಧನವಗಳಿಸಿ ವೀರದತ್ತ |
ಅನುರಾಗದಿಂದಲೆ ಮಗುಳಿ ಕೌಶಂಬಿಯ | ವನದಮಧ್ಯದೊಳೆಯ್ದುತವೆ || ೧೫ ||

ತನ್ನ ವನಿತೆ ವನಮಾಲೆ ಸುಮುಖನೊಳ | ಗನ್ಯಾಯದಿಂದಾಚರಿಪುದ |
ಚೆನ್ನಾಗಿನಿಂದಿಪ ಜನವಚನವ ಕೇಳಿ | ಯುನ್ನತಿಕೆಯ ಕೋಪದಿಂದ || ೧೬ ||

ತನಗಾಸುಮುಖನ ಬಾರಿಸುವಾ ಶಕ್ತಿ | ಯಿನಿಸಿಲ್ಲದಾ ವೀರದತ್ತ |
ಜನನಾಥಗೆ ಮೊರೆಯಿಡುವ ವೇಳೆಯ ಕಾರಣ | ದನುಮಾನಿಸಿದನಿಂತೆಂದು || ೧೭ ||

ಎನ್ನ ಮನೋರಮೆಗೆಂದು ವಿತ್ತವನಾ | ನುನ್ನತಿಯಿಂ ತಂದೆನವಳು |
ಅನ್ನಿಗನನು ಮೆಚ್ಚಿದಳೆನುತಾ ಸಂ | ಪನ್ನನಿರ್ವೇಗವತಾಳಿ || ೧೮ ||

ಆ ಪರಿಯಿಂದ ಚಿಂತಿಸಿ ಪ್ರೊಷ್ಠಿಲಮುನಿ | ಯಾಪಾದದ್ಮಾಂತಿಕದೊಳು |
ತಾಪಸರೂಪಧರಿಸಿ ವೀರದತ್ತನು | ಪಾಪರಹಿತವೃತ್ತನಾದ || ೧೯ ||

ಸದಮಲಮಪ್ಪತಪದೊಳು ನೆಗಳಿಯಳಿ | ದುದಯಿಸಿ ಸೌಧರ್ಮವೆಂಬ |
ಮೊದಲನಾಕದೊಳು ಚಿತ್ರಾಂಗದನೆಂಬೋರ್ವ | ವಿದಿತದಿವಿಜನಾದನಿತ್ತ || ೨೦ ||

ಉತ್ತಮರಘುನೃಪತಿಯ ಸಖ ಸುಮುಖನು | ಮತ್ತಾವನಮಾಲೆಯೊಡನೆ |
ಚಿತ್ತಜನಾರತಿಯೊಳು ಕೂಡಿದಂತೆಯಿ | ರುತ್ತೊಂದಾನೊಂದುಪಗಲು || ೨೧ ||

ಸಂಯುಮಿಗಳು ಚರಿಗೆಗೆ ಬರುತಿರಲಾ | ರೈಯದಿದಿರುಗೊಂಡ ಬಳಿಕ |
ಒಯ್ಯನೆ ನಿಲಿಸಿ ದಿವ್ಯಾಹಾರವ ತನ್ನ | ಕೈಯಾರೆ ದಾನಮಾಡಿದನು || ೨೨ ||

ಭಿಕ್ಞಾನ್ನವಕೊಂಡು ಬಳಿಕೆ ಕೈಯೆತ್ತಿ ಮು | ಮುಕ್ಷುಗಳತಿ ಹರುಷದೊಳು |
ಅಕ್ಷಯದಾನಮಕ್ಕೆಂದು ಹರಿಸಿಯುಪ | ಲಕ್ಷಿಸಿದರು ಧರ್ಮವನು || ೨೩ ||

ಧರ್ಮಾಧರ್ಮನಿರೂಪಣವನು ಕೇಳಿ | ಕರ್ಮರಹಿತಚಿತ್ತರಾಗಿ |
ಕೂರ್ಮೆಯಿನಾವನಮಾಲೆಯು ಸುಮುಖನು | ನಿರ್ಮಲಮಪ್ಪ ಸಂಯಮವ || ೨೪ ||

ಹರಿಸದಿ ಕೈಕೊಂಡಾವ್ರತವನು ಪರಿ | ಹರಿಸದೆ ನಡೆಸಿ ಸುಮುಖನು |
ಮರಣವನೆಯ್ದಿ ಭರತದ ವಿದ್ಯಾಧರ | ಗಿರಿಯ ತಪ್ಪಲೊಳು ರಂಜಿಸುವ || ೨೫ ||

ಹರಿವರುಷಾಖ್ಯವಿಷಯದೊಳು ಶೋಭಾ | ಕರಮಾದ ಭೋಗನಗರಿಯ |
ಅರಸು ಪ್ರಭಂಜನಖಚರಗಾರಿನಸತಿ | ಗರುವೆ ಮೃಕಂಡುವೆಂಬವಳ್ಗೆ || ೨೬ ||

ವರಸುತನಾಗಿ ಜನಿಸಿ ಪರಿಕೇತುವೆಂ | ಬುರುತರನಾಮವಧರಿಸಿ |
ಸಿರಯುಕುಮಾರನಂದದೊಳು ಬೆಳೆದು ಹೊಸ | ಹರೆಯವಾದನು ಬಳಿಕಿತ್ತ || ೨೭ ||

ಆ ವನಮಾಲೆ ಸತ್ತಾ ವಿಷಯದ ವಿ | ಶ್ವಾವಲಯಾಖ್ಯನಗರಿಯ |
ಭೂವರವಜ್ರಚಾಪಂಗೆ ಸುಭಾಮಾ | ದೇವಿಗೆ ಸಂಭವಿಸಿದಳು || ೨೮ ||

ಪೊಸಕುಡಿಮಿಂಚ ಮಸೆದವೊಲುಮಿಗೆ ರಂ | ಜಿಸುವಂಗಲತಿಕೆಯಕಾಂತಿ |
ಅಸದೃಶವಿದ್ಯುನ್ಮಾಲೆಗೆಯನ್ವರ್ಥ | ವೆಸರಾಯಿತಿಳೆಯರಿಕೆಯೊಳು || ೨೯ ||

ಆ ಸುಕುಮಾರಿ ವಿದ್ಯುನ್ಮಾಲೆಯನು ಮ | ತ್ತಾಸಿಂಹಕೇತುಕುವರಗೆ |
ವಾಸವಸದೃಶಪ್ರಭಂಜನನೃಪತಿ | ತ್ಯಾಸಕ್ತಿಯಿಂ ಕೈಗೂಡಿಸಿದ || ೩೦ ||

ಈ ತೆರದಿಂದ ಮದುವೆಯಾಗಿಯಾ ಸಿಂಹ | ಕೇತುವಿದ್ಯುನ್ಮಾಲೆಯೊಡನೆ |
ಮಾತೇನು ಭವಬದ್ಧಮೋಹದನ್ಯೋನ್ಯಸಂ | ಪ್ರೀತಿಯಿಂದೊಡಗೂಡಿದನು || ೩೧ ||

ಬಂದ ವಸಂತರಿತುವಿನೊಳಗತ್ಯಾ | ನಂದದಿ ನಂದನಕೈದಿ |
ಕುಂದಲಮಂಟಪದೋವರಿವೊಕ್ಕು | ಕಂದರ್ಪಕೇಳಿಯೊಳಿರಲು || ೩೨ ||

ಆ ವೀರದತ್ತಚರನು ಚಿತ್ರಾಂಗದ | ದೇವನು ಸಗ್ಗದಿಂದಿಳಿದು |
ಆ ವನಕೈದಿಯಾಯೆಡೆಯೊರಗಿರ್ದ ವ | ಧೂವರರನು ಕಂಡನಾಗ || ೩೩ ||

ಕಂಡತಿಕೋಪಾವೇಶಮಾನಸನೆತ್ತಿ | ಕೊಂಡು ಸುಮುಖಧರ್ಮವಿಮುಖ |
ಚಂಡಪಾತಕಿವನಮಾಲೆ ನಿಮ್ಮಸುವನು | ಹಿಂಡಿದಲ್ಲದೆ ಸುಮ್ಮನಿಹೆನೆ || ೩೪ ||

ಎಂದುರೆಮುಟ್ಟಿಮೂದಲಿಸಿ ಬೈವುತ ಕೊಲ್ವೆ | ನೆಂದು ಪೋಪಾಸಮಯದೊಳು |
ಹಿಂದಣಭವದ ಸುಮುಖನ ಬಾಂಧವ ರಘು | ವೆಂದೆಂಬಾ ನೃಪವರನು || ೩೫ ||

ವದನದೊಳೊಗೆದ ಜರೆಯ ಕಂಡು ವೈರಾಗ್ಯ | ಮೊದವಿ ದೀಕ್ಷಾವಿಧಿಯಿಂದ |
ಅದರದಳಿದು ಮತ್ತಾ ಸೌಧರ್ಮಕ | ಲ್ಪದೊಳಿರದುದಯಂಗೆಯ್ದು || ೩೬ ||

ತರಣಿಪ್ರಭನೆಂಬನಾಮವ ತಳೆದಾ | ಹರಿಕೇತುವಿನ ಪುಣ್ಯದೊದವೆ |
ನಿರುತಮಾಗಿ ಬರ್ಪಂತಾಗಸದೊಳು | ಬರುತ ಕಂಡನು ಬಳಿಕವರ || ೩೭ ||

ಕರುಣಹೃದಯನಾಗುತಾ ಚಿತ್ರಾಂಗದ | ಸುರನೊಳಿಂತೆಂದು ನುಡಿದನು |
ಉರುತರಕೋಪದಿನಿವರನೇರಕಾರಣ | ಭರದಿಂ ಕೊಂಡೊಯ್ವೆಯೆನಲು || ೩೮ ||

ಆ ಸಗ್ಗಿಗನೆಂದನು ಪೋದಭವದೊಳು | ಕೌಶಂಬಿಯೆಂಬಪುರವನು |
ಓಸರಿಸದೆ ನೀನಾಳುವಂದಿನ ಸೆಟ್ಟಿ | ಯಾ ಸುಮುಖನು ವಂಚನೆಯೊಳು || ೩೯ ||

ಜಲಯಾತ್ರೆಯಿಂದ ಪರದುಗೆಯ್ಯೆಂದೆನ್ನ | ಕಳುಹಿ ಎನ್ನೀ ಹೆಂಡತಿಗೆ |
ಆಳುಪಿದಪಾತಕಿಯವಗಾಜ್ಞೆಯ ಮಾಡ | ಲಳವಂದೆನಗಾದುದಿಲ್ಲ || ೪೦ ||

ಅಂದಿನ ಭವದೊಳಗಾದ ಹಗೆಯನಾ | ನಿಂದಿಂತಪ್ಪಭವದೊಳು |
ಕೊಂದುಹಾಕುವೆನೆಂದು ಕೊಂಡೊಯ್ದಪೆನೆನ | ಲೆಂದನು ಸೂರ್ಯಪ್ರಭನು || ೪೧ ||

ಇವು ನರಕೀಟಕ ನಾವು ದಿವ್ಯಾಂಗಿಗ | ಳಿವನ ಕೈಮುಟ್ಟಿ ಕೊಲ್ಲುವುದು |
ಅವಿವೇಕಮಿಂತಿದರಿಂ ಸಲೆಪಾಪಸಂ | ಭವಿಸುವುದನು ನೀನರಿಯ || ೪೨ ||

ಸ್ಥಾವರ ಜಂಗಮ ಜೀವರಾಶಿಗಳೊಳು | ಭಾವಿಸಿನೋಡಿದೊಡೊಂದು |
ಜೀವಕೆ ಹಗೆ ಕೆಳೆಯಾಗೆ ಹುಟ್ಟಿದರಾರು | ಭಾವಜ್ಞ ನಿನ್ನರಿಕೆಯೊಳು || ೪೩ ||

ಪಗೆವರಕೊಲ್ವೆನೆಂಬಾಸೆಯುಂಟಾದೊಡೆ | ಜಗದ ಜೀವಗಳೆಲ್ಲ ನಿನಗೆ |
ಹಗೆ ಕೆಳೆಯಾಗಿ ಕೆಲವುಸೂಳೊಳೊಗೆವರು | ಸುಗುಣ ನೀನಾರಾರ ಕೊಲ್ವೆ || ೪೪ ||

ಆರಿಗಾರಾರು ಪಗೆವರು ಬಂಧುಗಳು ಮ | ತ್ತಾರಿಗಾರಾರು ಸತಿಯರು |
ಅರಿಗಾರಾರಸುಗಳೆಂಬುದಿದನೋಡು | ಧೀರ ನೀನೀ ಸಂಸ್ಕೃತಿಯೊಳು || ೪೫ ||

ಅದರಿಂದಾ ರಾಗದ್ವೇಷಂಗಳ ಹೃದ | ಯದೊಳಗೆ ನಿಲಿಸುವುದು |
ಸದಮಲಗುಣಿಗಳಿಗಲ್ಲದೆ ಕೃತ್ಯಮಿಂ | ತಿದನು ನೀನೇ ಬಲ್ಲೆಯಾಗಿ || ೪೬ ||

ಜೀವದಯಾನ್ವಿತ ಜಿನಧರ್ಮವಿಡಿದೀ | ದೇವಗತಿಯನುರೆಪಡೆದು |
ಈ ವಿಧವನು ಮಾಡುವುದು ನಮಗುಚಿತವೆ | ಕೋವಿದ ಕೇಳು ನೀನೆಂದು || ೪೭ ||

ಇವು ಮೊದಲಾದ ಯುಕ್ತಾಯುಕ್ತಿಗಳಿಂದ | ದಿವಿಜನನಾ ಸೂರ್ಯಪ್ರಭನು |
ಸವಿನಯದಿಂದೊಡಬಡಿಸಲಂತದ | ನವಧರಿಸುತೆಮಿಂತುನುಡಿದ || ೪೮ ||

ಎಲೆ ಸೂರ್ಯಪ್ರಭ ನಿನ್ನ ಸೂಕ್ತಿಗಳನು | ಗೆಲುವುದು ಪಿರಿದನುಚಿತವು |
ನೆಲೆಯೆನಗೆಂದಾರಾಜಮಿಥುನವನು | ಕೊಲೆಲೊಲ್ಲದಮಗೆಯೊಪ್ಪಿಸಲು || ೪೯ ||

ಆ ಸಿಂಹಕೇತು ವಿದ್ಯುನ್ಮಾಲೆಯರನಂ | ದ ಸೂರ್ಯಪ್ರಭದೇವ |
ಆ ಸಗ್ಗಿಗನ ಕೈಯಿಂದ ತೆಗೆದುಕೊಂಡು | ಲೆಸನವರಿಗೆ ಮುಂದೆಣಿಸಿ || ೫೦ ||

ಪೆಂಪುವಡೆದು ರಾಜಿಸುವಂಗದೇಶದ | ಚಂಪಾಪುರದ ವನದೊಳು |
ದಂಪತಿಗಳನು ತಂದಿಳಿಪಿ ತನ್ನತ್ತನಿ | ಳಿಂಪನೆಯ್ದಿದನು ಮತ್ತಿತ್ತ || ೫೧ ||

ಆ ಚಂಪಾಪುರರವರದಧಿನಾಥನು | ಶ್ರೀಚಂದ್ರಕೀರ್ತಿಯೆಂಬನನು |
ನೀಚಕೃತ್ಯದೊಳಂತಕನೆಳೆದೊಯ್ದನು | ಭೂಚಕ್ರವಳಲುವಂದದೊಳು || ೫೨ ||

ಆ ನರನಾಥಗೆ ತನುಜಾನುಜಸಂ | ತಾನಮಿಲ್ಲದ ಕಾರಣದಿ |
ಮಾನನಿಧಾನಿಗಳಪ್ಪ ಮಂತ್ರಿಗಳ ವಿ | ತಾನವೆಲ್ಲವು ಕೂಡಿಕೊಂಡು || ೫೩ ||

ಪೂಜಿಸಿ ಪಟ್ಟದಗಜವನು ಬಿಡಲದು | ರಾಜಧಾನಿಯ ನಂದನಕೆ |
ಓಜೆಯಿಂದೆಯ್ತಂದಲ್ಲಿ ಮುನ್ನಿರ್ದಾ | ರಾಜಮಿಥುನವನು ಕಂಡು || ೫೪ ||

ಬರಿಕೈಯೊಳಿರ್ದ ಹೊಂಗಳಸದುದಕವನು | ಸಿರಿದಲೆಗಭಿಷೇಕಮಾಡಿ |
ಹರಿಸದಿ ತನ್ನ ಮಸ್ತಕದೊಳಿರಿಸಿ ಪುರ | ವರಕೆ ಬಂದುದು ಭದ್ರಹಸ್ತಿ || ೫೫ ||

ಸಕಲಾಭರಣಭೂಷಿತರಾಗಿ ಗಜದ ಮ | ಸ್ತಕವನಡರಿಬರುತಿರ್ಪ |
ಅಕಲಂಕರೂಪಯುತರ ಕಂಡು ಹರುಷೋ | ತ್ಸುಕರಾದರಾಮಂತ್ರಿಗಳು || ೫೬ ||

ಪುರದೊಳಷ್ಟಶೋಭೆಯ ಮಾಡಿ ನೃಪಮಂ | ದಿರವ ಹೊಗಿಸಿ ವಿಭವದೊಳು |
ಹರಿಕೇತುವಿಗೆ ಪಟ್ಟಾಭಿಷೇಕಮನಾ | ದರದಿಂ ಮಾಡಿದರವರು || ೫೭ ||

ಮಂಡಳಿಕರ ಮಂತ್ರಿಗಳ ಸಾಮಂತರ | ದಂಡನಾಥರ ದುರ್ಗಾಧಿಪರ |
ಮಂಡಳಿಯೆಲ್ಲ ನೆರೆದು ಭೂಪತಿ ನಿಮ್ಮ ಮಂಡಲವನು ಪೇಳ್ವೆದೆನಲು || ೫೮ ||

ಹರಿಕೇತುನೃಪತಿಯವರೊಳಿಂತೆಂದನೀ | ಭರತದ ವಿಜಯಾರ್ಧಗಿರಿಯ |
ಸುರುಚಿರ ಹರಿವರ್ಷಾಖ್ಯದೇಶದ ಭೋಗ | ಪುರದ ಪ್ರಭಂಜನನೃಪನ || ೫೯ ||

ಸರಸಿಜವದನೆ ಮೃಕಂಡುವೆಂಬುಬಲೆಯ | ವರನಂದನನು ನಾನೆಂದು |
ಹರಿಸದಿ ತನ್ನ ವೃತ್ತಾಂತವನೆಲ್ಲವ | ನೊರೆಯಲು ತಾನವರೊಡನೆ || ೬೦ ||

ಪುರುತೀರ್ಥಪ್ರವರ್ತನಸುಪ್ರತಿಷ್ಠಿತ | ಹರಿವಂಶದಶಮತೀರ್ಥಕರು |
ವರಶೀತಳಜಿನಪನಕಾಲದೊಳಂದು | ಚಿರಮಾದುದೀಗ ನಿನ್ನಿಂದ || ೬೧ ||

ಹರಿವರ್ಷಾಖ್ಯದೇಶಾಧೀಶನೆಯಾಗಿ | ಹರಿಕೇತುವೆಂಬ ಹೆಸರನೆ |
ಧರಿಸಿದಕಾರಣಮಿನ್ನು ನಿನ್ನೀವಂಶ | ಹರಿವಂಶವಾಗಲಿಯೆನುತ || ೬೨ ||

ಪೆಂಡರಕುಲಕೆ ಪೇರ್ಮಣಿಯೆನಲೆಸೆವ ಮೃ | ಕಂಡುವ ಸುತನಾದುದರಿಂ |
ಮಂಡಲದೊಳು ಮಹೀಪತಿ ನಿನ್ನ ಹೆಸರು ಮಾ | ರ್ಕಂಡೇಯನೆಂದಾಗಲೆಂದು || ೬೩ ||

ಪುರಪರಿಜನಮೆಲ್ಲ ಮೆಲ್ಲನುಲಿವುತಿರೆ | ನರನಾಥನಾಹರಿಕೇತು |
ಧರೆಯಭಾರವನೆಲ್ಲವ ತನ್ನ ತೋಳೊಳು | ಧರಿಸಿಯರಸುಗೆಯ್ವುತಿರ್ದ || ೬೪ ||

ಬೆಸನನು ಬೇಡಿ ಭೂತಳದರಸುಗಳೆಲ್ಲ | ಮುಸುಕುತಿರಲು ಸಿಂಹಕೇತು |
ವಸುಧೆಯೆಲ್ಲವನೇಕಚ್ಛತ್ರದೊಳು ಸಂ | ತಸದಿಂದ ಪರಿರಕ್ಷಿಸಿದನು || ೬೫ ||

ಈ ತೆರದಿಂದ ರಾಜ್ಯವನಾಳ್ವಾ ಸಿಂಹ | ಕೇತುವಿದ್ಯುನ್ಮಾಲೆಯರಿಗೆ |
ಪ್ರೀತಿಯಿಂದಾಹರಿಯೆಂಬ ಪೆಸರ ತನು | ಜಾತ ಜನಿಸಿಯೊಪ್ಪಿದನು || ೬೬ ||

ಆ ಹರಿನೃಪಸುತನಹಿತನೃಪಾಲ | ವ್ಯೂಹಮಸ್ತಕನತಪದನು |
ಸಾಹಸಿ ಹಿಮಗಿರಿಯೆಂಬ ಪೆಸರಿನ ಪ | ಮಾಹಿತಮತಿಯೊಪ್ಪಿದನು || ೬೭ ||

ಅವನ ಬಸಿರೊಳು ವಸುಗಿರಯೆಂಬೋರ್ವ | ಕುವರನೊಗೆದು ವಿಕ್ರಮದೊಳು |
ಅವನಿಯೆಲ್ಲವನಾಳಿ ಕೀರ್ತಿವಲ್ಲರಿಗಾ | ಭುವನವನಡರು ಮಾಡಿದನು || ೬೮ ||

ಆ ವಂಶದೊಳಗೆಯನೇಕ ನೃಪರು ಧರ | ಣೀವಿಶ್ರುತರಾಗಲಲ್ಲಿ |
ದೇವೇಂದ್ರಾರ್ಚಿತಪದ ಮುನಿಸುವ್ರತ | ದೇವನು ಸಂಭವಿಸಿದನು || ೬೯ ||

ಆ ಮುನಿಸುವ್ರತತೀರ್ಥಾಧೀಶನು | ದ್ದಾಮವಂಶದೊಳಗನೇಕ |
ಭೂಮಿಪತಿಗಳು ಜನಿಸಲಲ್ಲಿ ವಸುವೆಂಬ | ನಾಮದ ನೃಪನು ಪುಟ್ಟಿದನು || ೭೦ ||

ಆ ಮಹಿಪತಿ ವಸುವಿನ ಬಸಿರೊಳಗು | ದ್ದಾಮಪರಾಕ್ರಮಯುತರು |
ಸೋಮಾರ್ಕರಂತೆ ಸುವಸು ಬೃಹದ್ವಸು | ನಾಮದ ಸುತರು ಪುಟ್ಟಿದರು || ೭೧ ||

ಅವರೊಳು ಸುವಸುವ ವಂಶಸಮಿತಿಯೊಳು | ದ್ಭವಿಸಿದ ಶತಮನ್ಯುವೆಂಬ |
ಅವನೀಶ್ವರಗೆ ಬೃಹದ್ರಥನೆಂಬೋರ್ವ | ಕುವರನೊಗೆದು ರಂಜಿಸುತ || ೭೨ ||

ಮಗಧದೇಶದ ಮಧ್ಯದೊಳು ರಾಜಗೃಹಮೆಂಬ | ನಗರಿಯ ಪರಿಪಾಲಿಸುತ |
ಸೊಗಯಿಸುತಿರಲು ಜರಾಸಂಧನೆಂಬೋರ್ವ | ಮಗನಾದನಾ ನೃಪವರಗೆ || ೭೩ ||

ಅವನ ಪುರಾತನಪುಣ್ಯಪ್ರಭಾವಸಂ | ಭವದಿ ಜನಿಸೆ ಚಕ್ರರತ್ನ |
ಅವನಿಯೊಳುಳ್ಳರಸುಗಳನೆಲ್ಲರ ತನ | ಗವನರತನು ಮಾಡಿಕೊಂಡು || ೭೪ ||

ಭರತಾವನಿಯ ತ್ರಿಖಂಡವನೆಲ್ಲವ | ನುರುತರವಿಕ್ರಮದಿಂದ |
ನಿರುತಮಾಗಿಯೇ ಸಾಧಿಸಿಯರ್ಧಚಕ್ರೇ | ಶ್ವರನಾದನಾ ನೃಪನಿತ್ತ || ೭೫ ||

ವಸುಧೀಶ ವಸುವಿನ ಕಿರಿಯಮಗನು ಬೃಹ | ದ್ವಸು ನೃಪತಿಯ ವಂಶದೊಳು |
ಅಸಮವಿಕ್ರಮಿಗಳನೇಶನೃಪರು ಜನಿ | ಯಿಸಿ ಕೀರ್ತಿವಡೆದಿರಲಲ್ಲಿ || ೭೬ ||

ಯದುವೆಂಬ ಜನನಾಥನೋರ್ವನುದಯುಗೆ | ಯ್ದಧಟನಾಗಿಯವನಿಯನು |
ಪಡೆದು ಪಾಲಿಸಿ ಕೀರ್ತಿಯನೆಯ್ದಲಂದಿಂದ | ಯದುವಂಶಮಾದುದಾಕುಲಕೆ || ೭೭ ||

ಜಸವೆತ್ತಾಯದುವೆಂಬ ನೃಪಾಲನ | ಬಸಿರೊಳು ನರಪತಿಯೆಂಬ |
ವಸುಧೀಶನೊಗೆದು ಮಧುರೆಯೆಂಬ ಪುರದೊಳ | ಗಸದೃಶನಾಗಿರಲವಗೆ || ೭೮ ||

ಶೂರ ವೀರರೆಂಬ ಹೆಸರಹಡೆದು ಸುಕು | ಮಾರರೀರ್ವರು ಸಂಭವಿಸಿ |
ಚಾರುಕಲಾನ್ವಿತರಾಗಿ ಜವ್ವನವಾಂತು | ದಾರಮೂರ್ತಿಗಳಾಗಿರಲು || ೭೯ ||

ನರಪತಿ ತನ್ನ ಕೆನ್ನೆಯೊಳು ಸಂಜನಿಸಿದ | ನರೆಗಂಡು ನಿರ್ವೇಗವನು |
ಧರಿಸಿ ಮಕ್ಕಳಿಗೆಯರಸುತನವನು ಕೊಟ್ಟು | ವರಜಾತರೂಪತಾಳಿದನು || ೮೦ ||

ಇತ್ತ ಶೂರನೃಪವರನು ಕೃತಾರ್ಥಮೆಂ | ಬುತ್ತಮಮಾದ ದೇಶವನು |
ಒತ್ತಿ ಸಾಧಿಸಿ ಶೌರೀಪುರಮೆಂಬುದ | ಬಿತ್ತರದಿಂ ಕಟ್ಟಿಸಿದನು || ೮೧ ||

ಅದರೊಳು ತಾನಿರ್ದು ಮಥುರಾಪುರದೊಳು | ವಿದಿತನನುಜ ವೀರನೃಪನು |
ಮುದುದಿನಿರಿಸಿ ತಾಮೀರ್ವರು ಸುಖಸಂ | ಪದದಿ ರಾಜ್ಯವನಾಳುತಿರಲು || ೮೨ ||

ಸುರಪತಿಸನ್ನಿಭನಾಶೂರನೃಪತಿಗೆ | ಗರವೆ ಗಾಂಧಾರಿಗುದ್ಭವಿಸಿ |
ಚಿರಮಾಂಗನಾಗಿ ಯುಂಧಕವೃಷ್ಣಿಯೆಂಬೋರ್ವ | ನರನಾಥಚಂದ್ರನೊಪ್ಪಿದನು || ೮೩ ||

ವೀರನೃಪಗೆ ನರಪತಿವೃಷ್ಟಿಯೆಂಬ ಕು | ಮಾರನೊಗೆದು ರಂಜಿಸಿದನು |
ಮಾರಗೆ ಸರಿಮಿಗಿಲೆನಿಸಿ ಮಿಸುಗುವಾ | ಕಾರಪನಂಗೀಕರಿಸಿ || ೮೪ ||

ವಿಷ್ಣುಗೆ ಸಿರಿಯ ತಪ್ಪಂದದಿಯಂಧಕ | ವೃಷ್ಣಿಕುಮಾರನ ಮನದ |
ತೃಷ್ಣೆಗೆ ತಕ್ಕ ಸುಭದ್ರಯೆಂಬೋರ್ವಳು | ಕೃಷ್ಣವೇಣಿಯ ತಂದನೊಸೆದು || ೮೫ ||

ಕಿರಿಯಕುವರ ನರಪತಿವೃಷ್ಣಿಗೆ ಮನ | ದೆರಕದಿ ಮದುವೆ ಮಾಡಿದನು |
ತುರುಗೆನೆವೆಗಣ್ಗಳ ಪದ್ಮಾವತಿಯೆಂ | ಬರಿಕೆಯ ರಾಜನಂದನೆಯ || ೮೬ ||

ಅಧಟನಂಧಕಕ್ಷೋಭನು ಸುಭದ್ರಾ | ಸುದತಿಗೆ ಸಂಜನಿಸಿದರು |
ಸದಮಲರಾ ದಶದಿಶೆಯಾಳ್ವರಂದದಿಂ | ದುದಯಿಸಿದರು ದಶಸುತರು || ೮೭ ||

ಶರಧಿವಿಜಯನಕ್ಷೋಭನು ಸ್ಥಿಮಿತಸಾ | ಗರಹಿಮಂವಂತವಿಜಯನು |
ವರಗುಣಿಯಚಲಧಾರಿಣಿಪೂರಣನುರು | ತರಮೂರ್ತಿಯಭಿನಂದನನು || ೮೮ ||

ಚಿತ್ತಜನಿಭವಸುದೇವವೆಸವಡೆ | ದುತ್ತಮರಾ ಹತ್ತುಮಂದಿ |
ಹತ್ತಿವಿಧದಸುರತರುವೀರರರೂಪು | ವೆತ್ತಂದದಿನೊಪ್ಪಿದರು || ೮೯ ||

ಇಂತೆಸೆವಾಹತ್ತು ಮಂದಿ ಕುಮಾರಕ | ರಂತರದೊಳು ಜನಿಸಿದರು |
ಕೊಂತಿ ಮಾದ್ರೆಯರೆಂಬವರು ಪಾರ್ವತಿ ಗಂಗೆ ಯಂತೆ ವಿಲಾಸವಡೆದರು || ೯೦ ||

ಉಗ್ರವಿಕ್ರಮಿ ನರಪತಿವೃಷ್ಣಿಯೆಂಬ ನೃ | ಪಾಗ್ರಣಿಗಾ ಪದ್ಮಾವತಿಗೆ |
ಉಗ್ರಸೇನ ದೇವಸೇನ ಮಹಾಸೇನ | ರಗ್ರಗಣ್ಯರು ಜನಿಸಿದರು || ೯೧ ||

ಆ ಮೂವರಿಂ ನೆರೆ ಕಿರಿಯೊಳು ಕೋಮಲ | ತಾಮರಸಯಾತನೇತ್ರೆ |
ಸೋಮಸದೃಶಮುಖಿ ಗಾಂಧಾರಿಯೆಂಬೋರ್ವ | ಭಾಮಿನಿ ಸಂಜನಿಸಿದಳು || ೯೨ ||

ಇಂತೆಸೆವಾ ಸುಕುಮಾರರು ಜವ್ವನ | ವಂ ತಳೆಯಲು ಕಂಡವರಿಗೆ |
ಸಂತಸದಿಂ ರಾಜಸುತೆಯರ ತಂದು ಭೂ | ಕಾಂತನು ಮದುವೆಮಾಡಿದನು || ೮೩ ||

ವಿಜಿಗೀಷು ಸಾಗರವಿಜಯಗೆ ಧರಿಣೀ | ಭುಜನಂದನೆಯನೋರ್ವಳನು |
ತ್ರಿಜಗದೇಕರೂಪವತಿ ಶಿವದೇವಿಯ | ನಿಜಲಗ್ನದೊಳು ತಂದು ಬಳಿಕ || ೮೪ ||

ಉಳಿದೆಂಟುಮಂದಿ ಕುಮಾರರ್ಗೆ ಭೂವರ | ಲಲನೆಯರಿಗಳೆಣ್ಬರನು |
ಲಲಿತವಿಭವದಿ ಮದುವಮಾಡಿದನಾ | ಇಳೆಯಾಣ್ಮನಾ ಶೂರನೃಪತಿ || ೯೫ ||

ಕ್ರಮದಿಂದೊಸೆದು ಧೃತೀಶ್ವರಿಯೆಂದೆಂಬ | ರಮಣಿತನಕ್ಷೋಭಂಗೆ |
ಸ್ಥಿಮಿತಸಾಗರಗೆ ಸ್ವಯಂಪ್ರಭೆಯೆಂಬಳ | ಹಿಮವಂತಂಗೆ ಸುಸೀಮೆ || ೯೬ ||

ಎಂಬಳನು ವಿಜಯಂಗೆ ಸೀತಾದೇವಿ | ಯೆಂಬವಳನು ಪ್ರಿಯವಚನೆ |
ಎಂವಳವಳನಚಲಭೂವರಗೆ ಪ್ರಭಾವತಿ | ಯೆಂಬಳನಾ ಧಾರಣಗೆ || ೯೭ ||

ಕಾಳಿಂದಿಯೆಂಬಳನು ಪೂರಣಗೆ ವಿ | ಲೋಲಾಕ್ಷಿಜಿನಮತಿಯೆಂಬ |
ಬಾಲೆಯನಭಿನಂದನಗೆ ಸುಪ್ರಭೆಯೆಂಬ | ಲೀಲಾನಿಧಿಯೋರ್ವಳನು || ೯೮ ||

ಎಳವಿಯೊಳೆಸಕವಡೆದ ರೂಪಲಾವಣ್ಯ | ದಳೆದಾ ವಸುದೇವಂಗೆ |
ವಿಲಸಿತವಿಭವದಿ ಮದುವೆಮಾಡಿದನಾ | ಇಳೆಯರಿಕೆಯೊಳಾನೃಪತಿ || ೯೯ ||

ಈ ತೆರದಿಂ ಪ್ರತ್ರಪೌತ್ರರು ಸಹಿತ ಧ | ರಾತಳವನು ಪಾಲಿಸುತ |
ಪ್ರೀತಿಯಿಂದಾ ಶೂರವೀರಭೂವರರು ವಿ | ಖ್ಯಾತಿಯಿಂದಿರಲೊಂದು ಪಗಲು || ೧೦೦ ||

ಭೂವಿಶ್ರುತಮಪ್ಪ ಗಂಧಮಾದನವೆಂ | ಬಾ ವಸುಧಾಧರದೆಡೆಗೆ |
ಭಾವಜರಿಪುಸುಪ್ರತಿಷ್ಠಮುನಿಗಳೆಯ್ದ | ಲಾ ವಾರತೆಯ ಕೇಳುತವೆ || ೧೦೧ ||

ಮತ್ತಲ್ಲಿಗೆಯ್ದಿ ಧರ್ಮಾಧರ್ಮದಿರವನು | ಚಿತ್ತಶುದ್ಧಿಯೊಳು ಕೇಳುತವೆ |
ಸುತ್ತಿಬಿಗಿದ ಮೋಹಪಾಶವ ಹರಿವೆನೆ | ನುತ್ತೆಣಿಸಿದರು ಬೇಗದೊಳು || ೧೦೨ ||

ಇಂತು ನಿರ್ವೇಗಮಾಸನರಾಗಿಯಾಮುನಿ | ಕಾಂತಗೆರಗಿ ಬೀಳ್ಕೊಂಡು |
ಸಂತಸದಿಂ ತಮ್ಮರಾಜಧಾನಿಗೆ ಭೂ | ಕಾಂತರು ಬಂದೊಂದುಪಗಲು || ೧೦೩ ||

ವರಶೌರೀಪುರದೊಳಗಂಧಕವೃಷ್ಣಿ | ಧರಣಿಪವನು ಮಧುರೆಯೊಳು |
ನರಪತಿವೃಷ್ಣಿಯನಿರಿಸಿ ದೀಕ್ಷೆಯನಾಂತ | ರಿರದಾಭುವರರುಗಳು || ೧೦೪ ||

ಶೂರವೀರರಾಗಿ ಕರ್ಮಭಟರ ಗೆಲ್ದು | ಶೂರವೀರಮುನಿವರರು |
ಸಾರಸುಖಮನಿರದೀವ ಮುಕುತಿಯೆಂಬ | ನಾರಿಯನೊಡಗೂಡಿದರು || ೧೦೫ ||

ಇತ್ತಲಂಧಕವೃಷ್ಣಿನರಪತಿವೃಷ್ಣಿಗ | ಳುತ್ತಮಸತ್ವಸಂಯುತರು |
ಪತ್ತುದೆಸೆಯೊಳು ತಮ್ಮಯ ಕೀರ್ತಿವಲ್ಲಿಯ | ಪತ್ತಿಸಿ ಸುಖದೊಳೊಪ್ಪಿದರು || ೧೦೬ ||

ಶುಭಗುಣಮಣಿಭೂಷಣಸುಮನೋಬಾಣ | ನಿಜರೂಮವಿಕ್ರಮನು |
ತ್ರಿಭುವನನುತನತಿಚತುರನೊಪ್ಪಿದನಾ | ಪ್ರಭುಕುಲಮಣಿದೀಪಕನು || ೧೦೭ ||

ಇದು ಜಿನಪದಸರಸಿಜಮದಮಧುಕರ | ಚದರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದ ಸಂಧಿಗಳ್ನಾಲ್ಕು || ೧೦೮ ||

ನಾಲ್ಕನೆಯ ಸಂಧಿ ಸಂಪೂರ್ಣಂ