ತೊಳಪಚಂದ್ರನ ತುಡಕಿದ ರಾಹುವಿನಂತೆ | ಯಲಘಂಕಬರಿಯೊಪ್ಪಿದುದು |
ನಳನವನಳಿಸೇರಿದಂತೆ ಕಣ್ಗೆಸೆದುದು | ತಿಲಕವವಳ ವದನದೊಳು || ೨೨೬ ||

ತಲಕುಸುಮವ ಸೇರ್ದ ನೀರ್ವನಿಯೆನ ಕ | ಣ್ಣೊಳಿಸಿತು ನಾಸಾಭರಣ |
ಲಲನೆ ನಿನ್ನೋಲೆಕೆಲ್ಲೋಲೆಯಗಲಿಯೆಂದು | ಕುಲಿಶದೋಲೆಯನಿಟ್ಟರವಣ್ಗೆ || ೨೨೭ ||

ಮನಸಿಜದೇವಾಭಿಷೇಕಕೆ ಕಲಶಾ | ರ್ಚನೆಯನು ಮಾಡುವಂದದೊಳು |
ಘನಕುಚದೊಳು ನವಮೌಕ್ತಿಕಮಾಲೆಯ | ನನುಗೊಳಿಸಿದರಾಸತಿಗೆ || ೨೨೮ ||

ಮನಸಿಜರಾಜನ ಮಂತ್ರದೇವತೆಯೋ | ನನೆಗಣೆಯನ ಪಟ್ಟವಧುವೋ |
ವನಜೋದರನಣುಗನ ಜಯಸತಿಯೋ | ಯೆನೆ ಸತಿ ಕಣ್ಗೊಳಿಸಿದಳು || ೨೨೯ ||

ಇಂತು ಕೈಗೆಯ್ದೊಡನಾಡಿದ ಸಖಿಯರ | ಸಂತತಿ ತನ್ನೊಡೆನೆಯ್ದ |
ಕಾಂತೆಯಂದಣವೇರಿಯಾಸ್ವಯಂವರಕತಿ | ಸಂತಸದಿಂದೆಯ್ದಿದಳು || ೨೩೦ ||

ಅಡಪ ಡವಕೆ ಕುಂಚ ಕರಗ ಕನ್ನಡಿ ಕವ | ಳುಡೆ ಪಾವುಗೆ ಗದ್ದುಗೆಯ |
ಮಡಿಯರೆಡಬಲವನು ಸುತ್ತಿಬರಲಾ | ಕಡುನೀರೆ ನಡೆತಂದಳಾಗ || ೨೩೧ ||

ಬಟ್ಟದುರುಂಬಿನ ಚೆಲ್ವಭಾಮಿನಿಯರು | ನಿಟ್ಟೆಸಳ್ಗಣ್ಣ ನೀರೆಯರು |
ಇಟ್ಟೆಡೆಮೊಲೆಯೇರುಂಜವ್ವನೆಯರು | ಕಟ್ಟೊಲವಿಂದೆಯ್ದಿದರು || ೨೩೨ ||

ಮುಡಿಯಿಟ್ಟು ಮೈಗೆ ಮಲಯಜಾತಮನಿಟ್ಟು | ಮುಡಿಯೊಳು ಮಲ್ಲಿಗೆಯಿಟ್ಟು |
ಬಿಡುಮುತ್ತಿನ ತೋರಮಣಿಯ ತೊಡವನಿಟ್ಟು | ನಡೆದರಾಳಿರಳವಟ್ಟು || ೨೩೩ ||

ಸ್ಮರವೀರಲಕ್ಷ್ಮ ಯಂದದಿ ಮಾಣಿಕವ ತೊಟ್ಟು | ಸರಸ ಕುಂಕುಮವನಣ್ಪಿಟ್ಟು |
ಅರುಣಾಂಬರವುಟ್ಟಿಡಿಲಗತಿಗೆಯಿಟ್ಟು | ಬರುತಿರ್ದರವರಡಿಯಿಟ್ಟು || ೨೩೪ ||

ತೊಟ್ಟು ನೀಲದ ಕಾಳ್ವಟ್ಟೆಯ ನಿರಿವಿಡಿ | ದುಟ್ಟು ಕಸ್ತೂರಿಯ ತೀಡಿ |
ನಟ್ಟಿರುಳ್ವೆಣ್ಗಳಂದದೊಳು ಕೆಲಬರಡಿ | ಯಿಟ್ಟಿರಬಲೆಯೊಡಗೂಡಿ || ೨೩೫ ||

ಅಗಂಜನರ್ಚಿಷುವಪರಂಜಿಬೊಂಬೆಯ | ಭಂಗಿಯವೊಲು ಪೊಂದೊಡಿಗೆಯ |
ಶೃಂಗಾರದ ಹಳದಿಯ ಪಟ್ಟಿಯುಡಿಗೆಯು | ತ್ತುಂಗಕುಚಿಯರೆಯ್ದಿದರು || ೨೩೬ ||

ನಡೆವ ನಂದನದಂದದಿ ಪುಸುರ್ವಟ್ಟೆಯ | ನುಡೆಯುಟ್ಟು ಮರಕತಮಣಿಯ |
ತೊಡವಿಟ್ಟು ಮುಡಿದುಕತ್ತುರಿ ಪೊಂಬಾಳೆಯ | ನಡೆದರಾಳಿಯರಾ ಬಳಿಯ || ೨೩೭ ||

ಬಗಸೆಗಂಗಳ ಬಡನಡುವಿನಬಲೆಯರು | ನಗಗಣ್ಗಳನಾರಿಯರು |
ಮುಗುಳಮೊಲೆಯ ಮುದ್ದುಮೊಗದ ಮಾನಿನಿಯರು | ಮುಗುದೆಯ ಮುಂದೆಯ್ದಿದರು || ೨೩೮ ||

ತೊಳಗುವ ತುರುಗೆವೆಗಣ್ಣ ತರುಣಿಯರು | ಬಳಲುಮುಡಿಯ ಭಾಮಿನಿಯರು |
ನಳನಳಿಸುವ ನಳಿತೋಳಜವ್ವನೆಯರು | ಲಲನೆಯ ಮುಂದೆಯ್ದಿದರು || ೨೩೯ ||

ಕಡೆಗಣ್ಗಳಿಂದ ಕಾಮುಕರ ಬೀಳಲ್ವೊಯ್ದು | ನಡೆಯೊಳಂಚೆಯನುರೆ ಜರಿದು |
ಮಡಿದಿಯರುಗಳ ತೊಳಗುವ ಸಿರಿಮುಡಿಗಳ | ನಾರಿಯರೆಯ್ತಂದರಾಗ || ೨೪೦ ||

ಸೋರುಮುಡಿಯ ಸೋಗೆಮುಡಿಯ ಮುಗುಳ್ಮಡಿ | ಯೋರೆಮುಡಿಯ ಬಲ್ಮುಡಿಯ |
ತೋರಮುಡಿಯ ತೊಳಗುವ ಸಿರಿಮುಡಿಗಳ | ನಾರಿಯರೆಯ್ತಂದರಾಗ || ೨೪೧ ||

ನಗೆಗಣ್ಣನನೆಯಂಬುಗಣ್ಣ ತಾಮರೆಗಣ್ಣ | ಬಗಸೆಗಣ್ಣೆಳೆವಾಳೆಗಣ್ಣ |
ಮಿಗವರಿಗಣ್ಣ ಮೀಟುಂಜವ್ವನೆಯರು | ಬಗೆಗೊಳುವಂತೆಯ್ದಿದರು || ೨೪೨ ||

ಬಣ್ಣದುಟಿಯ ಬಂದುಗೆಯಲರ್ದುಟಿಯಾಲ | ವಣ್ಣದುಟಿಯ ತೊಂಡೆದುಟಿಯ |
ಸಣ್ಣ ಚೆಂದಳಿರುದುಟಿಯ ಹೆರೆದುಟಿಯೆಳೆ | ವೆಣ್ಣತಿಂತಣಿ ಬಂದುದಾಗ || ೨೪೩ ||

ಕುಂದಕುಟ್ಮಳರದನಂಗಳನವಕುರು | ವಿಂದಮಾಣಿಕ್ಯದಂತಗಳ |
ಅಂದವಡೆದ ದಾಡಿಮದಂತಂಗಳ | ಸುಂದರಿಯರು ಬಂದರಾಗ || ೨೪೪ ||

ಮುಕುರಮುಖದ ಮುದ್ದುಮುಖದ ವಿರಾಜಿತ | ವಿಸಿತಾಂಭೋರುಹಮುಖದ |
ಅಕಲಂಕ ಚಂದ್ರಮುಖದ ಮುಗ್ಧಸತಿಯರ | ನಿಕರವೆಯ್ದಿದುದವಳೊಡನೆ || ೨೪೫ ||

ಕಳಶಕುಚದ ಕಾಂಚನಕಂಜಾತಕು | ಟ್ಮಳಿತಕುಚದ ಕುಂಭಕುಚದ |
ತೊಳಪ ಕರಂಡಕುಚದ ಕೋಮಲೆಯರು | ಲಲನೆಯ ಮುಂದೆಯ್ದಿದರು || ೨೪೬ ||

ಬಡನಡುವಿನ ಬಳ್ಳಿನಡುವಿನುಂಗುರವಿಡಿ | ನಡುವಿನ ಸಂದೇಹವಡೆದ |
ನಡುವಿನಸಿಯನಡುವಿನ ಸಣ್ಣನಡುವಿನ | ಮಡಿದಿಯರೆಯ್ತಂದರಾಗ || ೨೪೭ ||

ಪೊಂಬಾಳೆದೊಡೆಯ ಪೊಣ್ಮುವ ಮೋಹನಮಲ್ಲ | ಗಂಭದೊಡೆಯ ನುಣ್ದೊಡೆಯ
ಇಂಬುವಡೆದಮರಿಯಾನೆಗೈದೊಡೆಗಳ | ಬಿಂಬಾಧರೆಯರೆಯ್ದಿದರು || ೨೪೮ ||

ತಳಿರ್ವಜ್ಜೆಗಳ ತಾಮರವಜ್ಜೆಗಳ ಕ | ಣ್ಗೊಳಿಪಲತಗೆವಜ್ಜೆಗಳ |
ಪೊಳೆವ ಪವಳವಾವುಗೆವಜ್ಜೆಗಳನವ | ಲಲನೆಯರೆಯ್ತಂದರಾಗ || ೨೪೯ ||

ಪಂಚಶರನ ಪಟ್ಟಗಜ ಬರುತಿದೆ ಮುಂದೆ | ಸಂಚಲಚಿತ್ತರಲ್ಲಿಂದ |
ಮುಂಚೆ ತೊಲಗಿಯೆಂದು ಬಿಡದುಗ್ಗಡಿಸುವ | ಕಂಚುಕಿಯರು ಕಣ್ಗೆಸೆದರು || ೨೫೦ ||

ಈ ತೆರದಿಂದ ಸ್ವಯಂವರಸದನ | ಕ್ಕಾತರಳಾಕ್ಷಿಯೆಯ್ತರಲು |
ಭೂತಳೇಶರು ಮದನಗ್ರಹವಡೆದಂತೆ | ಯಾತನುಮರೆದು ನೋಡಿದರು || ೨೫೧ ||

ಆಗಳವಳ ಬೆನ್ನಮರೆಯೊಳು ನಿಂದಾ | ಪೂಗೋಲ್ಗಳಿಂದ ಮನ್ಮಥನು |
ಭೂಗಧಿನಾಥಕುಮಾರಕರೆಲ್ಲರ | ಲಾಗುಗೆಡಿಸಿ ಬೀಳಲೆಚ್ಚ || ೨೫೨ ||

ಆ ಸಮಯದೊಳು ಪಾಂಡವರು ಮೆಲ್ಲಗೆಬಂದು | ಭೂಸುರರೆಡೆ ಹೊಕ್ಕಿರಲು |
ಭಾಸುರಮೂರ್ತಿಗಳವರ ಲಕ್ಷಣಕೆ ಮ | ತ್ತಾ ಸಭೆಪಡೆದುದಚ್ಚರಿಯ || ೨೫೩ ||

ಆ ಲಲಿತಾಂಗರಿಂತಿರಲು ಸ್ವಯಂವರ | ಶಾಲೆಯೊಳರ್ಚನೆಗಯ್ದು |
ಕಾಲದಂಡಮನೇಳಿಸುವಂದವಡೆದಾ | ಭೀಳಕೋದಂಡಮೊಪ್ಪಿದುದು || ೨೫೪ ||

ಅದರ ಮೇಗಡೆ ವಜ್ರಜಂತ್ರದ ಝಷಮಿರಲಾ | ಸುದತಿಯ ನೇಹದಿ ಕೆಳದಿ |
ಚದುರೆ ಸುಂದರಿಯೆಂಬಳು ಬೆರಳೆತ್ತಿ ಸಂ | ಮದದಿನಿಂತೆಂದುನುಡಿದಳು || ೨೫೫ ||

ಇವನು ಕೌಶಲನಿವನಂಗಾಧೀಶ್ವರ | ನಿವನು ತೆಲುಗನಿಮಮಗಧ |
ಇವನು ಕನ್ನಡಿಗನಿವನು ಕೇರಳನು ಮ | ತ್ತಿವನು ಕೊಂಕಣನಿವತಿವುಳ || ೨೫೬ ||

ಇವನು ಕಳಿಂಗನಿವನು ಮಾಳವನು ಮ | ತ್ತಿವನು ಸಿಂಧುಜನಿವಗೌಳ |
ಇವನು ಕನ್ನೋಜಿಯಿವನು ಕಾಶ್ಮೀರ ಮ | ತ್ತಿವನು ಸೌರಾಷ್ಟ್ರಧಿನಾಥ || ೨೫೭ ||

ಎನುತ ಕೌರವ ಮೊದಲಾದವನೀಶರ | ಘನತರಮಪ್ಪ ಚೆಲ್ವಿಕೆಯ |
ಅನುರಾಗದಿಂ ಪೇಳುತ್ತಿರಲಾನುಡಿ | ವನಿತೆಯ ಕಿವಿವೊಕ್ಕುದಿಲ್ಲ | ೨೫೮ ||

ಪಾರ್ಥನರೇಂದ್ರಚಂದ್ರಮ ನನ್ನ ಹೃದಯ | ಸ್ವಾರ್ಥಮಲ್ಲದೆ ಮುತ್ತುಳಿದ |
ಪಾರ್ಥಿವರೆನ್ನ ಕಣ್ಬಗೆವೊಗರೇಸು ಸ | ಮರ್ಥರಾದೊಡಮೆನುತವಳು || ೨೫೯ ||

ಮನಬಗೆಗೊಂಡು ನೋಡದೆ ತಲೆವಾಗಿರ | ಲನಿತರೊಳಗೆ ಪಡಿಯರರು |
ಮನಜೇಶರ್ಗೆಂದರೆಲೆ ಭೂಪರಿರಾ | ವನಿತೆ ಬೇಕಾದೊಡೆ ನಿಮಗೆ || ೨೬೦ ||

ಈ ನಭದೊಳು ನೆರೆ ತಿರ್ರನೆತಿರುಗುವ | ಮೀನಮಿನುಗುವೆಡಗಣ್ಣ |
ಈ ನೀರನೆಳಲನೀಕ್ಷಿಸಿಯೀಧನುವಿಡಿ | ದಾನದೆಸುವುದೆನಲಾಗ || ೨೬೧ ||

ಆ ನುಡಿಗೇಳಿ ಕೆಲರು ದುರುದುಂಬಿಮ | ಹೀನಾಥನಂದನರುಗಳು |
ಸಾನಂದದಿನೆಗಳ್ದದರುಗ್ರತೆಗಭಿ | ಮಾನವಡಗಿ ತಿರುಗಿದರು || ೨೬೨ ||

ಅರೆಬರದನು ಬಲವಂದು ಜಾರಿದರು ಮ | ತ್ತರೆಬರು ಮುಟ್ಟಿ ಜಾರಿದರು |
ಅರೆಬರು ಪಿಡಿದು ನೆಗಹಲಾರದಾದರು | ಪಿರಿದುಮಗುರ್ವಿಪ ಧನುವ || ೨೬೩ ||

ಅದನು ಕಂಡಾ ಕೌರವನಲ್ಲಿಂದೆಳ್ದು | ಪದಪುಮಿಗಲು ಬಲವಂದು |
ಅಧಟಿಂದೆತ್ತಿ ಮುಗುಳ್ದನಾ ಧನುವಿಗೆ | ಹೆದೆಯನೇರಿಸಲಳವಡದೆ || ೨೬೪ ||

ಪಿರಿದಾಗಿನಾಣ್ಚಿ ಕುಳ್ಳಿರ್ದರಸನ ಕಂ | ಡುರುಬಲಯುತನಿನಸುತನ |
ಭರದಿಂದೆತ್ತಿಯಾಧನುವಿಗೆ ಕೊಪ್ಪಿಗೆ | ತಿರುವನೇರಿಸಿನಿಂದು ಬಳಿಕ || ೨೬೫ ||

ಆ ಧನುವನು ತೂನಲ್ಕಾರದೆಯಂ | ಗಾಧೀಶತಿರುಗೆಲಜ್ಜೆಯೊಳು |
ಭೂಧವದ್ರುಪನೀಕ್ಷಿಸಿಯಾನೃಪರೆಲ್ಲ | ಸಾಧಾರಣರೆಂದು ಬಗೆಯ || ೨೬೬ ||

ಭೂಸುರಸಭೆಯೊಳಗೀಬಿಲ್ಲನೆತ್ತುವ | ಸಾಸಿಗರುಂಟಾದರೇಳಿ |
ಓಸರಿಸದೆಯೆಂದು ಸಾರಸಲದಕೇಳಿ | ಯಾಸಭೆಯಿಂತಾಡಿದುದು || ೧೬೭ ||

ಸತ್ರದಮನೆಯೊಳು ಕುಳ್ಳಿರ್ದ ವಿಸ್ತೀರ್ಣ | ಪತ್ರಭಾಜನದ ಭೋಜನಕೆ |
ಪಾತ್ರವಲ್ಲದೆ ಮತ್ತೀರಾಜಪುತ್ರಿಗೆ | ಪಾತ್ರವೆ ಬಡಬ್ರಾಹ್ಮಣರು || ೨೬೮ ||

ಸಣ್ಣಗಳಮೆಯೋಗರ ತೊಗರಿಯ ತೋಯೆ | ಬೆಣ್ಣೆಗಾಸಿದ ತುಪ್ಪವೆರೆದು |
ಅಣ್ಣಂದಿರುಣಬನ್ನಿಯೆನಬೇಕಲ್ಲದೆ | ಹೆಣ್ಣೆಗೆಂದೆಮ್ಮ ಕರೆವರೆ || ೨೬೯ ||

ತುಯ್ಯಲು ತುಪ್ಪವ ಬಡಿಸಿ ಬಳಿಕ ನಮ್ಮ | ಕೈಯಪರಿಯನೀಕ್ಷಿಸಿದೆ |
ಅಯ್ಯಯ್ಯೋ ನಮಗುಸುರುವರೇ ಬಲು | ಗೈಯರಿಗಾಗದ ಬೆಸನ || ೨೭೦ ||

ಈ ತೆರದಿಂದುಸುರ್ವಾಬ್ರಾಹ್ಮಣರಾ | ಮಾತುಗೇಳಿ ನಸುನಗುತ |
ನೀತಿನಿಪುಣನಿರುಪಮಸತ್ಯನಿಧಿಯಮ | ಜಾತನತಿಪ್ರೀತಿಯಿಂದ || ೨೭೧ ||

ಪುರ್ವಿನಸನ್ನೆಯಿಂದೀಕ್ಷಿಸಲರಿದಾ | ದೋರ್ವನಶಾಲಿ ಫಲ್ಗುಣನು |
ಪಾರ್ವರಸಭೆಯಿಂದಾರೂಪಿನೊಳೆ | ಳ್ದುರ್ವಿಶರೆಲ್ಲನೋಳ್ಪಂತೆ || ೨೭೨ ||

ಬಿಟ್ಟೆಣೆಗಂಡು ಕಿವಿಯೊಳಿಟ್ಟ ಕುಂಡಲ | ಉಟ್ಟಧೋತ್ರವುವುಳ್ಳಿಗಡ್ಡ |
ಮಟ್ಟಿ ಬೆರಲದರ್ಭೆಯಿಂ ಕೃತಕದ್ವಿಜ | ನಿಟ್ಟಣಿಸಿದ ಸಭೆಯಿಂದ || ೨೭೩ ||

ಮೆಲ್ಲನೆಳ್ದು ಬಪ್ಪಾಗಲಲ್ಲಿರ್ದವ | ರೆಲ್ಲರವನ ಕಾಣುತವೆ |
ನಲ್ಲಳ ಬುಸಿದಯ್ಯಗಳೇ ನೀವೆಂದು | ಮೆಲ್ಲನುಲಿಯುತಿರ್ದರಿಂತು || ೨೭೪ ||

ಬಡ್ಡಿಸಿದಡ್ಡಲಿಗೆಯ ಮುಂದೆ ಕುಳ್ಳಿರ್ದ | ಗಡ್ಡಮೀಸೆಯ ನೀವಿಕೊಳುತ |
ಅಡ್ಡಾಕಿಲ್ಲದುಂಬುವ ಕಾರ್ಯ ಬಿಟ್ಟು | ದೊಡ್ಡಕಾರ್ಯವನೆಣಿಸಿದಿರಿ || ೨೭೫ ||

ಸುತ್ತಿದ ಮೈಯ ಯಜ್ಞೋಪವೀತದ ಗಂಟು | ವೊತ್ತಿ ಹರಿವ ಮಾಳ್ಕೆಯೊಳು |
ತುತ್ತನೆತ್ತಲು ಬಲ್ಲ ಕೈಯಲಿ ಬಲುಬಿಲ್ಲ | ನೆತ್ತಲೇಳ್ವುದು ಹಸನಾಯ್ತು || ೨೭೬ ||

ಭೂತಿಭೋಜನದ ಬ್ರಾಹ್ಮರು ದಿಟ್ಟಿಗೊಂಬಂ | ತಾರೋಗಣೆಯ ಮಾಳ್ವುದನು |
ದೂರೀಕೃತಮಾಡಿಯೀ ನೃಪತನುಜೆಗೆ | ಹಾರೈಸುವುದೊಳ್ಳಿತಾಯ್ತು || ೨೭೭ ||

ನಾರಿಗೆ ಮೋಹಿಸಿಯಾಬಿಲ್ಲಕೊಪ್ಪಿಗೆ | ನಾರಿಯನಿಟ್ಟು ಜಂತ್ರವನು |
ನಾರಾಚದಿನೆಸಲೆಂಬೀಕಜ್ಜಮಿ | ನ್ನಾರೊಳು ಸಂಭವಿಸುವುದು || ೨೭೮ ||

ಹೊಟ್ಟೆಹರಿವರೆರದಿದುಬೂಟವ | ಬಿಟ್ಟಾಬಿಂಬಾಧರೆಯ |
ನೆಟ್ಟನೊಲಿಸಿಕೊಂಬೆನೆಂದೇಳುವ ಖೂಳ | ದಿಟ್ಟ ನೀನಲ್ಲದಿನ್ನಾರು || ೨೭೯ ||

ಎಂದಾನೋಟಕಜನಮುಲಿಯುತ್ತಿರ | ಲಂದಾವೀರಕಿರೀಟಿ |
ಕಂದರ್ಪನೆ ವಟುವೇಷವನೆರೆ ತಾ | ಳ್ದಂದದಿ ನಡೆತಂದನಾಗ || ೨೮೦ ||

ಈ ರೀತಿಯೊಳು ಬಂದಾದಿವ್ಯಚಾಪವ | ನೇರಂಡದಂಡವ ಪಿಡಿದು |
ಆರೈಯದೆತ್ತುವಂದದಿನೆತ್ತಿ ಗೊಲೆಯಿತ್ತು | ನಾರಾಚವನಲ್ಲಿ ಹೂಡಿ || ೨೮೧ ||

ಕೌರವಕರ್ಣದುಶ್ಯಾಸನರಾಯದಿ | ಭೂರಮಣರು ಚೋದ್ಯವಡೆಯ |
ನೀರನೆಳಲನೋಡಿಯಾಜಂತ್ರದಮೀನ | ನಾರಣರಂಗರಸಿಕನು || ೨೮೨ ||

ಎಡದಕಡೆಯ ಕಣ್ಣನಟ್ಟನಡುವೆಯಂಬು | ನಡುವಂದದಿನೆಚ್ಚು ಮುಗುಳ್ದು |
ನಡೆತಂದಾಪಾರ್ವರೆಡೆಯಿರ್ದಗ್ರಜ | ಬ್ರಾಹ್ಮಣಗೀಚೆಲುವುಂಟೆ || ೨೮೩ ||

ಬ್ರಹ್ಮದೇವರು ಬಾಲೆಗೆ ಬಗೆಯಿತ್ತಾ | ಬ್ರಹ್ಮಲೋಕದನಿಳಿತಂದು |
ಬ್ರಹ್ಮಚಾರಿವೇಷವನಾನದೊಡೀ | ಬ್ರಾಹ್ಮಣಗೀಚೆಲುವುಂಟೆ || ೨೮೪ ||

ಎನುತೆಲ್ಲರುಮಿಗೆ ಕೊಂಡಾಡುರಿತಲಲ್ಲಿ | ಜನತಾಧಿಪನಿಕುರುಂಬ |
ಮನದೊಳು ನೆರೆನಾಣ್ಚುವತೆರದಿಂದಾ | ವನಿತಾಮಣಿನಡೆತಂದು || ೨೮೫ ||

ಬಲ್ಲಿದನಾಪಾರ್ಥನಾಸಬೆಯೊಳು ತನ್ನ | ಬಿಲ್ಲಬಿನ್ನಣವ ತೋರಿದೊಡೆ |
ಪುಲಾಕ್ಷಿಯೊಳಾಪುಲ್ಲಶರನು ತನ್ನ | ಬಿಲ್ಲ ಬಿನ್ನಣವ ತೋರಿದನು || ೨೮೬ ||

ನನೆಯಸರಳ್ಗೆ ತನ್ಮಯ ತನುಮನವನು | ಸತಿಯರಕುಲಕೆರತ್ನವನು |
ಅತಿಶಯವಡೆದ ಮೋಹಪುತ್ರಿಕೆಯನು | ಮತ್ತಿಯಿತ್ತು ನಡೆನೋಡಿದನು || ೨೮೭ ||

ರತಿಭಾರತಿರಂಭೆಗೆಣೆಯ ರಮಣಿಯನು | ಸತಿಯರಕುಲಕೆರತ್ನವನು |
ಅತಿಶಯವಡೆದ ಮೋಹಪುತ್ರಿಕೆಯನು | ಮತಿಯಿತ್ತು ನಡೆನೋಡಿದನು || ೨೮೮ ||

ಆಕೆಯನಂಗಜವಿಜುಪತಾಕೆಯ | ನಾ ಕುವಲಲೋಚನೆಯ |
ಲೋಕಾಶ್ಚರ್ಯವಿಲಾಸನ್ವತೆಯನಂ | ದಾಕಂತುನಿಭ ನೋಡಿದನು || ೨೮೯ ||

ಇಂತು ನೋಡುವ ನರನಾಥಚಂದ್ರನನಾ | ಕಾಂತಾಮಣಿ ತನ್ನ ತನುವ |
ಕಂತುಕಗೆಣೆಗೆ ಗುರಿಮಾಡಿ ತುರುಗಿದೆವೆ | ಯಂ ತೆಗೆಯದೆ ನೋಡದಳು || ೨೯೦ ||

ಮತ್ತಾನೀರೆ ಕಣ್ಮನದೊಳವನರೂಪ | ನೆತ್ತಿಕೊಂಡಾಬಲುಹೊರೆಯ |
ಹೊತ್ತು ನಿತ್ತರಿಸಲಾರದೆ ನಡೆವಂದದಿ | ಮೆತ್ತಮೆತ್ತನೆ ನಡೆತಂದು || ೨೯೧ ||

ಅಂಗಜಮೋಹಪಾಶವನಾಸತಿ ತನ್ನ | ಮುಂಗೈಗವನ ಕೊರಳ್ಗೆ |
ಸಂಗೊಳಿಸುವ ಮಾಳ್ಕೆಯೊಳು ಮಾಲೆಯನು ಮ | ನಂಗೊಳೆ ಸೂಡಿದಳಾಗೆ || ೨೯೨ ||

ಮಧ್ಯಮಪಾಂಡವನಾಬಿಲ್ಲನಾಸಿಂಹ | ಮಧ್ಯೆಯ ರೂಪವಿಕ್ರಯದಿ |
ಸಾಧ್ಯವಮಾಡಲುಳಿದನೃಪತತಿ ಲ | ಜ್ಜಾಧ್ಯಾನದೊಳಿರ್ದುದಾಗ || ೨೯೩ ||

ಒಸಗೆವರೆಗಳುಣ್ಮೆ ದ್ರುಪದನಾಗಳೆ ಮನ | ಮೊಸೆದವನೆಡೆಗೆಯ್ತಂದು |
ಅಸಮಾನಸತ್ವಕಿರೀಟಿಯ ಕಂಡು ವಿನಯವ | ನಾ ವುಸಧಾಪತಿ ಮಾಡಿ || ೨೯೪ ||

ಭಾವಿಸಿ ಧರ್ಮಜ ಭೀಮ ನಕುಲ ಸಹ | ದೇವರೆಂಬುದನುರೆ ತಿಳಿದು |
ಓವದೆಯವರವರಿಗೆ ತಕ್ಕ ವಿನಯವ | ನಾ ವಸುಧಾಪತಿ ಮಾಡಿ || ೨೯೫ ||

ಅವರನವರ ತಾಯಿ ಕೊಂತಿಯ ತನ್ನಾತ್ಮ | ಭವೆ ಪೆಣ್ಮಣಿ ದ್ರೌಪದಿಯನು |
ಸವಿನಯದಿಂ ತೇರೇರಿಸಿ ಕೌರವಧರ | ತವಕದಿ ಕೊಂಡೊಯ್ವಾಗ || ೨೯೬ ||

ಆ ನೀರೆ ನೆರದವನಿಪರಿರೆ ಬಡಪಾರ್ವ | ಗಾನಾರಿಯನಾ ದ್ರುಪದ |
ತಾನೀಯಬಹುದೆಯೆನುತ ಕೌರವಧರ | ಣೀನಾಥನುರುಕೋಪದಿಂದ || ೨೯೭ ||

ಸಮರಸನ್ನಹಭೇರಿಯ ದನಿಗೆಯ್ಸಿ ತ | ನ್ನಮಿತಸೇನೆಯ ಕೂಡಲಾಗ |
ಕ್ರವಿದಲ್ಲವೆನ್ನದೆ ನೆರೆದಿರ್ದಭೂ | ರಮಣರೆಲ್ಲರು ಕೂಡಿದರು || ೨೯೮ ||

ಪ್ರಳುವಾರಿಧಿಯಂತೆ ನಡೆತಪ್ಪಾ ಬಹು | ಬಲವ ಕಂಡಾವೂರಹೊಗುವ |
ಬಲಯುತ ಪಾಂಡವರಾದ್ರುಪದನು ತಮ್ಮ | ಪೊಳಲ ಪೊಗದೆ ತಿರುಗಿದರು || ೨೯೯ ||

ಆ ನರನಾಭೀಮಸೇನನಿರದೆ ಧರ್ಮ | ಸೂನು ನಕುಲ ಸಹದೇವ |
ಭೂನುತ ದ್ರುಪದ ದೃಷ್ಟುದ್ಯುಮ್ನರನು ಮ | ತ್ತಾ ನಗರಿಯ ಮುಂದಿರಿಸಿ || ೩೦೦ ||

ತೇರನದಿದೇರಿ ಗಾಂಡೀವವನು ನರ | ನಾರುಧಿರೋದ್ಗಾರಿಯನು |
ಮಾರುತಿ ಪಿಡಿದು ಕೌರವಬಲಜಲಧಿಯ | ನಾರಯ್ಯದೆ ಹೊಕ್ಕು ಬಳಿಕ || ೩೦೧ ||

ಹೆಸರು ಕುರುಹನರಿಯಲು ಬಾರದಂತಾ | ಅಸಮವಲ್ಲವನೆಲ್ಲವನು |
ಮಸಗಿ ಕೊಲುತ್ತಿರಲಾ ಸೇನೆ ನಮಗಿದು | ನಾರಯ್ಯದೆ ಹೊಕ್ಕು ಬಳಿಕ || ೩೦೨ ||

ಸುದತಿಯ ಬಯಸಿ ಬಂದಣ್ಣಂದಿರೊಳಗೆಮ | ಗಿದಿರಾಗುವರೆಲ್ಲೆಂದು |
ಅಧಟರವರು ಕೈದುಗೊಳ್ಳದೆ ನಿಂದಿರ | ಲದನು ಬೆದರಿ ಕಾಲ್ದೆಗೆವ || ೨೦೩ ||

ಆ ಕರುಸೇನೆಯ ನಾಯಕರುಗಳ ಮ | ತ್ತಾ ಕಲಿಗಳ ಮೊಗನೋಡಿ |
ಏಕಾಮಗವೀರರವರುಭೀಮ ನರರಾಗ | ಬೇಕೆಂದು ಪಿರಿದು ನಿಶ್ಚಯಿಸಿ || ೨೦೪ ||

ಪರಿತಂದಾಕೌರವಭೀಷ್ಮರಾಬಿಲ್ಲ | ಗುರುವಿದುರರ್ಕಳೊಳೊರೆಯೆ |
ನಿರುತಮೊಯಿದು ಪುಸಿಯೋಯೆಂದು| ಸುವಿವೇಕ ಚರರ ಕಳುಹಲವವರಿದು || ೩೦೫ ||

ತಿರುಗಿ ಬಂದವರು ಕೌಂತೇಯರೆಂಬುದನವ | ರೊರೆಯಲೊಡನೆ ಭೀಷ್ಮ ವಿದುರ |
ಗುರುಕೃಪರೆಯ್ತರೆ ಪಾಂಡವರವರ ಕಂ | ಡುರುಭಕ್ತಿಯಿಂ ನತರಾಗೆ || ೩೦೬ ||

ಮರಳಿಮರಳಿ ಹರಕೆಯನಿತ್ತುಮತ್ತಾ | ದರದಿ ಭೀಷ್ಮರು ಧರ್ಮಸುತಗೆ |
ಒರೆದರು ನೀವೆಂತು ಜೀವಿಸಿಪೋದಿರಿ | ಯರಗಿನ ಕರುಮಾಡದಿಂದ || ೩೦೭ ||

ಎಂದು ನುಡಿಯೆ ಜತುಗೃಹದಿ ದೈವಾಧೀನ | ದಿಂದ ನಾವು ಪೊರಮಟ್ಟು |
ಬಂದೆವೆನುತ ತಮಗಾದ ತೆರನನಾ | ತಂದೆಗೆ ಬಿನ್ನವಿಸಿದನು || ೩೦೮ ||

ಮಗನ ಸದೈವರ ಕೆಡಿಸಲಾರ್ಪರೆ ಪ | ನ್ನಗನರದನುಜಾಮರರು |
ಜಗತೀತಳದೊಲೆನುತ ನುಡಿಯಲ್ಕಾ | ಸುಗುಣಿ ಧರ್ಮಜನಾನುಡಿಯ || ೩೦೯ ||

ಅವಧಾರಿಸಿ ಕೈಮುಗಿದೆಂದುನಾಕೌ | ರವನಿಂ ನಮಗೆಯಪಾಯ |
ಸವನಿಸಿತಿಲ್ಲ ಭಾವಿಸಲು ಮತ್ತಾಬಾಧೆ | ನಮಗೆ ಕರ್ಮಾಯುತಮೆನಲು || ೨೧೦ ||

ತನುಜ ನಿನ್ನಯ ಸಮತೆಯನಂತುಟಿಂತುಟೆಂ | ದೆನಬಹುದೇಯದರಿಂದ |
ಮನದೆಗೊಂಡೆನ್ನ ನುಡಿಯನವಧಾರಿಪು | ದೆನಲು ಧರ್ಮಜನಿಂತು ನುಡಿದ || ೩೧೧ ||

ಗುರುವಚನವನುಲ್ಲಂಘಿಸುವೆನೆಯೆಂ | ದುರುಭಕ್ತಿಯಿಂ ಕೈಕೊಳಲು |
ಸುರಸಿಂಧುಜನೆಂದನು ನಿಮ್ಮರಾಜ್ಯದೊ | ಳಿರಿಯೆಂದೊಡೊಡಬಟ್ಟರವರು || ೩೧೨ ||

ಮತ್ತವರಲ್ಲಿಂದ ತಿರುಗಿಬಂದಾವಿಕ್ರ | ಮೋತ್ತಂಸರ ವೃತ್ತಕವನು |
ಬಿತ್ತರಮಾಗಿ ನುಡಿಯೆ ಕರುಭೂಪತಿ | ಗೊತ್ತರಮೊತ್ತಿದಂತಾಗೆ || ೩೧೩ ||

ಆ ವೇಳೆಯೊಳು ಕರ್ಣನಾಭೀಷ್ಮರಾಪಾಂಡು | ಭೂವರರೇಳ್ಗೆಯ ಮಾತ್ರ |
ಓವದೆ ನುಡಿಯಲಂತದ ಕೇಳಿ ಮನದೊಳು | ತೀವಿದ ಕಡುಮುನಿಸಿಂದ || ೩೧೪ ||

ಇಂತೆಂದನೆಲೆಯಜ್ಜಾಪಾಂಡುನಂದನ | ರ್ಗೆಂತಾನುವೀರಮೊದವಲು |
ಅಂತಕಸದೃಶಪರಾಕ್ರಮಿಕುರುಭೂ | ಕಾಂತಗೆ ಪಾಸಟಿಯಹರೆ || ೩೧೫ ||

ಏಕಾಂಗವೀರರೆನಿಪ ನಾಯಕರುಮ | ನೇಕರಿವನ ಸೇನೆಗುಂಟು |
ಲೋಕೈಕವೀರನಿವನು ಕುರುಭೂವರ | ಗಾಕೌಂತೇಯರು ಸರಿಯೆ || ೩೧೬ ||

ಎಂದು ಕಠೋರವಚನವ ನುಡಿದ ರವಿ | ನಂದನಗಾಬಾಂದೊರೆಯ |
ಕಂದನಿಂತೆಂದನು ಸೋದರರೊಳು ತನ್ನ | ಸೊಂದು ಸತ್ವವ ತೋರುವುದು || ೩೧೭ ||

ಅರಸುತನದ ನೀತಿಯಲ್ಲಮವನೀ | ಧರೆಹೊರದಂತದರಿಂದ |
ಅರೆನಾಡನಾಪಾಂಡವರ್ಗಿತ್ತು ಬಾಳ್ವುದು | ನಿರುತಮೆಂದಿವು ಮೊದಲಾದ || ೩೧೮ ||

ನಾನಾತೆರದೊಡಂಬಡಿಕೆಗಳಿಂದ ಮ | ಹೀನಾಥನನೊಡಂಬಡಿಸಿ |
ನಾನಂದದಿಂದೆಯ್ದಿಸಿದನವನನು ಮ | ತ್ತಾನಗನಗರೀವರಕೆ || ೩೧೯ ||

ಆ ಗುರುಮೊದಲಾದ ಮಿತ್ರವರ್ಗವನು ಸ | ರಾಗದಿಂದವೆ ಕೂಡಿಕೊಂಡು |
ಆ ಗಂಡುಗಲಿಗಳು ಬೆರಸಿ ದ್ರುಪದಪುರ | ಕಾಗಾಂಗೆಯನೆಯ್ದಿದನು || ೩೨೦ ||

ಬಳಿಕಧನಂಜನಗಾದ್ರೌಪದಿಯ ಕ | ಣ್ಗೊಳಿಪಂತೆ ಮದುವೆಯ ಮಾಡಿ |
ಬಳುವಳಿಯನು ದ್ರುಪದನು ಕೊಡಲಲ್ಲಿಂದ | ತಳುವದೆ ಪೊರಮಟ್ಟರಾಗ || ೩೨೧ ||

ಆ ಪಾಂಚಾಲಪತಿಯ ಬೀಳ್ಕೊಂಡು ಮ | ತ್ತಾಪಾಂಡವರು ಸಮೇತ |
ಆ ಪುರದಿಂದಮರೇಂದ್ರವೈಭವದಿ ಗಂ | ಗಾಪುತ್ರನು ನಡೆತಂದು || ೩೨೨ ||

ಸೊಗಯಿಸುವಿಂದ್ರಪ್ರಸ್ಥವೆಸರದೊಂದು | ನಗರಿಗೆ ಶುಭಲಗ್ನದೊಳು |
ಹೊಗಿಸಿ ದೂತರನಟ್ಟಿ ಕೌರವನನು ಮರು | ವಗಲಿಗಲ್ಲಿಗೆ ಕರೆಸುತವೆ || ೩೨೩ ||

ಅಂತಕಸುತಗಾರಾಜ್ಯಪಟ್ಟಿವ ಕಟ್ಟಿ | ಯಂತವರಾಪುರದಿಂದ |
ಸಂತಸದೊಳು ಪೊರಮಟ್ಟು ಹಸ್ತಿನಪುರ | ವಂ ತವಕದಿ ಪೊಕ್ಕರಾಗ || ೩೨೪ ||

ಆ ಧರ್ಮನಂದನನುಪಮ ಸಲಕ ಕ | ಲಾಧರನವಶಾಂತಮೂರ್ತಿ |
ಆ ಧರಣಿಯನೇಕಚ್ಛತ್ರದಿಂದಮ | ಗಾಧಸದ್ಗುಣಿ ರಕ್ಷಿಸುತ || ೩೨೫ ||

ಮೊದಲು ಮದುವೆಯಾದ ಧಾನ್ಯರಾಜನಸುತೆ | ಸದಮಲಶಶಿನಿಭವದನೆ |
ಚದುರೆ ಕುಸುಮಮಾಲೆಯ ಕರೆಸಿದನುರು | ಮುದಿದಿಂದವಳ ತಂದೆಸಹಿತ || ೩೨೬ ||

ಬಳಿಕ ವಿಂದ್ರಕನಾಚಂಡವಾಹನಮಂ | ಡಳಿಕರು ತಮ್ಮಾತ್ಮಜೆಯರು |
ಲಲಿತಾಲತಾಂಗಿಯರನು ತಂದು ಶುಭಲಗ್ನ | ದೊಳಗಾಪದಿಮೂರ್ವರನು || ೩೨೭ ||

ಉತ್ತಮಲಗ್ನದೊಳತಿವಿಭವದಿ ಭೂ | ಪೋತ್ತಂಸಧರ್ಮನಂದನಗೆ |
ಇತ್ತು ಬಳಿಕಮಿಗೆ ಸಂತಸದಿಂ ತಮ್ಮ | ಪತ್ತನಕೈದಿದರಿತ್ತ || ೩೨೮ ||

ಕುಸುಮಮಾಲೆಗೆಯಗ್ರಮಹಿಷಿಯ ಪಟ್ಟವ | ನೊಸೆದಿತ್ತು ಸುಖಮಿರುತಿರಲು |
ಅಸದೃಶವೀರಮಾರುತಿಗೆ ಸಂತಸದಿಂ ಹಿಡಿಂಬೆಯ | ನಸಿಯಳನಸಿಂಹಘೋಷ || ೩೨೯ ||

ಬಿತ್ತರಮಪ್ಪ ವೈಭವದಿಂದವೆ ತಂ | ದಿತ್ತತಿ ಸಮ್ಮುದದಿಂದ |
ಉತ್ತಮವಸ್ತುವನಿತ್ತಣುಗೆಗೆ ತನ್ನ | ಪತ್ತನಕಿರದೈದಿದನು || ೩೩೦ ||

ಬಳಿಕ ನಕುಲ ಸಹದೇವರ್ಗೆ ಕೆಲ ಭೂಪ | ರೆಳಸಿ ತಂತಮ್ಮಣುಗೆಯರ |
ಸುಲಲಿತಾಂಗಿಯರನು ತಂದು ಸಂತಸವನು | ತಳೆದು ಮದುವೆಯ ಮಾಡಿದರು || ೩೩೧ ||

ನೀಃಪ್ರಪಂಚಕಧರ್ಮನಂದನನಾತಿಲ | ಕಪ್ರಸ್ಥಕಣೆಯಪ್ರಸ್ಥ |
ಅಪ್ರತಿಯೆನಿಪ ನಾಗಪ್ರಸ್ಥಮಾಕನ | ಕಪ್ರಸ್ಥಮೆಂಬನಾಲ್ವಳಲ || ೩೩೨ ||

ಆ ವಾಯುಪುತ್ರ ಕಿರೀಟ ನಕುಲ ಸಹ | ದೇವರ್ಗೆಕೊಡಲಿಂತವರು |
ಅವೂರುಗಳನೈದಿಯತಿಮುದದಿಂದ ಮ | ಹಿವಲಯಮನಾಳುತಿರಲು || ೩೩೩ ||

ಧರೆಯೊಳಗುಳ್ಳರಸುಗಳು ತಮ್ಮೊಳಗುಳ್ಳ | ಸುರಿಚಿರಮಪ್ಪ ವಸ್ತುವನು |
ವರಸುತೆಯರನು ಕಾಣ್ಕೆಯನಿತ್ತು ಕೌಂತೇ | ಯರ ಕಂಡು ಸುಖಮಿರುತಿಹರು || ೩೩೪ ||

ವಿತರಣವಿಕ್ರಮುಯುತ ಪಾಂಡವಭೂ | ಪತಿಗಳ ಮಿನಗುವ ಕೀರ್ತಿ |
ಅತಿತೇಜದಿಂದೊಡಗೂಡಿ ಪರಿದುವಾ | ಕ್ಷಿತಿ ತೆರಪಿಲ್ಲದಂದದೊಳು || ೩೩೫ ||

ದೀರತೆಯೊಳು ಸತ್ಯದೊಳು | ದಾರತೆಯೊಳು ವಿಕ್ರಮದೊಳು |
ಚಾರಿತ್ರದೊಳಗಿವನೆಯೆಂದುಪೊಗಳ್ದುರು | ಧಾರಿಣಿಯಾ ಧರ್ಮಸುತನ || ೩೩೬ ||

ಏಕವನಚಸುಪ್ರತಿಷ್ಠಾಚಾರ್ಯನ | ನೇಕಕಲಾಕೋವಿದು |
ಲೋಕಪೂಜಿಸುತನಂತಕಸುತೆನೆಸೆದನಿ | ಳಾಕಾಂತಕುಲಶೇಖರನು || ೩೩೭ ||

ಇದು ಜಿಪದರಸಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜೀನೇಶಸಂಗತಿಯೊಳ | ಗಿದು ತ್ರಯೋವಿಂಶಾಶ್ವಾಸ || ೩೩೮ ||

ಇಪ್ಪತ್ತಮೂರನೆಯ ಸಂಧಿ ಸಂಪೂರ್ಣಂ