ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾವೋದವೆತ್ತೆರಗುವೆನು || ೧ ||

ಅಂತಕನಂದನನೋವ್ ಸಚಿವನನು | ಸಂತಸದಿಂದವೆ ಕರೆದು |
ಇಂತೀವಾರ್ತೆಯನಾದ್ವಾರಾವತಿ | ಗಂತವನು ಮಾಡದೆಯ್ದಿ || ೨ ||

ಹರಿವಂಶವರೊಳು ಪೇಳೆಂದು ಕಳುಹಲು | ಭರದಿಂದವನೆಯ್ತಂದು |
ಹರಿ ಬಲದೇವಾದಿಗಳಿಗೆ ಪಾಂಡವ | ರಿರವನೆಲ್ಲವ ಪೇಳಲೊಡನೆ || ೩ ||

ಮಣಿಗಣಭೂಷಣಗಲನೀಯಲು ಮನ | ದಣಿವ ಹಡೆದುಬರಲವನು |
ಕಣಿಯಪ್ರಸ್ಥಪುರದೊಳರ್ಜುನನೊಂದು | ಕ್ಷಣವಗಲದೆ ದ್ರೌಪದಿಯೊಳು || ೪ ||

ಅತಿಸುಖದಿಂದೊಡಗೂಡಿರ್ದು ದ್ವಾರಾ | ವತಿಯೊಳು ವಸುದೇವನೃಪಗೆ |
ಅತಿರೂಪವತಿ ನೀಲಾಂಜನನೆಗೊಗೆದ ಸ | ನ್ನುತ ಗುಣವತಿ ಸುಭದ್ರೆಯನು || ೫ ||

ಕುರುಪತಿ ಬೇಡಿದೊಡವರು ಕೊಡದವಾರ್ತೆ | ಹರೆಯಲು ಕೇಳೀಯಾಕೆಯನು |
ಹರುಷದಿಂ ತನಗೀವುದೆಂದಲ್ಲಿಗೆ ಸಚಿ | ವರನು ಕಳುಹೆ ಕಿರೀಟ || ೬ ||

ಅವರೆಯ್ದಿಯಾವಾರತೆಯುನುಸುರೆ ಕೇ | ಶವ ಕೇಳಿ ಕರಮೊಳ್ಳಿತೆಂದು |
ಸವಿನಯದಿಂ ಕೊಡವೆವು ಬರಹೇಳನೆ | ದಿವಿಜೇಂದ್ರಸುತನಲ್ಲಿಗೆಯ್ದೆ || ೭ ||

ವಸುದೇವ ವಾಸುದೇವರು ಶುಭಲಗ್ನದೊ | ಳಸಮಾನರೂಪವತಿಯನು |
ಒಸೆದು ಮದುವೆಯ ಮಾಡಲು ಕೆಲದಿನಮಿರ್ದ | ರಸಿಕರದೇವನರ್ಜುನನು || ೮ ||

ಗುರುವೆ ಸುಭದ್ರೆಸಹಿತ ಕಣೆಯಪ್ರಸ್ಥ | ಪುರಕೆಯ್ದಿರಲಂತವರ್ಗೆ |
ಸ್ಮರನಿಭನಬಿಮನ್ಯುವೆಸರಗರಿಮನೋರ್ವ | ವರಸುತನುದ್ಬವಿಸಿದನು || ೯ ||

ಆ ಸ್ತ್ರೀಪುರುಷರ್ಗೆ ಮುದವೆತ್ತು ಬೆಳೆದಾ | ಶಾಸ್ತ್ರಸಂಗೀತ ಸುಚಿತ್ರ |
ಶಸ್ತ್ರವಿದ್ಯೆಗಳನೆಲ್ಲವನು ಕಲಿತು ಕುಸು | ಮಾಸ್ತ್ರನಂದದೊಳೊಪ್ಪಿದನು || ೧೦ ||

ಉತ್ತಮನಭಿಮನ್ಯುವನು ಕರೆಸಿ ಪುರು | ಷೋತ್ತಮ ತನ್ನ ಸುತೆಯನು |
ಮತ್ತಯೌವನೆ ಸೌಂದತಿಯೆಂಬಳನೊಸೆ | ದಿತ್ತು ಮನ್ನಿಸಿಯವರೊಡನೆ || ೧೧ ||

ಹರಿಸದಿನಾಕಣೆಯಪ್ರಸ್ಥಪುರಕಾ | ಹರಿ ಬಂದಾನರನೊಡನೆ |
ಪರಮಸ್ನೇಹದಿ ಕೆಲದಿನಮಿರಲಾ | ಕುರುಪತಿಯಂತದನರಿದು || ೧೨ ||

ಮಂತ್ರಶಾಲೆಗೆ ಬಂದು ತನಗಾಪ್ತರೆನಿಸುವ | ಮಂತ್ರಿಗಳನು ಕೂಡಿಕೊಂಡು |
ಮಂತ್ರಾಳೋಚನೆಯನು ಮಾಡಿದನು ಕು | ತಂತ್ರಿ ಮುಂದಣಕಾರ್ಯವನು || ೧೩ ||

ಪಿರದಾದುದದು ದಾಯಿಗಪಾಂಡವರೈ | ಸಿರಿಯದರಿಂ ಮುಂದೆ ನಮಗೆ |
ಧರಣಿಗರಸುತನಮಿಲ್ಲೆಂದ ನೃಪನೊಳಿಂ | ತೊರೆದನು ಶಕುನಿ ಕೈಮುಗಿದು || ೧೪ ||

ಮಂತಣಮೇಕೆ ಮಹಿಪ ಜೂಜಿನೊಳಗೆ | ಅಂತಕಸುತನತಿ ಮೋಹಿ |
ಅಂತದರಿಂ ದಾಳವಾಸಗಿಗಳನುಪಾ | ಯಾಂತರದಿಂದವೆ ಸಮೆದು || ೧೫ ||

ಬರಸಿಯಾತನನೊಂದೊಸಗೆಯ ನೆವದಿನಾ | ದರದನಿರಿಸಿಕೊಂಡು ಬಳಿಕ |
ಹರಿಸದಿ ನೆತ್ತಮನಾಡಲೆನುತ ಮೊಗ | ದಿರುಗಿಸಿಕೊಂಡು ಕುಳ್ಳಿರಿಸಿ || ೧೬ ||

ಆಡಿ ಜೂಜನು ನಾಡು ಬೀಡನೆಲ್ಲವ ಗೆಲ್ದು | ಕಾಡೊಳು ಹೋಗಿಸುವೆವಿದಕೆ |
ಬೇಡ ಸಂದೆಗಮೆಂದು ಶಕುನಿ ನೃಪಗೆ ಮಾತ | ನಾಡೆಯಂತದನವಧರಿಸಿ || ೧೭ ||

ಅತಿಗುಪ್ತದಿಂದಾಳವಾಸಗಿಗಳನಾ | ಕೃತಕಿಮಾಡಿಸಿಯೊಂದು ದಿವಸ |
ಅತಿಶಯಮಪ್ಪೊಸಗೆಯ ನೆವದಿಂ ಸಿಂಧು | ಸುತನ ವಂಚಿಸಿ ಧರ್ಮಸುತನ || ೧೮ ||

ಪ್ರೇಮದಿ ಕರೆಯಲಟ್ಟಲನುಜರುಗೂಡಿಯು | ದ್ದಾಮವೈಭವದಿನೈತರಲು |
ಆ ಮನುನಿಭದಿರ್ಗೊಂಡಾಕುರು | ಭೂಮೀಶನೈಯ್ದಿಸಿ ಪುರವ || ೧೯ ||

ವಿನಯೋಪಚಾರದಿಂದಿರಿಸಿಕೊಂಡೊಸಗೆಯ | ನನುವಾಗಿ ಮಾಡಿಸಿ ಬಳಿಕ |
ಅನಿಮಿಷಪತಿಯ ವಿಭವದಿಂದರ್ದೋಂದು | ದಿನದೊಳಗೊಗಮಿರಲು || ೨೦ ||

ಅರಸುಗಳವರೀರ್ವರಿದಿರೊಳು ನೆತ್ತಮ | ನಿರದೀರ್ವರ ಕೈಯಿಂದ |
ಪಿರಿದುರಚನೆಯೊಳಾಡಿಸುತರಲದನಾ | ತುರದಿ ಧರ್ಮಜ ನೋಡುತಿರಲು || ೨೧ ||

ಕುರುಪತಿಯೋರ್ವಗೆ ಧರ್ಮಜನೋರ್ವಗೆ | ಹರುಷದಿ ಮೇಲುದಾಯವನು |
ಒರೆವುತಲಿರೆ ಕೆಲದೊಳಿಗಿರ್ದ ಶಕುನಿಯಂ | ತಿರದುಸುರ್ದಮ ಭೂಪರಿರಾ || ೨೨ ||

ಹೊತ್ತುಹೋಗುವುದಕ್ಕೆಸೆಲವೆರಡಾಟವ | ನೆತ್ತಮಮಾಡಿ ನೀವೆಂದು |
ಒತ್ತೊಂಬದಿ ಪೇಳೆ ಕುರುಪತಿಯಾಸ | ತ್ಕೋತ್ತಂಸನ ಮೊಗನೋಡೆ || ೨೩ ||

ಅಂತಾದೊಡಾಡುವ ಬನ್ನಿ ನೀವೆನಲು ಕೃ | ತಾಂತಸುತನು ಮನದೊಳಗೆ |
ಇಂತೆಣಿಸಿದನಿದಕಾಗದವನು ರಣ | ಕೆಂತೊದುಗುವನಾ ನೃಪನು || ೨೪ ||

ಎಂದು ನೆರೆಯ ದೊರೆಗಳು ಹಳಿವುದು ತಪ್ಪ | ದೆಂದೀಗ ಜೂಜಿಂದ ಪಾಪ |
ಬಂದೊಡೆ ಬರಲೆನುತವೆಯಾಡಲುಮನ | ದಂದನು ಧರ್ಮನಂದನನು || ೨೫ ||

ಇಳೆಯಾಧಿಪರ ಮನವನರಿದಾನೆತ್ತ | ವಲಗೆಯ ಶಕುನಿ ತಂದಿರಿಸಿ |
ನಿಲಿಸಿ ಸಾರಿಯನು ಹಾಸಗಿಯನೀಯಲು ಕೈಗೆ | ಚಲದಂಕರಂದಾಡಿದರು || ೨೬ ||

ಎರಡು ಮೂರಾಟವನಾಡಿದ ಬಳಿಕಿಂತು | ಟೊರೆದನು ಶಕುನಿ ಭೂವರರ್ಗೆ |
ವರಮಿತ್ತಮೀಯೋಂದಾಟಕ್ಕೆ ಪತ್ತು ಸಾ | ಸಿರಮೆನಲೊಡಬಟ್ಟರಾಗ || ೨೭ ||

ತನ್ನ ವಂಶವನೊರೆಸುವವೊಲು ಕೃತಸಂ | ಪನ್ನನು ನಾಳವಾಸಗಿಯ |
ತನ್ನವೆರಡು ಕರದಿಂದಲೊರಸಿ ಕಡು | ಬಿನ್ನಾಣದಿಂದಾಡಿಸಿದನು || ೨೮ ||

ಕೆಲವು ಪಲಗೆಗಳ ಡಾಳಕತನದಿಂ | ಗೆಲುವನಾತಗೆ ಕೊಟ್ಟು ಬಳಿಕ |
ಕೆಲವು ಪಲಗೆಯ ಗೆಲಿದು ಧರ್ಮತನುಜಗೆ | ಛಲವನೆದೆಯೊಳು ಪುಟ್ಟಿಸಿದ || ೨೯ ||

ಹಿರಿದುಹಲಗೆಮಾಡಿ ಧರ್ಮಸುತನ ಕರಿ | ತುರಗಸಾಮಜಪದಾತಿಯನು |
ತರತರದಿಂ ಗೆಲೆ ಕಂಡು ಕನಲ್ದಾ | ಮರುತನಂದನನಿಂತುನುಡಿದ || ೩೦ ||

ಸಂಚಿನ ಹಾಂಸಗಿಯನು ಮಾಡಿಯಣ್ಣನ | ವಂಚಿಸಿ ನೆತ್ತಮನಾಡಿ |
ಮುಂಚೆ ಗೆಲವಕೊಟ್ಟು ಬಳಿಕಿಂತುಟಾಡುವ | ವಂಚನೆಯದು ಲೇಸುಲೇಸು || ೩೧ ||

ಹಲಿಗೆಯ ಮಾಡಿ ಧುರಾವನಿಯನು ನಿನ್ನ | ಕುಲವೆಂಬ ಬಹುಚಾರಿಗಳನು |
ನಿಲಿಸಿಯೆನ್ನೀ ಗದೆಯೆಂಬ ಹಾಸಂಗಿಯಿಂ | ನೆಲಕುರುಳಿಸದೆ ಬಿಡುವನೇ || ೩೨ ||

ಎನೆ ದುರ್ಯೋಧನನಾಕೈಪಸರವನು | ಮನಗೊಳದಿರೆ ಕಾರ್ಯವಶದಿ |
ಅನಿಲಸುತನ ಕಣ್ಣುಸನ್ನೆಯಿಂದಾ ಧರ್ಮ | ತನುಜನಡಕಕಿಕ್ಕಿದನು || ೩೩ ||

ಅದನರಿದಾಭೀಷ್ಮನಾವಿದುರನು ಕಡು | ಬೆದರಿ ಹೀನರ ಮಾಳ್ಕೆಯೊಳು |
ಸದಮಲರೀಜೂದನಾಡುವರೇಯೆನ | ಲದಕೆ ಧರ್ಮಜನಿಂತು ನುಡಿದ || ೩೪ ||

ಎನ್ನೀ ಸೋಲವನಿನ್ನೊಂದು ಪರಿಯೊಳು | ಚೆನ್ನಾಗಿಯೆ ತಿರುಗಿಸುವೆ |
ಇನ್ನು ನೋವಡ್ಡವರಲುಬೇಡವೆಂದು | ಗುಣೋನ್ನತನವರ್ಗೆ ಕೈ ಮುಗಿದು || ೩೫ ||

ಮರುಮಾತಗುಡದಂತೆ ಮಾತನಾಡಲ್ಕಾ | ತೊರೆಯಗುಣಗನು ಪರಿತಂದು |
ಅರಗುಲಿಕೌರವನಾಡುವ ಜೂದಿನ | ತೆರನನು | ದೃತರಾಷ್ಟ್ರಗುಸುರೆ || ೩೬ ||

ಬಳಿಕಿಂತೆಂದನು ಬವರದೊಳನಿಲಜ ಗದೆ | ಗೊಳಲು ಕಿರೀಟ ಗಾಂಡಿವವ |
ತಳೆಯಲು ನಿತ್ತರಿಸಲ್ಕಾರ್ಪರೆ ಬಿದಿ | ಜಲಜೋದರ ಮಹೇಶ್ವರರು || ೩೭ ||

ಎಂದು ಮಂದಾಕಿನಿಯಣುಗನು ವಿದುರನ | ಮುಂದೆ ಕೌರವಗೆ ಕೇಡಪ್ಪ |
ಅಂದಮನುಸುರಿ ನೀನೀಗ ನಡೆದು ನಿನ್ನ | ನಂದನಗತಿ ಬುದ್ಧವೇಳಿ || ೩೮ ||

ಜೂದ ನಿಲಿಸಿ ಮುಂಚೇ ಗೆಲಿದವನೆಲ್ಲವ | ನಾದೈವಜ್ಞಧರ್ಮಜಗೆ |
ಸಾದರಿಂದ ಕೊಡಿಸಿಬಪ್ಪುದೆಂದಾ | ಮೇದಿನಿಯೆರೆಯನ ಬಳಿಗೆ || ೩೯ ||

ದೃತರಾಷ್ಟ್ರನನು ಕಳುಹಲವನೆಯ್ತಂ | ದತಿ ಬುದ್ಧಿಯ ಪೇಳಿ ತನ್ನ |
ಸುತನ ತಿಳುಹಲಾರದೆ ಮಗುಳಲು ಧರ್ಮ | ಸುತನಿತ್ತಲತಿ ಚಲದಿಂದ || ೪೦ ||

ಮತ್ತೆ ಭಂಡಾರ ಸುವಸ್ತು ವಾಹನಗಳ | ಮೊತ್ತವನೆಲ್ಲವ ಸೋಲ್ತು |
ಬಿತ್ತಮಪ್ಪ ದೇಶಕೆವೊಡ್ಡಮೆಂದಾ | ನೆತ್ತರ ಸಾರಿಯ ಹೂಡೆ || ೪೧ ||

ಕುರುಪತಿ ಬೇಡೆಂದು ಹಾಸಂಗಿವಿಡಿದಾ | ಸರಸಿಂದುಜನ ಕೈ ಬಿಡಿಸಿ |
ಪಿರಿದು ಕೋಪದಿ ಭೀಮಾರ್ಜುನರಾಕುರು | ಧರಣಿಪಗಿಂತು ನುಡಿದರು || ೪೨ ||

ಜನಪತಿ ಕೇಳೀ ಕಾರ್ಯವನೆಣಿಪುದು | ನಿನಗೆ ಸಹಜಮದರಿಂದ |
ಮನುಭವನೀವೊಡ್ಡದ ನಿಲಿಸುವುದಿಲ್ಲ | ವನಿತರಿಂದವಧಿಯನುಸುರು || ೪೩ ||

ಎನಲವಧಿಯ ನೀವೇ ಪೇಳಿಮೆನೆ ಧರ್ಮ | ತನಯನು ನಾವಾಡಲಿಲ್ಲ |
ಇನಿತು ವರುಷಮೆಂಬುದು ನೀವೇ ಪೇಳಿ | ಮೆನೆ ಕುರುಪತಿಯನುಮತದಿ || ೪೪ ||

ಈರಾರುವರ್ಷ ಮನದೊಳಿರ್ದ ದೇಶವ | ಸಾರದೆ ಬಳಿಕೊಂದು ವರ್ಷ |
ಅರಿರಿಯದವೊಲಿರಲು ಬೇಕೆಂದಾ | ಧೀರರ್ಗೆ ಶಕುನಿ ಮಾತಾಡೆ || ೪೫ ||

ಆ ನುಡಿಗಾ ಧರ್ಮನಂದನನೊಡಬ | ಟ್ಟಾನಾಡುಬೀಡೆಲ್ಲವನು |
ಅನದೆಯಾಡಿ ಸೋಲವನುರೆ ಪಡೆದು ದು | ಮ್ಮಾನದಿ ಮನೆಗೆದ್ದುಪೋಗೆ || ೪೬ ||

ಹರುಷದಿನಾಗ ಸುಯೋಧನ ತಾ ಗೆ | ಲ್ದುರುತರಸಪ್ತಾಂಗವನು |
ಎರೆದು ಚರರನಟ್ಟಲು ಧರ್ಮನಂದನ | ನುರುಭಂಗದಿಂದೊಪ್ಪಿಸಿದನು || ೪೭ ||

ಆ ವೇಳೆಯೊಳು ಭೀಮಾರ್ಜುನರತಿ ಕೋ | ಪಾವೇಶಮಾನಸರಾಗಿ |
ಓವದೆ ತಂತಮ್ಮ ಕೈದಿಗೆ ಕೈನೀಡ | ಲಾ ವಿಭುವವರನು ನೋಡೆ || ೪೮ ||

ಗಾರುಡಿಗನ ಮೊಗವನು ಕಂಡ ವಿಷಮಕಾ | ಳೋರಗ ನಡುಗುವಂದದೊಳು |
ಧೀರ ಲಲಿತರಣ್ಣನಾಜ್ಞೆಗಡಗಿದರು | ವೀರಮಾರುತಿ ಪಲುಗುಣರು || ೪೯ ||

ಬಳಿಕ ತಮ್ಮಾಸಪ್ತಾಂಗರಜ್ಯಮನಿನಿ | ಸುಳಿಯದೊಪ್ಪಿಸಿ ಕೌರವಗೆ |
ತುಳಿಲಾಳ್ಗಳವರಲ್ಲಿರದತಿಮುದದಿಂ | ಪೊಳಲನು ಪೊರಮಟ್ಟರಾಗ || ೫೦ ||

ಪುರವನವರು ಪೊರಮಡುವಾಗಲಾ ಭೀಷ್ಮ | ಗುರುಮೊದಲಾದಿಷ್ಟರುಗಳು |
ಕುರುಪತಿಯೆಡೆಗೆಯ್ದಿ ಬೇಡ ನೀ ಮುಂ ಗೆಲ್ದ | ಧರೆಯನವರಿಗೊಪ್ಪಿಸುವುದು || ೫೧ ||

ಎನಲಾನುಡಿಗೆ ಕಿವುಡುಗೇಳ್ದರಂತಿರ | ಲಲತರೊಳವರತಿನೊಂದು |
ಮನುಜನಿಭಪಾಂಡವರೆಡೆಗೆಯ್ದಲವರತಿ | ವಿನಯದಿನವರಡಿಗೆರಗಿ || ೫೨ ||

ಕಡೆಗಣ್ಗಳಿಂ ದುಃಖಾಶ್ರುತೊರೆದುಬೀಳೆ | ನುಡಿದರೆಲೇ ಮಕ್ಕಳಿರಾ |
ಅಡಿವಯೊಳಿರ್ಪವರ್ಗಾವೆಂತು ಪರಕೆಯ | ಕೊಡುವೆವೆಂದುಮ್ಮಳಿಸಿದರು || ೫೩ ||

ನಿಮ್ಮಾಶೀರ್ವಾದವೆ ಪಾಲಿಸುವುದು | ನಮ್ಮನಾದರಿಪುರದಿನ್ನೇಕ |
ಉಮ್ಮಳ ಬೇಡ ನಾವೆಮ್ಮ ನನ್ನಿಯನಿನ್ನು | ಸಮ್ಮದದಿಂ ರಕ್ಷಿಸುವೆವು || ೫೪ ||

ಎನಲವರವರ ಸಾಹಸ ಸತ್ಯಸಂಪದ | ವಿನಯ ಧೀರೋದಾತ್ತತೆಗೆ |
ಮನದೊಳು ಮೆಚ್ಚಿ ಮರುಕದಿಂದ ಬೀಳ್ಕೊಂಡು | ಘನದುಃಖದಿ ತಿರುಗಿದರು || ೫೫ ||

ಇತ್ತಲಿಂದ್ರಪ್ರಸ್ಥರವರಕಾಸದ್ಗು | ಣೋತ್ತಂಸರು ಪೋಗಿ ಬಳಿಕ |
ಮೊತ್ತದ ನೃಪರು ಬೆಂಬಳಿಯೊಳೆಯ್ದಲುಕಂಡು | ಮತ್ತಲ್ಲಿನಿಸು ಹೊತ್ತಿರದೆ || ೫೬ ||

ಪದುಳದಿನಲ್ಲಿಂ ಪೊರಮಟ್ಟು ಗಂಗಾ | ನದಿಯನಿರದೆ ದಾಂಟಿ ಬಂದು |
ಮುದಿಂದೊಂದು ಮಹಾವಟವಿಟಪಿಯ | ಮೊದಲೊಳು ಬೀಡನು ಬಿಡಿಸಿ || ೫೭ ||

ಬಳಿವಳಿಬಂದ ಬಂಧುಗಳ ಸಾಮಂತಮಂ | ಡಳಿಕ ದುರ್ಗಾಧಿಪನಾಥರನು |
ಅಲಘುವಿನುವಚನಗಳಿಂ ಬೀಳ್ಕೊಟ್ಟು | ತಳವಿದರಲ್ಲಿಯಾ ಪಗಲು || ೫೮ ||

ಆಮರುದಿನ ಕೌಂತೇಯರು ತಂತಮ್ಮ | ಪ್ರೇಮದ ಪೆಂಡವಾಸವನು |
ಆ ಮಾತೃಪಿತೃಗಳಬಳಿಗಟ್ಟಿ ಪಾಂಚಾಲ | ಭೂಮೀಶನ ಸುಕುಮಾರಿ || ೫೯ ||

ಹರುಷದಿನವರ ಬೆಂಬಳಿಯೊಳು ಬರಲಾ | ವರಮಾತೆ ಕೊಂತಿ ಸಮೆತ |
ಭರದಿನಂತಕದೆಸೆಗಾಗಿ ನಡೆದುಬಂದು | ಪಿರಿಯದೊಂದು ವನಕೆಯ್ದಿ || ೬೦ ||

ವಿದಿತ ಶತಶೃಂಗವೆಂಬೊಂದು ಶೈಲದ | ಮೊದಲೊಳು ಮಿಗೆ ರಂಜಿಸುವ |
ಬದರೀವನವನು ಸಾರ್ದಲ್ಲಿಯತಿಸಂ | ಮದದಿಂದಿರುತಿರ್ದರಾಗ || ೬೧ ||

ಕೌರವನೊಳು ಕೌಂತೇಯರು ಜೂದಾಡಿ | ಧಾರಿಣಿಯೆಲ್ಲವ ಸೋಲ್ತು |
ಅರಣ್ಯವ ಹೊಕ್ಕಿರ್ಪುದನಾಬಲ | ನಾರಾಯಣರು ಕೇಳುತವೆ || ೬೨ ||

ಧುರಧೀರನತಿಚತುರ ಕಲಾಪರಿಪೂರ್ಣ | ನುರುಶಕ್ತಿಯುತ ಕೃಷ್ಣನೆಂಬ |
ಅರಸುಮಗನ ಕರೆದಾ ಪಾಂಡವರಬಳಿ | ಗಿರಿದೆಯ್ದಿಯಾವವನದೊಳಗೆ || ೬೩ ||

ಪರಬಾಧೆಯವರಿಗಿಲ್ಲದವೊಲು ನೀನನ | ವರತವಿರೆಂದು ಬೀಳ್ಕೊಡಲು |
ಭರದಿಂದಾವನಕೆಯ್ದಿಯಾ ಕೃಷ್ಣನು | ವರುಗುಣಿಧರ್ಮಗೆರಗಿ || ೬೪ ||

ತಾನೆಯ್ದಿದ ಕಾರ್ಯವ ಬಿನ್ನವಿಸಿಯಾ | ಕಾನನದೊಳಗವನಿಚ್ಚಮಿರಲು |
ಮಾನನಿಧಿಗಳಲ್ಲಿ ಕೆಲದಿನಮಿರಲೊಂ |ದಾನೊಂದುವಿನದುದಯದೊಳು || ೬೫ ||

ಧೀರನರ್ಜುನನು ವಿನೋದದಿ ವಿಪಿನವಿ | ಹಾರಾರ್ಥದಿಂದವೆ ಕೆಲವು |
ದೂರಬರುತ್ತಿಂದ್ರಕೀಲವೆಂಬದ್ರಿಯ | ನಾರೈದು ನಿಂದು ನೋಡಿದವನು || ೬೬ ||

ಸುರಭಿಯಂದದೊಳು ಪಯೋಧರಕಾವಾಸ | ಸುರತರಂಗಿಣಿಯಂದದೊಳು |
ಸುರುಚಿತರತಟಸಂಯುತಮಾಗಿರಿ | ವರಮತಿ ಕಣ್ಗೆ ರಂಜಿಸಿತು || ೬೭ ||

ವೃಶಭೇಶನಂತುರತರ ಶೃಂಗಾನ್ವಿತ | ವಿಷಮವಿಲೋಚನನಂತೆ |
ವಿಷಭೃದ್ಬಾಸಿವಿಷ್ಣುವಿನಂತೆ ನಾಗ | ದ್ವಿಷಭಾಸುರಮಾ ಶಿಖರ || ೬೮ ||

ಭೂಭೃದ್ಗುಣದಿ ಭುಜಂಗವಾಸದಿ | ಶೋಭಿತಪವನಚರತತಿಯಿಂ |
ಭೂಭುಜರನು ವಿದುವನು ವಾರಾಶಿಯ | ನಾ ಭೂಧರ ಗೆಲ್ದುದಾಗ || ೬೯ ||

ಪವಣಿಲ್ಲದೆಯುಗ್ರಖಗಮಿಸಂತತಿ | ತವೆಕೊಂದ ಬೆಳ್ಮಿಗದಿಂದ |
ಅವನೀದರಮತಿಭೀಕರಮಾದುದು | ಜವನಿರ್ಪ ದುರ್ಗದಂದದೊಳು || ೭೦ ||

ಅಧಟನವನು ಬಿದದಿನಾಶೈಲದ | ತುದಿಯನೋಡುವೆನೆಂದಾ ಬರ್ಪ |
ಪದದೊಳು ಪೆಡಗಯಗಡ್ಡಿ ಜೋಲುತ್ತೊಂದು | ಬಿದಿರ ಕೊನೆಯೊಳೋರ್ವನಿರಲು || ೭೧ ||

ಗಗನೇಚರನಿವನಿವನನೀಯೆಡೆಯೊಳು | ಪಗೆವರು ಕಟ್ಟಿದರೆಂದು |
ಬಗೆದು ಗಾಂಡೀವಕ್ಕೆ ಶರವಿಟ್ಟು ಕಿವಿವರ | ತೆಗೆದು ಕಾರುಣ್ಯದಿಂದೆಸಲು || ೭೨ ||

ಖಂಡಿಸೆಯಾಬಲ್ವಿದಿರ ಹಿಂಡಲು ಭೂ | ಮಂಡಲಕುರುಳ್ವವೇಳೆಯೊಳು |
ಚಂಡವಿಕ್ರಮ ವೇತಂಡಶುಂಡಾಲದೋ | ರ್ದಂಡದಿ ಪಿಡಿದೆತ್ತಿದನು || ೭೩ ||

ಮತ್ತಾತನ ಪೆಡಗಟ್ಟನು ಬಿಡಲಾ | ವುತ್ತಮಸತ್ವನ ಪದಕೆ |
ಉತ್ತಮಾಂಗದ ನೆಲೆಗೊಳಿಸಿಯೆನ್ನಸುವನೀ | ನಿತ್ತೆಯಲಾ ಗುಣಮಣಿಯೆ || ೭೪ ||

ಎಂದ ಖಚರಗಿಂತೆದನು ನಿನಗೀ | ಯಂದವನೆಸಗಿದರಾರು |
ಎಂದ ಕಿರೀಟಗೆ ನುಡಿದನು ತನಗಾದ | ದಂದುಗವನು ಕೈಮುಗಿದು || ೭೫ ||

ಬಲಯುತ ಕೇಳೀ ವಿಜಯಾದ್ರಿಯಂಬರ | ತಿಲಕಮೆಂದೆಂಬ ಪಟ್ಟಣದ |
ಇಳೆಯಾಧಿಪನಿಂದ್ರರಥನಾನೀಯ | ಗ್ಗಳಮಪ್ಪಧರಣೀಧರದೊಳು || ೭೬ ||

ಅಗಣಿತಮಪ್ಪ ವಿದ್ಯೆಯ ಸಾಧಿಸಲ್ಕೀ | ಪಗಲೊಳುಬರೆ ಬೆಂಬಳಿಯೊಳು |
ಪಗೆವನೋರ್ವನು ಮೇಘರಥನೆಂಬ ಪೆಸರಿನ | ಗಗನಚರನು ಬಂದೆನ್ನ || ೭೭ ||

ಮೋಸದಿ ಕಟ್ಟಿಪೋದನು ನನ್ನೀಸಾವು | ಸಾಸಿಗ ನಿನ್ನ ಕರುಣದಿ |
ಓಸರಮಾದುದೆನುತ ಬಳಿಕಿಂತೆಂದ | ನಾ ಸುಜನೋತ್ತಂಸನೊಳು || ೭೮ ||

ನಾನಿಲ್ಲಿ ಸಾಧಿಸಿಬಂದ ವಿದ್ಯಂಗಳ | ನೀನೆ ಸಾಧಿಸೆಂದೊಸೆದು |
ಆ ನರಗಾ ವಿದ್ಯಾಮಂತ್ರಗಳ | ತಾನಿತ್ತಾಯಿಂದ್ರರಥನು || ೭೯ ||

ಉರುತರಮಪ್ಪೀ ಗಿರಿಶಿಖರದೊಳಿರ್ಪ |ಪುರಜಿನಭವನದ ಮುಂದೆ |
ವರಯಕ್ಷಿಯಾವಾಸಮೊಂದುಂಟಲ್ಲಿಗೆ | ನಿರುತದಿ ಪೋಗಿ ಕುಳ್ಳಿರ್ದು || ೮೦ ||

ಈ ದಿವ್ಯಮಂತ್ರಮನುಚ್ಚರಿಸಿದೊಡೆ ಮ | ತ್ತಾ ದೇವತೆಗಳೊದಗುವುವು |
ಸಾದರದಿಂದೆನಲವಗೂಡಿಯಾಯೆಡೆ | ಗಾದಿಟ್ಟನು ನಡೆತಂದು || ೮೧ ||

ದೇವರದೇವಗೆ ವಂದಿಸಿಯಾ ಯಕ್ಷ | ದೇವಿಯಾವಾಸಕೆ ಬಂದು |
ಸಾವಧನದೊಳು ಕುಳ್ಳಿರ್ದ ಜಪಿಸಿದನು | ಪಾವನತರಮಂತ್ರಗಳನು || ೮೨ ||

ವೈರಿಭಂಜನಿ ಲೋಕಮದವಿಧ್ವಂಸಿನಿ ಮ | ನೋರಥಸಿದ್ಧಿಯೆಂದೆಂಬ |
ಸಾರಮಪ್ಪ ದೇವತೆಗಳು ಮೊದಲಾಗಿ | ವೀರಪ್ರಾರ್ಥನೆ ಬೆಸಸೆನುತ || ೮೩ ||

ಮೂವತ್ತು ವಿದ್ಯಾದೇವತೆಗಳು ಬಂ | ದಾವಿಭುವಿನ ಮುಂದೆ ನಿಲಲು |
ಸಾವಧಾನದಿ ಕೈಕೊಂಡು ಪೂಜಿಸುತಿ | ರ್ಪಾವೇಳೆಯೊಳಾಯೆಡೆಗೆ || ೮೪ ||

ಆ ವಿದ್ಯಾಧರನನು ಮುನ್ನ ಕಟ್ಟಿ ಪೋ | ದಾ ವೈರಿ ಬರುತಿರೆ ಕಂಡು |
ಈ ವಾಹಿನಿಗೂಡಿ ಬರ್ಪವನಾರೆಂ ಗೂಡಿ | ದಾವೀರನರ್ಜುನ ಕೇಳೆ || ೮೫ ||

ಮೊದಲೆನ್ನನಿಲ್ಲಿ ಬಂಧಿಸಿ ಪೋಗಿ ಬಳಿಕೆನ | ಗೊದವಿದು ಬನ್ನದ ತನ್ನ |
ದರಿಯರಿಗೆ ತೋರುವೆನೆಂದವರು ಗೂಡಿ | ಮುದದಿಂದ ಬಹುಬಲ ಸಹಿತ || ೮೬ ||

ಬಂದನೆಂದಿಂದ್ರರಥನು ಪೇಳುತಿರಲಿಳಿ | ತಂದಲ್ಲಿ ಬಿಳ್ದ ವೇಣುವನು |
ದಂದಶೂಕನು ಪಾಶದಿ ತಾನು ಕಟ್ಟಿದು | ಸೊಂದು ಕಟ್ಟನು ಪರಪಡಿಸಿ || ೮೭ ||

ಹರಿಷದಿನಿರ್ದಿಂದ್ರರಥನನು ಬಾಲಭಾ | ಸ್ಕರನಂದದಿ ನಿಂದಿರ್ದ |
ನರನನು ನೋಡಿ ವಿಸ್ಮಯಮಾನಸವಾಗಿ | ಮರವಟ್ಟು ನಿಂದಿರಲಾಗ || ೮೮ ||

ಎಲೆ ಮೇಘರಥ ಮೋಸದೊಳೀ ಖಗನನೀ | ನೆಲೆಯೊಳು ಕಟ್ಟಿ ನೀ ಪೋಗಿ |
ಲಲನೆಯರಿಗೆ ತೋರ್ಪೆನೆಂದು ಮಗುಳ್ವುದು | ಕುಲಹೀನರ ಮತವೈಸೆ || ೮೯ ||

ಎನಲು ಕಡಂಗಿ ಮತ್ತಾಮೇಘರಥ ತನ್ನ | ಧನುಗೊಂಡು ನರನೋಳಿದಿರ್ಚೆ |
ಅನಿತರೊಳವನ ಪಿಂತಿಕ್ಕಿ ಖಚರಸೇನೆ | ಘನತರವಹ ಕೋಪದಿಂದ || ೯೦ ||

ಇದರಾಗಲು ಕಂಡು ದಿವ್ಯಶರದಿನಾ | ಅಧಟನ ಬಲವನೆಲ್ಲವನು |
ಒದವಿಸೆಯಂತಕರಾಜನನಿಜಪುರ | ಕದನು ಕಂಡಾಮೇಘರಥನು || ೯೧ ||

ಪೊಡೆವ ಸಿಡಿಲ್ಗಿದಿರಾಗುವ ಹರಿಯುಂತೆ | ಜಡಿವುತ ತನ್ನ ಖಡ್ಗವನು |
ಕಡು ಮುನಿಸಿಂದಿದಿರಾಗಲವನ ಕೈದ | ಕಡಿದನದೊಂದು ಮಾರ್ಗಣದಿ || ೯೨ ||

ಬಳಿಕವನತ್ಯಂತ ಕೋಪದಿ ವಿದ್ಯಾ | ಬಲವನಿರ್ಮಿಸಿಯಿದಿರೊಡ್ಡೆ |
ಬಲವಂತನೊಂದು ಬಾಣದಿನಾವಿದ್ಯಾ | ಬಲವನೆಲ್ಲವನುನೋಡಿಸಿದನು || ೯೩ ||

ಅದನು ಕಂಡವನು ಬೆದರಿಯಾ ಪಾರ್ಥನಿ | ಗಿದಿರಾಗದಾಗಸಕೂಗೆದು |
ಬೆದರಿ ಕಾಲ್ದೆಗೆವುಲಿರಲಿಂದ್ರರಥನಿಂ | ತಿದು ತನಗವಸರವೆಂದು || ೯೪ ||

ಗಗನಕೆ ನೆಗೆದಾ ಪಗೆವನ ಬೆಂಬಳಿ | ಯೊಗೆದು ಪಿಡಿದು ಪೆಡಗಟ್ಟ |
ಬಿಗಿದು ಭೂತಳಕಿಳಿತದೊಪ್ಪಿಸಿದನಾ | ಅಗಣಿತ ಮಹಿಮನಮುಂದೆ || ೯೫ ||

ಕಟ್ಟುವಡೆದು ಬಂದು ನಿಂದಾ ಖಚರನ | ನಿಟ್ಟಿಸಿಯಾಧನಂಜವನು |
ಕಟ್ಟುಮ್ಮಳದಿನಿಂದ್ರರಥನ ಕೈಯಿಂದಾ | ಕಟ್ಟಿ ಬಿಡಿಸುತಿಂತು ನುಡಿದ || ೯೬ ||

ಎಲೆ ಮೇಘರಥ ಕೇಳಿಂದು ಮೊದಲು ನೀ | ಯಲಘುವಿಕ್ರಮಿಯಿಂದ್ರರಥಗೆ |
ಅಲಸದೆ ಬೆಸಗೆಯ್ವುದೆಂದುರೆ ನಿಯಮಿಸಿ | ಕಲಿಪಾರ್ಥನಾತನ ಕಳುಹೆ || ೯೭ ||

ಬಳಿಕಿಂದ್ರರಥನಾಯಿಂದ್ರಕುಮಾರಗೆ | ತುಳಿಲ್ಗೆಯ್ದಿಂತು ನುಡಿದನು |
ಅಲಘುವಿಕ್ರಮ ಬಿಜಯಂಮಾಡುವುದೆನ್ನ | ಪೊಳಲಿಗೆಂದೊತ್ತಂಬದಿಂದ || ೯೮ ||

ವರಮಣಿಪುಷ್ಪಕದೊಳಗೇರಿಸಿ ತನ್ನ | ಪುರಕುರಮುದದಿ ಕೊಂಡೊಯ್ದು |
ಉರುವಿನುಯದೊಳುಪಚರ ಮಾಡಿ ತನ್ನನೂ | ರ್ವರುತನುಜಾತರ ಕರೆದು || ೯೯ ||

ನೀಮೀತಗಾಳ್ವೆಸನಾಗಿರಿಮೆಂದು ನಿ | ಯಾಮಿಸಲವರೊಲವಿಂದ |
ಆ ಮಹಿಮೆಗೆ ಸಾಧ್ಯವ ಮಾಡಿಕೊಟ್ಟ | ದ್ದಾಮವಿದ್ಯಾವತತಿಯನು || ೧೦೦ ||

ಇಂತಾಪೊಳಲೊಳು ಮಾಸತ್ರಯಮಿರ್ದ | ಸಂತಸದಿಂದಾ ನರನು |
ಅಂತಕಸುತನಲ್ಲಿಗೆಯ್ದಲೆಂದಾಖಗ | ಕಾಂತಗೆ ನಿರವಿಸಲವನು || ೧೦೧ ||

ಉತ್ತಮರತ್ನಭೂಷಣವಸ್ತ್ರದಿಂದ ನೃ | ಪೋತ್ತಂಸನ ಪೂಜೆಗೆಯ್ದು |
ಬಿತ್ತಮಪ್ಪ ವಿಮಾನಮನೇರಿಸಿ | ಮತ್ತಾ ಸುತರೊಡಗೂಡಿ || ೧೦೨ ||

ಪದಳದಿಂದಲಿ ಪರಮಾನಮಾರ್ಗದಿ ಬಂದು | ಬದರೀವನದೊಳಗಿಳುಹೆ |
ಅಧಟರದೇವನರ್ಜುನನು ಕೊಂತಿಯ ನಿಜ | ಪದಕೆ ಪಣೆಯ ಚಾಚಿದನು || ೧೦೩ ||

ಬಳಿಕ ಧರ್ಮಜ ವಾಯುಸುತರ್ಗೆ ವಂದಿಸಿ ತನ | ಗಲಘುಭಕ್ತಿಯೊಳಂಘ್ರೀಯುಗಕೆ |
ಅಳಕಮನಿಟ್ಟ ನಕುಲಸಹದೇವರ | ನೆಳಹಿ ಹರಿಸಿ ಕುಳ್ಳಿರಲು || ೧೦೪ ||

ಅತಿ ಭಕ್ತಿಯೊಳಾಯಿಂದ್ರರಥನು ಯಮ | ಸುತಭೀಮ ಮೊದಲಾದವರಿಗೆ |
ನತನಾಗಿಯುಚಿತಾಸನದೊಳು ಕುಳ್ಳಿರ್ದು | ಕ್ಷಿತಿಪನೊಳಿಂತಾಡಿದನು || ೧೦೫ ||

ತನಗೆ ನರನುಗೆಯ್ದ ಜೀವೋಪಕಾರವ | ನನುರಾಗದಿಂ ಪೇಳಿ ಬಳಿಕ |
ವಿನುತ ವಿಕ್ರಮಯುತರೀನೂರ್ವರು ತನ್ನ | ತನುಜರಿವರ ಕೈಯಿಂದ || ೧೦೬ ||

ಸೇವೆಗೊಂಡಿರ್ಪುದೆನುತ ಪ್ರಾರ್ಥಿಸಿ ಪೇಳಿ | ಯಾವಿಭುವಿನ ಸನ್ನಿಧಿಯೊಳು |
ಆ ವಿದ್ಯಾಧರನಾ ಸುಕುಮಾರರ | ಭಾವಶುದ್ಧಿಯೊಳಲ್ಲಿರಿಸಿ || ೧೦೭ ||

ಬಳಿಕ ಬಲ್ಲಿದರ ಬೀಳ್ಕೊಂಡು ನಭೋಮಂ | ಡಲದೊಳಗಾಯಿಂದ್ರರಥನು |
ತಳುವದೆಯ್ದುವಸಮಯದೊಳಿತ್ತಲವನೀ | ಲಲನೇಶನಾಕೌರವನು || ೧೦೮ ||

ವನವಾಸದೊಳು ಕಂದಮೂಲಪತ್ರದಿ ತಮ್ಮ | ತನುವನಿರದೆ ಚೆನ್ನಾಗಿ |
ದಿನಚರಿ ಹೊರೆವ ಪಾಂಡವರಿಗೆ ನನ್ನೀ | ಘನತರಮಪ್ಪೈಸಿರಿಯ || ೧೦೯ ||

ಚೆನ್ನಾಗಿ ತೋರಲುಬೇಕೆಂಬ ಬಗೆದಾ | ತನ್ನ ಬಲವನೆಲ್ಲಗೂಡಿ |
ಸನ್ನುತರವರಿರ್ದ ಬದರೀವನಕೆಯ್ದಿ | ಗನ್ನಕಾರನು ಬೀಡುಬಿಡಲು || ೧೧೦ ||

ಮರುತಮಾರ್ಗದೊಳು ಪೋಪಾಯಿಂದ್ರರಥನಾ | ಕುರುಪತಿ ಬನಕೆಯ್ತಂದ |
ಇರವನಪ್ರಜ್ಞಪ್ತಿವಿದ್ಯೆಯಿನರಿದತಿನಿ | ಷ್ಠುರತರಮಾನಸನಾಗಿ || ೧೧೧ ||

ಈತನುತ್ತಮಪಾಂಡರಿಗಹಿತ ನನ | ಗೀತ ಪರನು ನಾನಿವಗೆ |
ಮಾತೇನು ಕೇಡನೆಣಿಸಬೇಕೆಂದು ಏ | ಖ್ಯಾತನಲ್ಲಿಂದಿಳಿತಂದು || ೧೧೨ ||

ಉರುತರಕೋಪದಿನವನಸಭೆಯ ಹೊಕ್ಕು | ಕುರುಪತಿ ದುಶ್ಯಾಸನರ |
ಭರದಿ ಪಿಡಿದು ಕಟ್ಟಿವಾಗಲ್ಲಿರ್ದಾ | ದುರಗಲಿಗಳು ಮಾರ್ಮಸಗಿ || ೧೧೩ ||

ಅಸಿಗೊಳಲವರನೆಲ್ಲರ ವಿದ್ಯೆಯಿಂದ ತಂ | ಬಿಸಿ ಲೆಪ್ಪದಿಂ ಹಸಗೆಯ್ದು |
ರಸಚಿತ್ರದಂತೆ ಕೀಲಿಸಿ ಬಲುಗಟ್ಟನು | ಬ್ಬಸಮಾಗುವಂದದಿ ಕಟ್ಟಿ || ೧೧೪ ||

ಆಗಸಕೊಗೆದು ಬಳಿಕ ವಿಮಾನದ | ಮೇಗಡೆಯೊಳು ಹಾಕಿಕೊಂಡ |
ಭೂಗಧಿಪರಕೊಂಡಾಖಚರನು ಪೋಗು | ವಾಗಲಿತ್ತಾಬೀಡಿನೊಳಗೆ || ೧೧೫ ||

ಎಲ್ಲಿಯ ಮಾರಿ ನೃಪರ ಕೊಂಡುಪೋದುದೆಂ | ದೆಲ್ಲರು ಪಂಬಕ್ಕಿಯಂತೆ |
ನಿಲ್ಲದೆ ಬಾಯ್ವಿಡಿತಿರೆಯರಸನ ಪಟ್ಟ | ವಲ್ಲಭೆಯರು ಕೆಟ್ಟೆವೆನುತ || ೧೧೬ ||

ಗುರುಕೃಪಕರ್ಣವಿಕರ್ಣಶಕುನಿಶಲ್ಯ | ಸುರಸಿಂಧುಸುತ ಸಿಂಧುನೃಪತಿ |
ಗುರುಸುತಮೊದಲಾದ ವೀರಭಟರ ಮುಂದೆ | ಹೊರಳಿ ಶೋಕವ ಮಾಡುತಿರಲು || ೧೧೭ ||

ಇದು ಸತ್ಯನಿಧಿ ಪಾಂಡವರ ಹಂಗಿಸಲು ಬಂ | ದುದು ಕಾರಣ ಕುರುಪತಿಗೆ |
ಅದುಭುತಮಾದಾಪತ್ತುಸಂಜಯಿಸಿ | ತಿದನಾವುಮಾಣಿಸಲರಿದು || ೧೧೮ ||

ಎಂದವರೆಲ್ಲ ನುಡಿಯೆ ಭಾನುಮತಿ ಕೇಳಿ | ಯೊಂದಾಗಿ ರಾಜಸತಿಯರ |
ಸಂದಣಿಬರೆ ಧರ್ಮರಾಯನ ಬಳಿಗೆ | ಯ್ತಂದಾತನಮುಂದೆ ಬಿಳ್ದು || ೧೧೯ ||

ಪುರುಷಭಿಕ್ಷವನೀವುದೆಂದು ಕೋಮಲಪದ | ಸರಸಿಜವನು ಕಟ್ಟಿಕೊಂಡು |
ಪೊರಳುತಲಿರಲಿದೆಲ್ಲಿಯದೆಂದಾಸತಿ | ಗೊರೆಯಲಿಂತೆಂದುಸುರಿದಳು || ೧೨೦ ||

ಎಂತೆಂದರಿಯೆನಲರ್ವಟ್ಟೆಯಿಂದೋರ್ವ | ನಂತಕನಂತಿಳಿತಂದು |
ಕೌಂತೇಯರಾಹಗೆ ನೀನಲ್ಲವೆಯೆನು | ತಂತರಿಸದೆ ಕೋಪದಿಂದ || ೧೨೧ ||

ಅಂತರಿಕ್ಷಕೆ ನಿಜಪತಿಯನು ಕೊಂಡೊಯ್ದು | ನಂತರಿಸದೆ ತರಿಸೆಂದು |
ಕಾಂತೆಕಾರ್ಪಣ್ಯದಿ ಬಿನ್ನವಿಸಲ್ಕಾ | ಅಂತಕಸುತ ಕರುಣದೊಳು || ೧೨೨ ||

ನರನಮೊಗವ ನೋಡಿ ನಿನ್ನಾಂತನಿಂದೀ | ಪರಿಯಾಯಿತಿಂತಿದ ನೀನೆ |
ಪರಿಹರಿಸೆನೆ ಕೆಲದೊಳಗಿರ್ದ ಮಾರುತಿ | ಯೊರೆದನಿಂತೆಂದಣ್ಣನೊಳು || ೧೨೩ ||

ನಾವು ಕೊಲುವೆವೆಂಬ ಹಗೆಯುಮುನ್ನಿಗರಿಂ | ಸಾವ ಹಡೆದು ಹೋಗುವುದು |
ದೇವ ಗೆಳತಿ ಹಿತವೆಮಗಲ್ಲವೆಯೆನ | ಲಾ ವಿಭುವಿಂತೆಂದನಾಗ || ೧೨೪ ||

ಹೆಂಗಳ ಮೊರೆಗೇಳಿ ಸುಮ್ಮನಿರ್ಪುದು ನೃಪ | ರಂಗವಲ್ಲಂತದರಿಂದ |
ಪಿಂಗಿಸಬೇಕಾತನ ನೋವನೆನುತು | ತ್ತುಂಗಸದ್ಗುಣಿ ಭೀಮಗುಸುರೆ || ೧೨೫ ||

ಧುರದೊಳಗವರು ನೂರ್ವರು ನಾವೈವರು | ಪರಬಾಧೆಯಾರಿಗೆಸಗಲು |
ನಿರುತದಿ ನಾವುನೂರೈವರದರಿನಿದ | ಪರಿಹರಿಪುದು ಮತವೆಂದು || ೧೨೬ ||

ಒರೆಯಲದನು ಕೇಳಿ ನರನೋಲೆಯನೊಂದು | ಶರದಿಂದ ಬರೆದು ಮತ್ತೊಂದು |
ಶರದೊಳು ಕಟ್ಟಿ ಖೇಚರನೇರಿಪೋವಾ | ವರವಿಮಾನವನೆಚ್ಚನಾಗ || ೧೨೭ ||

ಆಯಿಷುವಾವಿಮಾನವ ತಾಗಲೊಡನೆ ಮ | ತ್ತಾಯಿಂದ್ರರಥನದನೋಡಿ |
ಆಯಲರ್ವಟ್ಟೆಯಿಂದವೆಯಿಳಿದವರಿ | ರ್ದಾಯೆಡೆಗಿರದೆಯ್ತಂದು || ೧೨೮ ||

ಪದುಳದಿಂದಾಧರ್ಮತನುಜಾತನ ಮೃದು | ಪದಮೂಲದೊಳು ಕಟ್ಟುವರೆಸಿ |
ಮದಯುತರವರನಿರಿಸಿಯಿಂದ್ರರಥನಾ | ಮರುತಮಾರ್ಗಕೆ ಪೋದನಿತ್ತ || ೧೨೯ ||

ನರನತಿಕರುಣದಿನಾಕಟ್ಟನು ಬಿಡ | ಲುರುಲಜ್ಜೆಯಿಂದ ಕೌರವನ |
ಶಿರವ ಬಾಗಿರೆ ಕಂಡಿತು ನುಡಿದನಾ | ದರದಿಂದೆಲೆ ಕುರುರಾಯ || ೧೩೦ ||

ಬಿಜಯಂಗೆಯ್ಯಿರಿ ನಿಮಗೇಕೆ ಮನಕ್ಷತ | ನಿಜಪುರಕೆನೆ ಪಲ್ಮುರಿದ |
ಗಜದಂತೆ ಕುರುಪತಿಯೆಳ್ದಾಗ ಪೋಗಲು | ಸುಜನರಿತ್ತಲು ವನದೊಳಗೆ || ೧೩೧ ||

ಇರಲು ಧರ್ಮಜನ ಸತ್ಯಕೆ ಮೆಚ್ಚಿ ಬಂದತಿ | ಹರುಷದಿ ವನದೇವತೆಯರು |
ವರರತ್ನಭೂಷಣಾಂಬರದಿನರ್ಚನೆಗೆಯ್ದು | ಹರಸಿ ಸೇಸೆಯನಿಟ್ಟರಾಗ || ೧೩೨ ||

ಭಯರಹಿತರು ಭಾವೋದ್ಭವಸದೃಶರು | ಲಯರುದ್ರನಿಭಕೋಪಯುತರು |
ಜಯಜಯಾವಲ್ಲಭರೊಪ್ಪಿದರಾ | ನಯಗುಣಮಣಿಭೂಷಿತರು || ೧೩೩ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶನ ಚರಿತೆಯೊ | ಳಿದು ಚತುರ್ವಿಂಶತಿ ಸಂಧಿ || ೧೩೪ ||

ಇಪ್ಪತ್ತನಾಲ್ಕನೆಯ ಸಂಧಿ ಸಂಪೂರ್ಣ