ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಅತಿಮುದದಿಂದಾಪಾಂಡವರಾವು | ದ್ದತವನದೊಳು ಸುಖಮಿರಲು |
ಕ್ಷಿತಿನುತಫಲ್ಗುಣನಂಗನೆಗಾದ್ರೌ | ಪದಿಗೆ ಗರ್ಭೋದಯಮಾಯ್ತು || ೨ ||

ಆ ಗರ್ಭದೊಳು ಕಾಂಚನಕಂಜಾತದ | ಪೂಗಳನೀಕ್ಷಿಸುವಿಚ್ಛೆ |
ಆಗಲಂತದನು ವಲ್ಲಭಗೊರೆಯಲು ಕಡು | ರಾಗದಿನೇರಿ ಪುಷ್ಪಕವ || ೩ ||

ಆ ಪೆಣ್ಗಳರಸಿಸಹಿತಮಾಕನಕ | ದ್ವೀಪಕೆ ಮರುತಮಾರ್ಗದೊಳು |
ಆ ಪೂರ್ಣಶಶಿರೋಹಿಣಿಗೂಡಿ ಬರ್ಪಂ | ತಾ ಪಾರ್ಥನಂದೆಯ್ದದ್ದನು || ೪ ||

ಬಳಿಕಾ ದ್ವೀಪಕಿಳಿದು ಫಲಭಾರದಿ | ನಿಳೆಗೆರಗಿದ ಮಾಮರದ |
ನೆಳಲೊಳಬಲೆಯನಿರಿಸಿ ಕನಕಾಬ್ಜದ | ಕೊಳದ ಕಡೆಗೆ ಪೋಗಲಿತ್ತ || ೫ ||

ಎರಡನೆಯೆಸೆವ ದೀವಿಯ ಮೂಡಣಮಂ | ದರದ ಭರತಭೂತಳದ |
ಕರಮೊಪ್ಪುವ ವಿಜಯಾದ್ರಿಯ ರಥನೂ | ಪುರಚಕ್ರವಾಳಪಟ್ಟಣದ || ೬ ||

ನರಪತಿ ಪದ್ಮನೆಂಬವನಾ ದ್ವೀಪದ | ಭರತತ್ರಿಖಂಡಾಧಿನಾಥ |
ಧುರಧೀರಶಂಖನೆಂಬಾವಾಸುದೇವಭೂ | ವರನ ಸೋದರನ ಮೈದುನನು || ೭ ||

ಅನುರಾಗದಿಂದ ವಿಮಾನಮನಡರ್ದಾ | ಅನಿಲಪಥದೊಳೆಯ್ದುತಿರಲು |
ಅನಿತರೊಳಾವಿಮಾನವು ಕೀಲಿಸಿ ನಿಲೆ | ವನಿತೆಯಿರ್ದಾಸಸಿನದೊಳು || ೮ ||

ಏಕೆನ್ನೀವಿಮಾನವು ಕೀಲಿಸಿತೆಂ | ದಾಕಾಶದಿಂ ನೆಲೆಕಿಳಿದು |
ಆ ಕಮಲಾಕ್ಷಿಯನಾವಿಧುವದನೆಯ | ನಾಕಳಶೋಪಮಕುಚೆಯ || ೯ ||

ಆ ಕೋಕಿಲಾಲಾಪೆಯನಾ ಚೆಲುವೆಯ | ನಾಕುವಲಯಗಂಧಿಯನು |
ಆ ಕಾಂತಾಮಣಿಯನು ಕಂಡು ವಿರಹ | ವ್ಯಾಕುಲನಾಖೇಚರನು || ೧೦ ||

ವನದೇವತೆಯೊ ವಾಸವನಗ್ರವಧುವೊ ದುಗ್ಧ | ವನಧಿಯಣುಗೆಯೊ ಮನ್ಮಥನ |
ವನಿತೆಯೊ ಬಿದಿಯ ಸತಿಯೊ ಶಶಿಯರಸಿಯೊ | ಯೆನುತ ಪದ್ಮಜನೀಕ್ಷಿತ || ೧೧ ||

ಅವಲೋಕಿನಿಯೆಂಬ ವಿದ್ಯೆಯ ಕರೆದು ಮ | ತ್ತಿವಳಕೊಂಡೊಯ್ವುಪಾಯವನು |
ತವಕದಿಂದುಸುರೆನಲಾ ದೇವತೆಯಿಂ | ತವನೊಳು ಮಾತನಾಡಿದುದು || ೧೨ ||

ಗರುವೆಯಿವಳು ಸಾಮಾನ್ಯಸತಿಯಲ್ಲ | ಭರತತ್ರಿಖಂಡಾಧಿನಾಥ |
ಪುರುಷೋತ್ತಮನ ಮೈದುನ ಧರ್ಮಜಾನುಜ | ಚರಮಾಂಗನರ್ಜುನನರಸಿ || ೧೩ ||

ಮುಳಿದೊಡೆ ಮಹಿಯನಾಗಸಕೆಯಾಗಸವನೀ | ಯಿಳೆಗೆಯ್ದಿಸಿ ತರಬಲ್ಲ |
ಬಲಯುತನವನಣ್ಣಭೀಮನಂತದರಿಂ | ಲಲನೆ ನಿನಗೆ ಸಾಧ್ಯಮಲ್ಲ || ೧೪ ||

ಅಂದವಿಚಾರದಿ ಸೀತೆಯನೊಯ್ದುದ | ರಿಂದತಿ ಬಲರಾವಣನು |
ಹೊಂದಿ ನಾರಕನಾಗಿ ಜನಿಸಿದನೆಂಬುದ | ನಿಂದು ನೀ ಬಲ್ಲವನಾಗಿ || ೧೫ ||

ಪರಮಪತಿವ್ರತೆಯಿವಳನೀನೊಯ್ವುದು | ನಿರುತಮೆ ಬೇಡವೆಂದೆನಲು |
ಪಿರಿದಾಗಿ ನನಗೆ ಭೀತಿಯ ತೋರಬೇಡತಿ | ಭರದಿ ಕೊಂಡೊಯ್ವುಪಾಯವನು || ೧೬ ||

ಒರೆಯೆನಲಾ ಕಾಂಚನಕಂಜಾತವ | ತರಹೋದಾಫಲ್ಗುನನ |
ವರರೂಪಧರಿಸಿಯಿವಳನೊಯ್ವುದೆನಲಾ | ತರಿಯಾಕೆಯ ಕೈವಿಡಿದು || ೧೮ ||

ಇಂದುಲೇಖೆಯನು ಪಿಡಿದು ಪಾರುವ ರಾಹು | ವಂದದೊಳಾಖೇಚರನು |
ಚೆಂದಳಿರ್ದುಟಿಚೆನ್ನೆಯನಿರದೆತ್ತಿಕೊಂ | ಡಂದಾಗಸಕೆ ಲಂಘಿಸಿದ || ೧೯ ||

ತನ್ನ ವಿಮಾನದೊಳಿರಿಸಿಕೊಂಡೊಯ್ವಾ | ಗನ್ನಕಾರನ ಚೇಷ್ಟೆಗಂಡು |
ಸನ್ನುತೆ ಪರವಿದ್ಯಾಛೇದಿನಿಯೆಂಬ | ರನ್ನದುಂಗುರುವ ಮುಟ್ಟಿಸಲು || ೨೦ ||

ಆ ಕೃತಕಾಂಗವಳಿದುನಿಂದ ಖಗನ ನಿ | ಜಾಕಾರವ ನೋಡುತವಳು |
ಆ ಕಣ್ಗಳಮುಚ್ಚಿದಳು ಕಮಲಿನಿ ದೋ | ಷಾಕರನನು ಕಂಡಂತೆ || ೨೧ ||

ಈ ತೆರದಿಂ ಕಣ್ಮುಚ್ಚಲಬಲೆಯಿ | ನ್ನೇತಕೆ ಬಿಡು ಸಂಶಯವ |
ಓತುನೋಡೆನ್ನನೆನಲು ನೋಡದೆ ಬಿಡು | ವಾತನಿಂತಾಡಿದವಳವಳು || ೨೨ ||

ಎಲವೊ ಪಾಳ್ಮನೆಗೆ ಪೋಗುವ ನಾಯಂದದಿ | ನಲಸದೆ ನಾನೋರ್ವಳಿಪ್ಪ |
ನೆಲೆಗೆ ಬಂದೆನ್ನನು ಕಳ್ದುಕೊಂಡೊಯ್ವುದು | ಕಲಿತನವೇ ಮನುಜರಿಗೆ || ೨೩ ||

ಎನುತವನೊಳು ನುಡಿದಾನಂತಕಸುತ | ನನಿಲಜರುಗಳನುಜಾತ |
ಮನುಜಮಂದಾರಪಾರ್ಥನ ಸತಿ ದ್ರುಪದನ | ತನುಜೆ ದ್ರೌಪದಿಯೆನ್ನನಿವನು || ೨೪ ||

ಚೋರತನದಿ ತಂದಪಾತಕನನು ಖೇಚ | ರೋರುಗಸುರಸಮಿತಿಯೊಳು |
ಆರೊಬ್ಬರಳುಕಿಸಿಯೆನ್ನೀಸೆರೆಯನು | ಕಾರುಣ್ಯಮಾನಸರಾಗಿ || ೨೫ ||

ಬಿಡಿಸುವ ವೀರರುಂಟೆಯಂದು ಶೋಕಿಪ | ಮಡದಿಯ ಮೊರೆಯನು ಕೇಳಿ |
ನಡುಬಾನೊಳೆಡೆಯಾಡುವ ಬಿಜ್ಜಾದರ | ಕಡುಗಲಿಗಳೊಳು ಕೆಲಬರು || ೨೬ ||

ಬಧಿರರಂದದಿ ಕೇಳದಿಹುದನುಚಿತಮೆಂ | ದಿದಿರಾಗಲೊಡನಾ ಪದ್ಮ |
ಅಧಟಿಂದತಿ ಯುದ್ಧಂಗೆಯ್ದವರನು | ಬೆದರಿಸಿದನು ನಿಮಿಷದೊಳು || ೨೭ ||

ಈ ತೆರದಿಂ ಖೇಚರರನೋಡಿಸಿದಾ | ಪಾತಕಿಯಿರವನು ಕಂಡು |
ಆ ತರಳಾಕ್ಷಿಯೆನಗೆ ಶರಣಿಲ್ಲೆಂದು | ಭೂತಳಕಲ್ಲಿಂದುರುಳಿ || ೨೮ ||

ಶರಣಾಗು ವೀರ ಫಲ್ಗುಣದೇವಯೆನುತುಸು | ರ್ದಿರದೆ ಬೀಳ್ವಳನಾ ಖಳನು |
ವರಪರ್ಣಲಘುವೆಂಬ ವಿದ್ಯೆಯ ಕೈಯಿಂದ | ತರಿಸಿ ವಿಮಾನದೊಳಿರಿಸಿ || ೨೯ ||

ಚೆನ್ನಾಗಿ ನೀನೊಡಂಬಟ್ಟಲ್ಲದೆ ನಾನು | ನಿನ್ನ ಮೈಸೋಂಕುವುದಿಲ್ಲ |
ಇನ್ನು ನೀನಿಂತೆಣಿಸಲುಬೇಡವೆನಲು ಗು | ಣೋನ್ನತೆಯಿಂತೆಂದಳಾಗ || ೩೦ ||

ಎತ್ತಾನು ನೀನೆನ್ನ ಮುಟ್ಟಿದೆಯಾದೊಡೆ | ಕಿತ್ತಿಡುವೆನು ನಾಲಗೆಯ |
ಮತ್ತೆನ್ನ ಪತಿ ನಿನ್ನ ತನುವಿಂ ಜೀವವ | ನೊತ್ತಿಕೀಳದೆ ಸುಮ್ಮನಿಹನೆ || ೩೧ ||

ಎನುತ ನುಡಿದ ಬಿರುನುಡಿಗೇಳಿಯಾ ಖಳ | ನಿನಿಸು ಮುಟ್ಟದೆ ದ್ರೌಪದಿಯ |
ಅನಿಲವೇಗದಿ ನಿಜನಗರಿಗೆಯ್ದಿಸಿ ತನ್ನ | ಮನೆಯೊಳು ಕಾವಲನಿರಿಸಿ || ೩೨ ||

ಆ ರಥನೂಪುರಚಕ್ರವಾಳಕೆ ಮ | ತ್ತಾರುಬಾರದಮಾಳ್ಕೆಯೊಳು |
ಸೇರಿಸಿದನು ವಜ್ರದ ಖರ್ಪರವನು | ಭೂರಿವಿದ್ಯಾನಿರ್ಮಿತದಿ || ೩೩ ||

ಆ ಪುರವರಕೆ ಪಲವು ದೇವತೆಗಳ | ಕಾಪನಿರಿಸಿಯಾ ಖಳನು |
ಆ ಪಗಲೊಳು ತನ್ನಯ ಭಾವ ಶಂಖಮ | ಹೀಪಾಲಕ ವಾಸುದೇವ || ೩೪ ||

ಅಲ್ಲಿಯ ತೀರ್ಥೇಶನ ಸಮವಸೃತಿ | ಗುಲ್ಲಾಸದಿಂ ಪೋಗಲವನು |
ನಿಲ್ಲದೆ ತಾನವನೊಡನೆಯ್ದಲಿತ್ತಲು | ಫುಲ್ಲಾಕ್ಷಿ ದ್ರೌಪದಿದೇವಿ || ೩೫ ||

ಇನಿಯನ ಮೊಗಗಾಣ್ಬನ್ನೆವರೆನಗನ | ಶನವೆಂದು ಭಾಷೆಯ ಮಾಳ್ಪ |
ಅನಿತರೊಳಾಮನೆದೈವಗಳತ್ತವು | ಜನಿಸಿಬಿದ್ದುದು ಪಗಲುಳ್ಕು || ೩೬ ||

ಅದನು ಕಂಡಾ ದುಷ್ಟನ ತಂದೆತಾಯಿಗ | ಳದಿರುತ ಬಂದವಳೊಡನೆ |
ಸದಮಲಚರಿತೆ ಪತಿವ್ರತೆ ನಿನ್ನೀ | ಹೃದಯದೊಳಗೆ ಚಿಂತೆಬೇಡ || ೩೭ ||

ಭೂವಿನೂತನು ನಿನ್ನ ಪತಿಯಿರ್ದಲ್ಲಿಗೆ | ಓವದೆ ನಿನ್ನನೆಯ್ದಿಪೆವು |
ಈ ವಚನವನು ನಂಬೆಂದು ಕೈಮುಗಿದಿ | ರ್ಪಾವೇಳೆಯೊಳು ಫಲ್ಗುಣನು || ೩೮ ||

ಅತ್ತಲುತ್ತಮ ಕನಕಾಬ್ಜವ ತಂದಾ | ಮತ್ತಗಜೋಪಮಗಮನೆ |
ಚಿತ್ತವಲ್ಲಭೆ ದ್ರೌಪದಿಯನು ಕಾಣದೆ | ಒತ್ತರ ಪೊತ್ತಿದಂತಾಗಿ || ೩೯ ||

ಬಳಿಕಲ್ಲಿ ಬಳಸಿದ ಲತೆವನೆ ತಾವರೆ | ಗೊಳ ಪೂಗಿಡುಗಳೊಳರಸಿ |
ಲಲನೆಯ ಕಾಣದೆ ಕಳವಳಿಸಿದನು | ಮ್ಮಳಿಕೆಯನಾ ಫಲ್ಗುಣನು || ೪೦ ||

ನಸುಮೂರ್ಛೆವೋಗಿ ತನ್ನಿಂತಾನೆಳ್ದೆ | ನನ್ನಸಿಯ ಕೊಂಡೊಯ್ದವನು |
ಅಸುರನೊ ಸುರನೊ ಖೇಚರನೊ ಪನ್ನಗನೋ | ವಸುಧಾಚರನೊ ಮತ್ತವನ || ೪೧ ||

ದಿವಿಜೋರಗನರಲೋಕದೊಳಾಎಡೆ | ಯವಳಿರಲಲ್ಲಿಗೆ ಪೋಗಿ |
ತವಕದಿನವನ ತಲೆಯಸೆಂಡೊಯ್ದೆನ್ನ | ಯುವತಿಯ ತರದೆ ಬಿಡುವೆನೆ || ೪೨ ||

ಎನುತತಿ ಕೋಪಾರೂಢಮಾನಸನಿ | ರ್ಪನಿತರೊಳಾಪದ್ಮನಾಭ |
ಜನನುತೆ ಪಾಂಚಾಲಿಯನು ಕೊಂಡೊಯ್ವಾಗ | ಘನತರ ಯುದ್ಧವ ಮಾಡಿ || ೪೩ ||

ಗೆಲವನು ಹಡೆಯದೆ ಬಂದ ಖೇಚರನೋರ್ವ | ನಲಘುವಿಕ್ರಮಿಯೆಡೆಗೆಯ್ದಿ |
ಲಲನೆಯನಾ ಪದ್ಮನಾಭನು ಕೊಂಡೊಯ್ದ | ನೆಲೆಯನುಸುರಲದನರಿದು || ೪೪ ||

ತನ್ನ ವಿದ್ಯೆಯಿನಾತರುಣಿಯಿರ್ದೆಡೆಯನು | ಚೆನ್ನಾಗಿಯರಿದು ನಿಶ್ಚಯಿಸಿ |
ಉನ್ನತ ವಿಕ್ರಮಿಯಾಧರ್ಮತನುಜನ | ಸನ್ನಿಧಿಗಿರದೆಯ್ದುತವೆ || ೪೫ ||

ಲಲನಾಮಣಿ ಪೋದ ವೃತ್ತಾಂತವ ಪೇಳೆ | ಯಲಘುವಿಕ್ರಮಿಯನಿಲಜನು |
ಮುಳಿಯಲು ನಿಲಿಸಿ ತಾಮೀರ್ವರಣ್ಣನ ಪದ | ತಳಕೆ ನಮಿಸಿ ಬೀಳ್ಕೊಂಡು || ೪೬ ||

ಚಾರುವಿಚಿತ್ರವಿಮಾನವನಡರ್ದಾ | ದ್ವಾರಾವತಿಪುರಕೆಯ್ದಿ |
ನಾರಿಯನಾಖಳನೊಯ್ದ ತೆರನ ಬಲ | ನಾರಾಯಣರೊಳಗುಸುರೆ || ೪೭ ||

ಆ ವಾರ್ತೆಯ ಕೇಳಿ ಕಡುಮುಳಿದಾಬಲ | ದೇವ ವಾಸುದೇವರುಗಳು |
ಆ ವಾಯುಸುತನರನೊಡನೆ ವಿಮಾನವ | ತಾವೇರಿಯನಿಲಮಾರ್ಗದೊಳು || ೪೮ ||

ಜಂಬೂದ್ವೀಪವ ಪೊರಮಟ್ಟಾಲವ | ಣಾಂಬುಂಧಿಯನು ದಾಂಟುತದರ |
ಮುಂಬಳಸಿದ ಧಾತಕಿಷಂಡದ ಮೂಡ | ಣಿಂಬುವಡೆದ ಮೇರುಗಿರಿಯ || ೪೯ ||

ಕಾಲನ ದಿಕ್ಕಿನ ಭರತದ ವಿಜಯಾರ್ಧ | ಶೈಲದ ತೆಂಕಣತಟದ |
ಮೇಲೆ ವಿರಾಜಿಪ ರಥನೂಪುರಚಕ್ರ | ವಾಳಪಟ್ಟಣಮನೆಯ್ದಿದರು || ೫೦ ||

ಆ ಪೊವಳಲೊಳು ಬಲಕೇಶವರು ಮ | ತ್ತಾ ಪಾರ್ಥನೊಡಗೂಡಿ ನಿಂದು |
ಆ ಪವನಜನ ಕಳುಹೆ ಗದೆವಿಡಿದತಿ | ಕೋಪದಿನಲ್ಲಿಗೆಯ್ತಂದು || ೫೧ ||

ಪುರವರವನು ನೆರೆ ಕವಿಸಿದ ವಜ್ರಖ | ರ್ಪರವನುದ್ಧತಗದೆಯಿಂದ |
ಭರದಿ ಪೊಡೆಯಲದುದಡಿಗೊಂಡು ಮಣ್ಣ ಬ | ಗ್ಗರೆಯನೊಡೆದ ತೆನಾಯ್ತು || ೫೨ ||

ಕಡೆಗಾಲದ ಕಾರ್ಮುಗಿಲೊಡ್ಡಿನ ಬರ | ಸಿಡಿಲೆರಗಿದ ಮಾಳ್ಕೆಯೊಳು |
ಕಡುಗಲಿಭೀಮಗದಾಪಾತದ ದನಿ | ಯಡಸಿತು ಸಕಲ ದಿಕ್ತಟವ || ೫೩ ||

ಆ ವಜ್ರಮಯಖರ್ಪರವನು ಬಿಡುವಿಲ್ಲ | ದೋವದೆ ಕಾಯ್ದುಕೊಂಡಿರ್ಪ |
ದೇವತೆಗಳು ಸಿಂಹನಾದವ ಕೇಳ್ದ ಗ | ಜಾವಳಿಯಂತೆ ಬೆಚ್ಚುತವೆ || ೫೪ ||

ಎಲ್ಲಿಯ ಮಾರಿಯೆಲ್ಲಿಯ ಮಿಳ್ತುವೆನುತಾ | ಕಲ್ಲುತಾಗಿದ ನೆಲ್ಲಿಯಂತೆ |
ಚೆಲ್ಲಪಿಲ್ಲಿಯಾಗುವಂತೋಡಿದುವಲ್ಲಿ | ನಿಲ್ಲದೆ ದೆಸೆದೆಸೆಗಾಗಿ || ೫೫ ||

ಲಾಳಮುಂಡಿಗೆಗಳ ಕಿಳ್ತು ಬಾಗಿಲ ಕಾವ | ಲಾಳಡ್ಡವಾದರೆ ಬಡಿದು |
ಕಾಲಯಮನೆ ಬಂದಾ ಪಟ್ಟಣವನು | ಕೋಳುಗೊಂಡಂತೆಯಿದ್ದನು || ೫೬ ||

ಆರರಿಯದ ತೆರದಿಂ ನಿಮ್ಮ ರಾಜಾ | ಗಾರವ ಪೊಗುವವ ನಾನಲ್ಲ |
ಶೂರರುಂಟಾದೊಡಿದಿರುಬನ್ನಿಮೆಂದಾ | ವೀರ ಮಾರುತಿ ನಡೆತರಲು || ೫೭ ||

ಅರಸಿಲ್ಲದೂರನಿವನು ಹೊಕ್ಕು ಪೊರಮಡೆ | ಪಿರದು ಕೊರತೆಯಹುದೆಂದು |
ಪುರಪರಿಜನಮೆಲ್ಲ ಸುತ್ತಮುತ್ತಿದುದಾ | ಗಿರಿಯ ಮುತ್ತಿದ ಮಂಜಿನಂತೆ || ೫೮ ||

ಇಡಿಯಿಡಿಯೆಸೆಯೆಸೆ ತಿವಿತಿವಿ ತರಿತರಿ | ಬಡಿಬಡಿ ಕೊಲ್ಲು ಕೊಲ್ಲೆಂದು |
ಹಿಡಿಗುಂಡಂ ಬಿಟ್ಟಬಾಳುಬಲ್ಡಡಿಗೊಂ | ಡಡಸಿಮುತ್ತಿದರು ಮತ್ತವನ || ೫೯ |

ಅಂತರರೆಲ್ಲ ಹತ್ತಿರಕೆಯ್ದುವಪರಿ | ಯಂತರತಾಸುಮ್ಮನಿರ್ದು |
ಅಂತರಿಸದೆ ತದ್ಗದೆಯನು ಕುಪಿತಕೃ | ತಾಂತನಿಡುವ ತತ್‌ಕ್ಷಣದೊಳು || ೬೦ ||

ಅರೆಬರನೊರಸಿ ನೊರಜನೊರಸುವವೊಲು | ಅರೆಬರ ಪಿಡಿದೀಡಾಡಿ |
ಅರೆಬರನವನಿಯೊಳಪ್ಪಳಿಸುತ ಕೊಂದ | ಸರಸಂಕತನದಿಂದವನು || ೬೧ ||

ಆನೆಕುದುರೆತೇರಾಳಾದಿಯ ಬಲು | ಸೇನೆಯೆಲ್ಲವು ಬಂದು ಮುಸುಕೆ |
ತಾನದನಿನಿಸು ಲೆಕ್ಕಿಸದೆ ಕೊಂದಿಕ್ಕಿದ | ನಾನೆಲಮೋಕರಿಪಂತೆ || ೬೨ ||

ತೇರಿಂತೇರನಶ್ವದಿನಶ್ವವ ಮದ | ವಾರಣದಿಂ ವಾರಣವನು |
ಕೂರಾಳಿಂ ಕೂರಾಳ ನಿಟ್ಟಿಟ್ಟಾ | ಧೀರಮಾರುತಿ ಕೊಂದನಾಗ || ೬೩ ||

ಬೆಳ್ಳೆರಲೆಯ ಹಿಂಡ ಬೆದರಿಸಿ ಪೆರ್ಬುಲಿ | ಬಳ್ಳಿವನೆಗೆ ಪೋಗುವಂತೆ |
ತಳ್ಳಂಕಗೊಳಿಸಿ ತತ್ಪುರವರಾಜಾಲಯ | ಕುಲ್ಲಸದಿಂದೆಯ್ದಿದನು || ೬೪ ||

ಅದನು ಕಂಡಾ ಪಡಕಣದಾಳ್ಗಳಾರಾಜ | ಸದನದ ರಣಮಂಡಲಕೆ
ಒದಗಿ ತುತ್ತುರುಬಾಗಿನಿಂದು ಬಾಗಿಲನಿಕ್ಕ | ಲಧಟನನಿಲಂದನನು || ೬೫ ||

ಜವನೊಕ್ಕಲಿಕ್ಕಿದಂದದಿನಿರದಾಭಟ | ನಿವಹವೆಲ್ಲವ ನೆಲಕಿಕ್ಕಿ
ತವಕದಿ ಬಾಗಿಲನೊದ್ದು ಕೆಡಹಿ ಮ | ತ್ತವನಿಪಗೃಹಕೆಯಿದ್ದನು || ೬೬ ||

ಮೂರುಲೋಕದಗಂಡನರ್ಜುನದೇವನ | ನೀರಯಾವಡೆಯಿರ್ದಪಳೊ |
ತೋರಿ ತೋರದೊಡೆ ಕೊಲುವೆನೆಂದಾಗಾಡಿ | ಕಾರನೆಲ್ಲರನಂಜಿಸುತ || ೬೭ ||

ಎಕ್ಕಟಿಯೊಳಗಿರ್ದ ದ್ರೌಪದಿಯನು ಕಂ | ಡಕ್ಕ ಬೇಗದೊಳೇಳೆನಲು |
ದಿಕ್ಕನೆ ಪೊರಮಟ್ಟು ಸಂಶಯದಿಂ ಕೈಯೊ | ಳಿಕ್ಕಿದ ಮಣಿಮುದ್ರಿಕೆಯನು || ೬೮ ||

ಪರವಿದ್ಯಾಛೇದಿನಿಯನು ಮುಟ್ಟಿಸೆ | ತರುಣಿಯವನ ನಿಜರೂಪು |
ನಿರುತಮಾಗಿರೆ ಮಾಯಮಿಲ್ಲೆಂದು ತಾನತಿ | ಭರದಿಂದ ಪಿಂತನೆ ಬರಲು || ೬೯ ||

ಬಾಗಿಲಕಾಪಿನಭಟಸಂತತಿ ಬಂದು | ತಾಗಲಣ್ಮದೆ ಹೆರಸಾರೆ |
ಆ ಗಂಡುಗಲಿರಾಜವೀಥಿಗೆ ನಡೆತ | ಪ್ಪಾಗಲಿರ್ದವರಿದಿರಾಗೆ || ೭೦ ||

ಬಡಿಗೆಯಿಂದುದುರ್ವ ನೆಲ್ಲಿಯಕಾಯಂದದಿ | ಕಡುಗಲಿ ಕೈಯೆತ್ತಿ ಪೊಯ್ಯೆ |
ಕೆಡೆಯಲವರು ಜವನುಂಡು ಡರ್ರನೆ ತೇಗಿ | ಯೊಡಲ ತಡಹಿಕೊಳುತಿರ್ದ || ೭೧ ||

ಪೆಂಡಿರೊಳಾಡಿ ಪಂಥವನಾ ಅಂಗಣ | ಗಂಡಿಗರವ ಕೊಂದ ಕೊಲೆಯ |
ಕಂಡುಬೆದರಿ ದೂರದೊಳಿರ್ದರಾ ಅಂಬ | ಕಂಡ ಕಾಗೆಯ ತೆರನಾಗಿ || ೭೨ ||

ಪಾದರಿಗನ ಪಟ್ಟಣದೊಳು ತನಗಿದಿ | ರಾದರನುರೆಯಂಜಿಸುತ |
ಬೀದಿಯ ಸಿಂಗದಂದದೊಳೆಯ್ದಿದನು ವಿ | ನೋದವಿಕ್ರಮ ಭೀಮಸೇನ || ೭೩ ||

ಬೆಂಗೊಟ್ಟು ಬೆದರಿ ಬಾಗಿಲನಿಕ್ಕಿ ಮನೆಮನೆ | ಯಂಗಣಕೋಡಿದರಾಗ |
ಅಂಗಡಿಯಾನೆಯಂದದಿ ಮೆಲ್ಲನೆಯ್ದುವ | ಭಂಗನ ಕಾಣುತಿರ್ದವರು || ೭೪ ||

ಬಳಿಕಾಕಳವಳವನು ಕಂಡು ಮೈಗಲಿ | ಗಳು ದುರುದುಂಬಿ ಕಲಿಗಳು |
ಅಳಿಗಲಿಗಳುವುರುಗಲಿಗಳೆಲ್ಲರ ಭೀಮ | ನುಳಿಯದೆ ನೆಲಕಿಕ್ಕಿದನು || ೭೫ ||

ಕಂಡು ಭೀತಿಯೊಳೀತನು ಕಡೆಗಾಲದ | ಖಂಡಪರಶುವೊ ಭೈರವನೋ |
ದಂಡಧರನೊ ನಾವಿಂತಪ್ಪವೀರನ | ಕಂಡುದಿಲ್ಲೆನುತಿರಲವರು || ೭೬ ||

ಎಲೆ ಪುರಜನರೇ ಪರಸ್ತ್ರೀಯನು ಕಳ್ದಾ | ಖಳನನೆನಗತೋರಿಸಿದೊಡೆ |
ನೆಲದೊಳು ನೆರಪುವೆನೆನುತ ಗದೆಯ ತೂಗು | ತಲಘುವಿಕ್ರಮಿ ನಡೆತಂದು || ೭೭ ||

ಮುಂದೆ ನಾದುನಿಯನು ನಡೆಯಿಸಿ ತಾನಾ | ಪಿಂದೆ ನಡೆದು ತತ್ಪುರವ |
ನೆಲದೊಳು ನೆರಪುವೆನೆನುತ ಗದೆಯ ಬಲಗೋ | ವಿಂದ ಫಲ್ಗುಣರ ಕೂಡಿದನು || ೭೮ ||

ಆ ದ್ರುಪದಾತ್ಮಜೆ ಬಲಗೋವಿಂದರ | ಪಾದಕೆರಗಿ ಪರಕೆಯನು |
ಸಾದರದಿಂದ ತಳೆದು ಬಂದು ನಿಂದಳಾ | ಕಾದಲನೆಡದಭಾಗದೊಳು || ೭೯ ||

ಜಂಬೂದ್ವೀಪದಿಂದಾವಿಲ್ಲಿಗೆ ಬಂದ | ರೆಂಬವಾರತೆಯೆಣ್ದೆಸೆಯ |
ತುಂಬಬೇಕೆನುತ ಶಂಖವನೂದಿದನಾ | ಅಂಬುರುಹೋದರನಾಗ || ೮೦ ||

ಅದಿರಿತವನಿಯಾಗಸದಿಂದುಡುತತಿ | ಯುದುರಿದುವಾಶಾದಂತಿ |
ಬೆದರಿದುವಾ ವಾಸುದೇವನು ಭರದಿಂ | ದೊದರಿಯೂದಿದ ಶಂಖರವಕೆ || ೮೧ ||

ಅಧಟನಾಸಮವಸರಣಮಂಟಪದೊಳಿ | ರ್ದಧಟನಲ್ಲಿಯ ವಾಸುದೇವ |
ಇದು ತಾನೆಲ್ಲಿಯದೆಂದು ಕೇಳಿದನಾ | ವಿದಿತಬೋಧರು ಗಣಧರರ || ೮೨ ||

ಭೂಪತಿ ಕೇಳಲಿಂತೆಂದರು ಜಂಬೂ | ದ್ವಿಪದ ಭರತಾರ್ಧಚಕ್ರಿ |
ಶ್ರೀಪುರುಷೋತ್ತಮನವನ ಮೈದುನನತಿ | ಕೋಪಕೃತಾಂತಫಲ್ಗುಣನು || ೮೩ ||

ಚರಮಾಂಗನವನ ವಲ್ಲಭೆ ದ್ರೌಪದಿಯೆಂಬ | ತರುಣಿಯ ನಿನ್ನ ಮೈದುನನು |
ದುರುಳತನದಿ ವಂಚಿಸಿ ತಂದು ನಿಜಪುರ | ವರದೊಳು ಸೆರೆಯನಿಕ್ಕಿದನು || ೮೪ ||

ಅದನರಿದಾ ಬೆಂಬಳಿಬಂದವರಾ | ಸುದತಿಯನಲ್ಲಿಂದ ತಂದು |
ಪದಪಿಂದೂದಿದ ಶಂಖಸ್ವರಮೆನ | ಲದಕೇಳಿಯಾ ಶಂಖಚಕ್ರಿ || ೮೫ ||

ಅಸಮವಸೃತಿಯ ಧಿಪಗೆ ವಂದಿಸಿ | ಯೋಸರಿಸದೆ ನಡೆತಂದು |
ಅಸುರಮಪ್ಪಕೋಪದೊಳೊರಿಗೈದಿ ಮ | ಹಾಸೇನೆಯನೆಲ್ಲ ಕೂಡಿ || ೮೬ ||

ಸಂಗರರಂಗಕೆ ನಡೆವ ಸಮಯದೊಳ | ಗಂಗೀಕರಾಮಂತ್ರಿಗಳ |
ಜಂಗುಳಿ ನೆರೆದುಬಂದಿಂತೆಂದರಿದು ನೃಪ | ರಂಗವೆ ಶಂಖಚಕ್ರೇಶ || ೮೭ ||

ಅವಿಚಾರದಿಂ ನಿನ್ನ ಮೈದುನನಾಪರ | ಯುವತಿಯ ವಂಚಿಸಿ ತಂದು |
ಭವನದೊಳಿಡೆ ಸೆರೆಯನು ಪಿಂತನೆಬಂದು | ತವಕದಿಂದಾಬಲ್ಲಿದರು || ೮೮ ||

ತಮ್ಮ ಸೊಮ್ಮನು ತಾಮೊಯ್ಯಲೇತಕೆ ನಿನ | ಗುಮ್ಮಳಮೀವುಜ್ಜುಗವು |
ಸಮ್ಮತವಲ್ಲೆಂದು ಪಲವು ಬುದ್ಧಿಯ ಪೇಳಿ | ಸುಮ್ಮನಿರಿಸೆಯಾ ನೃಪನ || ೮೯ ||

ತಾಮಾಬಳಿಯಿಂ ಬಂದೂರ ಮುಂದಿರ್ದ | ರಾಮಕೇಶವ ಭೀಮನರರ |
ತಾಮರೆವಜ್ಜೆಗೆರಗಿ ಕೈಮುಗಿದು ಸು | ಪ್ರೇಮದಿನಿಂತೆಂದರಾಗ || ೯೦ ||

ಕಡುಗಲಿತನದಿಂದಿಲ್ಲಿಗೆ ಬಂದು ನಿ | ಮ್ಮೊಡವೆಯತಂದು ನೀಮಿಲ್ಲಿ |
ತಡವುದಕೇನುಕಾರಣವೆಂದು ಪಲತೆರ | ದೊಡಬಡಿಕೆಯ ಮಾತಾಡೆ || ೯೧ ||

ಆ ಮಾತನವಧಾರಿಸಿ ರಾಮಕೇಶವ | ಭೀಮಾರ್ಜುನರು ಪುಷ್ಪಕವನು |
ಕೋಮಲೆಯಾ ದ್ರೌಪದಿಗೂಡಿಯಡರ್ದು ಸು | ಪ್ರೇಮದಿ ತಿರುಗಿದರಾಗ || ೯೨ ||

ಬದರೀವನವೊಕ್ಕು ಧರ್ಮಜನನು ಕಂ | ಡಧಟರು ಭೀಮಕಿರೀಟಿ |
ಸದಮಲಚರಿತೆ ಪಾಂಚಾಲಿಯನಲ್ಲಿ ಸ | ಮ್ಮದದಿ ಬಲಾಚ್ಯುತರಿರಿಸಿ || ೯೩ ||

ಕೊಂತಿಮಹಾದೇವಿಯನೊಡಗೊಂಡತಿ | ಸಂತೋಷದಿಂ ನಿಜಪುರಕೆ |
ಅಂತರಿಕ್ಷಪಥದೊಳು ಪೋದರಿತ್ತಲು | ಕೌಂತೇಯರಾ ವಿಪಿನದೊಳು || ೯೪ ||

ನಿಜದೇಶ ನಿಜರಾಜಧಾನಿ ನಿಜಾಲಯ | ನಿಜಬಂಧುಜನದ ಮಧ್ಯದೊಳು |
ನಿಜಸುಖದೊಳಗಿರ್ದಂದದಿನಿರ್ದರು | ನಿಜಭುಬಲಶಾಲಿಗಳು || ೯೫ ||

ಈ ರೀತಿಯಿಂದವಧಿಯ ತಾವು ಕೈಕೊಂ | ಡೀರಾರುವತ್ಸರಕಳೆಯೆ |
ಧೀರೋದಾತ್ತರಲ್ಲಿಂ ಪೋವಕಾರ್ಯಮ | ನಾರೈದಾ ದ್ರೌಪದಿಯನು || ೯೬ ||

ಆ ಪಾಂಚಾಲನ ಬಳಿಗೆಯ್ದಿಸಿ ತಾ | ವಾ ಪಳುವನು ಪೊರಮಟ್ಟು |
ಆ ಪೂರ್ವಮುಖವಾಗಿನಡೆದು ಕಣ್ಗೊಪ್ಪುವ | ಶ್ರೀಪರ್ವತವ ಸಾರಿದರು || ೯೭ ||

ಹರುಷದಿ ಕೆಲದಿನಮಿರ್ದಲ್ಲಿ ಕಾಂಚೀ | ಪುರಕೈದಿ ಕೆಲಪಗಲಿರ್ದು |
ವರುಣದಿಶಾಮುಖವಾಗಿ ನಡೆದು ಬಂ | ದುರುಕರ್ಣಾಟಕಕೆಯ್ದಿ || ೯೮ ||

ಆ ವಿಷಯದೊಳು ರಂಜಿಸುವ ವಿರಾಟಮ | ಹೀವಲ್ಲಭಪುರಕೆಯ್ದಿ |
ಆವೂರಸನ್ನಿಧಿಯೊಳಗಗುರ್ವಿಸುವ ಮ | ಹಾವಿಪಿನದ ಮಧ್ಯದೊಳು || ೯೯ ||

ಕಡುದೊಡ್ಡಿತಪ್ಪ ಬನ್ನಿಯಮರದೊಳು ತಾವು | ಪಡೆದ ದಿವ್ಯಾಸ್ತ್ರಂಗಳನು |
ಮಡಗಿ ವಿದ್ಯಾದೇವತೆಗಳನವಕೆ ಕಾಪ | ನಿಡುತಲ್ಲಿಂ ಬಂದರಾಗ || ೧೦೦ ||