ಚಿನ್ನದ ಬೊಂಬೆಯಂದದಿ ಚಿಕ್ಕಹರೆಯದ | ಚಿನ್ನೆ ಮೆಲ್ಲನೆ ನಡೆತಂದು |
ಉನ್ನತಮಪ್ಪವಿಲಾಸದಿನಾ ಸಂ | ಪನ್ನಸಾಹಸಿಯೆಡೆಗೆಯ್ದಿ || ೧೫೧ ||

ತೊಡೆಸೋಂಕಿ ಕುಳ್ಳಿರಲಾರಮರುತಾತ್ಮಜ | ಮಡದಿ ನೀನೇನು ಕಾರಣದಿಂ |
ನಡೆತಂದು ಕುಳ್ಳಿರ್ದೆ ನೀನಾರ ನಂದನೆ | ನುಡಿ ನಿನ್ನಯ ವೃತ್ತಕವ || ೧೫೨ ||

ಎನಲೆಂದಳೀ ವನನಿದಿಯ ಮಧ್ಯದೊಳಿರ್ಪ | ಜನನುತಸಾಧ್ಯನಗರಿಯ |
ಮನಜೇಶ ಸಿಂಹಘೋಷಣನೆಂಬ ಖಚರನ | ವನಿತೆ ಸುದರ್ಶನೆಯವರು || ೧೫೩ ||

ತನುಜೆ ಸುಕೇಶಿಯೆಂಬಳು ನಾನು ಮತ್ತೆನ್ನ | ಜನಕನೀರ್ವರು ಚಾರಣರ |
ವನಜೋಪಮಾಂಘ್ರಿಗೆ ವಂದನೆಗೆಯ್ದು ಮ | ತ್ತನುನಯಂದಿಂದಿಂತು ನುಡಿದ || ೧೫೪ ||

ಎನ್ನ ತನೂಜೆ ಸುಕೇಶಿಗೆ ವರನಾರು | ಸನ್ನುತರಿದನೆನಗಿರದೆ |
ಮನ್ನಿಸಿ ನಿರವಿಸಿಯೆನಲಾ ವಿಭುಗೆಂದಾ | ರುನ್ನತಬೋಧಸಂಯುತರು || ೧೫೫ ||

ಅರಸಕೇಳಿಚ್ಚಾಪುರಕಮನಿಕಟದೊಳಿ | ರ್ದುರುಕಾಂತಾಮಧ್ಯದೊಳು |
ಪಿರದುಮಗುರ್ವಿಪಾಲದಮರದಿದಿರೊಳು | ಸರಿಯಮದಂಡಕ್ಕೆನಿಪ || ೧೫೬ ||

ರುಧಿರೋದ್ಗಾರಿಯೆಂಬೊಂದು ಗದೆಯನು ಸ | ದ್ವಿಧಿಯಿಂದ ಸಾಧಿಸಿದವಗೆ |
ವಿಧುಮಂಡಲಮುಖಿ ನಿನ್ನ ಮಗಳು ನಿಜ | ವಧುವಪ್ಪಳೆಂದುಸುರಿದರು || ೧೫೭ ||

ಎಂದು ನಿರೂಪಿಸಿದಾಯತಿರಾಯಗೆ | ಬಂದಿಸಿ ನಮ್ಮುಜನಕನು |
ಮಂದೇತರಸೌಖ್ಯದಿಂದಾರಲೊಂದಾ | ನೊಂದುದಿನದದೊಳೀನೆಲದ || ೧೫೮ ||

ವನದಿ ಮಧ್ಯದ ಲಂಕಾದ್ವೀಪದಧಿಪತಿ | ಘನಗತಿ ಖಚರನು ತನ್ನ |
ತನುಜ ಹಿಡಿಂಬಗೆನ್ನನು ಬೇಡಿ ನೇಹದಿ | ಸುವಿವೇಕದೊಳೀನೆಲದ || ೧೫೯ ||

ಅವರು ಬಂದೆಮ್ಮಯ್ಯಗೆ ಕರಗಳ ಮುಗಿ | ದವಿರಳಮಪ್ಪ ಸ್ನೇಹದೊಳು |
ವಿವರಿಸಿ ನನ್ನ ಬೇಡಿದೊಡುಸುರಿದನು | ಸುವಿವೇಕದೊಳಿಂತೆಂದು || ೧೬೦ ||

ಆ ದೂತರ ಕೂಡೆಯಾಮುನಿಪತಿ ಪೇಳಿ | ದಾದೇಶಮನೆನ್ನ ಜನಕ |
ಸಾದರದಿಂ ಪೇಳವರಾಖಗಗೆ ನಿ | ವೇದಿಸದರು ನನ್ನ ತೆರನ || ೧೬೧ ||

ಅದನರಿದಾಹಿಡಂಬನ ದಿವ್ಯಮಪ್ಪೀ | ಗದೆಯನರ್ಚಿಸಿಯೀಯಡೆಯೊಳು |
ಪದೆದು ಸಾಧಿಸಿತಿರ್ದನನದು ಕಾರಣದಿಂ | ದಿದು ಹಿಡಿಂಬವನಮಾಯ್ತು || ೧೬೨ ||

ನಾನಾದೇಶಪುರವನಿಚ್ಚೆಯಿಂ ಬಂ | ದಾನಂದದೀಂದೀ ಹಿಡಿಂಬ |
ಕಾನನದೊಳಗಿರಲೆನಗೀ ಹಿಡಿಂಬೆಯಂ | ಬಾ ನಾಮಸಂಭವಿಸಿದುದು || ೧೬೩ ||

ದುರುಳನ ದೆಸೆಯಿಂದೀವೊತ್ತಿನಿಚ್ಚಾ | ಪುರಮೀನಾಡುಪಾಳಾಯ್ತು |
ಗರುವ ಕೇಳೆನ್ನ ಪುಣ್ಯದಿ ನಿನ್ನ ದರ್ಶನ | ದೊರಕಿದುದೆಂಬಾಗಲತ್ತ || ೧೬೪ ||

ದಿಟ್ಟ ಹಿಡಂಬ ಸನ್ಮಂತ್ರಸಮಾಪ್ತನಾ | ದಿಟ್ಟಿದೆರದು ದಿವ್ಯಗದೆಯ |
ದಿಟ್ಟಿಸಿ ಕಾಣದೆ ನಾನುದಿನಮನ | ಮುಟ್ಟಿ ಸಾಧ್ಯವ ಮಾಡಿದುದನು || ೧೬೫ ||

ಅವಿಚಾರದಿನೊಯ್ದನವನು ರಾಕ್ಷಸನೋ | ದಿವಿಜನೋ ವಿದ್ಯಾಧರನೋ |
ಅವನ ತಲೆಯ ಸೆಂಡಾಡುವೆನೆಂದತಿ | ತವಕದಿನಲ್ಲಿಂದೆಳ್ದು || ೧೬೬ ||

ಆ ವಿಪಿನಾಂತರದೊಳಗರಸುತ ಬಂ | ದಾ ವಿಟಪಿಯ ಮೂಲದೊಳು |
ಆ ವನಿತಾಮಣಿಯೊಡನಿರೆ ಕುಳ್ಳಿ | ರ್ದಾ ವಾಯುಪುತ್ರನ ಕಂಡು || ೧೬೭ ||

ಚಂಡಕೋಪದಿನೆಲವೋಯೆನ್ನ ಗದೆಯನು | ಕೊಂಡೋಯ್ದವನೇ ನೀನು |
ಹಿಂಡುವೆನಸುವ ನಿನ್ನಂಗದಿಂದೆಂದು | ದ್ದಂಡನೊಂದು ದಂಡವಿಡಿದು || ೧೬೮ ||

ಕೊಡು ಕೊಡು ಪುಲಮಾನಿಸಯೆನ್ನ ಗದೆಯನೆಂ | ದೊಡನೆತ್ತಿ ವೊಯ್ದು ರಕ್ಕಸನ |
ಕಡುದೊಡ್ಡಿತಪ್ಪಗದೆಯನೆಡಗೈಯೊಳು | ಪಿಡಿದಾಫಳ್ಗನಾಗ್ರಜನು || ೧೬೯ ||

ಆ ರಕ್ಕಸನು ಮಲ್ಲಯುದ್ಧವ ಮಾಡಲು | ಮಾರುತಿಯವನು ಕಾಲ್ವಿಡಿದು |
ತಾರಗೆಯದುರಿ ಪೂರ್ಣಿಸಲೆಣ್ದೆಸೆಯಾ | ಧಾರಣಿಗಪ್ಪಳಿಸಿದನು || ೧೭೦ ||

ತ್ರಿಭುವನೈಕವೀರನತಿಕೋಂಪದಿಂದಾ | ಸುಭಟನ ನೆಲಕಪ್ಪಳಿಸಿದ |
ರಭಸಕ್ಕಾಮರದಡಿಯೊಳಗೊರಗಿರ್ದ | ವಿಭುಗಳೆಲ್ಲರು ಕಣ್ದೆರದು || ೧೭೧ ||

ಏನಿದಚ್ಚರಿಯೆಂದು ಕೇಳ್ದಣ್ಣನೊಳು ಭೀಮ | ಸೇನನು ತದ್ವೃತ್ತಕವನು |
ತಾನೊರೆಯಲು ಕೇಳಿಯನುಜನ ಸಾಹಸ | ಕಾನಂದವೆತ್ತಿರಲು || ೧೭೨ ||

ಅನಿತರೊಳಿನನುದಯಿಸಲಲ್ಲಿಂ ಧರ್ಮ | ತನಜನನುಜರೊಡಗೂಡಿ |
ಅನುರಾಗದಿ ಮುಂದಕೇಳ್ವವೇಳೆಯೊಳಾ | ವನಿತೆ ಕರಾಬ್ಬವ ಮುಗಿದು || ೧೭೩ ||

ಮನುನಿಭಚರಿತರಿರಾ ಬಿನ್ನಪವಿಲ್ಲಿ | ಗನತಿದೂರದೊಳವನಿಂದ |
ಜನನುತಮಿಚ್ಛಾಪುರ ಪಾಳಾಗಿರ್ಪ | ದನುನಯದಿಂದಲ್ಲಿಗೆಯ್ದಿ || ೧೭೪ ||

ಮುಂದಕೆ ಬಿಜಯಂಗೆಯ್ದುದೆಂದಾಗ್ರಹ | ದಿಂದಾಪಾಂಡುನಂದನರ |
ಬಂದುಗೆದುಟಿಯ ಬಾಲಕಿ ನಡೆಯಿಸಿಕೊಂಡು | ಬಂದಾಪುಳಲನೈದಿದಳು || ೧೭೫ ||

ಅನಿತರೊಳಾಹಿಡಿಂಬೆಯ ಜನಕನು ತನ್ನ | ತನುಜೆ ತಡೆದು ಬಾರದುದಕಕೆ |
ಮನದ ಮರುಕದಿಂದ ಘನಪಥವಿಡಿದಲ್ಲಿ | ಗನುಗನುದಿಂದೆಯ್ದಿದನು || ೧೭೬ ||

ಬಂದಾಕಾರಣಪುರುಷರ ಕಂಡ | ಲ್ಲಿಂದ ಮರುತಮಾರ್ಗದೊಳು |
ತಂದು ತನ್ನಾನಗರಿಗೆ ಕಡುಸನ್ಮಾನ | ದಿಂದಾ ತನ್ನ ನಂದನೆಯ || ೧೭೭ ||

ಆಕೆಯನಂಗಸಂಭವನ ಸಲ್ಲಿಲಿತಪ | ತಾಕೆಯನತಿ ವಿಭವದೊಳು |
ಲೋಕೈಕವೀರ ಭೀಮಗೆ ಮದುವೆಯನಾ | ಭೂಕಾಂತನು ಮಾಡಿದನು || ೧೭೮ ||

ಈ ತೆರದಿಂದ ಮದುವೆಯನನಿಲತನು | ಜಾತನು ತಳದೊಂದು ದಿವಸ |
ಪ್ರೀತಿಯಿಂದೊಡವೆರದಿರೆ ಗರ್ಭ ತಲೆದೋರಿ | ಯಾತನ್ವಿ ಹಡೆದಳು ಮಗನ || ೧೭೯ ||

ಆ ಮಗುವಿಗೆ ಧರ್ಮಸುತನು ಘಟೋದ್ಗಜ | ನಾಮವಿಟ್ಟು ಕೆಲದಿವಸ |
ಪ್ರೇಮದಿನಿರ್ದಲ್ಲಿಂ ಪೋಗಲೆಂದೆಂ | ಬಾಮಾತನಾಸಿಂಹಘೋಷ || ೧೮೦ ||

ಕೇಳಿ ಚಿಂತಿಸುತಿರಲವನ ಸಂತೈಸಿ ತ | ದ್ಬಾಲೆ ಹಿಡಿಂಬೆಯನಿರಿಸಿ |
ಲೀಲೆಯಿಂದಾಪುರವನು ಪೊರಮಟ್ಟು ವಿ | ಶಾಲವಿಕ್ರಮರೆಯ್ದಿದರು || ೧೮೧ ||

ಸುಲಲಿತಮಪ್ಪಂಗದೇಶದ ಹೊಕ್ಕಾ | ಕಲಿಕರ್ಣನ ಕೀರ್ತಿಯನು |
ಸಲೆಪೊಗಳ್ವಕ್ಕರಿಗರ ಮಾತುಗೇಳುತ | ಬಲವಂತರೊಂದುದಾರಿಯೊಳು || ೧೮೨ ||

ಓರ್ವಧರಾಮರನನು ಕಂಡು ಮತ್ತಾ | ದೋರ್ವಲಶಾಲಿಗಳವನ |
ಪಾರ್ವನೀನೆಲ್ಲಿಂದಿಲ್ಲಿಗೆ ಬಂದೆಯಾ | ವೂರ್ವಿಯೊಳಗೆ ವಾರ್ತೆಯನು || ೧೮೩ ||

ಎನಲಾಧರ್ಮನಂದನದಗಾಪಾರ್ವನು | ವಿನಯದೊಳಿಂತು ನುಡಿದನು |
ಜನನುತಮಪ್ಪ ಪಾಂಚಾಲದೇಶಕೆಮುಖ್ಯ | ಮೆನಿಪ ಮಹೇಂದ್ರನಗರಿಯ || ೧೮೪ ||

ದ್ರುಪದಮಹೀವಲ್ಲಭನಾತನಸುತೆ | ಉಪಮಾತೀತವಿಲಾಸೆ |
ಅಪರಿಮಿತಕಲಾನ್ವಿತೆ ದ್ರೌಪದಿಯೆಂಬ | ಚಪಲಲೋಚನೆಯೊಪ್ಪಿದಳು || ೧೮೫ ||

ತೊಳಗುವಶೋಕೆಯೆಳೆಉಯುತಳಿರುಗಳೊ | ಪೊಳೆವ ಪವಳವಾವುಗೆಗಳೋ |
ಎಳೆನೇಸರುಗಂಡಕೆಂದಾವರೆಗಳೋ | ಲಲನಾಮಣಿಯಂಘ್ರೀಗಳೋ || ೧೮೬ ||

ಎಳೆದಳಿರ್ದಳತುದಿಯೊಳು ಮಂಜುವನಿಗಳ | ತಳತಳಿಸುವ ಮಾಳ್ಕೆಯೊಳು |
ಲಲಿತಲತಾಂಗಿಯೆಸೆವ ಕೇಸಡಿಯೊಳು | ಪೊಳೆದುವು ಬೆಳ್ಳಿಗುರುಗಳು || ೧೮೭ ||

ಮಮತೆಮನದೊಳಿಲ್ಲದಯತಿಗಳ ಮೈಯ | ನಮತಿಪಿಡವ ರತಿಪತಿಯ |
ಸಮದಳಮಳ್ಗಾಲ್ಗಳ ಸುಂದರತೆಯ | ಸಮಾನಾದವೂರು ಮಾನಿನಿಯ || ೧೮೮ ||

ಮನಸಿಜನೇರುವ ಮಾಡುವಟ್ಟೆಗಳೋ | ಮಿನುಗುವ ಮಳಗುಪ್ಪೆಗಳೋ |
ನನೆಗಣೆಯನ ಹೂದೇರ ಚಕ್ರಗಳೋ | ವನಿತೆಯ ಗುರುನಿತಂಬಗಳೋ || ೧೮೯ ||

ಸುದತೀಜನವ ತೊರೆದ ಯತಿಪತಿಗಳ | ಮದವೆಂಬ ಗಜಮಸ್ತಕಗಳ |
ಮಿದುಳ ಕೆದರುವ ಸಿಂಗದ ನಟ್ಟನಡುವಿನ | ಪದಪ ಗೆಲ್ದುದು ನಡುವವಳ || ೧೯೦ ||

ಸರಸಲಾವಣ್ಯವಾರಾಶಿಯಾವರ್ತವೋ | ಸ್ಮರಕೇಳೀಯಂಬುಜಾಕರವೋ |
ವರಮೋಹಮಂತ್ರಾಕ್ಷರಗಳು ಬಿಂದುವೋ | ತರುಣಿಯ ನಾಭಿವಲಯವೋ || ೧೯೧ ||

ಎಳೆಯ ವಿಟರ ಮನಮೆಂಬಹಸಮಿತಿಯ | ತಳರಲೀಯದೆ ಹರಿತನಯ |
ತಳುವದೆ ಬರೆಯಲೊಪ್ಪಿದ ಮೂರೇಖೆಯ | ತರುಣಿಯ ನಾಭಿವಲಯವೋ || ೧೯೨ ||

ಆ ಸುಳಿನಾಭಿಕೊಡದೊಳಿರ್ದಮೃತಮ | ನೋಸರಿಸದೆ ರತಿ ಕಡೆವ |
ಭಾಸಿಪ ನೀಲದ ಕಡೆಗೋಲಿನಂದವ | ಬಾಸೆ ತಾಳಿತು ಬಾಲವಧುವ || ೧೯೩ ||

ಕುಸುಮಾಯುಧ ಚಕ್ರಿಯೆಸೆವಮಳ್ಗುಡಿಯೋ | ಶಶಿಯ ಸಮ್ಮುಖದ ತಾವರೆಯೋ |
ಅಸಮಾಸ್ತ್ರನರಸಿಯಾಡಿಪ ಹೊನ್ನ ಬೊಗರಿಯೋ | ಪೊಸ ಜವ್ವನೆಯ ನೆಲೆಮೊಲೆಯೋ || ೧೯೪ ||

ನನೆವಿಲ್ಲನೀರನ ಕೈಯ ಪಾಂಶುಗಳೋ | ಕನಕಾಂಬುಜದ ನಾಳಗಳೋ |
ಮಿನಗುವ ಮೋಹವಿಲ್ಲಿಯ ಬಿಳಲುಗಳೋ | ವನಿತೆಯ ಲಲಿತಬಾಹುಗಳೋ || ೧೯೫ ||

ಸಿರಿಮೊಗಮೆಂಬರನ್ನದ ಕನ್ನಡಿಯನು | ಧರಿಸಿದ ಹೊನ್ನಹಿಡಿಯನು |
ಸರಿಮಾಡಿದ ಸುದತಿಯ ನುಣ್ಗೊರಲನು | ವೊರೆವೆನಿನ್ನೀನೆಂದದನು || ೧೯೬ ||

ಕಿಲುಬುಹಡೆದು ಮಾಸದ ನವಮುಕುರವ | ಕಲೆಯುಡುಗದ ಪೂರ್ಣವಿಧುವ |
ಸಲೆ ಕೆಸರೊಳಗೊಗೆಯದ ಕನಕಾಬ್ಜವ | ಗೆಲಿದುದು ಮುಖಮುಗ್ಧವಧುವ || ೧೯೭ ||

ಸ್ಮರನೀರಪಿಡಿದ ಕೆಂಪಿನ ಗುಂಬದಡಿಯೋ | ಅರುಣಮಣಿಯೋ ಕೆಂಬರೆಯೋ |
ತರುಣಪಲ್ಲವವೊ ಬಿಂಬವೊ ಬಂದುಗೆಯೋ | ತುರುಣಿಮಣಿಯ ಚೆಂದುಟಿಯೋ || ೧೯೮ ||

ಸಲೆವಿಕ್ರತ ದೈರ್ಯಮೆಂಬ ಬಲ್ಮೊರಡಿಯ | ಬಲಿದು ಛಿದ್ರಿಪ ವಜ್ರಮಣಿಯ |
ಗೆಲಿದೆಸೆದುವು ಸುಲಿಪಲ್ಗಳ ಪಂಙ್ತೆಯು | ಲಲಿತಲತಾಕೋಮಲೆಯ || ೧೯೯ ||

ರತಿಪತಿ ಪಿಡಿದ ಪೇಟಲಹೊಂಗೊಳವೆಯೋ | ಅತಿರಂಜಿಸುವೆಳ್ಳನನೆಯೋ |
ಹಿತವಳೀಗಾದರೆಮುಗುಳಸಂಪಗೆಯೋ | ಸತಿಯ ನಾಸಿಕದಚಲ್ವಿಕೆಯೋ || ೨೦೦ ||

ಬಿಳಿಯ ತಾಮರೆಯಸಳ್ಳಳ | ನಡುವಳಿಯೊಳು | ತೊಳತೊಳಪಳಿಕಳಭಗಳು |
ಎಳಸಿ ಕುಳ್ಳಿರ್ದಮಾಳ್ಕೆಯೊಳು ಲೋಚನೆಗಳು | ಪೊಳೆದವವಳ ವದನದೊಳು || ೨೦೧ ||

ಹರಿಯಕುಮಾರನ ಬಡಿಕೋಲ್ಗಳಿರವೋ | ಅವಲಂಬಿಸಿತೇಕ್ಷುಧನುವೋ |
ಸ್ಮರನೆಡಗೈಯೆರಲೆಯ ಕೊಂಬಿನನುವೋ | ಸರಸಿಜಾಕ್ಷಿಯ ಕುಡುವುರ್ವೋ || ೨೦೨ ||

ಅಲರಂಬಿನಧಟಿಂದೆಲ್ಲಾ ಪೊಡವಿಯ | ಬಲಿದೆಚ್ಚು ಜಯಿಸಿದಬಳಿಯ |
ಗೊಲೆಯನಿಳುಹಿ ಮುಡಗಿದ ಸಿಂಗಾಡಿಯ | ಗೆಲಿದುವು ಕಿವಿ ಕೋಮಲೆಯೆ || ೨೦೩ ||

ಮಡದಿಮಣಿಯ ಮುಕುರೋಪಮ ವದನೆಯ | ಕಡುರಂಜಿಪ ತೆಳುವಣೆಯ |
ಪಡಿಯೆನಬಹುದೆಯೆನುತ ಸುರಸಮುದಾಯ | ಕಡಿದು ಕೊರೆವರಾಹೆರೆಯ || ೨೦೪ ||

ತೊಳಗುವ ತೆಳ್ವಣೆಯಂ ಬಿಂದುಲೇಖೆಯ | ಕೆಳೆಗೊಂಡು ಮರಿಗಳ್ತಲೆಯ |
ಇಳಿಕೆಯ್ದು ರಂಜಿಸಿದವು ಕೋಮಲಾಂಗಿಯ | ಅಳಿಗುರುಳುಗಳ ನಿಕಾಯ || ೨೦೫ ||

ಎಸೆವಪರಂಜಿಯ ತಗಡ ಬಣ್ಣಿಗೆಯನು | ಮಿಸುಪ ಸಂಪಗೆಯ ಧಾತುವನು |
ಪೊಸಪುಷ್ಯರಾಗರತ್ನದಕಡುರುಚಿಯನು | ಅಸಿಯಳಂಗಕೆ ಹೋಲಿಸುವೆನು || ೨೦೬ ||

ಸರಸತಿ ಪಿಡಿದು ಬಾಜಿಪಕಿನ್ನರಿಯೋ | ಸ್ಮರಧನುವಿನ ಜೇವೊಡೆಯೋ |
ವರವನಸತಿಯ ದೀವದ ಕೋಗಿಲೆಯೋ | ಗರುವೆಯವಳಣ್ನುಡಿಯೋ || ೨೦೭ ||

ಅರಲಂಬಡರ್ವ ಸೊಕ್ಕಾನೆಯ ನಡೆಯನು | ಅರಸಂಚಿಯ ಗಮನವೆನು |
ಪರಿಪೂರ್ಣಚಂದ್ರಮಂಡಲದ ಸದ್ಗತಿಯನು | ಸರಿಮಾಳ್ಪೆವಳಯಾನವನು || ೨೦೮ ||

ಪಡೆಯ ಜವ್ವನಮನವಳು ಕಾವನಾಬಿದಿ | ಮೃಡಮುರರಿಪುಗಳ ಮೇಲೆ |
ತೊಡರನಿಕ್ಕಿದನದರಿಂದಾಕೆಗೆ ರೂಪು | ಗೆಡೆಯಾಗಿ ಕಣ್ಗೊಪ್ಪಿದುದು || ೨೦೯ ||

ಅರಸಕೇಳವನಾಯುಧಶಾಲೆಯೊಳೊಂ | ದುರುತರು ಕಾಳದಂಡವನು |
ಪಿರಿದುಗೆಲುವ ದಿವ್ಯಧನುವುದಯಿಸಿತದ | ನರಸು ಮುದದಿ ಪೂಜೆಗೆಯ್ದು || ೨೧೦ ||

ಇರಲಿಲ್ಲಗವಧಿಬೋಧನ ಮುನಿಪತಿಯೋರ್ವ | ಬರಲಾತಗೆ ಪೊಡಮಟ್ಟು |
ಕರವಮುಗಿದು ಕೇಳ್ದನೆನ್ನೀ ತನುಜೆಗೆ | ವರನಾವನಾಗುವನೆಂದು || ೨೧೧ ||
ಎನಲಿಂತೆಂದರೆಲೇ ನೃಪವರ ನಿನ್ನ | ಮನೆಯೊಳೊಗೆದ ಕಾರ್ಮುಕವ |
ಇನಿಸುವೇಗದೊಳೇರಿಸಿ ಗಗನದೊಳು ತಿ | ರ್ರನೆ ಭರದಿಂ ಭ್ರಮಿಯಿಸುವ || ೨೧೨ ||

ಜಂತ್ರದ ಜಲಚರವನು ಭೂವರತಳ | ತಂತ್ರಮೆಲ್ಲವು ಪೊಗಳ್ವಂತೆ |
ಮಂತ್ರಾಸ್ತ್ರದಿಂದೆಚ್ಚರ್ಜುನ ಸೇನಾ | ಸಂತ್ರಾಸಕನೆ ಪತಿಯಹನು || ೨೧೩ ||

ಎಂದು ನುಡಿಯಲೀಕಾರ್ಯ ಧನಂಜಯ | ನಿಂದಲ್ಲದೆ ಯಾಗದವಗೆ |
ನಂದನೆ ನಲ್ಲಳಾಗುವಳಿದು ನಿಶ್ಚಯ | ಮೆಂದಾ ನೃಪವರನಿರಲು || ೨೧೪ ||

ಲಾಕ್ಷಾಲಯದೊಳಗಾಪಾಂಡವರಾ | ಯಃಕ್ಷಯಮಾದವಾರ್ತೆಯನು |
ಆ ಕ್ಷಿತಿಪತಿ ಕೇಳಿ ದುಃಖಿಸಿಯೋರ್ವ ಮು | ಮುಕ್ಷಗೆರಗುತಿಂತುನುಡಿದ || ೨೧೫ ||

ದಿವ್ಯಾವಧಿಬೋಧನೆ ಕೇಳು ಸಜ್ಜನ | ಸೇವ್ಯಮಪ್ಪಾಪಾಂಡವರು |
ಹವ್ಯವಾಹನನು ಸುಡಲು ಸತ್ತವಾರ್ತೆ ತಾ | ಸವ್ಯವಹಿತಮಾದುದೀಗ || ೨೧೬ ||

ನಿರುತವೊಯೀವಾರತೆಯೆನಲಾಮುನಿ | ಯೊರೆದನಿಂತೆಂದು ಪಾಂಡವರು |
ಚರಮಾಂಗರವರಿಗೆ ಕೇಡಿಲ್ಲಾಸ್ವಯಂ | ವರಮಂಟಪಕೊಡಗುವರು || ೨೧೭ ||

ಜನನಾಥರೆಲ್ಲರ್ದಂದದಿನಾಫ | ಲ್ಗುಣನಾಜಂತ್ರಮನೆಸುವ |
ಮನುಜೇಶ ನಿನ್ನ ಮಗಳು ದ್ರೌಪದಿ ನಿಜ | ವನಿತೆಯಪ್ಪಳು ನಂಬಿ ಪೋಗು || ೨೧೮ ||

ಎನಲಾನೃಪವರಸ್ವಯಂವರವನು | ಮನಗೊಂಡು ಮಾಡಿಸಿ ಬಳಿಕ |
ಮನುಜಾಧೀಶರನೆಲ್ಲರನಲ್ಲಿಗೆ | ವಿನಯಮೊದವೆ ಕರೆಸಿದನು || ೨೧೯ ||

ಎಂದಾವಾರ್ತೆಯನೊರೆದಾ ಪಾರ್ವನ | ನಂದಾನೃಪರು ಬೀಳ್ಕೊಟ್ಟು |
ಅಂದವಡೆದ ಪಾಂಚಾಲನ ಪುರಕಾ | ನಂದದಿ ನಡೆತಂದರಾಗ || ೨೨೦ ||

ಅನಿತರೊಳಾಪಲಗಲಳಿಯಲ್ಕಾಮರು | ದಿನದುದಯದೊಳು ಮುನ್ನೆರಿದ |
ಜನಪತಿಗಳನು ಸ್ವಯಂವರಕಾದ್ರುಪ | ದನ ಸಚಿವರು ಬರಿಸಿದರು || ೨೨೧ ||

ನಾನಾ ರತ್ನದಚೌಪಳಿಗೆಯೊಳಾ | ಭೂನಾಥರನು ಕುಳ್ಳಿರಿಸಿ |
ಮಾನಿನಿಯನು ಸಿಂಗರಿಸಿಯೆಂದು ದ್ರುಪದಮ | ಹೀನಾಥನು ನಿರವಿಸಲು || ೨೨೨ ||

ಆತನ ಸತಿ ದೃಡರಥೆ ತನ್ನಾತನು | ಜಾತೆಗೆಣ್ಣೆಯನೊತ್ತಿಸಿದಳು |
ಪ್ರೀತಿಯಿಂದಂಗಭವನ ಪುಷ್ಪಬಾಣಕ್ಕೆ | ಓತು ಬಾಸಟಮಿಕ್ಕುವಂತೆ || ೨೨೩ ||

ಸುರಲರಿಕೆಗೆ ಸನದಿವ್ಯೋದಕವನು | ಸುರನಾರಿಯರೆರೆವಂತೆ |
ಹರುಷಮೊದವೆ ಮಜ್ಜನಂಬೊಗಿಸಿದರಾ | ಅರಮಗಳ್ಗಾ ಕೆಳದಿಯರು || ೨೨೪ ||

ಪುಳಿನತಳವ ಬಳಸಿದ ನೀರತೆರೆಯಂತೆ | ಲಲನೆಯ ಗುರುನಿಂತಂಬದೊಳು |
ಕೆಳದಿಯರುಗಳುಡಿಸಿದ ದುಗುಲದ ನಿರಿ | ತೊಳತೊಳತೊಳಗಿದುವವಳ್ಗೆ || ೨೨೫ ||