ರೂಪಪರಾವರ್ತನವಿದ್ಯೆಯಿಂ ನಿಜ | ರೂಪವ ಪಲ್ಲಟಮಾಡಿ |
ರೂಪಮನ್ಮಥಧರ್ಮಜನು ಧರಾಮರ | ರೂನು ಕೈಕೊಂಡುಬಳಿಕ || ೧೦೧ ||

ಕ್ಷೋಣಿಯೊಳಿಂತಪ್ಪ ಪಾರ್ವನ ರೂಪನು | ಕಾಣೆವೆನುತ ಪುರಜನವು |
ಮಾಣದೆ ನಿಂದು ನೋಡುತ್ತಿರಲವನು ಪು | ರಾಣಭಟ್ಟವೆಸರಾಂತು || ೧೦೨ ||

ಇಂತು ನಡೆದುಬಂದಾಮಹೀಪತಿಯ ಸ | ಭಾಂತರಾಳವ ಪೊಕ್ಕವಗೆ |
ಸಂತಸದಿಂದಕ್ಷತೆಯನಿಟ್ಟಾಸತ್ಯ | ವಂತನು ಹರಿಸಿಕುಳ್ಳಿರ್ದು || ೧೦೩ ||

ಬಳಿಕಮುಪನ್ಯಾಸಮನಲ್ಲಿಯ ಬುಧ | ರೆಳಸಿ ಕೇಳ್ವಂತುಚ್ಚರಿಸಲು |
ಇಳೆಯಾಧಿಪಮೆಚ್ಚಿಯವಗೆ ಜೀವಿತವ ವೇ | ಗ್ಗಳಮಾಡಿ ನಿಲಿಸೆ ಮತ್ತಿತ್ತ || ೧೦೪ ||

ಮಾರುತಿಯಾಮಹೀಪತಿಯ ಕಾಣಲು ನೀ | ನಾರೆನಲಾನು ಸುವ್ವಾರ |
ಧಾರಿಣಿಯೊಳು ಮಲ್ಲಯುದ್ಧದೊಳೆನಗಿದಿ | ರಾರಿಲ್ಲವೆಂದಲ್ಲಿ ನಿಲಲು || ೧೦೫ ||

ಮತ್ತೆ ಕಿರೀಟಿ ನಟ್ಟುವನಾ ನಕುಲನ | ತ್ಯುತ್ತಮ ಹಯಶಿಕ್ಷಕನು |
ಮೊತ್ತದಹಟ್ಟಿಯ ತರುವಿಗಧ್ಯಕ್ಷ ಗು | ಣೋತ್ತಂಸನಾ ಸಹದೇವ || ೧೦೬ ||

ಇಂತೀ ರೂಪವ ಕೈಕೊಂಡಾ ಭೂ | ಕಾಂತನ ಸಮ್ಮುಖವಾಗಿ |
ತಂತಮ್ಮ ತೆರನ ಪೇಳಲು ಕೇಳಿಯವರ ನಿ | ಶ್ಚಿಂತದಿನಿರಿಸಿದನವನು || ೧೦೭ ||

ಇಂತು ಮೈಗರೆದಾಮತ್ಸ್ಯನಗರಿಯೊಳು | ಕೌಂತೇಯರಿರಲೊಂದು ದಿವಸ |
ಅಂತಕನೇಯಂದವಡೆದೆಯ್ದಿದನೋಯೆಯಂ | ಬಂತೋರ್ವನತಿ ಬಲಯುತನು || ೧೦೮ ||

ಬಲ್ಲಿದನವನು ವಿಷಮಖರ್ಪರನೆಂಬ | ಮಲ್ಲನಾ ಪುರವರಕೆಯ್ದಿ |
ಉಲ್ಲಾಸದಿಂ ಕೀಚಕನೆಂಬವನ ಮುಖ | ದಲ್ಲಿ ವಿರಾಟನ ಕಂಡು || ೧೦೯ ||

ಮಲ್ಲಗಾಳೆಗದೊಳಗೆನಗಿದಿರಾಗುವ | ಬಲ್ಲಿದರನು ತಂದು ನಿಲಿಸು |
ನಿಲ್ಲದೆನಲು ಬಾಣಸಿಗವೇಷವನಾಂತ | ಗೆಲ್ಲಕಾರನು ಭೀಮಸೇನ || ೧೧೦ ||

ಎಲವೋ ವಿಷಮಖರ್ಪರ ನಿನ್ನೊಳಗುಳ್ಳ | ಬಲುಹನೆನ್ನೊಳು ತೋರೆನಲು |
ನೆಲದಾಣ್ಮನುರುಮುದದಿಂ ಮಲ್ಲರಂಗಮ | ನೆಲೆಮಾಡಿಸಿ ಕುಳ್ಳಿರಲು || ೧೧೧ ||

ಇದಿರಾದ ಜಗಜಟ್ಟಿಯ ಕಂಡು ಕೋಪದಿ | ನಧಟರದೇವಸುವ್ವಾರ |
ಮದದಂತಿಯನುಮರ್ದಿಪ ಸಿಂಹದಂದದಿ | ನದಿರದೆ ನೆಲಕಿಕ್ಕಿದನು || ೧೧೨ ||

ಅದನುಕಂಡಾ ಮತ್ಸ್ಯನೃಪನ ಮೈದುನನತಿ | ಮದಯುತನಾ ಕೀಚಕನು |
ಪುದಿದ ಕೋಪದೊಳಿದಿರಾಗಿ ಖಡ್ಗವ ಪಿಡಿ | ದೊದರಿ ಬರಲು ಪವನಜನು || ೧೧೩ ||

ಅವನ ಖಡ್ಗವನು ಸೆಳೆದುಹಾಕಿ ಕಾಲ್ವಿಡಿ | ದವನೀತಳದೊಳಪ್ಪಳಿಸಿ |
ಜವನ ದಾಡೆಯೊಳಿಕ್ಕಲಾ ನೃಪತಿಯ ಸಭೆ | ಯವಧರಿಸಿದುದು ವಿಸ್ಮಯವ || ೧೧೪ ||

ಅಂತಾದುದನು ಕಂಡಾ ಮತ್ಸ್ಯನೃಪತಿಯಿಂ | ತೆಂದನೆಲೇ ಬಾಣಸಿಯೆ |
ಭ್ರಾಂತಕೀಚಕನು ಜಟ್ಟಿಯಸಲುವಾಗಿ ತ | ನ್ನಿಂ ತಾನೆಯಳಿದು ಹೋದುದಕೆ || ೧೧೫ ||

ನಿನ್ನ ಮನದೊಳೆಣಿಕೆಯಮಾಡಬೇಡೆಂದು | ಮನ್ನಿಸಿ ಕಳುಹಲೆಯ್ತಂದು |
ನನ್ನಿಕಾರರು ಪಾಂಡವರು ಮೈಗರೆದಿರ | ಲನ್ನೆಗಮಿತ್ತ ಕೌರವಗೆ || ೧೧೬ ||

ಅವಧಿಯೀರಾರುಸಂವತ್ಸರಮಾ ಪಾಂ | ಡವರಿಗೆ ಪರಿಪೂರ್ಣವಾಯ್ತು |
ಅವರಿರ್ದಜ್ಞಾತವಾಸದ ನೆಲೆಯನು | ವಿವರಿಸದ ವಿಚಾರದಿಂದ || ೧೧೭ ||

ಇಂತು ಮೆಲ್ಲನೆ ಮಾಡಿಕೊಂಡಿಹರೇ ಭೂ | ಕಾಂತ ಕೇಳೆನುತಾ ಶಕುನಿ |
ಮಂತಣವನು ಮಾಡಲದ ಕೇಳಿಯಾ ಭೀಷ್ಮ | ರಿಂತೆಂದರಿಳೆಯವಲ್ಲಭಗೆ || ೧೧೮ ||

ಎಲೆ ಮಗನೇ ಕೇಳವರವಧಿಯದಿನ | ಸಲೆ ಸಂದಿತಂತದರಿಂದಾ |
ಕಲಿಗಳ ಕರೆಸಿಯವರನಾಡುಬೀಡುವ | ನೊಲಿದೀವುದುಚಿತವು ನಿನಗೆ || ೧೧೯ ||

ಅಲ್ಲದಿರ್ದೊಡೆ ಕಾರ್ಯ ತಪ್ಪುವುದೆನಲಾ | ಸೊಲ್ಲಿಗೆ ಕೋಪಾಗ್ನಿಯೊಗೆದು |
ಪೊಲ್ಲಮುನಿಸಿನಿಂದಿಂತೆಂದ ನೀವಾರ | ಗೆಲ್ಲವ ಹಾರೈಸುತಿಹಿರಿ || ೧೨೦ ||

ಎನುತೆಂದನೆನ್ನೀಕರ್ಣನೋರ್ವಗೆ ಲೋಕ | ದನಿಮಿಷದನುಜಪನ್ನಗರು |
ಮೊನೆಯೊಳಗಿದಿರಾಗಲಣ್ಮರದರಿನೆನ್ನ | ಘನತರಮಪ್ಪ ಸೇನೆಯೊಳು || ೧೨೧ ||

ಹರಿಹರವಿಧಿಗಳ್ಗೆ ಹರುವ ಹೇಳುವೆವೆಂಬ | ದೊರೆಗಳು ನಿಮ್ಮರಿಕೆಯೊಳು |
ಧರೆ ಹೊರದಂತತಿರಥರು ಮಹಾರಥ | ರಿರಲೆನಗೇಕೆ ವಿಚಾರ || ೧೨೨ ||

ಎಂದು ಕೌರವ ತನ್ನ ಗರ್ವವನುಸುರಲು | ಮಂದಾಕಿನಿಯನಂದನನು |
ಮುಂದಣ ಕಾರ್ಯವ ನೀನೇ ನೋಡಿಕೊ | ಳ್ಳೆಂದು ಮನೆಗೆ ಪೋಗಲಿತ್ತ || ೧೨೩ ||

ಬಳಿಕ ವಿಚಾರಪರಂಪರದೂತರು | ಗಳನು ಕರೆಸಿ ಪಾಂಡವರು |
ಹಳುವಿನೊಳಗೆ ಹನ್ನೆರಡುವರುಷಮಿರ್ದು | ಬಳಿಕೆಲ್ಲಿಗೆಯ್ದಿದರವರು || ೧೨೪ ||

ತಿಳಿದು ಬೇಗದಿ ಬನ್ನಿಮೆಂದು ಕಳುಹಲವ | ರಲಸದೆ ಬಂದೆಲ್ಲೆಡೆಯೊಳು |
ತೊಳಲಿಯರಸಿ ವಿವರದೊಳು ವಿರಾಟನ | ಪೊಳಲೊಳಗವರೊಂದು ವರುವಷ || ೧೨೫ ||

ಸತ್ಯಮನುದ್ಧರಿಸಲು ಮೈಗರೆದರ | ನತ್ಯಂತ ವಿವರದಿನರಿದು |
ಭೃತ್ಯರರಿಸಿ ಬಂದು ಪೇಳೆ ಕರೆಸಿದನು | ಕೃತ್ಯಾಧಿಕಾರಿಶಕುನಿಯ || ೧೨೬ ||

ಬಳಿಕೆಂದನಾ ಪಾಂಡವರು ವಿರಾಟನ | ಪೊಳಲೊಳಗಿರ್ದ ಸಂಶಯವ |
ತಿಳಿವುದಕಾವುದುಪಾಯಮೆಂದಾ ಭೂ | ಲಲನೇಶನು ಕೇಳಲವನು || ೧೨೭ ||

ಪೆರತಿಲ್ಲ ಮತ್ಸ್ಯಮಹೀಶನ ನಗರಿಯ | ಹೊರಗೆ ಹರಿದು ಮೇವುತಿರ್ಪ |
ತರುವನು ನಾವು ಹಿಡಿಯಲು ಸೈರಿಪುದಿಲ್ಲ | ನೆರೆಗಲಿಗಳು ಪಾಂಡವರು || ೧೨೮ ||

ಈ ಮೈಯೊಳಗಲ್ಲದವರ ಕಾಣುವದಿಲ್ಲ | ಭೂಮೀಶ್ವರ ಕೇಳೆನಲು |
ಆ ಮಾತನವಧಾರಿಸಿ ಬೇಗ ತನ್ನು | ದ್ಧಾಮಸೇನೆಯನೆಲ್ಲ ಬರಿಸಿ || ೧೨೯ ||

ಬಳಿಕ ತ್ರಿಗರ್ತಾಧೀಶಸುಶರ್ಮನ | ಗ್ಗಳಿಕೆವಡೆದ ರಥಿಕರನು |
ತಳುವದೀರೆಳುಸಾಸಿರವನು ವಶಮಾಡಿ | ಕಳುಹಲವರು ಬೇಗಮೆಯ್ದಿ || ೧೩೦ ||

ಆ ನಗರಿಯ ತೆಂಕಣದಿಕ್ಕಿನೊಳಗಿರ್ಪ | ಕಾನೊಳು ಮೇವ ತುರುವನು |
ಆನಲಂತಾವಾರ್ತೆಯ ಕೇಳಿ ಮತ್ಸ್ಯಮ | ಹೀನಾಥ ಕೆಕ್ಕಳಗೆಳಲಿ || ೧೩೧ ||

ಉತ್ತರನನು ನಗರಿಯೊಳು ಕಾವಲನಿಕ್ಕಿ | ಮತ್ತೊಂದಿನಿಸುತಡೆಯದೆ |
ಮೊತ್ತದ ಚತುರಂಗವಾಹಿನಿಯದಿರದೆ | ಸುತ್ತಿ ತನ್ನೊಡನೈದಿಬರಲು || ೧೩೨ ||

ಅನಿತರೊಳಿತ್ತಲಂತಕಸೂನು ಬಂದು ತ | ನನ್ನನುಜರೊಳಿಂತು ನುಡಿದನು |
ಕುನಯದಿಂದಾಕೌರವ ಕೊಟ್ಟವಧಿಯ | ದಿನಮಿಂದು ಪರಿಪೂರ್ಣಮಾಯ್ತು || ೧೩೩ ||

ನಾವಿರ್ದುದನು ಕಾಣಿಸಿಕೊಳ್ಳಬೇಕೆಂ | ದೀವೂರ ತುರುವನೆಲ್ಲವನು |
ಓವದೆ ಬಂದುಪಿಡಿದರಿದನುರೆಯರಿ | ದಾವಿರಲತಿದೋಷವಹುದು || ೧೩೪ ||

ಎಂದು ಫಲ್ಗುಣನನಿರಿಸಿ ತಾನಾವಾಯು | ನಂದನನನು ಕೂಡಿಕೊಂಡು |
ಬಂದು ವಿರಾಟಸೈನಿಕವನು ಬೇಗದಿ | ಪಿಂದಿಕ್ಕಿ ಬರಲನಿಲಜನು || ೧೩೫ ||

ಗದೆಗೊಂಡು ಗಡಿತಡೆಯಿಲ್ಲವೆಂಬಂದದಿ | ನದಿರದೆ ಕುರುಸೈನಿಕದ |
ಇದಿರಾದವರನೆಲ್ಲರ ಬಡಿದಾಕಾಲ | ನುದರಪೋಷಣವ ಮಾಡಿದನು || ೧೩೬ ||

ಬಳಿಕಿದಿರಾದ ಸುಶರ್ಮನ ಪೆಡಗಟ್ಟ | ನುಳಿಯದೆ ಕಟ್ಟಿ ಧರ್ಮಜಗೆ |
ಅಲಘುವಿಕ್ರಮಿ ತಂದೊಪ್ಪಿಸಲಾ ಕುರು | ಬಲೆಲ್ಲವಂಜುತೋಡಿದುದು || ೧೩೭ ||

ಧರ್ಮತನುಜನಾವರ್ಮವ ಬಿಸುಟು ಸು | ಶರ್ಮನಬಿಟ್ಟು ಕಳುಹಲು |
ಪೆರ್ಮೆಯಿನಾಮತ್ಸ್ಯನೃಪತಿ ತಿರುಗಲಿತ್ತ | ದುರ್ಮಂತ್ರಿಯಾ ಕುರುಸೇನೆ || ೧೩೮ ||

ಆ ಮರುದಿನವಿಳೆಬೆಸಲೆಯಾದಂದದಿ | ನಾ ಮತ್ಸ್ಯಪುರದೆಡಗಡೆಯ |
ಸೀಮೆಯೊಳಗೆ ಮೇವ ತುರುಗಳನೆಲ್ಲವ | ಸಾಮವಿಲ್ಲದೆ ಬಂದು ಪಿಡಿಯೆ || ೧೩೯ ||

ಓಲಗದೊಳಗಿರ್ದ ಮತ್ಸ್ಯನೃಪತಿಗೆ ಗೋ | ಪಾಲಕನೋರ್ವನು ಬಂದು |
ಆಲಿಸಿ ನೋಡಬಾರದ ಬಲವೆಮ್ಮ ಗೋ | ಜಾಲವ ಬಂದು ಪಿಡಿದುದು || ೧೪೦ ||

ಕರು ಬೇರೆ ತಾಯಿ ಬೇರಾದ ಹಿಂಡನು ಕಂಡು | ತುರುಗಾವಲವರು ಬೇಡೆನಲು |
ಅರಗುಲಿತನದಿನವರ ತಲೆವೊಯ್ದು ಮೈ | ಮರೆದು ನಿಂದಿದೆ ಎನಲಾಗ || ೧೪೧ ||

ಎತ್ತರಮಾದ ಕೋಪದಿ ಗದ್ದುಗೆವೊಯ್ದು | ಮತ್ತವನೇಳ್ವ ವೇಳೆಯೊಳು |
ಉತ್ತರನೆಳ್ದು ಕೈಮುಗಿದೀ ತುರುಗಳ | ಮೊತ್ತವನಾ ತಿರುಗಿಪೆನು || ೧೪೨ ||

ಎನುತಾವುತ್ತರನಾ ನಿಜಜನಕಗೆ | ಘನತರಮಪ್ಪ ಪಂಥವನು |
ಅನುವಾಗಿ ನುಡಿದು ಪಟ್ಟಣವನು ಪೊರಮಡು | ವನಿತರೊಳಾ ಪಾಂಡವರು || ೧೪೩ ||

ತಂತಮ್ಮಗದೆ ದಿವ್ಯ ಕೋದಂಡ ಕೂರ್ವಾಳು | ಕೊಂತಂಗಳಾದಿಯಾಯುಧವ |
ಸಂತಸದಿಂದಾ ಬನ್ನಿಯಮರದಿಂ | ದಂತರಿಸದೆ ತಂದರಾಗ || ೧೪೪ ||

ಅನಿತರೊಳಾವುತ್ತರ ತನ್ನ ಸೇನೆಯ | ನನುವಾಗಿ ಮೋಹರ ಮಾಡಿ |
ವನನಿಧಿಯಂತೆ ಘೋರ್ಣಿಪ ಕುರುಸೇನೆಯ | ಮೊನೆಯೊಳಗೀಕ್ಷಿಸಿ ನೊಡಿ || ೧೪೫ ||

ಶಿರಮನಳ್ಳಾಡಿ ಮನಸುಗುಂದಿ ನಿಂದಿರ | ಲನಿಲಜನಾಫಲ್ಗುಣನನು |
ಪಿರಿದು ಕೋಪದೊಳೊಂದೊಂದು ರಥವನೇರಿ | ಕುರುಬಲಕಿದಿರಾದರಂದು || ೧೪೬ ||

ಒಡೆದುದಜಾಂಡವಾಗಸವಿಳೆಗುರುಳ್ದುದು | ಕೆಡೆದುದುವಾಸವಶಿಖರಿ |
ಸಿಡಿದುದು ಭೂತಳವೆಂಬಂತೆ ಧನುವ ಜೇ | ವಡೆಯಲು ಕಲಿಪಾರ್ಥನಾಗ || ೧೪೭ ||

ಶರವೊಂದರಿಂದ ಸಾಸಿರ ರಥ ಪತ್ತುಸಾ | ಸಿರ ಗಜ ಲಕ್ಷ ಕುದುರೆಯ |
ನರರನು ಪತ್ತುಲಕ್ಷವನಾ ನೆಲದೊಳು | ನೆರೆಪಿದನಾಯಿಂದ್ರಸೂನು || ೧೪೮ ||

ಕಡೆಯಕಾಲದೊಳೆರಗುವ ಬರಸಿಡಿಲಂತೆ | ಘುಡುಘುಡಿಸುತಲನಿಲಜನು |
ಕಡುಮುನಿಸಿಂಪೊಡೆಯಲು ಪೊಡವಿಗೆ ಬೀಲ್ದು | ದೆಡೆಯಿಲ್ಲದಾ ಕುರುಸೇನೆ || ೧೪೯ ||

ಪರಿವ ನೆತ್ತರಪೊನಲಿಂ ಪಡಲಿಟ್ಟಂ | ತುರುಳ್ವ ಶಬಾನಿಕದಿಂದ |
ಧುರಧರೆಯತಿ ಭೀಕರಮಾದುದತಿರಥ | ರುರವಣೆಯಿಂದಿದಿರಾಗೆ || ೧೫೦ ||

ಅವನಿಯಿದಾಗಸಮಿದುದಿಕ್ಕೆಂಬಾ | ವಿವರಮರಿಯಬಾರದಂತೆ |
ದಿವಿಜತನೂಭವನಿರದೆಚ್ಚನಾರಾಚ | ನಿವಹ ಕವಿದುದರಿಬಲವ || ೧೫೧ ||

ಶರ ಶರಧಿಯೊಳು ಮುಳುಗಿಯತಿರಥರು ನಿ | ತ್ತರಿಸಲಾರದೆ ಜಾರಿದರು |
ಕುರುಬಲವವನೆಸುಗೆಗೆ ಮುಗಿಲನಿಲನ | ಭರಕೋಡುವಂತೋಡಿದರು || ೧೫೨ ||

ತೆಟ್ಟೆತೆಟ್ಟೆಯೊಳೋಡುವ ಕುರುಸೈನಿಕ | ಕೆಟ್ಟುದನೋಡಿಗೊಳ್ಳೆಂದು |
ದಿಟ್ಟರವರು ನಗುತವೆ ತುರುಗಳನು ಹಿ | ಮ್ಮೆಟ್ಟಿಸಿದರು ಬೇಗದೊಳು || ೧೫೩ ||

ಕುರುಬಲವೆಂಬ ಮಹಾವಿಪನಕ್ಕಾ | ಮರುತಾತ್ಮಜ ಧನಂಜಯರು |
ಮರುತ ಧನಂಜಯರಂತಾದರೆಂದರೆ | ಬರು ಮಿಗೆ ಕೊಂಡಾದಿದರು || ೧೫೪ ||

ಇವರು ನಿಶ್ಚಯದಿಂದ ಪಾಂಡವರೆಂಬುದ | ವಿವರಿಸಿಯಾ ಕುರುಸೇನೆ |
ತವಕದಿ ಹಿಮ್ಮೆಟ್ಟಿ ತಮ್ಮ ನಗರಿಗೆಯ್ದಿ | ಯವನಿಪಗರುಪಿದರಿತ್ತ || ೧೫೫ ||

ಆ ಕುರುಬಲವನೋಡಿಸಿದ ಪಾಂಡವರೀ | ಲೋಕೈಕವೀರರೆಂಬುದಕೆ |
ಆ ಕರ್ಣಾಟಾಧಿಪತಿ ಮತ್ಸ್ಯರಾಜನ | ನೇಕ ಹರ್ಷಚಿತ್ತನಾಗಿ || ೧೫೬ ||

ಬಂದು ಧರ್ಮಜಗೆ ವಂದಿಸಿಯುಳಿದವರ್ಗಾ | ನಂದದಿನೆರಗಿ ಕೈಮುಗಿದು |
ನಿಂದೀತೆರದಿ ಬಿನ್ನೈಸಿದನಾಗುಣ | ವೃಂದಾರಕ ಸತ್ಯನಿಧಿಯೆ || ೧೫೭ ||

ಆಳಿಗಾಳಾಗಿ ನೀವತಿಹೀನವೇಷವ | ತಾಳಿಯೆನ್ನೊಳು ಜೀವಿಸಿದುದು |
ಕಾಲದಗುಣವೈಸೆಯೆನುತ ವಿರಾಟಭೂ | ಪಾಲಕನತಿನೊಂದು ನುಡಿದು || ೧೫೮ ||

ಪುರದೊಳಗಷ್ಟಶೋಭೆಯ ಮಾಡಿಸಿ ಮದ | ಕರಿಯಮಸ್ತಕದೊಳಗವರ |
ಹರಿಸದಿನೇರಿಸಿ ರಾಜಗೃಹಕೆ ವಜ್ರ | ಧರವಿಭವದಿ ನಡೆತಂದು || ೧೫೯ ||

ರಾಜವದನೆಯರಿಕ್ಕೆಲದೊಳು ಚಮರವ | ನೋಜೆಮಿಗಲು ಡಾಳಿಸಲು |
ರಾಜೇಂದ್ರಚೂಡಾಮಣಿಧರ್ಮರಾಜನ ಮೃಗ | ರಾಜಪೀಠದೊಳು ಕುಳ್ಳಿರಿಸಿ || ೧೬೦ ||

ಮಂಡಳಿಕರು ಮನ್ನೆಯರು ಸಾಮಂತರು | ದಂಡನಾಯಕರೊಡಗೂಡಿ |
ಚಂಡವಿಕ್ರಮಿಗಳನೋಲೈಸಿದನು ಭೂ | ಮಂಡಲೇಶ್ವರನು ವಿರಾಟ || ೧೬೧ ||

ಇಂತು ವಿರಾಟನ ಪುರದೊಳಗಾಗುಣ | ವಂತರಿಪ್ಪಾ ಸುದ್ದಿಗೇಳಿ |
ತಂತಮ್ಮ ತನುಜೆಯರೊಡಗೂಡಿ ನೆಲಹೊರ | ದಂತಪ್ಪ ಸೈನಿಕ ಸಹಿತ || ೧೬೨ ||

ಅತಿಮುದದಿಂ ಧಾನ್ಯರಾಜ ವಿಂಧ್ಯಕಭೂ | ಪತಿ ಚಂಡವಾಹನರೇಂದ್ರ |
ನುತಸಿಂಹಘೋಷಣ ಪಾಂಚಾಳ ಪೃಥ್ವೀ | ಪತಿಯಾದಿಯರಸರೈದಿದರು || ೧೬೩ ||

ಬಳಕಾಯಿಂದ್ರರಥಾಂಬರಚರ ತನ್ನ | ಬಲವನೆಲ್ಲವ ಕೂಡಿಕೊಂಡು |
ತುಳಿಲಾಳ್ಗಳು ತನ್ನಾನೂರ್ವರುಸುತ | ರೆಳಸಿ ಬಳಸಿ ಬಂದಾಗ || ೧೬೪ ||

ಮತ್ತಾ ಮತ್ಸ್ಯನೃಪನನಿಜಸಖನು ಗು | ಣೋತ್ತಂಸನಾಪಾಂಡ್ಯನೃಪತಿ |
ಉತ್ತಮರೂಪಾನ್ವಿತೆ ನಿಜಸುತೆಯು | ನ್ಮತ್ತಗಜೋಪಮಗಮನೆ || ೧೬೫ ||

ಲಲಿತಾಂಗಿಯೆಂಬಳನಾಫಲ್ಗುಣನಿಗಿತ್ತು | ಬಳಿಕ ತನ್ನುರುಬಲಸಹಿತ |
ಬಳವಳಿಯಾಗಿ ತಾನೇ ಬಂದತಿ ಸುಖ | ದೊಳು ಕೂಡಿಯೋಲೈಸುತಿರಲು || ೧೬೬ ||

ಮತ್ತೆ ಕೆಲವು ಪೃಥ್ವಿಪಾಲಕರು ತ | ಮ್ಮುತ್ತಮಮಪ್ಪ ಸುತೆಯರ |
ಇತ್ತು ಸುಖದಿನೋಲೈಸುತಿರಲು ಮ | ತ್ತಿತ್ತ ಯಾದವಪುರದಿಂದ || ೧೬೭ ||

ಹರಿಸದಿ ಸತ್ಯಕನೆಂಬ ನೃಪತಿ ಬಂದು | ಚರಣಕಮಲಯುಗಕೆರಗಿ |
ಒರೆದನಿಂತೆಂದೆಲೆ ಧರ್ಮತನುಜ ಕೇಳು | ಮುರರಿಪು ತಮ್ಮ ಪಟ್ಟಣಕೆ || ೧೬೮ ||

ಸ್ವಾಮಿಯನೊಡಗೊಂಡು ಬರಹೇಳಿಯೆನ್ನ ಸು | ಪ್ರೇಮದಿ ಕಳುಹಿದನೆನಲು |
ಆ ಮಾತನವಧಾರಿಸಿ ಯಾದವರ ಸು | ಪ್ರೇಮಕುಶಲವಾರ್ತೆಗೇಳಿ || ೧೬೯ ||

ಬಳಿಕೆಂದನಿಂತು ಸುರಿವ ವರ್ಷಾಕಾಲ | ಕಳೆದಂತರದೊಳು ಬಂದು |
ಕಲಿನವಿಜಯನೇಮಿಜಿನಗೆ ವಂದಿಪೆವೆಂದು | ಕಳುಹಿದನಾಸತ್ಯಕನಾ || ೧೭೦ ||

ಇಂತು ಕಳುಹಿ ಸುಖದೊಳಗಿರಲಾ ಶ್ರೀ | ಕಾಂತನ ಪುರದೊಳಗಿರ್ದ |
ಕೊಂತಿಯೊಂದಾನೊಂದು ದಿನದೊಳು ವಿದುರನ | ಸಂತಸದಿಂ ನೋಡಲೆಂದು || ೧೭೧ ||

ತ್ವರಿತದಿ ಪೊರಮಟ್ಟು ಬರಲೊಂದು ಮುಂಪೆತ್ತ | ಮಗನ ಮಂದಸಿನೊಳಗಿಟ್ಟು |
ಜಗುನೆಯೊಳಗೆ ಬಿಟ್ಟೆನವನ ಬಾಳುವೆಯನು | ಬಗೆಗೊಂಡು ನಿರವಿಪುದೆನಲು || ೧೭೩ ||

ನೀ ಮುನ್ನ ಹಡೆದ ಮಗನು ಬಲಯುತನಾಗಿ | ಭೂಮೀಶ್ವರ ಕೌರವನ |
ಪ್ರೇಮದಿನೊಡನುಂಡೊಡನುಟ್ಟು ಬೆಳೆದ ನಿ | ಸ್ಸೀಮನವನು ಕರ್ಣನೆನಲು || ೧೭೪ ||

ಆ ಮಾತನವಧಾರಿಸಿ ಹರ್ಷಿತೆಯಾಗಿ | ಯಾಮುನಿಪನ ಬೀಳ್ಕೊಂಡು |
ಸಾಮಜಪುರಕೆಯ್ದಿ ವಿದುರನ ಮನೆಗೆ ಸು | ಪ್ರೇಮದಿನಾ ಕೊಂತಿ ಬಂದು || ೧೭೫ ||

ಸಾನಂದದೊಳಿರಲೊಂದು ದಿನದೊಳಾ | ಕಾನೀನನ ಬಳಿಗೆಯ್ದೆ |
ಭೂನುತನವನಿದಿರೆಳ್ದವಳಡಿಗೆ ಸು | ಮ್ಮಾನದಿನವನತನಾದ || ೧೭೬ ||

ಒಸೆದುನ್ನತಾಸನವಿತ್ತು ಮುಗಿದು ಕೈಯ | ಬೆಸನಾವುದು ಪೇಳಿಮೆನಲು |
ಹೊಸಹರೆಯದೊಳಾನು ಮುಂಪೆತ್ತ ಚೊಚ್ಚಿಲ | ಸಿಸು ನಿನ್ನನಾಜಗುನೆಯೊಳು || ೧೭೭ ||

ಬಿಟ್ಟೆನಂತದರಿಂ ನಿನ್ನ ನೋಡುವೆನೆಂಬ | ಕಟ್ಟುಮ್ಮಳದಿ ಬಂದೆನೆನಲು |
ದಿಟ್ಟನದಕ್ಕಾ ಜ್ವಾಲಾಮಾಲಿನಿ | ಕೊಟ್ಟವುರಿಯವಸ್ತ್ರವನು || ೧೭೮ ||

ಭರದಿಂದ ಹೊದಿಯಿಸಲೊಡನಾಪೀತಾಂ | ಬರವೆಳೆದಳಿರಂತಾಗೆ |
ಸುರುಚಿರಮಪ್ಪತಲಮಾಲಲತಿಕೆಯೆನೆ | ಸುದತಿ ಕಣ್ಗೊಪ್ಪವಡೆದಳು || ೧೭೯ ||

ಇರೆಕಂಡಿನಸುತನಾಕೊಂತಿದೇವಿಯ | ಚರಣಕೆರಗಿ ಕೈಮುಗಿಯೆ |
ತೊರೆಯಲು ಮೊಲೆ ಹರ್ಷಾಂಬು ದಿಟ್ಟಿಗಳೊಳೂ | ಸುರಿಯಲು ಬಿಗಿಯಪ್ಪಿದಳು || ೧೮೦ ||

ಈ ತೆರದಿಂ ಬಿಗಿಯಪ್ಪಿ ಬಳಿಕ ತನು | ಜಾತನೊಳಿಂತಾಡಿದಳು |
ಪ್ರೀತಿಯಿಂದೋಲೈಸಿಕೊಂಡಿರು ನಿನ್ನನುಜಾತರ ಕೈಯಿಂದೆನಲು || ೧೮೧ ||

ಜನನಿ ಬಿನ್ನಪ ಕೌರವೇಶನ ಬಿಡುವುದು | ಕನಸುಮನಸಿನೊಳಗಿಲ್ಲ |
ಅನಿತರಿಂದಾನುಡಿ ಬೇಡೆಂದಾಡಿದ | ತನಯಗಿಂತೆಂದಾಡಿದಳು || ೧೮೨ ||

ತನುಜ ನೀ ಪಡೆದ ದಿವ್ಯಾಸ್ತ್ರಂಗಳ ನಿ | ನ್ನನುಜರಮೇಲೆಸಬೇಡ |
ಎನಲಂತೇಗೆಯ್ವೆನೆನ್ನ ಕಥನಮನೀ | ಮಿನಿಸವರೊಳಗಾಡಬೇಡ || ೧೮೩ ||

ಎಂದು ಚಿತ್ರಾಂಬರಮಣಿಭೂಷಣತತಿ | ಯಿಂದ ಪೂಜಿಸಿ ವಿನಮಿಸಿದ |
ಕಂದನ ಬೀಳ್ಕೊಂಡಾದ್ವಾರಾವತಿ | ಗಂದೆಯ್ದಿ ಸುಖಮಿರಲಿತ್ತ || ೧೮೪ ||

ಅಂತಕಸೂನು ಮತ್ತಾವರ್ಷಾಕಾ | ಲಾಂತರದೊಳಗಲ್ಲಿಂದ |
ಸಂತಸದಿಂ ಪೊರಮಟ್ಟಾ ಲಕ್ಷ್ಮೀಕಾಂತನಪುರಕೆಯ್ತಂದು || ೧೮೫ ||

ಒಡೆನೆಯ್ತಂದ ವಿರಾಟಮಹೀಶನ | ಕಡುಸ್ನೇಹದಿಂ ಬೀಳ್ಕೊಟ್ಟು |
ನಡೆತಪ್ಪಾ ಪಾಂಡವರ ವಾರತೆಗೇಳಿ | ಸಡಗರದಿಂದ ಕೇಶವನು || ೧೮೬ ||

ಪೊಳಲೊಳಗಷ್ಟಶೋಭೆಯನು ಮಾಡಿಸಿ ಹರಿ | ಕುಲದರಸುಗಳೆಲ್ಲ ಸಹಿತ |
ತಳುವದಿದಿರುಬಂದು ಹರ್ಷದಿನಾಪುರ | ದೊಳಹೊಗಿಸಿದನು ಪಾಂಡವರ || ೧೮೭ ||

ಇಂತು ಬಂದಾಕೌಂತೇಯರು ಭುವನೈಕ | ಕಾಂತಗೆ ನೇಮೀಶ್ವರಗೆ |
ಸಂತಸದಿಂದ ನಮಿಸಿಯವರೊಳು ನಿ | ಶ್ಚಿಂತಸುಖಮಿರ್ದರಲ್ಲಿ || ೧೮೮ ||

ಭೂಜನವಿನುತ ಗುಣಾಲಂಕೃತ ಸುರ | ಭೂಜೋಪಮ ದಾನಯುತರು |
ರಾಜೀವಸಖಸಮತೇಜರೆಸೆದರಾ | ರಾಜಾನ್ವಯಶೇಖರರು

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗೊದವಿದಿಪ್ಪತ್ತೈದಾಶ್ವಾಸ || ೧೯೦ ||

ಇಪ್ಪತ್ತೈದನೆಯ ಸಂಧಿ ಸಂಪೂರ್ಣಂ