ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ನಾರಾಯಣನಾಪಾಂಡವರೊಡಗೂಡಿ | ಭೂರಿಭೋಗಾನ್ವಿತನಾಗಿ |
ಧಾರುಣಿಯನು ಪರಿಪಾಲಿಸುತಿರಲಾ | ದ್ವಾರಾವತಿಗೊಂದು ದಿವಸ || ೨ ||

ಹಡಗಿನ ಹರದನೋರ್ವನು ತತ್ಪುರಕಾ | ಹಡಗು ಬಂದು ಸೇರಲಾಗ |
ಸಡಗರದಿಂದಾ ತಡಿಯೊಳು ಬೀಡನು | ಬಿಡಿಸಿ ಪೊಳಲ ಪೊಕ್ಕನಾಗ || ೩ ||

ಅನಿಮಿಷಪತಿಯಮರಾವತಿಗೆಣೆಮಿಗಿ | ಲೆನಿಪಾ ದ್ವಾರಾವತಿಯ |
ಮನಗೊಂಡು ನಡೆನೋಡುತಿಂತಪ್ಪ ಪುರಮೀ | ಮನುಜಲೋಕದೊಳಿಲ್ಲವೆಂದು || ೪ ||

ಪಿರಿದುಕೊಂಡಾಡುತ ಬಂದು ಸಂದಣಿಸಿದ | ಧರಣೀಶಗೃಹದಬಾಗಿಲೊಳು |
ಅರಸಿನ ಸಮಯಗಾಣದೆ ನಿಂದ ಪರಭೂ | ವರರನೀಕ್ಷಿಸುತೊಳಹೊಕ್ಕು || ೫ ||

ಆ ಪ್ರತಿಹಾರಪುರಸ್ಸರನಾವೈ | ಶ್ಯಪ್ರಭು ತಾನಡೆತಂದು |
ಆಪ್ರತಿವಡೆದಾಸ್ಥಾನಕ್ಕೆ ಹರಿವಂ | ಶಪ್ರಭುವಿಷ್ಣುವ ಕಂಡು || ೬ ||

ತರುಣತರಣಿಮಂಡಲದ ಮರೀಚಿಯಾ | ವರಿಸಿದಂಜನಗಿರಿಯಂತೆ |
ಅರುಣರತ್ನಾಂಚಿತಭೂಷಣಪೀತಾಂ | ಬರನಿರೆ ಭಯಭಕ್ತಿಯಿಂದ || ೭ ||

ವಿನಮಿತನಾಗಿಯಪೂರ್ವವಸ್ತುವನು ತಂ | ದನುನಯದಿಂ ಕಾಣ್ಕೆಯೀಯೆ |
ವಿನಯದೊಳುಚಿತಾಸನದೊಳಿರಿಸಿ ಮತ್ತೆ | ಸನುಮಾನದಿಂ ಮಾತನಾಡಿ || ೮ ||

ಪ್ರಿಯದಿಂ ತರಿಸಿಯತ್ಯುತ್ತಮ ರತ್ನಸಂ | ಚಯಮನರ್ಘ್ಯವೆಂದೆನಿಸಿ |
ನಯನಾನಂದಮನೀವವನಿತ್ತನು | ನಯದಿಂ ಬೀಳ್‌ಒಡಲವನು || ೯ ||

ಆ ನಗರಿಯೊಳು ಕೆಲವುದಿನಮಿರ್ದು ಮ | ನೋರಾಗದಿ ಪೊರಮಟ್ಟು |
ಮಾನಿತಮಾದ ಮಾಗಧನ ಪುರಕೆ ವೈಶ್ಯ | ತಾನತಿ ವಿಭವದಿಂ ಬಂದು || ೧೦ ||

ಆ ರಾಜಗೃಹದ ಶೋಭೆಯನೀಕ್ಷಿಸುತ ಮ | ತ್ತಾ ರಾಜಚಕ್ರೇಶ್ವರನ |
ಆ ರಾಜಭವನದ ಮುಂದೆ ಗೊಂದಣಗೊಂ | ಡಾರಾಜನಿವಹವ ಕಂಡು || ೧೧ ||

ಕಡುಪಿರಿದಚ್ಚರಿವಡೆದಾವೈಶ್ಯನು | ಪಡಿಯರರುಗಳ ಮುಖದೊಳು |
ಸಡಗರದಿಂದಾ ಚಕ್ರೇಶನೋಲಗ | ದೆಡೆಗೆಯ್ದಿ ಸಾಷ್ಟಾಂಗವೆರಗಿ || ೧೨ ||

ಮುನ್ನ ಮುರಾರಿ ತನಗೆ ಉಡುಗೊರೆಯಿತ್ತ | ರನ್ನಗಳ ಕಾಣ್ಕೆಯನೀಯೆ |
ಉನ್ನತಮತಿಯವ ನೋಡಿಯಚ್ಚರಿವಟ್ಟು | ತನ್ನ ತಲೆಯ ತೂಗಿದನು || ೧೩ ||

ಈ ನಯಮೀಗುಣಮೀಜಾತಿಯೀಕಾಂತಿ | ಯಾನಾಕದೊಳಗುದಯಿಸಿದ |
ಮಾನಿತಮಯಮಪ್ಪ ಮಾಣಿಕ್ಯಕಲ್ಲದೆ | ಯೀನೆಲದವಕುದಯಿಸದು || ೧೪ ||

ಅದರಿಂದೀರತ್ನಮಾವೆಡೆಯೊಳು ನಿನ | ಗೊದವಿದವೆಂದು ವೈಶ್ಯನನು |
ಚದುರನವನನು ನಯದಿಂ ಕೇಳಲಾಭ್ರಾಂತ | ಹೃದಯನಿಂತೆಂದಾಡಿದನು || ೧೫ ||

ನೀರನಿಧಿಯ ಮಧ್ಯದೊಳುರಂಜಿಸುವಾ | ದ್ವಾರಾವತಿಯೊಳು ನೇಮೀಶ |
ವಾರಿಧಿವಿಜಯಬಲಾಚ್ಯುತವಸುದೇವ | ಮಾರಕುಮಾರರೆಂಬವರು || ೧೬ ||

ಶೂರರು ಶುಭಮತಿಗಳು ಶುಚಿಗಳು ಗಂ | ಭೀರರುತ್ತಮರೂಪಯುತರು |
ಧೀರೋದಾತ್ತರವರು ನನಗೊಲಿದಿತ್ತ | ಚಾರುಮಣಿಗಳು ಚಕ್ರೇಶಾ || ೧೭ ||

ಎಂದು ನುಡಿಯೆ ಬೂದಿ ಮರಸಿದ ಕೆಂಡವ | ತಂದು ಹುಲ್ಲಿಂದ ಹತ್ತಿಸಿದ |
ಅಂದದಿನರಸನ ಮನದ ಮುನಿಸು ವೈಶ್ಯ | ನಿಂದ ಮೊಗದೊಳುದಯಿಸಿತು || ೧೮ ||

ಮೊದಲು ತಾವೆನಗದಿರದೆ ದ್ರೋಹಿಗಳಾಗಿ | ಬೆದರಿ ಯಾದವರು ಕೊಂಡದೊಳು |
ಹುದುಗಿ ಬೀಳ್ದಳಿದರೆಂದಾಡಿದವರ ನುಡಿ | ಯದು ಬಕ್ಕಬಯಲಾಯ್ತೀಗ || ೧೯ ||

ಎಂದು ತುಂಬುರಗೊಳ್ಳಿಯಂದದಿ ಛಿಟಿ ಛಿಟಿ | ಲೆಂದು ಕಣ್ಗಳ ಸೋಗೆಯೊಳು |
ಒಂದಿದ ಕೆಂಪಿನಿಂದಾಚಕ್ರಪತಿಯಿಂ | ತೆಂದುಬೆಟ್ಟೆಯನಾಡಿದನು || ೨೦ ||

ಎನಗಿದಿರಾಗಲಣ್ಮದೆ ತಾವು ಹೊಕ್ಕಾ | ವನಧಿಯೆಲ್ಲವನು ತುಳುಂಕಿ |
ಇನಿಸು ತಡೆಯದೆಲ್ಲರ ತಲೆಗೊಳ್ಳದೊ | ಡೆನಗಿವು ಮೀಸೆಯಲ್ಲೆನುತ || ೨೧ ||

ಹರದಗೆ ಹಿರಿದುಡುಗೊರೆಯಿತ್ತು ಬೀಳ್ಕೊಟ್ಟು | ಕರೆಸಿ ಸೇನಾನಾಯಕನ |
ಉರುತರಮಪ್ಪ ಬಲವನೆಲ್ಲವನು ಸಂ | ವರಿಸಹೇಳಲು ಬಳಿಕಿತ್ತ || ೨೨ ||

ದ್ವಾರಾವತಿನಗರೀವರದೊಳು ಬಲ | ನಾರಾಯಣರು ಧರ್ಮಸೂನು |
ಮಾರುತಿ ಪಾರ್ಥನಕುಲಸಹದೇವರೊ | ಳಾರೈದು ಮಂತಣಮಿರ್ದು || ೨೩ ||

ಜೂದಿಂದ ವಂಚಿಸಿ ನೀವಾಳುತಿರ್ದಾ | ಮೇದಿನಿಯನು ಕೌರವನು |
ಆದರಿಸದೆ ಕೊಂಡು ನಿಮ್ಮ ಹೃದಯಕೆ ವಿ | ಷಾದವ ತಂದನೆಂದೆನಲು || ೨೪ ||

ಅಂತಕನಣುಗನಿಂತೆಂದನು ಸೋದರ | ರೆಂತಾನುಗೈದ ಪೊಲ್ಲಮೆಯ |
ಅಂತರಂಗಕೆ ತಹುದನುಚಿತಮೆನಲು ಮು | ರಾಂತಕನಿಂತು ನುಡಿದನು || ೨೫ ||

ಜನನುತಜವನತನುಜ ನಿನ್ನ ಸತ್ಯಕೆ | ಮನುಮುನಿಗಳು ಪಾಸಟಿಯೇ |
ಎನುತಮತ್ತಿಂತೆಂದನಿನ್ನೊಮ್ಮೆ ಕೌರವ | ಗನುನಯದಿಂ ಪಾಂಡವರೊಳು || ೨೬ ||

ಮುನಿಸಬೇಡವರ ರಾಜ್ಯವನವರಿಗೆ ಕೊಟ್ಟು | ವಿನಯದಿ ಕೂಡಿಕೊಂಡಿಹುದು |
ಅನುಮತವೆಂದನುಚರರನಟ್ಟುವೆನೆಂ | ದೆನಲಾಧರ್ಮನಂದನು || ೨೭ ||

ಅತಿಮೂರ್ಖನಾಕುರುಪತಿಯ ತಿಳುಹಬಲ್ಲ | ಚತುರನ ನೀತಿವೃದ್ಧನನು |
ಮತಿಯುತನಪ್ಪ ಮಾನಸನನಟ್ಟುವುದನು | ಮತವೆಂಬ ಮಾತನು ಕೇಳಿ || ೨೮ ||

ಆ ಮುರರಿಪು ತನಗತಿಸಜ್ಜನನು | ದ್ದಾಮಗುಣಾನ್ವಿತನೆನಿಪ |
ಪ್ರೇಮದಿ ಕೃಷ್ಣನೆಂಬವನ ಕರೆದು ನೀನು | ಸಾಮಮಾಡದೆ ಪೋಗೆಂದು || ೨೯ ||

ಕಳುಹಿದೊಡವನು ಹಸ್ತಿನಪುರವರಕೈದಿ | ತುಳಿಲುಗೆಯ್ದಾಕುರುಪತಿಗೆ |
ಬಳಿಕ ತನ್ನುಚಿತಾಸನದೊಳು ಕುಳ್ಳಿರ | ಲಲಘುವಿನಯವಚನದೊಳು || ೩೦ ||

ಯದುಕುಲದವನೀಪಾಲಕರೆಲ್ಲರು | ಪದುಳಮಿರ್ದಪರೇಯೆನಲು |
ಮುದದಿಂದಿಂತು ನುಡಿದನೆಲೆ ನೃಪತಿಯೆ | ಮ್ಮಧಟರು ಸುಖಮಿರ್ದಪರು || ೩೧ ||

ಎಂದು ಕೈಮುಗಿದು ಮುಂದಣಕಾರ್ಯಮಾಗಿ ಮು | ಕುಂದ ನೃಪತಿದೇವರೆಡೆಗೆ |
ಇಂದೆನ್ನ ಕಳುಹಿದನೆನಲಾ ಕಜ್ಜವೇ | ನೆಂದು ಕೇಳಿದೊಂಡಿತು ನುಡಿದ || ೩೨ ||

ಜೂದಿನಮುಖದೊಳು ನೀವಂದು ಗೆಲಿದಾ | ಮೇದಿನಿಯನು ಭೂಪ ನಿನ್ನ |
ಸೋದರರನು ಕರೆಯಿಸಿಕೊಂಡು ಬಳಿಕ | ತ್ಯಾದರದಿಂದೀವುದುಚಿತ || ೩೩ ||

ಅವರು ಮೊದಲು ಜೂಜಿನೊಳು ನೇಮಿಸಿಕೊಂ | ಡವಧಿಯ ಪದಿಮೂರುವರುಷ |
ಸವೆದುದೆನಲು ಕೇಳಿಯಿಂತೆಂದನಾಭೂ | ಧವನನಂದಾಕೃಷ್ಣನೊಳಗೆ || ೩೪ ||

ದಾಯಾದ್ಯರವರೀರ್ವರು ಸಮವೆಂಬಾ | ನ್ಯಾಯವ ಪರಿಪಟ್ಟು ನೀವು |
ವೈಯಾರದಿಂದಿಮವರಕೂಡಿಕೊಂಡ | ನ್ಯಾಯಮನಾರು ಮೆಚ್ಚುವರು || ೩೫ ||

ಹಿಂದೆಯುಪಾಯದಿ ಕೊಂಡ ಧರೆಯ ನೀ | ವಿಂದು ಬಿಡಲು ಹೇಳಬಹುದೇ |
ಎಂದು ನುಡಿಯೆ ನೀವೀರ್ವರು ತತ್ಸಮ | ವೆಂದು ಕಾಣ್ಬರು ನಮ್ಮ ನೃಪರು || ೩೬ ||

ಕಟ್ಟುಬಂದೋರಗೆಯರಸುಗಳನು ಮುಂ | ದಿಟ್ಟುಕೊಂಡಿಹುದು ಭೂತಳದ |
ಕಟ್ಟರಸುಗಳ ನೀತಿಯನಲ್ಲವೆಂದು ಬಾ | ಯ್ವಿಟ್ಟಾಡುವರೆ ನೃಪತಿಲಕ || ೩೭ ||

ಚತುರತೆಯಿಂ ಕೊಂಡ ರಾಜ್ಯಮನಾಪಾಂಡು | ಸುತರ್ಗೀಯೆನೆಂಬುದು ನಿನಗೆ |
ಮತವಲ್ಲವೀಮಾತನಾರವಧರಿಪರು | ಕ್ಷಿತಿ ಹೊರದಂತದರಿಂದ || ೩೮ ||

ಲೋಕೈಕವೀರರುತ್ತಮಪುಣ್ಯನಿಧಿಗಳ | ನೇಕಚಿತ್ತದಿ ಕೂಡೆ ನಿನ್ನ |
ಆ ಕಡೆಗಾಲದಮೃಡನೋಡಬಲ್ಲನೆ | ಯಾಕಡೆಗಣ್ಣನು ತೆರೆದು || ೩೯ ||

ಎನಲೆಂದನವರ ಪುಣ್ಯಮನವರೇಳ್ಗೆಯ | ನಿನಿಸು ನೀ ಕೊಂಡುಕೊನೆವುದು |
ಅನುನಯಮೇಯೆನಲಿಂತೆಂದನರಗಿನ | ಮನೆಗಿಚ್ಚವರಸಾಯಿಸಿತೇ || ೪೦ ||

ಅದರೊಳುಳಿದು ಬಂದು ಮರ್ದಿಸಿಯಸುರರ | ಸುದತೀರತ್ನಂಗಳನು |
ವಿದಿತಮಪ್ಪಾಯುಧಗಳನೋವದೆ ಗಳಿ | ಸಿದುದನೆಲ್ಲವ ನೀವರಿಯಿರೇ || ೪೧ ||

ಲೆಕ್ಕವಿಲ್ಲದ ನಿಮ್ಮ ವಾಹಿನಿಯೆಲ್ಲವ | ಹೊಕ್ಕು ಸ್ವಯಂವರದೊಳಗೆ |
ಒಕ್ಕಲಿಕ್ಕಿ ಕೊಂದುದನೀವರಿಯಿರೆ | ಯೆಕ್ಕತೂಳದ ಭಟರವರು || ೪೨ ||

ಈ ಸಾಹಸಿ ಕೃಪನೀಕಲಿರವಿಸುತ | ನೀಶೂರನಶ್ವತ್ಥಾಮ |
ಈ ಸುಭಟದ್ರೋಣನೀವೀರಸೈಂಧವ | ನೀಸಮರೋದ್ಧತಶಕುನಿ || ೪೩ ||

ಈ ಬಲವಂತ ಸಂಸಪ್ತಕರಾ ನಿ | ಮ್ಮೀ ಬಲಗೈಯ ವಿಕರ್ಣ |
ಈ ಬಂಟನಮರಗಂಗಾತನುಜಾತಮ | ತ್ತೀ ಬಾಹುಬಲಯುತ ಶಲ್ಯ || ೪೪ ||

ಧರೆಹೊರದಂತಪ್ಪೀಯತಿರಥಿಕರು | ಮರವಿಟ್ಟವೊಲು ನೋಡುತಿರಲು |
ಅರಸ ನಿನ್ನು ಗಾಂಧರ್ವರಿಂದವೆ ತಂದ | ನರನು ನಾಡರಿಕೆಯಭಟನೆ || ೪೫ ||

ದ್ವೀಪಾಂತರಕೆಯಿಲ್ಲಿಂಪೋಗಿಯಾ ರಥ | ನೂಪುರಚಕ್ರವಾಳವನು |
ವ್ಯಾಪಿಸಿದಾವಜ್ರಖರ್ಪರವನು ಕೋಪಾ | ಟೋಪದೊಳು ನುಗ್ಗುವೊಯ್ದು || ೪೬ ||

ಬೆದರಿಸಿ ಕಾವಲದೇವತೆಗಳ ತನ | ಗಿದಿರಾದಾವೂರ ಭಟರ |
ಸದೆದು ತನ್ನಾನಾದುನಿಯನಿರದೆ ತಂ | ದಧಟ ಭೀಮಗೆ ಸಮನಾರು || ೪೭ ||

ತುರುವ ಹಿಡಿವ ಸಮಯದೊಳು ಧರಾತಳ | ಹೊರದಂತಾ ನಿಮ್ಮ ಬಲವ |
ಬರಿಕೆಯ್ದು ಬೀರಿತೋಡಿಸಿತಿಲ್ಲವೆ ನಾ | ಡರಿಕೆಯೊಳಾ ವಿಕ್ರಿಮಿಗಳು || ೪೮ ||

ತುರುವ ಹಿಡಿವ ಸಮಯದೊಳು ಧರಾತಳ | ಹೊರದಂತಾ ನಿಮ್ಮಬಲವ |
ಪಿಂತೆ ನೀ ಕೊಂಡ ಧರೆಯ ಪಾಲಿಪುದೆನ | ಲಿಂತೆಂದನಾಸುಯೋಧನನು || ೪೯ ||

ಎಲೆ ಕೃಷ್ಣ ನೀನು ಕೊಂಡಾಡಿದೆಯವರದೊ | ರ್ವಲವನದರಿನಾಹವದೊಳು |
ಕಲಹವ ಮಾಡಿ ಗೆಲಿದು ಭೂತಳವನು | ಬಲುಪರಿಯಿಂ ಕೊಳ್ಳ ಹೇಳು || ೫೦ ||

ಹರಿಹರವಿಧಿಗಳಲ್ಲದೆ ನನ್ನೊಳು ಕಾದಿ | ತರಹರಿಸುವ ಭಟರುಂಟೇ |
ನರಲೋಕದೊಳಗೆನುತ ಬಿರುನುಡಿದಾ | ಕುರುಪತಿಯವನ ಬೀಳ್ಕೊಡಲು || ೫೧ ||

ನೀವೀಗೆಸಗಿದ ಕಾರ್ಯದ ಫಲವನು | ನೀವೇ ನೆರೆಯಂಬಿರೆಮದು |
ಓವದೆ ನುಡಿದೆಳ್ದು ಪೊರಮಟ್ಟನವನು ಮ | ತ್ತಾವಾರಣಪುರವರವ || ೫೨ ||

ಕತಿಪಯಣದಿನಾದ್ವಾರಾವತಿಗೆ ಬಂ | ದತಿಬಲ ಬಲಕೇಶವರ |
ನುತಗುಣಿಧರ್ಮಜನನು ಕಂಡಾ ಕುರು | ಪತಿ ನುಡಿದುದನುಸುರಿದನು || ೫೩ ||

ಆ ನುಡಿಗೇಳಿ ಬಲಾಚ್ಯುತರಿಂತೆಂದ | ರೀ ನಮ್ಮ ಕಾರ್ಯ ಸಂಗರದ |
ಆ ನೆಲದೊಳಗಲ್ಲದಾಗದೆನಲು ಧರ್ಮ | ಸೂನುವಿಂತೆಂದಾಡಿದನು || ೫೪ ||

ಕಾದಿದೊಡಲ್ಲದೆ ಕೊಡೆನೆಂಬುವನದು | ಸೋದರರನು ಕಾದಿಕೊಂದು |
ಮೇದಿನಿಯನು ಧರ್ಮಜನೊಯ್ದನೆಂಬೊಂ | ದಾದುರ್ಜನವನೆಂತು ಕಳೆವೆ || ೫೫ ||

ಎನೆ ಭೀಮ ಪಾರ್ಥ ನಕುಲ ಸಹದೇವರು | ಕನಲಿಯಿಂತೆಂದಾಡಿದರು |
ಮನುನಿಭಚರಿತ ನೀನಿಂತಿರು ನಾವಾ | ಘನದುರ್ಯಶವ ತಾಳುವೆವು || ೫೬ ||

ಎಲೆ ಭೂಪ ನಿನ್ನುತ್ತುಮಮಪ್ಪ ಸತ್ಯವ | ಸಲಿಸಲು ನಾವಿಂದುವರ |
ಸಲೆಸೈರಿಸಿದೆವಲ್ಲದೆ ಸೈರಿಸುವೆವೇ | ಕಲಹಕೆ ಕೌರವನೊಡನೆ || ೫೭ ||

ಕುಟಿಲೋಪಾಯದಿ ಕೊಲಲಾದುದಿಲ್ಲ ದು | ರ್ಘಟಮಪ್ಪಾಜಿರಂಗದೊಳು |
ದಿಟಮಾಗಿ ನಮ್ಮ ಗೆಲ್ಲುವುದಹುದೇಯ | ಕ್ಕಟಕಡುಕಪಟಿ ಕೌರವಗೆ || ೫೮ ||

ಎಂದು ನುಡಿವುತಿರಲಾ ಹರಿಯೊಡನಿಂ | ತೆಂದನು ಬಲಭದ್ರನಿವರ |
ಅಂದದಿನೆಮಗಾಮಧಾಧೀಶಗೆಂ | ದೆಂದಿಗುಳಿಯದು ಸಂಗ್ರಾಮ || ೫೯ ||

ಎನುತ ಸಂಗ್ರಾಮದ ಸಮಕಟ್ಟನಾ ಭೂ | ವನಿತೇಶನೊದವಿಸುತಿರಲು |
ಆನಿತರೊಳತ್ತ ಜರಾಸಂಧಚಕ್ರಿಯು | ಮುನಿಸದಳೆದು ಭರದಿಂದ || ೬೦ ||

ರಣಸನ್ನಾಹನಿಸ್ಸಾಳವ ಹೊಯ್ಸಲು | ಕ್ಷಣದೊಳಗಾಬಲುಸೇನೆ |
ಗಣನಾತೀತಮೆನಲು ನೆರೆಯಲು ತಲೆ | ಮಣಿದುದಿಳೆಯಹೊತ್ತ ಫಣಿಯ || ೬೧ ||

ಅಂತು ನೆರೆದ ಸೇನೆಯ ಕಂಡಾ ಭೂ | ಕಾಂತನಾ ಯಾದವರೊಡನೆ |
ಅಂತವಿಲ್ಲದ ಕೋಪವ ಮಾಡಿ ಪೊರಮಡ | ಲಿಂತೆಂದನೋರ್ವಸಚಿವನು || ೬೨ ||

ಎಲೆ ನೃಪ ನಿನಗಣ್ಮದೆ ಯಾದವರೆಯ್ದಿ | ಜಲರಾಶಿಯೊಳು ಮನೆಗಟ್ಟಿ |
ತಲೆಯಮರೆಸಿಕೊಂಡಿರ್ದವರೊಳು ನೀನು | ನೆಲೆಮಾಡುವರೆ ಕೋಪವನು || ೬೩ ||

ಎನಲಾ ವಾಚಸ್ಪತಿಯೆಂಬ ಸಚಿವರಿಗೆ | ಜನನಾಥನಿಂತುನುಡಿದನು |
ವನನಿಧಿಯವರ್ಗಾವತೆರದಿ ತೆರಪುಗೊಟ್ಟು | ದೆನಲವನಿಂತು ನುಡಿದನು || ೬೪ ||

ದೇವೇಂದ್ರನವರೆಡೆಗತಿ ಕರುಣದಿ ಬಂ | ದಾವಾರಾಶಿಯ ನೀರ ಬಗಿದು |
ತೀವಿದ ರಚನೆಯಿಂದವೆ ಸಮೆದಾ ದ್ವಾ | ರಾವತಿಯೆಂಬ ಪಟ್ಟಣವ || ೬೫ ||

ಅನುರಾಗದಿಂದಲ್ಲಿಯವರನಿರಿಸಿಪೋದ | ನೆರೆಸುರಪತಿಯಾಪುರವ |
ಅನುಗೆಯ್ದುಕೊಡುವುದಕವರ ಮಹಿಮೆಯೇ | ನೆನೆ ಚಕ್ರಿಗವನಿಂತು ನುಡಿದ || ೬೬ ||

ನಳಿನೋದರನ ಪುಣ್ಯವನೇನನೆಂಬೆನಿ | ನ್ನಳಿಯನವನ ಸೋದರರು |
ಎಳೆಯರನರುವರ ಕೊಂದು ಮತ್ತವನಸು | ಗೊಳಲೆಂದು ದೇವತೆಗಳನು || ೬೭ ||

ಕಳುಹಲವರ ತಾನು ಮೊಲೆಯುಂಬಕಾಲದಿ | ಬೆಳೆವನ್ನವರ ಹತ ಮಾಡಿ |
ಬಳಿಕೇಳುದಿನ ಗೋವರ್ಧನಗಿರಿಯನಂ | ಗುಲಿಯೊಂದರೊಳು ಬಿಡದೆತ್ತಿ || ೬೮ ||

ಕಾಳಾಹಿಯ ಕೊಂದು ಕಮಲವ ತಂದಾ | ವ್ಯಾಳಿಶಯ್ಯೆಯನಿರದೇರಿ |
ಕಾಳದಂಡಮನೇಳಿಪ ಬಿಲ್ಲವೇರಿಸಿ | ಮೇಲೂದಿ ಪಾಂಚಜನ್ಯವನು || ೬೯ ||

ಮರಣಮನೆಯ್ದಿಸಿ ಮಲ್ಲರ ಕಂಸನ | ಹರಣಾಪಹಾರವ ಮಾಡಿ |
ನರಪತಿ ನಿನಗಂಜಿ ಪೋವಾಗ ನಿನ್ನುರು | ತರವಾಹಿನಿ ಬೆನ್ನೊಳೆಯ್ದೆ || ೭೦ ||

ಅವರ ಸುಕೃತದೇವತೆಯಗ್ನಿಕುಂಡದೊ | ಳವರಳಿದಂದವ ಮಾಡಿ |
ಅವನಿಪ ನಿನ್ನವರಿಗೆ ತೋರಿಯಲ್ಲಿಂ | ದವರಕಳುಹಿಕೊಡಲಾಗ || ೭೧ ||

ಸುರಪತಿ ಬಂದು ಪುರವ ಮಾಡಿಯವರನ | ಲ್ಲಿರಿಸಿದನಬ್ಧಿವಿಜಯನ |
ವರಗರ್ಭದೊಳು ತ್ರಿಭುವನಪತಿ ನೇಮೀ | ಶ್ವರನುದಯಿಪ ಕಾರಣದಿ || ೭೨ ||

ಅದರೊಳಚ್ಯುತನಿರ್ದು ಶಿಶುಪಾಲನ ಕೊಂದು | ವಿದಿತವಿಜಯಗಿರಿಗೆಯ್ದಿ |
ಅಧಟಜಾಂಬವನ ಕೊಂದವನ ತನೂಭವೆ | ಮದವತಿ ಜಂಭಾವತಿಯನು || ೭೩ ||

ಮದುವೆಯ ನಿಂದೆರಡನೆಯ ದೀವಿಗೆ ಪೋಗಿ | ಪದುಳದಿ ಶಂಖಸ್ವರದಿ |
ಅದುರಿಸಿಯವನಿಯನಾಶಂಖಚಕ್ರಿಯ | ಕದನಕಿಚ್ಚೆಯಮಾಡಿನಿಂದ || ೭೪ ||

ಮುರವೈರಿ ಕೇಳು ಭೂಪಾಲ ಮತ್ತಾತನ | ವರನಂದನನೀ ದಿನದ |
ಅರಲಂಬನತಿ ವಿಕ್ರಮಸಮುಪೇತ ಬಂ | ಧುರತರಚರಮಶರೀರಿ || ೭೫ ||

ವನಧಿವಿಜಯರಾಜೇಂದ್ರನ ನಿಜ | ತನುಜಾತನೇಮಿಕುಮಾರ |
ವನಿತೆ ರೋಹಿಣಿಯ ಮದುವೆಯೊಳೆಲ್ಲರ ಗೆಲ್ದ | ವಿನುತ ವಿಕ್ರಮಿ ವಸುದೇವ || ೭೬ ||

ಬಲದೇವನೆಂಬವನತಿ ಬಲಯುತನವ | ಗಿಳೆಯೊಳಗಾರೆಣೆಯಿಲ್ಲ |
ಕಲಿಗಳು ಪಾಂಡವರಾ ಹರಿಯನು ಸೇರಿ | ನೆಲಸಿದರೆಲೆ ನರನಾಥಾ || ೭೭ ||

ಇಂತು ಸಹಾಯಸಂಪತ್ತಿಯಿರ್ದಾ ಶ್ರೀ | ಕಾಂತನು ನಿನಗಿದಿರಾಗಿ |
ಎಂತಾನು ನಿಲಲಣ್ಮದೆ ವನಧಿಯ ಹೊಕ್ಕು | ಚಿಂತೆ ಮಿಗಲು ಬಾಳುತಹನೆ || ೭೮ ||

ಕಡುಮುಸಕೆ ನಿರ್ವಕ್ಕದೊಳಗೊಂದು | ನುಡಿಯಲಿ ಅವನಿಯೊಳೆನ್ನ |
ಅಡಿಗೆರಗದರಿಲ್ಲವೆನಗೆ ಮಾರ್ಮಲೆತಾ | ಕಡಲೊಳಗವರಿರಬಹುದೆ || ೭೯ ||

ಎಂದಾ ಸಚಿವನ ಮಾತುಗೇಳದೆ ಕೋಪ | ದಿಂದ ಗದ್ದುಗೆವೊಯ್ದೆದ್ದು |
ಮುಂದಿರ್ದ ಗಂಧಸಿಂಧುರಮಸ್ತಕವೇರಿ | ಯಂದು ಬಾಗಿಲಿಗೆಯ್ದಿನಿಲಲು || ೮೦ ||

ಚೋಳ ಕೇರಳ ಕರ್ನಾಟಕ ಮಹಾರಾಷ್ಟ್ರ | ಮಾಳವ ಮಗಧ ಕನ್ನೋಜ |
ಗೌಳ ಗುಜ್ಜರ ಮರಹತ ಸೌರಾಷ್ಟ್ರ ನೇ | ಪಾಳಾದಿಯ ನೃಪವರರು || ೮೧ ||

ದೋರ್ವಲಗರ್ವಪರ್ವತದುರ್ಗಾರೂಢರೋ | ರೋರ್ವರೊಲ್ದು ಕೈಮುಗಿದು |
ಪರ್ವಿದ ಕೋಪಾವೇಶದಿನಾಮಗ | ಧೋರ್ವೀಶಗಿಂತಾಡಿದರು || ೮೨ ||

ದೊರೆಯೆದ್ದು ಹಗರಣವಾಡಿದಂದದಿ ನೀ | ನಿರದೀಹುಲುಕಜ್ಜಕಾಗಿ |
ತರಲು ಮನವನಾಲೋಕನಗೈದೆ ಭೂ | ವರ ಕೇಳದು ಕಾರಣದಿ || ೮೩ ||

ಕೊಟ್ಟೆಯಾದೊಡೆ ನನಗೀ ಬೆಸನನು ದಾಳಿ | ಯಿಟ್ಟು ತದ್ವಾರಾವತಿಯ |
ಸುಟ್ಟುಸೂರೆಯ ಹೊಯ್ದು ಹುಲಿಕರಡಿಗೆ ಮನೆ | ಗಟ್ಟಿಸದೇ ಸುಮ್ಮನಿಹೆನೆ || ೮೪ ||

ಭೂಮೀಶ ಕೇಳೆಮಗೀ ಬೆಸನನು ಕೊಟ್ಟೊ | ಡೀ ಮೈಯೊಳು ದಾಳಿಯಿಟ್ಟು |
ಆ ಮಾಧವನ ಪಟ್ಟಣವನು ನಿರ್ಧೂಮ | ಧಾಮಮಪ್ಪಂತುರುಪುವೆವು || ೮೫ ||

ಏನಿವನತಿ ವಾಚಾಲನೆನಲುಬೇಡ | ಭೂನಾಥ ನೀ ಮೆಚ್ಚುವಂತೆ |
ಆ ನಾರಾಯಣನೂರನು ದಂದಹ್ಯ | ಮಾನಮಪ್ಪಂತು ಸುಡುವೆವು || ೮೬ ||

ಬೇಗ ಬೆಸನನಿತ್ತೊಡೆ ಬಿಟ್ಟಸುರಿಯೊ | ಳ್ಪೋಗಿ ವಿಷ್ಣುವಿನ ವೀರವನು |
ಲಾಗಗೆಡಿಸದಿರ್ದೊಡೆ ಜೋಗಿಜಂಗಮ | ರಾಗುವೆವರಸ ನಿನ್ನಾಣೆ || ೮೭ ||

ದುರುಳತನದಿ ಮಾರ್ಮಲೆತು ಗರ್ವದಿ ನಿನ್ನ | ಚರಣಮೂಲಕ ಮುಗ್ಗದಿರ್ಪಾ |
ಹರಿಯ ನಗರಿಯೆಂಬುದು ಭೂಪ ಕೇಳೆಮ್ಮ | ಹರಿ ದಾಳಿಗೀಡಾಗುವುದೇ || ೮೮ ||

ಎನ್ನ ಪರಾಕ್ರಮಾನಲವಾಡವನಿಂ | ಮುನ್ನೀರ ಹೀರಿಸಿ ಹರಿಯ |
ಬನ್ನಬಡಿಪೆವೀಬೆಸನನು ಕೊಡದೊಡೆ | ನಿನ್ನಾಣೆ ನಿನಗೆ ಭೂಪಾಲಾ || ೮೯ ||

ಬಲರಾಮನನು ಬಾಳ್ದೆಲೆಗೊಂಡವನ ಕರ | ತಳದ ಹಲಾಯುಧ ಸಹಿತ |
ಛಲದಂಕ ಕೇಳ್ನಿನ್ನ ತೆರಿಗೆಯ ಹಳ್ಳಿಯೊ | ಳುಳುವೊಕ್ಕಲ ಮಾಡುವೆವು || ೯೦ ||

ಒಂದು ಹಗಲು ಸೈರಿಸು ದಾಳಿಯಿಟ್ಟು ಗೋ | ವಿಂದನ ಹಿಡಿಯಾಳ ಹಿಡಿದು |
ತಂದೆಂದಿನಂದದಿ ನಿನ್ನ ಕೀಲಾರದ | ಗೊಂದೆಗಳನು ಕಾಯಿಸುವೆವು || ೯೧ ||

ಬೀವಮಾರುತರುಗ್ನಿಣನ ಪುರಕೆ ಪೋದ | ಕಾವನ ಕೈಸೆರೆ ತಂದು |
ಭೂವರ ಕೇಳ್ನಿನ್ನ ಪದಪದ್ಮಕೆ ಸಮ್ಮ | ವಾವುಗೆಗಳನಿಕ್ಕಿಸುವೆವು || ೯೨ ||

ರೋಹಿಣಿಯುದ್ವಾಹದೊಳೆಲ್ಲರರಿಕೆಯೊ | ಳಾಹರೆವೊಯ್ದಂತೆ ನಿನ್ನ |
ವ್ಯೂಹದ ಮುಂದಾವಸುದೇವನ ತಂ | ದಾಹರೆಯನು ಹೋಯಿಸುವೆವು || ೯೩ ||

ಕೇಳಿಂದು ಪಾಂಡುಪಂಥವ ಯಾದವಭೂ | ಪಾಲ ಕುಮಾರರೆಲ್ಲರನು |
ನಾಳೆಗೆ ನಿನ್ನ ಮೈಗಾಪಿನಾಳಿಗೆಯೋಳಿ | ಯಾಳ ಮಾಡುವೆವು ನಿನ್ನಾಣೆ || ೯೪ ||

ಗಂಡುತನದೊಳಾಪುರವರದೊಳಗಿರ್ಪ | ಪಾಂಡವರುಗಳ ತಲೆಯನು |
ಸೆಂಡಾಡದೊಡೆಮ್ಮೀ ಮೊಗದೊಳು ಮೀಸೆ | ಗೊಂಡು ನಿನ್ನೊಳು ಜೀವಿಸುವೆವೇ || ೯೫ ||

ದಿಟ್ಟತನದಿ ಪೋಗಿ ವನನಿಧಿಯೊಳು ಮನೆ | ಗಟ್ಟಿದ ಬಲ ಕೇಶವರ |
ಪಟ್ಟಣವದು ನಮ್ಮ ಸೇನೆಗೆ ಧೂಳೀ | ಪಟ್ಟವಲ್ಲವೇ ಮಗಧೇಶ || ೯೬ ||

ಎಂದು ತಂತಮ್ಮ ಬೀರವನೊದರುವ ನೃಪ | ವೃಂದದ ಮೊಗವನೀಕ್ಷಿಸುತ
ಮಂದಸ್ಮಿತಮುಖನಾಭೂಪಾಲಕ | ಚಂದ್ರನೈದಿದನು ಸಂಗರಕೆ || ೬೭ ||

ಪಾಯವದಾರು ಪರಾವನಿಪಾಲನಿ | ಕಾಯಕರೇಣುಪಂಚಾಸ್ಯಾ |
ಆಯತವೆಂದೆನುತಾಕಂಚುಕಿಗಳನಿ | ಕಾಯವಿರದೆ ಘೂರ್ಣಿಸಿದುದು || ೬೮ ||

ಅವನೀಸುರರಾಶೀರ್ವಾದ ಮಾಗಧ | ನಿವಹದ ಕೊಂಡಾಟದೇಳ್ಗೆ |
ಕವಿಗಮಕಿಗಳ್ಳುಗ್ಘಡಣೆಯ ಕೇಳುತ | ತವಕದಿ ನಡೆತಂದನಾಗ || ೬೯ ||

ಪದಿನಾರು ಪೆಣ್ಣಾನೆಯನೇರಿ ಸುದತಿಯ | ರೊದವಿದ ಸಂತಸದಿಂದ |
ಚದುರಿಂ ಧವಲಚಾಮರವ ಬೀಸಿದರಾ | ವುದಿತ ಪರಾಕ್ರಮಿಗಾಗ || ೧೦೦ ||

ರವಿಯರಥದ ಸಪ್ತವಾಜಿಗೆ ಮನದೊಳು | ಸವನೆನಿಸುವ ತೇಜಿಯೇರಿ |
ನವಕೋಟಿರಾಯರಾವುತರೈದಿದರಾ | ಭವನಭುಂಭುಕನನೋಲೈಸಿ || ೧೦೧ ||

ಎಣಿಸಿದೊಡೆಂಬತ್ತನಾಲ್ಕುಲಕ್ಷದೊಳರ್ಧ | ಗಣನೆಯ ಮದಹಸ್ತಿಗಳ |
ಪಿಣಿಲೇರಿದ ಜೋದರರೈದಿದರಾ | ಪ್ರಣುತಪರಾಕ್ರಮಿಯೊಡನೆ || ೧೦೨ ||

ಅತಿರಥರರ್ಧರಥಿಕಸಮರಥಿಕರು | ನ್ನತರೆನಿಪಾ ಮಹಾರಥರು |
ಕ್ಷಿತಿಪನನೋಲೈಸಿ ನಾಲ್ವತ್ತೆರಡು ಲಕ್ಕ | ವತಿ ಭರದಿಂದೈದಿದರು || ೧೦೩ ||

ಕೋಟಿ ಬಲಕ್ಕೋರೊರ್ವರೆಂದೆನಿಪ ಸ | ಘಾಟಿಯಿಂದಾ ಕೃತಾಂತನನು |
ತೋಟಿಗೆ ಕರೆವವರಾನಾಲ್ವತ್ತೆಂಟು | ಕೋಟಿ ಭಟರು ಬಂದರಾಗ || ೧೦೪ ||

ಮತ್ತುಳಿದಾರ್ಯಾಖಂಡದ ಭೂಪರ | ಮೊತ್ತದ ಚತುರಂಗಸೇನೆ |
ತುತ್ತುರುಬಾಗಿ ತದ್ವಲವ ಕೂಡಿದುದಿ | ಪ್ಪತ್ತನಾಲ್ಸಾಸಿರಕ್ಷೋಣಿ || ೧೦೫ ||

ಪೊಡವಿಯ ಪೊತ್ತ ಫಣೀಂದ್ರನ ತಲೆಚಿಪ್ಪೆ | ವಡೆದುದುಯಾಕಿವಿವಟ್ಟೆ |
ಒಡೆದುದು ಜಿಹ್ವೆಯಡಗಿದವಂಘ್ರಿಗಳಾ | ನಡೆದ ಪಡೆಯ ಭಾರದಿಂದ || ೧೦೬ ||

ಧರೆ ರತ್ನಗರ್ಭೆಯಾದುದರಿಂದಾಬಲ | ದುರುತರಪದಹತಿಯಿಂದ |
ಪರಿದೇಳ್ವಾರಜಸಹಿತ ಬಾನೊಳು ಸಿಲ್ಕಿ | ಧರಿಯಿಸಿದುವುಗ್ರವೆಸರ || ೧೦೭ ||

ಸೇನಾಪದಹತಿಯಿಂ ಜನಿಸಿದರಜ | ಮಾನಡುಗಡಲೆಡೆಗೈದಿ |
ನಾನಾ ನೆಲೆಯೊಳು ಜನಿಸಿದೀವಿಗಳಾದು | ವೇನೆಂಬೆನದರುನ್ನತಿಕೆಯ || ೧೦೮ ||

ಇಳೆಯೊಳಗೆಮ್ಮರಸಂಗಿದಿರಿಲ್ಲೆಂ | ದಲಸದೆ ಸುರಪರಿವೃಢನ |
ಕಲಹಕ ಕೈವೀಸಿ ಕರೆವಂತೆದ್ದುವು | ಪಲವು ಪತಾಕಾನಿವಹ || ೧೦೯ ||

ಈರೆಂಟುಸಾಸಿರ ಮಕುಟಾಧೀಶ್ವರ | ರಾರೈದೊಡನೈದುತಿರಲು |
ಭೂರಿಷಡಗಂವಾಹಿಗೂಡಿಬಂದನು | ಧಾರಣಿ ಪೊರದಮಾಳ್ಕೆಯೊಳು || ೧೧೦ ||

ವಸುಧೆ ನೆರೆಯದಾಬಲದ ಬಲ್ಮೆಗೆಯಾ | ಗಸನೆರೆಯದು ಕೇತುತತಿಗೆ |
ದೆಸೆ ನರೆಯದು ವಾದ್ಯದ ರಭಸಕ್ಕೆನೆ | ಮಸಗಿ ನಡೆದುಬಂದನಾಗ || ೧೧೧ ||

ಸೇನಾಪದಪಾತದಿ ಸಮೆದಾ ನೆಲ | ನಾನಭಮಾಯ್ತಾಗಗನ |
ತಾನಾಧೂಳಿಯಡರೆ ನೆಲನಾಯ್ತದ | ನೇನೆಂದು ಬಣ್ಣಿಸಿ ಪೇಳ್ವೆ || ೧೧೨ ||

ಇಂತು ನಡೆದು ಬಂದು ತೊರೆ ಕೆರೆ ಕಾಲುವೆ | ತಿಂತಿಣಿಗೊಂಡು ರಂಜಿಸುವ |
ಮುಂತಣ ಕುರುಜಾಂಗಣವಿಷಯದೊಳು ಭೂ || ಕಾಂತನು ಬೀಡ ಬಿಡಿಸಲು || ೧೧೩ ||

ಆ ವಾರ್ತೆಯ ಕೇಳಿ ಮುದದಿಂದ ಕೌರವ | ಭೂವರ ತನ್ನೊಳಿಂತೆಂದು |
ಭಾವಿಸಿದನು ದಾಯಾದಿ ಪಾಂಡವರುಗ | ಳಾ ವೈರಿಗಳನು ತಾವೊಸೆದು || ೧೧೪ ||

ಕೂಡಿಕೊಂಡಿರ್ದ ಯಾದವರಿಗೆ ಚಕ್ರಿಯಿಂ | ಕೇಡು ಸಂಭವಿಸಿದುದಾನು |
ಮಾಡಿದ ಪುಣ್ಯದ ಫಲದಿಂ ಬೇಡಿದ | ಕಾಡೊಳು ಮಳೆಹೊಯ್ದಂತೆ || ೧೧೫ ||

ಇದು ವೇಳೆ ನನಗೆಂದು ತನಗುಳ್ಳ ಬಲವನು | ಪದಪಿಂ ಕೂಡಿ ಕೌರವನು |
ಮದಯುತನಾಗಿ ಜರಾಸಂಧಚಕ್ರೇಶ | ಗಿದಿರಾಗಿ ಬಂದು ಕೂಡಿದನು || ೧೧೬ ||

ಲೆಕ್ಕಕ್ಕೆ ಬಾರದ ಲೋಕೈಕವೀರರು | ಎಕ್ಕತೂಳದ ಕೋಟಿಭಟರು |
ಇಕ್ಕೆಲದೊಳು ಸಂದಣಿಸಿ ಬರಲು ಬಂದು | ಹೊಕ್ಕನು ಚಕ್ರಿಯ ಬೀಡ || ೧೧೭ ||

ಇಂತು ಬಂದು ಕೌರವ ಮಗಧೋರ್ವೀ | ಕಾಂತನ ಸಮ್ಮುಖವಾಗಿ |
ಇಂತೆಂದನೆಲೆದೇವ ನೀನೀ ಪುಲುಕಜ್ಜ | ಕಿಂತು ದಂಡೆತ್ತಿ ನಡೆವರೇ || ೧೧೮ ||

ಎನ್ನ ಕರೆಸಿಯೀ ಬೆಸನನು ಕೊಟ್ಟೊಡೆ | ನಿನ್ನ ಮನಸಿನಭೀಷ್ಪವನು |
ಚೆನ್ನಾಗಿ ಸಲಿಸುವೆನೆಂದು ನುಡಿದಾನು | ವುನ್ನತ ಸತ್ತ್ವನಿಂತೆಂದ || ೧೧೯ ||

ಎಲೆ ಕುರುಪತಿ ನಿನ್ನ ಬಲುಬಲ ನಿನ್ನ ದೋ | ರ್ವಲ ನಿನ್ನ ಬಂಧುಸಂಪತ್ತಿ |
ನೆಲೆದೊಳಗಾವಗುಂಟೀನಿನ್ನೀನುಡಿ | ಸಲುವುದೇ ಸಾಧಾರಣರ್ಗೆ || ೧೨೦ ||

ಎಂದವನನು ಕೊಂಡುಕೊನೆದು ನುಡಿದು ತ | ನ್ನೊಂದಾಗಿ ಬೀಡನು ಬಿಡಿಸಿ |
ಮುಂದಕ್ಕೆ ನಡೆವ ಸಮಯದೊಳು ನಾರದ | ಬಂದನು ಬಾಂಬಟ್ಟೆಯಿಂದ || ೧೨೧ ||

ಆ ನಾರದನ ಕಂಡಿದಿರೆದ್ದು ಮಗಧಮ | ಹೀನಾಥನವನತನಾಗಿ |
ಸಾನಂದದಿನಿಂತು ನುಡಿದನೆಲೇ ಬ್ರಹ್ಮ | ಸೂನು ನೀವಿಗಲೆ ಪೋಗಿ || ೧೨೨ ||

ಬಲ್ಲಿದ ಬಲಕೇಶವರೆನ್ನೊಳು ಕಾದ | ಬಲ್ಲರೆಯಿದಿರಾಗಿ ಬರಲಿ |
ಅಲ್ಲದೊಡನಗೆ ಬಂದರಗಲಿಯಿದನವ | ರ್ಗುಲ್ಲಾಸದಿಂ ಪೇಳಿಮೆನಲು || ೧೨೩ ||

ನಸುನಗೆ ನಗುತ ನಿನ್ನೀ ಮಾತನವರೊಳ | ಗುಸುರುವೆನೆಂದು ಬೀಳ್ಕೊಂಡು |
ಅಸವಸದಿಂದ ವಿಮಾನವನೇರಿಯಾ | ಗಸವಟ್ಟೆಗಿರದೆಯ್ತಂದು || ೧೨೪ ||

ದ್ವಾರಾವತಿಗಿರದೆಯ್ದಿ ಮತ್ತಾ | ನಾರಾಯಣರನು ಕಂಡು |
ಚಾರುಚರಣಕೆರಗಲು ಕಡುಹರಸಿಯಾ | ನಾರದನಿಂತು ನುಡಿದನು || ೧೨೫ ||

ಎಲೆ ವಿಷ್ಣು ಕೇಳು ತನ್ನಾಜಯವನಿತೆಯ | ನೊಲಿದು ನಿನಗೆ ಕೊಡಲೆಂದು |
ಇಳೆಯಾಧಿಪತಿಮಾಗಧನಾ ಕುರುಭೂ | ತಳದೊಳು ದಂಡುಬಿಟ್ಟಹನೆ || ೧೨೬ ||

ಇದಕೆ ತಕ್ಕುದನು ನೀವೇ ಬಲ್ಲಿರೆನುತ ನಾ | ರದನು ನುಡಿದು ಬೀಳ್ಕೊಂಡು |
ಪದುಳದಿ ತನ್ನ ವಿಮಾನವನೇರಿ ನೀ | ರದಪಥಕೆಯ್ದಿದನಿತ್ತ || ೧೨೭ ||

ನ್ಯಾಯವಿಲ್ಲದೆ ನನ್ನ ಮೇಲೆತ್ತಿ ಬಂದಾ | ರಾಯನ ತಲೆ ಪರಿಯೆಚ್ಚು |
ಆಯಾಸಮಿಲ್ಲದೆ ಕೆಡಹುವೆನೆಂದು ನಾ | ರಾಯಣನೊದರಿ ನುಡಿದನು || ೧೨೮ ||

ಚಕ್ರದ ಬೆಂಬಳಿಯೊಳು ಭೂಚಕ್ರಮ | ನಾಕ್ರಮಿಸಿದ ತನ್ನ ಬಲುಪ |
ಸಕ್ರಮದಿಂದೊದೆದದ್ರಿಯನೆತ್ತಿದ | ವಿಕ್ರಮವಿಷ್ಣುವಿಗೆಣೆಯೇ || ೧೨೯ ||

ಎಂದೇಕಕುಂಡಲಗಂಭೀರರವದಿ | ನಂದುವಿಷ್ಣುವ ಕೊಂಡಾಡಿ |
ಇಂದೆನ್ನ ಬಾಹುಕುಠಾರದಿ ರಿಪುವನ | ವೃಂದವ ಕಡಿವೆನೆಂದೆನುತ || ೧೩೦ ||

ದುಷ್ಟದುರಿತದೂರ ನೇಮೀಶನಿಂ ತಮ | ಗಿಷ್ಟಸಿದ್ಧಿಯುಮಾಗಲೆಂದು |
ಸಾಷ್ಟಾಂಗವೆರಗಿ ಕೈಮುಗಿದು ಭಕ್ತಿಯೊಳು ವಿ | ಶಿಷ್ಟವೀರರು ಬೀಳ್ಕೊಂಡು || ೧೩೧ ||

ಬಳಿಕ ಸಮುದ್ರವಿಜಯಭೂಪಾಲನ | ತಳಿರಡಿಗವನತರಾಗೆ |
ಅಲಘುತರಪ್ರೀತಿಯಿಂದ ಹರಸಿಯಾ | ತುಳಿಲಾಳ್ಗಳಿಗಿಂತು ನುಡಿದ || ೧೩೨ ||

ಎಲೆ ಮಕ್ಕಳಿರ ಕೇಳ್ನೀಮೀ ಕಾಲದ | ಬಲ ವಾಸುದೇವರ್ಕಳುಗಳು |
ಕಲಿಗಳು ನಿಮಗಾಪ್ರತಿವಾಸುದೇವನ | ಗ್ಗಳಿಕೆಯ ಚಕ್ರ ಕೈಸೇರಿ || ೧೩೩ ||

ಆತನ ತಲೆಯನದರಿನುತ್ತರಿಸಿ ಮ | ಹೀತಳವೆಲ್ಲವ ನೀವು |
ಖ್ಯಾತಿಯಿಂದಾಳ್ವಿರಿಯಿದು ಶಾಸ್ತ್ರಸಿದ್ಧವೆಂ | ದಾತನುಜಾತರಿಗುಸುರೆ || ೧೩೪ ||

ಮತ್ತೆ ಕೈಮುಗಿದಿಂತೆಂದರೆಲೇ ಭೂ | ಪೋತ್ತಂಸ ನೇಮೀಶ್ವರನ |
ಒತ್ತಿನೊಳಿರಿಮೆಂದಾಬಲನಾಪುರು | ಷೊತ್ತಮನವನನಲ್ಲಿರಿಸಿ || ೧೩೫ ||

ಬಳಿಕಮಕ್ಷೋಭಾದಿಯ ಪಿತೃಸಮಿತಿಗೆ | ಯಲಘುಭಕ್ತಿಯೊಳು ಬಂದೆರಗಿ |
ಕಳುಹಿಸಿಕೊಂಡು ಸಂಗ್ರಾಮನಿಸ್ಸಾಣವ | ತಳುವದೆ ಹೊಯ್ಸಿದರಾಗ || ೧೩೬ ||

ಉತ್ತಮನಂತಕಸೂನುಸಹಾಯಸಂ | ಪತ್ತಿಯೆಲ್ಲವ ಕೂಡಿಕೊಂಡು |
ಬಿತ್ತರಮಪ್ಪವಾಹಿನಿಗೂಡಿಯಾಪುರು | ಷೋತ್ತಮನೊಡಗೂಡಿದನು || ೧೩೭ ||

ವೀರ ಮಾರುತಿ ವಿಕ್ರಮ ಪಲ್ಗುಣ ಧುರ | ಧೀರ ನಕುಲಸುಕುಮಾರ |
ಸೂರನು ಸಹದೇವನು ಸಂಗರಕಾರಯ್ಯ | ದೋರಂದದಿಂದೊಡವರಲು || ೧೩೮ ||

ಅಸುರನ ಮೇಲೆಯಮರಪತಿ ಬರ್ಪಂ | ತಸದೃಶವಿಕ್ರಮಯುತರು |
ಬಿಸಜೋದರನು ಮಗಧರಾಜಗಿದಿರಾಗಿ | ಯೆಸಕವಡೆದು ಬಂದನಾಗ || ೧೩೯ ||

ಉತ್ತಮಶಕುನಮೊದವೆಯಾ ಬಲ ಪುರು | ಷೊತ್ತಮರಾನೆಯನೇರಿ |
ಚಿತ್ತಜ ಮೊದಲಾದ ಹರಿವಂಶಭೂಪರು | ಸುತ್ತಿ ಬಳಸಿ ಬರುತಿರಲು || ೧೪೦ ||

ಮೊದಲಲ್ಲಿ ಬಿಟ್ಟಿರ್ದ ಮಗಧ ಮಹೀಶನ | ವಿದಿತಮಪ್ಪಾಪಾಳೆಯಕೆ |
ಇದಿರಾಗಿಯನತಿದೂರದೊಳಾ ಸೇನೆಯ | ನಧಟನಚ್ಯುತ ಬಿಡಿಸಿದನು || ೧೪೧ ||

ಅನಿತರೊಳಾ ವಿಜಯಾರ್ಧಶೈಲದಿನೋರ್ವ | ನನಚರನೆಯಿದಿ ಕೈಮುಗಿದು |
ಜನಪ ಚಿತ್ತೈಸು ನಿನ್ನೀಯವಸರಕತಿ | ಮನದೆಗೊಂಡಪದಗುವೆನೆಂಬ || ೧೪೨ ||

ಕಳಶಂಬರ ಮೊದಲಾದಂಬರಚರ | ಜಾಲಮನಾ ಚಕ್ರಧರನ |
ಓಲೈಸಿ ಬಾಳ್ವ ಕೇಷರರೆಯ್ದಲೀಸದೆ | ಮೇಲುವರಿದು ನಿಂದಹರೇ || ೧೪೩ ||

ಎಂದ ನುಡಿಯ ಕೇಳಿ ಬಲರಾಮನೊಡನೆ ಮು | ಕುಂದನಾಳೋಚನೆ ಮಾಡಿ |
ಮಂದೇತರವಿಕ್ರಮಯುತ ವಸುದೇವ | ಕಂದರ್ಪ ಶಂಬುಕುವರರ || ೧೪೪ ||

ಪದುಳದಿ ವಿಜಯಾರ್ದಪರ್ವತಕೆಯ್ದಿಸಿ | ಪದಪಿಂ ಬಿಟ್ಟರಲಾಗ |
ಮದಯುತ ಮಗಧನೆನ್ನಂತೆಯಳಿವನೆಂದು | ಉದಧಿಯೊಳಿನನಸ್ತಮಿಸಿದ || ೧೪೫ ||

ಮತ್ತಾರಾತ್ರಿಯೊಳೆಸೆದು ನಿದ್ರೆಯೊಳಿರ್ದ | ರತ್ತಚಕ್ರಾಧೀಶ್ವರನು |
ಇತ್ತ ಬಲಾಚ್ಯುತಭೂಮಿಪಾಲಕರ | ತ್ತ್ಯುತ್ತಮ ಸತ್ತ್ವ ಸಂಯುತರು || ೧೪೬ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗೊದವಿದಪ್ಪತ್ತಾರು ಸಂಧಿ || ೧೪೭ ||

ಇಪ್ಪತ್ತಾರನೆಯ ಸಂಧಿ ಸಂಪೂರ್ಣಂ