ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಮಗಧಮಹೀಶನ ಮಧುಮಥನನ ಕಾ | ಳಗವನು ನಡೆನೋಡಲೆಂದು |
ಸೊಗಯಿಸುವುದಯೊರ್ವೀಧರದುಪರಿಮ | ಕೊಗೆದೆಸೆದನು ಲೋಕಚಕ್ಷು || ೨ ||

ಆ ರವಿಯುದಯದೊಳಗೆ ನಿತ್ಯಕರ್ಮವ | ನಾರೈದು ಮಾಡಿ ಮಾಗಧನು |
ಕೌರವನನುಮತದಿಂ ಕಲಿಕರ್ಣಗೆ | ವೀರಪಟ್ಟವ ಕಟ್ಟಿದನು || ೩ ||

ಇತ್ತಲೇಕಾಂಗವಿಕ್ರಮಿ ಪಾರ್ಥಗೆ ಪುರು | ಷೋತ್ತಮ ವೀರಪಟ್ಟವನು |
ಬಿತ್ತರಮಪ್ಪ ವೈಭವದಿಂದಲೆ ಕಟ್ಟಿ | ಮತ್ತೆ ಸಂಗರಕನುವಾದ || ೪ ||

ಅತ್ತಲುದ್ಧತಚಕ್ರೇಶ್ವರನುರುಗಜ | ದುತ್ತಮಾಂಗವನು ಸಿಂಗರಿಸಿ |
ಹತ್ತಲನೇಕ ದುಂದುಭಿಗಳ ರವ ಮೊಳ | ಗಿತ್ತು ಸಕಲ ಭೂತಳವ || ೫ ||

ಮೊಳಗುವ ವಾದ್ಯಂಗಳ ಕೂಡೆ ಭೂತಳ | ಮೊಳಗಿತೆತ್ತಿದ ಕೇತುಗಳ |
ಬಳಿವಳಿಯೊಳಗೆಯಶೂಭಕೇತುವೆದ್ದುವು | ಬಲಯುತ ಪೊರಮಡುವಾಗ || ೬ ||

ಅದನು ಕಂಡಿನಿಸೆಣಿಸದೆಯಾ ಮಗಧನು | ವಿದಿತವಿಕ್ರಮ ನಡೆತರಲು |
ಅಧಟರನೇಕರರಸುಮಕ್ಕಳೆಡಬಲ | ಹುದುಗಿ ನಡೆದುಬಂದರಾಗ || ೭ ||

ಆಹವಲಂಪಟರತಿ ಭಟಸಮಿತಿಯ | ತ್ಸಾಹದಿ ಪಂಥವಾತಾಡಿ |
ಮೋಹರಮಾಗಿಯದಿರದೆಯ್ತಂದುದು | ಸಾಹಸಿಯಾ ಚಕ್ರಿಯೊಡನೆ || ೮ ||

ಮುಂದುಗೆಡಿಸುವ ಸೇನಾಪದಧೂಳಿಯ | ನೊಂದಿ ಬೀಸುವ ಚಾಮರದ |
ಮಂದಮಾರುತನಿರದೋಡಿಸಲಾನೃಪ | ವೃಂದಾರಕ ನಡೆತಂದಾ || ೯ ||

ಈ ತೆರದಿಂ ನಡೆತಂದಾ ಕುರುಧರ | ಣೀತಳದೊಳು ನಿಂದು ಬಳಿಕ |
ಖ್ಯಾತನನಾಕರ್ಣನನು ಬರಿಸಿ ಸಂ | ಪ್ರೀತಿಯಿಂದಿಂತು ನುಡಿದನು || ೧೦ ||

ಈ ಸೇನೆಯನು ಸರೋರುಹಕುಸುಮದ | ಸಾಸಿರೆಸಳಮಾಳ್ಕೆಯೊಳು |
ಓಸರಿಸದೆ ವಿರಚನೆಗೆಯ್ಯಿಮೆನಲಾ | ಸಾಸಿಗನದನವಧರಿಸಿ || ೧೧ ||

ಗುರುಶಲ್ಯ ಶಕುನಿ ಕುಂಭಜ ಭೂರಿಸ್ರವ | ಗುರುಸುತ ಕೃಪ ಕೃತವರ್ಮ |
ಸುರಸಿಂಧುಜ ವೀರದ್ವಜ ಸಿಂಧುಭೂ | ವರ ಸೋಮದತ್ತ ಸುಶರ್ಮ || ೧೨ ||

ಕುರುಪತಿ ಬಾಹ್ಲೀಕ ಜಯದತ್ತ ಬಾಣಾ | ಸುರ ವೃಷಭಧ್ವಜ ವಿಂದ್ಯ |
ಉರಗಪತಾಕ ವಿಕರ್ಣ ಮತ್ತಾಪುರಂ | ದರ ತಾರಕ ದುರ್ದರುಶನ || ೧೩ ||

ಆ ದುಶ್ಯಾಸನ ದುಂದುಭಿ ಕನಕಧ್ವ | ಜಾದಿಯನೇಕ ಭೂವರರ |
ಆದರದಿಂದಾವ್ಯೂಹಸರೋರುಹ | ದಾದಳದಂತಿರಿಸಿದನು || ೧೪ ||

ಅಜಿತಂಜಯನಪರಾಜಿತಸಿಂಹ | ಧ್ವಜಕಾಲವಯಭಾನುಮಿತ್ರ |
ಗಜರಿಪುರಥ ಮೊದಲಾದರನಾವಾ | ರಿಜದ ಕರ್ಣಿಕೆಯಂತಿರಿಸಿ || ೧೫ ||

ಪರಿವೃತಭಟಸೈನ್ಯಾಂತದೊಳುರುಮದ | ಕರಿಘಟೆಗಳು ನಿಂದಿರಲು |
ವರಗಜವೇರಿದ ಚಕ್ರಿಯನಾ ಬಂ | ಧುರ ಕರ್ಣಿಕೆಯಂತಿರಿಸಿ || ೧೬ ||

ಆ ಕರ್ಣಿಕೆಯ ಮೇಗಡೆ ಚಕ್ರರತ್ನಮ | ನಾಕಾಶದ ಮೇಲಿರಿಸಿ |
ಲೋಕೈಕವೀರರೆನಿಪ ಖೇಚರರ ಚ | ಕ್ರಾಕೃತಿಯಂದದಿ ಬಳಸಿ || ೧೭ ||

ಭೇದ್ಯಮಲ್ಲದವೊಲಪ್ರತಿಮನಕಂಪನ | ವಿದ್ಯುತ್ಪ್ರಭ ರೌದ್ರಕೇಶಿ |
ವಿದ್ಯುದ್ಗಮನನಶನಿವೇಗರಾದಿಯ | ವಿದ್ಯಾಧರರನಲ್ಲಿರಿಸಿ || ೧೮ ||

ಗಜಮದಗಂಧ ಗಂಧದಿ ಬಳಸಿದ ಭೂ | ಭುಜರಿಟ್ಟ ತೊಡವೆಳಗುಗಳ |
ರಜದಿಂದಮವರೊಡ್ಡಿದ ವ್ಯೂಹದ ಸರ | ಸಿಜಮತಿಬಂಧುರಮಾಯ್ತು || ೧೯ ||

ಈ ತೆರದಿಂದ ಪದ್ಮವ್ಯೂಹನಿನ | ಜಾತನು ವಿರಚಿಸಲಿತ್ತ |
ಖ್ಯಾತರು ಬಲವಾಸುದೇವರರ್ಜುನನ ಸಂ | ಪ್ರೀತಿ ಮಿಗಲು ಕರೆಯಿಸುತ || ೨೦ ||

ಸನ್ನುತನಾಪಟುಭಟ ಕೃಷ್ಣನೆಂಬನ | ಮುನ್ನಿಸಿಯಾ ಫಲ್ಗುಣಗೆ |
ಚೆನ್ನಾಗಿ ಸಾರಥಿಯಾಗೆಂದು ಪೇಳಿ ಗು | ಣೋನ್ನತರೊಸೆದಿತ್ತರಾಗ || ೨೧ ||

ಬಳಿಕಾತಗೆ ಗುರುಡವ್ಯೂಹವನು ಕ | ಣ್ಗೊಳಿಪಂದದಿ ಮಾಡುವುದು |
ತಳುವದೆನುತ ಪೇಳಲದನು ಕೈಕೊಂಡಾ | ಬಲಯುತ ವೀರಕಿರೀಟ || ೨೨ ||

ಶರಧಿವಿಜಯಭೂವರನನುಜಾತರೆ | ಣ್ಬರು ಜಯವಿಜಯ ಪಾಂಚಾಲ |
ಗಿರಿಪೂರಣಭಿಚಂದ್ರನು ಸತ್ಯಂ | ಧರರಾದಿಯಾದ ಭೂವರರ || ೨೩ ||

ತಂತಮ್ಮ ಚತುರಂಗಸೇನೆಸಹಿತ ನೀ | ವಿಂತಿರೆಂದಾಯತಮಾಗಿ |
ಸಂತಸದಿಂದಾಗರುಡನೆಡದ ರಟ್ಟೆ | ಯಂತೊಡ್ಡಿನಿಲಿಸಿದನಾಗ || ೨೪ ||

ಭೂವರ ಧರ್ಮಜ ಭೀಮ ನಕುಲ ಸಹ | ದೇವ ಮತ್ಸ್ಯನುಭಿಮನ್ಯು |
ಆ ವಿಂದ್ಯಕನು ಘಟೋದ್ಗಜರಾದಿಯ | ಭೂವನಿತೇಶರೆಲ್ಲರನು || ೨೫ ||

ಬಲಯುತರುಗಳನು ತಂತಮ್ಮ ಚತುರಂಗ | ಬಲಗೂಡಿಯಾ ಖಗಪತಿಯ |
ಬಲದ ಕಡೆಯ ರಟ್ಟೆಯಾಗಿರಿ ನೀಮೆಂದು | ಚಲದಂಕ ನಿಲಿಸಿದನಾಗ || ೨೬ ||

ರಥನೇಮಿಸಾಗರಚಂದ್ರವಿಂದ್ಯಕದೃಢ | ರಥಚಿತ್ರಭಾನುವೆಂದೆಂಬ |
ಪೃಥುವೀಪಾಲಕರನದರತುಂಡದಂದದಿ | ಪೃಥುಬಲಯುತನಿರಿಸಿದನು || ೨೭ ||

ಸೋಮದೇವನು ಮಣಿಪುತ್ರಾಂಶುಮಾಳಿಮ | ತ್ತಾ ಮೇಘರಥರಾದಿಯಾದ |
ಭೂಮಿಪಾಲಕರನದರ ಕೊರಲಂತೆಯು | ದ್ದಾಮ ಸಾಹಸಿಯಿರಿಸಿದನು || ೨೮ ||

ಉಗ್ರವಿಕ್ರಮಿದೇವಸೇನ ದೀಪಾಯನ | ನುಗ್ರಸೇನನು ಸಿಂಹಕೇತು |
ಅಗ್ರಗಣ್ಯ ಶಕ್ತಿಧ್ವಜರೆಂಬನೃ | ಪಾಗ್ರೇಸರ ಪಲಬರನು || ೨೯ ||

ಸಾರೆನಿಲಿಸಿ ಮತ್ತಾ ಕೋಪಾಂತಕ | ನಾರಾಯಣನ ಮದವೆತ್ತ |
ವಾರಣಶಿರವನೇರಿಸಿ ಪುಚ್ಛದಂದದಿ | ಸೇರಿಸಿದನು ಹಸನಾಗಿ || ೩೦ ||

ಮದಮಾತಂಗವೇರಿಸಿ ಬಲರಾಮನ | ನದರವಕ್ಷಸ್ಥಲವಾಗಿ |
ಅಧಟರನೇಕರರಸುಗಳ ಕೂಡಿ ಸಂ | ಮದದಿಂ ನಿಲಿಸಿದನಾಗ || ೩೧ ||

ಅರುಣಚಂದ್ರದಧಿವದನವರಾಹಕಂ | ಧರಪಿಂಗಳ ಜಯವರ್ಮನ |
ಅರಿಮರ್ದನವಜ್ರದಾಡಮನೋವೇಗ | ಹರಿಕೇತುವೆಂಬ ಖೇಚರರ || ೩೨ ||

ಪಲಬರರಸುಗಳನವರವರುತರ | ಬಲವನೆಲ್ಲವ ಮೋಹರಿಸಿ |
ಚಲದಂಕಬಲರಾಮ ಕೇಶವರುಗಳೆಡ | ಬಲದೊಳು ನಿಲಿಸಿದನಾಗ || ೩೩ ||

ಇಂತತಿ ರೌದ್ರವಡೆದ ಪಡೆಗಳನು ಕೃ | ತಾಂತಕುಪಿತಮಾನಸರು |
ಅಂತರಿಸದೆ ರವಿಸುತ ಪಲುಗುಣ ಭೂ | ಕಾಂತರು ರಚನೆಯ ಮಾಡೆ || ೩೪ ||

ಅನಿತರೊಳಾಗಸವಟ್ಟೆಯೊಳಗೆ ದೇವ | ದನುಜೋರಗ ವ್ಯಂತರರು |
ಘನತರಮಪ್ಪ ಕಾಳಗವ ನೋಡುವೆವೆಂ | ದನುರಾಗದಿ ನಿಂದರಾಗ || ೩೫ ||

ಗರಳದುರಿಗೆ ಗಾಳಿಯ ತೋರುವವೊಲು | ತರಣಿತನುಜಪಾರ್ಥರುಗಳು |
ಭರದಿಂದ ಕೈವೀಸಲಿರದೆ ಮೊಳಗಿದವು | ಬಿರುದಿನ ಬೀರಗಾಳೆಗಳು || ೩೬ ||

ಕಡೆಯ ಕಾಲದೊಳು ಮೇರೆಯನುಲ್ಲಂಘಿಸಿ | ಪಡುವಣ ಮೂಡಣ ಜಲಧಿ |
ಕಡುಪಿಂದ ಬಂದು ತಾಗುವವೊಲಿತ್ತಟ್ಟಿನ | ಪಡೆಗಳೆರಡು ತಾಗಿದವು || ೩೭ ||

ಭರದಿಂದಾಭಟತತಿಯೊಳು | ತುರಗಂಗಳು ತುರಗದೊಳು |
ಕರಿ ಕರಿಯೊಳು ರಥ ರಥದೊಳಿದಿರ್ಚಿ ದು | ರ್ಧುರವಿಕ್ರಮದಿಂದ ತಾಗೆ || ೩೮ ||

ಕಣೆದೊಟ್ಟು ಬಿಲ್ಲ ತೆಗೆದು ಬಿಲ್ಲರರೆಬರು | ಡೊಣೆ ಬೆನ್ನೊಳು ಸೊಗಯಿಸಲು |
ರಣರಂಗದೊಳು ನಲಿವರಿದಾಡಿದರಾ | ಕುಣಿವ ಸೋಗೆಯ ಹಿಂಡಿನಂತೆ || ೩೯ ||

ದೆಸೆಯೊಳು ನೆರೆಕೆಗಟ್ಟಿದವೊಲು ಮೇಲಾ | ಗಸದೊಳು ಪಂದಲಿಟ್ಟಂತೆ |
ಮುಸುಕಲು ಶರವಲ್ಲಿ ನೋಡುವ ಸುರರಿಗು | ಬ್ಬಸವ ಮಾಡಿದುದಾ ಸಮರ || ೪೦ ||

ಸುರಿವ ಬಿಸಿಯರಕುತದ ಸೂಸುವ ಖಂಡ | ದುರುಳ್ವಮುಂಡದ ಪಾರಿಬೀಳ್ವ |
ಶಿರದ ಬೀಳುವ ಕರುಳಿಂದಾರಣ ಭೀ | ಕರತರವನು ತೋರಿದುದು || ೪೧ ||

ಸರಳಿಟ್ಟು ಬಿಲ್ಲತೆಗೆವ ಬಿಲ್ಲುಗಾರನ | ಕೊರಳನಿದಿರಭಟನೆಸಲು |
ಭರದಿಂದಾ ಮುಂಡವವನ ತಲೆಯನಾ | ಸರಳಿನೆಚ್ಚುದು ಚಿತ್ರಮಾಗಿ || ೪೨ ||

ತೆಕ್ಕೆಯೊಳಗೆ ಕವಲಂಬು ಕೀಳದವೊಲು | ಸಿಕ್ಕರೆ ಮುರಿದಾಕಣೆಯ |
ಎಕ್ಕಟಗಲಿಗಳೇಳಿಗೆಯಂದವೆ ಹೊಕ್ಕ | ರೆಕ್ಕಲವಂದಿಗಳಂತೆ || ೪೩ ||

ಅಂಬು ತೀರೆ ಹೆದೆ ಕಿತ್ತು ಮುರಿದು ಬಿಲ್ಲು | ಬೆಂಬಳಿದೇರನು ಕಂಡು |
ಬೆಂಬೀಳದುಡುಗೆಯಸುರಗಿಯಕಿತ್ತು ಒ | ತ್ತಂಬದಿದರೆಬರಿರಿದರು || ೪೪ ||

ಒಗುವ ಕರುಳನೊಳನೂಂಕುತ ಸುರಿತಪ್ಪ | ಮೊಗದ ನೆತ್ತರನೊರಸುತ್ತ |
ತೆಗೆಯಬಾರದೆ ಬಿಲ್ಲು ಬಿಲ್ಲಿಂದವೆ ಹೊಯ್ದು | ಮಿಗೆ ಕಾದಿದರು ಕೆಲಬರು || ೪೫ ||

ಪಡಲಿಟ್ಟಂದದಿ ಬಿಳ್ದುರುಳುವ ಬಿಲ್ಲ | ಪಡೆಗಂಡು ಪರಿಗೆಯ ಭಟರು |
ಜಡಿವ ಖಡ್ಗದಿ ಮಿಂಚು ಮಿಂಚ ಹೊಯ್ವಂದದಿ | ಕಡುಪಿಂದ ಹೊಯ್ದಾಡಿದರು || ೪೬ ||

ಮರಣದ ಹಡೆದ ಮಹಾಭಟವಿತತಿಯ | ಹರಿಗೆಗಳಾಧರೆಯೊಳಗೆ |
ಕರಮೆಸೆದುವು ಕಾಲಂಗೆಡೆಮಾಡಿದ | ಪರಿಯಾಣಗಳ ಪಂಕ್ತಿಯಂತೆ || ೪೭ ||

ಅಡಿ ಮಡ ಕಣೆ ಕಾಲು ತೊಡೆ ನಡುವೊಡಲೆದೆ | ಮುಡುಹು ಮುಂಗೈ ಕಿವಿ ಕೊರಲು |
ಖಡಿಖಂಡಮಾಗಿಯುಮಿರದೆ ಹೊಯ್ದಾಡಿದ | ರಡಗದೆ ಕೆಲವೀರಭಟರು || ೪೮ ||

ನೆಲವೆಲ್ಲ ಹೇಸುವಂದದಿ ನೆರೆಬಿಳ್ದಾ | ಕಲಿಗಳ ಕಂಡು ರಾವುತರು |
ಭರದಿನೇರಿದರು ಕಡೆಯಕಾಲದಬ್ಧಿಯ | ತೆರೆ ತೆರೆಗಳು ತಾಗುಂತೆ || ೪೯ ||

ಸಿಡಿಲಬಳಗಮಾ ಸಿಡಿಲ ಬಳಗದೊಳು | ಕಡುಪಿಂದ ಹೊಯ್ದಾಡುವಂತೆ |
ಪಡೆಯೆರಡರ ರಾಯರಾವುತರೋವದೆ | ಕಡಿದಾಡಿದರು ಖಡ್ಗದೊಳು || ೫೦ ||

ಮುಸಕದಿ ಹೊಯ್ಯೆ ಸೀಸಕಗೂಡಿ ತಲೆಗಳಾ | ಹಸಕೆಯ್ದಿ ಬೀಳೆ ಭೂತಳಕೆ |
ಎಸಕವಡೆದುದು ಗುಂಡಿನಮಳೆಯಂತೆ ಭಾ | ವಿಸಿ ನೋಡಲಾಜಿರಂಗದೊಳು || ೫೧ ||

ತಲೆಯ ಪರಿದ ರಾವುತರಟ್ಟೆಗಳು ಕೈ | ಯಲಗಿಂದಿದಿರ ರಾವುತರ |
ಮಲೆತು ತಿವಿದವೇನೆಂಬೆನು ರಣದ | ಗ್ಗಳಿಕೆಯನಾ ಬಲದೊಳಗೆ || ೫೨ ||

ಎರಡು ಹೋಳಾಗಿ ಹೊಕ್ಕುಳುವರಸೀಳಿದ | ವರವಾಹಕರಟ್ಟೆಗಳು |
ತುರುಗದೆರಡುಕಡೆಯೊಳಗೆಸೆದುವುಹೇರಿ | ನಿರಮಾಗಿಯಾಬವರದೊಳು || ೫೩ ||

ಗರಿವರ ಮುಳುಗಿದಂಬುಗಳೆಲ್ಲೆಡೆಯೊಳು | ತುರುಗಿರಲಾತುರಗಗಳು |
ಬಿರಿತು ಹರಿಣಪುಟದೊಳು ಹಾರುತಂದಿನ | ಗರಿಗುದುರೆಯೊಲೊಪ್ಪಿದುವು || ೫೪ ||

ಇಂತು ಮುಣ್ಮುರಿಗೊಂಡ ರಾವುತರನು ಕಂ | ಡಂತಕ ಬಹುರೂಪವಡೆದು |
ಇಂತೆಯ್ದಿದನೊಯೆಂಬಂತತಿರಥಿಕರ | ತಿಂತಿಣಿಯೊಪ್ಪಿದುದಾಗ || ೫೫ ||

ಕೆಲ ರಥಿಕರು ಪುರಮಥನನೆಂಬಂದದಿ | ಕೆಲ ರಥಿಕರು ರವಿಯಂತೆ |
ಕೆಲ ರಥಿಕರು ಶಕಟಾಸುರನಂತಾ | ನೆಲದೊಳು ಕಣ್ಗೊಪ್ಪಿದರು || ೫೬ ||

ಸಾರಥಿಗಳ ಬೊಬ್ಬೆಯ ಚಕ್ರದ ಚೀ | ತ್ಕಾರದ ಹಯದಬ್ಬರದ |
ನಾರಿಯ ಟಂಕಾರದ ರಥಿಕರ ಕೂಗಿ | ನಾ ರಭಸವೆ ತೀವಿದುದು || ೫೭ ||

ಸಾರಥಿಗಳ್ಸತ್ತು ಕುದುರೆಗಳ್ಕೆಡೆದು ಮ | ತ್ತಾ ರಥಚಕ್ರಗಳೊಡೆದು |
ಶೂರರವರಜೀವಹೋಹನ್ನೆವರ ಕೈ | ವಾರದೆಚ್ಚಾಡಿದರೆಂದು || ೫೮ ||

ಈ ತರದಿಂದೆಚ್ಚಾಡಿ ರಥಿಕರು ಮ | ಹೀತಳದೊಳು ಬೀಳಲಾಗ |
ಮಾತಂಗ ಘಟೆ ಕಡೆಗಾಲದ ಕರಿಯ ಜೀ | ಮೂತದಂದದೊಳೆರಗಿದುವು || ೫೯ ||

ಹರಿವಹಸ್ತಿಯ ಮೇಗಡೆಹಾಕಿದ ಹ | ಕ್ಕರಿಗೆಳತಿ ರಂಜಿಸಿದವು |
ಧುರಧರಣೀತಳದೊಳಗಂದಿನ ಗಿರಿ | ವರದಟ್ಟೆಗಳೆಂಬಂತೆ || ೬೦ ||

ಕಳೆದುರುಳಿದ ಗಜದಂತೆ ಕೈಕಾಲ್ಬಾಲ | ಗಳಿನಾನೆಲನೊಪ್ಪಿದುದು |
ಕಳಿಲೆ ಕದಳಿ ಮೊಗವಾಳೆ ಬಲ್ಗಿಸಿಕಿಲ | ಹಳುವ ಕುಮ್ಮರಿಗಡಿದಂತೆ || ೬೧ ||

ಉರುಳಿದ ಭಟರು ಕೆಡೆದ ವಾಜಿ ಧರೆಯೊಳು | ನೆರದ ರಥಿಕರಳಿದಾನೆ |
ಹರವರಿಯಾಗಲಾಹವಧರಣೀತಳ | ಪಿರಿದುಮಗುರ್ವಿಸಿತಂದು || ೬೨ ||

ಆ ಹಗಲೊಂದಕೆ ಮಗಧನ ಬಲದೊಳ | ಕ್ಷೋಹಿಣಿಯೆರಡಳಿಯಿತ್ತು |
ಸಾಹಸಿ ಹರಿಯಬಲದೊಳದರರ್ಧ | ಕ್ಷೋಹಿಣಿಯಳಿದುದೇನೆಂಬೆ || ೬೩ ||

ಆ ಸಮಯದೊಳಾದಿತ್ಯನಪರದಿ | ಗ್ವಾಸವ ಹೊಗಲು ಮತ್ತಿತ್ತ |
ಸಾಸಿಗರಾಯೀರ್ವಲದರಸುಗಳು ವಿ | ಲಾಸದಿ ಬೀಡಿಗೆಯ್ದಿದರು || ೬೪ ||

ಆಯಿರುಳೊಳು ಸಂಗ್ರಾಮದ ಸಮಕಟ್ಟ | ನಾಯೀರ್ವಲದರಸುಗಳು |
ಆಯತಿಯಿಂ ಸಮನಿಸುತಿರಲತ್ತಮ | ತ್ತಾಯಿನನುದ್ಭವಿಸಿದನು || ೬೫ ||

ಆ ರವಿಯುದಯದೊಳತಿ ವಿಕ್ರಮಯುತ | ನಾರಾಯಣನು ದೋರ್ವಲದ |
ಭೂರಿಭೂಭುಜರುವೆರಸಿಯಾನೆಯನೇರಿ | ಯಾರಣರಂಗಕೆಯ್ದಿದನು || ೬೬ ||

ಉಗ್ರಸೇನಾಪರಿವೃತನಾಗಿ ನಿಂದಿ | ರ್ದುಗ್ರಸೇನ ಮಹೀಪತಿಯ |
ವ್ಯಗ್ರದಿ ಕರೆದು ನೀವಿಂದಿನ ರಣಕೇಳಿ | ಗಗ್ರಣಿಯಾಗಿರಿಮೆಂದು || ೬೭ ||

ಆತನೊಡನೆಯತಿಬಲನುಯುಧಿಷ್ಠಿರ | ಭೂತಳೇಶನನು ಸಾಹಸಿಗಾ |
ಶ್ವೇತನೆಂಬಾಯೀರ್ವರನಿರವೇಳ್ದು ವಿ | ಖ್ಯಾತನಿರಲು ಬಳಿಕಿತ್ತ || ೬೮ ||

ಮಗಧಮಹೀಪತಿ ಶತ್ರುಕ್ಷಯನೆಂ | ಬಗಣಿತ ವಿಕ್ರಮಯುತನ |
ಬಗೆಗೊಂಡು ಕರೆದಿಂದಿನದೊಂದು ರಣಕೇ | ಳಿಗೆ ಕರ್ತೃ ನೀನಾಗೆಂದು || ೬೯ ||

ನಿರವಿಸಿ ಬಳಿಕವನೊಡನೆ ಸುಯೋಧನ | ಸುರಸಿಂಧುಜನನಿರವೇಳಿ |
ಭರದಿಂದಾ ಸಮರಾಂಗಣಕುನ್ನತ | ಕರಿಯನಡರಿ ಬಂದನಾಗ || ೭೦ ||

ಇಂತುಬಂದಾಜಿರಂಗದೊಳಾಮಗಧಭೂ | ಕಾಂತಶಿರೋಮಣಿ ನಿಲಲು |
ಅಂತರಿಸದೆ ದಳವಾಯರು ಕೈವೀಸೆ | ತಿಂತಿಣಿಗೊಂಡಾಸೇನೆ || ೭೧ ||

ನೆಲನಾಕಾಶಮಂಡಲಗಳೆರಡ ಬಂದು | ಬಲುಪರಿಯಿಂ ತಾಗುವಂತೆ |
ಅಲಸದೆ ಬಂದು ತಾಗಿದುವು ಮತ್ತಾಯೀ | ರ್ವಲಮತಿ ಸಾಹಸದಿಂದ || ೭೨ ||

ಇಂತುಬಂದು ಜೀವಕ್ಕೋಸರಿಸದೆ | ತಿಂತಿಣಿಗೊಂಡಾ ಬಲವು |
ಆಂತರಿಸದೆ ತಾಗಿ ಬೀಳಲು ಕಂಡು ಕೋ | ಪಾಂತಕನಾಶ್ವೇತನೃಪತಿ || ೭೩ ||

ಕೆಕ್ಕಳಗೆರಳಿ ರಥವ ನೂಂಕಲು ಕಂ | ಡೆಕ್ಕಟಿಗಲಿಗಾಂಗೇಯ |
ತೆಕ್ಕನೆ ಬಂದಿದಿರಾಗೆ ಕಂಡವನನು | ಲೆಕ್ಕವಿಲ್ಲದ ಶರದಿಂದ || ೭೪ ||

ಶ್ವೇತನುಬ್ಬಸಗೊಳಿಸಲು ಕಂಡು ಸುರಸಿಂಧು | ಜಾತನುನ್ನತಕೋಪದಿಂದ |
ಏತರ ವಿಕ್ರಮಿಯಿವನೆಂದು ಶರದೊ | ಟ್ಟಾ ತಲೆಯನು ಪರಿದೆಚ್ಚ || ೭೫ ||

ಅದನು ಕಂಡಾವುಗ್ರಸೇನಮಹೀಪತಿ | ಯಧಟಿಂದ ಬಹುಬಲಸಹಿತ |
ಇದಿರಾಗಲು ಕುರುಬಲವವಗಿದಿರಾಗಿ | ಹುದುಗಿ ಕಾದುವ ಸಮಯದೊಳು || ೭೬ ||

ವಾರಿಜಸಖನಪರಾಂಭೋರಾಶಿಗೆ | ಸೇರಲು ಬೀಡಿಗಾಬಲವು |
ಸಾರಿಯಾಯಿರುಳು ಕಳೆದುವುದಯದೊಳೆ | ಳ್ದಾರಣಧರೆಗೆಯ್ತಂದು || ೭೭ ||

ನಿಲಲು ಜರಾಸಂಧನನಾ ನಿಜಸುತ | ಬಲಯುತಕಾಮದಂತನನು |
ಬಲಕಧ್ಯಕ್ಷನೀನಾಗೆಂದು ಪೇಳಲು | ಗ್ಗಳನಾಗಿ ಬಂದವ ನಿಲಲು || ೭೮ ||

ಬಲಭದ್ರನದನು ಕಂಡತಿಕೋಪದಿಂದಾ | ಬಲಯುತಗಿದಿರಾಗಿ ನಿಂದು |
ತಲೆಬಾಲಗೆಡಿಸುತಿರಲು ಕಂಡು ಗಾಂಗೇಯ | ನಲಿವರಿದವಗಿದಿರಾಗಿ || ೭೯ ||

ಅಂತಕನಂತೆ ಕಾದುವ ಭೀಷ್ಮರನುಪ | ರಂತಪನೆಂಬ ಭೂವರನು |
ಪಿಂತಿಕ್ಕಿ ನಿಲಲು ಕಂಡಾಪಾಂಚಾಲಭೂ | ಕಾಂತನವನಿಗಡ್ಡ ಬರಲು || ೮೦ ||

ಕಂಡುಪರಂತಪನವನಿಗುಬ್ಬಸಮಾಡೆ | ಗಂಡರದೇವಫಲ್ಗುನನು |
ಗಾಂಡೀವವಿಡಿದವಗಿದಿರಾಗಿಯಾತನ | ದಿಂಡುಗೆಡಹಿಯೆಸುವಾಗ || ೮೧ ||

ಇತ್ತಿತ್ತೆನಗಿದಿರಾಗೆನಗಣ್ಮಣ್ಮೆ | ನುತ್ತ ಶಲ್ಯನು ತನ್ನ ರಥವ |
ಒತ್ತಂಬದಿಂ ಕಣೆಗಳ ಕರೆದನು ವಿಕ್ರ | ಮೋತ್ತಂಸಪಾರ್ಥನ ಮೇಲೆ || ೮೨ ||

ಕಡುಭರದಿಂದಾಶರಸಂಘಾತಮ | ನಡೆಗಡಿಯಾಗಿ ಖಂಡಿಸುತ |
ಒಡನೆಚ್ಚಾಶರತತಿ ರವಿಕಿರಣವ | ನಡಗಿಸಿತದನೇನೆಂಬೆ || ೮೩ ||

ಅಧಟಿಂದವರೀರ್ವರೆಸುವ ಬಾಣಾವಳಿ | ಯಿದು ನೆಲನಿದು ದೆಸೆಯೆಂದು |
ಇದು ನಭವೆಂಬ ಭೇದವ ಕಾಣಿಸದುರೆ | ಪುದಿದುದು ನಿಮಿಷಮಾತ್ರದೊಳು || ೮೪ ||

ಅಂತೀರ್ವರು ಕಾದುತ್ತಿರಲಾಕಾಮ | ದಂತನತ್ತಲುಮತಿಭರದಿ |
ಅಂತಕನಂತೆ ಕೆಳಲಿ ಬಲಭದ್ರಭೂ | ಕಾಂತನೊಳಗೆ ಕಾದುತಿರಲು || ೮೫ ||

ಅವನ ಪಿಂತಿಕ್ಕಿಯಶನಿಘೋಷಣೆಂಬ ಭೂ | ಧವನಿದಿರಾಗಲು ಕಂಡು |
ಅವನನು ಚಾರಣನೆಂಬೋರ್ವ ವಿಕ್ರಮಿ | ಜವನದಾಡೆಯೊಳಿಕ್ಕಿದನು || ೮೬ ||

ಆ ವೇಳೆಯೊಳಿನನಸ್ತಂಗತನಾಗ | ಲಾವುದ್ಧತಬಲವೆರಡು |
ಓವದೆ ತೆಗೆದು ತಂತಮ್ಮ ಪಾಳೆಯವೊಕ್ಕು | ತೀವಿದ ನಿದ್ರೆಯೊಳಿರಲು || ೮೭ ||

ಆ ಇನನುದಯದೊಳೆಳ್ದತಿಭರದಿಂ | ದಾಯೀರ್ವಕ್ಕದ ಸೇನೆ |
ಆಯೀರ್ವರರಸುಗಳನುಮತದಿಂ ಕ | ಟ್ಟಾಯತದಿಂದೊಡ್ಡಿ ನಿಲಲು || ೮೮ ||

ದೊರೆ ದೊರೆಗಳು ತಂತಮ್ಮ ಸೇನೆಯನುರು | ತರಕೋಪದಿಂ ಕೂಡಿಕೊಂಡು |
ಸುರರಸುರರು ತಾಗುವಂತೆ ಕಾದಿದರಾ | ಸುರತರಮಪ್ಪ ವಿಕ್ರಮದಿ || ೮೯ ||

ಆ ಸಮಯದೊಳು ಸತ್ಯಕನೆಂಬ ಭೂವರ | ನೋಸರಿಸದೆಯಿದಿರಾಗಿ |
ಸಾಸಿಗವಜ್ರಬಾಹುವನು ಕೃತಾಂತನಿ | ವಾಸಮ ಹೊಗಿಸದನಿರದೆ || ೯೦ ||

ಉತ್ತಮಸತ್ತ್ವಜಯದ್ರಥಭೂವರ | ನುತ್ತರಸುಕುಮಾರಕನ |
ಒತ್ತಂಬರದಿಂ ಕಾದಿಯಾಜವನಿಗೆ ಬೋನ | ವಿತ್ತನು ನಿಮಿಷಮಾತ್ರದೊಳು || ೯೧ ||

ಉಸುರಿಗುಬ್ಬಸವ ಮಾಡುವ ವಜ್ರಮುಷ್ಠಿಯ | ನಸಮವಿಕ್ರಮಿ ವಸುಪಾಲ |
ದೆಸೆಯಾಳ್ವರು ದಿವಿಜರು ಮೆಚ್ಚುವಂದದಿ | ವಸುಧೆಯೊಳಗೆ ನೆರಪಿದನು || ೯೨ ||

ಅಮಿತವಿಕ್ರಮಿ ನಕುಲನನು ಭೂರಿಸ್ರವ | ಸಮರಂಗೆಯ್ಯುತ್ತಿರಲು |
ಸಮಸಂದಸಾಹಸದಿಂ ವಿರಥನನು ವಿ | ಕ್ರಮದಿಂದ ಮಿಗೆ ಮಾಡಿದನು || ೯೩ ||

ಓರೋರ್ವರೊಳು ಕೋಪದಿ ದೃಷ್ಟದ್ಯುಮ್ನ | ಭೂರಮಣೇಶನು ಕೃಪನು |
ಓರಣಮಾದತಿ ಸಾಹಸದಿಂ ಮ | ತ್ತಾ ರಣಕೇಳಿಯೊಳಿರಲು || ೯೪ ||

ಆ ಪ್ರಸ್ತಾವದೊಳಾದಿತ್ಯನಪರದಿ | ಶಾಪ್ರಮದೆಯ ಕೂಡಲೆಂದು |
ಸುಪ್ರೇಮದಿನೆಯ್ದೆ ಪಾಳೆಯಕಪ್ರತಿ | ಮಪ್ರತಾಪಿಗಳೆಯ್ದಿರು || ೯೫ ||

ಪ್ರತ್ಯಂತಪೃಥುವೀಪಾಲಕಜನತಿಮಿರಾ | ದಿತ್ಯರುದ್ಧತವಿಕ್ರಮಿಗಳು |
ಅತ್ಯಂತ ಧೀರಲಲಿತರೊಪ್ಪಿದರು ಕೃತ | ಕೃತ್ಯಕೌಂತೇಯಭೂವರರು || ೯೬ ||

ಇದು ಜಿನಪದಸರಸಿಜಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದುವಿಪ್ಪತ್ತೇಳಾಶ್ವಾಸ || ೯೭ ||

ಇಪ್ಪತ್ತೇಳನೆಯ ಸಂಧಿ ಸಂಪೂರ್ಣಂ