ಶ್ರೀಮದಮರಪತಿಮೌಲಿಕೀಲಿತವಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಆ ಇರುಳೊಳು ನಿದ್ರಾಮುದ್ರಿತರಾಗಿ | ಯಾಯಿನನುದಯದೊಳೆಳ್ದು |
ಭೂಯುವತೀಶ್ವರರೀರ್ವರು ಧುರಧರಣಿಯೊಳ | ಗಾಯತಮಾಗಿ ನಿಂದಿರಲು || ೨ ||

ಕುರುಪತಿಯಸುರವಿದ್ಯೋಪೇತಸಂಸಪ್ತ | ಕರನು ಕರೆದು ನೀಮಿಂದು |
ನರನನು ನೆಲಕಿಕ್ಕಿಯೆಂದು ಬೆಸಸಲಾ | ಧುರಧರೆಗವರೆಯ್ತಂದು || ೩ ||

ದೆಸೆಯಾಗಸಧರಣೀಮಂಡಲವೆಂಬ | ಹೆಸರನರಿಯಬಾರದಂತೆ |
ಮಸಕದಿಂ ಮಾಯಾಬಲವನು ಬೇಗ ನಿ | ರ್ಮಿಸಿದರಿಂತಾಸುರಮಾಗಿ || ೪ ||

ಒರ್ಮೆ ಕಾಲಾಳಪೌಜೊರ್ಮೆವಾಜಿಯಪೌ | ಜೊರ್ಮೆವರೂಥದಪೌಜು |
ಒರ್ಮೆವಾರಣದಪೌಜಾಗಿ ನೋಳ್ಪರ ಕಣ್ಗೆ | ಗುಮ್ಮನಪ್ಪಂತೊಡ್ಡಿದರು || ೫ ||

ಸಿಂಗಗಳನು ಶರಭಗಳನು ಮದಮಾ | ತಂಗಮಾದಿಯ ಕ್ರೂರಮೃಗದ |
ಜಂಗುಳಿಗಳನು ಹೂಡಿದ ಮಾಯದ ತೇರ | ಸಂಗರದೊಡ್ಡೊಪ್ಪಿದುದು || ೬ ||

ಆಕಾಶವನು ಚುಂಬಿಸುವಾನೆಯ ಪೌ | ಜಾಕಲ್ಕಿಯಡರ್ದವಾಹನದ |
ಆಕಾರಮನೇಳಿಪ ಕುದುರೆಯ ಪೌಜು | ಭೀಕರಮಾಗಿ ತೋರಿದುದು || ೭ ||

ಕೆಕ್ಕಳಗಣ್ಣ ಕೆದರ್ದಕುರುಳ ಗಗ | ನಕ್ಕೆ ಬೆಳೆದು ರಂಜಿಸುವ |
ರಕ್ಕಸರೂಪಿನ ಕಾಲಾಳ್ಗಳಪೌಜ | ನಿಕ್ಕಿದರದ್ಭುತಮಾಗಿ || ೮ ||

ಮಸಕದಿ ನಿಂತು ಮಾಯಾಬಲವನು ನಿ | ರ್ಮಿಸಿ ಮೋಹರಮಾಗಿ ನಿಲಲು |
ಅಸಮಪರಾಕ್ರಮಿಯಂತದನರಿದಾ | ದೆಸೆಗೆ ರಥವ ನೂಂಕಿದನು || ೯ ||

ಮಾರಾಂತಾಮಾಯಾಸೇನೆ ಮತ್ತಾ | ನೀರನೆಚ್ಚೊಂದಂಬಿನಿಂದ |
ಪಾರಿದುದವನಿಗೆ ಭೂಲೋಕದ | ಗಾರುಗಲಿಗಳು ಪಾಸಟಿಯೆ || ೧೦ ||

ಬಳಿಕವರುದ್ಧತಮಪ್ಪ ಸೈನಿಕರನು | ಬಲಯುತನರನಾರ್ದೆಸಲು |
ಇಳೆಗುರುಳ್ವಟ್ಟೆಯಾಗಸಕೆ ನೆಗೆವ ತಲೆ | ಗಳಬಳಗಂಗಳೊಪ್ಪಿದುವು || ೧೧ ||

ಅದನುಕಂಡಾರಕ್ಕಸರು ವಿದ್ಯಾಗರ್ವ | ಧಧಟಿಂದ ಮೇಲ್ವಾಯಲಾಗ |
ಮದವದರಾತಿವಿದ್ರಾವಣನವರನು | ಸದೆವುತಿರಲು ಬಳಿಕಿತ್ತ || ೧೨ ||

ಪೊಗಲು ವಿಲಯಭೈರವಗಳವಲ್ಲದಂ | ತಗಣಿತಮಪ್ಪ ಸೇನೆಯನು |
ಸೊಗಯಿಪ ಚಕ್ರದಂದದಿನೊಡ್ಡಿದನಾ | ವಿಗಡವಿಕ್ರಮಿಯಾದ್ರೋಣ || ೧೩ ||

ಅದನು ಕಂಡಂತಕಸೂನು ಮುರಾಂತಕ | ರದಿರದಿಂತಿದನು ಭೇದಿಸುವ |
ಅಧಟನರ್ಜುನನು ರಕ್ಕಸರಮಹಾಸೇನೆ | ಗಿದಿರಾದನಿನ್ನಾರುಮಿಲ್ಲ || ೧೪ ||

ಎಂದು ನುಡಿದ ಸಮಯದೊಳ ಪಾರ್ಥನ | ನಂದನನಾ ಅಭಿಮನ್ಯು |
ಬಂದು ಮುರಾಂತಕಧರ್ಮಸುತಗರ್ಭಇ | ವಂದಿಸಿ ಬಳಿಕಿಂತು ನುಡಿದು || ೧೫ ||

ನರನಲ್ಲದೀ ಚಕ್ರವ್ಯೂಹವ ಪರ | ಹರಿಸುವೊಡಾರಿಲ್ಲವೆಂದು |
ಒರೆಯಬಹುದೆ ನನಗೀ ಬೆಸನನು ನೀವ | ಪರಿಪಾಲಿಪುದೆಂದೆನಲು || ೧೬ ||

ಮಗನೆ ನಿನ್ನ ಮೊಗವನು ನೋಡುತಾ ಯಮ | ನಗರಿಯಂದದಿ ಫೂರ್ಣಿಸುವ |
ಅಗಣಿತಮಪ್ಪೀಸೇನಾಚಕ್ರಕೆ | ಹೊಗಿಸುವುದುಚಿತವೆ ನಮಗೆ || ೧೭ ||

ತರುಣ ಕೇಳಿದನು ಹೊಗಲುಬಹುದೆಂತಾನು | ತಿರುಗಬಾರದದರಿಂದ |
ಪರಿಹರಿಸುವುದೀ ನುಡಿಯನೆನನಲು ಕೇಳಿ | ಯೊರೆದನಿಂತೆಂದಭಿಮನ್ಯು || ೧೮ ||

ಕುಸುರಿದರಿವೆನು ಕಕ್ಕಸದಿಂದಿದಿರಾ | ದ ಸುಹೃತ್ಸೇನೆಯೆಲ್ಲವನು |
ಶಿಶುವಿವನೆನವೇಡ ಬರಿಕೆಯ್ವೆ | ಪಸುಳೆ ಹೊಗುವುದಕಂಜುವುದೇ || ೧೯ ||

ಕಿರಿಯನಗಸ್ತ್ಯನೀಂಟನೆಯಂಬುಧಿಯನು | ತರಿಯದೆ ಕುಲಿಶವವದ್ರಿಯನು |
ನೆರೆಚಿಕ್ಕವನಿವನೆನಬೇಡ ಬರಿಕೆಯ್ವೆ | ನರಿಕೆಯ ರಿಪುವಾಹಿನಿಯ || ೨೦ ||

ದಿಟಗಲಿತನದಿಂದಾ ಕೌರವನ ಬಹು | ಕಟಕದೊಳಗೆ ಮುಸುಕಿರ್ದಾ |
ಪಟುಬಟರುಗಳನುನ್ನತಬಲದಿಂದ ಸಂ | ಕಟಗೊಳಿಸದೆ ಸುಮ್ಮನಿಹೆನೇ || ೨೧ ||

ಚಂಡಪರಾಕ್ರಮದಿಂದಿದಿರಾದವು | ದ್ದಂಡಮಂಡಳಿಕರೆಲ್ಲರನು |
ಗಂಡುತನದಿ ಹೊಕ್ಕಾತಲೆಗಳ ಹೊಡೆ | ಸೆಂಡಾಡದೆ ಸುಮ್ಮನಿಹೆನೇ || ೨೨ ||

ಹಿಂದೆ ನಾಲ್ಕೈದು ದಿವಸದಿಂದ ನಿಮ್ಮ ಕೈ | ಯಿಂದ ಸತ್ತವಾಹಿನಿಗೆ |
ಇಂದು ನೂರ್ಮಡಿಯನು ಕೊಲ್ಲದಿರ್ದೊಡೆ ನಿಮ್ಮ | ನಂದನನೇಯಭಿಮನ್ಯು || ೨೩ ||

ಎಂದಾಗ್ರಹದಿ ಬೆಸನ ಬೇಡಿದ ನಿಜ | ನಂದನನಾದಂಡಧರನ |
ಕಂದನಿಂತೆಂದನು ನಿನ್ನ ಕಳುಹೆ ನಿನ್ನ | ತಂದೆ ನಮ್ಮೊಳು ನೋಯಿದಿಹನೇ || ೨೪ ||

ಎಂದು ನುಡಿಯಲಿಂತೆಂದನರ್ಜುನಗಾನು | ಕಂದನಾಗಿ ದೇವ ನಿಮಗೆ |
ಕಂದನಲ್ಲವೆ ಭಿನ್ನಮಪ್ಪ ನುಡಿಯನಿಂ | ತೆಂದು ಬಾಯ್ವಿಟ್ಟಾಡುವರೇ || ೨೫ ||

ಪಲವಾತನುಸುರಿ ಹಿಮ್ಮೆಟ್ಟಿದೊಡಾನಿಂದು | ಕುಲಜನಲ್ಲವೆ ನಿಜಮಾತೃ |
ಜಲಜೋದರಸಹಜಾತೆಯಾದುದರಿಂ | ನಿಲಿಸುವುದುಚಿತವೆ ನಿಮಗೇ || ೨೬ ||

ಅಡ್ಡಾಕಿಲ್ಲದೆಯರಿಸೇನೆಯೊಳಿರ್ಪ | ದೊಡ್ಡಾದೊಡ್ಡಿಗಳಡಗ |
ಬಡ್ಡಿಸುವೆನು ಭೂತಕೆ ಕೊಡು ಬಸನನು | ಗುಡ್ಡೆಣಿಕೆಯ ಮಾಡದರಸಾ || ೨೭ ||

ಕುರಿದರಿಯದೆ ಮಾಣೆನು ಕುರುಭೂವರ | ನರಿಕೆಯಮಕ್ಕಳೆಲ್ಲರನು |
ಬರಿವಾತಲ್ಲ ಪಾಲಿಸು ಬೆಸನನು ಗುಜ್ಜು | ಗುರುಕಮಾಡದೆ ಮಾನವೇಂದ್ರ || ೨೮ ||

ಮದವದರಾತಿಮಹೀಶರನೆಲ್ಲರ | ನದಿರಿಸದೊಡೆ ನಿನ್ನ ಸುತನೇ |
ತೊದಲಲ್ಲವೀ ನುಡಿ ಕೊಡು ಬೆಸನನು ನನ | ಗೆದೆಹಾರಮಾಡದಿಳೇಶಾ || ೨೯ ||

ತಲೆಮೊದಲಿಲ್ಲದ ಚಕ್ರವ್ಯೂಹಮ | ನಲಸದೆ ಹೊಕ್ಕಲ್ಲಿರ್ಪ |
ಕಲಿಗಳನೆಲ್ಲರನೊಂದುನಿಮಿಷದೊಳು | ತಲೆಬಾಲಗೆಡಿಪೆ ನಿಮ್ಮಾಣೆ || ೩೦ ||

ಕಳುಹಿ ಕಳುಹದಿರ್ದೊಡೆ ಮಾಣೆ ತದ್ವೂಹ | ದೊಳಹೋಗದೆ ನಿಲ್ವನಲ್ಲ |
ಉಳಿವುದು ಕೀರ್ತಿಯಳಿವುದೊಡಲೆಂದಾ | ತುಳಿಲಾಳಾಧರ್ಮಸುತಗೆ || ೩೧ ||

ಎನಿತತ್ಯಾಗ್ರಹದಿಂ ಬೆಸನನು ಬೇಡೆ | ಮನವಲ್ಲದ ಮನದಿಂದ |
ಜನತಾಧಿಪನಿತ್ತನು ಕೇಡಿಗೆ ಬುದ್ಧಿ | ಯಿನಿಸು ತೋರುವುದಿಲ್ಲವಾಗಿ || ೩೨ ||

ಇಂತು ಬೆಸನಕೊಂಡಾ ಸುಕುಮಾರಕ | ನಂತಕನಿಭಕೋಪಯುತನು |
ಸಂತೋಷದ ಚಿತ್ತದಿಂದತಿವೇಗದಿ | ನಂತಃಪುರಕೆಯ್ತಂದು || ೩೩ ||

ರಣಕೇಳಿಶೃಂಗಾರಂಗೆಯ್ವೆನೆಂದೆಂ | ಬೆಣಿಕೆಯಿಂ ಬೀಡಿಗೆ ಬಂದ |
ಅಣುಗನ ಕಂಡು ಸುಭದ್ರೆ ಕಣ್ಣೊಳಗಶ್ರು | ಕಣವಿಟ್ಟು ನುಡಿದಳಿಂತೆಂದು || ೩೪ ||

ಎಲೆ ಬಾಲಕ ನಿನ್ನ ಸರಿಯರ ಮಕ್ಕಳೊ | ಳಲಸದೆ ಬಾಲಕೇಳಿಯೊಳು |
ಒಲಿದು ದಿನವ ನೂಂಕುವ ಹರೆಯದೊಳೀ | ಬಲುಗೆಲಸವನೆಣಿಸುವರೇ || ೩೫ ||

ಒಂದು ಗಲ್ಲವ ತಿವಿಯಲು ಹಾಲು ಬಳಿಕಿ | ನ್ನೊಂದು ಗಲ್ಲವನು ತಿವಿಯಲು |
ಒಂದಾಗಿ ನೆತ್ತರು ಬಪ್ಪಕಾಲದೊಳೀ | ಯಂದಮನಿರದೇಣಿಸುವರೇ || ೩೬ ||

ಎಳೆವೆರೆ ಬೆಳೆವಂದದಿನುತ್ತಮಮಪ್ಪ | ಕಲೆಯ ಕಲಿವ ಕಾಲದೊಳು |
ಪ್ರಳಯರುದ್ರಂಗಳವಲ್ಲದ ರಣಕೇಳಿ | ಗಲಸದೆ ಪೊಗಲೆಣಿಸುವರೇ || ೩೭ ||

ಇರಿದು ಮೆರೆದು ಪೊಕ್ಕು ಪೊರಮಡಬಲ್ಲ | ಅರಿಕೆಯಧಟರಿರ್ದಂತೆ |
ದುರದುಂಬಿತನದೊಳಿಂತಿದನೆಣಿಸುವರೇ | ಕಿರುವರೆಯದೊಳೆಲೆ ಮಗನೇ || ೩೮ ||

ಕಂದ ಕೇಳೀ ಹೆತ್ತ ಬಸುರಿಗೆ ಬೇಗೆಯ | ನೊಂದಿಸುವುದು ನೀತಿಯಲ್ಲ |
ಎಂದೆಂಬ ನಿಜಮಾತೆಯ ನುಡಿಗೇಳಿ ಮತ್ತಿಂ | ತೆಂದು ಮಾತನಾಡಿದನು || ೩೯ ||

ಏನೊಂದು ಕಿಡಿ ಕಿರಿದಾದೊಡೆ ದಂದಹ್ಯ | ಮಾನವನುರೆಮಾಡದಿಹುದೇ |
ಕಾನನವನು ನಿಶ್ಚಯದಿಂದದಕನು | ಮಾನವೇತಕೆ ನಿಜನನಿ || ೪೦ ||

ಎಕ್ಕಟಿಯೊಳು ಪೊಕ್ಕು ಕುರುಭೂಪಾಲನ | ಮಕ್ಕಳುಗಳನೆಲ್ಲರನು |
ಮಿಕ್ಕಮಾತೇನೆಲೆ ತಾಯೆ ಜವಂಗುಣ | ಲಿಕ್ಕದಿಹನೆಯಭಿಮನ್ಯು || ೪೧ ||

ಎಲೆ ತಾಯೆ ನಿನ್ನ ಕುಲದ ಕೌಂತೇಯರ | ಕುಲದ ಪೀಳಿಗೆಯರಸುಗಳ |
ತಲೆಗೆ ಹರಲೆಬಾರದಿಹುದೇ ರಣಕೇಳಿ | ಗಲಸಿ ಹಿಮ್ಮೆಟ್ಟಿದೊಡಾನು || ೪೨ ||

ಬಾರ್ತೆಗೆ ಸಲ್ಲದ ಬದುಕುವಡೆದದೇಹ | ದಾರ್ತಕ್ಕೆ ಮನವ ತಂದಿಕ್ಕಿ |
ಕೀರ್ತಿಗೆ ಬದುಕುವುದನು ಬಿಟ್ಟಾ ಅಪ | ಕೀರ್ತಿಗೆ ಬದುಕಲುಬಹುದೇ || ೪೩ ||

ಇಂತು ನುಡಿದು ಬೀಡನು ಪೊರಮಟ್ಟತಿ | ಸಂತಸದಿಂ ತೇರನೇರಿ |
ಅಂತಕನಿಭಕೋಪದಿಂ ಬಹುವಿಧ ಶಸ್ತ್ರ | ಸಂತತಿಯನು ಸಂಹರಿಸಿ || ೪೪ ||

ಕೊನೆಮೀಸೆಯ ಚೆನ್ನಗಂಡರೆಂದೆನಿಸುವ | ವಿನುತವಿಕ್ರಮಸಂಯುತರ |
ತನಗೊಂದೋರಗೆಯಾದವರನು ಮನ | ದನುರಾಗದಿಂದಾಯ್ದುಕೊಳಲು || ೪೫ ||

ತರುಣ ತರುಣಿ ತಮದೊಡ್ಡಸಂಹರಿಸುವೊ | ಡುರುತರಮಪ್ಪರಥವನು |
ಹರುಷದಿನೇರುವಂದದಿನಾ ಸುಕುಮಾರ | ನಿರದೆ ರಥವನೇರಿದನು || ೪೬ ||

ಸಾಸಿರ್ವರು ರಥಿಕರು ತನ್ನೊಡವರೆ | ಕೇಸರಿ ನಿಜಗುಹೆಯಿಂದ |
ಆಸುರತರಮಾಗಿ ಪೊರಮಡುವಂತತಿ | ಸಾಸಿಗನಂತೆಯ್ದಿದನು || ೪೭ ||

ರಣನಿಸ್ಸಾಣದ ರವಮುಣ್ಮೆಭೋರನೆನೆ | ಯೆಣಿಕಗಗೋಚರಮಾದ |
ಅಣಿಯರವನು ಕಾಣುತಣ್ಮುತವೀರಾ | ಗ್ರಣಿಯಭಿಮನ್ಯು ನಡೆದನು || ೪೮ ||

ಅದರ ಬಾಯೊಳಗಡಗಿರ್ದ ಹುಲಿಯಂತೆ | ಕದನಕಠೋರಕುಂಭಜನು |
ಇದು ಚಿತ್ರಮೀ ಬಾಲಕನೀವ್ಹೂಹಕೆ | ಯದಿರದೆ ನಡೆತಹುದೆನುತ || ೪೯ ||

ಮುಂದಕೆ ತನ್ನೊಂದೇ ರಥವನು ನೂಂಕಿ | ಬಂದಿದಿರೊಳಗಿಂತು ನುಡಿದ |
ಸುಂದರಸುಭಟರು ಪಲಬರಿರ್ದಂದದಿ | ಕಂದ ಕೇಳ್ನಿನ್ನನಟ್ಟುವರೇ || ೫೦ ||

ಪುಗಲಳವಲ್ಲಥವಾಮೀರಿ ಪೊಕ್ಕೊಡೆ | ಮಗುಳ ಹಡೆಯದದರಿಂದ |
ಮಗನೆಯಸಾಧ್ಯಮಿಂತಿದು ತಿರುಗೆನೆ ನಸು | ನಗುತ ನುಡಿದನಿಂತೆಂದು || ೫೧ ||

ಬಾಲಕನೆಂದು ನುಡಿಯಬೇಡ ಗುರುವೆ | ಬಾಳೆಯ ಬಲುಬಿಂಜವನು |
ಬಾಲವಾರಣ ಪೊಕ್ಕು ಪಡಲಿಡುವಂದದಿ | ಬಾಳುಗೆಡಿಪೆನಿಂದು ಬಲವ || ೫೨ ||

ತರುಣ ಕೇಸರಿಗಿದಿರೇ ವಾರಣದ ಮೋ | ಹರವೆಂದು ಕಡುಭರದಿಂದ |
ಗುರುಪಾದಮೂಲಕರ್ಚನೆಪುಷ್ಪಮಾತ್ರವ | ನುರುಮುದದಿಂದವಧರಿಸಿ || ೫೩ ||

ಎಂದಾತನ ತೇರತೇಜಿಯನೆಚ್ಚಲ್ಲಿ | ನಿಂದಿರ್ದ ಪಟುಭಟರುಗಳ |
ಗೊಂದಣವನು ತಲೆಬಾಲಗೆಡಿಸಿ ಶರ | ಸಂದೋಹದಿನೆಚ್ಚನಾಗ || ೫೪ ||

ಮುಂದಕ್ಕೆ ನಡೆತಂದಾಚಕ್ರವ್ಯೂಹ | ದೊಂದೆಡೆಯೊಳು ನಿಂದಿರ್ದ |
ಸುಂದ ಸುಭಟಕೃಪಕೃತವರ್ಮರ ಕಂಡು | ನಿಂದು ನಿಟಿಲನೇತ್ರನಂತೆ || ೫೫ ||

ಕೆಕ್ಕಳಗೆಳಲಿಯವರ ಸಾರಥಿನೊಗ | ಕಿಕ್ಕಿದಶ್ವಮನಾ ನೆಲಕೆ |
ಇಕ್ಕಿಯವರನಾಣ್ಚಿಸಿ ರಿಪುವಾಹಿನಿ | ಯುಕ್ಕಮುರಿದು ಮುಂದಕೆಯ್ದಿ || ೫೬ ||

ದಿಂಡುರುಳಿಸಿ ಲಗ್ಗೆಗೊಂಡಡ್ಡಣವನು ಭೂ | ಮಂಡಲಕಾರಿಪುನೃಪರ |
ಮಂಡೆಯನಾಮಕ್ಕಳಾಟಿಕೆಯಭಿಮನ್ಯು | ಸೆಂಡಾಟನಾಡಿದನು || ೫೭ ||

ಸಾಲುಗೊಂಡೊಡ್ಡಿದ ಗರ್ದುಗಿನೊಡ್ಡಿಯನಿನಿ | ಸಾಳೋಚಿಸದೆಸುವಂತೆ |
ಲೀಲೆಯೊಳೊಡ್ಡಿ ದೊಡ್ಡಣವನೆಚ್ಚಾಕಲಿ | ಬಾಲಕೇಳಿಯ ತೋರಿದನು || ೫೮ ||

ನಿರುತದಿ ವೈಶಾಖಸ್ಥಾನದಿ ನಿಂದು | ಭರದಿ ಸವ್ಯಾಪಸವ್ಯದೊಳು |
ಉರುವಣೆಯಿಂದೆಸಲಾರಿಪುಸೈನ್ಯ | ವುರುಳ್ದುದು ನಿಮಿಷಮಾತ್ರದೊಳು || ೫೯ ||

ತುತ್ತುರು ಬಾಗಿನಿಂದಾ ಕೌರವಭೂ | ಪೋತ್ತಂಸನ ಸೇನೆಯೆಂಬ |
ಮೊತ್ತದಬನವ ತನ್ನಸ್ತ್ರಕುಠಾರದಿ | ತತ್ತರದರಿದು ಬಿಸುಟನು || ೬೦ ||

ಉರುವೀರರಸಪೂರಿತರಿಪುಸೇನಾ | ಶರದಿಯನಾ ಅಭಿಮನ್ಯು |
ವರಕೋಪಾನಲನೆಂಬ ವಾಡವನಿಂ | ಹಿರಿದಾಗಿಯೇ ಹೀರಿಸಿದನು || ೬೧ ||

ಮಾರಿಯಂದದಿ ಮಿಳ್ತುವಿನಂದದಿ ಕಾಲ | ಭೈರವನಂದದಿ ಬಲವ |
ವೀರನವನು ಪೊಕ್ಕು ಪಡಲಿಡುವಂತೆ ಸಂ | ಹಾರವನಿರದೆ ಮಾಡಿದನು || ೬೨ ||

ಅನ್ನೆಗಮಾ ಅಭಿಮನ್ಯು ಚಕ್ರವ್ಯೂಹ | ಮನ್ನೆರೆಹೊಕ್ಕು ಸಿಕ್ಕಿದನು |
ಇನ್ನವನನು ತಿರುಗಿಸಿಕೊಳಬೇಕೆನು | ತುನ್ನತವಿಕ್ರಮಯುತರು || ೬೩ ||

ಭೀಮ ನಕುಲ ಸಹದೇವ ಪಾಂಚಾಲರು | ದ್ದಾಮ ಸತ್ತ್ವರು ನಡೆತರಲು |
ಆ ಮೊನೆಗಿದಿರಾಗಿ ಗುರುತರುಣಿಜ ಮಾದ್ರಿ | ಭೂಮಿಪರುಗಳು ನಿಂದಿರಲು || ೬೪ ||

ಬಳಿಕಿತ್ತಲಾಸುಕುಮಾರಕನಾಬಲ | ದೊಳ ಹೊಕ್ಕು ರಿಪುನೃಪರುಗಳ |
ತುಳಿಪುತಿರಲು ಬಂದಾಭೀಷ್ಮರು ಮನ | ದಳಲಿಂದಿಂತು ನುಡಿದರು || ೬೫ ||

ಏನಣ್ಣ ನಿನ್ನ ತಂದೆಗಳಾಪುತ್ರಸಂ | ತಾನಕ್ಕರುಹ ನಿನ್ನಾ |
ಏನೆಂದೆನ್ನದೆ ಚಕ್ರವ್ಯೂಹಕೆ | ಯಾನದಟ್ಟುವುದು ಸಮ್ಮತವೇ || ೬೬ ||

ಮುಂದರಿಯದೆ ಕಳುಹಿದಡೇನು ನೀನಿನ್ನು | ಹಿಂದಕೆಯ್ದಲು ವಶವಲ್ಲ |
ಕಂದ ಕೇಳದರಿಂದೆನ್ನ ಹತ್ತಿರಕೆ | ಯ್ತಂದೊಡೆ ನಿನ್ನನೆಯ್ದಿಸುವೆ || ೬೭ ||

ಎಂದ ಭೀಷ್ಮರಿಗಿಂತೆಂದೆಂನೆಲೇಯಜ್ಜ | ಸಂದಣಿಸಿದಪೌಜಿಗಳ್ಕಿ |
ಹಿಂದಕ್ಕೆ ತಿರುಗಲು ಲಜ್ಜೆಯಲ್ಲವೇ ಕೇ | ಳಿಂದುಕುಲದರಾಯರಿಗೆ || ೬೮ ||

ಎನೆ ಕಣ್ಗಳ ನೀರ ತುಂಬಿಯಾ ನದಿಯನಂ | ದನನತಿ ದುಃಖಿಸುತಿರಲು |
ಅನುಮಾನಿಸದಾತನ ತೇಜಿಯ | ಮುನಿದೆಚ್ಚು ಮುಂದಕೆ ನಡೆದು || ೯೯ ||

ಹದಗೆಯ್ದು ರಕ್ತೋದಕದಿ ರಣಧರೆಯೊಳು | ಮದವದರಾತಿಭೂವರರ |
ಒದವಿದ ಬೆಳೆಯನಾಬಿಲ್ಲಬಿನ್ನಾಣದಿ | ಬೆದೆಯ ಹಿರಿದು ಹಾಕಿದನು || ೭೦ ||

ಮೃಗದೊಡ್ಡಮುರಿದ ಭಂಡಿಯಹುಲಿಯಂದದಿ | ನಿರದೆ ರಥನ ಹರಿಯಿಸುವಾ |
ಧುರಗಲಿಯನು ಕಂಡು ಕುರುಭೂಪಾಲನ | ವರಸುತನಾ ಲಕ್ಕಣನು || ೭೧ ||

ಭರದಿಂ ತಾಗಲು ಭೈರವನಂದದಿ | ನುರವಣೆಯಿಂದಭಿಮನ್ಯು |
ಸರಳಸರಿಯನು ಸುರಿದು ಮತ್ತಾವೀರ | ನುರುತರಮಪ್ಪ ಸೇನೆಯನು || ೭೨ ||

ವಾರಣಮಿವುವಾಜಿಯಿವು ಭಟತತಿಯಿವು | ತೇರಿವುಯೆಂಬ ಭೇದವನು |
ಆರರಿಯದ ತೆರದಿಂ ಛಿನ್ನಭಿನ್ನವ | ನಾರಣಧೀರ ಮಾಡಿದನು || ೭೩ ||

ಈ ರೀತಿಯಿಂದ ತನ್ನ ಸೇನೆಗೆ ಕದನಕ | ಠೋರನುಬ್ಬಸ ಮಾಡುತಿರಲು |
ಆರಿಬೊಬ್ಬಿರಿವುತ ಬಂದಿದಿರಾದನು | ಕೌರವನೃಪನಂದನನು || ೭೪ ||

ನೆಲನಾಗಸವೆಣ್ದೆಸೆಯೆಂಬ ಭೇದವ | ನೆಲೆಯನರಿಯಬಾರದಂತೆ |
ಬಲಯುತನುರುಬಾಣವ್ರಾತವನಾ | ಕಲಿಯ ತಲೆಗೆ ಸೂಸಿದನು || ೭೫ ||

ಅದನು ಕಂಡತಿಕೋಪದಿನಾ ಶರಗಳ | ನುದಿತ ವಿಕ್ರಮಿಯಭಿಮನ್ಯು |
ಪದಪಿಂದೊಂದೇ ಶರದಿಂದ ಸಲೆಖಂಡಿ | ಸಿದನದನೇನಬಣ್ಣಿಪೆನು || ೭೬ ||

ಮತ್ತೊಂದು ದಿವ್ಯಶರವ ತೆಗೆದಾಸಾಹ | ಸೋತ್ತಂಸನು ಲಕ್ಕಣನ |
ಉತ್ತಮಾಂಗವನುದ್ದದವರು ಮೆಚ್ಚುವವೊಲು | ಕತ್ತರಿಸಿಯೆ ಹಾಕಿದನು || ೭೭ ||

ಮಿರುಪರುಣಾಬ್ದವನಾನಿಜವೈರದಿ | ಹೆರೆಕರ್ಚಿಹಾರುವಂದದೊಳು |
ನೆರೆಗಲಿಯೆಚ್ಚ ಕವಲ್ಗಣೆಪಾರಿತು | ಪರಿದರಿಭಟನ ಶಿರವನು || ೭೮ ||

ಎಕ್ಕತೂಳದಬಂಟನಾಫಲ್ಗುಣಸೂನು | ಲಕ್ಕಣನನು ಭೂತಳಕೆ |
ಇಕ್ಕಲವನ ತಮ್ಮಂದಿರು ನೂರ್ವರು | ತಕ್ಕಿನಿಂದವಗಿದಿರಾಗೆ || ೭೯ ||

ಕಡುಮುನಿದನಿಬರತಲೆಗಳನೆಲ್ಲವ | ನೆಡೆವಿಡದೊಂದೇ ಶರದಿ |
ಕಡಿಯಲವರ ಮಸ್ತಕ ಚಂದ್ರಲೋಕದ | ಪಡಿಮಾಡಿದುದಾಗಸವನು || ೮೦ ||

ಆ ಕಲಿಯೆಚ್ಚ ಬಾಣದಿ ಕೌರವಧರ | ಣೀಕಾಂತಸುತರ ಮೌಳಿಗಳು |
ಆಕಾಶದೊಳು ಕೆದರ್ದುವು ಸುರಧನು ಕೆದ | ರ್ದಾಕಾರಮನನುಕರಿಸಿ || ೮೧ ||

ಕೌರವಸುತರನಾಹವಮಂಟಪದೊಳ | ಗಾರೈಯದಮರಾವತಿಯ |
ನಾರಿಯರಿಗೆ ಮದುವೆಯ ಮಾಡಿದನಸಿ | ಧಾರಾಪೂರ್ವಕದಿಂದ || ೮೨ ||

ಇಂತವರನು ನೆಲದೊಳಗೆ ನೆರಪಿ ಭಟ | ಸಂತಾನದೊಳಗೊಂದುಳಿಯದೆ |
ಮುಂತಕ್ಕೆ ಬನ್ನಿಮೆನುತ ವೀರವನಿತಾ | ಕಾಂತನು ನಿಂದಿರಲಾಗ || ೮೩ ||

ಭೀಕರಮಪ್ಪೀ ನಿಷ್ಠುರಚಕ್ರಪ | ತಾಕಿನಿಯೊಳಗೀಪಸುಳೆ |
ಏಕಕ್ಷೋಹಿಣಿಯನು ಕೊಂದನೆಂದು ಮೇ | ಲಾ ಕಲ್ಪಜರು ಕೊಂಡಾಡೆ || ೮೪ ||

ಅನಿತರೊಳಾಕುರುಧರಣೀಪತಿ ತನ್ನ | ತನುಜಶತಕವಳಿದುದಕೆ |
ಮನದೊಳಳಲ ತಾಳಿ ಪಿರಿದಾದ ಚಿಂತೆಯ | ನನುಕರಿಸುತ್ತಿರಲಾಗ || ೮೫ ||

ದೇವ ಬಿನ್ನಪಮೀ ಬೆಸನನು ನನಗಿರ | ದೀವುದೆನುತ ಸಿಂಧುನೃಪತಿ |
ಆ ವಿಭುವಿಂದಾ ಬೆಸನ ಹಡೆದು ಬಂ | ದೋವದೆ ತಾಗಿದನಾಗ || ೮೬ ||

ಪೊಣೆದೋರೋರ್ವರನೆಚ್ಚಂಬುಗಳು ಮಧ್ಯ | ರಣರಂಗದೊಳು ಕತ್ತರಿಸುತ |
ಬಣಬೆಯನೊಡ್ಡಿದಂತಾಗಲು ಕಪಿಕೇತು | ವಣುಗನ ಕೈಂಬುತೀರೆ || ೮೭ ||

ಕೊಂಬು ಮುರಿದ ಕೂರಾನೆಯ ತೆರದಿಂ | ದಂಬುತೀರಿಯಭಿಮನ್ಯು |
ಬೆಂಬಿಳದಿರೆ ಕಂಡು ಸೈಂಧವನೆನಗಿ | ನ್ನಿಂಬಾದುದು ಕಾರ್ಯವೆಂದು || ೮೮ ||

ಉರುವ ಬಾಣದಿನೆಸಲಾಕುವರನತಲೆ | ಪರಿದು ಪವನಪಥಕೊಗೆಯೆ |
ಮಿನುಗುವ ಬೀರಸಿರಿಯಮಣಿಮಾಡಕೆ | ಯಿರಿಸಿದ ಕಳಶದಂತಾಯ್ತು || ೮೯ ||

ಅಂಬರಸತಿಯವನೀದೇವತೆಗೆ ಮ | ನಂಬುಗುವಂತರ್ಚಿಸಿದ |
ಅಂಬುಜಮನೆ ಬೀಳ್ದುದು ತದ್ವೀರಾವ | ಲಂಬಿಯ ಲಲಿತೋತ್ತಮಾಂಗ || ೯೦ ||

ಆ ಸಮಯದೊಳಾಗಸದೊಳೀಕ್ಷಿಸುವ ಸು | ರಾಸುರರಾ ಕುಮಾರಕನ |
ಆ ಸಾವಗಂಡು ಮರುಗಲಪರಾಂಭೋ | ರಾಶಿಗಾದಿತ್ಯನೈದಿದನು || ೯೧ ||

ಅತ್ತಲು ವಸುಪಾಲನೆಂಬವನಾಭೂ | ಪೋತ್ತಂಸಚಕ್ರಿಯ ಬಲಕೆ |
ಎತ್ತರಮಾದಾವಜ್ರಕಾಂಡನನಿಳೆ | ಗೊತ್ತಂಬದಿಂದಿಕ್ಕಿದನು || ೯೨ ||

ಬಳಿಕಿತ್ತಲಾ ಸಂಸಪ್ತಕರನು ಕಲಿ | ಗಳಕುಲತಿಲಕನರ್ಜುನನು |
ಮುಳಿಸಿಂದೆಚ್ಚು ಮಿಳ್ತುವಿನ ನಿವಾಸಕ್ಕೆ | ಕಳುಹಿ ಬೀಡಿಗೆ ಮಗುಳ್ವಾಗ || ೯೩ ||

ಪಾಳೆಯದೊಳಗಭಿಮನ್ಯುವಳಿದುದಕ್ಕೆ ಗೋಳಿಡುವಾಸುದ್ದಿಗೇಳಿ |
ಹೇಳಲೇನು ಸಿಡಿಲಾಕಿವಿವೊಕ್ಕಮ | ರಾಳನಂದದಿ ಬೆದರಿದನು || ೯೪ ||

ಅನಿತರೊಳಾನಿಜಜನನಿ ಸುಭದ್ರಾ | ವನಿತೆಯಂತಃಪುರಸಹಿತ |
ಇನಿಯನ ಕಾಲಬಳಿ ಬಾಯೊಳುಬಿಳ್ದಾಕ್ರಂ | ದನಗೈವುತಿಂತುರುಳಿದಳು || ೯೫ ||