ರಗಳೆ

ಹಾಹಾ ಸೋಮಾನ್ವಯಮಣಿದೀಪಾ |
ಹಾಹಾ ಮನಸಿಜಸನ್ನಿಭರೂಪಾ | || ೧ ||

ಹಾಹಾ ಸುರಭೂಜೋಪಮದಾನೀ |
ಹಾಹಾ ನಿರ್ಮಲಮನದಭಿಮಾನೀ | || ೨ ||

ಹಾಹಾ ಸನ್ನುತವಿಕ್ರಮಶಾಲೀ |
ಹಾಹಾ ಎನ್ನ ಮೊಗದ ಕಣ್ಣಾಲೀ | || ೩ ||

ಹಾಹಾ ಅಭಿನವರೂಪ ಜಯಂತಾ |
ಹಾಹಾ ಭೂವಿಶ್ರುತಗುಣವಂತಾ | || ೪ ||

ಹಾಹಾ ವನನಿಧಿನಿಭಗಾಂಭಿರ್ಯ |
ಹಾಹಾ ಮಂದರಶೈಲಸ್ಥ್ಯರ್ಯಾ | || ೫ ||

ಹಾಹಾ ಕುರುಕುಲವಿಪಿನಕುಠಾರಾ |
ಹಾಹಾ ಸದ್ಗುಣಮಣಿಗಣಹಾರಾ | || ೬ ||

ಹಾಹಾ ಸುರಭಿಸಮಾನೌದಾರ್ಯಾ |
ಹಾಹಾ ರಾಜಕುಲಾಂಬರಸೂರ್ಯಾ | || ೭ ||

ಹಾಹಾ ಮಕ್ಕಳುಗಳ ಮಾಣಿಕವೇ |
ಹಾಹಾ ಹೆಣ್ಗಳೆದೆಯ ಮೌಕ್ತಿಕವೇ | || ೮ ||

ಹಾಹಾ ಕಂಸಾರಿಯ ಜಾಮಾತೃ |
ಹಾಹಾ ಸುರಕುಜಸನ್ನಿಭದಾತೃ | || ೯ ||

ಎಕ್ಕತೊಳದ ಭಟಿತತಯಿರ್ದಂತೆ |
ಠಕ್ಕಿನ ವೀರಾವಳಿಯಿರ್ದಂತೆ | || ೧೦ ||

ಚಕ್ರವ್ಯೂಹಮದಿರದೆ ಹೊಗುತ |
ವಿಕ್ರಮದಿಂ ರಿಪುಗಳ ಹತಿಯಿಸುತ | || ೧೧ ||

ದಂತನಖಾವಳಿಮುರಿದ ಹುಲಿಯವೊಲು |
ತಾಂ ತೀರಿದ ಕೈದಲಿ ನಿಂದಿರಲು | || ೧೨ ||

ಆಯುಧಮಿಲ್ಲದೆ ನಿಂದಿರ್ದನನು |
ಸಾಯಲೆಸೆವುದನುಚಿತವೆಂಬುದನು | || ೧೩ ||

ಭಾವಿಸದಾ ಪಾತಕಿ ಬಂದೆಸಲು |
ದೇವವಿತತಿ ಕೊಂಡಾಡುತಮಿರಲು | || ೧೪ ||

ರವಿಯೊಡಲನು ಜರ್ಜರಿತವ ಮಾಡಿ |
ದಿವಿಜಮಹಿಗೆ ಹರಿದಾಳಿಯ ಮಾಡಿ | || ೧೫ ||

ವೀರಸ್ವರ್ಗದ ವಿಧುಮುಖಿಯರೆಲ್ಲರನು |
ಆರೈಯದೆವೊಡಗೂಡಲು ನೀನು | || ೧೬ ||

ನಾನಿದನೇನಂದದಿ ಸೈರಿಪೆನು |
ಭೂನುತವೀರ ಕಿರೀಟಯಸೂನು | || ೧೭ ||

ನಿನ್ನನಗಲಿ ಬಾಳುವುದೆನಗಿನ್ನೇ |
ಕೆನ್ನ ಕೊರಲ ದೇವರ ಹೊಸಹೊನ್ನೇ || ೧೮ ||

ನೋಡುವ ಹೊಸರನ್ನದ ಕನ್ನಡಿಯೇ |
ಆಡುವ ಬೀದಿಯ ಸಿಂಗದಮರಿಯೇ | || ೧೯ ||

ಅಂಗಣದೊಳಗಾಡುವ ಮದಕರಿಯೆ |
ಮುಂಗೈಯೊಳಗೋದಿಸುವರಗಿಳಿಯೇ | || ೨೦ ||

ಹತ್ತುಂ ದೆಸೆಯೊಳು ನಿನ್ನಯ ಕೀರ್ತಿ |
ಹತ್ತಿತಲಾ ಅಭಿನವಸಮವರ್ತೀ | || ೨೧ ||

ಇನ್ನೆನಗಾವುದು ವಿಧಿ ಶತಮನ್ಯು |
ಸನ್ನಿಭಸಂಪನ್ನನೆಯಭಿಮನ್ಯು | || ೨೨ ||

ಆವಂದದಿ ಜೀವಿಸುವೆನು ನಾನು |
ಸಾವಲ್ಲದೆ ಗತಿಯಿಲ್ಲೆನಗಿನ್ನು | || ೨೩ ||

ಬವರಮುಖದೊಳೊಂದೇ ದಿನದೊಳಗೆ |
ಸವಿದುತ್ತಾದೆಯಲಾ ಮಿಳ್ತುವಿಗೆ | || ೨೪ ||

ಎಂದು ಸುಭದ್ರೆ ಹೊರಳಿ ವಸುಧೆಯೊಳು |
ವೊಂದಿದ ದುಃಖದಿ ಹಂಬಲಿಸಿದಳು | || ೨೫ ||

ಅದನೀಕ್ಷಿಸಿ ಮಧ್ಯಮಪಾಂಡವನು |
ಬೆದೆಬೆದೆಬೆಂದೋವದೆಯಳಲಿದನು | || ೨೬ ||

ದಿಟ್ಟಿಗೆಟ್ಟ ಮೊಗದಂದದಿನವನು |
ಕೆಟ್ಟೆನೆನುತ ನೆರೆ ಹಳಹಳಿಸಿದನು | || ೨೭ ||

ಇದಿರ್ವಂದಮರ್ದಪ್ಪಿ ಬಾಯೊಳು ಬಾಯಿಟ್ಟು | ಹದದಂಬುಲವನೀಸಿಕೊಂಡು |
ಮುದದಿಂದೊಡನೆ ಮನೆಗೆ ಬರ್ಪ ಕಂದನೆ | ಲ್ಲಿದನೇಯೆಂದು ಕೇಳಿದನು || ೯೬ ||

ಅನಿತರೊಳಗೆ ಬಲಕೇಶವರಾಧರ್ಮ | ತನುಜವೃಕೋದರರೆಯ್ದಿ |
ತನಯನಳಿದುದಕ್ಕೆ ಪಿರಿದು ದುಃಖಿಸುವಿಂದ್ರ | ತನುಜಾತನನುಪಚರಿಸಿ || ೯೭ ||

ಮರುತನಂದನನಾದಿಯಾದ ವೀರರು ನಾಣ್ಚಿ | ಶಿರವ ಬಾಗಿರಲರ್ಜುನನು |
ಒರೆದನಿಂತೆಂದು ಚಕ್ರವ್ಯೂಹಕ್ಕಾ | ತರುಣನೆಯ್ದಿದ ತೆರನೇನು || ೯೮ ||

ಎನೆ ಧರ್ಮಜಾತನಿಂತೆಂದನು ಬಿಲ್ಲೋಜ | ನನುಗೆಯ್ದಾಮೋಹರಕೆ |
ಅನುಮಾನಿಸದೆ ಹೋಗುವರುಂಟೆಯೆಂದೆಂ | ಬನಿತರೊಳಗೆ ತಾನೆಯ್ದಿ || ೯೯ ||

ಉಗ್ರಮಪ್ಪೀವ್ಯೂಹವನು ಭೇದಿಪೆನ | ವ್ಯಗ್ರದಿನೆಂದೆಯ್ತಂದು |
ಆಗ್ರಹದಿಂದೆಮ್ಮನಿರದೆ ಬೀಳ್ಕೊಂಡು ವೀ | ರಾಗ್ರಣಿಯಿರದೆಯ್ದಿದನು || ೧೦೦ ||

ಎನುತ ಕೃತಾಂತನಂದನನಾಯಭಿಮನ್ಯು | ವಿನ ಪೋದಂದಮನುಸುರ್ವ |
ಅನಿತರೊಳಗೆ ಕೆಲದೊಳಗಿರ್ದಾಬಂಧು | ಜನಗಳಿಂತೆಂದಾಡಿದರು || ೧೦೧ ||

ಶಕ್ರನಂದನ ಕೇಳ್ನಿನ್ನ ನಂದನನ ಪ | ರಾಕ್ರಮಮಾರ್ಗೆಸಮಾನ |
ಚಕ್ರವ್ಯೂಹಮನಣ್ಮುತೊರ್ವನೆ ಹೊ | ಕ್ಕಾಕ್ರಮಿಸಿಯೆ ಹತಿಸಿದನು || ೧೦೨ ||

ಗರ್ವದಿನಿದಿರಾದ ಗಂಡುಗಲಿಗಳನು | ದೋರ್ವಲದಿಂ ಹತಮಾಡಿ |
ಉರ್ವಿಪತಿ ಕೌರವನ ಕುಮಾರರ | ನೂರ್ವರ ತಲೆಗಳನರಿದು || ೧೦೩ ||

ಕುರಿಯ ಮರಿಯ ಹಿಂಡನಾತೋಳ ಹೊಕ್ಕಂತೆ | ಯರಿಕೆಯರಾತಿಸೈನಿಕರ |
ನೆರೆಗಲಿಗಳನೆಲ್ಲರ ಕೊಂದಾನೆಲ | ನುರೆ ಹೇಸುವಂತೆ ಮಾಡಿದನು || ೧೦೪ ||

ಆತನತ್ಯಂತ ಪರಾಕ್ರಮಮುಪಮಾ | ತೀತಮದುತಮೀನೆಲಕೆ |
ಮಾತೇನೇಕಾಕ್ಷೋಹಿಣಿಬಲವನು | ಭೂತಕೌತಣವ ಮಾಡಿದನು || ೧೦೫ ||

ಸಿಂಧುವಲ್ಲಭನಾರ್ಪನೆಯಾಸಮರಧು | ರಂಧರನನು ಜೀವಗೊಳಲು |
ಬಂಧುರನಖದಂತಹೀನ ಕೇಸರಿಯನು | ಸಿಂಧುರ ಕೊಲುವಂದದೊಳು || ೧೦೬ ||

ಶರಸಂತತಿಹೀನನಾಗಿ ನಿಂದಿರ್ದಾ | ಧುರಧೀರನ ಕೊಂದನೈಸೆ |
ಕರುಣಮಿಲ್ಲದೆಯೆನಲಾ ನುಡಿಯನು ಕೇಳಿ | ಪಿರಿದು ಕೋಪಾರೂಢನಾಗಿ || ೧೦೭ ||

ಬಾಲಕನಾಕೈದುವಿಲ್ಲದವನ ಕೊಂದ | ಖೂಳನನಾಸೈಂಧವನ |
ನಾಳೆ ಕೊಲ್ಲದೊಡುರಿಗೆಂಡದೊಳಗೆ ಬಿಳ್ದು | ಜಾಳಿಸುವೆನು ದೇಹವನು || ೧೦೮ ||

ಇಂತು ಪ್ರತಿಜ್ಞೆಯ ಮಾಡಲು ಬಲಕೈಟ | ಭಾಂತಕನಂತಕಸೂನು |
ಮುಂತಾದವರೆಲ್ಲ ಬೆಕ್ಕಸವಟ್ಟತಿ | ಚಿಂತೆಯಿನೆಯ್ದಿರಲಿತ್ತ || ೧೦೯ ||

ಆ ರಾತ್ರಿಯೊಳಿರದಾಯಭಿಮನ್ಯುಕು | ಮಾರನೇಳ್ಗೆಯನಾಬಲದ |
ವೀರವಿತತಿ ಕೊಂಡಾಡುತ್ತಲಿರ | ಲಾರವಿಮೂಡಿದುದಾಗ || ೧೧೦ ||

ಆ ಭಾಸ್ಕರನುದಯದೊಳು ಕೌರವಧರ | ಣೀಭುಜನೆಂದಿನಂದದೊಳು |
ಶೋಭೆವಡೆದ ಚಕ್ರವ್ಯೂಹಮನವ | ನೀಭಾರಮಾಗಿಯೊಡ್ಡಿಸಿದ || ೧೧೧ ||

ತನುಜಾತನ ಕೊಂದಾ ಸೈಂಧವನನಿಂ | ದಿನಸಂಜೆಯೊಳಗೆ ಕೊಲ್ಲದಿರ್ದೊಡೆ |
ಅನಲಕುಂಡದೊಳಲಿಯದೆ ಬಿಡೆನೆಂದು ಫ | ಲ್ಗುನನು ನುಡಿದ ಸುದ್ದಿಗೇಳಿ || ೧೧೨ ||

ಕರಮೊಳ್ಳಿತೆನ್ನಯ ಕಾರ್ಯಮಾವಾವ | ಪರಿಯೊಳಗೀಸೈಂಧವನ |
ಪರಿರಕ್ಷಿಸಿಕೊಂಡೀಪಗಲಳಿವನ್ನ | ಬರಮಿರ್ದೊಡೆ ತಾನು ನುಡಿದ || ೧೧೩ ||

ಭಾಷೆಗೆ ಸಲವಾಗಿ ಸಾಯದೆ ಬಿಡನು | ದ್ವೇಷಿ ಫಲ್ಗುಣನೆಂದೆನುತ |
ದೋಷಾಕರಕುಲತಿಲಕನೊಡ್ಡನು ಕಡು | ಭೀಷಣಮೆನೆ ರಚಿಯಿಸಿದ || ೧೧೪ ||

ಸುತ್ತುವಲಯದೊಳು ಕೋಟಿಭಟರ್ಕಳ | ಮೊತ್ತದೊಡ್ಡಣಮೊಪ್ಪಿದುದು |
ಬಿತ್ತರಮಾದ ಕೃತಾಂತನ ಕೋಂಟೆಯ | ಮೊತ್ತದ ತೆನೆಗಳೆಂಬಂತೆ || ೧೧೫ ||

ಪಲವಣ್ಣದ ದಾವಣಿಯ ಚಾಮರದ ಬಿಲ್ಲ | ಬಲುವಾಹಿನಿಚಕ್ರವನು |
ಬಳಸಿದುದಮರಧನುವಿನಬಳಗಮಾ | ವಿಲಯಮೇಘವ ಸುತ್ತಿದಂತೆ || ೧೧೬ ||

ಊರಿವ ಬೇಸಗೆಯ ಮಧ್ಯಾಹ್ನದುಷ್ಣಾಂಶುವ | ಕಿರಣಗಳಾವಲಯದೊಳು |
ಪರಿದಂತೆ ಫಲಸಬಳಗಳಾವ್ಯೂಹವ | ಪರಿವೇಷ್ಟಿಸಿ ರಂಜಿಸಿದವು || ೧೧೭ ||

ಅದರೊಳಮೈಯೊಳಗವನಿಯ ಬಳಸಿನಿಂ | ದು ದಧಿಯ ತೆರೆಮಾಲೆಯಂತೆ |
ಅದಟರೆನಿಪ ರಾಯರಾವುತರೇರಿದ | ಕುದುರೆಯ ಪೌಜೊಪ್ಪಿದುದು || ೧೧೮ ||

ಮೇರುಪರ್ವತ ಬಳಸಿ ಬಹುರೂಪಾಂ | ತಾರವಿಮಂಡಲವಡರ್ದ |
ತೇರೆನಲಾ ಚಕ್ರವ್ಯೂಹವ ಸುತ್ತಿ | ದಾರಥದೊಡ್ಡು ಶೋಭಿಸಿತು || ೧೧೯ ||

ಕಾಲಭೈರವನ ಖರ್ವಡದುರ್ಗದಂತಾ | ಭೀಳಾದ್ರಿಸಮಸಾಮಜದ |
ಜಾಲವೇಷ್ಟಿತಮಾದಾಪೌಜಿನೇಳ್ಗೆಯ | ನಾಲೋಕಿಪೊಡಳವಲ್ಲ || ೧೨೦ ||

ಇಳೆಯೊಳಗುಳ್ಳ ದೇಹಿಗಳಸುವನು ಬೆಲೆ | ಗೊಳುವೆನೆನುತ ಮಿಳ್ತುವಿನ |
ಪೊಳಲಜನಂಗಳೆಯ್ದಿದ ಸಂಧಿಯೆನೆ ಕ | ಣ್ಗೊಳಿಸಿದುದಾ ಮೋಹರವು || ೧೨೧ ||

ಕಾಲರುದ್ರನ ಕಟಕವೊ ಹೆಮ್ಮಾರಿಯ | ಪಾಳಯವೋ ಜವಪುರವೋ |
ಆಲೋಕಿಪೆನೆಂಬವರ ಕಣ್ಬಗೆಗಾ | ಭೀಳಮಾದಾಪತಾಕಿನಿಯೊ || ೧೨೨ ||

ಅಪಕೀರ್ತಿಗವನಿಯಭಾಜನವನು ಮಾ | ಳ್ಪಪಗತಸುಕೃತಿಕೌರವನು |
ವಿಪರೀತಚರಿತನೆಸಗಿದ ಚಕ್ರವ್ಯೂಹ | ವುಪಮಿಸಲತಿ ಭೀಕರವು || ೧೨೩ ||

ಹರನ ಹಣೆಯ ಅಗ್ಗಿಗಣ್ಣು ಭೇದಿಸಬಾರ | ದಿರವಿನಂತೆಸೆವ ವಾಹಿನಿಯ |
ಪಿರಿದಗುರ್ವಿಸುವ ಪಿಂಗಡೆ ಸೈಂಧವನ ತಂ | ಧಿರಿಸಿದನತಿ ಜತನದೊಳು || ೧೨೪ ||

ಉತ್ತಮಸತ್ತ್ವನುಷ್ಣಾಂಶುತನಯ ಭಗ | ದತ್ತಬಾಹ್ಲಿಕ ಭೂರಿಶ್ರವರ |
ಮತ್ತಾತನ ಮುಂಗಡೆ ಕಾಪನಿಟ್ಟನು | ದತ್ತಾವಧಾನವೆಂದೆನುತ || ೧೨೫ ||

ಏಕಾಂಗವೀರರೆನಿಪ ಮಾದ್ರಿಭೂಮಿಪ | ನಾ ಕೃಪಕೃತವರ್ಮರುಗಳ |
ಆ ಪೃಥವಿಪನಾತನ ಬಲಗಡೆಯೊಳು | ಕಾಪಿಟ್ಟನತಿ ಭೀತಿಯೊಳು || ೧೨೬ ||

ಸಾಸಿಗರೆಂದೆನಿಸುವ ಗುರುಭೀಷ್ಮದು | ಶ್ಯಾಸನರಾದಿಯಾದವರ |
ಆ ಸೈಂಧವನೆಡಗಡೆ ಕಾಪನಿರಿಸಿದ | ನೋಸರಮಾಡಬೇಕೆಂದು || ೧೨೭ ||

ಬಳಿಕುಳಿದೆಕ್ಕತೂಳದ ಬಲವಂತರ | ಬಳಗವನಲ್ಲಲ್ಲಿರಿಸಿ |
ಇಳೆಯಾಧಿಪತಿ ತನ್ನರನೆರೆಸಹಮಾಗಿ | ಬಳಸಿನಿಂದಿರೆ ಬಳಿಕಿತ್ತ || ೧೨೮ ||

ಅಕಲಂಕಶೂರನರ್ಜುನನರಸಗೆ ಸ | ತ್ಯಕಭೀಮದೃಷ್ಟದ್ಯುಮ್ನ |
ನಕುಲ ಘಟೋತ್ಕಚ ಸಹದೇವರಾದಿಯು | ತ್ಸುಕವಿಕ್ರಮಿಗಳ ಕಾಪಿರಿಸಿ || ೧೨೯ ||

ದ್ರುಪದ ವಿರಾಟ ಶಿಖಂಡಿ ಸೋಮಕ ಭೂ | ಮಿಪಗಾಂಧರ್ವರುವೆರಸಿ |
ಅಪರಿಮಿತವ್ಯೂಹಸಹಿತರ್ಜುನನತಿ | ಕುಪಿತಹೃದಯನತಿಭರದಿ || ೧೩೦ ||

ಮಸಕದಿ ವಜ್ರವರೂಥವನಿರದೇರಿ | ಹಸಿದ ಭೈರವನಂದದೊಳು |
ನೊಸಲನಯನನಂತೆ ಮಿಳ್ತುವಿನಂತೆ ಘೂ | ರ್ಣಿಸುವ ಮಾರಿಯ ಮೂರ್ತಿಯಂತೆ || ೧೩೧ ||

ಕಡುಪಿಂದಾ ಕಾರ್ಮುಕವನು ನೀವಿ ಜೇ | ವಡೆಯೆ ಕಡೆಯ ಕಾಲದಿನದ |
ಜಡಧರದೆಡೆಯಸುರಾಸ್ತ್ರಾಸನದಿಂ | ಸಿಡಿವ ಸಿಡಿಲ ತೆರನಾಯ್ತು || ೧೩೨ ||

ಬಂದಪನದೆ ಬಲವಂತಶಿಖಾಮಣಿ | ನಿಂದಿರಬೇಡಮಾರ್ಮಲೆತು |
ಸಂದಣಿಸಿದರಿಪುವಸುಧಾಧರವೃಂದ | ವೆಂದೊದರಿದವು ಕಾಳೆಗಳು || ೧೩೩ ||

ಉರಿಯಿಂ ಸಮೆದ ಪುತ್ರಿಕೆ ಬೇಸಗೆಯ ಕು | ಮ್ಮರಿಗಾಡಹೊಗುವಂದದೊಳು |
ಉರುತರ ಕೋಪೋದ್ರೇಕಮಾನಸನಾ | ಪರಬಲವನು ಪೊಕ್ಕನಾಗ || ೧೩೪ ||

ಅದೆಯದೆ ಬಂದನಪೂರ್ವಪರಾಕ್ರಮಿ | ಯಧಟರ ದೇವನೆಂದೆನುತ |
ಮದವದರಾತಿಮಂಡಳಿಕರಮಂಡಳಿ | ಗದಗಾಪುಗೊಂಡುದಾಗ || ೧೩೫ ||

ಇಂತು ಬಂದಾ ರಥವನು ನೂಂಕಿ ಕುರುಭೂ | ಕಾಂತನ ಬಲವನೆಲ್ಲವನು |
ಪಿಂತುಮುಂತುಮಾಡಿ ತಲೆಬಾಲಗೆಡಿಸು | ತ್ತಂ ತರಿಸದೆ ಬರುತಿರಲು || ೧೩೬ ||

ಅದಿರ್ದರ್ಕೆಲರಡಗಿದರು ಕೆಲರ್ಕಡು | ಬೆದರಿದರ್ಕೆಲರುಬ್ಬೆಗೊಂಡು |
ಎದೆಗೆಟ್ಟರ್ಕೆಲರಾಮೋಹರದೊಳು | ಕದನಕರ್ಕಶನುರವಣೆಗೆ || ೧೩೭ ||

ಪಡಲಿಟ್ಟಂದದಿನಾವೀರಫಲ್ಗುಣ | ನಡಸಿಕೊಲುವ ಕೊಲೆಗಳ್ಕಿ |
ತಡೆಯದಿರ್ದವರು ಮದ್ದಳೆಯ ಹೊಕ್ಕಿಲಿಯಂತೆ | ಹುಡಹಾವುತ್ತಿರ್ದರಾಗ || ೧೩೮ ||

ಅರೆಬರಾದಿತ್ಯಮಂಡಲವನೊಡೆದು ಪೋಗಿ | ಸುರಲೋಕದ ಸತಿಯರೊಳು |
ನೆರೆದು ಸುಖಿಸಿಯರ್ಜುನದೇವನ ಹಾಡಿ | ಹರಸುತಿರ್ದರು ಹರುಷದೊಳು || ೧೩೯ ||

ನೆಲನೋಕರಿಪಂದದಿನಾನಾಗರ | ತಲೆಬೇನೆ ಹಿಂಗುವಂದದೊಳು |
ಅಲಸದರಾತಿಸೇನಾಚಕ್ರವನಾ | ಬಲಯುತನತಿ ಹತಿಸಿದನು || ೧೪೦ ||

ಈ ಕ್ರಮದಿಂ ರಿಪುಚಕ್ರಕ್ಷಯಕಾಲ | ಚಕ್ರನುದ್ಧತವಿಕ್ರಮನು |
ಶಕ್ರತನುಜನದಿರದೆ ಪೊಕ್ಕಾಬಲ | ಚಕ್ರವೆಲ್ಲವ ಹತಿಸಿದನು || ೧೪೧ ||

ಅದನು ಕಂಡಾ ಶಲ್ಯನಮಿತವಾಹಿನಿಗೂಡಿ | ಯಿದಿರ್ವಂದು ತಾಗೆ ಕೋಪದೊಳು |
ಅಧಟರದೇವನರ್ಜುನನಾಬಲವನೊ | ರ್ಮೊದಲೆ ಮುಣ್ಮುಳಿಗೊಳಿಸಿದನು || ೧೪೨ ||

ಒಕ್ಕಲಿಕ್ಕಿದವೊಲಾದಾಸೇನೆಯ ಕಂಡು | ಕೆಕ್ಕಳಗೆಳಲಿ ಮಾದ್ರಿಪನು |
ಕಕ್ಕಸದಿಂದ ಕಣೆಗಳನೆಸುವ ರಭ | ಸಕ್ಕೆ ಸುರರು ನಡುಗಿದರು || ೧೪೩ ||

ಬಾವನ್ನವೀರಮಾದ್ರೀಶ್ವರನೊಳಗರೆ | ಜಾವಮಿದಿರ್ಚುತೀಕ್ಷಿಸಿಸುತ |
ದೇವರ್ಕಳು ಮೆಚ್ಚುವವೊಲು ಸಾಯದ | ನೋವನವಗೆ ಪುಟ್ಟಿಸಿದನು || ೧೪೪ ||

ಆ ಸಮಯದೊಳು ವಿಕ್ರಮಯುತಭಗದತ್ತ | ನಾಸುರಮಪ್ಪಗಜವನು |
ಓಸರಿಸದೆಯೇರಿ ಕಡುಭರದಿಂದ ಮ | ತ್ತಾ ಸಾಸಿಗನನೆಯ್ದಿದನು || ೧೪೫ ||

ಮುಗಿಲಮೇಗಡೆ ಮಿಳ್ಳಿರಿವ ಮಿಂಚಿನವೊಲು | ಧಗಧಗಿಪಂಕುಶದಿಂದ |
ಗಗನತಳವ ಚುಂಬಿಸುವ ಕುಂಭಿಯ ಕುಂಭ | ಯುಗಲವ ತಿವಿದು ನೂಂಕಿದನು || ೧೪೬ ||

ತಂದೆ ಕಡಿದ ರಟ್ಟೆಯ ಕೊಲೆಯನು ನಿಜ | ನಂದನನಿಂ ಕೊಂಬೆನೆಂದು |
ಬಂದ ಕಜ್ಜಳಗಿರಿಯೆನಲಾ ಕರಿಯಿಂದ್ರ | ನಂದನೆಡರಗೈದಿದುದು || ೧೪೭ ||

ಬೃಂಹಿತದಿಂ ಹಲಬರ ಕರಪದಹತಿ | ಯಿಂ ಹಲಬರನಿನಿಸರೊಳು |
ಸಂಹಾರವ ಮಾಡಲು ರಿಪುಸೇನೆ ಕ | ರಂ ಹೆದರುತ್ತಿರ್ದುದಾಗ || ೧೪೮ ||

ಕಾಳಗೂಳಿಯನೇರಿ ಕಡುಗೋಪದಿಂ ನಿಜ | ಬಾಳಲೋಚನವನು ತೆರೆದಾ |
ಕಾಲರುದ್ರನವೊಲಾನೆಯನೇರಿ ತದ್ರಿಪು | ಜಾಲವ ಹತಿಸುತೈದಿದನು || ೧೪೯ ||

ಅಂತದಕಂಡನಿಲಜನತಿ ಕೋಪದಿ | ನಂತಕಸುತನ ಬೀಳ್ಕೊಂಡು |
ಅಂತಕನಂತಿದಿರಾಗಲ್ಭಗದತ್ತ | ನಂ ತರಿಸದೆ ಕೋಪದೊಳು || ೧೫೦ ||

ಕಡುಭರದಿಂದೆಡೆವಿಡದೆ ಸುರಿವಕಣೆ | ಯಡಸಿ ಸುರಿವ ಸೋನೆಯಾಗೆ ||
ನಡೆತಪ್ಪ ಮದಕರಿ ನೊಳ್ಪ ಜನರ ಕಣ್ಗೆ | ಕಡೆಯ ಕಾರ್ಮುಗಿಲಂತಾಯ್ತು || ೧೫೧ ||

ಕಾಲನೆತ್ತಿದ ದಂಡೆದಂತೆ ಸುಂಡಿಲನು ಶುಂ | ಡಾಲ ತಿರುಹಿ ತಿರ್ರೆನುತ |
ಮೇಲುವರಿದು ಬರುತಿರೆ ಪಸುಗಂಡಶಾ | ರ್ದೂಲನಂದದಿಯನಿಲಜನು || ೧೫೨ ||

ಭರದಿಂದಿರಾಗಿ ಬಂದು ತನ್ನಯ ವಾಮ | ಕರದಿನದರ ಸುಂಡಿಲನು |
ಮುರಿದು ಪಿಡಿದು ಸಿಂಹನಾದದಿನಾ ಘನ | ತರಮಪ್ಪಗದೆಯೆತ್ತಿ ಬಡಿಯೆ || ೧೫೩ ||

ಅಂಜನಗಿರಿ ವಜ್ರದಂಡದಿನಾಬಲ | ಭಂಜನು ಹುಯ್ಯೆ ಬೀಳ್ವಂತೆ |
ಕುಂಜರಮಾಕುಂಬಿನಿಗುರುಳಿದುದು ಪ್ರ | ಭಂಜನಸುತನ ಹುಯ್ಲಿಂದ || ೧೫೪ ||

ಅಂದು ಗಜಾಸುರನನು ಮರ್ದಿಸಿದಾ | ಯಿಂದಿಧರನ ಮಾಳ್ಕೆಯೊಳು |
ಮಂದೇತರಮದಗಜವ ಕೊಂದಾ ವಾಯು | ನಂದನನಲ್ಲಿನಿಂದಿರಲು || ೧೫೫ ||

ಮತ್ತಗಜದ ಮಂಡೆಯಿಂದುರುಳ್ವಾಭಗ | ದತ್ತನಂಘ್ರಿಗಳನು ಪಿಡಿದು |
ಎತ್ತಿ ನೆಲದೊಳಪ್ಪಳಿಸಿ ಕಾಲಗೆ ಬೋನ | ವಿತ್ತನು ನಿಮಿಷ ಮಾತ್ರದೊಳು || ೧೫೬ ||

ಈ ಪರಿಯಿಂ ಭಗದತ್ತಭಟ್ಟನು ಕೊಂ | ದಾ ಪವನಜಗಿದಿರಾಗಿ |
ಕೋಲದಿಂ ಭೂರಿಶ್ರವನು ಬರಲು ಸುಪ್ರ | ತಾಪಿ ಸತ್ಯಕನೆಯ್ತಂದು || ೧೫೭ ||

ನೀನೇಕಿವಗೆಂದೆನುತ ಬಂದಿದಿರಾಗ | ಲಾನದೆಯಾ ಸತ್ಯಕನ |
ಭೂನುತಭೂರಿಸ್ರವನತಿ ಕೋಪದಿ | ಮಾನಭಂಗವ ಮಾಡಿದನು || ೧೫೮ ||

ಅಂತದನರಿದತ್ಯಂತ ಕೋಪದಿ ಬಲ | ವಂತಬಲಾರಿನಂದನನು |
ಅಂತರಿಸದೆ ಬಂದವನೆಚ್ಚ ಬಹುಶರ | ಸಂತತಿಯನು ಖಂಡಿಸುತ || ೧೫೯ ||

ಭವನಾತಿಶಯ ಭುಜಬಲಯುತ ಭೂರಿ | ಶ್ರವನ ನಿಮಿಷಮಾತ್ರದೊಳು |
ತವಕದಿನೊಂದು ದಿವ್ಯಾಸ್ತ್ರದಿಂದೆಚ್ಚಾ | ದಿವಿಜಲೋಕವನೈದಿಸಿದನು || ೧೬೦ ||

ಭೂರಿವಿಕ್ರಮಿ ಭೂರಿಶ್ರವನನು ಕೊಂ | ದಾ ರಥವನು ನೂಂಕುತಿರ್ಪಾ |
ವೀರಕಿರೀಟಿಗಣ್ಮಣ್ಮೆನುತಾ ದ್ರೋಣ | ಸೇರಿಯಂಬಿನ ಮಳೆಗರೆಯೆ || ೧೬೧ ||

ಅಮರರಾಗಸದೊಳ್ಭಲರೆನೆ ಚಾಪಾ | ಗಮಗುರುವಿನ ವಿಕ್ರಮಕೆ |
ಅಮಿತ ಪರಾಕ್ರಮಿಯಾಪಾರ್ಥನೆರಡುಜಾ | ವಮನಶ್ರಮದಿಂ ಕಾದಿ || ೧೬೨ ||

ಕೇಣವ ಕೇಳ್ದೊಂದಿನಿಸನರಿಯದ | ಕ್ಷೂಣಪರಾಕ್ರಮಯುತನಾ |
ದ್ರೋಣಾಚಾರ್ಯನನಾದೋರ್ವಲದಿಂದ | ನಾಣುಗೆಡಿಸಿಬಿಟ್ಟನಾಗ || ೧೬೩ ||

ಗುರುವ ಮೀರಿದ ಗುಡ್ಡನಾಗಿ ನೆಡೆದುಬಂ | ದರಿವಾಹಿನಿ ಚಕ್ರವನು |
ಕರುಣಮಿಲ್ಲದೆ ಕಣ್ಗೆಡಿಸಿ ಕೊಲುತ ಬ | ರ್ಪುರವಣೆಯನು ಕಾಣುತವೆ || ೧೬೪ ||

ಬಲ್ಲಿದರಾ ಭೀಷ್ಮರು ಬಂದು ತಾಗಲು | ಬಿಲ್ಲ ಬಿನ್‌ಆಣದಿನವರ |
ಪೊಲ್ಲ ಮುನಿಸಿನಿಂದಾ ತೇರನಾಕೈದ | ನಿಲ್ಲದೆ ನುಗ್ಗುಗುಟ್ಟಿದನು || ೧೬೫ ||

ಶಂಕೆಯಿಲ್ಲದೆ ಕೌರವನ ನೂರ್ವರನುಜಾತ | ರಂಕದಕಲಿಗಳಿದಿರ್ಚೆ |
ಬಿಂಕದ ಬೀರದೇಳ್ಗೆಯನವರಧಟನು | ಕೊಂಕಿಸಿ ಮುಂದಕೈದಿದನು || ೧೬೬ |

ಕುಪಿತಕೃತಾಂತರೆಂದೆನಿಪರಿಕೆಯ ಕೃತ | ಕೃಪವರ್ಮರಿದಿರಾಗಲವರ |
ವ್ಯಪಗತರಥಿಕರ ಮಾಡಿನಡೆದನಾ | ಉಪಮಾತೀತವಿಕ್ರಮನು || ೧೬೭ ||

ರುದ್ರಾವತಾರನರಾತಿಬಲಾವಳಿ | ವಿದ್ರಾವಣನೆಂದೆನಿಪ |
ಆ ದ್ರೋಣನ ತನುಜಾತನ ಲಜ್ಜಾ | ಮುದ್ರಿತನನು ಮಾಡಿದನು || ೧೬೮ ||

ಅಗಣಿತಮಪ್ಪ ವಾಹಿನಿಗೂಡಿ ತಾಗಿದ | ಜಗದೇಕವೀರ ಕರ್ಣನನು |
ತೆಗೆಬಿಗಿಮಾಡಿ ನಾಲ್ಕೈದು ಗಳಿಗೆಯೊಳು | ಮೊಗದಿರುಗಿಸಿಬಿಟ್ಟನಾಗ || ೧೬೯ ||

ವಿಕ್ರಮಶಾಲಿ ವಿಕರ್ಣನೇರಿದ ರಥ | ಚಕ್ರಮನರೆಗಳಿಗೆಯೊಳು |
ಚಕ್ರವ್ಯೂಹಮದಿರ್ವಂತೆ ಕಡಿದು ಪ | ರಾಕ್ರಮಪಂಚಾನನನು || ೧೭೦ ||

ಸಂದಣಿಗೊಂಡ ಸಾಹಸಯುತರೆಲ್ಲರ | ಮುಂದುಗೆಡಿಸಿ ನಡೆತಂದು |
ಮುಂದಿರ್ದಾಸೈಂಧವನುರುಸೇನಾ | ವೃಂದವ ಕಂಡತಿ ಭರದಿ || ೧೭೧ ||

ತ್ರಿಪುರವ ಕಂಡ ತ್ರಿಲೋಚನನಂದದಿ | ಕುಪಿತಹೃದಯನಾ ರಥವ |
ಕಪಿಕೇತು ನೂಂಕಿ ಸರಲಸಂಘಾತದಿ | ರಿಪುಬಲವನು ಹತಿಸಿದನು || ೧೭೨ ||

ನೇಸರಳಿಯದ ಮುನ್ನೆನ್ನನು ಕೊಲ್ಲದೊ | ಡಾಸುರದಗ್ನಿಕುಂಡದೊಳು |
ಓಸರಿಸದೆ ತಾನಳಿವೆನೆಂದುದು ಕಡು | ಲೇಸಾಯಿತೆಂದು ಸೈಂಧವನು || ೧೭೩ ||

ಉರುತರಮಪ್ಪವಾಹಿನಿಯ ಪಿಂಗಡೆನಿಂ | ದರವಿಂದಸಖನಸ್ತಮಿಸುವ |
ಪರಿಯಂತರ ತಡೆದಿರ್ಪೆನೆಂದಿರಲಾ | ನರನವನಿರ್ದೆಡೆಗೈದಿ || ೧೭೪ ||

ತೇರನಡಹಿಯೆಲವೊ ದ್ರೋಹಿ ಸಿಲುಕಿದೆ | ವಾರಧಿಯರಡೆ ದಿಕ್ಸದನ |
ಮಾರುತಮಾರ್ಗದ ಮರೆವೊಗೆ ಬಿಡುವುದಿ | ಲ್ಲಾರಯ್ಯದೆನಗಿದಿರಾಗು || ೧೭೫ ||

ಎಂದು ರಥವ ನೂಂಕಲು ಸೈಂಧವನಿಂ | ತೆಂದನು ತನ್ನೊಳು ತಾನೆ |
ಪಿಂದಕೆ ತಿರುಗಿ ಬಿಡುವನಲ್ಲವಂತದ | ರಿಂದಿದಿರ್ಚುವೆನೆನುತ || ೧೭೬ ||

ಹಿಂದುಮುಂದಣ ಮೈಗಾವಲ ಬಲಗೂಡಿ | ನಂದುವ ಹೊಂಗಿಡಿಯಂತೆ |
ಚಂದದಿನುರಿದುಗ್ರವಿಕ್ರಮಾಗ್ನಿಯಿನೆ | ಯ್ತಂದು ಕರೆಯೆ ಕಣೆಗಳನು || ೧೭೭ ||

ಅಳುರ್ವ ಬೇಸಗೆಯ ಮಧ್ಯಾಹ್ನದೊಳಗೆ ಜಲ | ಜಲಿಪ ಧನಂಜಯನಾಗಿ |
ಮುಳಿಸುಗಿಚ್ಚಿಂದ ಗಾಂಡೀವಕ್ಕೆ ಶರವಿಟ್ಟು | ತಳುಮಾಡದೆಸುವವೇಳೆಯೊಳು || ೧೭೮ ||

ತಿರುವಾಯೊಳೊಂದು ತೆಗೆವ ವೇಳೆಯೊಳ್ಳೂರು | ಪರಿವವೇಳೆಯೊಳು ಸಹಸ್ರ |
ಅರಿಬಲವನು ಖಂಡಿಸುವಲ್ಲಿ ಶರಸಾ | ಸಿರಮಾಗಿ ಸರಳೈದಿದುವು || ೧೭೯ ||

ಅಂತೈದುವ ಕಣೆಗಳನು ಕಡಿದು ಸಿಂಧು | ಕಾಂತನುದ್ಧತ ಮಾರ್ಗಣದ |
ಸಂತತಿಯನು ಪಾರ್ಥನೆ ಮೇಲೆ ಕರೆದನ | ತ್ಯಂತ ಕೋಪಾಟೋಪದಿಂದ || ೧೮೦ ||

ಅವನ ಕೈಚಳಕವನಂಬರದೊಳು ನೋಳ್ಪ | ದಿವಿಜದನುಜಪನ್ನಗರ |
ನಿವಬವೆಲ್ಲವು ಕೊಂಡಾಡುತಿರಲು ನರ | ನವಿರಳಕುಪಿತಮಾನಸನು || ೧೮೧ ||

ಎಲವೊ ಕೈದಿಲ್ಲದ ಹಸುಳೆಯ ಕೊಂದದೋ | ರ್ವಲದಿಂದೆನಗಿದಿರಾಗಿ |
ನಿಲಲಿದನೆಂತು ಸೈರಿಪೆನೆಂದಾ ಕಡು | ಗಲಿ ಫಲ್ಗುಣನು ಮೂದಲಿಸೆ || ೧೮೨ ||

ಹಸುಳೆಯ ಹತಿಸಿದರಿಂದೇನು ಸಿದ್ದಿನಿ | ನ್ನುಸುರಿಗುಬ್ಬಸವ ಮಾಡುವೆನು |
ಹಸನಾಯ್ತೆನ್ನಯ ಕಾರ್ಯಮಿನ್ನೆನುತಸ | ವಸದಿ ನಿಶಾಬಾಣವನು || ೧೮೩ ||

ಧುರಧರಣೀತಳಮದಿರ್ವಂದದಿನೆಸ | ಲರವಿಂಸಸಖನಸ್ತಮಿಸಿದ |
ಪರಿಯೊಳು ಕತ್ತಲೆ ಕವಿಯಲು ಕಂಡಾ | ಕುರುಬಲವತಿ ಹರುಷದೊಳು || ೧೮೪ ||

ತರುಣನನಾತರವಾರಿತೀರಿದನು | ಕರುಣಮಿಲ್ಲದೆ ಹತಿಯಿಸಿದ |
ಉರುತರದೋಷವಡರಿತವನಿಯನೆನೆ | ಭರದಿ ಹಬ್ಬಿದುದಾ ತಮಸು || ೧೮೫ ||

ಇನನಸ್ತಂಗತನಾದನಿನ್ನೇತಕೆ | ತನಗಗ್ನಿಕುಂಡವೆ ಪ್ರಾಪ್ತಿ |
ಎನುತರಿ ಬಲಬೊಬ್ಬಿರಿಯುತಿರೆ ಕಂಡಾಯಿಂದ್ರ | ತನಯ ಮುಗುಳ್ನಗೆ ನಗುತ || ೧೮೬ ||

ಚಂಡಾಂಶುಮಾರ್ಗಣವನು ಬಿಡಲಾ ನಿಶೆ | ಖಂಡಿಸಲಾಸೂರ್ಯನನು |
ಕಂಡು ಪಾಂಡವಸೇನೆಯೊಸಗೆ ಮರುಳ್ಗೊಂಡು | ಕೊಂಡಾಡಿದರರ್ಜುನನಾ || ೧೮೭ ||

ಇನ್ನೊಮ್ಮೆ ಶರವ ತಿರುವಿಗಿಟ್ಟುನೋಡೆಂದು | ತನ್ನ ದಿವ್ಯಾಸ್ತ್ರದಿನವನ |
ಪಿನ್ನೇಸರುಪಿಂಗಡಲೊಳಗಗುಳದ | ಮುನ್ನಮತ್ಯಂತ ಕೋಪದೊಳು || ೧೮೮ ||

ಸುತ್ತಮುತ್ತಿದ ಸೇನೆಯದಿರ್ವಂದದಿನವ | ನುತ್ತಮಾಂಗವನಾಗಸದ |
ಅತ್ತಹಾರುವತೆರದಿಂದೆಚ್ಚನಾ ವಿಕ್ರ | ಮೋತ್ತಂಸನಾಶಕ್ರಸೂನು || ೧೮೯ ||

ಅರುಣೋದಕವಮರಿತ ಸೈಂಧವನ ಶಿರ | ವುರುಳ್ಹವೇಳೆಯೊಳುದ್ದವದಿಂದ |
ಭರದಿಂದಾಭಾನುಮಂಡಲವರುಣದಿಕ್‌ | ಶರನಿಧಿಯೊಳು ಮುಳುಗಿದುದು || ೧೯೦ ||

ಚಕ್ರವ್ಯೂಹಮಾಕ್ರಂದಿಸಲಾಶಾ | ಚಕ್ರಮಸುಳೆ ಕುರುಪತಿಯ |
ಆಕ್ರಮಿಸೈಂಧವಶಿರವುರುಳ್ದುದು ಭೂ | ಚಕ್ರದೊಳಿನಬಿಂಬವೆರಸಿ || ೧೯೧ ||

ವೀರರಸಾಂಬುಪೂರಿತಮಾದಾಧುರ | ಧಾರಿಣಿಯೆಂಬಬುಧಿಯೊಳು |
ಭೋರೆನೆ ಬೀಳ್ತಂದುದು ಸೈಂಧವನ ತಲೆ | ಯಾ ರವಿಬಿಂಬದಂದದೊಳು || ೧೯೨ ||

ಶಕ್ರನಂದನನೆಸುಗೆಯೊಳಾಕುವಲಯ | ಚಕ್ರದ್ರೋಹಿ ಸೈಂಧವನ |
ವಿಕ್ರಮಿಯುರುಶಿರವಿರದಿಳೆಗುರುಳ್ದುದು | ಚಕ್ರಬಾಂಧವಬಿಂಬದೊಡನೆ || ೧೯೩ ||

ತ್ರಿಣಯನ ಭಾಳಲೋಚನದಿನೀಕ್ಷಿಸಬಾರ | ದಣಿಯರದೊಳು ಪಟುಭಟರ |
ಗಣನಾತೀತವೆನಲು ಕೊಂದಾಯಿಂದ್ರ | ನಣುಗನೈದಿದ ಪಾಳಯಕೆ || ೧೯೪ ||

ಅರಿಕುಲಮದಮಾತಂಗಪಂಚಾನನ | ನುರುವಿಕ್ರಮಸಂಯುತನು |
ಸುರಪರಿವೃಢನಂದನನೊಪ್ಪಿದನಾ | ನರನಾಥಕುಲಶೇಖರನು || ೧೯೫ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದುವಿಪ್ಪತ್ತೆಂಟಾಶ್ವಾಸ || ೧೯೬ ||

ಇಪ್ಪತ್ತ ಎಂಟನೆಯ ಸಂಧಿ ಸಂಪೂರ್ಣಂ