ಶ್ರೀಮದಮರತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಆ ಸಮಯದೊಳಾಪಡೆಗಳು ತಂತಮ್ಮನಿ | ವಾಸಕ್ಕೆ ಬಂದೊರಗಿರಲು |
ಆ ಸೂರ್ಯೋದಯದೊಳು ಮೊದಲಂದದಿ | ನೋಸರಿಸದೆಯೊಡ್ಡಿನಿಲಲು || ೨ ||

ಅತ್ತ ಜರಾಸಂಧನಾ ಕೌರವನೃಪ | ರಿತ್ತ ಕೇಶವಧರ್ಮಸುತರು |
ಮತ್ತಗಜದ ಮಸ್ತಕಗಳನಡರಿ ಕ | ರುತ್ತರನೆಲೆಯೊಳೊಪ್ಪಿದರು || ೩ ||

ಈ ರೀತಿಯೊಳು ನಿಂದಾನೃಪವರನನು | ಸೇರಿ ಕಾಲಾಳು ಮೇಲಾಳು |
ಆ ರಥಿಕರು ಜೋದರರು ಪಂಥವನಿರ | ದಾರೈಯದಿಂತಾಡಿದರು || ೪ ||

ಪಿಂತುಮುತ್ತಿನ ವೀಳೆಯಕಾಗಿ ಬಿರಿದಿನ | ಪಂಥಪಾಡಿಗೆ ಸಲವಾಗಿ |
ಅಂತರಿಸದೆ ಹೊಳಕೆಯನು ಹಿಡಿದ ಭಟ | ಸಂತತಿ ಭರದಿನೆಯ್ತಂದು || ೫ ||

ತಡವು ಮಾಡದೆ ತೊಳ್ತಿಗೆ ಚಮ್ಮವಟ್ಟಿಗೆ | ವಿಡಿದಂತೊಡ್ಡಿದೊಡ್ಡಣ್ಣದ |
ಕಡುಗಲಿಗಳನು ಕೈದೆತ್ತದಂದದಿ ಹುಯ್ಯ | ದೊಡೆ ಪಂಥವೆಲ್ಲಿಯದೆಮಗೆ || ೬ ||

ಬೈದವರನು ಬಾಯನಿರದೆಹುಯ್ದಂದದಿ | ಕೈದುಗೊಂಡೆನಗಿದಿರಾಗಿ |
ಮೈದೋರಿನಿಂದ ಮಹಾಪಟುಭಟರನು | ಹೊಯ್ದಲ್ಲದೆ ಮಗುಳುವನೆ || ೭ ||

ಹುಯ್ಯಲಾಗುವುದಿಂದು ನಾಳೆಯೆನಲುಬೇಡ | ಕೈಯಕಂಕಣಕೆ ಕನ್ನಡಿಯೆ |
ಮೈಯಾನದೆ ಹೋಗಿ ಹೊಯ್ವುದನಿನಿಸೆವೆ | ವೊಯ್ಯದೆ ನೋಡು ಚೆನ್ನಾಗಿ || ೮ ||

ಕೇಳುಕೇಳೆನ್ನ ಪಂಥವನಾಹವಹೊಕ್ಕು | ಕೋಳುಸಹಿತ ಮಗುಳುವೆನು |
ಏಳುಬೀಳುವಂದದ ಬಲುಗಾಯವ | ತಾಳಿ ಬಳಿಕ ತಿರುಗುವೆನು || ೯ ||

ಎಂದು ಪಂಥವನಾಡಿಮುಂದಣ ಪೌಜಿನ | ದೊಂದು ಲಗ್ಗೆಯನೋಡಹಾಯ್ದು |
ಸಂದಣಿಸಿದ ಸಾಸಿಗರ ಹೊಯ್ದಾಕೇಳ | ತಂದೊಪ್ಪಿಸಿದರೆಕ್ಕಟಿಗರು || ೧೦ ||

ಅರಿಬಿರುದಿನ ರಾವುತರಿಟ್ಟ ಸಂಜೋಗ | ವರೆಸಿಯೇರಿದ ಕುದುರೆಯನು |
ಭರದಿಂದ ಪೌಜಾಪೌಜು ಮೆಚ್ಚುವ | ಪರಿಯೊಳು ತಂದೊಪ್ಪಿಸುವೆವು || ೧೧ ||

ಮೇಲಾಳಮೇಲಲ್ಲದೆ ಕಾಲಾಳ್ಗಳ | ಮೇಲೆ ಕೈದೆತ್ತುವುದಿಲ್ಲ |
ಲಾಲಿಸಿ ನೋಡೆಂದೆನುತಶ್ವವಾಹಕ | ಜಾಲವಾಡಿದುದು ಪಂಥವನು || ೧೨ ||

ಎನ್ನಾನೆಗೆಣೆ ಮಿಗಿಲೆನಿಪಾನೆಯನ | ತ್ಯುನ್ನತವೆನಿಪ ಮಸ್ತಕದ |
ರನ್ನಗಳನು ನಿನ್ನ ಜಯಲಕ್ಷ್ಮಿ ಯೆದೆಯೊಳು | ಚೆನ್ನಸರವ ಕಟ್ಟುವೆವು || ೧೩ ||

ಈ ಗಂಡುಗಜದ ಬೃಂಹಿತವನು ನೆರೆ ಕೇ | ಳ್ದಾ ಗಾಳಿ ಬಿರ್ರೆಂಬ ದನಿಗೆ |
ಮೇಗಣ ಮುಗಿಲ ಮೋಹರ ಬಿರಿತೋಡುವಂ | ತಾಗಬೇಕರಿಗಜದೊಡ್ಡು || ೧೪ ||

ಎನುತರಿಬಿರಿದನೊದರಿ ಮದಗಜಗಳ | ಘನಕುಂಭಯುಗಕಂಕುಶವನು |
ಮೊನೆಯಿಕ್ಕಿ ಮುಂದಕೆಯ್ದವ ಹಸ್ತಿವಾಹಕ | ಜನದ ಜಂಗುಳಿಯೊಪ್ಪಿತಾಗ || ೧೫ ||

ಪಡಲಿಟ್ಟಂದದಿನಾ ಪಟುಭಟತತಿ | ಯಡದರಿದ ತೇರತಿಂತಿಣಿಯ |
ಕಡುಭರದಿಂ ಮಾಳ್ವೆವೆಂದಾರಥಿಕರ | ಗಡಣವಾಡಿದುದು ಪಂಥವನು || ೧೬ ||

ಅತಿರಥರುಗಳಸುವಿಂ ರವಿಯೊಡಲನು | ಶತಛಿದ್ರವನುಮಾಡುವೆವು |
ಅತಿಭರದಿಂ ಹೊರಕೇರಿಯನಮರಾ | ವತಿಯೊಳಿರದೆ ಕಟ್ಟಿಸುವೆವು || ೧೭ ||

ಇಂತೆಂದಾ ರಥಿಕರು ಬಿಡದಾಡುವ | ಪಂತದ ಪಲವು ಮಾತುಗಳ
ಅಂತರಿಸದೆ ಲಾಲಿಸಿ ಕೇಳುತಾ ಭೂ | ಕಾಂತರವರು ನಿಂದಿರಲು || ೧೮ ||

ಇಂದಿನ ಕಾಳಗವನು ದೇವ ನನಗೀವು | ದೆಂದಾ ಧರ್ಮನಂದನೆಗೆ |
ವಂದಿಸಿ ಬೆಸನ ಹಡೆದು ಕೋಪದಿಂ ವಾಯು | ನಂದನನತಿ ಭರದಿಂದ || ೧೯ ||

ಅಣಿಯ ಬಾಯೊಳಗಿದಿರಾದ ಸಾಹಸಿಗರ | ಗಣನೆಯಿಲ್ಲದೆ ಹತಿಯಿಸುತ |
ರಣರಾಕ್ಷಸನಂದವನಾಂತಾವಾಯು | ವಣುಗನೋವದೆ ನಡೆತರಲು || ೨೦ ||

ಈ ರೀತಿಯಿಂ ವೀರಮಾರುತಿ ನಡೆತರ | ಲಾ ರಾಯನನುಜಾತರುಗಳು |
ಪೌರುಷಪುರುಷರು ನೂರ್ವರು ಮುತ್ತಿದ | ರೈರಾವತವ ಮುತ್ತುವಂತೆ || ೨೧ ||

ಓರೋರ್ವರು ಸಾಸಿರ ಸಾಸಿರಬಲು | ತೇರಾನೆ ವಾಜಿಗಳ್ವೆರಸಿ |
ಧಾರಿಣಿಯದಿರ್ವಂದದಿ ಬಂದು ತಾಗಿದ | ರಾರಣರಂಗರಸಿಕನ || ೨೨ ||

ಕುದುರೆಗಳಿಂ ಕುದುರೆಯನಾಳಿಂದಾಳ | ಮದಕರಿಯಿಂ ಮದಕರಿಯ |
ಒದವಿದ ರಥದಿಂದ ರಥಗಳನಿಟ್ಟುರೆ | ಸದೆದನು ಸಮಯಮಾತ್ರದೊಳು || ೨೩ ||

ದೊಡ್ಡಿತಪ್ಪಂಕದಕಣನೆಂಬ ಕಾಣದೊಳ | ಗೊಡ್ಡಿ ದೊಡ್ಡಣಮೆಂಬ ಬೆಳೆಯ |
ಒಡ್ಡ ಬಡಿವ ಮೇರೆ ಕೋಲಾಯಿತಾಭೀಮ | ನಡ್ದ ಹೊಯ್ದಾ ದಂಡರತ್ನ || ೨೪ ||

ಹತ್ತಿಯ ಹೊಸೆವ ತೆರದಿನಿದಿರಾಗಿ ಕ | ರುತ್ತನಿಂದಾ ಕಗ್ಗಲಿಗಳ |
ಮೊತ್ತವನೆಲ್ಲವನಾಗದೆಯಿಂದ ವಿಕ್ರ | ಮೋತ್ತಂಸನರೆದು ಹಾಕಿದನು || ೨೫ ||

ಕಳಿಲೆವಿದಿರಮುರಿವಂದದಿ ಮದಗಜ | ಗಳದಂತಗಳನುರೆಕಿಳ್ತು |
ಬಲವಂತರನದರಿಂದ ಬಡಿದನಾ | ಅಲಘುವಿಕ್ರಮಿಯನಿಲಜನು || ೨೬ ||

ಅಡಿವರನಾಗಲಾನೆಯಬೆನ್ನವರ ಮೇ | ಲಡರಿದರಸುಮಕ್ಕಳನು |
ಬಡಿವ ಬಲ್ಗದೆಯ ಕೊಡತಿಯಾಗಲಾ ಭೀಮ | ಮಡಿವಳನಂತೊಪ್ಪಿದನು || ೨೭ ||

ನೆತ್ತರುವೆರಸಿನೆಲಕೆ ಬೀಳ್ವಾನೆಯ | ನೆತ್ತಿಯ ಮುತ್ತನಿಲಜನು |
ಬಿತ್ತರದಿಂಗಯ್ದಾಬೀರವಳ್ಳಿಯ | ಬಿತ್ತ ಬಿತ್ತುವ ತೆರನಾಯ್ತು || ೨೮ ||

ಆರಡಿಕಾರ ಕೌರವನ ಬಲವ ಹೊಕ್ಕು | ಮೀರಿದ ವಿಕ್ರಾಂತದಿಂದ |
ಮಾರಾಂತಮಂಡಳಿಕರ ಕೊಂದನಾಹೇನು | ಕೂರೆಯನೊರಸುವಂದದೊಳು || ೨೯ ||

ಅವುದಾನೆಯ ಹೆಣನಾವುದಶ್ವರ ಹೆಣ | ನಾವುದು ರಥಿಕರ ಹೆಣನು |
ಅವುದಾಳ್ಗಳ ಹೆಣನೆಂಬುದನರಿಯದಂ | ತಾ ಕಿಕ್ಕಿದನರೆಗಳಿಗೆಯೊಳು || ೩೧ ||

ಕಡೆಯಿಲ್ಲದ ಕರಿಘಟೆಗಳ ನೆಲಕಿಕ್ಕಿ | ಗಡಿಯಿಲ್ಲದ ಕುದುರೆಗಳ |
ಮಡಿಹಿ ಮಹೀತಳವಾನದಂತಿರ್ಪತೇ | ರ್ವಡೆಯನೆಲ್ಲವನೊರೆಸಿದನು || ೩೨ ||

ಭೂತದಂದದಿ ಭೂವರ ಕೌರವನನು | ಜಾತರ ಮೈಗಾಪಿನೆಸೆವ |
ಚಾತುರ್ದಂತಸೇನೆಯನಿಕ್ಕಿದನು ವಿ | ಖ್ಯಾತ ವಿನೋದವಿಕ್ರಮನು || ೩೩ ||

ಊಣೆಯಮೀ ವಿದ್ಯೆಯನ್ನದೆ ಸಮರ | ಕ್ಷೋಣಿಯೊಳಾಪಟುಭಟರ |
ಬಾಣಸಿಯಾಗಿ ಜವಗೆ ಭೀನೊಸೆದು ವಿ | ನ್ನಾಣದಿನಡಿಗೆ ಮಾಡಿದನು || ೩೪ ||

ಗಡಿಯಂಕಭೀಮನ ಹೆಗ್ಗೊಲೆಯ ಕಂಡು | ನಡುಗುವ ಬಲವ ಪಿಂತಿಕ್ಕಿ |
ಆಡಸಿದ ಕೋಪದಿ ನಾನೂರ್ವರೈತಂದು | ಕಡುಭರದಿಂ ಮುತ್ತಿದರು || ೩೫ ||

ಇರಿಯಿರಿ ಬಡಿಬಡಿ ಸದೆಸದೆ ತರಿತರಿ | ಕಡಿಕಡಿ ಕೊಲ್ಲುಕೊಲ್ಲೆನುತ |
ತರಿಸಂದು ಮುತ್ತಿಮೂವಳಸಿದರಾ ನೃಪ | ನರಿಕೆಯನುಜರೆಲ್ಲವನ || ೩೬ ||

ಗದೆಯಿಂದ ಕೆಲರ ಕೈಗುದ್ದಿಂದ ಕೆಲಬರ | ನೊದೆದು ಕೆಲರನಂಘ್ರಿಯಿಂದ |
ಮಿದಿದು ಕೆಲರನಾಗಸಕಿಟ್ಟು ಕೆಲಬರ | ಸದೆದನು ನಿಮಿಷಮಾತ್ರದೊಳು || ೩೭ ||

ಮುಳಿಸಿಂದಾ ಗದೆಗೊಂಡು ಕೌರವರಕುಲ | ವಿಲಂಯನಾ ಕೌರವಾನುಜರ |
ತಳಲುಮಳಲುಗುಟ್ಟೆ ಪಡಲಿಟ್ಟಂದದಿ | ನಿಳೆಯೊಳು ನೆರಪಿದನಾಗ || ೩೮ ||

ಅವನಿಪನನುಜಾತರನೆಲ್ಲರ ಸೊಪ್ಪು | ಸೊವಡಪ್ಪಂದದಿ ಕೊಂದು |
ಪವನನಂದನ ಭೂತತಿಗುಣಲಿಕ್ಕಿದ | ನವಗೆ ಲೋಕದ ವೀರರೆಣೆಯೇ || ೩೯ ||

ಹೆಚ್ಚಿದ ಕೌರವನೃಪರ ತಮ್ಮಂದಿರ | ನೊಚ್ಚತವುಳಿಯಂದಂದದೊಳು |
ಅಚ್ಚಾಳುಪವನಜನಾಗದೆಯಿಂದ ಪೊಯ್ದು | ನುಚ್ಚುನುರಿಯ ಮಾಡಿದನು || ೪೦ ||

ಮಾರಣಮುಖದ ಮಹೀಶರಿಕ್ಕಿದ ತೋರ | ಹಾರದ ಮುತ್ತು ಭೂಮಿಯಲಿ |
ಬೀರಸಿರಿಯ ಭೀಮನ ಮದುವೆಗೆ ಕರ್ಣ | ಪೂಮನಟ್ಟಿಂತಾಯ್ತು || ೪೧ ||

ಅವರರಗಿನಮೆನೆಯೊಳ್ದೂತಮುಖದೊ | ಳ್ತವಗಿತ್ತಪರಿಭವವೆಂಬ |
ಅವರ ಋಣವ ತೆತ್ತ ವರಸುದತಿಯರ | ಕಿವಿಯ ಪತ್ರವ ಸೀಳಿಸಿದನು || ೪೨ ||

ಎಂದು ದೇವರ್ಕಳು ಮೆಲ್ಲನುಲಿಯುತಿರ | ಲೊಂದೆಡೆ ಮಗಧ ಮಾಧವರ |
ಮುಂದಣರಸುಗಳು ಲೆಕ್ಕಮಿಲ್ಲದೆ ಹೋರಿ | ಹೊಂದಿದರಾ ಹಗಲಿನೊಳು || ೪೩ ||

ತೊಡಚಬೇಡ ಕುರುವಂಶದ ಹೊದರನು | ಕಡಿವ ಕಠೋರ ವಿಕ್ರಮನ |
ಒಡನಳಿಗಲಿಗಳೆನುತ ಕೌಂತೇಯರ | ಪಡೆಯ ಕಾಳೆಗಳೊದರಿದವು || ೪೪ ||

ಅನಿತರೊಳಿನನಸ್ತಂಗತನಾಗಲು | ಘನಸೇನೆಯಾಬೀಡಿಗೆಯ್ದೆ |
ಅನುಜರಳಿವಿಗೆಯಳಲಿಯಾಕೌರವ | ಜನಪತಿ ಕರೆದು ಭೀಷ್ಮರನು || ೪೫ ||

ಏನಯ್ಯ ಜಗದೇಕಸಾಹಸಿ ನೀನಿ | ರ್ದಾನೆನ್ನ ತನುಜಾನುಜರ |
ಆನದೆ ಕೌಂತೇಯರು ಕೊಂದರಿರದೆಂದು | ತಾನವರೊಳು ನೊಂದು ನುಡಿಯೇ || ೪೬ ||

ಆ ನುಡಿಗೇಳಿ ಗದ್ಗದಕಂಠನಾಗಿ ಮ \ತ್ತಾ ನದಿಯಣುಗನಿಂತೆಂದ |
ಈ ನಾಳಿನದಿನವೆನ್ನ ಪೌರುಷವನು | ನೀ ನೋಂಡೆಂದುಪಚರಿಸಿ || ೪೭ ||

ಬೀಡಿಗೆ ಬಂದು ನಿದ್ರೆಯೊಳಿರೆ ಮುಂಗಡೆ | ಮೂಡೆ ಮುನ್ನೇಸರುಬಿಂಬ |
ಗಾಡಿಯಿಂದಾಯೀರ್ವಡೆಗಳು ಬಗೆಯೊಳ | ಳ್ಕಾಡದೆ ಬಂದೊಡ್ಡಿನಿಲಲು || ೪೮ ||

ಆ ವೇಳೆಯೊಳೆಲ್ದಾ ಗಂಗಸೂನು | ದೇವರದೇವಗೆ ನಮಿಸಿ |
ತೀವಿ ಸುರತ್ನಭೂಷಣವನಭೇದ್ಯಮ | ಪ್ಪಾವಜ್ರಕವಚವ ತೊಟ್ಟು || ೪೯ ||

ಬತ್ತೀಸಾಯುಧಸಂಯುತರಥವನು | ಹತ್ತಲರಾತಿಕದಂಬ |
ಅತ್ತತ್ತ ತೊಲಗಿಯೆನುತ ಸನ್ನಗೆಯ್ವಂತೆ | ಯೆತ್ತಿದ ಕೇತುವೊಪ್ಪಿದುವು || ೫೦ ||

ಏಕಾಕ್ಷೋಹಿಣಿಬಲಪರಿವೃತನುಮ | ತ್ತಾಕಡೆಗಾಲದೀಶ್ವರನ |
ಆಕಾರವಡೆದು ಪಾಂಡವಸೇನೆಗಿದಿರಾಗಿ | ನೂಕಿದನಾತನ್ನ ರಥವ || ೫೧ ||

ವಿಧಿ ಬಂದೀಸುಭಟಾಕಾರದಿನಿರ | ವಧಿಯಾದ ಕೋಪದಿ ನಮ್ಮ |
ವಧಿಯಿಸಲೆಯ್ತಂತದುದು ನಮಗಿನ್ನೇವ | ವಿಧಿಯೆಂದಾರಿಪುಸೇನೆ || ೫೨ ||

ಗದಗಾಪುಗೊಳುತಿರೆ ಕಾಲಭೈರವನೆನ | ಲಧಟಭೀಷ್ಮರು ನಿಲಲಾಗ |
ವಿದಿತವಿದ್ಯಾಧರಸಮಿತಿಯರ್ಜುನಗಿರ | ದಿದಿರಾಗಿ ಬಂದು ಮಾರ್ಮಸಗೆ || ೫೩ ||

ತತ್ತುರುಬಾದಮೋಹರವೆ ಕಾರೊಡ್ಡುತ | ಳತ್ತಳಿಪಸಿಗಳ ಹೊಳಹೆ |
ಹತ್ತಿಹರಿವ ಮಿಂಚಾರಥಿಕರ ಬಿ | ಲ್ಲೆತ್ತಿದ ಸುರಧನುವಾಗೆ || ೫೪ ||

ಗುಡುಗು ಗುಮ್ಮೆಂದುಲಿವಾ ವಾದ್ಯಧ್ವನಿ | ಸಿಡಿಲು ಹೊಡೆವ ನಿಸ್ಸಾಳ |
ಕಡುಪಿಂ ಕರೆವಕಣಾವಳಿಮಳೆಯೆನೆ | ಕಡು ಸೊಗಯಿಸಿತು ಮೋಹರವು || ೫೫ ||

ಅಂತದರಿಂ ಲಯಗಾಲದ ಮಳೆಗಾಲ | ದಂತತಿ ಭೀಕರಮಾಗಿ |
ಅಂತರಿಕ್ಷದೊಳುನಿಂದಾಖೇಚರಬಲ | ಸಂತತಿಯತಿಕೋಪದಿಂದ || ೫೬ ||

ಇಳೆಯೊಳಾಗಸದೊಳು ನಿಂದು ವಿದ್ಯಾಶರ | ಗಳನೆ ಬಿಡುವಿಲ್ಲದೆಸಲು |
ಮುಳಿಸಿಂದಾಪಾರ್ಥನಂತದನೆಲ್ಲವ | ನುಳಿಯದೆ ನೆರೆ ಖಂಡಿಸುತ || ೫೭ ||

ಅವರೆಚ್ಚ ಶಿಖಿಬಾಣಕೆ ಜಲಬಾಣವ | ನವರೆಚ್ಚ ಭೂಧರಶರಕೆ |
ತವಕದಿ ವಜ್ರಬಾಣವನೆಚ್ಚು ಕೆಡಿಸಿದ | ನವನ ಸಾಹಸಕೆಣೆಯಾರು || ೫೮ ||

ಅವರೆಚ್ಚುರಗಶರಕೆ ಗರುಡಾಸ್ತ್ರವ | ನವರೆಚ್ಚವನಧಿಮಾರ್ಗಣಕೆ |
ಅವಿರಳಮಾದ ವಡಬ ತೋಮರಂಗಳ | ನಿಹವನೆಚ್ಚು ಕಂಗೆಡಿಸುತ || ೫೯ ||

ಇವು ಮೊದಲಾದವರೆಚ್ಚ ವಿದ್ಯಾಶರ | ನಿವಹಪ್ರತಿಶರದಿಂದ
ಭುವನೈಕವಿಕ್ರಮಿ ಖಂಡಿಸುತ್ತಿರಲತ್ತ | ತವಕದಿ ಧರ್ಮನಂದನನು || ೬೦ ||

ಪವನಜ ಮತ್ಸ್ಯನಕುಲ ಸಹದೇವ ಪಾಂ | ಡವ ಪಂಚಕರಾದಿಯಾದ |
ಅವನಿಪರನು ಪಲಬರ ಕೂಡಿ ನದಿಯಾತ್ಮ | ಭವನ ಬವರಕಿದಿರಾಗಿ || ೬೧ ||

ಜವನ ಜಕ್ಕುಲಿಸಿದಪೊಲು ಕಾಲರುದ್ರನ | ನವಗಡಿಸಿದವೊಲು ಕೆಣಕೆ |
ಅವನು ಕೆರಳಿ ಭರದಿಂದ ಶೀಳಿಮುಖ | ನಿವಹವನಿರದೆ ಕರೆಯಲು || ೬೨ ||

ಒಂದಕ್ಷಯಮಾಗಿ ಸುರಿವಶೀಳಿಮುಖ | ದಿಂದ ಯುಧಿಷ್ಠಿರಬಲದ |
ಗೊಂದಣಮೆಲ್ಲವು ಪಡಲಿಟ್ಟವೊಲು ಬೀ | ಳ್ತಂದುದು ನಿಮಿಷಮಾತ್ರದೊಳು || ೬೩ ||

ಕರಿಯ ಕಾಲಾಳ ತುರಂಗವರೂಥವ | ನರಿದರುಣೋದಕವೆರಸಿ |
ಪರಿವಂಬುರಿಪುಬಲವಿಪಿನವನುರಿಯಿಸು | ವುರಿಯಬಾಣದವೊಲೊಪ್ಪಿದುದು || ೬೪ ||

ಅರಲೆಯೊಡ್ಡಿನಮೇಲೆರೆದು ಕರೆವ ಬಲು | ಬಿರಿಗೆಂಡದ ಮಳೆಯಾಯ್ತು |
ಸುರಸಿಂಧುಜನೆಚ್ಚ ಶರದ ಸಂಗಡಮಾ | ಪರನೃಪಸೇನೆಯ ಮೇಲೆ || ೬೫ ||

ಉರುಳ್ವ ಪದಾತಿ ಕೆಡೆವಕರಿ ನೆಲದೊಳು | ನೆರೆದಶ್ವವುರಿವ ತೇರಿಂದ |
ಧುರಧರೆಯಾಕಾಲನ ಬಾಣಸದ ಮಂ | ದಿರದಂತೆ ಭೀಕರಮಾಯ್ತು || ೬೬ ||

ಹೇಳಲೇನವನ ಬೀರವನಸುಹೃದ್ಬಲ | ಜಾಲದಿನಾ ಧುರಧರಣಿ |
ಕಾಲಗೆ ಮಾರಿ ಮಾಡಿದ ನವಭೋಜನ | ಶಾಲೆಯೆ ತಾನಿರದಾಯ್ತು || ೬೭ ||

ಇಂತು ಯುಧಿಷ್ಠಿರಬಲವನು ಕೊಲ್ವಾ | ಸಂತಸನಸುತನರಗೊಲೆಯ |
ಎಂತು ನೋಡುವೆನೆಂದು ಕರುಣದಿನಪರದಿ | ಶಾಂತರಾಳಕೆ ಪೋದನಿನನು || ೬೮ ||

ಅನಿತರೊಳಪಹಾರತೂರ್ಯಮೆಸೆಯಲಾ | ಘನತರಮಪ್ಪಾ ಸೇನೆ |
ಜನನಾಥರೊಡನೆ ಬೀಡಿಗೆ ಬರಲಾಧರ್ಮ | ತನುಜನನುಜರೊಡಗೂಡಿ || ೬೯ ||

ದೊಡ್ಡದೊಡ್ಡವರ ತೃಣಪ್ರತಿಪತ್ತಿಯಿಂ | ದೊಡ್ಡಣದೊಳು ಸಿಂಧುಸುತನು |
ಸಡ್ಡೆಮಾಡಿದುದಿಲ್ಲದೇವೆನಿದಕ್ಕೆಂದು | ಗುಡ್ಡೆಣಿಕೆಯನೆಣಿಸುತವೆ || ೭೦ ||

ಭೂತಭವಿಷದ್ವರ್ತಮಾನದೊಳು ಸಂ | ಜಾತಮಾದಾ ಸಾಹಸಿಗಳ |
ರೀತಿಯಲ್ಲಿದುವಂಬರಗಂಗಾತನು | ಜಾತಗೆ ಜಯಲಕ್ಷ್ಮಿಯೊಲವು || ೭೧ ||

ಬೇಲಿ ಬೆಳೆಯ ಮೇವಂತೆ ಮಾತೆಯ ಮೊಲೆ | ವಾಲೆ ಗರಳಮಾದಂತೆ |
ಬಾಲತ್ವದಿಂದೆಮ್ಮ ಸಾಕಿದವನೆ ಬಿಲ್ಲು | ಕೋಲಹಿಡಿಯೆ ಕಾವರಾರು || ೭೨ ||

ಇಂತಿದಕಾವುದುಪಾಯಮೆಂದವರೊಳು | ಮಂತಣವನು ಮಾಡಲಾಗ |
ಚಿಂತೆಯಿದಕೆಬೇಡೆಂದು ಫಲ್ಗುಣ ಕಾರ್ಯ | ವಂತಿಕೆಯನು ಪೇಳ್ದನಾಗ || ೭೩ ||

ದೇವ ಬಿನ್ನಪ ಗಂಗಾನಂದನನವ | ಯೋವೃದ್ಧನತಿಗುಣಯುತನು |
ಕೋವಿದನವಗೆ ವೈರಾಗ್ಯವೆ ಮನದೊಳ | ಗಾವರಿಸಿಹುದದರಿಂದ || ೭೪ ||

ಅತಿ ಕೋವಿದಬುಧರನು ಕಳುಹಿ ಸಂ | ಸೃತಿಯ ನಿರ್ವೇಗನೀತಿಯನು |
ಚತುರತೆಯಿಂದೋದಿಸಲುಮವಗೆಯು | ನ್ನತವೈರಾಗ್ಯ ಪುಟ್ಟುವುದು || ೭೫ ||

ಎಂದು ಕಿರೀಟಿ ನುಡಿಯೆ ಕೇಳಿಯಾಧರ್ಮ | ನಂದನನದನೆ ಕೈಕೊಂಡು |
ವಂದಿಗಳನು ಕಳುಹಿದೊಡವರಲ್ಲಿಗೈ | ತಂದು ವಂದಿಸಿ ಭೀಷ್ಮರಿಗೆ || ೭೬ ||

ವೈರಾಗ್ಯಕಾರಣಮಾದ ನೀತಿಯನವ | ಗಾರೈಯದೊರೆಯಲು ಕೇಳಿ |
ಧೀರನದಕೆ ಮೆಚ್ಚಿಯಿಸ್ಥಿರಮೀಸಂ | ಸಾರಮೆಂದವರೊಳು ನುಡಿದು || ೭೭ ||

ವಿನಯೋಕ್ತಿಗಳಿಂದ ಬೀಳ್ಕೊಡಲಾಧರ್ಮ | ತನುಜನಲ್ಲಿಗೆ ಬಂದವನಿಗೆ |
ಜನಿಸಿದ ನಿರ್ವೇಗಸ್ಥಿತಿಯನು ಪೇಳ | ಲನುರಾಗವೈದಿರಲತ್ತ || ೭೮ ||

ಆ ಸುಚರಿತ ಭೀಷ್ಮರ ಮನದೊಳು ತೀವಿ | ದಾಸೆಯವರ ನುಡಿಗೇಳಿ |
ಆ ಸಸಿಯನು ಮುಸುಕಿದ ಮುಗಿಲೆಲರಿಂ | ದೋಸರಿಸಿದ ತೆರನಾಯ್ತು || ೭೯ ||

ತುಳಿಲಾಳಾಭೀಷ್ಮರಿಂತೆಣಿಸಿದನಾ | ಯೆಳವಿಯೊಳಿಳೆಯನು ತೊರೆದು |
ಬಳಿಕವರೆಲ್ಲರ ಸಲಹಿ ವೃದ್ಧತ್ವದ | ತಳೆದು ಮಕ್ಕಳ ಹತಿಯಿಸುವುದು || ೮೦ ||

ನಿರುತಮಲ್ಲೆಂದು ನಿರ್ವೇಗಸಂಯುತನಾ | ಯಿರುಳ ಕಳೆದುವುದಯದೊಳು |
ಕುರುಕುಂಭಿನಿಯೊಳೆಂದಿನಂತೊಡ್ಡಿದಾದು | ರ್ಧರತರಬಲದ ಚಕ್ರದೊಳು || ೮೧ ||

ಹಿಂಸಾದಿದೋಷೋದ್ಯೋಗದಿನೈದಿದ | ಸಂಸಾರದ ಸೌಖ್ಯಮಿದು |
ಸಂಶಯಮೆಂತಪ್ಪುದೆಂದಾಶಾವಿ | ಧ್ವಂಸಿಯೆಣಿಸಿ ಚಿತ್ತದೊಳು || ೮೨ ||

ಹೃದಯದೊಳುಪಶಾಂತತೆಯ ಹಡೆದು ಬಾಹ್ಯ | ಕೊದವಿದ ರೌದ್ರಭಾವದೊಳು |
ಪದುಳದಿನೇರಿ ರಥವ ಬಿಲ್ಕೊಲ್ವಿಡಿ | ದದಿರದೆ ಬಂದೊಡ್ಡಿನಿಂದು || ೮೩ ||

ಮಾನಿತಮಾದ ಮುಕ್ತರ ಮೂರ್ತಿಯನನು | ಮಾನದೊಳಿರದಳವಡಿಸಿ |
ಸಾನುರಾಗದೊಳು ದೀಕ್ಷೆಯನನುಕರಿಸಿಯ | ನೂನಭಾವದಿ ನಿಂದಿರಲು || ೮೪ ||

ತನು ಬೇರೆಯಾತ್ಮ ಬೇರೆಂಬ ಬುದ್ಧಿಯ | ನನುನಯದಿಂದಳವಡಿಸಿ |
ಜನನುತಭೀಷ್ಮರಾಹವಧರೆಯೊಳು ರಿಪು | ಜನವಂಜುವಂತೊಡ್ಡಿ ನಿಲಲು || ೮೫ ||

ಅದೆ ಬಂದನದೆ ಬಂದನುತ್ತಮ ಸತ್ತ್ವನೆಂ | ದೊದರಿ ಯುಧಿಷ್ಠಿರಸೇನೆ |
ಅಧಟರದೇವನರ್ಜುನನ ಬೆಂಬಳಿವಂದು | ಹುದುಗಿನಿಂದಾಸಮಯದೊಳು || ೮೬ ||

ಹೃದಯದೊಳೆಸೆವ ಶಾಂತತೆ ಬಹಿರಂಗದೊ | ಳೊದವಿದ ರೌದ್ರತೆಯಿಂದ |
ಸದಮಲಗಿರದೊಪ್ಪಿತು ಪಾದರಸ ನೆರೆ | ಪುದಿದ ಪೊಂಗರುವಿನಂದದೊಳು || ೮೭ ||

ನೋಡಿದವರ ಕಣ್ಗೆ ನಿಜವೆಂಬಂದದಿ | ಗಾಡಿಯಿಂದಾ ಬಿಲ್ಗೆಯೆಂಬ |
ಹೂಡಿ ಮುಪ್ಪುರವನೆಸುವ ಮೃಡಮೂರ್ತಿಯ | ಮಾಡಿದಂದಿನೊಪ್ಪಿದನು || ೮೮ ||

ಮುಂದುವರಿದು ರಥವನು ನೂಂಕಿ ಮಾರ್ಗಣ | ವೃಂದಮನಾಫಲ್ಗುಣನು |
ತಂದಲಂದದಿ ಕರೆದನು ಸಮತಾಗುಣ | ದಿಂದ ನಿಂಧದಟನ ಮೇಲೆ || ೮೯ ||

ಅದನು ಕಂಡಾ ಪಾಂಡವಸೇನೆ ನಲಿವರಿ | ದರದಿರದೆ ಶರವರುಷವನು |
ಸದಯನಂಗದಮೇಲೆ ಕರೆಯೆ ರೋಮಾವಳಿ | ಹುದುಗಿದಂದದಿ ತಾಗಿದವು || ೯೦ ||

ಗರಿವರತಾಗಿ ಹುದುಗಿದಂಬುಗಳ ಹೊತ್ತ | ನೆರೆಗಲಿನದಿಯನಂದನನ |
ಮಿರುಪಂಗಲತೆ ರಂಜಿಸಿತು ಫಲಪೂಗಳು | ತುರುಗಿದ ಮಂದಾರದಂತೆ || ೯೧ ||

ಲಲಿತಾಂಗದೊಳು ಮುಳುಗಿದಂಬಿನ ಗರಿ | ಗಳಿನಾಭೀಷ್ಮರೊಪ್ಪಿದರು |
ತಳುವದೆ ಬೀರಸಗ್ಗಕೆ ಪಾರಲೆಣಿಸುವ | ಗ್ಗಳದ ಮಾನಸವಕ್ಕಿಯಂತೆ || ೯೨ ||

ಅರುಣಾಂಬುವೆರಸಿ ಬಿಡದೆ ಮರುಮೊನೆಗೊಂಡ | ಶರಸಂಘಾತಮೊಪ್ಪಿದುದು |
ಧುರಧೀರನಂಗದೊಳಾತೇಜೋವೃಕ್ಷ | ದುರುಬಿಂಬಾಂಕುರದಂತೆ || ೯೩ ||

ಆ ಕಣೆಗಳು ನಟ್ಟ ಭಾರಕೆ ಜೋಲ್ದು ಪ | ತಾಕಾಸ್ತಂಭವನೊರಗೆ |
ಆ ಕಲಿಯಿರವನು ಕಂಡು ಪಾಂಡವರ ಪ | ತಾಕಿನಿಯಾಲಿಬೊಬ್ಬಿರಿಯೆ || ೯೪ ||

ಆಗಲಂಬರಕವಿದಂದದಿ ಕೌರವ | ಗಾಗಲೆಣಿಕೆಯನಿತರೊಳು |
ರಾಗದಿನಪರದಿಗ್ವಧುವ ಕೂಡುವೆನೆಂದು | ಬೇಗದೊಳಿನನೈದಿದನು || ೯೫ ||

ಪಡೆಗಳೆರಡು ತಂತಮ್ಮ ಪಾಳಯಕೈದ | ಲೊಡನಿತ್ತಲಾ ಸತ್ಯಮೂರ್ತಿ |
ಎಡೆವಿಡುವಿಲ್ಲದೆ ನಟ್ಟನಾರಾಚದ | ಕಡುನೋವಿಗೆಣಿಸದೊಂದಿನಿಸು || ೯೬ ||

ತನುಬೇರಸುಬೇರೆಂಬ ಭಾವವ ತನ್ನ ಮನ | ಮನದೊಳಗಿಟ್ಟು ಮಹಿಮನು |
ಮನಮೊಸೆದುಭಯಪರಿಗ್ರಹವನು ಬಿಟ್ಟು | ಘನತತ್ವಭಾವನನಾಗಿ || ೯೭ ||

ಸುರುಚಿರಪಂಚದಂಗಳನೊಸೆದು | ಚ್ಚರಿಸುತ್ತಾಸತ್ಯವಿದನು |
ನಿರುತದಿನಾಯೆರಡುಂ ಸೇನೆ ಬಲಗೊಳು | ತಿರಲಾದೇಹವ ಬಿಸುಟು || ೯೮ ||

ಮೊತ್ತಮೊದಲಸಗ್ಗದೊಳು ಜನಿಯಿಸಿ ದೇ | ವೊತ್ತಂಸನಾಗಿ ಪುಟ್ಟಿದನು |
ಇತ್ತಲೆರಡು ಸೇನೆ ನಿದ್‌ಎಯೊಳಿರಲೆ | ಚ್ಚತ್ತು ಭಾಸ್ಕರನುದಯದೊಳು || ೯೯ ||

ಪೂರ್ವದ ತೆರದಿ ಮೋಹರವೊಡ್ಡಿನಿಲೆ ಕೌರ | ವೋರ್ವಿಶನಿನಜನ ಮುಂದೆ |
ದೋರ್ವಲಶಾಲಿಗಂಗಾತನುಜನ ಕೊಂದ | ಗರ್ವಿಫಲ್ಗುಣಗಾರು ಸಾಟಿ || ೧೦೦ ||