ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಒಂದಾನೊಂದುಪಗಲು ಮಂಡಳಿಕರ | ಸಂದಣಿ ತನ್ನನೋಲೈಸೆ |
ಅಂದವಡೆದೆ ವಿಭವದಿನೋಲಗದೊಳು | ಕಂದರ್ಪನಿಭಕುಳ್ಳಿರಲು || ೨ ||

ಆ ವೇಳೆಯೊಳು ಹಸ್ತಿನಪುರವರದಿಂ | ಭಾವಕರೆನಿಪ ಮಂತ್ರಿಗಳು |
ಆ ಓಲಗಶಾಲೆಗೆಯ್ದಿಯಂಧಕರವೃಷ್ಣಿ | ಭೂವನಿತೇಶನ ಕಂಡು || ೩ ||

ವಿನಮಿತರಾಗಿ ವಿನಯದಿಂದುಚಿತಾ | ಸನದೊಳು ಕುಳ್ಳಿರ್ದು ಬಳಿಕ |
ಜನಪತಿ ಭಿನ್ನಪ ಕುರುಕುಲಮಣಿದೀಪ | ನನಪಮಗುಣಿ ಭೀಷ್ಮಭೂಪ || ೪ ||

ದೇವರಬಳಿಗೆಮ್ಮನಟ್ಟಿದನೆನಲಾ | ಭೂವರನಂಧಕವೃಷ್ಣಿ |
ಆವುದು ಕಜ್ಜಮೆಂದನಲವರೆಂದರು | ಲಾವಣ್ಯಯುತರೆಮ್ಮ ನೃಪನ || ೫ ||

ವರತನುಜಾತರ್ಗೆ ನಿಮ್ಮತನುಜೆಯರ | ನುರುಮುದದಿಂ ಕುಡಹೇಳಿ |
ಧರಣೀಶ ನಿಮ್ಮಲ್ಲಿಗೆಮ್ಮನಟ್ಟಿದನೆನ | ಲರಸು ಮಂತ್ರಿಯ ನೋಡಿದನು || ೬ ||

ಅರಸು ಮೊಗವ ನೋಡಲುದ್ದಾಯನನೆಂಬ | ವರ ಮಂತ್ರಿಯಾಮಹತ್ತರರ |
ಹರುಷಮೊದವೆ ನೋಡಿ ನಿಮ್ಮ ನೃಪರ ಕುಲ | ದಿರವನೆಮಗೆ ಪೇಳಿಮೆನಲು || ೭ ||

ಆ ಮಾತಿಗಾಮಹತ್ತರರೊಳಗೋರ್ವನು | ದ್ದಾಮಗಂಭೀರ ವಾಕ್ಯದೊಳು |
ಭೂಮಿಗೆ ಸೂತ್ರಧಾರಕನೆನೆ ಮೆರೆವಾ | ಶ್ರೀಮದಾದೀಶ್ವರನೊಸೆದು || ೮ ||

ಮೊತ್ತಮೊದಲಕಾಲದೊಳು ವಂಶಭೇದವ | ಬಿತ್ತರದಿಂ ನಿರ್ಮಿಸಿದನು |
ಮತ್ತಾಕುಲದೊಳು ಕುರುವಂಶವೆಂಬುದ | ತ್ಯುತ್ತಮಮಾಗಿ ರಂಜಿಪುದು || ೯ ||

ಆ ವಂಶದೊಳು ಸೋಮಪ್ರಭನೆಂಬೋರ್ವ | ಭೂವರನಿಹನವನನುಜ |
ಭೂವಿಶ್ರುತದಾನತೀರ್ಥಪ್ರವರ್ತನ | ಕೋವಿದನಾಶ್ರೇಯಾಂಸ || ೧೦ ||

ಆ ಜನಪತಿ ಸೋಮಪ್ರಭನೃಪನ ತ | ನೂಜಾತ ಜಯನೃಪನೆಂಬ |
ರಾಜನು ಬುಧಜನಸುರಭೂಜನು ಘನ | ತೇಜನು ಸಂಭವಿಸಿದನು || ೧೧ ||

ಕೃತಯುಗಚಕ್ರೇಶ ಭರತಗೆ ಸೇನಾ | ಪತಿರತ್ನಮಾಗಿ ಭೂಮಿಯನು |
ಪ್ರತಿಪಾಲಿಸಿ ಕಡೆಯೊಳುಯ ದೀಕ್ಷೆವಡೆದು | ನ್ನುತ ಸಿದ್ಧಪದವನೆಯ್ದಿದನು || ೧೨ ||

ವಿನುತ ಸೋಮಪ್ರಭಜನಿತಮಾದುದರಿಂ | ಘನತರಮಪ್ಪಾವಂಶ |
ಅನುಕರಿಸಿತು ಸೋಮವಂಶಾಭಿಧಾನು | ನನಿಮಿಷಪತಿಯರಿಕೆಯೊಳು || ೧೩ ||

ವಿಸ್ತಾರಮಪ್ಪಾ ವಂಶದೊಳೊಗೆದು ಸ | ಮಸ್ತನೃಪರು ಪೋಗಲಲ್ಲಿ |
ಹಸ್ತಿಯೆಂಬರಸನುದಿಸಿ ತನ್ನ ಹೆಸರೊಳು | ಹಸ್ತಿನಪುರವ ಕಟ್ಟಿಸಿದ || ೧೪ ||

ಬಳಿಕ ಪಲವು ಭೂಪಾಲಕರುದಯಿಸಿ | ಕಳಿಯೆ ಮತ್ತಾವಂಶದೊಳು |
ಖಳಕರ್ಮವಿಜುಯನುಧ್ಬುವಿಸಿದನವನೀ | ತಳವಂದ್ಯ ಶಾಂತಿತೀರ್ಥಕರು || ೧೫ ||

ಬಳಿಕರೊಳಗರ್ಧಪಲ್ಕೋಪಮಕಾಲ | ಕಳಿಯಲು ಸಂಭವಿಸಿದನು |
ಕಲಿಲಾರಣ್ಯದವಾನಲ ಕುಂಥುಕೇ | ವಲಬೋಧವಿಭ್ರಾಜಿತನು || ೧೬ ||

ಆ ಕುರುಕುಲದಲ್ಲಿ ಜನಿಸಿದರುದ್ಧತ | ಭೀಕರಕರ್ಮಾಪಹರರು |
ಲೋಕಸ್ತವನೀಯರು ಘನಕೀರ್ತಿ | ಸ್ವೀಕೃತರರತೀರ್ಥಕರು || ೧೭ ||

ಮತ್ತೆ ಕೆಲವು ಕಾಲ ಪೋಗಲಂತದರೊಳು | ಉತ್ತಮರೂಪಸಂಯುತನು |
ಚಿತ್ತಜಸನ್ನಿಭಶಕ್ತಿಯೆಂಬೋರ್ವ ನೃ | ಪೋತ್ತಂಸನುದ್ಭವಿಸಿದನು || ೧೮ ||

ಆ ಶಕ್ತಿನೃಪತಿಗೆ ಧಾರಿಣಿಯೆಂಬ ಸು | ಕೇಶಿವಲ್ಲಭೆಯಾದಳವರ್ಗೆ |
ಕೌಶಲ್ಯವಿಂದರೆಂದೆನಿಪ ಪರಾಶರ | ನಾಶಾಂತನು ಜನಿಸಿದರು || ೧೯ ||

ಶಾಂತನಿಗರುಸುತನಪನಿತ್ತು ಶಕ್ತಿಭೂ | ಕಾಂತ ಪರಾಶರಸಹಿತ |
ತಾಂ ತಳೆದನು ನಿಜಪಾರಿವ್ರಾಜಕ | ಸಂಗತಿಯೊಳು ದೀಕ್ಷೆಯನು || ೨೦ ||

ಇತ್ತಲಜ್ಜುಲಕೀರ್ತಿಯುತ ಶಾಂತನುಭೂ | ಪೋತ್ತಂಸನೊಂದು ದಿನದೊಳು |
ಮತ್ತಾಪೊಳಲಬಹಿರ್ವನದೊಳಗೆ ಬ | ರುತ್ತಿರ್ದೊಂದು ತಾಣದೊಳು || ೨೧ ||

ವಿಮಲಶಶಾಂಕವದನೆ ವಿದ್ಯಾಧರ | ರಮಣಿಯೋರ್ವಳು ಮುದದಿಂದ |
ಸಮೆದೊಂದು ಕೂಪವನಾ ನೀರೊಳು ತನ್ನ | ಕಮನೀಯಮಪ್ಪ ಭೂಷಣವ || ೨೨ ||

ಹಾಕಿ ಮತ್ತಾಕೂಪದ ತಡಿಯೊಳು ನಿಂದು | ಶೋಕಿಸುತಿರೆ ಕಾಣುತವೆ |
ಭೂಕಾಂತಶಾಂತನುಮವಳಸದೃಶಮ | ಪ್ಪಾಕಾರಕೆ ಸೋಲ್ತನಾಗ || ೨೩ ||

ಈ ತೆರದಿಂ ಸೋಲ್ತೆಲೆ ಬಾಲಕಿ ನೀ | ನೇತರ ದುಃಖದಿಂದಳಲ್ವೆ |
ಆ ತೆರವನು ಪೇಳೆನಲವಳೆಂದಳು | ಭೂತಳಪತಿ ಸಾಂತನುವಿಗೆ || ೨೪ ||

ಸೊಗಯಿಸುವೆನ್ನ ಭೂಷಣಮೀನೀರೊಳ | ಗಗುಳಿವೆಯಿವನುಪಮೆಯೊಳು |
ತೆಗೆದನಗೀವರಾರನು ಕಾಣದೆ | ಮಿಗೆದುಃಖಿಸಿದೆನು ಭೂಪಾಲಾ || ೨೫ ||

ಎನೆಲೆಂದನಿದಕುಮ್ಮಳವೇಕೆ ನಾನೊಂ | ದಿನಿಸಿರೊಳಗೆ ತೆಗೆದೀವೆ |
ವನಿತೆ ನೋಡೆನಲೆಂದಳಂತಾದೊಡೆ ನಾನು | ನಿನಗೆರಮಣಿಯಾಗುವೆನು || ೨೬ ||

ಇಂತೆನಲವನಿಪನೆಲೆ ಬಾಲೆ ನಿನ್ನ ವೃ | ತ್ತಾಂತವನೆನಗೆ ಪೇಳೆನಲು |
ಕಾಂತೆಯೆಂದಳು ವಿಜಯಾರ್ಧಮಹೀಧರ | ದಂತಕದೆಸೆಯ ಶ್ರೇಣಿಯೊಳು || ೨೭ ||

ಸುರುಚಿರ ಪೃಥ್ವೀತಿಲಕವೆಸರಪುರ | ವರದ ಮಹಿಧರನೆಂಬ |
ಅರಸಖೇಚರಗೆ ಮನೋಹರಿಯೆಂಬೋರ್ವ | ತರುಣಿಗೆ ನಾನು ಪುಟ್ಟಿದೆನು || ೨೮ ||

ಆ ಪರಿ ಬೆಳೆದು ಲಕ್ಷ್ಮೀಮತಿವೆಸರಾಂತು | ಶ್ರೀಪಂಚಮಿಯ ನೋಂಪಿನೊಳು |
ಈ ಪೊಡವಿಯ ಮಧ್ಯದೊಳಿಪ್ಪ ಮೇರುಮ | ಹಾಪರ್ವತಕೆಯ್ದುತವೆ || ೨೯ ||

ಅಲ್ಲಿಯಕೃತ್ರಿಮಚೈತ್ಯಾಲಯಕೆಯ್ದಿ | ಸಲ್ಲೀಲೆಯಿಂ ಸಿದ್ಧರನು |
ನಿಲ್ಲದೆ ಪೂಜಿಸುತಿರೆ ಚಾರಣಮುನಿ | ವಲ್ಲಭರಾಗಲೆಯ್ದಿದರು || ೩೦ ||

ಅವರಿಗೆರಗಿ ಧರ್ಮಾಧರ್ಮದಿರವನು | ತವೆಕೇಳಿಯುತಿವೇಗದೊಳು |
ಭವಪಾಶವನು ಹರಿವೆನೆಂಬ ಬುದ್ಧಿ ಸಂ | ಭವಿಸಿದುದಂತರಂಗದೊಳು || ೩೧ ||

ಮನದೊಳು ಹೇಯವಂಕುರಿಸಲೂರಿಗೆ ಬಂದು | ಜನನೀಕನಕರನು ಕಂಡು |
ಜಿನಗಂಧೋದಕವನು ಕೊಟ್ಟು ದೀಕ್ಷೆಯ | ನನುಕರಿಸುವೆನಾನೆಲು || ೩೨ ||

ಆ ಮಾತುಗೇಳಿಯೊತ್ತರವತ್ತಿದಂದದಿ | ತಾಮಿಂತೆಂದಾಡಿದರು |
ಪ್ರೇಮದ ಗಂಡುಮಕ್ಕಳು ನಮಗಿಲ್ಲಾಗಿ | ಭಾಮೆ ನೀನೇ ರಾಜ್ಯಕೊಡತಿ || ೩೩ ||

ಪಿಂತಣ ಭವದ ಪಾಪದ ಫಲದಿಂ ಗಂಡು | ಸಂತಾನವೆಮಗಿಲ್ಲವಾಗಿ |
ಕಾಂತೇ ನೀನೇ ಗಂಡುಮಗುವೆಂದು ನಾನು ನಿ | ಶ್ಚಿಂತರಾಗಿರ್ದೆವಿಂದುವರ || ೩೪ ||

ಬೇಡ ಮಗಳೆ ಗಂಡುಮಕ್ಕಳ ಹಡೆದೆಮ್ಮ | ನಾಡು ಬೀಡಿಗೆ ಕರ್ತೃಗಳನು |
ಮಾಡಿ ಬಳಿಕ ದೀಕ್ಷೆಗೊಳ್ಳೆಂದು ನನ್ನನು | ಬೇಡಿಕೊಂಡರು ದೈನ್ಯದೊಳು || ೩೫ ||

ವರಮಾತಾಪಿತೃಗಳ ಮಾತನು ಪರಿ | ಹರಿಸದೆ ಬಳಿಕ ನಾನೆನಗೆ |
ಸರಿಯುತ ಸತ್ಪುರುಷರು ನಮ್ಮ ವಿದ್ಯಾ | ಧರಲೋಕದೊಳಿಲ್ಲವಾಗಿ || ೩೬ ||

ಸದಮಲಮಪ್ಪ ಭೂಚರರೊಳು ಮುದದಿಂ | ಪುರುವಾಳ್ವೆನೆಂದಿಳೆಗಿಳಿದು |
ಮದನಸದೃಶ ನಿನ್ನ ಕುಲ ನಿನ್ನ ಬಲ ನಿನ್ನ | ಚದುರತೆಯನು ನೆರೆಕೇಳಿ || ೩೭ ||

ನೀನೇ ವಲ್ಲಭನಾಗಲುಬೇಕೆಂದು | ನಾನಿದ ಹಣ್ಣಿದೆನೆನಲು |
ಆ ನರಪತಿಯಾ ಕೂಪದೊಳಗುಳಿದ | ಮಾನಿತಮಣಿಭೂಷಣವನು || ೩೮ ||

ಶೃದಿಂ ಶರವ ಪುಂಖಾನುಪುಂಖಿಯೊಳೆಚ್ಚು | ಭರದಿಂದ ತೆಗೆಯಲು ಕಂಡು |
ಉರುಮುದವೆತ್ತ ಲಲನೆ ನೃಪಗತ್ಯಾ | ದರದಿಂದಿಂತು ನುಡಿದಳು || ೩೯ ||

ತಡೆಯದೆನ್ನಾತನುಜರ ಸುರನದಿಯೊಳು | ಬಿಡುವುದಕಾನು ದೀಕ್ಷೆಯನು |
ಕಡೆಯೊಳು ಕೈಕೊಂಬುದಕೆಯನಿಪತಿ | ಯೊಡಂಬಡಬೇಕು ನೀನೆನಲು || ೪೦ ||

ಅಂತೇಗೆಯ್ವೆನೆನಲು ಕಡುಹರಿಸವ | ತಾಂ ತಾಳಿ ಖಚರಕುಮಾರಿ |
ಶಾಂತನು ಕುರುಕುಲಚೂಡಾಮಣಿಯೊಳ | ಗಿಂತೆಂದು ಮಾತನಾಡಿದಳು || ೪೧ ||

ಮದನಸದೃಶ ನೀಪತಿ ವಿಭವದಿ ಸುರ | ನದಿಯವೇಳಾವನದೊಳಗೆ |
ಪರಪಿಂದಬಂದಿರು ನಾನಾ ಮಡುವಿನಿಂ | ದುದಯಿಸಿದಂತೆಯ್ದುವೆನು || ೪೨ ||

ಎನುತ ತಾನಾ ನದಿಯೊಳಗೆ ಮುಳುಗಿರ್ಪ | ದಿನದ ವೇಳೆಯ ಹೇಳಿಕೊಟ್ಟ |
ವನಿತಯಾಗಳೆ ಪೋಗಿಯಾ ವಾರ್ತೆಯನು ತನ್ನ | ಜನಕಗರಿಕೆಯ ಮಾಡಿದಳು || ೪೩ ||

ಆ ನುಡಿಗೇಳಿಯಾತನು ಹರಿಸವ ತಾಳ | ಲಾ ನಾರಿಯಾಶಂತನುವಿಗೆ |
ಸಾನಂದದಿಸುರಿದ ವೇಳೆಯೊಳು ಮ | ತ್ತಾ ನದಿಗಾಗಿ ಬಂದಿರಲು || ೪೪ ||

ಅತ್ತಲವನಿಪತಿಶಂತನು ಸಂತಸ | ವೆತ್ತು ಮಹಾವಿಭವದೊಳು |
ಬಿತ್ತರಮಪ್ಪ ಗಂಗೆಯ ತಡಿಗೆಯ್ದಿ ಪಾ | ರುತ್ತಿರ್ದನವಳಬರವನು || ೪೫ ||

ಅನಿತರೊಳಮೃತಸಮುದ್ರದಿಂದಾ ಸಿತಿ | ಜನಿಯಿಸಿ ಪೊರಮಡುವಂತೆ |
ವನಿತಾಮಣಿ ಲಕ್ಷ್ಮೀಮತಿ ಮಂದಾ | ಕಿನಿಯಿಂ ಪೊರಮಟ್ಟಳಾಗ || ೪೬ ||

ಮೀಂಗಳಮರಿಗಂಗಳ ಚಕ್ರವಾಕಕು | ಚಂಗಳ ತಾಮರೆಮೊಗದ |
ಅಂಗನೆ ಗಂಗೆಯೆಂಬಂದದಿನಾದೇವ | ಗಂಗೆಯಿಂ ಪೊರಮಟ್ಟಳಾಗ || ೪೭ ||

ಹೊಳೆಯ ಮಡುವಿನಿಂದ ಪೊರಮಡುವಾಕೋ | ಮಲೆಯನಿದಿರುಗೊಂಡು ತಂದು |
ಸುಲಲಿತಮಪ್ಪಲಗ್ನದೊಳು ಮದುವೆನಿಂದು | ತಳೆದನು ಸಲೆಸಂತಸವನು || ೪೮ ||

ಗಂಗೆಯ ಮಡುವಿಂದ ಬಂದಾಕಾರಣದಿಂದ | ಗಂಗೆಯೆಂದೆಂಬ ನಾಮವನು |
ಅಂಗನೆಗಿತ್ತು ಮಮತೆಯಿಂದಾ ನೃಪ | ತುಂಗನವಳನಾಳುತ್ತಿರಲು || ೪೯ ||

ಸುದತಿ ತನಗೆ ಜನಿಸಿದ ಮಕ್ಕಳೆಣ್ಬರ | ನದಿಯೊಳು ಬಿಟ್ಟಂತೆ ಮಾಡಿ |
ಪಡೆದು ವಿದ್ಯೆಗಳಿಂದ ತನ್ನ ಜನಕನೆಡೆ | ಗೊದವಿದಮುದದಿನಟ್ಟಿದಳು ||೫೦ ||

ಮತ್ತಮೊಂಬತ್ತನೆಯಣುಗನನಾಸತಿ | ಹೆತ್ತಾ ನದಿಯೊಳು ಬಿಟ್ಟು |
ಹೆತ್ತಮಕ್ಕಳ ಸಲಹುವೆನೆಂಬಭಿಲಾಷೆ | ವೆತ್ತಾಮಗುವನು ತರಿಸಿ || ೫೧ ||

ತತ್ತಮುಜಾತಗೊಲಿದು ಭೀಷ್ಮನಾಮವ | ನಿತ್ತಾ ಗಂಗಾದೇವಿ |
ಹೆತ್ತುದರಿಂ ಗಾಂಗೇಯಾಭಿಧಾನಮ | ನುತ್ತಮನಾ ನೃಪನಿಡಲು || ೫೨ ||

ಧರೆಯೊಳು ತನಗೆಣೆಯಾರಿಲ್ಲವೆಂಬಂ | ತರಮಗನಾಗಾಂಗೇಯ |
ವರರೂಪಗಾಡಿವಿಕ್ರಮದೊಡಗೂಡಿ ಬಂ | ಧುರನಾಗಿ ಹರೆಯವೇರದನು || ೫೩ ||

ಹರೆಯವಡೆದ ಮಗನನು ಕಂಡು ಬಿಜ್ಜಾ | ದರಿಲಕ್ಷ್ಮೀಮತಿ ತನ್ನ |
ಸುರುಚಿರಮಪ್ಪ ವಿದ್ಯೆಗಳನೆಲ್ಲವನವ | ಗುರು ಮುದದಿಂ ಕೊಟ್ಟು ಬಳಿಕ || ೫೪ ||

ಒಡಲೊಳು ಮೊದಲು ಹೂಣಿದ ವೈರಾಗ್ಯವೆಂ | ಬೊಡವೆಯ ತೆಗೆದು ವಲ್ಲಭನ |
ಮಡದಿಯೊಡಂಬಡಿಸುತ ಜಿನದೀಕ್ಷೆಯ | ಕಡುವೇಗದಿಂ ಕೊಂಡಳಾಗ || ೫೫ ||

ನುತಮಪ್ಪತಪಸಿನ ಫಲದಿಂದಾ ಶ್ರೀ | ಮತಿ ತನುಭಾರವನಿಳುಹಿ |
ಅತಿಶಯಮೆನಿಪ ಸೌಖ್ಯವನು ಸಂಭವಿಸುವ ಚ್ಯುತಕಲ್ಪದೊಳು ಜನಿಸಿದಳು || ೫೬ ||

ಇಂತಚ್ಯುತುಕಲ್ಪದೇವನಾಗಿರಲಿತ್ತ | ಶಾಂತನುವಿರುತೊಂದುಪಗಲು |
ತಿಂತಿಣಿಗೊಂಡರಸುಗಳುವೆರಸಿ ನಿ | ಶ್ಚಿಂತದಿ ಪೊರಮಟ್ಟು ಬಳಿಕ || ೫೭ ||

ಬಂದು ಗಂಗೆಯ ತಡಿಯೊಳು ತಾಪಸಾಶ್ರಮ | ವೊಂದಿರಲಂತದರೊಳಗೆ |
ಇಂದುವದನೆ ತಾಪಸಸುತೆಯೋರ್ವಳು | ನಿಂದಿರಲವಳ ನೋಡಿದನು || ೫೮ ||

ಮುಸುಕಿದ ವಿರಹದಿಂದಾಶಾಂತನು ಭೂಪ | ನಸದೃಶೆಯಾಕೆಯ ತಂದೆ |
ವಸುವೆಂಬ ಗೊರವನನಾ ಪೆಣ್ಮಣಿಯನು ಸಂ | ತಸದಿಂದ ಬೇಡಿಸಲವನು || ೫೯ ||

ಪ್ರಾಯಕಳೆದವರಿಗಬಲೆಯ ಕೊಡವುದ | ನ್ಯಾಯಮೆನಲು ಕೇಳಿ ನೃಪತಿ |
ಕಾಯಜಕಣೆಗೆ ತನುವನೊಡ್ಡಿ ಪುರಕೆ ಬಂ | ದಾಯಾಸಗೊಳುತಿರಲಾಗ || ೬೦ ||

ತಂದೆಗೆ ವಿರಹವಂಕುರಿಸಲು ಕೇಳ್ದಾ | ನಂದನಭೀಷ್ಮಕುಮಾರ |
ಬಂದಾ ತಪಸಿಯಲ್ಲಿಗೆ ಮುದದಿಂ ನಮ್ಮ | ತಂದೆಗೆ ಕೊಡು ನಿನ್ನ ಮಗಳ || ೬೧ ||

ಎನಲವನೆಂದನೆಲೇ ಭೀಷ್ಮಕುಮಾರ | ವಿನುತ ವಿಕ್ರಮಿ ಕೇಳು ನಿನಗೆ |
ಅನುಚರರಾಗುವರೆನ್ನಮಗಳು ಹೆತ್ತ | ತನುಜನರದರಿಂ ಕೊಡೆ ನಾನು || ೬೨ ||

ಎಂದು ಬೆಟ್ಟೆಯಮಾತ ನುಡಿಯಲು ಭೀಷ್ಮನಿಂ | ತೆಂದನು ನನಗೀಭವಕೆ |
ಇಂದುಮುಖಿಯರಾ ರಾಜ್ಯವು ನಿರ್ವೃತಿ | ಯೆಂದು ವ್ರತಧರಿಸಿದನು || ೬೩ ||

ಈ ತರದಿಂ ಬ್ರಹ್ಮಚರ್ಯಸಂಯುಮವ ವಿ | ಖ್ಯಾತಧರಿಸಲಾ ತಪಸಿ |
ಪ್ರೀತಿಯಿಂ ತನ್ನ ತನುಜೆ ಸತ್ಯವತಿಯನು | ಭೂತಳೇಶಗೆ ಕೊಟ್ಟನೊಸೆದು || ೬೪ ||

ಧಾತ್ರಿಪನಿಂತು ಮದುವೆನಿಂದಾ ಮೃಗ | ನೇತ್ರೆಯೊಳೊಲಿದರವರ್ಗೆ |
ಪುತ್ರರು ಜನಿಯಿಸಿದರು ಚಿತ್ರವೀರ್ಯ ವಿ | ಚಿತ್ರವೀರ್ಯರೆಂಬುವರು || ೬೫ ||

ಸುತರನು ಸಲಹುತ ಶಾಂತನುಭೂಪತಿ | ಮತಿಹೀನನೆನಗಾಗಿ ಮಗನು |
ನುತಗುಣಿ ಭೀಷ್ಮನು ಸತಿಯರ ತೊರೆದನೆಂ | ದತಿ ಚಿಂತಾಕ್ರಾಂತನಾಗಿ || ೬೬ ||

ಎನ್ನಲ್ಪಸುಖಕಾಗಿ ಸುತನ ಸುಖವು ತಪ್ಪಿ | ತಿನ್ನೇಕೆ ಬಾಳ್ವೆನೆಂದೆನುತ |
ಉನ್ನತಗುಣಿಶಾಂತನು ಧರಿಯಿಸಿದನು | ಸನ್ನುತ ಜಿನದೀಕ್ಷೆಯನು || ೬೭ ||

ಬಳಕಿತ್ತ ಭೀಷ್ಮಾನುಜರು ವಿಕ್ರಮಗೂಡಿ | ಬೆಳೆದವರೊಳು ಚಿತ್ರವೀರ್ಯ |
ತಳುವದೆ ಪರಭೂಪರೊಳು ಕಾದಿಯವರಸು | ಗಳೆದು ತಾನಲ್ಲಿಯಳಿದನು || ೬೮ ||

ಬಳಿಕ ವಿಚಿತ್ರವೀರ್ಯಗೆ ಭೀಷ್ಮ ನೃಪಕುಲ | ತಿಲಕನುನ್ನತ ರೂಪವನು |
ತಳೆದಂಬಿಕೆಯಂಬೆಯಂಬಾಲೆಯೆಂಬ ಹೆಂ | ಗಳನು ಕಾಶೀಜನಪದದ || ೬೯ ||

ಒಡೆಯನ ಮಕ್ಕಳ ಬೇಡಿಕಳುಹಲವ | ಕುಡದಿರಲಾ ವಾರ್ತೆಗೇಳಿ |
ಕಡುಗಲಿ ಭೀಷ್ಮನವನ ಮೇಲೆ ದಂಡೆತ್ತಿ | ನಡೆದವನನು ನೆಲಕಿಕ್ಕಿ || ೭೦ ||

ಆ ಮೂವರು ಸತಿಯರು ತಂದು ತಮ್ಮಗೆ | ಪ್ರೇಮದಿ ಮದುವೆಯ ಮಾಡೆ |
ಮನುಜೇಶಕುಮಾರನವರೊಳು | ದ್ದಾಮಸುಖದಿ ಕೂಡಿರಲು || ೭೧ ||

ಅಂಬೆಗೆ ಧೃತರಾಷ್ಟ್ರನೆಂಬ ಜಾತ್ಯಂಧನು | ವಂಬಿಕೆಗಾ ಪಾಂಡುನೃಪತಿ |
ಎಂಬುವನಂಬಾಲೆಗೆ ಮತ್ತೆ ವಿದುರನೆಮ | ದೆಂಬವರುದ್ಭವಿಸಿದರು || ೭೨ ||

ಪುತ್ರರು ಪುಟ್ಟಲೊಡನೆ ರೋಗದಿಂದ ವಿ | ಚಿತ್ರವೀರ್ಯನು ಸತ್ತುಪೋಗೆ |
ಕ್ಷತ್ರಿಯಕುಲದೀಪಭೀಷ್ಮನವರ ಸಾಕಿ | ಧಾತ್ರಿಯೊಳತಿ ಕೀರ್ತಿವಡೆದ || ೭೩ ||

ಎಂದಿಂತಾ ಕುರುಕುಲದ ವಿಸ್ತಾರವ | ನೊಂದಿನಿಸಿಲ್ಲದೆ ಪೇಳಿ |
ಕಂದರ್ಪನಿಭರೂಪನಂಧಕವೃಷ್ಣಿಗಿಂ | ತೆಂದನು ಮತ್ತಾಮಂತ್ರಿ || ೭೪ ||

ಅವನಿಪ ಕೇಳು ವಿಚಿತ್ರವೀರ್ಯನ ಸುತ | ರವರಿಗೆ ನಿಮ್ಮ ಸುತೆಯರ |
ಸವಿನಯದಿಂ ಕುಡಹೇಳಿಯಟ್ಟಿದನೆಮ್ಮ | ನವಿರಳಗುಣಿಭೀಷ್ಮನೆನಲು || ೭೫ ||

ಈ ರೀತಿವಡೆದ ನಿಮ್ಮವನಿಪಾಲಕಸುಕು | ಮಾರರನಾಮೂವರೊಳು |
ಅರಗ್ರಜಾತರವರಿಗೆಮ್ಮ ಮಕ್ಕಳ | ನಾರೈಯದೀವೆನೆಂದೆನಲು || ೭೬ ||

ಅರಸುತನಕೆ ಕರ್ತೃ ಧೃತರಾಷ್ಟ್ರನೆಲ್ಲಕೆ | ಹಿರಿಯನೆನಲು ಭೂವರನು |
ಪಿರಿದು ವಿಚಾರಿಸಿದನು ತನ್ನ ಮನದೊಳು | ನಿರುತಮಪ್ಪಾಕಾರ್ಯವನು || ೭೭ ||

ಹುಟ್ಟುಕುರುಡನಾದೊಡಮೇನೊ ದೃತರಾಷ್ಟ್ರ | ಪಟ್ಟಕೆ ಕರ್ತೃವಾದುದರಿಂ |
ನೆಟ್ಟನೆಯವಗೆ ಮಕ್ಕಳಕುಡುಬಹುದೆಂದು | ದಿಟ್ಟನೆಣಿಸುತಿಂತುನುಡಿದ || ೭೮ ||

ಹಿರಿಯಕುವರ ಧೃತರಾಷ್ಟ್ರಗೆ ನಮ್ಮೀ | ನರಪತಿ ವೃಷ್ಣಿಯುಸುತೆಯ |
ಹರಿಸದಿ ಕುಡುವೆನೆಂಬಾನುಡಿಗಾಮಂತ್ರಿ | ವರರನುರಾಗಮನೆಯ್ದಿ || ೭೯ ||

ಅರಸನ ಕೈಯಿಂದ ಬಳಿಕ ಬೀಳ್ಕೊಂಡತಿ | ಭರದಿಂದ ಪೊರಮಟ್ಟುಬಂದು |
ವರಹಸ್ತಿನಪುರಕೆಯ್ದಿ ಭೀಷ್ಮರ ಕಂ | ಡೊರೆದರಂದಾಕಾರ್ಯವನು || ೮೦ ||

ಆ ನುಡಿಗೇಳಿ ಶೌರೀಪುರಕಾ ಭೀಷ್ಮ | ಭೂನಾಥನೆಯ್ದಿ ಮದುವೆಯ |
ಸಾನಂದದಿ ಮಾಡಿದನು ಧೃತರಾಷ್ಟ್ರಗೆ | ಭೂನುತೆ ಗಾಂಧಾರಿಯನು || ೮೧ ||

ಉರುತಮಪ್ಪವಸ್ತುವ ಬಳುವಳಿಗೊಟ್ಟು | ನರಪನಂಧಕವೃಷ್ಣಿ ಕಳುಹೆ |
ಹರಿಸದಿ ಮದುಮಕ್ಕಳುಗೂಡಿ ಹಸ್ತಿನ | ಪುರಕೆ ಬಂದನು ಭೀಷ್ಮನೃಪತಿ || ೮೨ ||

ಪುರವನು ಪೊಕ್ಕು ಮತ್ತೊಂದಿ ದಿವಸದೊಳು | ಗರುವೆ ಕೊಂತಿಯನು ಪಾಂಡುವಿಗೆ |
ಹರಿಸದಿ ಕುಡಹೇಳಿಕಳುಹಿದವರ ಕೂಡೆ | ಧರಣೀಶನಂಧಕವೃಷ್ಣಿ || ೮೩ ||

ನವಪಾಂಡುರೋಗವಿಡಿದ ಪಾಂಡುಕುವರಗೆ | ಯುವತೀಮಣಿ ಕೊಂತಿಯನು |
ಸವಿನಯದಿಂದೀವುದುಚಿತವಲ್ಲೆನಲು ಮ | ತ್ತವರು ತಿರುಗಿದ ವಾರ್ತೆಯನು || ೮೪ ||

ಅರಿದಾ ಪಾಂಡುಕುಮಾರನಾ ಕೊಂತಿಯಾ | ಮೆರೆವವಿಲಾಸವಿಭ್ರಮವ |
ನೆರೆಕೇಳಿ ಕಿವಿವೇಟಗೊಂಡು ವಿರಹದೊಳು | ಮರುಗುತಿರ್ದೊಂದುದಿನದೊಳು || ೮೫ ||

ಪುರದಬಹಿರ್ನಂದನಕೆ ಪೋಗಿ ವಿಹರಿಸು | ತಿರೆ ಮೊದಲೋರ್ವಖೇಚರನು |
ವರಸತಿಯೊಳೂ ಕ್ರೀಡಿಸುತಿರ್ದು ತನ್ನ ಕೈ | ವೆರಲಕಾಮಮುದ್ರಿಕೆಯನು || ೮೬ ||

ಅಲ್ಲಿ ಮರೆದು ಪೋಗಲದನಾ ಪಾಂಡುಭೂ | ವಲ್ಲಭನೆತ್ತಿ ಕೈಗಿಟ್ಟು |
ಸಲ್ಲೀಲೆಯಿಂದಿರಲಾ ವಿದ್ಯಾಧರ | ನಿಲ್ಲದಾಯೆಡೆಗೆಯ್ತಂದು || ೮೭ ||

ಮುನ್ನತಾಮುಂತಿರುಗಿದ ತಾಣದೊಳಾ | ರನ್ನದ ಕಾಮಮುದ್ರಿಕೆಯಾ |
ಉನ್ನತಮಪ್ಪ ಚಿಂತೆಯೊಳರಸುತಿರೆ | ಸನ್ನುತನಾಪಾಂಡಯನೃಪತಿ || ೮೮ ||

ಏನನರಿಸುವಿರಿ ನೀವೆನಲವನೆಂದ | ನಾನೆನ್ನ ಕೈಯಮುದ್ರೆಕೆಯ |
ಈ ನೆಲದೊಳು ಕೆಡಹಿದೆನೆನೆ ಕೇಳ್ದಾ | ಮಾನಿತಗುಣಿ ಪಾಂಡುನೃಪತಿ || ೮೯ ||

ಭರದಿಂದ ತನ್ನ ವಶದೊಳಿರ್ದ ರನ್ನದುಂ | ಗುರುವನು ಕೊಡಲಂದವನು |
ಉರುಹರುಷವ ತಾಳಿ ಎಲೆ ಭೂನುತಗುಣಿ | ವರಸತ್ಯನಿಧಿ ಸುಕುಮಾರ || ೯೦ ||

ಮರಸದೆನ್ನೀಕಾಮಮುದ್ರಿಕೆಯನು ಕೈ | ದೊರೆದುಕೊಟ್ಟೆಯಲಾ ಎಂದು |
ಎರಕದಿಂದಾ ಪಾಂಡುಕುವರನ ಕೊಂಡಾಡಿ | ನೆರೆಗುಣಿಯಾ ಖೇಚರನು || ೯೧ ||

ಇದು ಕಾಮಿತಫಲವೀವ ಮುದ್ರಿಕೆಯಿಂ | ತಿದು ನಿನ್ನ ವಶದೊಳಗಿರಲಿ |
ಇದು ನೀನು ಬಯಸಿದ ಕಾರ್ಯವ ಕೊಡುವದೆಂ | ದದರ ಮಂತ್ರವ ಹೇಳಿಕೊಟ್ಟ || ೯೨ ||

ಮತ್ತಮಿಂತೆದನು ವಿಜಯಾರ್ಧಭೂಧರ | ದುತ್ತರದಿದಿರ ಶ್ರೇಣಿಯೊಳು |
ಉತ್ತಮನಾದ ಕಿನ್ನರಗೀತವೆಂಬೊಂದು | ಪತ್ತನದಧಿಪತಿ ನಾನು || ೯೩ ||

ನನ್ನ ಹೆಸರು ವಜ್ರಮಾಲಿ ನಾನಾವಾಗ | ನಿನ್ನೆಡೆಗೈದಿದಾಕ್ಷಣವೆ |
ರನ್ನದ ಮುದ್ರಿಕೆಯನು ಕೊಡು ನೀನೆಂದು | ತನ್ನ ನೆಲೆಗೆ ಪೋದನಿತ್ತ || ೯೪ ||

ಸುಕುಮಾರನಾಪಾಂಡು ನೃಪತಿಯಾಕಾಮಮು | ದಿಕ್ರೆಯೊಂದು ಸಾಮರ್ಥ್ಯದಿಂದ |
ಸುಕುಮಾರಪ್ಪೊಂದು ವಿಮಾನವ ರಚಿಸಿಯು | ತ್ಸುಕದಿಂದ ತಾನದನೇರಿ || ೯೫ ||

ಒಡನಾಡಿಗಳ ಕೂಡಿ ನೀರಪಥದೊಳು | ನಡೆದು ಶೌರೀಪುರಕೈದಿ |
ಮಡದಿಮಾಣಿಕಕೊಂತಿಯಾಡುವ ವನವನು | ಕಡುರಸಿಕನು ಹೊಕ್ಕನತ್ತ || ೯೬ ||

ಕೊಂತಿ ನಾಲಕು ನೀರು ಮಿಂದು ಕೆಳದಿಯರ | ತಿಂತಿಣಿಯನು ಕೂಡಿಕೊಂಡು |
ಕಂತುರಾಜನವಲ್ಲಭೆಯೆಂಬುಂದದಿ | ತಾಂ ತಳರಿದಳಾ ಬನಕೆ || ೯೭ ||

ಬನದೊಳು ತೊಳಲಿಯಾಡುತ್ತಿರ್ದಭಿನವ | ಮನಸಿಜನಂದದೊಳಿರ್ಪ |
ಜನತಾಧಿಪ ಪಾಂಡುರಾಜಭಾಸ್ಕರನಾ | ವನಜಲೋಚನೆ ಕಂಡಳಾಗ || ೯೮ ||

ಕಾಣಲೊಡನೆ ತನ್ನ ಮನದೊಳು ಮನಸಿಜ | ಬಾಣಗಳೆಡೆಯಾಡುತಿರಲು |
ತ್ರಾಣವಡಗಿಯಿವನಾರೆಂದು ಸಖಿಯರ | ಏಣಲೋಚನೆ ಕೇಳಿದಳು || ೯೯ ||

ಸುದತೀಮಣಿ ಗಾಂಧಾರಿಯ ಪರಿಣಯ | ನದೊಳಾ ಧೃತರಾಷ್ಟ್ರನೊಡನೆ |
ಮುದದಿಂದ ಬರಲಿವನನು ನಾವು ಕಂಡೆವಂ | ತದರಿಂದ ಪಾಂಡುಕುಮಾರ || ೧೦೦ ||

ನಿನ್ನ ಸೋದರಭಾವನೆನಲಾ ನುಡಿಗೇಳಿ | ಉನ್ನತಮಪ್ಪ ಕಾತರದಿ |
ತನ್ನ ಮನವನಾತಗೆ ಮಾರುಗೊಟ್ಟಾ | ಚೆನ್ನೆ ನಿರೀಕ್ಷಿಸುತಿರಲು || ೧೦೧ ||

ಕೆಳದಿಯರವರ ಕಾತರದ ಚಿತ್ತವನರಿ | ದಲಘುತರ ಪ್ರೀತಿಯಿಂದ |
ತಳು ಮಾಡದೆ ಗಾಂಧರ್ವವಿವಾಹವ | ನೆಳಸಿಮಾಡಿದರಂತವರ್ಗೆ || ೧೦೨ ||

ಆ ಗಾಂಧರ್ವವಿವಾಹಾಂತರದೊಳು | ರಾಗದಿಂದಾ ಪಾಂಡುನೃಪತಿ |
ಪೂಗೋಲನಾರತಿಯೊಳು ಕೂಡಿದಂದದಿ | ನಾಗರುವೆಯೊಳು ಕೂಡಿದನು || ೧೦೩ ||

ಆರುಮರಿಯದಂತೆ ನಾಲ್ಕೆಂಟು ದಿವಸ ಮ | ತ್ತಾ ರಮ್ಯವನದೊಳಗಿರ್ದು |
ಆ ರಮಣಿಯೊಳು ಬೀಳ್ಕೊಂಡಾ ಪಾಂಡುಕು | ಮಾರ ತಮ್ಮೂರಿಗೈದಿದನು || ೧೦೪ ||

ಇತ್ತ ಕೊಂತಿಗೆ ಗರ್ಭಚಿಹ್ನೆವು ದಿನದಿನ | ಕೊತ್ತಂಬಿಸಿ ಗೂಢಮಿರ್ದು |
ಮತ್ತಮದಾರುಮರಿಯದಂತೆ ಸಿಸುವನು | ಹೆತ್ತಳು ಶುಭಲಗ್ನದೊಳು || ೧೦೫ ||

ಆ ಸುಕುಮಾರನನೊಂದು ಮಂದಾಸಿನೊಳ್ | ರಾಸಿಮಾಡಿದ ರತ್ನ ಸಹಿತ |
ಆ ಸಹಚರಿಯರಿರಿಸಿ ಸೋಮವಂಶಜ | ನೀ ಸಿಸುವೆಂದು ಶುದ್ಧಗೆಯ || ೧೦೬ ||

ಅಂದಮಾಗಿ ಬರೆದದನಲ್ಲಿ ಪರಿವ ಕಾ | ಳಿಂದೀನದಿಯೊಳು ಬಿಡಲು |
ಅಂದಿನ ಪಗಲೊಳಗಾಮುಂದಸು ಪರಿ | ತಂದುದು ಕಡುವೇಗದೊಳು || ೧೦೭ ||

ಮಿಗೆಸೊಗಯಿಸುವಂಗದೇಶದ ಚಂಪಾ | ನರಗಿಯಾರೆವೆಯ ಕೆಲದೊಳು |
ಧಗಧಗಿಸುತ ಬರುತರಲದನೋರ್ವನು | ಬಿಗನು ತೆಗೆದು ಮುದದಿಂದ || ೧೦೮ ||

ತನ್ನ ಮನೆಗೆ ಕೊಂಡು ಪೋಗಿ ಮಂದಸಿನೊಳು | ರನ್ನದರಾಸಿಯನಡುವೆ |
ಹೊನ್ನಬೊಂಬೆಯವೊಲು ಹೊಳೆವ ಸಿಸುವ ಕಂ | ಡುನ್ನತ ಹರ್ಷವತಾಳಿ || ೧೦೯ ||

ಕರವಳನೆರಡನೆರಡು ಕರ್ಣದೊಳಗಿಟ್ಟು | ಕರಮೊಪ್ಪುತಿರಲಾಸಿಸುವಿಗೆ |
ಹರಿಸದಿ ಕರ್ಣನೆಂಬಭಿಧಾನಮನಿತ್ತು | ಪಿರಿದಳ್ತಿಯಿಂ ಸಾಕುತಿರಲು || ೧೧೦ ||

ಆ ನಗರಿಯ ಸೂರ್ಯನೆಂಬ ಮಹೀಪತಿ | ತಾನಾವಾರ್ತೆಯ ಕೇಳಿ |
ತಾನಪುತ್ರಿಕನಾದುದರಿಂ ತಡೆಯದೆ | ಸಾನುರಾಗದಿ ತರಸಿದನು || ೧೧೧ ||

ಆ ಮಂದಸಿನೊಂದು ಕೆಲದೊಳು ಬರೆದಿರ್ದ | ಸೋಮವಂಶಜನೀತನೆಂಬ |
ನಾಮದರಕ್ಕರಗಳನೋದಿಸಿ ನೋಡಿಯು | ದ್ದಾಮಹರ್ಷವನೆಯ್ದಿದನು || ೧೧೨ ||

ತನ್ನ ಮೋಹದ ರಾಧೆಯೆಂಬ ರಮಣಿಗಿತ್ತು | ಚೆನ್ನಾಗಿ ಸಲಹುತಲಿರಲು |
ಚೆನ್ನೇಸರು ಮೂಡಗಡೆ ಬೆಳವಂದದಿ | ಸನ್ನತವೆತ್ತು ಬೆಳದನು || ೧೧೩ ||

ಸುರಭೂಜಾತದ ಸಸಿಯಂದನೊಳಾ | ಸುರಭಿಯ ಸಿಸುವಿನಂದದೊಳು |
ವರಚಿಂತಾಮಣಿಗರುವಿನಂದದೊಳು ಬಂ | ಧುರನಾದನಾ ಸುಕುಮಾರ || ೧೧೪ ||

ಇದು ಜಿನಪದಸರಸಿಜಮದಾಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದಸಂಧಿಗಳೈದು || ೧೧೫ ||

ಐದನೆಯ ಸಂಧಿ ಸಂಪೂರ್ಣಂ