ನುಡಿದ ಭಾಷೆಗೆ ನಮ್ಮ ಚಕ್ರವ್ಯೂಹವ | ನೊಡೆದು ಸೈಂಧವನ ಶಿರವನು |
ಹೊಡೆಸೆಂಡಾಡಿದ ವೀರ ಕಿರೀಟಿಗೆ | ಪಡಿಯಾರು ಭೂತಳದೊಳಗೆ || ೧೦೧ ||

ಎಣಿಕೆ ಮಾಡದೆ ರಣರಂಗವ ಹೊಕ್ಕೆ | ನ್ನಣುಗರ ನಾನೂರ್ವರನು |
ಕ್ಷಣದೊಳು ಕೊಂದಭಿಮನ್ಯುಗೆ ಲೋಕದ | ಗಣಗಲಿಗಳು ಪಾಸಟಿಯೆ || ೧೦೨ ||

ಒಂದು ಗಳಿಗೆಯೊಳಗೆನ್ನಣುಗಿನ ತ | ಮ್ಮಂದಿರ ನಾನೂರ್ವರನು |
ಕೊಂದ ಭೀಮಗೆ ಸರಿಯಪ್ಪವರುಂಟೇ | ಯೆಂದು ನುಡಿದ ನುಡಿಗೇಳಿ || ೧೦೩ ||

ಇಂದಿನ ಪಗಲೆನ್ನ ಕೈಯ ಪರಿಯ ನೋ | ಡೆಂದು ಬೀಳ್ಕೊಂಡು ರಥವನು |
ಅಂದದಿನೇರಿ ಬಳಿಕ ದಿವ್ಯಕವಚವ | ನೊಂದಿಸಿ ಬಿಲ್ಕೋಲ್ವಿಡಿದು || ೧೦೪ ||

ಕುರುಪತಿಯೇಕಾಕ್ಷೋಹಿಣಿಬಲವನು | ಬೆರಸಿ ತನ್ನಮಿತಸೇನೆಯನು |
ಧುರಧೀರನಿನಸುತನಾಕಲಿಯೆನೆ ಪಾಂಡ | ವರ ಪಡೆಯನು ತಾಗಿದನು || ೧೦೫ ||

ಇಂತು ಕೋಪದಿ ತಾಗಲೆರಡು ವರೂಥಿನಿ | ತಂತಮ್ಮೊಳುನೆರೆ ಹುದುಗಿ |
ಪಿಂತುಮುಂತನು ನೋಡದೆ ಕಾದೆ ಬಳಿಕ ಕೃ | ತಾಂತನೊಡಲು ತುಂಬಿದುದು || ೧೦೬ ||

ಮತ್ತಾ ಕಲಿಕರ್ಣನನ ವಾಹಿನಿಯಿರಿ | ವೊತ್ತಂಬರಕೆ ಪಾಂಡವರ |
ಮೊತ್ತದ ಪೌಜೆಲ್ಲವು ಚಿಲ್ಲಿಪಿಲ್ಲಿಯಾಗಿ | ಗುತ್ತಿರ್ದುದಾರಣದೊಳಗೆ || ೧೦೭ ||

ಅಲಘುಪರಾಕ್ರಮಿಯಾದಿತ್ಯನಣುಗನ | ಬಲದ ಬಲ್ಗೊಲೆಯ ಸೈರಿಸದೆ |
ತಲೆಬಾಲಗೆಟ್ಟು ಕೌಂತೇಯರ ಬಲ ದಬ್ಬು | ದಲೆಗೊಂಡುದತಿ ಭೀತಿಯಿಂದ || ೧೦೮ ||

ತುಂಗವಿಕ್ರಾಂತ ಕರ್ಣನ ಕಾಪಿನ ಚತು | ರಂಗವಾಹಿನಿಯುರವಣೆಗೆ |
ಗುಂಗುದಿಗೊಳುತಿರ್ದುದಾರಿಪುಸೇನೆಯ | ಜಂಗುಳಿಯಾಬವರದೊಳು || ೧೦೯ ||

ಅದನುಕಂಡನಿಲನಂದನನು ರಥವ ನೂಂಕಿ | ಕದನಕರ್ಕಶಕರ್ಣನನು |
ಇದಿರಾಗಿದಿರಾಗೆಂದುಸುರಿದನಂ | ದಧಟಿಂದ ಶರಸಂತತಿಯ || ೧೧೦ ||

ದಿಟ್ಟಿಗತ್ತಲೆವಡೆದಾಬಾಣವನು ಕಂಡು | ತೊಟ್ಟನೆ ಕಡಿದೊಂದು ರಥವ |
ಬಿಟ್ಟು ವಿರಥನ ಮಾಡಲು ಕಂಡು ಗದೆಗೊಂಡು | ಕಟ್ಟುಗ್ಗರದೊಳೆಯ್ದಿದನು || ೧೧೧ ||

ವರವಜ್ರಬಾಣದಿಂದಾಯಿನಸುತನೆಸೆಯೆ | ಮರುತಸುತನು ಮೂರ್ಛೆಯಿಂದ |
ಸುರಪನಿಡಲು ನೀಲಾದ್ರಿ ನೆಲಕೆ ಬೀಳ್ವ | ಪರಿಯೊಳು ಬೀಳ್ವುದ ಕಂಡು || ೧೧೨ ||

ಆತನ ತನುಜ ಘಟೋದ್ಗಜನಾ ತನ್ನ ತಾತನ ಪೆರಗಿಕ್ಕಿನಿಂದು |
ಮಾತೇನು ತರಣಿತನುಜ ಬೇಗಮೆನಗಿದಿ | ರಾತು ನೀ ನೋಡುವನೋಡೆಂದು || ೧೧೩ ||

ಕೇಸರಿ ಕೆಕ್ಕಳಗೆರಳ್ವಂದದಿ ಮ | ತ್ತಾಸೂರ್ಯಸುತನೊಡನಿರ್ದ |
ಆ ಸೇನೆಯೇಕಾಕ್ಷೋಹಿಣಿಯನು ನೆಲ | ಹೇಸುವಂದದಿ ಕೊಂದನಾಗ || ೧೧೪ ||

ಹವಣಿಲ್ಲದ ತನ್ನ ಬಲವನೆಲ್ಲವ ಕೊಂ | ದವನನಮೋಘಶಕ್ತಿಯೊಳು |
ರವಿಸುತನಿಡೆ ಬೀಳ್ದನು ಮೇಲೆ ನೋಡುವ ದಿವಿಜಾವಳಿ ಪೊಗಳ್ವಂತೆ || ೧೧೫ ||

ಇಂತು ಘಟೋದ್ಗಜ ಬೀಳಲು ಕಂಡು ಕೃ | ತಾಂತಕುಪಿತ ಯುಧಿಷ್ಠಿರನು |
ಅಂತರಿಸದೆ ರಥವನು ನೂಂಕಿ ಘನಶರ | ಸಂತತಿಯನು ಸೂಸಿದನು || ೧೧೬ ||

ಆ ನಾರಾಚವೆಲ್ಲವನು ಕಡಿದು ಧರ್ಮ | ಸೂನುವ ವಿರಥನ ಮಾಡೆ |
ಭೂನುತ ವೀರರೆನಿಸುವಮಳ್ಗಳು ಬಂ | ದಾನವೆ ಮೊನೆಯಿಕ್ಕಿದರು || ೧೧೭ ||

ಇಂತು ಬಂದವರೆಚ್ಚ ನಿಸಿತಶಿಳೀಮುಖ | ಸಂತತಿಯನು ಹರಿಗಡಿದು |
ಕೊಂತಿಯ ಚೊಚ್ಚಿಲ ಮಗನಮಳ್ಗಳನಾಗ | ಳಂತೆ ವಿರಥರ ಮಾಡಿದನು || ೧೧೮ ||

ಈ ತೆರದಿಂ ಭೀಮ ಭೀಮತನುಜ ಧರ್ಮ | ಜಾತ ಮಾದ್ರಾನಂದನರ |
ಆ ತರಣಿಜ ಗೆಲೆ ಮತ್ತೊಂದು ಕಡೆ ವಿ | ಖ್ಯಾತ ವಿಕ್ರಮಿ ಫಲ್ಗುಣನು || ೧೧೯ ||

ಬೆಂಬೀಳದೆ ತನಗಿದಿರಾದ ನೃಪನಿಕು | ರುಂಬವ ತಾನಿರದೆಚ್ಚ |
ಅಂಬುಗಳಿಂದ ಕರುಳ್ಗಳ ಸೀಳಿ ಸೀ | ರುಂಬುಳಾಡಿಸಿ ಕೊಂದನತ್ತ || ೧೨೦ ||

ಬಲಭದ್ರನೊಡನೆ ಜರಾಸಂಧನಣುಗ ಕ | ಗ್ಗಲಿಕಾಲವಯನುರೆ ಮುಳಿದು |
ಬಲಯುತನಾಲ್ಸಾಸಿರ ಮುಕುಟಾಧೀಶ | ರಲಸದೆ ತನ್ನೊಡವರಲು || ೧೨೧ ||

ಆರಭಟೆಯೊಳು ರಥವ ನೂಂಕಿ ಕೋಪದಿ | ಮಾರಿ ಮಸಗಿದಂದದೊಳು |
ಕೂರಂಬುಗಳನೆಚ್ಚು ಕೊಂದನೆಲ್ಲರನಾ | ಧಾರಿಣಿಯೋಕರಿಸುವಂತೆ || ೧೨೨ ||

ಕುರುಹರಿಯಲುಬಾರದು ರಥತತಿ ನುಗ್ಗು | ನುರಿಯಾದುದು ಭಟನಿಕರ |
ಪರಿವರಿಯಾಯ್ತು ಹಯಾವಳಿ ಪಡಲಿಟ್ಟ | ತೆರನಾದುದು ಗಜನಿವಹ || ೧೨೩ ||

ಪಾರುವ ತಲೆ ಪವಮಾನಪಥಕೆಯದೆ | ಯೂರಿ ನೆಲಕೆ ಬೀಳ್ವ ಮುಂಡ |
ಜಾರೇಳುವ ರಕುತದ ಪೊನಲಾಯಿರಿ | ಗಾರನ ರಣದೊಳೊಪ್ಪಿದುದು || ೧೨೪ ||

ಹಾರುವ ರುಂಡ ಹಿಡಿದ ಖಡ್ಗಸಹಮಾಗಿ | ಯಾರಯ್ಯದೇಳೆಂಟಡಿಯ |
ಧಾರಿಣಿಯೊಳು ನಡೆದುರುಳ್ವಟ್ಟೆಗಳು ಮ | ತ್ತಾರಣಧರೆಯೊಳೊಪ್ಪಿದುವು || ೧೨೫ ||

ಇಂತಾ ಮಕುಟವರ್ಧನರ ನಾಲ್ಸಾಸಿರ | ವಂ ತನ್ನ ಭುಜಬಲದಿಂದ |
ಅಂತರಿಸದೆ ಕೊಲಲನಿತರೊಳಪರದಿ | ಕ್ಕಾಂತೆಯೊಳಿನನು ಕೂಡಿದನು || ೧೨೬ ||

ಆ ರಾತ್ರಯೊಳಾಯೆರಡು ಕಡೆಯ ಸೇನೆ | ಸೇರಿ ತಂತಮ್ಮ ಪಾಳೆಯಕೆ |
ಸಾರಿ ನಿದ್ರೆಯೊಳೊರಗಿದೆ ಮೂಡಿ ಕಾಣಿಸಿ | ತಾ ರವಿ ಮೂಡಗಡೆಯೊಳು || ೧೨೭ ||

ಹಲವು ಪರೆಗಳುಣ್ಮಿದುವು ಮುನ್ನಿನಂತಾ | ಬಲಗಳೆರಡು ಪೌಜನಿಕ್ಕಿ |
ನೆಲದಾಣ್ಮರು ಮದಗಜವೇರಿ ತಂತಮ್ಮ | ನೆಲೆಯೊಳಗೆಯ್ದಿದರಾಗ || ೧೨೮ ||

ಕೌರವನಾಕಾರ್ಮುಕಾಚಾರ್ಯನ ಕರೆ | ದೀರಣವನು ಗೆಲುವುದಕೆ |
ಧೀರ ನೀನಲ್ಲದನ್ಯರ್ಗಾಗದೆಂದಾ | ವೀರಪಟ್ಟವ ಕಟ್ಟಿದನು || ೧೨೯ ||

ಆ ವೀರಪಟ್ಟವ ಕಟ್ಟಿ ಬೆಸನನೀಯ | ಲಾ ವೈರಿಬಲಕಿದಿರಾಗಿ |
ದೇವದಾನವರಾಗಸದೊಳೀಕ್ಷಿಸುತಿರ | ಲೋವದೆ ಬೀಲ್ಕೋಲ್ವಿಡಿದು || ೧೩೦ ||

ಅಂತಕನತಿಕೋಪವನಾಸ್ಯದೊಳು ತಾಳಿ | ದಂತೆ ಕಠೋರವಿಕ್ರಮನು |
ಅಂತರಿಸದೆ ರಥವನು ನೂಂಕೆ ದ್ರುಪದಭೂ | ಕಾಂತನಾತಂಗಿದಿರಾಗೆ || ೧೩೧ ||

ಇಂತಿದಿರಾಗಿಯತ್ಯಂತ ಕುಪಿತರಾ | ತಂತಮ್ಮ ಬಲವ ಕೈವೀಸೆ |
ಅಂತರಿಸದೆ ಲಯಸಮಯದ ಘನ ಘನ | ವಂ ತಾಗುವಂತೆ ತಾಗಿದರು || ೧೩೨ ||

ಆನದೆ ಬಿಲ್ಲೋಜನೆಯ್ತಂದಿರದೆಸು | ವಾನಾರಾಚವಿತಾನ ತಾನು |
ಆ ನೆಲದೊಳು ಕರೆಯಲು ಕಡೆಗಾಲದ | ಸೋನೆ ಕರೆವ ಮಾಳ್ಕೆಯೊಳು || ೧೩೩ ||

ಲಾಳವಟ್ಟಿಯ ಮಾಡಿದುವಾನೆಯೊಡಲನು | ಸೀಳಿದುವಶ್ವದೆದೆಯನು |
ಹೋಳು ಮಾಡಿದುವು ರಥವನರಿದುವು ಕಾ | ಲಾಳತಲೆಯನಾಕಣೆಗಳು || ೧೩೪ ||

ಅಂಬಿನ ಮೊನೆಯೇರಿಂ ಚಿಮ್ಮುವಾರ | ಕ್ತಾಂಬುವೊಪ್ಪಿತ್ತು ಧುರಧರಣಿ |
ಎಂಬ ಸುದತಿಯಂಬರಲಕ್ಷ್ಮೀಗರ್ಘ್ಯಮ | ನಿಂಬಾಗಿ ಕೊಡುವಂದದೊಳು || ೧೩೫ ||

ಕರಿನರಹಯಸಂಚಯದೊಡಲಿಂದೊಕ್ಕ | ಕರುಳಬಳ್ಳಿಗಳೊಪ್ಪಿದುವು |
ಧುರೆಧರೆಯೆಂಬಂಬುಧಿಯೊಳು ಬೆಳೆದು ಬಂ | ಧುರಮಾದ ವಿದ್ರುಮದಂತೆ || ೧೩೬ ||

ಅರುಣೋದಕವೆರೆದಲಗು ಮೆಯ್ಯೊಳುಮೂಡಿ | ಧುರವೀರಭಟರಂಗದೊಳು |
ಕರಮೆಸೆದವು ಮತ್ತವರ ಕೋಪಾನಲ | ದುರಿಯನಾಲಗೆಯಂದದೊಳು || ೧೩೭ ||

ಗರಿವರ ಮುಳುಗಿದಂಬುಗಳೇರಿಂ ಹೊ | ಮ್ಮಿರಿದು ಹಾರುವ ಹಯವಿತತಿ |
ಅರಿಕೆ ಮಾಡಿದುವು ತಮ್ಮಂದಿನಶ್ವಗಳೀ | ತೆರದಿ ಹಾರುವುದೆಂಬುದನು || ೧೩೮ ||

ಈ ಪರಿಯಾನೆಗೊಲೆಯಕೊಲುತೆಯಿತಪ್ಪ | ಚಾಪಾಗಮಾಚಾರ್ಯನನು |
ಕೋಪದಿನಂದು ತಾಗಿದನು ಪಾಂಚಾಳಮ | ಹೀಪತಿಯತಿಭರದಿಂದ || ೧೩೯ ||

ತಗರು ತಗರು ತಾಗುವ ತೆರದಿಂದಾ | ಜಗದೇಕವೀರ ಕರೆವ |
ಕ್ಷೋಣೀಪತಿಪಾಂಚಾಳನ ಕಂಡಾ | ದ್ರೋಣನಿಂತೆಂದಾಡಿದನು || ೧೪೧ ||

ಬೇಡ ದ್ರುಪದ ನನ್ನೊಳು ಕಾದಿಯಸುವನೀ | ಡಾಡುವ ಪೊಲ್ಲಮೆ ನಿನಗೆ |
ನಾಡಾಡಿಯಲ್ಲೆನ್ನ ಕೈಯ ಪರಿಯನೋಡು | ನೋಡೆಂಬನೊಳಿಂತು ನುಡಿದ || ೧೪೨ ||

ಹಾಳೆಬಾಳೆಲೆಯ ಹರಹಿ ರಾಜಾನ್ನದ | ಕೂಳಿಕ್ಕಿ ತೊಯೆತುಪ್ಪವರೆದು |
ತಾಳಿಲವಿಡೆ ನಿಮ್ಮಾಕೈಯ ಪರಿಯನು | ಹೇಳಬಹುದು ಕೇಳಬಹುದು || ೧೪೩ ||

ಪರಿಯಾಣ ತುಂಬಿ ಪಲವುದೋಸೆ ಕಡುಬು ತಂ | ದಿರಿಸಿ ಬೆಲ್ಲದ ಹಾಲನೆರೆದು |
ಹೆರೆದುಪ್ಪವಿಕ್ಕೆ ನಿಮ್ಮಾಕೈಯ ಪರಿಯನು | ಪಿರಿದಾಗಿ ಕಾಣಲುಬಹುಉ || ೧೪೪ ||

ಎನೆ ಕೇಳಿ ಕೆಕ್ಕಳಗೆರಳಿ ಕುಂಭಜನುರೆ | ಮುನಿದೊಂದು ದಿವ್ಯಾಸ್ತ್ರದಿಂದ |
ಇನಿಸುವೇಗದೊಳಿಕ್ಕಡಿಮಾಡಿ ದ್ರುಪದನ | ತನುವ ಕಡೆಯಲೆಚ್ಚನಾಗ || ೧೪೫ ||

ಆರುತಿರಲು ಕುರುಸೇನೆಯದನು ಕಂಡು | ಕೂರಾಳು ದೃಷ್ಟದ್ಯುಮ್ನ |
ವೀರಾವೇಶದಿ ಬಂದು ತಾಗಿದನಂ | ದಾರೈಯದಾಬಿಲ್ಲಗುರುವ || ೧೪೬ ||

ತಂದೆಯ ಕೊಂದ ಪಗೆಯ ಕೊಲ್ಲದೊಡೆ ಭಂಗ | ಮೆಂದು ಬಗೆದು ಭರದಿಂದ |
ಬಂದು ಬಾಣದಬಳಗವನುರೆ ಕರೆದನು | ಮಂದೇತರಕ್ರೋಧದಿಂದ || ೧೪೭ ||

ಈ ಪರಿಯೆಸೆವ ದೃಷ್ಟದ್ಯುಮ್ನನ ಕಂಡು | ಚಾಪವಿದ್ಯಾಕೋವಿದನು |
ಕೋಪದಿನೆಸಲೊಂದು ದಿವ್ಯಾಸ್ತ್ರದಿನಂದಿ | ನಾ ಪಾಪದಫಲದಿಂದ || ೧೪೮ ||

ತಾನೆಚ್ಚಂಬಿನ ಬಲುಮೆ ಕೆಡಲು ಚಿತ್ರ | ಮಾನಸನಾಗಿ ಕುಂಭಜನು |
ತಾನಿರಲೊಡನಾ ದೃಷ್ಟಮ್ಯಮ್ನನ | ನೂನಕೋಪಾವೇಶನಾಗಿ || ೧೪೯ ||

ಭರದಿಂದೊಂದು ಬಾಣದಿನೆಸಲದುಬಂ | ದರಿದುದವನ ಮಸ್ತಕವನು |
ಅರವಿಂದಭವನಳಿಕದೊಳು ಮುಂ ಬಂರೆದಾ | ಬರಹವ ಮೀರುವರಾರು || ೧೫೦ ||

ನಿಲ್ಲದೆರಡು ಸೇನೆಗೆ ಹರುವನು ಹೇಳ | ಬಲ್ಲ ಬಿಲ್ಲಾಳಿನಿಸರೊಳು |
ಹುಲ್ಲಾಳಿನಿಂ ಸಾವನು ಹಡೆವಂತಾಯಿ | ತಲ್ಲಾ ವಿಧಿವಶದಿಂದ || ೧೫೧ ||

ಎಂದಾ ಕುರುಸೇನೆ ಮರುಗುತಿರಲು ಮುದ | ದಿಂದಾರೆ ಪಾಂಡವಸೇನೆ |
ಮಂದರ ಮೇಲೆ ಕವಿದವೊಲು ಧೃತರಾಷ್ಟ್ರ | ನಂದನನತಿ ಚಿಂತಿಸಿದನು || ೧೫೨ ||

ಆ ಸಮಯದೊಳತ್ತಮಕುಟವರ್ಧನರಿ | ಚ್ಛಾಸಿರವನು ಕೂಡಿಕೊಂಡು |
ಓಸರಿಸದೆ ಶಂಕುಕರ್ಣಿಯೆಂಬುವನು ಜ | ರಾಸಂಧಚಕ್ರಿಯನುಜನು || ೧೫೩ ||

ಮಂದೈಸಿದ ರೋಷಾವೇದಿಂದ ಮು | ಕುಂದನೊಡ್ಡಿದ ಮೋಹರದ |
ನಂದನೆಂದೆಂಬ ನರೇಂದ್ರನೊಳಗೆ ಸಮ | ಸಂದಸಾಹಸದಿನಿದಿರ್ಚೆ || ೧೫೪ ||

ಪ್ರಕುಪಿತದಿಂದಾಶಂಕುಕರ್ಣಿಯನಾ | ಸಕಲಸೇನೆಯನೊಡವಂದ |
ಮಕುಟವರ್ಧನರನೆಲ್ಲರನಾನಂದನನು | ತ್ಸುಕವಿಕ್ರಮದಿ ಕೊಂದನಾಗ || ೧೫೫ ||

ಆ ಸಮಯದೊಳಂಬರಮಣಿಯಪರದಿ | ಶಾಸಾಗರದೊಳು ಹೊಗಲು |
ಆ ಸೇನೆಗಳು ಬೀಡಿಗೆ ಬಂದೊರಗಲಂ | ದೋಸರಿಸಿದುದಾ ರಾತ್ರಿ || ೧೫೬ ||

ಕುರುಪತಿಯಾದ್ರೋಣಂಗಾದ ಮರಣಕ್ಕೆ | ಪಿರಿದು ಚಿಂತಕ್ರಾಂತನಾಗಿ |
ಇರೆಕಂಡು ಕರ್ಣನಿಂತೆಂದನೆಲೇ ಭೂ | ವರ ಕೇಳೆನ್ನ ಬಿನ್ನಪವ || ೧೫೭ ||

ಧುರದೊಳಗಿದಿರಾದಾ ಪಾಂಡುಸುತರನು | ಪಿರಿದು ಕೋಪಾಟೋಪದಿಂದ |
ಸರಲ ಮೊನೆಗೆ ನಿಲ್ಲದಂತುಟು ಮಾಳ್ಪರಿ | ಬಿರುದಿನವರು ನಿನ್ನೊಳುಂಟು || ೧೫೮ ||

ಏಕಾಂಗವೀರರೇಳಿಗೆಯಸಾಹಸಿಗರು | ಲೋಕವಿನುತಭುಜಬಲರು |
ಆ ಕಾಲಗೆಣೆಯೆನಿಸುವ ಕೋಪಹೃದಯರ | ನೇಕರುಂಟು ನಿನ್ನೊಳಗೆ || ೧೫೯ ||

ಸೂರ್ಯನ ಮುಂದೆ ಸೊಡರೆ ನಿನ್ನೊಳಿರ್ದತಿ | ವೀರ್ಯರುಗಳ ಮುಂದೆನ್ನ |
ಶೌರ್ಯಮನುಸುರ್ವುದು ಮತವೇಯಪಗತ | ವೈಯವನೀಶಕದಂಬ || ೧೬೦ ||

ಎನ್ನ ಮೋಹರಕಿದಿರಾದೊಡೆ ನೀ ಮೊದ | ಲುನ್ನಿಸಿದಾವೈರಿಗಳ |
ಬನ್ನ ಬಡಿಸಿ ಹಿಡಿತಂದು ಬಿಡುಸುವೆನು | ನಿನ್ನ ಮೊದಲದುಃಖವನು || ೧೬೧ ||

ಎರಡು ಕಡೆಗೆ ಸರಿಯಾದ ಮರುಕವುರ್ಳಳ | ಗುರುಗಂಗಾತನುಜರನು |
ಮರಣವಡೆದರೆಂದೇಕೆ ಮರುಗವೈ | ಮರುಳತನದಿ ಮಹೀಪಾಲಾ || ೧೬೨ ||

ಬವರದ ಮೊನೆಗಿದಿರಾದ ಬಲಯುತ | ರವರಿವರೆಂದೆನಬೇಡ |
ಜವನಾಗಲಿ ಬವರದೊಳ್ಕೊಂದು ಮರುಳ್ಗಳ | ನಿವಹಕೌತಣವ ಮಾಡುವೆನು || ೧೬೩ ||

ಕೌಂತೇಯರುಗಿವುಂತೇಯರು ನನ್ನಸ್ತ್ರ | ಸಂತತಿಗಿದಿರಾಗಲಹುದೇ |
ಮಂತಣವನು ಬಿಟ್ಟು ಬರೆಯಿಸೆನ್ನೀಬಲು | ಪಂತದ ನುಡಿಯೆನೆಂದೆನಲು || ೧೬೪ ||

ಪರಮಾರ್ಥಮಿದು ತಪ್ಪದೆಂದು ಕೌರವನೃಪ | ವರನು ಕರ್ಣಗೆಯಾದಿನದ |
ಉರುತರವೀರಪಟ್ಟವ ಕಟ್ಟಿದನಾ | ಸುರುಚಿರತರವೈಭವದೊಳು || ೧೬೫ ||

ಈ ತೆರದಿಂ ಪಟ್ಟವಕಟ್ಟಿ ಬಳಿಕಾ | ಭೂತಳಪತಿ ಶಲ್ಯನನು |
ಪ್ರೀತಿಯಿಂದವೆ ಕರೆಯಿಸಿ ಸನ್ಮಾನಿಸಿ | ಮಾತನಿಂತೆಂದಾಡಿದನು || ೧೬೬ ||

ಹಿಂದೆ ಕರ್ಣನು ನೀನು ಕೈದೆಗೆದಿರ್ದುದ | ರಿಂದೆನ್ನ ತನುಜಾನುಜರು |
ಹೊಂದಿ ಕುಲಕಷಯಮಾಗಿ ನನ್ನೀನೇಳ | ಲೊಂದುತಾನೆ ನಿಂತುದೀಗ || ೧೬೭ ||

ಅಂತದರಿಂದಾನು ಜೀವಿಸುವುದು ಕಷ್ಟ | ವಂತಾತನುವ ನೀಗುವೆನು |
ಇಂತಿದು ನಿಜವೆಂದು ದುಃಖಿಸುತಾ | ಕಾಂತ ಮತ್ತಿಂತೆಂದನಾಗ || ೧೬೮ ||

ಎನಗೆ ನೀವೀರ್ವರೆರಡು ತೋಳೆರಡು ಕಣ್ಗ | ಳನಿತರಿಂದೀ ಪರಾಭವಮುಂ |
ಜನಜನಿತಮುಮಾಗಿ ನಿಮಗೆಲ್ಲದೆ ನನ | ಗಿನಿಸಿಲ್ಲ ನಿಶ್ಚಯಮಾಗಿ || ೧೬೯ ||

ಎಂದು ಕಣ್ಗಡೆಗುದಕವ ತೀವಿ ಕೂರುಗು | ರಿಂದ ಮಿಡಿವುತಿರ್ಪಾನೃಪನ |
ಅಂದವ ಕಂಡತಿಕಾರುಣ್ಯಹೃದಯನಿಂ | ತೆಂದುಸುರ್ದನು ಮಾದ್ರಿಪನು || ೧೭೦ ||

ಸತ್ತವರಿಗೆ ದುಃಖಿಸಲವರೇಳ್ವರೆ | ಯುತ್ತಮಸತ್ತ್ಜರಿಂತಿದನು |
ಚಿತ್ತಕ್ಕೆ ತಪ್ಪುದುಚಿತವೇ ಭೂಪಾ | ಲೋತ್ತಂಸ ಕೇಳು ಬಿನ್ನಪವ || ೧೭೧ ||

ಮೊನೆಯೊಳಗೆನಗಿದಿರಾದೊಡೆ ನೃಪ ನಿನ್ನ | ತನುಜಾನುಜರ ನೆಪ್ಪಿಂಗೆ |
ಅನುಮಾನವೇಕೆ ಪಾಂಡವರನೆಪ್ಪನು ನಿನ್ನ | ಮನಮೆಚ್ಚುವೊಲು ಕೊಂಬೆನೆನಲು || ೧೭೨ ||

ಆ ನುಡಿಯನು ಕೇಳಿ ಹರ್ಷೋತ್ಕರ್ಷನಂ | ದಾನೃಪನಿಂತುಸುರಿದನು |
ನೀನೆನಗುಳ್ಳವನಾದೊಡಿ ನಾನುಡಿ | ದೀ ನುಡಿದನು ಸಲಿಸುವುದು || ೧೭೩ ||

ಎಂದಾಮಾದ್ರೇಶನ ಕೈಯಿಂ ತಪ್ಪೆ | ನೆಂದೊಡಬಡಿಕೆಯ ಕೊಂಡು |
ಮುಂದಣ ಕಾರ್ಯಮನಿಂತಾನೃಪಕುಲ | ವೃಂದಾರಕನಾಡಿದನು || ೧೭೪ ||

ಇಂದಾಕದನಕರ್ಕಶಿ ಕರ್ಣನಾಪಾಂಡು | ನಂದನರನು ಕೊಲ್ವುದಕೆ |
ಸಂದೇಹಮಿಲ್ಲದರಿಂದಾತಗೆ ಮನ | ಸಂದು ಸಾರಥಿಯಾಗಬೇಕು || ೧೭೫ ||

ಆತಗೊಲಿದು ನೀನು ಸಾರಥಿಯಾಗಲ | ರಾತಿಗಳೆಂಬಡವಿಯನು |
ಮಾತೇನು ಮಿಗೆಸುಡುವಗ್ನಿಗನಿಲಲಕೂಡ | ದಾತೆರನಹುದು ನಿಶ್ಚಯದಿ || ೧೭೬ ||

ಎಂದು ಶಲ್ಯನನೊಡಬಡಿಸಿ ಕರ್ಣಗೆ ಮನ | ಸಂದು ಸಾರಥಿಮಾಡಲಿತ್ತ |
ಮುಂದೇತರವಿಕ್ರಮ ದೇವೇಂದ್ರನ | ನಂದನನಾಸುದ್ದಿಗೇಳಿ || ೧೭೭ ||

ಮಾತಾಳಿಗಳಪ್ಪ ಮಾಗಧರನು ಕರೆ | ದಾತುರದಿಂದೈದಿಸಲು |
ಆ ತರಣಿಜನೆಡೆಗೈದಿಯವನ ವಿ | ಖ್ಯಾತಿಯನಿರದೆ ಕೊಂಡಾಡಿ || ೧೭೮ ||

ಬಳಿಕಿಂತೆಂದರೆಲೇ ವಿಕ್ರಮಕುಲ | ತಿಲಕ ಕಿರೀಟಿ ತನ್ನೊಳಗೆ |
ಬಲಯುತನಾಗಿ ನಾಳಿನ ದಿನದೊಳಗಿನಿ | ಸಳುಕದೆ ಕಾದಬೇಕೆನಲು || ೧೭೯ ||

ಬಲಯುತನಾಮಾತಿಗೆ ನಸುನಗೆನಕ್ಕು | ಬಳಿಕೆಂದನಾನವರೋಗಿ |
ಎಳಸಿದುದನು ವೈದ್ಯನಿತ್ತಂತಾದುದು | ತಳುಕುವ ಬರಹೇಳೆಂದು || ೧೮೦ ||

ಪಲರನ್ನದೊಡವು ಪಲವು ದಿವ್ಯಾಂಬರ | ಪಲವು ನಾಣೆಯದ ಜಾಳಿಗೆಯ |
ತಲೆಹೊರೆಯಾಗುವಂದದಿನಿತ್ತು ಬೀಳ್ಕೊಟ್ಟು | ಕಲಿಕರ್ಣನಿಂತೆಣಿಸಿದನು || ೧೮೧ ||

ಅಧಟರವರು ಪಾಂಡವರೆನಗುನುಜಾತ | ರದರಿಂದಿವರ ನಾನಿರದೆ |
ಕದನದೊಳಗೆ ಕೊಂದೊಡೆ ಪಾಪ ಸಂಭವಿ | ಪುದಕೆ ಸಂಶಯಮಿನಿಸಿಲ್ಲ || ೧೮೨ ||

ಆದೊಡೇನೋ ಕುರುಪತಿಯೆನ್ನನುರೆ ನಂಬಿ | ಯಾದರದಿಂದ ರಾಜ್ಯವನು |
ಆ ದಾಯಾದ್ಯರಿಗಿತ್ತುದಿಲ್ಲದರಿಂ | ಕಾದಬೇಕೆಂದಿನಸುತನು || ೧೮೩ ||

ಎರಡಕ್ಕೆ ಬಿಟ್ಟ ಕರುವಿನಂದವ ಅವನವ | ಧರಿಸಿ ಮತ್ತಿಂತೆಣಿಸಿದನು |
ಅರಸಿತ್ತ ಜೋಳದ ಪಾಳಿಗೆನ್ನಸುವನು | ಪರಿಹರಿಸಿಯೆ ಕೀರ್ತಿವಡೆವೆ || ೧೮೪ ||

ಎಂದು ನಿಶ್ಚಯಿಸಿ ನಿದ್ರೆಯೊಳಿರಲಾ ಅರ | ವಿಂದಬಾಂಧವನುದಯಿಸಲು |
ಮಂದರಧೀರಮಗಧಮಂಡಳೇಶ್ವರ | ಮಂದೈಸಿದ ಕೋಪದಿಂದ || ೧೮೫ ||

ವೀರಜಯದ್ರಥನೆಂಬವನನು ಕರೆ | ದೀರಣಕಧಿಕ ನೀನಾಗಿ |
ಆರೈಯದೆ ಕಾದುವುದೆನುತ್ಮದ | ವಾರಣಮಸ್ತಕವೇರಿ || ೧೮೬ ||

ಧುರಧರೆಗೆಯ್ತರಲವಗೆ ಸಂಪ್ರೀತಿಯಿಂ | ಮುರವೈರಿ ಪದ್ಮನೆಂಬವನ |
ಇರಿಸಿ ತನ್ನಾ ಮೋಹರದೊಳು ತಾನತಿ | ಭರದಿಂದಿರಲಿನಸುತನು || ೧೮೭ ||

ನಿರ್ವರ್ತಿತಜಿನಪೂಜಾರಪರಿಕರ | ಸರ್ವಾಭರಣಭೂಷಿತನು |
ಗರ್ವಿತನಾವಜ್ರಕವಚವ ತೊಟ್ಟುಮ | ಗುರ್ವಿಪಮಣಿರಥವೇರಿ || ೧೮೮ ||

ನಿಲೆ ಕರ್ಣ ನಿನ್ನ ಚಾಗಕೆ ನಿನ್ನ ನೆಲೆವೆತ್ತ | ಕಲಿತನಕಾರೆಣೆಯೆಂದು |
ಉಲಿವ ಭಟ್ಟರ ಬಳಗಗಳಿಂದ ಬವರದ | ನೆಲಕೆ ಬರಲು ಬಳಿಕಿತ್ತ || ೧೮೯ ||

ಗಂಡರಗಂಡನುದ್ದಂಡನರ್ಜುನವಜ್ರ | ದಂಡೋಪಮಗಾಂಡಿವವ ||
ಕೊಂಡು ರಥವನೇರಿ ನಡೆತಂದನು ರಣ | ಮಂಡಲವದಿರುವಂದದೊಳು || ೧೯೦ ||

ಅರಿನೃಪವಿಪಿನದಾವಾನಲ ವೈರಿಭೂ | ವರವಂಶವಂಶಕುಠಾರ |
ಪರಭೂಪಾನ್ವಯಕರಿಹರಿಯೆಯ್ದಿದ | ನುರುವಿಕ್ರಮಿಯರ್ಜುನನು || ೧೯೧ ||

ಇದು ಜಿನಪದಸರಸಿಜಮದುಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದುವಿಪ್ಪತ್ತೊಂಬತ್ತಾಶ್ವಾಸ || ೧೯೨ ||

ಇಪ್ಪತ್ತ ಒಂಬತ್ತನೆಯ ಸಂಧಿ ಸಂಪೂರ್ಣಂ