ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಚಂಡಾಸಾಹಸಿ ಕರ್ಣನ ಮೂರುಲೋಕದ | ಗಂಡನರ್ಜುನನ ಬಿನ್ನಣದ |
ಬಂಡಣವನು ನೋಳ್ಪೆವೆಂದು ಮರುತ್ಪಥ | ಮಂಡಳಕಮರರೆಯ್ದಿದರು || ೨ ||

ಸಮರಸಮಯಸಮವರ್ತಿ ಕಿರೀಟಿಯು | ತ್ತಮ ಸತ್ತ್ವ ಸೂರ್ಯಸುತನಾ |
ರಮಣೀಯಮಪ್ಪ ರಣವ ನೋಳ್ಪೆವೆಂದು ಸಂ | ಭ್ರಮದಿನುರಗರೆಯ್ದಿದರು || ೩ ||

ಎಕ್ಕತೂಳದಬಂಟನಾಫಲ್ಗುಣನ ರಣ | ರಕ್ಕಸನಾರವಿಸುತನ |
ಎಕ್ಕಟಿಗಾಳೆಗವನು ನೋಳ್ಪೆವೆಂದು ನ | ಭಕ್ಕೆ ಜೋಯಿಸರೆಯ್ದಿದರು || ೪ ||

ಈ ತೆರದಿಂದವರೀಕ್ಷಿಸುತಿರಲತ್ತ | ಲಶತುಂಗವಿಕ್ರಮಾನ್ವಿತರು |
ಚಾತುರ್ದಂತವಾಹಿನಿಗೂಡಿಯಾಹವ | ಭೂತಳದೊಳಗೊಡ್ಡಿನಿಂದು || ೫ ||

ಅಂತಕನಿಭಕೋಪಯುತರವರೀರ್ವರು | ತಂತಮ್ಮ ನಿಜಪಾತಕಿನಿಯ |
ತಿಂತಿಣಿಗಿರದೆ ಕೈವೀಸಿದೊಡಂದಿನಿ | ಸಂತರಿಸದೆ ತಾಗಿದುದು || ೬ ||

ದಿಟಗಲಿತನದಿಂದಾ ಸುಭಟಶತ | ಭಟ ಲಕ್ಷಭಟ ಕೋಟಿಭಟರು |
ಪಟುಗಳವರ ತಂತಮ್ಮೊಳು ಖಟಿಪಟಿ | ಛಟಿಲೆಂದು ಮಿಗೆ ತಾಗಿದರು || ೭ ||

ಪ್ರಳಯದ ಪಗಲಪಣೆಯ ಲೋಚನನು ತ | ಪ್ಪಳೆಗುಟ್ಟಿದಂದದಿ ತಾಗಿ |
ಮುಳಿಸಿಂ ಮುಂದಲೆಮುಂದಲೆವಿಡಿದ | ಗ್ಗಳದ ಭಟರು ಕಾದಿದರು || ೮ ||

ಅಂಬರಕಾರುತೇಳುವ ರುಂಡಗಳ ನಿಕು | ರಂಬ ಮುಗ್ಗಿರಿವ ಮುಂಡಗಳು |
ತುಂಬಿಪರಿವನೆತ್ತರ ತೊರೆ ಸೀಳ್ದು ಸೀ | ರುಂಬುಗಳಾದುವು ಕರುಳುಗಳು || ೯ ||

ಬಲ್ಲಬಿನ್ನಾಣಿಗರೆಚ್ಚಾರುಂಡಗಳೆಡೆ | ವಿಲ್ಲದೆ ನಗೆದು ಬೀಳ್ವಾಗ |
ಸಲ್ಲೀಲೆಯಿಂ ಧುರಧುರಣೀಸತಿ ತಿರಿ | ಕಲ್ಲಾಡುವ ತೆರನಾಯ್ತು || ೧೦ ||

ಮರಣವ ಹಡೆದ ಮಹಾಭಟರೊರಗಿದ | ಹರಿಗೆಗಳತಿರಂಜಿಸಿದುವು |
ಹರಿಸದಿ ಮಿಳ್ತು ಕಾಲಂಗೆಡೆಮಾಡಿದ | ಪರಿಯಣಗಳಿವೆಂಬಂತೆ || ೧೧ ||

ಕಿಳ್ತ ಕಣೆಯ ಗಾಯದಿ ಮೈಯ ಕೆಂಪಿನ | ನೀರ್ತಡೆಯದೆ ಚಿಮ್ಮಿದುದು |
ಅಳ್ತಿಯಿನರುಣಾಂಬುವಿಂದೋಕುಳಿಯನಾ | ಮಿಳ್ತುವಾಡುವ ತೆರನಾಗಿ || ೧೨ ||

ಕರುಳಬಳಗ ಬಳ್ಳಿವರಿಯಲು ಮಿದುಳ್ಗಳ | ತೊರಳೆ ಕೆದರೆಯೆಡೆವಿಡದೆ |
ಭರದಿಂದಾಯೆಕ್ಕತುಳದ ಭಟಾನೀಕ | ವುರುಳ್ದುದು ನಿಮಿಷಮಾತ್ರದೊಳು || ೧೩ ||

ಆ ಸಮಯದೊಳು ಶಕುನಿ ತನ್ನಯಗುರ್ವಿಸು | ವಾಸಾಮಜಸೇನೆವೆರಸು |
ಮಾಸಂಕದಿಂದ ಪಾಂಡವಸೇನೆಗಿದಿರಾಗೆ | ಸಾಸಿಗನಾ ಭೀಮಸೇನ || ೧೪ ||

ಭಾಂಡದ ಬೋನದ ಬಳಗಕ್ಕೆ ಬಲ್ದಿಡಿ | ಗೊಂಡಂದದಿ ಘನಗದೆಯ |
ಕೊಂಡು ಲೆಕ್ಕಕೆ ಬಾರದ ಗಜಘಟೆಗಳ | ಮಂಡೆಯೆಲ್ಲವ ಹುಯ್ದನಾಗ || ೧೫ ||

ನೆತ್ತಕ್ಕೆ ಪ್ರತಿನೆತ್ತವಾಡಲು ಬನ್ನಿಮೆ | ನುತ್ತ ಕೌರವನ ಮೂದಲಿಸಿ |
ಎತ್ತಿಹಾಕುವ ಡಾಳವೆನಲಾನೆಯ ಕೊಂಬ | ನೊತ್ತಿ ಕಿಳ್ತಾಭೀಮನಿಟ್ಟು || ೧೬ ||

ಕೆಲವಾನೆಯ ಬರಿಕೈವಿಡಿದವರಿಂ | ಕೆಲವಾನೆಯನಪ್ಪಳಿಸಿ |
ಕೆಲವಾನೆಯಕೊಂಬ ಕಿಳ್ತಾಗಸಕಿಟ್ಟು | ಕೆಲವಾನೆಯ ನುಗ್ಗುಗುಟ್ಟಿ || ೧೭ ||

ಭೀಮಗದಾಪಾತದಿನಡಿ ಮೇಲಾಗಿ | ಯಾಮಹಿಯೊಳು ಬಿಳ್ದೆಸೆದ |
ಸಾಮಜಕುಂಭವಂತಕಗೆಯಡುಗೆ ಮಾಡು | ವಾ ಮಡಕೆಯ ಸಾಲ್ಗಳಂತೆ || ೧೮ ||

ಸಂಬಾರವಿಟ್ಟಂತಕಗಡುವಡಗಿನ | ಕುಂಭಗಳೆನ ಭೀಮ ಹೊಯ್ದ |
ಕುಂಭಿಯ ಕುಂಭಗಳಡಿಮೇಲ್ವಡೆದು ರಣ | ಕುಂಭಿನಿಯೊಳು ಬಿಳ್ದುವಾಗ || ೧೯ ||

ಮದಗಜಮಸ್ತಕವಡಿಯಾಗಲು ಮೇಗ | ಣಧಟರುಗಳ ಸದೆಬಡಿವ |
ಗದೆಯೆ ಕೊಡತಿಯಾಗಲು ಭೀಮಸೇನನೊ | ಪ್ಪಿದನಾ ಕಮ್ಮಾರನಂತೆ || ೨೦ ||

ಇಂತು ಕೊಲಲು ಕಂಡು ಶಕುನಿಯನಿಲಜನ | ನಂತರಿಸದೆ ಬಂದು ತಾಗೆ |
ಮುಂತುವರಿದು ಸಾಳುವನು ಶಕುನಿಯ ಮುರಿ | ವಂತೆ ಮುರಿದು ಕೊಂದನಾಗ || ೨೧ ||

ಬಳಿಕ ಭೀಮನ ಪಿಂತಿಕ್ಕಿ ಗಾಂಡೀವವ | ತಳೆದು ಮುನಿದು ಫಲುಗುಣನನು |
ಪ್ರಳಯರುದ್ರನವೊಲಿರ್ದಾ ಕರ್ಣಗಿದಿರಾಗಿ | ಹಳಚಿದನತಿ ವೇಗದೊಳು || ೨೨ ||

ಸಿಡಿಲು ಸಿಡಿಲರವದೊಲಗೊಡವೆರೆವಂತೆ | ಕಡುಗಲಿ ಕರ್ಣಾರ್ಜುನರು |
ಪಿಡಿದು ಕೋದಂಡಕೆ ತಿರುವಿಟ್ಟು ನೀವಿ ಜೇ | ವಡೆಯ ಬಲ್ದನಿಗಳೊಪ್ಪಿದುವು || ೨೩ ||

ಆನದೆಯಾವಿಧದಿಂ ನಿಂದು ಶರಸಂ | ಧಾನವ ಮಾಡಿ ಕೋಪದೊಳು |
ಭೂನುತರೆಸಲು ನಭೋಮಾರ್ಗದೊಳು ಬಲು | ಸೋನೆ ಸುರಿವ ತೆರನಾಯ್ತು || ೨೪ ||

ಎಡಗಡೆಯೊಳಗವರೆಚ್ಚ ಬಾಣದ ಮೊನೆ | ಯಡಸಿತಾಗಲು ಜನಿಯಿಸಿದ |
ಕಿಡಿಯುರಿಹೊಗೆಯೆಸೆದುದು ತ್ರಿಪುರವನಾ | ಮೃಡ ಸುಡುವುರಿ ಹೊಗೆಯಂತೆ || ೨೫ ||

ಇಂತು ಕೆಲವು ಹೊತ್ತು ಸಾಧಾರಣ ಶರ | ಸಂತತಿಯಿಂದೆಚ್ಚಾಡಿ |
ತಂತಮ್ಮೊಳೋರೋರ್ವರು ಭೇದಿಸಬಾರ | ದಂತಕನಿಭಕೋಪದಿಂದ || ೨೬ ||

ಕರಿಕರಾನುಕಾರಿಯಪ್ಪ ಕೈಯಿಂ ದಿವ್ಯ | ಶರವ ತೆಗೆದು ತೊಟ್ಟು ಬಳಿಕ |
ವರ ಮಂತ್ರಪೂರ್ವಕದಿಂ ಕರ್ಣನೆಸೆದ ದ | ಳ್ಳುರಿಯ ಬಳಗದಂತೆ ಬರಲು || ೨೭ ||

ನರನದನಂಬುಧಿಶರದಿಂ ಮುನಿದೆಸೆ | ಪಿರಿದು ಕೋಪದಿನಿಸುತನು |
ಗಿರಿಯ ಬಾಣದಿನೆಸಲಂತದನಾ ವಜ್ರ | ಶರದಿನದನು ಖಂಡಿಸಲು || ೨೮ ||

ಕಡು ಮುನಿದುರಗಾಸ್ತ್ರವನು ತಿರುವಿನೊಳ | ಗಿಡಲು ಮತ್ತಾವದನದೊಳು |
ಅಡಸಿದ ವಿಷದ ದಳ್ಳುರಿ ನೋಡುವ ಮೇ | ಗಡೆಯಮರರನಳರಿಸಿತು || ೨೯ ||

ಕುರುಬಲಕುಬುಬೆಂದು ಕೂಗಲು ಕೌಂತೇಯ | ರುರುಬಲ ತಬ್ಬಿಬ್ಬುಗೊಳಲು |
ತರಣಿತನುಜನಾಫಣಿಯ ಬಾಣವನಾ | ನರನಮೇಲಿರದೆಚ್ಚನಾಗ || ೩೦ ||

ಕಡೆಯ ಕಾಲದೊಳು ಕಪರ್ದಿ ಕನಲಿ ತನ್ನ | ತೊಡವಿನ ಕಾಳಸರ್ಪನನು |
ಬಿಡಲದು ಬರ್ಪಂದದಿನೆಸಲಾ ಕಣೆ | ಘುಡುಘುಡಿಸುತ ನಡೆತರಲು || ೩೧ ||

ಈ ಪರಿವರೆವಹಿಶರವನು ಕೋಪಾ | ಟೋಪದಿಂ ಗರುಡಾಸ್ತ್ರದಿಂದ |
ಆ ಪಟುಭಟಪಾರ್ಥನೆಸೆಯೆ ಪಾಂಡವರ ಪಕ್ಕ | ದಾ ಪಡೆಯಿರದಾರಿದುದು || ೩೨ ||

ಇಂತಿನಸುತನೆಚ್ಚ ದಿವ್ಯ ಶಿಳೀಮುಖ | ಸಂತತಿಯನು ಕಡುಪಿಂದ |
ಅಂತರಿಸದೆ ಪ್ರತಿವಿದ್ಯಾಶರದಿ ವಿ | ಕ್ರಾಂತಿವಿನೋದಿ ಗೆಲಿದನು || ೩೩ ||

ಅದನು ಕಂಡತಿ ಕೋಪದಿಂದ ವರೂಥವ | ನೊದವಿ ನೂಂಕಿ ರವಿಸುತನು |
ಮದವೆತ್ತ ಮುನಿಸಿಂದವೆ ತೆಗೆದಿಡಲವ | ನೆದೆಗೆಯಮೋಘ ಶಕ್ತಿಯನು || ೩೪ ||

ಕಡುಪಿಂದಾಪಾರ್ಥನಾಶಕ್ತಿಯನೆಡ | ಗಡೆಯೊಳು ದಿವ್ಯಾಸ್ತ್ರದಿಂದ |
ಕಡಿಖಂಡ ಮಾಡಲದಕೆ ಮನದೊಳು ಮುನಿ | ಸಡಸಿ ಮತ್ತಾಕಲಿಕರ್ಣ || ೩೫ ||

ನೆಲನುಮನಾದೆಸೆಯುಮನಾಗಸಮುಮ | ನಲಸದೆ ದಂದಹ್ಯಮಾಳ್ಪ |
ನೆಲೆಯಾದಗುರ್ವಣೆಯನು ತೋರುತಿರ್ಪ | ಗ್ಗಲಿಕೆಯ ಕಾಲಾಗ್ನಿಶರವ || ೩೬ ||

ಕನಲಿಯೆಸುವೆನೆಂದು ತೆಗೆದು ಬಳಿಕ ನಿಜ | ಜನನಿಗೆ ರಣರಂಗದೊಳಗೆ |
ಅನುಜರ ಮೇಲೆ ದಿವ್ಯಾಸ್ತ್ರವ ತೊಡುವುದಿ | ಲ್ಲೆನುತ ಭಾಷೆಯ ಮಾಡಿದೆನು || ೩೭ ||

ವನನಿಧಿ ಮೇರೆದಪ್ಪಿದೊಡೆನ್ನ ನುಡಿಯನೊಂ | ದಿನಿಸು ಮೀರುವುದಿಲ್ಲವೆಂದು |
ಘನಮಹಿಮನು ಸುಮ್ಮನಿರೆ ಕಂಡು ವಾಸವ | ತನುಜನಿಂತೆಂದಾಡಿದನು || ೩೮ ||

ಏನಿನಸುತ ನಿನ್ನ ನೆರೆಮೆಚ್ಚಿ ಕೌರವ | ಭೂನಾಥನಿರಲದನರಿದು |
ಹೀನರಂದದಿ ಸಮ್ಮನೆಯಿರ್ದಪೆ | ನೀನೆನ ನಸುನಗುತ || ೩೯ ||

ಇನ್ನೆನ್ನ ಕೈಯ ಪರಿಯ ನೋಡು ನೋಡೆಂ | ಬನ್ನಗಮಾಸೂತಶಲ್ಯ |
ತನ್ನ ವಿದ್ಯಯೊಳು ರಥವ ಜೋಡಿಸಿದನು | ಭಿನ್ನವಿಲ್ಲಿಳೆಯೆಂಬಂತೆ || ೪೦ ||

ಎಲ್ಲಿ ನೋಡಿದೊಡಲ್ಲಿ ಕರ್ಣನ ರಥವೇ | ನಿಲ್ಲದೆ ಪೂರಿಸಿದಂತೆ |
ಬಲ್ಲಿತಾಗಿಯೆ ಮುಸುಕಲು ಕಂಡು ಭಾರತ | ಮಲ್ಲನೆಯ್ದಿದನು ವಿಸ್ಮಯವ || ೪೧ ||

ಎಣಿಕೆಯೇತಕೆ ಶಲ್ಯನೆಸಗಿದ ಬಹುರೂ | ಪಿಣಿಯೆಂಬ ವಿದ್ಯಯಿಂದವನ |
ರಣದೊಳು ಮೊದಲು ಕೊಂದೊಡೆ ಕರ್ಣನನೀ | ಕ್ಷಣದೊಳು ಸೋಲಿಸಬಹುದು || ೪೨ ||

ಎಂದ ಸಾರಥಿ ಕೃಷ್ಣನಾಗ ನಿವೇದಿಸಿ | ದಂದವಕೇಳಿ ಕಿರೀಟಿ |
ನಿಂದು ಕೋಪದೊಳನ್ಯವಿದ್ಯಾಪಹಾರಿಯೆಂ | ಬೊಂದು ದಿವ್ಯಾಸ್ತ್ರಮನೆಸಲು || ೪೩ ||

ಆ ರವಿಸುತನೇರಿ ಬಹುರೂಪುವಡೆದಾ | ತೇರಾಗ ಬಯಲಾಯ್ತಿರದೆ |
ವೀರಕಿರೀಟಿ ಮುಂದಕೆ ರಥವನು ಸಾರ್ಚಿ | ಯಾರಿಕುಬುಬುಕುಬುಬೆಂದು || ೪೪ ||

ಮತ್ತೊಂದು ಹರೆಯ ಬಾಣವನೆಸಲಾ ವಿಕ್ರ | ಮೋತ್ತಂಸ ಶಲ್ಯನ ಕೊರಲು |
ಕತ್ತರಿಯೊಳಗರಿವಂದದಿನರಿದು ವಿ | ಯತ್ತಳಕಾಗಿ ಪಾರಿದುದು || ೪೫ ||

ಆ ಶಲ್ಯನ ಸಾವ ಕಂಡತಿರೋಷಾ | ವೇಶನಾಗಿ ಲಯದಿನದ |
ಈಶನಂದದಿ ಶರದೊಟ್ಟಂಗದೇಶಾ | ಧೀಶನೆಸುವ ಸಮಯದೊಳು || ೪೬ ||

ಅಧಟರದೇವನರ್ಜುನನೊಂದು ದಿವ್ಯಾ | ಸ್ತ್ರದಿನೆಸಲಾರವಿಸುತನ |
ಸದಮಲಮಣಿಮಯಕುಟಹರಿದು ನೆಲ | ಕುರುಳಿತು ನಿಜಬಲ ಬೆದರೆ || ೪೭ ||

ಪರಿರಂಜಿಸುವ ಪಶ್ಚಿಮಗಿರಿಶಿಖರದಿ | ನುರುಳ್ವ ಚೆನ್ನೇಸರಂದದೊಳು |
ನರನ ಶರದಿನಿನನಂದನನಿಕ್ಕಿದೆ | ಶಿರದ ಮಕುಟ ಬಿಳ್ದುದಾಗ || ೪೮ ||

ಕುರುಭೂಪನ ಜಯಲಕ್ಷ್ಮೀಮಂಟಪ | ವಿರಚಿತ ನವಮಣಿಕಳಶ |
ಉರುಳ್ವಂತಾನರಶರಪಾತದಿನಿಳೆ | ಗುರುಳ್ದುದವನ ಮಣಿಮೌಳಿ || ೪೯ ||

ಕುರುಕುಂಭಿನೀಶನ ಕೃತಪುಣ್ಯಪುಂಜದ | ಭರಣಿಯ ಮುಚ್ಚುಳುರುಳ್ವ |
ಪರಿಯೆನಲಾಕರ್ಣನ ಮಸ್ತಕದಿಂ | ದಿರದುರುಳಿತು ಮಣಿಮಕುಟ || ೫೦ ||

ಧೃತರಾಷ್ಟ್ರಸುತನ ಧೈರ್ಯದ ಸೆಂಡ ಹೊಡೆದಿಂದ್ರ | ಸುತನಸ್ತ್ರಮೆಂಬ ಸೆಳೆಯೊಳು |
ಕ್ಷಿತಿಯೊಳಗೊಡ್ಡಿತೋರಿದವೊಲುನಿಂದಿನಿ | ಸುತನ ಕಿರೀಟಮೊಪ್ಪಿದುದು || ೫೧ ||

ಸುತನ ಪರಾಭವವನು ಡು ಕುಸಿಯಲು | ನ್ನತಿಕೆಯಿಂದಿರಲಾಗದೆಂದು |
ಅತಿ ವೇಗದಿಂ ಪೋದಂತೆ ಪಿಂಗಡಲೊಳು | ಶತಪತ್ರಸಖನಸ್ತಮಿಸಿದ || ೫೨ ||

ಆ ಪದದೊಳಗಪಹಾರತೂರಿಯಮುಣ್ಮ | ಲಾಪಡೆಗಳು ತಂತಮ್ಮ |
ಆ ಪಾಳಯಕೆಯ್ದಲಾಕರ್ಣನಪಗತ | ಕೋಪಹೃದಯನಿಂತೆಣಿಸಿದ || ೫೩ ||

ಅಣಿಯರರೊಳಗೆಲ್ಲರು ಕಾಣ್ಬಂತೆನ್ನ | ಮಣಿಮಕುಟಕೆ ಭಂಗಮಾಯ್ತು |
ರಣರಸಿಕರ್ಗಿದು ಸಾವಲ್ಲವೆಯೆಂ | ದೆಣಿಸಿ ನಿಶ್ಚಲಚಿತ್ತನಾಗಿ || ೫೪ ||

ಎನಗಿನ್ನುಭಯಪರಿಗ್ರಹಬಂಧನ | ವನುಚಿತವೆಂದು ಭಾವಿಸುತ |
ಜನನುತಮಪ್ಪ ಸುದರ್ಶನಮೆಂಬೊಂದು | ವನಕಾರಾತ್ರಿಯೊಳೆಯ್ದಿ || ೫೫ ||

ವಿನಮಿಸಿದಮವರರೆಂಬ ಮುನೀಶರ್ಗೆ | ವಿನಯದಿ ಬೇಡ ದೀಕ್ಷೆಯನು |
ಜನಪತಿ ನಿನಗೊಂದೇ ತಿಂಗಳಾಯುಷ್ಯ | ವೆನುತ ಕೊಟ್ಟರು ಕರುಣದಲಿ || ೫೬ ||

ಆ ದೀಕ್ಷೆವಡೆದು ಸನ್ಯಸನವ ಕೈಕೊಂ | ಡಾದಿನಪರಿಯಂತರಿರ್ದು |
ಆ ದೇಹವನು ಬಿಸುಟು ಸ್ವರ್ಗದೊಳು ದೇವ | ನಾದನವನಿ ಪೊಗಳ್ವಂತೆ || ೫೭ ||

ಕರ್ಣನುತ್ತಮಸಂಯಮದೊಳಗಾಯುಸಂ | ಪೂರ್ಣಮಪ್ಪನ್ನೆಗಮಿರಲು |
ಕರ್ಣಸ್ಥಲಿಯೆಂದೆಂಬ ಹೆಸರನಭಿ | ವರ್ಣಿಪುದಾನಂದನವನು || ೫೮ ||

ಬಳಿಕಿತ್ತಲಾ ಇರುಳೊಳು ಕುರುಭೂಪತಿ | ಜಲಧಿ ಮೇಗಡೆ ಕವಿಯಂತೆ |
ಬಲಯುತ ಕರ್ಣನಗಲ್ಕೆಯೊಳಗೆ ಬೆ | ಬ್ಬಳವೋಗಿ ಮೈಮರೆದಿರ್ದು || ೫೯ ||

ಬೆಳಗುಜಾವದೊಳು ಕೃಪಾಚಾರ್ಯನು ಕೂಡಿ | ಛಲದಂಕನಾತನ್ನ ಕಡೆಯ |
ಬಲವರಿಯದವೊಲು ಬಹುರೂಪಿಣಿಯೆಂ | ಬಿಳೆಗೆವೆಗ್ಗಳದ ವಿದ್ಯೆಯನು || ೬೦ ||

ಆಸಕ್ತಿಯಿಂ ಪೋಗಿ ಸಾಧಿಸಲೆಂದಾ | ವೈಶಂಪಾಯನಮೆಂಬ |
ಕಾಸಾರಕೆ ಪಿಂತು ಮುಂತಾಗಿ ನಡೆತಂ | ದೋಸರಿಸದೆ ತಡಿಗೆಯ್ದೆ || ೬೧ ||

ಎನ್ನ ಕುಲದ ರಾಯನಸಹಾಯನಾಸ ನಾ | ನಿನ್ನು ಗರ್ಭೀಕರಿಸುವೆನು |
ತನ್ನನೆಂದೆನುತಾಗಸದಿನಿಳೆಗಿಳಿದಿಂದು | ವನೆನೆಯಿಸಿತಾಸರಸಿ || ೬೨ ||

ಪರಿಹರವನು ಮಾಡು ಛಲವನು ನಿನ್ನ ಸೋ | ದರರೊಳೆನುತ ಬೇಡಿಕೊಂಬಾ |
ಪರಿಯೆನೆ ಸರಸಿಯ ತೆರೆ ತಡಿಗೆಯ್ತಂ | ದರಸನ ಕಾಲ್ಗೆರಗಿದವು || ೬೩ ||

ಒಸೆದು ಕೊಳನ ಹೊಗುವಡೆಯೊಳು ನೀರ್ವೂವಿ | ನೆಸಳಿಂದೇಳ್ವಳಿವಿತತಿ |
ವಸುಧೀಶನಪಕೀರ್ತಿವಲ್ಲಿಯ ಫಲಮಾ | ಗಸಕೆ ಹಾರುವ ತೆರನಾಯ್ತು || ೬೪ ||

ದ್ರೋಹಿಯಿವನು ಹೊಕ್ಕು ಕೊಳದೊಳಗಿರೆ ನಮ | ಗಾ ಹೆಸರೇ ಬಪ್ಪುದೆಂದು |
ಊಹಿಸಿ ತೋರುವಂದದಿ ಹಾರಿದುವಂ | ದಾಹಂಸತತಿಯಾಗಸಕೆ || ೬೫ ||

ಕುಲವನೆಲ್ಲವನೀ ತೆರದಿಂದ ನೀರೊಳು | ನೆಲೆಯಾಗಿ ನೆರಪಿದೆನೆನ್ನ |
ಛಲದಿನೆನುತ್ತದನಭಿನೈಸುವಂತೆ ನೀ | ರ್ನೆಲೆಗೈದಿದನಾ ನೃಪತಿ || ೬೬ ||

ಮೈಯ ಹತ್ತಿದ ಮಹದೈಶ್ವರ್ಯಮನಾ | ರಯ್ಯದೆ ತಜ್ಜಲದೊಳಗೆ |
ಕೈಯಾರೆ ತೊಳೆವಂದದಿ ಹೊಕ್ಕನಾ ಬಲು | ಗೈಯ ಕೌರವಭೂವರನು || ೬೭ ||

ಕೊಳಗುಳದೊಳು ಸತ್ತ ತನುಜಾನುಬಂಧು | ಗಳಿಗೆಲ್ಲೊಂದೇ ಬಾರಿ |
ತಳುವದೆ ನೀರಿಳಿವಂದದಿನಾಕೊಳ | ದೊಳಹೊಕ್ಕನಾನೃಪವರನು || ೬೮ ||

ಕಾಲಾವಧಿ ಬರ್ಪನ್ನೆಗಮಾಪಾ | ತಾಳದೊಳೊಗೆದು ಕುಳ್ಳಿರ್ದಾ |
ಕಾಲಾಗ್ನಿರುದ್ರನಂತಾನೀರಮಡುವಿನೊ | ಳಾಳಿ ತನ್ನೃಪನಿರ್ದನಾಗ || ೬೯ ||

ಪದೆದು ಜಲಸ್ತಂಭಮಂತ್ರದುಚ್ಚರಣೆಯ | ನದರ ಮಡುವಿನೊಳಹೊಕ್ಕು |
ಅದನುರಗೇಂದ್ರಪತಾಕ ಸಾಧಿಸುತಿರ | ಲುದಯವಾದುದು ರವಿಬಿಂಬ || ೭೦ ||

ಇತ್ತಲು ಮಗಧಮಹಿಮಪತಿಯಾಪುರು | ಷೋತ್ತಮರಾನಿಜಬಲದ |
ಮೊತ್ತದರಸುಗಳ ಮೋಹರಗೂಡಿ ಸು | ಪತ್ತಿಯಿಂದೊಡ್ಡನೊಡ್ಡಿದರು || ೭೧ ||

ಕುಲಪತಿಯಾಮೋಹರದೊಳಿಲ್ಲದುದನು | ಧುರಧೀರರಾ ಪಾಂಡವರು |
ನಿರುತಮರಿದು ಕಡು ಚದುರರೆನಿಸುವನು | ಚರರನಲ್ಲಿಗೆಯಟ್ಟಿದರು || ೭೨ ||

ಅನಿತರೊಳೋರ್ವನು ವೈಶಂಪಾಯನ | ವನಜಾಕರಕೆ ಕೌರವನು |
ಇನನುದಯಕೆ ಮುಂಚೆ ಪುಗುವುದ ಕಂಡಾ | ಮನಜೇಶರೊಳುಸುರಿದನು || ೭೩ ||

ಕೊಳದೊಳು ನಿಜರಿಪುವಿರ್ದುದನರಿದಾ | ಗಳೆ ಭೀಮನತಿಭೀಮನಾಗಿ |
ಬಳಿವಳಿಯೊಳಗಗ್ರಜಾನುಜರೆಯ್ತರೆ | ವಿಲಯಭೈರವನಂದದೊಳು || ೭೪ ||

ಕೆಳಲಿಬಂದಾ ಕೊಳನನು ಮುತ್ತಿ ಸಿಡಿಲಜಂ | ಗುಳಿಯಂದದಿ ಪರೆಗಳನು |
ಮೊಳಗಿಸಿಯಾನೀರ ಹೊಕ್ಕು ಕೊಲುವೆನೆಂದು | ಮುಳಿಸಿಂದಾತಡಿಗೆಯ್ದಿ || ೭೫ ||

ನಿಂದು ಗರ್ಜಿಸುವಸಮಯದೊಳಗಾಧರ್ಮ | ನಂದನನಿಂತಾಡಿದನು |
ಸಂದಸಾಹಸಯುತರಿಗೆ ನೀರ್ವೊಕ್ಕರ | ಕೊಂದೊಡೆ ಕೊರತೆಯಾಗುವುದು || ೭೬ ||

ಇಂತು ನುಡಿಯಲನುಜಾತರು ಕೈಮುಗಿ | ದೆಂತಾನುತೆರದಿ ಬಲ್ವಗೆಯ |
ಅಂತರಿಸದೆ ಕೊಲುವುದು ನಯಮೆನಲು ಕೃ | ತಾಂತರಂಗನು ಧರ್ಮಸೂನು || ೭೭ ||

ಇನ್ನೇಕನುಜರಿರಾಧರೆಯರಿವಂತೆ | ಮುನ್ನಲೆನ್ನಾನನ್ನಿಯನು |
ಚೆನ್ನಾಗಿ ಪಾಲಿಸಿದಿರಿ ಬಳಕೀಕೃತ್ಯ | ಮನ್ನೆನೆವುದು ನೀತಿಯಲ್ಲ || ೭೮ ||

ಎನುತ ಮಾತಾಡಿದಗ್ರಜನ ಮಾತನು ಮೀರ ದನಿಲಜನದನೆ ಕೈಕೊಂಡು |
ಮುನಿಸಿಂದ ಕೊಳದ ತಡಿಗೆ ಬಂದು ಭೀಕರ | ನಿನದದಿನಿಂತಾಡಿದನು || ೭೯ ||

ಛಲದಿಂದನುಜತನುಜಗುರುಹಿರಿಯರು | ಬಲಯುತಬಂಧುಜನವನು |
ನೆಲಕಿಕ್ಕಿ ನೀನೋರ್ವನೆ ಬದುಕುವೆನೆಂದು | ಜಲವ ಹೊಕ್ಕೆಯಲಾ ನೃಪತಿ || ೮೦ ||

ಕಳ್ಳತನದಿ ಬಂದೀ ಕೊಳನನು ಹೊಕ್ಕು | ಗುಳ್ಳೆವಿಡಿವರಂದದೊಳು |
ಒಳ್ಳಿತೊಳ್ಳಿತು ಬೇಗಲದಿರದೆ ಪೊರಮಡು | ತಳ್ಳಂಕದ ಬುದ್ಧಿಬೇಡ || ೮೧ ||

ಗಾಡಿಯೊಳೆಲ್ಲರ ಮುಂದೆ ಮೀಸೆಯ ತಿದ್ದು | ತಾಡುವುದಾ ಮಾತೀಗ |
ಓಡುವುದೀಚೋರಗಂಡಿಯೆಂದಣಕವ | ನಾಡರೆ ನಾಡವರೆಲ್ಲ || ೮೨ ||

ಭೂನುತ ಭುಜಬಲರಿದ್ದು ಗೆಲಲು ಬಾರ | ದೀನಳ್ಳಿಗುಳ್ಳೆಮೀನುಗಳ |
ಸೇನೆವಿಡಿದು ಗೆಲ್ವೆನೆಂದು ಹೊಕ್ಕೆಯಲಾ | ಈ ನೀರನಡುಮಡುವಿನೊಳು || ೮೩ ||

ಪಲವು ನುಡಿಯನಿಂತು ಪವನಜನುಸುರೆ ನಿ | ಶ್ಚಲನಾಗಿ ಕೌರವನಿರಲು |
ಛಲಿಯಿವನೇತರದಿಂ ಪೊರಮಡನೆಂದು | ವಿಲಯವೇಳೆಯ ಸಿಡಿಲಂತೆ || ೮೪ ||

ಕುರುಕುಲನಿಶಿತಕುಠಾರನೆಣ್ದೆಸೆಯನೆ | ಪಿರಿದು ಬೆದರುವಂದದೊಳು |
ಭರದಿಂದ ಸಿಂಹನಾದವ ಮಾಡಲಾಕೊಳ | ನಿರದಲ್ಲಿ ಕಲ್ಲೋಲಮಾಯ್ತು || ೮೫ ||

ಆ ರವವನು ಕೇಳಿ ಬಡವಾಗ್ನಿಯಂದದಿ | ನೀರೊಳಗಿರ್ದ ಕೌರವನು |
ಭೋರನುಲಿಯೆ ಮಂತ್ರಸ್ಖಲನಮದಾಗ | ಲಾರಯ್ಯದಲ್ಲಿಂದೆಳ್ದು || ೮೬ ||

ಮುನ್ನೀರ ನಡುಮಡುವಿಂ ಪೊರಮಡುವಾ | ಚೆನ್ನೇಸರಂತೆಯ್ದಿದನು |
ಉನ್ನತವೀರರಸಾನ್ವಿತನಾರಂಗು | ರನ್ನದೊಡವು ಜಲಜಲಿಸೆ || ೮೭ ||

ಅನಿಲಜನೆಲ್ಲಿರ್ದನೊಯೆಲ್ಲಿರ್ದನೊ | ಯೆನುತ ಗಜರಿಗರ್ಜಿಸುತ |
ಘನತರಮಪ್ಪ ಗದೆಯ ಪೆಗಲೊಳಗಿಟ್ಟು | ವನಜಾಕರವ ಪೊರಮಟ್ಟು || ೮೮ ||

ಇಂತು ಭರದಿ ದಂಡವಿಡಿದೆಯ್ತಂದ ಕೃ | ತಾಂತನಂದದಿ ಭೀಮಸೇನ |
ಅಂತರಿಸದೆ ರುಧಿರೋದ್ಗಾರಿಯಂ ತೂಗು | ತಿಂತೆದು ಮಾತನಾಡಿದನು || ೮೯ ||

ಎಲೆ ಕುರುಪತಿ ನಿನ್ನ ನಚ್ಚಿನ ಬಲವನು | ಕೊಲಿಸಿದೆ ಮುಂದನರಿಯದೆ |
ಛಲ ಬೇಡ ಧರ್ಮಜನೊಳು ಪುದುವಾಳ್ವುದು | ಸಲೆಸುಖವೆನೆ ನಸುನಗುತ || ೯೦ ||

ಬಲಮೆಲ್ಲ ತವಿದೊಡಮೇನೊ ನನ್ನೀದೋ | ರ್ವಲತವಿಪುದೆ ನಿನಗಳ್ಕಿ |
ನೆಲನನಿನಿಸನಿನಗಿತ್ತಪೆನೇಯೆಂಬ | ಬಲುಮೆ ಮಾತುಗಳ ಕೇಳುತವೆ || ೯೧ ||

ಕರಯುಗಲವ ಮುಗಿದಿಂತೆಂದನ್ಯಾ | ದರದಿಂದಾ ಧರ್ಮಸೂನು |
ಸಿರಿಸುರಧನುವಾರಿಗೆ ನೆಲೆ ಮುನ್ನಿನ | ಪರಿಯೊಳಗೆಮ್ಮ ಪಾಲಿಪುದು || ೯೨ ||

ಎಲೆ ಕುರುಕುಲತಿಲಕಾಯೆಂಬ ನುಡಿಗೇಳಿ | ಬಲಯುತತನುಜಾನುಜರ |
ನೆಲದೊಳು ನೆರಪಿ ನಿನ್ನೊಳು ಕೂಡಬಲ್ಲೆನೆ | ಕಲಹವ ಮಾಡಿ ನಿಮ್ಮೊಳಗೆ || ೯೩ ||

ಭುಜಬಲದಿಂ ನಿಮ್ಮೆನೆಲ್ಲರ ಗೆಲಿದಾ | ನಿಜರಾಜಮನಾಳುವುದು |
ಭುಜಗಕೇತುವ ಮತವೆನೆ ಕೇಳಿಯುಳಿದ ಪಾಂ | ಡುಜರೆಲ್ಲರಾಯತಮಾಗೆ || ೯೪ ||

ಕುರುಪತಿಯಿಂತೆಂದ ನಿಮ್ಮಯ್ವರೆಲ್ಲರು ಧುರದೊಳಗೆನಗಿದಿರಾಗೆ |
ಭರದಿಂ ನೆಲದೊಳು ನೆರಪುವೆನೆನಲಿಂ | ತೊರೆದನು ಧರ್ಮನಂದನನು || ೯೫ ||

ಗರ್ವಿತನೀ ನುಡಿದಂತಾವೆಸಗಿದೊ | ಡುರ್ವಿ ಪಳಿವುದದರಿಂದ |
ಓರ್ವರೋರ್ವರೊಳು ಕಾದುವುದೆನೆ ಕೇಳ್ದಾ | ದೋರ್ವಲಶಾಲಿ ವಾಯುಜನು || ೯೬ ||

ಮುನ್ನ ತಾನವನೊಳಿರದೆ ಕಾದುವೆನೆಂದು | ಸನ್ನದ್ದನಾದುದರಿಂದ |
ಎನ್ನೊಳು ಪೊರ್ಕುಳಿಗೊಳ್ವುದೆನುತ ವಿಕ್ರ | ಮೋನ್ನತನಿದಿರ್ವಂದು ನಿಲಲು || ೯೭ ||

ಅರಸಿ ಕೊಲುವೆನೆಂಬ ಬೇಟೆಗಾರನ ಮುಂದ | ಕುರುವ ಬೆಳ್ಮಿಗೆವೆಯ್ತಪ್ಪ |
ತೆರನಾಗಿ ನನಗೆ ಸಿಕ್ಕಿದೆಯಾನೀನೆಂದು | ನೆರೆಗಲಿಯಾಯತಮಾಗೆ || ೯೮ ||

ಒಂದು ಮರದ ಮರೆಗಡೆಯೊಳಗಿರದೆ | ಯ್ತಂದ ಕೃಪಾಚಾರ್ಯಂಗೆ |
ಸಂದಸುಭಟಕುರುಭೂಪಾಲನು ತನ್ನ | ದೊಂದುದೋರ್ವಲದ ಪರಿಯನು || ೯೯ ||

ನೋಡುನೋಡೆಂದು ಭುಜವನಾಸ್ಫಾಳಿಸಿ | ಕೂಡೆ ಬೊಬ್ಬಿರಿದಾಲಿ ನಿಲಲು |
ಪಾಡರಿದಾವಾಮಚರಣವ ಮುಂದಕ್ಕೆ | ನೀಡಿಯನಿಲಸುತ ನಿಲಲು || ೧೦೦ ||

ಹೊಕ್ಕದಿರದೆ ಹಿಡಿಹಿಡಿಯೆಂದು ಬೇಗದಿಂ | ದುಕ್ಕಿನೊಳಗಾಗದೆಯಿಂದ |
ಎಕ್ಕಟಿಗಲಿ ಕುರುಪತಿ ಹುಯ್ಯಲದ ತಪ್ಪಿ | ಚೆಕ್ಕನೆ ಹೊಯ್ಯೆ ವಾಯುಜನು || ೧೦೧ ||

ಕುರುಪತಿಯಾಹೊಯ್ಯಲಿಗೆ ಹೊಳೆದು ತಪ್ಪಿ | ಯುರವಣೆಯಿಂ ಮತ್ತೆ ಹೊಯ್ಯೆ |
ಮರುತನಂದನನು ಹಿಡಿದು ಗದೆಯಿಂ ಕಡು | ಭರವಸದಿಂ ಪೊಯ್ದನಾಗ || ೧೦೨ ||

ಉಕ್ಕುಕ್ಕು ಹಳಚುವಂದದಿ ವಜ್ರ ವಜ್ರದೊ | ಳೆಕ್ಕೆಕ್ಕೆಯಿಂ ಹೋರುವಂತೆ |
ಎಕ್ಕತೂಳದ ಭಟರವರೀರ್ವರು ಕಡು | ಕಕ್ಕಸದಿಂದ ಕಾದಿದರು || ೧೦೩ ||

ಭರದಿನವರು ಗದೆಗಳ ಬೀಸೆ ತಿಗುರಿಯ | ಪರಿಯೆನೆ ಧರೆ ತಿರುಗಿದುದು |
ಉರವಣೆಯಿಂ ಬೊಬ್ಬಿರಿಯೆ ಮೇಗಡೆ ನೋಳ್ಪ | ಸುರಸಂತತಿ ಬೆದರಿದುದು || ೧೦೪ ||

ಸಿಡಿಲು ಸಿಡಿಲನದಿರದೆ ಹೊಡೆವಂದದಿ | ಸಿಡಿಸಿಡಿದಾ ಕಗ್ಗಲಿಗಳು |
ಅಡಸಿ ಹೊಂಗಿಡಿಯೇಳುವಂತೆ ಹೊಯ್ದಾಡಿದ | ರೊಡನತಿಭುಜಬಲದಿಂದ || ೧೦೫ ||

ತನುಜರ ಕೊಲೆಗೊಂದುಗೊಳ್ಳನುಜಾತರ | ಮುನಿಸಿಂಗೆರಡುಗೊಳ್ಳೆನುತ |
ಅನಿಲಸುತನ ತೊಡೆ ಮುಡುಹುಗಾಣಿಸಿ ಹೊಯ್ದ | ನನುವಾಗಿಯಾ ಕೌರವನು || ೧೦೬ ||

ಅರಗಿನ ಮನೆಯುರಿಗಿದು ಕೃತಕದ ಜೀದಿ | ನಿರವಿಗಿದೆನುತತಿ ಭರದಿ |
ಮರುತನಂದನನಾ ಕುರುಭೂಪನ ಪೇ | ರುರಪೆಗಲೆಡೆಹೊಯ್ದನಾಗ || ೧೦೭ ||

ಅಡಿಕಿರಿದೊಡೆತೊಡೆಯುಡೆನಡುವೆದೆಕೈ | ಮುಡುಹುಕೊರಲ್ಪಣೆಕೆನ್ನೆ |
ಪೆಡೆತಲೆಮಂಡೆಯೆಡೆಯನಾಯಗಾಣಿಸಿ | ಹೊಡೆದಾಡಿದರಾ ಕಲಿಗಳು || ೧೦೮ ||

ಒಮ್ಮೆ ಹೊಳೆದು ಮತ್ತೊಮ್ಮೆ ಲಂಘಿಸಿ ಬಳಿ | ಕೊಮ್ಮೆ ಬಲ್ಗದೆಯಿಂ ಹಿಡಿದು |
ಒಮ್ಮೆ ಹುದುಗಿ ತಪ್ಪಿ ಹೊಡೆದಾಡಿದರಂ | ದೊಮ್ಮೆ ಹೊಯ್ವಾಹೊಯ್ಲುಗಳನು || ೧೦೯ ||

ಹರಿನೀಲಮಾಣಿಕ್ಯದಮೂರ್ತಿಗರುಣಾ | ಭರಣವನಿಟ್ಟಂದದೊಳು |
ಕುರುಪತಿಯ ಸಿಂತಾಂಗದೊಳಿರದುಣ್ಮುವ | ವರರಕ್ತಬಿಂದುವೊಪ್ಪಿದುದು || ೧೧೦ ||

ಒಬ್ಬರೊಬ್ಬರ ಗದೆ ತಾಗಲು ಹೊಂಗಿಡಿ | ಯಿಬ್ಬರ ನಡುವೆ ಸೂಸಿದುದು |
ಕೊಬ್ಬಿಗಳವರ ಕೋಪಾನಲ ಪೊರಮಟ್ಟು | ಹಬ್ಬಿ ತಮ್ಮೊಳು ಕಾದುವಂತೆ || ೧೧೧ ||

ಓವದೆ ಕುರುಪತಿ ಹೊಯ್ಯಲು ಕುಸುಕಿರಿ | ದಾವಾಯುಜನ ಕಾಣುತವೆ |
ಏವೇವೆಂದಗ್ರಜಾನುಜರು ಬೆದರಿದರು | ಹಾವಡರಿದ ಹಂದೆಯಂತೆ || ೧೧೨ ||

ಇಂತು ಕುಕ್ಕರಿಸಿದ ಭೀಮನನಾಕುಪಿ | ತಾಂತಕನಾಗದೆಯೆತ್ತಿ |
ಅಂತರಿಸದೆ ಮಸ್ತಕಕೆ ಹೊಯ್ಯಲು ತಾ | ನಾಂತು ಮತ್ತಾಗದೆಯಿಂದ || ೧೧೩ ||

ಸಿಡಿದೆರಗುವ ಸಿಡಿಲುರವಣೆಯನು ವಜ್ರ | ತಡೆವಂತಾ ಹೊಯ್ಲುಗಳನು |
ತಡೆದು ಮತ್ತಾ ಮಾರುತಿ ನೀಡುದೋಳೆತ್ತಿ | ಯಡಸಿ ಹೊಯ್ದನು ಕಡುಪಿಂದ || ೧೧೪ ||

ಮದಮಾತಂಗವೆರಡು ಬರಿಕೈಯೆತ್ತಿ | ಪದೆದು ಹೊಯ್ದಾಡುವಂದದೊಳು |
ಅಧಟರವರು ಗದೆಯೆತ್ತಿ ಹೊಯ್ದಾಡಿದ | ರದಿರದೆ ನೆಲದಿರ್ವಂತೆ || ೧೧೫ ||

ಖಟಿಖಟಿ ಛಟಿಛಟಿ ತಟಿತಟಿ ನಟಿನಟಿ | ಪಟಿಪಟಿ ತೊಪ್ಪುತೊಪ್ಪೆನುತ |
ಪಟುಭಟರವರು ಹೊಯ್ದಾಡುವ ಗದೆಯ ದು | ರ್ಘಟಮಪ್ಪ ದನಿಗಳೊಪ್ಪಿದುವು || ೧೧೬ ||

ಈ ತೆರದಿಂ ಕೆಲಹೊತ್ತು ಹೊಯ್ದಾಡಿ ಮ | ತ್ತಾ ತುಳಿಲಾಳು ಕೌರವನು |
ಏತರ ಕಲಿಯಿವನೆಂದು ಬಗೆದು ನಿ | ರ್ಭೀತಿಯಿಂ ತಿರುಪಿ ಗದೆಯನು || ೧೧೭ ||

ಕಟ್ಟುಗ್ಗರದಿ ಕೇಸರಿ ಲಂಘಿಸುವಂತೆ | ತೊಟ್ಟನೆ ನೆಗೆದು ಮಸ್ತಕವ |
ಮುಟ್ಟಿ ಹೊಯ್ವೆನೆಂಬಾ ವೇಳೆಯೊಳು ಭೀಮ | ನಿಟ್ಟನು ನಿಜಗದೆಯಿಂದ || ೧೧೮ ||

ಘುಡುಘುಡಿಸುತ ಮೇಲ್ವಾಯ್ವ ಸಿಂಹದಕಾಲ | ಹೊಡೆವ ಸಿಡಿಲ ಮಾಳ್ಕೆಯೊಳು |
ಕಡುಪಿಂ ಮೇಲ್ವಾಯ್ದು ಪೊಡೆವ ನೃಪನ ತೋರ | ತೊಡೆಯನಾಗದೆ ತಾಗಿದುದು || ೧೧೯ ||

ಕಡುಸೊಕ್ಕೇರಿದ ಕರಿ ಬರಿಕೈಯೆತ್ತಿ | ಹೊಡೆಯೆ ಜವಳಿವಾಳೆಗಳು |
ಕೆಡೆವಂತೆ ಭೀಮಗದಾಪಾತದಿ ತೊಡೆ | ಯುಡಿದವು ಕೌರವೇಶ್ವರನ || ೧೨೦ ||

ನಿಡುದೋಳ ಬಿಟ್ಟು ಪೋಪಾಪೊಡವಿಯ ಬಾಚಿ | ಹಿಡಿವಂತಾತೊಡೆಮುರಿದು |
ಕಡುಗಲಿಯಾಕೌರವನಂದು ಕೌಚಿಕ್ಕಿ | ಕೆಡೆದನು ಧುರಧರಣಿಯೊಳು || ೧೨೧ ||

ಒಡಲುವಿಡಿದ ಮುನ್ನಿನ ವೀರರಸವೆ ಕಿ | ಗ್ಗಡೆಗೆ ಸೋರುವ ಸಮನಾಯ್ತು |
ತೊಡೆಯ ಗಾಯದಿನೊಗುವರುಣೋದಕಮಾ | ಕಡುಗಲಿ ಕೌರವೇಶ್ವರನ || ೧೨೨ ||

ಧುರಮಿಲ್ಲಿದನು ಮಾರುತಿ ಭಂಡಾರಿಸು | ಭರದಿನೆನುತ ಜಯಜಾಯೆ |
ಅರಗಿನಮುದ್ರೆಯಿಟ್ಟಂತಾ ಗದೆಯೊಳು | ಪೊರೆದ ರಕ್ತಾಂಬುವೊಪ್ಪಿದುದು || ೧೨೩ ||

ಆ ಪದದೊಳು ಹೆರಸಾರಿಯನಿಲಸೂನು | ಭಾಪುರೆ ಭೂಪ ನಿನ್ನಂತು |
ಈ ಪೃಥವಿಯೊಳು ಛಲಿಗಳಾರು ಪೇಳೆಂದು | ಕೋಪವಡಗಿ ಪೊಗಳಿದನು || ೧೨೪ ||

ಆ ವೇಳೆಯೊಳತಿ ಹರ್ಷದಿ ಬಂಟರ | ಭಾವ ಪವನಸೂನುವೆನುತ |
ದೇವಸಮಿತಿಯಾಗಸದೊಳು ಕೊಂಡಾಡಿ | ಪೊವಿನ ಸರಿಯ ಸೂಸಿದುದು || ೧೨೫ ||

ಬೀರವರೆಗಳುಣ್ಮಲು ಪಾಂಡವರು ಬಿ | ಡಾರಕೆ ಪೋಗಲಂತದನು |
ಆರೈದು ಕೇಳಿ ಕೇಶವನು ಮೊಳಗನು ಮ | ಯೂರ ಕೇಳ್ವಂತೆ ನಲಿದನು || ೧೨೬ ||

ಆ ಚಕ್ರಿಯಾಕುರುಪತಿಯವಾರತೆಗುಷ್ಣ | ರೋಚಿಯ ಪಾದಗಳುಡುಗೆ |
ಆ ಚಕ್ರವಾಕವಿಹಗಮಳಲ್ವಂತೆ ಸಂ | ಕೋಚವಡೆದ ಸಮಯದೊಳು || ೧೨೭ ||

ಪಡುಗಡಲನು ಪಗಲಾಣ್ಮನು ಪುಗಲಾ | ಪಡೆಗಳೆರಡು ಬೀಡವೊಗಲು |
ಕಡುಗಲಿಪಾಂಡವರನು ತಮ್ಮ ಪಾಳಯ | ಕೊಡಗೊಂಡು ಬಂದು ಕೇಶವನು || ೧೨೮ ||

ಕುರುಪತಿ ಸತ್ತ ಕಥನವನೆಲ್ಲವ ಕೇಳು | ತಿರಲತ್ತಲಶ್ವತ್ಥಾಮ |
ಉರುತರಕೋಪದಿನಾಪಾಂಡುಭೂಮೀ | ಶ್ವರರ ಪಾಳಯವನು ಪೊಕ್ಕು || ೧೨೯ ||

ಲೆಕ್ಕವಿಲ್ಲದ ಬಲವನು ಕೊಲುತಿರಲಾ | ಎಕ್ಕತೂಳದ ಸಾಸಿಗನು |
ಕಕ್ಕಸದಿಂ ದೃಷ್ಟದ್ಯುಮ್ನನಿದಿರಾಗ | ಲಿಕ್ಕಿದನವನನಂತಕಗೆ || ೧೩೦ ||

ತಂದೆಯ ಕೊಂದ ಪಗೆಯ ಕೊಂದದಿರದೆ | ಮುಂದಕೆಯ್ದುವ ಗುರುಸುತನ |
ಮಂದೈಸಿದ ಮುನಿಸಿಂ ಪಂಚಪಾಂಡವ | ರಂತಿದಿರೆಯ್ತರಲೊಡನೆ || ೧೩೧ ||

ಪಾಂಡುನಂದನರವರೆಂದವರಾತಲೆ | ಗೊಂಡು ಬಂದಾ ಕರುಪತಿಯ |
ಕಂಡು ಕೌಂತೆಯರ ತಲೆಯ ನೋಡೆಂದು ಪ್ರ | ಚಂಡ ವಿಕ್ರಮಿ ತೋರಲಾಗ || ೧೩೨ ||

ಅವನಿಪನವನು ನಿರೀಕ್ಷಿಸಿ ಕಂಡಾ | ಯಿವು ಪಾಂಡವರ ತಲೆಯಲ್ಲ |
ಕುವರರು ಪಂಚಪಾಂಡವರ ತಲೆಗಳೆಂದು | ಸುವಿವೇಕತನದಿನಿಂತೆಂದ || ೧೩೩ ||

ಚರಮಾಂಗರವರುತ್ತಮರೊಳು ಛಲವನು | ಪಿರಿದು ಮಾಡಿದೆನಿಂದುವರ |
ಗುರುಸುತ ನನಗಿನ್ನೇಕೆ ಕಷಾಯ ಬಂ | ದುರುತರ ದೀಕ್ಷೆಯೇ ಶರಣು || ೧೩೪ ||

ಎನುತಶ್ವತ್ಥಾಮನನು ಬೀಳ್ಕೊಟ್ಟಾ | ಜನಪತಿವಿದುರನೆಂಬೋರ್ವ |
ಮುನಿಯ ಸನ್ನಿಧಿಯೊಳಗುತ್ತಮದೀಕ್ಷೆಯ | ನನುಕರಿಸಿದನಿಳೆ ಪೊಗಳೆ || ೧೩೫ ||

ಇಂತು ದೀಕ್ಷೆಯನು ಸಕಲ ಭೂಪರೊಡಗೂಡಿ | ತಾಂತಳೆದಾಮರುವಗಲು |
ಸಂತತ ಸುಖಮೀವ ಸಗ್ಗದೊಳೊಗೆದು ನಿ | ಶ್ಚಿಂತಮಿರ್ದನು ಬಳಿಕಿತ್ತ || ೧೩೬ ||

ಜನನುತಜಯಜಾಯಾವಲ್ಲಭರು ಸ | ಜ್ಜನಗುಣಮಣಿಭೂಷಿತರು |
ಮನುನಿಭಚರಿತಪಾಂಡವರೊಪ್ಪಿದರಾ | ವಿನಯವನಧಿಚಂದ್ರಮರು || ೧೩೭ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗೊದವಿದಾಶ್ವಾಸಮೂವತ್ತು || ೧೩೮ ||

ಮೂವತ್ತನೆಯ ಸಂಧಿ ಸಂಪೂರ್ಣಂ