ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಆ ಸಮಯದೊಳು ಜರಾಸಂಧಚಕ್ರೇಶ | ನಾಸುರಮಪ್ಪ ಸೈನಿಕಕೆ |
ಕೇಸುರಿಗೆಳಲಿಮೂಡುವ ಮಿಳ್ತುವಿನಂ | ತಾಸೂರ್ಯಬಿಂಬ ಮೂಡಿದುದು || ೨ ||

ಎರಡು ಪಡೆಗಳು ಮುನ್ನಿನತೆರದಿಂ ಧುರ | ಧರಣೀಮಂಡಲದೊಳಗೆ |
ಮುರರಿಪು ಮಾಗಧರುಗಳನುಮತದಿಂ | ದುರವಣೆಯಿಂದೊಡ್ಡಿ ನಿಲಲು || ೩ ||

ಬಲಯುತನಾಮಗಧ ತನ್ನ ಬಲ ನಸು | ಬಲವಾಗಿರೆ ಕಂಡು ತನ್ನ |
ಬಲದೊಳಲಘುಬಲರಪ್ಪ ವಿದ್ಯಾಧರ | ಬಲವನು ಕೈವೀಸಲಾಗ || ೪ ||

ವಿದ್ಯುಚ್ಚರನಂಗಾರದೇವನುಮಾ | ವಿದ್ಯುತ್ಪ್ರಭ ನೀಲಕಂಠ |
ವಿದ್ಯುದ್ವೇಗನಳಿಕೇತುವೆಂಬಾ | ವಿದ್ಯಾಧರರೆಯ್ದಿದರು || ೫ ||

ನೆಲದೊಳಾಗಸದೊಳಗೆಡೆದೆರಪಿಲ್ಲದ | ಗ್ಗಳಿಕೆಯಿಂದಿದಿರಾಗಲೊಡನೆ |
ಬಲಗೋವಿಂದರು ತಮ್ಮ ವಿದ್ಯಾಧರ | ಬಲಕೆ ಕೈವೀಸಿದರಾಗ || ೬ ||

ಮರುತವೇಗ ಸಿಂಹದಾಡನಕಂಪನ | ಹರಿಕೇತುವಾವಜ್ರಬಾಹು |
ಅರುಣಚಂದ್ರದಧಿಮುಖಮಾನಸವೇಗ | ಧುರಧೀರಧ್ರುವಕುಮಾರಕರು || ೭ ||

ಆಕಾಶಾಬ್ಧಿಯವೇಳೆಯಂತೊಪ್ಪುವ | ನೇಕ ವಿದ್ಯಾಸೈನಿಕವ |
ಜೋಕೆಯಿಂದಲೆ ಕೂಡಿಯಾರಿಪುಬಲಕಾಗಿ | ನೂಕಿದರತಿಭರದಿಂದ || ೮ ||

ಸಿಡಿಲು ಸಿಡಲ ತಾಗುವಂದದಿ ಖಚರರ | ಪಡೆಗಳೆರಡು ಗಗನದೊಳು |
ಕಡುಭರದಿಂ ತಾಗಲೊಡನೆಯರುಣವಾರಿ | ಸಿಡಿದುದು ಮರುತಮಾರ್ಗದೊಳು || ೯ ||

ಜಡಿವ ಖಡ್ಗವು ಮಿಂಚು ಮೊರೆವ ದುಂದುಭಿಗಳು | ಗುಡುಗು ಕೂರ್ವಾಳ ಹೊಯ್ಲುಗಳೆ |
ಸಿಡಿಲು ಸೂಸುವ ರಕುತವೆ ಮಳೆಯೆನಲಾ | ಪಡೆಯಾಗಸದೊಳ್ಕಾದಿದು || ೧೦ ||

ಇಂತು ವಿದ್ಯಾಧರಚತುರಂಗವಾಹಿನಿ | ಯಂತರಿಕ್ಷದೊಳೆಡೆವಿಡದೆ |
ಅಂತರಿಸದೆಯನುಮಿಷರಚ್ಚರಿವಡು | ವಂತೆ ಕಾದುತ್ತಿರಲಿತ್ತ || ೧೧ ||

ನೆಲದೊಳಗಾನೆಲ ಹೇಸುವಂದದಿನಾ | ನೆಲೆವಟ್ಟೆಗರು ಬೊಬ್ಬಿರಿದು |
ತಲೆಮುಂಡಕರುಳುನೆತ್ತರು ಜೋರೆಯೇಶ್ವಂ | ತಲಸದೆ ಕಾದಿಮಡಿದರು || ೧೨ ||

ಬೀರಾಳ್ಗಳು ಬೀರಾಳೊಳು ತೇರೊಳು | ತೇರು ಕುದುರೆ ಕುದುರೆಯೊಳು |
ಕೂರಾನೆಗಳು ಕೂರಾನೆಗಳೊಳಗುಣ್ಮಿ | ಹೋರಟೆಗೊಂಡುರುಳಿದುವು || ೧೩ ||

ಬಲ ವಾಸುದೇವರ ಬಲಮಗಧನ ನಿಜ | ಬಲವನೊತ್ತಿನೂಕಲಾಗ |
ಅಲೆವ ಗಾಳಿಗೆಮುಗಿಲೋಡುವ ತೆರದಿಂ | ತಲೆ ಬಾಲಗೆಟ್ಟೋಡುತಿರಲು || ೧೪ ||

ಅಂತದ ಕಂಡು ವೃಷಭಸೇನನೆಂಬವ | ನಂತಕನಂದದಿ ಮುನಿದು |
ಪಿಂತು ಮುಂತನೆ ಹಾರದೆ ತನ್ನ ರಥವ ಮು | ರಾಂತಕಬಲಕೆ ನೂಕಿದನು || ೧೫ ||

ಬಿಸಿನೀರ ಹೊಕ್ಕ ಬೆಳ್ಳಿಲಿವಿಂಡು ಬೆದರ್ವಂ | ತಸಮವಿಕ್ರಮಿಯಾ ಭಟನ |
ಎಸಕವಡೆದ ಕೊಲೆಯನು ಕಂಡು ತಡೆಯದು | ಬ್ಬಸಗೊಂಡುದಾಹರಿಸೇನೆ || ೧೬ ||

ಮೇಲಾಳಮೇಲೆ ಕಾಲಾಳು ವರೂಥದ | ಮೇಲೆ ಮೇಲಾಳಾನೆಗಳ |
ಮೇಲೆ ವರೂಥ ಬೀಳಲು ಕಂಡಾ ಬಲ | ಜಾಲವ ಪೆರಗಡೆ ನೂಂಕಿ || ೧೭ ||

ಕೇಸುರಿಗೆಳಲಿ ಬಳಿಕ ಬಲಭದ್ರನಂ | ದಾ ಸಿಂಹವಾಹಿನಿಯೇರಿ |
ಓಸರಿಸದೆ ಬಂದು ಕಾಡಾನೆಹಿಂಡಿಗೆ | ಕೇಸರಿ ಹೋಗುವಂತೆ ಹೊಕ್ಕು || ೧೮ ||

ಹೇಳಬಾರದ ವಿಕ್ರಮದಿಂದ ಮಗಧಭೂ | ಪಾಲನ ಬಲವೆಲ್ಲವನು |
ಲಾಳವಟ್ಟೆಯ ಮಾಡಿ ಪಡಲಿಟ್ಟಂದದಿ | ಕಾಲಗೌತಣವನು ಮಾಡಿ || ೧೯ ||

ಕೈಯ ಕೂಸನು ನೆಲಕಿಕ್ಕುವಂದದಿನಾ | ರೈಯದೆ ವೃಷಭಸೇನನನು |
ಮೈಯನಿಕ್ಕಡಿ ಮಾಡಿ ನೆಲಕಿಕ್ಕಿಯಾಬಲು | ಗೈಯನು ಮುಂದಕ್ಕೆ ನಡೆಯೆ || ೨೦ ||

ಇರುಪೆಯ ಪಿಂಡು ಕೆಂಡವ ಕಂಡಂದದಿ | ನರಗುಲಿ ರಾಮನ ಮೇಲೆ |
ನೆರೆಗಲಿಗಳು ಮೈಯಿಕ್ಕಲಣ್ಮದೆ ಕಡು | ಹೆರಸಾರಿ ನಿಂದಿರಲತ್ತ || ೨೧ ||

ಮಸಕದಿ ಮಾರಿಯಂದದಿ ರಥವನು ನೂಂಕಿ | ವಸುಪಾಲನು ಕೊಲತಿರಲು |
ಅಸಮವಿಕ್ರಮಿ ಕಾಲವಯನವಗಿದಿರಾಗಿ | ಮುಸುಕಲು ಕಂಡು ಕೋಪದೊಳು || ೨೨ ||

ದಾರಣ ಪೂರಣ ದೃಢವಿಜಯಂತಕು | ಮಾರಜರತ್ಕುಮಾರಕರು |
ಆರೈಯದಾಕಾಲವಯನನು ನೂಂಕಿ ಸಂ | ಹಾರ ಮಾಡಿದರಾಬಲವ || ೨೩ ||

ಅತ್ತಲಂಬರತಳದೊಳು ಕಾದುವ ಪುರು | ಷೋತ್ತಮಬಲದ ಖೇಚರರು |
ಒತ್ತಂಬದಿನಿದಿರಾದ ಸೇನೆಯ ಹೊಕ್ಕು | ತತ್ತರಿದರಿವುತಮಿರಲು || ೨೪ ||

ಆ ಚಕ್ರಿ ತನ್ನ ಮೋಹರದೊಳು ಕೊಂಕುವ | ಭೂಚರರನು ಮೇಗಡೆಯ |
ಖೇಚರರನು ಕಂಡು ತನ್ನ ಮೋಹರದ ಸೇ | ನಾಚಕ್ರಕೆ ಕೈವೀಸೆ || ೨೫ ||

ಪಿಂಗದೆ ತನ್ನ ಸೇನೆಯನೆಲ್ಲವ ಮಿಳ್ತು | ನುಂಗುವವೊಲು ಬಹುರೂಪ |
ಸಂಗಳಿಸಿದವೊಲೆಯ್ದುವ ರಿಪುಬಲವನು | ತ್ತುಂಗವಿಕ್ರಮಿ ಹರಿ ಕಂಡು || ೨೬ ||

ಭರದಿಂ ತನ್ನ ಬಲಕೆ ಕೈವೀಸಿದೊ | ಡುರವಣೆಯಿಂ ಬಂದು ತಾಗೆ |
ಎರಡು ಪಡೆಗಳೆಕ್ಕೆಯಿಂ ಕಾದಿದುವಾ | ಸುರರು ಮೇಗಡೆ ಪೊಗಳ್ವಂತೆ || ೨೭ ||

ಮುರರಿಪುವಿನ ಬಲಮಾಸಮವರ್ತಿ ಕು | ಮ್ಮರಿಗಡಿವಂತೆ ಮಾಗಧನ |
ಅರೆನೆಲೆಯೊಡ್ಡಣವನು ತತ್ತರಿದರಿ | ದುರುಳಿಸಿದುದು ನಿಮಿಷದೊಳು || ೨೮ ||

ತುರಂಗದ ಪೆಣದೊಟ್ಟಿಲಾನೆವೆಣದ ಬಲು | ಮೊರಡಿ ರಥದ ಬಲುಬಣಬೆ |
ನರರ ಕರುಳಬಳ್ಳಿವೆನಲೊಪ್ಪಿದುದಾ | ಧುರಧರಣೀತಳದೊಳಗೆ || ೨೯ ||

ಇಂತು ಬಿಳ್ದಾ ತನ್ನ ಚತುರಂಗಬಲವ ಕೃ | ತಾಂತೋಪಮಮಾಗಧನು |
ಮುಂತೆ ಕಂಡಾದಿವ್ಯರಥವನಡರಿಸಿಡಿ | ಲಂತೆ ಗಜರಿಗರ್ಜಿಸುತೆ || ೩೦ ||

ವರವಜ್ರಕವಚವ ತೊಟ್ಟು ಕೋದಂಡವ | ಭರದಿ ಪಿಡಿದು ನೂಂಕಲೊಡನೆ |
ಹರಿಯದ ಕಂಡು ಹದ್ದಿನವಾಹಿನಿಯೆಂ | ಬುರುತರ ಶಕಟವನೇರಿ || ೩೧ ||

ಓರೋರ್ವರು ಪೂರ್ವಭವಬದ್ಧವೈರದಿ | ನೋರ್ವರೋರ್ವರನೀಕ್ಷಿಸಲು |
ಪರ್ವಿತು ಕೋಪಾನಲನಾಜ್ಯವೆರೆಯಲ | ಗುರ್ವಿಪ ಹುತವಹನಂತೆ || ೩೨ ||

ಎಲೆ ಕೃಷ್ಣ ನಿನ್ನ ಕೊಲ್ವುದನು ಕಾಯ್ವೊಡೆ ನಿನ್ನ | ಕುಲದೇವತೆ ಕೃಷ್ಣಯಕ್ಷಿ |
ಬಲುಹುಳ್ಳೊಡಡ್ಡಬರಲಿಯೆಂದು ಮಿಗೆ ಮೂ | ದಲಿಸಿ ಮತ್ತಿಂತೆಂದನಾಗ || ೩೩ ||

ಒಳ್ಳೆಯನಿರದೇರಿ ಬೆಸಕೋಲನೇರಿಸಿ | ಗುಳ್ಳೆಯ ಕರ್ಚಿ ಪೂರೈಸಿ |
ಹೊಳ್ಳುಮೊರಡಿಯೆತ್ತಿದ ಬಲ್ಪ ತೋರುವು | ದೊಳ್ಳಿತೊಳ್ಳಿತು ತುರುಗಾಹಿ || ೩೪ ||

ಎನಗಳ್ಕಿ ನಾಡುಬೀಡುಗಳೆಲ್ಲವ ಬಿಟ್ಟು | ವನನಿಧಿಯೊಳು ಮನೆಗಟ್ಟಿ |
ಇನಿತು ಕಾಲಜೀವಿಸಿದುದು ಸಾಲದೆ | ನಿನಗೆ ಚಕ್ರಿಯೋಳೆಕೆ ಬವರ || ೩೫ ||

ಎಂದು ಮೂದಲಿಸೆ ಮುಕುಂದನೆಂದನು ನಿನ್ನ | ಮಂದಿರದೊಳು ಪುಣ್ಯವಶದಿ |
ಅಂದು ಹುಟ್ಟಿದ ಚಕ್ರಬಲದಿಂದ ಚಕ್ರಿನೀ | ನೆಂದೆಂಬರು ನಾಡುಗರು || ೩೬ ||

ವಿಕ್ರಮಹೀನರಾದೊಡಮೇನೊ ಕೋವರ | ಚಕ್ರಮುಳ್ಳಾಕುಂಬರರ |
ಚಕ್ರಿಯೆಂಬರು ಲೋಕದವರು ನೀನವರಂತೆ | ಚಕ್ರಿಯಾದೈ ಲೋಕವರಿಯೆ || ೩೭ ||

ಸಂಗರದೊಳು ಕಾಣಬಹುದು ನಮ್ಮೀರ್ವರ | ಮುಂಗೈಯದೊಂದುಶಕ್ತಿಯನು |
ಉಂಗುರವನು ನೋಡುವೊಡೆ ಕನ್ನಡಿಯ ಮ | ನಂಗೊಂಡರಸಲದೇಕೆ || ೩೮ ||

ಎಂದು ನುಡಿದ ಮುರರಿಪುವಿನ ನುಡಿಗೇಳಿ | ತಂದು ಮುನಿಸನು ಮಾಗಧನು |
ಒಂದಿಸಿ ಬಿಲ್ಗೆ ತಿರುವನೀವಿ ಜೇವೊಡೆ | ದಂದಮಣಜಿಸಿತು ಲೋಕವನು || ೩೯ ||

ಮುರರಿಪು ಮುನಿದು ಶಾರ್ಙ್‌ಗೆ ತಿರುವೇರಿಸಿ | ಭರದಿಂದ ನೀವಿ ಜೇವೊಡೆಯೆ |
ಸರಿಯಾದುದು ಕಟ್ಟಕಡೆಯಕಾಲದ ಸಿಡಿ | ಲುರವಣೆಗದನೇನೆಂಬೆ || ೪೦ ||

ಉರುಸಮರಾರಂಭದ ಮೊದಲೊಳು ದಿವ್ಯ | ಶರಸಂಧಾನವ ಮಾಡಿ |
ಧುರಧೀರರು ಕಾಯ್ದುಕೊಳ್ಳೆನುತೋರ್ವರೋ | ರ್ವರನುರೆಮುನಿದೆಚ್ಚರಾಗ || ೪೧ ||

ಅರಿ ಬೊಬ್ಬಿರಿದು ಪುಂಖಾನುಪುಂಖಿಯೊಳೆಚ್ಚ | ನಾರಾಚತತಿ ಗಗನದೊಳು |
ಸೇರಿಸಿ ಪಂದಲಿಟ್ಟಂದದಿ ಕಿಡಿಸಿದು | ವಾರವಿಬಿಂಬದ ಕುರುಹ || ೪೨ ||

ಓರೋರ್ವರೆಚ್ಚಂಬುಗಳನೆಡವಳಿಯೊಳ | ಗೋರೋರ್ವರು ಖಂಡಿಸಲು |
ಮಾರಿಯಡುವುದಕ್ಕೆ ಪುಳ್ಳಿಯ ಬಣವೆಯ | ಸೇರಿಸಿದಂತೊಪ್ಪಿದುದು || ೪೩ ||

ಅವನೆಚ್ಚ ದಿವ್ಯ ನಾರಾಚವ ಪಿಡಿದು ಮ | ತ್ತವನದರಿಂ ಪಿಡಿದೆಸೆಯೆ |
ಅವನದಪಿಡಿದೆಸಲಾ ಬಿನ್ನಣವನು | ದಿವಿಜರಿರದೆ ನೋಡಿದರು || ೪೪ ||

ಈಯಂದದಿಂದೋರೋರ್ವರು ಗೆಲಲಾರ | ದಾಯುದ್ಧದೊಳು ಪಟುಭಟರು |
ಛಾಯಾಯುದ್ಧಂಗೆಯ್ವಂದದಿ ಕಾದಿ | ಯಾಯಸಬಡಲು ಮಾಧನು || ೪೫ ||

ತೆಗೆಯೆ ಭುಗಿಲ್ಭುಗಿಭುಗಿನೆಲೆ ದಳ್ಳುರಿ | ಹೊಗೆಹೊಂಗಿಡಿತರಿಗೆಂಡ |
ಗಗನವನಾವರಿಸಿತು ಹರನುರಿಗಣ್ಣ | ತೆಗೆದಂತಾವಹ್ನಿಬಾಣ || ೪೬ ||

ಅದನೆಸಲುರವಣೆಯಿಂಬರ್ಪುದನು ಕಂಡು | ಕದನವಿನೋದಿ ಕೇಶವನು |
ಉದಕಬಾಣದಿನದನಂದಿಸೆ ಕೋಪದಿ | ಕುದಿದು ಮಾಗಧಭೂವರನು || ೪೭ ||

ಮುನ್ನ ಕಾಳಿಂಗನ ಕೊಂದಾ ಬಲುಹಗೆಯನಾ | ನಿನ್ನು ಕೊಲಲುಬೇಕೆಂದು |
ಪನ್ನಗಲೋಕವೈಯ್ದಿದವೊಲು ತೆಗೆದೆಚ್ಚ | ನುನ್ನತ ಫನಿಮಾರ್ಗಣವನು || ೪೮ ||

ಆ ಸರ್ಪಶರವನು ಗರುಡಾಸ್ತ್ರದಿನೆ | ಭರದಿಂದೆಚ್ಚು ಖಂಡಿಸಲು |
ಕೇಸುರಿಗೆದರಿ ಭೂಧರಬಾಣವನು ಜ | ರಾಸಂಧನಾರುತೆಸೆಯಲು || ೪೯ ||

ವರವಜ್ರಬಾಣದಿನಾವಾಸುದೇವನು | ಭರದಿಂದೆಚ್ಚು ಖಂಡಿಸಲು |
ಶರನಿಧಿಬಾಣದಿನೆಸೆವಡಬಾಗ್ನಿಯ | ಶರದಿನದನು ಕೆಡಿಸಿದನು || ೫೦ ||

ಸೊಕ್ಕಾನೆಗಳ ಶರದಿಂ ಮಗಧೇಶ್ವರ | ನೆಕ್ಕೆಯಿಂದಿರದೆಸಲಾಗ |
ದಿಕ್ಕರಿಗಳು ಬಹುರೂಪವಡೆದು ಬಪ್ಪ | ಲೆಕ್ಕದಿನೆಯ್ತರಲಾಗ || ೫೧ ||

ಅಂಬುಜನಾಭನರಸುಮಿಗಶರವನು | ತುಂಬಿ ತೆಗೆದುಬಿಡಲಾಗ |
ಮುಂಬರಿದವರ ಶಿರಂಗಳ ಸೀಳ್ದು ಸೀ | ರುಂಬುಳಾಡುತ ಬರುತಿರಲು || ೫೨ ||

ಅದನು ಕಂಡಾಚಕ್ರಿಯೆಚ್ಚ ಶರಭಶರ | ಕದುಬಿ ಕೇಸರಿ ಬಾಣವನು |
ಸದೆದು ಸೀಳಿ ಬರ್ಪುದ ಕಂಡು ಕೋಪದಿ | ನಧಟರದೇವನಚ್ಯುತನು || ೫೩ ||

ಉರುತರಮಪ್ಪ ನಿಶಿತಗಂಡಭೇರುಂಡ | ಶರದಿನದನು ಖಂಡಿಸಲು |
ಇರುಳುಬಾಣದಿ ಮಾಗಧನೆಸೆಯೆ ಹರಿಸೂರ್ಯ | ಶರದಿನೆಚ್ಚದನೋಡಿಸಿದನು || ೫೪ ||

ಇವು ಮೊದಲಾದವುತ್ತಮ ವಿದ್ಯಾಬಾಣ | ನಿವಹವನಿರದೆ ತಾನೆಸಲು |
ಅವನೆಲ್ಲವ ಪ್ರತಿವಿದ್ಯಾಶರದಿ ಕೇ | ಶವನೆಚ್ಚು ಕೆಡಿಸಲು ಕಂಡು || ೫೫ ||

ಕಡುಗೆರಳ್ದಾ ಮಾಗಧನಂತ್ಯಕಾಲದ | ಮೃಡಮುನಿಸಿಂದೆವೆದೆಗೆದ |
ಕಿಡಿಗಣ್ಣಿನ ಕುಳಿಕನದೊಂದುಷ್ಣವ | ಪಡೆದಂತೆ ಕಿಡಿಕಿಡಿವೋಗಿ || ೫೬ ||

ರಕ್ಷಿತಯಕ್ಷಸಹಸ್ರರಿಪುಕ್ಷಯ | ದಕ್ಷಸುಪ್ರಭವೆಸರ್ವಡೆದ |
ಲಕ್ಷತರಣಿತೇಜೋಯುತಚಕ್ರಕೆ | ದಕ್ಷಿಣಕರವನೀಡಿದನು || ೫೭ ||

ಕಡೆಲೇಳಿರದೆ ಕುದಿಯೆ ತಳಹೊಳಗೊಳೆ | ಪೊಡವಿಯೆಣ್ದೆಸೆ ನಡನಡುಗೆ |
ನಡುಬಾನೊಳುರಿಹೊಗೆ ತೀವಲು ಚಕ್ರವ | ಹಿಡಿದು ತಿರುಹಲಾಚಕ್ರಿ || ೫೮ ||

ಪಗಲೊಳೆತ್ತಿದ ಪಂಜಿನ ಪರಿಯಂತಾ | ಪಗಲಾಣ್ಮನ ಮಂಡಲವು |
ಮಗಧಾಧಿಪತಿ ತಿರುಹುವ ಚಕ್ರ ಧಗಧಗ | ಧಗಿಪ ಕಾಂತಿಯೊಳೊದಗಿದುದು || ೫೯ ||

ಇಂತು ತಿರ‍್ರನರತಿರುಗುವ ಚಕ್ರವ ಕಂಡು | ಚಿಂತೆಯಿಂದಾ ಯಾದವರು |
ಇಂತೆಂದರು ಹರಿಗಿದು ಪರಿಹರಿಸುವೊ | ಡೆಂತುಟು ತನ್ನಳವಲ್ಲ || ೬೦ ||

ಎನುತ ಮಂತಣಗೊಳುತಿರಲತ್ತ ಮಗಧನ | ಘನತರ ಬಲವತಿ ಮುದದಿ |
ವನಮಾಲಿಗಿದು ಕಡೆಯೆಂದು ಬೊಬ್ಬಿರಿದಾರು | ವನಿತರೊಳಾಕೇಶವನು || ೬೧ ||

ತರಣಿಕರವ ಕಂಡಾಸೂರ್ಯೋಪಲ | ವುರಿವಂತಾದಿವ್ಯಚಕ್ರ |
ತಿರುಗುವುದನು ಕಂಡು ಕೇಸುರಿಗೆರಳ್ದಾ | ತಿರವಾಯಿಗಂಬನು ಹೂಡಿ || ೬೨ ||

ನಿಲಲೆಡಬಲದೊಳು ಭುವನೈಕವಿಕ್ರಮಿ | ಬಲರಾಮ ಧರ್ಮಜ ಭೀಮ |
ಕಲಿಪಾರ್ಥನಮಳ್ಗಳು ದಾರಣಪೂರಣ | ಚಲದಂಕನಾವಸುಪಾಲ || ೬೩ ||

ಧುರಧೀರನಭಿಚಂದ್ರ ಮೊದಲಾದ ಭೂಭುಜ | ರುರವಣೆಯಿಂ ಕೇಶವನ |
ಪರಿತಂದು ಮುಟ್ಟದ ಮುನ್ನ ಕಡಿವೆವೆಂದು | ಶರದೊಟ್ಟು ನಿಂದಿರಲಾಗ || ೬೪ ||

ಎಲೆ ಕೃಷ್ಣ ಸಾಯದೆಬಂದೆರಗಲ್ಲದೊ | ಡಲಸದೆ ಕಾಯ್ದುಕೊಳ್ಳೆಂದು |
ಚಲದಂಕನಾಸುಪ್ರಭಾತಚಕ್ರಮನಂ | ದಲಘುವೇಗದೊಳಿಡಲಾಗ || ೬೫ ||

ಎಡೆಯೊಳು ತತ್ತರದರಿವೆವೆನುತ ಬಿ | ಲ್ವಿಡಿದು ಸಂಧಾನದಿನಿಂದ |
ಕಡುಗಲಿಗಳ ಕಣ್ಣವಂಚಿಸಿಯಾ ಚಕ್ರ | ಘುಡುಘುಡಿಸುತ ಮುಟ್ಟೆ ಬಂದು || ೬೬ ||

ಬಲಯುತ ಬಲನನುಜನ ಮೂರುಸೂಳು ಕ | ಣ್ಗೊಳಿಪಂದದಿ ಬಲವಂದು |
ತಳುವದೆ ಬಲದಬಾಹುವಿನಗ್ರದೊಳು ನಿಂದು ದಿಳೆಗಾಶ್ಚರ್ಯಮಪ್ಪಂತೆ || ೬೭ ||

ಇಂತಾದುದನು ಕಂಡತಿ ಮುದದಿಂದ ಮು | ರಾಂತಕನಾಚಕ್ರವಿಡಿದು |
ಇಂತೆಂದನೆಲೆ ಮಾಗಧ ಕೇಳು ತೀರಿತು | ಪಿಂತೆ ನೀನೆಸಗಿದ ಪುಣ್ಯ || ೬೮ ||

ಅದರಿಂದೆ ನೀನೆನ್ನ ಗೆಲುವುದಿಲ್ಲೆಂದತಿ | ಪದುಳದಿಂದೆಯ್ತದೆನ್ನ |
ಪದಕೆ ನಮಿಸು ನಿನ್ನ ಹೃದಯದೊಳಗೆ ಮುನ್ನ | ಹುದುಗಿದ ಮಾನವನುಳಿದು || ೬೯ ||

ಎಂದು ನುಡಿಯೆ ಕರಗಿದ ಲೋಹರಸದುಷ್ಣ | ನಂದುವಾಗಾನೀರೊಳಗೆ |
ಒಂದು ನಿಮಿಷ ಗುಳುಗುಳಿಪಂತೆ ಮಾಗಧ | ನೆಂದನಿಂತೆಂದು ಘೂರ್ಣಿಸುತ || ೭೦ ||

ಗಾರುವಾತೇ ಕೇಳೆಲವೋ ಗೋವಳ ನಾನು | ಪಾರಿಸಲೆನ್ನ ಕೈಯಿಂದ |
ಪಾರುಂಬಳೆ ಪೋದೊಡೆನ್ನ ವಿಕ್ರಮದೇಳ್ಗೆ | ಪಾರಿದುದೇಯೆಂದೆನುತ || ೭೧ ||

ನೆಲದೊಳು ನೆರೆವುದನನುಕರಿಪಂತೆ ಭೂ | ತಳಕಾರಥಿದಿಂ ಧುಮುಕಿ |
ಅಲಸದೆ ಝಳಿಪಿಸುತುರುಚಂದ್ರಹಾಸಮ | ನಲಘುವಿಕ್ರಮಿ ಬರುತಿರಲು || ೭೨ ||

ಮುನಿದು ಮುರಾಂತಕನಾಚಕ್ರದಿಂದಿಡ | ಲನಿತರೊಳಾಮಾಗಧನಾ |
ಮಿನುಗುವ ಮಕುಟರಂಜಿತ ಶಿರವರಿದುದಂ | ದನುಮಿಷತತಿ ಪೊಗಳ್ವಂತೆ || ೭೩ ||

ಪರಿವೇಷದ ಮಧ್ಯದೊಳಗಣ ದೋಷಾ | ಕರಮಂಡಲವೊಯೆಂಬಂತೆ |
ಕರಮೊಪ್ಪಿತಾಮಗಧೇಶನ ಮಸ್ತಕ | ಮುರುತರ ಚಕ್ರದ ನಡುವೆ || ೭೪ ||

ವೀರರಸಾಬ್ಧಿಯಾವರ್ತಮಧ್ಯದ ರಕ್ತ | ವಾರಿಜವೆಂಬಂದದೊಳು |
ಆ ರಾಯನ ಪಂದಲೆ ಚಕ್ರಮಧ್ಯದೊ | ಳಾರೈಯದೆ ತಿರುಗಿದುದು || ೭೫ ||

ರಾಹುಬಿಂಬಾಗ್ರಸ್ಥಮಯರವಿಮಂಡಲ | ವಾಹಿಂದೆಸೆಯೊಳು ಬೀಳ್ವಂತೆ |
ಊಹಿಸಲಾಯಾಚಕ್ರಸಹಿತಬೀ | ಳ್ವಾಸಾಹಸಿಯ ಉತ್ತಮಾಂಗಾ || ೭೬ ||

ಸುರರಾಜನಿಡೆ ರತ್ನಶೈಲಶಿಖರಿಯಿಳೆ | ಗುತುಳ್ವಂತಾಚಕ್ರದಿಂದ ||
ಹರಿಯಿಡೆ ಮಗಧನಮಣಿಗಣಯುತ ಶಿರ | ವುರುಳ್ದುದು ಧರಣೀತಳಕೆ || ೭೭ ||

ಮರುತಮಾರ್ಗದೊಳು ಗುಡಿಯಕಟ್ಟಿ ವಸ್ತ್ರಮ | ನಿರದೆ ನಾರದ ನಟಿಸಿದನು |
ಅರಲಸರಿಯನು ಸುರಿದು ಸುರಸತಿಯರು | ಹರಸಿ ಸೇಸೆಯ ಸೂಸಿದರು || ೭೮ ||

ಅನಿತರೊಳುಣ್ಮೆಯಭಘೋಷಧ್ವನಿ | ಜನನುತ ರಾಮ ಕೇಶವರು |
ಅನುರಾಗದಿಂ ಪಾಂಡವರು ಸಹಿತ ಬೀಡಿ | ಗನಿಮಿಷಪತಿ ವಿಭವದೊಳು || ೭೯ ||

ಬರಲತ್ತ ವಿಜಯಾರ್ಧಾಚಲಕಾಘನ | ತರವಿಕ್ರಮ ವಸುದೇವ |
ಸ್ಮರಶಂಭುಸುಕುಮಾರರು ಪೋಗಿ ತದ್ಧುರ | ಧರೆಯೊಳು ಖಚರಭೂವರರ || ೮೦ ||

ಮೊತ್ತದೊಳರೆಬರನೋಡಿಸಿಯರೆಬರ | ನೊತ್ತಂಬದಿಂ ಕಾದಿ ಗೆಲಿದು |
ತತ್ತರದರಿದರೆಬರಬಳಿಕರೆಬರ | ವಿತ್ತವ ಕೊಂಡೀತೆರದಿ || ೮೧ ||

ಎಲ್ಲರ ಕಾಣಿಸಿಕೊಂಡಾಗಿರಿಯಂ | ನಿಲ್ಲದೆ ಕುರುಭೂಮಿಗಾಗಿ |
ಬಲ್ಲಿದರಾಬಲಕೇಶವರೆಡೆಗತಿ | ಸಲ್ಲೀಲೆಯಿಂ ತಿರುಗಿದರು || ೮೨ ||

ಬಳಿಕ ಮಾಗಧನನುಜರು ತನುಜರು ಬಂಧು | ಬಳಗವನೆಲ್ಲವ ಬರಿಸಿ |
ಅಲಘುವಿನಯವನುಸುರಿಯುಡುಗೊರೆಯಿತ್ತು | ಕಳುಹಿಯವರ ಪಟ್ಟಣಕೆ || ೮೩ ||

ಆ ಮರುದಿನ ನಿಜಸುತರಳುವಿಗೆಯ | ದ್ದಾಮದುಃಖದೊಳಳುತಿಪ್ಪ |
ಆ ಮಾತೃ ಪಿತೃ ಧೃತರಾಷ್ಟ್ರ ಗಾಂಧಾರಿಯ | ನಾಮಹಿಮರು ಪಾಂಡವರು || ೮೪ ||

ಪದಯುಗಕೆರಗಿಯವರ ಮನವಿಡಿವಂತೆ | ಸದುವಿನಯವನಾಡಿ ಬಳಿಕ |
ವಿದುರನನುಪಚರಿಸುತ ಬಂಧುಗಳ ದುಃಖ | ದೊದವನೆಲ್ಲವ ಬಿಡಿಸಿದರು || ೮೫ ||

ಬಳಿಕ ಚೊಚ್ಚಿಲಮಗನಾಕರ್ಣನಳಿದುದ | ಕಳಲ್ವ ಜನನಿಕೊಂತಿಯನು |
ಬಲಯುತಪಾಂಡವರೇಕಮ್ಮ ನಿನಗು | ಮ್ಮಳವೆಂದು ಮಾಡೆ ಬಿನ್ನಪವ || ೮೬ ||

ಆ ಕರ್ಣನ ವೃತ್ತಾಂತವಮನೆಲ್ಲವ | ನಾಕೊಂತಿ ಸುತರಿಗರಿಪಲು |
ಈ ಕಾರ್ಯಮನೆವಗರುಪಲಿಲ್ಲವೆಯೆಂದು | ಭೂಕಾಂತರಳಲಿದರಾಗ || ೮೭ ||

ಆ ದುಃಖದೊಳಿಪ್ಪ ಪಾಂಡವರೆಡೆಗೆ ದಾ | ಮೋದರನಿರದೆಯ್ತಂದು |
ಆದರದಿಂದುಪಚರಿಸಿ ಬಳಿಕ ಬೀಡಿ | ಗಾದಿನದೊಳು ಮಗುಳಿದನು || ೮೮ ||

ಆ ಮರುದಿನದುದಯದೊಳುರುಮುದದಿಂ | ರಾಮ ಕೇಶವರು ಪಾಂಡವರ |
ಪ್ರೇಮದಿ ಕೂಡಿಕೊಂಡಾನಿಜಪುರಕೆ ಯು | ದ್ಧಾಮವಿಭವದಿನೆಯ್ದಿದರು || ೮೯ ||

ಮಗಧನ ಕೊಂದು ಮಕ್ಕಳು ಬಪ್ಪುದನು ಕೇಳಿ | ಸುಗುಣಿ ಸಮುದ್ರವಿಜಯನು |
ನಗರಿಯೊಳಷ್ಟಶೋಭೆಯನು ಮಾಡಿಸಿಯೊಗು | ಮಿಗೆ ಹರುಷದೊಳಿದಿರ್ವರಲು || ೯೦ ||

ಮೃದಪದಲಲಿತಾರುಣಸರಸೀರುಹಕೆ | ಸದುವಿನಯದೊಳು ಬಂದೆರಗೆ |
ಮುದದಿಂದಾ ಮಕ್ಕಳ ಬಿಗಿಯಪ್ಪಿಯ | ಗ್ಗದಮರುಕದಿ ಹರಿಸಿದನು || ೯೧ ||

ಈ ಕ್ರಮದಿಂದ ಹರಕೆಯಾಂತು ನಗರದಿ | ಕ್ಚಕ್ರಮನೆಲ್ಲಮನಿರದೆ |
ಚಕ್ರರತ್ನದ ದಿವ್ಯಕಾಂತಿಯಾಕ್ರಮಿಸೆ ತ್ರಿ | ವಿಕ್ರಮನಂದೆಯ್ತಂದು || ೯೨ ||

ನಡೆನೋಡುವ ನಗರೀನಾರಿಯರ ಕಣ್ಣ | ಕಡೆಯೊಳೊರೆತು ಬೀದಿವರಿವ |
ಕಡುವರೆಗಿನ ಕಾಳ್ಪೂರದೊಳಗೆ ಹೊಕ್ಕು | ನಡೆತಂದರಾರಾಜ್ಯಗೃಹಕೆ || ೯೩ ||

ಸತಿಯರು ಹರಸಿ ತಳಿವ ನವಶೇಷಾ | ಕ್ಷತೆಯಾಂತು ಗಜಮಸ್ತಕದಿ |
ಅತಿ ಮುದದಿಂದಿಳಿದರಮನೆಗೆಯ್ದಿಯ | ಚ್ಯುತನು ವಂದಿಸಿ ನೇಮಿಜಿನಗೆ || ೯೪ ||

ಮತ್ತೆ ತುಳಿಲ್ಗೆಯ್ದಿಂತೆಂದನೆಲೆ ದೇ | ವೋತ್ತಮ ನಿನ್ನ ಸೇವೆಯೊಳು |
ಉತ್ತಮಪದವಹುದೀಚಕ್ರಧರಸಂ | ಪತ್ತೊದಗುವುದೇನು ಚೋದ್ಯ || ೯೫ ||

ಎಂದು ವರ್ಣಿಸಿ ಕೆಲಹೊತ್ತಿರ್ದು ಬೀಳ್ಕೊಂಡು | ಬಂದು ಯಾದವಭೂವರರ್ಗೆ |
ವಂದನೆಯನು ಮಾಡಿ ಹರಕೆವಡೆದು ನಿಜ | ಮಂದಿರಕೆಯ್ತಂದನಾಗ || ೯೬ ||

ಓಲಗಶಾಲೆಯೊಳಗೆ ಸಿಂಹಪೀಠ | ಮೇಲೆ ಕುಳ್ಳಿರ್ದುರುಮುದದಿ |
ಓಲೈಸಿಬಂದ ರಾಜಾನೀಕವನು ತ | ಮ್ಮಾಲಯಕೊಲಿದು ಬೀಳ್ಕೊಟ್ಟು || ೯೭ ||

ಬಳಿಕ ನಿಜಾಲಯಕೆಯ್ದಿ ಕಿರಿದು ಪಗ | ಲಳಿಯಲು ಧರ್ಮನಂದನನ |
ಅಲಘುವಿನಯದಿಂದ ಹಸ್ತಿನನಗರಿಗೆ | ಕಳುಹಿದನಾಕೇಶವನು || ೯೮ ||

ಮುರರಿಪುವನು ಬೀಳ್ಕೊಂಡು ಹಸ್ತಿನಪುರ | ಕಿರದನುಜರುಗೂಡಿಬಂದು |
ಹರುಷದೊಳರಮನೆಯೊಕ್ಕು ಯುಧಿಷ್ಠಿರ | ನರನಾಥಚಂದ್ರನೊಪ್ಪಿದನು || ೯೯ ||

ತದನಂತರದೊಳಗಾಧೃತರಾಷ್ಟ್ರಗೆ | ವಿದುರಗೊಲಿದು ಬೇರೆ ಬೇರೆ |
ವಿದಿತಮಪ್ಪಾವಿಷಯಮನಿತ್ತು ಸಲೆಸ | ಮ್ಮದದಿಂದಾನಗರಿಯೊಳು || ೧೦೦ ||

ಅಣುಗಿನನುಜರನಿರಿಸಿ ತಾನೆಸೆವ ದ | ಕ್ಷಿಣಮಧುರಾಪುರಕೆಯ್ದಿ |
ಕ್ಷಣವುಳಿಯದೆ ಧರ್ಮವರ್ತನದೊಳು ಧರ್ಮ | ನಣುಗನು ಸಲೆಸುಖಮಿರ್ದ || ೧೦೧ ||

ಇಂತಾಧರ್ಮತನುಜನನುಜರುಗೂಡಿ | ಸಂತಸದಿಂ ಕೀರ್ತಿಯೆಂಬ ||
ಕಾಮತಾಮಣಿಯನು ಹರವರಿಯಾದ ದಿ | ಗಂತದೊಳಾಡಿಸಲಿತ್ತ || ೧೦೨ ||

ವರುಣನಂದದಿ ವಾಸುದೇವಭೂವರನಾ | ಶರಧಿಮಧ್ಯದಿ ಶೋಭಿಸುವ |
ಪುರವರದೊಳು ಸಲೆ ಸುಖಮಿರ್ದಾಮಾರ್ಗ ಶಿರಶುದ್ಧ ದಶಮಿಪಗಲು || ೧೦೩ ||

ಹರುಷದಿಂದಾದಿಗ್ವಿಜಯೋದ್ಯೋಗಮ | ನಿರದೆ ರಚನೆಗೈವುದೆಂದು |
ನಿರವಿಸಲೊಡನತಿಭರದಿಂದ ಸೇನಾ | ವರರು ಬೆಸಸಲನಿತರೊಳು || ೧೦೪ ||

ಮಾರಾಂತರಿಪು ಕರಿಹರಿಯ ಘರ್ಜನೆಯನು | ಮೀರಿವದೇವಸಂಜನಿತೆ |
ಆರು ಮಹಾಭೇರಿಯ ದನಿಗಯ್ಸಿಯೀ | ರಾರುಶಂಖವ ಪೂರೈಸಿ || ೧೦೫ ||

ಅನುರಾಗದಿಂ ಶ್ರೀವತ್ಸಲಾಂಛನನಾ | ಜಿನಪತಿ ನೇಮೀಶ್ವರನ |
ಮನಗೊಂಡು ಪೂಜಿಸಿ ಸುತ್ತಿಗೆಯ್ದು ಮೃದುಪದ | ವನಜಕೆರಗಿ ಬೀಳ್ಕೊಂಡು || ೧೦೬ ||

ಪೂಜಿಸಿ ಚಕ್ರಾದಿಯಾದ ರತ್ನಂಗಳ | ರಾಜಿಪಶುಭಲಗ್ನದೊಳು |
ರಾಜಮಂದಿರವನು ಪೊರಮಟ್ಟು ಬಳಸಿದ | ರಾಜಮಂಡಲಮಧ್ಯದೊಳು || ೧೦೭ ||

ಹರುಷದಿ ಬಲ ಕೇಶವರು ಸಿಂಹವಾಹಿನಿ | ಗರುಡವಾಹಿನಿಯೆಂನ ರಥವ |
ಇರದೇರಿ ರಾಜಧಾನಿಯ ಪೊರಮಟ್ಟಾ | ಧರೆಯದಿರ್ವಂದದಿ ನಡೆದು || ೧೦೮ ||

ಕಡೆಯಿಲ್ಲದ ಬಹುಕಟಕದ ಪದಧೂಳಿ | ಯಡರೆ ಹೂಳಿದುದಂಬುರಾಶಿ |
ಮೃಡನ ಮಂಡೆಯ ಗಂಗೆಯಲ್ಲ ಮಣ್ಣಾದುದು | ಪೊಡೆಯಲರನ ದಂಡು ನಡೆಯೆ || ೧೦೯ ||

ಈ ಪರಿಯಿಂದ ನಡೆದು ವಿಜಯಾರ್ಧಮ | ಹಾಪರ್ವತವ ಮುಟ್ಟಿ ಬಂದು |
ಕೋಪಕೃತಾಂತನದಾರ್ಯಾಖಂಡದ | ಭೂಪರನೆರಗಿಸಿಕೊಂಡು || ೧೧೦ ||

ಮತ್ತಾ ಖಚರಗಿರಿಯ ವಿದ್ಯಾಧರ | ರುತ್ತಮ ವಸ್ತುಸಂತತಿಯ |
ಮತ್ತಯೌವನೆಯರಪ್ಪಾಪೆಣ್ಮಕ್ಕಳ | ನೊತ್ತಿ ಕಪ್ಪವಕೊಂಡು ಬಳಿಕ || ೧೧೧ ||

ಹರುಷದಿ ಕೈಲಾಸಗಿರಿಗೆಯ್ದಿ ಭರತೇ | ಶ್ವರ ವಿರಚಿತ ಚೈತ್ಯಗೃಹದ |
ವರಜಿನರೆಪ್ಪತ್ತೀರ್ವರ ಪದಯುಗ | ಸರಸಿಜಕೆರಗಿ ಬಂದಾಗ || ೧೧೨ ||

ಬಳಿಕ ಗಂಗೆಯ ಮೂಡಣ ಮ್ಲೇಚ್ಛಖಂಡದ | ಬಲಯುತಬಹುಭೂಭುಜರಾ |
ತುಳಿಲುಗೆಯಿಸಿಕೊಂಡು ತರುಣೀರತ್ನಂ | ಗಳನು ಕಪ್ಪವ ಕೊಂಡುಬಂದು || ೧೧೩ ||

ಸುರಗಂಗೆಯ ವಾರಾಶಿಯ ನಡುವಣ | ಧರೆ ತೆರಪಿಲ್ಲದಂದದೊಳು |
ಉರುಸೇನಾಸಮನ್ವಿತರಾಗಿ ದಕ್ಷಿಣ | ಶರಧಿ ವಿಷಯದೊಳಗಿರ್ಪ || ೧೧೪ ||

ಮಾಗಧವರತಪ್ರಭಾಸಾಗರರೆಂ | ಬಾಗಂಡುಗಲಿಯಮರರನು |
ಬೇಗದಿ ಸಾಧಿಸಿ ರತ್ನಾಭರಣವ | ನಾಗ ಕಪ್ಪವ ಕೊಂಡುಬಳಿಕ || ೧೧೫ ||

ಪಡುವಣ ಶರಧಿಯ ಸಿಂಧುನದಿಯನಟ್ಟ | ನಡುವಣ ಮ್ಲೇಚ್ಛದೇಶವನು |
ನಡುಗಿಸಿಯಾ ನೃಪರನು ಕಾಣಿಸಿಕೊಂಡು | ಪಡೆದು ಪಲವು ವಸ್ತುಗಳನು || ೧೧೬ ||

ಇಂತು ತ್ರಿಖಂಡಮಂಡಲವನು ಸಾಧಿಸಿ | ಸಂತಸದಿಂ ತಿರುಗಿದರು |
ಪಿಂತೆ ಮುಂತೆ ಪದಿನಾರುಸಾಸಿರ ನೃಪ | ಸಂತತಿಯೋಲೈಸಿ ಬರಲು || ೧೧೭ ||

ಗಗನದೊಳಿನಿಸೆಡೆದೆರಪಿಲ್ಲದಂದದಿ | ಗಗನಗಾಮಿಗಳೆಯ್ತರಲು |
ಅಗಣಿತಮಪ್ಪ ವಾಹಿನಿಗೂಡಿಯಾ ನಿಜ | ನಗರಿಗಿರದೆ ನಡೆತರಲು || ೧೧೮ ||

ಮುತ್ತಿನಾರತಿಯನೆತ್ತುವ ಸೇಸೆಯಿಕ್ಕುವ | ಬಿತ್ತರದಿಂದ ಹರಸುವ |
ವೃತ್ತಕುಚೆಯರಗೊಂದಣದಿಂ ನಿಜಗೃಹ | ಕುತ್ತಮರೆಯ್ತಂದರಾಗ || ೧೧೯ ||

ಆ ಮರುದಿನದೊಳು ವಿದ್ಯಾಧರಪನ್ನ | ಗಾಮರರಬ್ಧಿವಿಜಯರು |
ಆ ಮಹಿಮನು ಧರ್ಮನಂದನ ಮೊದಲಾದ | ಭೂಮಿಪರೆಲ್ಲರೆಯ್ತಂದು || ೧೨೦ ||

ಭಾಸುರ ಬಹುಮಣಿಪೀಠದೊಳಾಬಲ | ವಾಸುದೇವರ ಕುಳ್ಳಿರಿಸಿ |
ಸಾಸಿರದೆಂಟುಕೊಡದಿ ತೀರ್ಥಾಂಬುವ | ಸೂಸಿದರಾ ಮಸ್ತಕದೊಳು || ೧೨೧ ||

ಬಳಿಕ ದುಕೂಲವಸನದಿವ್ಯಭೂಷಣ | ಗಳಿನೊಪ್ಪುವಂತಲಂಕರಿಸಿ |
ಎಳೆಮುತ್ತಿನಸೇಸೆಯ ಸಿರಿದಲೆಯೊಳು | ತಳಿದೊಲವಿಂ ಹರಿಸಿದರು || ೧೨೨ ||

ಸಾಸಿರಯರಕ್ಷಿತಚಕ್ರಗದೆ ಶಕ್ತಿ | ಯಾಶಂಖಶಾರ್ಙಿಕೌಸ್ತುಭವು ||
ಭಾಸುರನಂದಕವೆಂಬ ಮಹಾರತ್ನ | ವೋಸರಿಸದೆ ಬೆಸಗೆಯ್ಯೆ || ೧೨೩ ||

ಹರಿನೀಲವರ್ಣನನಂತವೀರ್ಯನು ದಶ | ವರ ಕಾರ್ಮುಕೋತ್ಸೇಧಯುತನು |
ಎರಡೆಂಟುಸಾಸಿರಮಕುಟಾಧೀಶ್ವರ | ರ್ಗರಸನುಮರ್ಧಚಕ್ರೇಶ || ೧೨೪ ||

ಪದಿನಾರುಸಾಸಿರ ಸತಿಯರಿಗರಸನು | ವಿದಿತ ವಿಕ್ರಾಂತಸಂಯುತನು |
ಸದಮಲಮೂರ್ತಿ ಭುವನಭುಂಭುಕನೊ | ಪ್ಪಿದನಾಪುರುಷೋತ್ತಮನು || ೧೨೫ ||

ಸಾಸಿರದಿನ್ನೂರು ವರ್ಷಾಯುಷ್ಯಸು | ಧಾಸೂತಿವರ್ಣಾಂಗನೆಂಟು |
ಸಾಸಿರಸುದತೀಜನಪತಿಪತ್ತು ಶ | ರಾಸನತನುವಿನುತ್ಸೇಧ || ೧೨೬ ||

ಹಲಮುಸಲಗದಾಪರಿಘವೆಂಬಾನಾಲ್ಕು | ವಿಲಸಿತಮಪ್ಪ ರತ್ನಗಳು |
ಬಲರಾಮಗೆ ಸಾಸಿರಯಕ್ಷರಕ್ಷಿತ | ಗಳು ಸಮನಿಸಿಯೊಪ್ಪಿದುವು || ೧೨೭ ||

ಇಂತು ಬಲಾಚ್ಯುತರವನಿಯೆಲ್ಲವ ನಿ | ಶ್ಚಿಂತದಿನಾಳುತಮಿಹರು |
ಸಂತಸದಿ ಶಶಿ ಸೂರ್ಯರು ಸಕಲದಿ | ಗಂತಮನಾಳುವಂದದೊಳು || ೧೨೮ ||

ಜಗದೇಕವೀರ ಜಯಾಂಗನೆಗಧಿಪತಿ | ಯಗಣಿತ ಮಣಿಭೂಷಣನು |
ನರಧರನರಸುಗೆಯ್ದನು ನೃಪವರಕುಲ | ಗಗನವಾರಿಜಬಾಂಧವನು || ೧೨೯ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದು ಮೂವತ್ತೊಂದಾಶ್ವಾಸ || ೧೩೦ ||

ಮೂವತ್ತೊಂದನೆಯ ಸಂಧಿ ಸಂಪೂರ್ಣಂ