ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಸುರನರಫಣಿಯಕ್ಷರಾಕ್ಷಸವಿದ್ಯಾ | ಧರಕಿನ್ನರಕಿಂಪುರುಷ |
ಗರುಡ ಗಾಂಧರ್ವಪತಿಗಳೊಲೈಸುತ | ಲಿರಲೊಪ್ಪುವಾ ಜಿನಪತಿಗೆ || ೨ ||

ಬಳಿಕೇಕಕುಂಡಲನೆಳ್ದು ಮುಗಿದು ಕರ | ನಳಿನವನಳಿಕದೊಳಿಟ್ಟು |
ಕಲಿನವಿಜಯ ಬೆಸಸೀಜಲಭಂಡಾರ | ದೊಳಗಮರೇಂದ್ರ ನಿರ್ಮಿಸಿದ || ೩ ||

ದ್ವಾರಾವತಿನಗರಿಗೆಯಿದ ರಕ್ಷಿಪ | ನಾರಾಯಣನರಪತಿಗೆ |
ಭೂರಿಭೂಭುಜರಿಂದೋಲೈಸುವೀ ಸಿರಿ | ಯೀ ರೀತಿಯಿಂ ಚಿರಮಿಹುದೇ || ೪ ||

ಎನಲಾಕೇವಲಬೋಧನಿಂತೆಂದನು | ವನರಾಶಿಯ ಮಧ್ಯದೊಳು |
ಅನಿಮಿಷಪುರಕೆಣೆಯೆನಿಪಾ ನಗರಿಯ | ವನಮಾಲಿಯ ಕೇಡಿನಿರವ || ೫ ||

ಕಳ್ಳಿಂದೀ ದೀಪಾಯನನಿಕ್ಕುವ | ದಳ್ಳುರಿಯಿಂದೆಲೆ ನೃಪತಿ |
ಫುಲ್ಲನಾಭನು ನೀಮೀರ್ವರುಳಿಲಲ್ಲಿ | ಯುಳ್ಳವರೆಲ್ಲರುಗೂಡಿ || ೬ ||

ಈರಾರುವರುಷವೆಂಬಂದಿಗುರಿವುದಾ | ದ್ವಾರಾವತಿಪುರವರವು |
ವೀರಜರತ್ಕುಮಾರಕನಂಬಿನಿಂದಾ | ನಾರಾಯಣಗೆ ಸಾವಹುದು || ೭ ||

ಎನಲು ಯಾದವಭೂಪಾಲರ ಸಂತತಿ | ಯನುಕರಿಸಲು ವಿಸ್ಮಯವ |
ಮನುನಿಭಚರಿತರೋಹಿಣಿಯಗ್ರನಂದನ | ವಿನಯದೊಳಿಂತೆಂದನಾಗ || ೮ ||

ಭವರಹಿತನೆ ನಮ್ಮೀರ್ವರ ಮುಂದಣ ಭವದವಸ್ಥೆಯ ಪೇಳ್ವುದೆನಲು |
ಅವರೆಂದರೀ ಕೃಷ್ಣನಳಿದುವಾಳುಕಮೆಂಬ | ವಿವಿಧ ದುಃಖಮನಿರದೀವ || ೯ ||

ನರಕದೊಳೊಗೆದೇಳ್ಸಾಗರೋಪಮದಾಯು | ಪರಿಪೂರ್ಣಮಪ್ಪನ್ನಮಿರ್ದು |
ಮರಣವವಡೆದುತ್ಸರ್ಪಿಣಿಕಾಲದೊ | ಳಿರದೆ ತೀರ್ಥಂಕರನಹನು || ೧೦ ||

ನೀನೀ ಕೃಷ್ಣನ ಸಾವಿನ ದುಃಖದಿ | ಜೈನದೀಕ್ಷೆಯನುರೆ ಧರಿಸಿ |
ಸಾನುಭಾವದೊಳಂಗವ ಬಿಟ್ಟೈದನೆ | ಯಾನಾಕದೊಳು ಸಂಜನಿಸಿ || ೧೧ ||

ಅಲ್ಲಿಯಳಿದು ಕೃಷ್ಣ ತೀರ್ಥಂಕರಂತರ | ದಲ್ಲೀ ನೆಲದೊಳು ನೀನು |
ಎಲ್ಲಾ ಕರ್ಮವಕೆಡಿಸಿ ತೀರ್ಥಂಕರ | ವಲ್ಲಭನಾಗುವೆಯೆನಲು || ೧೨ ||

ಇನ್ನು ಭವಾಂಬುಧಿಯಿಂದೆಯ್ದಲತ್ಯಾ | ಸನ್ನಸರ್ವೇಶನವಚನ |
ರನ್ನದ ದೀವಿಗೆಯೆಂದಾಕೃಷ್ಣನ | ತ್ಯುನ್ನತ ಹರುಷವ ತಾಳಿ || ೧೩ ||

ಯಾದವರೆಲ್ಲರು ಕೂಡಿ ಜೀನೇಶನ | ಪಾದಕೆರಗಿ ಬೀಳ್ಕೊಂಡು |
ಸಾದರದಿಂ ದ್ವಾರಾವತಿಗಾದಾ | ಮೋದರನಿರದೆಯ್ದಿದನು || ೧೪ ||

ಅಂದಾದೀಪಾಯನನೀ ಪುರವೆ | ನ್ನಿಂದ ಕೆಡುವುದಕ್ಕೇನು |
ಎಂದು ನಿರ್ವೇಗದಿ ಜಿನದೀಕ್ಷೆಯ ತರಿ | ಸಂಧು ಧರಿಸಿ ಪೋದನಿತ್ತ || ೧೫ ||

ಎನ್ನಗ್ರಜನ ಕೊಲ್ವೀಬಾಣವೇಕೆಂದು | ಮುನ್ನೀರೊಳಗದ ಹಾಕಿ |
ತನ್ನ ನೆಲೆಯಬಿಟ್ಟು ಬೇಡವಳ್ಳಿಗೆ ಪೋದ | ನುನ್ನತನಾಜರತ್ಕುವರ || ೧೬ ||

ಪುರುಷೋತ್ತಮನಾಪುರವರದೊಳಗುಳ್ಳ | ಸುರೆಯನೆಲ್ಲವ ನಿಶ್ಯೇಷ |
ಭರದಿಂದೂರಮುಂದಣ ಕಲ್ಲುಡೋಣೆಯೊ | ಳ್ಸುರಿಯಿಸಿ ಸುಖಮಿರುತಿರ್ದ || ೧೭ ||

ಶರಧಿ ಮಧ್ಯದೊಳು ಪುರಂದರನಿರ್ಮಿತ | ಪುರಮಿಂತಿದಕೆ ಕೇಡಹುದು |
ನಿರುತ ಕಂಡಾಮನಿಜರ ಬಾಳ್ವೆಯದು ಸು | ಸ್ಥಿರಮಹುದೇಯೆಂದು ಬಗೆದು || ೧೮ ||

ಇನ್ನು ಸಂಸಾರದ ಪಂಬಲು ಬೇಡೆಂದು | ಚೆನ್ನಿಗನಾಚಿತ್ತಭವನು |
ತನ್ನ ಜನನಿ ರುಗ್ಮಿಣಿದೇವಿಯ ಪದ | ಸನ್ನಿಧಿಗಿರದೈತರಲು || ೧೯ ||

ಏನಣ್ಣ ಪರಿಚಾರಕರೋರ್ವರಿಲ್ಲದೆ | ಹೀನಂತೇಕಾಕಿಯಾಗಿ |
ನೀನೋರ್ವನೆ ಬಂದ ಬಗೆ ಲೇಸಾಯ್ತೆನ | ಲಾ ನುಡಿಗಿಂತೆಂದನಾಗ || ೨೦ ||

ದೇವಿ ಬಿನ್ನಪಮೀ ಜೀವನನಾದಿಯಿಂ ದೀವಿಧದಿಂದೋರ್ವನಾಗಿ |
ಓವದೆ ತಿರುಗುವನದು ನಿಶ್ಚಯಮೆಂಬ | ಭಾವಮನರುಪಲೆಯ್ದಿದೆನು || ೨೧ ||

ಎನಲಿವ ಚರಮಾಗನು ವೈರಾಗ್ಯದ | ಮನದಿಂದೆಯ್ದಿದನೆಂದು |
ವನಿತಾಮಣಿ ಹೃದಯದೊಳಳ್ಕಿಯಾನಿಜ | ತನುಜಗಿಂತೆದಾಡಿದಳು || ೨೨ ||

ಧೀರ ಲಲಿತನವಗೇರುಂಜವ್ವನ | ತೀರದೆಂಬಾ ನುಡಿಗೇಳಿ |
ಘೋರಮಪ್ಪೀಸಂಸಾರದ ಸಲೆದುಃಖ | ತೀರಿದೊಡದು ತೀರುವುದು || ೨೩ ||

ಎಂದು ಮತ್ತಿಂತೆಂದನಾ ನೇಮೀಶ್ವರ | ನಂದನ ಬೆವಸಾಯವನು |
ಮುಂದುವರಿದು ಮಾಡುವೆನೆನ್ನ ಮೇಲಣ | ದೊಂದು ಮಮತೆ ಬೇಡ ನಿನಗೆ || ೨೪ ||

ಎಂದೊಡೆಲೇತನುಜಾತ ನಿನ್ನನು ಬಿಡು | ವಂದಮೆನಗೆ ತೀರದೆನಲು |
ಮುಂದುವರಿದು ಜವನೊಯ್ವಾಗ ಬಿಡದಿ | ರ್ಪಂದ ನಿಮಗೆ ಸಮನಿಪುದೇ || ೨೫ ||

ಇಂತೆಂದಾನಿಜಸುತನ ನುಡಿಯ ಕೇಳಿ | ಚಿಂತೆಯಿಂದಾನಿಜಜನನಿ |
ಅಂತರಿಸದೆ ಮೂರ್ಛೆಗೆ ಸಲೆ ಕಂಡಾ | ಕಂತುಶೀತಲದಿನೆಚ್ಚರಿಸಿ || ೨೬ ||

ಎಲೆ ತಾಯೆ ನಿನ್ನ ಸಂಸಾರದ ದುಃಖದ | ಬಲುಹ ನೇಮೀಶ್ವರನಿಂದ |
ಸಲೆಕೇಳಿಯಿಂತಪ್ಪ ದುರ್ವಿಚಾರಮ ನೀನು | ನೆಲೆಗೊಳಿಪುದು ಮತವಲ್ಲ || ೨೭ ||

ಎಂದು ಯುಕ್ತಾಯುಕ್ತಿಯಿಂ ನಿಜಜನನಿಯ | ನಂದೊಂಬಡಿಸಲು ಕೇಳಿ |
ಇಂದುವದನೆ ಸಿದ್ಧರಸಸೋಂಕಿದ ಲೋಹ | ದಂದದಿನತಿ ಶುದ್ಧೆಯಾಗಿ || ೨೮ ||

ಎಲೆ ನಿರ್ಮಲಾಂಗ ನೀನೆಸಗಿದುಜ್ಜುಗದ | ಗ್ಗಳಿಕೆಯೆನಗೆ ಕರ್ತವ್ಯ |
ನೆಲೆಯಿದೆ ನೀನೀಗಲರಿವೆಯೆನಲು ಕೇಳಿ | ಗೆಲವಹಡೆದ ಚಿತ್ತದಿಂದ || ೨೯ ||

ಮದನಕುಮಾರ ಮಾತೆಯ ಬೀಳ್ಕೊಂಬಾ | ಪದದೊಳು ರತಿವೈದರ್ಭೆ |
ಉದಧಿ ಕಮಾರಿಯರತಿಭರದಿಂ ಬಂ | ದೊದವಿ ನುಡಿದರಿಂತೆಂದು || ೩೦ ||

ಅಕಟಕಟಾ ಅಸುಗೀಶ ನಮ್ಮೊಳಗಪ್ಪ | ಸಕಲಭೋಗವನೆಡೆವಿಡದೆ |
ಅಕಲಂಕನಾಗಿ ಭೋಗಿಸದೆ ಬೀಳ್ಕೊಡೆ ಪಾ | ತಕವು ನಿನಗೆ ಸಂಭವಿಸದೆ || ೩೧ ||

ಮಳೆಯ ಮುಗಿಲನೋಡಿ ಮನೆಯೊಳಿರ್ದುದಕವ | ತುಳುಕುವ ಕಡುಹೆಡ್ಡರಂತೆ |
ಕುಲಗೆಟ್ಟ ಸವಣರ ನುಡಿಗೇಳಿ ನಮ್ಮನಿಂ | ತಿಳಿಗೆಯ್ವೆನೆಂದೆಣಿಸುವರೆ || ೩೨ ||

ಕಡುನೇಹದಿಂ ನಡೆನೋಳ್ಪ ಕಾಮಿನಿಯರ | ಕಡೆಗಣ್ಗಳಕಾಂತಿಯೆಂಬ |
ತೊಡವ ತೊಡೆದು ಬಗೆಗೆಟ್ಟ ಬೋಳರದೊಂದು | ನುಡಿಗೇಳಿ ಮರುಳಾದೆಯಲ್ಲ || ೩೩ ||

ಸತ್ತು ಸಗ್ಗದ ಸತಿಯರನು ಕೂಡುವೆನೆಂಬ | ಬತ್ತಲೆಗರ ಮಾತು ಕೇಳಿ |
ಉತ್ತಮ ರೂಪವತಿಯರ ಭೋಗಂಗಳ | ನೊತ್ತರಿಸುವೆನೆನಬಹುದೆ || ೩೪ ||

ಕಂಡಮಾತ್ರದೊಳು ಕೈವಲ್ಯಸುಖವನೀವ | ಪೆಂಡವಾಸವನುರೆ ತೊರೆದು |
ಮಂಡೆಹರಿಕರ ಮಾತನು ಕೇಳ್ವುದಕೆ ಮನ | ಗೊಂಡೆಯಲಾ ಜೀವಿತೇಶ || ೩೫ ||

ಹಸಿದು ಹಸಿದು ಮುಸುಕಿದ ಪಿತ್ತೋದ್ರೇಕದಿ | ಹುಸಿದು ನುಡಿವ ಕ್ಷಪಣಕರ |
ಹಸಗೆಟ್ಟು ನುಡಿಗೆಮ್ಮೊಳಪ್ಪೀ ಸೌಖ್ಯಮ | ನಸಮಾಸ್ತ್ರಕೇಳ್ವಿಡಂಬಿಪರೆ || ೩೬ ||

ಸೂತಕಮಿಲ್ಲದ ಸುದತಿಯರೊಳು ಸುಖ | ಮೇತರದೆಂಬ ಬಲ್ಲವರ |
ಮಾತುಗೇಳದೆ ಪುಷ್ಪವತಿಯರಾಗದ ಸಗ್ಗ | ದಾ ತರುಣಿಯರ್ಗೆಳಸುವರೆ || ೩೭ ||

ಮಾರುಡೆಯಿಲ್ಲ ಮಜ್ಜನಮಿನಿಸಿಲ್ಲ ಕ | ರ್ಪೂರವೀಳೆಯಗೊಳಲಿಲ್ಲ |
ಆರೋಗಣೆಯಿಲ್ಲದಾಮಿಟಿಮಿಟಿಸಗ್ಗ | ದಾತನ್ವಿಯರಿಗೆಳಸುವರೆ || ೩೮ ||

ಕರುಣಮಿಲ್ಲದೆ ಕಡುನಂಬಿದವರನಾ | ದರಿಸದೆ ನಿರ್ವೇಗಮೊದವಿ |
ಪರಿಹರಿಸುವುದುಚಿತವೆ ಪ್ರಾಣನಾಥಾ | ಪರಮದಯಾಮೂಲನಿಧಿಯೆ || ೩೯ ||

ಚಿಕ್ಕಹರೆಯದ ಚಿನ್ನದ ಬೊಂಬೆಯಂದದ | ಚೊಕ್ಕಳಿಕೆಯ ಚೆಲ್ವುವಡೆದ |
ಉಕ್ಕುವ ಜವ್ವನೆಯರ ತೊರೆವುದಕೆ ತಂ | ದಿಕ್ಕಿದೆಯಾ ನಿನ್ನ ಮನವ || ೪೦ ||

ಚೆಲುವರದೇವ ನಿನ್ನೊಲವೆ ಜೀವನಮಾಗಿ | ಸಲೆ ಬಾಳು ಒಲುಮೆಗಾತಿಯರ |
ತೊಲಗಿದೆಯಾದೊಡೆ ನಿನ್ನ ಬೆಂಬಳಿಯೊಳು | ತೊಲಗುವುದಸು ನಿನ್ನಾಣೆ || ೪೧ ||

ಒಂದು ಜೀವಕೆ ದೇಹವೆರಡಾಗಿಸಲ್‌ ಬಾಳು | ವಂದದ ಮುಗ್ಧಾಂಗನೆಯರ |
ಇಂದು ನೀ ಬಿಟ್ಟು ತೊಲಗಲಿನ್ನು ಜೀವಿಸು | ವಂದವಾವುದು ತಿಳುಪೆಮಗೆ || ೪೨ ||

ಭಾವಿಸೆ ಪಂಚಮಹಾಪಾತಕದೊಳು | ಸ್ತ್ರೀವಧೆಯೇ ವೆಗ್ಗಳವು |
ಭಾವಜ್ಞ ನೀನಗಲಿದ ಸಮಯಕ್ಕೆಮ್ಮ | ಸಾವು ನಿಶ್ಚಿಯಮದರಿಂದ || ೪೩ ||

ಪರರ ಜೀವಕೆ ಬಾಧೆವಡಿಸಲು ಸಪ್ತಮ | ನರಕಮೆಂಬಾ ಸಮಯವನು |
ನಿರುತದಿ ನಂಬಿಯಿಂತಿದನೆಣಿಸುವರೇ | ಸರಸಗುಣಾಲಂಕಾರ || ೪೪ ||

ತರುಣಿ ಮನದೊಳು ತವರೂರ ವಿಡಂಬಿಸಿ | ಪಿರಿದು ನಚ್ಚಿರ್ದರನೆಮ್ಮ |
ಪರಿಹರಿಸಿದೊಡೆ ಪಾತಕ ಸಂಭವಿಸದೆ | ವರಗುಣಮಣಿಭೂಷಣನೆ || ೪೫ ||

ಹರಿಗೋಲನೇರಿಸಿ ನಡೆತಂದು ತುಂಬಿದ | ತೊರೆಯ ನಡುವೆ ಸಟ್ಟುಗವ |
ಹರಿದು ಹಾಕುವರಂದವನೆಣಿಸುವರೇ | ನೆರೆನಂಬಿದ ಮಾನಿನಿಯರ || ೪೬ ||

ಪ್ರಾಯವೆಂಬುದು ಪರಿಮಲವಲರೊಳಗಿ | ರ್ಪಾಯಿರಮೀ ದೇಹಿಗಳಿಗೆ |
ಕಾಯಜ ಕೇಳಿಂತಿದನು ತೊರೆವುದ | ನ್ಯಾಯವಲ್ಲವೆ ಬಲ್ಲವರಿಗೆ || ೪೭ ||

ನಂಬಿದಬಲೆಯನೆಮ್ಮನು ನೀನು ವಿ | ಡಂಬಿಸಿ ಕೊಲುವುದುಚಿತವೆ |
ಎಂಬ ಸುದತಿಯರೊಳಿಂತು ನುಡಿದನಾ | ಶಂಬರಮದಮರ್ದನನು || ೪೮ ||

ಎಲೆ ಸತಿಯರಿರಾ ನೀವು ನುಡಿದ ಮಾತು | ನೆಲೆ ನಿಮ್ಮ ಕಣ್ಗಳಮುಂದೆ |
ಬಲ ನಾರಾಯಣರೀರ್ವರುಳಿಯೆ ನಮ್ಮ | ಕುಲಜರನೀನಗರಿಯನು || ೪೯ ||

ಈರಾರು ವರುಷಕ್ಕೆವುರಿಹತ್ತಿ ಬಳಿಕೀ | ವಾರಾಧಿ ಕೊಂಬುದೆಂಬುದನು |
ಕಾರುಣ್ಯನಿಧಿ ನೇಮಿಜಿನಪತಿ ನುಡಿದುದ | ನಾರೈದಿಂತಪ್ಪನುಡಿಯ || ೫೦ ||

ನುಡಿಯಬಹುದೆಯೆಂದಿವು ಮೊದಲಾದ ನು | ಣ್ನುಡಿಯಿಂದಾ ಮಡದಿಯರ |
ತಡೆಯದೆ ತಿಳುಹಿ ಬಲಾಚ್ಯುತರನುವೊಡಂ | ಬಡಿಸಿ ಬಳಿಕ ಬೀಳ್ಕೊಂಡು || ೫೧ ||

ಪದುಳದಿ ಶಂಭುಕುಮಾರಕನಾರತಿ | ಯದಧಿವಿದರ್ಭಾದೇವಿ |
ಮೊದಲಾದ ಸುದತಿಯರು ಸಾಸಿರವೊಡ | ನದಿರದೆ ಬೆಂಬಿಡದೆಯ್ದೆ || ೫೨ ||

ಸಮವಸರಣಕೆಯ್ದಿಯಾ ಜಿನಪನಪದ | ಕಮಲಕೆರಗಿ ದೀಕ್ಷೆಗೊಂಬ |
ಸಮಯಕ್ಕಾರುಗ್ಮಿಣಿ ಸತ್ಯಭಾಮಾ | ರಮಣೀಮಣಿಯಾದಿಯಾದ || ೫೩ ||

ಕಮಲೋದರನ ಪಟ್ಟದ ಸತಿಯರುಗೂಡಿ | ಸಮವಸರಣಕೆಯ್ತಂದು |
ಕ್ರಮದಿಂ ದೀಕ್ಷೆಗೊಂಬಾವೇಳೆಯೊಳು | ತ್ತಮಗುಣಿ ಶರಧಿವಿಜಯನು || ೫೪ ||

ವಸುದೇವ ಪರಿಯಂತರ ತನ್ನನುಜರಾ | ವಸುದೇವನ ಹಲಧರನ |
ವಸುಧೀಶ ವಾಸುದೇವನ ಸುಕುಮಾರಕ | ರಸಮವೀರರು ಮೊದಲಾದ || ೫೫ ||

ಹರಿವಂಶದ ಸುಕುಮಾರರೆಲ್ಲರುಗೂಡಿ | ಉರುತರ ವೈರಾಗ್ಯದಿಂದ |
ಭರದಿಂ ಸಮವಸರಣಕೆಯ್ದಿ ದೀಕ್ಷೆಯ | ಧರಿಸಿದರಿಳೆಪೊಗಳ್ವಂತೆ || ೫೬ ||

ಶಿವದೇವಿಯಾಹರಿವಂಶದ ರಾಯರ | ಯುವತಿಯರೆಲ್ಲರು ಸಹಿತ |
ಸವಿನಯದಿನದಲ್ಲಿಗೆಯ್ತಂದು ದೀಕ್ಷೆಯ | ನವಧರಿಸಿದಳತಿಭರದಿ || ೫೭ ||

ಇಂತಿವರೆಲ್ಲರು ದೀಕ್ಷೆಯನಾಂತು ನಿ | ಶ್ಚಿಂತದಿ ವಿಮಲಸಂಯಮವ |
ಅಂತರಿಸದೆ ಪಾಲಿಸಿ ಬಳಿಕಾ ಜೀವಿ | ತಾಂತ್ಯದೊಳೊಗೆದು ತಂತಮ್ಮ || ೫೮ ||

ಪರಿಣಾಮಾನುಸಾಗರಿಗಳಾದಾಸ್ವರ್ಗ | ವುರು ನಿರ್ವಾಣಪದವನು |
ಇರದೆ ಪಡೆದರಿತ್ತ ಬಲದೇವನಾಮುರ | ಹರನ ಮೇಲಣ ಮಮತೆಯೊಳು || ೫೯ ||

ಅಂದು ತಪಕೆ ಪೋದ ದೀಪಾಯನಮುನಿ | ಮುಂದಣಧಿಕಮಾಸವನು |
ನಿಂದು ವಿಚಾರಿಸದೆಯ್ತಂದನಾವಿಧಿ | ಯಂದವ ಮೀರುವರಾರು || ೬೦ ||

ಈಯಂದದಿಂ ಬಂದಾನಗರಿಯ ಮುಂದೆ | ಯೊಯ್ಯಾರದಿಂ ಕೈಯಿಕ್ಕಿ |
ಆಯತಿಪುಂಗವನಾದಿತ್ಯಪ್ರತಿ | ಮಾಯೋಗದೊಳಗೆ ನಿಂದಿರಲು || ೬೧ ||

ಆ ನಗರಿಯೊಳಿರ್ಪ ರಾಜಕುಮಾರಕ | ರಾನೆ ಬೇಂಟೆಗೆ ಪೋಗಿ ಮಗುಳ್ದು |
ಸಾನಂದದಿ ಬರುತಾಬಿಸಿಲಳುರೆ ಮ | ತ್ತಾನೀರಳ್ಕೆಯೊಳಾಗ || ೬೨ ||

ಕಲ್ಲಡೊಣೆಗಳೊಳು ಮುನ್ನಹೊಯ್ದಾಕ | ಳ್ಳೆಲ್ಲಮೊಣಗಿ ಮಳೆಯಿಂದ |
ಅಲ್ಲಿ ತೀವಿದ ನೀರಾಗಿರೆಯದಮನ | ದಲ್ಲಿ ನೀರೆಂದೇ ಬಗೆದು || ೬೩ ||

ಭರದಿಂದೊಡವಂದವರು ಕುಡಿದು ಸೊಕ್ಕಿ | ಬರುತಿದಿರೊಳು ನಿಂದಿರ್ದ |
ವರಮುನಿದೀಪಾಯನನ ರೂಪವ ಕಂಡು | ಪಿರಿದು ಕೋಪಾಟೋಪದಿಂದ || ೬೪ ||

ಈ ಸವಣನ ಕಂಡು ಶಕುನದಿನಾಬೇಂಟೆ | ಯೋಸರಿಸಿತು ನಮಗೆಂದು |
ಆ ಸಂಯಮಿಯಾಪಾದಮಸ್ತಕವರ | ಹೇಸದೆ ಬಲುಗುಂಡುಗಳ || ೬೫ ||

ಹೊರಡಬಾರದ ತರದಿಂ ಹೂಳಿಯಾಪುರ | ವರಕೆಯ್ದಲಾಮುನಿಪತಿಗೆ |
ಪಿರಿದಪ್ಪ ಕೋಪವಂಕುರಿಸಲದನು ಕೇಳಿ | ಭರದಿಂದ ಬಲ ಕೇಶವರು || ೬೬ ||

ಬರುತಾಹೂಣಿದ ಕಲ್ಲ ನಿವಾರಿಸಿ | ವರಸಂಯಮಿಯ ಕೋಪವನು |
ಪರಿಹರವನು ಮಾಡಬೇಕೆಂದು ಪದಯುಗ | ಕುರುಭೀತಿಯಿಂ ಬೀಳಲಾಗ || ೬೭ ||

ಅಸುರಗಳಿರ ನೀಮೀರ್ವರುಳಿವಿರೆಂದು | ಬೆರಳನೆರಡನನೆತ್ತಿ ತೋರಿ |
ಪಿರಿದಾಗಿ ಕಂಠಗತಪ್ರಾಣನಾಗಲು | ಪುರಕರಸುಗಳೆಯ್ದಲಿತ್ತ || ೬೮ ||

ಆ ಯತಿಯಿಂ ಸೌಧರ್ಮಕಲ್ಪಕೆ ಕಟ್ಟಿ | ದಾಯುಷ್ಯವೆಲ್ಲವು ತೀರಿ |
ಆ ಯತಿಯತಿಮುನಿಸಿಂದುಡುಭವನದೊ | ಳಾಯುಷ್ಯಾವಸಾನದೊಳು || ೬೯ ||

ಭೋರೆನೆವುರಿವುರಿಗ್ರನಂತಗ್ನಿಕು | ಮಾರನಾಗಿ ಸಂಜನಿಸಿ ||
ದ್ವಾರಾವತಿಪುರವರದಿನಿಂತಾದೆನೆಂ | ದಾರೈಯದಲ್ಲಿಂದಿಳಿದು || ೭೦ ||

ನಿಲ್ಲದೆ ಬಂದಾಕೇರಿಕೇರಿಯನಿರ | ದೆಲ್ಲವ ನಿಶ್ಯೇಷಮಾಗಿ |
ಪೊಲ್ಲದ ಮುನಿಸಿಂದುರುಪಿದನಾದೇವ | ಗೆಲ್ಲಿಯ ದಯೆ ಮುನಿಸೊದವೆ || ೭೧ ||

ಪದಿನೆಂಟು ಪರಿಯ ಪೌರರ ಸದನಂಗಳು | ಹುದುಗಿದ ಕೇರಿಯೆಲ್ಲವನು |
ಅದು ಮೊದಲಿದು ಕಡೆಯೆನ್ನದೊಂದೇ ಸೂಳೊ | ಳೊದವಿ ಸುಟ್ಟನು ಕೋಪದಿಂದ || ೭೨ ||

ಹೊತ್ತುತ ಹೊಗೆವುತ ಕತ್ತುತ ಕವರುತ | ಸುತ್ತುವರಿದು ಪುರವರದ |
ಮೊತ್ತದ ಮನೆಯನೆಲ್ಲವನರೆಗಳಿಗೆಯೊ | ಳೊತ್ತಿ ಹಿಡಿದುದಾಕಿಚ್ಚು || ೭೩ ||

ತೆಗೆ ತೆಗೆವುತ್ತಮ ವಸ್ತುವಿತಾನವ | ತೆಗೆ ತೆಗೆ ಗಜವಾಜಿಗಳನು |
ತೆಗೆ ತೆಗೆ ಬಾಲವೃದ್ಧರನೆಂಬ ಕಳಕಳ | ಮೊಗೆಯಿತ್ತೆಲ್ಲಿ ನೋಡಿದರು || ೭೪ ||

ಹಿರಿಯರ ಮನೆಯ ಮೇಲಣ ಹುಲ್ಲ ಹುಯಿಹುಯಿ | ಹರವಿ ಹರವಿಯೊಳು ನೀರ |
ಉರಿವೆಡೆವಳಿಯ ಮನೆಯ ಮುರಿಯಮುರುಯೆಂಬ | ಸರವುಣ್ಮಿತೆಲ್ಲಿ ನೋಡಿದರು || ೭೫ ||

ಮಾಳಿಗೆಯೋಡು ಬಿಲ್ಲೆಯಮನೆ ಕಲ್ಲದೇ | ವಾಲಯವಿಟ್ಟಿಗೆವೆಸದ |
ಶಾಲೆಗಳೆಲ್ಲ ಪುಲ್ಮನೆಗೆ ಮುಂಚುರಿದುವು | ಹೇಳಲೇನದರದ್ಭುತವನು || ೭೬ ||

ಮಸಕದಿ ಭೋರ್ಭೋರೆಂದು ರೌದ್ರಸ್ವರ | ವೆಸಗಲಂಬುಧಿ ಘೂರ್ಣಿಪಂತೆ |
ದೆಸೆದೆಸೆಗಾಸುಟ್ಟುರೆಗಾಳಿ ಬೀಸಲು | ಪಸರಿಸಿತಗ್ನಿಯಾಪುರವ || ೭೭ ||

ಕುಂಜನಾಭನ ಪುರವರವನು ಸುಡುವ ಧ | ನಂಜಯಗತಿ ಬಲವಾಗಿ |
ಭಂಜಿಸಿದುದರಿಂದಾವಾಯುವಿಗೆ ಪ್ರ | ಭಂಜನವೆಸರಂದಾಯ್ತು || ೭೮ ||

ತೊಟ್ಟನೆ ಮನೆಯೊಳವರಿಯಲು ಕಿಚ್ಚು | ಕೆಟ್ಟೆವಿನ್ನೇವೆವೆಂದೆನುತ |
ತೊಟ್ಟಿಲ ಶಿಶುಗಳ ಮೇಲೆ ಮುಸುಕಿ ಬೀಳ್ದು | ಬಿಟ್ಟರಸುವ ಬಾಣತಿಯರು || ೭೯ ||

ನಡೆಯಮಾರದ ಗರ್ಭಿಣಿಯರ ಬಸಿರುಗ | ಳೊಡೆದು ಹಾರುವ ಹಸುಳೆಗಳು |
ಸಿಡಿಮಿಡಿಗೊಂಡು ಸಿಲ್ಕಿದ ಬಳಿಯಿಂ ಪೊರ | ಮಡದುರಿದರು ವೃದ್ಧರುಗಳು || ೮೦ ||

ಉರಿಯೊಳು ಸಿಲುಕಿದೊಲವಿನೋಪರ ಕಂಡು | ಹರಿದಾಲಿಂಗನಗೆಯ್ದು |
ಕರಗಿದರಾಮನೆಯನು ಹೊಕ್ಕು ನೇಹದ | ತರುಣಿಯರಾಚ್ಚಿನೊಳಗೆ || ೮೧ ||

ಜಿನಗೃಹದೊಳು ಜೀವನದಿಂ ಬೇರ್ಕೆಯ್ದು | ತನುವನುರಿವ ಕಿಚ್ಚಿನೊಳಗೆ |
ನೆನೆದು ತಮ್ಮಿಂದ ತಮ್ಮಂಗವ ಬಿಸುಟಲ್ಲಿ | ಮುನಿಗಳೆಯ್ದಿದರು ಸದ್ಗತಿಯ || ೮೨ ||

ಅಂಗಡಿಯಿಂ ಬೀದಿಗೆ ಬೀದಿಗಳಿಂ | ದಂಗಣಕಾ ಅಂಗಣದಿಂ |
ಹಿಂಗದೆ ಮನೆಯ್ದಲೀಸದೆ ನಗರಜ | ನಂಗಳನುರಿಯುರುಪಿದುದು || ೮೩ ||

ಈ ವಿಧದಿಂ ಭುವನವನು ಸುಡುವೆನೆಂ | ಬಾವಿವರವನುರೆ ತೋರ್ಪ |
ಅವುಗ್ರನ ಕಣ್ಣುರಿಯಂತಾಶಿಖಿ | ಯಾವರಿಸಿದುದಾಪುರವ || ೮೪ ||

ಆಯೆಡೆಯೀಯೆಡೆಯೆನ್ನದೆ ಪುರದೊಳ | ಗಾವರುಸಿದ ಕಿಚ್ಚಿನಲ್ಲಿ |
ಬೇವವರನು ತೆಗೆವವರಿಲ್ಲ ಬೆಂದವ | ರ್ಗೋವದಯ್ಯೋಯೆಂಬರಿಲ್ಲ || ೮೫ ||

ವರನವರತ್ನವಿರಾಜಿತಮಪ್ಪಗೋ | ಪುರಗಳನಡರಿದ ಕಿಚ್ಚು |
ಕರಮೊಪ್ಪುವರೋಹಣಾದ್ರಿಯನಾಕಾ | ಡುರಿ ಹಬ್ಬಿದ ತೆರನಾಯ್ತು || ೮೬ ||

ಮರಕತಮಣಿಗಂಬದ ಮದನಿಕೆಗಿಟ್ಟ | ಹರಿನೀಲಮಾಣಿಕ್ಯಗಳು |
ಸರಿವಳಿಯಿಂದುರಿದುವು ಮುತ್ತುಗದೆಳೆ | ವರದ ಮೊಗ್ಗೆಗಳೆಂಬಂತೆ || ೮೭ ||

ಕರುಮಾಡಿದಿಂದ್ರನೀಲದ ಮಣಿ ಗುರುಜೇರಿ | ಹರಿಯ ಹೊಳೆವ ಕೇಸುರಿಗಳು |
ಪಿರಿದೆಸೆದುವು ಕಾರ್ಮುಗಿಲೊಡ್ಡಿನೊಳು ಕೆಂಪು | ವೆರೆದ ವಿದ್ಯುಲ್ಲತೆಯಂಯೆ || ೮೮ ||

ಪಳುಕಿನ ಪಜ್ಜಳಿಸುವ ಕುಲಿಶದ ಮು | ಚ್ಚಳುವಲಗೆಯ ಮಾಳಿಗೆಗಳು |
ಘಳಿಲನುರಿದ ಕರಗಿದುವಾಕರ್ಪೂರ | ವಳುಕುಗಳುರಿಗಂಡಂತೆ || ೮೯ ||

ಮರಕತರತ್ನಮಂಟಪದೊಳು ಹೊಂಗಿಡಿ | ವೆರಸಿದುರಿಯ ನಾಲಗೆಗಳು |
ಪರಿದುವಶೋಕಲತಾಗೃಹದೊಳು ಪುಷ್ಪ | ವೆರಸಿಯೊಪ್ಪುವ ತಳಿರಂತೆ || ೯೦ ||

ಭಿತ್ತಿಯಮೇಲೆತ್ತಿಸಿದ ಮಾಣಿಕ್ಯದ | ಪುತ್ತಳಿಗಳನು ಸಪ್ತಾರ್ಚಿ |
ಹತ್ತಿತು ತನ್ನಾಸ್ವಾಹಾಸುದತಿಯ | ನೊತ್ತಿ ತಳ್ಕೈಸುವಂದದೊಳು || ೯೧ ||

ವರವಿದ್ರುಮರಂಜಿತ ಮಂದಿರದೊಳಾ | ವರಿದವಂದಿನ ಕೇಸುರಿಗಳು |
ಉರುಗೆಂಡದ ಮನೆಗಾವುರಿಬಿರ್ದುಣ ಲುರುಮುದದಿಂ ಬಂದ ತೆರದಿ || ೯೨ ||

ಹಿತ್ತಲವನದ ಮಧ್ಯದ ಸರಸಿಯನುರಿ | ಹತ್ತಿದುದಂತಕನೆಂಬ |
ಉತ್ತಮವಿಧಿಯ ದೀಕ್ಷಿತನ ಹೋಮದ ಕಿಚ್ಚು | ಹೊತ್ತಿ ಹೊಗೆವ ಮಾಳ್ಕೆಯೊಳು || ೯೩ ||

ಈ ರೀತಿಯಿಂದರಮನೆಯುರಿದದರೊಳು ಪೂರಿಸಿದಬಲಾಜನವು |
ಈರೆಂಟುಸಾಸಿರಮೆಲ್ಲವಳಿದುದಾ | ಕ್ರೂರಕರ್ಮದಫಲದಿಂದ || ೯೪ ||

ಮಗ್ನಮಾನಸನಾದ ಮಧು ವಿಧ್ವಂಸಗೆ | ಭಗ್ನಮಾದುದು ಭಾಗ್ಯದೇಳ್ಗೆ |
ಅಗ್ನಿಪುರುಷಗುದ್ಭವಮಾದಾವುದ | ರಾಗ್ನಿಗೀಡಾಯ್ತಾನಗರಿ || ೯೫ ||

ಸ್ತ್ರೀಜನದೊಳು ಶಿಶುಗಳೊಳು ಪುರುಷರೊಳು | ವಾಜಿವಾರಣಪಶುಪಕ್ಷಿ |
ರಾಜಿಯೊಳಿನಿಸುಳಿಯದೆ ಬೆಂದುದೀರಾರು | ಯೋಜನದಾಪುರದೊಳಗೆ || ೯೬ ||

ಅಲ್ಲಕಲ್ಲೋಲವಾಗುವ ತೆರದಿಂ ಪುರ | ವೆಲ್ಲವನಾಶಿಖಿಸುಡಲು |
ಪುಲ್ಲನಾಭನು ತಾನಿದು ದೇವತಾಕೃತ | ವಲ್ಲದೆ ಪೆರತಲ್ಲವೆಂದು || ೯೭ ||

ವಿದಿತಮಪ್ಪಾಚಕ್ರರತ್ನಮ ನೆನೆಯಲಂ | ತದು ಮೊದಲಾದ ರತ್ನಗಳು |
ಪದುಳದಿನವರ ಕಾವಲದೇವತೆಗಳಾ | ಪದದೊಳದೃಶ್ಯತೆವಡೆದು || ೯೮ ||

ಇಂತಿದು ನಮ್ಮ ಮುನ್ನಿನ ಪಾಪಫಲವೆಂದು | ಚಿಂತಾತುರಚಿತ್ತನಾಗಿ |
ದಂತನಖಾವಳಿ ಮುರಿದ ಮೃಗಾಧಿಪ | ನಂತೆ ಮುರಾಂತಕನಿರಲು || ೯೯ ||

ಬಣ್ಣಿಸೆ ಬಲ್ಲಿದ ಬಲರಾಮನೆತ್ತುವ | ತಣ್ಣೀರಾಪುರದುರಿಗೆ |
ಎಣ್ಣೆಯಾದುದು ಮೀರುವರಾರಾವಿಧಿ | ಹಣ್ಣಿದ ತೇರುತೆಕ್ಕೆಯನು || ೧೦೦ ||