ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಈ ಪರಿಯಿಂದೆಸೆವಾಬಲ ಕೇಶವ | ರಾಪುಷ್ಪಚಾಪಾದಿಯಾದ ||
ಭೂಪರೆಲ್ಲರು ನಿರ್ಭಯಭಕ್ತಿಯಿಂ ನೇಮಿಯ | ಶ್ರೀಪಾದಕೆ ಮುಗ್ಗುತಿರಲು || ೨ ||

ಸುರಪತಿಯನುದಿನ ಕಳುಹಿದ ದಿವ್ಯಾಂ | ಬರ ದಿವ್ಯ ರತ್ನಭೂಷಣವ |
ವಿರಚನೆಗೆಯ್ದು ಮೂಲೋಕಾಧಿಪತಿನತ | ಚರಣನು ನೇಮೀಶ್ವರನು || ೩ ||

ಅಮರಸತಿತರರುವತ್ತನಾಲ್ವರು ದಿವ್ಯ | ಚಮರವನೊಲಿದಿಕ್ಕುತಿರಲು |
ಸಮತೆಯಿಂದುರಗಾಮರಯಕ್ಷಕಿನ್ನರ | ಸಮಿತಿಯೋಲೈಸಿಕೊಂಡಿರಲು || ೪ ||

ಒಂದಾನೊಂದು ದಿವಸ ಭೂಪಾಲಕ | ವೃಂದವೋಲಗಗೊಟ್ಟಿರಲು |
ಸಂದಣಿಸಿದತಾರಾಮಧ್ಯದ ಚಂದ್ರ | ನಂದದಿನಭವನೊಪ್ಪಿದನು || ೫ ||

ಅಲ್ಲಿ ಕೆಲಬರೆಳ್ದು ಕೈಮುಗಿದಾದೇವ | ವಲ್ಲಭ ನಿನ್ನ ಬಾಹುವಿನ |
ಬಲ್ಲಿತನೀಕ್ಷಿಸಬೇಕೆನಲಾಕೈಯ | ನುಲ್ಲಾಸದಿಂದ ನೀಡಿದನು || ೬ ||

ಮುರರಿಪುವೆಳ್ದು ಮೃತ್ಯುಂಜಯನಾಕಿರು | ವೆರಲ ಬಗ್ಗಿಸಿ ನೋಡಲಾಗ |
ವರವಜ್ರಮಣಿಯ ದಂಡವ ಹರಿ ನೀಲದ | ಕರುಬಾಗಿಸಿದಂತಾಯ್ತು || ೭ ||

ಮತ್ತಾ ಮದನಮದಾಪಹರಣನಿರ | ದೆತ್ತ ತೋಲಾದಂಡದಿಂದ |
ಎತ್ತಿದ ಬೆಂಡಿನ ಬೊಂಬೆಯಂದದಿ ಪುರು | ಪೋಷತ್ತಮನಂದೊಪ್ಪಿದನು || ೮ ||

ಹರುಷದಿನಭವನೀಡಿದ ಹಸ್ತಮನಾ | ಹರಿ ಹಿಡಿದಾಡುತೊಪ್ಪಿದನು |
ಹರಿಚಂದನದಡ್ಡಗೊಂಬಿನಡಿಯೊಳಾ | ಹರಿದಾಡುವ ತುಂಬಿಯಂತೆ || ೮ ||

ಆ ವೇಳೆಯೊಳಂಬರಮಂಡಲದಿಂದ | ಪೂವಿನಮಳೆ ರತ್ನವೃಷ್ಟಿ |
ದೇವದುಂದುಭಿ ಮೊಳಗಲು ಹರಿಯಂಗದೊ | ಳಾವರಿಸಿತು ನಸುಲಜ್ಜೆ || ೧೦ ||

ಮತ್ತೆ ಕೆಲವು ದಿನದಿಂ ಮೇಲೆ ಮಧುಮಾಸ | ವೊತ್ತಂಬಿಸೆ ತುಂಬಿದಿರುವ |
ಎತ್ತಿ ಕರ್ವಿನಬಿಲ್ಗೈಗಣೆಗಳನಿರ | ದಿತ್ತು ಕೊಬ್ಬಿರಿದನಂಗಜನು || ೧೧ ||

ಸ್ಮರನೆನ್ನ ಹೂವಿನ ಮಾರ್ಗಣದಿಂ ಹರಿ | ಹರ ವಿಧಿಗಳ ಗೆಲ್ದನೆಂದು |
ಉರುಮುದದಿಂ ಬಿಬ್ಬನೆಬಿರಿವಂದದಿ | ಬಿರಿದೊಪ್ಪಿದುವು ಮಲ್ಲಿಗೆಗಳು || ೧೨ ||

ಎಳೆಗಾಳಿಯೆಳಸಿ ಬೀಸಿತು ಮಾಮರದೊಳು | ತಳಿರೆಳ್ದುವು ಕೋಗಿಲೆಗಳು |
ಗಳಪಿದುವಾ ತಾಮರೆಗೊಳಗಳು ನೆರೆ | ತಿಳಿದುವು ಚೈತ್ರಮಾಸದೊಳು || ೧೩ ||

ಇಂತು ಬಂದಾಮಧುಮಾಸದೊಳಾಸ್ರೀ | ಕಾಂತನು ನೇಮೀಶನೆಡೆಗೆ |
ಸಂತಸದಿಂ ಬಂದು ಕರಕಮಲವ ಮುಗಿ | ದಿಂತೆಂದು ಬಿನ್ನವಿಸಿದನು || ೧೪ ||

ದೇವ ಬಿನ್ನಪಮೀ ಮಧುಮಾಸದೊಳಗೊಪ್ಪು | ವಾವುದ್ಯಾಕನೆ ಬಂದು |
ಆ ವನಜಲಕೇಳಿಯೊಳಿರಬೇಕೆನ | ಲಾವಚನಕ್ಕೊಡಂಬಡಲು || ೧೫ ||

ಆ ನೇಮೀಶಸಹಿತ ಕೇಶವ ತನ್ನ | ಮಾನಿನಿಯರ ಕೂಡಿಕೊಂಡು |
ಆ ನಂದನವನಕತಿ ವೈಭವದಿಂ | ದಾನಂದದೊಳೆಯ್ದಿದನು || ೧೬ ||

ಇಂತು ಬನವ ಹೊಕ್ಕು ನೇಮೀಶನಾಗುಣ | ವಂತ ಬಲಾಂಬುಜೋದರರು |
ಸಂತಸದಿಂ ವನದೊಳು ವಿಹರಿಸಿ ತದ | ನಂತರದೊಳು ರಂಜಿಸುವ || ೧೭ ||

ಪಳಚನೆಸೆವ ಪಂಕಜಾಕರವನು ಹೊಕ್ಕು | ಬಳಿಕ ಕ್ರೀಡಿಸಿ ಕೆಲಹೊತ್ತು |
ಕಳೆಯೆ ನೇಮೀಶನು ಪೊರಮಟ್ಟು ವಸ್ತ್ರಂ | ಗಳನು ಕಳೆವ ಸಮಯದೊಳು || ೧೮ ||

ಪುಲ್ಲನಾಭನ ಸಂಕೇತದೊಳಾ ಲೋಕ | ವಲ್ಲಭನೇಮಿಕುಮಾರ |
ಸಲ್ಲೀಲೆಯಿಂ ಸತ್ಯಭಾಮೆಗೆ ತಾನು | ಟ್ಟೊಲ್ಲಣಿಗೆಯ ಕೊಡುವಾಗ || ೧೯ ||

ಭರತತ್ರಿಖಂಡ ಚಕ್ರಾಧೀಶನ ಪಟ್ಟ | ದರಸಿಯುಟ್ಟಳಿದ ವಸ್ತ್ರವನು |
ಹಿರಿದು ಹೀನರಮಾಳ್ಕೆಯೊಳು ಹಿಡಿವೆನೆಯೆಂ | ದುರುಗರ್ವದಿಂ ಮಾತನಾಡೆ || ೨೦ ||

ಆ ನುಡಿಯನು ಕೇಳಿ ಕೋಪದಿ ರುಗ್ಮಿಣಿ | ಯೇನಕ್ಕಸುರರುಗಳಿವನ |
ಸ್ನಾನೋದಕವನಂಗೋಪಾಂಗದೊಳಿ | ಟ್ಟಾನತರಪ್ಪುದನರಿಯ || ೨೧ ||

ಎನಲಿಂತೆಂದಳು ಕಿರಿಯಂದಿನೊಳು ನೆರೆ | ಮುನಿದು ಬಂದಾರಕ್ಕಸಿಯರ |
ಇನಿಸಳುಕದೆ ಕೊಂದಾಘನಗೋವ | ರ್ಧನಪರ್ವತಮನಿರದೆತ್ತಿ || ೨೨ ||

ಉರಗಶಯ್ಯೆಯನೇರಿಯೇರಿಸಿ ಶಾರ್ಙಿಯ | ನಿರದೂದಿ ಪಾಂಚಜನ್ಯವನು |
ದುರಗಲಿಯಾಮಾಗಧನ ಕೊಂದಾತೆಗೆ | ಸರಿಯಾರವನಿಯೊಳೆನುತ || ೨೩ ||

ತೊತ್ತುಗೆಲಸವನೆನಗೆ ಪೇಳ್ವರೆಯೆನ | ಲುತ್ತಮೆರುಗ್ಮಿಣಿದೇವಿ |
ಮತ್ತಮಿಂತೆಂದಳು ನೇಮೀಶ್ವರನು | ತ್ಪತ್ತಿಯಾಗುವುದಕೆ ಮುನ್ನ || ೨೪ ||

ನರರೂಪನು ಕಂಡೊಡೆ ಹೇಸಿ ಮುಟ್ಟದ | ಸುರರೆಲ್ಲರ್ಗಾಣ್ಮನಾದ |
ಸುರಪತಿಯಾಪನ್ನಗಪತಿ ಯಕ್ಷೇ | ಶ್ವರರನೆಲ್ಲರ ಕೂಡಿಕೊಂಡು || ೨೫ ||

ಅರುದಿಂಗಳು ಪರಿಯಂತ ರನ್ನದ ಮಳೆ | ಗರೆಯಿಸಿ ಶಿವದೇವಿಯನು |
ನೆರೆಪೂಜಿಸಿ ಗರ್ಭಶೋಧನೆಯನು ಮಾಡಿ | ಯರಿಕೆಯ ತನ್ನ ಸತಿಯರ || ೨೬ ||

ಆ ನಾರಿಗೆ ತೋಳ್ತಿರಾಗೆಂದು ನಿಯಮಿಸ | ಲಾ ನೇಮೀಶ್ವರನುದಿಸೆ |
ಆನಂದದಿ ಮೇರುಗಿರಿಗೆಯ್ದಿ ಪಾಲ್ಗಡ | ಲಾನೀರನಭಷೇಕ ಮಾಡಿ || ೨೭ ||

ಬಳಿಕಮರರನಾತಗೆ ಭೃತ್ಯರಮಾಡಿ | ಬಲರಿಪುವೆಸಗಿದ ತೆರನ |
ಇಳೆಯರಿಯದೆಯೆನುತಿಂತೆಂದಳಾನಿ | ಷ್ಕಳನ ದೂಳಿನ ಕಾಲನೀರ || ೨೮ ||

ಮಮತೆಯಿಂದ ಮಜ್ಜನವ ಮಾಡುವ ಸುರ | ಸಮಿತಿಯೆಡದ ಕಾಲ್ವೆರಲ |
ಅಮರಿದೆಯಾದೊಡೆ ನೀನೇ ಲೋಕಕ್ಕೆ | ರಮಣಿಯೆನಲು ಮಿಗೆ ನಾಣ್ಚಿ || ೨೯ ||

ಸತ್ಯಭಾಮೆ ಪೋಗಲಿತ್ತ ರುಗ್ಮಿಣಿದೇವಿ | ಯತ್ಯಂತ ಚಿತ್ತಶುದ್ಧಿಯೊಳು |
ನಿತ್ಯ ಸುಖವನು ಬಯಸಿಯಾವಸ್ತ್ರವ | ಭೃತ್ಯಭಾವದಿ ಧರಿಸಿದಳು || ೩೦ ||

ಬಳಿಕ ಬಲಾಚ್ಯುತರಾನೇಮಿನಾಥನ | ನಲಘುತರ ಪ್ರೀತಿಯಿಂದ |
ಲಲಿತಾಂಬರಭೂಷಣದಿಂ ಪೂಜಿಸಿ | ಪೊಳಲನೆಯ್ದಿದರು ಮತ್ತಿತ್ತ || ೩೧ ||

ಆ ಸತ್ಯಭಾಮೆಯ ಗರ್ವದ ನುಡಿಗೇಳಿ | ಭಾಸುರ ಬೋಧನಸಂಯುತಗೆ |
ಓಸರಿಸದೆ ಮುನಿಸೊಗೆದುದು ನೀರೊಳು | ಕೇಸುರಿ ಹುಟ್ಟಿದಂದೊಳು || ೩೨ ||

ಆ ಮುನಿಸಿಂ ಬನವನು ಪೊರಮಟ್ಟುರ | ಗಾಮರಸಂತತಿ ತನ್ನ |
ಪ್ರೇಮದಿನೋಲೈಸಿಬರಲಾನೆಯನೇರಿ | ಯಾಮಹಿಮನು ಪುರಕೆಯ್ದಿ || ೩೩ ||

ಆ ಶಸ್ತ್ರಸದನವ ಹೊಕ್ಕು ಬಳಿಕ್ಕೇರಿ | ಯಾಶಯ್ಯೆಯನಗುರ್ವಿಸುವ |
ಆ ಶಾರ್ಙಿಯನಡೆಗೈಯಿಂದೇರಿಸಿ | ಯಾಶಂಖವನು ಕೈಕೊಂಡು || ೩೪ ||

ಎಡದ ಕಡೆಯ ನಾಸಾಪುಟದುಸುರಿಂ | ಪೊಡವಿ ನಡುಗುವಂದದೊಳು |
ಪಿಡಿದೂದಲಾಶಾಗಜವದುರಿದುವು ಮೇ | ಗಡೆಗಾಕಾಶ ಪಾರಿದುದು || ೩೫ ||

ಆ ರವವನು ಕೇಳಿ ಮುರಿದು ಕಂಬವ ಮದ | ವಾರಣವಾಜಿಗಳು |
ಆ ರಾಜಧಾನಿಯ ಕೇರಿಕೇರಿಗಳೊಳು | ಚಾರಿವರಿವುತಿರಲಾಗ || ೩೬ ||

ಎಲ್ಲಿಯದೀಯದ್ಭುತಮೆಂದು ಬಲದೇವ | ನಿಲ್ಲದೆ ಗದೆಯ ಧರಿಸಿದ |
ಪುಲ್ಲನಾಭನಸಿಯನು ಝಳಪಿಸಿದನು | ಬಲ್ಲಿತಪ್ಪಾಸರಗೇಳಿ || ೩೭ ||

ಅನಿತರೊಳಾತ್ರಿಭುವನಗುರುವನಿಮಿಷ | ಜನಸಂತತಿಯೊಡಗೂಡಿ |
ಅನುರಾಗದಿಂದಾನೆಯನೇರಿ ತನ್ನರ | ಮನೆಗೆ ಪೋಗಲು ಬಳಿಕಿತ್ತ || ೩೮ ||

ಆ ದಿವ್ಯರತ್ನಂಗಳ ಕಾಯ್ದಿರ್ಪ ಮ | ಹಾದೇವತೆಗಳೆಯ್ತಂದು |
ಆ ದಾಮೋದರನೊಳಗುಸುರಿದುವಂ | ದಾದಾವಾರ್ತೆಯೆಲ್ಲವನು || ೩೯ ||

ಇಂತೆಂಬ ನುಡಿಯನು ಕೇಳಿ ಮತ್ತಾದೈ | ತ್ಯಾಂತಕನತಿಚಿತೆಯನು |
ಅಂತರಿಸದೆ ತಾಳಿ ಬಳಿಕ ತನ್ನೊಳು ತಾ | ನಿಂತೆಂದೆಣಿಸಿದನಾಗ || ೪೦ ||

ಸುರನರಫಣಿಲೋಕವನೆರಗಿಸಿಕೊಂಬ | ವರಭುಜಬಲಯುತನಿವನು |
ಇರದೆನ್ನರಸುತನಮನೆಳೆದೊಯ್ವೊಡೆ | ಭರದಿಂಬಾರಿಪರುಂಟೇ || ೪೧ ||

ಎಂದು ಚಿಂತಿಸಿ ಬಲಭದ್ರನ ಬರಿಸಿಯಿಂ | ತಂದೆನು ವನಜೋದರನು |
ಸಂದ ಸಾಹಸಿಯೀ ನೇಮಿಕುರಾಕ | ನಿಂದೆಮ್ಮೊಡೆತನಮಿಲ್ಲ || ೪೨ ||

ಇದಕಿನ್ನಾವುದು ತೆರನೆನಲಿಂತೆಂದ | ನುದಿತ ಸದ್ಗುಣಿ ಬಲದೇವ |
ಚದುರರಿಂತಿದನು ಪರಂಬರಿಸುವರೇ | ಸದಮಲಬೋಧಸಂಯುತರು || ೪೩ ||

ಅಡಸಿದ ಮೋಹೋದ್ರೇಕದ ರಾಜ್ಯದ | ತೊಡರೊಳು ಸಿಲುಕುವರಲ್ಲ |
ಕಡೆಗಾಣಿಸದ ಪದಕಲ್ಲದೆಯೆಂಬಾ | ನುಡಿಗೆ ಮುಕುಂದನಿಂತೆಂದ || ೪೪ ||

ಹಿಂದಣ ತೀರ್ಥಾಧೀಶರೆಲ್ಲರು ಮನ | ಸಂದು ಚಕ್ರೇಶಸಂಪದಕೆ |
ಬಂದಬಳಿಕ ಬಹುಸುಖವೀವ ಪದಗಂಡ | ರೆಂದುಸುರುವುದನರಿಯಿರೆ || ೪೫ ||

ಎನಲೇಕಕುಂಡಲನಿಂತು ನುಡಿದನಾ | ಅನಘಗುಪಾಯಾಂತರದಿ |
ಮನದೊಳು ವೈರಾಗ್ಯಮಪ್ಪುದನೆಸಗುವ | ವೆನೆ ಹರಿಯದನೆ ಕೈಕೊಂಡು || ೪೬ ||

ಬಳಿಕ ಕೆಲವು ದಿನ ಕಳೆಯಲು ನೃಪಕುಲ | ತಿಲಕನಂಭೋದಿವಿಜಯಗೆ |
ನಳಿನನಾಭನಿಂತೆಂದು ನುಡಿದನಾ | ಕಲಿನವಿಜಯ ನೇಮಿಜಿನಗೆ || ೪೭ ||

ನವಯೌವನೋದಯಮಾದುದಂತದರಿಂ | ಸುವಿಧಾನದಿಂ ಮದುವೆಯನು |
ತವಕದಿ ಮಾಡಬೇಕೆನಲಾಬಿನ್ನಪ | ಕವನೀಶ್ವರನೊಡಂಬಡಲು || ೪೮ ||

ಬಳಿಕ ತಾಮೆಲ್ಲರು ಬಂದು ನೇಮೀಶನ | ತಳಿರಡಿದಳಕಿರದೆರಗಿ |
ವಿಲಸಿತಮಪ್ಪ ಮಂಗಲಕಾರ್ಯಕೆ ಮನ | ವೆಳಸುವಂದದಿನೊಡಂಬಡಿಸಿ || ೪೯ ||

ಉಗ್ರಕುಲಾಂಬರಭಾಸ್ಕರನವನೀ | ಶಾಗ್ರಣಿಯೆನಿಸಿ ರಂಜಿಸುವ |
ಉಗ್ರಸೇನನ ಸುತೆ ರಾಜೀವಮತಿಯೆಂ | ಬಗ್ರಸುದತಿ ಮೊದಲಾದ || ೫೦ ||

ಹೊಸ ಹರೆಯದ ಸತ್ಕಲಾಪರಿಣತೆಯರ | ನಸಮಾನರೂಪವತಿಯರ |
ವಸುಧಾಧೀಶನಂದನೆಯರೈನೂರ್ವರ | ಬಿಸಜಾಕ್ಷನು ತರಿಸಿದನು || ೫೧ ||

ತದನಂತರದೊಳು ಮನಸಿಜನೃಪನ ಸಂ | ಮದದಾಸ್ಥಾನಮಂಟಪವೊ |
ಇದು ತಾನೆಂಬಂದದಿ ರಚಿಸಿದರಾ | ಮದುವೆಯ ಮಣಿಮಂದಿರವನು || ೫೨ ||

ತಳಿರ್ಗುಡಿ ಪಸುಳೆದಳಿರ ತೋರಣ ಪೊಸ | ಚಳೆಯದ ನೆಲ ಮೇಲುಕಟ್ಟು |
ಇದು ತಾನೆಂಬಂದದಿ ರಚಿಸಿದರಾ | ಮದುವೆಯ ಮಣಿಮಂದಿರವನು || ೫೨ ||

ತಳಿರ್ಗುಡಿ ಪಸುಳೆದಳಿರ ತೋರಣ ಪೊಸ | ಚಳೆಯದ ನೆಲ ಮೇಲುಕಟ್ಟು |
ತೊಳಪ ಮುತ್ತಿನ ರಂಗವಲಿ ಜಾಗಗಳ ಜಂ | ಗುಳಿಯೊಪ್ಪಿತಾಭವನದೊಳು || ೫೩ ||

ಇಂತು ಮಂಟಪವ ರಚನೆಯ ಮಾಡಿಸಿ ತದ | ನಂತರದೊಳು ಮುನ್ನ ತಂದ |
ಕಾಂತೆಯರನು ಷೋಡಶಾಭರಣಗಳಿಂದ | ಸಂತಸದಿಂ ಶೃಂಗರಿಸಲು || ೫೪ ||

ಮನಸಿಜಮಂಡಲೇಶ್ವರನಗ್ರವಲ್ಲಭೆ | ಯನುರಾಗದಿಂ ಬಹುರೂಪ |
ಅನುಕರಿಸಿದಳೋಯೆಂಬಂದದೊಳಾ | ವನಿತಾಮಣಿಗಳೊಪ್ಪಿದರು || ೫೫ ||

ಮತ್ತಾನೇಮೀಶಗೆ ದೇವಸತಿಯರು | ಹೊತ್ತುತಂದಾತೀರ್ಥಜಲವ |
ಬಿತ್ತರದಿಂದ ಮಜ್ಜನವ ಮಾಡಿಸಿ ಬಳಿ | ಕುತ್ತಮ ಭೂಷಣವಿಡಲು || ೫೬ ||

ಎನಿತೆನಿತುಂಟು ಲೋಕದೊಳು ಸುಲಕ್ಷಣ | ವೆನಿತೆನಿತುಂಟು ಸೌಂದರ್ಯ |
ಅನಿತೆಲ್ಲವು ಕೂಡಿ ಹುರಿಯಾದಂದದಿ | ಅನಘನಮೂರ್ತಿಯೊಪ್ಪಿದುದು || ೫೭ ||

ಬೆರಕೆವಣ್ಣದ ಪೂವಿನಲತೆ ಕೃಷ್ಣಾ | ಗರು ಭೂಜನಮನಡರ್ದಂತೆ |
ಹರಿನೀಲವರ್ಣದ ನೇಮೀಶಗೆ ಪಲ | ಪರಲಭೂಷಣಗಳೊಪ್ಪಿದುವು || ೫೮ ||

ಈ ರೀತಿಯಿಂ ಕೈಗೆಯ್ದಾನೇಮಿಕು | ಮಾರನ ನರ್ಮಸಚಿವರು |
ವಾರಣಮಸ್ತಕವೇರಿಸಲಾ ದೇವ | ನಾರಿಯರಿಕ್ಕೆ ಚಾಮರವ || ೫೯ ||

ಚಿನ್ನ ಮುತ್ತಿನ ಲಂಬಣದಿಂದೊಪ್ಪುವ | ರನ್ನದ ಸತ್ತಿಗೆವಿಡಿದು |
ಪನ್ನಗಸತಿಯರಿಕ್ಕೆಲದೊಳಾನೆಯರನೇರಿ | ಯುನ್ನತಬೋಧಗೆತ್ತಿದರು || ೬೦ ||

ಕಿನ್ನರಕಾಂತೆಯರೊಸಗೆವಾಡನು ಪಾಡೆ | ರನ್ನಗ್ನನಡಿಯ ರಂಜಿಸುವ |
ಹೊನ್ನಕಳಶಗಳ ಹಿಡಿದಾಯೆಣ್ದೆಸೆ | ಗನ್ನೆಯರೊಸೆದೆಯ್ತರಲು || ೬೧ ||

ಈ ಪರಿಯಿಂ ಬರುತಿರೆ ಕಟ್ಟಿದಿರೊಳ | ಗಾ ಪಶುವಾತೃಷೆಯಿಂದ |
ಧೂಪಿಸಿ ಗೋಳಿಡುತಾ ತಳಿಯೊಳಗೆ ನಾ | ನಾಪರಿ ಮರುಗುತಮಿರಲು || ೬೨ ||

ಅವನು ಕಂಡಾ ಕರುಣಾಬ್ಧಿಚಂದ್ರಮ ನೇಮಿ | ಕುವರನಾನೆಯನಲ್ಲಿ ನಿಲಿಸಿ |
ಅವಿವೇಕದಿಂದೀಯೆಡೆಯೊಳಗೀಮೃಗ | ನಿವಹವನಿರಿಸಿದರಾರು || ೬೩ ||

ಎನಲಾ ಮೃಗಸಮುದಾಯವ ಕಾದಿರ್ದ | ವನಚರರಿಂತಾಡಿದರು |
ಜನನುತ ನಿಮ್ಮಡಿಗಳ ಮದುವೆಗೆ ಬಂದ | ಜನದ ಭೋಜನಕೆಂದು ನಾವು || ೬೪ ||

ತಂದೆವೆನುತ ಮೊತ್ತಮೊದಲು ತಮಗೆ ಗೋ | ವಿಂದನು ಕಲಿಸಿದಂದದೊಳು |
ಸಂದೇಹಮಿಲ್ಲದೆ ಪೇಳಲು ಕಾರುಣ್ಯ | ದಿಂದಾ ನೇಮಿಕುಮಾರ || ೬೫ ||

ಇನಿತು ಮೃಗವನೆಲ್ಲವನು ಹತಿಸಿ ನಾ | ವನುನಯದಿಂ ಮದುವೆಯನು |
ಅನುಕರಿಸುವುದನುವಾಯ್ತಾಪ್ರಥಮ ಚುಂ | ಬನದೊಳು ಪಲ್ಮುರಿದಂತೆ || ೬೬ ||

ಅನ್ಯಾಯದಿಂದ ಪಶುಗಳ ಕೊಲ್ಲಿಸಿ ಮ | ತ್ತೆನ್ನಲ್ಪಸುಖಕಾಟಿಸುವ |
ಕನ್ನೆಯರೊಳು ಕಲ್ಯಾಣವಾಗುವ ಬಗೆ | ಚೆನ್ನಾಯ್ತೆಂದಣಿಸಿದನು || ೬೭ ||

ಇಂತು ಚಿಂತಿಸಿ ನಿರ್ವಾಣಾಂಗನೆಯೊಳು | ಸಂತಸದಿಂ ಮದುವೆಯನು |
ಅಂತರಮಿಲ್ಲದಾಗುವೆನೆಂದು ನಿರ್ವೇಗ | ವಂ ತಾಳಿ ನಿಂದಿರಲಾಗ || ೬೮ ||

ಪೊಡೆಯಲರನು ಬಂದೀ ಮೃಗವನು ಪೊರ | ಮಡಿಸುವುದುತ್ತಮ ಲಗ್ನ |
ಅಡಸಿತು ದೇವ ಬಿಜಯಗೆಯ್ವುದೆನಲಾ | ನುಡಿಗೆ ನೇಮೀಶನಿಂತೆಂದ || ೬೯ ||

ಈ ಪರಿಣಯನಮನೇಕ ಪಾಪವ ಮಾಳ್ಪು | ದಾಪೊಳ್ತತಿ ಸುಖಮೀವ |
ಆ ಪರಮಶ್ರೀಯೊಳು ಪರಿಣಯನದ | ರೂಪನೆ ಧರಿಸುವೆನಿರದೆ || ೭೦ ||

ಹಿಂಸಾನುರೂಪಕೆ ಕಾರಣಮಾದೀ | ಸಂಸಾರದಿಂ ಪೊರಮಡುವೆ |
ಸಂಶಯಮಿಲ್ಲದೆನುತ ಕಲ್ಮಷವಿ | ಧ್ವಂಸನಲ್ಲಿಂ ಪಿಂತಕೆಯ್ದಿ || ೭೧ ||

ಅಕ್ಕಟಕ್ಕಟ ಸಂಸಾರಶರಧಿಯೊಳು | ಹೊಕ್ಕು ಚೊಕ್ಕಳಿಕೆಯ ಸುಖವ |
ಒಕ್ಕಲಿಕ್ಕುತಿರ್ದೆನೆನುತ ಚಿಂತಿಸಿ ಮನ | ಮಿಕ್ಕಿ ಮನೆಗೆ ನಡೆತರಲು || ೭೨ ||

ಆ ವಾರತೆಗೇಳಿಯಂಬುಧೀವಿಜಯಮ | ಹೀವರ ಬೆಕ್ಕಸಬಡಲು |
ತೀವಿದ ಮೂರ್ಛೆಯಿಂದಾ ಪೆಣ್ಮಣಿ ಶಿವ | ದೇವಿಯೊರಗೆ ಭೂತಳಕೆ || ೭೩ ||

ನೇಮಿಕುಮಾರನಲ್ಲಿಗೆ ಬಂದ ಪಿತೃ | ವಾಮಾತೃಗಳನೆಚ್ಚರಿಸಿ |
ಪ್ರೇಮದಿ ತನ್ನ ಮುನ್ನಿನ ಭವಬದ್ಧದು | ದ್ಧಾಮತೆಯನು ಪೇಳಿದನು || ೭೪ ||

ಮಂಜಿನಸಿರಿ ಮಹದೈಶ್ವರ್ಯವು ಘನ | ರಂಜನೆ ಸಕಲ ಬಂಧುಗಳು |
ಸಂಜೆಯ ಸೊಬಗು ಜವ್ವನಮಿಂತಿವಕಿನಿ | ಸಂಜದೆ ಮುಗ್ಗುವನೆಗ್ಗ || ೭೫ ||

ಎಂದು ಪಲವು ಪರಿಯಾದ ಯುಕ್ತಾಯುಕ್ತಿ | ಯಿಂದಮವರನೊಂಬಡಿಸಿ |
ಸಂದೆಗಮಿಲ್ಲದೆ ಜಾತರೂಪವ ತಾಳ್ವೆ | ನೆಂದಿರ್ಪಾ ಸಮಯದೊಳು || ೭೬ ||

ಪರಮನ ಪರಮವೈರಾಗ್ಯಮನರಿದಾ | ಸುರರು ಸುರಿದರಲರ್ವಳೆಯ |
ಹರುಷದಿ ಲೋಕಾಂತಿಕದೇವರೆಯ್ತಂದು | ಚರಣಕಮಲಕೆರಗಿದರು || ೭೭ ||

ಈ ತೆರದಿಂ ವಿನಮಿತರಾಗಿಯೆಲೆದೇವ | ಪ್ರೀತಿಯಿಂ ಧರ್ಮಾಮೃತವ |
ಭೂತಳದೊಳು ಕರೆವುದ್ಯೋಗಮ ನೀ | ನಾತುರದಿಂದೆಸಗುವುದು || ೭೮ ||

ಎನುತ ಬಿನ್ನವಿಸಿ ಪೋಗಲು ಬ್ರಹ್ಮಋಷಿಯರಂ | ದನಿತರೊಳಾ ಸಗ್ಗದರಸು |
ಅನುರಾಗದಿಂ ನಾಲ್ಕುತೆರದಮರರುಗೂಡಿ | ಯನಘನ ಸನ್ನಿಧಿಗೆಯ್ದಿ || ೭೯ ||

ಚರಣಕೆರಗಿ ರತ್ನಪೀಠದಮೇಲಾ | ಪರಮನನಿರದೆ ಕುಳ್ಳಿರಿಸಿ |
ಶರಧಿಯ ಹಾಲ ಸುವರ್ಣಕುಂಭದಿ ತೀವಿ | ಹರುಷದಿನಭಿಷೇಕ ಮಾಡಿ || ೮೦ ||

ಪರಿರಂಜಿಪ ಪಲವಣ್ಣದ ದಿವ್ಯಾಂ | ಬರ ದಿವ್ಯರತ್ನಭೂಷಣದಿ |
ಪಿರಿದಾಗಿ ಪೂಜಿಸಿ ಹಸಮಾಡಿದನಾ | ಪರಿನಿಷ್ಕ್ರಮಣಮಂಗಲವ || ೮೧ ||

ತದನಂತರದೊಳಗಾ ತ್ರಿಜಗದ್ಗುರು | ವುದಧಿ ವಿಜಯ ಶಿವದೇವಿ |
ಮೊದಲಾದವವರನು ವಿನಯೋಕ್ತಿಗಳಿಂದ | ಪದುಳದಿ ಬೀಳ್ಕೊಂಡು ಬಳಿಕ || ೮೨ ||

ಸುರುಚಿರನಿರ್ವಾಣದುರ್ಗಸೋಪಾನಮ | ನಿರದೇರುವಮಾಳ್ಕೆಯೊಳು |
ಸುರಪತಿ ಕೈಗುಡೆ ಸುರರುಘೇಯುಘೇಯನೆ | ವರಮಣಿಶಿಬಿಕೆಯನೇರಿ || ೮೩ ||

ಧರೆಯೊಳು ಭೂಮಿಪರೇಳಡಿ ವಿದ್ಯಾ | ಧರರೇಳಡಿಯಲ್ಲಿಂದ |
ಸುರರೇಳಡಿವರಮಾ ಶಿಬಿಕೆಯ ಪೊತ್ತು | ಪರಮೋತ್ಸಾಹದಿ ನಡೆಯೆ || ೮೪ ||

ಕಿನ್ನರ ಕಿಂಪುರುಷರು ಪಾಡಲಾದೇವ | ಕನ್ನೆಯರೊಸೆದು ನರ್ತಿಸಲು |
ಪನ್ನಗರೊಲಿದು ಮದ್ದಳೆಗುಟ್ಟಲಾಜಿನ | ಗುನ್ನತಿಕೆಯ ಹರುಷದೊಳು || ೮೫ ||

ಈ ವಿಧದಿಂದ ನಡೆದುಬಂದಾದ್ವಾ | ರಾವತಿಯಾಪೊರವಳಲ |
ಆ ಉದ್ಯಾನದ ಮಧ್ಯಪ್ರದೇಶದೊ | ಳಾವಾಸವಾರ್ಚಿತ ನಿಲಲು || ೮೬ ||

ಕುಸುಮಾವಳಿಯ ಸೂಸಲು ಶಚಿಯಮರಿಯ | ರೆಸೆವ ಮುತ್ತಿನ ರಂಗವಲಿಯ |
ಹಸಗೆಯ್ಯಲಾದೇವನನಮರರು ರನ್ನ | ವಸೆಯೊಳಗಿಳುಹಿದರಾಗ || ೮೭ ||

ನೆರೆ ಸಮತೆಯಿನಾಹಸೆಯೊಳು ಕುಳ್ಳಿರ್ದು | ತೊರೆದು ಯುಗಲಪರಿಗ್ರಹವ |
ಮಿರುಗುವಾಭರಣವ ಕಳೆದನು ಬಾಳಿಂ | ದೊರೆಯನುರ್ಚುವ ಮಾಳ್ಕೆಯೊಳು || ೮೮ ||

ನಿರ್ಮಲನಾಪೂರ್ವಮುಖಮಾಗಿ ಕುಳ್ಳಿರ್ದು | ಕರ್ಮವಲ್ಲರಿಯ ಬೇರುಗಳ |
ನಿರ್ಮೂಲನ ಮಾಡುವಂತೆ ಕುಂತಳಗಳ | ನೋರ್ಮೊದಲೊಳು ಕಿಳ್ತನಾಗ || ೮೯ ||

ಆ ಕುಂತಳವ ರನ್ನದ ಪಡಲಿಗೆಯೊಳು | ನಾಕಾಧಿಪನಾಂತುಕೊಂಡು |
ಲೋಕೇಶನ ಕರ್ಮವನು ಬಿಡುವಂತೆ ರ | ತ್ನಾಕರದೊಳು ಬಿಟ್ಟನಾಗ || ೯೦ ||

ಬಳಿಕ ಹಲವುತೆರದೊಳು ತುತಿಗೆಯ್ದಾ | ಬಲವೈರಿಯಾಸಗ್ಗಿಗರ |
ಬಲಗೂಡಿ ಬಲಗೊಂಡೆರಗಿ ಬೀಳ್ಕೊಂಡಾ | ಗಳೆ ಸಗ್ಗಕೆಯ್ದದನಿತ್ತ || ೯೧ ||

ರಥನೇಮಿ ಮೊದಲಾದಾಸಾಸಿರ್ವರು | ಪೃಥುವೀರ್ಯರಾದಿಸಂಯುತರು |
ಪೃಥಿವೀಪಾಲಕರುಭಯಪರಿಗ್ರಹವನು | ಪೃಥಕುಮಾಡಿ ದೀಕ್ಷೆಗೊಳಲು || ೯೨ ||

ಮೊದಲು ಮದುವೆಗೆಂದು ಬಂದ ಧಾತ್ರೀಮತಿ | ಮೊದಲಾದ ನೃಪನಂದನೆಯರು |
ಚದುರೆಯರರು ಸಾಸಿರ ಸಖಿಯರುಗೂಡಿ | ಪದೆದು ದೀಕ್ಷೆಯ ಧರಿಸಿದರು || ೯೩ ||

ಶ್ರಾವಣಶುದ್ಧಚತುರ್ಥಿಯ ದಿನದೊಳು | ತೀವಿದ ಚಿತ್ರತಾರೆಯೊಳು |
ಆವುದಯದೊಳು ದೀಕ್ಷೆಯ ಧರಿಸಿದನಾ | ದೇವರದೇವ ನೇಮೀಶ || ೯೪ ||

ಸದಮಲತರ ಸಪ್ತರ್ಧಿಸಮೇತನು | ಉದಿತಮನಃಪರ್ಯಾಯ |
ವಿದಿತಬೋಧನು ಷಷ್ಠದಿವಸೋಪವಾಸಮ | ಪದುಳದಿನಿರ್ದು ಪಾರಣೆಗೆ || ೯೫ ||

ನೇಮಿಮುನೀಶನು ಗಿರಿನಗರಕೆ ಬರೆ | ಪ್ರೇಮದಿ ವರದತ್ತನೆಂಬ |
ಭೂಮೀಶ್ವರನಿದಿರ್ಗೊಂಡು ನಿಲಿಸಿದನು | ದ್ದಾಮ ಮಂಗಲವಿಧಿಯಿಂದ || ೯೬ ||

ಭವನಕೆ ತಂದು ಪ್ರತಿಗೃಹ ಮೊದಲಾದ | ನವವಿಧ ಪುಣ್ಯಸಮೇತ |
ಸುವಿದಿತ ಸಪ್ತಸದ್ಗುಣಸಂಪನ್ನನಂ | ದವಿರಳಭಕ್ತಿಯೊಳೀಯೆ || ೯೭ ||

ನಿರವದ್ಯಮಪ್ಪಮೃತಾಹಾರಮನಾ | ದರದಿಂದ ಕಾಯಸ್ಥಿತಿಯ |
ಇರದೆ ನಿರ್ವರ್ತಿಸಿ ಬಳಿಕಾನೇಮಿ | ಶ್ವರನಕ್ಷಯದಾನಮೆನಲು || ೯೮ ||

ಸುರಿದುದು ಹೊಸಹೊನ್ನಮಳೆ ಹೂವಿನ ಸರಿ | ಸುರದುಂದುಭಿ ಮೊಳಗಿದುದು |
ಸುರಭಿಸಮೀರನೆಸಗಿತಾಗಸದೊಳು | ಸುರಸಂತತಿ ಪೊಗಳಿದುದು || ೯೯ ||

ಬಳಿಕಲ್ಲಿಂ ಬಂದಾವೂರ್ಜಯಂತಾ | ಚಲದನಿರ್ಜಂತುಕಮಪ್ಪ |
ಸ್ಥಳದೊಳು ತೊಳತೊಳಗುವ ಚಂದ್ರಕಾಂತೋ | ಪಲದ ಮೇಗಡೆಗೆಯ್ತಂದು || ೧೦೦ ||

ಈಯೆಡೆಯಿಂ ನಾಲ್ಕು ಮಾಸಕ್ಕಲ್ಲದೆ | ವೈಯಾರದಿಂದೇಳೆನೆಂದು |
ಕಾಯೋತ್ಸರ್ಗದೊಳಗೆ ಕೈಯನಿಕ್ಕಿನಿಂ | ದಾಯತಿರಾಯನೊಪ್ಪಿದನು || ೧೦೧ ||

ಹರಿಕರಿಪರ್ದುಪನ್ನಗಹೆಬ್ಬುಲಿಹುಲ್ಲೆ | ಶರಭ ಭೇರುಂಡ ಪಕ್ಷಿಗಳು |
ಪರಮನ ಪರಮೋಪಶಾಂತತೆಯನು ನೋಡಿ | ನಿರುತದಿ ನಿಂದಿರುತಿಹುವು || ೧೦೨ ||

ಅಗಣಿತಮಹಿಮನಿಂದಿರಲತ್ತಲಾಗಿರಿ | ನಗರಾಧಿಪತಿ ವರದತ್ತ |
ಬಗೆಯೊಳೊಗೆದ ವೈರಾಗ್ಯದಿ ತೊರೆದಾ | ಯುಗಲಪರಿಗ್ರಹಗಳನು || ೧೦೩ ||

ಅಂಗಜಮರ್ದನನಲ್ಲಿಗೆ ಬಂದು ಮ | ನಂಗೊಳಿಪಾದೀಕ್ಷೆಯನು |
ಅಂಗೀಕರಿಸಿ ತಪಂಗೈಯ್ಯುತಿರ್ದನು | ಹಿಂಗದ ಮನದುಪಶಮದಿ || ೧೦೪ ||

ಮತ್ತಾನೇಮೀಶಚ್ಛದ್ಮಸ್ಥಕಾಲಮೈ | ವತ್ತಾರುವಾಸರ ಕಳೆಯೆ |
ಒತ್ತಿನೊಳಿರ್ದೊಂದು ಬಿದಿರಮೂಲದೊಳೇಕ | ಚಿತ್ತದಿ ದಿಟ್ಟಿಯನಿರಿಸಿ || ೧೦೫ ||

ಸಾನುಭಾವದಿ ನಿಂದು ತೀವ್ರಮಪ್ಪಘಮೆಂಬ | ಕಾನನಮೆಲ್ಲವನಿರದೆ |
ಧ್ಯಾನಪಾವಕನಿಂದ ಸುಡಲು ಕೇವಲ ಬೋಧ | ವಾನದೆ ಸಂಜನಿಯಿಸಿತು || ೧೦೬ ||

ಅನಿತರೊಳಾಗಸದಿಂ ಪೂವಿನ ಪನಿ | ಪನಿತುದು ದೇವದುಂದುಭಿಯ |
ಧ್ವನಿಯುಣ್ಮಿತು ದೇವೇಂದ್ರನ ಸಿಂಹಾ | ಸನಮೋವದೆ ಕಂಪಿಸಿದುದು || ೧೦೭ ||

ಅದನು ಕಂಡಾ ಸಗ್ಗದರಸು ಜಿನೇಶಗೆ | ಸದಮಲಸಮವಸರಣವ |
ಪದಪಿಂ ಸಮೆಯೆಂದು ವೈಶ್ರವಣನನು ಸ | ಮ್ಮುದದಿಂದ ಬೀಳ್ಕೊಟ್ಟು ಬಳಿಕ || ೧೦೮ ||

ದನುಜ ದಿವಿಜ ಯಕ್ಷ ಪನ್ನಗರೆಲ್ಲರು | ಮನದೆಗೊಂಡು ತಂತಮ್ಮ |
ಘನತರಮಪ್ಪ ನಾನಾವಿಧದಾವಾ | ಹನವೇರಿ ತನ್ನೊಡೆನೆಯ್ದೆ || ೧೦೯ ||

ಧರಣೀತಳದಿಂದಂಬರಕೈಸಾ | ಸಿರಬಿಲ್ಲಂತರಮೊಗೆದ |
ಅರುಹಗೆ ತನ್ನ ಬೆಸದಿ ಮುನ್ನವಿತ್ತೇ | ಶ್ವರವಿರಚಿಸೆ ರಂಜಿಸುವ || ೧೧೦ ||

ಅನಘನನಪವರ್ಗಲಕ್ಷ್ಮಿಯ ಮಾಂಗಲ್ಯ | ಕನುಗೆಯ್ದ ಮಣಿಮಂಟಪವೊ |
ಎನೆ ಕಡುರಂಜಿಪ ಸಮವಸರಣಕಾ | ಅನಿಮಿಷಪತಿ ಬಂದನಾಗ || ೧೧೧ ||

ಇಂತು ಬಂದದರ ಮಧ್ಯದ ಗಂಧಕುಟಿಯನು | ಸಂತಸದಿಂದೊಳಹೊಕ್ಕು |
ಅಂತರಿಸದೆ ಮೂರು ಸೂಳ್ವರ ಬಲವಂದು | ಕಂತುಮದಾಪಹರಣಗೆ || ೧೧೨ ||

ಅಷ್ಟಮಹಾಪ್ರಾತಿಹಾರ್ಯಗನಂತಚ | ತುಷ್ಟಯವಿನುತಾತ್ಮನಿಗೆ |
ದುಷ್ಟದುರಿತದೂರೀಕೃತನರ್ಹಗೆ | ಸಾಷ್ಟಾಂಗವಿನಮಿತನಾಗಿ || ೧೧೩ ||

ಜಲಗಂಧಾಕ್ಷತೆ ನವ್ಯಕುಸುಮ ಚರು | ಜಲಜಲಿಸುವ ದೀಪ ಧೂಪ |
ಫಲದಿಂದರ್ಚಿಸಿ ರತ್ನಪಾತ್ರೆಯೊಳು ಕ | ಣ್ಗೊಳಿಪಂತರ್ಘ್ಯಮನೆತ್ತಿ || ೧೧೪ ||

ಮತ್ತೆ ಪಲವು ದಿವ್ಯ ಸ್ತೋತ್ರಮನೇಕ | ಚಿತ್ತದಿಂದಲಿ ತುತಿಗೆಯ್ದು |
ಉತ್ತಮಮಪ್ಪುಚಿತಾಸನದೊಳು ದೇ | ವೋತ್ತಂಸನು ಕುಳ್ಳಿರಲು || ೧೧೫ ||

ಗರುಡ ಗಂಧರ್ವ ರಾಕ್ಷಸ ಯಕ್ಷ ವಿದ್ಯಾ | ಧರ ಕಿನ್ನರ ಕಿಂಪುರುಷ |
ಉರಗಾಧೀಶರೆಲ್ಲರು ನಿಜಬಲಗೂಡಿ | ಯರುಭಕ್ತಿಯೊಳೋಲೈಸೆ || ೧೧೬ ||

ಹರಿವಂಶದರಸು ಮಕ್ಕಳನೆಲ್ಲರ ಕೂಡಿ | ನೆರದ ಖೇಚರ ಭೂಚರರು |
ಬೆರಸಿ ಬಲಾಚ್ಯುತರಾಸಮವಸೃತಿ | ಗುರುಮುದದಿಂದೆಯ್ತಂದು || ೧೧೭ ||

ಮಾನಿತಮಾದ ಮಾನಸ್ತಂಭವ ಕಂಡು | ನಾನಾ ರಾಜಚಿಹ್ನೆವನು |
ಆನದಿರಸಿ ಮುಂದಕೆ ನಡೆದಪ್ರತಿ | ಮಾನಲಲಿತಭಕ್ತಿಯಿಂದ || ೧೧೮ ||

ಭಾಸುರತರಸೋಪಾನಮನೊಸೆದೇರಿ | ಯಾಸಮವಸೃತಿಗೆಯ್ದಿ |
ಓಸರಿಸದೆ ಗಂಧಕುಟಿಯೊಳಗಡೆ ಹೊಕ್ಕು | ಆ ಸರ್ವೇಶನ ಕಂಡು || ೧೧೯ ||

ಮೂಮೆತಿರಿದು ಸಾಷ್ಟಾಂಗನಮಿತರಾಗಿ | ಯಾಮಾನವಕೋಷ್ಟದೊಳು |
ಪ್ರೇಮದಿಂದ ಕೈಮುಗಿದು ಕುಳ್ಳಿರ್ದಮ | ತ್ತಾಮಹಿಮನ ರೂಪವನು || ೧೨೦ ||

ಬಳಿಕೆವೆವೊಯ್ಯದೆ ತೆರೆದ ತೆರಪುಗಣ್ಣು | ಬಳಲುವಂದದಿ ನೆರೆನೋಡಿ |
ಅಲಘುತರಪ್ರಿಯದಿಂದ ಕೆಲಪೊತ್ತಿರ್ದು | ಪೊಳಲನೆಯ್ದಿದರು ಮತ್ತಿತ್ತ || ೧೨೧ ||

ವರದತ್ತಮುನಿಪತಿ ಸಮವಸರಣಕೆಯ್ದಿ | ಯರುಹಗೆರಗಿದಾಕ್ಷಣದೊಳು |
ಸುರುಚಿರಮಪ್ಪ ಸುಜ್ಞಾನಮೊಗೆದು ಗಣ | ಧರಸಂಪದವನೆಯ್ದಿದನು || ೧೨೨ ||

ಬಳಿಕ ಬಲಾರಿ ಕೈಮುಗಿದೆಂದನೆಲೆದೇವ | ಇಳೆಯೊಉ ಧರ್ಮಾಮೃತದ |
ಮಳೆಗರೆಯಿಸಬೇಕೆನಲೊಡಬಟ್ಟಾ | ಗಳೆಯಲ್ಲಿಂ ಮುಂದಕೆಯ್ದಿ || ೧೨೩ ||

ಕಡುರಂಜಿಪ ಧರ್ಮಚಕ್ರಸಮನ್ವಿತ | ನಡೆದ ನೆಲಕೆ ಸುಭಿಕ್ಷವನು |
ಹಡೆಯಿಸುತಾರ್ಯಾಖಂಡದ ಜನಪದ | ಕಡರಿಸಿದನು ಧರ್ಮವನು || ೧೨೪ ||

ಭವ್ಯಜನಾಂಬುಜವನಭಾನುಬಲರಿಪು | ಸೇವ್ಯನಪಾರ ಮಹಿಮನು |
ದಿವ್ಯವಚನಸಮುಪೇತನೆಸೆದನಾ | ಅವ್ಯಯಸುಖದಾಯಕನು || ೧೨೫ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದು ದ್ವಾತ್ರಿಂಶದಾಶ್ವಾಸ || ೧೨೬ ||

ಮೂವತ್ತೆರಡನೆಯ ಸಂಧಿ ಸಂಪೂರ್ಣಂ