ಭರದಿಂದಾ ಬಲಭದ್ರನಿಕ್ಕುವ ನೀ | ರಿರದುಕ್ಕುವ ತುಪ್ಪದೊಳಗೆ |
ಸುರಿವ ನೀರಂತಾದುದೇನೆಂಬೆನಾ ವಿಧಿ | ಯಿರದೆ ಮಾಡುವ ಮಾಟವನು || ೧೦೧ ||

ಆ ರೇವತಿಪತಿ ಕಂಡಿಂತಿದು ದುರ್ನಿ | ವಾರಣಮೆಂದು ಕೇಶವನ |
ಆರಕ್ತಗಂಬಳಮೊಂದುಸಹಿತಮಾ | ವೂರನಿರದೆ ಪೊರಮಡಿಸಿ || ೧೦೨ ||

ಶರಧಿಯ ತೀರದೊಳಗೆ ನಿಂದಾಪುರ | ವರ ಮುರಿವುದ ವಿಸ್ಮಯದಿ |
ಅರಸುಗಳೀರ್ವರು ನಿಂದು ನೋಡಿದರಂ | ದುರಿವುರಿವಾನಗರಿಯನು || ೧೦೩ ||

ಕಡೆವಕಡಲೊಳುದಿಸಿದ ವಿಷದುರಿಹೊಗೆ | ವಿಡಿದಾಕಡೆಗೋಲಾಗೆ |
ಕಡುರಂಜಿಪಮೇರುಗಿರಿಯೆನಲಬುಧಿಯ | ನಡುವಣೂರಗ್ನಿಯೊಪ್ಪಿದುದು || ೧೦೪ ||

ಕಾಲಾಗ್ನಿರುದ್ರನಂಗದೊಳಿರ್ಪಗ್ನಿ | ಜ್ವಾಲೆ ರಸಾತಳದಿಂದ |
ಭೂಲೋಕಕುಚ್ಚಳಿಸಿದಮಾಳ್ಕೆಯೊಳಾ | ಭೀಳಮಾಯ್ತಾಪುರದಗ್ನಿ || ೧೦೫ ||

ಕ್ಷಾರಜಲವನಿರದುಂಡು ಬಿಗುರ್ತಾ | ವಾರಿಧಿಯಿಂ ಸುರನದಿಯ |
ನೀರುಣಲೇಳ್ವ ವಡಬಶಿಖಿಯೆನೆ ಕೃಷ್ಣ | ನೂರಗ್ನಿಯೆಳ್ದುದಂಬರಕೆ || ೧೦೬ ||

ಪರಿದು ಪಾತಾಳಲೋಕವ ಸುಟ್ಟು ಮೇಲಣ | ಮರುತಮಾರ್ಗವ ಚುಂಬಿಸುತ |
ಪುರವರವನು ಸುಡುವಗ್ನಿಯೊಪ್ಪಿದುದಂದಿ | ನುರುಲಿಂಗವೆಂಬ ಮಾಳ್ಕೆಯೊಳು || ೧೦೭ ||

ಇರುವೆಯ ಗೂಡಿಗಿಕ್ಕಿದ ಕಿಚ್ಚಿನಂತಿಡಿ | ಕಿರಿದು ತುಂಬಿದ ರಾಜಧಾನಿ |
ಅರಗುಲಿಯಸುರನಿಕ್ಕಿದ ಬಲುಗಿಚ್ಚಿನಿಂ | ನೆರೆಬೆಂದುದರೆಗಳಿಗೆಯೊಳೂ || ೧೦೮ ||

ನೀರಜನಾಭನ ಕೃತಕರ್ಮವಶದಿಂ | ದಾರಕ್ಕಸನಿಟ್ಟ ಕಿಚ್ಚು |
ದ್ವಾರಾವತಿಯ ಜನಂಗಳನಾಜವ | ನೂರೌತಣವ ಮಾಡಿದುದು || ೧೦೯ ||

ಆ ರುದ್ರನಳಿಕಾಂಬಕದಗ್ನಿಯಾಮೂ | ನೂರನುಂಡಂದಿಂದ ಮೊದಲು |
ಆರೈದುಪವಾಸಮಿರ್ದು ವಿಷ್ಣುವಿ | ನೂರ ಪಾರಣೆಯ ಮಾಡಿದುದು || ೧೧೦ ||

ಪಿಂಡೀಕೃತಮಾಡಿ ಪಿಡಿದು ಪುರಮನಾ | ದಂಡಧರನು ಶಿಖಿಮುಖದಿ |
ಉಂಡಬಾಯಂ ತೊಳೆವಂದದಿನಾನೀರ | ಕೊಂಡುದು ನಿಮಿಷಮಾತ್ರದೊಳು || ೧೧೧ ||

ಪಿರಿದು ಪುರವ ಸುಟ್ಟ ಪಾತಕವನು ಪರಿ | ಹರಿಸುವೆನಿಂತುಟೆಂದೆನುತ |
ಶರಧಿಸ್ನಾನಮಗೆಯ್ದಂತಾಅಗ್ನಿ | ಯಿರದಡಿಗಿದುದಬುಧಿಯೊಳು || ೧೧೨ ||

ಅಂದು ರಾಮಾವತಾರದಿನೆನ್ನ ಕಿರಿದಿಗೆ | ತಂದೆಯಲ್ಲಾಯೆಂದು ಮುನಿದು |
ಬಂದು ನುಂಗಿದುದೆನೆ ಜಲನಿಧಿಯತಿಭರ | ದಿಂದ ನುಂಗಿದುದಾಪುರವ || ೧೧೩ ||

ಮಚ್ಚರದಿಂ ಮಾಮಸಗಿಯಸುರನಿಟ್ಟ | ಕಿಚ್ಚುವೊಂದರೆಗಳಿಗೆಯೊಳು |
ಒಚ್ಚತವುಳಿಯದಂದದೊಳಾ ಪುರವನು | ಬಚ್ಚಬಯಲ ಮಾಡಿದುದು || ೧೧೪ ||

ಈ ರೀತಿಯಿಂ ಜನಿಜಪುರಮಗ್ನಿಯೊಳು ಬೆಂದು | ನೀರೊಳು ನೆರೆದುದ ಕಂಡು |
ಆ ರಾಜರೀರ್ವರಲ್ಲಿಂ ತೆಂಕಕಡೆಪೋದೆ | ದಾರಿವಿಡಿದು ಬಂದರಾಗ || ೧೧೫ ||

ಬಲಯುತಭಟರಥಹರಿ ಕರಿವಿದ್ಯಾ | ಬಲದೇವ ಬಲದ ಮಧ್ಯದೊಳು |
ಸಲೆವಿಭವದಿ ಬರ್ಪವರೇಕಾಂಗದಿ | ನೆಲದೊಳೈದಿದರಘವಶದಿ || ೧೧೬ ||

ಓಸರಮಿಲ್ಲದೋಲೈಸಲು ಪದಿನಾರು | ಸಾಸಿರಮಕುಟವರ್ಧನರು |
ಭಾಸಿಪವಿಭವದೊಳೈತರ್ಪವರಿಂತು | ದೇಶಿಗತನದೊಳೆಯ್ದಿದರ || ೧೧೭ ||

ಮುಸುಕಿದ ಮಂಡಳಿಕರ ಮಧ್ಯದೊಳು ರಂ | ಜಿಸುವ ರನ್ನದ ಸತ್ತಿಗೆಯ |
ಮಿಸುಪ ತಣ್ನೆಳಲೊಳಗೆಯ್ದುವರೀ ಕಾಯ್ವ | ಬಿಸಿಲೊಳು ಬರ್ಪಂತಾಯ್ತು || ೧೧೮ ||

ಹರಲೊತ್ತೆ ಹದುಗುವ ಹೆಜ್ಜೆ ಮೇಲಣ ಬಿಸಿ | ಲುರಿಗೆ ಸೆಡೆವ ತನುಲತಿಕೆ |
ಸುರಿವ ಬೆಮರು ಸೂಸುವ ಸೇದೆಯಿಂದಾ | ನರನಾಥರೆಯ್ತಂದರಾಗ || ೧೧೯ ||

ಈ ರೀತಿಯಿಂ ಬಲ ಹರಿಗಳೈತಂದೊಂದು | ಭೀರುತೆಯನು ಹುಟ್ಟಿಸುವ |
ಅರಣ್ಯವ ಹೊಕ್ಕೊಂದು ಮಾಕಂದಮ | ಹೀರುಹವನು ಸಾರಿದರು || ೧೨೦ ||

ಅಲ್ಲಿ ಹಸಿದ ಫುಲ್ಲನಾಭನ ಕಂಡು ನೀ | ನಿಲ್ಲಿರು ನಿನಗಶನವನು |
ನಿಲ್ಲದೆ ತಪ್ಪೆನೆನುತ ತಳರಿದನತಿ | ಬಲ್ಲಿದನಾಬಲದೇವ || ೧೨೧ ||

ಲೋಕೈಕಬಾಹುಬಲಾನ್ವಿತನುರುಭ | ದ್ರಾಕಾರನಮಳಸ್ವರೂಪ |
ಆ ಕಾಂತಾರಮಧ್ಯದೊಳಿರದೆಯ್ದಿದ | ನೇಕಕುಂಡಲನತಿಭರದಿ || ೧೨೨ ||

ಅತಿವೇಗದಿಂದೆಯ್ತಂದಾಕುರುಭೂ | ಪತಿಯ ಮೊಮ್ಮಗ ಕುಯವರನು |
ಪ್ರತಿಪಾಲಿಸುವ ಧನದಕುಶ್ಮೆಯೆಂಬು | ನ್ನತಿಕೆಯ ಪುರಕೆಯ್ದಿದನು || ೧೨೩ ||

ದ್ವಾರಾವತಿಯುರಿದುದ ಕಂಡಾಬಲ | ನಾರಾಯಣರೀರ್ವರುಳಿಯೆ ಆ |
ವೂರೊಳಗೆಲ್ಲರು ಸತ್ತರೆಂದೆಂಬಾ | ವಾರತೆಯನು ಕೇಳುತವೆ || ೧೨೪ ||

ಆರಯ್ಯದೆ ಕಡುಹರ್ಷದಿಂದಾದಿರ್ವಿ | ಚಾರುಮಾಡಿಸಿದನೋಕುಳಿಯ |
ಆ ರವಿಯನು ರಾಹುಗ್ರಹಿಸಿದೊಡೊಳ್ಳೆ | ನೀರೊಳು ತಲೆಯೆತ್ತುವಂತೆ || ೧೨೫ ||

ಅಂತದನೀಕ್ಷಿಸುತಾಬಲದೇವನ | ತ್ಯಂತ ದುಃಖಾನ್ವಿತನಾಗಿ |
ಪಿಂತಣಿ ಪಿರದಪ್ಪ ದುಷ್ಕೃತ ಫಲವೆಮ | ಗಿಂತಾಯ್ತೆಂದೆಣಿಸುತವೆ || ೧೨೬ ||

ನಾಗದತ್ತನೆಂಬ ಪರದನಂಗಡಿಗಾಗಿ | ಪೋಗಿ ತನ್ನೇಕಕುಂಡಲವ |
ರಾಗದಿನಿತ್ತು ಕಲಸುಗೂಳನೀಸಿಕೊಂ | ಡಾಗರಿಮನು ತಿರುಗಿದನು || ೧೨೭ ||

ಭೂಲೋಕವನು ಪಾಲಿಸುವ ಪರಾಕ್ರಮ | ಶಾಲಿಯಚ್ಚುತನಗ್ರಜನು |
ಪೇಳಲೇನು ಕಾಲವಶದಿ ಕುಂಡಲವನು | ಕೂಳಿಗೆ ಮಾರುವಂತಾಯ್ತು || ೧೨೮ ||

ಆ ನೃಪವರನಾಕಾರಕೆ ವಿಸ್ಮಯ | ಮಾನಸನಾನಾಗದತ್ತ |
ಭೂನುತಮಪ್ಪೀ ರತ್ನಕುಂಡಲಮಿದ | ನಾನು ಧರಿಸಲಳವಲ್ಲ || ೧೨೯ ||

ಎಂದಾ ಕುಯವರಗಾ ಕುಂಡಲವನು | ತಂದು ಕೊಡಲು ಕಂಡವನು |
ಮುಂದೇತರವಿಸ್ಮಯನಾಗುತಿಂತಿದ | ತಂದುಕೊಟ್ಟವನಾರೆನಲು || ೧೩೦ ||

ಭುವನೈಕರೂಪನುತ್ತಮಲಕ್ಷಣಾನ್ವಿತ | ಪ್ರವಿಮಿಲತರಲಲಿತಾಂಗ |
ತವಕದಿನೋರ್ವ ಕಾರಣಪುರುಷನು ಬಂದು | ನವರತ್ನಕುಂಡಲವಿತ್ತು || ೧೩೧ ||

ಕಲಸುಗೂಳನು ಕೊಂಡು ಪೋದನೆಂಬುದಕೇಳಿ | ನೆಲೆಯಿದು ಮತ್ತೋರ್ವನಲ್ಲ |
ಬಲರಾಮನೆಂದೇಯನುಮಾನದಿಂದರಿ | ದಲಘುತರಕ್ರೋಧದಿಂದ || ೧೩೨ ||

ಅಂದು ಪಾಂಡವರನೇಳಿಸಿ ನಮ್ಮ ವಂಶವೆಂ | ಬೊಂದು ಮಹಾರಣ್ಯವನು |
ದಂದಹ್ಯಮಾನಮಪ್ಪಂದದಿನುರುಹಿಸಿ | ಕೊಂದು ನಿಶ್ಯೇಷಂಗೆಯ್ದಾ || ೧೩೩ ||

ಪಗೆಯೆನಗೊಳಗಾದನೆಂದು ಬಗೆದು ತ | ನ್ನಗಣಿತಮಪ್ಪ ಸೈನ್ಯವನು |
ಮಿಗೆಮುನಿಸಿಂ ಕೂಡಿಕೊಂಡು ಬಂದು ಸಾ | ಸಿಗನೆಯ್ದುವೆಡೆಗೆಯ್ತರಲು || ೧೩೪ ||

ತೀವಿದ ಬಲವನು ಕಂಡು ಹರಿಯ ಪುಣ್ಯ | ದೇವತೆಗಳಿರಾ ಕೂಳ |
ಓವದೆಯಾನಿಮೆಂದಾಕಾಶಕಿಡಲದು | ಭೂವಲಯಕೆ ಬೀಳಲಾಗ || ೧೩೫ ||

ಎನ್ನ ಸುಕೃತದೇವತೆಗಳಿರಾನೀವೀ | ಯನ್ನಮನಾನಿಮೆಂದೆನಲು |
ಚೆನ್ನಾಗಿಯವು ಬಂದಾತು ರಕ್ಷಿಸುತಿ | ರ್ಪನ್ನೆಗಮಾಪುಸೇನೆ || ೧೩೬ ||

ಮುಸುಕಲು ಕಂಡು ಮುನಿದು ಮಿಗವಿಂಡನು | ಹಸಿದಹೆಬ್ಬುಲಿ ಹೊಗುವಂತೆ |
ಅಸಮಪರಾಕ್ರಮಿಯಾದುರ್ಬಲವನು | ಕುಸುರಿದರಿದುಕೊಂದನಾಗ || ೧೩೭ ||

ಕರಿಯಿಂ ಕರಿಯನಶ್ವಗಳಿಂದಶ್ವಮ | ನುರು ರಥದಿಂ ರಥಗಳನು |
ನರರಿಂ ನರರನೋವದೆ ಬಡಿದಾನಿ | ಷ್ಠುರವಿಕ್ರಮಿಕೊಂದನಾಗ || ೧೩೮ ||

ಬಲ್ಲಾನೆ ಬಾಳೆಯ ವನವ ಹೊಕ್ಕಂದದಿ | ಬಲ್ಲಿದನಾರಿಪುಬಲವ |
ಎಲ್ಲವ ಕೊಲಲಾಕುಯವರನತಿನೊಂ | ದಲ್ಲಿಂದೋಡಿದನಿತ್ತ || ೧೩೯ ||

ಬಲಯುತನಾಕಲಸೋಗರವನು ಕೊಂ | ಡಲಸದೆ ಬಂದು ದೂರದೊಳು |
ನೆಲದೊಳಗೊರಗಿದ ಮುರರಿಪುವನು ಕಂ | ಡಲಘುದುಃಖಖಾನ್ವಿತನಾಗಿ || ೧೪೦ ||

ಎಲೆ ತಮ್ಮ ರತ್ನರಂಜಿತನವಶಯ್ಯಾ | ತಳದೊಳು ಮಣಿದೀಪಗಳು |
ಜ್ವಲಿಯಿಸುತಿರೆ ಮಾಣಿಕಮಂಚದ ಮೇಲೆ | ಮಲಗುವಗೀವಿಧಿಯಾಯ್ತೆ || ೧೪೧ ||

ಧವಲಾತಪತ್ರದ ತಣ್ನೆಳಲೊಳಗಾ | ಧವಳಾಕ್ಷಿಯರು ಢಾಳಿಸುವ |
ಧವಳಚಾಮರಗಳಿನೆಸೆವೀಯದುಕುಲ | ದವಗಿಂದೀವಿಧಿಯಾಯ್ತೆ || ೧೪೨ ||

ಮೇದಿನಿಯೊಳಗುಳ್ಳರಸುಮಕ್ಕಳು ನಿನ್ನ | ಪಾದಮೂಲಕೆ ಮುಗ್ಗುತಿರಲು |
ಸಾದರದಿಂದಿರ್ಪ ಮುರವೈರಿಯೇಕಾಕಿ | ಯಾದೆಯಲಾ ಕರ್ಮವದಿ || ೧೪೩ ||

ಎಂದುರೆ ಪಲುಬುತ ಕಣ್ಣಕಡೆಗೆ ನೀರ | ತಂದು ತಮ್ಮನ ಬಳಿಗೆಯ್ದಿ |
ಒಂದಿದ ಮರುಕದಿ ಕುಳ್ಳಿರ್ದು ಕುಯವರ | ಸಂದಣಿಸಿದ ಸೇನೆವೆರಸಿ || ೧೪೪ ||

ಬಂದು ತಾಗಲು ತಾನಾಬಲವನು ಬಡಿ | ದಂದಮನುಸುರಲು ಕೇಳಿ |
ಇಂದೀವರನಾಭನ ಧರ್ಯವಾಯದೆದೆ | ಯಿಂದ ಹವ್ವನೆ ಹಾರಿದುದು || ೧೪೫ ||

ಇಲ್ಲಿ ನಾವಿರ್ಪುದೆಲೇಯಣ್ಣ ಕಾರಿಯ | ಮಲ್ಲೆಂಬ ನುಡಿಯನು ಕೇಳಿ |
ಬಲ್ಲಾಳಂದೆಸಗಿದ ಪಾಪವಶದಿಂ | ಹುಲ್ಲಾಳಾದನೆಂದೆನುತ || ೧೪೬ ||

ಅಕಟಕಟಾ ಪಾಪಿ ವಿಧಿಯೆ ಭವನ ಭುಂ | ಭುಕನಚಳಿತನಪ್ರತಿಮನು |
ಅಕಲಂಕವಿಕ್ರಮಾನ್ವಿತನೀತೆರದಿಂ | ಚಕಿತ ಹೃದಯನಾದನಲ್ಲ || ೧೪೭ ||

ಎಂದಾತನು ಚಿಂತಿಸುತಾಹರಿಗೂಡಿ | ಮುಂದಕೆ ತೆರಳಿಯಲ್ಲಿಂದ |
ಗೊಂದಣಗೊಂಡು ಕೊಳ್ಮಿಗಗಳ್ತೀವಿದ | ಮಂದೇತರೋಲ್ವಣಮಾದ || ೧೪೮ ||

ಕೌಶಂಬಿಯೆಂಬ ಮಹಾವಿಪಿನದೊಳೊಂದು | ಕ್ರೋಶದೂರಮೆಯ್ತಂದು |
ಆಸಕ್ತಿಯಿಂದೊಂದು ವಟಭೂಜಕಾರಾಮ | ಕೇಶವರಿರದೆಯ್ತಂದು || ೧೪೯ ||

ಪಿರಿದಾದುದು ನೀರಳ್ಕೆಯೆನಲು ಹಲ | ಧರನಾನೆಳಲೊಳೊರಗಿದ |
ಹರಿಗಾರಕ್ತಕಂಬಳವ ಹೊದಿಸಿ ನೀರ | ತರಲೆನುತೈದಿದನಿತ್ತ || ೧೫೦ ||

ಅಂದಾ ನೇಮೀಶನ ವಚನಕೆ ಭರ | ದಿಂದ ಜರತ್ಕುಮಾರಕನು |
ತಂದು ಜಲಧಿಯೊಳು ಹಾಕಿದ ಬಾಣವ | ನೊಂದು ಮೀನು ನುಂಗಲದನು || ೧೫೧ ||

ಜಾಲಗಾರನೋರ್ವ ಹಿಡಿದದರೊಡಲನು | ಸೀಳಿಯಾ ಬಾಣವ ತೆಗೆದು |
ಲೀಲೆಯಿಂದ ಕಾಣ್ಕೆಯನೀಯೆ ವಿಕ್ರಮ | ಶಾಲಿ ಜರತ್ಕುಮಾರಕನು || ೧೫೨ ||

ಹರುಷದಿನಾಸರಲನು ಕೊಂಡು ವಿಪಿನಾಂ | ತಂರದೊಳು ತೊಳಲುತ ಬಂದು |
ದುರದಡಿಯೊಳಗೊಂದು ಕಾಲೊಳು ಕಾಲಿಟ್ಟು | ಹರಿಯಾರಕ್ತಗಂಬಳವ || ೧೫೩ ||

ಮುಸುಕಿಟ್ಟು ಮಲಗಿರೆ ಪಲಪಣ್ಣದಿಂ ರಂ | ಜಿಸುವ ಮೃಗಮಿದೆಂದು ಬಗೆದು |
ಎಸಲಾಕಣೆ ಕೃಷ್ಣನ ಕಮಲಾಂಕಿತ | ಮಿಸುಪಮೆಲ್ಲಡಿಯ ತಾಗಿದುದು || ೧೫೪ ||

ಆ ಮೆಲ್ಲಡಿಯನು ತಾಗಿ ಮೇಗಡೆಗಾಗಿ | ಯಾ ಮಾರ್ಗಣ ಮೂಡಲೊಡನೆ |
ದಾಮೋದರನೆಳ್ದು ಕಿತ್ತು ಮತ್ತದನು | ದ್ದಾಮ ಕೋಪದೊಳಿರಲಾಗ || ೧೫೫ ||

ಶರದಿಂದಾವೃಗವಳಿಯಿತೆನುತ ಕಡು | ಭರದಿಂದಲ್ಲಿಗೆಯ್ತಂದು |
ಹರಿಯನು ಕಂಡಕಟಾ ಕೆಟ್ಟೆನಣ್ಣಾ | ಪಿರಿದು ಪಾತಕಿನಾನೆಂದು || ೧೫೬ ||

ಧರೆಯೊಳಗುರುಳಿ ಶೋಕಂಗೆಯ್ವುತಿರಲಾ | ಮುರರಿಪುಉವಿಂತಿದೇನೆಂದು |
ಒರೆಯೆ ಜರತ್ಕುಮಾರಕನಳುತಿಂತೆಂದ | ನರಸ ನಿನ್ನನು ಮೃಗಮೆಂದು || ೧೫೭ ||

ಊಹಿಸಿ ಪಾಪಕರ್ಮದಿಯೆಚ್ಚೆನೆಂದೀ | ದ್ರೋಹಿಯನಿಕ್ಕಾಜ್ಞೆಗೆಂದು |
ಹಾಹಾಕ್ರಂದನಮಂ ಮಾಡುತ್ತಿರ | ಲಾಹರಿಯೆಂತೆಂದನಾಗ || ೧೫೮ ||

ವನಧಿಯ ಜೀವನವನು ವಡಬಾನಲ | ವೆನಿತೆನಿತನು ಹೀರಿದೊಡೆ |
ಮುನಿಯದ ವನನಿಧಿಯಂದದಿ ವನಜೋದರ | ನಿನಿಸು ಮುನಿಯದಿಂತು ನುಡಿದ || ೧೫೯ ||

ಏಕಯನುಜ ನೀನವಿವೇಕಿಯಲ್ಲಾ | ಲೋಕೈಕಪತಿ ನೇಮಿನಾಥ |
ಆ ಕೇವಲಬೋಧನಾಡಿದುದುಳಿವುದೆ | ಸಾಕುಮಾಣಾ ದುಃಖವನು || ೧೬೦ ||

ನೀನಿಲ್ಲಿ ತಳುಮಾಡೆ ಬಲರಾಮೆನೆಯ್ತಂ | ದೀ ನನ್ನ ಘಾಯವ ಕಂಡು |
ತಾನತಿ ಕೋಪದಿ ನಿನ್ನು ಕೊಲ್ಲದೆ | ಯಾನುವನಲ್ಲದರಿಂದ || ೧೬೧ ||

ಇಲ್ಲಿಂದ ಪೋಗೆನಲಾತನು ಪೋಗಲು | ಫುಲ್ಲಾಕ್ಷನಾಕಂಬಳವನು |
ನಿಲ್ಲದೆ ಹೊದೆದೆನ್ನಚ್ಚವನನುಜಾತ | ನಲ್ಲದನ್ನಿಗನಾದೊಡವನ || ೧೬೨ ||

ಕೊಲ್ಲದೆ ಮಣೆನೆಂಬಾರೌದ್ರಧ್ಯಾನ | ದಲ್ಲಿ ವಿಗತಜೀವನಾಗಿ |
ಪೊಲ್ಲಮಪ್ಪಾಮೂರೆನೆಯನರಕಬಿಲ | ದಲ್ಲಿ ಸಂಜನಿಸಿದನಿತ್ತ || ೧೬೩ ||

ಹಲಧರನುದಕವನರಸಿ ತೊಳಲ್ದೊಂದು | ಕೊಳನ ಕಂಡದರೊಳು ಹೊಕ್ಕು |
ಜಲರುಹಪತ್ರದಘಟಿಕೆಯೊಳಾನಿ | ರ್ಮಲಜಲವನು ತೀವಿಕೊಂಡು || ೧೬೪ ||

ಅನುಜನಲ್ಲಿಗೆ ಬಂದು ನಿಜನಿದ್ರೆಗೈದಪ | ನೆನುತತಿ ಕರುಣಹೃದಯನು |
ಇನಿಸುಪೊತ್ತು ಕುಳ್ಳಿರಲಚ್ಯುತನ ಪದ | ವನಜವ ನೊಣ ಮುತ್ತುತಿರಲು || ೧೬೫ ||

ಎಲ್ಲಿಯದೀನೊಣವೆಂದು ಪಜ್ಜೆಯನೋಡ | ಲಲ್ಲಿಯ ಘಾಯವ ಕಂಡು |
ತಲ್ಲಣದಿಂದನುಜಾತನ ಮೊಗವನು | ಮೆಲ್ಲನೆ ತೆಗೆದು ನೋಡಿದನು || ೧೬೬ ||

ಗತಜೀವನಾಗೆ ಹಾಹಾಯೆಂದು ಮೂರ್ಛಾ | ಗತನಾಗಿ ನೆಲದೊಳು ಬಿಳ್ದು |
ಅತಿಬಲನೆಂತಾನುವೆಳ್ಚತ್ತು ನೋಡಿಯ | ಚ್ಯುತ ನಿನಗೀ ವಿಧಿಯಾಯ್ತೆ || ೧೬೭ ||

ಹಾ ಕೆಟ್ಟೆ ಹಾ ಕೆಟ್ಟೆನೆಂದು ದುಃಖಾಗ್ನಿಯೊ | ಳಾ ಕೋಪಾಗ್ನಿಯ ಕೂಡಿ |
ಲೋಕೈಕವಿಕ್ರಮಿ ನಿನ್ನನು ನಿದ್ರೆಯೊ | ಳೀ ಕಾಲನೆಚ್ಚಿ ಪೋದವನ || ೧೬೮ ||

ಕೊಲ್ಲದೆ ಬಿಡೆನೆನುತಾಭೀಮಾಟಿವಿ | ಯಲ್ಲಿರ್ದುದೊಂದು ಹೆಮ್ಮರನ |
ನಿಲ್ಲದೆ ಕಿತ್ತು ಪೆಗಲೊಳಿಟ್ಟು ಭರದಿಂ | ದಲ್ಲಿಂ ಮುಂದಕೆ ನಡೆದು || ೧೬೯ ||

ಆ ಕಾನನದೆಂಟುದೆಸೆಯೊಳಗಾಕಡೆ | ಯೀಕಡೆಯೆನ್ನದೆ ತೊಳಲಿ |
ಆ ಕೋಪಾಂತಕನಾದ್ರೋಹಿಯ ಕಾಣ | ದಾಕೃಷ್ಣನೆಡೆಗೈದಿದನು || ೧೭೦ ||

ಅಂತು ಬಂದಾಹೆಣವನು ತಳ್ಕೈಸಿಮು | ರಾಂತಕ ಮಗಧವಿಧ್ವಂಸಿ |
ಕಂತುಜನಕ ಕಂಸಕೋಳಾಹಳನಿನ | ಗಿಂತೀ ಸಾವೊಂದವಿದುದೇ || ೧೭೧ ||

ಹಾಹಾ ಹರಿಕುಲಗಗನಭಾಸ್ಕರನೇ | ಹಾಹಾ ಹರಿವಂಶತಿಲಕ |
ಹಾಹಾ ಹರಿವಂಶವನಧಿಶಶಾಂಕ | ಹಾಹಾಯೆನ್ನನುಜಾತ || ೧೭೨ ||

ಹಾಹಾ ನೃಪಕುಲಚೂಡಾಮಣಿಯೇ | ಹಾಹಾ ಮನುಜಮಂದಾರ |
ಹಾಹಾ ರಿಪುನೃಪವಿಪಿನಕುಠಾರ | ಹಾಹಾಯೆನ್ನನುಜಾತ || ೧೭೩ ||

ಆ ತೊಟ್ಟಿಲ ಶಿಶುವಾಗಿ ಮೊಲೆಯ ಕಚ್ಚಿ | ಪೂತಿನಿಯಸುವನು ಹೀರಿ |
ಖ್ಯಾತಿ ಪಡೆದ ನಿನ್ನಾಪುಣ್ಯದ ಫಲ | ಬೀತುದಲ್ಲಾ ಬಿಸಜಾಕ್ಷ || ೧೭೪ ||

ಬೆಟ್ಟಕೆ ಗರಿ ಮೂಡಿದವೊಲು ರೂಪಳ | ವಟ್ಟೆರಗಿದ ಕಾಕನನು |
ರಟ್ಟೆ ಮುರಿದವೊಲು ಪೊಡೆದ ನಿನ್ನಳವಿಯ | ದಿಟ್ಟತನಮದೇನಾಯ್ತೋ || ೧೭೫ ||

ನಾರ ಸೀಳುವ ತೆರದಿಂ ಸೀಳಿ ಬಿಸುಟು ಕಿ | ಶೋರಾಸುರನ ಮರ್ದಿಸಿ |
ತೋರಿಹ ತೋಳಬಲುಮೇನಾದುದೋ | ವೀರನಾರಾಯಣ ನಿನ್ನ || ೧೭೬ ||

ಬೆಂಡಿನ ಬಂಡಿಯನೊದೆವಂತಾವು | ದ್ದಂಡ ಶಕಟರಾಕ್ಷಸನ |
ದಿಂದುಗೆಡಹಿ ಕೊಂದ ನಿನ್ನೆಳೆವರೆಯದ | ಗಂಡುತನಮದೇನಾಯ್ತೋ || ೧೭೭ ||

ರಾಸಭರಾಕ್ಷಸನನುಪಮಶಕ್ತಿಯ | ನೋಸರಿಸದೆ ನೆಗ್ಗಿಮುರಿದ |
ಸಾಸಿಗತನವೇನಾಯಿತೊ ಪದಿನಾರು | ಸಾಸಿರಗೋಪಿಯರರಸಾ || ೧೭೮ ||

ಕತ್ತರಿಯಂತೆಯಿರುಂಕಿ ಕೊಲಲ್ಬಂದ | ಮತ್ತಿಯಹೆಮ್ಮರಗಳನು |
ಕಿತ್ತು ಹಾಕಿದ ನಿನ್ನ ಹಸುಳೆತನದ ಬಲು | ಪೆತ್ತಪೋದುದೊ ಕಂಸಾರಿ || ೧೭೯ ||

ತಾಳವೃಕ್ಷವ ಕಿತ್ತಾಕೈಭಟನ ಕೈಯ | ನಾಳೋಚಿಸದೆ ಮುರಿದಿಟ್ಟು |
ಕಾಳಿಗನಾಗನ ಹತಿಸಿದ ನಿನ್ನ ವಿ | ಶಾಲ ವಿಕ್ರಮವೇನಾಯ್ತೋ || ೧೮೦ ||

ಅಸುರರ ಹತಿಸಿಯದ್ರಿಯನೆತ್ತಿ ಘನಿಪನ | ನೊಸೆದೇರಿಯೇರಿಸಿ ಧನುವ |
ಉಸುರೇರಿಸಿ ಶಂಕವನು ಮಲ್ಲರ ಕೊಂ | ದೆಸಕವೇನಾಯ್ತೊ ಮುರಾರಿ || ೧೮೧ ||

ಆರಡಿಕಾರನೆನಿಪ ಕಂಸನ ಕಟ್ಟು | ಕೂರಿನ ಮಧುಕೈಟಭರ |
ಗಾರುಮಾಡಿಕೊಂದ ನಿನ್ನ ಬಲುಮೆಯೆಲ್ಲಿ | ಸೂರೆಹೋದುದೊ ಸಿರಿಯರಸಾ || ೧೮೨ ||

ಅಂದು ಮಗಧನಿಟ್ಟಾಚಕ್ರ ಮಿಗೆ ಬಲ | ವಂದುದು ಹರಿ ಕೇಳು ನಿನ್ನ |
ಇಂದೀ ಹೀನಮಾನಸನೆಚ್ಚಕೊಳೆಯಂಬು | ಕೊಂದುದಲಾ ಕರ್ಮವಶದಿ || ೧೮೩ ||

ಚಕ್ರಸಹಿತ ಪರಚಕ್ರ ಮಿಗೆ ಬಲ | ವಂದುದು ಹರಿ ಕೇಳು ನಿನ್ನ |
ಇಂದೀ ಹೀನಮಾನಸನೆಚ್ಚಕೊಳೆಯಂಬು | ಕೊಂದುದಲಾ ಕರ್ಮವಶದಿ || ೧೮೩ ||

ಚಕ್ರಸಹಿತ ಪರಚಕ್ರವೆಲ್ಲವನು ಪ | ರಾಕ್ರಮದಿಂ ಸಾಧ್ಯಮಾಡಿ |
ಶಕ್ರಾನುಜನಾಗಿ ಸಂಪದವಡೆದೀ | ಚಕ್ರಿಗಿಂತೀ ವಿಧಿಯಾಯ್ತೇ || ೧೮೪ ||

ನಾನಾ ದೇಶದ ನರನಾಥರನಿರ | ದಾನದೆಯೆರಗಿಸಿಕೊಂಬ |
ಶ್ರೀನಾರೀಪತಿ ನಿನ್ನ ಮೆಲ್ಲಡಿಗಳ | ನೀ ನೊಣಮುತ್ತುವಂತಾಯ್ತೆ || ೧೮೫ ||

ಪಸುಳೆವರೆಯದಿಂದಿಳೆಯಚ್ಯುತನೆಂದು | ಪಸರಿಸಿದನ್ವರ್ಥನಾಮ |
ಪುಸಿಯಾಯಿತಲ್ಲಾ ಕ್ರೂರಕೃತಾಂತನ | ದೆಸೆಯಿಂ ನಿನಗೆ ಮುರಾರಿ || ೧೮೬ ||

ಕ್ರೂರಕೃತಾಂತಗೆ ಭಸ್ಮಕವೆಂದೆಂ | ಬರೋಗಮುದಯಮಾಗದೊಡೆ |
ಈರಾರುಗಾವುದ ತುಂಬಿದ ನಿನ್ನೂರ | ನಾರೋಗಣೆಯ ಮಾಡುವನೆ || ೧೮೭ ||

ಸ್ಥಿರಮಲ್ಲಮೀತನುವೀಮನೆಯೀಯೈ | ಸಿರಿಯೆಂಬಾಶ್ರುತವಚನ |
ನಿರುತದಿ ದೃಷ್ಟಾನುಭೂತವಿಂದೆನಗಾ | ಯ್ತರವಿಂದನಾಭ ನಿನ್ನಿಂದ || ೧೮೮ ||

ಸಣ್ಣದುಪ್ಪಳವಂಚೆಯ ಹಾಸಿನ ಮೇಲೆ | ಬಣ್ಣದುಟಿಯ ಬಾಲೆಯರೊಳು |
ತಣ್ಣನೆ ತಣಿದೊರಗುವ ನೀರಗೆ ಹುಡಿ | ಮಣ್ಣೊಳು ಮಲಗುವಂತಾಯ್ತೇ || ೧೮೯ ||

ಎಂದಾ ಬಲಭದ್ರನು ನಾನಾಪರಿ | ಯಿಂದ ಪಿರಿದು ಶೋಕಗೆಯ್ದು |
ಒಂದಿದ ದುಃಖದಿ ಮತಿಗೆಟ್ಟು ಮರುಳಾಗಿ | ಮುಂದುಗೊಂಡಾ ಮರುಕದೊಳು || ೧೯೦ ||

ಹರಿ ನೀಲಗಿರಿಯ ತಾರಾಚಲವೆತ್ತುವ | ದೊರೆಯೆನೆ ಕೃಷ್ಣನಂಗವನು |
ಸುರುಚಿರಮೂರ್ತಿ ಹಲಾಯುಧನೆತ್ತಿ ಕಂ | ಧರದೊಳು ಧರಿಸಿ ತಿರುಗಿದ || ೧೯೧ ||

ಕಡುಸೊಗಯಿಸುವ ಕಲಾಭೃದ್ಬಿಂಬದ | ನಡುವಣ ಕೆರೆಯೆಂಬಂತೆ |
ಪೊಡೆಯಲರನ ತನುರುಚಿ ಬಲರಾಮನ | ಪೆಡತಲೆಯೊಳಗೊಪ್ಪಿದುದು || ೧೯೨ ||

ಭೂನಾಥರುಗಳೋಲಗಶಾಲೆಗೆಯ್ತಂದು | ನಾನಾವಿಧದಿ ಶೃಂಗರಿಸಿ |
ಆನತರಾಗಿಮೆಂದೆನುತಾಜ್ಞಾಪಿಸು | ತಾನಂದು ಭ್ರಮಿಯಿಸುತಿಹನು || ೧೯೩ ||

ಅಡವಿಯ ಮಿಗಗಳಿರಾಯೆನ್ನ ಪೆಗಲೇರಿ | ಕಡು ಮುನಿದೆನ್ನನುಜಾತ |
ನುಡಿಯನೆನ್ನೊಳು ನೀಮೀತನ ಮುನಿಸನು | ಬಿಡಿಸಿಯೆನುತ ಗಳಪುವನು || ೧೯೪ ||

ಈ ತೆರದಿಂ ಬಲರಾಮನು ತನ್ನನು | ಜಾತನಶಬವ ಷಣ್ಮಾಸ |
ಪ್ರೀತಿಯಿಂದ ಮರುಳಾಗಿ ಪೆಗೊಳಿಟ್ಟು | ಭೂತಳದೊಳು ತಿರುಗುತಿರೆ || ೧೯೫ ||

ಸುರಲೋಕದಿಂ ಸಿದ್ಧಾರ್ಥನೆಂದೆಂಬೋರ್ವ | ಸುರಗೂಡಿನೈಗಮದೇವ |
ಧರೆಗಿಳಿದಾಬಲನೆಯ್ದುವದಾರಿಯೊ | ಳಿರದೆ ವಿಗುರ್ವಣೆಯಿಂದ || ೧೯೬ ||

ಅರೆಯೊಳಗಡಿಮೇಲಾಗಿ ಬಾಳೆಯ ಬಿತ್ತಿ | ದರೆಗುಂಬದಿಂ ನೀರ ತಂದು |
ಎರೆವುತಿರಲು ಕಂಡು ಬಲರಾಮನಿಂತೆಂದ | ನೆರೆ ಹುಚ್ಚುಗಳಿರ ನೀವೇಕೆ || ೧೯೭ ||

ಅಲ್ಲದ ಕೃತ್ಯಮನೆಸಗುವಿರೆನೆ ಪೆಗ | ಲಲ್ಲಿ ಹೆಣನ ಹೊತ್ತಿಹುದು |
ಅಲ್ಲದ ಕೃತ್ಯಮಲ್ಲವೆಯೆನಲಾಬಲ | ಪೊಲ್ಲಮುನಿಸಿನಿಂದಿಂತೆಂದ || ೧೯೮ ||

ಎನ್ನನುಜಾತನಿಳಾಚಕ್ರೇಶ್ವರ | ನುನ್ನತ ಪುರುಷೋತ್ತಮನು |
ಮುನ್ನೋಡದೆ ಪೆಣನೆಂದು ಮಾತಾಡುವ | ದನ್ಯಾಯವಲ್ಲವೆ ಪೇಳಿ || ೧೯೯ ||

ಎಂದು ನಿರ್ಧಾಟಿಸಲವರಲ್ಲಿಂ ಪೋಗಿ | ಮುಂದೊಂದೆಡೆಗೆಯ್ತಂದು |
ಒಂದು ಕುಡಿಯೊಳು ನೀರ ಕಡೆವುತ | ಲ್ಲಿಂದ ಮಳಲ ಹಿರಿಯುತಿರೆ || ೨೦೦ ||

ಮುನ್ನಿನಂತೆ ಬಲನವರೊಳು ನುಡಿಯಲು | ನಿನ್ನ ನೀನರಿಯದೆ ನಮ್ಮ |
ಚೆನ್ನಾಗಿ ನುಡಿದೆ ಹೆಣನ ಹೊತ್ತೆಯೆನಲು ಸಂ | ಪನ್ನನದಕೆ ಬಗೆಗೊಂಡು || ೨೦೧ ||

ಮೋಹಾಂಧಕಾರ ತೊಲಗೆ ಪೆಗಲೊಳಗಿ | ರ್ಡಾಹರಿ ಸತ್ತನೆಂಬುದನು |
ಊಹಿಸಿಯರಿದು ನೆಲಕ್ಕಿಳುಹಿದನಾ | ಸಾಹಸಿಯಾಬಲರಾಮ || ೨೦೨ ||

ಈತನಗಲ್ಕೆಯೊಳೆನಗೆ ವಿವೇಕಮ | ತೀತಮಾಯ್ತಂತದರಿಂದ |
ಮಾತೇನಧಿಕಭವಾಂಭುದಿಯನು ಹೊ | ಕ್ಕೇತಕಲ್ಲದೆ ಕೆಡುತಿರ್ದೆ || ೨೦೩ ||

ಎದು ಚಿಂತಿಸುತಿರಲಾ ಸಗ್ಗಿಗರು ತಮ್ಮ | ದೊಂದು ರೂಪವ ತೋರುತವೆ |
ಅಂದು ತಾಮೈದಿದಂದವ ಪೇಳೆ ಸುಗುಣಿನಿ | ನನ್ನಂದಮ ನೀನೆ ನೋಡೆನುತ || ೨೦೪ ||

ಇವು ಮೊದಲಾದಯುಕ್ತಾಯುಕ್ತಿಯನು ಪೇಳಿ | ಯವನಿಪನನು ಬೀಳ್ಕೊಂಡು |
ದಿವಿಜರಮರಲೋಕಕೆ ಪೋಗಲಿತ್ತ ಕೇ | ಶವನ ಶಬವ ಸುಡಲೆಂದು || ೨೦೫ ||

ತುಂಗಿಯೆಂಬಾಗಿರಿವರಕೆಯ್ದಲಾಗಗ | ನಾಂಗಣದೊಳಗಿಂದುಗೂಡಿ |
ಪಿಂಗದ ಮೋಹದೊಳಿಪ್ಪತ್ತುಬಾರಿಯ | ಭಂಗನ ನೀ ಸುಟ್ಟೆಯಲ್ಲ || ೨೦೬ ||

ಎಂದಶರೀರವಚನಮಾಗಲು ಬಿಸ | ವಂದವಡೆದು ಬಲರಾಮ |
ಚಂದನದಿಂಧನದಿಂದ ಮುಕುಂದನ | ನಂದು ಸಂಸ್ಕಾರ ಮಾಡಿದನು || ೨೦೭ ||

ತದನಂತರದೊಳಗಾನಗಕೀರ್ವರು | ಸದಮಲ ಚಾರಣರುಗಳು |
ಮುದದಿಂದ ಬರಲವರ್ಗಿರದಭಿವಂದಿಸಿ | ಪದುಳದಿ ದೀಕ್ಷೆಯಧರಿಸಿ || ೨೦೮ ||

ಉತ್ತಮಪ್ಪಾತದೊಳಗಾಸಂಯ | ಮೊತ್ತಂಸನಾರಾಮಯೋಗಿ |
ಚಿತ್ತಶುದ್ಧಿಯೊಳು ನೆಗಳಿ ಸನ್ಯಸನದಿ | ಮತ್ತಾದೇಹವನುಳುಹಿ || ೨೦೯ ||

ಸುರುಚಿರತರ ಸುಖಮೀವೈದನೆಯಾ | ಸುರಲೋಕದೊಳು ಸಂಜನಿಸಿ |
ನಿರುತಮಪ್ಪಾಸೌಖ್ಯವನುಣುತಾಹಲ | ಧರನಿರ್ದನತಿಹರುಷದೊಳು || ೨೧೦ ||

ದಿವಿಜಸತಿಯರಿಂ ದಿವ್ಯಸುಖಮನನು | ಭವಿಸುತ್ತ ನಿಶ್ಚಿಂತನಾಗಿ |
ದಿವಿಜಲೋಕವ ಪರಿಪಾಲಿಸುತಿರ್ದನು | ದಿವಿಜೇಂದ್ರಕುಲಶೇಖರನು || ೨೧೧ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದುಚತುಸ್ತ್ರಿಂಶದಾಶ್ವಾಸ || ೨೧೨ ||

ಮೂವತ್ತಾನಾಲ್ಕನೆಯ ಸಂಧಿ ಸಂಪೂರ್ಣಂ