ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತರಗುವೆನು || ೧ ||

ಬಲ್ಲಿದ ಮೋಹಮಲ್ಲನ ಹಲ್ಲಮುರಿದತಿ | ಬಲ್ಲಿದನಾಪುಷ್ಪಶರನ |
ಬಿಲ್ಲಮುರಿದು ಪಂಚಶರವ ನೇಮಿ | ವಲ್ಲಭನಡಿಗೆರಗುವೆನು || ೨ ||

ದ್ವಾರಾವತಿಪುರವರಮೆಲ್ಲ ಮುರಿದಾ | ನೀರೊಳು ನೆರೆದು ಹೋದುದನು |
ನಾರಾಯಣನಳಿದುದು ಮುಂತಾದಾ | ವಾರತೆಯೆಲ್ಲವ ಕೇಳಿ || ೩ ||

ಕುರುಜಶಂಗಣವಿಷಯಾಧೀಶ ಪಾಂಡವ | ರುರುತರ ಚಿಂತೆಯ ತಾಳಿ |
ವರಸುತನಭಿಮನ್ಯಕುವರಂಗಾವು | ತ್ತರೆಗೆ ಪುಟ್ಟಿದ ನಂದನನು || ೪ ||

ಸ್ಮರನಿಭರೂಪ ಪರೋಕ್ಷಿತನೆಂಬಗೆ | ಧರಣೀಭಾರವೆಲ್ಲವನು |
ಇರದಿತ್ತು ನಿಜಸತಿಯರು ಪಬಲರು ಭೂ | ವರರು ಬೆಂಬಳಿಯೊಳು ಬರಲು || ೫ ||

ಉತ್ತರದೆಸೆಯ ಪಲ್ಲವದೇಶದೊಳಿ | ರ್ದುತ್ತಮ ನೇಮೀಶ್ವರನ |
ಹತ್ತಿರಕೆಯ್ದಿ ಸಮವಸರಣವ ಹೊಕ್ಕು | ಮತ್ತಾಜಿನಪತಿಗೆರಗಿ || ೬ ||

ತದನಂತರದೊಳು ವರದತ್ತಗಣಧರ | ಪದಪದ್ಮಕಳಿಶಿಶುವಾಗಿ |
ಮುದದಿಂದ ಧರ್ಮನಂದನನು ತಮ್ಮಾಪೂ | ರ್ವದ ಭವವನು ಬೆಸಗೊಳಲು || ೭ ||

ಕೇಳವನೀತಿಪತಿಯೀಭಾರತದೊಳು ವಿ | ಶಾಲಮಾದಂಗದೇಶದೊಳು |
ಭೂಲಲನೆಯ ಮುಖದಂತೆ ರಂಜಿಸುವ ಶುಂ | ಡಾಲ ವೆಸರ ನಗರಿಯೊಳು || ೮ ||

ಸೋಮಕುಲೋದ್ಭವ ಘನರಥನೃಪಗೆ ಮ | ಹಾಮಂತ್ರಿ ಸೋಮನೆಂಬವಗೆ |
ಸೋಮೆಗೆ ಜನಿಸಿದರಾಸೋಮದತ್ತನು | ಸೋಮಿಲನಾ ಸೋಮಭೂತಿ || ೯ ||

ಬಳೆದು ಜವ್ವನವೇರಲಾನಿಜಜನಕನು | ಬಳಿಕ ತನ್ನಾ ಮೈದುನನು |
ಲಲಿತಾಂಗನಗ್ನಿಭೂತಿಗೆಯಗ್ಗಿಲೆಯೆಂಬ | ಲಲನೆಗೆ ಸಂಜನಿಯಿಸಿದ || ೧೦ ||

ಭೂನುತೆ ಹೇಮಶ್ರೀಮಿತ್ರಶ್ರೀ | ಯಾನಾಗಶ್ರೀಯೆಂಬ |
ಮಾನಿನಿಯರನಾಮೂವರು ತನುಜರ್ಗೆ | ಸಾನುರಾಗದಿ ತಂದು ಕೊಟ್ಟು || ೧೧ ||

ಉರುಮುದದಿಂದಿರಲಾವೂರ ಬಲಕೋರ್ವ | ವರಮುನಿಗೆ ಬರೆ ಕೇಳುತವೆ ||
ಧರಣಿಪ ಮೇಘರಥನು ಸೋಮಮಂತ್ರೀಶ | ವೆರಸಿತಾನಾಬಳಿಗೆಯ್ದಿ || ೧೨ ||

ವಿಮಲಮಪ್ಪಾಧರ್ಮವೆ ಕೇಳಿ ನಿಜಸುತ | ವಿಮಲವಾಹನಗೆ ಪಟ್ಟವನು |
ಮಮತೆಯಿಂದವೆ ಕಟ್ಟಿ ಸೋಮ ಸಚಿವಗೂಡಿ | ಯಮಲ ದೀಕ್ಷೆಯನಾಂತನಿತ್ತ || ೧೩ ||

ಆ ಮಂಡಳಿಕ ವಿಮಲವಾಹನಗಾ | ಸೋಮದತ್ತನು ಸೋಮಿಲನು |
ಸೋಮಭೂತಿಗಳು ಮೂವರು ತನ್ನ ವಿಶ್ವಾಸ | ಭೂಮಿಗಳಾಗಿರುತಿರಲು || ೧೪ ||

ಅನುರಾಗದಿಂದ ವಿಮಲವಾಹನನೊಂದು | ದಿನದ ವಸಂತಮಾಸದೊಳು |
ವನಕೆ ಪೋಗಲು ಸೋಮದತ್ತಮಹಾಮಂತ್ರಿ | ತನಗೊಂದು ಕಾರ್ಯಕಾರಣದಿ || ೧೫ ||

ಮನೆಯೊಳುಳಿದು ಸೋಮಿಲ ಸೋಮಭೂತಿಯೆಂ | ಬನುಜರೀರ್ವರು ಕೂಡಿ ತನ್ನ |
ವನಿತೆ ಧನಶ್ರೀಯಾಸೋಮಿಲನಂ | ಗನೆ ಮಿತ್ರಶ್ರೀಯರನು || ೧೬ ||

ಕಳುಹಿದೊಡಿತ್ತ ಕಿರಿಯ ಸೋಮಭೂತಿಯ | ಲಲನೆ ನಾಗಶ್ರೀ ತನ್ನ |
ವಿಲಸಿತಮಪ್ಪ ಶೃಂಗಾರಕೆ ಸಲವಾಗಿ | ತಳುಮಾಡಲಾಸಮಯದೊಳು || ೧೭ ||

ಮಾಸೋಪವಾಸದ ಪಾರಣೆಗೆಂದೋರ್ವ | ನಾಸಂಯಮಿ ನಡೆತರಲು |
ಆ ಸೋಮದತ್ತನವರನು ನಿಲಿಸಿ ನಿಜ | ವಾಸಕೆ ತಂದು ಕುಳ್ಳಿರಿಸೆ || ೧೮ ||

ಆಗಲನಿಪಾಲನನುಚರರೆಯ್ತಂದು | ಬೇಗದಿ ಕರೆಯಲು ಬೆದರಿ |
ನಾಗಶ್ರೀಯೆಂಬ ನಾದುನಿಗೆಂದನೀ | ನೀಗಳಿವರ್ಗೆ ಭಿಕ್ಷೆಯನು || ೧೯ ||

ಹಸನಾಗಿಯನುನಯದಿಂ ಮಾಡಿಸೆನುತ ತಾ | ನಸವಸದಿಂ ಪೋಗಲಿತ್ತ |
ಒಸೆದು ನಾನು ನಂದಣಿಕೆ ಪೋಪುದನು ಮಾ | ಣಿಸಬಂದನೀಪಾಪಿಯೆಂದು || ೨೦ ||

ಮುನಿಸಿಂದುರಿದು ವಿಷಮವಿಷಭಕ್ಷ್ಯ ಮ | ನನು ಮಾಡಿ ಬಡ್ಡಿಸಲಾಗ |
ಮುನಿಪನವನು ಮೆದ್ದು ಸತ್ತು ಮುಕ್ತಿಯ ನೆರೆ | ಮನೆಯೊಳು ಜನಿಸಿದತ್ತ || ೨೧ ||

ಸೋಮದತ್ತನು ತನ್ನ ನಾದುನಿಯೆಸಗಿದು | ದ್ದಾಮ ಪಾತಕಕಿರದಳ್ಕಿ |
ಸೋಮಿಲ ಸೋಮಭೂತಿಯ ಕೂಡಿಕೊಂಡು ಸು | ಪ್ರೇಮದಿ ತಪವ ತಾಳಿದನು || ೨೨ ||

ಪದೆದು ಧನಶ್ರೀಮಿತ್ರಶ್ರೀಯೆಂಬ | ಸುದತಿಯರಾ ದೀಕ್ಷೆಯನು |
ಒದವಿ ಸಿಯವರೊಳು ತಪಗೆಯ್ದೊಗೆದರು | ಪದಿನಾರನೆಯ ಸಗ್ಗದೊಳು || ೨೩ ||

ಸೋಮದತ್ತಚರದಿವಿಜನು ಮೊದಲಾದ | ತಾಮೈವರು ಸಗ್ಗಿಗರು |
ಪ್ರೇಮದಿ ಕೂಡಿ ಸುಖದೊಳಿರಲಿತ್ತಲು | ಭೂಮಿಪ ವಿಮಲವಾಹನನು || ೨೪ ||

ಯತಿಯನು ಹತಿಸಿದಳೀ ಪಾತಕಿಯೆಂ | ದತಿ ಕೋಪದಿನಾಜ್ಞೆಗೆಯ್ಸೆ |
ಕೃತಕಿ ನಾಗಶ್ರೀ ಸತ್ತೈದನೆಯು | ನ್ನತಿಕೆಯ ದುಃಖಮನೀವ || ೨೫ ||

ನರಕಭೂಮಿಯಲಿ ಸಂಜನಿಯಿಸಿ ಪದಿನೇಳು | ವರಸಾಗರೋಪಮಾಯುವನು |
ನಿರುತದಿ ಪಡೆದು ಮತ್ತಲ್ಲಿಂದಳಿದೀ | ಯುರುತರ ತಿರ್ಯಗ್ಗತಿಯೊಳು || ೨೬ ||

ನಾನಾರೂಪಸಂತಾನದೊಳೊಗೆದು ಮತ್ತೇ | ನಾನು ಕರ್ಮೋಪಶಮದಿ |
ಈ ನೆಲವಂಗದೇಶದ ನಡುವಣ ಚಂ | ಪಾನಗರೀವರದಲ್ಲಿ || ೨೭ ||

ಮಾತಂಗಿಯಾಗಿ ಜನಿಸಿ ಕರ್ಮವಶದಿಂ | ದಾ ತಂದೆತಾಯಿಗಳಳಿಯೆ |
ಪ್ರೀತಿಯಿಂದ ರಕ್ಷಿಪರಿಲ್ಲದೆ ತಾ | ನೇ ತಿರಿದುಂಡು ಜೀವಿಸುತ || ೨೮ ||

ಒಂದು ದಿವಸದೊಳವಧಿಬೋಧಮುನಿಗಳು | ಬಂದಿರಲಾ ಪುರದರಸು |
ವಂದಿಸಿ ಸುವ್ರತವನು ಕೊಂಡು ಪೋಗಲಾ | ಅಂದಮನರಿದು ಮಾತಂಗಿ || ೨೯ ||

ತಾನಾ ಮುನಿಕುಲತಿಲಕನಲ್ಲಿಗೆ ಬಂ | ದಾನತೆಯಾಗಿ ಕೈಮುಗಿದು |
ಆ ನೃಪತಿಗೆ ಕೊಟ್ಟಂತಪ್ಪ ವರನಿಗೇ | ವಾನದೆ ನನಗೀವುದೆನಲು || ೩೦ ||

ಮುನಿಪತಿ ಮಧುಮಾಂಸ ನಿನಗೆ ಬೇಡೆಂದತಿ | ವಿನಯದಿ ಕೊಡಲು ಮಾತಂಗಿ |
ಮನದೆಗೊಂಡು ಧರಿಸಿಯದನಿಳಿಪದೇ | ತನುಭಾರವ ಪರಿಹರಿಸಿ || | ೩೧ ||

ಪರಿರಂಜಿಪಾಪುರದೊಳು ಬಂಧುವೆಂಬೋರ್ವ | ಪರದಗೆ ಧನದೆಯೆಂಬೋರ್ವ |
ತರುಣಿಗೆ ತಚ್ಚಾಂಡಾಲಿ ತನುಜೆಯಾಗಿ | ಧರಿಯಿಸಿ ಸುಕುಮಾರಿವೆಸರ || ೩೨ ||

ಪಿರಿದಪ್ಪ ದುರ್ಗಂಧಯುತೆಯಾಗಿರಲಾ | ಪುರದೊಳು ಧನದೇವನೆಂಬ |
ಪರದಗಾತನ ನಿಜಸುದತಿ ಯಶೋದತ್ತೆ | ಗುರುತರರೂಪವನಾಂತು || ೩೩ ||

ಜಿನದೇವ ಜಿನದತ್ತರೆಂಬ ತನುಜರಾಗೆ | ಯನುರಾಗದಿನಾಜಕ |
ಜಿನದೇವಗೆಯಾಸುಕುಮಾರಿಯತರ | ಲನುಗೆಯ್ಯಲವಳಂಗದೊಳು || ೩೪ ||

ಪಿರಿದಪ್ಪ ದುರ್ಗಂಧಕೆ ಪೇಸಿ ಜಿನದೇವ | ನಿರದಾಂತು ನಿರ್ವೇಗವನು |
ಉರುತರಮಪ್ಪುತ್ತಮದೀಕ್ಷೆಯನಾ | ದರದಿಂ ಕೈಕೊಂಡನಿತ್ತ || ೩೫ ||

ಜಿನದತ್ತಗಾಸುಕಮಾರಿಯತರಲಾ | ವನಿತೆಯ ದುರ್ಗಂಧಕಿರದೆ |
ಘನಮಾಗಿ ಪೇಸಿ ಮತ್ತವನಾಕೆಯ ಮೈಯ | ಕನಸಿನೊಳಗು ಮುಟ್ಟದಿರಲು || ೩೬ ||

ಅತಿ ಲಜ್ಜಿತೆಯಾಗಿರಲೊಂದು ದಿವಸ ಸು | ವ್ರತರೆಂಬ ಯತಿಪತಿ ಬರಲು |
ನತೆಯಾಗಿ ಕರವ ಮುಗಿದು ತನ್ನ ಭವಸಂ | ತತಿಯನು ಬೆಸಗೊಂಡು ತಿಳಿದು || ೩೭ ||

ನಾಗಶ್ರೀ ತಾನಾದಂದು ನಿಜಪತಿ | ಯಾಗಿರ್ದಾಸೋಮಭೂತಿ |
ರಾಗದಿನಚ್ಯುತಕಲ್ಪದೊಳಿರ್ದುದ | ನಾಗಲರಿದು ಯತಿಯಿಂದ || ೩೮ ||

ಮನಮಿಟ್ಟವಗೆ ಮುದದಿ ಜಿನದೀಕ್ಷೆಯ | ನನುಮಾನಿಸದೆ ಕೊಂಡು ಬಳಿಕ |
ತನುವನುಳಿದು ಸೋಮಭೂತಿಚರಾಮರ | ಗಿನಿಯಳಾಗಿ ಸಂಜನಿಸಿ || ೩೯ ||

ಪ್ರೇಮದಿನಿರೆ ಸೋಮದತ್ತ ಸೋಮಿಲನಾ | ಸೋಮಭೂತಿ ಚರಾಮರರು |
ಹೇಮಶ್ರೀ ಮಿತ್ರಶ್ರೀ ಚರವಿನು | ತಾಮರರೈವರಲ್ಲಿಂದ || ೪೦ ||

ತನುವ ವಿಡಂಬಿಸಿಯಾಪಾಂಡುರಾಜಗೆ | ತನುಜರಾದವರು ನೀವೀಗ |
ಜನನುತೆಯಾಸುಕುಮಾರಿಚರಾಮರಿ | ಯನುರಾಗದಿಂ ಫಲ್ಗುಣಗೆ || ೪೧ ||

ನಲ್ಲಳು ಪಾಂಚಾಳಿಯಾದಳೆಂದಾಮುನಿ | ವಲ್ಲಭನೊರೆಯಲು ಕೇಳಿ |
ಬಲ್ಲಿದ ಪಾಂಡವರರಮಕ್ಕಳುಗೂಡಿ | ನಿಲ್ಲದೆ ನಿರ್ವೇಗದಿಂದ || ೪೨ ||

ಸದಮಲತರದೀಕ್ಷೆವಡೆಯ ಜನನಿಕೊಂತಿ | ಚದುರೆಪಾಂಚಾಳಿ ಸುಭದ್ರೆ |
ಮೊದಲಾದ ಪಾಂಡವರಬಲೆಯರೆಲ್ಲರು | ಪದುಳಿಂದ ದೀಕ್ಷೆವಡೆದರು || ೪೩ ||

ಇಂತು ಪಾಂಡವರೈವರು ದೀಕ್ಷೆವಡೆದ | ತ್ಯಂತಾಚಾರದಿನೆಗಳಿ |
ಅಂತರಂಗಶುದ್ಧರಾಗಿಯವಧಿಬೋಧ | ಮಂ ತಾಳಿ ಬಳಿಕೊಂದು ಪಗಲು || ೪೪ ||

ನೇತ್ರಕನ್ಯಾನಂದಮನಿರದೀವಾ | ಶತ್ರುಂಜಯವೆಸರಾಂತ |
ಧಾತ್ರೀಧರಮನಡರಿಯಾಲೋಕಪ | ವಿತ್ರರು ಕೈಯಿಕ್ಕಿ ನಿಲಲು || ೪೫ ||

ಅದನರಿದಾಕೌರವನ ಮೊಮ್ಮಗನಪ್ಪ | ಮದಯುತನಾಕುಯವರನು |
ಬೆದರದೆ ಘೋರದುರಿತವೀರಭಟನುರೆ | ಪದಪಿಂದಲ್ಲಿಗೆಯ್ತಂದು || ೪೬ ||

ಕಂಡು ಮುನಿದು ನಮ್ಮಪಿತರು ಪಿತಾಮಹ | ಮಂಡಳಿಯೆಲ್ಲವನಿರದೆ |
ಚಂಡಕೋಪದಿ ನೆಲದೊಳಗೆ ನೆರಪಿಯು | ದ್ದಂಡತನದಿ ಭೂತಳಕೆ || ೪೭ ||

ಅರಸುಗಳಾಗಿ ಬತ್ತಲೆಯಿರ್ಪುದುಚಿತವೆ | ಸುರುಚಿರಮಪ್ಪ ಭೂಷಣವ |
ಧರಿಯಿಸಿ ನೀಮೆಂದು ಕರ್ಬೊನ್ನಿನಿಂದಾ | ಭರಣಗಳನು ಹಸಗೆಯ್ಸಿ || ೪೮ ||

ಮತ್ತವನುರಿಗೆಂಡದಿಂ ಬಿಸಿ ಮಾಡಿಸಿ | ತತ್ತತ್ಥಾನಕೆ ತೊಡಿಸಿ |
ಉತ್ತಮರಿಗೆ ಸಿಂಹಪೀಠಬೇಕೆಂದು | ರುತ್ತುಲೋಹದ ಗದ್ದುಗೆಯನು || ೪೯ ||

ಪಿರಿದಳುರ್ವಂದದಿ ಕಾಸಿ ಮತ್ತಲ್ಲಿ ಕು | ಳ್ಳಿರಿಸಿ ಕಾಸಿದ ಕಾಂಚನದ |
ಉರುತರಮಪ್ಪ ಪಟ್ಟವ ನೊಸಲೊಳು ಕಟ್ಟಿ | ಕರಗಿದ ಲೋಹದ ರಸವ || ೫೦ ||

ವರನಿರ್ವಾಣರಾಜ್ಯಾಭಿಷೇಕವ ಮಾಳ್ಪ | ಪರಿಯೆನೆ ಅಭಿಷೇಕಮಾಡಿ |
ಧರೆಯೆಲ್ಲ ಬೆದರುವಂದದಿನುಪಸರ್ಗಮ | ದುರುಳನವನು ಮಾಡುತಿರಲು || ೫೧ ||

ಉರಿಯುಪಸರ್ಗದೊಳುಪಶಾಂತರಸಪೂರ | ವರಮುನಿತನುಗಳೊಪ್ಪಿದುವು |
ಅರುಣಾಂಭೋಜಕುಸುಮ ತೀವಿದ ಸರ | ಸೀರುಹಾಕರದಂದದೊಳು || ೫೨ ||

ಅತಿಶಾಂತತೆಯಿನಿಂತಿಪ್ಪ ಧರ್ಮಜವಾಯು | ಸುತಫಲುಗುಣಮುನಿವರರ್ಗೆ |
ಅತಿಶಯಮಪ್ಪ ಶುಕ್ಲಧ್ಯಾನವಿರದುತು | ಪತಿಯಾಯಿತತಿವೇಗದೊಳು || ೫೩ ||

ಅನಿತರೊಳಮೆದುಂದುಂಭಿ ಮೊಳಗಲು ಸಿಂಹ | ನಿನದವ ಕೇಳ್ದಿಭದಂತೆ ||
ಘನವಾಗಿ ಬೆದರಿ ಕಾಲ್ದೆಗೆದೋಡಿದನು ದು | ರ್ಜನಕುಯವರ ಬಳಿಕಿತ್ತ || ೫೪ ||

ಅನಿಮಿಷಲೋಕವೆಲ್ಲವು ಕೂಡಿಬಂದತಿ | ವಿನಯದಿಂದವರ ಕೊಂಡಾಡಿ |
ಘನತರಮಾಗಿ ಪೂಜಿಸಿ ಫಲತುತಿಗೆಯ್ದು | ವಿನತರಾಗಿ ಪೋದರಿತ್ತ || ೫೫ ||

ಓರ್ಮೊದಲೊಳು ಕೌಂತೇಯರು ಮೂವರು | ಕರ್ಮಸಂತಾನಮೆಲ್ಲವನು |
ನಿರ್ಮೂಲನಮಾಡಿಯೊಡನೆ ಕೂಡಿದರಾ | ನಿರ್ಮಲಮಪ್ಪ ಮುಕ್ತಿಯನು || ೫೬ ||

ಮತ್ತೆ ನಕುಲ ಸಹದೇವ ಮುನೀಂದ್ರರು | ಚಿತ್ತಶುದ್ಧಿಯೊಂಗಳವಳಿದು |
ಉತ್ತಮಪ್ಪ ಸರ್ವಾರ್ಥಸಿದ್ಧಿಯೊಳು | ತ್ಪತ್ತಿಯಾದರು ಧರೆ ಪೊಗಳೆ || ೫೭ ||

ಶ್ರೀಮದಮರಪತಿ ಮಕುಟರಂಜಿತ ರತ್ನ | ಧಾಮಾಂಘ್ರಿಯುಗಪಂಕಜಾತ |
ಸೋಮಾರ್ಕಕೋಟಿಕಿರಣಸಂಕಾಶನು | ದ್ದಾಮನೇಮಿತೀರ್ಥಂಕರನು || ೫೮ ||

ವಿಲಸಿತಮಪ್ಪ ಮುಕ್ಕೊಡೆ ಸೀಮಹಪೀಠ ಪೂ | ಮಳೆ ಭಾವಳಯವಶೋಕ |
ಮೊಳಗುವ ದೇವದುಂದುಭಿ ದಿವ್ಯಭಾಷೆ ಕಂ | ಗೊಳಿಪ ಚಾಮರಮೊಪ್ಪುತಿರಲು || ೫೯ ||

ವರದತ್ತಗಣಧರರುಗಳಾದಿಯ ಗಣ | ಧರರೇಕಾದಶಮೆಸೆಯೆ |
ನಿರುಪಮರುಗಳು ಚತುಶ್ಶತಮಾಪೂರ್ವ | ಧರರು ವಿರಾಜಿಸುತಿರಲು || ೬೦ ||

ಭಾಸುರತರಮಪ್ಪ ಶಿಕ್ಷಕರೆರಡರು | ಸಾಸಿರಮವಧಿಬೋಧಕರು |
ಸಾಸಿರದೈವತ್ತುಮತ್ತಾಲೆಕ್ಕದ | ಭಾಸುರನುತಕೇವಲಿಗಳು || ೬೧ ||

ಉರುವಿಕ್ರಿಯೃದಿಸಂಪನ್ನರು ಸಾ | ಸಿರದನೂರ್ವರು ರಂಜಿಸಲು |
ಸರಸಮನಃಪರ್ಯಾಯಜ್ಞಾನಿಗ | ಳಿರಲೊಂಬೈನೂರ್ವರುಗಳು || ೬೨ ||

ಮತ್ತೆ ಧಾತ್ರೀಮತಿಗಳು ಮೊದಲಾದನಾ | ಲ್ವತ್ತುಸಾಸಿರ ಕಂತಿಕೆಯರು |
ಉತ್ತಮರೇಕಲಕ್ಷಶ್ರಾವಕರು ಶ್ರಾವ | ಕಿತ್ತಿಯರಾಮೂಲಕ್ಷ || ೬೩ ||

ಇರೆನಾಲ್ಕುತೆರದಮರರು ಲೆಕ್ಕಮಿಲ್ಲದ | ತಿರ್ಯಗ್ಜಾತಿನಿಕಾಯ |
ಬೆರಸು ದ್ವಾದಶಗಣಕ್ಕೆಯಮೋಘವಾ | ಕ್ಸುರುಚಿರಸುಧೆಯ ಮಳೆಯನು || ೬೪ ||

ಅತಿಶಯಮಪ್ಪ ಭವ್ಯಕ್ಷೇತ್ರದೊಳು | ನ್ನತಿಯಿಂ ಕರೆವುತಮಿರ್ದು |
ಶತಮುಖಶತವಂದಿತ ಪೂಜ್ಯನಾಜಿನ | ಪತಿ ತಿಂಗಳಾಯುಷ್ಯಮಿರಲು || ೬೫ ||

ವರ್ಜಿಸಿಯಾಸಮವಸೃತಿಯನು ಭೂಮಿ | ಗೂರ್ಜಿತಮಾಗಿ ರಂಜಿಸುವ |
ಊರ್ಜಯಂತಪರ್ವತದಲ್ಲಿ ಸೊಗಯಿಪ | ನಿರ್ಜಂತುಕಪ್ರದೇಶದೊಳು || ೬೬ ||

ತನ್ನೊಡನೈನೂರುಮೂವರಸಂಖ್ಯೆಯ | ಮನ್ನಣೆಯೋಗಿಗಳಿರಲು |
ಸನ್ನುತನಾಷಾಢಶುದ್ಧಸಪ್ತಮಿಯಾ | ಮುನ್ನೇಸರಹೊತ್ತಿನೊಳು || ೬೭ ||

ವಾಸವದಿಙ್ಮುಖವಾಗುತ ಪಲ್ಯಂ | ಕಾಸನನುದಿತಯೋಗದೊಳು |
ಓಸರಿಸದೆ ಕುಳ್ಳಿರ್ದು ಮುಕುತಿಯೆಂ | ಬಾಸತಿಯೊಳು ಮನಮಿಟ್ಟು || ೬೮ ||

ಪ್ರಣುತೋದ್ದಂಡಕವಾಟಭುವನಪೂ | ರಣಮೆಂಬಸದ್ವಿಧಿಯಿಂದ |
ಗಣನೆಯಿಲ್ಲದ ಘಾತಿಕರ್ಮವೆಲ್ಲವನಾ | ಕ್ಷಣದೊಳು ನಿರ್ಮೂಲಮಾಡಿ || ೬೯ ||

ಸುರುಚಿರತರ ತನುವಾಮಂಜಿನಂದದಿ | ಹರೆಯಲಮೃತವಲ್ಲಭೆಯ |
ನಿರುತಮನಂತಚತುಷ್ಟಯಾತ್ಮಕನೊಡ | ವೆರೆದನು ನೇಮಿಜಿನೇಶ || ೭೦ ||

ಭೂರಿ ನಿರ್ಜರಲೋಕವಿರದೊಡವರಲಾ | ಚಾರುನಿರ್ವಾಣಪೂಜೆಯನು |
ಪೂರಿಸಿದನು ಶಕ್ರನಾಜಿನಸುಮತ | ಕ್ಷೀರವಾರಾಶಿಚಂದ್ರಮನು || ೭೧ ||

ಶ್ರೀರಮಣೀಪತಿ ಭಕ್ತವಿಜಯ ಭೂ | ನಾರೀಧವನಗ್ರಸೂನು |
ಧೀರಮಂಗರಸನೊರೆದನಾಸುಮತ | ಕ್ಷೀರವಾರಾಶಿಚಂದ್ರಮನು || ೭೨ ||

ಧಾರಿಣಿಯೊಳು ಮೆರೆವಂತೆ ನೇಮೀಶನ | ಚಾರುಚರಿತವ ಚೆನ್ನಾಗಿ |
ಪೂರಿಸಿದನು ಮಂಗರಸನು ಜಿನಮತ | ಕ್ಷೀರವಾರಾಶಿಚಂದ್ರಮನು || ೭೩ ||

ಚಾರುಚರಿತ್ರನು ಚಿಕ್ಕಪ್ರಭೇಂದುವ | ಕಾರುಣ್ಯದ ಶಿಷ್ಯನಾಗಿ |
ಧೀರಮಂಗರಸನೊರೆದನಿದ ಸುಮತ | ಕ್ಷೀರವಾರಾಶಿಚಂದ್ರಮನು || ೭೪ ||

ಅಕ್ಷಯಚರಮಶುಕ್ಲಧ್ಯಾನದಿ ಕರ್ಮ | ದಕ್ಷೋಹಿಣಿಯನೆರೆಗೆಲಿದು |
ಅಕ್ಷಯಮೋಕ್ಷಪತ್ತನವಸೂರೆಯಗೊಂಡ | ನಕ್ಷಯಾತ್ಮಕನೇಮಿಜಿನನು || ೭೫ ||

ಉರ್ವಿಯ ಸರ್ವಭವ್ಯರಿಗಾರ್ಗೀರ್ವಾಣ | ಸರ್ವಭವ್ಯರಿಗತಿಮುದದಿಂ |
ಸರ್ವಸುಖಾತ್ಮಕವೆನಿಸುವ ಶ್ರೀಶುದ್ಧ | ನಿರ್ವಾಣಪದವಿಯನೀಗೆ || ೭೬ ||

ಇಂತಿದನೋದುವ ಪೇಳುವ ಕೇಳುವ | ಸಂತತಿ ಬರೆವ ಜನಗಳು |
ಮುಂತೆ ಪಡೆವರಮರೇಂದ್ರಪದವ ಮುಕ್ತಿ | ಕಾಂತಿಗೆ ವಲ್ಲಭರಹರು || ೭೭ ||

ಇದು ಜಿನಪದರಸಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿಏಶಸಂಗತಿಯೊಳ | ಗಿದು ಮೂವತ್ತೈದಾಶ್ವಾಸ || ೭೮ ||

ಮೂವತ್ತೈದನೆಯಸಂಧಿ ಸಂಪೂರ್ಣಂ |
ಇಂತು ನೇಮಿಜಿನೇಶಸಂಗತಿಯು ಸಮಾಪ್ತವಾದುದು