ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಭರತತ್ರಿಖಂಡಮನೆಲ್ಲಮನಾಬಲ | ಪುರುಷೋತ್ತಮರತಿಬಲದಿ |
ಉರುಮುದದೊಳು ಪಲವರಿಸ ಪಾಲನೆಗೆಯ್ದು | ತ್ತಿರಲೊಂದಾನೊಂದುದಿವಸ || ೨ ||

ಧಾರಣಿಯೊಳು ಕಡುದಯೆಯಿಂ ಧರ್ಮ | ಸಾರವನೆಲ್ಲವ ಸೂಸಿ |
ದ್ವಾರಾವತಿಯ ರೇವತಿಯೆಂಬ ವನಕಾ | ಮಾರಮಥನನೆಯ್ದಿದನು || ೩ ||

ಸುರದುಂದುಭಿಯ ಸ್ವರವ ಕೇಳಿಯಾ ಬಲ | ಹರಿಮೊದಲಾದ ಯಾದವರು |
ಹರುಷದಿ ತಂತಮ್ಮ ಸತಿಯರುವೆರಸಿ ಬಂ | ದುರುಭಕ್ತಿಯೊಳಿರದೆರಗಿ || ೪ ||

ನುತಿಗೆಯ್ದು ಮನುಜಕೋಷ್ಠದೊಳು ಕುಳ್ಳಿರ್ದು ಸ | ನ್ನುತಮಪ್ಪ ತತ್ತ್ವರೂಪವನು |
ಮತಿಯಿತ್ತು ಕೇಳಿ ಬಳಿಕ ಘನಹರುಷಸಂ | ಯುತರಾಗಿರ್ಪವೇಳೆಯೊಳು || ೫ ||

ವರದತ್ತಗಣರರ್ಗಾದೇವಕಿದೇವಿ | ಕರವಮುಗಿಯುತೆಲೆ ಗುರುವೆ |
ವರಮುನಿರಾಜರರುವರು ಚರಿಗೆಗೆಂದು | ಬರಲು ಮತ್ತವರನು ಕಂಡು || ೬ ||

ಪಿರಿದಪ್ಪ ನೇಹಮಹದೇಕಾಯಿತೆನಲಾ | ವರಮುನಿಯಿಂತೆಂದನಾಗ |
ತರುಣೀಮಣಿ ಕೇಳು ನೀನಂದು ಮಧುರಾ | ಪುರುದೊಳು ಹೆತ್ತ ನಂದನರು || ೭ ||

ಚರಮಾಂಗರವರು ನೈಗಮದೇವನತ್ಯಾ | ದರದಿಂದೊಯ್ದೆಡೆಯಲ್ಲಿ |
ನಿರುತದಿ ಬೆಳೆದು ನಿರ್ವೇಗದಿ ದೀಕ್ಷೆಯ | ಧರಿಸಿಬಂದವರದರಿಂದ || ೮ ||

ನಿನಗವರೊಳು ನೇಹವೊದವಿದುದೆನೆ ಕಡು | ಮನದೆಗೊಂಡಾ ಸತಿಯಿರಲು |
ಅನುನಯದಿಂ ಸತ್ಯಭಾಮೆ ತನ್ನಾಮು | ನ್ನಿನ ಭವದಿರವ ಕೇಳಿದನು || ೯ ||

ಇಂತು ಕೇಳಲು ಪೇಳ್ದರು ಶೀತಳಜಿನ | ಸಂತಾನಾವಸಾನದೊಳು |
ಅಂತರಿಸಿತು ಧರ್ಮವಾಕಾಲದೊಳು ಶೋಭೆ | ಯಂ ತಾಳಿ ಭದ್ರಿಳಮೆಂಬ || ೧೦ ||

ಪುರದೊಳು ಭೂತಿಶರ್ಮಾಭಿಧಾನದ ಭೂ | ಸುರಗೆ ಕಮಲೆಯೆಂಬ ಸತಿಗೆ |
ಪರಸುತ ಮಂಡಶಳಾಯನನೆಂಬವ | ನುರುತರಧೂರ್ತಮಾನಸನು || ೧೧ ||

ಬಳೆದು ಕುಶಾಸ್ತ್ರಂಗಳನಿರದರಿದಾ | ಪೊಳಲೊಳು ಘನರಥನೆಂಬ |
ಇಳೆಯಾಧಿಪತಿ ಮೊದಲಾಪುರಜನ | ಗಳನು ತನಗೆ ವಶಮಾಡಿ || ೧೨ ||

ಸಲ್ಲದ ಚರಿತಮನೊಳ್ಳಿತೆಂದವರಿಗೆ | ನಿಲ್ಲದೆಯುಪದೇಶಗೆಯ್ದು |
ಸಲ್ಲೀಲೆಯಿಂ ಸಪ್ತವ್ಯಸನದಿ ನಡೆ | ದಲ್ಲಿ ಮುಣ್ಮುಳಿಗೊಂಡು ಬಳಿಕ || ೧೩ ||

ನರಕಾವನಿಯೇಳರೊಳಗುದಯಿಸಿ ಮತ್ತೆ | ತಿರಿಯಗ್ಗತಿಯಲ್ಲಿ ಜನಿಸಿ |
ತಿರುಗಿ ಬಂದೊಂದಾರಣ್ಯದೊಳಗೆ ನಿ | ಷ್ಠುರನಪ್ಪವನಚರನಾಗಿ || ೧೪ ||

ಕಾಲವೆಸರನಾಂತಿರುತೊಂದು ದಿನದೊಳು | ಕಾಲಲಬ್ಧಿವಶದಿಂದ |
ಆಲೋಕನಗೆಯ್ದೋರ್ವ ಮುನೀಶನ | ಕಾಲಮೇಗಡೆಯೊಳು ಕವಿದು || ೧೫ ||

ಅವನತನಾಗಲೀತನಾಸನ್ನಭವ್ಯನೆಂಬುದ | ನವಧಿಬೋಧದಿ ನೆರೆಯರಿದು |
ಸವಿನಯದಿಂ ಸುವ್ರತವ ಪಾಲಿಸಲವ | ನವಧಾರಿಸಿಯದರೊಳಗೆ || ೧೬ ||

ಪ್ರೀತಿಯಿಂದಲಿ ನಡೆದಳಿದು ವಿಜಯಗಿರಿ | ಯಾ ತೆಂಕಣಳಕಾಪುರದ |
ಭೂತಳಪತಿ ವಿದ್ಯಾಬಲನವಗೆ ಸ | ಜ್ಯೋತಿರ್ಮಾಲೆಯೆಂಬವಳ್ಗೆ || ೧೭ ||

ಹರಿಬಲನೆಂಬ ತನುಜನಾಗಿ ಭೂತಳ | ಕರಸಾಗಿರ್ದೊಂದು ದಿವಸ |
ವರಮುನಿಗಳ ಕಂಡುಪರಮವೈರಾಗ್ಯದಿ | ಧರಿಸಿದನಮಲದೀಕ್ಷೆಯನು || ೧೮ ||

ಅದರೊಳು ನೆಗಳಿಯಳಿದು ಸೌಧರ್ಮದೊ | ಳುದಯಿಸಿಯಲ್ಲಿಂ ಬಂದು |
ಸುದತೀಮಣಿ ಸತ್ಯಭಾಮೆ ನೀನಾದೈ | ಸದಮಲಸುವ್ರತಫಲದಿ || ೧೯ ||

ಎನಲವಳತಿ ಹರುಷವತಾಳಿ ಕುಳ್ಳಿರ | ಲನಿತರೊಳಗೆ ಕೈಮುಗಿದು |
ಮುನಿಪನನಾ ರುಕ್ಮಿಣಿದೇವಿ ತನ್ನ ಮು | ನ್ನಿನ ಜನ್ಮವ ಕೇಳಿದಳು || ೨೦ ||

ಮಗಧದೇಶದೊಳು ಲಕ್ಷ್ಮೀಪುರವೆಂಬುದು | ಸೊಗಯಿಪುದದರೊಳಗಿರ್ಪ |
ನಿಗಮಸಂಯುತ ಸೋಮಶರ್ಮನ ನಿಜಸತಿ | ಮುಗುಧೆ ರಂಜಿಸುತೊಂದು ದಿವಸ || ೨೧ ||

ಭಾಸುರಮಣಿದೊಡವಿಟ್ಟು ಕನ್ನಡಿ ನೋಡು | ವಾ ಸಮಯದೊಳಾಯೆಡೆಗೆ |
ಆ ಸಮಾಧಿಗುಪ್ತಮುನಿಪತಿ ಚರಿಗೆಗೆ | ಮಾಸೋಪವಾಸಾಂತದೊಳು || ೨೨ ||

ಬರುತಿರೆ ಗಿಡಿಗಿಡಿ ಜಂತ್ರದಂತೆಸೆವಾ | ವರಮುನಿಯಂಗದ ನೆಳಲು |
ಇರದಾ ಕನ್ನಿಯೊಳು ಬೀಳಲಾದ್ವಿಜ | ತರುಣಿಯಿದೇನೆಂದು ನೋಡಿ || ೨೩ ||

ಕಡುಬೆದರ್ದಾ ಬಾಯಿಗೆ ಬಂದಂದದಿ | ಕಡೆನುಡಿದಲ್ಲಿಂ ತಗುಳಿ |
ಸಡಗರದಿಂದಿರಲೌದುಂಬರಕುಷ್ಠ | ವೊಡಲೊಳಗಂಕುರಮಾಯ್ತು || ೨೪ ||

ಬಳಿಕ ಹುಳಿತು ನಾತುಕೊಳತು ಸತ್ತಾತನ್ನ | ನಿಳಯದೊಳಗೆ ಇಲಿಯಾಗಿ |
ಕೊಳೆವಾವು ಪಂದಿ ಮೂಗಿಲಿ ಬೆಕ್ಕು ಪೆಣ್ಣಾಯಿ | ಬೆಳುಗತ್ತೆಯಾಗಿ ಸಂಜನಿಸಿ || ೨೫ ||

ಘೋರ ದುಃಖವನುಂಡು ಸತ್ತು ಕಾಳಿಂದೀ | ತೀರದ ಮಂದಿರವೆಂಬ |
ಊರೊಳು ಮತ್ಸ್ಯನೆಂಬಾ ಮೀಂಗುಲಿಗಂಗೆ | ನಾರಿ ಮಂಡೂಕಿಯೆಂಬವಳ್ಗೆ || ೨೬ ||

ಪೂತಿಗಂಧಿನಿಯೆಂಬ ಮಗಳಾಗಿ ಬೆಳೆದು ಮ | ತ್ತಾ ತಂದೆ ತಾಯ್ಗಳು ಸಾಯೆ |
ಆ ತನುಗಂಧಕೆ ಹೇಸಿಯಾವೂರವ | ರಾತುರದಿಂ ಪೊರಮಡಿಸಿ || ೨೭ ||

ಜಗುನೆಯ ತಡಿಗೆಯ್ತಂದಲ್ಲಿರ್ಪಂ | ಬಿಗರೊಡನಾಪರುಗೋಲ |
ತೆಗೆವುತ್ತಮಿರಲೊಂದುದನಮಪರಾಬ್ಧಿಗೆ | ಪಗಲೆರೆಯನು ಪುಗಲೊಡನೆ || ೨೮ ||

ಹಿಂದೆ ಲಕ್ಷ್ಮೀಮತಿಯಾಗಿ ಕನ್ನಡಿ ನೋಡು | ವಂದು ತೆನ್ನಾಬೆಂಗಡೆಗೆ |
ಬಂದ ಸಮಾಧಿಗುಪ್ತರು ಮತ್ತಾ ಕಾ | ಳಿಂದಿಯ ತಡಿಯೊಳು ನಿಲಲು || ೨೯ ||

ಆ ಪೂತಿಗಂಧಿನಿ ತನ್ನ ಮುನ್ನಿನ ಕ | ರ್ಮೋಪಶಮದಿನೆಯ್ತಂದು |
ತಾಪಸಪತಿಯ ಕಟಂಕಟಿಯಾಗಿರ್ದ | ರೂಪು ಗಂಡು ಕರುಣದೊಳು || ೩೦ ||

ಬಡವರೊಳಗೆ ಕಡುಬಡವನಿಂತಿವನುಡ | ಹಡೆಯನೆನುತ ಸಾರಕೆಯ್ದಿ |
ಕಡುಸನ್ನಿವಿಡಿದು ಬೀಸುವ ಬಿರುಗಾಳಿಯ | ಕಡೆಯೊಳು ಹರಿಗೋಲನಿಲಿಸಿ || ೩೧ ||

ಶೀತಪವನನುಪಸರ್ಗವ ಪಿಂಗಿಸಿ | ಪೂತಿಗಂಧಿನಿ ಕಾದಿರಲು |
ಆತಪನೋದಯಮಾಗಲು ಕಣ್ದೆರೆ | ದಾ ತಾಪಸಿ ಕೈಯೆತ್ತಿ || ೩೨ ||

ಅವಧಿಬೋಧದಿ ಲಕ್ಷ್ಮೀಮತಿಯೆಂಬುದ | ನವಿರಳಮರಿದತಿ ಮುದದಿ |
ಅವಳೊಳಿಂತೆಂದರೆಲೇ ಪೂತಿಗಂಧಿನಿ | ನವಯೌವನಮದದಿಂದ || ೩೩ ||

ಅಂದು ಭೂಸುರನವಲ್ಲಭೆಯಾಗಿ ಕಡುಮುನಿ | ಸಿಂದೆಮ್ಮ ಬೈದುದರಿಂದ |
ಸಂದಣಿಸಿದ ದುಃಖಮನುಂಡೆಯೆನು ತವ | ಳ್ಬಂದ ಭವಮನಿರದೊರೆಯೆ || ೩೪ ||

ಅರಿದು ತನ್ನಾ ಮುನ್ನಿನ ಭವವನು ಮನ | ದೆರಕದಿನಾಮುನಿಪತಿಗೆ |
ಎರಗಿದ ಪೂತಿಗಂಧಿಗೆ ಸುವ್ರತವ ಮುನಿ | ಯೆರೆಯನಿತ್ತು ಪೋಗಲಿತ್ತ || ೩೫ ||

ಬಂಧುರಮಪ್ಪಾ ಸುವ್ರತವನು ಪೂತಿ | ಗಂಧಿ ಕಣ್ಗಳನುರೆ ಹಡೆದ |
ಅಂಧಳಂದದಿ ಪಾಲಿಸುವ ಕಾಲದೊಳು ವ | ಸುಂಧರೆಯೆಂಬ ಕಂತಿಯರು || ೩೬ ||

ಬರಲವರೊಡವೋಗಿಯಾರಾಜಗೃಹಪುರ | ವರದ ಸಿದ್ಧಶಿಲೆಯೆಂಬ |
ಗಿರಿಯಗುಹೆಯೊಳಾ ಕಂತಿಕೆಯರು ಕೊ | ಟ್ಟುರುನೋಂಪಿಯ ನೋನುತಿರಲು || ೩೭ ||

ಬಳಿಕ ಸಮಾಧಿಗುಪ್ತವ್ರತಿರಾಜರು | ತಳರಲಲ್ಲಿಗೆ ತತ್ಪುರದ |
ಇಳೆಯಧಿಪನ ಮಗಳಾ ಶ್ರೀಮತಿಯೆಂಬ ಲಲನೆ ಬಂದಾ ಮುನಿಗೆರಗಿ || ೩೮ ||

ತನ್ನ ಜನ್ಮವ ಕೇಳಿಯಾಪೂತಿಗಂಧಿನಿ | ಮುನ್ನ ಲಕ್ಷ್ಮೀಮತಿ ತನಗೆ |
ಮನ್ನಣೆಯಾಳಿಯಾದುದರಿಂದ ನೇಹದಿ | ತನ್ನ ಮನೆಗೆ ಕೊಂಡು ಬಂದು || ೩೯ ||

ಜಿನಗುಣಸಂಪತ್ತಿ ಮೊದಲಾದ ನೋಂಪಿಯ | ನನುನಯದಿಂದ ಕೊಡಿಸಲು |
ವಿನಯದಿ ನೋನುತಮಿರಲೊಂದಾನೊಂದು | ದಿನದೊಳಗಾಕಂತಿಯರು || ೪೦ ||

ಸರಸಮಪ್ಪನ್ನಮನೀಯಲು ತನಗಂದು | ನಿರಶನಮಾದುದರಿಂದ |
ಧರಿಸದೆ ಬಿಸುಡಲಂತದನದಲ್ಲಿಯಿರುಫೆಗ | ಳಿರದೆ ಪಲವು ಸಂಜನಿಸಿ || ೪೧ ||

ಮರಣವಡೆಯಲಾ ಪಾಪ ಬೆನ್ನನೆ ಹತ್ತಿ | ಬರೆ ಕೆಲ ದಿವಸದ ಮೇಲೆ |
ಗುರುಸನ್ನಿಧಿಯೊಳು ಸನ್ಯಸನದಿ ಸತ್ತು | ಸುರಚಿರಸೌಕ್ಯಮನೀವ || ೪೨ ||

ಪದಿನಾರನೆಯ ಸಗ್ಗದ ದೇವೇಂದ್ರಗೆ | ಸದತಿಯಾಗಿ ಭೋಗವನು |
ಪದಪಿಂ ಭೋಗಿಸಿಯಲ್ಲಿಂದಿಳಿದೀ | ಚದುರೆ ರುಗ್ಮಿಣಿ ನೀನಾದೆ || ೪೩ ||

ಅಂದು ನೀನು ಬಿಟ್ಟಾಸರಸಾನ್ನದೊ | ಳೊಂದಿ ಜನಿಸಿದಿರುಪೆಗಳು |
ಹೊಂದಿದ ಪಾಪದಿ ನಿನ್ನ ಜನಕ ನಿನ್ನ | ಮುಂದೆಯಳಿವ ದುಃಖಮಾಯ್ತು || ೪೪ ||

ಎನುತಾಗಣಧರರೊಸೆದು ನಿರೂಪಿಸೆ | ಮನದೆಗೊಂಡಾಸತಿಯಿರಲು |
ಅನಿತರೊಳಾಜಂಭಾವತಿ ತನ್ನ ಮು | ನ್ನಿನ ಜನ್ಮವ ಬೆಸಗೊಳಲು || ೪೫ ||

ಈ ವಾಸವಶಿಖರಿಯ ಸೀತಾನದಿಯ | ವಾಯುಸಖನ ದಿಙ್ಮುಖದಾ |
ತೀವಿದ ಶೋಭೆಯ ಪುಷ್ಕಲಾವತಿಯೆಂ | ಭಾವಿಷಯದ ನಡುವೆಸೆವ || ೪೬ ||

ವೀತಶೋಕಪುರದೊಳು ವೈಶ್ಯನೋರ್ವವಿ | ಖ್ಯಾತನು ದಮನಕನೆಂಬ |
ಆತನ ಸತಿ ದೇವಮತಿಯೆಂಬಳವರ್ಗೆ ವಿ | ನೂತೆ ವಿಮಲೆಯೆಂದೆಂಬ || ೪೭ ||

ತನುಜೆ ಸಂಭವಿಸಿ ಬೆಳೆಯಲಾ ಪುರದೊಳು | ವಿನುತ ಸುವಿಕ್ರಮನೆಂಬವಗೆ |
ವಿನಯದಿ ಮದುವೆಯ ಮಾಡಲವನು ಕೆಲ | ದಿನಮವಳೊಳು ಸುಖಮಿರ್ದು || ೪೮ ||

ಮರಣವಡೆಯಲಾ ವಿಮಲೆ ವಿಮಲಮಪ್ಪ | ಚರಿತದೊಳೆಸಗಿ ಸುವ್ರತವ |
ಧರಿಸಿ ಮರಣಮುಖದೊಳಗನಿಮಿಷಮೆಂಬ | ಪುರದ ವನದ ಮಧ್ಯದೊಳು || ೪೯ ||

ವನದೇವತೆಯಾಗಿ ಚೌಸೀತಿಸಾಸಿರ | ದನಿತುವರುಷ ನೆರೆಬಾಳ್ದು |
ತನುವ ವಿಸರ್ಜಿಸಿ ಮುಂಪೇಳ್ದ ವಿಷಯದ | ಜನನುತ ವಿಜಯನಗರಿಯ || ೫೦ ||

ಪರದನು ಮಧುಸೇನನೆಂಬವಗಾತನ | ಗರಣಿ ಬಂಧುಮತಿಯೆಂಬ |
ತರಳಲೋಚನೆಗೆ ವಿಜಯಸೇನೆಯೊಂಬೋರ್ವ | ವರಸುತೆಯಾಗಿ ಜವ್ವನವ || ೫೧ ||

ತಳೆದಾ ಶ್ರೀಪಂಚಮಿಯುಪವಾಸದೊ | ಳಳಿದು ಕುಬೇರದಿಕ್ಪತಿಗೆ |
ಲಲನೆಯಾಗಿ ಪಂಚಪಲ್ಯೋಪಮಲಾಲ | ಕಳೆಯಲಲ್ಲಿಂದೆಯ್ತಂದು || ೫೨ ||

ನಿರುಪಮಮೆನಿಸಿ ಮುಂ ಪೇಳ್ದಾವಿಷಯದ | ಸುರುಚಿರಪುಂಡರೀಕಿಣಿಯ |
ವರವೈಶ್ಯನು ವಜ್ರಸೇನನಾತನ ನಿಜ | ತರುಣಿ ಸುಭದ್ರೆಯಂತವರ್ಗೆ || ೫೩ ||

ಸುತೆಯಾಗಿ ಸುಮತಿವೆಸರನಾಂತು ಬೆಳೆದು ಸು | ವ್ರತೆಯರೆಂಬಾ ಕಂತಿಯರಿಗೆ |
ಅತಿರುಚಿವಡೆದಮೃತಾನ್ನದಾನವನು ಸ | ನ್ನುತ ಭಕ್ತಿಯಿಂ ಮಾಡಿ ಬಳಿಕ || ೫೪ |

ಲಲಿತರತ್ನಾವಳಿಯೆಂಬ ನೋಂಪಿಯ ನೋಂ | ತಳಿದು ಪೋಗಿಯೈದನೆಯ |
ವಿಲಸಿತಮಪ್ಪ ಕಲ್ಪದ ದೇವೇಂದ್ರಗೆ | ಲಲನೆಯಾಗಿ ಸುಖಮಿರ್ದು || ೫೫ ||

ಪದಿಮೂರುಪಲ್ಯೋಪಮದಾಜೀವಿತಾಂ | ತ್ಯದೊಳೀಧರೆಗೆಯ್ತಂದು |
ಸುದತೀಮಣಿಜಂಭಾವತಿಯಾದೆಯೆಂ | ದುದಿತಬೋಧನುನಿರವಿಸಲು || ೫೬ ||

ಅನಿತರೊಳಬ್ಜೋಪಮಹಸ್ತವ ಮುಗಿ | ದನಿಮಿಷನೇತರೆ ಸುಸೀಮೆ |
ಅನಘ ಕೇಳೆನ್ನ ಜನ್ಮವ ಬೆಸಸೆನಲತಿ | ವಿನಯದೊಳಿಂತುಸುರಿದನು || ೫೭ ||

ವರಧಾತಕಿಖಂಡದ ಮೂಡಣಮಂ | ದರದ ಸೀತೆಯ ಬಲಗಡೆಯ |
ಧರಣಿಯ ಮಂಗಲಾವತಿಯೆಂಬ ವಿಷಯದೊ | ಳುರುತರಶೋಭೆಯನಾಂತ || ೫೮ ||

ವರರತ್ನಸಂಚಯಪುರಮಿರ್ಪುದದನಾ | ಳ್ವರಸು ವಿಶ್ವಸೇನನವನ |
ಪರಭೂಪರು ರಣರಂಗದೊಳಗೆ ಯಮ | ಪುರಕೆಯ್ದಿಸಲವನಬಲೆ || ೫೯ ||

ಸುಂದರಿಯೆಂಬವಳಾ ವಲ್ಲಭನ ದುಃಖ | ದಿಂದ ಶುಶುಕ್ಷಣಿವೊಕ್ಕು |
ಹೊಂದಿ ಬಳಿಕ ವಿಜಯಾರ್ಧಗಿರಿಯೊಳಿರ್ಪು | ದೊಂದು ವನದ ಮಧ್ಯದೊಳು || ೬೦ ||

ವಾನವ್ಯಂತರದೇವತೆಯಾಗಿ ಮ | ನೋನುರಾಗದಿ ಬರ್ದು ಬಳಿಕ |
ಆನದೆ ಸತ್ತಾಪಾಪದ ಫಲದಿಂ | ನಾನಾಭವದೊಳು ಬಂದು || ೬೧ ||

ಜಂಬೂದ್ವೀಪದ ಭರತಾವನಿಯೊಳ | ಗಿಂಬಾದ ಶಾಲಿಗ್ರಾಮ |
ಎಂಬಲ್ಲಿಯಕ್ಷಾಂಕನೆಂಬ ಪರದನ ನಿ | ತಂಬಿನಿಯಾದೇವಸೇನೆ || ೬೨ ||

ಅವರೊಳೊಗೆದು ಯಕ್ಷಿಯೆಂಬ ಪೆಸರನಾಂತು | ನವಯೌವನೆಯಾಗಿ ಬಳಿಕ |
ಸವಿನಯದಿಂ ಜಿನಮತವ ಧರಿಸಿಯೊಂದು | ದಿನದೊಳು ಮುನಿನೋರ್ವಂಗೆ || ೬೩ ||

ನಿರವದ್ಯಾಹಾರಮನಿತ್ತು ಬಳಿಕಾ | ಪುರದ ವನಕೆ ಪೋಗಲಲ್ಲಿ |
ಉರಗದಷ್ಪಮಾಗಿ ಸತ್ತಲ್ಲಿಂ ಬಂದು | ಸುರುಚಿಮಪ್ಪೀ ನೆಲದ || ೬೪ ||

ಆವಾಸವಗಿರಿಯಾ ಸೀತೆಯ ದಕ್ಷಿ | ಣಾವನಿಯಾನಾಡಿನೊಳಗೆ |
ಭೂವಿಶ್ರುತ ಪುಷ್ಕಲಾವತಿಪೆಸರ್ವಡೆ | ದಾವಿಷಯದ ಮಧ್ಯದೊಳು || ೬೫ ||

ಉರುಪುಂಡರೀಕಿಣಿಯೊಳಗೆಯಶೋಕನೆಂ | ಬರಸಿಗೆ ಸೋಮಶ್ರೀಗೆ |
ವರಸುತೆಯಾಗಿ ಲಕ್ಷ್ಮೀಕಾಂತೆವೆಸರಾಂತು | ಪಿರುದು ಚೆಲ್ವಿಕೆಯನು ಧರಿಸಿ || ೬೬ ||

ಜನನುತಮಪ್ಪ ಜವ್ವನವೇರಿ ದೀಕ್ಷೆಯ | ನನುರಾಗದಿ ಕೈಕೊಂಡು |
ತನುವನಿಳುಹಿ ಮಹೇಂದ್ರಕಲ್ಪದ ದೇವ | ಗಿನಿಯಳಾಗಿ ಸಲೆಸುಖಿಸಿ || ೬೭ ||

ಪೆನ್ನೊಂದುಪಲ್ಯೋಪಮಲಾಲ ಜೀವಿಸಿ | ಭಿನ್ನವಮಾಡಿ ದೇಹವನು |
ಸನ್ನುತರೂಪೆ ಸುಸೀಮೆ ನೀನಾದೈ | ಮುನ್ನೆಸಗಿದ ಪುಣ್ಯದಿಂದ || ೬೮ ||

ಎನಲಾಗಳೆ ಲಕ್ಷಣೆ ಕೈಮುಗಿದೆಲೆ | ಮುನಿಪತಿಯೆನ್ನ ಜನ್ಮವನು |
ಸನುಮಾನದಿಂದ ನಿರೂಪಿಸಿಯೆನಲತಿ | ವಿನಯದೊಳಿಂತೆಂದರವರು || ೬೯ ||

ವಸುಧಾತಳಮಿದರೊಳು ಸೀತೆಯಿಂದ ರಂ | ಜಿಸುವ ತೆಂಕಣತಡಿಯೊಳಗೆ |
ಎಸೆವಕಚ್ಛಕಾವತಿಯೆಂಬ ನಾಡೊಳು | ಮಿಸುಗುವರಿಷ್ಟಪಟ್ಟಣದ || ೭೦ ||

ಅರಸುಸುಷೇಣನೆಂಬವನತಿ ರೋಗದಿ | ಮರಣವನೆಯ್ದೆ ಮತ್ತವನ |
ವರಮಾತೆ ವಸುಮತಿಯೆಂಳವನ ಮೇಲೆ | ಕರೆಕರೆಗೊಂಡಾರ್ತದಿಂದ || ೭೧ ||

ತನುವನುಳಿದು ವಿಂಧ್ಯಾಟವಿಯೊಳಗೋರ್ವ | ವನಚರವಲ್ಲಭೆಯಾಗಿ |
ಜನಿಸಿಯಲ್ಲಿಗೆ ಬಂದಾಚಾರಣರಿಂ | ವಿನುತ ಚರಿತ್ರಮನಾಂತು || ೭೨ ||

ಮುಪ್ಪಾಗಿ ಸತ್ತು ಕಾಪಿಷ್ಟದ ಸುರಪಗೆ | ಯೊಪ್ಪುವ ನರ್ತಕಿಯಾಗಿ |
ಇಪ್ಪತ್ತು ಪಲ್ಯೋಪಮಾಯುಸ್ಥಿತಿಯನು | ತಪ್ಪದುಂಡಲ್ಲಿಂ ಬಂದು || ೭೩ ||

ಈ ಕ್ಷಿತಿಯೊಳು ರಂಜಿಪ ರಜತಾದ್ರಿಯ | ದಕ್ಷಿಣದೆಸೆಯ ಶ್ರೇಣಿಯೊಳು |
ಲಕ್ಷಣವಡೆದ ಸುಧಾಮನಗರವನು | ರಕ್ಷಿಪನಾಮಾಹೇಂದ್ರ || ೭೪ ||

ಆ ನೃಪವರಗೆ ವಸುಂಧರೆಯೆಂಬೋರ್ವ | ಮಾನಿನಿಗುದಯಂಗೆಯ್ದು |
ಭೂನುತೆಯಾಗಿ ಕಂಚನಮಾಲೆಯೆಂಬಭಿ | ದಾನಮನಾಂತೊಪ್ಪುವಡೆದು || ೭೫ ||

ಹರಿವಾಹನನೆಂಬರಸಗೆಯಾಸ್ವಯಂ | ವರದೊಳು ವಲ್ಲಭೆಯಾಗಿ |
ಇರುತ ಮುಕ್ತಾವಳಿಯೆಂಬನೋಂಪಿಯನಾ | ದರದಿಂ ಹಿರಿದಾಗಿ ನೋಂತು || ೭೬ ||

ಗತಜೀವಿಯಾಗಿ ಮೂರನೆಯ ಸಗ್ಗದ ಸುರ | ಪತಿಗೆ ಪಟ್ಟದ ಸತಿಯಾಗಿ |
ಅತಿಮುದದಿಂ ನವಪಲ್ಯೋಪಮಾಯು | ಸ್ಥಿತಿಯೊಳಗಲ್ಲಿಂ ಬಂದು || ೭೭ ||

ಸುಪ್ರಭೆಯೆಂಬ ಪೊಳಲಶಂಬರವೆಸ | ರ ಪ್ರಭುವಿಗೆ ಶ್ರೀಮತಿಗೆ |
ಸುಪ್ರೇಮದ ಸುಕುಮಾರಿ ಲಕ್ಷಣನೆಯೆಂ | ಬಪ್ರಮದಾಮಣಿಯಾದೆ || ೭೮ ||

ಎನೆ ಗಾಂಧಾರಿ ತನ್ನಯ ಜನ್ಮವ ಬೆಸ | ಸೆನೆ ನಿರವಿಸಿದರಿಂತೆಂದು |
ವನಜಾಕ್ಷಿ ನೀನೀಯಾರ್ಯಾಖಂಡದ ವಿನುತ ಕೌಶಲಜನಪದದ || ೭೯ ||

ಸಾಕೇತನಗರಿಯೊಳಗೆ ರುದ್ರನೆಂಬ ಮ | ಹೀಕಾಂತನಾತನ ಸುದತಿ |
ಲೋಕೈಕ ರೂಪೆ ವನಶ್ರೀಯೆಂಬೋರ್ವ | ಳಾಕೆ ನಿತ್ಯಕೃತ್ಯಮಾಗಿ || ೮೦ ||

ವರಮುನಿಗಳಿಗಾಹಾರದಾನವಮಾಡಿ | ದುರುಸುಕೃತದಫಲದಿಂದ |
ಮರಣವ ಹಡೆದುತ್ತಮ ಸುಖವೀವವು | ತ್ತರಕುರುಧರೆಯೊಳಗೊಗೆದು || ೮೧ ||

ಮೂರು ಪಲ್ಯೋಪಮಾಯುಷ್ಯ ಸುಖಮನುಂಡು | ಜಾರಿಸಿ ತನುವನಲ್ಲಿಂದ |
ಪಾರಿ ಜೋಯಿಸರ ವಲ್ಲಭನಾಚಂದ್ರಗೆ | ನೀರೆ ರೋಹಿಣಿದೇವಿಯಾಗಿ || ೮೨ ||

ಅಲ್ಲಿಂದ ಬಂದೀ ಭರತದ ವಿಜಯಾರ್ಧ | ದಲ್ಲಿಯ ತೆಂಕಣತಟದ |
ಸಲ್ಲಲಿತಾಂಬುದವಲ್ಲಭನಗರಿಯ | ನುಲ್ಲಾಸದಿಂ ರಕ್ಷಿಸುವನು || ೮೩ ||

ವಿದ್ಯುತ್ಪ್ರಭನೆಂಬ ಖೇಚರರಾಜನಿಗೆ | ವಿದ್ಯುನ್ಮಾಲೆಗೆ ಜನಿಸಿ |
ವಿದ್ಯಾಕಲೆಗಳನರಿದು ರೂಪಿಂದಾ | ಪ್ರದ್ಯುಮ್ನಸತಿಗೆಣೆಯೆನಿಸಿ || ೮೪ ||

ಕರಮೆಸೆವಾಸುರೂಪೆಯ ನಿತ್ಯಾಲೋಕ | ಪುರದಮಹೇಂದ್ರವಿಕ್ರಮಗೆ |
ಉರುಮುದದಿಂದ ಕುಡೆ ಸಲೆ ಸುಖಮಿರ್ದಾ | ವರದಂಪತಿಗಳೊಂದು ದಿವಸ || ೮೫ ||

ದೇವಗಿರಿಗೆ ಪೋಗಿ ದೇವನ ಊಜಿಸು | ವಾವೇಳೆಗೆಯ್ದೆ ಚಾರಣರು |
ಸಾವಧಾನದಿ ಧರ್ಮಾಧರ್ಮವನು ಪೇಳ | ಲಾವೈರಾಗ್ಯ ಸಂಭವಿಸಿ || ೮೬ ||

ಓಪನೊಡನೆ ದೀಕ್ಷೆಯ ಕೊಂಡಳಿದು ಸು | ರೂಪಗ್ಗದೊಳು ಸಂಜನಿಸಿ |
ಆ ಪಂಚಪಲ್ಯೋಪಮಕಾಲ ಜೀವಿಸಿ | ಯಾ ಪಂಚತ್ವಮನೆಯ್ದಿ || ೮೭ ||

ಗಾಂಧಾರವಿಷಯದ ಭೋಗಾವತಿಯೆಂಬ | ಬಂಧುರಪುರದಿಂದ್ರರಥಗೆ |
ಬಂಧೂಕಾಧರೆ ಮೇರುಮತಿಗೆ ನೀನು ಗಾಂಧಾರಿಯೆಂಬವಳಾದೈ || ೮೮ ||

ಎಂದು ನಿರೂಪಿಸೆ ಗೌರಿಯೆಂಬವಳಿಂ | ತೆಂದಳು ಜತಿರಾಯ ನನ್ನ |
ಹಿಂದಣ ಭವದ ಪೇಳೆನಲವರೊಸೆದಿಂ | ತೆಂದರೆಲೇ ಕೋಮಲಾಂಗಿ || ೮೯ ||

ಈ ಮಹಿಯೊಳಗೊಪ್ಪುವ ನಾಗಪುರದೊಳು | ಹೇಮಾಭನೆಂಬ ಭೂವರಗೆ |
ಸೋಮವದನೆ ಸರಸತಿಯೆಂಬ ಸತಿ ಸು | ಪ್ರೇಮದಿನಿರ್ದೊಂದು ದಿವಸ || ೯೦ ||

ಸುಗುಣಿ ಯಶೋಧರರೆಂಬವಧಿಜ್ಞಾ | ನಿಗಳೊಳು | ಹೇಮಾಭನೆಂಬ ಭೂವರಗೆ |
ಬಗೆವಂದು ಕೇಳಿ ಜಾತಿಸ್ಮರೆಯಾಗಿ ಮೇ | ಲೊಗೆದ ಚಿಂತೆಯೊಳಿರಲಾಗ || ೯೧ ||

ಹೇಮಾಭನೆಲೆ ಸತಿ ಚಿತೆಯೇಕೆಂದು ಸು | ಪ್ರೇಮದಿ ಕೇಳಲಿಂತೆಂದು |
ಆ ಮಾನಿನಿ ಪೇಳ್ದಳು ತನ್ನ ಮುನ್ನಿನು | ದ್ದಾಮಮಪ್ಪಾಜನ್ಮದಿರವ || ೯೨ ||

ವರಧಾತಕಿಖಂಡದ ಮೂಡಣಮಂ | ದರದೊಳಪರವಿದೇಹದೊಳು |
ಸುರುಚಿರ ಕುಮುದಾವತಿವಿಷಯದ ಭೋಗ | ಪುರದ ವಿಜಯಸೇನನೆಂಬ || ೯೩ ||

ಪರದಗೆ ಜಯಸೇನೆಯೆಂಬವಲ್ಲಭೆಯಾಗಿ | ವರಮುನಿಗಳಿಗೆ ಭಿಕ್ಷೆಯನು |
ನಿರವಧಿಯಾಗಿ ಮಾಡಿಸಿ ಮರಣಂಗೆಯ್ದು | ಕುರುಭೂಮಿಯೊಳು ಸಂಜನಿಸಿ || ೯೪ ||

ಪದಪಿಂ ಮೂರು ಪಲ್ಯೋಪಮಕಾಲಸಂ | ಮದದಿ ಸುಖಮನನುಭವಿಸಿ |
ಒದವಿದ ಮರಣದಿನಾಧರಣೇಂದ್ರಗೆ | ಸುದತಿಯಾಗಿ ಸಲೆಬಾಳ್ದು || ೯೫ ||

ತ್ರಿತಳಯಪಳಿತಕಾಲಜೀವಿಸಿಯಂತಲ್ಲಿ | ಹತಮಾಗಿ ಭೂಪತಿ ನಿನಗೆ |
ಸತಿಯಾದೆನೆನಲು ವೈರಾಗ್ಯಮೊದವಿಯೋರ್ವ | ಯತಿನಾಥನ ಬಳಿಗೆಯ್ದಿ || ೯೬ ||

ಹೇಮಾಭನೃಪತಿಯಣುವ್ರತವನು ಕೊಳ | ಲಾ ಮಾನಿನಿ ಸರಸತಿಯೂ |
ಪ್ರೇಮದಿನಾ ವ್ರತವನು ಕೊಂಡು ಬಳಿಕ ತ | ನ್ನಾ ಮೈಯ ಭಾರಮುನಿಳುಪಿ || ೯೭ ||

ಮೊದಲ ಸಗ್ಗದೊಳು ನಿರ್ಜರೆಯಾಗಿ ಜನಿಯಿಇ | ಸದಮಲಸುಖಮುಂಡು ಬಳಿಕ |
ಒದವಿದ ಮರಣದೊಳೀನೆಲದೊಳು ಸಂ | ಪದವೆತ್ತ ವತ್ಸದೇಶದೊಳು || ೯೮ ||

ಕರಮೊಪ್ಪುವ ಕೌಶಂಬೀನಗರಿಯ | ವರವೈಶ್ಯಸುಮತಿಯೆಂಬವಗೆ |
ಗರುವೆ ಸುಭದ್ರೆಗೆ ಧರ್ಮಿಳೆಯೆಂಬೋರ್ವ | ವರನಂದನೆಯಾಗಿ ಜನಿಸಿ || ೯೯ ||

ಬೆಳೆದು ಬಳಿಕ ಜಿನಗುಣಸಂಪತ್ತಿಯೆಂ | ಬಲಘುನೋಂಪಿಯನುರೆನೋಂತು |
ಇಳುಹಿ ದೇಹಮನಚ್ಯುತಕಲ್ಪದಧಿಪಗೆ | ಲಲನಾಮಣಿಯಾಗಿ ಜನಿಸಿ || ೧೦೦ || |

ಪದಿಮೂರು ಪಲ್ಯೋಪಮಾಯುಷ್ಯಮಲ್ಲಿ | ರ್ದೊದವಿದ ಮರಣಮುಖದೊಳು |
ವಿದಿತಮೆನಿಸುವಾವಿನಿತಾಖಂಡದ | ಗ್ಗದ ವೀತಶೋಕಪಟ್ಟಣದ || ೧೦೧ ||

ಭೂತಳಪತಿಮೇರುಚಂದ್ರನ ಸತಿ ವಿ | ಖ್ಯಾತೆ ಚಂದ್ರಪ್ರಯವರ್ಗೆ |
ನೀತುನಿಪುಣೆ ಗೌರಿಯೆಂಬವೆಸರ ತನು | ಜಾತೆ ನೀನಾದೆಯೆಂದೆನಲು || ೧೦೨ ||

ಅನುರಾಗಮನಾಂತಾ ಪೆಣ್ಮಣಿಯಿರ | ಲನಿತರೊಳೆಳ್ದು ಕೈಮುಗಿದು |
ಜನಸನ್ನುತೆ ಪದ್ಮಾವತಿ ತನ್ನ ಮು | ನ್ನಿನ ಜನ್ಮವ ಕೇಳಿದಳು || ೧೦೩ ||

ಮುನಿಪತಿಯಿಂತೆಂದನಿಲ್ಲಿಯ ಭರತಾ | ವನಿಯ ವಿನಿತಖಂಡದೊಳು |
ಮಿನುಗುವವಂತೀವಿಷಯದುಜ್ಜಯಿನಿಯ | ಜನಪತಿ ವಿಜಯಸೇನಂಗೆ || ೧೦೪ ||

ಅಸದೃಶ್ಯರೂಪಾನ್ವಿತೆಯಪರಾಜಿತೆ | ಗೆಸೆವ ನಯಶ್ರೀಯೆಂಬ |
ಬಿಸುರುಹದಳಲೋಚನೆ ಬಿಂಬಾಧರೆ | ಯೆಸಳ್ವಂದುಗೆವಾಯ್ದೆರೆಯ || ೧೦೫ ||

ವರನಂದನೆಯಾಗಿ ಹಸ್ತಿಸೀರುಷಮೆಂಬ | ಪುರಪತಿಹರಿಷೇಣನೃಪಗೆ |
ಹರುಷದಿ ಕೊಡಲಲ್ಲಿಯತಿಸುಖದಿಂ ಬಾಳು | ತಿರಲೊಂದಾನೊಂದು ಪಗಲು || ೧೦೬ ||

ನಿರವದ್ಯಾಹಾರಮನೋರ್ವಯತಿಪತಿ | ಗುರುಭಕ್ತಿಯಿಂ ಕೊಟ್ಟ ಫಲದಿ |
ಮರಣವ ಹಡೆದು ಬಳಿಕ ಹೈಮವತಮೆಂಬ | ಕುರುಭೂಮಿಯೊಳು ಸಂಜನಿಸಿ || ೧೦೭ ||

ಅಲ್ಲಿಯಳಿದು ಚಂದ್ರಮಗೆ ರೋಹಿಣಿಯೆಂಬ | ನಲ್ಲಳಾಗಿ ಬಹುದಿವಸ |
ಸಲ್ಲೀಲೆಯಿಂ ಸಲೆಸುಖಮಂಡಳಿದುಬಂ | ದಿಲ್ಲಿ ಮಗಧದೇಶದೊಳು || ೧೦೮ ||

ಕರಮೊಪ್ಪುವ ಶಾಲ್ಮಲಿಗ್ರಾಮದೊಳೋರ್ವ | ಪರದನು ವಿಜಯನೆಂಬವಗೆ |
ವರಸತಿ ದೇಯಿಲೆಯೆಂಬವಳಿಗೆ ಸುರು | ಚಿರರೂಪೆ ಪದ್ಮೆಯೆಂಬೋರ್ವ || ೧೦೯ ||

ಸುತೆಯಾಗಿ ಬಳೆದು ಹೆಸರನರಿಯದ ತರು | ತತಿಯಫಲಮನೊಲ್ಲೆಂದು |
ಯತಿಪತಿವರಧರ್ಮರಿಂ ಪ್ರತವನು ಕೊಂಡು | ಸತತ ಸಂತೋಷದೊಳಿರಲು || ೧೧೦ ||

ಆ ಶಾಲ್ಮಲಿಗ್ರಾಮವನೋರ್ವ ಶಬರಾ | ಧೀಶನತ್ಯಾಗ್ರಹದಿಂದ |
ನಾಶವ ಮಾಡೆ ಬೆದರಿಯೊಂದು ವಿಪಿನಪ್ರ | ದೇಶಮನಾಪುರಜನವು || ೧೧೧ ||

ಅಸವಸದಿಂ ಸಾರಿ ಹಸಿದೊಡಲಿಂದಾ | ಹೆಸರರಿಯದ ತರು ಫಲವ |
ಎಸೆದು ಮೆಲುತ್ತಿರಲಾಪದ್ಮೆ ತಾ ಧರಿ | ಯಿಸಿದಾವ್ರತವನು ನೆನೆದು || ೧೧೨ ||

ಆ ಹೆಸರರಿಯದ ಮರದ ಹಣ್ಗಳ ಮೆಲ್ಲ | ದಾಹಸುವನು ಸೈರಿಸದೆ |
ದೇಹವನುಳಿದು ಭೋಗಾವನಿಯೊಳು ಪುಟ್ಟಿ | ಯೂಹಿಸಬಾರದ ಸುಖವ || ೧೧೩ ||

ಸಲೆಯುಂಡಳಿದು ಬಂದಾಸ್ವಯಂಪ್ರಭಮೆಂಬ | ನೆಲದ ಸ್ವಯಂಪ್ರಭಾಮರಗೆ |
ಒಲವಿನ ಸುದತಿ ಸ್ವಯಂಪ್ರಭೆಯಾಗಿ ನಿ | ರ್ಮಲತರಸೌಖ್ಯಮನುಂಡು || ೧೧೪ ||

ಅಲ್ಲಿಂ ಬಂದೀ ಭರತಾರ್ಯಖಂಡ | ದಲ್ಲಿ ಜಯಂತೀಪುರದ |
ಬಲ್ಲಿಹನಾಶ್ರೀಧರನೆಂಬವನ ನಿಜ | ವಲ್ಲಭೆ ಲಕ್ಷ್ಮೀಮತಿಗೆ || ೧೧೫ ||

ವಿಮಲೆಯೆಂಬ ಸುತೆಯಾಗಿ ಭದ್ರಿಳಮೆಂಬ | ರಮಣೀಯಮಪ್ಪ ಪಟ್ಟಣದ |
ರಮಣನಂಬುದನಾದಾವನಿಪಾಲಗೆ | ರಮಣಿಯಾಗಿ ಬಾಳುತಿರ್ದು || ೧೧೬ ||

ಒಂದು ದಿವಸ ವರಧರ್ಮರೆಂಬಾಮುನಿ | ವೃಂದಾರಕನ ಸನ್ನಿಧಿಗೆ |
ಬಂದು ಧರ್ಮಾಧರ್ಮವನು ಕೇಳಿ ನಿರ್ವೇಗ | ದಿಂದ ದೀಕ್ಷೆಯ ಕೈಕೊಂಡು || ೧೧೭ ||

ಬಳಿಕಾಚಾಮ್ಲವರ್ಧನನೋಂಪಿಯ ನೋಂ | ತಳಿದು ಸಗ್ಗದ ವಾಸವಗೆ |
ಲಲನೆಯಾಗಿ ಸೌಖ್ಯಮನುಂಡಿಪ್ಪತ್ತು | ಪಳಿತೋಪಮಕಾಲ ಬದುಕಿ || ೧೧೮ ||

ಮರಣಮುಖದಿನೀಯರಿಷ್ಟನಗರಿಯ ಭೂ | ವರನು ಕನಕವರ್ಮನೃಪನ |
ವರವಧುವಾಶ್ರೀಮತಿಗೆ ಪದ್ಮಾವತಿ | ಯುರುರೂಪವತಿಯಾಗಿ ಜನಿಸಿ || ೧೧೯ ||

ವನಜೋದರಗೆ ವಲ್ಲಭೆಯಾದವಳು ನೀ | ನೆನಲತಿ ಹರುಷವ ತಾಳಿ |
ವನಜಾನನೆಯಾ ಗಣಧರಮೃದುಪದ | ವನಜಮೂಲಕೆ ಮುಗ್ಗಿದಳು || ೧೨೦ ||

ವಿನಯದೊಳಿಂತು ಬಿಸಜನಾಭನ ನಿಜ | ವನಿತೆಯರೆಣ್ಬರ ಭವವ |
ಮನದೆಗೊಂಬಮಾಳ್ಕೆಯೊಳು ಪೇಳಿದನಾ | ಮುನಿಕುಲಗಗನಭಾಸ್ಕರನು || ೧೨೧ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳ | ಗಿದು ತ್ರಯಸ್ತ್ರಿಂಶದಾಶ್ವಾಸ || ೧೨೨ ||

ಮೂವತ್ತಮೂರನೆಯಸಂಧಿ ಸಂಪೂರ್ಣಂ