ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಪದಿನೆಂಟು ದೋಷವ ಗೆಲ್ದು ಲೋಕದ ತುತ್ತ | ತುದಿಯೊಳು ನಿಂದು ತಮ್ಮಿಂದ |
ಒದವಿದ ಸುಖಮಯರಾಗಿರ್ದ ಸಿದ್ಧರ ಪದಯುಗಕಾನೆರಗುವೆನು || ೨ ||

ಸಾರತರಾಮೃತಸುಖವೀವ ಕೈವಲ್ಯ | ನಾರಿ ಮೋಹಿಸಬೇಕೆಂದು |
ಚಾರುಚರಿತ್ರಾಭರಣಭೂಷಿತರಾದ | ಸೂರಿಗಳಡಿಗೆರಗುವೆನು || ೩ ||

ಎನ್ನದು ಮನೆಯೊಡಲೊಡವೆಯೆನ್ನಮುಬೇಡ | ವನ್ಯರು ಮನೆಯೊಡಲೊಡವೆ |
ಎನ್ನಿಮೆಂದುಪದೇಶಗೆಯ್ವುಪದೇಶಕ | ರಂ ನಲವಿಂದ ವಂದಿಪೆನು || ೪ ||

ನಿರ್ವೇಗಪಾರಾಯಣ ನಿಜಹೃದಯರು | ನಿರ್ವಾಣೇಪ್ಸಿತಯುತರು |
ಸರ್ವಸಾಧುಗಳ ವಂದಿಸಿ ನಾನು ಪಡೆವೆನು | ಸರ್ವಜ್ಞಾಧಿಕಾರವನು || ೫ ||

ಜಿನಸಿದ್ಧಸೂರಿದೇಶಕಸಾಧುಸಮಿತಿಯ | ನನುನಯದಿಂ ವಂದಿಸುವೆನು |
ಘನತರ ಪಂಚಪರಾವರ್ತನಮೆಂಬ | ವನನಿಧಿಯನು ದಾಂಟಲೆಂದು || ೬ ||

ಕೊಲ್ಲುದುದೇ ಧರ್ಮ ಪೂರ್ವಾಪರ ವೈರ | ವಿಲ್ಲದುದೇ ಶಾಸ್ತ್ರವೆಂದು |
ನಿಲ್ಲದೆ ನಿರವಿಸಿದಂಗಜವೈರಿಯ | ಮೆಲ್ಲಡಿಗಾನೆರಗುವೆನು || ೭ ||

ವಾಣಿ ವೃಜಿನಘನತರಕಾಂತಾರ ಕೃ | ಪಾಣಿ ಸಂಸಾರವಾರಿಧಿಗೆ |
ದ್ರೋಣಿ ನಿರ್ಮಲ ನಿಃಶ್ರೇಯೋಮಾರ್ಗನಿಃ | ಶ್ರೇಣಿಗೆ ನಾನೆರಗುವೆನು || ೮ ||

ಸರ್ವಜ್ಞಪದಸರಸಿಜಮದಮಧುಕರ | ಸರ್ವಯಕ್ಷಾನ್ವಯತಿಲಕ |
ಸರ್ವಾಹ್ಣಯಕ್ಷ ವರವಕೊಡು ಕವಿತೆಯ | ನಿರ್ವಹಿಸುವ ಶಕ್ತಿಯನು || ೯ ||

ಮದನಮದಾಪಹರಣತೀರ್ಥಕರ ಮೃದು | ಪದಯುಗನಖಚಂದ್ರಿಕೆಗೆ |
ಮುದದಿ ಚಕೋರಿಯೆನಿಪ ಯಕ್ಷೇಶ್ವರಿ | ಯೋದವಿಸೆನಗೆ ಸುಮತಿಯನು || ೧೦ ||

ಶರಧಿಯ ಜಲವ ಮುಗಿಲು ತೀವಿ ಧರಣಿಗೆ | ಸುರಿವಂತೆ ಜಿನವಾಕ್ಸುಧೆಯ |
ಧರಿಸಿ ಭವ್ಯರ ಹೃದಯದೊಳು ಕರೆವ ಗಣ | ಧರರ ಪಾದವೆ ಗತಿಯೆನಗೆ || ೧೧ ||

ಶುದ್ಧಮೆನಿಪ ತತ್ತ್ಪಾರ್ಥಕೆ ವೃತ್ತಿಯ | ನುದ್ಧರಿಸುತ ಮೈಮೆವಡೆದ |
ಗೃದ್ಧ್ರಪಿಂಛಾಚಾರ್ಯರ ಚಾರುಚರಣಕೆ | ಬದ್ಧಾಂಜಲಿನತನಹೆನು || ೧೨ ||

ಅವನತನಹೆನು ಚವ್ವೀಶತೀರ್ಥೆಶ್ವರ | ನವಕಥನವನಿರದೊರೆದು |
ಅವನಿಯೊಳತಿಕೀರ್ತಿವಡೆದು ವಿರಾಜಿಪ | ಕವಿಪರಮೇಷ್ಠಿಯಂಘ್ರಿಯನು || ೧೩ ||

ಎಣಿಕೆಮಾಡದೆ ಮದನನ ಬಿಲ್ಲನಾ ಪೂ | ಗಣೆಯ ಮುರಿದು ಪೆಂಪುವಡೆದ |
ಗುಣಭದ್ರರಡಿಯನೇಣೆಯ ಮಾಡುವೆನೆನ್ನ | ಹಣೆಗೆ ತ್ರಿಕರಣಶುದ್ಧಿಯೊಳು || ೧೪ ||

ಕಲಿಯುಗಗಣಧರರನು ನಮ್ಮಲೋಕದ | ಅಲಘುಗುಣಾಲಂಕೃತರ |
ಕಲಿಲಹರರ ಮಾಘನಂದಿಮುನೀಶರ | ಬಲವಂದು ಪಾಡಿ ವಂದಿಪೆನು || ೧೫ ||

ಛಂದೋಲಂಕಾರಶಬ್ದಶಾಸ್ತ್ರಗಳೆಲ್ಲ | ವೊಂದಿಮುರಿದು ಮೂರ್ತಿವಡೆದು |
ನಿಂದನಿಲವಿನಂದದಿಂದೊಪ್ಪುವ ದೇವ | ನಂದಿಯ ಪದಕೆರಗುವೆನು || ೧೬ ||

ಅಂಕದ ಮುಖದೊಳಡಂಗದೆ ಕರ್ಮಕ | ಲಂಕರೆನಿಪ ಬೌದ್ಧರನು |
ಶಂಕಾಪಹರಣಹೃದಯರಾಗಿ ಗೆಲಿದಕ | ಲಂಕರಿಗೊಲಿದೆರಗುವೆನು || ೧೭ ||

ಹಿಂದೆ ನಾನೆಸಗಿದ ಘೋರಮಪ್ಪಘತತಿ | ಯೊಂದಿನಿಸಿಲ್ಲದೆ ಕೆಡುವ |
ಅಂದದಿ ಸುವ್ರತವನು ಪಾಲಿಸಿದ ಪ್ರ | ಭೇಂದುಮುನಿಯ ವಂದಿಪೆನು || ೧೮ ||

ಅವರಣುಗಿನ ಶಿಷ್ಯರು ಶ್ರುತಮುನಿಗಳ | ನವಿರಳಗುಣಗಣಯುತರ |
ಅವಿರತಮೆರಗುವೆ ನಾನೆಸಗಿದ ಪಾಪ | ತವಿಸಲೆಂದು ಭಕುತಿಯೊಳು || ೧೯ ||

ಶ್ರುತಮುನಿವರರ ಸಹೋದರನಾಗಿ ಸಂ | ಸೃತಿಬಂಧನವ ಪರಿಪಡಿಸಿ |
ಅತಿ ಕೀರ್ತಿವಡೆದ ವಿಮಲಕೀರ್ತಿವೆಸರ ವಿ | ಶ್ರುತಮುನಿಗಿರದೆರಗುವೆನು || ೨೦ ||

ಪಾಟಿಗೆಡಿಸುವೆವಘವನೆಂಬಾ ನವ | ಕೋಟಿಮುನಿಗಳ ಮೆಲ್ಲಡಿಗೆ |
ತಾಟಿಸಿ ಹಣೆಯ ನೇಮೀಶಸಂಗತಿಯ ಸಂಗ | ಘಾಟದಿಂದಾನುಸುರುವೆನು || ೨೧ ||

ಇನ್ನು ನಾನೊರೆವೆ ಚವ್ವೀಶತೀರ್ಥೇಶರ | ತ್ಯುನ್ನತಮಪ್ಪ ಸಂಗತಿಯ |
ಕನ್ನಡದೊಳು ಚಂಪೂಕಾವ್ಯಮೆನೆ ಪೇಳ್ದ | ಸನ್ನುತ ಸತ್ಕವೀಶ್ವರರ || ೨೨ ||

ಪುರುಜಿನಪತಿಯ ಪುರಾಣವನುಸುರಿತ | ವರಕವಿ ಪಂಪರಾಜನನು |
ದುರಿತವಿದೂರರಜಿತಚರಿತವ ಪೇಳ್ದ | ಗರುವ ರನ್ನನ ನುತಿಸುವೆನು || ೨೩ ||

ದೇವಚಂದ್ರಪ್ರಭರನು ಕೊಂಡಾಡಿದ | ಶ್ರೀವಿಜಯರ ಪುಷ್ಟದಂತ |
ಭಾವಜಾರಿಯ ಪೊಗಳಿದ ಗುಣವರ್ಮನ | ಭಾವಶುದ್ಧಿಯೊಳು ವಂದಿಪೆನು || ೨೪ ||

ಪದಿನಾಲ್ಕನೆಯ ತೀರ್ಥಕರಚರಿತ್ರವ | ಒದವಿ ಪೇಳಿದ ಜನ್ನುಗನ |
ಮುದದಿಂ ಧರ್ಮಚರಿತ್ರವನುಸುರಿದ | ಚದುರಮಧುರನ ಸ್ತುತಿಪೆನು || ೨೫ ||

ಶಾಂತೀಶನ ಪೊಗಳಿದ ಪೊನ್ನನ ರಘು | ಕಾಂತನ ಮಲ್ಲಿತೀರ್ಥಕರ |
ಸಂತಸದಿಂ ವರ್ಣಿಸಿದ ನಾಗಚಂದ್ರನ | ಸಂತತಮಭಿವಂದಿಸುವೆನು || ೨೬ ||

ಅಂಗಜರಿಪು ನೇಮಿ ವೀರೇಶಚರಿತವ | ಪೊಂಗಿ ಪೊಗಳ್ದ ಕಣ್ಣಪನ |
ಶೃಂಗಾರಕಾವ್ಯ ಲೀಲಾವತಿಯನು ಪೇ | ಳ್ದಾಂಗಿಕ ನೇಮಿಯ ನೆನೆವೆ || ೨೭ ||

ಬಂಧುರಭರತ ಯಾದವವಂಶವನು ಕೃತಿ | ಬಂಧದೊಳಗೆ ಸೇರಿಸಿದ |
ಬಂಧುವರ್ಮನನು ನೆನೆದು ನೇಮಿಚರಿತಪ್ರ | ಬಂಧವ ನಾನುಸುರುವೆನು || ೨೮ ||

ಇವರಾದಿಯಾಗಿ ಇಳೆಯೊಳುಳ್ಳ ವರಜಿನ | ಕವಿಗಳ ನನ್ನ ಚಿತ್ತದೊಳು |
ಅವಿರತವಿರಿಸಿ ನೇಮಿಶನ ಚರಿತೆಯ | ಸವಿನಯದಿಂದುಸುರುವೆನು || ೨೯ ||

ಕೃತಿಯ ನೆವದಿ ನೇಮೀಶನ ಚರಿತೆಯ | ನುತಿಗೆಯ್ಯಲಘಸಂವರಣೆ |
ಹತಮಾಗಲೆಂದು ಬರೆದೆನಿಂತಿದ ಭವ್ಯ | ತತಿಯಿರದೊಲಿದು ಲಾಲಿಪುದು || ೩೦ ||

ಕೇಳಿದೊಡೇನೊ ಕೇಳದೊಡೇನೊ ಮನಗೊಂಡು | ಕೊಳರದರಿನೇನು ಸಿದ್ಧಿ |
ಕಾಲವಿಜಯನ ಕಥೆಯ ಪುಣ್ಯಕಾರಣ | ಪೇಳಿದೆನೆನ್ನರಿವನಿತು || ೩೧ ||

ಕೋಡಗಗುತ್ತಮ ಮಾಣಿಕವನು ಕೊಡ | ಲೀಡಾಡುವೊಲು ದುರ್ಜನರು |
ರೂಢಿವಡೆದ ಪುಣ್ಯಕಥೆಯನು ಕೇಳುವ | ರೋಡಾಡದೆ ಸಮ್ಮನಿಹರೆ || ೩೨ ||

ಹಾವಿಗೆ ಹಾಲನೆರೆಯಲದರೊಡಲೊಳ | ಗಾ ವಿಷ ಪೂರಿಸುವಂತೆ |
ಲಾವಕರಿಗೆ ಲೇಸಮಾಡಲು ಕಷ್ಟವ | ನೇವೈಸಿಕೊಂಡು ಕೊನೆವರು || ೩೩ ||

ತಾನಳಿದುಂಡವರಿಗೆ ಓಕರಮಾ | ಳ್ಪಾ ನೊಣದಂತೆ ದುರ್ಜನರು |
ಹಾನಿ ತಮಗೆಯಾದೊಡಾಗಲಿ ಮಾನ್ಯರ | ಮಾನಾಪಹಾರ ಮಾಡುವರು || ೩೪ ||

ಕಾಸಲು ಕಂಚಲ ಕಡುರಂಗುವಡೆವಂತೆ | ದೂಸಕರಾ ಸಜ್ಜನರಿಗೆ |
ಏಸೇಸು ಪರಿಯೊಳು ಕಪಟವನೆಸಗಲು | ಲೇಸನವರಿಗೆಸಗುವರು || ೩೫ ||

ಪಿಸುಣರ ಸಂಸರ್ಗವನುರೆ ಮಾಡಿದ | ರಸಿಕರ್ಗೆ ಕೇಡಾಗದಿಹುದೆ |
ಮಿಸುಗುವ ಪೊಸಪೊನ್ನ ಗಟ್ಟಿಯೊಳವಲೋಹ | ಮುಸುಕಲಂತದು ಕೆಡುವಂತೆ || ೩೬ ||

ಇಂತು ದುರ್ಹಬರಬಯ ದೂಷಿಸಿ ಸಜ್ಜನ | ಸಂತಾನವ ತುತಿಗೆಯ್ದು |
ಕಂತುಮರ್ದನ ನೇಮಿನಾಥನ ಚರಿತೆಯ | ಸಂತಸದಿಂದುಸುರುವೆನು || ೩೭ ||

ಹರಿಕುಲತಿಲಕ ಮಹಾಮಂಡಳಿಕ ಭೂ | ತರುಣೀಶ ಚಂಗಾಳ್ವನೃಪನ |
ವರಸಚಿವಾನ್ವಯಾಂಬರಭಾನು ಜಿನಪದ | ಸರಸಿಜಮದಮಧುಕರನು || ೩೮ ||

ಜನನುತ ಕಲ್ಲಹಳ್ಳಿಯ ನಾಡಿನ ಪ್ರಭು | ವಿನಯವನಧಿಚಂದ್ರಮನು |
ಮನುನಿಭಚರಿತ ಮಾಧವಸುತ ಮಾಧವ | ತನುಜಸದೃಶ ವಿಜಯೇಂದ್ರ || ೩೯ ||

ವಿತರಣದೊಳಗೆ ವಿಬುಧ ಮಹೀಜಾತವ | ನುತವಿಭವದೊಳಿಂದ್ರನನು |
ವಿತತ ವಿವೇಕದೊಳಾ ವಿಧಿಯನು ಗೆಲ್ದು | ನುತನಾದನಾ ವಿಜಯೇಂದ್ರ || ೪೦ ||

ಆ ಪ್ರಭುವಿನ ತನುಜಾತನು ಸಕಲಕ | ಲಾಸುಪ್ರವೀಣನುತ್ತಮನು |
ಅಪ್ರತಿಮನು ಗುಣಾನ್ವಿತ ಕಾಮಧೇನು ಸ | ಮಪ್ರದನೆನೆ ರಂಜಿಸುವನು || ೪೧ ||

ಜಿನಪದಭಕ್ತ ಮಂಗರಸನಾನೀ ಮುಕ್ತಿ | ವನಿತೇಶನೇಮಿತೀರ್ಥಕರ |
ವಿನುತಮಪ್ಪಾ ಕಥನವ ಪಾಡುಗಬ್ಬದೊ | ಳನುಗೆಯ್ದೆ ತಾನದೆಂತೆನಲು || ೪೨ ||

ಗುರುಕಟಿತಟವಿನ್ಯಸ್ತ ಹಸ್ತದ್ವಯ | ಧರಣೀತಳಾಂಘ್ರಿಪ್ರಸಾರ |
ವರನರ್ತಕಾಕಾರ ಮೂಲೋಕಮಿಪ್ಪುದು | ಮರುತತ್ರಯಾಧಾರದಿಂದ || ೪೩ ||

ಆ ರೀತಿವಡೆದ ಭುವನದೊಳು ದಂಡಾ | ಕಾರದ ತ್ರಸನಾಳಮಿಹುದು |
ನಾರಕನರನಾಕಲೋಕಕೆ ತಾನಾ | ಧಾರಮೆನಲು ರಂಜಿಸುತ || ೪೪ ||

ಆ ನರಕಲೋಕದ ಮಧ್ಯದೊಳಿಪ್ಪವು | ನಾನಾದ್ವೀಪ ಸಮುದ್ರ |
ಆ ನಟ್ಟನಡುವೆ ಮಹಾಲವಣಾಂಬುಧಿ | ತಾನತಿಶೋಭವಡೆದುದು || ೪೫ ||

ಅಸುರನ ಕೊಂದವನೊಯ್ದವನಿಯ ತಂದು | ಹಸಮಾಡಿ ಮುಂದದಕಾರೂ |
ಮುಸುಕದಂದದಿ ಹರಿಗೆಯ್ದ ನೀರಗಳೆನ | ಲೆಸಕವಡೆದುದಾ ಜಲಧಿ || ೪೬ ||

ಜಂಭೂದ್ವೀಪವೆಂದೆಂಬ ಜೈವಾತೃಕ | ಬಿಂಬದ ಪೊರವಳಯದೊಳು |
ಇಂಬುವಡೆದ ಪರಿವೇಷದವೊಲು ವಲ | ಣಾಂಬುಧಿಯತಿ ರಂಚಿಸಿದುದು || ೪೭ ||

ಕರಮೆಸೆವಾ ಕಡಲೊಳಮೆಯ್ಯೊಳು ಬಂ | ಧುರಮಾದುದಾ ಜಂಬೂದ್ವೀಪ |
ಉರುತರಮಪ್ಪಾ ಕಾಸಾರಮಧ್ಯದ | ಸರಸಿಜಕುಸುಮದಂದದೊಳು || ೪೮ ||

ಆ ವಸುಧಾಮಂಡಲದ ನಡುವೆ ಶೋ | ಭಾವಹಮಾಗಿರುತಿಹುದು ||
ದೇವಲೋಕದ ಪಾತಾಳಲೋಕಂಬರ | ತೀವಿ ಮಹಾಮೇರುಶಿಖರಿ || ೪೯ ||

ಅಂಬರವೆಸರ ಸುದತಿ ಸುರಲೋಕವೆಂ | ದೆಂಬ ಹೆಂಚಿನೊಳಂಜನವನು |
ಇಂಬಿನೊಳಡಲೆಂದಿಟ್ಟ ಹೆಜ್ಜೊಡರೆಂ | ದೆಂಬಂತೆ ಮೇರುವೊಪ್ಪಿದುದು || ೫೦ ||

ಜ್ಯೋತಿಷ್ಕರಿಂದೀ ಕಾಲವನೊಕ್ಕುವಿ | ಳಾತಳವೆಂಬ ಕಳದೊಳು |
ಓತು ವಿಲಯಕರ‍್ತು ನಿಲಿಸಿದ ಮೇಟಿಯ | ರೀತಿಯಾಯ್ತಾ ಮೇರುಶಿಖರಿ || ೫೧ ||

ಕೀಳಿನೊಳೆಸೆವೇಳು ಲೋಕಂಗಳೆಂಬ | ಏಳು ನೆಲೆಯ ಮಾಡಗಳೊಳು |
ಢಾಳಿಪ ಹೊಂಗಳಸದವೊಲೊಪ್ಪಿತು ಮೇರು | ಭೂಲೋಕಕಚ್ಚರಿಯಾಗಿ || ೫೨ ||

ಆ ಸುರುಚಿರಮಪ್ಪ ಮೇರುಗಿರಿಯ ದಕ್ಷಿ | ಣಾಶೆಯೊಳಾ ನಿಷಧಾದ್ರಿ |
ಆ ಸಾಗರವ ಪೂರ್ವಾಪರದೊಳು ಮುಟ್ಟಿ | ಭಾಸುರಮಾಗಿರುತಿಹುದು || ೫೩ ||

ಆ ನಿಷಧಾದ್ರಿಯನ್ನುಸ್ರುತಮವನಿಯ | ತಾನಾಂತಾ ಬಲು ಹೊರೆಗೆ |
ಆನದೊಗೆದು ಬಿಳ್ವ ಬೆಮರೆನೆ ಸೀತೋ | ದಾನದಿಯೊಗೆದೊಪ್ಪಿದುದು || ೫೪ ||

ಭೂತರುಣಿಯ ಬೆನ್ನೊಳೆಸೆವ ವೇಣಿಯವೊಲು | ಖ್ಯಾತಿವಡೆದು ಪಡುಗಡೆಗೆ |
ಓತು ಪರಿವ ಜಂಗಮವಾರ್ಧಿಯೆಂಬಂ | ತಾ ತರಂಗಿಣಿಯೊಪ್ಪಿದುದು || ೫೫ ||

ಅದರೆಡಬಲಗಡೆ ಎಂಟೆಂಟು ಜನಪದ | ಪದಿನಾರು ಸಗ್ಗದಂದದೊಳು |
ಪುದಿದಿಹವದರ ದಕ್ಷಿಣದೆಸೆಯೊಳಗೆಸೆ | ದುದು ವತ್ಸಕಾವತೀವಿಷಯ || ೫೬ ||

ಧರೆಯೆಂಬ ಲಲಿತಾಂಬುಜದ ಮಧ್ಯದ ಕೋಶ | ದಿರವೆನಲೆಸೆವಾ ದೇಶ |
ವರಭೋಗಿಗಳು ಭೋಗಿಪ ವಸ್ತುವಿನ ಕೋಶ | ಸಿರಿಯಿರವಿಗೆ ಏಕದೇಶ || ೫೭ ||

ಸುರರುಣಿಸಿಗೆ ಸರಿಮಿಗಿಲೆನಿಸುವ ಭೋಜ್ಯ | ತರವಸ್ತುವಿಂದಾ ರಾಜ್ಯ |
ಧರೆಯೊಳಗುಳ್ಳ ಚಪ್ಪನ್ನದೇಶಕೆ ಪೂಜ್ಯ | ಸುರಭಿಶರನ ಸಾಮ್ರಾಜ್ಯ || ೫೮ ||

ಸತತ ಕುಜಾತಿವಿತಾನ ತಟಸ್ಥಮು | ನ್ನತ ಭಂಗ ಜಡಭಾವಗಳು |
ಅತಿ ಭಾವಿಸೆ ನದಿಯೊಳಗಲ್ಲದೆಸೆವಾ | ಕ್ಷಿತಿಯ ಜನದೊಳಿನಿಸಿಲ್ಲ || ೫೯ ||

ಶ್ರುತಿಶೂನ್ಯಮೆಂಬುದಕ್ರಮಮೆಂಬುದು ವಕ್ರ | ಗತಿಯೆಂಬುದು ಭಾವಿಸಲು |
ನುತಮಾಗಿಯಾದೇಶದಹಿಯೊಳಲ್ಲದೆ ಜನ | ತತಿಯೊಳಗೊಂದಿನಿಸಿಲ್ಲ || ೬೦ ||

ಅಲರಶರನ ಬೀಡಪರಂಜಿಮಿಗದಾಡು | ವೊಲ ಕಾಮಪಶು ಮೇವ ಕಾಡು |
ನೆಲವ ಹಡೆದ ನಾಕಲೋಕದೇಳ್ಗೆಗೆ ಜೋಡು | ಸಲೆ ಸೊಗಯಿಪುದಾ ನಾಡು || ೬೧ ||

ಆ ಸಗ್ಗದ ನಾಡಿನ ಗುರುಲಘುವನು | ತ್ರಾಸುವಿಡಿದು ನೋಡಲಜನು |
ಭಾಸಿಪಗುಣದಿನೆಯ್ದಿದುದಾ ಧರೆಯನು | ಆ ಸಗ್ಗವೆಯ್ದಿತುದ್ದವನು || ೬೨ ||

ಆ ಜನಪದದ ನಡುವೆ ಸಿಂಹಪುರವೆಂಬ | ರಾಜಧಾನಿಯು ಇರ್ಪುದದನು |
ರಾಜಿಸುವಂತೆ ಬಳಸಿ ಉದ್ಯಾನ ಮ | ನೋಜನಾವಾಸದಂತಿಹುದು || ೬೩ ||

ಹರನೊಳು ಹುಸಿದ ದೋಷಿಗಳೆಮ್ಮ ಹೊರೆಯೊಳ | ಗಿರಬೇಡವೆಂದು ಕೋಪದೊಳು |
ವರವನಸತಿ ನೂಂಕಿದಂತೆ ಬೇಲಿಗಳೊಳು | ಪಿರಿದೊಪ್ಪಿದುವು ಕೇತಕಿಗಳು || ೬೪ ||

ತೀವಿಹವಲ್ಲಿ ವಕುಳ ನಾಗ ಚಂಪಕ | ಬಾವನ್ನ ಬೇಲ ಬಾಳೆತಿಲಕ |
ದೇವದಾರು ದಾಡಿಮ ಜಂಬುಕುರವಕ | ಮಾವು ಮಂದಾರವಶೋಕ || ೬೫ ||

ಮಿಸುಗುವ ದಶದೊಹಲವೃಕ್ಷಗಳಿಂದ | ಮಿಸುನಿದಾವರೆಗೊಳದಿಂದ |
ಪೊಸರನ್ನವೆಸದ ಕೃತ್ರಿಮ ಶೈಲಗಳಿಂದ | ಹಸನಾದುದಾ ವನದಂದ || ೬೬ ||

ಸುರುಚಿರಮಾದ ಸುವರ್ಣಮನಲರೊಳು | ಶರಿಸಿದ ಪೊಸಸಂಪಗೆಯೊಳು |
ಪೊರೆಯಲಣ್ಮವು ಚಂಡಾಳಿಕುಲಂಗಳು | ಕರಮೆಸೆವಾ ನಂದನದೊಳು || ೬೭ ||

ವ್ಯೋಮಕೇಶಗಭಿಷೇಕ ಮಾಡುವೆವೆಂದು | ಹೇಮಕುಂಭದಿ ಸುಧೆವಿಡಿದು |
ಪ್ರೇಮದಿ ನೆಗೆವಂತೆ ತೆಂಗುಕಾಯಿದಳೆದು | ದ್ದಾಮವೆತ್ತವು ಸೊಂಪುವಡೆದು || ೬೮ ||

ಕರಮೊಪ್ಪಿದುವಲ್ಲಿ ಕರವೀರಮದಿರ್ಗಂತಿ | ಮರುಗಮಲ್ಲಿಗೆ ಇರುವಂತಿ |
ಸುರಗಿ ನಂದ್ಯಾವರ್ತ ಬಂಧೂಕ ಮಾಲತಿ | ಸಿರಿಸಸಂಪಗೆ ಸೇವಂತಿ || ೬೯ ||

ಅತಿ ಸುಖಿಯಿಸುವುವಂತದರೊಳು ಪಾರಾ | ವತ ಲಾವುಕ ರಾಜಕೀರ |
ನುತ ಚಕ್ರವಾಕ ಮರಾಳ ಸಾರಸಪುರ | ಭೃತಭುಗುಸಾರ ಮಯೂರ || ೭೦ ||

ಮೊರೆವಳಿಕಳಭಗಳಿಗೆ ಜೇವಳಿಗೆಯ್ವ | ಮರುತನ ಮೈಗೆ ಕಂಪಿಡುವ |
ಅರಲವಲ್ಲರಿ ಹಬ್ಬಿ ಬಿಡುವಾ ಇಮ್ಮಾವ | ನೊರೆವೆನೇನದರ ವರ್ಣನವ || ೭೧ ||

ಮುನಿದು ತೊಲಗಿದ ವಿಟೀವಿಟಸಂಧಾನ | ವನೆ ಮಾಡುವಾಉದ್ಯಾನ |
ವಿನುತ ವಸಂತರಾಜನ ಜನ್ಮಸ್ಥಾನ | ಮನಸಿಜನೃಪನಾಸ್ಥಾನ || ೭೨ ||

ಸಿರಿಯರಮನೆ ಗಳಿಯ ಗುಣದಾಗಾರ | ಬೆರಕೆಗೆಂಪಿನ ಬಂಡಾರ |
ವರವನಸತಿಯ ಲಾವಣ್ಯರಸದ ಪೂರ | ದಿರವಾದುವಲ್ಲಿ ಕಾಸಾರ || ೭೩ ||

ಪಿರಿದು ರಂಜಿಸುವುವಂತದರೊಳುಗ್ಗಡಿಸುವ | ಗೊರವ ಬಂದುದ ಬಾಯಿಗರೆವ |
ಅರಗಿಳಿ ನಲಿದು ಕೆಲೆವ ಪೊಸ ಪಾರಿವ | ಮೊರೆವಳಿಕುಳಿರೆಂಬ ಕೊಳನ || ೭೮ ||

ತೊಳಗಿ ಬೆಳೆಗುವಂತೊಪ್ಪುವ ವನದಿಂದ | ಒಳವಲಯದ ಖ್ಯಾತಿಯಿಂದ |
ಪೊಳೆವಪರಂಜಿಯೆಸೆವ ಕೋಂಟೆಯಿಂದಾ | ಪೊಳಲೊಪ್ಪಿತತಿಶೋಭೆಯಿಂದ || ೭೫ ||

ತನ್ನಣುಗಿನ ಸುತೆಯಾಪಟ್ಟಣದೊಳು | ಚೆನ್ನಾಗಿರೆ ಹರುಷದೊಳು |
ಮುನ್ನೀರಮರ್ದಪ್ಪಿದಂತೆ ರಂಜನೆಯೊಳು | ಉನ್ನತಮಾಯ್ತಲ್ಲಿಯಗಳು || ೭೬ ||

ಗೆಲೆವಂದುದಾ ಕೋಟೆ ತೆನೆಯಿಂ ಬೆಳೆಯನು | ಪಲವು ಕೊತ್ತಳದಿ ಹೇರುಗಳ |
ನೆಲಸದಟ್ಟಣೆಯಿಂದಡುಗೆಯ ಮನೆಯನು | ಪುಲಿಮೊಗದಿಂದ ರಾಶಿಯನು || ೭೭ ||

ತರದಿನೊಪ್ಪುವ ಸೋಮಸೂರ್ಯವೀಧಿಗಳಿಂದ | ಅರಸುಮಕ್ಕಳ ಮನೆಯಿಂದ |
ಬೆರಕೆವರಲ ಶಿಖರದ ದೇಗುಲಗಳಿಂದ | ಪುರಮೊಪ್ಪಿತತಿ ಶೋಭೆಯಿಂದ || ೭೮ ||

ವೀರಭಟರ ವಿದ್ವಾಂಸರಕ್ಕರಿಗರ | ನೇರಣಿಗರ ನಚ್ಚಣಿಗರ |
ವರವನಿತೆಯರ ವೈದ್ಯರ ಒಚ್ಚರ | ಕೇರಿಯಿಂದೆಸೆಯಿತಾ ನಗರ || ೭೯ ||

ಭೂರಮಣಗೆ ಮಾರ್ಮಲೆದಿಪ್ಪಾವೈರಿ | ಭೂರಿಭೂಭೂರಿಗೆ ಮಾರಿ |
ಈರೆನೆ ಶತಲಕ್ಷಕೋಟಿಭಟರ ಕೇರಿ | ಕೇರಿಯಿಂದೆಸೆಯಿತಾ ನಗರಿ || ೮೦ ||

ವರಮಂತ್ರಿಗಳು ಮಂಡಳಿಕಸಾಮಂತರ | ಪರದೇಶಾಧೀಶ್ವರರ |
ಸರಸಕಲಾಭಿಜ್ಞರ ಕೇರಿಯಿಂ ತರ | ತರದಿನೊಪ್ಪಿದುದಾ ನಗರ || ೮೧ ||

ಪೊಸ ಪೂವೀಳೆಯವನು ಲೇಪನ ಬಲು | ವೆಸದ ತೊಡವು ಪಲಪರಲು |
ಮಿಸುನಿವಸನ ಪರಿಯಣದಂಗಡಿಯ ಸಾ | ಲ್ಮುಸುಗಲೊಪ್ಪಿದುದಾ ಪೊಳಲು || ೮೨ ||

ತೊಳಗುವ ಬೆರಕೆಗಂಪಿನ ಹೂವಿನಸರ | ಗಳನೀವನವಯೌವನೆಯರ |
ಬೆಳತಿಗೆಗಣ್ಗಳ ಬೆಳಗಿನಬಲೆಗಿರ | ದೊಳಗಾದುದಾ ವಿಟನಿಕರ || ೮೩ ||

ಆ ಸಿಂಹಪುರವನಾಳುತ್ತಿರ್ಪನರುಹ | ದ್ವಾಸವೆಸರ ಭೂಭೂಜನು |
ಭಾಸುರವಡೆದವರಾವತಿಯೊಳಗಾ | ವಾಸವನಿರ್ಪಂತಿಹನು || ೮೪ ||

ವರವನಿತಾಜನಹೃದಯಕಮಲವನ | ತರುಣ ಸಹಸ್ರಕಿರಣನು |
ನಿರುಪಮರೂಪನೊಪ್ಪಿದನು ಸತ್ಕವಿಚಿತ್ತ | ಶರಧಿಸಂಪೂರ್ಣಚಂದ್ರಮನು || ೮೫ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿನೇಮಿಜಿನೇಶಸಂಗತಿಯೊಳು || ಮೊದಲಾಶ್ವಾಸಮೊಪ್ಪಿದುದು || ೮೬ ||

ಪೀಠಿಕಾಸಂಧಿ ಸಂಪೂರ್ಣಂ