ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಇತ್ತಲಂಧಕವೃಷ್ಣಿರಾಜೇಂದ್ರನವನಿಯ | ನೊತ್ತಿಯಾಳುತ ತನ್ನ ಜಸವ |
ಪತ್ತುದೆಸೆಯೊಳಿನಿಸೆಡೆದೆರಪಿಲ್ಲದೆ | ಪತ್ತಿಸಿದನು ವಿಕ್ರಮದೊಳು || ೨ ||

ಈ ತೆರದಿಂದೀರಾರುವರುಷವಿ | ಖ್ಯಾತಿಯಿನಾನೃಪವರನು |
ಭೂತಳಮೆಲ್ಲವ ಪರಿಪಾಲಿಸುತ ವಿ | ನೂತನಾಗಿರುತೊಂದು ಪಗಲು || ೩ ||

ಆ ಗಂಧಮಾದನಶಿಖರಿಯ ತಡಿಯೊಳು | ಯೋಗನಿಷ್ಠಾವರನಾಗಿ |
ಯೋಗಿತಿಲಕಸುಪ್ರತಿಷ್ಠನು ಪ್ರತಿಮಾ | ಯೋಗದೊಳಗೆ ನಿಂದಿರಲು || ೪ ||

ಪೂರ್ವಜನ್ಮದ ವೈರಸಂಬಂಧಮನವನು | ಪರ್ವೆ ಸುದರ್ಶನನೆಂಬ |
ಓರ್ವ ದನುಜನೆಯ್ದಿ ಮುನಿಗುಪಸರ್ಗಮ | ನುರ್ವಿಹೆದರೆ ಮಾಡಿದನು || ೫ ||

ಅತಿಮಥಯಿಸಲು ಮಾಣಿಕಕುತ್ತಮಕಾಂತಿ | ಯುತುಪತಿಯಾಗುವಂದದೊಳು |
ಮತಿಹೀನ ಮಾಡಿದ ಬಾಧೆಯನಾಂತಾ | ಯತಿಗೆ ಶುಕ್ಲಧ್ಯಾನಮಾಯ್ತು || ೬ ||

ಆ ನಿರ್ಮಲಬೋಧೋದಯದೊಳು ದೇ | ವಾನಿಕಮಿರದಲ್ಲಿಗೆಯ್ದಿ |
ಅನಂದದೊಳಾಕರುಣಾಬ್ಧಿಚಂದ್ರನ | ನೂನಮಪ್ಪಾಭಕುತಿಯೊಳು || ೭ ||

ಸಾವಧಾನದಿನಾದೇವಪೂಜೆಯನಾ | ದೇವರ್ಕಳು ಮಾಡುತಿರಲು |
ಬೂವರನಂಧಕವೃಷ್ಣಿಯೈದಿನತಿ | ಭಾವಶುದ್ಧಿಯೊಳಾಬಳಿಗೆ || ೮ ||

ಗಂಧಕುಟುಯಹೊಕ್ಕಾಶುಕ್ಲಧ್ಯಾನ | ಸಿಂಧುವ ಪಾದಾಂಬುಜಕೆ |
ಗಂಧಮಾಲ್ಯಾದಿ ವಸ್ತುವನರ್ಚನೆಗೆಯ್ದ | ನಂದಕವೃಷ್ಣಿಭೂವರನು || ೯ ||

ಬಳಿಕ ತುಳಿಲುಗೆಯ್ದಿತೆಂದನೆಲೆದೇವ | ಮುಳಿದೀದನುಜನು ನಿಮಗೆ |
ಅಲಘುಬಾಧೆಯನೆಸಗಿದ ಕಾರಣವನು | ತಿಳಿವಂದದಿ ಪೇಳಿಮೆನಲು || ೧೦ ||

ಆ ಜಿನವರಪತಿಯಿಂತೆಂದನೆಲೆ ವಿಭು | ಈ ಜಂಬೂಧ್ವೀಪದೊಳು |
ರಾಜಿಪಭರತದೊಳಗೆ ಕಾಂಚಿಯೆಂಬೊಂದು | ರಾಜಧಾನಿಯುಮುಂಟಲ್ಲಿ || ೧೧ ||

ಹರದರಿಬ್ಬರು ಸೂರದತ್ತಸುದತ್ತರೆಂ | ಬುರುತರವಸ್ತುಸಂಯುತರು |
ಪರದುಗೆಯ್ವೆವೆಂದೊಂದು ದಿನಸದೊಳು | ಪರದೇಶಕೆ ಪೋದರವರು || ೧೨ ||

ಹಿರಿದು ವಸ್ತುವನು ಗಳಿಸಿ ಮುಗುಳ್ದಾಪುರ | ವರದಠಾಣೆಯದ ಸುಂಕಿಗರು |
ವರವಸ್ತುತತಿಯಕಂಡೊಡೆ ಬಲುಸಂಕವ | ನಿರದೆ ಬೇಡುವರೆಂದವರು || ೧೩ ||

ಪೊಳಲಹೊರೆಗೆಯೊಂದಿನಿಸು ದೂರದೊಳಿರ್ದ | ಹಳುವಿನ ಮಧ್ಯದೊಳೊಂದು |
ಮೆಳೆಯಹೊದರನೆತ್ತಿಯಾರತ್ನವನೆಲ್ಲ | ನೆಲದಿ ಹೂಳಿ ಹೋಗಲೊಡನೆ || ೧೪ ||

ಅಲ್ಲಿಗಂದೋರ್ವ ಧೀವರಕಳ್ಳ ಮುದ್ದುಗ | ಳಲ್ಲಿ ಕೊಯ್ವೆನೆಂದೆಯ್ದಿ |
ಸಲ್ಲೀಲೆಯಿಂದಾಮೆಳೆಯ ಹೊದರಮೂಲ | ದಲ್ಲಿರ್ದೊಡವೆಯ ಕಂಡು || ೧೫ ||

ಎನ್ನದು ಗಳಿಸಿದೊಡವೆಯೆಂಬವರನು | ಚೆನ್ನಾಗಿ ನಗುವಂದದೊಳು |
ಹೊನ್ನಕುಪ್ಪಿಗೆಯೊಳಿರಿಸಿ ಧಗಧಗಿಸುವ | ರನ್ನವನನೊಯ್ದನಿತ್ತ || ೧೬ ||

ಆ ಪಗಲಿನ ಮರುದಿನದೊಳವರು ಬಂ | ದಾಪೂಳಿಸೊಡಮೆಯಿಲ್ಲದಿರೆ |
ಏಪರಿಯೆಂದರಿಯದೆ ತಂತಮ್ಮೊಳು | ಕೋಪವತಾಳಿ ಮನದೊಳು || ೧೭ ||

ಒಬ್ಬರಮೇಲೊಬ್ಬರು ಸಂದೇಹಿಸಿ | ಪರ್ಬಿದಲೋಬತೆಯಿಂದ |
ಒಬ್ಬುಳಿಗೊಂಡು ಕೋಪದೊಳೀರ್ವರು ಮನ | ಸುಬ್ಬಿ ಕಲಹವ ಮಾಡಿದರು || ೧೮ ||

ಪಿರಿದೆನಿಸುವ ಹಚ್ಚಹಸಿಯ ಬಡಿಗೆಗೊಂಡು | ಹರದರೀರ್ವರು ಹೊಯ್ದಾಡಿ |
ಭರದೊಳು ಸತ್ತು ಮೊದಲನರಕದೊಳೊಗೆ | ದಿರದೆ ತಮ್ಮೊಳು ಹೋರುತಿರ್ದ || ೧೯ ||

ಅಲ್ಲಿಂದಿಳಿದು ಬಂದೊಂದು ಕುರಿಯ ಹಿಂಡಿ | ನಲ್ಲಿ ಮೇಷಗಳಾಗಿ ಜನಿಸಿ |
ಬಲ್ಲಿದವವಾಗಿ ಬೆಳೆದು ತಂತಮ್ಮೊಳು | ನಿಲ್ಲದೆ ಹೋರಾಟಗೆಯ್ದು || ೨೦ ||

ಕೋಡು ಮುರಿದು ಕೊರಲುಬಡಿದು ಒಡೆದು ಹಣೆ | ಯೋಡು ಕಿಬ್ಬರಿಗಳು ಬಿರಿದು |
ನೋಡುವ ಕಣ್ಣು ಕಳೆದು ಬೀಳ್ದೊಂದೊಂದ | ಕ್ಕೋಡದೆ ಕಾದಿಯುಳಿದವು || ೨೧ ||

ಗಂಗಾತೀರದ ತುರುಪಟ್ಟೆಯೊಳಗೆ ವೃಷ | ಭಂಗಳಾಗಿ ಸಂಜನಿಸಿ |
ಪಿಂಗದೆ ಕೋಪಾವೇಶದಿಂ ತಮ್ಮೊಳು | ಸಂಗರವನು ಮಾಡಿಯಳಿದು || ೨೨ ||

ಮರಣಮುಖದಿ ವೃಷಭಂಗಳು ಸಮ್ಮೇದ | ಗಿರಿಯ ಕೋಡುಂಗಲ್ಲಿನೊಳು |
ಉರುತಮಪ್ಪ ಮರ್ಕಟಮಾಗಿ ತಮ್ಮೊಳು | ಪಿರಿದು ಹೋರಟೆಯ ಮಾಡಿದವು || ೨೩ ||

ಒಂದರ ಕಡಿತಕ್ಕೊಂದನಿಸಂಜದೆ | ಒಂದಿದ ಕಡಿಗೋಪದಿಂದ |
ನಿಂದು ಕಾದಿ ಬೀಳ್ದಾಕೋಡಗದೊಳ | ಗೊಂದು ಮರಣಮನೆಯ್ದಿದುದು || ೨೪ ||

ಬಳಿಕೊಂದು ಬಲಿಮುಖ ಹರಣವ ಬಿಡುದಾ | ಗಳಿಗೆಯೊಳಾಗಸದಿಂದ |
ಇಳಿದು ಬಂದರು ಸುರಗುರು ದೇವಗುರುವೆಂಬ | ಕಲಿಲವಿಜಯಚಾರಣರು || ೨೫ ||

ಸದಮಲಬೋಧದಿನಾಸನ್ನಭವ್ಮನಿಂ | ತಿದು ತಪ್ಪದೆಂಬುದನರಿದು |
ಒದವಿದಕರುಣದಿ ತಮ್ಮ ಕಮಂಡಲ | ದುದಕಮನದಕೆ ಸೂಸಿದರು || ೨೬ ||

ಕಟ್ಟೊಲವಿಂದಲಿ ಕೊಡಲದ ಕೈಕೊಂಡು | ದಿಟ್ಟದರೆದು ಮುನಿಗಳನು |
ನಿಟ್ಟಿಸುತಿರೆ ಬಳಿಯೊಳು ಪಂಚಪದಗಳ | ನಿಟ್ಟರದರ ಕಿವಿಯೊಳಗೆ || ೨೮ ||

ಆ ಮಂತ್ರವ ಕೇಳಿದ ಸತ್ಪಲದಿಂದ | ಲಾ ಮರ್ಕಟಜೀವಮಿರದೆ |
ಆ ಮಹೀಧರದಿಂದ ಸೌಧರ್ಮಕಲ್ಪಕೆ | ಸಾಮಮಾಡದೆ ಲಂಘಿಸಿದುದು || ೨೯ ||

ಆ ಸಗ್ಗದೊಳು ಚಿಂತ್ರಾಂಗದವೆಸರಾಂತು | ಭಾಸುರಮಪ್ಪ ಭೋಗವನು |
ಆಸಕ್ತಿಯಿಂದುಂಡುಬಂದೀಭರತದೊ | ಳಾಸಿರವಡೆದ ಕಾಂಚಿಯೊಳು || ೩೦ ||

ಜಿತಸೇನನೆಂಬವನಿಪಗೆ ಸುಭದ್ರಾ | ಸತಿಗೆ ಸಾಗರಸೇನನೆಂಬ |
ಸುತನಾಗಿ ಬೆಳೆದು ಮಂಡಲಿಕಪದೊಳು ಸ | ನ್ನು ತನಾಗಿರ್ದೊಂದು ದಿವಸ || ೩೧ ||

ಆನಂದದಿಂದ ನಂದನಕೆಯ್ದಲಂತಲ್ಲಿ | ವಾನರಗಳು ಹೋರುತಿರಲು |
ತಾನವನೋಡಿ ಜಾತಿಸ್ಮರಣವು ಪುಟ್ಟಿ | ಯಾನದೆ ದೀಕ್ಷೆವಡೆದನು || ೩೨ ||

ಸಾವಧಾನದೊಳು ತಪಸುಗೆಯ್ದವನಾ | ಗ್ರೈವೇಯಕದೊಳಹಮಿಂದ್ರ |
ದೇವನಾಗಿ ದಿವ್ಯಸುಖವುಂಡು ಬಳಿಕೀ | ಭೂವಲಯದ ಮಧ್ಯದೊಳು || ೩೩ ||

ಜನನುತಮಪ್ಪ ಸುರಮ್ಮದೇಶದ ಪೌ | ದನಪುರದರಸು ಸುಸ್ಥಿರಗೆ |
ವನಿತೆ ವನಜಲೋಚನೆಗೆ ಲಕ್ಷ್ಮಿಣಿಗೆ ಸಂ | ಜನಿಸಿ ಸುಪ್ರತಿಷ್ಠವೆಸರ || ೩೪ ||

ಧರಿಸಿ ಸೂರ್ಯಾಸ್ತಮಾನಕಂಡು ವೈರಾಗ್ಯ | ವಿರದುದಯಿಸೆ ದೀಕ್ಷೆಗೊಂಡು |
ಉರುತರಮಪ್ಪ ದುರಿತವೆಲ್ಲವ ಪರಿ | ಹರಿಸಿ ಮತ್ತೀಪದವಡೆದ || ೩೫ ||

ಸೂರದತ್ತನೆಂಬ ಪರದನುನಾಮೀಗ | ಭೂರಮಣೀಶ ಕೇಳತ್ತ |
ಕ್ರೂರಹೃದಯ ಸುದತ್ತಮರ್ಕಟ ಸಂ | ಸಾರಸಾಗರದೊಳು ಮುಳುಗಿ || ೩೬ ||

ನರಿನಾಯಿಪಂದಿಪಾವುಡವೋತಿಪಲ್ಲಿಮೂ | ಗುರಿಮೂಷಕ ಮೊದಲಾದ |
ತಿರಿಕ ನಾರಕಗರಿಯೊಳು ಪುಟ್ಟಿ ತಿರ್ರನೆ | ತಿರುಗುತಿರ್ದೊಂದು ಜನ್ಮದೊಳು || ೩೭ ||

ಸುಲಲಿತವಹ ಸಿಂಧುತೀರದ ಋಷಿಪಳ್ಳಿ | ಯೊಳಗೆ ಮೃಗಾಯಣವೆಸರ |
ತಳೆದ ತಾಪಸಗೆ ವಿಶಾಖೆವೆಸರನಾಂತ | ಲಲನೆಗೆ ಸಂಭವಿಸಿದನು || ೩೮ ||

ಗೌತಮನೆಂಬ ಹೆಸರನುರೆ ತಳೆದುಮ | ತ್ತಾ ತಪದೊಳಗಾಚರಿಸಿ |
ಜ್ಯೋಯಿಷ್ಕನಾಗಿ ಸುದರ್ಶನವೆಸರನಾಂ | ತೀತನೀಗಭೂಪಾಲ || ೩೯ ||

ಹಿಂದಣಭವಬದ್ಧ ವೈರಮನೇ ಮನ | ದಂದು ಕೋಪಾಟೋಪದಿಂದ |
ಸಂದೇಹಮಿಲ್ಲದೆ ಘೋರೋಪಸರ್ಗಮ | ನಿಂದು ನಮಗೆ ಮಾಡಿದನು || ೪೦ ||

ಎಂದು ನುಡಿದ ಸುಪ್ರತಿಷ್ಠರ ನುಡಿಗೇಳಿ | ಸಂದ ಸುದರ್ಶನವ್ರತದ |
ಅಂದವರಿಂದ ಸುದರ್ಶನದನುಜನಾ | ನಂದದಿಂ ತಾಂ ತಾಳಿದನು || ೪೧ ||

ಎನಲಂಧಕವೃಷ್ಣಿಯಿಂತೆಂದನೆಲೆದೇವ | ನನಗೆ ನನ್ನಯ ಪೂರ್ವಭವದ |
ಮನದೆಗೊಂಡು ಪೇಳಿಮೆಂದು ಕೇಳಿದೊಡಾ | ಮುನಿನಾಥನಿಂತು ನುಡಿದನು || ೪೨ ||

ಸುರುಚಿರ ಕೌಶಲದೇಶದಯೋಧ್ಯಾ | ಪುರದೊಲು ವೈಶ್ಯವಲ್ಲಭನು |
ಉರುತರದಾನಿ ಜಿನೇಂದ್ರದತ್ತನೆಂಬ | ಪರದನು ಪೆಸರ್ವಡೆದಿರುತ || ೪೩ ||

ಒಂದು ದಿನಕೆ ನೂರು ಹೊನ್ನ ತೆಗೆದುಕೊಂಡು | ಬಂದು ಜಿನೇಂದ್ರಪೂಜೆಯನು |
ಸಂದ ಭಕುತಿಯಿಂ ದಿನಬಂಜೆಯಿಲ್ಲದಾ | ನಂದದಿ ಮಾಡಿಸುತಿಹನು || ೪೪ ||

ಈ ತೆರದಿಂ ಜಿನಪೂಜೆಯ ಮಾಡಿ ವಿ | ಖ್ಯಾತನಾಗಿರ್ದೊಂದು ಪಗಲು |
ಪ್ರೀತಿಯಿಂದ ಹಡಗಿನ ವ್ಯವಹಾರವ | ನಾತನು ಮಾಡಲೆಂದೆಣಿಸಿ || ೪೫ ||

ತನಗತಿಹಿತವನಪ್ಪಾ ರುದ್ರದತ್ತನೆಂಬ | ವನೋರ್ವಪಾರ್ವನ ಕರೆದು |
ದಿನಚರಿ ನೂರುಹೊನ್ನಿನ ಪೂಜೆಯ ಮಾಡಿ | ಸೆನುತಲಘುಪ್ರೀತಿಯಿಂದ || ೪೬ ||

ವರುಷ ಹನ್ನೆರಡಕೆ ತಕ್ಕವಿತ್ತಮನಾ | ಪರದವವನ ವಶಮಾಡಿ |
ಪರದುಗೆಯ್ವೆನೆಂದು ಪಡಗೇರಿಯತ್ಯಾ | ತುರದಿಂದವ ಪೋದನಿತ್ತ || ೪೭ ||

ಆ ವೈಶ್ಯಪತಿ ತನ್ನವಶವ ಮಾಡಿಕೊಟ್ಟರ್ಥ | ದೇವಸ್ವಮೆಂದು ಚಿತ್ತದೊಳು |
ಭಾಮಿಸದಾ ರುದ್ರದತ್ತನಾ ಪೊಳಲವೇ | ಶ್ಯಾವಾಸದೊಳಗನವರತ || ೪೮ ||

ನರರೆಲ್ಲದುರ್ಜನಿಪಂದದಿ ವೇಶ್ಯಾ | ತರುಣಿಯರ್ಗಾವಿತ್ತವನು |
ಪಿರಿದಾಗಿಕುಡುವ ದುರ್ವರ್ತನವನು ತ | ತ್ಪುರದ ತಳಾರರು ಕಂಡು || ೪೯ ||

ಇವನತಿಪಾತಕಿಯಿದ ಮೇಲೆ ಪಾರ್ವನು | ಇವಲ ಕೊಲ್ಲಲು ಬಾರದಿವನು |
ಅವನೀಸುರವಂಶಕೆ ಹೊರಗೆಂದು ಮ | ತ್ತವನೂರಿಂ ತಗುಳಿದರು || ೫೦ ||

ಪೊಲೆವಟ್ಟಾಪೊಳಲಿಂ ಪೊಗಮಡಿಸಿಕೊಂ | ಡಲಸದೊಂದಡವಿಯೊಳಿರ್ಪ |
ಕುಲಗೆಟ್ಟು ಬೇಡವಳ್ಳಿಯ ಹೊಕ್ಕಿರ್ದಾ | ಖಲನೊಂದಾನೊದು ಪಗಲು || ೫೧ ||

ವನಚರರೊಡಗೂಡಿಯಾ ನಗರಿಯ ಜೀವ | ದನವ ಕಳ್ದೊಯ್ವುತಮಿರಲು |
ಅನಿತರೊಳು ಪೌರರೆಲ್ಲ ಹುಯ್ಯಲು ಬಂದು | ಕನಲಿಕೊಂದರು ತನ್ನನಾಗ || ೫೨ ||

ಸಾವಹಡೆದು ಸಪ್ತಮನಕರದೊಳಗೆ | ದಾವರಿಸಿದ ದುಃಖವುಂಡು |
ಮೂವತ್ತುಮೂರುಸಮುದ್ರೋಪಮಾಯುಷ್ಯ | ತೀವೆ ಮತ್ತಲ್ಲಿಂದ ಬಂದು || ೫೩ ||

ಲವಣಜಲಧಿಯೊಳಗಾ ನಾರಕನು ಸಂ | ಭವಿಸಿ ತಿಮಿಂಗಿಳನಾಗಿ |
ತವೆಯದೆ ಪಾಪವನಿರದೆ ನೆರಪಿಕೊಂಡು | ಜನನಾಜ್ಞೆಯಿಂ ತಾನಳಿದು || ೫೪ ||

ಪಿರಿದು ದುಃಖಮನೀವ ಷಷ್ಪಮನರಕದೊ | ಳಿರದೊಗೆದಿಪ್ಪತ್ತೆರಡು |
ವರಸಾಗರೋಪಮಾಯುಷ್ಯವು ತಿರ್ವನ್ನ | ಬರ ಜೀವಿಸಿಯಲ್ಲಿ ಸತ್ತು || ೫೫ ||

ಆ ವನಧಿಯೊಳು ಮುಂಪೇಳ್ವಮೀನಾಗಿ ನಾ | ನಾವಿಧಮಪ್ಪಮೀನ್ಗಳನು |
ಓವದೆ ತಿಂದೈದನೆಯ ನರಕಬಿಲ | ದೋವರಿಯೊಳು ಸಂಜನಿಸಿ || ೫೬ ||

ಅದರೊಳು ಪದಿನೇಳರ್ಣಪೋಮಕಾಲ | ಪುದಿನ ದುಃಖಮನನುಭವಿಸಿ |
ಒದವದ ಮರಣದಿ ಮಾತಂಗರಿಪುವಾಗಿ | ಉದಯಿಸಿ ಬಹುಪಾಪವಡೆದು || ೫೭ ||

ಮರಣವಡದು ನಾಲ್ಕನೆಯ ನರಕವನು | ಸಾರಿ ಮತ್ತತಿ ದುಃಖವನು |
ಈರೈದು ಕಡಲನ್ನಮಪ್ಪಾಯುಷ್ಯವು | ತೀರುವನ್ನಬರುಂಡು ಸತ್ತು || ೫೮ ||

ಉರುತರದೃಷ್ಟಿವಿಷೋರಗನಾಗಿ ದು | ರ್ಧರಪಾಪಮನುರೆ ಹಡೆದು |
ಹರಣವ ಬಿಟ್ಟು ಮೂರನೆಯನರಕದೊಳು | ಭರವಸದಿಂ ಸಂಜನಿಸಿ || ೫೯ ||

ಏಳು ಸಮುದ್ರೋಪಮಾಯುಷ್ಯಂಬರ | ಹೇಳಬಾರದ ದಃಖದೊಳು |
ಆಳಿ ಮುಳುಗುತಿರ್ದು ಸತ್ತುಬಂದೊಂದು ಶಾ | ರ್ದೂಲನಾಗಿ ಸಂಜನಿಸಿ || ೬೦ ||

ಎಡೆವಿಡದತಿ ಹಿಂಸೆಯೊಳು ಜೀವಿಸಿ ಮತ್ತೆ | ಮಡಿದೆರಡನೆಯ ನರಕವ |
ಬಿಡದೆಯ್ದಿ ಮೂರು ಸಮುದ್ರೋಪಮಾಯುಷ್ಯ | ಉಡುಗುವನ್ನಬರಲ್ಲಿ ಬದುಕಿ || ೬೧ ||

ತನುವಬಿಟ್ಟೊಂದು ಗರುಡನಾಗಿ ಬಂದು ಸಂ | ಜನಿಸಿ ಜೀವಿಸಿಯಂಗವಳಿದು |
ಘನತರಮಪ್ಪ ದುಃಖವನಿರದುಂಡೊಂ | ದನೆಯ ನರಕದೊಳು ಪುಟ್ಟಿ || ೬೨ ||

ಒಂದು ಸಾಗರೋಪಮಾಯುಷ್ಯವನುಂಡು | ಹೊಂದಿ ಮತ್ತೀ ಭೂಮಿಯೊಳು |
ಒಂದಾನೊಂದು ಭೇರುಂಡವಿಹಗವಾಗಿ | ಕೊಂದು ಸಕಲ ಜೀವಿಗಳನು || ೬೩ ||

ಬಳಿಕಳಿದವನೀತಳದ ಕುಯೋನಿಗ | ಳೊಳಗೊಂದುಳಿಯದ ತೆರದಿ |
ತಳುವದೆ ಹುಟ್ಟಿ ಸಾವುತ ಭವವನದೊಳು | ತೊಳಲುತ ದುರಿತೋಪಶಮದಿ || ೬೪ ||

ಕುರುಜಾಂಗಣವಿಷಯದ ಹಸ್ತಿನಾಪುರ | ವರದೊಳು ಗೌತಮಕುಲದ |
ಪಿರಿಯ ಕೌಶಿಷ್ಟಮನೆಂಬೋರ್ವ ಮುನಿಗೆ ಸೌಂ | ದರಿಯೆಂಬಳವನಲ್ಲಭೆಗೆ || ೬೫ ||

ಜನಿಸಿ ಸ್ರುಗೌತಮವೆಸರಾಂತು ನೆರೆಬೆಳೆ | ವನಿತರೊಳಗೆ ತಾನೆಸಗಿದ |
ಘನಪಾಪಫಲದಿಂದ ಜನನೀಜನಕ ಬಂಧು | ಜನಮೆಲ್ಲ ಜವಪುರಕೈದೆ || ೬೬ ||

ಉಡಲಿಲ್ಲುಣಲಿಲ್ಲದರಿಂದುದರಾಗ್ನಿ | ಯೊಡಲ ಸುಡಲು ಒಗ್ಗೆರೆಯ |
ಹಿಡಿದು ಪುರದಕೇರಿಗಳೊಳು ಭಿಕ್ಷವ | ಕೊಡಿಯೆಂದು ಬೇಡುತಮಿರಲು || ೬೭ ||

ಧರಿತವಶದಿ ತನಗಾರು ಭಿಕ್ಷವ ಕೊಡ | ದಿರಲಾಪುರದ ತಿಪ್ಪೆಯೊಳು |
ಸುರಿದೆಂಜಲುಗೂಳುಗಳನಾಯ್ದು ತಾನುಣು | ತಿರಲಾಗ ಕಂಡಕಂಡವರು || ೬೮ |

ಮನುಜರೂಪಿನ ಪಂದಿಯಿತಿದೆನುತ ಪುರ | ಜನಮೆಲ್ಲ ದಿಡಿದೊಣ್ಣೆಗೊಳಲು |
ಘನತರಮಪ್ಪ ಭೀತಿಯೊಳೋಡಿಯೊಂದೆಡೆ | ನಿಲಲಿನಿತರೊಳಪುರಕೆ || ೬೯ ||

ಕಾನನದಿಂದ ಚರಿಗೆಗೆಂದು ಸಾಗರ | ಸೇನನೆಂಬೋರ್ವ ಮುನೀಶ |
ಭೂನುತಬರಲನಾಸ್ರುಗೌತಮ ಕಂಡು | ಮಾನದಸೊಳಗಿಂತು ನುಡಿದ || ೭೦ ||

ಜಗದಬಡವರೊಳಗಾನೆ ಬಡವನೆಂದು | ಬಗೆದಿರ್ದೆನೆನ್ನಿಂದಮಿವನು |
ಮಿಗಿಲಾದ ಬಡವನಗಿವನೆಯಿವನನೀ | ನಗರಿಯವರು ಕಾಣುತವೆ || ೭೧ ||

ಎನ್ನ ಕೊಲಲು ತೆರದಿಂದೀ ಪಾಪಿಯ | ಚೆನ್ನಾಗಿ ಕೊಲ್ವರಂತದನು |
ತಾನೊಡೆಯ್ದಿನೋಡುವೆನೆಂದು ಮುನಿಪನು | ಬೆನ್ನೊಳವನು ಬರುತಿರಲು || ೭೨ ||

ಆ ನಗರಿಯ ವೈಶ್ರವಣವೆಸರಸೆಟ್ಟಿ | ಸಾನುರಾಗದೊಳಾಮುನಿಗೆ |
ಆನತನಾಗಿ ನಿಲಿಸಿ ನಿಜಗೃಹಕಾಗಿ | ತಾನೊಡಗೊಂಡೊಯ್ವುತಿರಲು || ೭೩ ||

ಈ ವಿಧವನು ಕಂಡಚ್ಚರಿಯಿಂ ನೆರೆ | ಭಾವಿಸುತಾ ಸ್ರುಗೌತಮನ |
ಆ ವರಮುನಿ ಕಂಡವನಘದುಪಶಾಂತ | ಭಾವವನವಧಿಯಿಂದರಿದು || ೭೪ ||

ಕಡುಮರುಕದಮನದಿಂದವನನು ಮನೆ | ಗೊಡೊಗೊಂಡು ಪೋಗಿಯನ್ನವನು |
ಕೊಡಿಸಲು ಕನಸಿನೊಳಗೆ ಕಂಡಿರಿಯೆನೆಂ | ಸೊಡಲೊಡೆವಂತುಂಡು ಬಳಿಕ || ೭೫ ||

ಆ ವರ್ಣಿಯ ಬೆನ್ನಬಿಡದನುದಿನ ತನ್ನ | ಜೀವವ ಹೊರೆವುತಮಿರ್ದು |
ಅ ಉತ್ತಮಮಪ್ಪರೂಪ ಧರಿಪೆನೆಂಬ | ಭಾವನೆಯವಗೆ ಪುಟ್ಟಿದುದು || ೭೬ ||

ಅದನಾಮುನಿಪತಿಯವಧಿಬೋಧದಿನರಿ | ದೊದವಿದ ಕಾರುಣ್ಯದಿಂದ |
ಸದಮಲತರಮಪ್ಪ ಜಾತರೂಪವನು ಸಂ | ಮುದದಿನವಗೆ ಪಾಲಿಸಿದನು || ೭೭ ||

ಶ್ರೀಗೌತಮನೆಂಬ ಹೆಸರನವಗೆ ಕೊಡ | ಲಾಗ ಕೊಂಡಾ ಸುವ್ರತವನು |
ಚೀಗೆಮಾಡದೆ ಪಲಕಾಲ ತಪಸುಗೆಯ್ದು | ನೀಗಿದನಾ ಮುನಿ ತನುವ || ೭೮ ||

ಈ ವಿಧದಿಂ ತನುವನು ಬಿಸುಟಾನವ | ಗ್ರೈವೇಯಕದೊಳು ಸಂಜನಿಸಿ |
ತೀವಿದಪ್ಪತ್ತೆಂಟುಸಾಗರೋಪಮಕಾಲ | ವೋವದೆಯಹಮಿಂದ್ರನಾಗಿ || ೭೯ ||

ಸುರಿಚರಮಪ್ಪ ಸುಖವನುಂಡುದ ಪರಿ | ಹರಿಸಿಯಿಂತಪ್ಪ ಸಿರಿಯನು |
ಧರಿಸಿಯಂಧಕವೃಷ್ಣಿಭೂಪನೀನದೈ | ಯುರುಸುಕೃತದಫಲದಿಂದ || ೮೦ ||

ಎಂದು ಪೇಳಲು ತನ್ನ ತನುಜಾತರು ಹತ್ತು | ಮಂದಿ ಕುಮಾರರ ಭವವ |
ಕಂದರ್ಪವಿಜಯಂ ಬೆಸಸಿಮೆನಲವರಿಂ | ತೆಂದು ನುಡಿದರಸನೊಳು || ೮೧ ||

ಭರತಭೂತಳದಾವಿನಿತಾರ್ಯಖಂಡದ | ಸುರುಚಿರಮಲಯದೇಶದೊಳು |
ಪುರಮೊಪ್ಪುತಿಹುದು ಭದ್ರಿಳಮೆಂಬುದದನಾಳ್ವ | ಧುರಧೀರ ಘನರಥನೃಪತಿ || ೮೨ ||

ಅದರೊಳು ಧನದೇವನೆಂಬ ವಣಿಕ್ಪತಿ | ಮದನಸದೃಶನಿಹನವಗೆ |
ಸದಮಲಶಶಿನಿಭಮುಖಿ ನಂದೆಯೆಂಬೋರ್ವ | ಸುದತಿ ರಂಜಿಸುವಳಂತವರ್ಗೆ || ೮೩ ||

ತನುಜರು ಧನದೇವ ಧನದತ್ತ ಜಿನದೇವ | ಜಿನಪಾಲನರ್ಹದ್ದತ್ತ |
ಜಿನದತ್ತನರ್ಹದ್ದಾಸನು ಪ್ರಿಯದತ್ತ | ಮನಧರ್ಮರುಚಿಯೆಂಬುವರು || ೮೪ ||

ಜನಿಯಿಸಿಲವರಂತರದೊಳು ಪ್ರಿಯದರು | ಶನೆ ಜ್ಯೇಷ್ಠೆಯೆಂಬೊಂದು ಹೆಸರ |
ವನಿತೆಯರುದಿಯಿಸಿ ಜನನೀಜನಕರಿಗೆ | ಯನುರಾಗವನು ಮಾಡಿತಿರಲು || ೮೫ ||

ದಿನವೊಂದರೊಳೋರ್ವಮುನಿಯಾ ನಗರಿಯ | ಬನಕೆ ಬರನು ಧನದೇವ |
ಅನುರಾಗದಿಂ ತನ್ನ ಮಕ್ಕಳ ನಿಜಜನ | ವನಿತೆಸಹಿತ ನಡೆತಂದು || ೮೬ ||

ಮುನಿಗಳಿಗೆರಗಿ ಸದ್ಧರ್ಮದ ತೆರನನು | ಘನಮಾಗಿ ಕೇಳಿ ನಿರ್ವೇಗ |
ಮನದೊಳು ಜನಿಯಿಸಲವರೆಲ್ಲರಗೂಡಿ | ಜಿನದೀಕ್ಷೆಯ ಧರಿಯಿಸುತ || ೮೭ ||

ಸಂದ ಸುಖಮನೀವ ಮುಕ್ತಿಗೆ ಧನದೇವ | ನಂದು ಪೋದನು ಬಳಿಕಿತ್ತ |
ಮುಂದಣಭವಕೀ ಮಕ್ಕಳು ಸುತರಾಗ | ಲೆಂದು ನಿದಾನವ ಮಾಡಿ || ೮೮ ||

ಧನದೇವನಬಲೆ ಸುನಂದೆ ಮಕ್ಕಳುಗೂಡಿ | ಜನನುತಮಪ್ಪ ತಪವನು |
ಅನುಮುದದಿಂ ಮಡಿ ತಾಮೆಲ್ಲರಳಿದಾ | ಘನತರ ಸೌಖ್ಯಮನೀವ || ೮೯ ||

ಪರಿಮೂರನೆಯಾನತಕಲ್ಪದೊಳು ಪುಟ್ಟಿ | ವಿದಿತಸುಖವನಿಪ್ಪತ್ತು |
ಉದಧಿಸಮಾನಾಯುಷ್ಯಂಬರಮುಂ | ದೊದವಿದಾಯುಷ್ಯವು ತೀರೆ || ೯೦ ||

ಧನದೇವನಬಲೆ ಸುನಂದೆಯಲ್ಲಿಂ ಬಂದು | ನಿನಗೆ ಸುಭದ್ರವೆಸರಿನ |
ವನಿತೆಯಾದಳು ಮತ್ತವಳ ಬಸಿರೊಳುಂ | ದಿನ ನವನಂದನರೆಯ್ದಿ || ೯೧ ||

ಅಂಬುಧಿವಜಯನಾದಿಯ ಸುಕುಮಾರಕ | ರೊಂಬತ್ತುಮಂದಿ ಪುಟ್ಟಿದರು |
ಬಿಂಬಾಧರೆಯಾ ಪ್ರಿಯದತ್ತೆಯ ಜ್ಯೇಷ್ಠೆ | ಯೆಂಬವರಲ್ಲಿಂದ ಬಂದು || ೯೨ ||

ಕೊಂತಿ ಮಾದ್ರೆಯರೆಂಬ ಸುತೆಯರಾದರು ಭೂ | ಕಾಂತ ಕೇಳಂಧಕವೃಷ್ಣಿ |
ಇಂತಿದಿವರ ಜನ್ಮ ವಸುದೇವನ ಜ | ನ್ಮಾಂತರವನು ಪೇಳ್ವೆವಿನ್ನು || ೯೩ ||

ಅಗ್ರಮೆನಿಪ ಕುರುಧರೆಯ ಪಲಾಶಕೂ | ಟಗ್ರಾಮದೊಳು ವೇದಶಾಸ್ತ್ರ |
ಸುಗ್ರೀವನು ಸೋಮಶರ್ಮನೆಂದೆಂಬ ಗು | ಣಾಗ್ರಣಿ ಪಾರ್ವನೊಪ್ಪಿದನು || ೯೪ ||

ಆ ನುತಗುಣಿ ಸೋಮಶರ್ಮಗಗ್ಗಿಲೆಯೆಂಬ | ಮಾನಿನಿಯೆಸೆದಿಹಳವರ್ಗೆ |
ಸೂನು ಜನಿಸಿದನು ನಂದಿಯೆಂಬೋರ್ವನ | ನೂನಪಾಪೋಪಾರ್ಜಿತನು || ೯೫ ||

ಕೆಟ್ಟಪಾಪಿಯು ಸಂಜಿನಿಸಲವರು ರೋಗ | ವಟ್ಟಾ ಅಗ್ಗಿಯೊಡನೆ |
ಹುಟ್ಟಿದಣ್ಣನು ದೇವಶರ್ಮಗಾ ಮಗುವನು | ಕೊಟ್ಟು ಬಳಿಕ ಸತ್ತರಿತ್ತ || ೯೬ ||

ಮುದದಿಂದ ಸಾಕಿಯವಗೆ ತನ್ನಣುಗಿಯ | ಮದುವೆಯ ಮಾಡುವೆನನಲು |
ಅದನರಿದವನ ಕುರೂಪಿಗವಳ ತಾ | ಯೊದವಿದ ಹೇಸಿಕೆಯಿಂದ || ೯೭ ||

ಆ ಮಗಳನು ತನ್ನ ಗಂಡನರಿಯದಂತೆ | ಸಾಮವ ಮಾಡದೆಯವಳು |
ಕಾಮಸದೃಶನೋರ್ವ ಪಾರ್ವನ ತನುಜೆಗೆ | ಪ್ರೇಮದಿ ಮದುವೆ ಮಾಡಿದಳು || ೯೮ ||

ತನ್ನ ವಿದ್ರೋಪಿಗೊಡಂಬಡದಾ ಹೆಣ್ಣ | ನನ್ನಿಗಗಿತ್ತರೆಂಬುದಕೆ |
ತನ್ನ ತಾನೇ ಹೇಸಿಯಾನಂದಿಮನದೊಳು | ಖಿನ್ನನಾಗಿರಲದನರಿದು || ೯೯ ||

ಆ ದೇವಶರ್ಮನು ತನ್ನ ಕಿರಿಯ ಮಗ | ಳಾದೊಡಮಾನಿನಗೀವೆ |
ಖೇದವೇತಕೆ ಮನದೊಳಗೆಂದಳಿಯನ | ಸಾದರದಿಂದೊಡಂಬಡಿಸೆ || ೧೦೦ ||

ಅದನರಿದಾ ಹೆಣ್ಣನ್ನನೀ ಪಾಪಿಗೆ | ಮದುವೆ ಮಾಡಿದ ಮರುದಿನವೆ |
ಅದಿರದೆ ದುರ್ಮರಣವ ಮಾಡಿಕೊಂಬೆನೆಂ | ದೊದವಿದ ಚಿಂತೆಯೊಳಿರಲು || ೧೦೧ ||

ಒಂದು ದಿವಸ ಬಿಸಿಲೊಳು ಪೋಗಿ ಬಲುಹುರು | ಪೊಂದಿದ ಮೈಯೊಳು ಬೆಮರು |
ನಿಂದು ಕನಿತುಮಿಗೆ ಮಲವುಣ್ಮಲಾ ಕ | ಣ್ಣಿಂದ ಸುರಿವ ಜಾರಿನಿಂದ || ೧೦೨ ||

ಕೊರಟುದಲೆಯ ಕೊಳೆನಾರುವ ಕಬ್ಬಾಯ | ಸುರುಟುಕಿವಿಯ ಸುಂಠಿವೆರಲು |
ಕಿರಿದುಕಿನಿಕೆ ಹತ್ತಿದ ಹಲ್ಗಳುಡುಗಿದೊಂ | ದುರದ ಕುನಂಗಿದಬೆನ್ನ || ೧೦೩ ||

ಬತ್ತಿದ ಬಡಪೊರವಾರ ಬಲ್ಸೆರೆಸುತ್ತಿ | ಹತ್ತಿದ ಹಿಳ್ಳೆಗಾಲುಗಳ |
ಕೊತ್ತಿಗಣ್ಗಳ ಕೋತಿಮುಸುಡಿನ ಚಪ್ಪಡೆ | ವೆತ್ತು ನಡೆವ ಹೆಜ್ಜೆಯಿಂದ || ೧೦೪ ||

ಬಾತಕೆಕ್ಕೆಯ ಬಲುಮಕ್ಕರಿ ಹೊಟ್ಟೆಯ | ಓತಿದಲೆಯ ಕೀನಿದನಿಯ |
ನಾತವಡೆದ ತನುವನಳ್ಳಿಮೂಗಿನ ಭೂತವೆ ನಡೆತಪ್ಪಂತೆ || ೧೦೫ ||

ಮನೆಗೆ ಬರಲು ಕಂಡಾ ವಿದ್ರೂಪಿಗೆ | ಮನದೊಳುಮಿಗೆ ಕೊಕ್ಕರಿಸಿ |
ಘನಮಾಗಿ ಕಾರುವ ಕನ್ಯಕಿಯನು ಕಂಡು | ಜನಕನವಳ ಸಂತೈಸಿ || ೧೦೬ ||

ಹೊಳೆಗೆ ಪೋಗಿ ಮೈಮಂಡೆಯ ಹಸನಾಗಿ | ತೊಳೆದು ತಿರುಗಿಬರಹೇಳಿ |
ಹಳೆಯ ಬೆಣ್ಣೆಯ ತಲೆಗಿಟ್ಟರಿಸಿನವನು | ತಳಿದೊಂದರುವೆಯ ಹೊದಿಸಿ || ೧೦೭ ||

ಕಳುಹೆ ಬರುತ್ತಿರಲಾ ಊರೊಳಗೋರ್ವ | ರುಳಿಯದೆಲ್ಲರು ಕೂಡಿಕೊಂಡು |
ಬಳಸಿಯಾಡುವ ಬೀದಿಯನಾಟಕವನು ಕ | ಣ್ಣೆಳಿಸಿ ನಿರೀಕ್ಷಿಸುತಿರಲು || ೧೦೮ ||

ತಾನದನೀಕ್ಷಿಪೆನೆಂದು ಬರುತ್ತಿರ | ಲಾ ನೆರವಿಯೊಳೋರ್ವ ಕಂಡು |
ಆ ನವವಿಧಜೋಹಮನೋಡಿ ನೀವೆಂದು ತಾನತಿ ಹಾಸ್ಯಮನಾಡೆ || ೧೦೯ ||

ಭರದಿನೆಲ್ಲರು ತಗುಳಲು ಪೋಗಿ ತಾನೊಂದು | ಮರನೇರಿ ನೋಡುತಮಿರಲು |
ಉರಿವ ಬಿಸಿಲುತಾಗಿಯಾಮಂಡೆಯ ಬೆಣ್ಣೆ | ಕರಗಿ ಕನಿತು ನೋಡುವವರ || ೧೧೦ ||

ಮಂಡೆಯ ಮೇಲೆ ಹನಿತು ಬೀಳಲಂತಹ | ಕಂಡು ಹೇಸಿ ಡಾಣಿಯಿಂದ |
ಕಂಡಕಂಡವರಿಡಲಿಳಿದಲ್ಲಿಂ ಕಾಲು | ಗೊಂಡೋಡೆ ಕಡುಲಜ್ಜೆಯಿಂದ || ೧೧೧ ||

ಆರೆನ್ನಬೈದೊಡಮಾರೆನ್ನ ಕೊಂದೊಡೆ | ಬಾರಿಪರಾರನು ಕಾಣೆ |
ಕ್ರೂರಕರ್ಮಿ ನನಗಿಂತಪ್ಪ ಸಂಸಾರ | ದಿನವೇಕೆಂದೋಡಿಬಂದು || ೧೧೨ ||

ಒಂದಡವಿಯ ಹೊಕ್ಕಲ್ಲಿಂ ಬೀಳುವೆನೆಂ | ದೊಂದು ಕಮ್ಮರಿಯನು ಏರಿ |
ನಿಂದು ಕೆಳಗೆ ನೊಡಿ ಚಕಿತಹೃದಯನಾಗಿ | ನಿಂದು ನಿದಾನಿಸುತಿರ್ದನವನು || ೧೧೩ ||

ಅಂತಕನವನ ವಿದ್ರೂಪಿಗೆ ಹೇಸಿಕೆ | ತಂ ತಾಳಿಯೊಳಕೊಂಡುದಿಲ್ಲ |
ಅಂತಲ್ಲದೊಡೆ ತನ್ನ ಸಾವಿಗೆಣಿಸಿಯವ | ನಂತರವನು ಮಾಡುವನೆ || ೧೧೪ ||

ಆ ಗುಂಡಿನಡಿಯೊಳು ಕೈಯಿಕ್ಕಿ ನಿಜತತ್ತ್ವ | ಯೋಗನಿಷ್ಠಾಪರರಾಗಿ |
ಯೋಗಿಯುಗರಮಿರಲಲ್ಲಿಯವನ ನೆಳ | ಲಾಗ ಬೀಳಲು ದಿಟ್ಟೆದೆರೆದು || ೧೧೫ ||

ಹಿರಿಯಾತ ಶಂಖನೆಂಬಾಮುನಿತಿಲಕನಾ | ತರುಣನಿರ್ನಾಮಿಕನೆಂಬ |
ವರಿಶಿಷ್ಯಮುನಿಗೆಂತೆಂದನೀ ನೆಳಲಾತ | ನಿರದೆ ನಮಗೆ ಮೂರುಭವಕೆ || ೧೧೬ ||

ತಂದೆಯಾಗುವನಿದು ನೆಲೆಯೆಂದಲ್ಲಿಂ ಬಂದು ಕಮ್ಮರಿಯನು ಏರಿ |
ನಿಂದಿರ್ದಾನಂದಿಯನೆಯ್ದಿಯವನೊಳಿಂ | ತೆಂದರು ಹಿತವಾಕ್ಯದಿಂದ || ೧೧೭ ||

ಏಕಿಲ್ಲಿ ನಿಂದಿರ್ದಪೆಯೆನೆ ಕೇಳ್ದಾ | ವ್ಯಾಕುಲನಾ ಪ್ರಪಂಚವನು |
ಆ ಕಂತುಹರರೊಳು ನುಡಿಯಲಿಂತೆಂದರು | ಲೋಕೈಕಹಿತಮಪ್ಪ ನುಡಿಯಂ || ೧೧೮ ||

ಎಲೆ ನಂದಿ ನಮ್ಮ ರೂಪನು ನೀನು ತಳೆದೊಡೆ | ಸುಲಲಿತಮಪ್ಪ ಸೌಭಾಗ್ಯ |
ಸೆಲೆದೊರಕುವುದು ನಿಶ್ಚಯಮೆನೆ ಕೇಳ್ದದ | ನಲಸದೆ ಕೈಕೊಂಡು ಬಳಿಕ || ೧೧೯ ||

ಮುನಿಗಳವರು ಪಾಲಿಸಿದ ಸುವ್ರತವನು | ಇನಿಸುಮೀರದೆ ಬಗೆಗೊಂಡು |
ದಿನಚರಿಯದರೊಳು ನೆಗಳಿ ಸನ್ಯಸನದಿ | ತನುವ ವಿಸರ್ಜನೆಗೆಯ್ದು || ೧೨೦ ||

ತುಂಬಿದ ಸೌಖ್ಯವನೀವ ಮಹಾಶುಕ್ರ | ವೆಂಬ ಸಗ್ಗದೊಳು ಸಂಜನಿಸಿ |
ಇಂಬಾದ ಈರೆಂಟಿಬ್ದೋಪಮಾಯುಷ್ಯ | ತುಂಬುವನ್ನತಿ ಸುಖವುಂಡು || ೧೨೧ ||

ಬಂದೀಗಂಧಕವೃಷ್ಣಿ ನೃಪತಿನವ | ಕಂದರ್ಪ ನಿನ್ನಗರ್ಭದೊಳು |
ಸೌಂದರ್ಯಯುತನಾಗಿ ವಸುದೇವವೆಸರಾಂತು | ನಂದದನಾಗಿ ಪುಟ್ಟಿದನು || ೧೨೨ ||

ಎನಲು ತನಗೆ ಮನದೊಳು ವೈರಾಗ್ಯ ಸಂ | ಜನಿಸಿ ಜಿನಪನಂಘ್ರಿಗೆರಗಿ |
ಮನೆಗೆಯ್ದು ಶರಧಿವಿಜಯಗೆ ಭೂಭಾರಮ | ನನುಮುದದಿಂ ಹೊರಿಸಿದನು || ೧೨೩ ||

ನರಪತಿಯೊಡನೈನೂರ್ವರರಸುಗಳು | ವೆರಸಿಯಂಧಕವೃಷ್ಣಿನೃಪತಿ |
ಗುರುಸುಪ್ರತಿಷ್ಠರ ಕೈಯಿಂದ ದೀಕ್ಷೆಯ | ಧರಿಸಿ ಮುಕ್ತಿಯನೆಯ್ದಿದನು || ೧೨೪ ||

ವೀರನುದಾರಸುತ್ತಮಶುಚಿ ಘನಗಂ | ಭೀರನುತ್ತಮಬೋಧಯುತನು |
ಚಾರುಚರಿತ್ರೆನೆಯ್ದಿದನು ಮುಕ್ತಿಯನಾ | ಮಾರಮದಾಪಹರಣವನು || ೧೨೫ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದವಿದ ಸಂಧಿಗಳೇಳು || ೧೨೬ ||

ಏಳನೆಯ ಸಂಧಿ ಸಂಪೂರ್ಣಂ