ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಮಾನಿತಮಾದೀಯಂಗದೇಶದ ರಾಜ | ಧಾನಿ ಚಂಪಾನಗರಿಯೊಳು |
ಭೂನುತವಿಕ್ರಮಿ ವಿಮಲವಾಹನನೆಂಬ | ಮಾನವೇಂದ್ರನು ಸುಖಮಿರಲು || ೨ ||

ಆ ನಗರಿಯೊಳಿಭ್ಯಕುಲಚೂಡಾಮಣಿ | ಭಾನುದತ್ತನೆಂಬ ಪರದ |
ಮಾನಿನಿ ದೇಯಿಲೆಯೆಂಬಳವಳ ಕೂಡಿ | ಸಾನಂದದೊಳಿರುತಿಹನು || ೩ ||

ಒಂದು ದಿವಸ ಕುಸುಮಿತೆಯಾಗಿ ನಾಲ್ನೀರ | ಮಿಂದು ಪತಿಯ ಸೂಳ್ಗೆವಂದು |
ಕಂದರ್ಪಕೇಳಿಯೊಳಾದೇಯಿಲೆಯ | ರ್ದಂದಿನ ಕಡೆಯ ರಾತ್ರಿಯೊಳು || ೪ ||

ಕರುಣದಿ ಚಾರಣಪರಮೇಷ್ಠಿಗಳು ತನ್ನ | ಕರದೊಳಗೊಂದು ಮಾಣಿಕವ |
ಇರಿಸಿದುತ್ತಮಮಪ್ಪ ಕನಸುಗಂಡಾನಿದ್ರೆ | ಹರೆದು ಹಿರಿದು ಸುಖಮಿರಲು || ೫ ||

ಕೆಲವು ದಿವಸದೊಳು ಗರ್ಭೋದಯಮಾಗೆ | ಸುಲಲಿತಮಪ್ಪ ಲಗ್ನದೊಳು |
ಅಲರ್ಗಣೆಯನ ಸಿರಿ ಹಡೆವಂತೆ ಹಡೆದಳು | ಲಲಿತಾಂಗನನೋರ್ವನನು || ೬ ||

ಚಾರಣರುಗಳು ರತ್ನವ ಕನಸಿನೊಳಿಟ್ಟ | ಕಾರಣದಿಂದಾಸಿಸುಗೆ |
ಚಾರುದತ್ತನೆಂಬಭಿಧಾನವಿತ್ತನು | ಚಾರುಮೂರ್ತಿಯು ಭಾನುದತ್ತ || ೭ ||

ಆ ಊರೊಳಗೈವರು ವೈಶೋತ್ತಮ | ರ್ಗಾವೇಳೆಯೊಳು ಪುಟ್ಟಿದರು |
ಭೂಮಿಶ್ರುತರೈವರು ಸುಕುಮಾರರು | ಕಾವನಕಣೆಗಳೆಂಬಂತೆ || ೮ ||

ಅವರೈವರನೊಡಂಬಡಿಸಿಯಾ ಮಕ್ಕಳ | ಸವಿನಯದಿಂ ಕೊಂಡುಬಂದು |
ತವಿಲಿಲ್ಲದ ಕೂರ್ಮೆಯಿಂದವೆ ತನ್ನಾತ್ಮ | ಭನನೊಳು ಜಾತಕರ್ಮನು || ೯ ||

ವಿರಚಿಸಿಯಾ ಭಾನುದತ್ತರಾಜಶ್ರೇಷ್ಠಿ ಹರಿಬಾಂಧವ ಗೋಮುಖನು |
ಮರುಭೂತಿಯುಂ ಪರಂತಪ ದೇವದತ್ತೆನೆಂ | ಬುರುನಾಮವನಿತ್ತನವರ್ಗೆ || ೧೦ ||

ಅತನುಸದೃಶ ಚಾರುದತ್ತನವರುಗೂಡಿ | ಸತತ ಸಕಲಕಲೆಗಳನು |
ಮತಿವಂತನಾಗಿ ಕಲಿತು ಜವ್ವನವಾಂ | ತತಿಶಯಕೀರ್ತಿವಡೆದನು || ೧೧ ||

ಚಾರು ಕಲಾಕುಶಲತೆಯಿಂದ ವಿನುತೋ | ದಾರತೆಯಿಂದ ರೂಪಿಂದ |
ಸಾರ ಸದ್ಗುಣದಿಂದ ಭೂರಿಭೂಷಣನಾಗಿ | ಜಾರುದತ್ತನೊಪ್ಪಿದನು || ೧೨ ||

ಒಂದಾನೊಂದು ದಿನದೊಳಾನಗರಿಯ | ಮುಂದಣ ಹೊಳೆಗೆಯ್ತಂದು |
ಮಿಂದಾಕೆಲದ ನಂದನದೊಳಗತ್ಯಾ | ನಂದದಿ ವಿಹರಿಸಿ ಬಳಿಕ || ೧೩ ||

ಪುರಕೆ ತಿರುಗುವ ಸಮಯದೊಳಾ ವನಾಂ | ತರದೊಳಗೊಂದು ಸೂಲದೊಳು |
ಪಿರಿದಾಗಿ ಕೀಲಿಸಿಯರೆಜೀವನಮಾಗಿರ್ದ | ಪುರುಷನೋರ್ವನ ಕಂಡನಾಗ || ೧೪ ||

ಅವನ ದಿಟ್ಟಿಗಳಾಬಳಿಯೊಳು ಬಿದ್ದಿರ್ದ | ನವರತ್ನಮಯ ಖೇಟಕದೊಳು |
ಅವಿರಳಮಾಗಿ ಕೀಲಿಸಿನಿಂದಿರಲಾ | ಕುರವನಾಭಾವವನರಿದು || ೧೫ ||

ಆ ರತ್ನಮಯಖೇಟಕದ ಮಧ್ಯದೊಳೊಂದು | ಚಾರುಘಟಿಕೆ ಕೀಲಿಸಿರಲು |
ಚಾರುದತ್ತನು ಸುವಿವೇಕತನದಿನದ | ನಾರೈದು ತೆಗೆದುನೋಡಿದನು || ೧೬ ||

ಆ ಸರ್ವೌಷಧಿಯೆಂಬ ಘುಟಿಕೆವಿಡಿ | ದಾಸೂಲದ ಪುರುಷವನು |
ಓಸರಿಸದೆ ತಾನು ತೆಗೆವೆನುತ ಮುಟ್ಟು | ವಾಸಮಯಕೆ ತನ್ನತಾನೆ || ೧೭ ||

ಬಸಿದ ಸೂಲದೊಳಿರ್ದ ಕಂಠಗತಮಾ | ದ ಸಂದೇಹದೊಳು ಪೂರಯಿಸಿ |
ಮುಸುಕಿದ ಶಕ್ತಿಯೊಳಾಯೆಡೆಯಿಂ ಸಂ | ತಸದಿಂದಿಳಿತಂದನಾಗ || ೧೮ ||

ಉತ್ತಮ ನಿನ್ನ ಕರುಣದಿಂದ ಪುನರು | ತ್ಪತ್ತಿಯಾದುದು ನನಗೆಂದು |
ಚಿತ್ತಶುದ್ಧದೊಳು ಕೀರ್ತನೆಗೆಯ್ದಾಚಾರು | ದತ್ತಗೆ ವಿನಮಿತನಾಗಿ || ೧೯ ||

ಇನ್ನೀಜನ್ಮಕೆ ನೀನೇ ನಿಜಗುರು | ವೆನ್ನ ಮಾತಾಪಿತೃ ನೀನು |
ಇನ್ನಿದು ಸಂಶಯಮಿಲ್ಲೆಂದವನೊಳು | ತನ್ನ ತೆರನ ಪೇಳ್ದನಿಂತು || ೨೦ ||

ವಿಲಸಿತ ವಿಜಯಾರ್ಧಗಿರಿಯ ದಕ್ಷಿಣತಟ | ದೊಳಗೆ ಶಿವಂಕರವೆಂಬ |
ಪೊಳಲೊಳಮಿತಗತಿಯೆಂಬನಾನೆನ್ನ | ಲಲನೆ ಕಲಾವತಿಗೂಡಿ || ೨೧ ||

ಅನುರಾಗದಿಂದಿರಲವಳಿಗೆ ಸೋಲ್ತುವಂ | ಚನೆಯಿಂದೋರ್ವ ಖೇಚರನು |
ತನಗೆನಗೆರವಿಲ್ಲದಂತೆಯನ್ನೊಳು ಕೆಳೆ | ತನುವನುಮಾಡಿಕೊಂಡಿರ್ದು || ೨೨ ||

ಎನ್ನೊಡನಾಟಕೆ ಸಲವಾಗಿಯಾಖಳ | ತನ್ನ ರಾಜ್ಯವ ಬಿಟ್ಟುಬಂದು |
ಉನ್ನತಮಪ್ಪ ಕಪಟಸ್ನೇಹಿವನವ | ಚೆನ್ನಾಗಿ ಮಾಡುತಲಿರ್ದ || ೨೩ ||

ಇರಲಿಂತು ನಾನೀ ಚಂಪಾನಗರಿಯ | ವರಜಿನ ವಾಸುಪೂಜ್ಯರನು |
ಉರುಭಕ್ತಿಯಿಂ ಪೂಜಿಸಲೆಂದು ಬಂದಾ | ತುರದಿಂದಾ ಸತಿಸಹಿತ || ೨೪ ||

ಕಂದರ್ಪಹರನನರ್ಚಿಸಿ ಬಳಿಕತ್ಯಾ | ನಂದದಿಂದೀನಂದನವ |
ಕುಂದಲತಾಮಂಟಪದೋವರಿವೊ | ಕ್ಕಿಂದುವದನೆಯೊಡಗೂಡಿ || ೨೫ ||

ಸುರತಾಂತ್ಯಶ್ರಾಂತಿಯೊಳಾನು ಮೈಮರೆ | ದಿರಲಾಖಳನೆಯ್ತಂದು |
ಭರದಿಂದೆನ್ನಸೂಲದೊಳಿಕ್ಕಿ ಬಳಿಕ | ತರುಣಿಯ ಕಳ್ದೊಯ್ದನಿತ್ತ || ೨೬ ||

ಇನ್ನಿಲ್ಲಿ ನಾನೊಂದಿನಿಸು ತಡಮಾಡಿದೊ | ಡೆನ್ನವಿಪತ್ತಿಯೊಳಿರದೆ |
ತನ್ನ ಜೀವನವ ತೊರೆವಳು ನಿಜಾಂಗನೆ | ಸನ್ನುತ ಗುಣಗಳನಿಳಯ || ೨೭ ||

ಎನುತಾಚಾರುದತ್ತನ ಕೈಯಿಂ ಕಡು | ವಿನಯದಿಂದವೆ ಬೀಳ್ಕೊಂಡು |
ಇನಿಸುವೇಗದೊಳಾ ವಿದ್ಯಾಧರರಾಜ | ನನಿಲಪಥಕೆ ಪೋದನಿತ್ತ || ೨೮ ||

ಕೆಳೆಯರೈವರುಗೂಡಿಯಾಚಾರುದತ್ತನು | ಹೊಳಲ ಹೊಕ್ಕಾ ನಿಜಗೃಹಕೆ |
ತಳರಿ ಬಳಿಕ ವಿದ್ಯಾಭ್ಯಾಸಂಗಳ | ನುಳಿಯದೆ ಮಾಡುತಮಿಹನು || ೨೯ ||

ಈ ತೆರದಿಂದಿರೆ ಭಾನುದತ್ತನು ತನ್ನ | ಪ್ರೀತಿವಡೆದ ಮೈದುನನ |
ನೀತಿನಿಪುಣ ಸಿದ್ಧಾರ್ಥನೆಂಬನ ತನು | ಜಾತೆಮಿತ್ರಾವತಿಯೆಂಬ || ೩೦ ||

ಅಭಿನವರತಿದೇವಿಯನಂಗೋದ್ಭವ | ನಿಭಗೆ ಮದುವೆ ಮಾಡಿದನು |
ಶುಭತರಮಪ್ಪ ಲಗ್ನದೊಳಮರಾಧೀಶ | ವಿಭವದೊಳಿಳೆ ಪೊಗಳ್ವಂತೆ || ೩೧ ||

ಅತಿರೂಪಯುತ ಚಾರುದತ್ತಕುಮಾರನು | ವಿತತ ವಿದ್ಯಾಭ್ಯಾಸದೊಳು |
ಮತಿಯನಿಟ್ಟಾಸತಿಮಿತ್ರಾವತಿಯೊಳು | ಸತತಸುಖದೊಳಿಹುದಿಲ್ಲ || ೩೨ ||

ಅದರಿಂದಾಜವ್ವನೆಯೊಡಲೊಳು ಚಿಂತೆ | ಯೊದವಿರಲರಿದೊಂದು ದಿನದ |
ಉದಯದೊಳಾನಿಜಜನನಿ ಸೌಮಿತ್ರೆ ಸ | ಮ್ಮದವಳಿದೆವಳೆಡೆಗೆಯ್ದಿ || ೩೩ ||

ಬಣ್ಣಗೆಡದ ಬಂದುಗೆ ಹೂದುಟಿಯಲ | ರ್ಗಣ್ಣಂಜನರೇಖೆಬಿಡದ |
ಬಣ್ಣಿಸಿ ತೊಡೆದಂಗರಾಗವುದುರದೆಳೆ | ವೆಣ್ಣಮಾಣಿಕವ ನೋಡಿದಳು || ೩೪ ||

ಉಡೆನಿರಿಯೊಳಗಿಟ್ಟ ಮಣಿಕಾಂಚಯಕೀಲು | ಸಡಿಲದ ಮುಡಿಯಲರುಗಳ |
ಕಡುಸೊಗಯಿಸುವ ತಿಲಕವಚ್ಚಳಿಯದ | ಮಡಿದಮಣಿಯನೀಕ್ಷಿಸಿದಳು || ೩೫ ||

ನೇತ್ರಯುಗದ ಕಡೆಯೊಳು ಕೆಂಪುದೋರದ | ಚಿತ್ರವಡೆದ ನುಣ್ಗದಪಿನ |
ಪುತ್ರಕೆ ಭಂಗಮಾಗದ ಕಾಂಚನಶತ | ಪತ್ರಮುಖಿಯನನೀಕ್ಷಿಸಿದಳು || ೩೬ ||

ಅಳಿಕಳಭಾಕಳವಳಿದೊಳಿಳಿಯದ | ಬಳೆಯೊಡೆಯದ ತನುಲತಿಕೆ |
ಬಳಲದ ಬಲುಮೊಲೆಗಳು ಗುಜ್ಜುವಡೆಯದ | ಲಲಿತಾಂಗಿಯ ನೋಡಿದಳು || ೩೭ ||

ಕಂದರ್ಪಕೇಳಿಯ ಸುಖಮಿಲ್ಲಮೀಬಾಲೆ | ಗೆಂದು ಬಗೆವುತೆಲೆಮಗಳೆ |
ಅಂದು ನಿಮ್ಮತ್ತೆಯ ಮಾತುಗೇಳಿದದೆಸೆ | ಯಿಂದೆಗ್ಗರಾದೆವು ನಾವು || ೩೮ ||

ಎಂದು ತನ್ನತ್ತಿಗೆದೇಯಿಲೆಯೆಡೆಗೆ | ಯ್ತಂದೆಲೆಪಾತಕಿ ನಿನ್ನ |
ನಂದನ ಗತಿಭೋಗಿಗೆ ಎನ್ನ ಮಗಳನು | ತಂದು ಕೆಡಿಸುವುದು ಮತವೆ || ೩೯ ||

ಎನಲಾ ದೇಯಿಲೆಯಿಂದಳೆನ್ನಗ್ರ | ತನಯನುತ್ತಮನಾಯಕನು |
ವಿನುತ ವಿದ್ಯಾಭ್ಯಾಸದೊಂದಾತುರದಿಂದ | ಮನವನಿಕ್ಕನು ರತಿಸುಖಕೆ || ೪೦ ||

ಅದನೊಂದೆರಡು ದಿನದೊಳು ಮಾಣಿಸುವೆನಿಂ | ತಿದುನುರೆನಂಬುನೀನೆನುತ |
ಚದುರೆದೇಯಿಲೆ ತನ್ನಾ ನಾದುನಿಯನು | ಸದನಕೆ ಬೀಳ್ಕೊಟ್ಟು ಬಳಿಕ || ೪೧ ||

ತನ್ನ ವಲ್ಲಭ ಭಾನುದತ್ತನನುಜನ | ತ್ಯುನ್ನತವೇಶ್ಯಾಚಾರಿ |
ಸನ್ನುತ ರುದ್ರದತ್ತನನು ಕರೆದುಕೊಮಡು | ಮನ್ನಿಸಿ ನುಡಿದಳಿಂತೆಂದು || ೪೨ ||

ಚದುರರನ್ನನು ಚಾರುದತ್ತಗೆ ರತಿಯಿಚ್ಛೆ | ಯುದಯಿಪತೆರ ನಿನ್ನಿಂದ |
ಒದವುವುದದನೀನೆಸಗುವುದದಕೆಂದ | ನಿದಕೆ ಸಂಶಯ ಮಾಡಬೇಡ || ೪೩ ||

ಎರಡು ದಿನಕೆ ಚಾರುದತ್ತನ ನೀ ಪೇಳ್ದ | ಪರಿಯ ಮಾಡುವೆನೆನಲವಗೆ |
ಹರಿಸದಿ ಪಿರಿದು ವಸ್ತುವನಿತ್ತತ್ಯಾ | ದರವನುಸುರಿ ಬೀಳ್ಕೊಡಲು || ೪೪ ||

ಬಂದಾಮಹಿಮಗೆ ರುದ್ರದತ್ತನು ಮನ | ಸಂದು ಸಹಾಧ್ಯಾಯಿಯಾಗಿ |
ವಂದಿಸಿ ಮೇಳವ ಕೆಲದಿನಮಿರ್ದು ಮ | ತ್ತೊಂದಾನೊಂದುದಿನದೊಳು || ೪೫ ||

ಗಾಡಿವಡೆದ ನಮ್ಮೂರ ಸೊಬಗ ನೀ | ನೋಡುಬಾರೆಂದೊಡಂಬಡಿಸಿ |
ಕೂಡಿಕೊಂಡುಬಂದು ಪುರವರದೊಳಗಾ | ರೂಢಿವಡೆದ ಕೇರಿಯೊಳು || ೪೬ ||

ಹೂವಿನಂಗಡಿಗೊಂಡು ಕದಂಬದ | ಹೂವನಿರದೆ ಬೆಲೆಗೊಡುವ |
ಭಾವಕಿಯರ ಹಾವಭಾವಂಗಳನಾ | ಭಾವಜನಿಭಗೆ ತೋರುವನು || ೪೭ ||

ಸಿರಿಗಂಪನರೆದು ಮಾರುವ ಕೋಮಲೆಯರ | ಸುರುಚಿರಮಪ್ಪ ರೂಪವನು |
ಸುರನಿಭವನಾಚಾರುದತ್ತನಿಗತ್ಯಾ | ದರದಿಂದವೆ ತೋರುವನು || ೪೮ ||

ವರದ್ಯಾಧರವನಿತೆಯರಂದದಿ | ಕರುಮಾಡಂಗಳನೇರಿ |
ಹರಿಸದಿನಾಡುವ ನೃಪಸುತೆಯರನಾ | ಸ್ಮರಸದೃಶ್ಯಗೆ ತೋರಿಸುವನು || ೪೯ ||

ಕೇರಿಕೇರಿಯೊಳೆಡೆಯಾಡುವ ಬಿಡುವೆಣ್ಗ | ಳಾರಮ್ಯಮಪ್ಪ ರೂಪವನು |
ಮಾರನಮಧುರಾಕಾರನ ಗೆಲ್ವಾ | ಚಾರುದತ್ತಗೆ ತೋರುವನು || ೫೦ ||

ಧಾರುಣಿಪತಿಯೋಲಗಕೆಯ್ತಪ್ಪಾ | ವಾರಾಂಗನೆಯರ ಚೆಲ್ವ |
ಧೀರನುದಾರನುತ್ತಮಗುಣನಿಧಿಗಂ | ಭೀರಗೊಲಿದು ತೋರಿಸುವನು || ೫೧ ||

ಈ ತೆರದಿಂ ತಿರುಗಿಸುತೊಂದುದಿನ ಚಿತ್ತ | ಜಾತನರಾಜ್ಯದಂದದೊಳು |
ರೀತಿವಡೆದ ಸೂಳೆಗೇರಿಯನಾ ವಿ | ಖ್ಯಾತರೂಪನ ಹೊಗಿಸಿದನು || ೫೨ ||

ಕಂಡಮಾತ್ರದೊಳು ವಿರಕ್ತಜನಂಗಳ | ಕೊಂಡ ಸುವ್ರತವನು ಬಿಡಿಸಿ |
ಗಂಡುದೊಳ್ತಾಗಿಸುವಾಸೂಳೆಗೇರಿಗೆ | ಕೊಂಡೊಯ್ದನಕುಮಾರಕನ || ೫೩ ||

ಬೆಲೆವೆಣ್ಣ ಕೇರಿಗೆಯ್ದಿದನು ಸಖರಗೂಡಿ | ಒಲವಿನ ಬಗೆಬಿಟ್ಟಬೀಡ |
ಚೆಲುವಿನ ಬೆಳೆ ನಳನಳಿಸಿ ಬೆಳೆವ ಕಾಡ | ನಲರಂಬನೃಪನಾಳ್ವನಾಡ || ೫೪ ||

ಅತಿವೀತರಾಗವ್ರತದವರಿಗೆ ಮಾರಿ | ಆತನುಸೌಖ್ಯದ ಕೆರೆಯೇರಿ |
ರತಿಮುಕ್ತಿಗಿರದೆಯ್ದಿಸಲಿಕ್ಕಿದ ದಾರಿ | ನುತಮಾದುದಾ ಸೂಳೆಗೇರಿ || ೫೫ ||

ಹೊಸಮಿಸುನಿಯ ಹೊನ್ನಪಟ್ಟಶಾಲೆಗಳಿಂದ | ಮಿಸುಪ ರನ್ನದಲೋವೆಯಿಂದ |
ರಸಚಿತ್ರವೆಸದಿನೊಪ್ಪವ ಭಿತ್ತಿಗಳಿಂದ | ಹಸನಾದುದಾ ಕೇರಿಯಂದ || ೫೬ ||

ಒತ್ತೆಗೆನುತ ಬಂದಲ್ಲಿಲ್ಲಿನಿಂದಿರ್ದ | ವೃತ್ತಕುಚೆಯರ ಚೆಲ್ವಿಂದ |
ಚಿತ್ತವ ಸೆರೆಗೆಯ್ದಾ | ವಿಟಜನವೃಂದ | ವತ್ತಿತ್ತ ತೊಲಗದಲ್ಲಿಂದ || ೫೭ ||

ಮುತ್ತಿನ ತೋರುಮಣಿಯ ಭೂಷಣವಿಟ್ಟು | ಉತ್ತಮ ದೇವಾಂಗವುಟ್ಟು |
ಕತ್ತುರಿಪುಣುಗುಜವಾದಿಯನುಂಪಿಟ್ಟು | ಒತ್ತೆಗೆಯ್ದಿದರಳವಟ್ಟು || ೫೮ ||

ಪೊರ್ದದವರ ಮೈವಳಿಯೊಳೊಲಿಸಿಕೊಂಬ | ಪೊರ್ದಿದವರ ಸುಲಿತಿಂಬ |
ಬರ್ದಿನಬಲ್ಪಿನಿಂದಾ ಕೇರಿಯ ತುಂಬ | ಲಿರ್ದುದು ವಧೂನಿಕುರುಂಬ || ೫೯ ||

ನರಜನ್ಮ ಲೇಸು ಜವ್ವನ ಲೇಸರದೊಳು | ವರರೂಪು ಲೇಸು ಗಂಡರೊಳು |
ಸರಿಸೋಲ ಲೇಸು ಪೆಂಡಿರಿಗೆಂದೋರ್ವಳು | ಗರುವೆ ಗಿಳಿಯ ನುಡಿಸಿದಳು || ೬೦ ||

ಗರುವರಚಿತ್ತನೊಲಿಸಿಕೊಂಬಬಲೆಯ | ವರಗೃಹವಾಬಲಮುರಿಯ |
ಸುರಚಿರಶಂಖವ ಹೂಳಿದ ಭೂಮಿಯ | ಸರಿಕೇಳು ಸಖಿಯೀ ನುಡಿಯ || ೬೧ ||

ವರಗುಣಭೂಷಣವಿಲ್ಲದವಳ ಚೆಲ್ವು | ಪರಿಮಳವಿಲ್ಲದ ಪೂವು |
ಸುರುಚಿರಮಾದ ಸುಗ್ಗಿಯೊಳು ಬೆಳೆದ ಬೇವು | ಉರುರುದ್ರಭೂಮಿಯ ಮಾವು || ೬೨ ||

ಕೊಡುವ ಕೋವಿದ ವಿಟರುಗಳ ಹೃದಯವನು | ಕೆಡಲೀಯದೆ ಮೋಹವನು |
ಬಿಡದೊಡೆ ಬಿಡದೈಸಿರಿಯಾ ಪೆಣ್ಣನು | ಮಡಿದಿಮಣಿಯೆ ಕೇಳಿದನು || ೬೩ ||

ಸಿರಿಚಲ್ವುಜಾಣ್ಮೆಜವ್ವನವಿತರಣವನು | ಕರಿಸಿ ಒಲಿದ ಕಾದಲನನು |
ಹೊರೆಗಾಣಿಸದೆ ಒಲಿಯಬಲ್ಲವಳನು | ಅರಲಂಬನೇನಮಾಡುವನು || ೬೪ ||

ಪರಲೊತ್ತುವಮೊಲೆಯಿಂದೊಡವೆರೆದೆನು | ದೊರೆವೆತ್ತು ಜಾಣುವಡೆದೆನು |
ಪರಮುಖಶಶಿಗೆ ಸರೋಜಿನಿಯಾದೆನು | ಗರುವ ನೀ ಬಿಡುವುದಕೇನು|| ೬೫ ||

ಮನೆಯ ಮಾನಿನಿರೆಲ್ಲಕೆ ಹೊರಗಾದೆನು | ಅನುದಿನದುಃಖವೆಯ್ದಿದೆನು |
ಮನದಾಣ್ಮನೆ ಕೇಳು ನಿನ್ನ ಕತದಿ ನಾನು | ನಗೆಗಣೆಗೊಡಲನೊಡ್ಡಿದೆನು || ೬೬ ||

ಎಂದು ನುಡಿವ ಮೋಹಿಗಳ ಮಾತ ಕೇಳುತ | ಕಂದರ್ಪನಿಭಚಾರುದತ್ತ |
ಮುಂದಕೆ ನಡೆದು ಬರಲು ವೇಸಿಯರ ಮೊತ್ತ | ನಿಂದು ನೋಡಿದುದವನತ್ತ || ೬೭ ||

ಆವಾವ ದಿನದೊಳಗೀಕೇರಿಗೆ ಬರ್ಪ | ಕೋವಿದರೊಳಗಿಂತಪ್ಪ |
ಲಾವಣ್ಯವುಳ್ಳರ ಕಂಡುದಿಲ್ಲೆಂದಾ | ಭಾವೆಯರವನ ನೋಡಿದರು || ೬೮ ||

ವರವಜ್ರವಿಲ್ಲದೆಯ್ದಿದ ಸುರಪತಿಯೊ | ಅರಲಂಬನುಳಿದಂಗಜನೊ |
ಉರಿಗಣ್ಣ ಬಿಸುಟುಗ್ರನೊಯೆಂದು ನೋಡಿದ | ರಿರದಾತರುಣಿಯರವನ || ೬೯ ||

ಈ ತೆರದಿಂ ತನ್ನ ಚೆಲ್ವ ನಿರೀಕ್ಷಿಸು | ವಾ ತರಳಾಕ್ಷಿಯರುಗಳ |
ರೀತಿಯ ನಡೆನೋಡುತ ತದ್ವೀಥಿಯೊ | ಳಾ ತುಳಿಲಾಳೆಯ್ದುವಾಗ || ೭೦ ||

ಈ ರುದ್ರದತ್ತನ ಪ್ರೇರಣೆಯಿಂ ಮದ | ವಾರಣಮೊಂದಿದಿರಾಗಿ |
ಭೋರನೆ ಬರುತಿರೆ ಕಾಣುತ ಹಿಮ್ಮೆಟ್ಟಿ | ಯಾ ರಸಿಕನು ಬರ್ಪಾಗ || ೭೧ ||

ಮತ್ತೊಂದು ಮದಗಜಮಾದೆಸೆಯಿಂದ ಬ | ರುತ್ತಿರಲಂತದಕಂಡು |
ಉತ್ತಮನೊಂದು ಗೃಹದ ಮಣಿವಾಗಿಲ | ಹತ್ತಿರ ಸಾರಿನಿಂದಿರಲು || ೭೨ ||

ಆ ರುದ್ರದತ್ತನು ಮುನ್ನ ತನಗೆ ಪೇಳ್ದ | ಕಾರಣದಿಂ ಕೆಳದಿಯರ |
ಚಾರುದತ್ತನನು ವಸಂತಿತಿಲಕೆಯೆಂಬ | ನಾರಿ ಕರೆಯಲಟ್ಟಿದಳು || ೭೩ ||

ಬಂದಾ ಸಖಿಯರೀಯಾನೆ ಹೋಹನ್ನೆವ | ರೊಂದು ನಿಮಿಷ ನಮ್ಮಮನೆಗೆ |
ಸಂದೇಹಮಿಲ್ಲದೆ ಬಿಜಯಂ ಮಾಡುವು | ದೆಂದತ್ಯಾಗ್ರಹದಿಂದ || ೭೪ ||

ಕರೆದುಕೊಂಡು ಹೋಗಿ ತಲೆಬಾಗಿಲ ಹೊಚ್ಚಿ | ಕರುಮಾಡದೊಳು ಕುಳ್ಳಿರಿಸಲು |
ಗರುವೆ ವಸಂತಿತಿಲಕೆ ಬಂದಳಾಗ ಸಿಂ | ಗರದೊಟ್ಟು ಸಂತಸದಿಂದ || ೭೫ ||

ಅರಲಂಬನಾರಾಧಿಪದೇವತೆಯೊ | ಸುರಭಿಶರನಕೀರ್ತಿಸತಿಯೊ |
ಸ್ಮರರಾಜನ ವಿಜಯಾಂಗನೆಯೋ ಎನೆ | ತರಳಾಕ್ಷಿ ನಡೆತಂದಳಾಗ || ೭೬ ||

ಸಡಗರದಿಂ ಬಂದು ಕೆಲದೊಳು ಕುಳ್ಳಿರ್ದು | ಮಡಿದುಯ ಮಮತೆಯಾಳಿಯರು |
ಕಡುವೇಗದಿಂ ನೆತ್ತವಲಗೆಯನೀರ್ವರ | ನಡುವೆ ತಂದು ಮಡಗಿದರು || ೭೭ ||

ಎಲೆ ಚಾರುದತ್ತ ಚೌಷಷ್ಟಿಕಲೆಗಳೊಳು | ಸುಲಭನೀನಂತದರಿಂದ |
ಲಲನಾಮಣಿಯಿವಳೊಳು ನೆತ್ತವಮಾಡಿ | ಗೆಲುವ ಬಿನ್ನಣವ ತೋರೆಂದು || ೭೮ ||

ನೆತ್ತವ ಚಾರಿಹಾಸಗಿಯನದರಮೇ | ಲಿತ್ತುತಳುವದಾಡೆನಲು |
ಮತ್ತದಕವನು ಮೆಲ್ಲಗೆ ಮಾಡಲಾರುದ್ರ | ದತ್ತನಿದರಿನೇನು ಕೊರತೆ || ೭೯ ||

ಒಂದೆರಡಾಟಮನಾಡಿ ಮತ್ತೀಬಳಿ | ಯಿಂದೆದ್ದು ಹೋಹೆವೆಂದಾಗ |
ಕಂದರ್ಪರೂಪನ ಕಯಯಿಂದ ನೆತ್ತಮ | ನಿಂದುಮುಖಿಯೊಳಡಿಸಿದನು || ೮೦ ||