ಕಡೆಗಣ್ಗಳ ಸನ್ನೆಯಿಂದಾಸುಕುಮಾರ | ನೊಡನೆ ಬಂದಾ ಕೆಳೆಯರನು |
ತಡೆಯದೊಬ್ಬೊಬ್ಬರನೇಳಿಸಿತಾ ಕಟ್ಟ | ಕಡೆಯೊಳು ಚಿಮ್ಮಿದನಿತ್ತ || ೮೧ ||

ನೆತ್ತಮನೊಂದರಡಾಟಮನಾಚಾರು | ದತ್ತನಾಡಿ ಗೆಲಲಾಗ |
ವೃತ್ತವದನೆ ನನ್ನೀ ಸೋಲಕೆ ಸೋಲ | ವಿತ್ತಲ್ಲದೆ ಪೋಗಬೇಡ || ೮೨ ||

ಬಿಂದು ಕಾವನಕೈಯ ರತಿ ಪಿಡಿದಳೆವಂತೆ | ಯಂದದಿಂದವನ ಕೈವಿಡಿದು |
ಮಂದಗಮನೆ ಮಾಡದ ಮೇಲ್ಮೆಲೆಗಾ | ನದದಿಂ ಕೊಂಡೊಯ್ದಳಾಗ || ೮೩ ||

ಸರಸಚೂತದ ಮೇಲಕೆ ಗಂಡುಗಿಳಿಯೊಡ | ವೆರಸಿ ಸಾರಿಕೆ ಪೋಪಂತೆ |
ಕರುಮಾಡುವನು ಜಯಂತರೂಪನು ಸಹಿ | ತರವಿಂದಮುಖಿಯೇರಿದಳು || ೮೪ ||

ಬಳಿಕ ಬಂಧುರ ಮಣಿಮಂಚದ ಮೇಲೆ ಕ | ಣ್ಗೊಳಿಸುವ ಮೃದುತಲ್ಪಕಿರದೆ |
ಕಳಹಂಸಮಿಥುನ ಮಳಲ್ಗುಪ್ಪೆಗಡೆರ್ವಂತೆ | ತಳರಿದರಾಪ್ರಿಯತಮರು || ೮೫ ||

ಪರಿಚಾರಕಿಯರನಿತರೊಳು ಪನಿನೀರು | ಪರಮಳಕುಸುಮತಾಂಬೂಲ |
ಸಿರಿಗಂಪುಸಿರಪಂಚೆ ಮೊದಲಾದ ಸುಖಪರಿ | ಕರಮನಿರಿಸಿ ಜಾರಿದರು || ೮೬ ||

ಮುಸುಕಿದನಾಣ್ಗಸದೆಗೆದನುರಾಗದ | ರಸದಿಂ ಪೂಸಿ ಚೆಲ್ವಡೆದ |
ರಸಿಕನ ಮನದ ಮನೆಗೆ ಕಂತು ರತಿ ಸಹಿ | ರೊಸೆದೊಕ್ಕಲೇರಿದರಾಗ || ೮೭ ||

ಭೋಗೋಚಿತವಸ್ತುವನೆಲ್ಲವನನು | ರಾಗಮೊದವೆ ಕೈಕೊಂಡು |
ಭೋಗಿಗಳವರೀರ್ವರು ನವಸುರತೋ | ದ್ಯೋಗಮನೆಸಗಿದರಾಗ || ೮೮ ||

ನೋಡಿ ದಣಿವ ಹಡೆವರು ಲಲ್ಲೆವೆರೆದ ಮಾ | ತಾಡಿ ದಣಿಯರು ಚುಂಬನವ |
ಮಾಡಿ ದಣಿಯರೊಬ್ಬಬ್ಬರೊಳೊಲವಿಂ | ಕೂಡಿದಣಿಯರಾಪ್ರಿಯರು || ೮೯ ||

ಎವೆಯಲುಗದ ನೋಟವೆಸಕದೆದೆಯ ಬೇಟ | ಸವಿಗೆ ಸವಿಯ ಪೊರೆಯಿಡುವ |
ಹವಣಿಸಿಲ್ಲದ ಲವಲವಿಕೆಯ ಕೂಟ | ವವರೊಳು ಸಲೆಸಂದಿತಾಗ || ೯೦ ||

ಪಗಲಿತುಳೆನ್ನದೀಪರಿಯ ಜಾಣುವೆಯಿಂ | ಸೊಗಯಿಪ ಸತ್ಕಾರದಿಂದ |
ತೆಗೆ ಬಿಗಿಯಿಲ್ಲದ ಸಮರತಿಯಿಂದವ | ಳಗಣಿತಸುಖವಿತ್ತಳವಗೆ || ೯೧ ||

ಅವನ ಕಣ್ಗಳ ಬೊಂಬೆಗಳ ತನ್ನ ಚೆಲುವಿನ | ಭವನದೊಳಗೆ ಬಂಧಿಸಿದಳು |
ಅವನ ಮನದ ಕಾಲಕಾಮಿನಿ ತನ್ನ ಸವಿಯ ಸಂಕಲೆಯೊಳಿಕ್ಕಿದಳು || ೯೨ ||

ಇಂತಪ್ಪ ನೇಹದಿನಾ ಜಾರುದತ್ತ ವ | ಸಂತತಿಲಕೆಯೊಡಗೂಡಿ |
ಸಂತತ ಸೋಲ್ತಿರಲವಳ ಜನನಿ ತಾ | ನಿಂತೆಂದೆಣಿಕೆಮಾಡಿದಳು || ೯೩ ||

ಹಣವ ಹಿಡಿಯದೆ ವಿಟರಿಗೆಮೋಹಿಪೆನೆಂ | ದೆಣಿಕೆಯ ಮನದೊಳು ಮಾಳ್ಪ |
ಗಣಿಕೆಯರುಂಬುದುಡುವುದನು ಹಡೆಯದೆ | ಬಣಗಾಗಿ ತಿರಿವರೂರೊಳಗೆ || ೯೪ ||

ಎನುತ ಚಿಂತಿಸಿಯವಳಾ ಜಾರುದತ್ತನ | ಮನೆಗೆ ಊಳಿಗದಾಳಿಯರ |
ಮನಹೀನೆ ಕಳುಹಿದೊಡವರಾತನ ನಿಜ | ಜನನಿ ದೇಯಿಲೆಯಡೆಗೆಯ್ದಿ || ೯೫ ||

ನಿನ್ನ ತನಯನೆಮ್ಮ ಮನೆಯ ಬೀಯಕೆ ತಕ್ಕ | ಹೊನ್ನ ತಡೆಯದೀಸಿಕೊಂಡು |
ಬನ್ನಮೆಂದೆಮ್ಮ ಕಳುಹಿದನೆಂಬುದ ಕೇಳಿ | ಯುನ್ನತಿಕೆಯ ಮುದದಿಂದ || ೯೬ ||

ಲೇಸಾಯಿತೀ ನುಡಿ ನಿಮ್ಮ ಮನಗೆ ವಿತ್ತ | ವೇಸು ಬೇಕೆನೆ ಬೇಡಿಮೆನಲು |
ಆ ಸುದತಿಯರೆಂದರಾ ದೇಯಿಲೆಯ ನಿ | ರಾಶಾಹೃದಯವನು ಕಂಡು || ೯೭ ||

ದಿನಕೆ ಸಾಸಿರ ಪರ್ವಕೆ ಪತ್ತುಸಾಸಿರ | ಧನವಾಗಬೇಕಮ್ಮ ಮನೆಗೆ |
ಎನಲದು ಲೇಸೆಂದು ಹವಣಿನ ಹೊನ್ನ | ನನುಮಾನಿಸದೆ ಕೊಟ್ಟವಳು || ೯೮ ||

ಈ ತೆರದಿಂದಿನ ಬರಡಿಲ್ಲದೆ ಸು | ಪ್ರೀತಿಯಿಂದಲೆ ಕೊಡುತಿರಲು |
ಆ ತನ್ವಂಗಿಯರಿಯದಂದದೊಳ | ತ್ಯಾತುರದಿಂ ತರಿಸುವಳು || ೯೯ ||

ಇಂದೂರವುತಣಮಿಂದು ನಂಟರು ಬಂದ | ರಿಂದು ಮುಯ್ಯನಿಕ್ಕಬೇಕು |
ಎಂದು ಎಂದಿನ ಲೆಕ್ಕವಲ್ಲದವಳ ಕೈ | ಯಿಂದ ವಿತ್ತವ ತರಿಸಿದಳು || ೧೦೦ ||

ಆರುವರುಷಮೀತೆರದಿಲೆಕ್ಕದಿ ಪದಿ | ನಾರುಕೋಟಿ ವಿತ್ತವನು |
ನೀರೆಗೆ ನೆರೆಕೊಟ್ಟಾ ಚಾರುದತ್ತನು | ದೂರಾದನಾನಗರಿಯೊಳು || ೧೦೧ ||

ಮಗನ ಪ್ರಬುದ್ಧಗೆಯಾತಾಯಿ ದೇಯಿಲೆ | ಬಗೆಯಿತ್ತು ಮನೆಯ ವಿತ್ತವನು |
ತೆಗೆದು ಹಾಳುಮಾಡಿದುದಕೆ ವಿಸ್ಮಯನಾಗಿ | ಮಿಗೆನೊಂದನು ಭಾನುದತ್ತ || ೧೦೨ ||

ಇಭ್ಯಕುಲೋತ್ತಮನಾನಂದನನ ದು | ರಭ್ಯಾಸಕೆ ಮನನೊಂದು
ಅಭ್ಯಗ್ರದಿಂ ಪರಿಪಡಿಸದನಾ ಬಾ | ಹ್ಯಾಭ್ಯಂತರಪತಿಗ್ರಹವ || ೧೦೩ ||

ಉತ್ತಮಜಿನದೀಕ್ಷೆಯ ತಳಿದಾಭಾನು | ದತ್ತನಿರದೆ ಪೋಗಲಿತ್ತ |
ಮತ್ತೆ ವಸಂತತಿಲಕೆಯೊಳಗಾಚರು | ದತ್ತನಗಲದಿರುತಿರ್ದ || ೧೦೪ ||

ತಂದೆ ತಪವ ಕೈಕೊಂಡುದನ ಮನೆ | ಯಿಂದರ್ಥವೆಲ್ಲ ಹೋದುದನು |
ಒಂದಿನಿಸರಿಯದೆಯವಳೊಲವೇ ಜೀವ | ವೆಂದು ಸಂತಸಮಿರ್ದನವನು || ೧೦೫ ||

ಲೌಕಿಕಮಪ್ಪ ಕಾರ್ಯವನಿನಿಸರಿಯದೆ | ಯಾಕಾಂತೆಯ ಮೇಲಣೊಲವೆ |
ಆಕಾರಮಾಗಿಯವನು ಕೂವಕಂಬದ | ಕಾಕನಮಾಳ್ಕೆಯೊಳಿರ್ದ || ೧೦೬ ||

ಇಂತು ಮತ್ತರುವರುಚ ಪರಿಯಂತ ವ | ಸಂತತಿಲಕೆಯೊಡಗೂಡಿ |
ಸಂತಸಮಿರೆ ತರಿಸಿದಳು ಕುಂಟಣಿ ಮುನ್ನಿ | ನಂತೆ ಷೋಡಶಿಕೋಟಿ ಹೊನ್ನ || ೧೦೭ ||

ವರುಷಗಳಿಂತು ಪನ್ನೆರಡಕ್ಕೆ ಮೂವ | ತ್ತೆರಡು ಕೋಟಿ ವಿತ್ತವನು |
ತರಿಸಿ ಬಳಿಕ್ಕೆಂದಿನಂತೊಂದು ದಿನ ಹೊನ್ನ | ತರಹೇಳಿ ಸಖಿಯರ ಕಳುಹೆ || ೧೦೮ ||

ಚಿನ್ನ ಬೆಳ್ಳಿ ಬಂಗಾರಗಳೆಂಬವು | ತನ್ನ ಮನೆಯೊಳಿಲ್ಲದಿರಲು |
ಇನ್ನೆವೆನೆಂದು ದೇಯಿಲೆ ಮನೆಯನು ಮಾರಿ | ಮುನ್ನಿನಂದದಿ ಕೊಟ್ಟಳಾಗ || ೧೦೯ ||

ಆ ಮನೆಯನು ಮಾರಿ ಕೊಟ್ಟ ವಿತ್ತವ ಕೊಂ | ಡಾ ಮರುದಿನ ಕೆಳದಿಯರ |
ಸಾಮಮಾಡದೆಯಿಂದಿನ ಹೊನ್ನಿ ತನ್ನಿಮೆಂ | ದಾ ಮುದಿಪಾರಿಯಿಟ್ಟಿದಳು || ೧೧೦ ||

ಬರುತವರಾದೇಯಿಲೆ ಹಣವಿಲ್ಲದೆ | ವರಗೃಹವನು ಮಾರಿ ತನ್ನ |
ಹಿರಿಯಣ್ಣ ಸಿದ್ಧಾರ್ಥನ ಮನೆಗಾಪೋ | ದಿರುಳೇ ಪೋದಳೆಂಬುವನು || ೧೧೧ ||

ಆ ಮನೆಯನು ಕೊಂಡವರುಸುರಲು ಕೇಳಿ | ಯಾ ಮಾನಿನಿಯರಾಯೆಡೆಗೆ |
ತಾಮೆಯ್ದಿ ಕಂಡು ದೇಯಿಲೆಯಿಂದಿನ ಹೊನ್ನ | ನೀಮೀವುದು ನಮಗೆನಲು || ೧೧೨ ||

ಆ ನುಡಿಯನು ಕೇಳಿ ಲಜ್ಜಿಸಿ ತಲೆವಾಗಿ | ಮೋನಗೊಂಡಿರ್ದತ್ತೆಯನು |
ಮಾನಿತೆ ಮಿತ್ರಾವತಿ ತನ್ನ ಸೊಸೆಗಂಡು | ತಾನಿಂತೆಂದಾಡಿದಳು || ೧೧೩ ||

ಅತ್ತೆಯಿದೇಕೆ ನಿಮಗೆ ಚಿಂತೆಯಿಂದಿನ | ವಿತ್ತಮನಾನೀವೆನೆಂದು |
ಉತ್ತಮಮಪ್ಪ ತನ್ನಾಭಣವ ತೆಗೆ | ದಿತ್ತಳು ಸಂತಸದಿಂದ || ೧೧೪ ||

ಆ ಉತ್ತಮಾಭರಣವಕೊಂಡು ಬರಲವ | ರಾ ವಾರತೆಯನು ಕೇಳಿ |
ಭಾವೆ ವಸಂತತಿಲಕೆ ತನ್ನ ಮನದೊಳು | ನೋವುತಿಂತೆನುತಾಡಿದಳು || ೧೧೫ ||

ಜಾತಿ ವೇಸಿಯರು ವಿಟರ ನಿಜಸತಿಯರಿ | ಟ್ಟಾತೊಡವಿಗೆಯಾಸೆ ಮಾಡೆ |
ಪಾತಕಮೆಂದು ತಿರುಗಿಯಟ್ಟಿದಳು ನಿಜ | ಮಾತೆಯ ನೆರೆ ಬೈವುತವಳು || ೧೧೬ ||

ಚಾರುದತ್ತನ ಮನೆಯಿಂ ತಂದ ಹಣಮೆಲ್ಲ | ಮೀ ರಾಜ್ಯಮೀ ಪಟ್ಟಣದವನು |
ಆರೈಕೆಯನಾವನುದಿನ ಮಾಡಲು | ತೀರಲರಿಯದದರಿಂದ || ೧೧೭ ||

ಇಂತು ಮೊದಲು ನೀವವರನು ಬೇಡುವೆ | ವೆಂದತ್ತಲಡಿಯಿಡಬೇಡ |
ಎಂದಾಪರಿಚಾರಕಿಯರ ಕರೆಸಿ ಯಾ | ಯಿಂದುವದನೆ ಮಾಣಿಸಿದಳು || ೧೧೮ ||

ಆ ನುಡಿಯನು ಕೇಳುತತಿಕೋಪವ ತಾಳು | ತಾನಂದನೆಯೆಡೆಗೆಯ್ದಿ |
ದೀನಮಾನಸೆ ಸೂಳೆ ವಿನ್ನಾಣದ ಮಾತ | ತಾನಿಂತೆದಾಡಿದಳು || ೧೧೯ ||

ಚಾರುದತ್ತನ ಮನೆಯೊಳಗಿರ್ದ ಹಣವೆಲ್ಲ | ತೀರಿಹೋದುದು ಹಿರಿದಾಗಿ |
ದಾರಿದ್ರ್ಯವೆಡೆಗೊಂಡುದವನನು ಕಂಡರೆ | ಊರೆಲ್ಲ ಹೇಸುವಂತಾಗಿತ್ತು || ೧೨೦ ||

ಹಣವುಳ್ಳವನೆ ಇಂದ್ರ ಹಣವುಳ್ಳವನೆ ಚಂದ್ರ | ಹಣವುಳ್ಳವನೆ ಜಯಂತ |
ಹಣವುಳ್ಳವನೆ ಕಾಮ ಹಣವಿಲ್ಲದವ ಸತ್ತ | ಹೆಣನು ಕಾಣಲೆ ಕೇಳು ಮಗಳೆ || ೧೨೧ ||

ಈ ಊರೊಳಗೆ ಜವ್ವನದಿಂದ ರೂಪಿಂದ | ಲಾವಣ್ಯದಿಂ ಜಾಣ್ಮೆಯಿಂದ |
ತೀವಿದವಸ್ತುವಿಂದವಗೆ ಬಲ್ಲಿದರುಂಟು | ಭಾವಕಿ ವರಿಸು ನೀನವರ || ೧೨೨ ||

ಹೊನ್ನ ಹಿರಿದು ಕೊಟ್ಟವನ ತಗುಳ್ವುದು | ನನ್ನಿಯಲ್ಲಯೆಂದಪೆಯ |
ಮುನ್ನ ಕರೆವ ಹಸುವಿನ ಹಾಲು ಬೀತೊಡೆ | ಮನ್ನಿಸುವರೆ ಮುನ್ನಿನಂತೆ || ೧೨೩ ||

ಆಲತಗೆಯೆಸೆವ ರಸವಹಿಂಡಿದರಲೆಯ | ಎಲೆಬೀತಮರದ ನೆಳಲನು |
ಹೊಲೆಗೆಟ್ಟು ಹಡೆವ ಸೂಳೆಯರನು ಪೋಲ್ವರು | ಸಲೆ ವಿತ್ತವಿಲ್ಲದವಿಟರು || ೧೨೪ ||

ಒಲವು ಮನದೊಳಿದಲ್ಲದೊಡೇನೊ ಒಲಿದಂತೆ | ಒಲಿಸಿ ವಿಟನ ವಿತ್ತವನು |
ಸುಲಿದು ಬಳಿಕ ಪೊರಮಡಿಸುವುದದು ನೀತಿ | ಬೆಲೆವೆಣ್ಗಳಿಗೆಲೆಮಗಳೆ || ೧೨೫ ||

ತಗುಳಿವುದಿದೆ ವೇಳೆಯಾ ಚಾರುದತ್ತನ | ಮಗಳೆಯೆಂಬಾ ನುಡಿಗೇಳಿ |
ಮಿಗೆನೊಂದು ಮಾರುತ್ತರವ ನುಡಿದಳಾ | ಬಗಸೆಗಂಗಳ ಭಾಮೆಯಿಂತು || ೧೨೬ ||

ನಿನ್ನ ವಂಶದ ವೇಸಿಯರು ಕಡುಚದುರೆಯ | ರುನ್ನತಿಕೆಯರೂಪಿನವರು |
ಸನ್ನುತೆಯರು ತಮ್ಮ ದಿನದೊಳು ಗಳಿಸಿದ | ಹೊನ್ನೇಸು ನನಗದನುಸುರು || ೧೨೭ ||

ನೀ ಮುನ್ನ ಹಡೆದೇರುಂಜವ್ವನದೊಳು | ಪ್ರೇಮದಿ ನಿನ್ನ ಭೋಜಗರು |
ತಾಮಿತ್ತಹಣ ಬಂಗಾರಮುಂಟಾದೊಡೆ | ಈ ಮನೆಯೊಳಗಿಲ್ಲದಿಹುದೆ || ೧೨೮ ||

ಎನ್ನೋರಗೆಯವರೀ ನೆರೆಯೊಳಗಿರ್ದ | ಚಿನ್ನೆಯರತಿ ಚತುರೆಯರು |
ಸನ್ನುತಮಪ್ಪಜವ್ವನೆಯರು ಗಳಿಸುವ | ಬಿನ್ನಾಣವ ತೋರೆನಗೆ || ೧೨೯ ||

ಬರಿದೆ ಜನನಿಯೇತಕೆ ನುಡಿದಪೆ ನಾ | ಡಿರಿಕೆಯ ತನ್ನ ಸಿರಿಯನು |
ಪಿರಿದು ನನಗೆ ಕೊಟ್ಟೊಲಿದೊಲಿಯಿಸಿಕೊಂಡ | ನೆರೆಚೆಲುವನ ಬಿಡೆನೆಂದು || ೧೩೦ ||

ಕೋಟಿಮೂವತ್ತೆರಡರ್ಥಮನಿತ್ತನ | ಮೀಟೆನಿಸಿದ ರೂಪಯುತನ |
ಬೇಟವರಿದು ಸವಿಯೀವವನನು ನಿ | ರ್ಧಾಟಿಸೆಂದಿಂತು ಪೇಳುವರೆ || ೧೩೧ ||

ಅವನಿತ್ತ ಹಣವವೆಚ್ಚಿಸುವುದಕವನಿತ್ತ | ನವಮಣಿದೊಡವಿಡುವುದಕೆ |
ಅನಿತ್ತುಡುಗೆಯುಡುವುದಕ್ಕೆಂದಿಗೆ | ಸವೆವುದೆಮ್ಮಯ ಪೀಳಿಗೆಗೆ || ೧೩೨ ||

ಸಮರೂಪ ಸಮಯೌವನ ಸಮಚತುರತೆ | ಸಮಭೋಗಬಲ ಸಮಸೋಲ |
ಸಮರತಿ ಸಮಸುಖಿಗಳನಗಲಿಸುವುದು | ಕ್ರಮವೆ ಹೆಂಗಳ ಹೆತ್ತವರಿಗೆ || ೧೩೩ ||

ಪಿರಿದು ನಿಷ್ಕಪಟ ವಿಮೋಹದ ಸತಿಯನು | ನೆರೆವನೆ ನವ ಕೋವಿದನು |
ಬೆರೆಕೆನೇಹವಮಾಡುವಾತನವನು ನರ | ಗುರಿಯಹ ಕೇಳಲೆ ಜನನಿ || ೧೩೪ ||

ನೆನಹನೊಲ್ಮೆಯೊಳಾಳಿಸಿಕೊಂಡವನನು | ಮನವಿತ್ತು ಬೆರಸುವಾತನನು |
ತನಿಸೊಗಸಿಗೆ ಸೊಗಸನು ಸಂಧಿಸುವನನು | ಇನಿಸಗಲ್ದೆಂತು ಜೀವಿಪೆನು || ೧೩೫ ||

ಸೋಲದ ಸೊಗಸನಳ್ಳೆರ್ದೆಯಳು ತೀವಿದ | ಲೋಲುಪತೆಯೊಳಗುಳಿಸಿದ |
ಲೀಲೆಗಾರನನಾಲಯದಿಂದ ತಗುಳಿದ | ಬಾಲೆಗೆ ಬರದೆ ಪ್ರಮಾದ || ೧೩೬ ||

ಒಲುಮೆಯ ಸೋಲು ತಲೆಯ ಹಿಡಿದವನನು | ಸಲೆನೇಹದೊಳಗಾಳ್ವನನು |
ಗೆಲುವು ಮನದೊಳೆಳ್ಳನಿತಿಲ್ಲದವನನು | ತೊಲಗಿ ನಾನೆಂತು ಜೀವಿಪೆನು || ೧೩೭ ||

ಒಲವೆವೊಡಲ ಬಾಳುವೆಗೆ ಜೀವನವಾದ | ಒಲವೆ ಜೀವಕೆ ಮುಕ್ತಿಯಾದ |
ಒಲವೇ ಜೀವನವೆಂಬ ಲತೆಗೆಯೆಡರ್ವಾದ | ಲಲನೆಗಹುದೆ ಬೇರೆಬಿನದ || ೧೩೮ ||

ಗೆಲುವನೊಬ್ಬರ ಮನಸಿನೊಳು ಕಾಣಿಸಿತಿಲ್ಲ | ಒಲುಮೆ ಹಿರಿದು ಕಿರಿದಿಲ್ಲ |
ಬಲುಮೆಯೆಂಬುದು ಬಗೆಯೊಳಗೊಂದಿನಿಸಿಲ್ಲ | ತೊಲಗಿ ನಾನಸುಗೊಂಬುದಿಲ್ಲ || ೧೩೯ ||

ಪಿರಿದು ಮೋಹವನನವರತ ಮಾಡುವವನು | ಸರಿಸವಿಯೊಳು ಕೂಡುವವನು |
ಹರಣವನುರೆ ಸೆರೆವಿಡಿದ ಬಲ್ಲಹನನು | ಕರೆಯದೊಡೆಂತು ಜೀವಿಪೆನು || ೧೪೦ ||

ಒಲಿದು ಒಲಿಸಿಕೊಳ್ಳಬಲ್ಲ ರಸಿಕನನು | ಸಲುಗೆಯ ಸಲಿಸುವಾತನನು |
ಕಲೆಯ ನೆಲೆಯನರಿದೊಸೆದು ಕೂಡುವನನು | ತೊಲಗಿ ನಾನೆಂತು ಜೀವಿಪೆನು || ೧೪೧ ||

ಅಗಣಿತಮಪ್ಪ ವಸ್ತುವನಿತ್ತವನನು | ಸೊಗಯಿಪ ಮಣಿಭೂಷಣವನು |
ಬಗೆಗುಂದದೆ ಕೊಟ್ಟ ಚಿಂತಾಮಣಿಯನು | ತಗುಳೆಂಬರೆ ತಾಯೆ ನೀನು || ೧೪೨ ||

ಭೋಗ ಮತ್ತವನಿಂದತಿ ಪಿರಿದಾದುದು ಶ್ರೀಗೆಯೈಸಿರಿಯಾಯ್ತು |
ರಾಗದೇಳಿಗೆ ಮನೆಗೆಲ್ಲಕೊದವಿದುದು | ಈಗಲವನ ನೂಂಕಲಾಯ್ತು || ೧೪೩ ||

ಮಳೆಯಹನಿಗೆ ಬಾಯ್ಬಿಡುವ ಜಾತಕಪಕ್ಷಿ | ಕೊಳಕು ನೀರನು ಸೇವಿಸುವುದೇ |
ತುಳಿಲಾಳಿಗೆ ಕೈವಶವಾದ ಸುದತಿಯ | ರಳವಿಟರಿಗೆ ಮೋಹಿಸುವರೆ || ೧೪೪ ||

ಹೊನ್ನತಗಡ ಮೇಲೆ ಹೊಳೆವ ಮಾಣಿಕವು ಕ | ರ್ಬೊನ್ನೊಳಗತಿರಂಜಿವುದೆ |
ಚಿನ್ನಗಂಡರೊಳು ರಂಜಿಪ ಸುತಿ ಕೂರಾಳ | ಸನ್ನಿಧಿಯೊಳು ಸೊಗಯಿಪಳೆ || ೧೪೫ ||

ಕರುಣವಿಲ್ಲದೆ ಮೋಹಕೆ ಕಂಟಕಿಯಾಗಿ | ಪಿರಿದು ನಿಗ್ಗರಿಸಲು ನೀನು |
ಹರಣವ ಬಿಟ್ಟಬಳಿಕ ನಾನು ಬಿಡುವೆನು | ಸರಸಕಲಾಕೋವಿದನ || ೧೪೬ ||

ಎಂದು ನುಡಿದ ಮುಗುದೆಯ ಮಾತಿಗೆ ಮನ | ನೊಂದಾಬಳಿಯಿಂದೆಳ್ದು |
ಬಂದಾಕಿನಿತಾ ಕೃತಕಮಾನಸೆಯಾಗಿ | ಯೊಂದಾನೊಂದು ದಿನದೊಳು || ೧೪೭ ||

ಎಳೆನೀರಿನೊಳು ಸೊಕ್ಕುವ ಮದ್ದನೊಡಗೂಡಿ | ಕಳುಹಲಂದಾಕಾದಲರು |
ಎಳಸಿನವಾನವ ಮಾಡಲಾ ಸೊಕ್ಕುಪೂರಿಸಿ | ಬಳಿಕ ಮೈಮರೆದೊರಗಿರಲು || ೧೪೮ ||

ಇಂತು ಮೈಮರೆದ ಸೊಕ್ಕಿಂದೆಚ್ಚರದೆ ವ | ಸಂತತಿಲಕೆಯೆಡಗೂಡಿ |
ಕಂತು ಸದೃಶಚಾರದತ್ತನಿರಲು ತನ | ಗಿಂತಿದೆ ವೇಳೆಯೆಂದವಳು || ೧೪೯ ||

ಆರುಮರಿಯದಂತವನ ಕಂಬಳಿಯೊಳ | ಗಾ ರಾತ್ರಿಯ ಮಧ್ಯದೊಳು |
ಅರಯ್ಯದೆ ಕಟ್ಟಿಸಿಹಾಕಿಸಿದಳಾ | ಊರ ಚೌವಟದ ತಿಪ್ಪೆಯೊಳು || ೧೫೦ ||

ಅಲ್ಲಿ ಕಿರಿದು ಹೊತ್ತು ಮೈಮರೆದಿರ್ದಾ | ಮೆಲ್ಲನೆ ಸೊಕ್ಕು ತಿಳಿಯಲು |
ಸಲ್ಲೀಲೆಯಿಂದಾಕರುಮಾಡದ ಮೇಲೆ | ನಲ್ಲಳ ತೋಳತೆಕ್ಕೆಯೊಳು || ೧೫೧ ||

ಸಂದಸುಖದೊಳೊರಗಿರ್ದನನಿಲ್ಲಿಗೆ | ತಂದು ಹಾಕಿದರಾರೆಂದು |
ಕಂದರ್ಪರೂಪನೆಣಿಕೆ ಮಾಡಿ ಬಳಿಕ | ಲ್ಲಿಂದ ಕಡೆಯ ರಾತ್ರಿಯೊಳು || ೧೫೨ ||

ತನ್ನ ಮನೆಯ ಬಾಗಿಲ್ಗೆಯ್ದುತಿರಲಾ | ಮುನ್ನ ಮನೆಯ ಕೊಂಡವರು |
ನಿನ್ನ ಜನನಿ ನಮಗೀ ಮನೆಯನು ಮಾರಿ | ನಿನ್ನ ಮಾವನ ಮಂದಿರಕೆ || ೧೫೩ ||

ಏಳೆಂಟು ದಿನದೊಳು ಪೋದಳೆಂಬಾ ಮಾತಂ | ಗೇಳಿ ಪಿರಿದು ದುಃಖವನು |
ತಾಳಿಯಕ್ಕಟ ವಿಧಿಯೇಯೆಂದಾಮಾವ | ನಾಲಯಕಂದೈದಿದನು || ೧೫೪ ||

ಜನನಿಗೆರಗಿ ಮಾವಗೆಯಭಿವಂದಿಸಿ | ಧನತೀರಲಾ ತನ್ನ ತಂದೆ |
ಜಿನದೀಕ್ಷೆಯ ಕೊಂಡುದನು ಮನೆಯನು ಮಾರಿ | ದನಿತನೆಲ್ಲವನು ಕೇಳಿದನು || ೧೫೫ ||

ಅನಿತರೊಳಾ ನಿಜಸತಿಮಿತ್ರಾವತಿ | ವನಜವಿಲೋಚನೆ ಬಂದು |
ಇನಿಯನ ಮೈಯ ಹತ್ತದ ತಿಪ್ಪೆಯ ಧೂಳ | ನನುರಾಗದಿಂದ ತೊಡೆದಳು || ೧೫೬ ||

ಬಳಿಕ ಮೈಮರ್ದನ ಮಜ್ಜನ ಭೋಜನ | ಗಳನತ್ಯಾಸಕ್ತಿಯಿಂದ |
ಲಲನಾಮಣಿಮಾಡೆ ಕಂಡತಿಸಂತಸ | ದಳೆದನು ಪೈಶ್ಯಕುಮಾರ || ೧೫೭ ||

ಜನನಿಯ ಮೊಗನೋಡಿ ಎಲೆತಾಯಿ ನನ್ನಿಂದ | ನಿನಗೀಯಂದದವಸ್ಥೆ |
ಜನಕಗೆ ದೀಕ್ಷಾವಿಧಿಯಾಯಿತೀ ದು | ರ್ಜನವನಾನೆಂತು ನೀಗುವೆನು || ೧೫೮ ||

ಮುನ್ನ ಕೆಡಿಸಿದ ವಿತ್ತಕೆ ವಾಸಟಿಯಾಗಿ | ಚೆನ್ನಾಗಿ ಪರದುಗೆಯ್ದಾನು |
ಸನ್ನುತನಾದಲ್ಲದೆ ಮನೆವೊಗೆನೆಂ | ದುನ್ನತಿಕೆಯ ಭಾಷೆ ಮಾಡಿ || ೧೫೯ ||

ಈ ತೆರದಿಂದಾಚಾರುದತ್ತನು ನಿಜ | ಮಾತೆಯೊಳಾಡಿದ ಮಾತ |
ನೀತಿನಿಪುಣ ಸಿದ್ಧಾರ್ಥನರಿದು ಜಾ | ಮಾತೃವಬಳಿಗೆಯ್ತಂದು || ೧೬೦ ||