ಶ್ರೀಮದಮರಪರಿಮೌಲಿಕೀಲಿತಪಾದ | ತಾಮರಸದ್ವವಯಜನಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಎಂದು ನುಡಿದ ವೀಣಾಗುರುವಿಗೆಯಾ | ನಂದದಿನಾ ವಸುದೇವ |
ಅಂದವಡೆದ ತನ್ನ ಮುಂಗೈಯ ಕಡಗವ | ನಂದು ತೆಗೆದುಕೊಟ್ಟನಾಗ || ೨ ||

ಅನಿರತೊಳಾಶಾಸುದತಿಯ ಮನೆಗಾ | ಇನನೆಯ್ದಲಾ ಮನೋಹರನು |
ಮನಸಿಜನಿಭವಸುದೇವನೃಪನ ತನ್ನ | ಮನೆಗೊಡಗೊಂಡೆಯ್ದಿದನು || ೩ ||

ಆ ಮರುದಿನ ವೀಣಾಸ್ವಯಂವರವಾಗ | ಲಾ ಮನೋಹರನಾ ಗೃಹದಿ |
ಪ್ರೇಮದೊಳೊಡಗೊಂಡು ಪೋದನಲ್ಲಿಗೆ ತ | ತ್ಕಾಮಸದೃಶನೃಪರವನ || ೪ ||

ಸತಿಯ ಬಯಸಿ ಬಂದ ಸಕಲಮಹೀಶ್ವರ | ಸುತರ ಮಧ್ಯದೊಳು ಕುಳ್ಳಿರ್ದು |
ಅತಿರಂಜಿಸಿದನು ವಸುದೇವ ತಾರಾ | ತತಿಯ ಮಧ್ಯದ ಚಂದ್ರನಂತೆ || ೫ ||

ಅನಿತರೊಳತಿರಂಜಿಸುವ ಭೂಷಣವಿಟ್ಟು | ಜನನುತೆ ಗಾಂಧರ್ವದತ್ತೆ |
ಅನುರಾಗದಿಂ ತನ್ನ ಬಳಸಿಬರಲು ಸಖಿ | ಜನದ ಮಧ್ಯದೊಳೆಯ್ದಿದಳು || ೬ ||

ಶಂಬರಶತ್ರುವಾರಾಧಿಪದೇವತೆ | ಯೆಂಬಂತಾಯೆಡೆಗೆಯ್ದಿ |
ಅಂಬುಜಲೋಚನೆ ಕುಳ್ಳಿರ್ದಳೊಸೆದು ಸ್ವ | ಯಂಬರಹೃಹದ ಮಧ್ಯದೊಳು || ೭ ||

ವಸುದೇವನು ಕಣ್ಗೆತಲಾಚಾರ್ಯನು | ವಸುದಾಧೀಶನಂದನರ |
ರಸಿಕತೆಯಿಂ ಹಸನಾಗಿ ಬಾಜಿಸಿಮೆನ | ಲೊಸೆದು ವೀಣೆಯ ಬಾಜಿಸಿದನು || ೮ ||

ಒಲವಿನದಿಟ್ಟಿ ಮನಮನೊಂದು ಕಡೆಯೊಳು | ನಿಲಸಲವರು ನುಡಿಯಿಸುವ |
ವಿಲಸಿತಮಪ್ಪ ವಿಪಂಚಿಯಿಂಚರಮಾ | ಲಲನೆಯ ಕಿವಿಯೊಕ್ಕುದಿಲ್ಲ || ೯ ||

ತರಳಾಕ್ಷಿಯ ಚಿತ್ತವರಿದಾ ವೀಣಾ | ಗುರು ವಸುದೇವಭೂವರನ |
ಸುರುಚಿತಮಪ್ಪ ವಿದ್ಯಾಪೀಠದ ಮೇ | ಲಿರಿಸಿದನತಿಮುದದಿಂದ || ೧೦ ||

ಕಡು ಸೊಹಯಿಸುವ ವಿಪಂಚಿಯ ತಂದಿಡ | ಲೊಡನ ತಂತಿಯ ಮಿಡಿದು |
ನುಡಿಸಿ ನೋಡಿ ದೋಷಮಿಲ್ಲದ ವೀಣೆಯ | ತಡೆಯದೆ ತಂದೀವುದೆನಲು || ೧೧ ||

ಸರಸತಿ ಪಿಡಿದು ಬಾಜಿಸುವಾ ವೀಣೆಗೆ | ಸರಿಮಿಗಿಲಾದ ವೀಣೆಯನು |
ತರಿಸಿ ಹತ್ತೆಂಟನಿರಲಸಲವರೊಳು ಸುರು | ಚಿರಮಪ್ಪುದೊಂದು ವೀಣೆಯನು || ೧೨ ||

ಪಿಡಿಯಲಾಚಾರ್ಯನಿಂತೆದನೆಲೇ ವಿಭು | ಕಡುಚತುರತೆಯಿಂದನೀನು |
ಪಿಡಿದ ವೀಣೆಯ ಕುಲಮಾವುದು ಪೇಳೆನ | ನುಡಿದನಿಂತೆದನಾ ನೃಪತಿ || ೧೩ ||

ನುತ ಹಸ್ತಿನಾಖ್ಯಪುರದ ಮೇಘರಥಭೂ | ಪತಿಗೆ ಪದ್ಮಾವತಿಯೆಂಬ |
ಸತಿಗೆ ಜನಿಸಿದರು ವಿಷ್ಣುಕುಮಾರನು | ದ್ದತ | ಪದ್ಮರಥನೆಂಬುವರು || ೧೪ ||

ಆ ಸುತರೀರ್ವರು ಸಕಲಸಾಮಂತರು | ಭೂಸುರರುಗಳ ಮಧ್ಯದೊಳು |
ವಾಸವನಂತೆ ಹೊನ್ನುಪ್ಪರಿಗೆಯನೇರಿ | ಯೋಸರಿಸದೆ ಕುಳ್ಳಿರ್ದು || ೧೫ ||

ಮೇಘರಥಾವನಿಪಾಲನೊಂದಾನೊಂದು | ಮೇಘಲಕ್ಷಣದರುಶನದಿ |
ಈ ಘನದಿರವೀ ಸಂಸಾರದೇಳ್ಗೆಯ | ಮೋಘವೆಂದು ಭಾವಿಸುತ || ೧೬ ||

ಕಿರಿಯ ತನುಜ ಪದ್ಮರಥಗೆ ಭೂಭಾರವ | ಹೊರಿಸಿ ತೃಣವ ಹರಿವಂತೆ |
ಹೊರಗೊಳಗಾವರಿಸಿದ ಮೋಹಪಾಶವ | ಹರಿದನು ನಿಮಿಷಮಾತ್ರದೊಳು || ೧೭ ||

ತಂದೆಯೊಡನೆ ದೀಕ್ಷೆಯನು ಧರಿಸಿ ಯುಗ್ರ | ನಂದನ ವಿಷ್ಣುಕುಮಾರ |
ಒಂದಿದ ತಪದಿಂ ಋದ್ಧಿಸಂಪನ್ನಿಕೆ | ಯಿಂದಳೆದಿರೆ ಬಳಿಕಿತ್ತ || ೧೮ ||

ಭೂನುತಮಪ್ಪವಂತೀಜನಪದದು | ಜ್ಜೈನಿಯಾ ಪೊರನಂದನದೊಳು |
ಜೈನಮುನೀಶನಕಂಪನೆಂಬೋರ್ವ ಮ | ಹಾನುಭಾವನು ನಿಂದಿರಲು || ೧೯ ||

ಅಲ್ಲಿಗಾಪುರದ ವೃಷಭಸೇನೆನೆಂಬ ಭೂ | ವಲ್ಲಭಗೆಸೆವ ಮಂತ್ರಿಗಳು |
ಬಲ್ಲಿದ ಬಲಿ ಬೃಹಸ್ಪತಿ ಶುಕ್ರರೆಂಬವ | ರುಲ್ಲಾಸದಿಂದೆಯ್ದಿರು || ೨೦ ||

ಅವರು ಮಿಥ್ಯಾಗಮಗರ್ವಶೈಲಾರೂಢ | ರವರಾಮುನಿವವರೊಡನೆ |
ಅವಿವೇಕದಿಂ ವಾದನ ಮಾಡಿ ಬಳಿಕ ಸೋ | ಲವನಾಂತು ಭಂಗವಡೆದರು || ೨೧ ||

ಇಂತು ಭಂಗಪಡೆದಾ ಬಲಿಯಾಮುನಿ | ಕಾಂತನ ಕೊಲಲುಬೇಕೆಂದು |
ಅಂತಕನಿಭಕೋಪನವರಿರ್ದ ನಂದನ | ಕಂತರಿಸಿದೆ ನಡೆತಂದು || ೨೨ ||

ಕರವಾಳಪಿಡಿದವರನು ಕೊಲ್ಲುಲೆತ್ತಿದ | ಕರವನಾ ವನದೇವತೆಗಳು |
ಪಿರಿದು ಕೋಪದಿ ಕೀಲಿಸಿ ಮತ್ತವಗೆ ನಿ | ಷ್ಠುರುಮಪ್ಪ ಬಾಧೆ ಮಾಡಿದರು || ೨೩ ||

ಆ ಬಲ್ಲಿತಪ್ಪ ಬಾಧೆಯ ತಾಳಲಾರದೆ | ಯಾಬಲಿಮೊರೆಯಿಡಲಾಗ |
ಆ ಬಳಿಗಾಪೊಳಲರಸೆಯ್ದಿಬಂದು ಮ | ತ್ತಾ ಬಲಹೀನನ ಕಂಡು || ೨೪ ||

ವಿನಯಪೂರ್ವಕದಿ ಸಾಷ್ಟಾಂಗಾನತನಾಗಿ | ಮುನಿಯ ಮುಖದಿ ಬಲಿಗಾದ |
ಘನತರಮಪ್ಪಪಸರ್ಗವ ಪಿಂಗಿಸಿ ಮನುಜೇಶನಿಂತೆಂದನಾಗ || ೨೫ ||

ಯುತಿರಾಜನನು ಕೊಲ್ಲುವೆನೆಂದೆಣಿಕೆ ಮಾಡಿ | ದತಿದೋಷಿಗಳಿನ್ನು ನಮಗೆ |
ಹಿತವರೆಲ್ಲೆಂದಾಬಲಿ ಶುಕ್ರನಾಬೃಹ | ಸ್ಪತಿಯನೂರಿಂತಗುಳಿಸಿದ || ೨೬ ||

ಆ ಪೊಳಲಿಂ ಭ್ರಷ್ಟರಾಗಿ ಬಂದಾ ಹಸ್ತಿ | ನಾಪುರವರವನು ಪೊಕ್ಕು |
ಆ ಪದ್ಮರಥನ ಸಮ್ಮಖದಿ ಮಂತ್ರಿತ್ವಮ | ನೇ ಪಡೆದುರೆ ಜಾಣ್ಮೆಯಿಂದ || ೨೭ ||

ಮತ್ತತಿಹಿತರರಾಗಿರಲಾ ನೃಪನ ಮೇ | ಲೆತ್ತಿ ಪ್ರತ್ಯಂತಭೂವರರು |
ಒತ್ತಂಬಿಸಲಾಬಲಿಯಾಬೆಸನನು | ಹೊತ್ತವರ್ಗಿದಿರಾಗಿ ನಡೆದು || ೨೮ ||

ಮಂತ್ರಿಬಲದಿ ವೈರಿಭೂಪಾಲರ ತಳ | ತಂತ್ರಮನೆಲ್ಲವೋಡಿಸಲು |
ಮಂತ್ರಿಬಲಿಗೆ ಪದ್ಮರಥವಿಭು ಮೆಚ್ಚಿದ | ತಾಂತ್ರಿಕರಣಶುದ್ಧಿಯೊಳು || ೨೯ ||

ವರಮಂತ್ರಿ ನಿನಗೆ ಮೆಚ್ಚಿದೆ ನಿನ್ನಿಚ್ಚೆಯ | ನಿರದೀವೆ ಬೇಡಿಕೊಳ್ಳನಲು |
ಧರಣಿಪ ನೀನೀವಮೆಚ್ಚು ಭಂಡಾರದೊ | ಳಿರಲಿಯೆದತಿ ಸುಖಮಿರಲು || ೩೦ ||

ಒಂದಾನೊಂದು ದಿವಸ ಮತ್ತಾ ಊರ | ಮುಂದಣ ಸೌಮ್ಯಗಿರಿಯೊಳು |
ಒಂದಾಗಿಯೈನೂರ್ವರು ಮುನಿಗಳು ನಿಲೆ | ನಿಂದನಕಂಪಮುನೀಂದ್ರ || ೩೧ ||

ಧೃತಿಯಿಂದ ತನ್ನೊಳು ಮಚ್ಚರಿಪಾಪ | ರ್ವತಿವನಿರದೆ ಮೆಟ್ಟಿದಂತೆ |
ಯತಿನಿಕರದ ಮಧ್ಯದೊಳಗೆಯಕಂಪ | ವ್ರತಿಯೋಗನಿಷ್ಠೆಯೊಳಿರಲು || ೩೨ ||

ಹಿಂದೆ ತಾವನವರೊಳು ವಾದಿಸಿ ಸೋಲ್ತುದ | ರೊಂದು ಪರಾಭವದಿಂದ |
ಅಂದು ಮುನಿಗುಪಸರ್ಗವನೆಸಗುವೆ | ನೆಂದಾಬಲಿಯೆಣಿಸಿದನು || ೩೩ ||

ಅರಸಿನೆಡೆಗೆ ಬಂದು ಬಂಡಾರದೊಳು ನಾ | ನಿದಿಸಿದ ಮೆಚ್ಚೀವುದೆನಲು |
ಭರದಿಂ ಬೇಡು ಕೊಡುವೆನೆನಲೇಳುವಾ | ಸರದೊಡೆತನವ ಬೇಡಿದನು || ೩೪ ||

ಕೊಡೆನೆಂಬೆರಡಕ್ಕರಮನರಿಯನಾಗಿ | ಕಡುಚಾಗಿಯಾಯೇಳು ದಿನದ |
ಒಡೆತನವನು ಕೊಟ್ಟು ತಾನರಮನೆಯೊಳ | ಗಡಗಿದನಿಳೆ ಪೊಗಳ್ವಂತೆ || ೩೫ ||

ಅರಸುತವನ ಪಡೆದಾ ಬಲಿಯಾ ಮುನಿ | ವರಗೆ ಬಾಧೆಯ ಮಾಳ್ಪೆನೆಂದು |
ಧರಣಿಯೊಳುಳ್ಳ ಧರಾಮರರೆಲ್ಲರ | ಕರಸಿದನತಿವೇಗದೊಳಾ || ೩೬ ||

ಹೋಮಕರ್ಮಭೂಸುರಭೋಜನಮುಮ | ನಾಮಹೀಧರದ ಗುಹೆಯೊಳು |
ಪ್ರೇಮದಿ ಮಾಡಬೇಕೆಂದು ಮತ್ತಾ ಮಂತ್ರಿ | ಯಾ ಮಹೀಸುರರ್ಗುಸುರಿದನು || ೩೭ ||

ದಂಡತ್ರಯಧಾರಿಗಳ ದೀಕ್ಷಿತರ ಪ್ರ | ಚಂಡವಾದಿಳ ವಟುಗಳ |
ಮಂಡಳಿನೆರೆದಾತನು ಬೆಸಸಿದುದ ಕೈ | ಕೊಂಡೆಸಗಿದುದತಿ ಭರದಿ || ೩೮ ||

ವರಮುನಿಗಳು ನಿಂದಿರ್ದಾಸೌಮ್ಯಭೂ | ಧರದಗುಹೆಯ ಬಾಗಿಲೊಳು |
ಉರುತರಮಪ್ಪಕರ್ಮದಿ ಕೋಟಿಹೋಮವ | ವಿರಚಿಸಿದರು ಬಿನ್ನಣದಿ || ೩೯ ||

ಅರೆಯೆಡೆ ವಶುಮಾರಣವರೆಯೆಡೆ ಹೋಮ | ವರೆಯೆಡೆ ಭೋಜನದಡುಗೆ |
ಹರಿವರಿಯಾಗಲುರಿವ ಕಿಚ್ಚಿನಿಂದಾ | ಗಿರಿಯೊಲೆಕಲ್ಲವೊಲಾಯ್ತು || ೪೦ ||

ಉರಿದುವು ಮರನೊಡೆದುವು ಕೋಡುಂಗಲ್ಲು | ಕರಿದುವಲ್ಲಿಯ ಕಮ್ಮರಿಗಳು |
ಹುರುಯೋಡಿನಂತಾದುದು ನೆಲನಾಗಿರಿ | ವರದೊಳೇಳುವ ಕಿಚ್ಚಿನಿಂದ || ೪೧ ||

ಹರಿವಿಂಚಿಗಳ ಹೋರಟೆಯಿಂದಾ ಉಗ್ರ | ದುರಿಲಿಂಗವಾದಂದದೊಳು |
ದುರುಳನವನು ಮಾಡಿಸುವ ಹೋಮದುರಿಯಿಂ | ಕರಮೊಪ್ಪಿತಾ ಸೌಮ್ಯಶಿಖರಿ || ೪೨ ||

ಆ ಉರಿಹೊಗೆಯ ನಡುವೆಯುವಶಮವೆಂ | ಬಾವೊರತೆಯ ನಿರ್ಮಲಾಂಬು |
ತೀವಿ ತಮ್ಮಂಗಮನಂತದರಿಂದ ಮ | ತ್ತಾ ಮುನಿಗಳು ಜೀವಿಸಿದರು || ೪೩ ||

ಮುತ್ತಿದ ಕೆಮ್ಮುಗಿಲೊಳು ತಾರೆಗೂಡಿ ತ | ಳತ್ತಳಿಸುವ ಚಂದ್ರನಂತೆ |
ಹೊತ್ತುವ ಶಿಖಿಯೊಳು ಮುನಿಕುಲದೊಡನೆ ಸ | ದ್ವೃತ್ತನಕಂಪನೊಪ್ಪಿರಲು || ೪೪ ||

ಅಲ್ಲಿಗೆ ಬಡಗ ಸಹಸ್ರಯೋಜನ ದೂರ | ದಲ್ಲಿಯೊಂದಾನೊಂದು ಗಿರಿಯ |
ಬಲ್ಲಿತುವಡೆದೊಂದು ಗವಿಯೊಳು ಮನಸಿಜ | ಮಲ್ಲನವಧಿಬೋಧಯುತನು || ೪೫ ||

ಕ್ಷಿತಿನುತ ಸುಗ್ರೀವನೆಂಬ ಹೆಸರಯತಿ | ಪತಿಯಾರಾತ್ರಿಯೊಳೇಳ್ದು |
ಯತಿಯುಪಸರ್ಗಕಂಬರತಳದೊಳಗದು | ಭುತಮಾಗಿ ನೆರೆ ಕಂಪಿಸುವ || ೪೬ ||

ಶ್ರವಣನಕ್ಷತ್ರವ ಕಂಡಿದೇತಕ್ಕೆಂ | ದವಧಿಬೋಧದಿನಾಮುನಿಗೆ |
ವಿದಧೋಪಸರ್ಗಮಪ್ಪದನರಿದೊಡವೆ ಕೆ | ಟ್ಟವರಂತೆ ಮಲುಮಲ ಮರುಗಿ || ೪೭ ||

ಅಯ್ಯಯ್ಯೋ ಕಡುಪಾತಕ ಬಲುಗೊಲೆ | ಗಯ್ಯಪಾರ್ವನು ಬಾಧಿಸುವ |
ಸಂಯಮಿಗಳ ಬಾಧೆಯನು ಬಾರಿಪ ಬಲು | ಗಯ್ಯರ ಕಾಣೆನೆಂಬಾಗ || ೪೮ ||

ನೆರೆದ ಶಿಷ್ಯರುಗಳ ಮಧ್ಯದೊಳೋರ್ವನಂ | ಬರಚರಸದ್ಬ್ರಹ್ಮಚಾರಿ |
ಕರಯುಗಲವ ಮುಗಿದಿಂತೆಂದನೆಲೆಮುನಿ | ವರ ಕೇಳು ನಾನೀಗಲೆಯ್ದಿ|| ೪೯ ||

ವ್ರತಿಯುತರೀಕ್ರಮವನು ಭಾವಿಸುವುದು | ಮತವಲ್ಲವೆಂದಾಖಗನ |
ಅತಿ ಕೋಪವನು ತುಂಬಿಸಿಯಾಸುಗ್ರೀವ | ವ್ರತಿಕುಲತಿಲಕನಿಂತೆಂದ || ೫೦ ||

ವ್ರತಯುರೀಕ್ಷಮವನು ಭಾವಿಸುವುದು | ಮತವಲ್ಲವೆಂದಾಖಗನ |
ಅತಿ ಕೋಪವನು ತುಂಬಿಸಿಯಾಸುಗ್ರೀವ | ಯತಿಯಾಗುಹೆಯ ಮೂಲೆಯೊಳು || ೫೧ ||

ಮಲಗಿರ್ದಾ ವಿಷ್ಣುಮುನಿಯ ಕರೆದು ನೀ | ವಲಸದೆ ನಡೆದಾಯತಿಗೆ |
ಬಲಿ ಮಾಡುವುಪಸರ್ಗವನು ಬಿಡಿಸಿಯೆನೆ | ಸುಲಲಿತಋದ್ಧಿಸಂಯುತನು || ೫೨ ||

ಅಂತೆಗೆಯ್ವೆನೆಂದಾ ನಿಜಗುರುಯತಿ | ಕಾಂತಗೆ ನಮಿಸಿ ಬೀಳ್ಕೊಂಡು |
ಅಂತರಿಸದೆ ಹಸ್ತಿನಪುರಕೆಯ್ದಿ ಭೂ | ಕಾಂತನು ತನ್ನನುಜಾತ || ೫೩ ||

ವಿರತಣಗುಣಿ ಪದ್ಮರಥನೆಡೆಗೆಯ್ದಿ ಕಂ | ಡತಿ ಭಕ್ತಿಭರದಿಂದೇಳ್ದು |
ನತಿಸಿದರೊಡಾತನ ಹರಸಲೊಲ್ಲದೆಯಪ | ಗತರಾಗಯುತಮುಖರಾಗಿ || ೫೪ ||

ವೀತರಾಗಾಸನವನು ತಂದಿರಿಸಿದೊ | ಡೇತಕೆ ನಮಗಿದೆಂದೆನುತ |
ಆ ತಾಪಸಿಯಿಂತೆಂದು ನುಡಿದನಾ | ಭೂತಳಪತಿ ಪದ್ಮರಥಗೆ || ೫೫ ||

ಅರಸನಾದುದಕಿದು ಕುರುಹೇಯಾಮುನಿ | ವರಗಾದುಷ್ಟನ ಮುಖದಿ |
ಪಿರಿದಪ್ಪುಪಸರ್ಗವನು ಮಾಡಿಸಿ ಬಲು | ವರವಡರ್ದಂದದಿನಿಹುದು || ೫೬ ||

ಅನುಚಿತವೆಂಬುದನರಿಯಬೇಡವೆಯೆಂಬ | ಮುನಿವಚನವ ಕೇಳುತವೆ |
ಮುನಿಸುದಳೆದು ಗದ್ದುಗೆ ಹೊಯ್ದು ನನಗೀ | ಘನತರಮಪ್ಪ ಪಾಪವನು || ೫೭ ||

ಮಾಡಿಕೊಡುವ ಪಾತಕಿಯ ತಲೆ ಸೆಂ | ಡಾಡುವೆನೆಂದೇಳುವಾಗ |
ಬೇಡ ನೃಪತಿ ನಿಷ್ಠುರ ಮುಂಚೆ ನೀ ಮೇಲ | ನೋಡದೆ ಕೊಟ್ಟುದಕೀಗ || ೫೮ ||

ಅಳಿಪಿದನೆಮಬಪಕೀರ್ತಿಯದೇಕಾ | ಖಳಗೆ ನಾನಾಜ್ಞೆಯಿಕ್ಕುವುದ |
ಇಳೆಯಾಧಿಪತಿ ನೀನೋಡೆಂದಾಯತಿ | ಕುಲತಿಲಕನು ನಡೆತಂದು || ೫೯ ||

ಪುರವರವೆಲ್ಲನೆರೆದು ಬೆನ್ನಬಿಡದೆಯ | ಚ್ಚರಿವಟ್ಟು ನೋಡುತ ಬರಲು |
ಧರಿಯಿಸಿ ಪಂಚಮತಾಳೋತ್ಸೇಧದ | ವರವಾಮಮನರೂಪವನು || ೬೦ ||

ರನ್ನನ ಕುಂಡಲದಿಂದ ದರ್ಭೆಯಿಂ ಪೊಸ | ಪೊನ್ನುಂಗುರದಿ ಮುಂಜೆಯಿಂದ |
ಜನ್ನಿವಾರದಿ ಶೀಖಿಯಿಂ ಧೋತ್ರದಿಂ ಕಡು | ಚೆನ್ನು ಹಡೆದು ನಡೆತಂದು || ೬೧ ||

ಎಳೆಯ ಮಾಣಿಕದ ಬೊಂಬೆಯೊ ಪವಳದ ಪು | ತ್ತಳಿಯೊಯೆಂಬ ಮಾಳ್ಕೆಯೊಳು |
ವಿಲಸಿತಮಪ್ಪ ವಾಮನರೂಪವನಾಂತು | ಬಲಿಯೆಡೆಗೆಯ್ತುಂದನಾಗ || ೬೨ ||

ಸ್ವಸ್ತಿವಿನುತಭೂಸುರಬಲಿ ನಿರ್ವಿಘ್ನ | ಮಸ್ತು ಸುರಭಿದಾನಿಯೆಂದು |
ಕುಸ್ತುರಿಸಿದ ಮಾಣಿಗೆ ಮಣಿದ ಮಣಿ | ಮಸ್ತಕವನು ಬಾಗಿಸಿದನು || ೬೩ ||

ಹರಸಿದ ಗುಜ್ಜಹಾರುವನಾಕಾರಕೆ | ಪಿರಿದು ವಿಸ್ಮಯಚಿತ್ತನಾಗಿ |
ಸರಸದಿನೆಲೆ ವಟು ಬೇಡು ನಿನ್ನಿಚ್ಛೆಯ | ಭರದಿಂ ಸಲಿಸುವೆನೆನಲು || ೬೪ ||

ದಿನಚರಿ ನಾವು ಕುಳ್ಳಿರ್ದನುಷ್ಠಾನವ | ನಮಗೆಯ್ವೊಡೆಮ್ಮ ಹೆಜ್ಜೆಯೊಳು |
ಅನುರಾಗದಿಂ ಮೂರಡಿ ಭೂಮಿಯನೀವು | ದೆನೆ ಬಲಿಯಿಂತೆಂದನಾ || ೬೫ ||

ಘನತರ ವಸ್ತುವ ಬೇಡದಯಲ್ಪವ | ಮನವಿತ್ತು ಬೇಡಿದೆಯೆನ್ನ |
ಎನುತ ಬೇಡಿದುದನು ಕೊಟ್ಟೆನಳೆದು ಕೊ | ಳ್ಳೆನಲ ಪ್ರಸ್ತಾವದೊಳು || ೬೬ ||

ಬಲಿಯನುಜಾತಭಾರ್ಗವನು ಬಂದೀವಟು | ಸಲೆಯಟಿಮಟಿಗನಿಂತವಗೆ |
ನೆಲನ ಕುಡುವುದನುಚಿತಮೆಂದು ಮುಂದಡ್ಡ | ನಿಲುತಮತ್ಯಾಗ್ರಹಗೆಯ್ಕೆ || ೬೭ ||

ಏಕೆ ದಾನಕೆ ಕಂಟಕನಾಗುವೆಯೆಂದು | ನೂಕುವ ಸಮಯದೊಳವನ |
ಆ ಕೈಯ ದರ್ಭೆಯ ಮೊನೆ ತಾಕಿ ಕಣ್ಣೊಡೆ | ದೇಕಾಕ್ಷನಾದನಾ ಶುಕ್ರ || ೬೮ ||

ಬಳಿಕ ಮೂರಡಿ ನೆಲವನು ಕೊಟ್ಟನೆಲೆ ಮಾಣಿ | ಯಳಿಯೆಂದು ಧಾರೆಯನೆರೆಯೆ |
ಬಲಿ ನೋಡು ನೀನಿತ್ತ | ಭೂಮಿಯನಳೆವನು | ತಳುವಂದೆಂದಾ ವಾಮನನು || ೬೯ ||

ಉರುದುದ್ದ ಕೊರಲುದ್ಧ ತಲೆಯುದ್ಧ ಮಡಿಲುದ್ಧ | ಮರುದುದ್ಧವಾ ಮುಗಿಲುದ್ಧ |
ಮರುತ ಮಾರ್ಗದುದ್ಧಮಾಗಿನೋಳ್ಪವರಿಗ | ಚ್ಚರಿಯಾಗುವಂತೆ ಬೆಳೆದನು || ೭೦ ||

ಆಕಾಶಕೇಶನೊಳೇಕಾಂತವ ಮಾಡ ಬೇಕೆಂದು | ನಿಗರಿ ಬೆಳೆದನೊ |
ನಾಕವ ನಿಲುಕಿ ನೋಡುವೆನೆಂದು ಬೆಳೆದನೊ | ಆ ಕೌತುಕದ ವಾಮನನು || ೭೧ ||

ವರಮಣಿಮುಕುಟ ಕುಂಡಲ ಕೌಸ್ತುಭರತ್ನ | ಕರಕಂಜನಾಭಿನಳಿನದ |
ದೊರೆಯಾದುದದಿನಬಿಂಬವಾ ವಿಷ್ಣು ಗಗನಕ್ಕೆ | ಪರಿವಿಡಿಯಿಂ ಬೆಳೆವಾಗ || ೭೨ ||

ಅಂಬರಪರಿಯಂತ ಬೆಳೆದ ತ್ರಿವಿಕ್ರಮ | ನಿಂಬುವಡೆದ ನಿಜಮುಖಕೆ |
ತುಂಬುದಿಂಗಳು ಸಮ್ಮುಖದೊಳು ನಿಜಮುಕು | ರಂಬೊಲು ಕಣ್ಗೆಡ್ಡಮಾಯ್ತು || ೭೩ ||

ಉಡಿಯಮೇಲಿಟ್ಟ ಮೇಖಲೆಯ ಕಿಂಕಿಣಿಗಳ ಪಡಿಯಾಗಿ ಮಿಗೆ ರಂಣಜಿಸಿದುವು |
ಉಡುನಿಕುರುಂಬುವಂಬರದ ತಲವ ಮುಟ್ಟಿ | ಕಡು ಬೆಳೆದಾ ತ್ರಿವಿಕ್ರಮನ || ೭೪ ||

ಈ ತೆರದಿಂದ ಬೆಳೆದುದೊಂದು ಕಾಲನಿ | ಳಾತಕ್ಕಿಟ್ಟೊಂದು ಕಾಲ |
ಆ ತರಣಿಯ ಸೆಂಡನೊದೆವಂದದಿ ವಿ | ಖ್ಯಾತನೊದೆದನಂಬರಕೆ || ೭೫ ||

ಕಡಲ ಮಧ್ಯದ ಭೂಮಿಯನೆಲ್ಲವನೊಂ | ದಡಿ ಮಾಡಿಯಾಗಸವೆಂಬ |
ಕೊಡೆಗೆ ಮತ್ತೊಂದು ಕಾಲನು ಕಾವನು ಮಾಡಿ | ನಡುಗಿಸಿದನು ಭೂತಳವನು || ೭೬ ||

ಇದು ತಾರಾಸುಮನೋಮಂಜರಿತರು | ವಿದು ಮಾಡಿಯಾಗಸವೆಂಬ |
ಇದು ಸುರನದಿಗಿಟ್ಟ ಕಾಲುವೆಯೆನಲೊಪ್ಪಿ | ದುದು ತ್ರಿವಿಕ್ರಮನ ಕ್ರಮವು || ೭೭ ||

ಗಗನವೆಂದೆಂಬ ಗೂಡಾರಕಿಕ್ಕಿದ ಕಂಬ | ಮುಗಿಲೆಂಬ ಭೂಮಂಡಲವ |
ನೆಗಪಿದ ಪಂಚಫಣಾಶೇಷನವೊಲು | ಸೊಹಯಿಸಿದುದು ವಿಷ್ಣುಪಾದ || ೭೮ ||

ಧರೆಯ ನಡೆವೆನಿಂದು ಮಾನುಷೋತ್ತರಗಿರಿ | ಗಿರಿಸಿ ತಿರುಗುವ ವಿಷ್ಣುವಿನ |
ಚರಣವೊಪ್ಪಿತು ಬಿದಿ ನೆಲವ ನಿರ್ಮಿಸುವಂದು | ತಿರುಹುವ ಕವೆಯರದಂತೆ || ೭೯ ||

ನರಲೋಕದ ನಭದೊಳಗೆಡಬಿಡವಿಲ್ಲ | ದಿರಿಸಿ ತಿರುವುತಿರಲಾಗ |
ಸುರಪನೇರಿದ ಸಿಂಹಾಸನವದಿರಲು | ಸುರಸಮಿತಿಯ ಕೂಡಿಕೊಂಡಿ || ೮೦ ||

ಇರದೆಂಟು ಸಗ್ಗದಿಂದ್ರುರು ಜೋಯಿಸರಾ | ಉರಗೇಂದ್ರ ವ್ಯಂತರಾದಿಗಳ |
ಬೆರಸಿ ಬಂದಾ ನಭದೊಳು ತಿರುಗುವ ವಿಷ್ಣು | ಚರಣವನಂದರ್ಚಿಸಿದನು || ೮೧ ||

ದೇವರ ದೇವನೆ ಜಯಜಯಜಯವೆಂಬ | ದೇವರ್ಕಳುಲುಹನು ಕೇಳಿ |
ಭೂವಲಯಮದೆಲ್ಲ ಪಿರಿದಚ್ಚರಿವಟ್ಟು | ತಾಮಿಳೆಯೊಳು ಪೂಜಿಸಿದುದು || ೮೨ ||

ಬಳಿಕ ಬಲಾರಿ ಕೈಗಳನು ಮುಗಿದು ಮುನಿ | ಕುಲತಿಲಕನ ವಿಗುರ್ವಣೆಯ |
ತಳುವದೆ ಬಿಡಿಸಿಯಾಬಲಿಯನು ಬಂಧನ | ದೊಳಗಿರಿಸುವ ಸಮಯದೊಳು || ೮೩ ||

ಹರುಷದಿ ಗಾಂಧರ್ವರಾ ವಿಷ್ಣುವ ಮುಂದೆ | ಕರಕುಶಲದಿ ಬಾಜಿಸಿದರು |
ವರಗಾಂಧಾರಿ ಸುಘೋಷಣೆಯೆಂಬಾ | ಯೆರಡು ವಿಪಂಚಿಯ ತಂದು || ೮೪ ||

ಆ ವಿಷ್ಣುಮುನಿಪವನ ಬೆಸದಿಂ ಗಾಂಧರ್ವ | ರಾ ವೀಣೆಯನುಭಯವನು |
ಆ ವಸಧಾಧರಪದ್ಮರಥಗೆ ಕೊಟ್ಟು | ತಾವೆಯ್ದಿದರು ತಮ್ಮ ನೆಲೆಗೆ || ೮೫ ||

ಅನಿತರೊಳಾ ಮುನಿಯುಪಸರ್ಗವನು ವಿಷ್ಣು | ಮುನಿಪ ಬಿಡಿಸಿಯಾಬಲಿಗೆ |
ಜನನುರತ್ನಶ್ರಯವನು ಕೊಟ್ಟು ಮ | ತ್ತನುರಾಗದಿಂದೆಯ್ದಿದನು || ೮೬ ||

ಆ ವಂಶದ ವೀಣೆಯಿದು ತಾನೆಂದು ಮ | ತ್ತಾವೀಣೆಯನೆದೆಗಿಟ್ಟು |
ಕೋವಿದ ವಸುದೇವನೃಪತಿ ಬಾಜಿಸಿದನು | ಭಾವಕಿ ಮೆಚ್ಚುವಂದದೊಳು || ೮೭ ||

ಅವ ನುಡಿಯಿಸುವ ವಿಪಂಚಿಯ ನಾದಕೆ | ಯವನವಿಲಾಸದುನ್ನತಕೆ |
ತವೆ ಸೋಲ್ತುಬಂದು ಮಾಲೆಯನು ಸೂಡಿದಳಾ | ಯುವತೀಮಣಿ ಹರುಷದೊಳು || ೮೮ ||

ತನ್ನ ಕೈಗಾತನು ಕೊರಲಿಗೆ ಸಂಕಲೆ | ಯಂ ನೆರೆಹೂಡುವಂದದೊಳು |
ಚಿನ್ನೆ ಮಾಲೆಯ ಸೂಡೆ ಚಾರುದತ್ತನು ಕಂ ಡುನ್ನತ ಹರುಷವಡೆದನು || ೮೯ ||

ಹಸನಾದಂದಿನ ರಾತ್ರಿಯೊಳತಿ ಸಂ | ತಸದಿಂದಿಳೆ ಪೊಗಳ್ವಂತೆ |
ವಸುದೇವಗೆ ಗಾಂಧರ್ವದತ್ತೆಯನಿತ್ತ | ನಸದೃಶವೈಭವದಿಂದ || ೯೦ ||

ಇಂತು ಮದುವೆಯಾಗಿ ಗಾಂಧರ್ವದತ್ತಾ | ಕಾಂತೆಯೊಡನೆ ಭೂವರನು |
ಸಂತತ ಸಮರತಿಯೊಳು ಮನಸಿಜನಿ | ರ್ಪಂತೆಯೊಲಿದು ಸುಖಮಿಹನು || ೯೧ ||

ನೋಟದೊಳಲಸಿಕೆಯಕ್ಕರೊಳುಕ್ಕುವ | ಬೇಟದೊಳಗೆ ಭಿನ್ನಮನಸು |
ಕೂಟದೊಳಗೆ ದಣಿವನು ಪೊರ್ದದಾ ಸತಿ | ನಾಟಿಸಿದನು ತನ್ನೊಳವನ || ೯೨ ||

ಮೇರುಮಹೀಧರಸಮಧೀರ ಮನುಜಮಂ | ದಾರ ಮನೋಜಾತರೂಪ |
ಕಾರುಣ್ಯನಿಧಿ ಕಾಂತಾಜನಹೃದಯ | ಕ್ಷೀರವಾರಾಶಿಚಂದ್ರಮನು || ೯೩ ||

ಇದು ಜಿನಪದಸರಸಿಜಮದಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊವಿದಾಶ್ವಾಸ ಪನ್ನೊಂದು || ೯೪ ||

ಹನ್ನೊಂದನೆಯ ಸಂಧಿ ಸಂಪೂರ್ಣಂ