ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಎರಕದಿಂದಾ ಈರ್ವರೊಳು ಕೂಡಿರಲಾ | ಕಿರಿಯಳು ವಿಜಯಾಂಗನೆಗೆ |
ನೆರೆಗಲಿಯಕ್ರೂರನೆಂಬ ಹೆಸರನಾಂ | ತರಿಕೆಯ ಮಗನುದಿಸಿದನು || ೨ ||

ಅವರೀರ್ವರೊಳಗತಿ ಮೋಹದೊಳಿರ್ದೊಂದು | ದಿನದೊಳಗೀಸತಿಯರೊಳು |
ಅವಿರತಮಿರ್ಪುದೆನಗೆಯನುಚಿತಮೆಂದು | ಕುವರನೆಣಿಕೆಮಾಡಿದನು || ೩ ||

ಒಂದಾನೊಂದು ರಾತ್ರಿಯೊಳಾರಮಣಿಯ | ರೊಂದಿನಿಸರಿಯದಂದನೊಳು |
ಕಂದರ್ಪನಿಭನಾನಗರಿಯ ಪೊರಮ | ಟ್ಟೊಂದಿದಾರಣ್ಯಕೆಯ್ದಿದನು || ೪ ||

ಕರಿಖಳ್ಗದಂಷ್ಟ್ರಾಷ್ಟಾಪದಭಲ್ಲೂಕ | ಹರಿಚಿತ್ರಕಾಯಲುಲಾಯ |
ಪುರುಷಮೃಗಾಮನೀಕಾಸ್ಪದಮಾದ ದು | ರ್ಧತರತ ವಿಪಿನೆಕೆಯ್ದಿದನು || ೫ ||

ಆ ವನದೊಳು ಲಯಕಾಲದ ಕಾರ್ಮುಗಿ | ಲಾವಳಿಯಾಗಸದಿಂದ |
ಭೂವಲಯಕೆ ಬಂದಂತಿರಾನೆಯಹಿಂಡು | ತೀವಿ ಭೀಕರಮೆಯ್ದಿದುದು || ೬ ||

ಆ ಕರಿಗಳ ಮಧ್ಯದೊಳಗೊಂದು ಮದಹಸ್ತಿ | ನಾಕಾಧಿಪನ ಗಜದಂತೆ |
ಆಕಾರವಡೆದುನ್ಮದವೇರಿ ನಡೆದುಬಂ | ದಾಕುವರನ ಕಂಡುದಾಗ || ೭ ||

ಮರಗಳ ಕಿಳ್ತು ಪಿರಿಯ ಮರಗಳ ಹೊ | ಯ್ದುರುಳಿಸುತವೆ ಕಗ್ಗಲ್ಲ |
ಮೊರಡಿಯನಾಕೊಂಬಿನಿಂ ನುಗ್ಗು ನುರುಮಾಡು | ತಿರದೇಯ್ದಿತಾಭದ್ರಹಸ್ತಿ || ೮ ||

ಈ ನವಮದಮಾತಂಗಮನೇರಿದೊ | ಡಾನೆವಿನ್ನಾಣಿನಾನಹೆನು |
ಈ ನೆಲಕೋರ್ವನೆಯನುತದಕಣ್ಮು | ತ್ತಾನದೆ ಸರಿದೋರಿದನು || ೯ ||

ತುಳಿಲಾಳಿನಾಸರವನು ಕೇಳುತಾಗಳೆ | ಬಳಿಯ ಪಾವಿನಮಾಳ್ಕೆಯೊಳು |
ಇಳಿದ ಸುಂಡಿಲನೆತ್ತಿಯಿದಿರಾಗಿ ಬಂದು ಬ | ಲ್ಮುಳಿಸಿಂದ ಮೇಳ್ವಾಯ್ತಾಗ || ೧೦ ||

ದಂಡಧರನ ಕೋಣನುರೆ ಮುಳಿದವೊಲುವೇ | ತಂಡನುಗ್ರದಿನೆಯ್ತಂದು |
ಸುಂಡಿಲನೆತ್ತಿ ಪೊಡೆಯಲು ಕುನುಂಗಿ ಭೂ | ಮಂಡಲಾಧಿಪನುರುಳಿದನು || ೧೧ ||

ಧರೆಗುರುಳುವ ನೃಪತಿಯ ಕಂಡುನ್ಮದ | ಕರಿದಂತಯುದದಿಂದ ತಿವಿಯೆ |
ಹರನಡಿಗಾಣಲೆಂದಾ ಹರಿಯಿಳೆಯ ಸೂ | ಕರನಾಗಿ ತಿವಿದಂತಾಯ್ತು || ೧೨ ||

ತಿವಿದಾನೆಯ ದಂತದ್ವಯಮಧ್ಯದೊ | ಳವನಿಪ ಜಗುಳಿಸಿಲ್ಕದೊಡೆ |
ತವಕದಿ ಪಿಡಿದ ರಾಹುವಿನದಾಡೆಯೊಳೊ | ಪುವ ಚಂದ್ರನತೊಪ್ಪಿದನು || ೧೩ ||

ಎರಡು ಕೋಡೆಡೆ ಸಿಲ್ಕಿದರಸನೊಪ್ಪಿದನಾ | ಕರಿಯೆಂದೆಂಬ ಕಮ್ಮರನ |
ಕರದೊಳಗಣಸಮದಳವವರಿಂದ ಹೊನ್ನ | ಸುರಗಿಯೆಂದೆಂಬ ಮಾಳ್ಕೆಯೊಳು || ೧೪ ||

ಚಂಡವಿಕ್ರಮ ದಂತದಿಂ ಸಾಯದಿರ್ದೊಡೆ | ಕಂಡು ಕೋಪದೊಳಿಡಾಡಿ |
ಸೆಂಡನೊದೆವ ತೆರದಿಂದಾಮದವೇ | ತಂಡನೊದೆಯಿತಡಿಯಿಂದ || ೧೫ ||

ಒದೆಯಲೊಡನೆ ಕಾಲಬಾಯಿಗೆ ಸಿಲ್ಕದೆ | ಪದಪಿಂದರುಳಿ ಬಳಿಕ್ಕ |
ಮದವಂತಿಯ ನಾಲ್ಗಾಲ ನಡುವೆ ಭೂ | ಸುದತೀಪತಿನಿಂದಾನಾಗ || ೧೬ ||

ಏನೆಂಬನಾ ಸಾಸಿಗನ ಬಲುಮೆಯನಾ | ಆನೆ ಬಿಟ್ಟೊಡೆ ತಾನು ಬಿಡದೆ |
ನಾನಾತೆರದೊಳದರ ಕೂಡೆ ಮಿಗೆ ಹೋರಿ | ತಾನತಿಕೀರ್ತಿವಡೆದನು || ೧೭ ||

ಬತ್ತೀಸತೆರದ ಬಿನ್ನಣದಿಂದಾ ಭೂ | ಪೋತ್ತಂಸನತ್ಯುಗ್ರಮಪ್ಪ |
ಮತ್ತಗಜವ ಬಳಲಿಸಿ ಬಳಿಕಾ ಬೆನ್ನ | ಹತ್ತುವೆನೆಂದೆಣಿಸಿದನು || ೧೮ ||

ಕಡುಸೊಗಯಿಪ ಕಾರ್ಗಾಲದ ಮುಗಿಲನು | ಕುಡಿಮಿಂಚು ಹತ್ತುವಂದದೊಲು |
ತಡಮಾಡದೆ ತತ್ಕರಿಯ ಬೆಂಗಡೆಗಾ | ಕಡುಗಲಿಯಣ್ಮುತೇರಿದನು || ೧೯ ||

ಹರಿನೀಲರತ್ನರಚಿತದ ಮಾಡದ ಮೇಲೆ | ಸುರುಚಿರಮಪ್ಪ ಹೊಂಗಳಸ |
ಕರಮೆಸವಂತಾಕರಿಯ ಕಂಧರದೊಳು | ನರನಾಥಚಂದ್ರನೊಪ್ಪಿದನು || ೨೦ ||

ಕರಿಯಮುಗಿಲಚೂಳಿಕೆಯನೇರಿದ ಶೀತ | ಕರಮಂಡಲದಮಾಳ್ಕೆಯೊಳು |
ಉರುಮದವೇರಿದಕರಿಯ ತಲೆಯನಾ | ಅರಮಗನೇರಿಯೊಪ್ಪಿರಲು || ೨೧ ||

ಆ ಪ್ರಸ್ತಾವದೊಳಂಬರದಿಂದಮ | ತಿಪ್ರೌಢಖಚರರೆಯ್ತಂದು |
ಆ ಪ್ರಭುವಂಶಭಾನುವ ಪಾದಕೆ ಮಕು | ಟಪ್ರಭೆಯರ್ಘ್ಯವೆತ್ತಿದರು || ೨೨ ||

ಮತ್ತೆ ತುಳಿಲುಗೆಯ್ದಿಂತೆಂದರೆಲೆ ಭೂ | ಪೋತ್ತಂಸ ವಿಜಯಾರ್ಧಗಿರಿಯ |
ಉತ್ತರದಿಕ್ ಶ್ರೇಣಿಯಕುಂಜರಾವರ್ತ | ಪತ್ತನಮೆಂಬುದೊಪ್ಪಿಹುದು || ೨೩ ||

ಅಲ್ಲಿಯಶನಿವೇಗನೆಂಬೋರ್ವಖೇಚರ | ವಲ್ಲಭನಿಹನವನಣುಗೆ |
ಸಲ್ಲಲಿತಾಂಗಿ ಶಾಲ್ಮಿಲಿದತ್ತಯೆಂಬೋರ್ವ | ಫುಲ್ಲಾಕ್ಷಿ ಕಣ್ಗೊಪ್ಪಿದಳು || ೨೪ ||

ಆ ದೇಶದೊಳಾಕೆಗೆಯನುರೂಪಾದ | ಕಾದಲರಾರಿಲ್ಲದಿರಲು |
ಖೇದಹೃದಯನಾಗಿ ನಮ್ಮರಸಿರಲಲ್ಲಿ | ಗಾದೇಶವಿದನೋರ್ವನೆಯ್ದಿ || ೨೫ ||

ಈ ಮದಹಸ್ತಿಯನೀ ಹಳುವಿನೊಳೇರಿ | ಬಾ ಮಹಿಮನೆ ನಿನ್ನ ಸುತೆಗೆ |
ಪ್ರೇಮದ ಪೊಸಮದುವಳಿನಾಗುವನೆಂ | ಬಾ ಮಾತನಾಡಿದನವನು || ೨೬ ||

ಆ ನುಡಿಗೇಳಿಯಶನಿವೇಗಖಚರೇಂದ್ರ | ನಾನಂದದಿಂದೆಮ್ಮ ಕರೆದು |
ಈ ನಡುಗಾಡೊಳು ನಮ್ಮೀರ್ವರನಂ | ದಾನೆಗಾವಲನಿರಿಸಿದನು || ೨೭ ||

ಅಂದಿಂದಡವಿಯಮಿಗಮಾಗಿ ನಾವು ಮ | ತ್ತೊಂದು ಕಡೆಗೆ ಪಜ್ಜೆಗಳನು |
ಒಂದುಗಳಿಗೆ ತೆಗೆಯದೆ ಕಾವಲಿರ್ದೆವು | ಇಂದು ನೀನೀ ಎಡೆಗೆಯ್ದಿ || ೨೮ ||

ಸಾಸಿಗನಾಗಿಯಾದೇಶಪುರುಷನಾಗಿ | ಈ ಸಿಂಧುರದ ಮಸ್ತಕವನು |
ಓಸರಿಸದೆ ಹತ್ತಿದೆ ನಮ್ಮ ಸುಕೃತದಿ | ವಾಸವನಿಭಶಕ್ತಿಯಿಂದ || ೨೯ ||

ಬಲ್ಮಾನಿಸದೆ ಕೆಳನ್ಯಪುರುಷರೆಂಬ | ಶಾಲ್ಮಲಿಗರಗಿಳಿಯಾದ |
ಶಾಲ್ಮಲಿದತ್ತೆಯೊಡನೆಯೆಡೆವರಯದೆ | ನಲ್ಮೆಯಿಂದೊಡಗೂಡಲೇಳು || ೩೦ ||

ಎಂದು ವಿಮನವನೇರಿಸಿಕೊಂಡಾ | ನಂದದಿನಾ ಕುಮಾರಕನ |
ಅಂದವರೊಡಗೊಂಡು ಪೋಗಲಶನಿವೇಗ | ನಂದನೆಯನು ಕೊಟ್ಟನವಗೆ || ೩೧ ||

ಆ ಶಾಲ್ಮಿಲಿದತ್ತೆಯೊಳು ವಸುದೇವಭೂ | ಮೀಶನೆಲ್ಲಾಪಗಲಿರುಳು |
ಆಸಕ್ತಿಯಿಂ ಮೈಮರೆದನು ತಮ್ಮಾ | ದೇಶಕೋಶಾನಗರಿಯ || ೩೨ ||

ಮತ್ತಾಬಾಲೆಯ ಬಸಿರೊಳು ಧ್ರುವನೆಂ | ಬುತ್ತಮಸತ್ವಸಂಯುತನು |
ಚಿತ್ತಸಂಭವಸನ್ನಿಭಸೌಂದರ್ಯನು | ತ್ಪತ್ತಿವಡೆದು ರಂಜಿಸಿದನು || ೩೩ ||

ದಂಪತಿಗಳು ತರಿಮನಸಿಜರಂತೆಯ | ಲಂಪಿನಜೀವನಮಾಗಿ |
ಪೊಂಪುಳಿಗೊಂಡು ಸುಖದೊಳಿರೆ ಬಂದುದು | ಸೊಂಪಿವಾಚೈತ್ರಮಾಸ || ೩೪ ||

ಆ ಉಷ್ಣದಿವಸಸೊಂದಿರುಳು ಹರ್ಮ್ಯದಮೇಲೆ | ಭಾವಭವಕ್ರೀಡೆಯಿಂದ |
ತೀವಿದ ಮೈಯ ಬಳಲ್ಕೆಯಿಂದೊರಗಿ ಮ | ತ್ತಾವರವನಿತೆಯರಿರ್ದು || ೩೫ ||

ಪಡಿಯ ಹೊಚ್ಚಿಸೊಡುಬ್ಬೆ ತಾಗುವುದೆಂದಾ | ಮಡಿಯೆಡದಿತೋಳೊಳೊರಗೆ |
ಬಡಗಾಳಿಗೆ ಮೈಯೊಡ್ಡಿ ನೃಪಾತ್ಮಜ | ನಡಸಿದ ನಿದ್ರೆಯೊಳಿರಲು || ೩೬ ||

ಬಳಸಿದುರಗಿಯ ಬಿಡಿಸಿ ಬಾವನ್ನವ | ನೆಳೆದೊಯ್ವಂತೋರ್ವ ಖಳನು |
ಲಲನೆಯ ತೋಳತಳ್ಪವನು ಬಿಡಿಸಿ ನೃಪ | ತಿಲಕನ ಕೊಂಡೊಯ್ದನಾಗ || ೩೭ ||

ಅನಿತರೊಳಾ ಖೇಚರಿ ತನ್ನ ತೋಳೊಳ | ಗಿನೆಯನಿಲ್ಲದಿರೆ ಕಣ್ದರೆದು |
ಕನಲಿ ಕಾಸೆಯನುಟ್ಟು ಕಂಚುಕವನೆ ತೊಟ್ಟು | ಘನವೇಣಿಯನನು ಮಾಡಿ || ೩೮ ||

ಕರುವಾಳುಖೇಟಕವನು ಕರದೊಳಗಾಂತು | ಮಾರುತಮಾರ್ಗದೊಳು ವಲ್ಲಭನ |
ಭರದಿಂ ಕೊಂಡೊಯ್ವ ಖಳನನಟ್ಟಿದಳಾ | ಸ್ಮರವೀರಲಕ್ಷ್ಮಿಯಂದದೊಳು || ೩೯ ||

ಪರಿಮಳವನು ಕಳ್ದೊಯ್ವನಿಲನ ಬೆನ್ನ | ಪರಿದು ಪಿಡಿವ ತುಂಬಿಯಂತೆ |
ಅರಸನ ಕೊಂಡೊಯ್ವ ಖಚರನ ಬೆನ್ನ ಪ | ಲ್ಮೊರೆವುತಯ್ದಿದಳಾ ತರುಣಿ || ೪೦ ||

ಬಿಡುಬಿಡು ಬೀರಾಳನು ಬಿಡದಿರ್ದೊಡೆ | ಕಡಿಖಂಡಮಾಳ್ಪೆನೆಂದಸಿಯ |
ಬಡಿವುತೊಪ್ಪಿದಳು ತಳತ್ತಳಿಸುವ ಮಿಂಚ | ಪಿಡಿದಂಬರಲಕ್ಷ್ಮಿಯಂತೆ || ೪೧ ||

ಸೋಗೆಯ ಕಳರವವನು ಕೇಳಿಯಳಿಕಿದ | ನಾಗರು ಹಿಡಿದ ಸೌರಭವ |
ಬೇಗಲುಗುಳುವಂತೆಯವಳದನಿಗೆಯಂಜು | ತಾಗಲವನು ಬಿಟ್ಟು ಪೋದ || ೪೨ ||

ನೆಕುರುಳುವ ಭೂಪಾಲಭಾನುವನಾ | ಲಲನೆ ತಾಮರೆಗೈಯೊಳಾಂತು |
ನೆಲೆಮೊಲೆಯೊಳಗಿಟ್ಟು ಬಾಯಿಗೆ ಬಾಯತಂ | ಬುಲಮಿಕ್ಕಿ ಮಗುಳಿದಳಾಗ || ೪೩ ||

ಅನಿತರೊಳಂಬರದೊಳಗೊಂದು ದೇವ | ದ್ವನಿಯೆಲೆಖಚರಿಯೀ ನೃಪನ |
ವಿನಯದಿ ಭೂತಳಕಿಳುಹಲು ಕೆಲವಾನು | ದಿನಕೆ ನಿನ್ನೆಡಗೆಯ್ದುವನು || ೪೪ ||

ನಿನ್ನ ಜನಕನ ಮನೋರಥಕೀ ವಿಕ್ರ | ಮೋನ್ನತ ಸಾರಥಿಯಹನು |
ಇಂತಿದು ನಿಶ್ಚಯಮೆನೆ ನಾಲ್ದಸೆಯನಾ | ಭಿನ್ನಸ್ತನೆ ನೋಡಿದಳು || ೪೫ ||

ಇದು ದೇವವಚನಮಲಂಘ್ಯವೆನುತ್ತಾ | ಸದಮಲಗುಣಸಂಯುತನ |
ಚದುರೆ ಖೇಚರಿಪರ್ಣಲಘುವಿದ್ಯೆಯೊಳು ಕೊಡ | ಲದು ಧರಣಿತಳಕೆಯ್ದಿ || ೪೬ ||

ಅಂದದೇಶದ ಚಂಪಾಪುರವರದು | ನಂಗೊಳಿಸುವ ನಂದನದೊಳು |
ಸಿಂಗರಿಸಿದ ಲತೆವನೆಯೊಳಗಿಳುಹಿತ | ಭಂಗನಾವಿದ್ಯೆಯನು || ೪೭ ||

ನಲ್ಲಳ ತೋಳತಳ್ಪದ ಮೇಲಾನೃಪ | ವಲ್ಲಭನೊರಗಿದಂದದೊಳು |
ಉಲ್ಲಾಸದಿಂದಾಲತಿಕಾಮಂದಿರ | ದಲ್ಲಿ ಮೈ,ಮರೆದೊರಗಿರಲು || ೪೮ ||

ಮುಂದೆಸೆಯೊಳು ಮೂಡುವ ಕೆಂಪುಗಂಡಾ | ನಂದನವನದ ಪಕ್ಕಿಗಳ |
ಸಂದಣಿ ಚಿಲಿಮಿಲಿಯೆಂಬ ವೇಳೆಗೆ ನೃಪ | ಕಂದರ್ಪದಿಟ್ಟಿದರೆದನು || ೪೯ ||

ಬಟ್ಟಜವ್ವೆನೆಯ ತೆಕ್ಕೆಯ ಕಾಣದೆ ಚೋದ್ಯ | ವಟ್ಟಾಯೆಡೆಯಿಂದೇಳ್ದು |
ದಿಟ್ಟನು ಬುರತಿರ್ದು ಉದಯದೊಳೆದ್ದಾ | ಬಟ್ಟೆಯೊಳಗೆ ಬರ್ಪಜನವ || ೫೦ ||

ಎಲೆಯಣ್ಣಗಳಿರಾ ಇದೆಲ್ಲಿಯ ಬಟ್ಟೆ ಈ | ನೆಲನಾವುದು ಪೇಳಿಮೆನಲು |
ಚೆಲುವನೀಯಣ್ಣನಾಗಸವನೊಡೆದು ಭೂ | ತಳಕೆಬೀಳ್ದವರಂದದೊಳು || ೫೧ ||

ಕೇಳುವ ಪರಿಯಚ್ಚರಿಯೆಂಬರ ಮಾತ | ಕೇಳಿ ಮುಗುಳ್ನಗೆ ನಗುತ |
ಆ ಲಲಿತಾಂಗನು ಬಂದೊಂದು ಕೊಳ ಹೊಕ್ಕು | ಲೀಲೆಯಿಂದವೆ ಮೊಗದೊಳೆದು || ೫೨ ||

ಬಳಿಕಾಯೆಡೆ ವಾಸುಪೂಜ್ಯತೀರ್ಥೇಶರ | ನಿಲಯಮಿರಲು ಕಂಡುಬಂದು |
ಆ ಲಘುಭಕ್ತಿಯೊಳುವಂದಿಸಿ ಸಿದ್ಧಶೇಷೆಯ | ತಲೆಗಿಟ್ಟುಕೊಂಡು ಭೂವರನು || ೫೩ ||

ಆಯೆಡೆಯೊಳಗಿರ್ದ ಬೋಧಸಿಂಧುಗಳೆಂ | ಬಾಯತಿರಾಜಗೆ ಮಣಿದು |
ಆ ಉರುಳಾದ ವೃತ್ತಾಂತವನೆಲ್ಲವ | ನೊಯ್ಯಾರದಿಂ ಕೇಳಿದವಗೆ || ೫೪ ||

ಮನುನಿಭ ನಿನ್ನ ಶಾಲ್ಮಲಿದತ್ತೆಯ ನಿಜ ಕನಕನಶನಿವೇಗನಿಗೆ |
ಮುನಿದೋರ್ವನಂಗಾರವೇಗನೆಂಬವನಾ | ತನ ಪಿರಿಯಣ್ಣನ ಮಗಳು || ೫೫ ||

ನಾಡು ಬೀಡೆಲ್ಲವನಿರದೆ ಸುಲಿದುಕೊಂ | ಡೋಡೊಸಲಾಗಿರಿವರದ |
ಕಾಡೊಳಗೊಂದು ಪಟ್ಟಣವನಶನಿವೇಗ | ಮಾಡಿಕೊಂಡಿರ್ದೊಂದು ಪಗಲು || ೫೬ ||

ಚಾರಣರನು ಕಂಡು ನನಗೆ ನಮ್ಮಾನಾಡು | ಸೇರುವುದೆಂದಿಗೆಂದೆನಲು |
ಭೂರಮಣೀಪತಿ ನಿನ್ನ ಪಿರಯ ಸುಕು | ಮಾರಿಗೆ ಭೂಚರನೋರ್ವ || ೫೭ ||

ಅಸುಗೀಶನಾಗುವನವನ ತನೂಜನ | ದೆಸೆಯಿಂದಹುದೆಂದವರು |
ಉಸುರಲಂತದಕೆಯಶನಿವೇಗ ಮಿಗೆ ಸಂ | ತಸಗೆಯ್ಯಲಾ ವಾರ್ತೆಯನು || ೫೮ ||

ಕ್ಷುದ್ರಮಾನಸನಂಗಾರವೇಗನು ಕೇಳಿ | ಛಿದ್ರಾನ್ವೇಷಿಯಾಗಿರ್ದು |
ರೌದ್ರನಾಗಿ ನಡೆತಂದು ನೀನವಳೊಳು | ನಿದ್ರೆಯೊಳೊರಗಿರೆ ಕಂಡು || ೫೯ ||

ನಿನ್ನೆನೆತ್ತಿಕೊಂಡು ಪೋಗುತ್ತಿರಲಾ | ಚಿನ್ನೆ ಕನಲಿ ಬೆನ್ನೊಳೆಯ್ದಿ |
ನಿನ್ನ ಬಿಡಿಸಿಕೊಂಡಶರೀರವಚನವ | ತಾಂ ನೆರೆಕೇಳಿಯೀಯೆಡೆಗೆ || ೬೦ ||

ಒಯ್ಯಾರದಿಂ ಬಿಡಿಯಿಸಿದ ವೃತ್ತಾಂತವ | ನಾ ಯತಿಪುಂಗವನುಸುರೆ |
ಕಾಯಜಸನ್ನಿಭನವರನು ಬೀಳ್ಕೊಂ | ಡಾಯೆಡೆಯಿಂದೆಯ್ದಿದನು || ೬೧ ||

ಅಲ್ಲಿನಗತಿ ದೂರದೊಳೊಂದು ಕರ್ವಿನ | ವಿಲ್ಲದಟಂಕಾರದಂದದೊಳು |
ಮೆಲ್ಲನುಲಿವುತಿರೆಯದನರಿದಪೆನೆಂ | ದುಲ್ಲಾಸದಿಂದೆಯ್ದಿದನು || ೬೨ ||

ಆ ರಂಜಿಸುವ ಇಂಚರದ ಪಜ್ಜೆಯವಿಡಿ | ದಾ ರಾಜಸುತನಾಬಳಿಗೆ |
ಆರೈವುತ ಪೋಗಿ ಕಂಡನೊಂದರ್ಹಾ | ಗಾರದಮಣಿಮಂಟಪವನು || ೬೩ ||

ಮತ್ತದರೊಳಗಭಿನವಶಾರದೆಯಂತೆ | ಮೊತ್ತದ ಸಖಿಯರ ನಡುವೆ |
ವೃತ್ತಪಯೋಧರೆ ಪಿಡಿದು ವೀಣೆಯ ಬಾಜಿ | ಸುತ್ತಿರಲಲ್ಲಿಗೆಯ್ದಿದನು || ೬೪ ||

ನವವಿಧಮಪ್ಪಾವೀಣೆಯಿಂಚರವನು | ಭೂವನಾತಿಶಯರೂಪವಡೆದ |
ಯುವತಿಯನೋಡುವೆನೆಂದೊಂದು ಕಂಬವ | ನವನಿಪ ಮರೆಗೊಂಡನಾಗ || ೬೫ ||

ಆ ಮಣಿಗಂಬವ ಮರೆಗೊಂಡು ನಿಂದರೆ | ಭಾಮಿನಿಗಭ್ಯಾಸಿಸುವ |
ಆ ಮನೋಹರನೆಂಬ ಗಾಂಧರ್ವಾಚಾರ್ಯ | ನಾ ಮಹಿಮನ ಕಂಡನಾಗ || ೬೬ ||

ಆರಿವೆನಂದು ನಿರೀಕ್ಷಿಸಿಯವನಾ | ಕಾರಕೆ ಮಿಗೆಮೆಚ್ಚಿ ತನ್ನ |
ಸಾರಕೆ ಕರೆದೊಲ್ಮೆಯೊಳು ಕುಳ್ಳಿರಿಸಿದನಾ | ಕಾರಣಪುರುಷನನಂದು || ೬೭ ||

ಅನ್ನೆಗಮಾಬಸದಿಯ ಪದ್ಮಾವತಿ | ಕನ್ನೆಯ ವೀಣೆಯಿಂಚರಕೆ |
ಚೆನ್ನಾಗಿ ಮೆಚ್ಚಿ ಪಸಾಯನಮಿತ್ತಳು | ತನ್ನ ಮಂಡೆಯ ಕುಸುಮವನು || ೬೮ ||

ಕಾಮಿತಫಲಸಿದ್ಧಿಯಾದುದೆಂದಾ ಹೂವ | ನಾ ಮುಡಿಗಿಟ್ಟು ಚಿತ್ತದೊಳು |
ಕಾಮನಿಭನಿಗಿತ್ತು ಗುರುವಿಗೆ ವಂದಿಸಿ | ಭಾಮೆ ಮನೆಗೆ ಪೋದಳಿತ್ತ || ೬೯ ||

ಆ ಉತ್ತಮರೂಪನೆಯ್ದಲೊಡನೆ ಪ | ದ್ಮಾವತಿಯವಳ ಪುಷ್ಪವನು |
ತೀವಿದೊಲವಿನಿಂ ಕೊಟ್ಟಳಂತದರಿಂ | ದೀ ವನಿತೆಗೆ ವರನಿವನು || ೭೦ ||

ಎಂದಾಚಾರ್ಯನು ಮನಕನುರಾಗದಿ | ತಂದು ಮುಗುಳ್ನೆಗೆಯಿಡಲು |
ಕಂದರ್ಪಸನ್ನಿಭನಂತದನರಿದಿಂ | ತೆಂದವನೊಳನಾಡಿದನು || ೭೧ ||

ಈ ನಾರೀಮಣಿ ಯಾವರಾಯನ ಮಗ | ಳೇನೆಂಬಹೆಸರು ಮತ್ತಿವಳ್ಗೆ |
ಏನು ಕಾರಣ ವೀಣೆಯ ಸಾಧನೆಯೆನ | ಲಾ ನುಡಿಗಿಂತೆಂದನವನು || ೭೨ ||

ಚಿತ್ತಜನಿಭಕೇಳೀ ನಗರಿಯ ಚಾರು | ದತ್ತ ವಣಿಗ್ವರನಣುಗೆ |
ಉತ್ತಮ ಸೌಂದರ್ಯಾನ್ವಿತೆ ಗಾಂಧರ್ವ | ದತ್ತೆಯೆಂಬರಿಕೆಯರಮಣಿ || ೭೩ ||

ಈ ವೀಣೆಯ ರಮ್ಯವಾದನದಿಂ ತನ್ನ | ನಾನನೋರ್ವನು ಗೆಲಿದವನೆ |
ಜೀವಿತೇಶ್ವರನೆಂಬೊಂದು ಪ್ರತಿಜ್ಞೆಯ | ನಾ ವಧು ಮಾಡಿಕೊಂಡಿಹಳು || ೭೪ ||

ಅದರಿಂದಾ ವೈಶ್ಯವಿಭು ತಿಂಗಳಿಗೊಮ್ಮೆ | ಪದೆದು ವೀಣಾಸ್ವಯಂವರವ |
ಒದವಿಸೆ ನಾಡನೃಪಪಾತ್ಮಜರೆಯ್ತಂ | ದದು ಘಟಿಸದೆ ಪೋಗುತಿಹರು || ೭೫ ||

ಎಂದೆನಲೀ ನುಡಿಯೀ ನಡೆಯೇ ಗಾಡಿ | ಒಂದಿದ ಸಿಂಗಾರದೇಳ್ಗೆ |
ಸಂದ ಸೊಬಗು ಭೂಚರಸತಿಯರಗಿಲ್ಲ | ವೆಂದು ನುಡಿದನಾನೃಪತಿ || ೭೬ ||

ಆ ನುಡಿಗೇಳಿಯಾಚಾರ್ಯನಿಂತೆಂದನು | ಮಾನನಿದಾನನಕೊಡೆ |
ಭೂನುತ ಚಾರುದತ್ತನ ಕಥನವನು ಮ | ತ್ತಾನಾರಿಯ ಹುಟ್ಟುಮೆಟ್ಟು || ೭೭ ||

ವೈಶ್ರವಣೋಪಮನಾಚಾರುದತ್ತರಾ | ಜಶ್ರೇಷ್ಠಿಯ ಸತ್ಕಥನವ |
ವಿಶ್ರುತನಾ ಮನೋಹರ ಪೇಳೆ ಕೇಳ್ದನಾ | ಆಶ್ರಿತಜನಕಲ್ಪಕುಜನು || ೭೮ ||

ಇದು ಜಿನಪದಸರಸಿಜಮದಮಧುಕರ | ಚದುರ ಮಂಗರಸ ರಚಿಸಿದ |
ಮದನಾರಿ ನೇಮಿಜೀನೇಶಸಂಗತಿಯೊಳ | ಗೊದವಿದ ಸಂಧಿಯೊಂಬತ್ತು || ೭೯ ||

ಒಂಬತ್ತನೆಯ ಸಂಧಿ ಸಂಪೂರ್ಣಂ