ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಅರಿನೃಪಮರ್ದನನರುಹದ್ದಾಸಗೆ | ಸರಸಿಜಮುಖಿ ಜಿನದತ್ತೆ |
ಅರಸಿಯಾದಳು ಫಣಿಪತಿಗೆ ಪದ್ಮಾವತಿ | ವರಸತಿಯಾದಂದದೊಳು || ೨ ||

ಆ ನರನಾಥಚಂದ್ರಗೆ ಜಿನದತ್ತೆಯ | ಮಾನಿತಮಪ್ಪ ಗರ್ಭದೊಳು |
ಮೀನಕೇತನನ ಮಿಸುಪರೂಪನಾಂತೋರ್ವ | ಭೂನುತಸುತನುದಯಿಸದ || ೩ ||

ಜನಿಸಿದ ಸಿಸುಗಪರಾಜಿತನಾಮವ | ನನುರಾಗದಿಂದವರಿಡಲು |
ವಿನುತಮಪ್ಪೆಲ್ಲಾ ಕಲೆಗೂಡಿ ಬೆಳೆದನಾ | ವನಧಿಕುಮಾರನಂದದೊಳು || ೪ ||

ಚತುರಕಲಾಭಿಜ್ಞನೆನೆ ರಂಜಿಪಪರಾ | ಜಿತಗೆ ಮದುವೆಯ ಮಾಡಿದನು |
ಅತಿಮುದದಿಂದ ಪ್ರೀತಿಮತಿಯೆಂಬವನಿಪ | ಸುತೆಯನಿಳಾಧೀಶ್ವರನು || ೫ ||

ಜ್ಯೋತಿರ್ಲೋಕಮ ಸೌಮ್ಯವೆರಸಿ ಜೈ | ವಾತೃಕನಾಳುವಂದದೊಳು |
ಆ ನುಜಾತಸಹಿತ ಭೂಪಾಲನಿ | ಳಾತಳವನು ಪಾಲಿಸುತ || ೬ ||

ವಿಮಲವಾಹನರೆಂಬ ತೀರ್ಥಾಧೀಶರ | ಸಮವಸರಣದೆಡೆಗೈದಿ |
ಕ್ರಮದಿಂ ಧರ್ಮಾಧರ್ಮವೆಲ್ಲವ ಕೇಳ | ಲಮರಿತು ನಿರ್ವೇಗಮವಗೆ || ೭ ||

ಸನ್ನುತನಪರಾಜಿತಗೆ ಭೂಭಾರವ | ನುನ್ನತವಿಭವದೊಳಿತ್ತು |
ತನ್ನ ಸುದತಿ ಜಿನದತ್ತೆ ಸಹಿತ ಸಂ | ಪನ್ನನು ದೀಕ್ಷೆದಳೆದನು || ೮ ||

ಸುರಚಿರಗುಣಿಯಪರಾಜಿತಸುಕುಮಾರ | ನಿರದಾಶ್ರಾವಕವ್ರತವ |
ಧರಿಸಿ ಬಳಿಕ ನೀತಿಯಮೀರದಿಳೆಯನು | ಪರಿಪಾಲಿಸುತಿರ್ದನತ್ತ || ೯ ||

ಮುನಿಪತಿಯರುಹದ್ದಾಸನು ವಿಮಲವಾ | ಹನರೊಡನಘಶೃಂಖಲವನು |
ಘನವಾಗಿ ಪರಿದು ಬಳಿಕ್ಕಪವರ್ಗಾ | ವನಿಗೆ ಪೋದನು ಧರೆ ಪೊಗಳೆ || ೧೦ ||

ನಿರ್ವಾಣಪೂಜೆಯನೆಸಗುವೆನೆಂದು ಸು | ಪರ್ವಾಣನಾಥನು ಬಗೆದು |
ಸರ್ವದಿವಿಜರೊಡಬರಲು ವಾದ್ಯವ ರವ | ಪರ್ವಿದುದೆಣ್ದೆಸೆಗಳನು || ೧೧ ||

ಆ ವಾದ್ಯದ ರವಗೇಳ್ದಪರಾಜಿತ | ಭೂವಲ್ಲಭ ನಿಜಜನಕ
ಕೈವಲ್ಯಕೆ ಪೋದನೆಂಬುದನರಿಯಲು | ತೀವಿತು ಮೂರ್ಛೆಯಂಗದೊಳು || ೧೨ ||

ವರಶೈತ್ಯೋಪಚಾರದಿ ಮುಸುಕಿದ ಮೂರ್ಛೆ | ಹರೆಯಲು ಕಣ್ದೆರೆದನು |
ಪಿರಿದಾಗಿ ಹಳವಳಿಸಿದನೆನ್ನಯ ನಿಜ | ಗುರುವೆಲ್ಲಿದ್ದನೊಯೆನುತ || ೧೩ ||

ಸನ್ನುತಮಪ್ಪ ಭೋಗೋಪಭೋಗಂಗಳಿ | ವೆನ್ನ ತಂದೆಯನೀಕ್ಷಿಸುವ |
ಅನ್ನೆವರೆಲ್ಲ ನಿವೃತ್ತಿಯೆಂದಾ ಸಂ | ಪನ್ನ ಮೋಹಿಸಿ ಕೈಕೊಂಡು || ೧೪ ||

ಸುರಗಿರಿಯ ಹಬ್ಬಿಯಾತುದಿ ಮುಟ್ಟಿದ | ಸುರಲೋಕಮನಿರದಡರಿ |
ವರ ಸರ್ವಾರ್ಥಸಿದ್ದಿಯೊಳು ತಗುಳಿ ಮೇಲೆ | ಭರದಿ ಕೈವಲ್ಯಕೆಯ್ದುವೆನು || ೧೫ ||

ಎನುತ ಸನ್ನಾಹಭೇರಿಯ ಹೊಯ್ಸಲು ಕೇಳಿ | ಘನತರವಹ ಬಲಮೆಲ್ಲ |
ಇನಿಸು ಬೇಗದಿ ಬರುಲುತ್ತರದೆಸೆಗಾಗಿ | ಜನಪತಿದಂಡು ನಡೆಯಲು || ೧೬ ||

ಆ ಸೇನಾಪದಧೂಳಿಯಾಗಸವನು | ಬಾಸಣಿಸಲು ನಾಕದೊಳು
ಆ ಸುದ್ದಿ ಹರೆಯೆ ತದ್ವಿಪರೀತವೃತ್ತಿಗೆ | ವಾಸವ ನಸುನಗೆನಗುತ || ೧೭ ||

ಕರೆದು ಕುಭೇರನ ನೀನೀಗವೆ ಪೋಗಿ | ಯರಮಗ ನೆನೆದ ಕೃತ್ಯವನು |
ಪರಿಹರಿಸೆಂದಾಕ್ಷಣದೊಳು ಕಳುಹಲು | ಧರಣೀತಳಕಿತಂದು || ೧೮ ||

ಭರದಿಂದ ಬಡಗಣದಿಗಧೀಶನಾ ನೃಪ | ವರನು ನಡೆವ ಸಸಿನದೊಳು |
ಮರುತಮಾರ್ಗದೊಳೊಂದು ಸಮವಸರಣವನು | ಕರಮೆಸೆವಂದದಿ ರಚಿಸಿ || ೧೯ ||

ಆ ಮಧ್ಯದೊಳು ಜಿನವಿಮಲವಾಹನರ ಮ | ತ್ತಾ ಮೋಹದ ಜನಕನನು |
ಆ ಮೋಹಿಯಪರಾಜಿತನು ಕಾಣ್ಬಂದದಿ | ಪ್ರೇಮದಿನೊಡ್ಡಿತೋರಿದನು || ೨೦ ||

ಆ ಇಂದ್ರಜಾಲದ ಸಮವಸರಣದೊಳು | ಗಾಯತಿವಲ್ಲಭರಿರಲು |
ಮಾಯಮಿದೆಂದರಿಯದೆ ನಿಜಮೆಂದು ಕ | ಟ್ಟಾಯತದಿಂದಭಿನಮಿಸಿ || ೨೧ ||

ತಂದೆಯ ಮೊಗವ ಕಂಡೆನು ನನ್ನ ವ್ರತ ಸಂದಿ | ತೆಂದಪರಾಜಿತನೃಪತಿ |
ಇಂದುವ ಕಂಡಿಂಡೀವರದಂತಾ | ನಂದನಡೆದು ತಿರುಗಿದನು || ೨೨ ||

ಬಂದು ಹೊಳಲಹೊಕ್ಕು ಹಲಕಾಲವತ್ಯಾ | ನಂದದಿ ನೆಲನ ಪಾಲಿಸುತ |
ಒಂದಾನೊಂದು ದಿನದಿ ಚೈತ್ರಮಾಸದೊ | ಳಂದವಡೆದ ವನಕೆಯ್ದಿ || ೨೩ ||

ತಂದೆ ಮಾಡಿಸಿದಪರಂಜಿಯ ಬಸದಿಯು | ನಂದನದೊಳಗಿರೆ ಕಂಡು |
ಸಂದ ಬಕುತಿಯೊಳಲ್ಲಿರ್ದಭವಂಗಭಿ | ವಂದಿಸಿದನು ಭೂವರನು || ೨೪ ||

ಜಿನರಿಗೆರಗಿ ಜಿನಗೃಹಮಣಿಮಂಟಪ | ಕನುರಾಗದಿಂ ಬಂದು ನಿಲಲು |
ಅನಿತರೊಳಿನಶಶಿಗಳವೊಲು ಚಾರಣ | ಮುನಿಗಳೀರ್ವರು ನಭದಿಂದ || ೨೫ ||

ಧರಣಿಗಿಳಿದು ಬಂದಾಪೊನ್ನಬಸದಿಯ | ನುರುಮುದದಿಂ ಬಲವಂದು |
ಸ್ಮರಮರ್ದನನ ವಂದಿಸಿ ಪೊಮಡಲಾ | ವರಮಣಿಮುಮಂಟಪಕೆ || ೨೬ ||

ವಿನಮಿತಮೌಲಿವಿಶ್ವಂಭರೇಶ್ವರನಾ | ಮುನಿಯುಗಕುನ್ನತಾಸನವ |
ಅನುರಾಗದಿಂ ತಂದಿರಿಸಿ ಕುಳ್ಳಿರಿಸಿದ | ನನುಪಮಭಕ್ತಿಯೊಳೊಸೆದು || ೨೭ ||

ಚಿತ್ತಶುದ್ಧಿಯೊಳಭಿವಂದಿಸಿದಾ ಭೂ | ಪೋತ್ತಂಸಗಾ ಮುನಿವರರು |
ಉತ್ತಮಮಪ್ಪ ಧರ್ಮಾಧರ್ಮದಿರವನು | ಬಿತ್ತರಮಾಗಿ ಪೇಳಿದರು || ೨೮ ||

ವಿಲಸದ್ಧರ್ಮನಿರೂಪವ ಕೇಳ್ದಾ | ತುಳಿಲಾಳಾ ಮುನಿಯುಗಕೆ |
ಜಲಜಾತೋಪಮಕರಯುಗಲವ ಮುಗಿ | ದೆಳಸಿ ಕೇಳಿದನಿಂತೆಂದು || ೨೯ ||

ಎಲೆ ಮುನಿಯುಗಲವೆ ನಿಮ್ಮ ಮೇಲತಿಮೋಹ | ನೆಲೆಗೊಂಡಿದೆ ರವಿಗಂಡ |
ನಳಿನದಂದದಿ ನನಗೇನುಕಾರಣಮೆಂದು | ದಿಳೆಯಾಧಿಪತಿ ಕೇಳಿದನು || ೩೦ ||

ಎನಲಾ ಚಾರಣಯುಲದೊಳಗೆ ಮುಖ್ಯ | ಮುನಿ ಮರುಕದಿ ಬಾಯ್ದರೆದು |
ಜನಪತಿ ಕೇಳಿ ನಿನ್ನಯ ನಮ್ಮಯ ಭವ | ದನುವನು ಭಾವಶುದ್ಧಿಯೊಳು || ೩೧ ||

ಭೂವರ ಕೇಳ್ಪೂರ್ವವಿದೇಹದಪುಷ್ಯ | ಳಾವತಿಯೆಂಬ ವಿಷಯದ |
ಭೂವಿಶತ್ರುಪುಂಡರೀಕವೆಸತ ಪುರ | ದಾ ವಾಸವದಿಕ್ಕಿನೊಳು || ೩೨ ||

ಅಂತಕನೃಪವರನಡುಂಬೊಲನೆಂ | ಬಂತೊಂದು ಕಾನನನಮಿಹುದು |
ಅಂತರದೊಳು ವಿಂಧ್ಯಕನೆಮಬ ವನಚರ | ಕಾಂತ ಸಂತಸಮಿರುತಿಹನು || ೩೩ ||

ಕಾಲಭೈರವನೊಂದುಗ್ರಾಕಾರವ | ಸೋಲಿಸಿ ಬಿದಿಯುಕ್ಕಿನಿಂದ |
ಚೀಲಣಿಸಿದ ಚಿತ್ರವೆಂಬಂತೆ ಭಿಲ್ಲನಾ | ಭೀಳಾಕಾರಮೊಪ್ಪಿದುದು || ೩೪ ||

ಶೂಲಿಯೆರಲೆಯ ಸುಧಾಂಶುವ ಮೊಲನ ಮಾ | ಕಾಳಿಯೇರಿದ ಕೇಸರಿಯ |
ಕಾಲನ ಹೊತ್ತ ಕೋಣನ ಬೇಂಟೆಗಾ ಬೇಡ | ನಾಳೋಚನೆ ಮಾಡುತಿರಲು || ೩೫ ||

ಆ ಗಂಡುಗಲಿ ವಿಂಧ್ಯಕನ ತೋಳಬಾಳನು | ರಾಗದಿ ಕೈವಿಡಿದಿಹಳು |
ವಾಗುರೆಯೆಂಬ ಬೇಡತಿ ಕೃಷ್ಣಾಹಿ ಕಾ | ಲಾಗರುವನು ಹಿಡಿದಂತೆ || ೩೬ ||

ಇಂತಿರುತೊಂದು ಪಗಲು ತದ್ವನಚರ | ಕಾಂತನು ಮೃಗಬೇಂಟೆಗೆನುತ |
ಸಂತಸದಿಂ ಪೊಮಟ್ಟನಿರದೆ ನಿಜ | ಕಾಂತೆವಾಗುರೆ ಸಹಮಾಗಿ || ೩೭ ||

ಬಡಿ ಬಲೆ ದಡಿ ಕಾಲ್ಕಣ್ಣೆಯುರುಳು ಪಾಡಿ | ಸಿಡಿ ಸೆಳೆ ಗಾಣ ಬೆಳ್ಳಾರ |
ತಡಿಕೆ ದೀವದ ಝಗಮೃಗಸಂತತಿಗೂಡಿ | ನಡೆತಂದನಾ ವನಚರನು || ೩೮ ||

ಕಟ್ಟಿದ ಹಾಸ ಬಿಟ್ಟೊಡೆ ಕೈರವೇಂದ್ರನ | ಹೊಟ್ಟೆಯೇಣನ ಕೊಲ್ವೆನೆಂಬ |
ಕಟ್ಟುಗ್ಗರದ ಜಾಯಿಲದ ಜಂಗುಳಿಗಳ ತಟ್ಟು ನಡೆದು ಬಂದುದಾಗ || ೩೯ ||

ದಂಡವ ಬಿಸುಟು ಕೋದಂಡವನಿರದಾಂತ | ದಂಡಧರನು ಬಹುರೂಪ |
ಕೊಂಡೈದುವಂತೆ ಪಲವು ಬೇಡರವನೊತ್ತು | ಗೊಂಡೈದಿದರೊಗ್ಗನಲಿ || ೪೦ ||

ಈ ರೀತಿಯಿಂದ ನಡೆದು ಬಂದು ಬಲೆಬೆ | ಳ್ಳಾರವ ಬೀಸಿ ಬಲ್ಲಾ ಳ |
ಕಾರಿರುಳೊಡ್ಡ ನಿಲಿಸುವಂತೆ ನಿಲಿಸಿದ | ನೋರಣದಿಂದೊಂದೆರೆಡೆಯೊಳು || ೪೧ ||

ಸಾಹಿನಬಿಲ್ಲಾಳುಗಳಾಜಾಯಿಲ | ವ್ಯೂಹಮನತಿಜೋಕೆಯೊಳು |
ಸೋಹಿಸಿಕೊಂಡುಬಂದರು ಗರಳದ ಗಾಳಿ | ಮೋಹರಿಸಿದ ಮಾಳ್ಕೆಯೊಳು || ೪೨ ||

ಕರಿಮರಿ ಶರಭ ಕೇಸರಿ ಖಳ್ಗಿ ಕಾಡೆಮ್ಮೆ | ಕರಡಿ ಕಡವೆ ಚಿತ್ರಕಾಯ |
ಹರಿ ಹುಲ್ಲೆ ಸಾರಗ ಮೊದಲಾದ ಮಿಗಗಳಂ | ದಿರದೊಳಗಾಯ್ತಾಬಲಗೆ || ೪೩ ||

ಆ ಬಲೆಬೆಳ್ಳಾರಕೊಳಗಾದ ಮಿಗಗಳ | ನಾ ಬೇಂಟೆಗಾರರು ಕಂಡು |
ಆ ಬಾಣಗಳೆಲ್ಲ ತೀರ್ವನ್ನಬರಮೆಚ್ಚಿ | ರಾ ಬಳಿಯಿಳೆ ಹೇಸುವಂತೆ || ೪೪ ||

ಕೆಡಹು ಕೆಡಹು ಕೊಲ್ಲು ಕೊಲ್ಲೆಸು ಇರಿಯಿರಿ | ಇಡುಇಡು ಬಿಡುಬಿಡು ನಾಯ |
ಬಡಿಬಡಿ ಹೊಡೆಹೊಡೆಯೆಂಬಬ್ಬರ ಬಲು | ನುಡಿಯುಣ್ಮಿತೆಲ್ಲಿ ನೋಡಿದರು || ೪೫ ||

ಬಲೆಯ ಬಳಸಿನಿಂದಾ ವನಚರಸಂ | ಕುಲದೊಡ್ಡಣವನೊಡಹಾಯ್ದು |
ಕೆಲಬಲದೆಸುಗೆಯನೆಣಿಸದೆ ಪಾರಿದ | ಬಲಘುಭೀತಿಯೊಳೆರಲೆಗಳು || ೪೬ ||

ನೀಡುಂಗೊರಲು ನಿಲುಕಗಾಲುಡಿದೆದೆ | ಗೂಡು ವಿರಾಜಿಸುತಿರಲು |
ನೋಡದಮುನ್ನ ನಾಳ್ಕೈದಾರೇಳೆಂಟು | ಜೋಡಿಸಿ ನೆಗೆಯ ಯೇಣಗಲು || ೪೭ ||

ಬಲೆಯ ಹರಿದು ಬಿಟ್ಟು ಬೆಳ್ಳಾರವ ಕೆಳ್ತು | ವಲಪಿನ ತೋಹಿನಾಳುಗಳ |
ತಲೆಮೆಟ್ಟುಯಂಚ್ಚಂಬಿಗೆ ಮುನ್ನ ನೆಗೆದವು | ಸಲೆ ಭೀತಿವಡೆದು ಹುಲ್ಲೆಗಳು || ೪೮ ||

ಮರುತಗೆ ಮುಂಚು ಮನವ ಹಿಂಚು ಮಾಳ್ಪ ಬೆ | ಳ್ಳೆರಲೆಗೆ ಬಿಡೆ ನಿಮಿಷದೊಳು |
ಹರಿದಡ್ಡವಾಯ್ದು ಹಿಡಿದುಕೊಂಡವಾವನ | ಚರರ ಕೈಯ ಜಾಯಿಲಗಳು || ೪೯ ||

ಕೈವಶವಾದ ಖಳ್ಗಿಯನೆಸಲೊಲ್ಲದೆ | ಸವ್ವೆರಗಾಗಿ ಮೈಮರೆದು |
ಕೈವಾರಿದೆಯೆನುತಾ ಬೇಟೆಬೈಗಳ | ಬೈವುತಿದ್ದರು ಕೆಲರಾಗ || ೫೦ ||

ಎಚ್ಚು ಕೆಲವನೆಡವರಿಯದೆ ತಲೆಯೆಲು | ನುಚ್ಚಾಗುವಂತೆ ಡೊಣ್ಣೆಯೊಳು |
ಚಚ್ಚಿ ಕೆಲವು ಮಿಗಗಳ ಕೋಂದರಾ ಬನ | ವೊಚ್ಚತ ಬಯಲಗುವಂತೆ || ೫೧ ||

ಬಿಲ್ಲಿಂದ ಬೀಹಿನ ಹಗರು ಮುರುವವೊಲು | ಕಲ್ಲಿದ ಕಾಲ್ತುಂಡಿಸುವೊಲು |
ಬಲ್ಲಿತಮಪ್ಪಾಕೊಲೆಯಿಂ ಕೊಂದರಾ ಮಿಗ | ಮಿಲ್ಲಿಂ ನಿಲವ್ವೆಬಂತೆ || ೫೨ ||

ಬೋಳೆಯೆಂಬಿನ ಗಾಯದ ಬಾಯ್ದೆರೆಯಿಂದ | ಬೀಳುತ ಗೋಣ್ಮರಿಗೊಂಡು |
ಬೇಳುಗರೆವ ಹಸುಳೆಯ ನೆಕ್ಕುವ ಹುಲ್ಲೆ | ಯೋಳಿಯಳಿದವವರೊಳಗೆ || ೫೩ ||

ಕರುವಿನ ಕಟವಾಯನಾ ನೊರೆವಾಲ್ಗಳ | ಕರೆವ ಕಾಡೆಮ್ಮೆಯ ಮೊಲೆಯ |
ಅರುಗುಲಿ ವಿಂಧ್ಯಕನೊಂದೇಯಂಬಿನಿಂ | ಹರಿತೆಚ್ಚು ಕೆಡಹಿದನಾಗ || ೫೪ ||

ಈ ತೆರದಿಂ ಬೇಂಟಡಗೊಳಗಾದ ಬಹುವಿಧ | ಜಾತೆಯೆಲ್ಲವ ಸಲೆಕೊಂದು |
ಮಾತೇನು ಮನಹೇಸದೆ ಮುಂದಕೈದಿನ | ನಾತುರದಿಂವಿಂಧ್ಯಕನು || ೫೫ ||

ಎಕ್ಕಲಗಳು ತಮ್ಮ ತೆಗೆದ ಜಾಯಿಲಗಳು | ನಿಕ್ಕಡಿಮಾಡಿ ಹಾಯ್ದುದನು |
ತಕ್ಕಿನ ಬೇಡರ ಕೆಡಹಿದುದನು ಕಂ | ಡಿಕ್ಕಿದನಾ ವನಚರನು || ೫೬ ||

ಅಡಲ ಹೊಕ್ಕಡಗಿಯಾಳ್ಗಳ ಕೊಂದು ತಾನೇರು | ವಡೆದ ಹೆಬ್ಬುಲಿಗಿದಿರಾಗಿ |
ನಡೆದು ಲೀಲಾಮಾತ್ರದಿ ಕೊಮದು ಕೆಡಹಿದ | ಕಡುಗಲಿತನದಿ ವಿಂಧ್ಯಕನು || ೫೭ ||

ಸುಂಡಿಲು ಖಂಡಿಸುವಂತೆಸಲೊಂದು ವೇ | ತಂಡನಿಳೆಗೆ ಕೊಂಬೂರಿ |
ಮಂಡಿಸಲೊಪ್ಪಿದುದಾದಿವರಾಹ ಭೂ | ಮಂಡಲಕಿಟ್ಟಾಸ್ಯದಂತೆ || ೫೮ ||

ಅರ್ಭಟೆಯಿಂದಿದಿರಾದ ಸಿಂಹವ ಕಂಡು | ಕೂರಸಿಯಿಂ ನೆರೆತೀವಿದ |
ವೀರವಿಂಧ್ಯಕನೊಪ್ಪಿದನಾ ಶೂದ್ರಕ | ವೀರನುಪಾಧ್ಯಾಯನಂತೆ || ೫೯ ||

ಕರಿಯ ಬೇಂಟೆಯನು ಕೇಸರಿಯಿಂದಾ ಕೇ | ಸರಿಯ ಬೇಂಟೆಯ ಶರಭಗಳಿಂ |
ಶರಭನ ಬೇಂಟೆಯ ಭೇರುಂಡನಿಂದಾಡು | ತುರು ಲೀಲೆಯಿಂದೆಯ್ದಿದನು || ೬೦ ||

ಆವಿಂಧ್ಯಕನಾಡುವ ಬೇಂಟೆಯಯಾರ್ಭಟೆ | ಗಾವನಕರಿ ಕೆಲವೋಡಿ |
ಭೂವಲಯದ ಮರೆ ಹೊಗಲು ದಿಗ್ಗಜವೆಂ | ದೋವದಾಡುವುದು ಭೂತಳವು || ೬೧ ||

ತಾನೇರಿದ ಗಂಡೆರಲೆಯನಾ ಬೇಡ | ನಾನದೆ ಕೊಲ್ವನೆಂದಂಜಿ |
ಮಾನವಡಗಿಯೋಡಾಟವನಾ ಪವ | ಮಾನಕಲಿತನದಿಂದ || ೬೨ ||

ಅಂಬು ತಾಗಿದ ಕೇಸರಿ ಹರಿಯಲ್ಕಾ | ನಂಬಿಗೆವಿಡಿದು ವಿಂಧ್ಯಕನು |
ಬೆಂಬಳಿಯೊಳು ಬರುತಿರೆ ಕಟ್ಟದಿರೊಳೆ | ಗಿಂಬಾದಶೋಕಮೂಲದೊಳು || ೬೩ ||

ಅಮಲಬುದ್ಧಿಗಳು ವಿಮಲವಿದ್ಧಿಗಳೆಂಬ | ವಿಮಲಗುಣಾಲಂಕೃತರು |
ಕ್ಷಮೆದಮೆಗಳು ಕೂಡಿದಂತೀರ್ವರು ಸಂ | ಯಮಿಗಳಿರಲು ಕಂಡನಾಗ || ೬೪ ||

ಶಶಿನೇಸರು ತಮ್ಮ ಶೀತೋಷ್ಣವ ಬಿಟ್ಟು | ವಸುಧೆಗಳಿದು ಬಂದಂತೆ |
ಅಸಮಾನದೋಷಾಪಹರಣದಿರಲು ಕಂ | ಡುಸುರಿದವನಿಂತೆಂದು || ೬೫ ||

ಎಂದು ನಾನರಿಯದ ಮನುಜಮೃಗವನಾ | ನಿಂದು ಕಂಡೆನು ಪೊಸತಾಗಿ |
ಎಂದಾ ಭಿಲ್ಲನಾ ಬಿಲ್ಗೆ ಬಾಣವನಿಟ್ಟು | ನಿಂದನವರನೆಸಲೆಂದು || ೬೬ ||

ಎಲೆ ವಾಗುರೆ ನೋಡು ನೋಡೆನ್ನೀ | ಕೈಚಳಕವನಿನಿಸೆವೆಯಿಡದೆ |
ತಳುವದೊಂದೇ ಶರದಿಂದೀ ಮೃಗಗಳ | ನಿಳೆಗುರುಳ್ವಂದದಿನೆಸುವೆ || ೬೭ ||

ಎಂದು ಬೊಬ್ಬರಿದಂಬನೆಸುವ ಸಮಯದೊಳು | ಬಂದು ವಾಗುರೆ ಬಿಲ್ಲಿನಿಂದ |
ಮುಂದಕೆ ಪರಿವಂಬನುಗಿದು ಬೇಡನೊಳಿಂ | ತೆಂದಳು ಮಿಗೆ ಭೀತಿಯೊಳು || ೬೮ ||

ಇವರು ಮನುಜಮೃಗವಲ್ಲ ವಿಂಧ್ಯಕ ಕೇ | ಳಿವರು ಮಹಾನುಭಾವಿಗಳು |
ಇವರನೆಸುವುದೆಮಗನುಚಿವೆಂದಾ | ಯುವತಿ ವಾಗುರೆಯುಸುರಿದಳು || ೬೯ ||

ಆ ನುಡಿಗೇಳಿ ವಿಂಧ್ಯಕನೆಂದನಿಂತಿವು | ಮಾನವಮೃಗವಲ್ಲೆಂಬುದನು |
ನೀನಾವರೆರದಿನರಿದೆಯೆಂದನಲಾ | ಮಾನಿನಿ ನುಡಿದಳಿಂತೆಂದು || ೭೦ ||

ಎಕ್ಕಟಿಯೊಳು ಪೋಗೆ ಬೇಂಟೆಯಾಡುತ ನೀನು | ಹೊಕ್ಕಲ್ಲಿ ಹೊಕ್ಕೆಚ್ಚು ಕೆಡಹಿ |
ಹಿಕ್ಕಿದ ಕೇಸರಿಯೊಡಲೊಳು ಸಿಕ್ಕಿರ್ದ | ಸೊಕ್ಕಾನೆದಲೆಯ ಮುತ್ತುಗಳ || ೭೧ ||

ಮೀನ ಹಿಡಿದು ಮೀಂಬುಲಿವಕ್ಕಿ ಮುಗಿಲೆಡೆ | ಗಾನದೆ ಹಾರಲಂತದನು |
ನೀನೆಸಲವನಿಗೆ ಬೀಳ್ದ ಮುಗಿಲ ಮುತ್ತು | ಮೀನ ಬಸಿರ ಮುತ್ತುಗಳನು || ೭೨ ||

ಮಿಕ್ಕ ಹಾವಿನ ಹೆಡೆಯಿಂ ತಂದ ಮಣಿಗಳ | ನೆಕ್ಕಲಗಳ ದಾಡೆಯಿಂದ |
ಸಿಕ್ಕಿದ ಮಣಿಮುತ್ತಲ್ಲವನಾ ನಗ | ರಕ್ಕೆ ಮಾರಲು ಕೊಂಡುಪೋಗಿ || ೭೩ ||

ಪುರಕ್ಕಗ್ಗಳನು ವೃಷಭಸೇನನೆಂಬೋರ್ವ | ಹರದನ ಮನೆಗಾನು ಪೋಗಿ |
ಹರಲ ಮಾರುವ ವೇಳೆಯೊಳಾಮನೆಯೊಳೀ | ಹಿರಿಯರಿರಲು ಕಂಡೆ ನಾನು || ೭೪ ||

ಆ ಶೆಟ್ಟಿ ವೃಷಭದತ್ತನು ಬಳಿಕವರ್ಗುನ್ನ | ತಾಸನಮಿತ್ತು ಕಾಲ್ದೊಳೆದು |
ಸೇಸೆ ಸುಗಂಧ ಕುಸುಮ ನವಫಲಗಳಿಂ | ದೋಸರಿಸದೆ ಪೂಜಿಸಿದನು || ೭೫ ||

ಬಳಿಕಾ ಪೊಳಲ ಬಲ್ಲಿದರೆಲ್ಲವರಿಪ್ಪ | ನಿಳಯಕಿರದೆ ತಂತಮ್ಮ |
ಬಳಗಸಹಿತ ಬಂದು ಭಕುತಿಯಿಮದವೆ ಕಾಲ | ತೊಳೆದುಯ ಪೂಜಿಸಿ ಪೊಟಮಟ್ಟು || ೭೬ ||

ಮತ್ತೇನನೆಂದರಿಯೆನು ಕೂಡಿಕೊಡೆಯೆಂ | ದೊತ್ತಿ ಬೇಡಿದೊಡಾಗಲವರು |
ಇತ್ತೆವಿವನು ಕೈ ಕೊಳ್ಳಿಯೆನುತ ಪೀಲಿ | ಯಿತ್ತರವರ ತಲೆಯೊಳಗೆ || ೭೭ ||

ಇವರವರಿಂದೆಲ್ಲಕೆ ವೆಗ್ಗಳರೆಂಬ | ವಿವರವರಿದೆನದರಿಂದ |
ಇವರನೆಚ್ಚೊಡೆ ಪಾತಕಮೆಂದಾ ವ್ಯಾಧ | ಯುವತಿಯೊಳ್ನಡಿಯಾಡಿದಳು || ೭೮ ||

ಆ ನುಡಿಗೇಳಿ ಬೆದರಿ ಬೇಡನಾಯಕ | ತಾನೆಸವಂಬುಬಿಲ್ಲಗಳ |
ಆನದೆ ಬಿಸುಟು ವಾಗುರೆಗೂಡಿ ಮುನಿಗಳಿ | ಗಾನಂದದೊಳೆರಗಿದನು || ೭೯ ||

ಎರಗಿದ ಲಬ್ಧಕದಂಪತಿಯನು ಕ | ಣ್ದೆರದಾಮುನಿಪುಂಗವರು |
ಮರುಕ ಮಿಗಿಲು ಧರ್ಮವೃದ್ಧಿಯೆನುತ ಮನ | ದೆರಕದಿ ಮಿಗೆ ಹರಿಸಿದರು || ೮೦ ||

ಹರಿಸಲೆಂತೆಂದನು ತಮ್ಮನೆಸುವೆನೆಂದು | ಸುರಲಬಿಲ್ಲಿಗೆ ತೊಟ್ಟವನನು |
ಹರಿದೆಯ್ದಿ ಹರಣವ ಕಾಯ್ದೀ ಸತಿಯನು | ಸರಿಗಂಡು ಹರಿಸಿದವರವರು || ೮೧ ||

ಇವರಿಂದಾವವರತ್ತುತ್ತಮರೆಂದು | ಸವಿನಯದಿಂ ಕೊಂಡಾಡಿ |
ತವಕದಿಂದಾ ಕಾಡಹೂವ ತಿರಿದುತಂ | ದವರಡಿಗಳ ಪೂಜಿಸಿದನು || ೮೨ ||

ಹರುಷದಿ ಪೂಜಿಸಿ ಬಳಿಕಿಂತೆಂದನು | ಪುರದೊಳಗಾ ಸೆಟ್ಟಿಗಳಿಗೆ |
ವರನಿತ್ತಿರಿ ಕಂಡಾವರವನು ನನ | ಗಿರದೆ ಪಾಲಿಸಿಯೆಂದನವನು || ೮೩ ||

ಇಂತೆಂದಾಲುಬ್ದಕನ ಬಿನ್ನಪವ ಕೇಳಿ | ಕಂತುಮದಾಪಹರಣರು |
ಪಿಂತಿವನೆಸಗಿ ದುಷ್ಕರ್ಮವೀಗ ನಿ | ಸ್ಸಂತಾನಮಾಯಿತೆಂದರಿದು || ೮೪ ||

ಲುಬ್ಧಕನಾಯಕ ಕೇಳು ನಿನಗೆ ಕಾಲ | ಲಬ್ಧಿ ವಶದಿ ಜೀವವಧೆಯ |
ಲುಬ್ಧ ತ್ವ ಹರಿಹಂಚಾಯಿತೆನುತ ಬೋ | ಧಾಬ್ಧಿಚಂದ್ರಮರುಸುರತವೆ || ೮೫ ||

ಎಲೆ ಭವ್ಯ ಕೇಳು ಕಳವು ಹುಸಿ ಪಾದರ | ಕೊಲೆಕಾಂಕ್ಷೆಯೆಂದಿವನುಳಿದು |
ಹೊಲಸುಕಳ್ಳೆಂಬ ಬಿಡಲು ನೀ ಬಯಸಿದ | ಫಲವು ನಿನಗೆ ದೊರಕುವುದು || ೮೬ ||

ಈ ನಾವು ಕೊಟ್ಟೊ ವ್ರತಂಗಳನೆಲ್ಲವ | ನೀನಿರದೊಸೆದು ರಕ್ಷಿಸಲು |
ಭೂನುತಮಪ್ಪ ಮೂಲೋಕಸೊಡೆಯತನ | ತಾನಿರದೊದಗುವುದೆನಲು || ೮೭ ||

ಅದಡಂತಪ್ಪ ವರವಕೊಡಬೇಕೆಂ | ದಾದರಿದಿಂದಾಬಿಯದ |
ಆ ದಿವ್ಯಮುನಿಪುಂಗರವ ಕೋಮಲತರ | ಪಾದಮೂಲಕೆ ಮುಗ್ಗಿದನು || ೮೮ ||

ಅಡಿಗೆರಗಿದ ವನಚರಗಾವ್ರತವನು | ಬಿಡುಮಿಲ್ಲದೆ ರಕ್ಷಿಸೆನುತ |
ಸಡಗರದಿಂದಾಸಂಯಮಿಗಳು ಕೊಡ | ಲೊಡನವ ಕೈಕೊಂಡನಾಗ || ೮೯ ||

ಗಂಡನಿರದೆ ಯಾಚರಿಸಿದ ಚರಿತವೆ | ಪೆಂಡತಿಗೌಚಿತ್ಯಮೆಂದು |
ತೊಂಡೆವಾಯ್ದೆರೆಯ ವಾಗುರೆಯಾವ್ರತವಕೈ | ಕೊಂಡಳು ಕಡುಭಕುತಿಯೊಳು || ೯೦ ||

ವ್ರತವ ಧರಿಸಿ ವ್ರತಿಗಳ ಪಾದಯುಗಕವ | ನತರಾಗಿಯವರ ಬೀಳ್ಕೊಂಡು |
ಸತಿಪತಿಗಳ ತಮ್ಮಾಬೇಡವಳ್ಳಿಗೆ | ಅತಿ ಹರುಷದೊಳೈದಿದರು || ೯೧ ||

ಬೀಡಿಗೆ ಬಂದು ಬಿಲ್ಲುಂಬುಗಳನು ಮುರು | ದೀದಾಡಿ ಹರಿದು ಬಲೆಯನು |
ಕೂಡಣದೀವದ ಖಗಮೃಗವನು ಬಿ | ಟ್ಟೋಡಿಸಿದನು ಬಿಲ್ಲನಂದು || ೯೨ ||

ಬಡಿಯ ಬಿಸುಡು ಬಡೊಕೋಲನೊಲೆಗೆ ಹಾಕಿ | ಸುಡು ಕೀಳು ಕಾಲಕಣ್ಣಿಯನು |
ಕಡಿಖಂಡಮಾಡು ಬೆಳ್ಳಾರವನೆಂದಾ | ಮಡಿದಿಗೆ ಬಯದನಾಡಿದನು || ೯೩ ||

ನಂಟಿರಷ್ಟರಮನೆ ಹೊಕ್ಕು ತಿಂಬುಂಬುದ | ಬೇಂಟೆಯಾಡಿ ಮೃಗತತಿಗೆ |
ಕಂಟಕವನು ಮಾಳ್ಪದನೆಲ್ಲವನಂದು | ಗೆಂಟು ಮಾಡಿದನಾಬಿಯದ || ೯೪ ||

ವರಹನು ದಾಡೆಯೊಳಗೆ ಮುತ್ತು ಫಣಿಪನ | ಶಿರದೊಳು ಮಣಿ ಪುಟ್ಟವಂತೆ |
ದುರುಳವಿಂಧ್ಯಕನು ಹೃದಯದೊಳು ಸಂಯಮ | ನಿರುತಮೆನಲು ಜನಿಸಿದುದು || ೯೫ ||

ಕೊಲೆಯಿಲ್ಲದೆಡೆಯೊಳು ಕಾರಿಲ್ಲದೆಡೆಯೊಳು | ಹೊಲಸಿನಿಸಿಲ್ಲದೆಡೆಯೊಳು |
ಎಲುನರತೊವಲಿಲ್ಲದೆಡೆಯೊಳು ವನಚರ | ನಿಲಯವ ಮಾಡಿಕೊಂಡಿಹನು || ೯೬ ||

ಬಿದಿರಕ್ಕಿಯನು ತಂದು ಕುಟ್ಟಿ ಯೋಗರವಟ್ಟು | ಸದಮಲ ಫಲಪತ್ರಗಳನು |
ಕುದಿಸಿಯೋಗರ ಮಾಡಿಯಾದಂಪತಿಗಳು | ಉದರವ ಪೋಷಿಸುತಿಹರು || ೯೭ ||

ಉಪ್ಪು ಮೆಣಸ ಹಾಕಲರಿಯದೆ ಹಳುವಿನ | ಸೊಪ್ಪುಹಸುರುಕಾಯ್ಗಳನು |
ಸಪ್ಪೆಯ ತಿಂದು ಜೀವನ ಹೊರೆವುತ್ತಿರ | ಲಪ್ಪಿತು ಬಡವವರೊಡಲ || ೯೮ ||

ಹಿಡಿದ ಸುವ್ರತವನಿನಿಸು ಬಿಡಲಾರದೆ | ಯಡಗುಂಬುದನು ಪರಿಪಟ್ಟು |
ಅಡವಿಯ ಗೆಂಡೆದಿಂಡುಗಳ ತಿಂದಾಬೇಡ | ನೊಡಲು ಕಟಂಕಟಿಯಾಯ್ತು || ೯೯ ||

ಕಡುಬಡವಾಗಿ ಕಡ್ಟಿಯವೊಲು ತಿರುಗುವ | ದೃಢಶುಚಿಗಳನು ಕಂಡವನ |
ಮಡಿದಿಯ ಕೂಡಿಂತೆಂದಾಡಿದವರ | ಳೊಡನಾಡುವ ಬೇಡತಿಯರು || ೧೦೦ ||

ಪಸುರ್ವುಲ್ಲ ತಿಂದ ಬೆಳ್ಮಿಗವ ತಿಂದೊಡೆ ದಿಟ್ಟಿ | ಪಸುವಪ್ಪುದೆಂದು ಕಂಡವನ |
ಪಸಿಯಡಗುಂಬವಲ್ಲಿದಗೀ ಹಳುವಿನ | ಪಸುರೆಲೆಯನು ತಿಂಬುದಾಯ್ತೇ || ೧೦೧ ||

ಎಂದು ನುಡಿದ ಮಾತುಗೇಳಿ ವಾಗುರೆ ಇಂ | ತೆಂದಳು ತಾನವರೊಡನೆ |
ಅಂದಾ ಮುನಿಗಳ ನಾ ಕಂಡಕಾರಣ | ದಿಂದೀವಿಧಿಯಾಯಿತೆಮಗೆ || ೧೦೨ ||

ಅಂಬನೆಸುವ ಕೈಯನು ಮದ್ಯಮಾಂಸವ | ತಿಂಬುಂಬ ಬಾಯ ಕಟ್ಟಿದರು |
ನಂಬಿಸಿಯಾಮಿನಿಪತಿಗಳೆನುತ ನೀರ | ತುಂಬಿದಳಾದಿಟ್ಟಿಳೊಳು || ೧೦೩ ||

ಬಿಲ್ಲ ಹಿಡಿಯ ಬೇಂಟೆಯನಾಡ ಮಿಗವನು | ಕೊಲ್ಲನಡಗ ತಿಂಬುದನು |
ಒಲ್ಲನಂತದರಿಂದಿಂತಾಯಿತೆಂಬಳ | ಸೊಲ್ಲಿಗಿಂತವರುಸುರಿದರು || ೧೦೪ ||

ತಾನಡಗುಂಬುದನೊಲ್ಲದೊಡಗಲಿ | ನೀನೆಮ್ಮ ಮನೆಗೆಯ್ತಂದು |
ಸಾನುರಾಗದಿ ತಿಂದುಂಡು ಹೋಗೆನಲಾ | ಮಾನಿನಿ ನುಡಿದಳಿಂತೆಂದು || ೧೦೫ ||

ಮುನ್ನ ಮುಂದರಿಯದೆ ಕೊಂಡ ಸುವ್ರತವನು | ಇನ್ನು ಬಿಟ್ಟೊಡೆ ದೋಷವಹುದು |
ಇನ್ನೇಕವನಾಚರಿಸಿದಾಚಾರವೆ | ಎನ್ನಾಚರಣನಿಶ್ಚಯದಿ || ೧೦೬ ||

ಎನುತವರೊಡನೆ ಮಾತಾಡಿ ವಾಗುರೆ ತನ್ನ | ಇನೆಯ ನಡೆದ ನಡೆವಳಿಯ |
ಮನಮುಟ್ಟಿ ನಡೆದಡವಿಯ ಕಾಯಿಪಣ್ಗಳ | ನನುರಾಗದಿಂ ತಿನ್ನುತಿಹಳು || ೧೦೭ ||

ಈ ವಿಧದಾಚಾರದೊಳಾಚರಿಸುತ | ಆ ವಿಂಧ್ಯಕನೊಂದುಪಗಲು |
ತೀವಿದ ಹಸಿವಿಂದ ಬರುತರಲೊಂದಿ | ಮ್ಮಾವಿನಮರವಿರೆ ಕಂಡು || ೧೦೮ ||

ಅಲ್ಲಿ ತೀವಿದ ನವಮಧುರ ಫಲಂಗಳ | ನೆಲ್ಲವ ಸವಿವೆನೆಂದವನು |
ಮೆಲ್ಲನೆ ಹತ್ತಿ ತಿರಿವ ಹಣ್ಣು ಕೊಟ್ಟರ | ದಲ್ಲಿ ಬೀಳ್ದುದು ಕೈಜಳುಪಿ || ೧೦೯ ||

ಪೋಳಲೊಳಗೆ ಮುನ್ನಕೊಯ್ದು ಮಧುರಫಲ | ಬೀಳಲದನು ತಾನು ತೆಗೆವ |
ವೇಳೆಯೊಳಾ ಕೈಯನು ಕಚ್ಚಿದುದೊಂದು | ಕಾಳೋರಗನು ಕೋಪದೊಳು || ೧೧೦ ||

ಹಾವಿನಹಲ್ಲ ಹಾಲಾಹಲದಿಂದಾ | ಭೂವಲಯದೊಳು ಬಿದ್ದುರುಳೆ |
ಆ ವಿಂಧ್ಯಕನೆಂಬ ವಿಪಿನಚರಂಗಮ | ಸಾವಾದುದು ನಿಮಿಷದೊಳು || ೧೧೧ ||

ಪತಿಯ ಸಾವನು ಕಾಣ್ಬುದನುಚಿತವೆಂದಾ | ಸತಿ ವಾಗುರೆ ಮರನೇರಿ |
ಅತಿ ವೇಗದಿಂದ ಕೋಟರದೊಳು ಬೆರಲಿಟ್ಟು | ಹತಮಾದಳಹಿಮುಖದಿಂದ || ೧೧೨ ||

ಸತ್ತಾವಿಂಧ್ಯಕನಾನಗರಿಯ ವೈ | ಶ್ಯೋತ್ತಮ ವೃಷಭದತ್ತಂಗೆ |
ಮತ್ತವನಬಲೆ ಪದ್ಮಶ್ರೀಗುದಯಿಸಿ | ಚಿತ್ತಜನಂತೊಪ್ಪಿದನು || ೧೧೩ ||

ಸುತಗಿಭ್ಯಕೇತಿಉವೆಸರನಿಟ್ಟಾವೈಶ್ಯ | ಪತಿ ಕಡುಸಂತಸದಂದ |
ಅತಿಮಮತೆಯೊಳು ಜಯಂತನನಾಸುರ | ಪತಿ ಸಾಕುವೊಲು ಸಾಕಿದನು || ೧೧೪ ||

ಆವನಚರಿಯಳಿದಾ ಪೊಳಲೊಳಗೋರ್ವ | ಧೀವರನಾಯಕಗೊಗೆದು |
ಧೀವರಪೆಸರಾಂತು ತತ್ಕುಲದವರ್ಗೆ ತಾ | ನೇ ವರನಾಗಿರುತಿಹನು || ೧೧೫ ||

ಆ ಪಟ್ಟಣದೊಳುಳ್ಳ ಗಂಡುಗಳೊಳಗೆ ಕ | ಲಾಪರಿಣತೆ ಸಜ್ಜನತ್ವ |
ರೂಪವಿಕ್ರಮ ವಿತರಣದೊಳಿವನೆಯಿಂ | ದಾ ಪೃಥ್ವಿ ಪೊಗಳುತಮಿಹುದು || ೧೧೬ ||

ಈ ತೆರದಿಂ ದಿಭ್ಯಕೇಳು ಭೂತಳದೊಳು | ಖ್ಯಾತಿಯಿಂದಿರಲಾಪುರದ |
ಭೂತಳಪತಿ ನಾಗದತ್ತಗೆ ಸುದತಿ ವಿ | ನೂತೆ ಸುಪ್ರಭೆಯೆಂಬಳಹಳು || ೧೧೭ ||

ಸುಗುಣಿಗಳರೀರ್ವರ ಬಸಿರೊಳಗೋರ್ವ | ಮಗಳು ಸೌಂದಯಿಯೆಂದೆಂಬ |
ಬಗಸೆಗಂಗಳಬಾಲೆಯುದಯಿಸಿ ಬಲ್ಲರ | ಬಗೆಯ ಬಂಧನಕಿಕ್ಕುವಳು || ೧೧೮ ||

ಬಿಂಬಾಧರೆಯಾ ಸೌಂದರಿಗರಸ ಸ್ವ | ಯಂಬರಮಣಿಮಂಟಪವನು |
ಇಂಬಾಗಿ ರಚಿಸಿಯುಳಿದನಾಢನೃಪನಿಕು | ರುಂಬುವ ಬರಿಸಿದನಂದು || ೧೧೯ ||

ತರುಣಿಯ ವರಿಯಿಪೆವೆಂದಾ ನೃಪಸುತ | ರುರು ಮುದದಿಂ ಸ್ವಯಂವರಕೆ |
ಬರಲಾಯೆಡೆಗಿಭ್ಯಕೇತು ವೈಶ್ಯಾತ್ಮಜ | ನಿರದೆ ತಾನಲ್ಲಿಗೈದಿದನು || ೧೨೦ ||

ಲಲನೆಯೆಲ್ಲವರಿರ್ದಂತಿಭ್ಯಕೇತುವಿ | ಗೆಳಸಿ ಮಾಲೆಯನಿಕ್ಕಿದಳು |
ಉಳಿದ ಲೋಹವಬಿಟ್ಟು ಹೊನ್ನಾಳದಸಿ ಪ | ಜ್ಜಳಿಸುವ ಪಣವಿಡಿವಂತೆ || ೧೨೧ ||

ಶುಭಲಗ್ನದೊಳು ನಾಗದತ್ತನೃಪತಿ ರತಿ | ನಿಭರೂಪವತಿ ಸೌಂದರಿಯನು |
ಅಭಿನವಮದನಗೆ ಮದುವೆಮಾಡಿದನತಿ | ವಿಭವದೊಳಿಳೆ ಪೊಗಳ್ವಂತೆ || ೧೨೨ ||

ಆರಮಣೀಯಮಣಿಯೊಳಗಿಭ್ಯಕೇತುಕು | ಮಾರನೊಸೆದು ಕೂಡಿಹನು |
ಗೌರಿಯೊಡನೆ ನೇಹದಿಂ ರಾಜಶೇಖರ | ನೋರಣದಿಂ ಕೂಡಿದಂತೆ || ೧೨೩ ||

ಆತನುಸದೃಶನಿಂತರೆ ನಾಗದತ್ತಭೂ | ಪತಿ ಕೆನ್ನೆಯನರೆಗಂಡು |
ಗತಕೆಕಾರಣಮೀ ತನುವೆಂದು ವೈರಾಗ್ಯ | ಯುತನಾದನಿಳೆ ಪೊಗಳ್ವಂತೆ || ೧೨೪ ||

ತನಗೆ ನಂದನರಿಲ್ಲದ ಕಾರಣದಿಂದ | ಜನಪತಿಯಾ ನಾಗದತ್ತ |
ತನುಜೆ ಸೌಂದರಿಯ ವಲ್ಲಭನಿಭ್ಯಕೇತುವಿ | ಗನುನಯದಿಂ ಪಟ್ಟಿಗಟ್ಟಿ || ೧೨೫ ||

ಭಾವಶುದ್ಧಿಯೊಳು ದೀಕ್ಷೆಯ ಧರಿಯಿಸಿಲಾ | ಭಾವಜನಿಭ್ಯಕೇತು |
ಮಾವನರಾಜ್ಯಕೆ ತಾನೆಯೊಡೆಯನಾಗಿ | ಭೂವಿನುತನುಮಾಗಿಹನು || ೧೨೬ ||

ಇದು ಜಿನಪದಸರಸಿಜಮದುಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗರಿಯೊಳ | ಗೊದವಿದ ಸಂಧಿಗಳೆರಡು || ೧೨೭ ||

ಎರಡನೆಯ ಸಂಧಿ ಸಂಪೂರ್ಣ