ಶ್ರೀಮದಖಿಲವರ್ಣಚ್ಛಾಯೋಪೇತನ | ಕಾಮಿತಫಲದಾಯಕನಾ ||
ಶ್ರೀಮತ್ಪರಮಜಿನೇಂದ್ರಚಿಂತಾಮಣಿ | ಗಾಮುದವೆತ್ತೆರಗುವೆನು || ೧ ||

ಪರಮಶರೀರಸಮಾನ ಚಿದ್ರೂಪ | ನಿರುಪಮ ಸುಖದಾಯಕರಾ ||
ರಘರನಿತ್ಯತೃಪ್ತರ ಶರೀರ ನುರು | ಭಕ್ತಿಯಿಂದ ವಂದಿಪೆನು || ೨ ||

ಪರವಾದಿಗೋತ್ರಪರ್ವತವಜ್ರಧರರನು | ಕರುಣಾಂಬುಧಿಚಂದ್ರಮರನು ||
ವರಸಮಯಸ್ಥಾಪನಾಚಾರ್ಯರ | ನುರುಭಕ್ತಿಯಿಂದ ವಂದಿಪೆನು || ೩ ||

ಮೋಕ್ಷಮಾರ್ಗದಿ ವರವನಿರ್ದಂದ | ದೀಕ್ಷಿತರಿಗೆ ನಿರವಿಸುವಾ ||
ಸಾಕ್ಷಾದ್ಗುರುದೇಶಿಕರ ವಂದಿಪೆನು | ಕರ್ಮಕ್ಷಯಕಾರಣಮಾಗಿ || ೪ ||

ಚಾರುಚರಣಪಂಕಜಕೆರಗುವೆನು ಸಂ | ಸಾರವೆಂದೆಂಬಡವಿಯನು ||
ಭೋರನೆ ತರಿಪೆನೆನುತ ವ್ರತವೆಂಬ ಕು | ಠಾರವಿಡಿದ ಸಾಧುಗಳಾ || ೫ ||

ಭಾರತಿ ನಮಿತ ಸುರೇಂದ್ರಮಸ್ತಕ ಭಾ | ಭಾರತಿಕಿರೀಟಾಂಗ್ರಿಯುಗಲೆ ||
ಭಾರತಿಯಿಂದೆ ವರವನಿಟ್ಟದಜ್ಞಾನ | ಭಾರ ತಿರಸ್ಕಾರವನು || ೬ ||

ದೇವಸೇನಾವನಿಪತಿ ಜಿನದೀಕ್ಷೆಯ | ನಾವರಿಸಿದ ವಾರ್ತೆಗೇಳಿ ||
ವೋವದೆ ಕಾಳ ಮಹಾಕಾಳರೆಂದೆಂ | ಬಾವಸುಧಾವಲ್ಲಭರು || ೭ ||

ಇಂತೆಂದೆಣಿಸಿದರಾ ದೇವಸೇನಭೂ | ಕಾಂತ ಪರಾಕ್ರಮಯುತನು ||
ಅಂತರಿಸದೆ ದೀಕ್ಷೆವಡೆದು ನಮಗೆ ನಿ | ಶ್ಚಿಂತ ಮಾಯ್ತಿಲ್ಲಿಂ ಬಳಿಯಾ || ೮ ||

ವರಸುತರವರೀರ್ವರು ತಮ್ಮೊಳೇಕೀ | ಕರಮಾದೊಡಾ ಹೆತ್ತತಂದೆ ||
ಧರೆಯನೆರಡು ಪಸುಗೆಯ ಮಾಡಿಕೊಂಡವ | ನಿರುತಮಂತದುಕಾರಣದಿ || ೯ ||

ಹುರಿಯನೊಡೆದ ಹಗ್ಗಮಾಮುನ್ನಿಂತವ | ಧರಿಸುವುದೆ ನಿಜ ಬಲವಾ ||
ಎರಡೊಡೆತನಮಾದೊಡೆ ಮುನ್ನಿನಂದದಿ | ನಿರದವರಿಗೆ ಬೇರದೇಳ್ಗೆ || ೧೦ ||

ಬಾಲರು ಬಲಹೀನರು ರಾಜಕಾರ್ಯದ | ಕಾಲುಕೀಲಿಂತಿದೆಂಬುದನು ||
ಆಳೋಚಿಸಲರಿಯರು ತಮ್ಮ ಸಿರಿಯಂ | ಲಾಲಿಪರಾದುದರಿಂದಾ || ೧೧ ||

ಕಳಿಲೆಯೊಳಗೆ ಕಡಿಯದೆ ಸುಮ್ಮನಿರ್ದೊಡೆ | ಬೆಳೆದು ಬಲಿದು ರಿಪುವಂಗಾ ||
ಬಳಿಕಾ ಕಂಟಕವು ಕಾಣಿಸದಿಹುದೆಯೆಂದು | ತಳೆದು ಮುನಿಸ ತವಕದೊಳು || ೧೨ ||

ಎಕ್ಕತುಳದ ಭಟರಾನೆ ಕುದುರೆ ತೇರು | ಲೆಕ್ಕವಿಲ್ಲದೆ ಕೂಡಿ ಬರಲು ||
ಅಕ್ಕಸದಿಂ ದಂಡೆತ್ತಿ ನಡೆದು ಬಂದ | ರುಕ್ಕುವ ಕೋಪದಿನವರು || ೧೩ ||

ಕೆರೆಯನೊಡೆದು ಕೆಲಬಲದ ತೋಟಂಗಳ | ತರಿದೂರೂರ್ಗಳ ನೆರೆದು ||
ಸೆರೆಯ ಹಿಡಿದು ತುರುಗಳ ಹಿಂಡ ಹೊಯ್ದಾ | ತರುಬಿದರಧಟಿಂದು || ೧೪ ||

ನಡೆದುಬಪ್ಪುದ ಕಂಡು ನಾಡು ಬೀಡೆಲ್ಲ | ನಡುಗುತ ಬಿದ್ದ ಮಕ್ಕಳನು ||
ಪಿಡಿದೆತ್ತಿವೋಲಸುತೆಗೆದು ಪೋಗುತಿರ್ದುದು | ಪೊಡವಿ ನೆರೆಯದ ಪ್ರಜೆಗಳು || ೧೫ ||

ಈ ತೆರದಿಂ ಬಪ್ಪರಾ ಕಾಳ ಮಹಾಕಾಳ | ಭೂತಳೇಶ್ವರ ಬಲವರಿದು ||
ಆತುರದಿಂದ ಪ್ರವರಸೇನ ತನ್ನನು | ಜಾತ ಪ್ರಭಂಜನನೃಪಗೆ || ೧೬ ||

ವಾಲೆಯ ಕಳುಹಲೋದಿಸಿನೋಡುತೊಡನಾ | ಕಾಲನಂದದಿ ಕಡುಗೆರಳಿ ||
ಶೂಲಿ ಮುಪ್ಪರಕೆ ದಾಳಿಡುವಂತೆ ಸೇನಾ | ಜಾಲವೆಲ್ಲವ ಕೂಡಿಕೊಂಡು || ೧೭ ||

ಬಿಟ್ಟಗುಡಿಯೊಳು ಬಿಡದೆ ತಮ್ಮಣ್ಣನ | ಪಟ್ಟಣವನು ಹೊರಹಾಕಿ ||
ದಿಟ್ಟತನದಿ ಸುಟ್ಟುರೆಯಂತೆ ಹರಿ ದಾಳಿ | ಯಿಟ್ಟರಿಗಳ ಮುಟ್ಟಿವರಲು || ೧೮ ||

ಪ್ರಣುತಪರಾಕ್ರಮಿಯಾ ಪ್ರಭಂಜನನಿಂ | ಗಣನೆಯಿಲ್ಲದ ನೃಪವರರಾ ||
ಅಣಿಯರಮೆಂಬ ದೀವಿಗೆಯ ಬಳಗ ಮಾ | ಕ್ಷಣಮಾತ್ರದೊಳಡಗಿದುದು || ೧೯ ||

ಭೂವಿಶ್ರುತನು ಪ್ರಭಂಜನನೃಪ ನೆರೆ | ತೀವಿದ ಕೋಪಾನಲದಿಂ ||
ಆ ವೈರಿನೃಪವಾಹಿನಿಯೆಂಬ ವಿಪಿ | ನವನೋವದೆ ಸುಟ್ಟುರುಹಿದನು || ೨೦ ||

ಮತ್ತೆ ಹೊಕ್ಕಿರಿಮೆ ಕಂಡಾರಿಪುಸೇನೆ ಬೆ | ನ್ನಿತ್ತು ಬೀಸುವ ಗಾಳಿಗಂದು ||
ಮೊತ್ತದ ಮುಗಿಲೊಡ್ಡು ಮುರಿವಂದದಿ ಭೀತಿ | ವೆತ್ತೋಡಿತು ನಿಮಿಷದೊಳು || ೨೧ ||

ಕಾಳೆಗಳುಕಿ ಕಾಲ್ವೆಗೆದ ಪೌರಜನರ ಕಂಡು | ಕಾಳ ಮಹಾಕಾಳರುಗಳು ||
ಕಾಲರುದ್ರಂಗಿದಿರಾಗುವ ತೆರದಿಂ | ಹೇಳಲೇನಿದಿರಾದರಾಗಾ || ೨೨ ||

ಬಲ್ಲಿದರವರೀರ್ವರ ಬಾಳ್ದಲೆವಿಡಿ | ದಲ್ಲಿಂ ಪಿಂದಕೆ ತಿರುಗಿ ||
ಉಲ್ಲಾಸದಿಂ ನಡೆತಂದು ತಮ್ಮಣ್ಣನ | ಮೆಲ್ಲಡಿದೊಳು ಮುಗ್ಗಿಸಿದನು || ೨೩ ||

ಕಾಲೊಳು ಕಡು ಭೀತಿಯಿಂ ಪಂಡೆಯಿಟ್ಟಾ | ಕಾಳಾ ಮಹಾಕಾಳರನು ||
ಆಳೋಚಿಸದತಿ ಕರುಣದಿ | ಬೀಳ್ಕೊಟ್ಟು ಲೀಲಾನಿಧಿ ಕಳುಹಿದನು || ೨೪ ||

ನಂಬಿ ನಡೆದು ನತರಾದ ನೃಪರ ಕ | ದಂಬಕೆ ಪ್ರಾಣಮಾದುದರಿಂ ||
ಯಿಂಬಾದುದಾಪ್ರಭಂಜನಗೆ ಜಗತ್ಪ್ರಾಣ | ನೆಂಬ ಸಾಭಿಪ್ರಾಯನಾಮಾ || ೨೫ ||

ಬಳಿಕಾ ತಂಮಂಣನನುಜ್ಞೆಯಿಂದಾತನ | ಪೊಳಲೊಳು ನಾಲ್ಕಯ್ದುಮಾಸಾ ||
ತಳುಮಾಡಿದನು ಪ್ರಭಂಜನಪೃಥುವಿ | ಲಲನಾಧಿಪನು ಮತ್ತಿತ್ತ || ೨೬ ||

ಭಂಭಾಸುರವರದೊಳಗಂಭೊರಾಸಿ | ಗಂಭೀರನಾಪ್ರಭಂಜನನಾ ||
ಕುಂಬಿನಿಯರಸನವಲ್ಲಭೆ ನವಜಾತಕುಂಭ | ಕುಂಭೊರುಜಯುಗಲೆ || ೨೭ ||

ಪಟ್ಟದರಸಿ ಪೃಥ್ವೀಮತಿ ಚೆಲ್ವಳ | ಪಟ್ಟ ಕುಮತಿಯೆಂದೆಂಬಾ ||
ದಿಟ್ಟನಪ್ಪಾಮಂತ್ರಿಗೆ ತಾಣು ಕಣ್ಮನ | ಬಿಟ್ಟು ಕಾತರಚಿತ್ತೆಯಾಗಿ || ೨೮ ||

ಅರಸಿನಂತಃಪುರದಬಲಾಜನದೊಳು | ಪಿರಿಯ ಪಟ್ಟದರಾಣಿವಾಸಾ ||
ಉರುತರಮಪ್ಪಸಲುಗೆವಂತೆಯೆಂಬೊಂ | ದಿರವನಿನಿಸುಭಾವಿಸದೆ || ೨೯ ||

ಪಾಪಕಂಜದೆ ಪೈಶೂನ್ಯಕ್ಕಳುಕದೆ | ರೂಪುಗೆಡುವುದೆನ್ನಬದಕು ||
ಯೀ ಪರಿಮಾಡಿದೊಡೆಂದೆಂಬುದನು ಮ | ತ್ತಾಪಾಣ್ಬೆ ತಾರದೆ ಮನಕೆ || ೩೦ ||

ಮನ್ನಣೆಗಟ್ಟು ಮಾನಾಪಹರಣಮಾಗಿ | ಉನ್ನತಮಪ್ಪೀಬಾಳ್ವೆ ||
ತನ್ನ ತಾನೆ ಹೋಹುದಿಂತಿದನೇನಾದೊಡೆಂ | ದನ್ನದೆ ಕೆಟ್ಟೆಣಿಸಿದಳು || ೩೧ ||

ನೆರೆಹೊರೆಯವರರಿದೊಡೆ ನೆರಮಾಗದು | ಅರಸರಿದೊಡೆಯಾಜ್ಞೆಯಹುದು ||
ಧರೆ ಹೊರದಿಂತಿದನೆಂದೆಂಬುದನಾ | ದುರುಳೆ ತಾರದೆ ತನ್ನ ಮನಕೆ || ೩೨ ||

ಮದನೋದ್ರೇಕಮಾನಸೆಯಾಗುತಾದುಷ್ಟ | ಸುದತಿ ಮತ್ತಾಪಾತಗಿತ್ತಿ ||
ಮದಿರೆಯೆಂದೆಂಬೋರ್ವಸಖಿಯ ಕರೆದು ತನ | ಗೊದಗಿದವಸ್ತೆಯನುಸುರೆ || ೩೩ ||

ಆ ನುಡಿಗೇಳಿಯಿಂತೆಂದಳವಳು ದೇವಿ | ನೀನರಸಿನಪಟ್ಟದ ವನಿತೆ ||
ಭೂನುತವಂಶೋದ್ಭವೆಯಾದುದರಿಂದಿ | ದನೇನೆಂದು ಬಗೆಗೆ ಭಾವಿಸದೆ || ೩೪ ||

ರತಿಪಾರ್ವತಿರಮೆರಾಜೀವೊದ್ಭವ | ಸತಿಯರಿಂದತಿವೆಗ್ಗಳದಾ ||
ಅತಿಶಯಮಾದ ಬಲಾನೀಕ ನಿನ್ನ | ಪತಿಯರಮನೆಯೊಳಗುಂಟು || ೩೫ ||

ಅಂತವರೆಲ್ಲವರಿರ್ದಂತಾಭೂ | ಕಾಂತ ನಿನಗೆ ಪಟ್ಟವನು ||
ಅಂತರಂಗದೆ ಕಟ್ಟಿವೊಂದಿನಿಸೆರವಿಲ್ಲ | ದಂತೆ ನಡಸಿಕೊಂಡನಾಗಿ || ೩೬ ||

ದೇಹವೆರಡಕೊಂದಸುವೆಂಬಂದದಿ | ಬೇಹಳಮಾಗಿಕೊಂಡಿರ್ದಾ ||
ಆ ಹೂಗಣೆಯನೃಪವರನಿರ್ದಂತೆಲೆ | ಭಾವಕಿ ಕೆಟ್ಟೆಣಿಸುವರೆ || ೩೭ ||

ಉತ್ತಮರೂಪು ಲಾವಣ್ಯದೊಲಗೆ ನಿನ್ನ | ಚಿತ್ತೇಶನಲ್ಲದಿಳೆಯೊಳು ||
ಮತ್ತಿನ ಮಾನಸನಿಂತಿವನೆಂದು ಬೆ | ಟ್ಟೆತ್ತಿ ತೋರಿಸಿಕೊಳಲುಂಟೆ || ೩೮ ||

ಅವನ ವಿಡಂಬಿಸಿಯನ್ಯರ್ಗೆಳಸುವೆ | ಯುವತಿ ಕೇಳೀ ನಿನ್ನ ಬುದ್ಧಿ ||
ಸವಿಯದೆ ಸುಧೆಯ ನೆತ್ತರನುಂಬ ಜಿಗುಳೆಯ ಸ | ಮವಲ್ಲವೆ ಭಾವಿಸಲು || ೩೯ ||

ಮಡಿಯನುಡದೆ ಮೈಲಿಗೆಯನುಡುವೆನೆಂಬ | ಕಡು ಹೆಡ್ಡರಂದವಡೆವರೆ ||
ಕುಡುವಿಲ್ಲಗೆಣೆಯ ಕುಂಬಿನಿಯರಸನ ಬಿಟ್ಟು | ಮಡದಿಯನ್ಯರ್ಗೆಳಸುವರೆ || ೪೦ ||

ಇರಿವ ಮೆರೆವ ಹರೆಯವನು ಹಡೆದ ಪಟ್ಟ | ದರಿಕೆಯ ಕುಪಾತೆಕೇಳ್ನಿನ್ನಾ ||
ಎರಕದ ಮಗನಿಂತಿದನರಿದಿರ್ದ | ಹರಕುತನವಿದೆಣಿಸುವರೆ || ೪೧ ||

ಈ ತೆರದಿಂದ ಹಲವು ಬುದ್ಧಿಯನಭಿಜಾತೆ | ಯೊರೆದದನಿತುರಕೆಯಾ ||
ನೀತಿ ಕಿವಿಯ ಹೊಕ್ಕುದಿಲ್ಲ ಪಿತ್ತ ಜ್ವರ | ಜಾತರ್ಗ್ಗೆ ಬಗಲ್ದೋರದಂತೆ || ೪೨ ||

ಹೊಲೆ ಹೊಕ್ಕಮನೆಯ ಹೊಗದ ಸಜ್ಜನರಂತೆ | ನೆಲನು ಹೊರಗ್ಗಳಪಾತಕವಾ ||
ಬಲಿಕೆ ಮಾಡಿದ ಬಂದಕಿಯ ಬಗೆಗೆ ಹೊ | ಗಲಲಸಿದವ ಯಳಸುಬುದ್ಧಿ || ೪೩ ||

ಬಳಿಕಿಂತು ನುಡಿದಳವಳು ತನ್ನಾ ಸಖಿ | ಯೊಳಗೆ ನಾನೆನ್ನವಸ್ತೆಯನು ||
ತಳುವದೆ ಪಿಂಗಿಸೆಂದುಸುರ್ದೊಡೆ ನೀನೆನ | ಗಳೆಸದ ಮಾತನಾಡುವರೆ || ೪೪ ||

ಶೂಲವನೇರಿ ಬಳಿಕ ಸುಬುದ್ಧಿಯ | ನಾಳೋಚನೆ ಮಾಡಬಹುದೆ ||
ಮೇಲುವರಿವ ಕಾರ್ಯಹವಣಿಗೆ ನಿಲ್ವುದೆ | ಯಾಳಿ ಕೇಳಿದು ಕಾರಣದಿ || ೪೫ ||

ಒಂದು ಸಮಯವವನೊಳು ಕೂಡಿಯಂಗ | ದಿಂದ ಜೀವವನು ಬಿಡುವೆನು ||
ಸಂದೆಗವಿನಿಸಿಲ್ಲವೀ ನುಡಿಯೆನುತೆದ್ದು | ಬಂದವಳಡಿಗೆರಗಿದಳು || ೪೬ ||

ಮುಂಜೂರೊಳಿಕ್ಕಿದ ಕಿಚ್ಚ ಮೊಗೆಯ ನೀರು | ಭಂಜಿಪುದೆಲರಿಂದಾ ||
ಸಂಜಾತಮಾದ ವಿರಹ(ವು)ನೀತಿಯ | ರಂಜನೆಯಿಂದ ನಂದಿಪುದೆ || ೪೭ ||

ಕರುಣವೆದೆಯೊಳಂಕುರಿಪಂದದಿನಾ | ವಿರಹಿಯವಳಬೇಡಿಕೊಂಡು ||
ಭರದಿಂದವನಕರಸಿಕೂಡಿದಳು ಕಾ | ತರರ್ಗುಂಟೆ ಮುಂದೆಣಿಕೆಯು || ೪೮ ||

ಮುಂದಕೆ ತನಗೆ ಬಪ್ಪಾ ಅಪಕೀರ್ತಿಯ | ನೊಂದಿನಿಸನು ಚಲಿಸದೆ ||
ಮಂದಬುದ್ಧಿಯೊಳಾಮಂತ್ರಿಯೊಳತ್ಯಾ | ನಂದಮೊದವೆ ಕೂಡಿರಲು || ೪೯ ||

ಅತ್ತಲಣ್ಣನ ಕೈಯ್ಯ ಬೀಳ್ಕೊಂಡಾಭೂ | ಪ್ರೋತ್ತಂಸ ಪ್ರಭಂಜನನು ||
ಮೊತ್ತದರಸುಗಳು ಕೂಡಿ ಬರ್ಪಾವಾರ್ತೆ | ಹತ್ತಿತು ಬಂಭಾಪುರಕೆ || ೫೦ ||

ಆ ವಾರ್ತೆ ಕೇಳುತವಳು ಭಯಗೊಂಡಾ | ಭಾವೆ ಮನದೊಳು ಬೆಚ್ಚಿದಳು ||
ಆ ವಾರೀಧರರವಗೇಳ್ದಾ ಹಂ | ಸೆಯನನುಕರಿಸಿದಳು || ೫೧ ||

ಅರಸವತರಿಸಿದನಾದೊಡೆಮ್ಮಾರ್ವರ | ವರಭೋಗಕೆ ಭಿನ್ನವಹದು ||
ನಿರುತಮೆಂದೆಂಬಾ ನುಡಿಗೆ ಮತ್ತಾಪಾಣ್ಬ | ನಿರದಿಂತೆಂದು ನುಡಿದನು || ೫೨ ||

ನಿನಗೆ ನೇಹದ ಸುಕುಮಾರನಿರ್ದಂದದಿ | ವನಿತೆ ನೀನೀಕಾರ್ಯವನು ||
ನೆನೆವುದು ನನ್ನ ಮನಕೆ ಬಂದುದಿಲ್ಲವೆಂ | ದೆನಲಾಡಿದಳವಳಿಂತು || ೫೩ ||

ಮಗನಮೇಗಳ ಮೋಹದಿಂದವೆ ನಾ ನಿನ್ನ | ನಗಲುವುದನುಗುಣಮಲ್ಲ ||
ಬಗೆವೊಡೆನುತ ಮುಂದಣಕಾರ್ಯ್ಯಮನಾ | ವಿಗಡೆ ನುಡಿದಳಿಂತೆಂದು || ೫೪ ||

ಆ ತನುಜನನಿಂದಿ ನಿರುಳಿನೊಳು | ಮಾತೇನು ಕೊಲ್ಲದೆ ಮಾಣಿ ||
ಈ ತೆರನನು ನೀನು ನಂಬೆಂದಾತಗೆ | ಪಾತಕಿ ಭಾಷೆ ಮಾಳ್ಪುದನು || ೫೫ ||

ಒಬ್ಬಾನೊಬ್ಬಳು ದಾದಿ ಬಂದಾ ಮಾತ | ನುಬ್ಬೇಗದಿಂ ಪರಿತಂದು ||
ಕಬ್ಬುವಿಲ್ಲಂಗೆಣೆಯೆನಿಪ ತರಳನಿಗೆ | ಉಬ್ಬುತ ನುಡಿದಳಿಂತೆಂದು || ೫೬ ||

ಮುಚ್ಚುಮರೆಯಿದೇಕೆ ನಿನ್ನೀ ಜನನಿ ನಿ | ನ್ನೊಚ್ಚತಮಿರಾತ್ರಿಯೊಳು ||
ಬೆಚ್ಚದೆ ಕೊಲ್ವೆನೆಂದಾದಾದಿಯೊಳು ತಾನು | ಪಚ್ಚು ನುಡಿಯನಾಡಿದಳು || ೫೭ ||

ಎಂದೆಂಬ ನುಡಿಗೇಳುತ ಕುವರನು ಬಿಸ | ವಂದ ವಡೆದು ತಲೆದೂಗಿ ||
ನೊಂದು ಹಡೆದ ತಾಯಿ ತನುಜನ ಕೊಲ್ವೆನೆಂ | ಬಂದವನಾರು ಮೀರುವರು || ೫೮ ||

ಎನುತ ಚಿಂತಿಸಿ ಏಕಾಂತಕ್ಕೆ ಬಂದೋರ್ವ್ವ | ನನುಮೋದಿಯಪ್ಪ ಚಿತ್ರಿಕನು ||
ಘನವೇಗದಿಂದ ಬರಿಸಿ ತನ್ನ ಪೋಲ್ವೆಯ | ಏನುತಮಪ್ಪೊಂದು ಪುತ್ಥಳಿಯ || ೫೯ ||

ಅನುಗೆಯ್ದದಕೆ ಪೂರಿಸಿ ಪಕುಳವ ತಾ | ನನುರಾಗದಿಂ ಪವಡಿಸುವಾ ||
ಮನೆಯ ಮಾಣಿಕದ ಪಾಸಿನಮಂಚದ ಮೇಳೆ | ಘನತರಮಪ್ಪವಸ್ತ್ರವನು || ೬೦ ||

ಹೊದಸಿ ಅದನು ಮಲಗಿಸಿ ತಾನು ಬೇರೊಂದು | ಸದನಕಾರರಿಯದಂದದೊಳು ||
ಪದವಿಂ ಪೋಗಿಯಡಗಿಕೊಂಡಿರಲಾ | ವುದನಿಧಿಗರ್ಕನೆಯ್ದಿದನು || ೬೧ ||

ಆ ರಾತ್ರೆಯೊಳಣುಗನ ಸೆಜ್ಜೆವನೆಗಾ | ಕ್ರೂರಕರ್ಮಿ ನಡೆತಂದು ||
ಕೂರಸಿಯನು ಜಳಪಿಸಿ ಲೆಪ್ಪದ ಸುಕು | ಮಾರನ ಕೊರಲನರಿದಳು || ೬೨ ||

ಹೆತ್ತ ಮಗನ ಹೇಸದೆ ಕೊಂದಾ ಪಾತ | ಗಿತ್ತಿ ಮಧ್ಯಮರಾತ್ರೆಯೊಳು ||
ಮತ್ತಾದೂತಿಸಹಿತ ಕಟ್ಟಿಕೊಂಡ | ತ್ಯುತ್ತಮಪ್ಪ ವಸ್ತುವನು  || ೬೩ ||

ಭರದಿಂದಾ ಉಪಪತಿಯುಂ ತಾನಾ | ಪುರವರವನು ಪೊರಮಟ್ಟು ||
ಕರಕರನುದಯಕೆ ಮುನ್ನಾ ಸೀಮೆಯೊ | ಳಿರದನ್ಯದೇಶಮನೆಯ್ದಿ  || ೬೪ ||

ವಿನುತಮೆನಿಸುವ ವಿಶಾಲಾಖ್ಯನಗರಿಯ | ವನಕಿರದೆಯ್ದಿ ಮತ್ತಲ್ಲಿ ||
ಮನೆಯೊಂದನು ಮಾರುಗೊಂಡು ನಿಃಶಂಕೆ | ಯಿನನುರಾಗದಿಂದಿರಲಿತ್ತಾ  || ೬೫ ||

ಆ ರವಿಯುದಯದೊಳೇಳ್ದಾಸರಲಕು | ಮಾರಕನಾ ನಿಜಜನನಿ ||
ಆರಯ್ಯದೆ ತನ್ನ ರೂಪವ ಹತಿಸಿದ | ಕ್ರೂರಕರ್ಮಕೆ ಕೊಕ್ಕರಿಸಿ || ೬೬ ||

ಬೇಲಿ ಬೆಳೆಯ ಮೇವುದನು ಮಾತೆಯ ಮೊಲೆ | ವಾಲೆ ನಂಜಾಗುವುದನು ||
ಭೂಲೋಕದೊಳು ಬಾರಿಪರಾರೆಂದಾ | ಬಾಲಕನತಿ ಚಿಂತಿಸುವಾ || ೬೭ ||

ಮತ್ತಿನ ಮಂತ್ರಿಗಳನು ಕರಯಿಸಿ ಭೂ | ಪೋತ್ತಮನೆನ್ನ ಜನಕನು ||
ಪತ್ತನಕೆಯ್ದುವನಕಮಾಲೆಪ್ಪದ | ಪುತ್ಥಳಿಯನು ತೆಗೆಯದಿರಿ || ೬೮ ||

ಇದನು ತೆಗೆದಿರಾದೊಡೆ ಮಗನಳಿದನೆಂ | ದೆ ದೇಹಾರಗೊಳ್ಳದೆ ಮಾಣಾ ||
ಯಿದನು ಕಂಡರೆ ದುಃಖಸನಾಗಿ ನಿಜಪಿತೃ | ಮದರಿ ನಿರೂಪಿಸಿಲ್ಲಿರಲಿ || ೬೯ ||

ಎಂದು ನಿರೂಪಿಸುತಾರಾರು ಬೇಡ ಬೇ | ಡೆಂದಡವರ ಮಾತಮೀರಿ ||
ಕಂದರ್ಪ್ಪಸನ್ನಿಭನಾಪುರವರದೊಳ | ಗೊಂದು ಸಮಯ ತಡದಿರದೆ  || ೭೦ ||

ಎಕ್ಕಟೆಯೊಳು ಪೊರಮಟ್ಟು ಬಟ್ಟೆಯೊಳಾ | ರಕ್ಕಸಿಯಾಗೆನ್ನಜನನಿ ||
ದಿಕ್ಕನಪಾಯವನೆನಗೆಣಿಸುವಳೆಂದು | ಹೊಕ್ಕ ಘೋರಾರಣ್ಯವನು  || ೭೧ ||

ಕ್ರೂರಮೃಗಂಗಳನೀಕ್ಷಿಸುತಂಜದೆ | ಯಾರೈಯ್ಯದೆ ಹಿಂದುಮುಂದಾ ||
ಅರಣ್ಯವ ಹೊಕ್ಕಾಸುಕುಮಾರಕು | ಮಾರನಂತೆಯ್ದಿದನು  || ೭೨ ||

ಬಾನಿದಿಂದಿಳಿದು ಬಂದಾ ಬಾಲ | ಭಾಸ್ಕರನೀನೆಲದೊಳು ನಡೆವಂತೆ ||
ತಾನೊಳಹೊಕ್ಕು ಕಾಲ್ಗೆಡದಾ ಭೂವರ | ಸೂನು ಸುಗ್ಗಿಯೊಳೆಯ್ದಿದನು  || ೭೩ ||

ಬೊಕ್ಕಿಯೇಳ್ವಾಕಾಲ್ಗಳ ಸಿಡಿಮಿಡಿಗೊಂ | ಡಿಕ್ಕುವ ನಿಟ್ಟುಸಿರಿಡುತಾ ||
ಯಿಕ್ಕೆಲದೊಳು ನೊಳ್ಪಾಬಿಯದಿಯರ ಪೆ | ಣ್ಮಕ್ಕಳ ನೋಡುತೈದಿದನು  || ೭೪ ||

ಅಂಬೈದನು ಬಿಸುಟಂಗಸಂಭವನಿವ | ನೆಂಬಂತಾ ನೃಪಸುತನು ||
ಯಿಂಬುಪಡೆದು ಶೋಭಿಸುವ ವಿಶಾಲಾಖ್ಯ | ವೆಂಬ ಪುರದ ಮುಂದಕೆಯ್ದಿ  || ೭೫ ||

ಭರದಿಂ ಬಂದ ಬಟ್ಟೆಯ ಸೇದೆಯ ಪರಿ | ಹರಿಸುವೆನೆಂದು ಮತ್ತೊಂದು ||
ತರುಣಮಾಕಂದದ ತಣ್ಣೇಳಲೊಳಗಾ | ಅರಮಗನೊರಗಿಯೊಪ್ಪಿದನು  || ೭೬ ||

ಆ ಪುರವರವನು ಪರಿರಕ್ಷಣೆಗೆಯ್ವ | ಶ್ರೀಪಾಲನೆಂಬ ಭೂವರನಾ ||
ಕೋಪದಿನಂತಕನೆಳದಿರದೊಯಿದನು | ಪಾಪಕರ್ಮ್ಮದ ಫಲದಿಂದ  || ೭೭ ||

ಅವನಿಗೆ ತನುಜರಿಲ್ಲದುದರಿಂದಾ ಮಂತ್ರಿ | ನಿವಹಮೆಲ್ಲರ ಕೂಡಿಕೊಂಡು ||
ಅವನೀಶ್ವರನೇರುವ ಪಟ್ಟದಾನೆಯ | ತವಕದಿನರ್ಚಿಸಿಬಿಡಲು  || ೭೮ ||

ಮನೆಮನೆದಪ್ಪದೆ ವಡವೆಗಳಾದಿಯ | ಮಿನುಗುವ ಪೊಸವಸನಗಳಾ ||
ಅನುಗೆಯ್ದನುರಾಗದಿಂದಾ ಪುರ | ಜನತತಿಯತಿ ಶೋಭೆಯಿಂದಾ  || ೭೯ ||

ಹರಿಯ ಕುವರನು ಹಲವು ರೂಪಾಂತಾ | ಪುರವರಕೆಯ್ದಿದಂದದೊಳು ||
ಅರಸುಮಕ್ಕಳು ನಿಂದಿರೆ ಕಂಡಾ ಮದ | ಕರಿ ನಡೆನೋಡಿ ಮತ್ತಿವರಾ || ೮೦ ||

ಏನೆಂದೆಣಿಸದೆ ಪುರವನು ಪೊರಮ | ಟ್ಟಾನವಚೂತಕೆಯ್ತಪ್ಪಾ ||
ಆನೆಯ ಪಿಂಗಡೆಕವ್ವರಿಗೊಂಡು ಮ | ತ್ತಾನಗರೀಜನಮೆಲ್ಲ || ೮೧ ||

ಬರಲದು ಬಂದು ಬಸಂತನಂತಿರ್ದಾ | ಸರಲಕುಮಾರನ ಕಂಡು ||
ಹರುಷದಿನಾಕಳಶೋದಕವನು ತೆಂದು | ಸಿರಿದಲೆಯೊಳು ಸೊಸಿದುದು || ೮೨ ||

ಶುಂಡಾದಂಡದಿನೆತ್ತಿಕೊಂಡಾತನ | ಮಂಡೆಯೊಳಿಡಲಾ ಹಸ್ತಿ ||
ಕೊಂಡಾಟಕೆಡೆಯಾದುದು ಕಾರ್ಮುಗಿಲಿಂದು | ಮಂಡಲವನು ಹೊತ್ತತೆರದಿ || ೮೩ ||

ಅಂತದಕಂಡಾಜನರೆಲ್ಲ ರೂಪಜ | ಯಂತನ ಭದ್ರಲಕ್ಷಣಕೆ ||
ಅಂತರಮಾಡದಚ್ಚರಿಪಡುತವೆ ಕಡು | ಸಂತಸದಿಂದೊಡವೆರಲು  || ೮೪ ||

ಆಮೋದದಿಂ ತನ್ನನೀಕ್ಷಿಸುವಾಪುರ | ಭಾಮಿನಿಯರ ಕಣ್ಣನೆಳಲು ||
ಆ ಮೆಯ್ಯನಡರಲಾನೆಯನೇರಿ ಸುರಪನಂ | ತಾ ಮನುಜೇಶನೊಪ್ಪಿದನು || ೮೫ ||

ನಡೆವುದಯಾದ್ರಿಯೇರಿದ ಬಾಲ ತರಣಿಯಂ | ತಡರಿಯಾನೆಯನರಮಗನು ||
ನಡೆದನಿನ್ನೊಡೆಯರಿಲ್ಲೆಂಬ ಪೌರರ ಮನ | ಏಡಿದ ತಮವ ತವಿಯಿಸುತ || ೮೬ ||

ಹೊಕ್ಕು ಹೊಳಲನರಮನೆಗಿರದೆಯ್ದಿ ಪೆ | ಣ್ಮಕ್ಕಳು ಸೂಸೆ ಸೇಸೆಯನು ||
ಸೊಕ್ಕಾನೆಯ ಪಿಣಿಲಿಂದಿಳುಪಿದರಾ | ಚಿಕ್ಕ ಜವ್ವನದ ಚೆನ್ನಿಗನಾ || ೮೭ ||

ಆ ಸಮಯದೊಳೊದವಿದ ಶುಭಲಗ್ನದೊ | ಳೋಸರಿಸದೆ ಮಂತ್ರಿಗಳು ||
ಕೇಸರಿಪೀಠದೊಳಿರಿಸಿ ಪಟ್ಟವ ಕಟ್ಟಲಾ | ಗಾಸುಚರಿತನೊಪ್ಪಿದನು || ೮೮ ||

ಪ್ರಾರಬ್ಧಪುಣ್ಯಪಾಪದ ಫಲದೊದವನದಾರು | ಮೀರುವರೆನಬಹುದೆ ||
ಆ ರಾಜ್ಯವನು ವಿಡಂಬಿಸಿ ಬಂದ | ಕುಮಾರಗರಸುತನಮಾಯ್ತು || ೮೯ ||

ಆಟ್ಟುಕಟ್ಟಿದ ಕಟ್ಟುಗೂಳ ಕಕ್ಷದೊಳಿರಿ | ದಿಟ್ಟು ಮನೆಯ ಪೊರಮಟ್ಟು ||
ಬಟ್ಟೆ ನಡೆವುತ ಮತ್ತೊಂದುಣಿಸಿಗೆ ಬಗೆ | ಗೆಟ್ಟಡಂತದು ದೊರಕುವುದೆ || ೯೦ ||

ಮುನ್ನ ಮಾಡಿದ ಪುಣ್ಯ ಪಾಪದ ಫಲವ ತಾ | ತನ್ನ ಮುಂದಣ ಭವಭವಕೆ ||
ಬೆನ್ನಬಿಡದೆ ಬಂದಾ ಸುಖದುಃಖವ | ನುನ್ನತಿಕೆಯೊಳುಸುರುವವು || ೯೧ ||

ಪುಣ್ಯದಿ ಹೀನಪುರುಷರಾದವ [ರ್ಗ] | ರಣ್ಯಮಾಗುವುದಾನಗರಿ ||
ಪುಣ್ಯಭಾಗಿಗಳಾದಾ ಪುರುಷರಿಗೆ ಆ | ರಣ್ಯಮೆ ನಗರಿಯಾಗಿಹುದು || ೯೨ ||

ಹೊನ್ನ ಹಿಡಿಯೆ ಹುಡಿ ಮಣ್ಣಾಗಿಪ್ಪುದು | ತ್ಪನ್ನತಪಾಪೋರ್ಜಿತಗೆ ||
ಹೊನ್ನಾಗುವುದಾಹುಡಿ ಮಣ್ಣ ಹಿಡಿದೊಡೆ | ಸನ್ನುತ ಸುಕೃತಜೀವರಿಗೆ || ೯೩ ||

ಅರಸುತನವ ಬಿಟ್ಟಾರಣ್ಯವ ಹೊಕ್ಕು | ಪರದೇಶವೆ ಸಾಕೆಂಬಾ ||
ತರುಣಗೆ ಮುನ್ನಿನಂದದಿ ಪರಿವೃಢಪದ | ದೊರಕಿ ಸುಖದೊಳಿರಲಿತ್ತ || ೯೪ ||

ಅಗ್ರಜಾತನ ಕೈಯಿಂದ ಬೀಳ್ಕೊಂಡು ನೃ | ಪಾಗ್ರೇಶನಾಪ್ರಭಂಜನನು ||
ಉಗ್ರಮದೋಪೇತಮಪ್ಪಾನೆಯ | ನೇರಿ ನಡೆತಂದನಾಗ || ೯೫ ||

ಇಕ್ಕೆಲದೊಳು ಪೆಣ್ಣಾನೆಯನೇಱೆ ಪೆ | ಣ್ಮಕ್ಕಳು ಬೀಸೆ ಚಾಮರವ ||
ಲೆಕ್ಕಮಿಲ್ಲದ ವಾದ್ಯದ ಬಲು ಸರಮಾ | ದಿಕ್ಕು ಹರಿದುನೆಯ್ದಿದುದು || ೯೬ ||

ಎಡಬಲದೊಳಗೆಡಬಿಡವಿಲ್ಲದಂದದಿ | ನಡೆಯೆ ನರೇಂದ್ರಕದಂಬಾ ||
ಪೊಡವಿ ನೆರೆಯದ ಬಲಂಗೂಡಿಯಾನಾ | ಡೊಡೆಯನೊಪ್ಪದೊಳೈದಿದನು || ೯೭ ||

ಕತ್ತಲೆಯಾಯ್ತೆತ್ತಿದಾತಪತ್ರಗಳಲ್ಲಿ | ಕೆತ್ತಿದ ಮಣಿಮೌಕ್ತಿಕಂಗಳೆ ||
ಸುತ್ತಿದ ಭಗಣಮಾಗಲು(ಡು)ರಾಜನಂತೆ ನೃ | ಪೋತ್ತಂಸನಂದೆಯ್ದಿದನು || ೯೮ ||

ಇಂತಾಪುರವರದೊಂದು ಪಯಣವನ್ನು | ಸಂತಸದಿಂದಾನೃಪತಿ ||
ಅಂತರಿಸದೆ ಬಪ್ಪುದರಿಂ ಸುರಜನ | ಸಂತತಿಯೆಲ್ಲಿದಿರ್ವಂದು || ೯೯ ||

ವರಸುತನಾವರಮಂತ್ರಿಗಳದರೊಳಗಿರ | ದಿರೆ ಶಂಖೆ ಸಂಜನಿಸಿ
ನರನಾಥನು ನಿಜನಗರಿಯೊಳಗೆ ನಡೆ | ದರಮನೆಗೆಯ್ದಿರಲೊಡನೆ || ೧೦೦ ||